ಭಾನುವಾರ, ಮಾರ್ಚ್ 24, 2024

ನೀರು (ಪುಟ್ಟ ಕತೆ)


 

ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹಾಲು, ತರಕಾರಿ ತರಲು ಹೋಗುವವರು ಹೋಗುತ್ತಿದ್ದರು. ಶಾಲೆ, ಕಾಲೇಜಿಗೆ ಮತ್ತು ಆಫೀಸಿಗೆ ಹೋಗುವವರು ಕೂಡ ಅದಾಗಲೇ ಮನೆಯನ್ನು ಬಿಟ್ಟಿದ್ದರು.

ರಾತ್ರಿ ಕುಡಿದು ಅಲ್ಲಿಯೇ ರಸ್ತೆ ಪಕ್ಕ ಮಲಗಿದ್ದವನೊಬ್ಬನಿಗೆ ಬೆಳಗ್ಗೆ ಎಚ್ಚರವಾಗಿ ತಾನು ಎಲ್ಲಿಗೆ ಬಂದಿದ್ದೇನೆ ಎಂದುಕೊಳ್ಳುತ್ತಲೇ ನಿಧಾನವಾಗಿ ಎದ್ದು ರಸ್ತೆಗೆ ಇಳಿದ. ತಟ್ಟಾಡುತ್ತಲೇ ಎರಡೆಜ್ಜೆ ಇಟ್ಟವನು ಮೂರನೆಯ ಹೆಜ್ಜೆಯನ್ನು ಅಲ್ಲೇ ಮಲಗಿದ್ದ ನಾಯಿಯ ಬಾಲದ ಮೇಲಿಟ್ಟ. ನೋವಿನಿಂದ ದಿಕ್ಕೆಟ್ಟ ನಾಯಿ ಇದ್ದಕ್ಕಿದ್ದಂತೆ ಎದ್ದು ರಸ್ತೆಯಲ್ಲಿ ಬರುತ್ತಿದ್ದ ಬೈಕಿಗೆ ಅಡ್ಡವಾಯಿತು. ಬೈಕಿನ ಮೇಲಿದ್ದವ ಎಷ್ಟೇ ಪ್ರಯತ್ನಿಸಿದರೂ ತನ್ನ ಹಣೆಬರಹವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಹಾಕಿದ್ದ ಬ್ರೇಕ್‌ ಆತನನ್ನು ರಸ್ತೆಗೆ ಕೆಡವಿತ್ತು. ಕ್ಷಣಾರ್ಧದಲ್ಲಿ ಆತ ರಸ್ತೆಯ ಮೇಲಿದ್ದ. ಹೆಲ್ಮೆಟ್‌ ಹಾಕಿದ್ದರಿಂದ ತಲೆಗೇನೂ ಪೆಟ್ಟಾಗಿರಲಿಲ್ಲ. ಆದರೆ, ಕೈ ಸ್ವಲ್ಪ ತರಚಿತ್ತು. ಆದ ಆಘಾತದಿಂದ ಆತನಿಗೆ ವಿಪರೀತ ಭಯವಾಗಿತ್ತು. ಆ ಕೂಡಲೇ ನೆರೆದ ಜನ ಆತನನ್ನು ಎತ್ತಿ ಪಕ್ಕಕ್ಕೆ ಕೂರಿಸಿ ಸಮಾಧಾನ ಹೇಳುತ್ತಿದ್ದರು. ಮತ್ತ್ಯಾರೋ ಆತನ ಬೈಕನ್ನು ಎತ್ತಿ ರಸ್ತೆಯ ಮಗ್ಗುಲಿಗೆ ನಿಲ್ಲಿಸಿ ಅದಕ್ಕೇ ಹೆಚ್ಚೇನು ತೊಂದರೆಯಾಗಿಲ್ಲ ಎಂದು ಖಚಿತ ಪಡಿಸಿದರು.



