ನನಗೆ
ಮೊದಲಿಗೆ ಹೈಕುಗಳು ಪರಿಚಯವಾಗಿದ್ದು ತುಮಕೂರಿನ ಗ್ರಂಥಾಲಯದಲ್ಲಿ ದೊರೆತ ಅಂಕುರ್ ಬೆಟಗೆರಿಯವರ ‘ಹಳದಿ ಪುಸ್ತಕ’ ದ ಮೂಲಕ. ಆ ಪುಸ್ತಕದ ಮೂಲಕ ನನಗೆ ಹೈಕುಗಳ
ಪ್ರಾಥಮಿಕ ಮಾಹಿತಿ ದೊರೆಯಿತಾದರೂ ನನಗೆ ಹೈಕುಗಳನ್ನು ಬರೆಯಬೇಕು ಎಂದೆನಿಸಲಿಲ್ಲ. ಆದರೆ, ಸುಮಾರು
ಅದೇ ಸಮಯದಲ್ಲಿ ಒಂದು ದಿನ ನಾನು ವೃತ್ತಿಯಲ್ಲಿ ವೈದ್ಯರಾದ ನನ್ನ ಹಿರಿಯ ಮಿತ್ರರಾದ ಡಾ|| ಕೆ.ಬಿ.
ರಂಗಸ್ವಾಮಿಯವರ ಕ್ಲಿನಿಕ್ಕಿಗೆ ಹೋಗಿದ್ದೆ. ಅವರ ‘ಗರಿಕೆ’ ಪುಸ್ತಕದ ಹನಿಗವಿತೆಗಳನ್ನು ಬಹಳವಾಗಿ ಮೆಚ್ಚಿದ್ದ ನಾನು ಅವರ ಪುಸ್ತಕವೊಂದನ್ನು
ಪ್ರಕಟಿಸುವ ಆಸೆ ವ್ಯಕ್ತಪಡಸಿದೆ. ಆಗ ಅವರು ಬೆಳದಿಂಗಳ ಹೈಕುಗಳನ್ನು ಕುರಿತು ಹೇಳಿದರು. ಅಲ್ಲಿಯೇ
ಕೆಲವನ್ನು ಓದಿದ ನಾನು ಮತ್ತು ನನ್ನ ಶ್ರೀಮತಿ ಆಶ್ಚರ್ಯಚಕಿತರಾದೆವು. ನಾನು ಅದೇ ಪುಸ್ತಕವನ್ನು
ಪ್ರಕಟಿಸುವುದಾಗಿ ಅವರಿಂದ ಅನುಮತಿ ಪಡೆದೆ. ಅವರು ಅದರ ಜೊತೆಜೊತೆಯೇ ಅವರದೇ ಸಮೃದ್ಧ ಪ್ರಕಾಶನದ
ಮೂಲಕ ‘ಗರಿಕೆ’ಯ ಮುಂದುವರೆದ ಭಾಗದಂತಿರುವ ‘ಕವಿತೆಗಷ್ಟೇ ಸಾಧ್ಯ’ ಪುಸ್ತಕವನ್ನು ಪ್ರಕಟಿಸುವುದಾಗಿ
ಹೇಳಿದರು. ಈ ಬೆಳದಿಂಗಳ ಹೈಕುಗಳನ್ನು ನಾನು ನನ್ನ ಸಹೋದ್ಯೋಗಿ ಕವಿಮಿತ್ರ ಮನೋಜನಲ್ಲಿ
ಹಂಚಿಕೊಂಡಾಗ ಅಂದೇ ಅವನ ಕಣ್ಣುಗಳಲ್ಲಿ ಕುತೂಹಲಭರಿತ ಮಿಂಚೊಂದು ಹರಿದಿತ್ತು.
ಅಂದಿನಿಂದ
ಆತ ನಮ್ಮ ಗೋಮಿನಿ ಪ್ರಕಾಶನದಲ್ಲಿ ‘ಬೆಳದಿಂಗಳ ಹೈಕುಗಳು’ ಪುಸ್ತಕ ಪ್ರಕಟವಾಗಿ ಬಿಡುಗಡೆಯಾಗುವ ಕ್ಷಣವನ್ನು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು
ಕಾದಿರಬಹುದು ಎಂದರೆ ತಪ್ಪಾಗಲಾರದೇನೋ!? ಯಾಕೆಂದರೆ ಈತ ಆಗಾಗ ಪುಸ್ತಕ ಬಿಡುಗಡೆ ಯಾವಾಗ? ಯಾವಾಗ?
