ಶನಿವಾರ, ಫೆಬ್ರವರಿ 10, 2024

ಇದು ಸರಳ ಅಲ್ಲ ವಿರಳ ಸಿನಿಮಾ…

 



ಸಿಂಪಲ್ಲಾಗ್‌ ಒಂದು ಲವ್‌ ಸ್ಟೋರಿ ಖ್ಯಾತಿಯ ನಿರ್ದೇಶಕರಾದ ಸಿಂಪಲ್‌ ಸುನಿಯವರ ರಚನ ವಚನ ನಿರ್ದೇಶನದ “ಒಂದು ಸರಳ ಪ್ರೇಮಕಥೆ” ಒಂದು ಸಂಗೀತಮಯ ವಿರಳ ಸಿನಿಮಾ. ಮಳವಳ್ಳಿ ಪ್ರಸನ್ನ ಅವರ ಕತೆಗೆ ಸಿನಿಮಾ ಚಿತ್ರಕತೆಯ ಒಂದು ಪರಿಪೂರ್ಣ ಸ್ಪರ್ಶವನ್ನು ನೀಡಿ ನಿರ್ದೇಶಕರು ದೃಶ್ಯಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಸಿನಿಮಾ ಆರಂಭದಲ್ಲಿ ಅವರೇ ಹೇಳುವಂತೆ ಕ್ಲೈಮ್ಯಾಕ್ಸಿನ ನಂತರವೂ ಒಂದು ಕ್ಲೈಮ್ಯಾಕ್ಸ್‌ ಇದ್ದು ಅಂತಿಮ ದೃಶ್ಯದಲ್ಲಿ ನಾಯಕ ಅಳುವುದನ್ನು ನೋಡಿ ಪ್ರೇಕ್ಷಕ ಮಹಾಫ್ರಭು “ವಾಟ್‌ ಅ ಮೂವಿ” ಎಂದು ಉದ್ಗರಿಸುತ್ತಾನೆ. ಮೈಸೂರು ರಮೇಶ್ ಈ ಸಿನಿಮಾದ ನಿರ್ಮಾಪಕರು.

ಕನ್ನಡ ಸಿನಿಮಾಗಳಿಗೆ ಸ್ಟಾರ್‌ ಪಟ್ಟವನ್ನು ಕಳಚಿಟ್ಟು ಅಭಿನಯಿಸುವ ನಟರುಗಳು ಬೇಕಾಗಿದ್ದಾರೆ. ಈ ಜಾಗವನ್ನು ಸಮರ್ಥವಾಗಿ ತುಂಬಬಲ್ಲವರು ವಿನಯ್‌ ರಾಜ್‌ ಕುಮಾರ್.‌ ನಾಯಕನೇ ಸ್ವಗತದಲ್ಲಿ ತನ್ನ ಕತೆಯನ್ನು ಹೇಳುತ್ತಾ ಹೋಗುತ್ತಾನೆ. ಅವನಿಗೆ ಎರಡು ಕನಸಿದೆ. ಅವುಗಳು ನನಸಾಗುತ್ತವ ಎಂಬುದನ್ನು ತೆರೆಯ ಮೇಲೆ ನೋಡಬೇಕು. ಹಗಲುಗನಸಿನ ಹುಡುಗನಾಗಿ ಸಿನಿಮಾದುದ್ದಕ್ಕೂ ವಿನಯ್‌ ಅವರ ಮಾಗಿದ ಅಭಿನಯ ಗಮನ ಸೆಳೆಯುತ್ತದೆ. ಸಿನಿಮಾದಲ್ಲಿ ಇಬ್ಬರು ನಾಯಕಿಯರಿದ್ದು ಇದೊಂದು ತ್ರಿಕೋನ ಪ್ರೇಮಕತೆಯಂತೆಯೂ ಭಾಸವಾಗುತ್ತದೆ. ನಾಯಕನ ಎದೆಯ ಭಾವನೆಗಳು ಯಾವ ನಾಯಕಿಯ ಧ್ವನಿಗೆ ಮಿಡಿಯುತ್ತವೆ ಎಂಬುದೇ ಈ ಸಿನಿಮಾ.

