ಶನಿವಾರ, ಆಗಸ್ಟ್ 26, 2023

ಕೆದಂಬಾಡಿ ಜತ್ತಪ್ಪರೈ ಅವರ “ಬೇಟೆಗಾರನ ಹುಲಿಹೆಜ್ಜೆ” ಬಂದಿದೆ…


ಬೇಟೆಯನ್ನೇ ಮುಖ್ಯ ವಸ್ತುವನ್ನಾಗಿಸಿಕೊಂಡು ಕನ್ನಡದಲ್ಲಿ ಬರೆದವರಲ್ಲಿ ಕೆದಂಬಾಡಿ ಜತ್ತಪ್ಪರೈ ಪ್ರಮುಖರು. ಇಂಗ್ಲೀಷಿನಲ್ಲಿ ಬರೆದ ಕೆನೆತ್‌ ಆಂಡಸರ್ನ್‌ ಬ್ರಿಟೀಷ್‌ ಅಧಿಕಾರಿ. ಕುವೆಂಪು, ತೇಜಸ್ವಿಯವರೂ ಬರೆದಿದ್ದಾರೆ. ತಮ್ಮ ಕೃತಿಗಳಲ್ಲಿ ಕುವೆಂಪು ಕಾಡನ್ನು ಸೊಗಸಾಗಿ ತಂದಿದ್ದಾರೆ. ಇಂತಹ ಮೇರುಸಾಹಿತಿಯಿಂದಲೇ ಮೆಚ್ಚುಗೆಗೆ ಪಾತ್ರವಾದವರು ʼಕೆದಂಬಾಡಿ ಜತ್ತಪ್ಪ ರೈ!”

ಬೇಟೆಯನ್ನೇ ಪ್ರಧಾನ ವಸ್ತುವನ್ನಾಗಿಸಿಕೊಂಡು ಅನುಭವವೇ ನಿರೂಪಣೆಯಾಗಿ ಕೆದಂಬಾಡಿಯವರ “ಬೇಟೆಯ ನೆನಪುಗಳು” 1978ರಲ್ಲಿ ಪ್ರಕಟವಾಯಿತು. ಕಾಲದ ದೃಷ್ಟಿಯಿಂದ ಬಹಳ ಅಪರೂಪವಾದ ಈ ಕಥಾನಕ ಓದುಗರ ಮೆಚ್ಚುಗೆಗೆ ಪಾತ್ರವಾಯಿತು. ಓದುಗರ ಈ ಮೆಚ್ಚುಗೆಗೆ ಬಹುಮಾನವಾಗಿ ಕೆದಂಬಾಡಿಯವರು “ಈಡೊಂದು ಹುಲಿಯೆರಡು”, “ಬೇಟೆಯ ಉರುಳು”, “ಬೆಟ್ಟದ ತಪ್ಪಲಿನಿಂದ ಕಡಲ ತಡಿಗೆ” ಎಂಬ ಕೃತಿಗಳನ್ನು ನೀಡಿದರು.

