ಗುರುವಾರ, ಜನವರಿ 11, 2024

ಬಾಯ್ಕಾಟ್ ಮಾಲ್ಡೀವ್ಸ್ ಹ್ಯಾಶ್ ಟ್ಯಾಗಿಗೆ ಬೆಚ್ಚಿಬಿದ್ದ ಮಾಲ್ಡೀವ್ಸ್

ಬಾಯ್ಕಾಟ್‌ ಮಾಲ್ಡೀವ್ಸ್‌ ಹ್ಯಾಶ್‌ ಟ್ಯಾಗಿಗೆ ಬೆಚ್ಚಿಬಿದ್ದ ಮಾಲ್ಡೀವ್ಸ್‌

 



ಸಾಮಾಜಿಕ ಜಾಲತಾಣಗಳು ಈಗ ಎಷ್ಟು ಪವರ್‌ ಫುಲ್‌ ಆಗಿವೆ ಮತ್ತು ಆಗುತ್ತಲಿವೆ ಎಂಬುದಕ್ಕೆ ಒಂದು ತಾಜಾ ಉದಾಹರಣೆ “ಬಾಯ್ಕಾಟ್‌ ಮಾಲ್ಡೀವ್ಸ್‌” ಎಂಬ ಹ್ಯಾಶ್‌ ಟ್ಯಾಗ್.‌ ಈ ಹ್ಯಾಶ್‌ ಟ್ಯಾಗ್‌ ಬಳಸಿದ ಸುದ್ದಿ, ವಿಡಿಯೋಗಳು ಎಕ್ಸ್‌, ಫೇಸ್ಬುಕ್‌, ಇನ್ಸ್ಟಾಗ್ರಾಂ, ಯೂಟ್ಯೂಬ್‌ ಇನ್ನು ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿ ಪ್ರವಾಸೋದ್ಯಮವನ್ನೇ ದೇಶದ ಪ್ರಮುಖ ಆದಾಯವಾಗಿ ಅವಲಂಬಿಸಿರುವ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ ಅನ್ನು ತತ್ತರಗೊಳಿಸಿದೆ.

ಇದಕ್ಕೆಲ್ಲಾ ಕಾರಣ ಮಾಲ್ಡೀವ್ಸ್‌ನ ಮೂರು ಜನ ರಾಜಕಾರಣಿಗಳೇ ಆಗಿದ್ದು, ಈ ಸಚಿವರು, ಸಂಸದರನ್ನು ಅಲ್ಲಿನ ಸರ್ಕಾರ ತನ್ನ ಸಂಪುಟದಿಂದ ವಜಾಗೊಳಿಸಿದ್ದರೂ ಕೂಡ ತನ್ನ ದೇಶಕ್ಕೆ ಆಗಿರುವ ನಷ್ಟದಿಂದ ಸುಧಾರಿಸಿಕೊಳ್ಳಲು ಬಹಳ ಕಷ್ಟವಿದೆ.



ಅಷ್ಟಕ್ಕೂ ಆಗಿದಿಷ್ಟು: ಮೊನ್ನೆ ಅಂದರೆ ಜನವರಿ 7ರಂದು ನಮ್ಮ ಭಾರತ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಯವರು ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪಕ್ಕೆ ಭೇಟಿ ನೀಡಿ ಅಲ್ಲಿನ ಫೋಟೋಗಳನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಸಾಹಸಪ್ರಿಯರಿಗೆ ಇದು ಸೂಕ್ತ ಸ್ಥಳ ಎಂದು ಬರೆದುಕೊಂಡಿದ್ದರು. ಸ್ವತಃ ಪ್ರಧಾನಿಯೇ ಹೋಗಿ ಮೆಚ್ಚಿಕೊಂಡ ಮೇಲೆ ನಾವು ಕೂಡ ಹೋಗುತ್ತೇವೆ ಎಂದು ದೇಶದ ಪ್ರಜೆಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯ, ಯೋಜನೆಗಳನ್ನು ಹಂಚಿಕೊಳ್ಳತೊಡಗಿದರು. 



