ಶುಕ್ರವಾರ, ಅಕ್ಟೋಬರ್ 7, 2011

ಕಳ್ಳನ ಮೆಟ್ಟು

ಕಳ್ಳನ ಮೆಟ್ಟು


ಅದೊಂದು ಮೋಡ ಮುಸುಕಿದ ಮುಂಜಾವು. ಪೂರ್ವದತ್ತ ಬೀಸುತ್ತಿದ್ದ ತಂಗಾಳಿ ತುಸು ಜೋರಾಗಿಯೇ ಇತ್ತು. ಎಂತಹವರನ್ನು ಬೇಕಾದರೂ ಹೆದರಿಸುತ್ತೇನೆ ಎಂದು ಕೊರೆಯುತ್ತಿತ್ತು. ಸುಮಾರು ಒಂದು ಕ್ವಿಂಟಾಲಿಗಿಂತ ಸ್ವಲ್ಪ ಕಡಿಮೆಯಿದ್ದ ನನ್ನ ಧಡೂತಿ ದೇಹವು ನಾನು ಏನನ್ನೂ ಲೆಕ್ಕಿಸುವುದಿಲ್ಲ ಎಂದು ಯೋಗ ಮಂದಿರದತ್ತ ಬಿರುಸಾಗಿಯೇ ಹೆಜ್ಜೆ ಹಾಕಿತು. ಸಮಯ ಅದಾಗಲೇ ಆರಾದರೂ ಅರೆಬರೆ ಎದ್ದಿದ ಅಮರಗೊಂಡದ ಬೀದಿಗಳಲ್ಲಿ ಚಳಿಗೆ ಕಾಪಿಯನ್ನೋ, ಟೀಯನ್ನೋ ಕುಡಿಯುವ ಮನಸ್ಸುಳವರು ನಿದ್ದೆ ಬಿಟ್ಟ ಕಣ್ಣುಗಳನ್ನು ಅಗಲಿಸಿಕೊಂಡು ಹಾಲಿನ ಪ್ಯಾಕೆಟ್ಟನ್ನೋ, ಪಾತ್ರೆಯನ್ನೋ ಹಿಡಿದು ಮನೆಗಳತ್ತ ತೆರಳುತ್ತಿದ್ದರು. ಇನ್ನೂ ಹಾಲನ್ನು ತರಬೇಕಿದ್ದವರು ಕಣ್ಣುಜ್ಜುತ್ತಾ ಲಗುಬಗೆಯಲ್ಲಿ ಅಂಗಡಿಗಳೆಡೆಗೆ ಧಾವಿಸುತ್ತಿದ್ದರು. ಹಾಲನ್ನು ಮನೆಮನೆಗೆ ಹಾಕುವವರು ಎಲ್ಲರಿಗಿಂತ ತುರ್ತಾಗಿ ಸಂಚರಿಸುತ್ತಿದ್ದರು. ಪತ್ರಿಕೆ ಹಂಚುವ ಹುಡುಗರಂತೂ ತುರಾತುರಿಯಲ್ಲಿ ಪತ್ರಿಕೆಗಳನ್ನು ತರಿಸುವವರ ಮನೆಗಳೆಡೆಗೆ ಎಸೆದು, ಎದ್ದೆವೋ ಬಿದ್ದೆವೋ ಅಂತಲೂ ನೋಡದೆ ಸೈಕಲ್ ಹತ್ತಿ ಯಾವುದೋ ತಿರುವಿನಲ್ಲಿ ಮರೆಯಾಗುತ್ತಿದ್ದರು. ಅರೆಕ್ಷಣದಲ್ಲಿ ಮತ್ತೊಂದು ತಿರುವಿನಲ್ಲಿ ಪ್ರತ್ಯಕ್ಷರಾಗಿರುತ್ತಿದ್ದರು. ರಾತ್ರಿಯೆಲ್ಲಾ ನಿದ್ದೆ ಮಾಡದವರೆಂತೆ ಕಾಣುತ್ತಿದ್ದ ಭಿಕ್ಷುಕರು ತಾವು ನಿಂತ ಮನೆಗಳೆದೆರು ಮನೆಯವರು ಎದ್ದಿರುವರೋ ಇಲ್ಲವೋ ಎಂಬ ಭಾವದಲ್ಲಿ, ಇನ್ನೆಲ್ಲಿ ಮುಂದೆ ಹೋಗು ಅನ್ನುತ್ತಾರೋ ಎನ್ನುವ ಆತಂಕದಲ್ಲಿ “ಅಮ್ಮಾ...ತಾಯಿ...ಏನಾದರು ಭಿಕ್ಷೆ ಹಾಕ್ರಮ್ಮ” ಎಂದು ಕೇಳುತ್ತಿದ್ದರು. ತರಕಾರಿ, ಹಣ್ಣು, ಹೂ ಮಾರುವವರು ತುಸು ಸಂಭ್ರಮದಲ್ಲೇ ವ್ಯಾಪಾರಕ್ಕೆ ಇಳಿದಿದ್ದರು. ತನಗಿಂತ ಮುಂಚೆಯೇ ಎಚ್ಚರವಾದ ಈ ಜಗತ್ತಿನ ಬಗ್ಗೆ ಸೂರ್ಯನಿಗೆ ನಾಚಿಕೆಯಾಗಿ ತನ್ನನ್ನೇ ನೆಚ್ಚಿರುವ ಜಗತ್ತಿಗೆ ಮತ್ತಷ್ಟು ಲವಲವಿಕೆ ತುಂಬುವ ಸಲುವಾಗಿ ನಿಧಾನವಾಗಿ ಬಾನಂಚಿನಲ್ಲಿ ತನ್ನ ಕಣ್ಣುಗಳನ್ನು ಮೋಡಗಳ ಮರೆಯಲ್ಲೇ ತೆರೆಯಲಾರಂಭಿಸಿದನು. ಎಲ್ಲವನ್ನೂ ಗಮನಿಸುತ್ತ, ಕಣ್ತುಂಬಿಕೊಳ್ಳುತ್ತಾ ಸುಮಾರು ಅರ್ಧ ಮೈಲಿಯಷ್ಟಿದ್ದ ಯೋಗ ಮಂದಿರವನ್ನು ನಾನು ತಲುಪವಷ್ಟರಾಗಲೇ ಅದು ಕೂಡ ಲವಲವಿಕೆಯಿಂದ ತುಂಬಿತ್ತು.

