ದೇಹಾತೀತ ಪ್ರೀತಿಯ
ಕಲಿಸಿಕೊಡು
ಸಖಿ
ಸುಟ್ಟುಹೋಗುವ
ದೇಹಕೂ
ಅರ್ಥ
ನೀಡು
ದೇಹಾತಿತ ದಾಹಕೆ ನದಿಯ ಹುಡುಕುವ ಕವಿ ವಾಸುದೇವ ನಾಡಿಗರ ‘ನಿನ್ನ ಧ್ಯಾನದ ಹಣತೆ’ ಕೃತಿಯನ್ನು ನಾನು ತುಂಬಾ ಬೇಜಾರಾದ ಒಂದು ಸಂಜೆ ಓದಿಕೊಂಡಾಗ ನನ್ನ ಬೇಜಾರೆಲ್ಲಾ ಮಾಯವಾಗಿ ಮನಸ್ಸು ಪ್ರಫುಲ್ಲಗೊಂಡು ನಳನಳಿಸತೊಡಗಿತು, ಹೊಸದೊಂದು ಮುದದಿಂದ ಬೀಗತೊಡಗಿತು. ನನ್ನ ಮನಸ್ಸಿಗೆ ಒಂದು ರೀತಿಯಲ್ಲಿ ಸಾಂತ್ವನ ನೀಡಿದ ಕೃತಿಯಿದು. ಈ ಕೃತಿಯನ್ನು ಯಾರೇ ಓದಿದರೂ ಖಂಡಿತ ಅವರಿಗೆ ನನ್ನ ಅನುಭವವೇ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. 2014ರಲ್ಲಿ ಕಡೆಂಗೋಡ್ಲು ಕಾವ್ಯ ಪುರಸ್ಕಾರ ಪಡೆದ ಈ ಕೃತಿ ತುಂಬಾ ವಿಶೇಷವಾದದ್ದು.
ಈ ಕೃತಿಯನ್ನು ವಿಮರ್ಶೆಯ ಓದಿಗೆ, ಒರೆಗೆ ಹಚ್ಚಿ ಪುಟಗಟ್ಟಲೆ ಬರೆಯುವುದಕ್ಕಿಂತ ಇಲ್ಲಿನ ಹಣತೆಗಳಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವುದು ಒಳಿತು. ಲೌಕಿಕದ ಸಂಕೇತವಾದ ಕೃಷ್ಣ ಅಲೌಕಿಕದ ಸಂಕೇತವಾದ ರಾಧೆಯನ್ನು ಹಂಬಲಿಸುವ ಸಂವಾದ ರೂಪದ ಕಾವ್ಯದ ಹಣತೆಗಳ ಮೂಲಕ ಕವಿ ನೀಡುವ ಬೆಳಕು ನಮ್ಮೆಲ್ಲ ಕತ್ತಲನ್ನು ಸರಿಸಿ ಬೆಳಕ ನೀಡುವಂತಿದೆ ಈ ಕೃತಿ.
ಗೋಕುಲದ
ಕೃಷ್ಣನ ಲೌಕಿಕ ಕಷ್ಟಗಳನ್ನು ಕೇಳಿ:
ಪ್ರತಿಹಗಲು
ನನ್ನ ನಾನು ಹುಡುಕುತ್ತೇನೆ
ಅಲ್ಲಿ
ನೀನೇ ಕಾಣಿಸುವೆ
ಮುಖ
ತಿರುಗಿಸಿಕೊಂಡು ಹೋಗಿಬಿಡುವ
ನಿನ್ನಲಿ
ಅದೆಷ್ಟು ಪ್ರಶ್ನೆಗಳಿವೆ!
ಕುಳಿತು
ಮಾತನಾಡಬೇಕಾಗಿದೆ ರಾಧೆ
ಶತ
ಶತಮಾನಗಳು ಕಳೆದರೂ ನಿರೀಕ್ಷೆ ಮುಗಿಯುವುದಿಲ್ಲ!
*
ರಾಧೆ,
ಈ
ರಕ್ತ ಸಿಕ್ತ ಕೈ ಬೆರಳುಗಳೂ
ಹೂಮುಡಿಸಬಲ್ಲವು
ನಿನ್ನ ಹೆರಳಿಗೆ
ಒಡ್ಡು
ಮುಡಿಯ!
