‘ಭಾರತದಲ್ಲಿ ಪ್ರತಿ ೨೦ ನಿಮಿಷಕ್ಕೆ ಒಂದು ಅತ್ಯಾಚಾರವಾಗುತ್ತಿದೆ.
ಆದರೂ ಅತ್ಯಾಚಾರದ ವಿರುದ್ಧ ಪ್ರತಿಭಟಿಸಲು ೨೦ ನಿಮಿಷಗಳನ್ನೂ
ಸರ್ಕಾರ ಮಹಿಳೆಗೆ ಕೊಡುತ್ತಿಲ್ಲ’.
- ತಸ್ಲೀಮಾ ನಸ್ರೀನ್ (ಲೇಖಕಿ).
ಆದರೂ ಅತ್ಯಾಚಾರದ ವಿರುದ್ಧ ಪ್ರತಿಭಟಿಸಲು ೨೦ ನಿಮಿಷಗಳನ್ನೂ
ಸರ್ಕಾರ ಮಹಿಳೆಗೆ ಕೊಡುತ್ತಿಲ್ಲ’.
- ತಸ್ಲೀಮಾ ನಸ್ರೀನ್ (ಲೇಖಕಿ).
ಹೆಣ್ಣು ಪ್ರೀತಿಯ ಪ್ರತೀಕ. ಅವಳು ನಮ್ಮ ಸಂಸ್ಕೃತಿ. ಅವಳೊಂದು ಹೂ. ಸಂಸ್ಕೃತಿಯ ತವರೂರಾದ ನಮ್ಮ ಭಾರತ ದೇಶ ಅವಳನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲವೇನೋ ಎಂದೆನಿಸುತ್ತಿದೆ. ಅಂಕಿ-ಅಂಶಗಳನ್ನು ನೋಡಿದರೆ ದಿನವೊಂದರಲ್ಲಿ ಸುಮಾರು ಅರವತ್ತು ಅತ್ಯಾಚಾರಗಳಾಗುತ್ತಿವೆ. ನಾವೆಲ್ಲರೂ ಹೆಮ್ಮೆಯಿಂದ ಭಾರತೀಯರು ಎಂದು ಹೇಳಿಕೊಂಡು ತಲೆಯೆತ್ತಿ ಮೆರೆಯುವುದು ಬರೀ ನಾಟಕವೆಂದೆನಿಸುತ್ತಿದೆ. ಹೆಚ್ಚಾಗಿ ಭಾಷಣಗಳಲ್ಲಿ ನಮ್ಮ ಆಚಾರ, ವಿಚಾರ ಎಂದು ಹೇಳುವುದರ ಜೊತೆಗೆ ಈಗ ಅತ್ಯಾಚಾರ, ಅನಾಚಾರ ಎಂಬ ಪದಗಳನ್ನು ಸೇರಿಸಬೇಕಿದೆ.
೨೩ ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕವಾಗಿ ನಡೆದ ಅತ್ಯಾಚಾರ ಮತ್ತು ಹಲ್ಲೆಯ ದೆಹಲಿ ಪ್ರಕರಣ ಎಂಥವರನ್ನೂ ತಲೆತಗ್ಗಿಸುವಂತೆ ಮಾಡಿದೆ. ಪ್ರತಿಯೊಬ್ಬ ಭಾರತೀಯನೂ ಚಿಂತಿಸುವಂತಾಗಿದೆ. ಓಡುತ್ತಿದ್ದ ಬಸ್ಸಿನಲ್ಲಿ ಅವಳಿಗಾದ ಹಿಂಸೆ, ನೋವು, ಅವಮಾನ ಊಹಿಸಲೂ ಅಸಾಧ್ಯವಾದುದಾಗಿದೆ. ಅತ್ಯಾಚಾರದ ನಂತರ ಸುಮಾರು ಎರಡು ಗಂಟೆಗಳ ಕಾಲ ಅವಳು ರಸ್ತೆಯಲ್ಲೇ ಇದ್ದ ವಿಷಯ ಇವತ್ತಿನ ನಾಚಿಕೆಗೇಡಿನ ಸಂಗತಿಯಾಗಿದೆ. ವಿದ್ಯಾವಂತರಿಂದಲೇ ತುಂಬಿ ತುಳುಕುತ್ತಿವೆ ಎನ್ನುವ ನಗರಗಳಲ್ಲಿ ಹೆಣ್ಣಿಗೆ ರಕ್ಷಣೆಯಿಲ್ಲವೇ? ಅವಳು ನಗರಗಳಲ್ಲಿ ಬದುಕುವುದು ಹೇಗೆ ಎಂದು ಹೊಸದಾಗಿ ಕಲಿಯಬೇಕಾಗಿದೆಯೇ? ಎಂಬ ಪ್ರಶ್ನೆಗಳು ಮೂಡುತ್ತಿವೆ.