ನಾನು ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ ನಮ್ಮ ಶಾಲೆಗೆ ಹೊಂದಿಕೊಂಡಿದ್ದ ಈ ಯೋಗಮಂದಿರ ವಾಚನಾಲಯವಾಗಿತ್ತು. ಅದಕ್ಕೂ ಮುಂಚೆ ಶಾಲೆಗೇ ಸೇರಿದ್ದ ಆ ಕೊಠಡಿಯಲ್ಲಿ ತರಗತಿಗಳು ನಡೆಯುತ್ತಿದ್ದವಂತೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಸಂಸ್ಕೃತಿ ನಶಿಸುವ ಕಾಲ ಉದಯವಾಗುತ್ತಿದ್ದ ಆ ಸಮಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿ ಎರೆಡೆರಡು ಸೆಕ್ಷನ್ ಗಳು ಒಂದಾಗಿ ಅನಾಥವಾದ ಹಲವು ಕೊಠಡಿಗಳಲ್ಲಿ ಆ ಕೊಠಡಿಯೇ ಮೊದಲಾಯಿತು. ಹಾಳಾಗುವ ಮೊದಲೇ ಹಲವಾರು ವರ್ಷಗಳ ಕಾಲ ನಮ್ಮೂರಿನ ಕೆಲ ಯುವಕರು ಸ್ವಯಂ ಸೇವಕರಾಗಿ ಆ ಕೊಠಡಿಯಲ್ಲಿ ಉತ್ಸಾಹದಿಂದಲೇ ವಾಚನಲಯವನ್ನು ನಡೆಸಿದಾದರೂ, ಕಾಲ ಕಳೆದಂತೆ ತಮ್ಮ ಜೀವನದ ನಿರ್ವಹಣೆಗಾಗಿ ಹಲವು ಕಡೆ ಹರಿದು ಹೋದುದರಿಂದ, ಹೊಸಬರಾರು ಅದರ ಮೇಲ್ವಿಚಾರಣೆಗಾಗಿ ಬರದೆ ಹೋದುದರಿಂದ ವಾಚನಲಾಯಕ್ಕೆ ಬೀಗ ಬಿತ್ತು. ಸಮಯ ಕಳೆದಂತೆ ಮತ್ತಷ್ಟು ಶಿಥಿಲಾವಸ್ಥೆ ತಲುಪುವ ಮೊದಲೇ ಎಲ್ಲಿಂದಲ್ಲೋ ಬಂದ ನಮ್ಮ ಯೋಗ ಗುರುಗಳ ಕಣ್ಣಿಗೆ ಬಿದ್ದು, ಯೋಗಾಭ್ಯಾಸಕ್ಕೆ ಸರಿಯಾದ ಜಾಗವೆಂದು ಊರಿನ ಮುಖಂಡರ ಮತ್ತು ಮುಖ್ಯ ಶಿಕ್ಷಕರ ಸಹಕಾರದಿಂದ ಅಲ್ಲಿ ಮಾರುತಿ ಯೋಗಮಂದಿರವೆಂಬ ಹೆಸರಿನಲ್ಲಿ ಯೋಗಮಂದಿರವೊಂದು ತಲೆಯೆತ್ತಿತು.

ವಿದ್ಯಾರ್ಥಿಯಾಗಿ ಆ ಕೊಠಡಿಯಲ್ಲಿ ಕಲಿಯದಿದ್ದರೂ, ಅಲ್ಲಿ ಮೊದಲಿದ್ದ ವಾಚನಾಲಯ ಎಷ್ಟೋಬಾರಿ ನನ್ನ ಓದಿನ ಹಸಿವನ್ನು ತೀರಿಸುವುದರ ಮೂಲಕ ನನ್ನ ತಿಳುವಳಿಕೆಯನ್ನು ಹೆಚ್ಚಿಸಿತ್ತು. ಇದೀಗ ದಿನಾ ದಿನ ನನಗರಿವಿಲ್ಲದಯೇ ದೊಡ್ಡದಾದ ಹೊಟ್ಟೆಯನ್ನು ಸಣ್ಣದಾಗಿಸಲು ಯೋಗ ಮಾಡಲು ತೊಡಗಿಸಿಕೊಂಡಾಗ ಆ ಕೊಠಡಿಯೇ ನನ್ನ ದೇಹವನ್ನು ದಂಡಿಸುವ ಸ್ಥಳವಾದುದು ನನಗೆ ಬಹಳ ಪ್ರಿಯವಾಗಿತ್ತು.

ಸುತ್ತಲು ತಂತಿಬೇಲಿಯನ್ನು ಹೊಂದಿದ್ದ ಯೋಗ ಮಂದಿರದ ಒಳ ಹೋಗಬೇಕೆಂದರೆ ಚಪ್ಪಲಿಗಳನ್ನು ಹೊರಗೆ ಬಿಟ್ಟು ಮೂರು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿತ್ತು. ಒಳಗೆ ಹೋದವನೇ ಅದಾಗಲೇ ತುಂಬಿದ್ದ ಅಲ್ಲಿ, ನಗುತ್ತಾ ಸ್ವಲ್ಪ ಜಾಗ ಬಿಟ್ಟ ಶಾಂತಪ್ಪ ಮಾಸ್ತರರ ಪಕ್ಕದಲ್ಲೇ ಯೋಗಾಭ್ಯಾಸವನ್ನು ಶುರುಮಾಡಿದೆ. ಬರಬೇಕಾದವರೆಲ್ಲ ಬಂದಾಗಿತ್ತು. ಶಾಂತಪ್ಪ ಮಾಸ್ತರರು ನನಗೇನೂ ಗುರುಗಳಾಗಿರದಿದ್ದರೂ, ವೃತ್ತಿಯಲ್ಲಿ ಅಧ್ಯಾಪಕರಾಗಿದುದರಿಂದ ನಾವೆಲ್ಲರೂ “ಸರ್” ಎಂದೇ ಸಂಬೋಧಿಸುತ್ತಿದ್ದೆವು. “ಸ್ವಲ್ಪ ನಿಧಾನವಾಗಿ...ಇನ್ನೂ ಸ್ವಲ್ಪ ಬೆಂಡ್ ಮಾಡಿ... ಜೋರಾಗಿ ಉಸಿರು ತೆಗೆದುಕೊಳ್ಳಿ... ಈಗ ನಿಧಾನವಾಗಿ ಉಸಿರು ಬಿಡಿ...” ಎಂಬಂತಹ ಅತ್ತಿಂದಿತ್ತ ಓಡಾಡುತ್ತಿದ್ದ ಯೋಗ ಗುರುಗಳ ಮಾತುಗಳು ಮಂತ್ರದಂತೆ ಕೇಳಿಸುತ್ತಿತ್ತು. ನನಗೆ ಬಾಗಿಲ ಬಳಿಯೇ ಜಾಗ ಸಿಕ್ಕಿದುದರಿಂದ ಯೋಗ ಮಂದಿರದ ಮುಂದೆಯಿದ್ದ ರಸ್ತೆಯ ಕಡೆ ಆಗಾಗ ನೋಟ ಹರಿಸುವಂತೆ, ಅಲ್ಲಿನ ಚಟುವಟಿಕೆಗಳು ಪ್ರೇರೆಪಿಸುತ್ತಿದ್ದವು. ಈ ಸಮಯದಲ್ಲಿ ಯೋಗಮಂದಿರದ ಮೆಟ್ಟಿಲ ಬಳಿ ಒಬ್ಬ ಹುಡುಗ ಬಂದು ಮೊದಲನೇ ಮೆಟ್ಟಿಲಿನ ಮೇಲೆ ಕೂಳಿತುಕೊಂಡು ಒಳಗೆ ಇಣುಕತೊಡಗಿದ. ಆ ಹುಡುಗನನ್ನು ಹಿಂದೊಮ್ಮೆ ಅಲ್ಲಿಯೇ ನೋಡಿದ ನೆನಪಿದ್ದರೂ ಅವನ್ಯಾರೆಂದು ನನಗೆ ಗೊತ್ತಿರಲಿಲ್ಲ. ಬಹುಷಃ ಅವನಿಗೆ ಯೋಗದಲ್ಲಿ ಆಸಕ್ತಿಯಿತ್ತೆಂದು ಕಾಣುತ್ತದೆ, ಕತ್ತೆತ್ತಿ ಕತ್ತೆತ್ತಿ ಒಳಗೇ ಇಣುಕತೊಡಗಿದ. ಒಳಗೆ ಬರುವ ಧೈರ್ಯ ಮಾತ್ರ ಮಾಡಲಿಲ್ಲ.