ಎಂದು ಕೇಳುತ್ತಲೇ ಇದ್ದ. ಆ ಪುಸ್ತಕ ಬಿಡುಗಡೆಯ ದಿನ ಇವನು ಪುಸ್ತಕ ಬಿಡುಗಡೆಯಾದ ಕ್ಷಣವೇ ‘ಬೆಳದಿಂಗಳು ಹೈಕುಗಳು’ ಪುಸ್ತಕವನ್ನು ಕೊಂಡುಕೊಂಡು ಅಲ್ಲಿಯೇ
ಸ್ವಲ್ಪ ಹೊತ್ತು ಓದಿ ಹೈಕುಗಳನ್ನು ರಚಿಸಿದ ಎಂಬ ಮಾಹಿತಿ ನನಗಿದೆ. (ಗಮನಿಸಿ : ಆತ ಅಂದು
ಬಿಡುಗಡೆಯಾದ ಐದು ಪುಸ್ತಕಗಳ ಪೈಕಿ ಕೊಂಡದ್ದು ಇದೊಂದೇ ಪುಸ್ತಕ ಮತ್ತು ಕಾರ್ಯಕ್ರಮ ನಡೆಯುವ
ಜಾಗದಲ್ಲಿ ಒಳಗಡೆ ಬಂದು ಕುಳಿತಿರಲೇ ಇಲ್ಲ)
ಅಂದಿನಿಂದ
ಶುರುವಾದ ಈತನ ಹೈಕು ಪ್ರೀತಿ ಇದೀಗ ಆತನ ‘ಮನೋಜ್ಞ
ಹೈಕುಗಳು’ ಪುಸ್ತಕ ಬಿಡುಗಡೆಯ ಈ ಕ್ಷಣದವರಿಗೂ ಬಂದು
ಮುಂದುವರಿಯುತ್ತಿದೆ. ಈತನ ಮೂಲ ಹೆಸರು ಮನೋಜ್ ಎಂ. ಎಂದಾದರೂ ಕಾವ್ಯನಾಮವಾಗಿ ಹೆಸರಿಗೆ ಮೊದಲು ‘ಮಕರಂದ’ ಎಂದು ಸೇರಿಸಿಕೊಂಡಿದ್ದಾನೆ. ಮಕರಂದವೆಂದರೆ ಹೂವಿನ
ರಸ, ಮನೋಜನೆಂದರೆ ನಿಮಗೆ ಗೊತ್ತೇ? ಗೊತ್ತಿಲ್ಲವಾದರೆ ತಿಳಿದುಕೊಳ್ಳಿ ಮನೋಜನೆಂದರೆ ‘ಮನ್ಮಥ’! ಇನ್ನೂ ಈತನ ಈ ಸಂಕಲನದ ಹೆಸರಿನಲ್ಲಿ ಮನೋಜ್ಞ ಇದೆ.
ಮನೋಜ್ಞ ಎಂದರೆ, ಸುಂದರವಾದ ಹೃದಯಂಗಮವಾದ ಎಂಬ ಅರ್ಥವಿದೆ. ನಾನಿಲ್ಲಿ ಇದನ್ನೇಲ್ಲಾ ಏಕೆ
ಪ್ರಸ್ತಾಪಿಸುತ್ತಿದ್ದೇನೆಂದರೆ, ಈತನ ಹೆಸರಿನಲ್ಲೂ, ಪುಸ್ತಕದ ಹೆಸರಿನಲ್ಲೂ ಸೌಂದರ‍್ಯವಿದೆ!
ಜೀವನದಲ್ಲಿ
ಏನನ್ನಾದರೂ ಮಾಡಬೇಕೆಂದರೆ ಒಂದು ಯೋಗ್ಯತೆ ಇರಬೇಕು, ಇಲ್ಲಾಂದ್ರೆ ಯೋಗ ಇರಬೇಕಂತೆ. ಯೋಗ್ಯತೆ ನನಗೆ ಇಲ್ಲಾ ಎಂದರೆ, ನನ್ನ
ಪ್ರೀತಿಯ ಎಂ.ಎಚ್.ಎನ್ ಸರ್ ಇದೆ ಎಂದದ್ದರಿಂದ ಮತ್ತು ಇದೊಂದು ಒಳ್ಳೆ ಯೋಗವೆಂದೇ ನಾನು
ಭಾವಿಸುತ್ತಾ ಈ ಪುಸ್ತಕವನ್ನು ನಿಮಗೆ ಪರಿಚಯಿಸುವ ಒಂದು ಗುಬ್ಬಿ ಪ್ರಯತ್ನವನ್ನು
ಮಾಡುತ್ತಿದ್ದೇನೆ.
ಮೊದಲಿಗೆ,
ಹೈಕುಗಳ ಬಗ್ಗೆ ಸಂಕ್ಷೀಪ್ತವಾಗಿ ಹೇಳಿಬಿಡುತ್ತೇನೆ. ಹೈಕುಗಳ ಮೂಲ ಜಪಾನ್. ಹೈಕುಗಳ ರಚನಾ
ವಿನ್ಯಾಸವೇನೆಂದರೆ ೫-೭-೫ ಸಿಲೆಬಲ್‌ಗಳಲ್ಲಿ ಪದಗಳಿರಬೇಕು. ಪ್ರಕೃತಿ ಅಥವಾ ಕಾಲವನ್ನು
ಪ್ರತಿನಿಧಿಸಬೇಕು ಎಂದಿದೆ. ಮತ್ತು ಎರಡು ವಿರುದ್ಧ ಆಲೋಚನೆಗಳನ್ನು ಹೊಂದಿರಬೇಕು. ಮತ್ತು ಬರೆಯಲು
ಸಾಮರ್ಥ್ಯ ಹಾಗೂ ನೈಪುಣ್ಯತೆ ಇರಬೇಕು. ಇದೆಲ್ಲಾ ಮಾಹಿತಿ ನನಗೆ ದೊರೆತದ್ದು ಅಂಕುರ್ ಬೆಟಗೇರಿಯವರ
‘ಹಳದಿ ಪುಸ್ತಕ’ ದಿಂದ, ಡಾ||
ಕೆ.ಬಿ.ರಂಗಸ್ವಾಮಿಯವರ ಒಡನಾಟದಿಂದ, ಡಾ|| ರಘುರಾಂ ಸರ್‌ರವರು ‘ಬೆಳದಿಂಗಳ
ಹೈಕುಗಳು’ ಪುಸ್ತಕಕ್ಕೆ ಬರೆದ ಸವಿಸ್ತಾರವಾದ ಮುನ್ನುಡಿಯಿಂದ ಮತ್ತು
ಡಾ|| ನವೀನ್ ಹಳೇಮನೆಯವರಿಂದ. ಈ ಹೈಕುಗಳ ಬಗ್ಗೆ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆಂದರೆ
ಬಿಡುವಾದ ಸಮಯದಲ್ಲಿ ಇವರನ್ನು ಭೇಟಿ ಮಾಡಿಯೋ ಇಲ್ಲಾ ಇವರ ಪುಸ್ತಕಗಳನ್ನು ಓದಿಯೋ ತಿಳಿಯಬಹುದು. ಈ
ನಿಟ್ಟಿನಲ್ಲಿ ಮತ್ತೊಂದು ಮುಖ್ಯ ಪುಸ್ತಕವೆಂದರೆ ಡಾ|| ಕೆ.ಬಿ. ಬ್ಯಾಳಿಯವರು ಬರೆದಿರುವುದು.
