ಸೋಮವಾರ, ಜುಲೈ 15, 2024

ವಿವೇಕಾನಂದರ ಏಕಾಗ್ರತೆ ನಿಮ್ಮದಾಗಲಿ

ವಿವೇಕಾನಂದರ ಏಕಾಗ್ರತೆ ನಿಮ್ಮದಾಗಲಿ


“ನಮ್ಮ ಯೋಜನೆ ಫಲಪ್ರದವಾಗಬೇಕಿದ್ದರೆ 

ಬಲು ಏಕಾಗ್ರತೆಯಿಂದ ನಿರಂತರವಾಗಿ ಗಮನವಿರಿಸಿ, 

ಸದಾ ಎಚ್ಚರದಿಂದ ಕೆಲಸ ಮಾಡಬೇಕು”

                - ಡಾ|| ಎ.ಪಿ.ಜೆ. ಅಬ್ದುಲ್ ಕಲಾಂ, ನಮ್ಮ ಮೆಚ್ಚಿನ ರಾಷ್ಟ್ರಪತಿಗಳು.



ಸ್ವಾಮಿ ವಿವೇಕಾನಂದರು ಅಮೇರಿಕಾಕ್ಕೆ ಹೋಗಿದ್ದಾಗ ಒಂದು ಸಂಜೆ ನದಿಯ ಮೇಲಿದ್ದ ಸೇತುವೆಯಲ್ಲಿದ್ದ ಹುಡುಗರು ನೀರಿನ ಮೇಲೆ ತೇಲುತ್ತಿದ್ದ ಶಂಖಗಳಿಗೆ ಪಿಸ್ತೂಲಿನಿಂದ ಶೂಟ್ ಮಾಡುತ್ತಿದ್ದನ್ನು ಗಮನಿಸಿದರು. ಆ ಶಂಖಗಳು ಮುಳುಗುತ್ತಾ ತೇಲುತ್ತಾ ಇದ್ದವು. ಈ ಹುಡುಗರಿಗೆ ಗುರಿಯಿಟ್ಟು ಒಂದು ಶಂಖಕ್ಕೂ ಹೊಡೆಯಲಾಗಲಿಲ್ಲ. 

ಸ್ವಾಮಿ ವಿವೇಕಾನಂದರು ಇವರನ್ನು ಗಮನಿಸುತ್ತಿದ್ದದ್ದನ್ನು ಅರಿತ ಹುಡುಗರು, “ನೀವು ನಮ್ಮನ್ನು ನೋಡುತ್ತಿದ್ದೀರಿ. ನೀವು ನಮಗಿಂತ ಚೆನ್ನಾಗಿ ಹೊಡೆೆಯಬಲ್ಲಿರಾ?” ಎಂದು ಕೇಳಿದರು.

ನಗುತ್ತಾ ಸ್ವಾಮಿ ವಿವೇಕಾನಂದರು, “ನಾನು ಪ್ರಯತ್ನಿಸುತ್ತೇನೆ” ಎಂದು ಹೇಳಿ ಆ ಪಿಸ್ತೂಲನ್ನು ತೆಗೆದುಕೊಂಡರು. ಆ ಪಿಸ್ತೂಲಿನಿಂದ ಶಂಖಗಳಿಗೆ ಗುರಿಯಿಟ್ಟು ಒಂದೆರಡು ಕ್ಷ್ಷಣಗಳ ಕಾಲ ತನ್ಮಯರಾಗಿ ನಿಂತರು. ನಂತರ ತಮ್ಮ ಪಿಸ್ತೂಲಿನಿಂದ ಗುಂಡನ್ನು ಹಾರಿಸಿದರು. ಸತತವಾಗಿ ಹನ್ನೆರೆಡು ಬಾರಿ ಒಂದೇ ಸಮನೆ ಅವರು ಹಾರಿಸಿದ ಗುಂಡುಗಳು ಶಂಖಗಳಿಗೆ ಬೀಳುವಂತೆ ಹೊಡೆದಿದ್ದರು. ಇದನ್ನು ನೋಡಿದ ಹುಡುಗರು ಆಶ್ಚರ್ಯಚಕಿತರಾದರು.

ಒಬ್ಬ ಮನುಷ್ಯ ಈ ರೀತಿ ಗುರಿಯಿಟ್ಟು ಹೊಡೆಯಬಹುದೆಂದು ಆ ಹುಡುಗರು ಕನಸಿನಲ್ಲಿಯೂ ಎಣಿಸಿರಲಿಲ್ಲ. ತುಸು ಯೋಚಿಸಿ “ಸ್ವಾಮಿ, ಈ ರೀತಿ ಗುರಿಯಿಡುವುದಕ್ಕೆ ನಿಮಗೆ ಹೇಗೆ ಸಾಧ್ಯವಾಯಿತು?” ಎಂದು ವಿನಮ್ರರಾಗಿ ಕೇಳಿದರು. 