“ಸಾರ್, ಗಮನವಿಟ್ಟು ಅಭ್ಯಾಸ ಮಾಡಿ” ಎಂಬ ಯೋಗ ಗುರುಗಳ ಮಾತು ನನಗೇ ಎಂದರಿತ ನಾನು ನನ್ನ ಗಮನವನ್ನು ಯೋಗದೆಡೆಗೆ ಹರಿಸಿದೆ. ಹೀಗೆಯೇ ಸ್ವಲ್ಪ ಹೊತ್ತು ಕಳೆದ ಮೇಲೆ, ಬಾಗಿಲ ಬಳಿ ಏನೋ ಚಲಿಸಿದಂತಾಗಿ ನನ್ನ ನೋಟ ಆ ಕಡೆ ಹರಿಯುವ ಸಮಯಕ್ಕೆ ಅಲ್ಲಿ ಅಷ್ಟೊತ್ತು ಕುಳಿತ್ತಿದ್ದ ಆ ಹುಡುಗ ಸರ್ರನ್ನೆ ಎದ್ದು ರಸ್ತೆಯ ಕಡೆ ಓಡಲು ಶುರುಮಾಡಿದ್ದ. ಇದ್ದೆಲ್ಲವನ್ನು ನನಗೆ ಪರಿವೆ ಇಲ್ಲದಂತೆ ಗಮನಿಸುತ್ತಿದ್ದ ಶಾಂತಪ್ಪ ಸರ್ ಭರ್ರನೆ ಎದ್ದು “ರೀ ಅವನು ಚಪ್ಪಲಿ ಹಾಕ್ಕೊಂಡು ಹೋಗ್ತಾ ಇದ್ದಾನೆ ಕಣ್ರೀ” ಅಂದವರೇ, ಯಾರ ಉತ್ತರಕ್ಕೂ ಕಾಯದೇ ನನ್ನ ಮೇಲಿಂದ ಹಾರಿ ಆ ಹುಡುಗನ ಹಿಂದೆ ಓಡ ತೊಡಗಿದರು. ಇವರ ಮಾತನ್ನು ಕೇಳಿದ ನಾವೆಲ್ಲಾ ಯೋಗಭ್ಯಾಸ ಬಿಟ್ಟು ಆಚೆ ಬರುವಷ್ಟರಲ್ಲಿ, ಶಾಂತಪ್ಪ ಸರ್ ಹಿಂದೆಯೇ ಮತ್ತಿಬ್ಬರು ಅಭ್ಯಾಸ ಮಾಡುತ್ತಿದ್ದ ಹುಡುಗರು ಓಡಲು ಶುರುಮಾಡಿದರು. ಹಿಂದೆ ಯಾರೋ ಮೂರು ಜನ ಓಡಿ ಬರುತ್ತಿದ್ದಾರೆ ಎಂದೋ ಅಥವಾ ಸಹಜ ವೇಗದಲ್ಲಿಯೋ ಆ ಹುಡುಗ ಮಿಂಚಿನಂತೆ ರಸ್ತೆಯ ತಿರುವಿನಲ್ಲಿ ಮರೆಯಾದ. ಅವನನ್ನು ಹಿಮ್ಮೆಟ್ಟಿದ್ದ ಮೂವರೂ ಆ ತಿರುವಿನಲ್ಲಿ ಮರೆಯಾದರು.

ಆಚೆ ಬಂದ ನಾವೆಲ್ಲರೂ ನಮ್ಮ ನಮ್ಮ ಚಪ್ಪಲಿಗಳನ್ನು ನೋಡಿಕೊಂಡು ಸಮಾಧಾನ ಪಟ್ಟುಕೊಂಡೆವು. ನಮ್ಮವೆಲ್ಲ ಮಿಕ್ಕಿ ಮತ್ತೂ ಮೂರು ಜತೆ ಚಪ್ಪಲಿ ಅಲ್ಲಿ ಉಳಿದವು. ಅದಾಗ ನಮ್ಮ ಯೋಗ ಗುರುಗಳು “ಇನ್ನೂ ಮೂರು ಜತೆ ಇವರದೇ ಇರಬೇಕು. ಹಿಂದೆ ಮುಂದೆ ನೋಡದೆ, ಇವರ್ಯಾಕೆ ಓಡಿದರೋ...!?” ಎಂದು ಹೇಳುತ್ತಾ “ಬನ್ನಿ ಬನ್ನಿ ನಾವೆಲ್ಲಾ ಅಭ್ಯಾಸ ಮುಂದುವರೆಸೋಣ” ಎಂದು ನಮ್ಮನ್ನೆಲ್ಲಾ ಒಳಗೆ ಕರೆದುಕೊಂಡು ಹೋದರು.

