ಶುಕ್ರವಾರ, ಫೆಬ್ರವರಿ 21, 2014

ಶ್ರುತಿ ಪುಸ್ತಕದ ಮುನ್ನುಡಿ ಮತ್ತು ಬೆನ್ನುಡಿ


 ಸಾವು ಗೆದ್ದವಳಿಗೊಂದು ಸಲಾಮ್

ವಿಷ್ಣುಪ್ರಿಯ ಎಂಬ ಕಾವ್ಯನಾಮದಲ್ಲಿ ನಾನು ಬರೆಯುತ್ತಿದ್ದ ವೈeನಿಕ ಲೇಖನಗಳನ್ನು ವಿಜ್ಞಾನಗಂಗೆ ಬ್ಲಾಗ್ನಲ್ಲಿ (vijnanagange.blogspot.com) ಅಪ್ಡೇಟ್ ಮಾಡುತ್ತಿದ್ದೆ. ಲೇಖನಗಳಿಗೆ ಪ್ರತಿಕ್ರಿಯೆ ಕೊಟ್ಟವರು ಬ್ಲಾಗಿಗರಾಗಿದ್ದರೆ, ಅವರ ಬ್ಲಾಗುಗಳನ್ನೂ ಓದುವ ಅಭ್ಯಾಸ ಬೆಳೆಸಿಕೊಂಡಿದ್ದರ ಪರಿಣಾಮ ಶೃತಿಯ ಶ್ರೀವಿರಾಮ (shreevirama.blogspot.in) ಬ್ಲಾಗ್ ಕಣ್ಣಿಗೆ ಬಿತ್ತು. ಸುಮ್ಮನೆ ಕಣ್ಣಾಡಿಸಿದಾಗ, ಓದಬೇಕೆನಿಸಿತು. ಓದುತ್ತಾ ಹೋದಂತೆ, ಬರಹಗಳಲ್ಲೊಂದು ಪ್ರತಿಭೆಯಿದೆ ಎನಿಸಿ, ಬ್ಲಾಗಿಗರ ಪ್ರೊಫೈಲ್ ನೋಡಿದೆ. ಆಸ್ಟಿಯೋ ಸರ್ಕೋಮಾ ಎಂಬ ಮಾಹಾಮಾರಿಯನ್ನು ಗೆದ್ದಿzನೆ ಎಂಬ ದಿಟ್ಟೆದೆಯ ಸಂದೇಶ ರಾರಾಜಿಸುತ್ತಿತ್ತು. ಬೆಚ್ಚಿಬಿದ್ದೆ, ಅರೆP ಅಷ್ಟೇ! ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಎಂಥಾ ದೃಢ ಮನೋಭಾವ! ಒಮ್ಮೆ ಮಾತಾಡಿಸಬೇಕು ಎನಿಸಿತು. ಅಳುಕಿನಿಂದಲೇ ಮಾತನಾಡಿಸಿದಾಗ ಉತ್ತರಿಸಿದ್ದು ಧೈರ್ಯದ ಶರಧಿ!
ಸ್ವಾನುಭವದ ಬುತ್ತಿಯನ್ನು ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ ಕೃತಿಯ ಮೂಲಕ ಬಿಚ್ಚಿಡುತ್ತಿರುವ ಶೃತಿಯ ಧೈರ್ಯದ ಬಗ್ಗೆ ಇಷ್ಟು ಹೇಳಲೇಬೇಕಾದದ್ದು ಅನಿವಾರ್ಯ. ಒಂದು ಸಮಸ್ಯೆ ಅಥವಾ ರೋಗವನ್ನು ಎದುರಿಸುವಲ್ಲಿ ಎಷ್ಟರಮಟ್ಟಿಗಿನ ಧೈರ್ಯ ಪ್ರದರ್ಶಿಸುತ್ತೇವೆಯೋ ಅಷ್ಟೇ ಧೈರ್ಯ, ನಾವು ಎದುರಿಸಿದ ಸವಾಲುಗಳನ್ನು ಕೃತಿಯ ರೂಪಕ್ಕೆ ಇಳಿಸುವಾಗಲೂ ಇರಬೇಕಾಗುತ್ತದೆ. ಧೈರ್ಯ ಶೃತಿಯ ಬರವಣಿಗೆಯಲ್ಲಿ ಎದ್ದು ಕಾಣುತ್ತದೆ. ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳು, ಘಟಿಸುವ ಘಟನೆಗಳು, ನಿರ್ಧಾರ ತೆಗೆದುಕೊಳ್ಳಲಾಗದೇ ಶುಷ್ಕ ಸ್ಥಿತಿಗೆ ಜಾರುವ ಮನಸು... ಎಲ್ಲವೂ ಅನುಭವಗಳ ಸಾಕ್ಷಾತ್ಕಾರದ ಒಂದೊಂದೇ ಮೆಟ್ಟಿಲುಗಳೆಂದು ಭಾವಿಸುವವರಿಗೆ ಬದುಕು ಯಾವತ್ತೂ ಹೂವಿನ ಹಾಸಿಗೆಯೇ!
ಮುಂದೆ...? ಎಂದು ಅಪ್ಪನನ್ನು ನೋಡಿದೆ... ಅದ್ಯಾವ ಧೈರ್ಯ ನನ್ನನ್ನಾವರಿಸಿಕೊಂಡಿತ್ತೋ ಗೊತ್ತಿರಲಿಲ್ಲ. ಮುಂದಿನದಕ್ಕೆ ಸಿದ್ಧವಾಗಿz. ಯಾಕೆಂದರೆ ಅಷ್ಟೊತ್ತಿಗಾಗಲೇ ನಾನು ಒಂದನ್ನಂತೂ ಅರಿತಿz. ದೈಹಿಕವಾಗಿ ನೋವು ನನ್ನೊಬ್ಬಳಿಗೇ ಬಂದಿದ್ದರೂ, ಮಾನಸಿಕವಾಗಿ ನನ್ನ ಕುಟುಂಬದವರೆಲ್ಲರಿಗೂ ನೋವು ಕಾಡುವುದರಲ್ಲಿತ್ತು! ಹಾಗಾಗಿ ಸಮಯದಲ್ಲಿ ನಾನು ಗಟ್ಟಿಗೊಂಡಷ್ಟೂ ನನ್ನ ಕುಟುಂಬ ಗಟ್ಟಿಗೊಳ್ಳಲು ಸಾಧ್ಯ ಎಂದು ಭಾವಿಸಿದೆ... ಎಂಬ ಶೃತಿಯ ಮಾತಿನಲ್ಲೇ ಆಕೆಯ ಗಟ್ಟಿತನ ಎದ್ದು ಕಾಣುತ್ತದೆ. ಸಾವು ಕಣ್ಣಮುಂದೆಯೇ ರುದ್ರನರ್ತನ ಮಾಡುತ್ತಿದ್ದರೂ ಅದು ಸುಂದರ ನಾಟ್ಯವೆಂದು ಭಾವಿಸುವುದಿದೆಯಲ್ಲ... ಸಾಧನೆಯ ಸೋಪಾನಕ್ಕೆ ಇದಕ್ಕಿಂತ ದೊಡ್ಡ ಮುನ್ನುಡಿ ಬೇರಿಲ್ಲ.
ಹೃದಯವೊಂದರಿನಲ್ತು, ಮೇಧೆಯೊಂದರಿನಲ್ತು, ವಿಧಿತವಪ್ಪುದು ನಿನಗೆ ತಾರಕದ ತತ್ತ್ವಂ; ಹದದಿನಾ ಸಾಧನೆಗಳೆರಡುಮೊಂದಾಗೆ ಬೆಳಕುದಿಸುವುದು ನಿನ್ನೊಳಗೆ ಮರುಳಮುನಿಯ ಎಂಬ ಡಿ.ವಿ.ಜಿ.ಯವರ ಕಗ್ಗದ ಸಾಲುಗಳಲ್ಲಿ ಅಡಗಿರುವ ಗೂಢಾರ್ಥವೂ ಇದೇ.