ಬೆಣ್ಣೆ
ಮೃದುವಿನ್ನಲ್ಲಾಡಿದ
ಕೈ
ಬೆರಳುಗಳೂ
ಎಡತಾಕಬಲ್ಲದು
ಕ್ರೌರ್ಯದ ಬೇರುಗಳನು
ಸಖೀ,
ನಿನ್ನ
ಸ್ನಿಗ್ಧ ನಗುವನ್ನು ಕಾಪಿಟ್ಟು ಕೊಂಡಿದ್ದೇನೆ
ಎದೆಯೊಳಗೆ
ಯಾವ
ಬಿರುಗಾಳಿಯೂ ಬೀಳಿಸದು
ಅಂತರಂಗದ
ನಿನ್ನ ಸಿಂಹಾಸನವ
ಹಾಗೆಂಬ
ಕೋಟೆ ಮಾನಸವ
*
ದಣಿವಾಗಲಿಲ್ಲ
ಹೆಡೆಯ
ಮೆಟ್ಟಿದಾಗ
ಬೆಟ್ಟ
ಹೊತ್ತಾಗ
ಸುರರನ್ನು
ಹಿಮ್ಮೆಟ್ಟಿದಾಗ
ಶತ್ರುಗಳನ್ನು
ಬೆನ್ನಟ್ಟಿದಾಗ
ಸಖಿ,
ನಿನ್ನ
ನೆನಪಿನಭಾರದಲ್ಲಿ
ನಿಟ್ಟುಸಿರುಟ್ಟಿದ್ದೇನೆ
ಮರದ
ನೆರಳು ಬಿಸಿ ಕಾರುತ್ತಿದೆ
ಕೊರಳ
ನರಗಳಲಿ ಅವ್ಯಕ್ತ ನೋವು
ದ್ವಾರಕೆಯ
ಒಳಮನೆಯು ಸೆರೆಮನೆಯಾಯಿತೆ!
*
ಆ
ಸಂಜೆಯ ಮಥುರೆಯಲಿ
ನೀನು
ಹೂ ಮಾಲೆ ಕಟ್ಟುತಿರಬೇಕು
ಇಲ್ಲಿ
ಯಾಕೊ ಮೊಗ್ಗುಗಳು ಅರಳಲೆ ಇಲ್ಲ!
ಸಖಿ
ನಿನ್ನ
ಕೈಬೆರಳ ಸೋಕಿಗೆ
ಮುಕುತಿಗೆ
ಕೂತವನು ನಾನೂ
ನಿನ್ನ
ತುಟಿಗಳು ಅದಾವ ಹಾಡನು
ಗುನುಗುತ್ತಿವೆ?
ಈ
ಕೊಳಲು ನನ್ನ ಮಾತನೂ ಕೇಳುತ್ತಿಲ್ಲ
*
ಚಕ್ರವ
ಗೋಡೆಗೆ ಸಿಕ್ಕಿಸಿದ್ದೇನೆ
ಬತ್ತಳಿಕೆಯ
ಬಿಸುಟ್ಟಿದ್ದೇನೆ
ಖಡ್ಗವ
ತುಕ್ಕು ಹಿಡಿಸಿದ್ದೇನೆ
ನಿಶ್ಯಸ್ತ್ರನಾಗಿದ್ದೇನೆ
ಸಖಿ
ನಿನ್ನ
ಸಾಂಗತ್ಯವೊಂದನ್ನೆ ಹೊತ್ತು
ಕಡಿ
ಬಡಿ ಸುಡುವ ಈ
ಹೊತ್ತುಗಳನೆಲ್ಲ
ಹುಗಿದುಬಂದಿದ್ದೇನೆ
ಸಖಿ
ಮಥುರೆಯ
ಬಾಗಿಲ ತೆರೆ
*
ಮಥುರೆಯ
ಅಲೌಕಿಕ ರಾಧೆಯ ಸಾಂತ್ವನ... ಅದೂ ಕೃಷ್ಣನ ಮೂಲಕವೇ:
ಪ್ರೀತಿಯ
ತೊರೆಗೆ ಬೊಗಸೆಯೊಡ್ಡಿ
ಕಾದಿದ್ದೆ,
ಮಥುರೆಯ
ಕದ ತೆರೆದೆ ನೀನು
ಅರೆ
ಮುಚ್ಚಿದ ಕಣ್ಣಲೂ ನಿನ್ನದೇ ಬಿಂಬ
ಮುರಳಿಯ
ಒಳ ಹೊರಗೆಲ್ಲಾ
ನಿನ್ನದೇ
ನಡೆ ಚೆಲುವು
ಹಳೆಯ
ದಾರಿಗಳೆಲ್ಲ
ಹಾಡಾಗಿಸಿದೆ
ನೀನು
ಹೃದಯದಿಕ್ಕೆಲಗಳಲಿ
ಪ್ರೀತಿ ಬಿತ್ತಿ
ಕಾಲುಕೆದರಿ
ಕದನಕೆ
ಕರೆವ
ವೈರಿಗಳನ್ನೂ ಮರೆಸಿದೆ!
*
ಸಖೀ,
ಬೆಣ್ಣೆ
ಮೆದ್ದು ಬೆಳೆದೂ
ಮೃದುವಾಗದ
ನನ್ನ
ಒರಟುತನವನ್ನು
ಅದು
ಹೇಗೆ ಹೂವಾಗಿಸಿದೆ!