ಹುಲಿ ಮತ್ತು ಬೇಟೆಗಾರನ ಮುಖಾಮುಖಿಯ ಮಹಾಮೌನವನ್ನು, ಕಾಡಿನ ನಿಗೂಢತೆಯನ್ನು ಅಕ್ಷರಗಳಲ್ಲಿ ಸೆರೆಹಿಡಿದ ಬೇಟೆಗಾರ ಜತ್ತಪ್ಪ ರೈ ಅವರು ತಮ್ಮ ಮೃಗಯಾನುಭವವನ್ನು ಕಟ್ಟಿಕೊಟ್ಟದ್ದು ಮುಂದೆ ಗುಂಡಿಕ್ಕಲಾರೆ ಎಂದು ಪ್ರಮಾಣ ಮಾಡಿದ ಮೇಲೆ. ಆಗ ಅವರಿಗೆ ಅರವತ್ತು ವಯಸ್ಸು ದಾಟಿತ್ತು. ಮೃಗಯಾ ಸಾಹಿತ್ಯವನ್ನು ಬರೆಯಲು ರೈ ಅವರಿಗೆ ಮೊದಲು ಪ್ರೇರೆಪಿಸಿದವರು ಜಾನಪದ ವಿದ್ಯಾಂಸರಾದ ಪ್ರೊ. ಅಮೃತ ಸೋಮೇಶ್ವರರು. ಈ ಮೂಲಕ “ಬೇಟೆಯ ನೆನಪುಗಳು” ಮೊದಲು ಪ್ರಕಟಗೊಂಡು, ತದನಂತರ ಉಳಿದ ಕೃತಿಗಳು ಪ್ರಕಟವಾದವು. 11/02/1916ರಲ್ಲಿ ಪುತ್ತೂರಿನ ಕೆದಂಬಾಡಿಯಲ್ಲಿ ಜನಿಸಿದ್ದ ಜತ್ತಪ್ಪ ರೈ ಅವರು 20/06/2003ರಲ್ಲಿ ತೀರಿಕೊಂಡರು. ರೈ ಅವರು ಇನ್ನಿಲ್ಲವಾದ ದಶಕ ಕಳೆದ ಮೇಲೆ ಅವರ ಮಗ ಡಾ. ಕೆದಂಬಾಡಿ ತಿಮ್ಮಪ್ಪ ರೈ ಅವರ ಮೂಲಕ ಸಾಹಿತಿ-ಪತ್ರಕರ್ತ-ಉಪನ್ಯಾಸಕರೂ ಆದ ನರೇಂರ್ದ ರೈ ದೇರ್ಲ ಅವರು, ಜತ್ತಪ್ಪ ರೈ ಅವರ ಕೆಲವು ಬಿಡಿಬಿಡಿ ಲೇಖನಗಳನ್ನು ಸಂಗ್ರಹಿಸಿ ಓದಿಕೊಂಡು ಹಲವಾರು ಕಾರಣಗಳಿಗೆ ಮೆಚ್ಚಿಕೊಂಡು “ಬೇಟೆಗಾರನ ಹುಲಿಹೆಜ್ಜೆ” ಎಂದು ಸಂಕಲಿಸಿ ಪ್ರಕಟಿಸಿದರು. ಈ ಮೂಲಕ ಈ ಸಂಕಲನದ ಸಂಪಾದಕರೇ ಆದ ನರೇಂದ್ರ ರೈ ದೇರ್ಲ ಅವರೇ ಹೇಳುವಂತೆ ʼಮನುಷ್ಯ ಜೀವನದಲ್ಲಿ ದಾರುಣವೂ ಅಸಹನೀಯವೂ ಆದ ಸನ್ನಿವೇಶಗಳು ಉದ್ಭವಿಸಿದಾಗ, ಅವುಗಳಿಗೆ ಸ್ವಲ್ಪವೂ ಲಕ್ಷ್ಯಕೊಡದೆ ಪ್ರಕೃತಿ ತನ್ನ ಪಾಡಿಗೆ ತಾನು ಸಹಜ ಕರ್ತವ್ಯದಲ್ಲಿ ತೊಡಗಿಸುತ್ತದೆ ಎಂಬುದಕ್ಕೆ ಇಲ್ಲಿಯ ಬರಹಗಳೇ ಸಾಕ್ಷಿʼ ಎಂಬ ಮಾತುಗಳು ಈ ಸಂಕಲನದ ಪ್ರಬಂಧಗಳಿಗೆ ಸೂಕ್ತವಾಗಿವೆ. 2014ರಲ್ಲಿ ಮೊದಲ ಮುದ್ರಣ ಕಂಡ ಈ ಸಂಕಲನ ಇದೀಗ ಅಂದರೆ 2023ರಲ್ಲಿ ಮರುಮುದ್ರಣ ಕಂಡಿದೆ.

ಈ ಸಂಕಲನದಲ್ಲಿ ಶ್ರೀ ಅಮೃತ ಸೋಮೇಶ್ವರ ಅವರ ʼಕೆದಂಬಾಡಿ ಜತ್ತಪ್ಪ ರೈ ನೆನಪುಗಳುʼ ಲೇಖನ ಕೆದಂಬಾಡಿಯವರ ಅನನ್ಯ ವ್ಯಕ್ತಿತ್ವವನ್ನು, ಅವರ ಕನ್ನಡ ಮತ್ತು ತುಳು ಸಾಹಿತ್ಯದ ಸಾಧನೆಯನ್ನು ಆಪ್ತವಾಗಿ ಓದುಗರಿಗೆ ಕಟ್ಟಿಕೊಟ್ಟಿದೆ.