“ಎಲ್ಲರ ಚಪ್ಪಲಿಗಳು ಇಲ್ಲೇ ಇರುವಾಗ ಆ ಹುಡುಗನು ಹಾಕಿಕೊಂಡು ಹೋದ ಚಪ್ಪಲಿಗಳು ಯಾರವು?” ಎಂದು ನಮ್ಮನಮ್ಮಲೇ ಮಾತಾಡಿಕೊಳ್ಳುತ್ತಾ ಯೋಗಾಭ್ಯಾಸ ಮುಂದುವರೆಸಿದವು. ಸುಮಾರು ಅರ್ಧಗಂಟೆ ಕಳೆದಿರಬೇಕು, ನಾವೆಲ್ಲಾ ಶವಾಸನ ಹಾಕುವ ಹೊತ್ತಿಗೆ ಪೆಚ್ಚುಮೋರೆಯಿಂದ ಶಾಂತಪ್ಪ ಮಾಸ್ತರರು, ಅವರ ಜೊತೆ ಓಡಿ ಬಂದಿದ್ದ ಹುಡುಗರ ಜೊತೆ ಹಿಂತಿರುಗಿದರು. ಬಂದವರೇ ಬಾಗಿಲ ಬಳಿ ಇದ್ದ ಚಪ್ಪಲಿಗಳಲ್ಲಿ ಅವರದೂ ಇರುವುದನ್ನು ಖಾತ್ರಿಪಡಿಸಿಕೊಂಡು ಒಳಗೆ ಬಂದರು. ಅವರಲ್ಲಿ ಒಬ್ಬ ಹುಡುಗ ಮುಸುಮುಸು ನಗುತ್ತಿದ್ದ.

ನಾವೆಲ್ಲ ಕೇಳುವ ಮೊದಲೇ ನಿಟ್ಟುಸಿರು ಬಿಡುತ್ತಾ “ಆ ಹುಡುಗನ್ನ ಅವರ ಮನೆಯತ್ತಿರ ಹೋಗಿ ಹಿಡುದ್ವು. “ಅವನನ್ನು ಹಿಡಿದು ಯಾಕೋ ಓಡಿಬಂದೆ? ಯಾರ ಚಪ್ಪಲಿ ಕದ್ದುಕೊಂಡು ಬಂದೆ?” ಎಂದು ದಬಾಯಿಸಿದೆವು. ಅದಕ್ಕವನು, “ಸರ್, ನನ್ನ ಚಪ್ಪಲಿ ಹಾಕ್ಕೊಂಡು ನಾ ಬಂದೆ ಅಷ್ಟೆ. ಹಾಲಾಕಕೆ ಟೈಮಾಯ್ತು, ನಮ್ಮಮ್ಮ ಬೈಯ್ತಾಳೆ ಅಂತ ಓಡಿ ಬಂದೆ. ಬಿಡಿ ಸರ್” ಎಂದು ಜೋರು ಮಾಡಿದ. ಅಷ್ಟರಲ್ಲಿ ತಗಳಪ್ಪಾ ಮನೆಯೊಳಗಿದ್ದ ಅವರಮ್ಮ ಹೊರಗೆ ಬಂದು ಸ್ವಲ್ಪ ದೂರದಲ್ಲಿದ್ದ ನಮ್ಮನ್ನೆಲ್ಲಾ ನೋಡಿ “ಯಾರೋ ಇವರೆಲ್ಲಾ?” ಎಂದು ಆ ಹುಡುಗನೆಡೆಗೆ ಅರಚುತ್ತಾ ಬರತೊಡಗಿದಳು. ಆಕೆ ನಮ್ಮೆಡೆಗೆ ಬರುತ್ತಿದ್ದ ವೇಗವನ್ನು ನೋಡಿಯೇ ನಾವೆಲ್ಲ ಆ ಹುಡುಗನನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತೆವು. ಸದ್ಯ! ಆಯಮ್ಮ ನಮ್ಮನ್ನು ಅಟ್ಟಿಸಿಕೊಂಡು ಬಂದು ಏನನ್ನೂ ಕೇಳಲಿಲ್ಲ.” ಎಂದು ಒಂದೇ ಸಮನೆ ಹೇಳುತ್ತಲೇ ಕುಳಿತರು. ಮುಂದುವರೆಯುತ್ತಾ “ಅಷ್ಟಕ್ಕೂ ಅವನು ಅವನ ಚಪ್ಪಲಿಯನ್ನ ಮೆಟ್ಟಿಕೊಂಡು ಹೋದದ್ದಕ್ಕೆ ನಾವೆಲ್ಲಾ ಯಾಕೆ ದೆವ್ವ ಮೆಟ್ಟಿದಂಗೆ ಅವನ ಹಿಂದೆ ಓಡಿದೆವು?” ಎಂದು ಪರಿತಪಿಸತೊಡಗಿದರು.

“ಹೋಗ್ಲಿ ಬಿಡಿ ಸರ್, ಅದು ಅವನ ಚಪ್ಪಲಿ ಅಂತ ಮುಂಚೆಯೇ ನಿಮಗೇನು ಗೊತ್ತಿತ್ತೇ? ಸಮಾಧಾನ ಮಾಡ್ಕೋಳಿ” ಎಂದು ಯೋಗಗುರುಗಳು ಹೇಳಿದರೂ ಶಾಂತಪ್ಪ ಮಾಸ್ತರರಿಗೆ ಸಮಾಧಾನವಾದಂತೆ ಕಾಣಲಿಲ್ಲ. ಅಲ್ಲಿದ್ದವರೆಲ್ಲಾ ತಲೆಗೊಂದೊಂದು ಮಾತನ್ನು ಆಡುತ್ತಾ, ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಶಾಂತಪ್ಪ ಮಾಸ್ತರರು ಅದ್ಯಾಕೋ ಗರಬಡಿದವರಂತೆ ಕೂತುಬಿಟ್ಟರು. ಪಾಪ ಅವರಿಗೆ ಈ ಘಟನೆಯಿಂದ ಅದೆಷ್ಟು ಬೇಜಾರಾಗಿತ್ತೋ? ಅವರನ್ನು ಅವರ ಪಾಡಿಗೆ ಬಿಟ್ಟು ನಾನು ಶವಾಸನ ಹಾಕಿದೆ. ನನ್ನ ಮನದಲ್ಲಿ “ಈ ಜಗತ್ತಿನಲ್ಲಿ ನಮ್ಮ ಚಪ್ಪಲಿಗಳನ್ನು ನಾವು ಹಾಕಿಕೊಳ್ಳುವುದೂ ಕೂಡಾ ಎಷ್ಟು ಕಷ್ಟ” ಎಂಬ ಮಾತು ಅದೇಕೋ ನನ್ನ ಉಸಿರಿನೊಂದಿಗೆ ಪಯಣಿಸತೊಡಗಿತು.

