ಗುರುವಾರ, ಫೆಬ್ರವರಿ 14, 2013

ಅರೆಂಜ್ಡ್ ಲವ್

ಅರೆಂಜ್ಡ್ ಲವ್


ಪ್ರೀತಿಯೆಂಬ ಎರಡಕ್ಷರದಲ್ಲಿ.......

- ಚಂಪರಾಣಿ ಜಿ.ಸಿ



ಪ್ರೀತಿ ಎಂದಾಕ್ಷಣ ಎಲ್ಲರೂ ಯೋಚಿಸುವುದು ಹೆಣ್ಣು ಮತ್ತು ಗಂಡಿನ ನಡುವೆ ಹದಿ ಹರಯದಲ್ಲಿ ಉಂಟಾಗುವ ಪ್ರೀತಿಯನ್ನೇ. ಆದರೆ ಅದರಾಚೆಗೂ ಪ್ರೀತಿ ಎಲ್ಲೆಲ್ಲೂ ಇರುತ್ತದೆ. ನನ್ನ ಮಗಳು ತನ್ನ ಪುಟ್ಟ ಕೈಗಳಿಂದ ನನ್ನ ಕೆನ್ನೆ ಸವರಿ, ‘ನನ್ನ ಪ್ರೀತಿ ಅಮ್ಮ’ ಅಂದಾಗ, ಒಬ್ಬ ತಂದೆ ‘ನನ್ನ ಪ್ರೀತಿ ಪಾಪು’ ಎಂದಾಗ, ಒಬ್ಬ ಗೆಳತಿ ತನ್ನ ಆತ್ಮೀಯ ಗೆಳತಿಗೆ ‘ಪ್ರೀತಿಯ ಗೆಳತಿ’ ಅಂದಾಗ, ಒಬ್ಬ ಅಕ್ಕ ತನ್ನ ತಮ್ಮನಿಗೆ ‘ನನ್ನ ಪ್ರೀತಿ ತಮ್ಮ’ ಎಂದಾಗ, ಒಬ್ಬ ತಂಗಿ ತನ್ನ ಅಣ್ಣನಿಗೆ ‘ನನ್ನ ಪ್ರೀತಿ ಅಣ್ಣ’ ಎಂದಾಗ, ಅಲ್ಲೆಲ್ಲಾ ಪ್ರೀತಿ ಇದ್ದೇ ಇರುತ್ತದೆ.

ಆದರೆ ಜನ ಈ ಎಲ್ಲಾ ಪ್ರೀತಿಯನ್ನು ಮಮತೆ, ಮಮಕಾರ, ಸ್ನೇಹ ಎಂದು ಬೇರೆ ಬೇರೆ ಹೆಸರಿನಲ್ಲಿ ಕರೆದು ಅವು ಪ್ರೀತಿಯೇ ಅಲ್ಲವೆನ್ನುವಂತೆ ಪ್ರತಿಬಿಂಬಿಸುತ್ತಾರೆ. ಈ ಎಲ್ಲಾ ಸಂಬಂಧಗಳಲ್ಲೂ ಇರುವುದು ಅಪರಿಮಿತವಾದ ಪ್ರೀತಿಯಷ್ಟೇ. ಪ್ರೀತಿಯ ಹೆಸರು ಏನೇ ಇದ್ದರೂ ಅದು ಹೊರಹೊಮ್ಮುವ ಮತ್ತು ಒಂದು ಹೃದಯದಿಂದ ಮತ್ತೊಂದು ಹೃದಯಕ್ಕೆ ನೀಡುವ ನೆಮ್ಮದಿ, ಸಂತೋಷ ಇವುಗಳೆಲ್ಲಾ ಬಣ್ಣಿಸಲಸದಳ.