ಇತ್ತೀಚಿನ ದಿನಗಳಲ್ಲಿ ಒಂದು ಅಪರೂಪದ ಸಂಗೀತಮಯ ಚಿತ್ರವಾಗಿಯೂ “ಒಂದು ಸರಳ ಪ್ರೇಮಕತೆ” ನೋಡುಗರ ಮನಗೆಲ್ಲುತ್ತದೆ. ʼಮೂಕನಾಗಬೇಕುʼ ಎಂಬ ತತ್ವಪದವೊಂದು ಈ ಸಿನಿಮಾದುದ್ದಕ್ಕೂ ಇದ್ದು ಈ ಸಿನಿಮಾದ ನಿಜವಾದ ನಾಯಕ, ನಾಯಕಿ ಮತ್ತು ವಿಲನ್‌ ಆಗಿದೆ ಎಂದೇ ಹೇಳಬೇಕು. ಈ ತತ್ವಪದವೇ ಸಿನಿಮಾದ ಜೀವಾಳವೂ ಹೌದು. ಸುನಿ ಅವರ ದೃಶ್ಯಗಳಿಗೆ ವೀರ್‌ ಸಮರ್ಥ್‌ ಅವರ ಸಂಗೀತವೇ ಬೆನ್ನೆಲುಬು.

ನಾಯಕನಾಗಿರುವ ವಿನಯ್‌ ರಾಜ್‌ಕುಮಾರ್‌ ಅವರ ಜೊತೆ ನಾಯಕಿಯಾಗಿರುವ ಸ್ವಾತಿಷ್ಠ ಕೃಷ್ಣನ್‌ ಮತ್ತು ಹಿಂದಿಯ ರಾಧಾ ಕೃಷ್ಣ ಧಾರಾವಾಹಿಯ ರಾಧೆ ಖ್ಯಾತಿಯ ಮಲ್ಲಿಕಾ ಸಿಂಗ್‌ ಇದ್ದಾರೆ. ನಾಯಕನ ತಂದೆಯಾಗಿ ರಾಜೇಶ್‌ ಅವರು ಸೂಪರ್.‌ ಸಾಧು ಕೋಕಿಲ ಇಲ್ಲಿ ಮ್ಯೂಸಿಕ್‌ ಡೈರೆಕ್ಟರ್‌ ಆಗಿಯೇ ಅಭಿನಯಿಸಿದ್ದಾರೆ. ನಾಯಕನ ಅಜ್ಜಿಯ, ಸ್ನೇಹಿತರ ಪಾತ್ರಗಳೂ ಕಾಡುವಂತಿವೆ. ಹಿರಿಯ ನಟರಾದ ರಾಘವೇಂದ್ರ ರಾಜ್‌ಕುಮಾ‌ರ್‌ ಅವರು, ಸಿಂಪಲ್ಲಾಗ್‌ ಒಂದ್‌ ಲವ್‌ ಸ್ಟೋರಿಯ ನಾಯಕಿ ಶ್ವೇತಾ ಶ್ರೀವಾಸ್ತವ್‌ ಅವರು, ಬಿಗ್‌ ಬಾಸ್‌ ಖ್ಯಾತಿಯ ಕಾರ್ತಿಕ್‌ ಅವರ ಅತಿಥಿ ಪಾತ್ರಗಳಿವೆ. ಸಿನಿಮಾದ ಒನ್‌ ಲೈನ್‌ ಪಂಚ್‌ಗಳು ಅಲ್ಲಲ್ಲಿ ಕಿರುನಗೆ ಮೂಡಿಸುತ್ತವೆ. ಹಿನ್ನೆಲೆಯ ಹಾಡುಗಳು ಗುನುಗುವಂತಿವೆ. ಜಯಂತ್‌ ಕಾಯ್ಕಿಣಿ ಅವರ ಸಾಲುಗಳೂ ಕೂಡ ಚಿತ್ರದಲ್ಲಿವೆ.

ನೀವು ಸಿನಿಮಾವನ್ನು, ಸಿನಿಮಾದ ಸಂಗೀತವನ್ನು, ಸಿಂಪಲ್‌ ಸುನಿಯವರನ್ನು, ವಿನಯ್‌ ರಾಜ್‌ಕುಮಾರ್ ಅವರನ್ನು ಇಡಿಯಾಗಿ ಇಷ್ಟಪಡುವವರು ಆಗಿದ್ದರೆ ಸಿನಿಮಾ ನಿಮಗೆ ಖಂಡಿತ ಇಷ್ಟವಾಗುತ್ತದೆ…‌ ಹೋಗಿ ಬಂದು ನಿಮ್ಮ ಅಭಿಪ್ರಾಯ ಕಾಮೆಂಟಿಸಿ…

 

ಸೋಮವಾರ, ಜನವರಿ 22, 2024

ಜೈ ಶ್ರೀರಾಮ ಜೈ ಭಾರತ



ಇಂದು (ಜನವರಿ 22, 2024) ಭಾರತದ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ ದಿನ. ಅಂದುಕೊಂಡಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಬಾಲರಾಮನ ಪ್ರತಿಷ್ಠಾಪನೆಯ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ. ಈ ಅಭೂತಪೂರ್ವ ಕ್ಷಣಗಳಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ನೇರವಾದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಲು ಇಚ್ಛಿಸುತ್ತೇನೆ.