ಆರೋಗ್ಯಕ್ಕೂ ಮನಸ್ಸಿಗೂ ಅವಿನಾಭಾವ ನಂಟು. ಮನಸ್ಸು ಸಂತೋಷದಿಂದ ಇದ್ದಷ್ಟೂ ಆರೋಗ್ಯ ಚೆನ್ನಾಗಿರುತ್ತದೆ. ಇದರ ತದ್ವಿರುದ್ಧವೂ ಅಷ್ಟೇ! ಆರೋಗ್ಯ ಹದಗೆಟ್ಟಿದ್ದಾಗ ಮನಸ್ಸು ಡೋಲಾಯಮಾನವಾಗುತ್ತದೆ. ಪಾಪಪ್ರಜ್ಞೆ ಅಧ್ಯಾಯದಲ್ಲಿ ಅದನ್ನು ಸುಂದರವಾಗಿ ವಿವರಿಸಿದ್ದಾರೆ ಶೃತಿ.    ವಾರಗಳ ದೈಹಿಕ ಹಿಂಸೆ ನನ್ನನ್ನು ಇದರ ಬಗ್ಗೆ ಯೋಚಿಸುವಂತೆ ಮಾಡಿತು. ಹಾಗಾದರೆ ನನ್ನ ನೋವುಗಳಿಗೆ ನನ್ನ ಹಿಂದಿನ ಜನ್ಮದ ಕರ್ಮಗಳು ಕಾರಣವೇ ಎಂಬ ಪ್ರಶ್ನೆ ಕಾಡಲಾರಂಭಿಸಿತು. ಇಂದು ಒಂದು ತುತ್ತು ಅನ್ನ ತಿನ್ನಲು ಇಷ್ಟು ಕಷ್ಟವಾಗುತ್ತಿದೆ ಎಂದರೆ ನಾನು ಯಾರದ್ದಾದರೂ ಅನ್ನ ಕಸಿದಿದ್ದೆನೇ? ಎಂಬ ಪಾಪಪ್ರಜ್ಞೆ ನನ್ನನ್ನು ಕಾಡಲಾರಂಭಿಸಿತು. ಎಲ್ಲಾ ವಿಚಾರಗಳು ನನ್ನ ಮನಸ್ಸನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದವು, ತಲೆ ಚಿಟ್ಟು ಹಿಡಿದುಹೋಗುತ್ತಿತ್ತು. ಇಷ್ಟು ದಿನ ನನ್ನನ್ನು ಕಾಪಾಡುತ್ತಿದ್ದ ನನ್ನ ಧೈರ್ಯವೆಲ್ಲಾ ಪಾಪಪ್ರಜ್ಞೆಯಲ್ಲಿ ಕೊಚ್ಚಿಹೋದಂತೆ ಭಾಸವಾಗುತ್ತಿತ್ತು ಎಂಬ ಸಾಲುಗಳು ಮನುಷ್ಯ ಸ್ವಭಾವಕ್ಕೆ ಹಿಡಿದ ಕನ್ನಡಿ.
ಹಿಂದಿನ ಜನ್ಮ, ಮುಂದಿನ ಜನ್ಮ ಇದೆಯೋ ಇಲ್ಲವೋ ಸರಿಯಾಗಿ ಗೊತ್ತಿಲ್ಲ. ಇದ್ದರೂ ಹೇಗೂ ಅದೆಲ್ಲಾ ನೆನಪಿರುವುದಿಲ್ಲ. ಮತ್ತೆ ದುಃಖ ಯಾಕೆ...? ಯಾವ ಪಾಪದ ಅರಿವೂ ಇಲ್ಲದ ಮೇಲೆ ಏನು ಪಾಪ ಮಾಡಿದ್ದೆನೋ ಏನೋ ಎಂದು ಕಣ್ಣೀರು ಹಾಕಿ ಏನು ಪ್ರಯೋಜನ...? ಎಂಬ ಸಾಲುಗಳು ಪ್ರಬುದ್ಧ ಚಿಂತನೆಯ ಕುರುಹುಗಳಾಗಿವೆ.
ಏನು ತಿಂದರೂ ವಾಂತಿಯಾಗುವ ಸನ್ನಿವೇಶಕ್ಕೆ ಶೃತಿ ಕೊಟ್ಟ ಉಪಮೆ ನೋಡಿ : ಹೊಟ್ಟೆಗೆ ಏನೇ ತೆಗೆದುಕೊಂಡರೂ ವಾಂತಿಯಾಗುತ್ತಿತ್ತು. ಅದೂ ಕೂಡಾ ಹೊಟ್ಟೆ ಒಳಗೆ ಹೋಗುತ್ತಿದ್ದಂತೆ ಹೊರ ಬರುತ್ತಿತ್ತು. ಹನುಮಂತ ಸುರಮೆಯ ಹೊಟ್ಟೆಯೊಳಗೆ ಹೋಗಿ ಬಂದಂತೆ...!