                                                                                                 - ಗುಬ್ಬಚ್ಚಿ ಸತೀಶ್.

ಶನಿವಾರ, ಸೆಪ್ಟೆಂಬರ್ 10, 2011

“ನಲ್ಲನಲ್ಲೆ” ಗೆ ಒಂದು ವರ್ಷ.

“ಅವುಗಳು ಎಷ್ಟಾದರೂ ಉಸಿರಾಡುವ ಶಬ್ಧಗಳು
ನನ್ನ ಅಣತಿಯಂತೆ
ಆದರೂ ಅವು ಶಾಶ್ವತ”
         - ಶ್ರೀಮತಿ ವಿಜಯಲಕ್ಷ್ಮೀ (ದಿ.ಕಿ.ರಂ.ನಾಗರಾಜರ ಪತ್ನಿ)

ಪ್ರೀತಿ ನಮ್ಮ ಹೃದಯದಲ್ಲಿರುತ್ತದೆ. ಆದರೆ, ಅದು ಗೊತ್ತಾಗುವುದು ನಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಮತ್ತೊಂದು ಪ್ರೀತಿಯ ಹೃದಯ ಸಿಕ್ಕಾಗ ಮಾತ್ರ. ಪ್ರೀತಿ ಸಾರ್ಥಕವಾಗುವುದೂ ಆವಾಗಲೇ. ಇಲ್ಲವಾದರೆ ಪ್ರೀತಿ ವ್ಯರ್ಥವಾಗುತ್ತದೆ ಮತ್ತು ತನ್ನಲ್ಲೆ ಸೊರಗುತ್ತದೆ. ಅದೃಷ್ಟಕ್ಕೆ, ನನ್ನ ಪ್ರೀತಿಯನ್ನು ಹೇಳಿಕೊಳ್ಳಲು ನಾನು ಕಾದಂತೆ, ತಾನೂ ಕಾಯುತ್ತಿದ್ದ, ನನ್ನ ನಲ್ಲೆಯ ಪ್ರೀತಿಯ ಹೃದಯ ಪ್ರೀತಿಯನ್ನು ನಿವೇದಿಸಿಕೊಂಡಾಗ, ಪ್ರೀತಿಗಾಗಿ ಪರಿತಪಿಸುತ್ತಿದ್ದ ನನ್ನ ಹೃದಯ ಹಾಲೆರೆಯಿತು. ಮರೆಯಲಾಗದ ಅಮೃತಘಳಿಗೆಯಲ್ಲಿ ಟಿಸಿಲೊಡೆದ ನಲ್ಲೆನಲ್ಲೆಯರ ಪ್ರೀತಿ ಮೊಗ್ಗಾಗಿ, ಹೂವಾಗಿ, ಬೀಜವಾಗಿ ಮತ್ತೊಂದು ಪುಟ್ಟ ಹೃದಯವನ್ನು ಕಾಣಿಕೆಯಾಗಿ ಪಡೆಯಿತು.

ಈ ಮೇಲಿನ ಸಾಲುಗಳು ನನ್ನ ಅಕ್ಷರ ಪ್ರೀತಿಗೂ ಒಪ್ಪುತ್ತವೆ. ಚಿಕ್ಕಂದಿನಲ್ಲೆಯೇ ಓದುವುದನ್ನು ರೂಢಿಸಿಕೊಂಡ ನನಗೆ, ಎಂಟನೇ ತರಗತಿಯಲ್ಲೇ ಬರೆಯುವ ಗೀಳು ಹತ್ತಿತು. ಆದರೆ, ಭಯ! ಮತ್ತು ಬರೆಯುವವರು ಸಾಮಾನ್ಯರಲ್ಲ, ದೇವಲೋಕ ಅಥವಾ ಇನ್ಯಾವುದೋ ಲೋಕದಿಂದ ಬಂದವರೆಂಬ ನನ್ನದೇ ಆದ ಭಾವನೆ! ಅದಕ್ಕೋ, ಏನೋ ಎಂಟನೇ ತರಗತಿಯಲ್ಲಿ ಎಲ್ಲಾ ಭಯವನ್ನು ಕಿತ್ತೊಗೆದು ಬರೆದ “ತ್ಯಾಗ” ವೆಂಬ ಕಥೆಯ ಅರ್ಧ ಪುಟ ಚೂರು ಚೂರಾಗಿ ನೀರಿನ ಒಲೆ ಸೇರಿ ಅಮರವಾಯಿತು! ನೀವು ನಂಬಲೇಬೇಕು ಈ “ತ್ಯಾಗ” ಕಥೆಯ ವಸ್ತು ಹಲವು ವರ್ಷಗಳ ನಂತರ ಬಂದು, ಭರ್ಜರಿ ಯಶಸ್ಸುಗಳಿಸಿದ “ಮುಂಗಾರು ಮಳೆ” ಸಿನಿಮಾ ಕಥೆಗೆ ಬಹಳ ಹತ್ತಿರವಾಗಿತ್ತು. “ಮುಂಗಾರು ಮಳೆ”ಯ “ಪ್ರೀತಿ ಮಧುರ, ತ್ಯಾಗ ಅಮರ” ಸಂದೇಶಕ್ಕೆ ನನ್ನ ಕಥೆ ಬಹಳ ಹೋಲುತ್ತಿತ್ತು. ಇರಲಿಬಿಡಿ. ಅದೇ ಕಥೆಯನ್ನು ಹೊಸ ರೀತಿಯ ನಿರೂಪಣೆಯಲ್ಲಿ ಸದ್ಯದಲ್ಲೆ ಬರೆದು ನಿಮ್ಮ ಕೈಗೆ ಇಡುತ್ತೇನೆ, ಆಗಲಾದರೂ ನಂಬುವಿರಂತೆ. ನನ್ನ ಬರವಣಿಗೆಗೆ ಮತ್ತೊಂದು ಮುಖ್ಯ ತೊಡರುಗಾಲು ಎದುರಾದದ್ದು ಬಡತನ. ಇದಕ್ಕೆ ಪೂರಕವಂತೆ, ಹಿರಿಯರೊಬ್ಬರು ನನಗೆ ಚಿಕ್ಕಂದಿನಲ್ಲೇ, ಇದಾಗಲೇ ನನ್ನ ಕವನ ಸಂಕಲನ “ಮಳೆಯಾಗು ನೀ...” ಯ “ನನ್ನ ನುಡಿ” ಯಲ್ಲಿ ನಾನು ಬರೆದು ಕೊಡಿರುವಂತೆ “ಕವಿಯಾದರೆ ಚಿತ್ರಾನ್ನಕೆ ಕಾಸಿರುವುದಿಲ್ಲ” ಎಂಬ ಹೆದರಿದವನ ಮೇಲೆ ಹಗ್ಗವೆಸೆದು, ಹಾವು ಎನ್ನುವ ಮಾತುಗಳು.