ಈ ಸಂಕಲನದಲ್ಲಿ ʼಬೈಪಡಿತ್ತಾಯರ ಪ್ರಾಣಿದಯೆʼ, ʼದೃಷ್ಟಿಯ ಹೊಡೆತ ನಾಲಿಗೆಯ ಕಡಿತʼ, ʼಅಜಿಲ ಬಂಟನೊಂದಿಗೆ ಚಿಪ್ಪು ಹಂದಿ ಮತ್ತು ಪುನುಗು ಬೆಕ್ಕು ಶಿಕಾರಿʼ, ʼಅಜ್ಜಯ್ಯನ ರೈಲು ಪ್ರಯಾಣʼ, ʼಗಡಾಯಿಕಲ್ಲು-ಜಮಲಾಬಾದು ಆವ್ಸೇ-ಜಾವ್ಸೇʼ, ʼಯಕ್ಷಗಾನ ದಿಗ್ಗಜ ಕವಿಭೂಷಣ ಕೆ.ಪಿ. ವೆಂಕಪ್ಪ ಶೆಟ್ಟಿʼ, ʼಕಡವೆಯ ರೂಪದಲ್ಲಿ ಕಾಡಿತ್ತು ಮೃತ್ಯುʼ, ʼಸತ್ತವನು ಎದ್ದು ಬಂದಾಗʼ, ʼದ್ರೌಪದಿಯ ಮಾನಭಂಗ: ಆಚಾರ್ಯರು ತೆಪ್ಪಗಿದ್ದುದೇಕೆ?ʼ, ʼಕಂಬಳಿಯ ಗಂಟೆಂದು ಬಗೆದದು ಕರಡಿಯಪ್ಪುಗೆʼ, ʼತುಂಬಿ ಮನೆಯ ಗೌಡರು ಮತ್ತು ನನ್ನಮ್ಮʼ, ʼಅಪ್ಪನ ಪಟ್ಟೆಶಾಲು ಮತ್ತು ಮಗನ ಹೊಸ ಮೆಟ್ಟುʼ, ʼಮನಸೂರೆಗೊಂಡ ʼಸೂರೆʼʼ ಎಂಬ ಹದಿಮೂರು ಪ್ರಬಂಧಗಳಿದ್ದು ಓದುಗರನ್ನು ಮೂಕವಿಸ್ಮಿತರನ್ನಾಗಿಸುವ ಗುಣಗಳು ಇಲ್ಲಿವೆ. ʼಅಜ್ಜಯ್ಯನ ರೈಲು ಪ್ರಯಾಣʼ ಪ್ರಬಂಧವನ್ನು ಓದಿದವರು ಕುವೆಂಪುರವರ ಅಜ್ಜಯ್ಯನ ಅಭ್ಯಂಜನʼವನ್ನು ಖಂಡಿತ ನೆನಯುತ್ತಾರೆ. ಹೊಸ ಲೋಕವೊಂದನ್ನು ಕಾಣಿಸಿದ ಜತ್ತಪ್ಪ ರೈ ಅವರಿಗೆ ಓದುಗ ಶರಣು ಶರಣು ಎನ್ನದಿರಲಾರ.

ಬೆನ್ನುಡಿಯಲ್ಲಿ ಸಾಹಿತಿ-ಪತ್ರಕರ್ತ ಜೋಗಿಯವರು “ಬೇಟೆ ಸಾಹಿತ್ಯ ಎಂದಾಕ್ಷಣ ನೆನಪಾಗುವುದು ಕೆದಂಬಾಡಿ ಜತ್ತಪ್ಪ ರೈ. … ಇವತ್ತಿಗೂ ಅವರ ʼಬೇಟೆಯ ನೆನಪುಗಳುʼ ಪುಸ್ತಕವನ್ನು ಕೈಲಿ ಹಿಡಿದುಕೊಂಡು ಕುಳಿತರೆ ಮನಸ್ಸು ಕಾಡಿಗೆ ನೆಗೆಯುತ್ತದೆ… ಅಲ್ಲೊಂದು ಹುಲಿ ಎದುರಾಗುತ್ತದೆ. ಅದನ್ನು ತನ್ಮಯರಾಗಿ ನೋಡುತ್ತಾ ಕುಳಿತು ಬೇಟೆಯಾಡುವುದನ್ನು ನಾವು ಮರೆಯುತ್ತೇವೆ. ಆದರೆ ಕೆದಂಬಾಡಿ ಮರೆಯುವುದಿಲ್ಲ. ಈ ʼಹುಲಿ ಹೆಜ್ಜೆʼಯಲ್ಲಿ ಹುಲಿಯಿಲ್ಲ. ಆದರೆ ಅದೇ ಬೇಟೆಗಾರ ಇದ್ದಾನೆ” ಎಂದಿದ್ದಾರೆ.

ಕಲಾವಿದ ಮೋನಪ್ಪ ಅವರ ಆಕರ್ಷಕ ಮುಖಪುಟ ಮತ್ತು ರೇಖಾಚಿತ್ರಗಳೊಡನೆ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದ್ದು, ಇದರ ಮೌಲ್ಯ ರೂ. 220/- ಆಗಿರುತ್ತದೆ.

“ಬೇಟೆಗಾರನ ಹುಲಿಹೆಜ್ಜೆ” ಪುಸ್ತಕ ಕೊಳ್ಳಲು ಈ ಲಿಂಕ್ ಕ್ಲಿಕ್‌ ಮಾಡಿ. ‌

ಕೆದಂಬಾಡಿ ಜತ್ತಪ್ಪ ರೈ ಅವರ ಪುಸ್ತಕಗಳನ್ನು ಕೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ

                                            -        ಧನ್ಯವಾದಗಳು, ಪ್ರೀತಿಯಿಂದ – ಗುಬ್ಬಚ್ಚಿ ಸತೀಶ್.‌

(ವಿಶೇಷ ಸೂಚನೆ: ಈ ಲೇಖನವನ್ನು ನನ್ನ ಲಿಖಿತ ಅನುಮತಿಯಿಲ್ಲದೆ ಯಾವುದೇ ರೀತಿಯ ಮುದ್ರಣ-ಡಿಜಿಟಲ್‌-ದೃಶ್ಯ ಮಾಧ್ಯಮಗಳು ಬಳಸುವಂತಿಲ್ಲ)

ಶುಕ್ರವಾರ, ಆಗಸ್ಟ್ 25, 2023

ʼಟೋಬಿʼ ನೋಡುದ್ರ?