ನಡೆದದ್ದು ಭಾನುವಾರದ ರಜಾ-ಮಜಾ
ದೆಹಲಿಯಲ್ಲಿ ಮೊದಲಿನಂತೆಯೇ ಬಿಗಿ ಬಂದೋಬಸ್ತು ಇರುತ್ತಿದ್ದರೆ ಬಹುಷಃ ಈ ಘಟನೆ ನಡೆಯುತ್ತಿರಲಿಲ್ಲವೇನೋ? ಸರಿಯಾದ ಸಮಯಕ್ಕೆ ದೆಹಲಿ ಸರ್ಕಾರದ ಸಾರಿಗೆ ವ್ಯವಸ್ಥೆ ಸರಿಯಿದ್ದರೆ ಅವಳು ಈ ಮೊದಲೇ ತೋಡಿಸಿದ್ದ ಹಳ್ಳಕ್ಕೆ ಬೀಳುತ್ತಿರಲಿಲ್ಲವೇನೋ? ಹೌದು ಇದೊಂದು ಪೂರ್ವ ನಿಯೋಜಿತ ಖೆಡ್ಡಾ!
ಒಂದು ಮೋಜಿನ ಆಟ!
ಡಿಸೆಂಬರ್ ೧೬, ಭಾನುವಾರದ ರಾತ್ರಿ ಆಕೆ ತನ್ನ ಗೆಳೆಯನ ಜೊತೆ ಬಸ್ಸಿಗಾಗಿ ಕಾಯುತ್ತಿದ್ದಳು. ತಣ್ಣನೆಯ ರಾತ್ರಿ ಜನರು, ವಾಹನಗಳು ಅಷ್ಟಕ್ಕಷ್ಟೆ. ಶಾಲೆಯ ಮಕ್ಕಳನ್ನು ಕರೆದೊಯ್ಯುವ ಲೈಸೆನ್ಸ್ ಮಾತ್ರವಿದ್ದ ಬಸ್ಸೊಂದು ತನ್ನೆಲ್ಲಾ ಕಿಟಕಿಗಳಿಗೆ ಪರದೆಗಳನ್ನು ಹಾಕಿಕೊಂಡು ಇವರ ಬಳಿ ಬಂದು ನಿಂತಿತು. ಸದ್ಯ ಬಸ್ ಬಂದಿತಲ್ಲ ಎಂದು ಇವರೂ ಹತ್ತಿದ್ದಾರೆ. ಸ್ವಲ್ಪ ಹೊತ್ತಿಗೆ ಡ್ರೈವರ್ ಸೇರಿ ಆರು ಜನರಿದ್ದ ಆ ಬಸ್ಸಿನ ವ್ಯಕ್ತಿಗಳು ಆಕೆಯ ಸ್ನೇಹಿತನೊಂದಿಗೆ ಜಗಳ ತೆಗೆದರು. ಇದ್ದಕ್ಕಿದ್ದಂತೆ ಆತನ ಮೇಲೆ ಹಲ್ಲೆ ಮಾಡಿದರು. ನಂತರ, ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಹಲ್ಲೆಗೈದರು. ಆ ಕಾಮಾಂಧರ ಪೂರ್ವನಿರ್ಧಾರಿತ ಭಾನುವಾರದ ರಜೆಯ ಮಜದ ಆಟ ನೆರವೇರಿತ್ತು. ಅವರ ಗುರಿ ಆಕೆಯ ಮೇಲೆ ಎರಗುವುದಷ್ಟೇ ಆಗಿತ್ತು. ಅದನ್ನವರು ಈಡೇರಿಸಿಕೊಂಡರು. ತಮ್ಮಷ್ಟಕ್ಕೆ ತಾವು ತಮ್ಮ ಜೊಲ್ಲಿನ ಬಾಯಿಯನ್ನು ಒರೆಸಿಕೊಂಡು ಅವರಿಬ್ಬರನ್ನು ರಸ್ತೆಯಲ್ಲೇ ಬಿಟ್ಟು ಹೊರಟು ಹೋದರು. ಪಾಪ, ಸುಮಾರು ಎರಡು ತಾಸು ಆಕೆ ಅದೇ ಸ್ಥಿತಿಯಲ್ಲಿದ್ದಳಂತೆ. ನಾಚಿಕೆಗೇಡು. ಕಾಮಾಂಧರ ರಜೆಯ ಆಟಕ್ಕೆ ಯಾವ ಹುಡುಗಿಯಾದರೂ ಬೇಕಿತ್ತು. ಅದು ಈಕೆಯಾಗಿದ್ದಳು. ಅವಳ ತಂದೆ-ತಾಯಿಯರ ಪ್ರೀತಿಯ ಅಂಗಳದಲ್ಲಿ ಬೆಳೆದ ಹೂ. ತನ್ನ ತಪ್ಪೇನೂ ಇರದಿದ್ದರೂ ಹೊಸಗಿ ಹೋಗಿತ್ತು.