ಪ್ರೀತಿ ಬಯಸುವ ಪ್ರತಿಯೊಂದು ಹೃದಯಕ್ಕೂ ಪ್ರೀತಿ ದೊರೆತರೆ ಜಗತ್ತಿನಲ್ಲಿ ಯಾವುದೇ ರೀತಿಯ ಸಮಸ್ಯೆಗಳಿರುವುದಿಲ್ಲ. ಪ್ರೀತಿ ತುಂಬಿರುವ ಯಾವುದೇ ಹೃದಯವೂ ಕೆಟ್ಟದನ್ನು ಯೋಚಿಸುವುದಿಲ್ಲ. ಹೃದಯದ ತುಂಬ ಪ್ರೀತಿಯೇ ಇರುವಾಗ ಬೇರೆ ಯೋಚನೆಗಳಿಗೆ ಸ್ಥಳವೆಲ್ಲಿ? ಮನುಜಕುಲಕ್ಕೆ ಪ್ರೀತಿ ಯಾವಾಗಲೂ ಬೇಕು. ಎಲ್ಲರಲ್ಲೂ ಪ್ರೀತಿಯೊಂದಿದ್ದರೆ ಭೂಮಿ ಪ್ರಶಾಂತವಾಗಿರುತ್ತದೆ. ಪ್ರಭು ಏಸುಕ್ರಿಸ್ತರು ‘ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸು’ ಎಂದು ಹೇಳುತ್ತಾರೆ. ಮನುಷ್ಯ ತನ್ನನ್ನು ತಾನು ಪ್ರೀತಿಸಿದಷ್ಟು ಬೇರೆ ಯಾರನ್ನೂ ಪ್ರೀತಿಸುವುದಿಲ್ಲವೆಂಬುದು ಜಗಜ್ಜಾಹೀರು. ಆದ್ದರಿಂದಲೇ ಅವರು ನಿನ್ನಂತೆಯೇ ಪರರನ್ನು ಪ್ರೀತಿಸು ಎಂದು ಹೇಳಿರುವುದು.

ಜಗತ್ತಿನಲ್ಲಿ ತಾಯಿ-ಮಗು ಪ್ರೀತಿ, ಸೋದರ ಪ್ರೀತಿ, ಗೆಳೆಯರ ಪ್ರೀತಿ, ಸಂಬಂಧಿಕರ ಪ್ರೀತಿ, ಎಂಥೆಂಥಾ ಪ್ರೀತಿ ಇದ್ದರೂ ಅವು ಹೆಚ್ಚು ಮಹತ್ವ ಹೊಂದುವುದಿಲ್ಲ. ಮಹತ್ವ ಪಡೆಯುವುದು, ಹೆಚ್ಚು ಚರ್ಚೆಗೊಳಗಾಗುವುದು ಯುವಜನರ ಪ್ರಣಯ, ಪ್ರೇಮ, ಪ್ರೀತಿ. ಆದರೆ ಈಗಿನ ಯುವ ಪೀಳಿಗೆಯ ಓಟವನ್ನು ನೋಡಿದರೆ ಪ್ರೀತಿ ತನ್ನ ಎಲ್ಲಾ ಮೌಲ್ಯಗಳನ್ನು ಕಳೆದುಕೊಂಡಿದೆ ಎಂದೆನಿಸುತ್ತದೆ. ಇವರೆಲ್ಲರಿಗೆ ಪ್ರೀತಿಯ ಮಹತ್ವ, ಅದರ ಅಗತ್ಯತೆ, ಅದರಿಂದ ಮನಸ್ಸಿಗೆ ಸಿಗುವ ನೆಮ್ಮದಿ, ಬಾಳಿಗೆ ಸಿಗುವ ಒಂದು ಗುರಿ ಮತ್ತು ಸರಿ ದಾರಿ ಯಾವುದೂ ಗೊತ್ತಿರುವುದಿಲ್ಲ. ದಿನ್ನಕ್ಕೊಂದು ಪ್ರೇಮ ಪ್ರಕರಣ. ವರ್ಷದಲ್ಲಿ ಏನಿಲ್ಲವೆಂದರೂ ಇಬ್ಬರು-ಮೂವರನ್ನು ಪ್ರೀತಿಸುವುದು ಅವರಿಂದ ಬೇರಾಗುವುದು. ಮತ್ತೆ ಅದೇ ಪುನರಾವರ್ತನೆ. ಈ ರೀತಿಯ ಸಂಬಂಧಗಳಲ್ಲಿ ಪ್ರೀತಿ ಇದೆ ಎಂದು ನಂಬುವುದಾದರೂ ಹೇಗೆ?