ಆದರೆ, ಬಿದ್ದವನಿಗೆ ಯಾರೂ ನೀರು ಕೊಟ್ಟು ಸಂತೈಸುತ್ತಿಲ್ಲ. ವಾಕಿಂಗ್‌ ಮುಗಿಸಿ ಬರುತ್ತಿದ್ದವರ ಕೈಯಲ್ಲಿ ಅರ್ಧರ್ಧ ನೀರಿದ್ದ ಬಾಟಲ್‌ಗಳಿವೆ! ಶಾಲಾ-ಕಾಲೇಜ್-ಆಫೀಸಿಗೆ ಹೋಗುತ್ತಿರುವವರ ಬಳಿ ಪೂರ್ತಿ ತುಂಬಿದ ನೀರಿನ ಬಾಟಲ್ಗಳಿವೆ!! ಮನೆಗೆ ಕುಡಿಯುವ ನೀರನ್ನು ದೊಡ್ಡ ಕ್ಯಾನ್‌ಗಳಲ್ಲಿ ತೆಗೆದುಕೊಂಡು ಹೋಗುವವರು ನೋಡುತ್ತಲೇ ಇದ್ದಾರೆ ಹೊರತು ಬಿದ್ದ ಬೈಕ್‌ ಸವಾರನಿಗೆ ನೀರು ಕೊಡಲು ಮನಸ್ಸು ಮಾಡುತ್ತಿಲ್ಲ!!! ಎಲ್ಲರೂ ನಾಯಿಯನ್ನು ಶಪಿಸುತ್ತಾ, ಬಿದ್ದವನ ಹಣೆಬರಹ-ಗ್ರಹಚಾರ ಸರಿಯಿಲ್ಲ ಎಂದು ಗೊಣಗುತ್ತಿರುವವರೇ. ಸದ್ಯ ಹೆಚ್ಚೇನೂ ಆಗಿಲ್ಲ ಎಂದುಕೊಳ್ಳುತ್ತಾ ಕೆಲವರು ಅಲ್ಲಿಂದ ತೆರಳುತ್ತಿದ್ದರೆ, ಕೆಲವರಂತೂ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ನಿರ್ಗಮಿಸುವವರೇ ಸರಿ. ಯಾರಾದರೂ ಒಂದು ಗುಟುಕು ನೀರು ಕೊಡುವರೇ ಎಂದು ಆತ ಕಾದದ್ದೇ ಬಂತು.

ಎಷ್ಟು ಹೊತ್ತಾದರೂ ಬಿದ್ದವನಿಗೆ ಯಾರೂ ನೀರು ಕೊಡಲಿಲ್ಲ. ಆತ ತನಗಾದ ಆಘಾತದಿಂದ ಹೊರಬರಲಾಗುತ್ತಿಲ್ಲ. ಇದನ್ನೆಲ್ಲಾ ಆಗ ತಾನೇ ಜ್ಞಾನ ಬಂದಂತೆ ಗಮನಿಸುತ್ತಿದ್ದ ಕುಡುಕನಿಗೆ ಈ ಅಪಘಾತಕ್ಕೆ ಪರೋಕ್ಷವಾಗಿ ತಾನೇ ಕಾರಣ ಎಂಬುದು ನಿಧಾನವಾಗಿ ಮನದಟ್ಟಾಯಿತು. ಅವನ ಕಣ್ಣುಗಳಿಗೆ ತನ್ನ ಸುತ್ತಲೂ ಅಷ್ಟೇಲ್ಲಾ ನೀರಿನ ಮೂಲಗಳು ಕಂಡರೂ ಯಾರೂ ಕೂಡ ಬಿದ್ದವನಿಗೆ ನೀರು ಕೊಡದಿದ್ದದ್ದು ಗಮನಕ್ಕೆ ಬಂತು. ತಾನು ರಾತ್ರಿ ಕುಡಿದಾಗಲು ನೀರು ಕಡಿಮೆ ಬೆರೆಸಿಯೇ ಕುಡಿದದ್ದು ನೆನೆದು ನಗು ಬಂತು. ಕೂಡಲೇ ತನ್ನ ಜೇಬಿನಿಂದ ಇಪ್ಪತ್ತು ರೂಪಾಯಿ ನೋಟೊಂದನ್ನು ತೆಗೆದು ʼಯಾರಾದರೂ ಬೇಗ ಒಂದು ಲೀಟರ್‌ ಬಿಸ್ಲೆರಿ ತಂದು, ಈತನಿಗೆ ಕೊಡಿʼ ಎಂದು ಅಂಗಲಾಚಿದ.