ಮನೋಜನ
ಬಹುತೇಕ ಹೈಕುಗಳು ಈ ನಿಯಮಗಳನ್ನು ಪಾಲಿಸಿವೆ. ಮತ್ತು ಉಪಗ್ರಹವನ್ನು ಒಳಗೊಂಡೊಂತೆ ಸೂರ‍್ಯನ ಕಿರಣ
ತಾಕುವ ಎಲ್ಲ ಜೀವಿಗಳ, ವಸ್ತುಗಳ ಮೇಲೂ ಮತ್ತು ಅದರಾಚೆಗೂ ವಿಸ್ತರಿಸಿವೆ. ಅವುಗಳಲ್ಲಿ ನನ್ನನ್ನು
ಸೆಳೆದ ಕೆಲವು ಹೈಕುಗಳು ಹೀಗಿವೆ:
ಪಟ್ಟಂತ ಹಾರಿ
ಹೋಗುವ ಪ್ರಾಣಪಕ್ಷಿ
ಬಾಳು ಕ್ಷಣಿಕ
ಹಸಿದ ಹೊಟ್ಟೆ
ಪೂಜಾರಿ ಕೈಯಲ್ಲಿದೆ
ನೈವೇದ್ಯ ತಟ್ಟೆ
ಸ್ವಾರ್ಥದ ಹಗೆ
ಸಕಲವೂ ನಿರ್ನಾಮ
ಯುದ್ಧವೇ ಹಾಗೆ
ಮನದ ಶಾಂತಿ
ಟಿ ವಿ. ಸ್ವಾಮೀಜಿಗಳ
ಭವಿಷ್ಯದಲ್ಲಿ
ಜನ ಸಾಗರ
ಸಾಹಿತ್ಯ ಸಮ್ಮೇಳನ
ಊಟಕ್ಕಾಗಿ ಕ್ಯೂ
ವಿಜ್ಞಾನ ಖಡ್ಗ
ಝಳಪಿಸೆ; ತತ್ತರ
ಮೂಢನಂಬಿಕೆ
ಅನ್ನ ಹಸಿವ
ನೀಗಿಸಿತೇ ಹೊರೆತು
ಪ್ರತಿಷ್ಠೆಯಲ್ಲ
ಮುಂಜಾನೆ ಸೂರ್ಯ
ಆಕಾಶ ಹಣೆಗಿಟ್ಟ
ತುಂಬು ಕುಂಕುಮ
ಜೀವ ತೆಗೆವ
ರೇಷ್ಮೆಗೂಡ ಗೋಡೆಗೂ
ಚಿನ್ನ ಲೇಪನ
ಒಗೆದ ಕಲ್ಲು
ಅಲೆಯ ಮೂಡಿಸಿಯೂ
ಕೊಳ ನಿಶ್ಯಬ್ಧ (ಪ್ರೇರಣೆ: ಜಪಾನಿ ಬಾಶೋನ ‘ದಿ ಪಾಂಡ್’)
ಮಾರ್ಜಾಲ ಮೀಸೆ
ಬಿಸಿಹಾಲನ್ನು ಮುಕ್ಕಿ
ಕರಕಲಾಯ್ತು
೩*೬ ಜಾಗ
ಕೊನೆಗೂ ಉಳಿಯೋದು
ಚಿರ ನಿದ್ರೆಗೆ
ಈ ಹೈಕುಗಳು ನನ್ನನ್ನು ಏಕೆ ಸೆಳೆದವೆಂದರೆ ಅವುಗಳಲ್ಲಿನ
ಸಮಾಜಮುಖಿ ಧೋರಣೆ, ವರ್ತಮಾನಕ್ಕೆ ಸ್ಪಂದನೆ, ವೈಚಾರಿಕತೆ, ಆಧ್ಯಾತ್ಮ, ಮತ್ತು ನಾನು ಒಂದು ಉತ್ತಮ
ಕೃತಿಯೆಂದರೆ ಇರಲೇ ಬೇಕೆಂದುಕೊಂಡಿರುವ ಯೂನಿವರ್ಸಲ್ ಅಪ್ರೋಚ್ ಅಂದರೆ ತನ್ನ ವಿಶ್ವಾತ್ಮಕ
ಅನುಸಂಧಾನದ ಗುಣಗಳಿಂದಾಗಿ. ಇನ್ನೂ ಕೆಲವು ಹೈಕುಗಳನ್ನು ನೀವು ಈ ನಿಟ್ಟಿನಲ್ಲಿ ಓದಿಕೊಳ್ಳಬಹುದು.