ಹಾಗಾದರೆ ಪ್ರೀತಿ ಈಗ ಜಗತ್ತಿನಲ್ಲಿ ಇಲ್ಲವೇ? ಇದೆ ಖಂಡಿತ ಇದೆ. ಆದರೆ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಬದಲು ವಸ್ತುಗಳನ್ನು ಪ್ರೀತಿಸುತ್ತಾನೆ. ಮನಸ್ಸನ್ನು ಪ್ರೀತಿಸುವ ಬದಲು ‘ಮನಿ’ಯನ್ನು ಪ್ರೀತಿಸುತ್ತಾನೆ. ಹಾಗಾಗಿ ಎಲ್ಲೂ ನಿರ್ಮಲ ಪ್ರೀತಿ-ಪ್ರೇಮ ನಮಗೆ ಸಿಗುವುದಿಲ್ಲ. ಎಲ್ಲರೂ ಒಂದು ರೀತಿಯ ಕಂಫರ್ಟ್‌ಗಾಗಿ ಹಾತೊರೆಯುತ್ತಾರೆ. ನಿಜ ಪ್ರೀತಿ ಯಾರಿಗೂ ಬೇಡವಾಗಿದೆ. ಜೊತೆಗೆ ಪ್ರೀತಿಯು ಒಂದು ರೀತಿಯ ಅನುಕೂಲಕ್ಕೆ ತಕ್ಕಂತ ಅಂಶವಾಗಿದೆ. ಅದನ್ನೇ ನಾನು ಅರೇಂಜ್ಡ್ ಲವ್ ಎಂದು ಕರೆಯುತ್ತೇನೆ.

ಕಾಲೇಜಿನಲ್ಲಿ ಹುಡುಗ ಹುಡುಗಿ ಒಬ್ಬರನ್ನೊಬ್ಬರು ನೋಡುತ್ತಾರೆ. ಅವರಲ್ಲಿ ಪರಿಚಯ ಸಹ ಬೆಳೆಯುತ್ತದೆ. ಅವರಲ್ಲಿ ಸೆಳೆತವಿದ್ದರೂ ಇಬ್ಬರೂ ಕೆಲವು ದಿನಗಳು ಸುಮ್ಮನಿರುತ್ತಾರೆ. ಒಂದು ಸುಂದರವಾದ ಸುಸಂದರ್ಭದಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಮತ್ತು ಅವರ ಮನೆಗಳಲ್ಲಿ ಒಪ್ಪಿಸಿ ಮದುವೆಯಾಗುತ್ತಾರೆ. ಈ ವಿಚಾರ ಸಾದಾ ಸೀದಾ ಎನಿಸಿದರೂ ಅದರ ಹಿಂದಿನ ಒಂದು ಮರ್ಮವನ್ನು ಹೇಳುತ್ತೇನೆ ಕೇಳಿ. ಪರಿಚಯವಾದ ಹುಡುಗ ಹುಡುಗಿ ಒಬ್ಬರಿಗೊಬ್ಬರು ತಿಳಿಯದಂತೆ ಅವರ ಹಿಂದಿನ ಇತಿಹಾಸವನ್ನು ಹುಡುಕುತ್ತಾರೆ. ಅವರು ಎಷ್ಟು ಜಾಣ್ಮೆಯಿಂದ ಈ ಕೆಲಸ ಮಾಡುತ್ತಾರೆಂದರೆ ಯಾರಿಗೂ ಅವರ ಬಗ್ಗೆ ಅನುಮಾನ ಬರುವುದಿಲ್ಲ. ಹುಡುಗ ಎಂಥ ಜಾತಿಯವನು ಎಂಬುದರಿಂದ ಹಿಡಿದು ಹುಡುಗಿಯ ಮನೆತನದವರು ಎಷ್ಟು ಶ್ರೀಮಂತರು ಎಂಬುವವರೆಗೂ ಎಲ್ಲವನ್ನೂ ಕೂಲಂಕುಶವಾಗಿ ತಿಳಿದುಕೊಂಡು ಎಲ್ಲಾ ಲೆಕ್ಕಾಚಾರಗಳನ್ನು ಕೂಡಿ, ಕಳೆದು, ಭಾಗಿಸಿ, ಗುಣಾಕಾರ ಹಾಕಿ ತಮಗೆ ಸರಿಹೊಂದುತ್ತದೆಯೇ? ಇಲ್ಲವೇ? ಎಂದೆಲ್ಲಾ ಯೋಚಿಸುತ್ತಾರೆ. ಸರಿಹೊಂದುವುದಿಲ್ಲವೆಂದಾದಲ್ಲಿ ಅವರ ಪರಿಚಯ ಕೇವಲ ಪರಿಚಯಕ್ಕೆ ನಿಂತು ಹೋಗುತ್ತದೆ. ಸರಿಹೊಂದುತ್ತದೆ ಎಂದು ತಿಳಿದ ನಂತರ ತಮ್ಮ ಪ್ರೇಮನಿವೇದನೆ ಮಾಡಿಕೊಳ್ಳುತ್ತಾರೆ.