ಸ್ವಾಮಿ ವಿವೇಕಾನಂದರು ಅವರೆಡೆಗೆ ಮುಗುಳ್ನಕ್ಕು, “ನೀವು ಏನನ್ನೇ ಮಾಡುತ್ತಿರಿ, ಅದರಲ್ಲೇ ನಿಮ್ಮ ಮನಸ್ಸನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಿ. ನೀವು ಪಿಸ್ತೂಲಿನಿಂದ ಗುರಿಯಿಡುವ ಆಟವಾಡುತ್ತಿದ್ದರೆ, ಗುರಿಯೆಡೆಗೆ ನಿಮ್ಮ ಪೂರ್ತಿ ಗಮನವಿರಬೇಕು. ನೀವು ಏನನ್ನಾದರು ಕಲಿಯುತ್ತಿದ್ದರೆ, ಆ ಕಲಿಯುವಿಕೆಯೆಡೆಗೆ ನಿಮ್ಮ ಮನಸ್ಸಿರಬೇಕು. ನಿಮ್ಮ ಏಕಾಗ್ರತೆ ಆ ಮಟ್ಟದಲ್ಲಿದ್ದಾಗ ಮಾತ್ರ ನೀವು ಏನನ್ನಾದರೂ ಗೆಲ್ಲಬಲ್ಲಿರಿ. ನಮ್ಮ ಭಾರತ ದೇಶದಲ್ಲಿ ನಾವು ಮಕ್ಕಳಿಗೆ ಇದನ್ನು ಹೇಳಿಕೊಡುತ್ತೇವೆ” ಎಂದು ಹೇಳಿದರು.

ನಾನು ನಿಮಗೆ ಇಲ್ಲಿ ಒಂದು ನೈಜ ಉದಾಹರಣೆಯನ್ನು ಕೊಡಲು ಇಚ್ಚಿಸುತ್ತೇನೆ. ನನ್ನ ಗೆಳೆಯರೊಬ್ಬರು ಅವರ ನೆಂಟರ ಮನೆಯ ಗೃಹಪ್ರವೇಶಕ್ಕೆ ಒಮ್ಮೆ ಹೋಗಿದ್ದರಂತೆ. ಮನೆಯನ್ನೆಲ್ಲಾ ನೋಡಿ, ಊಟ ಮಾಡಿ ಅಲ್ಲೆಲ್ಲಾ ಹುಡುಕಿದರೂ ಪಿ.ಯು.ಸಿ. ಓದುತ್ತಿದ್ದ ನೆಂಟರ ಮಗಳು ಕಾಣಲೇ ಇಲ್ಲವಂತೆ! ನೆಂಟರನ್ನು ವಿಚಾರಿಸಿದಾಗ ಅವಳು ಹತ್ತಿರದ ತೋಟದಮನೆಯಲ್ಲಿ ಇರುವಳೆಂದು ಹೇಳಿದರಂತೆ. ಸರಿ, ಇವರು ಅಲ್ಲಿ ಹೋಗಿ ನೋಡಿದ್ದಾರೆ. ಆಕೆ ಅಲ್ಲಿ ತನ್ನ ಪಾಡಿಗೆ ತಾನು ಓದುತ್ತಾ ಕುಳಿತ್ತಿದ್ದಳಂತೆ! ಏನಶ್ಚಾರ್ಯ!? ಏನಮ್ಮ, ನಿನ್ನ ತಂದೆ ತಾಯಿ ಕಟ್ಟಿರುವ ಮನೆಯ ಗೃಹಪ್ರವೇಶದಲ್ಲಿ ಖುಷಿಯಿಂದ ಓಡಾಡುವುದನ್ನು ಬಿಟ್ಟು ಇಲ್ಲಿ ಓದುತ್ತಾ ಕುಳಿತ್ತಿದ್ದೀಯಾ ಎಂದು ಕೇಳಿದರಂತೆ. ಅದಕ್ಕೆ ಆಕೆ, ಅಣ್ಣಾ, ಈ ಮನೆ ನನ್ನ ಅಪ್ಪ ಅಮ್ಮ ಕಟ್ಟಿರುವುದು. ಅವರು ಸಂಭ್ರಮಿಸಲಿ. ನಾನು ಚೆನ್ನಾಗಿ ಓದಿ, ಒಳ್ಳೆಯ ಕೆಲಸಕ್ಕೆ ಸೇರಿ ಮನೆ ಕಟ್ಟುತ್ತೇನೆ. ಆಗ ಎಲ್ಲರನ್ನೂ ಕರೆದು ಸಂಭ್ರಮಿಸುತ್ತೇನೆ ಎಂದು ಹೇಳಿದಳಂತೆ. ಅಪ್ಪ ಅಮ್ಮ ಕಟ್ಟಿರುವ ಮನೆಯ ಗೃಹಪ್ರವೇಶದ ಸಂಭ್ರಮವಿದ್ದರೂ ತನ್ನ ಓದಿನಲ್ಲಿ ಏಕಾಗ್ರತೆಯಿಂದ ತೊಡಗಿಕೊಂಡ ಆಕೆಯನ್ನು ನಾವು ಮೆಚ್ಚಲೇಬೇಕಲ್ಲವೇ? ಅಂದಹಾಗೆ ಆಕೆ ಇವತ್ತು ಪ್ರತಿಷ್ಟಿತ ಐಬಿಎಂ ಉದ್ಯೋಗಿ. ಲಕ್ಷಾಂತರ ಸಂಬಳ ಪಡೆಯುತ್ತಾಳೆ. ಬೆಂಗಳೂರಿನಲ್ಲಿ ಸ್ವಂತ ಅಪಾರ್ಟ್ಮೆಂಟ್ ಹೊಂದಿದ್ದಾಳೆ. ಮತ್ತು ಇಂದು ಗಂಡ ಮಗುವಿನೊಂದಿಗೆ ಸುಖಸಂಸಾರ ಆಕೆಯದು. ಎಂತಹ ಏಕಾಗ್ರತೆ ಆಕೆಯದಲ್ಲವೇ?