ಬಿದ್ದವನಿಗೆ ಕಡೆಗೂ ಸದ್ಯದಲ್ಲಿಯೇ ನೀರು ಸಿಗುತ್ತದೆ ಎಂದು ತುಸು ನಿರಾಳವಾಯಿತು. ಅವನ ಬೈಕಿಗೆ ಅಡ್ಡ ಬಂದಿದ್ದ ನಾಯಿ ಅದೆಲ್ಲಿತ್ತೋ ಏನೋ ರಸ್ತೆಯಲ್ಲಿ ಜೋರಾಗಿ ಹೋಗುತ್ತಿದ್ದ ಮತ್ತೊಂದು ಬೈಕನ್ನು ಅಟ್ಟಿಸಿಕೊಂಡು ಹೋಯಿತು.

- ಗುಬ್ಬಚ್ಚಿ ಸತೀಶ್.

ಭಾನುವಾರ, ಮಾರ್ಚ್ 17, 2024

ಹಿರಿತನ (ನ್ಯಾನೋ ಕತೆ)


ಯತೀಶ, ಆನಂದ, ಲಿಂಗಪ್ಪ, ರಾಜ ಎಲ್ಲಾ ಹೇಗಿದ್ದೀರ? ಏನು ಓದುದ್ರಿ? ಏನು ಬರೆದ್ರಿ? ಎನ್ನುತ್ತಲೇ ಕಾಫಿ ಬಾರಿಗೆ ಬರುತ್ತಿದ್ದ ಹಿರಿಯ ಸಾಹಿತಿಗಳನ್ನು ಕಂಡ ಕೂಡಲೇ ಅಲ್ಲಿದ್ದ ಯುವ ಸಾಹಿತಿಗಳು, ಸಾಹಿತ್ಯ ಸಂಚಾಲಕರೆಲ್ಲ ಎದ್ದು ನಿಂತು ಗೌರವಿಸುತ್ತಿದ್ದರು. ಅದು ಆಗ. ಇತ್ತೀಚೆಗೆ ಈ ಹಿರಿಯ ಸಾಹಿತಿಗಳಿಗೆ ಯಾರೂ ಸಿಗಲಿಲ್ಲವೆಂದು ಗೌರವವೊಂದು ಸಮರ್ಪಣೆಯಾಗಿದೆ. ಈಗ ಅವರು ಠೀವಿಯಿಂದ ಏನನ್ನೂ ಮಾತನಾಡದೆ, ಯಾರನ್ನೂ ಮಾತನಾಡಿಸದೆ ಕಾಫಿ ಬಾರಿಗೆ ಗಜಗಾಂಭೀರ್ಯದಲ್ಲಿ ಬರುತ್ತಾರೆ. ಆ ಸಮಯಕ್ಕೆ ಸರಿಯಾಗಿ ಅಲ್ಲಿಂದ ಯುವ ಸಾಹಿತಿಗಳು, ಸಾಹಿತ್ಯ ಸಂಚಾಲಕರೆಲ್ಲ ಏನೋ ಕೆಲಸವಿರುವವರಂತೆ ಗೊಣಗಾಡುತ್ತಾ ಮೆಲ್ಲನೆ ಜಾಗ ಖಾಲಿ ಮಾಡುತ್ತಾರೆ.

- ಗುಬ್ಬಚ್ಚಿ ಸತೀಶ್.

ಶನಿವಾರ, ಮಾರ್ಚ್ 16, 2024

ಕನ್ನಡ ಭಾಷೆ, ಸಾಹಿತ್ಯ, ರಂಗಭೂಮಿ, ಸಿನಿಮಾಗಳ ಸಂಗಮ “ಬ್ಲಿಂಕ್”‌ ಸಿನಿಮಾ

 