ಹುಡುಗ ಒಳ್ಳೆಯ ಮನೆತನದವ, ಜೊತೆಗೆ ಒಂದೇ ಜಾತಿ, ಹುಡುಗಿಯ ಮನೆಯವರು ಇವರಿಗೆ ಸರಿಸಮಾನರು, ಮನೆಗಳಲ್ಲಿ ಹೇಳಿದರೂ ಅಡ್ಡಿ ಆತಂಕಗಳು ಬರುವುದಿಲ್ಲ. ಕಥೆ ಶುಭಂ ಆಗುತ್ತದೆ. ಆದರೆ ಇಂಥಹ ಪ್ರೀತಿಯನ್ನು ನಿಜವಾದ ಪ್ರೀತಿ ಎಂದು ಹೇಗೆ ಒಪ್ಪಿಕೊಳ್ಳುವುದು. ಇದನ್ನು ಅರೆಂಜ್ಡ್ ಲವ್ ಅನ್ನದೇ ಮತ್ತೇನು ಹೇಳಲು ಸಾಧ್ಯ?

ಹುಡುಗ ಹುಡುಗಿ ಒಂದೇ ಕಡೆ ಕೆಲಸ ಮಾಡುತ್ತಿರುತ್ತಾರೆ. ಇಬ್ಬರಿಗೂ ಉತ್ತಮ ಸಂಬಳ. ಹುಡುಗನಿಗೆ ಅಥವಾ ಹುಡುಗಿಗೆ ತನ್ನ ಸಹೋದ್ಯೋಗಿಯ ವೈಯಕ್ತಿಕ ವಿಚಾರಗಳು ತಿಳಿದ ನಂತರ ಕ್ರಮೇಣ ಒಬ್ಬರನ್ನೊಬ್ಬರು ಆಕರ್ಷಿಸಲು ಪ್ರಾರಂಭಿಸುತ್ತಾರೆ. ಆಕರ್ಷಣೆ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಪ್ರೀತಿಯಾದಮೇಲೆ ಇನ್ನೇನು ಮುಂದಿನ ಭವಿಷ್ಯದ ಪ್ಲಾನ್ ನಡೆಯುತ್ತದೆ. ಒಬ್ಬರಿಗೊಬ್ಬರು ನೇರವಾಗಿಯೇ ಎಲ್ಲಾ ವಿಚಾರಗಳನ್ನು ಮಾತನಾಡಿಕೊಳ್ಳುತ್ತಾರೆ. ನಾವಿಬ್ಬರೂ ಮದುವೆಯಾದರೆ ಉತ್ತಮವಾದ ಜೀವನ ನಡೆಸಬಹುದು ಎಂದು ಪ್ಲಾನ್ ಮಾಡಿಕೊಳ್ಳುತ್ತಾರೆ. ಇಬ್ಬರ ಮನೆಯಲ್ಲಿ ವಿಷಯ ತಿಳಿಸುತ್ತಾರೆ. ಅವರ ತಂದೆ-ತಾಯಿಯರು ಹುಡುಗ ಅಥವಾ ಹುಡುಗಿಯ ಜಾತಿ, ಕುಲ, ಗೋತ್ರ ಎಂದೆಲ್ಲಾ ಜಾಲಾಡಿ ಸರಿ ಹೊಂದಿದರೆ ಒಪ್ಪುತ್ತಾ ಇಲ್ಲವೇ ಒಪ್ಪುವುದಿಲ್ಲ. ಅವರೆಲ್ಲರೂ ಒಪ್ಪಲಿ ಬಿಡಲಿ ಹುಡುಗ ಹುಡುಗಿ ಮದುವೆಯಾಗುತ್ತಾರೆ. ಇದೂ ಕೂಡ ಅರೆಂಜ್ಡ್ ಲವ್ ತಾನೆ. ಇಲ್ಲಿ ಇಬ್ಬರಿಗೂ ಬೇಕಿರುವುದು ಅನುಕೂಲ, ಒಂದು ಕಂಫರ್ಟ್. ಅದು ಅವರಿಗೆ ದೊರಕುತ್ತದೆ. ಆದರೆ ಇಬ್ಬರಿಗೂ ಪ್ರೀತಿ ಬೇಕೆನಿಸಲಿಲ್ವೇ? ಅನಿಸುತ್ತದೆ. ಅನಿಸಿದಾಗ ವಿವಾಹ ವಿಚ್ಛೇದನ ಮರು ಮದುವೆ ನಡೆಯುತ್ತದೆ. ದೋಷ ಯಾರದ್ದು? ಎಲ್ಲಿ ತಪ್ಪಾಯ್ತು? ಎಲ್ಲಿ ಎಡೆವಿದೆವು? ಎಂದು ಇಬ್ಬರೂ ಯೋಚಿಸುವುದಿಲ್ಲ.