ಇದೇ ಮನೋಜ್
ಆಕಾಶ ಭೂಮಿ
ಶುಭವಿವಾಹ; ಮಳೆ
ಮಂಗಳವಾದ್ಯ
ಗೆಜ್ಜೆಯ ಕಟ್ಟಿ
ಮಳೆ ಕುಣಿದ ವೇಗ
ಭೂಮಿ ತತ್ತರ
ಎಂದು ಮಳೆಯ ಸೊಬಗು ಮತ್ತದರ ರುದ್ರನರ್ತನವನ್ನು ತನ್ನ
ಹೈಕುಗಳಲ್ಲಿ ಹಿಡಿದಿದ್ದಾನೆ.
ಈತ ತನ್ನ ಗುರುವೆಂದೇ ಭಾವಸಿರುವ ಕೃಷ್ಣನಿಗೇ ಮೀಸಲಾದ
ಹೈಕುಗಳಿವೆ
ಕೊಳಲ ನಾದ
ಗುರುವಿನ ಸೂಚನೆ
ಕಾವ್ಯ ಅರ್ಚನೆ
ತಾನೂ ಯುವಕನಾಗಿ ಯುವಕರಿಗೆ ಬುದ್ದಿ ಮಾತು
ಹೇಳಿದ್ದಾನೆ.
ಹದಿಹರೆಯ
ಚಟಗಳ ಒಡೆಯ
ಹುಷಾರಾಗಿರು
ಯುವಜನತೆ
ದೇಶದ ನಿಜಶಕ್ತಿ
ಅರಿವಿದ್ದರೆ
ನಾಲ್ಕು ಗೋಡೆಯ
ಬಿಟ್ಟು ಬನ್ನಿ, ದಕ್ಕಿತೂ
ನಿಜ ಶಿಕ್ಷಣ
ಆದರೆ,
ಪುಸ್ತಕ ಸ್ನೇಹ
ಹಚ್ಚಿಕೊಂಡೆ ಈಗಿಲ್ಲ
ಅನಾಥಪ್ರಜ್ಞೆ
ಹೆಜ್ಜೆ ಹೆಜ್ಜೆಗೂ
ವ್ಯಾಮೋಹ ಕಲ್ಲುಗಳು
ಎಡವಿ ಬಿದ್ದೆ
ಎಂಬ ಹೈಕುಗಳನ್ನು ಗಮನಿಸಿದಾಗ ಈತ ನನಗೆ ಗೊತ್ತಿರುವ
ಹಾಗೆ ಓದುವುದು, ಅಂದರೇ ಬೇರೆ ಪುಸ್ತಕಗಳನ್ನು ಓದುವುದು ಬಲು ಅಪರೂಪ ಅಥವಾ ಇಲ್ಲವೆಂದೇ
ಹೇಳಬಹುದು. ಈ ಸಂಕಲನದಲ್ಲಿ ಆತ ಹೈಕು ಎಂಬ ವ್ಯಾಮೋಹಕ್ಕೂ ಒಳಗಾಗಿ ಅಲ್ಲಲ್ಲಿ ಬಿದ್ದಿಯೂ ಇದ್ದಾನೆ
ಮತ್ತೆ ತಡವರಿಸಿಕೊಂಡು ಎದ್ದೂ ಇದ್ದಾನೆ.
ಈತನ ಒಂದು ಹೈಕು ನನಗೆ ಬಹಳ ಮೆಚ್ಚುಗೆಯಾಯಿತು.
ಹರಿವ ನದಿ
ಹಂಚಿದ ಜ್ಞಾನ; ಸದಾ
ಪವಿತ್ರಮಯ
ಆದರೆ ಈ ಹೈಕು ಬರೆದ ಮನೋಜ ಈ ಸಂಕಲನವನ್ನು
ಕ್ರೂಢೀಕರಿಸುವಾಗ ತಾನು ಬರೆದಂತೆ ನಡೆಯದೆ ಎಚ್ಚರತಪ್ಪಿ ಸಂಕಲನದ ಒಟ್ಟು ಅಂದವನ್ನು
ಹಾಳುಗೆಡವಿದ್ದಾನೆ. ಈ ಸಂಕಲನಕ್ಕೆ ನನಗೆ ಗೊತ್ತಿರುವಂತೆ ಈತ ಯಾರಿಗೂ ಮುನ್ನುಡಿ, ಬೆನ್ನುಡಿ
ಬರೆದುಕೊಡಿ ಎಂದು ಕೇಳಿಲ್ಲ. ನಿಮ್ಮ ಅನಿಸಿಕೆ ಬರೆದು ಕೊಡಿ ಎಂದಷ್ಟೇ ಕೇಳಿದ್ದಾನೆ. ಅವರೂ ಬರೆದು
ಕೊಟ್ಟಿದ್ದಾರೆ. ಅವರೆಲ್ಲಾ ಯಾರಂತಿರೀ? ನಮ್ಮ ನಾಡಿನ ಹೆಮ್ಮೆಯ ಕವಿ ವಿಮರ್ಶಕರಾದ ಕೆ.ಪಿ.ನಟರಾಜ್
ಸರ್, ಗೆಳೆಯರಾದ ಡಾ|| ನವೀನ್ ಹಳೇಮನೆ ಸರ್, ಹಿರಿಯರಾದ ಎನ್. ನಾಗಪ್ಪ ಸರ್, ರವೀಂದ್ರನಾಥ