ಮನುಷ್ಯ ಅಸಹಾಯಕನಾದಾಗ ಅದೆಂಥ ಭೀತಿ ನಮ್ಮೊಳಗೆ ಮೂಡುತ್ತದೆ ಎಂಬುದನ್ನು ಬಹಳಷ್ಟು ಜನ ಕೇಳಿರುತ್ತಾರೆ. ಅಂಥ ಸ್ಥಿತಿಯನ್ನು ಸ್ವತಃ ಅನುಭವಿಸಿದಾಗ ಏನಾಗುತ್ತದೆ ಎಂಬುದನ್ನು ಶೃತಿಯ ಪದಗಳಲ್ಲೇ ಓದಿ : ಮುಂಜಾನೆ ಡ್ರಿಪ್ ಖಾಲಿಯಾಗುತ್ತಾ ಬಂದಿತ್ತು, ನರ್ಸನ್ನು ಕರೆಯಲು ಅಮ್ಮ ರೂಮಿನಿಂದ ಹೊರ ಹೋದರು. ಕೋಣೆಯಲ್ಲಿ ನಾನೊಬ್ಬಳೇ ಇದ್ದೆ. ಇದ್ದಕ್ಕಿದ್ದಂತೆ ವಿಚಿತ್ರವಾದ ಭಯ ನನ್ನನ್ನಾವರಿಸಲಾರಂಭಿಸಿತು. ಹಿಂದೆಂದೂ ನನಗೆ ರೀತಿಯ ಭಯವಾಗಿರಲಿಲ್ಲ. ಏನೋ ಭಯಂಕರವಾದುದು ನನ್ನನ್ನು ಸುತ್ತುವರಿಯುತ್ತಿದೆಯೇನೋ ಎಂಬಂತೆ ಭಾಸವಾಗತೊಡಗಿತು. ಇನ್ನೊಂದು ಕ್ಷಣ ಕಳೆದರೂ ಏನಾಗುತ್ತದೆಯೋ ಎನಿಸಿ, ಜೋರಾಗಿ ಕಿರುಚತೊಡಗಿದೆ. ನಾನು ಎಷ್ಟು ಜೋರಾಗಿ ಕಿರುಚಿದ್ದೆನೆಂದರೆ ಅಮ್ಮ, ನರ್ಸ್ ಮಾತ್ರವಲ್ಲದೇ ಅಕ್ಕ-ಪಕ್ಕದ ವಾರ್ಡಿನವರೂ ಓಡಿ ಬಂದಿದ್ದರು. ನಾನು ಒಂದೇ ಸಮನೆ ನನಗೆ ಭಯವಾಗುತ್ತಿದೆ ಎಂದು ಬಡಬಡಿಸುತ್ತಿದ್ದೆ.
       ಸಾವು ನನ್ನ ಪಕ್ಕದ ವಾರ್ಡ್ನಲ್ಲೇ ಇದೆ ಎಂಬ ಮಾತುಗಳಲ್ಲಿ ಜೀವನದ ಸತ್ಯವಿದೆ. ಹುಟ್ಟಿದ ಜೀವಿ ಸಾಯಲೇಬೇಕು. ಪಕ್ಕದ ವಾರ್ಡ್ನಲ್ಲಿದ್ದ ರೋಗಿ ಸತ್ತ ವಿಚಾರ ತಿಳಿದಾಗ ಮತ್ತೊಬ್ಬ ರೋಗಿಯ ಮನಸಲ್ಲಿ ಇಂಥ ಭಾವನೆ ಬರುವುದು ಸಹಜ. ಆದರೆ ಪಕ್ಕದ ವಾರ್ಡ್ನಿಂದ ತನ್ನ ವಾರ್ಡ್ಗೆ ಸದಕ್ಕೆ ಸಾವು ಬರುವುದಿಲ್ಲ ಎಂದು ಭಾವಿಸುವುದು ಭರವಸೆಯ ಬೆಳಕು. ಶ್ರಮ, ಸಾಧನೆಯಿಂದ ಏನನ್ನಾದರೂ ಸಾಧಿಸಬಹುದು. ಆತ್ಮವಿಶ್ವಾಸ ನಮ್ಮ ಬಲವನ್ನು ಹೇಗೆ ನೂರ್ಮಡಿಸುತ್ತದೆ ಎಂಬುದನ್ನು ಆತ್ಮವಿಶ್ವಾಸಕ್ಕೆ ಕನ್ನಡಿ ಹಿಡಿದಾಗ ಅಧ್ಯಾಯದಲ್ಲಿ ವಿವರಿಸುವುದಕ್ಕೆ ಯಶಸ್ವಿಯಾಗಿದ್ದಾರೆ ಶೃತಿ.