ಸ್ನೇಹಿತರೇ,

ನಮಸ್ಕಾರ. ಇವತ್ತು ವರಮಹಾಲಕ್ಷ್ಮೀ ಹಬ್ಬ. ಕೆಲವರು ಇನ್ನೂ ಇದು ಮುಂಚೆ ವರಮಹಾಲಕ್ಷ್ಮೀ ವ್ರತ ಅಂತ ಇತ್ತು, ಅದ್ಯಾವಾಗ ಹಬ್ಬ ಆಯ್ತು ಅಂತ ಯೋಚಿಸುತ್ತಿರುವಾಗಲೇ ಬಹುತೇಕರು ಸಂಭ್ರಮದಿಂದ ಹಬ್ಬ ಮಾಡಿ, ಊಟ ಮಾಡಿದರು. ಸಂತೋಷ. ಎಲ್ಲರಿಗೂ ಹಬ್ಬದ ಶುಭಾಶಯಗಳು. ಇದು ಶ್ರಾವಣದ ಮೊದಲ ಹಬ್ಬ.

ಇವತ್ತು ನನ್ನ ಪ್ಲಾನ್‌ ಆದಷ್ಟು ಬೇಗ ಹಬ್ಬ ಮುಗಿಸಿ ʼಟೋಬಿʼ ಸಿನಿಮಾಗೆ ಹೋಗಬೇಕು ಅಂತ ಅಂದುಕೊಂಡಿದ್ದೆ. ಆದರೆ, ಆಗಲಿಲ್ಲ. ಮಧ್ಯಾಹ್ನ ಸ್ನೇಹಿತರ ಮನೆಗೆ ಊಟಕ್ಕೆ ಆತ್ಮೀಯ ಆಹ್ವಾನವಿತ್ತು. ಆದಕಾರಣದಿಂದ ಅವರ ಮನೆಗೆ ಹೋದೆವು. ಹೋಗ್ತಾ ದಾರಿಯಲ್ಲಿ India Sweet Houseಗೆ ಹೋಗಿ, (ಹೌದು, ತುಮಕೂರಿನಲ್ಲಿ ಈಗ ಇವರ ಬ್ರಾಂಚಿದೆ. ಎಸ್‌ಐಟಿ ಹತ್ತಿರ) ನಮ್ಮಿಷ್ಟದ ಸಿಹಿತಿಂಡಿಯನ್ನು ತಿಂದು ಆತ್ಮೀಯರ ಮನೆಗೂ ಒಂದು ಕಾಲು ಕೆಜಿ (ಅಲ್ಲಿ ಕಾಲು ಕೆಜಿಗೆ ಬೇರೆಕಡೆ ಕೆಜಿ ಸಿಗುವಷ್ಟು ದುಡ್ಡು ಹಾಕಿರ್ತಾರೆ. ಬಟ್‌ ಕ್ವಾಲಿಟಿ ಸಖತ್‌ ಇರುತ್ತೆ) ಕೊಂಡೋಯ್ದೆವು. ಅವರ ಮನೆಯಲ್ಲಿ ಕಷ್ಟ-ಸುಖ ಮಾತಾಡಿ ಸಂಜೆ ಮನೆ ಕಡೆ ಹೊರಟೆವು. ಅಷ್ಟರಲ್ಲಾಗಲೇ ನಮ್ಮ ಸ್ನೇಹಿತರು (ಇವರನ್ನು ನಾನು ಜಂಗಮ ಅಂತ ಹೃದಯದಿಂದ ಕರೆಯುತ್ತೇನೆ. ಇವರಿಗೆ ಈ ವಿಷಯ ಗೊತ್ತಿಲ್ಲ. ಮುಂದೊಂದು ದಿನ ʼಕಾಫಿ ವಿಥ್‌ ಜಂಗಮʼ ಅಂತ ಪುಸ್ತಕ ಬರೆಯುವವನಿದ್ದೇನೆ) ಕರೆಮಾಡಿದ್ರು. ಅವರಿಗೆ ಸಾಧ್ಯವಾದರೆ ಸಂಜೆ ಕಾಫಿಗೆ ಸಿಗುವೆ ಅಂತ ಹೇಳಿದ್ದೆ. ಮತ್ತೊಂದು ಆತ್ಮೀಯರ ಕರೆಗೂ ಓಗೊಟ್ಟು ಅಲ್ಲಿಗೂ ಹೋಗುವ ಪ್ಲಾನ್‌ ಇದ್ದರೂ ಕಡೆ ಗಳಿಗೆಯಲ್ಲಿ ನನ್ನ ಶ್ರೀಮತಿ ಮತ್ತು ಮಗಳು ಮನೆಗೆ ಹೋಗುತ್ತೇವೆಂದರು.