ಈ ಸುದ್ಧಿಯಿಂದ ಹೊಟ್ಟೆ ಹುರಿಸಿಕೊಂಡ ಮಾಲ್ಡೀವ್ಸ್‌ನ ಮೂವರು ರಾಜಕಾರಣಿಗಳು ಪ್ರತಿಕ್ರಿಯಿಸಿ ಮಾಲ್ಡೀವ್ಸ್‌ ಜೊತೆ ಭಾರತದ ಸ್ಪರ್ಧೆ ಭ್ರಮೆಯಷ್ಟೇ ಎಂಬರ್ಥದ ಪೋಸ್ಟ್‌ ಹಂಚಿಕೊಂಡರು. ನಮ್ಮ ದೇಶದ ಪ್ರವಾಸೋದ್ಯಮವನ್ನು ಅಣಕಿಸಿದರು ನೋಡಿ. ಸಂಕಷ್ಟ ಶುರುವಾಯಿತು. ಭಾರತ ದೇಶದ ಪ್ರಜೆಗಳು ಅಕ್ಷರಶಃ “ಬಾಯ್ಕಾಟ್‌ ಮಾಲ್ಡೀವ್ಸ್”‌ ಎಂಬ ಕ್ರಾಂತಿಯನ್ನೇ ಸೋಷಿಯಲ್‌ ಮೀಡಿಯಾದಲ್ಲಿ ಮಾಡಿಬಿಟ್ಟರು. ಇದರಿಂದ ಆಗುತ್ತಿರುವ ಡ್ಯಾಮೇಜ್‌ ಅರಿತ ಮಾಲ್ಡೀವ್ಸ್‌ ಸರ್ಕಾರ ಈ ಮೂವರನ್ನು ತನ್ನ ಸಂಪುಟದಿಂದ ಕೈಬಿಡುವಷ್ಟರಲ್ಲಿ ದೊಡ್ಡ ಡ್ಯಾಮೇಜೇ ಈ ಪುಟ್ಟ ರಾಷ್ಟ್ರಕ್ಕೆ ಆಗಿಹೋಗಿದೆ. ʼಮಾತು ಆಡಿದರೆ ಹೋಯ್ತು, ಮುತ್ತು ಹೊಡೆದರೆ ಹೋಯ್ತುʼ ಎಂಬ ಗಾದೆ ಮಾತು ನಿಜವಾಗಿಬಿಟ್ಟಿದೆ. ಸಾವಿರಾರು ಭಾರತೀಯರು ತಮ್ಮ ಹೋಟೆಲ್‌ ಬುಕ್ಕಿಂಗ್‌ ಕ್ಯಾನ್ಸಲ್‌ ಮಾಡಿದ್ದಾರೆ, ಹಲವಾರು ವಿಮಾನಗಳು ರದ್ದಾಗಿವೆ. ಕೋವಿಡ್‌ ನಂತರ ಅತಿ ಹೆಚ್ಚು ಭಾರತೀಯರ ಪ್ರೀತಿಗೆ ಪಾತ್ರವಾಗಿದ್ದ ಮಾಲ್ಡೀವ್ಸ್‌ನ ತಿಳಿನೀರ ಸಮುದ್ರ ತೀರಗಳು ಇನ್ನು ಭಾರತೀಯರನ್ನು ಮಿಸ್‌ ಮಾಡಿಕೊಳ್ಳಲಿವೆ. ಮತ್ತು ಲಕ್ಷದ್ವೀಪದ ಸಮುದ್ರ ತೀರಗಳಿಗೆ ಪ್ರವಾಸಿಗರು ಹೆಚ್ಚಲಿದ್ದಾರೆ. ಆದರೆ, ಅಲ್ಲಿನ್ನೂ ಮೂಲ ಸೌಕರ್ಯಗಳು ಅಭಿವೃದ್ಧಿಯಾಗಬೇಕಿದೆ.

ಆದರೆ, ಈ ಪ್ರಕರಣದಿಂದ ಸಾಮಾಜಿಕ ಜಾಲತಾಣಗಳ ಪವರ್‌ ಮತ್ತೊಮ್ಮೆ ಸಾಬೀತಾಗಿರುವುದಂತೂ ಸತ್ಯ.