       ತನ್ನ ಜೀವನಗಾಥೆಯನ್ನು ಬರೆಯುವುದರ ಜತೆಜತೆಗೆ ಸಾಂದರ್ಭಿಕ ಸನ್ನಿವೇಶಗಳನ್ನು, ನುಡಿಗಟ್ಟುಗಳನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿಯೂ ಶೃತಿ ಯಶಸ್ವಿಯಾಗಿದ್ದಾರೆ.
ಶೃತಿಯೊಳಗೊಬ್ಬ ಸಾಹಿತಿಯಿದ್ದಾಳೆ. ಆಕೆಯ ಬರವಣಿಗೆಯಲ್ಲಿ ಲಾಲಿತ್ಯವಿದೆ. ಕಥಾಹಂದರವನ್ನು ಸುಂದರವಾಗಿ ಕಟ್ಟಿಕೊಡುವ ಚಾಕಚಕ್ಯತೆಯಿದೆ. ಭಾಷೆಯಲ್ಲಿ ಶುದ್ಧತೆಯಿದೆ. ಆದರೆ ಪದಪುಂಜಗಳನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾಗಿದೆ.
ಮಗು ಹುಟ್ಟಿದ ತಕ್ಷಣ ಎಲ್ಲವನ್ನೂ ಕಲಿತುಕೊಂಡೇ ಬರುವುದಿಲ್ಲ. ಹಾಗೆಯೇ ಬರಹಗಾರನೊಬ್ಬನ ಬರವಣಿಗೆ ಗಟ್ಟಿಯಾಗಬೇಕಾದರೆ ಹಲವಾರು ವರ್ಷಗಳ ಕೃಷಿ ಬೇಕು. ವಿಭಿನ್ನ ಪ್ರಾಕಾರಗಳ ಅಧ್ಯಯನ ಮಾಡಿದಷ್ಟೂ ಬರವಣಿಗೆ ಬಿಗುವಾಗುತ್ತದೆ. ಇದರಿಂದ ಪರಿಪೂರ್ಣತೆಯ ಕಡೆಗೆ ಹೆಜ್ಜೆ ಹಾಕುವುದು ಸಾಧ್ಯವಾದೀತು. ನಿರೂಪಣೆ ಗಟ್ಟಿಯಾದಷ್ಟೂ ಬರವಣಿಗೆ ನಳನಳಿಸುತ್ತದೆ. ಪ್ರಯೋಗಿಸಿದ ಪದಗಳು ಅನವಶ್ಯಕ ಎಂದೆನಿಸಬಾರದು. ಅದರ ಕಡೆಗೆ ಶೃತಿ ಗಮನಹರಿಸಲೇಬೇಕು.
ಬರವಣಿಗೆಯೊಂದು ತಪಸ್ಸು, ಮನಸ್ಸು, ಬುದ್ಧಿಗಳೊಂದಾಗಿ ಛಲದಿಂದ ರೂಢಿಸಿಕೊಂಡರಷ್ಟೇ ಸಿದ್ಧಿಸುತ್ತದೆ. ಕೃಷಿ ಕುಟುಂಬದಿಂದ ಬಂದ ಶೃತಿಯ ಸಾಹಿತ್ಯದ ಕೃಷಿ ಉತ್ತುಂಗವನ್ನು ತಲುಪಲಿ. ಬಾಳ ವೀಣೆಯಲ್ಲಿ ಶ್ರಮವೆಂಬ ತಂತಿಯನ್ನು ಮೀಟಿ ಸಾಧನೆಯ ಶೃತಿಯನ್ನು ಮಿಡಿಸಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ.