ಠಾಗೂರ್ ಸರ್, ಕವಯತ್ರಿ ಸುಶೀಲಾ ಸದಾಶಿವಯ್ಯ ಮೇಡಂ, ಉಗಮ ಶ್ರೀನಿವಾಸ್ ಸರ್, ಆತ್ಮೀಯ ಗೆಳೆಯರಾದ
ಡಾ|| ರವಿಕುಮಾರ್ ನೀಹ, ಮತ್ತೊಬ್ಬ ಹಿರಿಯರಾದ ಪ್ರೊ.ಕೆ.ಚಂದ್ರಣ್ಣನವರು, ಮತ್ತು ಕವಯತ್ರಿ
ಬಿ.ಸಿ. ಶೈಲಾನಾಗರಾಜ್. ಬರೋಬ್ಬರಿ ಒಂಭತ್ತು ಮಂದಿ. ಅವರ ಅನಿಸಿಕೆಗಳನ್ನೆಲ್ಲಾ ಪ್ರಕಟಿಸಿರುವ
ಮನೋಜ್ ತನ್ನ ಎರೆಡೆ ಎರೆಡು ಮಾತುಗಳಲ್ಲಿ ಪ್ರತ್ಯಕ್ಷವಾಗಿ ಎಂತಲೂ ಮತ್ತು ಯಾವ ಮುಲಾಜಿಲ್ಲದೆ
ಹೇಳಬೇಕೆಂದರೆ ಆತನಿಗೆ ಹೈಕುಗಳನ್ನು ಪರಿಚಯಿಸಿದ ನನಗಾಗಲಿ, ನನ್ನ ಹೆಸರು ಪರವಾಗಿಲ್ಲವೆಂದರೆ,
ಡಾ|| ಕೆ.ಬಿ.ರಂಗಸ್ವಾಮಿಯವರನ್ನಾಗಲಿ ಅಥವಾ ಪುಸ್ತಕ ಮುದ್ರಣಕ್ಕೆ ಮಾಹಿತಿ ನೀಡಿದ
ಎಂ.ಎಚ್.ಎನ್.ಸರ್ ರವರನ್ನಾಗಲಿ ನೆನೆಯದೆ ಪರೋಕ್ಷವಾಗಿ ನೆರವಾಗಿದ್ದಾರೆ ಎಂದಷ್ಟೇ ಸರಕಾರಿ ಕಡತದ
ಷರಾ ಬರೆದುಬಿಟ್ಟಿದ್ದಾನೆ. ಈತನ ಬರೆಯುವಾಗಿನ, ಪ್ರಕಟವಾಗಿಸುವಿನ ಧಾವಂತ ಇಲ್ಲಿ ಎದ್ದು
ಕಾಣುತ್ತದೆ.
ಹರಿವ ನದಿ
ಹಂಚಿದ ಜ್ಞಾನ; ಸದಾ
ಪವಿತ್ರಮಯ
ಮರೆಯಬಾರದು ಮನೋಜ್...
ಕೆ.ಪಿ.ನಟರಾಜ್
ಸರ್ ರವರು ತಮ್ಮ ಅನಿಸಿಕೆಯಲ್ಲಿ ಕವಿ ಮನೋಜನನ್ನು ಆತನ ಮುಗ್ಧ, ಆಲೋಚನಶೀಲಾ ಜಗತ್ತಿನಿಂದ
ನೇರವಾಗಿ ತುಮಕೂರಿನ ಕಾವ್ಯ ಸಂವೇದನೆಯ ನಿಡುಗಾಲದ ಚರಿತ್ರೆಯ ಸಂಪುಟದ ಹೊಸಪುಟಗಳಲ್ಲಿ
ಸೇರಿಸುವುದರ ಮೂಲಕ ಆತನ ದೈವಿಕ ಚೈತನ್ಯಕ್ಕೆ ಮಾರುಹೋಗಿದ್ದಾರೆ. ಈ ನಿಟ್ಟಿನಲ್ಲಿ ಮನೋಜನ ಮೇಲೆ
ಹೆಮ್ಮೆ ಮೂಡುತ್ತದೆ. ಇವರು ಮುನ್ನುಡಿಯೆಂದು ಭಾವಿಸಿಕೊಂಡು ಬರೆದಿರುವುದರಿಂದ ವಿವರವಾಗಿಯೇ ಪ್ರಸ್ತಾಪಗಳಿವೆ.
‘ಚಂದ್ರ’, ‘ಸೂರ‍್ಯ’, ‘ಭೂಮಿಧ್ಯಾನ’, ಮತ್ತು ‘ಆಲೋಚನಾ ಬಿಂದುಗಳು’ ಎಂದು ವಿಭಾಗಗಳನ್ನಾಗಿ ಇಲ್ಲಿನ
ಹೈಕುಗಳನ್ನು ವಿಂಗಡಿಸಿಕೊಂಡು ತಮ್ಮ ವಿಶಿಷ್ಟ ಶೈಲಿಯಲ್ಲಿ ವಿಮರ್ಶಿಸಿದ್ದಾರೆ. ಜೊತೆಗೆ
ಮನೋಜನಿಗೆ ಓದುವಂತೆ ತಾಕೀತು ಮಾಡಿದ್ದಾರೆ.
ರಾತ್ರಿಯ ಮಳೆ
ಗೊಂದಲದ ಪಯಣ-
ಓ ಹೈಕು ಮಿಂಚು!