ಇಂದು ಬೆಳಿಗ್ಗೆ ನನ್ನ ಜಂಗಮ ಸ್ನೇಹಿತರು ಒಂದು ಫೇಸ್‌ಬುಕ್‌ ಫೋಸ್ಟ್‌ ಹಾಕಿದ್ದರು. “”ನಮ್ಮ ತಲೆಮಾರಿಗೆ ರಾಮಮಂದಿರ ನಿರ್ಮಾಣ ಅಸಾಧ್ಯ ಎಂದು ಭಾವಿಸಿದ್ದಾಗ, ಅದನ್ನು ಸಾಧ್ಯವಾಗಿಸಿದ ಮಹಾನುಭಾವರಿಗೆ ದೇವರು, ಆರೋಗ್ಯ, ಆಯಸ್ಸು ಮತ್ತು ವಿಜಯವನ್ನು ನೀಡಲಿ ಎಂದು ಹಾರೈಸುತ್ತೇನೆ. "ಟೀಕೆಗಳು ಸಾಯುತ್ತವೆ, ಸಾಧನೆ ಉಳಿಯುತ್ತದೆ."” ಎಂದು. ಈ ಪೋಸ್ಟಿಗೆ ನನ್ನದೇ ಮೊದಲ ಲೈಕು. ಯಾಕೆಂದರೇ, ನಾನು ಕೂಡ ಹೀಗೇ ಭಾವಿಸಿದ್ದೆ. ನನ್ನ ಶಾಲಾ ದಿನಗಳಲ್ಲಿ ಶ್ರೀ ಅಡ್ವಾಣಿಯವರ ರಥಯಾತ್ರೆ ನಮ್ಮ ಮನೆಯ ಮುಂದೆಯೇ ಸಾಗಿದ್ದನ್ನು ಕಂಡವನು ನಾನು. ನಾವು ಬೆಳೆದರೂ ರಾಮಮಂದಿರ ಕನಸೇನೋ ಎಂಬಂತಾಗಿತ್ತು. ಆದರೆ, ಯಾವಾಗ 2019ರಲ್ಲಿ ನಮ್ಮ ದೇಶದ ಸುಪ್ರೀಂ ಕೋರ್ಟ್‌ ಈ ಜಾಗ ರಾಮ ಮಂದಿರಕ್ಕೆ ಸೇರಿದ್ದು ಎಂದು ತೀರ್ಪು ಕೊಟ್ಟಿತೋ ಅಂದು ನನಗೆ ಅಲ್ಲಿ ನಿಧಾನವಾಗಿಯಾದರೂ ಶ್ರೀರಾಮ ಮಂದಿರ ನಿರ್ಮಾಣವಾಗುವುದೆಂದು ಭರವಸೆಯಂತೂ ಮೂಡಿತ್ತು. ಆ ಪ್ರಕಾರವಾಗಿ ಇಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆ ಮತ್ತು ಬಾಲರಾಮನ ಪ್ರತಿಷ್ಠಾಪನೆಯ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದೆ.

ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾನು ಮನೆಯಲ್ಲಿ ಇಲ್ಲದಿದ್ದಾಗ ಮಂತ್ರಾಕ್ಷತೆ ನಮ್ಮ ಮನೆಯನ್ನು ಸೇರಿತ್ತು ನನ್ನ ಮಗಳು ದೇವರಮನೆಯಲ್ಲಿ ಇಟ್ಟಿದ್ದಳು. ಇದನ್ನು ಏನು ಮಾಡಬೇಕೆಂದು ತಿಳಿಸಿದ್ದರೂ ಕೂಡ ನಾನು ನಮ್ಮ ಮನೆಯಲ್ಲಿ ಬೆಳೆದ ಹುಡುಗನೊಬ್ಬನಿಗೆ ಮದುವೆಯಾಗಲಿ ಎಂದು ಪ್ರಯತ್ನ ಪಡುತ್ತಿರುವುದರಿಂದ ಅವನಿಗಾಗಿ ಎತ್ತಿಟ್ಟಿರುವ ಒಂದು ವಸ್ತುವಿನ ಜೊತೆ ಈ ಮಂತ್ರಾಕ್ಷತೆಯನ್ನು ಪೂಜೆ ಮಾಡಿ ಎತ್ತಿಡು ಎಂದು ನಮ್ಮ ಮನೆಯವರಿಗೆ ತಿಳಿಸಿದೆ. ಆಕೆ ಅದೇ ರೀತಿ ಮಾಡಿದಳು.