ಯೂಟ್ಯೂಬರ್‌ ಆಗಿ ಕನ್ನಡಿಗರಿಗೆ ಪರಿಚಯವಿದ್ದ ಶ್ರೀನಿಧಿ ಬೆಂಗಳೂರು ಮತ್ತು ತಂಡ ಕನ್ನಡ ಚಲನಚಿತ್ರರಂಗಕ್ಕೆ ನೀಡಿರುವ ಅಪರೂಪದ ಕೊಡುಗೆಯೇ “ಬ್ಲಿಂಕ್”‌ ಸಿನಿಮಾ. ತಮ್ಮ ಅಪಾರ ಓದಿನ ಮತ್ತು ಸಿನಿಮಾ ಅಭಿರುಚಿಯ ಅನುಭವದಿಂದ ಈ ಕತೆಯನ್ನು ತೆರೆಯ ಮೇಲೆ ತಂದಿದ್ದಾರೆ ಶ್ರೀನಿಧಿ. ಗ್ರೀಕ್‌ನ ದುರಂತ ನಾಟಕ ಸಾಫೋಕ್ಲಿಸ್‌ನ “ಈಡಿಪಸ್‌” ಸರಣಿಯ ನಾಟಕಗಳು ಮತ್ತು ನಾಡಿನ ಹೆಮ್ಮೆಯ ನಿರ್ದೇಶಕರಾದ ಪುಟ್ಟಣ್ಣ ಕಣಗಾಲ್‌ ಅವರ “ರಂಗನಾಯಕಿ” ಸಿನಿಮಾದಿಂದ ಪ್ರೇರಣೆಗೊಂಡಿರುವ ನಿರ್ದೇಶಕರು “ಬ್ಲಿಂಕ್” ಸಿನಿಮಾವನ್ನು ಪ್ರೇಕ್ಷಕ ಕಣ್ಣು ಮಿಟುಕಿಸದೇ ನೋಡುವಂತೆ ಮಾಡಿ ಅವನ ಮನ ಗೆದಿದ್ದಾರೆ. ನಾಯಕ ನಟನ ಹೆಚ್ಚು ಹೊತ್ತು ಕಣ್ಣು ಮಿಟುಕಿಸದೇ ಇರುವ ಶಕ್ತಿಯೇ ಅವನ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕಲು ನೆರವಾಗಿ ಅವನ ಪಾಲಿಗದು ದೈಹಿಕ ಮತ್ತು ಮಾನಸಿಕ ಹಿಂಸೆಯಾಗುವುದೇ ಸಿನಿಮಾ. ಇದನ್ನು ಟೈಮ್‌ ಟ್ರಾವೆಲಿಂಗ್‌ ತಂತ್ರದ ಮೂಲಕ ಹೇಳಲು ಹೊರಟು ನಿರ್ದೇಶಕರು ಮತ್ತು ತಂಡ ಯಶಸ್ವಿಯಾಗಿದ್ದಾರೆ.

ಕನ್ನಡ ಭಾಷೆ, ಸಾಹಿತ್ಯ, ರಂಗಭೂಮಿ, ಸಿನಿಮಾಗಳ ಸಂಗಮ “ಬ್ಲಿಂಕ್”‌ ಸಿನಿಮಾ ಎಂದೇ ಹೇಳಲು ನಾನು ಇಷ್ಟಪಡುತ್ತೇನೆ. ಲಂಕೇಶರು “ಈಡಿಪಸ್”‌ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಲಂಕೇಶರ ಸಂದರ್ಶನದ ಮಾತುಗಳ ಮೂಲಕವೇ ಆರಂಭವಾಗುವ ಸಿನಿಮಾ ಅಂತ್ಯದವರೆಗೂ ಪ್ರೇಕ್ಷಕನನ್ನು ತಲ್ಲೀನನಾಗಿಸಿ ನೋಡಿಸಿಕೊಳ್ಳುತ್ತದೆ. ಕಣ್ಣು, ಕಿವಿಗಳಿಗಷ್ಟೇ ಅಲ್ಲದೇ ಮೆದುಳಿಗೂ ನಿರ್ದೇಶಕರು ಪ್ರೇಕ್ಷಕನಿಗೆ ಕೆಲಸ ಕೊಡುವುದರಿಂದ ಒಂದು ಹಿತವಾದ ತಲೆನೋವು ಪ್ರೇಕ್ಷಕನಿಗೆ ಕಾಡಿದರೂ ಅಚ್ಚರಿಯಿಲ್ಲ. ಆ ಹಿತವಾದ ತಲೆನೋವಿನಲ್ಲಿಯೇ ನೋಡುಗನಿಗೆ ಅಪಾರ ನಲಿವಿದೆ. ಕೆಲವು ಪ್ರಶ್ನೆಗಳಿಗೆ ಉತ್ತರ ಸಿಗದಿದ್ದರೆ ಚಂದವಂತೆ. ಆದರೆ, ಸಿನಿಮಾದಲ್ಲಿ ಪ್ರೇಕ್ಷಕನ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ. ಒಂದು ಚಂದದ, ಅನನ್ಯ, ಅಪರೂಪದ ಸಿನಿಮಾ ನೋಡಿದ ಅನುಭವ ಪ್ರೇಕ್ಷಕನಿಗೆ ಖಂಡಿತ ಆಗುತ್ತದೆ.