ಆದರೆ, ನನ್ನ ಅನಾರೋಗ್ಯದ ದಿನಗಳು ಮತ್ತೊಮ್ಮೆ ನನ್ನನ್ನು ಹೆಚ್ಚು ಓದುವ ಹವ್ಯಾಸಕ್ಕೆ ಮುನ್ನುಡಿಯಾದವು. ಓದುತ್ತಾ ಓದುತ್ತಾ ಬರೆಯುವಂತೆ ನನ್ನ ಮನ ಮತ್ತೆ ಮತ್ತೆ ಪ್ರೇರೆಪಿಸ ತೊಡಗಿತು. ಅದಾಗಲೇ ನಾನು ಕೆಲವು ಕವನಗಳನ್ನು ಬರೆದು ಗೆಳೆಯರ ಮಧ್ಯೆ ಒಬ್ಬ ಕವಿಯೂ ಆಗಿ ಗುರ್ತಿಸಿಕೊಳ್ಳತೊಡಗಿದ್ದು.

ನಾನು ಕೆಲಸ ಮಾಡುತ್ತಿದ್ದ ಶಾಲೆಯ ವಾರ್ಷಿಕ ಸಂಚಿಕೆಗೆ ಹಲವು ಲೇಖನಗಳನ್ನು ಬರೆದಾದ ಮೇಲೆ, ಮತ್ತೆನಾದರೂ ಹೊಸದಾಗಿ ಬರೆಯಬೇಕೆಂದು ಕೊಂಡವನು, ಬಿಡುವು ಸಿಕ್ಕಾಗಲೆಲ್ಲಾ ಅನಿಸಿದ್ದನ್ನು ಬರೆದು ಸುಮ್ಮನಾಗಿಬಿಡುತ್ತಿದ್ದೆ. ಅವುಗಳಿಗೆಲ್ಲಾ ಸೂಕ್ತವಾದ ವೇದಿಕೆ ಸಿಗದೆ, ಕೂತಲ್ಲೇ ತೂಕಡಿಸುತ್ತಿದ್ದವು. ಮತ್ತಷ್ಟು ಹೊಸದನ್ನು ಬರೆಯಲು ಮನಸ್ಸಿದ್ದರೂ, ಬರೆದು ಏನು ಮಾಡಬೇಕೆಂದು ಉಡಾಫೆ ಮಾಡುತ್ತಾ ಸುಮ್ಮನಿರುತ್ತಿದೆ.

ಆಗ ನೋಡಿ ಪರಿಚಿತವಾಯಿತು “ಬ್ಲಾಗ್ ಲೋಕ.” ಈ ಲೋಕವನ್ನು ಮೊದಲು ಪರಿಚಯಿಸಿದ್ದು ನನ್ನ ಗೆಳೆಯ-ಗುರು ಬಿ.ಮೃತ್ಯುಂಜಯ. ಅವರನ್ನು ನಾ ಪ್ರೀತಿಯಿಂದ “ಅರ್ಧರಾತ್ರಿಯಲ್ಲಿ ಕಂಪ್ಯೂಟರ್ ಕಲಿಸಿದ ಗುರುವು” ಎಂದೇ ಮನದಲ್ಲೇ ನೆನೆಯುತ್ತೇನೆ. ಸುಮಾರು ಐದು ವರ್ಷದ ಹಿಂದೆ ನಾ ಬರೆದ ಒಂದು ಸಣ್ಣ ಇಂಗ್ಲೀಷ್ ಕಥೆಯನ್ನು ಓದಿ, ಒಂದು ಬ್ಲಾಗ್ ಮಾಡಿ ಹಾಕು ಎಂದಿದ್ದರು. ನಾನು ನಿಧಾನವಾಗಿ ಹಾಕೋಣವೆಂದು ಕೊಂಡು ಉದಾಸೀನ ಮಾಡಿದ್ದೆ. ನಂತರ ಮೂರ್ನಾಲ್ಕು ವರ್ಷದ ಕೆಳಗೆ ಇಂಗ್ಲೀಷ್ನುಲ್ಲಿ ಒಂದು ಬ್ಲಾಗ್ ತೆರೆದು ನನ್ನ ವಿವರಗಳು ಮತ್ತು ಅನಾರೋಗ್ಯದ ಬಗ್ಗೆ ಬರೆದು ಪೋಸ್ಟ್ ಮಾಡಿದೆನಾದರೂ, ಆರು ತಿಂಗಳುಗಳ ಕಾಲ ಅದನ್ಯಾರು ನೋಡಿರುವ ಸಾಧ್ಯತೆಯೇ ಇಲ್ಲ ಎಂಬುದು ಮನದಟ್ಟಾಯಿತು. ಅದಾಗ ಕೆಲವು ಕನ್ನಡದ ಬ್ಲಾಗುಗಳು ಪರಿಚಿತವಾದವು. ಅವುಗಳಲ್ಲಿ ಮುಖ್ಯವಾದವು ಮತ್ತು ನಾನು ಪದೇ ಪದೇ ತೆರೆದು ನೋಡುತ್ತಿದ್ದವು: ಪ್ರಕಾಶ್ ಹೆಗಡೆಯವರ “ಇಟ್ಟಿಗೆ ಸಿಮೆಂಟು”, ಕೆ.ಶಿವುರವರ “ಛಾಯಾ ಕನ್ನಡಿ” ಮತ್ತು ಡಿ.ಜಿ ಮಲ್ಲಿಕಾರ್ಜುನ್ರ್ವರ “ಡಿ.ಜಿ ಮಲ್ಲಿಕಾರ್ಜುನ್‍” ಬ್ಲಾಗುಗಳು.

ಈ ಬ್ಲಾಗುಗಳನ್ನು ಅದೆಷ್ಟು ಬಾರಿ ನೋಡಿಕೊಂಡೆನೋ!? ಓದಿಕೊಂಡೇನೋ!?