                             ಪ್ರಕಾಶ್ ಪಯಣಿಗ (ವಿಷ್ಣುಪ್ರಿಯ), ಬೆಂಗಳೂರು.


ಬೆನ್ನುಡಿ

          ರೆಕ್ಕೆ ಬಿಚ್ಚಿ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಸಮಯದಲ್ಲಿ, ಬೇಡನ ಬಾಣ ತಗುಲಿ ಜೀವನ್ಮರಣದ ಹೋರಾಟದಲ್ಲಿ ಸಿಲುಕಿದರೂ, ಆತ್ಮವಿಶ್ವಾಸದಿಂದ, ಹಲವು ಅಮೃತ ಹಸ್ತಗಳ ಪ್ರೀತಿಯ ಶುಶ್ರೂಷೆ, ಹರಕೆ-ಹಾರೈಕೆಗಳಿಂದ ಮತ್ತೆ ಬಾನಿಗೆ ಹಾರುವ ಹಕ್ಕಿಯ ಕಥೆಯಂತೆ ಈ ಪುಸ್ತಕದ ಲೇಖಕಿಯ ಜೀವನಗಾಥೆ. ಕ್ಯಾನ್ಸರ್ ಎಂಬ ವ್ಯಾಘ್ರನನ್ನು ತನ್ನ ಛಲದಿಂದ ಎದುರಿಸಿ ಹಿಮ್ಮೆಟ್ಟಿದ ಪುಣ್ಯಕೋಟಿಯ ಕಥೆಯೂ ಹೌದು.