ದೀಕ್ಷಿತ್‌ ಶೆಟ್ಟಿ ಅವರ ನಟನೆ ಈ ಚಿತ್ರದ ಪ್ಲಸ್‌ ಪಾಯಿಂಟ್.‌ ಉಳಿದೆಲ್ಲಾ ನಟರು ಕೂಡ ತಮ್ಮ ಪಾತ್ರಕ್ಕೆ ಪೂರಕವಾಗಿ ಮನೋಜ್ಞವಾಗಿ ಅಭಿನಯಿಸಿದ್ದಾರೆ. ನಿರ್ದೇಶಕರು, ನಿರ್ಮಾಪಕರು ಮತ್ತು ತಂಡದ ಕೆಲಸವನ್ನು ಮೆಚ್ಚಲೇಬೇಕು.  ಇಡೀ ಸಿನಿಮಾ ತಂಡಕ್ಕೆ ಒಂದು ಹ್ಯಾಟ್ಸಾಫ್.

ಮಾರ್ಚ್‌ 8ರಂದೇ ಬಿಡುಗಡೆಯಾಗಿದ್ದ ಸಿನಿಮಾ ತುಮಕೂರಿನಲ್ಲಿ ಮಾರ್ಚ್‌ 15ರಂದು ಅಂದರೇ ಒಂದು ವಾರದ ನಂತರ ನೋಡಲು ಸಿಕ್ಕಿತು. ಬಹಳ ರಶ್‌ ಕೂಡ ಇತ್ತು. ಸೋಶಿಯಲ್‌ ಮೀಡಿಯಾದ ಮೂಲಕವೇ ಅಪಾರ ಪ್ರಶಂಸೆಗೆ, ಪ್ರೀತಿಗೆ ಒಳಗಾಗಿರುವ ಸಿನಿಮಾವನ್ನು ಕನ್ನಡದ ಮಕ್ಕಳೆಲ್ಲಾ, ಬಹುಮುಖ್ಯವಾಗಿ ಕನ್ನಡ ಸಿನಿಮಾ ಪ್ರೇಮಿಗಳೆಲ್ಲಾ ಆದಷ್ಟು ಬೇಗ ಒಂದಾಗಿ ನೋಡಿ. ನೀವು ನೋಡಿದ್ದರೆ ನಿಮ್ಮ ಅನಿಸಿಕೆ ಕಾಮೆಂಟ್‌ ಮಾಡಿ ತಿಳಿಸಿ. ನೋಡಿಲ್ಲವಾದರೆ, ನೋಡಿಕೊಂಡು ಬಂದು ತಿಳಿಸಿ.

ಪ್ರೀತಿಯಿಂದ,

-        ಗುಬ್ಬಚ್ಚಿ ಸತೀಶ್.

ನಿಮಗೆ ವೇದವ್ಯಾಸರ ಮಾಮನ ಕತೆ ಗೊತ್ತೇ!?

  ನಿಮಗೆ ವೇದವ್ಯಾಸರ ಮಾಮನ ಕತೆ ಗೊತ್ತೇ!?   ವೇದವ್ಯಾಸರು ನಿಮಗೆಲ್ಲಾ ಗೊತ್ತೇ ಇದ್ದಾರೆ . ನಿಮಗೆ ಗೊತ್ತಿಲ್ಲದ ಅವರ ಸೋದರಮಾವನ ಕತೆಯೊಂದಿದೆ . ಒಂದು ದಿನ ...