ಇನ್ನು ಇಂದು ಬೆಳಿಗ್ಗೆ ಬೇಗಬೇಗ ನನ್ನೆಲ್ಲಾ ಕೆಲಸಗಳನ್ನು ಮುಗಿಸಿ, ಸಿದ್ಧವಾಗಿ ಮಧ್ಯಾಹ್ನ ನಮ್ಮ ಊರಿನ ಸರ್ಕಲ್ಲಿನ ಬಳಿಯಿರುವ ಶ್ರೀ ಆಂಜನೇಯನ ದೇವಸ್ಥಾನಕ್ಕೆ ಭೇಟಿ ನೀಡಿ ಕೈಮುಗಿದು ಅಲ್ಲಿ ನೀಡುತ್ತಿದ್ದ ಪ್ರಸಾದವನ್ನು ಊಟ ಮಾಡಿದೆ. ಅಲ್ಲಿ ಜಾತಿ ಮತ ಧರ್ಮದ ಭೇದವಿಲ್ಲದೆ ಜನ ಪ್ರಸಾದವನ್ನು ತೆಗೆದುಕೊಳ್ಳುತ್ತಿದ್ದರು. ಅಲ್ಲಿ ನನ್ನ ಮುಸ್ಲಿಂ ಸ್ನೇಹಿತರೊಬ್ಬರು ಬರುತ್ತಿರುವುದನ್ನು ಕಂಡು ಪ್ರಸಾದ ತೆಗೆದುಕೊಳ್ಳಿ ಎಂದೆ. ಅವರು ಅದಾಗಲೇ ತಮ್ಮ ಹುಡುಗನೊಬ್ಬ ಇವರಿಗೂ ಸೇರಿಸಿ ತೆಗೆದುಕೊಂಡು ಹೋಗುತ್ತಿರುವುದನ್ನು ತೋರಿಸಿ ಮುಗುಳ್ನಕ್ಕರು. ಅಲ್ಲಿದ್ದ ಕೆಲವು ಗೆಳೆಯರನ್ನು ಮಾತನಾಡಿಸಿ ಊಟ ಮಾಡಿ ಮುಗಿಸಿ, ಪ್ರಸಾದ ಬಡಿಸುತ್ತಿದ್ದವರಿಗೆ ಊಟ ಮಾಡಲು ಹೇಳಿ ಉಳಿದ ಪ್ರಸಾದವನ್ನು ಬಂದವರಿಗೆಲ್ಲಾ ನೀಡಿ ಕಾಲಿ ಮಾಡಿದೆ. ನನ್ನ ಬಾಲ್ಯದ ದಿನಗಳಲ್ಲಿ ಗುಬ್ಬಿಯಪ್ಪನ ದೇವಸ್ಥಾನದಲ್ಲಿ ಈ ಕೆಲಸ ಮಾಡುತ್ತಿದ್ದದ್ದು ನೆನಪಿಗೆ ಬಂದು ಸ್ವಲ್ಪ ಭಾವುಕನಾಗಿದ್ದಂತೂ ನಿಜ. ಜೊತೆಗೆ, ಇಲ್ಲಿ ಆಂಜನೇಯನ ಸನ್ನಿಧಾನದಲ್ಲಿ ಊಟ ಮಾಡುತ್ತಿದ್ದ ಎಲ್ಲಾ ಜನಗಳನ್ನು ನೋಡಿದಾಗ ನನಗನ್ನಿಸಿದ್ದು ಒಂದೇ ಸಂಗತಿ: “ಇದು ನನ್ನ ಭಾರತ.” ಈ ಆಂಜನೇಯ ದೇವಸ್ಥಾನದ ಮುಂದೆಯೇ ದಿನಾ ನಾನು ಓಡಾಡುತ್ತಿದ್ದರೂ ಒಳಗೆ ಹೋಗಿದ್ದು ಇದೇ ಮೊದಲು. ಆಂಜನೇಯನ ಪುಟ್ಟ ವಿಗ್ರಹವೊಂದು ಮಾತ್ರ ಅಲ್ಲಿದೆ. ಇಂದು ತಿಳಿದ ಹೊಸ ವಿಷಯವೇನೆಂದರೇ ಅಲ್ಲಿ ಇದೇ ಗಣರಾಜ್ಯೋತ್ಸವಕ್ಕೆ ಪಂಚಮುಖಿ ಆಂಜನೇಯ ದೇವಸ್ಥಾನದ ಶಂಕುಸ್ಥಾಪನೆಯಾಗಲಿದೆಯಂತೆ. ಶುಭವಾಗಲಿ.