ಆ ಸಮಯದಲ್ಲಿ ದುರಾದೃಷ್ಟವಶಾತ್ ಮತ್ತೆ ಹಾಸಿಗೆ ಹಿಡಿದಾಗ, ನಾಗತಿಹಳ್ಳಿಯ ಚಿತ್ರಕಥಾ ಶಿಬಿರದಲ್ಲಿ ಪರಿಚಿತವಾದ ಕೆಲವು ಅಮೂಲ್ಯ ಗೆಳೆಯರಲ್ಲಿ ಒಬ್ಬರಾದ ಅಜಿತ್ ಕೌಂಡಿನ್ಯ ಕೊರಿಯರ್ ಮುಖಾಂತರ ಪ್ರೀತಿಯಿಂದ, ಪ್ರಕಾಶ್ ಹೆಗಡೆಯವರ “ಇಟ್ಟಿಗೆ ಸಿಮೆಂಟು” ಮತ್ತು ಕೆ. ಶಿವುರವರ “ವೆಂಡರ್ ಕಣ್ಣು” ಪುಸ್ತಕಗಳನ್ನು ಕಳುಹಿಸಿದ್ದರು. ಆ ಪುಸ್ತಕಗಳನ್ನು ಓದಿ ಆನಂದಿಸಿದೆ. ಈ ಸಮಯದಲ್ಲಿ ನಾಗತಿಹಳ್ಳಿಯ ಶಿಬಿರದ ಮೊದಲ ಗೆಳೆಯ ಹುಬ್ಬಳ್ಳಿಯ ಕಾದಂಬರಿಕಾರ ರಾಜುಗಡ್ಡಿ ತನ್ನ ಎರಡನೇ ಕಾದಂಬರಿ “ಒಂದು ನೂರು ರೂಪಾಯಿಗಳು” ವನ್ನು ಕಳುಹಿಸಿದ್ದರು. ಇವುಗಳ ಜೊತೆಗೆ ಹಲವು ಪುಸ್ತಕಗಳು ನನ್ನ ಸಂಗಾತಿಯಾಗಿ ಮತ್ತೆ ಮತ್ತೆ ನನ್ನನ್ನು ಬರೆಯಲು ಪ್ರೇರೆಪಿಸತೊಡಗಿದವು. (ಗಮನಿಸಿ: ಶಿಶುವಿನಹಳ್ಳಿಯ ಮನೆಯಲ್ಲಿ ಕುಳಿತು ಬರೆಯುವ, ವೃತ್ತಿಯಲ್ಲಿ ಕೆಪಿಟಿಸಿಲ್ ಮೀಟರ್ ರೀಡರ್ ಆಗಿರುವ ರಾಜುಗಡ್ಡಿಯ ಈ ಪುಸ್ತಕದ ಎಲ್ಲಾ ಪ್ರತಿಗಳು ಬಿಡುಗಡೆಯಾದ ಒಂದೇ ವರ್ಷದಲ್ಲಿ ಮಾರಾಟವಾಗಿವೆ. ಇವರು ಇದುವರೆವಿಗೂ ಮೂರು ಕಾದಂಬರಿಗಳನ್ನು ಬರೆದಿದ್ದಾರೆ)

ಆಗ ನೋಡಿ ಬ್ಲಾಗ್ ಶುರುಮಾಡಬೇಕೆಂಬ ಹಂಬಲ ಮತ್ತೆ ಶುರುವಾಯಿತು. ಕಂಪ್ಯೂಟರ್ ಶಿಕ್ಷಕನಾದರೂ ಬ್ಲಾಗ್ ರೂಪಿಸಲು ತುಸು ಕಷ್ಟವೇ ಆಯಿತು. ಆ ಸಮಯದಲ್ಲಿ ಅಜಿತ್ ಕೌಂಡಿನ್ಯ ನನ್ನ “nallanalle.blogspot.com” ರೂಪಿಸಲು ದೂರದ ಶಿಡ್ಲಘಟ್ಟದಲ್ಲಿಯೇ ಕುಳಿತು ಸಹಕರಿಸಿದರು. ಅಲ್ಲಿಗೆ ೨೦೧೦ ರ ಆಗಸ್ಟ್ ನಲ್ಲಿ ನನ್ನ ಬ್ಲಾಗ್ ಶುರುವಾಯಿತು. ಮೊದಲ ಪೋಸ್ಟ್ ಆಗಿ “ಸ್ನೇಹ ಮಾಡಬೇಕಿಂಥವಳಾ...” ಲೇಖನ ಪ್ರಕಟವಾಯಿತು. ಈ ಸಂತೋಷವನ್ನು ನನ್ನ ಈಮೈಲಿನ ಎಲ್ಲಾ ಗೆಳೆಯರಿಗೆ ಮೈಲ್ ಮಾಡಿದೆ. ಜೊತೆಗೆ ಬ್ಲಾಗ್ ಲೋಕದ ಸಚಿನ್ ತೆಂಡಲ್ಕೂರ್ ಪ್ರಕಾಶಣ್ಣನ ಮೊಬೈಲ್ ಗೆ ಪೋನ್ ಮಾಡಿ ಹೇಳಿದೆ. ಅವರು ಪ್ರೀತಿಯಿಂದ ನನ್ನ ಬ್ಲಾಗ್ ನ ಬಗ್ಗೆ ತಮ್ಮ ಗೆಳೆಯರಿಗೆಲ್ಲಾ ಪರಿಚಯಿತ್ತೇನೆ ಎಂದು ಹೇಳಿ ನನ್ನ ಬ್ಲಾಗಿಗೆ ತಮ್ಮ ಹಲವು ಗೆಳೆಯರನ್ನು ಪರಿಚಯಿಸಿದರು. ಮತ್ತೆ ನನ್ನ ಗುರುಗಳೇ ಮೊದಲ ಕಾಮೆಂಟ್ ಹಾಕುವ ಮೂಲಕ ಶುಭ ಹಾರೈಸಿದರು. ಹೀಗೆಯೇ ಮುಂದುವರೆದು ಬ್ಲಾಗ್ ಲೋಕದ ಮೂಲಕ ಹಲವು ಬ್ಲಾಗಿಗರು ಗೆಳೆಯರಾದರು.

ಈ ಮಧ್ಯೆ ನನ್ನ ಮೊದಲ ಪುಸ್ತಕ “ಮಳೆಯಾಗು ನೀ...” ಕವನ ಸಂಕಲನ ಪ್ರಕಟವಾಯಿತು.