ಬುಧವಾರ, ಜನವರಿ 3, 2024

“ಕಾಟೇರ” Review: ಕ್ಲಾಸ್‌ ಮಾಸ್‌ ಡಿ-ಬಾಸ್

 ಕಾಟೇರ” Review: ಕ್ಲಾಸ್‌ ಮಾಸ್‌ ಡಿ-ಬಾಸ್

ಪ್ರಿಯ ಸ್ನೇಹಿತರೇ, ನಮಸ್ಕಾರ.

ಹೊಸ ಕ್ಯಾಲೆಂಡರ್‌ ವರ್ಷದ ಶುಭಾಶಯಗಳು…

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರು ನಾಯಕನಟನಾಗಿ ಅಭಿನಯಿಸಿರುವ “ಕಾಟೇರ” ಸಿನಿಮಾವನ್ನು ಡಿಸೆಂಬರ್‌ 29ರಂದೇ ಅಂದರೆ ಬಿಡುಗಡೆಯಾದ ದಿನವೇ ನೋಡಲಾಗಲಿಲ್ಲ. ಕಾರಣ, ವಿಪರೀತ ರಶ್.‌ ಮಧ್ಯರಾತ್ರಿ ಒಂದು ಗಂಟೆಯಿಂದಲೇ  ಮಾರುತಿ ಥಿಯೇಟರಿನಲ್ಲಿ ಶೋ ಶುರುವಾಗಿತ್ತು. ನಂತರ, ಮೊದಲ ದಿನ ನಿರಂತರವಾಗಿ ಶೋಗಳು ನಡೆದವು. ಮಧ್ಯಾಹ್ನದಿಂದ ಪ್ರಶಾಂತ್‌ ಥಿಯೇಟರ್ನಲ್ಲಿಯೂ ಪ್ರದರ್ಶನ ಶುರುವಾಯಿತು. ಅಲ್ಲೂ ಕೂಡ ರಶ್.‌ ಎಸ್-ಮಾಲಿನ ಐನೋಕ್ಸ್‌ ಪಿವಿಆರ್‌ ಮಲ್ಟಿಪ್ಲೆಕ್ಸಿನಲ್ಲಿ ಸ್ವಲ್ಪ ತಡವಾಗಿ ಆನ್‌ ಲೈನ್‌ ಬುಕ್ಕಿಂಗ್‌ ಬಿಟ್ಟರು. ಸೋ ನಾನು ನೋಡುವಷ್ಟರಲ್ಲಿ ಬಹಳ ತಡವಾಯಿತು. ಅಷ್ಟರಲ್ಲಾಗಲೇ “ಕಾಟೇರ” ಸಿನಿಮಾ ಮೂರುದಿನಗಳ ಯಶಸ್ವಿ ಪ್ರದರ್ಶನ ಕಂಡು 2023ರ ಸೂಪರ್‌ ಹಿಟ್‌ ಸಿನಿಮಾವಾಗಿ 2024ರಲ್ಲಿ ತನ್ನ ಯಶಸ್ಸಿನ ಪ್ರದರ್ಶನವನ್ನು ಮುಂದುವರಿಸಿ ಆಗಿತ್ತು. ಮೂರು ದಿನಗಳಲ್ಲೇ 60ಕೋಟಿ ಕಲೆಕ್ಷನ್‌ ಮಾಡಿ ದಾಖಲೆ ಮಾಡಿತ್ತು.



ನಾನು ನೆನ್ನೆ (02/01/2024 ಸೋಮವಾರ) “ಕಾಟೇರ” ನೋಡಿದೆ. ಬೆಳಿಗ್ಗೆಯೇ ಅಷ್ಟೇನೂ ರಶ್‌ ಆಗುವುದಿಲ್ಲ ಎಂದುಕೊಂಡವನ ಊಹೆ ಸುಳ್ಳಾಗಿತ್ತು. ಆಗಲೂ ಪ್ರದರ್ಶನ ಹೌಸ್‌ ಫುಲ್‌ ಆಗಿತ್ತು. ಇನ್ನು ಸಿನಿಮಾ ಮೇಕಿಂಗ್‌ ಚೆನ್ನಾಗಿದೆ. ಒಂದೇ ಮಾತಿನಲ್ಲಿ ಹೇಳುವುದಾದರೇ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಕ್ಲಾಸ್‌ ಮತ್ತು ಮಾಸ್‌ ದರ್ಶನ ಈ ಸಿನಿಮಾದಲ್ಲಾಗಿದೆ. ಇಡೀ ಸಿನಿಮಾದಲ್ಲಿ ಎರಡು ಶೇಡ್‌ ಗಳಲ್ಲಿರುವ “ಕಾಟೇರ” ಪಾತ್ರವನ್ನು ಅವರು ಆವಾಹಿಸಿಕೊಂಡುಬಿಟ್ಟಿದ್ದಾರೆ. ಜಡೇಶ್‌ ಕುಮಾರ್‌ ಹಂಪಿ ಅವರ ಕತೆಯನ್ನು ಸಶಕ್ತವಾಗಿ ತರುಣ್‌ ಕಿಶೋರ್‌ ಸುಧೀರ್‌ ಅವರು ನಿರ್ದೇಶಿಸಿದ್ದಾರೆ.