ಇಂದಿನ ಸುದ್ದಿ
ಆ ಕತ್ತಲ ಕ್ಷಣದಿಂದ ಶುರುವಾದ ಅವಳ ಹೊರಟ ಕೆಲವೇ ದಿನಗಳಲ್ಲಿ ನಂದಿತು. ಡಿಸೆಂಬರ್ ೨೯ರ ಮುಂಜಾನೆ ಜೀವನ್ಮರಣದ ಜೊತೆ ಹೋರಾಡುತ್ತಿದ್ದ ಅವಳ ಚೇತನ ನಿಶಬ್ಧವಾಗಿದೆ. ಅವಳ ಅದಮ್ಯ ಜೀವನ ಪ್ರೀತಿಯಿಂದ ಹೋರಾಡುತ್ತಿದ್ದ ಅವಳು ಕಡೆಗೂ ಉಸಿರು ನಿಲ್ಲಿಸಿದ್ದಾಳೆ. ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯಿಂದ ಸಿಂಗಪೂರಿನ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಅಂಗಾಂಗ ಕಸಿಗೆ ಸಾಗಿಸಲಾಗಿದ್ದರೂ ಆಕೆ ಉಳಿದಿಲ್ಲ. ಕಾರಣ, ಅವಳ ಗಂಭೀರ ಸ್ಥಿತಿ. ಕಾಮಾಂಧರು ಅವಳನ್ನು ಅಂತಹ ಸ್ಥಿತಿಗೆ ತಂದಿದ್ದರು. ಅಲ್ಲಿಗೆ ಹೂವೊಂದು ತನ್ನ ಜೀವನಯಾತ್ರೆಯನ್ನು ನೋವಿನಿಂದ ಮುಗಿಸಿದಂತಾಗಿದೆ.
***
ನಮ್ಮದು ಸಿದ್ಧಗಂಗಾ ಕಾಲೇಜು. ತುಮಕೂರಿನ ಸಿದ್ಧಗಂಗಾ ಬಾಲಕರ ಕಾಲೇಜು, ಮಹಿಳಾ ಕಾಲೇಜು ಪಕ್ಕಪಕ್ಕದಲ್ಲೇ ಇದೆ. ನಮ್ಮ ತರಗತಿಯ ಕಿಟಕಿಗಳಿಂದ ಪಕ್ಕದ ಮಹಿಳಾ ಕಾಲೇಜಿನ ಲ್ಯಾಬೊರೇಟರಿಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ನಾನು ಎರಡನೇ ಬಿ.ಎಸ್ಸಿ.ಯಲ್ಲಿ ಓದುತ್ತಿದ್ದಾಗ ನಮ್ಮ ಪ್ರೀತಿಯ ಗಣಿತ ಉಪನ್ಯಾಸಕರು ಪಾಠಮಾಡುತ್ತಿದ್ದರು.
ಆ ಸಮಯದಲ್ಲಿ ಕಿಟಕಿಯ ಬಳಿಯೇ ಕುಳಿತಿದ್ದ ಸಹಪಾಠಿಯೊಬ್ಬ ಪಾಠದ ಕಡೆಗೆ ಗಮನ ಕೊಡದೆ ಮಹಿಳಾ ಕಾಲೇಜಿನ ಲ್ಯಾಬೊರೇಟರಿಯ ಕಡೆಗೆ ನೋಡುತ್ತಿದ್ದ. ಇದನ್ನು ಗಮನಿಸಿದ ಸರ್, ‘ಲೋ..... ಲೋ..... ಇಲ್ನೋಡೋ. ಪಾಪ ನಿನೇನ್ ಮಾಡ್ತ್ಯಾ... ವಯಸ್ಸು ಅಂತದ್ದು, ನಿಮಗೆಲ್ಲಾ ಒಂದು ಮಾತು ಹೇಳ್ತೀನಿ ಕೇಳಿ’ ಎಂದು ಪಾಠವನ್ನು ನಿಲ್ಲಿಸಿದರು. ಹೆಣ್ಣು ಒಂದು ಹೂ ಇದ್ದಂಗೆ. ಹೂವನ್ನು ನೋಡಿ ಸಂತೋಷ ಪಡ್ಬೇಕೇ ಹೊರತು, ಅದನ್ನು ಹೊಸಕಿ ಹಾಕಬರದಲ್ಲವಾ? ಅಷ್ಟಕ್ಕೂ ನಿನ್ನ ಹೂ ನಿನಗೆ ಸಿಗೋಕ್ಕೆ ಇನ್ನೂ ಸಮಯವಿದೆ. ಮೊದಲು ಚೆನ್ನಾಗಿ ಓದು, ಆಮೇಲೆ ಎಂದು ಬುದ್ಧಿ ಹೇಳಿದರು. ಅದು ಅವನನ್ನೂ ಒಳಗೊಂಡಂತೆ ನಮಗೆಲ್ಲರಿಗೂ ಒಂದು ಒಳ್ಳೆಯ ಪಾಠವಾಯಿತು.