ನಾ ಬ್ಲಾಗ್ ಶುರುಮಾಡುವ ಸಮಯದಲ್ಲಿ ಅಜಿತ್ ಹೇಳಿದ್ದರು, “ಸರ್, “ಅವಧಿ” ಯಲ್ಲಿ ನಿಮ್ಮ ಲೇಖನ ಬಂದರೆ ಚೆನ್ನಾಗಿರುತ್ತೆ. ಅವರು ಗಮನಿಸುತ್ತಾ ಇರ್ತಾರೆ.” ಎಂದು. ಇತ್ತೀಚಿಗೆ “ಗಾಳಿಪಟದ ಬಾಲ ಎನ್ನ ಮನ” ಎಂಬ ಲೇಖನ “ಅವಧಿ”ಯಲ್ಲಿ ಪ್ರಕಟವಾಯಿತು. ಈ ಲೇಖನಕ್ಕೆ ಒಂದು ಪ್ರಶಸ್ತಿಯೂ ಬಂತು (ಸಾಹಿತ್ಯದಲ್ಲಿ ನನಗೆ ಮೊದಲ ಬಹುಮಾನ). ತುಂಬಾ ಖುಷಿಯಾಯಿತು.

ಆದರೆ, ತದನಂತರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿ ಬ್ಲಾಗ್ ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಗುತ್ತಿಲ್ಲ. ಹಲವು ಗೆಳೆಯರ ಬ್ಲಾಗ್ ಗಳನ್ನೂ ಓದಲಾಗುತ್ತಿಲ್ಲ. ಈ ಸಮಯದಲ್ಲಿ ಸದ್ದಿಲ್ಲದೆ ನನ್ನ ಬ್ಲಾಗಿಗೆ ಒಂದು ವರ್ಷವಾಯಿತು. ಈ ಸಂತೋಷವನ್ನು ನಿಮ್ಮಲ್ಲಿ ಹೇಳಿಕೊಳ್ಳದೆ ಇರಲಾಗುತ್ತಿಲ್ಲ. ನಿಮಗೆಲ್ಲರಿಗೂ ನನ್ನ ವಂದನೆಗಳು.

ಮತ್ತೆ ಈ ಲೋಕದಲ್ಲಿ ಸಕ್ರಿಯವಾಗಿರುತ್ತೇನೆ ಎಂಬ ಭರವಸೆಯೊಂದಿಗೆ,

ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.

ಶನಿವಾರ, ಆಗಸ್ಟ್ 6, 2011

“ಜೀವನದಲ್ಲಿ ಸ್ನೇಹಿತರಲ್ಲ. ಸ್ನೇಹಿತರಿಂದಲೇ ಜೀವನ”

ಗೆಳೆತನ ಕುರಿತ
ಕನ್ನಡದ ಕೆಲವು ಸಾಲುಗಳು :

“ಜೀವನದಲ್ಲಿ ಸ್ನೇಹಿತರಲ್ಲ. ಸ್ನೇಹಿತರಿಂದಲೇ ಜೀವನ”
                  - ಗೆಳೆಯನೊಬ್ಬನ ಡೈರಿಯ ಮೊದಲ ಪುಟದಿಂದ.
                    (ನನ್ನ ಜೀವನಕ್ಕೆ ಹೆಚ್ಚು ಅನ್ವಯ)

“ನೀ ಹುಟ್ಟಿದಾಗ ಧಾರಾಕಾರ ಮಳೆ ಬೀಳುತ್ತಿತ್ತು.
ಯಾಕಂತ ಗೊತ್ತಾ?
ನಕ್ಷತ್ರವೊಂದನ್ನು ಕಳಿಸಿಕೊಡುವಾಗ ಬಾನು ಅಳುತ್ತಿತ್ತು.
ಸುಂದರ ನಕ್ಷತ್ರವೊಂದರ ಸ್ನೇಹ ಪಡೆದ ನಾನು ಅದೃಷ್ಟಶಾಲಿ.”
                   - ಬರೆದವರು ಗೊತ್ತಿಲ್ಲ.

“ಗೆಳೆತನವೆಂಬುದು ಆಶ್ರಯ ನೀಡುವ ಒಂದು ಬೃಹತ್ ವೃಕ್ಷ”
                   - ಸ್ಯಾಮ್ಯುಯಲ್ ಟೇಲರ್ ಕೋಲರಿಜ್.

“ನಾವು ಆಡುವ ಮಾತು ಹೀಗಿರಲಿ ಗೆಳೆಯಾ, ಮೃದುವಚನ
ಮೂರ್ಲೋಕ ಗೆಲ್ಲುವುದು ತಿಳಿಯಾ, ಮೌನ ಮೊಗ್ಗೆಯನೊಡೆದು
ಮಾತರಳಿ ಬರಲಿ. ಮೂರು ದಿನಗಳ ಬಾಳು ಘಮಘಮಿಸುತಿರಲಿ”
                    - ಚೆನ್ನವೀರ ಕಣವಿ.

ನನ್ನವೆರಡು :

“ನನಗೆ ದೇವರ ಮೇಲೆ ನಂಬಿಕೆಯಿದೆ. ಏಕೆಂದರೆ?
ನಾನು ದೇವರನ್ನು ಗೆಳೆಯರ ರೂಪದಲ್ಲಿ ನೋಡಿದ್ದೇನೆ”
                    - ಗುಬ್ಬಚ್ಚಿ ಸತೀಶ್.

“ನನ್ನೆಲ್ಲಾ ನೋವುಗಳನ್ನು ನೆನೆದು ಇನ್ನೇನು ಅಳಬೇಕು,
ಅಷ್ಟರಲ್ಲಿ ಅದ್ಯಾವ ಮಾಯೆಯಲ್ಲಿ ಬಂದರೋ ಗೆಳೆಯರು!
ಕಚಗುಳಿಯಿಟ್ಟು ನನ್ನನ್ನು ಮನ ತುಂಬಾ ನಗಿಸಿದರು.
ಬಂದ ದಾರಿಗೆ ಸುಂಕವಿಲ್ಲವೆಂದು ಅಳುವು ಕೊರಗಿ ಸತ್ತಿತು”.
                    - ಗುಬ್ಬಚ್ಚಿ ಸತೀಶ್.

ಇಂಗ್ಲಿಷಿನವೆರಡು :

“Come, fair friend.
  you never can
  be old
  for as you were
  when first your
  eyes eyed
  such is your beauty still.”
        - Shakespeare

“Friends are the most important
  ingredient in this recipe of life.”
        - Writer Unknown.


“MY FRIENDS, WISH YOU ALL HAPPY FRIENDSHIP DAY”













ಈ ಕಥಾಸ್ಪರ್ಧೆ ವಿದ್ಯಾರ್ಥಿಗಳಿಗೆ ಮಾತ್ರ

ಸ್ನೇಹಿತರೇ, ಈ ಕಥಾಸ್ಪರ್ಧೆ ವಿದ್ಯಾರ್ಥಿಗಳಿಗೆ ಮಾತ್ರ.  ವಿವರಗಳಿಗೆ: ಶುಭವಾಗಲಿ.