ಜಾತಿಗಳ ನಡುವಿನ ತಾರತಮ್ಯವನ್ನು ಎತ್ತಿ ತೋರಿಸುತ್ತಲೇ, ದೇಶದಲ್ಲಿ ಜಾರಿಯಾದ ʼಉಳುವವನೇ ಭೂ ಒಡೆಯʼ ಎಂಬ ಕಾನೂನಿನ ಮಹತ್ವವನ್ನು ಸಿನಿಮಾದಲ್ಲಿ ತಿಳಿಸಲಾಗಿದೆ. ಈ ಕಾನೂನು ಜಾರಿಯಾದ ಕಾಲಘಟ್ಟದ ಸಂಘರ್ಷದ ಕತೆಯೇ “ಕಾಟೇರ”

ಸಿನಿಮಾದ ನಿರೂಪಣೆ ಬಹಳ ಸಂಯಮದಿಂದ ಕೂಡಿರುವುದು ಸಿನಿಮಾ ಸ್ವಲ್ಪ ದೀರ್ಘವಾಯಿತು ಅಂತ ಅನ್ನಿಸಿದರೂ ದರ್ಶನ್‌ ಅಭಿಮಾನಿಗಳಿಗೆ ಅದು ಬೋನಸ್‌ ಪಾಯಿಂಟ್!‌ ಸಂಗೀತ, ಸಿನಿಮಾಟೋಗ್ರಫಿ, ಸಾಹಿತ್ಯ ಸೇರಿದಂತೆ ಇಡೀ ತಂಡ ಅಚ್ಚುಕಟ್ಟಾಗಿ ಕೆಲಸ ಮಾಡಿದೆ. ಇನ್ನು ನಾಯಕಿ ಆರಾಧನ ಅವರದ್ದು ಹೊಸ ಪರಿಚಯ. ಬಹಳಷ್ಟು ಕಡೆ ಅವರದ್ದು ಮನೋಜ್ಞ ಅಭಿನಾಯ. ಇತರ ಪಾತ್ರಗಳಾದ ಕುಮಾರ್‌ ಗೋವಿಂದ್‌, ಶ್ರುತಿ, ಬಿರಾದಾರ್‌, ರೋಹಿತ್‌, ಅವಿನಾಶ್‌, ಜಗಪತಿ ಬಾಬು, ವಿನೋದ್‌ ಆಳ್ವ, ಅಚ್ಯುತ ಕುಮಾರ್‌, ಗೋಮಾರದಹಳ್ಳಿ ಮಂಜುನಾಥ್‌ ಶಿರಾ, ಸರ್ದಾರ್‌ ಸತ್ಯ ಅವರ ಅಭಿನಯ ಮತ್ತು ಫ್ಲೋರೆನಿಕ್ಸ್‌ ‌ಲೇಡಿ ಆಫೀಸರ್ (ನಟಿಯ ಹೆಸರು ಗೊತ್ತಿಲ್ಲ)  ಗಮನ ಸೆಳೆಯುತ್ತದೆ. ಪುಟ್ಟ ಪಾತ್ರವಾದರೂ ಹಿರಿಯ ನಟರುಗಳಾದ ಶ್ರೀನಿವಾಸ್‌ ಮೂರ್ತಿ ಮತ್ತು ದೊಡ್ಡಣ್ಣನವರ ಪಾತ್ರಗಳು ನೆನಪಿನಲ್ಲಿ ಉಳಿಯುತ್ತವೆ.