*
ಇನ್ನೊಂದು ಘಟನೆಯೆಂದರೆ, ಅದೂ ನನ್ನ ಕಾಲೇಜಿನ ದಿನಗಳದ್ದೆ. ನನ್ನ ಮೇಲೆ ಅಂದಿಗೂ ಇಂದಿಗೂ ಡಾ. ರಾಜ್‌ಕುಮಾರ್‌ರವರ ಸಿನಿಮಾಗಳ ಪ್ರಭಾವವಿದೆ. ಅವರು ನನಗೆ ಒಂಥರಾ ತೆರೆಯ ಮೇಲಿನ ಮೇಷ್ಟ್ರು. ಬಹುಷಃ ಅದು ಎರಡು ಕನಸು ಚಿತ್ರವಿರಬೇಕು. ಹುಡುಗರ ಗುಂಪೊಂದು ಹುಡುಗಿಯೊಬ್ಬಳನ್ನು ರೇಗಿಸಿ, ಬಲತ್ಕಾರಿಸಲು ಹೋಗಿ ಆ ಚಿತ್ರದಲ್ಲಿ ಉಪನ್ಯಾಸಕರಾಗಿ ಅಭಿನಯಿಸಿರುವ ಡಾ.ರಾಜ್ ಕೈಯಲ್ಲಿ ಒದೆ ತಿಂದಿರುತ್ತಾರೆ. ನಂತರ ಡಾ.ರಾಜ್ ಎದುರಿಗೆ ಆ ಹುಡುಗರು ತಲೆ ತಗ್ಗಿಸಿ ನಡೆಯುತ್ತಾರೆ. ಆಗ, ಡಾ. ರಾಜ್ ನೋಡಿ ಗಂಡಸಾದವನು ತಲೆಯೆತ್ತಿ ನಡಿಬೇಕೇ ಹೊರತು ತಲೆತಗ್ಗಿಸಿಯಲ್ಲ. ತಲೆ ತಗ್ಗಿಸಿ ನಡೆಯೋ ಅಂತಾ ಕೆಲಸ ಮಾಡಬಾರದು ಎಂಬರ್ಥದ ಮಾತುಗಳನ್ನು ಹೇಳುತ್ತಾರೆ.
ನಾನೊಮ್ಮೆ ನನ್ನ ಗೆಳೆಯರಿಬ್ಬರೂ ಯಾವಾಗಲೂ ತಲೆತಗ್ಗಿಸಿ ನಡೆಯೋರು (ಅವರೇನೂ ತಪ್ಪು ಮಾಡಿರಲಿಲ್ಲ). ಆದರೂ, ನಾನು ಅದೇಕೋ ಅವರಿಗೆ ಮೇಲಿನ ಸಿನಿಮಾ ಘಟನೆಯನ್ನು ಹೇಳಿದೆ. ಅಂದಿನಿಂದ ಅವರು ತಲೆಯೆತ್ತಿ ನಡೆಯುತ್ತಾರೆ.
ಅಷ್ಟಕ್ಕೂ ನಾವು ಗಂಡಸರಾದವರು ತಲೆಯೆತ್ತಿ ನಡೆಯುವಂತ ಕೆಲಸ ಮಾಡಬೇಕಲ್ಲವೆ? ಹೂವನ್ನು ಹೊಸಕುವಂತಾ ಹೀನ ಕೃತ್ಯಕ್ಕೆ ಇಳಿಯಬಾರದಲ್ಲವೇ?
- ಗುಬ್ಬಚ್ಚಿ ಸತೀಶ್.
ಸತೀಶ್ ಸರ್,
ಪ್ರತ್ಯುತ್ತರಅಳಿಸಿಸಮಯೋಚಿತ ಲೇಖನ... ಅತ್ಯಾಚಾರಿಗಳಿಗೆ ಉಗ್ರ ಶಿಕ್ಷೆಯಾಗಲಿ.....
ತಲೆ ತಗ್ಗಿಸುವಂತ ಅಮಾನವೀಯ ಘಟನೆಗಳ ಪುನರಾವರ್ತನೆಯಾಗುತಿದೆ. ಎಂದು ತಿದ್ದುವುದೋ ಮನುಜ ಕುಲ!
ಪ್ರತ್ಯುತ್ತರಅಳಿಸಿಹಮ್...ನಿಜ ನುಡಿ..
ಪ್ರತ್ಯುತ್ತರಅಳಿಸಿ