          ನಾನು ವೈಯಕ್ತಿಕವಾಗಿ ಕ್ಯಾನ್ಸರನ್ನು ಈಗಾಗಲೇ ಎರಡು ಬಾರಿ ಎದುರಿಸಿದವನು. ಕ್ಯಾನ್ಸರ್ ಪೀಡಿತರ ನೋವುಗಳು ಇತರರಿಗಿಂತ ಚೆನ್ನಾಗಿ ನನಗೆ ಅರ್ಥವಾಗುತ್ತವೆ ಎಂದುಕೊಂಡರೂ ಅವರವರ ನೋವುಗಳು ಅವರವರಿಗಿರುತ್ತವೆ. ಅದನ್ನು ಇನ್ನೊಬ್ಬರು ಅನುಭವಿಸುವುದು ಸಾಧ್ಯವಿಲ್ಲ. ಆದರೆ, ಇಲ್ಲಿ,   ಶೃತಿಯ ಪುಸ್ತಕವನ್ನು ನಮ್ಮ ಗೋಮಿನಿ ಪ್ರಕಾಶನದಲ್ಲಿ ಪ್ರಕಟಿಸಲು ಎಡಿಟ್ ಮಾಡುವುದಕೋಸ್ಕರ ಮತ್ತೆ ಮತ್ತೆ ಓದುವಾಗ ಆಕೆಯ ನೋವನ್ನು ಕಲ್ಪಿಸಿಕೊಳ್ಳಬಲ್ಲ ನನ್ನ ಮನಸ್ಸು ಅಕ್ಷರಶಃ ಅತ್ತಿದೆ.         ಜೊತೆ ಜೊತೆಗೆಯೇ, ಆಕೆಯ ಆತ್ಮವಿಶ್ವಾಸಕ್ಕೆ ತಲೆದೂಗಿದೆ, ಸೆನ್ಸ್ ಆಫ್ ಹ್ಯೂಮರ್‌ಗೆ ಹೊಟ್ಟೆ ಹುಣ್ಣಾಗುವಂತೆ ನಕ್ಕಿದೆ, ಅಕ್ಷರಗಳ ಮೂಲಕ ನೀಡುವ ಜ್ಞಾನಕ್ಕೆ ‘ಯೆಸ್ ಮೇಡಮ್’ ಎಂದಿದೆ, ವೈಚಾರಿಕತೆಯ ಮತ್ತು ವಿಶ್ವಮಾನವತೆಯ ದೃಷ್ಟಿಕೋನಕ್ಕೆ ಶಭಾಷ್ ಎಂದಿದೆ, ನಲಿವಿಗೆ ನಲಿದಿದೆ.

          ಅದಕ್ಕೇ..., ಶೃತಿ ಇತ್ತೀಚಿನ ನನ್ನ ಭಾಷಣಗಳಲ್ಲಿ ಹೆಲನ್ ಕೆಲರಳಷ್ಟೇ ಪ್ರಮುಖವಾಗಿ ಬಂದು ಹೋಗುತ್ತಾಳೆ. ಟಿ.ವಿ. ರಿಮೋಟ್ ಕೊಡಲಿಲ್ಲ, ಫೇಸ್‌ಬುಕ್ ನೋಡಲು ಬಿಡಲಿಲ್ಲ, ಜೀವಕ್ಕಿಂಥ ಪ್ರೀತಿಯೇ ಮುಖ್ಯ, ಅಯ್ಯೋ ಫೇಲಾದೆನಲ್ಲ ಎನ್ನುವ ಕ್ಷುಲ್ಲಕ ಕಾರಣಗಳಿಗೆ ಸಾವಿನ ಕದ ತಾವೇ ತಟ್ಟಿಕೊಂಡು, ನೆಚ್ಚಿಕೊಂಡವರನ್ನು ಅನಾಥರನ್ನಾಗಿಸುವ ಹದಿಹರೆಯದವರ ನಡುವೆ ಶೃತಿ ದೀಪಾವಳಿಯ ಹಣತೆಯಂತೆ ಬೆಳಗುತ್ತಾಳೆ. ತನ್ನವರ ಮುಖದಲ್ಲಿ ಮಂದಹಾಸ ಮೂಡಿಸುತ್ತಾಳೆ. ಈಕೆಯ ಬದುಕು-ಬರಹ ಸಂಜೀವಿನಿಯಂತಹದು. ನೊಂದ ಮನಸ್ಸಿಗಷ್ಟೇ ಅಲ್ಲದೆ, ಈಕೆ ಎಲ್ಲಾ ವಯೋಮಾನದವರಿಗೂ ಪ್ರೇರಣೆಯಾಗಬಲ್ಲಳು, ಮಾದರಿಯಾಗಬಲ್ಲಳು. ಆ ಭರವಸೆ ನನಗಿದೆ.