ಹುಡುಗ ಹುಡುಗಿ ಒಬ್ಬರನ್ನೊಬ್ಬರು ಪಂಚಪ್ರಾಣದಂತೆ ಪ್ರೀತಿಸಿಕೊಂಡಿದ್ದರು. ಅವರ ವಿಷಯ ಮನೆಯಲ್ಲಿ ಗೊತ್ತಾಗುವ ಮೊದಲೇ ಅವರಿಬ್ಬರಿಗೂ ಒಳ್ಳೆಯ ಸಂಬಂಧಗಳು ಬಂದವು. ಇಬ್ಬರೂ ತುಂಬಾ ಯೋಚಿಸಿದರು. ತುಂಬಾ ದಿನಗಳವರೆಗೆ ಅವರಲ್ಲಿ ಒಂದು ಸಂಘರ್ಷ ನಡೆಯುತ್ತದೆ. ಕೊನೆಗೆ ಒಂದು ದಿನ ಇಬ್ಬರೂ ಮದುವೆಯಾದರು! ಪ್ರೀತಿಸಿದವರನ್ನಲ್ಲ!! ಅವರಿಗೆ ಬಂದಿದ್ದ ಒಳ್ಳೆಯ ಸಂಬಂಧದ ಹುಡುಗ ಹುಡುಗಿಯೊಡನೆ ಅವರ ಮದುವೆಯಾಯಿತು. ಅವನು ಇವಳ ಮದುವೆಗೆ ಇವನು ಅವಳ ಮದುವೆ ಹೋಗಿ ಶುಭಕೋರಿ ಬರುತ್ತಾರೆ. ಇದೂ ಅರೆಂಜ್ಡ್ ಲವ್ ಅಲ್ಲವೇ? ಇದ್ದಷ್ಟು ದಿನ ಪ್ರೀತಿಸು ಮುಂದೆ ಗಾಳಿ ಬಂದಾಗ ತೂರಿಕೋ ಎಂಬಂಥ ಭಾವ ನಮ್ಮ ಕೆಲವು ಯುವಜನತೆಯಲ್ಲಿದೆ.

ಹುಡುಗ ತಮ್ಮ ಜಾತಿಯ ಸಮಾರಂಭದಲ್ಲಿ ಹುಡುಗಿಯನ್ನು ನೋಡುತ್ತಾನೆ. ಅವಳ ಪೂರ್ವಾಪರ ತಿಳಿದುಕೊಂಡು ಅವಳ ಹಿಂದೆ ಬಿದ್ದು. ತನ್ನ ಪ್ರೀತಿ ನಿವೇದಿಸಿ. ಅವಳನ್ನು ಒಪ್ಪಿಸುತ್ತಾನೆ. ಅವಳು ಸಹ ಹುಡುಗನ ಶ್ರೀಮಂತಿಕೆ, ಯೌವನ, ಅವನು ನೀಡುವ ಕಂಫರ್ಟ್ ಎಲ್ಲವನ್ನೂ ನೋಡಿ; ಸರಿ ಎಂದು ಒಪ್ಪುತ್ತಾಳೆ. ಹುಡುಗ ಹುಡುಗಿ ಒಪ್ಪಿದಮೇಲೆ ತಾನೇ ಬಂದು ಹುಡುಗಿಯ ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡುತ್ತಾನೆ. ತನ್ನ ಎಲ್ಲಾ ವಿಷಯಗಳನ್ನು ತಿಳಿಸುತ್ತಾನೆ. ಹುಡುಗಿಯ ತಂದೆ ತಾಯಿ ಎಲ್ಲವನ್ನೂ ಮನನಮಾಡಿ ಒಪ್ಪಿಗೆ ಸೂಚಿಸುತ್ತಾರೆ. ಇವನು ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆ ಮಾಡಿಕೊಳ್ಳುತ್ತಾನೆ. ಮನೆಯವರು ಎಲ್ಲಾ ಸರಿಹೊಂದುತ್ತದೆಂದು ಮದುವೆ ಮಾಡಿಕೊಡುತ್ತಾರೆ. ಇದು ಅರೆಂಜ್ಡ್ ಲವ್ ಅಲ್ಲವೇ?