ಸೋ, ನಾನು ಅವರನ್ನು ಮನೆಗೆ ಕಳುಹಿಸಿ ʼಜಂಗಮʼರನ್ನು ಮೀಟ್‌ ಮಾಡಲು ಹೋದೆ. ಅವರು ಬರುವ ಸಮಯಕ್ಕೆ ಮತ್ತೊಬ್ಬ ಪರಿಚಿತರು ನಮ್ಮ ರೆಗ್ಯುಲರ್‌ ಕಾಫಿ ಶಾಪ್‌ ಬಳಿ ಸಿಕ್ಕರು. ಉಭಯಕುಶಲೋಪರಿ ಮಾತನಾಡುತ್ತ ಅವರು ತಿಂಗಳಿಗೆ ಒಂದೂವರೆ ಲಕ್ಷ ಬಾಡಿಗೆ ಬರುವ ಪ್ಲಾನೋಂದನ್ನು ಹೇಳಿಕೊಂಡದ್ದು ಕೇಳಿ ನನಗೆ ಶಾಕ್‌ ಆಯಿತು. ಅದಿರಲಿ ಅವರು ಶ್ರೀಮಂತರು. ಅವರ ಯೋಜನೆಗಳು ಕೂಡ ಶ್ರೀಮಂತವಾಗಿರುತ್ತವೆ! ಸ್ವಲ್ಪ ಹೊತ್ತಿನ ನಂತರ ʼಜಂಗಮʼರು ಬಂದರು. ಆ ಸಂದರ್ಭದಲ್ಲಿ ಅಲ್ಲಿನ ರಸ್ತೆಯ ಬದಿಯೊಂದರಲ್ಲಿ ಪಂಚೆ ಮತ್ತು ಟವೆಲ್‌ಗಳನ್ನು ಹಾಕಿಕೊಂಡಿದ್ದ ವ್ಯಕ್ತಿಯೊಬ್ಬನಿಗೆ ಕ್ಷಣಾರ್ಧದಲ್ಲಿ ಭರ್ಜರಿ ವ್ಯಾಪಾರವಾಯ್ತು. ಕಾರಣ, ಕಡಿಮೆ ಬೆಲೆ! ತದನಂತರ ಕಾಫಿ ಕುಡಿದು ಸ್ವಲ್ಪ ಹೊತ್ತು ಮಾತನಾಡಲು ʼಜಂಗಮʼರ ಆಫೀಸಿಗೆ ಹೋದೆವು. ಕಾಫಿ ಬೇಡ ಅಂದಿದ್ದ ಶ್ರೀಮಂತ ಗೆಳೆಯರು ಅವರ ದಾರಿ ಅದಾಗಲೇ ಹಿಡಿದಾಗಿತ್ತು.

ʼಜಂಗಮʼರ ಆಫೀಸಿನಲ್ಲಿ ಕುಳಿತು ನಮ್ಮ ಪ್ರಚಲಿತ ವಿದ್ಯಮಾನಗಳ ಚರ್ಚೆ ಶುರುವಾಯ್ತು. ʼಟೋಬಿʼ ಸಿನಿಮಾ ವಿಷಯವೂ ಬಂತು. ಇತ್ತೀಚಿಗೆ ಮೊದಲನೇ ದಿನವೇ ಸಿನಿಮಾ ನೋಡಿ ನನ್ನ ಯೂಟ್ಯೂಬ್‌ ಚಾನೆಲ್‌ Movie Matters Kannadaದಲ್ಲಿ ವಿಮರ್ಶೆ ಬರೆಯುವುದನ್ನು ಕಡಿಮೆ ಮಾಡಿಕೊಂಡಿದ್ದೇನೆ. ಇದೇ ಕಾರಣದಿಂದ ಸಿನಿಮಾಗೇ ಹೋಗಲೇಬೇಕೆಂಬ ತುಡಿತ ಈಗ ಮೊದಲಿನಷ್ಟಿಲ್ಲ. ಜೊತೆಗೆ ಇಲ್ಲಿ Inoxನಲ್ಲಿ ಸಿನಿಮಾ ನೋಡಿದ್ರೆ ಈಗ ಮಜಾ. ಬೇರೆ ಏಕಪರದೆಯ ಚಿತ್ರಮಂದಿರಗಳಲ್ಲಿ ಭಯಂಕರ ಎಂಬುವುಷ್ಟು ಬೇಜಾರಾಗಿದೆ. ಬಟ್‌ inox ದೂರ ಮತ್ತು ದುಬಾರಿ! ಸೋ, ಅಲ್ಲೇ ಕುಳಿತು ಬೇರೆ ಚರ್ಚೆಗಳು ಆದವು. ಚಂದ್ರಯಾನ, ಪ್ರಜ್ಞಾನಂದ, ರಾಜಕೀಯ, ಪ್ರಮುಖವಾಗಿ ಕನ್ನಡ ಸಿನಿಮಾಗಳು, ಇತ್ಯಾದಿ, ಇತ್ಯಾದಿ. ಈ ನಡುವೆ ಅಪರೂಪಕ್ಕೆ ಆತ್ಮೀಯ ಗೆಳೆಯರೊಬ್ಬರು ಫೋನ್‌ ಮಾಡಿದ್ರು. ಅವರ ಬಳಿಯೂ ಮಾತನಾಡಿ, ಮನೆಗೆ ಬಂದು, ಸೋಷಿಯಲ್‌ ಮೀಡಿಯಾದಲ್ಲಿ ʼಟೋಬಿʼ ವಿಮರ್ಶೆಗಳನ್ನು ಗಮನಿಸಿದ್ರೆ ಸಿನಿಮಾಗೆ ಹೋಗದಿದ್ದದ್ದೆ ಒಳ್ಳೆಯದಾಯ್ತು ಅಂತ ಅನ್ನಿಸಿತು.