ಎಂದು
ತಮ್ಮದೇ ಹೈಕೊಂದನ್ನು ಉದ್ಗರಿಸಿರುವ ನವೀನ್ ಸರ್ ಹೈಕುಗಳ ಕಟ್ಟುಪಾಡುಗಳನ್ನು ವಿವರಿಸುತ್ತಾ
ಓದುಗನನ್ನೂ ಹೈಕು ಕಟ್ಟೆಂದು ಆಮಂತ್ರಿಸಿರುತ್ತಾರೆ. ಅವರ ಮಾತುಗಳಲ್ಲಿ ಮನೋಜನ ಇತಿಮಿತಿಗಳೂ
ವ್ಯಕ್ತವಾಗಿವೆ. ಈ ದೃಷ್ಟಿಯಿಂದ ಈ ಪುಸ್ತಕವೂ ಹೈಕು ಅಭ್ಯಾಸ ಮಾಡುವವರಿಗೆ ಒಂದು
ಪಠ್ಯವಾಗಬಲ್ಲದು.
‘ಮನೋ’ಜ್ಞ ಹೈಕುಗಳಿಗೆ ಮಮತೆಯ ಮುನ್ನುಡಿಯೆಂದೇ ನಾಗಪ್ಪ ಸರ್
ಸವಿಸ್ತಾರವಾಗಿ ಬರೆಯುತ್ತಾ ಮೊದಲ ಕವನಸಂಕಲನ ‘ದರ್ಪಣ ಸುಂದರಿ’ ಯಲ್ಲಿ ಪ್ರೀತಿ-ಪ್ರೇಮ ಎನ್ನುತ್ತಿದ್ದ ಕವಿ ಇಲ್ಲಿ ಅಗಾಧವಾದ ಅನುಭವದ
ಮಾತುಗಳನ್ನಾಡಿರುವುದನ್ನು ಅಚ್ಚರಿಯಿಂದ ನೋಡಿದ್ದಾರೆ. ಈತನ ಪ್ರಗತಿಪರ ನಿಲುವನ್ನು, ಬುದ್ಧನ
ಸೂಕ್ಷ್ಮತೆಯನ್ನು ಹೈಕುಗಳಾಗಿಸಿರುವುದಕ್ಕೆ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದಾರೆ.
ಹಾರೈಸಿರುವ
ರವೀಂದ್ರನಾಥ ಠಾಗೂರ್ ರವರು “Unless
I develop self-respect, I will remain under someone else’s foot” ಎಂದ ದಾರ್ಶನಿಕನ ಹೆಸರನ್ನು ಉಲ್ಲೇಖಿಸದೆ
ಮನೋಜನನ್ನು ದಾರ್ಶನಿಕರ ಸಾಲಿಗೆ ಪ್ರೀತಿಯಿಂದ ನಿಲ್ಲಿಸಿಬಿಟ್ಟಿದ್ದಾರೆ.
‘ಹೈಕುಗಳ ಮನೋಜ್ಞ’ ಎಂದು ಶುಭಹಾರೈಸಿರುವ ಕವಯತ್ರಿ ಸುಶೀಲಾ
ಸದಾಶಿವಯ್ಯ ಈತನ ಪ್ರತಿಭೆ, ಇನ್ವಾಲ್ವ್‌ಮೆಂಟ್ ಗಳನ್ನು ಮೆಚ್ಚಿ ಮುಂದೆ ಸಂಕಲನ ಸಾಹಿತ್ಯ
ಸಿದ್ಧಿಯ ಮೆಟ್ಟಿಲುಗಳನ್ನೇರಲಿ ಎಂದಿದ್ದಾರೆ.
ಆಶ್ಚರ್ಯದ
ಸಂಗತಿಯೆಂದರೆ, ತಮ್ಮ ಪತ್ರಕರ್ತನ ಕೆಲಸದಲ್ಲಿ ಸದಾ ಬ್ಯುಸಿಯಾಗಿರುವ, ಝೆನ್ ಗುರುವಿನಂತೆ ಆಗಾಗ
ಭಾಸವಾಗುವ, ಹೆಮ್ಮೆಯ ಹಿರಿಯ ಕವಿಮಿತ್ರರಾದ ಉಗಮ ಶ್ರೀನಿವಾಸ್ ರವರು ಒಂದು ಪುಟ್ಟ ಆಶಯದ
ಪ್ಯಾರಾವನ್ನು ಈತನಿಗೆ ಬರೆದುಕೊಟ್ಟಿರುವುದು. ನೋಡಿ ಬರೆಯುವುದು ಕಲೆಯಲ್ಲ ಎಂದು ಆಗಾಗ
ನಮ್ಮೆಲ್ಲರಿಗೂ ಕಿವಿಮಾತು ಮತ್ತು ಕವನವಾಗಿಸುವ ಒಳಗುಟ್ಟನ್ನು ಹೇಳುವ ಇವರು ಈತನ ನೋಡಿದ್ದನ್ನೇ
ಕಲಾತ್ಮಕವಾಗಿ ಕಟ್ಟಿಕೊಡುವ ಕಲೆಯನ್ನು ಮೆಚ್ಚಿ ಶುಭಹಾರೈಸಿದ್ದಾರೆ.