ಇನ್ನೂ ಕೆಲವು ಸಂದರ್ಭಗಳಲ್ಲಿ ಹುಡುಗ ಹುಡುಗಿಯರು ಸಮ ಅಂತಸ್ತಿನವರಾಗಿದ್ದಾಗ. ಕೆಲವು ಪೋಷಕರು ಜಾತಿಯ ಗೋಜಿಗೆ ಹೋಗದೆ ಮಕ್ಕಳ ಪ್ರೀತಿಗೆ ಸಮ್ಮತಿ ಸೂಚಿಸಿ ಮದುವೆಯನ್ನು ಮಾಡುತ್ತಾರೆ. ಎಲ್ಲರೂ ಅವರ ದೊಡ್ಡಗುಣವನ್ನು ಹೊಗಳುವವರೇ ಆಗಿರುತ್ತಾರೆ. ಆದರೆ ಒಣ ಹೂರಣ ಯಾರಿಗೂ ತಿಳಿದಿರುವುದಿಲ್ಲ. ಇಂತಹ ಮದುವೆಗಳಲ್ಲಿ ನಡೆಯುವ ಲೇವಾ ದೇವಿ, ಬೇರೆ ಯಾವ ಮದುವೆಗಳಲ್ಲೂ ನಡೆಯುವುದಿಲ್ಲ. ವರದಕ್ಷಿಣೆ, ವರೋಪಚಾರ ಜೋರಾಗಿಯೇ ಸಿಕ್ಕಿರುತ್ತದೆ. ಕೆಲವೊಮ್ಮೆ ವಧುದಕ್ಷಿಣೆ ಕೊಡುವುದೂ ಉಂಟು: ಅದು ಅಸಹಾಯಕ ಸ್ಥಿತಿಗಳಲ್ಲಿ ಮಾತ್ರ. ಹುಡುಗಿ ಕೆಲಸಕ್ಕೆ ಹೋಗುತ್ತಿದ್ದಾಳೆ, ದೊಡ್ಡ ಸಂಬಳದಾರಳು, ಅವಳನ್ನು ಜಿಗಣೆಯಂತೆ ಹೀರಿಕೊಳ್ಳಬಹುದು ಎಂಬೆಲ್ಲಾ ಲೆಕ್ಕಾಚಾರದಿಂದಲೇ ಎಲ್ಲರೂ ಇಂತಹ ಪ್ರೇಮ ವಿವಾಹಕ್ಕೆ ಸಮ್ಮತಿ ನೀಡುವುದು. ಇಲ್ಲಿ ಹುಡುಗ ಹುಡುಗಿಯ ಆಲೋಚನೆಗಳೂ ಬೇರೆಯಾಗಿರುವುದಿಲ್ಲ. ಅವರಿಬ್ಬರೂ ಮೊದಲು ಪ್ರೀತಿಸುವುದು ಅಂತಸ್ತನ್ನು, ನಂತರ ವ್ಯಕ್ತಿಯನ್ನು.