*
ಕುತಂತ್ರ
ಅಪ್ಪುಗೆಗಳಲಿ
ಬೇಸತ್ತು
ಹೋಗಿದ್ದೇನೆ
ಕೋಟೆಕಟ್ಟುವವರ
ಬಿಟ್ಟು ಬಂದಿದ್ದೇನೆ
ಬಾ
ಸಖಿ
ನಿನ್ನ
ಕೋಟೆಯೊಳಗೆ
ಬಂಧಿಸು
ನಿರ್ವಾಜ್ಯ
ತೋಳುಗಳನ್ನು ಚಾಚು
ಈ
ಸಂವಾದದ ಅನುಸಂಧಾನದಲ್ಲಿ ದೊರೆತ ನೆಮ್ಮದಿ, ಸಮಾಧಾನ, ಆತ್ಮವಿಶ್ವಾಸ...:
ಸಖಿ
ನಿನ್ನಧ್ಯಾನದ
ಹುಚ್ಚು
ಒಳಿತೇ
ಮಾಡಿತು
*
ಸಖಿ
ನೀನೆಂಬ
ಹಣತೆ
ನೀನೆಂಬ
ಕವಿತೆ
ನಾನೆಂಬ
ಭ್ರಮೆಯ ಕಿತ್ತುಹಾಕಿತು!
*
ಕಲಹಗಳು
ಬೇಡ ಸಖಿ
ಬಾಣಗಳನ್ನು
ತೊಳೆಯಿಸಿಕೊಂಡ
ನದಿ
ನಾನು
ನಿನ್ನ
ಮಡಿಲಲ್ಲಿ
ಇಡುತ್ತೇನೆ
ತಲೆಯ
ಮತ್ತೆ
ಬಾಲ್ಯ ಮರುಕಳಿಸಲಿ
*
ಹಚ್ಚಿ
ಹೋದೆ ಹಣತೆ ನೀನು
ಎದೆಯ
ಕತ್ತಲು ಓಡಿತು
ಬದುಕು
ಬಂಧುರದ ನಂಟು ಬೆಳೆಸಿತು
ಮಥುರೆಯ
ತುಂಬಾ
ಗೋಕುಲದ
ಗಂಧ
ಬೃಂದಾವನದ
ಜನರು
ಹಣತೆಗೆ
ಹಸಿದಿದ್ದಾರೆ
ನೀನೆಂಬ
ಹಣತೆ
ಹೃದಯಗಳಲಿ
ಸಂಜೀವಿನಿ
*
ಆತ್ಮಪ್ರತ್ಯಯಗಳಲ್ಲೇ
ದಣಿಯುವುದು
ನಿನಗೂ ಇಷ್ಟವಿಲ್ಲ ಸಖೀ
ಬಿಡು,
ಕಣ್ಣರೆಪ್ಪೆಯನ್ನೂ
ಮಿಟುಕಿಸದೆ
ಕುಳಿತಿದ್ದೇನೆ
ಹಣತೆ
ಆರೀತೆಂದು!
ತಮ್ಮಂತೆಯೇ
ಇರದುದರೆಡೆಗೆ ತುಡಿವ ಮನಸುಗಳಿಗೆ ಕೃತಿಯನ್ನು ಅರ್ಪಿಸಿದ್ದಾರೆ ಕವಿ. ಕವಿಗಳ ಗುರುಗಳಾದ ಶ್ರೀ ಸತ್ಯನಾರಾಯಣ
ರಾವ್ ಅಣತಿ ಮುನ್ನುಡಿಯನ್ನು ಬರೆದಿದ್ದಾರೆ. ಶ್ರೀ ಕಲ್ಲೇಶ್ ಕುಂಬಾರ್ ಬೆನ್ನುಡಿಯಲ್ಲಿ ಇಲ್ಲಿನ ಸಂವಾದರೂಪಿ
ಕವಿತೆಗಳು ಎಣ್ಣೆ ತೀರದ ಹಣತೆಯಂತೆ ಸದಾ ಓದುಗನ ಎದೆಯಲ್ಲಿ ಬೆಳಗುತ್ತಲೇ ಇರುತ್ತವೆ ಎನ್ನುತ್ತಾರೆ.
ಹೊಸದೊಂದು ಓದಿಗೆ, ಕವಿತೆಯ ಸಾಂತ್ವನಕ್ಕೆ ಹಾತೊರೆಯುವವರಿಗೆ ರಾಧೆಯ ಧ್ಯಾನದಲ್ಲಿ ಕೃಷ್ಣ ಹಚ್ಚಿದ
ಹಣತೆಯಾಗಿ ಈ ಕೃತಿ ಖಂಡಿತ ಬೆಳಕ ನೀಡುತ್ತದೆ.
***
ನಾಡಿಗರ ಮತ್ತು ಇತರ ಕವಿಗಳ ಹಾಗೂ ವೀರಲೋಕದ ನಾಳಿನ ಕಾರ್ಯಕ್ರಮಕ್ಕೆ ಶುಭಹಾರೈಸುತ್ತೇನೆ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