-        ಗುಬ್ಬಚ್ಚಿ ಸತೀಶ್.

2 ಕಾಮೆಂಟ್‌ಗಳು:

  1. nimma e barahavannu odi nanna manassu kooda attittu.. nanaguu aa pushtaka bekittu.. elli sigabahudu? tilisuvira?

    ಪ್ರತ್ಯುತ್ತರಅಳಿಸಿ
  2. ಸಾಹಿತ್ಯವನ್ನು ಓದುವ ಘೀಳಿರುವ ನನಗೆ ಮೊನ್ನೆ ಮೊನ್ನೆಯಷ್ಟೆ ನನ್ನ ಗೆಳೆಯ "ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ" ಎಂಬ ಹೊತ್ತಿಗೆಯೊಂದನ್ನು ನನ್ನ ಕೈಗಿತ್ತು ಓದಿ ಅಭಿಪ್ರಾಯ ತಿಳಿಸು ಎಂದಿದ್ದರಿಂದ ಆ ಹೊತ್ತಿಗೆಯನ್ನು ಓದಿ, ವಿಮರ್ಶಿಸುತ್ತಾ ಹೋದೆ.
    ಲೇಖಕಿ ಶ್ರುತಿ ಚಿಕ್ಕ ವಯಸ್ಸಿನಲ್ಲಿಯೇ ಈ ಕೃತಿ ಬರೆದರೂ, ಚೊಕ್ಕದಾಗಿ ಬರೆದಿದ್ದಾರೆ. ಮನುಷ್ಯನ ಭಾವನಾತ್ಮಕ ಅಭಿವ್ಯಕ್ತಿಯೇ ಸಾಹಿತ್ಯ ಎಂಬಂತೆ ಭಾವನೆಗಳನ್ನು ಬರಹದಲ್ಲಿ ಮೂಡಿಸುವಲ್ಲಿ, ಜೀವನಾನುಭವವನ್ನು ಅಕ್ಷರಗಳಲ್ಲಿ ತದ್ರೂಪಿಯಾಗಿ ಇಳಿಸುವಲ್ಲಿ ಶ್ರುತಿ ಸಫಲರಾಗಿದ್ದಾರೆ.
    ಅವರ ಸಾಹಿತ್ಯ ಲೋಕದಲ್ಲಿ ಉತ್ತುಂಗಕ್ಕೇರಲಿ ಎಂಬ ಆಶಯದೊಂದಿಗೆ..‌.
    - ನಾಸಿ. ಚೊಕ್ಕೋಡ್

    ಪ್ರತ್ಯುತ್ತರಅಳಿಸಿ

ಎಲ್ಲರೂ ಪುಸ್ತಕ ಪ್ರಕಾಶನದ ಬಗ್ಗೆ ಮಾತನಾಡ್ತಾರೆ...! ಆದರೆ...?

 ಸ್ನೇಹಿತರೇ, ನಮಸ್ಕಾರ. ನನ್ನ ಹಿಂದಿನ ಪೋಸ್ಟ್‌ ನಿಮ್ಮ ಉಪಯೋಗಕ್ಕೆ ಬಂತು ಅಂತ ಭಾವಿಸುತ್ತಾ ಈ ಪೋಸ್ಟ್‌ ಬರೆಯುತ್ತಿದ್ದೇನೆ. ನೀವಿನ್ನು ನನ್ನ ಹಿಂದಿನ ಪೋಸ್ಟ್‌ ಓದಿಲ್ಲವ...