ನಾನು ಇತ್ತೀಚಿಗೆ, ಅದೂ ಬಿಡುಗಡೆಯಾದ ಹತ್ತು ದಿನದ ನಂತರ ನೋಡಿದ ಸಿನಿಮಾ ʼಜೈಲರ್‌ʼ. ಅದೂ ಕನ್ನಡದಲ್ಲಿ. ಈ ಸಿನಿಮಾ ಕುರಿತು ಬಿಡುವಾದಾಗ ಬರೆಯುವೆ.

ಮತ್ತೊಮ್ಮೆ, ನಿಮ್ಮೆಲ್ಲಾ ಕೋರಿಕೆಗಳಿಗೆ ವರಮಹಾಲಕ್ಷ್ಮೀ ಸ್ಪಂದಿಸಲಿ ಎಂದು ಆ ತಾಯಿಯಲ್ಲಿ ಪ್ರಾರ್ಥಿಸುತ್ತಾ… ಶುಭರಾತ್ರಿ…

ಗುರುವಾರ, ಆಗಸ್ಟ್ 24, 2023

ಯಶಸ್ವಿ ಚಂದ್ರಯಾನ 3ರ ಹತ್ತು ಪ್ರಮುಖ ಪ್ರಯೋಜನಗಳು… 10 Major Benefits of Successful Chandrayana 3

ಸ್ನೇಹಿತರೇ,

ನಮ್ಮ ಭಾರತ ದೇಶದ ಚಂದ್ರಯಾನ 3 ಯಶಸ್ವಿಯಾಗಿ ಉಡಾವಣೆಯಾಗಿದೆ. ಆಗಸ್ಟ್‌ 23ರ ಬುಧವಾರ ಸಂಜೆ 6.04ಕ್ಕೆ ಸರಿಯಾಗಿ ವಿಕ್ರಮ್‌ ಲ್ಯಾಂಡರ್‌ ಸಾಫ್ಟ್‌ ಲ್ಯಾಂಡಿಂಗ್‌ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿರುವ ವಿಕ್ರಮ್‌ ಲ್ಯಾಂಡರ್‌ ಒಳಗಿರುವ ರೋವರ್‌ ಪ್ರಗ್ಯಾನ್‌ ಹೊರಬಂದು ತನ್ನ ಕೆಲಸಗಳನ್ನು ಮಾಡಲಿದೆ. ಇದರಿಂದ ನಮ್ಮ ಭಾರತ ದೇಶಕ್ಕೆ ಲಭಿಸುವ ಹತ್ತು ಪ್ರಮುಖ ಲಾಭಗಳು ಅಥವಾ ಪ್ರಯೋಜನಗಳು ಏನು ಅಂತ ನೋಡೋಣ ಬನ್ನಿ… ಅದಕ್ಕೂ ಮುನ್ನ ದೇಶದ ಹೆಮ್ಮೆಯ ಇಸ್ರೋಗೆ, ವಿಜ್ಞಾನಿಗಳಿಗೆ ಮತ್ತು ನಾಗರೀಕರಿಗೆ ಅಭಿನಂದನೆಗಳನ್ನು ತಿಳಿಸೋಣ…

1.     ಅಮೇರಿಕಾ, ರಷ್ಯಾ, ಚೀನಾ ನಂತರ ಚಂದ್ರನಲ್ಲಿ ಯಶಸ್ವಿಯಾಗಿ ಇಳಿದ ನಾಲ್ಕನೇ ದೇಶವಾಗಿ ಭಾರತ ಇದೀಗ ಹೊರಹೊಮ್ಮಿದೆ. ಈ ಕ್ಲಬ್‌ ಸೇರುವ ಮೂಲಕ ಜಗತ್ತಿಗೆ ತನ್ನ ಬಾಹ್ಯಾಕಾಶ ಶಕ್ತಿಯನ್ನು ಸಾಬೀತುಪಡಿಸಿದಂತಾಗಿದೆ. ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇದೊಂದು ಮೈಲುಗಲ್ಲಾಗಿದೆ.