ನಂತರ ಗೂಳೂರು ಗಣಪನಿಗೆ ನಮಿಸಿ ಬರೋಣವೆಂದು ಹೋದೆ. ಅಲ್ಲಿ ಶ್ರೀರಾಮನ ಹಳೆಯ ಫೋಟೊವೊಂದನ್ನು (ಈ ರೀತಿಯ ಫೋಟೋ ಕೋಟ್ಯಾನುಕೋಟಿ ಭಾರತೀಯರ ಮನೆಯಲ್ಲಿದೆ) ಇಟ್ಟು ಪೂಜೆ ಮಾಡಿದ್ದರು. ನನಗೆ ಅದೃಷ್ಟವೆಂಬಂತೆ ಅಲ್ಲೂ ಕೂಡ ಸ್ವಲ್ಪ ಪ್ರಸಾದ ಸಿಕ್ಕಿತು.

ನಂತರ ಮನೆಗೆ ಬಂದು ಇಷ್ಟೆಲ್ಲಾ ಬರೆದೆ. ಬರೆಯುವುಕ್ಕೆ ಇನ್ನೂ ಇದೆ. ಎಷ್ಟು ಬರೆದರೂ ಪ್ರಮುಖವಾಗಿ ಒಬ್ಬ ಭಾರತೀಯನಾಗಿ ನನಗೆ ಇವತ್ತು ಬಹಳ ಸಂತೋಷದ ದಿನ. ನಮ್ಮ ಮನೆಯ ದೇವರು ಶ್ರೀ ವೀರಭದ್ರಸ್ವಾಮಿ. ಮನದ ದೇವರು ಶ್ರೀ ಗೋಸಲ ಚೆನ್ನಬಸವೇಶ್ವರ ಸ್ವಾಮಿ (ಗುಬ್ಬಿಯಪ್ಪ). ಆದರೆ, ನಮ್ಮ ದೇಶದ ದೇವರು ಶ್ರೀರಾಮ. ಇದು ನನ್ನ ನಂಬಿಕೆ.

ಭಾರತೀಯರ ಶತಮಾನಗಳ ಕನಸೊಂದು ನನಸಾದ ಈ ಶುಭಸಂದರ್ಭಕ್ಕೆ ಸಾಕ್ಷಿಯಾದ ನಾವೇ ಧನ್ಯರು…

ಜೈ ಶ್ರೀರಾಮ, ಜೈ ಭಾರತ…

 

ಸೋಮವಾರ, ಜನವರಿ 15, 2024

ನಿಮ್ಮ ಮನೆಯಲ್ಲಿರಲಿ “ಅಯೋಧ್ಯ ಸಚಿತ್ರ ರಾಮಾಯಣ”



ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಟಾಟನೆ ಮತ್ತು “ರಾಮಲಲ್ಲಾ” ಅಥವಾ “ಬಾಲರಾಮ”ನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್‌ ಆಯೋಜಿಸಿರುವುದು ಸರಿಯಷ್ಟೆ. ಈ ಸಂದರ್ಭದಲ್ಲಿ ಬೆಂಗಳೂರಿನ ಅಯೋಧ್ಯ ಫೌಂಡೇಶನ್‌ ಒಂದು ಅಪರೂಪದ, ಶ್ರೀರಾಮನ ಭಕ್ತರಾದ ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿ ಇರಬೇಕಾದ ಪುಸ್ತಕವೊಂದನ್ನು ಪ್ರಕಟಿಸಿದೆ. ಅದು “ಅಯೋಧ್ಯ ಸಚಿತ್ರ ರಾಮಾಯಣ.” ಈ ಪುಸ್ತಕವು ಇತರೆ ಭಾಷೆಗಳೊಂದಿಗೆ ಕನ್ನಡದಲ್ಲೂ ಪ್ರಕಟವಾಗಿದೆ.