“ಕಾಟೇರ” ಸಿನಿಮಾವನ್ನು ಇತ್ತೀಚಿಗೆ ಮೃತಪಟ್ಟ ದಸರಾ ಅಂಬಾರಿ ಖ್ಯಾತಿಯ ಆನೆ ಅರ್ಜುನನಿಗೆ ಅರ್ಪಿಸಿರುವುದು ದರ್ಶನ್‌ ಅವರ ಪ್ರಾಣಿಗಳೆಡಗಿನ ಪ್ರೀತಿಗೆ ಮತ್ತೊಂದು ನಿದರ್ಶನವಾಗಿದೆ. ಇಡೀ ಸಿನಿಮಾದಲ್ಲಿ ʼಹೊಲೆ ಮಾರಿʼ ಆಚರಣೆ ಒಂದು ರೂಪಕವಾಗಿ ಬಳಕೆಯಾಗಿದೆ. ʼಮಾತು ಬರದ ಚುಂಗನಿಗೆ ಹಿರಣ್ಯ ಕಶಿಪು ಪಾತ್ರವನ್ನು ನಾಟಕದಲ್ಲಿ ಅಭಿನಯಿಸುವಾಸೆ. ಆದರೆ, ಏನು ಮಾಡುವುದು ಅವನಿಗೆ ಮಾತೇ ಬರುವುದಿಲ್ಲ. ಅವನಿಗೆ ದನಿಯಾಗಿ ಅವನ ಆಸೆಯನ್ನು ನೆರವೇರಿಸುವ ಕಾಟೇರನ ಪಾತ್ರʼ ಇಲ್ಲಿ ಮತ್ತೊಂದು ರೂಪಕ. ಈ ರೂಪಕಗಳ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಒಂದು ಬ್ಲಾಕ್‌ ಬಸ್ಟರ್‌ ಸಿನಿಮಾವಾಗಿ “ಕಾಟೇರ” ಹೊರಹೊಮ್ಮಿದೆ. ಡಿ-ಬಾಸ್‌ ಅವರ ಇಮೇಜ್‌ ಮತ್ತಷ್ಟು ಹೆಚ್ಚಾಗಿದೆ.

ಧನ್ಯವಾದಗಳು…

ಪ್ರೀತಿಯಿಂದ,

- ಗುಬ್ಬಚ್ಚಿ ಸತೀಶ್.

ಗುರುವಾರ, ಡಿಸೆಂಬರ್ 28, 2023

1975ರಲ್ಲೇ ತುಮಕೂರಿನಲ್ಲಿ ಡ್ರಗ್ಸ್‌ ಸಿಗ್ತಾ ಇತ್ತಾ…!?


ಇತ್ತೀಚಿಗೆ ತುಮಕೂರಿನ ಕೆಲವು ಕಾಲೇಜುಗಳ ಸಮೀಪ ಡ್ರಗ್ಸ್‌ ಮಾರಾಟವಾಗುತ್ತಿತ್ತು ಎಂಬ ಸುದ್ಧಿಯೊಂದು ಪ್ರಕಟವಾಗಿ ಸದ್ದಿಲ್ಲದೆ ಮರೆಯಾಗಿ ಹೋಯಿತು. ಆದರೆ, ನಗರದ ಕೆಲವು ನಾಗರೀಕರ ಗುಸುಗುಸು ಪಿಸುಪಿಸು ಮಾತುಗಳಲ್ಲಿ ಈ ಸುದ್ಧಿ ಇನ್ನೂ ಕೇಳಿ ಬರುತ್ತಲೇ ಇದೆ. ಮುದ್ರಣ ಮತ್ತು ದೃಶ್ಯ ಮಾಧ್ಯಮಗಳಲ್ಲೂ ಕೂಡ ರಾಜ್ಯದ, ದೇಶದ ಕೆಲವು ಭಾಗಗಳಲ್ಲಿ ಡ್ರಗ್ಸ್‌ ಕುರಿತ ಸಂಬಂಧಿತ ಸುದ್ಧಿಗಳು ಪ್ರಕಟವಾಗುತ್ತಲೇ ಇರುತ್ತವೆ. ಸದ್ಧಿಲ್ಲದೆ ಡ್ರಗ್ಸ್‌ ಮಾರಾಟ ನಡೆಯುತ್ತಲೇ ಇರುತ್ತದೆ. ಅಮಾಯಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ವ್ಯಸನಕ್ಕೆ ಬಲಿಯಾಗುತ್ತಲೇ ಇರುತ್ತಾರೆ. ಧೂಮಪಾನ, ಮದ್ಯಪಾನದ ಚಟಗಳಂತೆ ಡ್ರಗ್ಸ್‌ ಚಟಕ್ಕೆ ಬಲಿಯಾಗುವವರನ್ನು ಈ ವ್ಯಸನದಿಂದ ಸುಲಭವಾಗಿ ಹೊರತರಲು ಆಗುವುದಿಲ್ಲ. ಇದಕ್ಕೆ ಮದ್ದೆಂದರೆ ಬಲಿಯಾಗದಿರುವುದು ಮಾತ್ರ. Precaution is better than Cure.