ಮನೋಜನ
ಹಾಯಿಕುಗಳ ಹಾಯಿ ದೋಣಿಯೊಳಗೆ ನಮ್ಮನ್ನು ಒಂದು ಸುತ್ತು ಹಾಕಿಸುವ ಆತ್ಮೀಯ ಮಿತ್ರರಾದ ರವಿ ಸರ್
ತಾವು ಕವಿಗೋಷ್ಠಿಯೊಂದರಲ್ಲಿ ಈತನ ಹೈಕುಗಳನ್ನು ಮೆಚ್ಚಿದ್ದು, ಆತ ಕಡಿಮೆ ಅವಧಿಯಲ್ಲಿ ನೂರಾರೂ
ಹೈಕುಗಳನ್ನು ಬರೆದು ಅಭಿಪ್ರಾಯ ಬರೆದು ಕೊಡಿ ಎಂದು ಕೇಳಿದ್ದನ್ನು ಆಶ್ಚರ್ಯವ್ಯಕ್ತಪಡಿಸುತ್ತಲೇ
ಆತನ ಸರಳತೆಯನ್ನು ಎತ್ತಿ ಹಿಡಿದಿದ್ದಾರೆ. ಬದುಕಿನ ಅನಂತತೆ ಮನೋಜನ ಹೈಕುಗಳ
ವಸ್ತುವಾಗಿರುವುದನ್ನು ಶ್ಲಾಘಿಸಿದ್ದಾರೆ. ‘ಬದುಕನ್ನು
ತುಂತುಂಬಿ ಕುಡಿಯಬೇಕು’ ಎಂಬ ಬೇಂದ್ರೆಯವರ ಸಾಲೊಂದನ್ನು
ಉಲ್ಲೇಖಿಸುತ್ತಾ
ಪ್ರೀತಿ ಅರಸಿ
ಊರೆಲ್ಲಾ ತಿರುಗಿದೆ
ಬಾಳ ಮೂಸದೆ
ಎಂಬ ಹೈಕಿನ ಅದ್ಭುತ ಜೀವನ ದರ್ಶನವನ್ನು
ಮೆಚ್ಚುತ್ತಾರೆ. ಇವರು ಮೆಚ್ಚಿರುವ ಕೆಲವು ಹೈಕುಗಳನ್ನು ಓದಿದಾದ ನನಗೆ ಪ್ರಾಮಾಣಿಕವಾಗಿ ಅರಿವಿಗೆ
ಬಂದದ್ದು ಇವರ ಅಭಿಪ್ರಾಯವೂ ಒಂದು ಉತ್ತಮ ವಿಮರ್ಶೆಯಾಗಿದೆ.
ಪ್ರೊ.ಕೆ.
ಚಂದ್ರಣ್ಣನವರು ಹೈಕುಗಳಿಗೆ ಮುನ್ನುಡಿಯೆಂದೇ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
ಮನೋಜನನ್ನು ಹತ್ತಿರದಿಂದ ಬಲ್ಲ ಇವರು ಈತನ ಹೈಕುಗಳು ಏರೋಪ್ಲೇನುಗಳು ಎಂದಿದ್ದಾರೆ. ಅದರಲ್ಲಿ
ಅತಿಶಯೋಕ್ತಿಯೇನಿಲ್ಲ. ಮನೋಜನ ಹೈಕುಗಳು ಏರೋಪ್ಲೇನುಗಳೇ ಸರಿ. ಆದರೆ, ಬರೆಯುವಾಗ ಆತ ಆಗಾಗ
ಲ್ಯಾಂಡ್ ಆಗುವುದನ್ನು ಕಲಿಯಬೇಕು.
ಇನ್ನು
ಹಿರಿಯ ಕವಯತ್ರಿ ಶೈಲಾ ನಾಗರಾಜ ರವರ ಅಭಿಪ್ರಾಯವನ್ನು ಈತ ಬೆನ್ನುಡಿಯಂತೆ ಮುದ್ರಿಸಿದ್ದು ಅವರು
ಈತನ ‘ಜನಮುಖಿ’ ಸತ್ವವನ್ನು
ಹಿಡಿದಿಟ್ಟಿದ್ದಾರೆ. ಬ್ಯಾಂಕಿನ ಕೆಲಸದ ನಡುವೆಯೂ ಹೊಸದೊಂದಕ್ಕೆ ತುಡಿಯುವ ಮನೋಜನ
ಹೈಕುಗಳಲ್ಲಿರುವ ಬೆಳಕಿಗೆ ಕನ್ನಡಿ ಹಿಡಿದು ಆ ಬೆಳಕು ಮತ್ತಷ್ಟು ಪ್ರತಿಫಲಿಸುವಂತೆ ಮಾಡಿದ್ದಾರೆ.
ಆ ಬೆಳಕಲ್ಲಿ ಮನೋಜ್ ತನ್ನನ್ನು ತಾನು ಮುಂದಿನ ದಿನಗಳಲ್ಲಿಯೂ ಕಾಣಿಸಿಕೊಳ್ಳಬೇಕಿದೆ.
ಇನ್ನು ತನ್ನ ಹೈಕುಗಳ ಅಂತ್ಯಕ್ಕೆ ಮನೋಜ್
ಇದು ಆರಂಭ
ಮುಗಿಯದ ಶೋಧನೆ
ಮುಂದುವರಿಕೆ
ಎಂಬ ಹೈಕನ್ನು ಬರೆಯುತ್ತಾ ಆಶ್ಚರ್ಯ ಮೂಡಿಸುತ್ತಾನೆ.
ಜೊತೆಜೊತೆಗೆಯೇ ಕುತೂಹಲ ಮತ್ತು ಗಾಬರಿಯನ್ನು ಹುಟ್ಟುಹಾಕಿದ್ದಾನೆ. ಈತ ಇನ್ನೂ ಯಾವ್ಯಾವ
ಹೈಕುಗಳನ್ನು ಬರೆಯಬಹುದೆಂಬ ಕುತೂಹಲ ಒಂದು ಕಡೆಯಾದರೇ, ಬರೆದು ಏನು ಮಾಡುತ್ತಾನೋ ಎಂಬ ಗಾಬರಿ.