ಒಂದೇ ಜಾತಿ, ಒಂದೇ ಅಂತಸ್ತು, ಒಳ್ಳೆಯ ಕೆಲಸ, ಆಸ್ತಿ-ಪಾಸ್ತಿ, ಅನುಕೂಲಗಳನ್ನು ನೋಡಿ ಹುಟ್ಟುವುದು ಪ್ರೀತಿಯಲ್ಲ. ಅಂತಹ ಪ್ರೀತಿ ಕೇವಲ ಅರೆಂಜ್ಡ್ ಲವ್ ಆಗಿರುತ್ತದೆ. ನಿನ್ನಿಂದ ನನಗೆ ಅನುಕೂಲ, ನಮ್ಮ ಜಾತಿ ಒಂದೇ, ನಮ್ಮ ಅಂತಸ್ತು ಒಂದೇ, ನಾವು ಮದುವೆಯಾದರೆ ಸುಖವಾಗಿರಬಹುದು, ಈ ರೀತಿಯ ಲೆಕ್ಕಾಚಾರದ ಪ್ರೀತಿ ಪ್ರೀತಿಯಾಗಿರದೆ ಒಂದು ಭ್ರಮೆಯಾಗಿರುತ್ತದೆ. ಭ್ರಮೆ ಒಡೆದು ಹೋದರೆ ಭ್ರಮನಿರಸನವಾಗುವುದು ಖಚಿತ. ಅರೆಂಜ್ಡ್ ಲವ್ ಯಾವತ್ತಿದ್ದರೂ ಡೇಂಜರಸ್. ಅದು ಅಪಾಯವನ್ನು ನಾವೇ ಕರೆದು ಪಕ್ಕದಲ್ಲಿ ಕೂರಿಸಿಕೊಂಡಂತೆ. ಇಂತಹ ಎಷ್ಟೋ ಅರೆಂಜ್ಡ್ ಲವ್ ಕೊನೆಗೊಳ್ಳುವುದು ವಿಚ್ಛೇದನ ಅಥವಾ ಅಪರಾಧದಲ್ಲಿ. ಹೀಗೆ ಉದಾಹರಣೆಗಳು ಕೊಡುತ್ತಾ ಹೋದರೆ ಪುಟಗಟ್ಟಲೆ, ದಿನಗಟ್ಟಲೆ, ವರ್ಷಗಟ್ಟಲೆ ಕೊಡುತ್ತಿರಬಹುದು. ಇಂತಹುದೇ ಪ್ರೀತಿಯನ್ನು ನಮ್ಮ ಸುತ್ತಮುತ್ತ ನೋಡುತ್ತಿದ್ದೇವೆ, ನೋಡುತ್ತಲೇ ಇರುತ್ತೇವೆ.

ಯಾರಾದರೂ ಅಂತಹ ಅರೆಂಜ್ಡ್ ಲವ್‌ಗೆ ಪ್ಲಾನ್ ಮಾಡುತ್ತಿದ್ದರೆ ಅದನ್ನು ಕೈಬಿಡಿ. ಸ್ನೇಹಿತರು ಈ ಹಾದಿ ತುಳಿಯುತ್ತಿದ್ದಾರೆ ಎಂದು ನಿಮಗನ್ನಿಸಿದರೆ ಅವರಿಗೆ ಬುದ್ಧಿ ಹೇಳಿ ಅವರಿಗೆ ಮುಂದಿನ ಪರಿಣಾಮವನ್ನು ವಿವರಿಸಿ ಆ ಹಾದಿ ತುಳಿಯದಂತೆ ನೋಡಿಕೊಳ್ಳಿ. ಏಕೆಂದರೆ ಆ ಹಾದಿಯ ಅಂತ್ಯ ಅವರನ್ನು ಪ್ರಪಾತಕ್ಕೆ ತಳ್ಳುತ್ತದೆ. ಮತ್ತೆಂದೂ ಅವರು ಆ ಪ್ರಪಾತದಿಂದ ಮೇಲೇಳಲು ಸಾಧ್ಯವಿಲ್ಲ.

ಕೇವಲ ಯುವಕ ಯುವತಿಯರಲ್ಲಿ ಈ ಅರೆಂಜ್ಡ್ ಲವ್ ಇರುತ್ತದೆ ಎಂದು ಭಾವಿಸಬೇಡಿ.