ಈ ಪೀಠಿಕೆ ಯಾಕೆ ಹಾಕಿದೆನೆಂದರೇ, ಇತ್ತೀಚಿಗೆ ನನ್ನ ಯೂಟ್ಯೂಬ್‌ ಚಾನೆಲ್ಲಿನ ಸಂದರ್ಶನಕ್ಕಾಗಿ ತುಮಕೂರಿನ ಹಿರಿಯರಾದ ಖ್ಯಾತ ವೈದ್ಯರಾದ ಡಾ. ಕೆ ರಾಜಶೇಖರ್‌ ಅವರನ್ನು ಭೇಟಿಯಾಗಿದ್ದೆ. ಸಾಹಿತಿಯೂ ಆಗಿರುವ ಅವರು ತಮ್ಮ ಎರಡು ಪುಸ್ತಕಗಳನ್ನು ನನಗೆ ನೀಡಿದರು. ಆ ಎರಡು ಪುಸ್ತಕಗಳಲ್ಲಿ ಒಂದಾದ  “ವೃತ್ತಿ ಜೀವನ: ತೆರೆದ ಮನ – ವೈದ್ಯವೃತ್ತಿ ಜೀವನದ ಅನುಭವ ಕಥನ” ಓದುವಾಗ ಹಲವು ಕುತೂಹಲಕರ ವಿಷಯಗಳು ನನ್ನ ಗಮನ ಸೆಳೆದವು. ಹಲವು ಅಧ್ಯಾಯಗಳಲ್ಲಿ ಡಾ. ರಾಜಶೇಖರ್‌ ಅವರ ಜೀವನ, ಅನುಭವಗಳು, ವಿಶ್ರಾಂತ ಜೀವನ ಅಕ್ಷರರೂಪದಲ್ಲಿ ಇಲ್ಲಿ ಹರಡಿಕೊಂಡಿವೆ. ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ 1975ರ ಇಸವಿಯ ಅವಧಿಯಲ್ಲಿ ಸೇವೆಸಲ್ಲಿಸುತ್ತಿದ್ದ ಡಾ. ಕೆ. ರಾಜಶೇಖರ್‌ ಅವರ ಬಳಿಗೆ ಸುಮಾರು 21 ವರ್ಷದ ಯುವಕನೊಬ್ಬ ಬಂದು, ಇವರ ಬಳಿ ಖಾಸಗಿಯಾಗಿ ಮಾತನಾಡಲು ಇಚ್ಛಿಸುತ್ತಾನೆ. ಇವರು ಒಪ್ಪಿದ ಬಳಿಕ ಜೇಬಿನಲ್ಲಿದ್ದ ವಸ್ತುವೊಂದನ್ನು ತೋರಿಸುತ್ತಾನೆ. ಅದನ್ನು ನೋಡಿದ ಇವರಿಗೆ ಅದು ಬ್ರೌನ್‌ ಶುಗರ್‌ ಎಂದು ತಿಳಿದು ಬಂದಿರುವ ರೋಗಿ ಡ್ರಗ್‌ ಅಡಿಕ್ಟ್‌ ಎಂದು ಗೊತ್ತಾಗುತ್ತದೆ. ತುಮಕೂರಿನ ಹೆಸರಾಂತ ಇಂಜೀನಿಯರಿಂಗ್‌ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿ ಇವನು ಎಂದು ಇವರಿಗೆ ತಿಳಿದು ಹುಡುಗನ ಪೋಷಕರಿಗೆ ವಿಷಯ ತಿಳಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಿಳಿಸುತ್ತಾರೆ. ಆದರೆ, ಒಂದು ವಾರದ ಬಳಿಕ ಆ ಹುಡುಗನ ಪರಿಸ್ಥಿತಿ ವಿಪರೀತಕ್ಕೆ ಹೋಗಿ ಅವನು ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಡಾ. ಕೆ. ರಾಜಶೇಖರ್‌ ಅವರು ಈ ಪುಸ್ತಕ ಬರೆಯವ ಹೊತ್ತಿಗೆ ಅಂದರೆ 2020ರ ಸಮಯದಲ್ಲೂ ತುಮಕೂರಿನಲ್ಲಿ ಡ್ರಗ್ಸ್‌ ವಿಚಾರ ಇತ್ತು ಅಂತಲೇ ಈ ನೆನಪನ್ನು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಂತಹ ಹಲವು ವಿಚಾರಗಳು ಈ ಪುಸ್ತಕದಲ್ಲಿರುವುದು ವಿಶೇಷ. ಈ ಪುಸ್ತಕವನ್ನು ತುಮಕೂರಿನ ಶಿಂಷಾ ಲಿಟರರಿ ಅಕಾಡೆಮಿ ಪ್ರಕಟಿಸಿದೆ.