125 ವರ್ಣಚಿತ್ರಗಳೊಂದಿಗೆ ಮಹರ್ಷಿ ವಾಲ್ಮೀಕಿ ಮಹಾಕಾವ್ಯದ ಸಂಪೂರ್ಣ ಕಥಾನಕವುಳ್ಳ ಕಾಫಿ ಟೇಬಲ್‌ ಪುಸ್ತಕವಾಗಿ “ಅಯೋಧ್ಯ ಸಚಿತ್ರ ರಾಮಾಯಣ” ಪ್ರಕಟವಾಗಿದ್ದು, ಆಕರ್ಷಕ ಮುಖಪುಟ ಮತ್ತು ರೇಖಾಚಿತ್ರಗಳ ಸಹಿತ ಅತ್ಯುತ್ತಮ ವಿನ್ಯಾಸ ಮತ್ತು ಗುಣಮಟ್ಟದ ಮುದ್ರಣದಿಂದ ಕೂಡಿದೆ. ನೋಡಿದ ಕೂಡಲೇ ಈ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಅಯೋಧ್ಯ ಫೌಂಡೇಶನ್‌ ಪ್ರಕಟಿಸಿದೆ.


ಪ್ರಕಾಶಕರ ಮಾತಿನಲ್ಲಿ ತಿಳಿಸಿರುವಂತೆ ಈ ಪ್ರಕಟಣೆಯು ಮೂಲ ಆದಿಕವಿ ಶ್ರೀಮದ್ವಾಲ್ಮೀಕಿ ಮಹರ್ಷಿ ವಿರಚಿತ ರಾಮಾಯಣ ಮಹಾಕಾವ್ಯಕ್ಕೆ ನಿಷ್ಠವಾಗಿದ್ದು, ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಬರಹಕ್ಕೆ ಖ್ಯಾತ ಕಲಾವಿದರಾದ ಶ್ರೀ ನೀರ್ನಳ್ಳಿ ಗಣಪತಿ ಹೆಗಡೆ ಅವರ ಚಿತ್ರಗಳಿವೆ. ಮೂಲ ರಾಮಾಯಣದ ಯಾವ ಮುಖ್ಯ ವಿವರಣೆಯನ್ನೂ ಕೈಬಿಡದೆ ಅತ್ಯಂತ ಸರಳ ಭಾಷೆಯಲ್ಲಿ, ಚಿತ್ರವತ್ತಾಗಿ ಕತೆಯನ್ನು ನಿರೂಪಿಸಿರುವುದು ಇಲ್ಲಿನ ವಿಶೇಷ. ಆಕರ್ಷಕ ವರ್ಣಚಿತ್ರಗಳು, ಕಾಫಿ ಟೇಬಲ್ ಪುಸ್ತಕದ ಗಾತ್ರ, ನಯವಾದ ಹಾಳೆಗಳು ಕೃತಿಯ ವಿಶೇಷ. ಮಕ್ಕಳಷ್ಟೇ ಅಲ್ಲ ಹಿರಿಯರಿಗೂ ಇಷ್ಟವಾಗುವ ಚಿತ್ರ-ವಿವರಣೆ-ಗುಣಮಟ್ಟದ ಪುಸ್ತಕ ಇದಾಗಿದ್ದು ರಾಮಾಯಣದ ಸಂಕ್ಷಿಪ್ತ ಸಾರ ಇಲ್ಲಿದೆ.

ಪ್ರತಿಯೊಂದು ಮನೆಯಲ್ಲೂ ಇರಲೇಬೇಕಾದ ಸಂಗ್ರಹಯೋಗ್ಯ ಸಾರ್ವಕಾಲಿಕ ರಾಮಾಯಣ ಗ್ರಂಥವಿದು

ಈ ಕೃತಿಯ ಮೌಲ್ಯ ರೂ. 499/- ಆಗಿದ್ದು, ಆಸಕ್ತರಿಗೆ… https://amzn.to/3vARSyq 

***

ಜನವರಿ 13ರಿಂದ 18ರವರೆಗೆ ನಡೆಯುತ್ತಿರುವ ಅಮೇಜಾನ್‌ ಇಂಡಿಯಾ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಲಿಂಕ್: https://amzn.to/4aTZI6u

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...