2.    ಈ ಮೂಲಕ ದೇಶದ ಘನತೆ ಮತ್ತು ಆರ್ಥಿಕತೆ ಹೆಚ್ಚಾಗಲಿದೆ. ಮತ್ತೊಮ್ಮೆ ನಾವು ಭಾರತೀಯರು ನಮ್ಮ ದೇಶ ಭಾರತ ಅಂತ ಹೆಮ್ಮೆಯಿಂದ ಹೇಳಬಹುದಾಗಿದೆ. ಜೊತೆಗೆ ಭಾರತ ವಿಶ್ವದಲ್ಲಿ ತನ್ನ ಆರ್ಥಿಕತೆಯನ್ನು ವಿಸ್ತರಿಸಿಕೊಳ್ಳಲು ಅವಕಾಶವಾದಂತಾಗಿದೆ.

3.     ಬಹುಮುಖ್ಯವಾಗಿ ನಮ್ಮ ದೇಶ ಮೂನ್‌ ಎಕಾನಮಿ ಪ್ರವೇಶಿಸಿದಂತಾಗಿದೆ. ಮೂನ್‌ ಎಕಾನಮಿ ಎಂದರೆ ಚಂದ್ರನ ಆರ್ಥಿಕತೆ. ಚಂದ್ರನಲ್ಲೀಗ ನಾವೀರುವುದರಿಂದ ಅಲ್ಲಿನ ಮಾಹಿತಿಯನ್ನು ವಿದೇಶಗಳೊಂದಿಗೆ ಹಂಚಿಕೊಳ್ಳುವ ಮೂಲಕ ಕೋಟ್ಯಾಂತರ ರೂಗಳ ಹೊಸ ವಹಿವಾಟು ಶುರುವಾಗಲಿದೆ. ಚಂದ್ರನಲ್ಲಿ ಇಳಿಯಲಾಗದ ದೇಶಗಳು ಈ ವಿಷಯದಲ್ಲಿ ನಮ್ಮೊಂದಿಗೆ ವ್ಯವಹಾರ-ವಹಿವಾಟುಗಳಲ್ಲಿ ಕೈಜೋಡಿಸಲಿವೆ. ಬಹುಮುಖ್ಯವಾಗಿ ಚಂದ್ರನ ಮಾಹಿತಿಗೆ ಸಂಪರ್ಕಿಸಲಿವೆ. ಈ ಮೂಲಕ ಉದ್ಯಮವನ್ನು ನಮ್ಮೊಂದಿಗೆ ನಡೆಸಲಿವೆ. ಹೊಸ ರೀತಿಯ ತಂತ್ರಜ್ಞಾನದ ವ್ಯವಹಾರಗಳಿಗೂ ಇದು ನಾಂದಿಯಾಗಲಿದೆ. ಸ್ಟಾರ್ಟ್‌ಅಪ್‌, ಪ್ರವಾಸ, ಮನರಂಜನೆ ಕ್ಷೇತ್ರಗಳ ವ್ಯಾಪ್ತಿ ವಿಸ್ತಾರವಾಗಲಿದೆ.

4.     ಈ ಗೆಲುವಿನಿಂದ ದೇಶದ ಅಭಿವೃದ್ಧಿಗೆ ಮತ್ತು ಪ್ರಗತಿಗೆ ಖಾಸಗಿ ಸಂಸ್ಥೆಗಳು ಮತ್ತಷ್ಟು ಬೆಳವಣಿಗೆಗೆ ಅನುಕೂಲವಾಗುವಂತೆ ತಮ್ಮ ಕೈಜೋಡಿಸಲಿವೆ. ಹೂಡಿಕೆದಾರರ ಮನಸ್ಸನ್ನು ದೇಶದ ಬಾಹ್ಯಾಕಾಶ ಕ್ಷೇತ್ರ ಆಕರ್ಷಿಸಿದಂತಾಗಿದೆ. ಇದು ದೇಶದ ತಂತ್ರಜ್ಞಾನದ ಮತ್ತು ಆರ್ಥಿಕತೆಯ ಬೆಳವಣಿಗೆಗೆ ಅನುಕೂಲವಾಗಲಿದೆ.

5.     ದೇಶದ ಬಾಹ್ಯಾಕಾಶ ತಂತ್ರಜ್ಞಾನದಿಂದ ನಮಗೊದಗಬಹುದಾದ ಅಪಾಯಗಳ ಮುನ್ಸೂಚನೆ ಸಿಗಲಿದೆ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿ  ಬಾಹ್ಯಾಕಾಶದ ಹೊಸ ಪರಿಶೋಧನೆಗಳಿಗೆ ಅವಕಾಶ ಲಭ್ಯವಾಗಲಿದೆ.