ಇನ್ನು ಇತ್ತೀಚಿಗೆ ನಾಮಕರಣಗೊಂಡ ರಾಕಿಂಗ್‌ ಸ್ಟಾರ್‌ ಯಶ್‌ ಅವರ 19ನೇ ಸಿನಿಮಾ “ಟಾಕ್ಸಿಕ್”‌ ಕೂಡ ಡ್ರಗ್ಸ್‌ ಮಾಫಿಯಾ ಸುತ್ತಲೇ ಇದೆಯಂತೆ. ಸರ್ಕಾರಗಳು ಕಾನೂನುಗಳನ್ನು ಮಾಡುತ್ತವೆ. ಡ್ರಗ್ಸ್‌ ತಡೆಯೋಣ ಎಂದು ಜಾಹೀರಾತು ನೀಡುತ್ತವೆ. ಆದರೂ ಡ್ರಗ್ಸ್‌ ಹೊಸಹೊಸ ರೂಪದಲ್ಲಿ ಜನರಿಗೆ ಸಿಗುತ್ತಲೇ ಇರುತ್ತದೆ. ಅದರಲ್ಲೂ ಯುವಜನಾಂಗದವರು, ವಿದ್ಯಾರ್ಥಿಗಳು ಬಲಿಯಾಗುತ್ತಲೇ ಇದ್ದಾರೆ. ನಿಮ್ಮ ಮಕ್ಕಳ ಕೈಯಲ್ಲಿ ವಿಚಿತ್ರವಾದ ಚಾಕಲೇಟ್‌ ಅಥವಾ ಅಪರೂಪದ ತಿಂಡಿ-ತಿನಿಸುಗಳು ಓಡಾಡುತ್ತಿದ್ದರೆ ಒಮ್ಮೆ ಎಚ್ಚರಿಕೆಯಿಂದ ಗಮನಿಸಿ…

ಇನ್ನು ಡಾ. ಕೆ ರಾಜಶೇಖರ್‌ “ವೃತ್ತಿ ಜೀವನ: ತೆರೆದ ಮನ – ವೈದ್ಯವೃತ್ತಿ ಜೀವನದ ಅನುಭವ ಕಥನ” ಪುಸ್ತಕ ನಿಮಗೆ ಬೇಕಿದ್ದರೆ ಶಿಂಷಾ ಲಿಟರಲಿ ಅಕಾಡೆಮಿಯವರ ಮೊಬೈಲ್‌ 9845157308 ಸಂಪರ್ಕಿಸಬಹುದು.

 


"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...