ನೀವು ಏನನ್ನೇ ಮಾಡುತ್ತಿರಿ, ಆ ಕೆಲಸದಲ್ಲಿ ಯಶಸ್ವಿಯಾಗಲು ಏಕಾಗ್ರತೆ ತುಂಬಾ ಮುಖ್ಯ. ಏಕಾಗ್ರತೆ ಇಲ್ಲದೆ ನೀವು ನಿಮ್ಮ ಕೆಲಸವನ್ನು ಸಂಪೂರ್ಣವಾಗಿ ಮುಗಿಸಲಾರಿರಿ. ಮನುಷ್ಯನ ಮನಸ್ಸು ಏನೇ ಮಾಡಿದರೂ ಒಂದು ಕೆಲಸದಲ್ಲಿ ಶೇ. ೧೦ರಷ್ಟು ಮಾತ್ರ ತೊಡಗಿಕೊಳ್ಳಬಲ್ಲದಂತೆ. ಉಳಿದ ಶೇ. ೯೦ರಷ್ಟು ಮನಸ್ಸು ಎಲ್ಲೆಲ್ಲೋ ಹರಿದಾಡಿ ಹೋಗುತ್ತದಂತೆ. ಅಂತಹ ಶೇ. ೧೦ರಷ್ಟು ಮನಸ್ಸನ್ನು ಏಕಾಗ್ರತೆಗೊಳಿಸಿ ಕೆಲಸ ಮಾಡಿ ಅದೆಷ್ಟೋ ಸಾಧನೆಗಳು ಆಗಿರುವಾಗ, ಇನ್ನೂ ಹೆಚ್ಚು ಶೇಕಡಾ ಮನಸ್ಸನ್ನು ಏಕಾಗ್ರತೆಯಿಂದ ಒಂದೇ ಕಡೆ ಇಟ್ಟು ಕೆಲಸ ಮಾಡಿದರೆ ಎಂಥಹ ಅದ್ಭುತವನ್ನಾದರೂ ಸಾಧಿಸಿ ಬಿಡಬಹುದು. 

ಸೂರ‍್ಯನ ಚೆದುರಿದ ಕಿರಣಗಳನ್ನು ಭೂತಗನ್ನಡಿಯ ಮೂಲಕ ಒಂದೇ ಕಡೆ ಕೇಂದ್ರಿಕರಿಸಿದರೆ ಅದು ಏನನ್ನಾದರು ಸುಡುವ ಬೆಂಕಿಯೇ ಆಗಿಬಿಡುತ್ತದೆ. ಅದೇ ರೀತಿ ನಮ್ಮ ಮನಸ್ಸನ್ನು ಒಂದೇ ಕಡೆ ಕೇಂದ್ರಿಕರಿಸಿ ದೊರೆಯುವ ಏಕಾಗ್ರತೆಯಿಂದ ನಾವು ಏನಾನ್ನಾದರೂ ಸಾಧಿಸಿ ಬಿಡಬಹುದು. ನಮ್ಮ ಗುರಿಯನ್ನು ಬೇಗ ಮುಟ್ಟಬಹುದು.  



ಅದಕ್ಕೇ ಹೇಳಿದ್ದು ವಿವೇಕಾನಂದರ ಏಕಾಗ್ರತೆ ನಿಮ್ಮದಾಗಲಿ ಎಂದು.

- ಗುಬ್ಬಚ್ಚಿ ಸತೀಶ್.

***


1 ಕಾಮೆಂಟ್‌:

ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ. ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವ...