ಬಾಯ್ಕಾಟ್
ಮಾಲ್ಡೀವ್ಸ್ ಹ್ಯಾಶ್ ಟ್ಯಾಗಿಗೆ ಬೆಚ್ಚಿಬಿದ್ದ ಮಾಲ್ಡೀವ್ಸ್
ಸಾಮಾಜಿಕ ಜಾಲತಾಣಗಳು ಈಗ ಎಷ್ಟು
ಪವರ್ ಫುಲ್ ಆಗಿವೆ ಮತ್ತು ಆಗುತ್ತಲಿವೆ ಎಂಬುದಕ್ಕೆ ಒಂದು ತಾಜಾ ಉದಾಹರಣೆ “ಬಾಯ್ಕಾಟ್ ಮಾಲ್ಡೀವ್ಸ್”
ಎಂಬ ಹ್ಯಾಶ್ ಟ್ಯಾಗ್. ಈ ಹ್ಯಾಶ್ ಟ್ಯಾಗ್ ಬಳಸಿದ ಸುದ್ದಿ, ವಿಡಿಯೋಗಳು ಎಕ್ಸ್, ಫೇಸ್ಬುಕ್,
ಇನ್ಸ್ಟಾಗ್ರಾಂ, ಯೂಟ್ಯೂಬ್ ಇನ್ನು ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪ್ರವಾಸೋದ್ಯಮವನ್ನೇ
ದೇಶದ ಪ್ರಮುಖ ಆದಾಯವಾಗಿ ಅವಲಂಬಿಸಿರುವ ದ್ವೀಪ ರಾಷ್ಟ್ರ ಮಾಲ್ಡೀವ್ಸ್ ಅನ್ನು ತತ್ತರಗೊಳಿಸಿದೆ.
ಇದಕ್ಕೆಲ್ಲಾ ಕಾರಣ ಮಾಲ್ಡೀವ್ಸ್‌ನ ಮೂರು ಜನ ರಾಜಕಾರಣಿಗಳೇ ಆಗಿದ್ದು, ಈ ಸಚಿವರು, ಸಂಸದರನ್ನು ಅಲ್ಲಿನ ಸರ್ಕಾರ ತನ್ನ ಸಂಪುಟದಿಂದ ವಜಾಗೊಳಿಸಿದ್ದರೂ ಕೂಡ ತನ್ನ ದೇಶಕ್ಕೆ ಆಗಿರುವ ನಷ್ಟದಿಂದ ಸುಧಾರಿಸಿಕೊಳ್ಳಲು ಬಹಳ ಕಷ್ಟವಿದೆ.
ಅಷ್ಟಕ್ಕೂ ಆಗಿದಿಷ್ಟು: ಮೊನ್ನೆ ಅಂದರೆ ಜನವರಿ 7ರಂದು ನಮ್ಮ ಭಾರತ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಫೋಟೋಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಸಾಹಸಪ್ರಿಯರಿಗೆ ಇದು ಸೂಕ್ತ ಸ್ಥಳ ಎಂದು ಬರೆದುಕೊಂಡಿದ್ದರು. ಸ್ವತಃ ಪ್ರಧಾನಿಯೇ ಹೋಗಿ ಮೆಚ್ಚಿಕೊಂಡ ಮೇಲೆ ನಾವು ಕೂಡ ಹೋಗುತ್ತೇವೆ ಎಂದು ದೇಶದ ಪ್ರಜೆಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯ, ಯೋಜನೆಗಳನ್ನು ಹಂಚಿಕೊಳ್ಳತೊಡಗಿದರು.
ಈ ಸುದ್ಧಿಯಿಂದ ಹೊಟ್ಟೆ ಹುರಿಸಿಕೊಂಡ
ಮಾಲ್ಡೀವ್ಸ್‌ನ ಮೂವರು ರಾಜಕಾರಣಿಗಳು ಪ್ರತಿಕ್ರಿಯಿಸಿ ಮಾಲ್ಡೀವ್ಸ್ ಜೊತೆ ಭಾರತದ ಸ್ಪರ್ಧೆ ಭ್ರಮೆಯಷ್ಟೇ
ಎಂಬರ್ಥದ ಪೋಸ್ಟ್ ಹಂಚಿಕೊಂಡರು. ನಮ್ಮ ದೇಶದ ಪ್ರವಾಸೋದ್ಯಮವನ್ನು ಅಣಕಿಸಿದರು ನೋಡಿ. ಸಂಕಷ್ಟ ಶುರುವಾಯಿತು.
ಭಾರತ ದೇಶದ ಪ್ರಜೆಗಳು ಅಕ್ಷರಶಃ “ಬಾಯ್ಕಾಟ್ ಮಾಲ್ಡೀವ್ಸ್” ಎಂಬ ಕ್ರಾಂತಿಯನ್ನೇ ಸೋಷಿಯಲ್ ಮೀಡಿಯಾದಲ್ಲಿ
ಮಾಡಿಬಿಟ್ಟರು. ಇದರಿಂದ ಆಗುತ್ತಿರುವ ಡ್ಯಾಮೇಜ್ ಅರಿತ ಮಾಲ್ಡೀವ್ಸ್ ಸರ್ಕಾರ ಈ ಮೂವರನ್ನು ತನ್ನ
ಸಂಪುಟದಿಂದ ಕೈಬಿಡುವಷ್ಟರಲ್ಲಿ ದೊಡ್ಡ ಡ್ಯಾಮೇಜೇ ಈ ಪುಟ್ಟ ರಾಷ್ಟ್ರಕ್ಕೆ ಆಗಿಹೋಗಿದೆ. ʼಮಾತು ಆಡಿದರೆ
ಹೋಯ್ತು, ಮುತ್ತು ಹೊಡೆದರೆ ಹೋಯ್ತುʼ ಎಂಬ ಗಾದೆ ಮಾತು ನಿಜವಾಗಿಬಿಟ್ಟಿದೆ. ಸಾವಿರಾರು ಭಾರತೀಯರು
ತಮ್ಮ ಹೋಟೆಲ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ, ಹಲವಾರು ವಿಮಾನಗಳು ರದ್ದಾಗಿವೆ. ಕೋವಿಡ್
ನಂತರ ಅತಿ ಹೆಚ್ಚು ಭಾರತೀಯರ ಪ್ರೀತಿಗೆ ಪಾತ್ರವಾಗಿದ್ದ ಮಾಲ್ಡೀವ್ಸ್‌ನ ತಿಳಿನೀರ ಸಮುದ್ರ ತೀರಗಳು
ಇನ್ನು ಭಾರತೀಯರನ್ನು ಮಿಸ್ ಮಾಡಿಕೊಳ್ಳಲಿವೆ. ಮತ್ತು ಲಕ್ಷದ್ವೀಪದ ಸಮುದ್ರ ತೀರಗಳಿಗೆ ಪ್ರವಾಸಿಗರು
ಹೆಚ್ಚಲಿದ್ದಾರೆ. ಆದರೆ, ಅಲ್ಲಿನ್ನೂ ಮೂಲ ಸೌಕರ್ಯಗಳು ಅಭಿವೃದ್ಧಿಯಾಗಬೇಕಿದೆ.
ಆದರೆ, ಈ ಪ್ರಕರಣದಿಂದ ಸಾಮಾಜಿಕ
ಜಾಲತಾಣಗಳ ಪವರ್ ಮತ್ತೊಮ್ಮೆ ಸಾಬೀತಾಗಿರುವುದಂತೂ ಸತ್ಯ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