6.     ಚಂದ್ರನ ಅಧ್ಯಯನದಿಂದ ಚಂದ್ರನ ಕುರಿತು ಮತ್ತಷ್ಟು ಮಾಹಿತಿ ಲಭ್ಯವಾಗಲಿದ್ದು, ಇತರ ಗ್ರಹಗಳ ಮತ್ತು ಬಾಹ್ಯಾಕಾಶದ ಅಧ್ಯಯನಕ್ಕೆ ನೆರವಾಗಲಿದೆ.

7. ಚಂದ್ರಯಾನ 2ರ ಸೋಲಿನಿಂದ ಕಲಿತ ಪಾಠಗಳು ಚಂದ್ರಯಾನ 3ರ ಯಶಸ್ಸಿಗೆ ಕಾರಣವಾಗಿದ್ದು, ಸೋತವರು ಛಲದಿಂದ ಮತ್ತೆ ಪ್ರಯತ್ನಿಸಿದರೆ ಖಂಡಿತ ಗೆಲ್ಲಬಹುದು ಎಂಬ ಹೊಸ ಪಾಠವೊಂದು ನಮಗೆ, ಜಗತ್ತಿಗೆ  ದೊರೆತಿದೆ. 

8. ಸೋಲಿನಿಂದ ಕುಂದದೆ ಗೆದ್ದ ಇಸ್ರೋ ವಿಜ್ಞಾನಿಗಳ ನಡೆ, ನಾಯಕತ್ವ ಈಗ ದೇಶಕ್ಕಷ್ಟೇ ಮಾದರಿಯಲ್ಲ, ವಿಶ್ವಕ್ಕೂ ಹೊಸ ಹುಮ್ಮಸ್ಸನ್ನು ನೀಡಿದೆ.

9. ಈ ಗೆಲುವು ಗುರಿಯಷ್ಟೇ ಮುಖ್ಯವಲ್ಲ, ದಾರಿಯೂ ಕೂಡ ಅಂತ ಮತ್ತೊಮ್ಮೆ ಸಾಬೀತುಪಡಿಸಿದೆ. ಗೆಲುವಿನ ದಾರಿಯಲ್ಲಿ ಎಷ್ಟೇ ಅಡೆತಡೆಗಳಾದರೂ ಗಮ್ಯ ಬದಲಾಗಬಾರದು. ಆಗ ಗುರಿ ಮುಟ್ಟೇ ಮುಟ್ಟುತ್ತೇವೆ ಎಂಬುದನ್ನು ಎತ್ತಿ ಹಿಡಿದಿದೆ. 

10. ಇದು ದೇಶದ ವರ್ತಮಾನದ ಗೆಲುವಷ್ಟೇ ಆಗಿ ಉಳಿಯದೆ, ಭವಿಷ್ಯದ ಹೊಸ ದಾರಿಗೆ, ಹೊಸ ಗೆಲುವಿಗೆ, ಚೈತನ್ಯ ತುಂಬಿದಂತಾಗಿದೆ. ಈ ಚೈತನ್ಯ ಭವಿಷ್ಯ ಭಾರತದ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಲಿದೆ.

ಇವಿಷ್ಟು ನನಗೆ ಸಿಕ್ಕ ಚಂದ್ರಯಾನ 3ರ ಯಶಸ್ಸಿನ ಪ್ರಯೋಜನಗಳು.  ಹುಡುಕಿದರೆ ಇನ್ನೂ ಹಲವು ಪ್ರಯೋಜನಗಳು ಸಿಗಬಹುದು. ನನಗೆ ಸಿಕ್ಕಷ್ಟನ್ನು ನಾನು ನಿಮಗೆ ತಿಳಿಸಿದ್ದೇನೆ. ನಿಮಗೆ ಗೊತ್ತಿರುವವನ್ನು ಕಾಮೆಂಟ್‌ ಮಾಡಿ ತಿಳಿಸಿ, ನಾನು ತಿಳಿದುಕೊಳ್ಳುತ್ತೇನೆ.

ನಮ್ಮ ದೇಶ, ನಮ್ಮ ಹೆಮ್ಮೆ… ಧನ್ಯವಾದಗಳು…


ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು"

ಸ್ನೇಹಿತರೇ, ನಮಸ್ಕಾರ. ಖ್ಯಾತ ಹಣಕಾಸು ತಜ್ಞರಾದ ರಂಗಸ್ವಾಮಿ ಮೂಕನಹಳ್ಳಿ ಅವರ "ಲಕ್ಷಾಧಿಪತಿಯ ಗುಣಲಕ್ಷಣಗಳು -  ಹಣ, ಸಂಪತ್ತು ಮತ್ತು ಯಶಸ್ಸಿನ ಹಿಂದಿನ ಸರಳ ಅಭ್ಯಾ...