ಗಾಬರಿ ಯಾಕೆಂದರೆ ಈ ಪುಸ್ತಕದಲ್ಲಿ ಸರಿಪಡಿಸಿಕೊಳ್ಳಬಹುದಾಗಿದ್ದ ಹಲವು ದೋಷಗಳಿವೆ. ಅದು ಪುಸ್ತಕದ
ವಿನ್ಯಾಸವಿರಬಹುದು, ಮುಖಪುಟವಿರಬಹುದು, ಇಂಪ್ರೀಂಟ್ ಇರಬಹುದು, ಕಾಗುಣಿತ ದೋಷಗಳಿರಬಹುದು, ನಾನು
ಆಗಲೇ ಹೇಳಿದಂತೆ ಪುಸ್ತಕದ ಒಟ್ಟು ಕ್ರೂಢೀಕರಣ. ಅಷ್ಟಕ್ಕೂ ಇಂದಿಂನ ಸಂಭ್ರಮ ಮುಗಿದ ಮೇಲೆ
ನಾಳೆಯಿಂದ ಪುಸ್ತಕಗಳನ್ನು ಏನು ಮಾಡಬಹುದು ಎಂದು. ಇದಕ್ಕೆಲ್ಲಾ ಮುಂದಿನ ಪುಸ್ತಕ ಪ್ರಕಟಿಸುವ
ಹೊತ್ತಿಗೆ ಯಾವ ವಿಷಯದ ಮೇಲೆ, ಯಾವ ಸಮಯದಲ್ಲಾದರೂ ಹೈಕು ಬರೆಯುವ ಪ್ರತಿಭೆಯಿರುವ ಮನೋಜ್ ಯೋಚಿಸಿ
ತನ್ನ ಧಾವಂತದ ಓಟಕ್ಕೆ ಒಂದು ಬಿಗ್ ಬ್ರೇಕ ಹಾಕಲಿ ಎಂದು ಹಾರೈಸುತ್ತಾ, ತನ್ನ ಹವ್ಯಾಸಿ ಪ್ರಕಾಶನ
ಉತ್ಸಾಹಿ ಬರಹಗಾರರ ವೇದಿಕೆ ಎಂದಿರುವಾಗ ಈತನದ್ದೇ ಪುಸ್ತಕಗಳನ್ನು ಪ್ರಕಟಿಸುವ ಜೊತಗೆ ಇನ್ನೊಬ್ಬ
ಉತ್ಸಾಹಿಗಳ ಪುಸ್ತಕ ಪ್ರಕಟಿಸಿ ತನ್ನ ಪ್ರಕಾಶನವನ್ನು ವಿಸ್ತರಿಸುವಂತೆ ಕಿವಿಮಾತು ಹೇಳುತ್ತೇನೆ.
ಕೊನೆಗೆ, ನನ್ನ ಮೆಚ್ಚಿನ ಡಾ|| ಕೆ.ಬಿ.ರಂಗಸ್ವಾಮಿಯವರ
ಹನಿಗವಿತೆ
ಮಿತಿ :
ಕ್ಷಿತಿಜಕ್ಕೆ
ತಾನೇ ಒಡೆಯನೆಂದು
ಭ್ರಮಿಸಿದ
ಗಾಳಿಪಟ
ಸೂತ್ರ ಹರಿದೊಡನೆ
ಮೆಲ್ಲಗೆ
ಇಳಿಯಿತು
ಭುವಿಗೆ! –
ವಾಚಿಸುತ್ತಾ ಆನೆ ನಡೆದದ್ದೇ ದಾರಿ ಎಂಬ ಮಾತು ನಿಜ.
ಆದರೆ ಅದು ಆನೆಗೆ ಮಾತ್ರ ಅನ್ವಯವಾಗುವ ಮಾತು, ಮನುಷ್ಯರಿಗಲ್ಲ ಎಂದು ಹೇಳುತ್ತಾ, ಒಂದು
ಪುಸ್ತಕವನ್ನು ಕುರಿತು ಮಾತನಾಡಲು ನಾನು ತುಮಕೂರಿನಲ್ಲಿ ಕಲಿತದ್ದು ಬಾ.ಹ. ರಮಾಕುಮಾರಿ ಮೇಡಂ,
ರವಿ ಸರ್, ಕೆ.ಪಿ.ಎನ್. ಸರ್ ಮತ್ತು ಫೋನಿನಲ್ಲಿ ಧೈರ್ಯ ತುಂಬಿದ ಎಂ.ಎಚ್.ಎನ್. ಸರ್ ರವರಿಂದ.
ಅವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.
ಹತ್ತಿರದಿಂದ ನನ್ನನ್ನು ಬಲ್ಲವರು ‘ಖಂಡಿತವಾದಿ ಲೋಕವಿರೋಧಿ’ ಎನ್ನುತ್ತಾರೆ. ಮನೋಜ್
ಅವಕಾಶಕೊಟ್ಟದ್ದಕ್ಕೆ ಮನೋಜ್ ನನ್ನನ್ನು ಹೀಗೆ ಅರ್ಥೈಸಿಕೊಂಡರೂ ಪರವಾಗಿಲ್ಲ, ‘ನಮ್ಮ ಒಳಗಣ್ಣು ತೆರೆಯದೆ, ನಮ್ಮ ಸುತ್ತಾ ಎಷ್ಟೇ ಬೆಳಕಿದ್ದರೂ ಕತ್ತಲೆಯೇ ಆವರಿಸುತ್ತದೆ’ ಎಂಬ ನನ್ನದೇ ಮಾತುಗಳು ನಿನಗೂ ಅನ್ವಯವಾಗುತ್ತವೆ ಎಂದು ಹೇಳಿ ವಿರಮಿಸುತ್ತೇನೆ.
ಧನ್ಯವಾದಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