ಇದು ಸಂಬಂಧಿಕರಲ್ಲಿ ಇರಬಹುದು, ಶ್ರೀಮಂತಿಕೆ ಇದ್ದಾಗ ಎಲ್ಲಾ ನೆಂಟರು ಇಷ್ಟರು ಹತ್ತಿರ ಇರುತ್ತಾರೆ, ‘ಬರಿಗೈ ನಾಯಿಗೂ ದೂರ’ ಎಂಬಂತೆ, ಬಡತನದಲ್ಲಿ ಎಲ್ಲರೂ ನಿಮ್ಮನ್ನು ತೊರೆದು ಹೋಗುತ್ತಾರೆ. ಅಥವಾ ಅಲ್ಲಿಯವರೆಗೆ ನೀವು ಯಾರು ಎಲ್ಲಿದ್ದೀರಿ ಹೇಗಿದ್ದೀರಿ ಎಂದೂ ಸಹ ತಿಳಿಯಲು ಇಚ್ಛಿಸದ ಸಂಬಂಧಿಕರು ನಿಮಗೆ ಒಳ್ಳೆಯ ಹೆಸರು, ಹಣ ಬಂದಾಗ ನಿಮ್ಮನ್ನು ಹುಡುಕಿಕೊಂಡು, ಬಾದರಾಯನ ಸಂಬಂಧ ಹೇಳಿಕೊಂಡು ನಿಮ್ಮ ಮನಸ್ಸಿನಲ್ಲಿ ಜಾಗ ಪಡೆಯಲು ಸರ್ಕಸ್ ಮಾಡುತ್ತಾರೆ. ಇದು ಅರೆಂಜ್ಡ್ ಲವ್ ಅಲ್ಲವೇ?

ಸ್ನೇಹಿತರಲ್ಲಿ ಇಂತಹ ಅರೆಂಜ್ಡ್ ಲವ್ ಕೇವಲ ೧% ಇರಬಹುದು. ಆದರೆ ಅದೂ ಇಲ್ಲದಿರುವುದೇ ನಿಜವಾದ ಸ್ನೇಹ. ಕೆಲವು ಹುಡುಗ ಹುಡುಗಿಯರನ್ನು ನಾನು ನೋಡಿದ್ದೇನೆ ಗಮನಿಸಿದ್ದೇನೆ. ಅವರು ತಮ್ಮ ಅಂತಸ್ತಿಗೆ ಸರಿಹೊಂದುವ ವ್ಯಕ್ತಿಗಳೊಡನೆ ಮಾತ್ರ ಸ್ನೇಹ ಮಾಡುತ್ತಾರೆ. ಅದೂ ತುಂಬಾ ಯೋಚಿಸಿ. ಯಾವುದೇ ಕಾರಣಕ್ಕೂ ತಮಗಿಂತ ಕಡಿಮೆಯವರಲ್ಲಿ ಅವರು ಪರಿಚಯವನ್ನೂ ಸಹ ಬೆಳೆಸಿಕೊಳ್ಳುವುದಿಲ್ಲ. ಹಾಗೆ ಕೆಲವು ಜಾತಿ ಸ್ನೇಹ, ಅನುಕೂಲ ಸ್ನೇಹ, ನಿಮಗೆ ಆಶ್ಚರ್ಯವಾಗಬಹುದು ಬಣ್ಣ ಸ್ನೇಹ ಕೂಡ ಇದೆ. ರೂಪಕ್ಕೆ ಕೊಟ್ಟಷ್ಟು ಬೆಲೆ ಜನ ಗುಣಕ್ಕೆ ನೀಡುವುದಿಲ್ಲ.

ಕೆಲವು ಸಂದರ್ಭಗಳಲ್ಲಿ ತಂದೆ-ತಾಯಿ ಮತ್ತು ಮಕ್ಕಳಲ್ಲೂ ಇರಬಹುದು. ಉದಾಹರಣೆಗೆ ಹುಟ್ಟಿದಾರಾಭ್ಯ ಒಂದು ಮಗುವನ್ನು ಕಡೆಗಣಿಸಿ ಆ ಮಗ/ಮಗಳು ದೊಡ್ಡ ಸಾಧನೆ ಮಾಡಿದಾಗ, ಅವರಿಗೆ ಶ್ರೀಮಂತಿಕೆ ಬಂದಾಗ ಅವರನ್ನು ಓಲೈಸುವುದು. ನನಗೆ ಮೊದಲಿಂದಲೂ ನೀನಂದ್ರೆ ಎಷ್ಟು ಪ್ರಾಣ. ನನಗೆ ಎಲ್ಲಾ ಮಕ್ಕಳಿಗಿಂತ ನೀನೇ ಮುಖ್ಯ. ನಿನ್ನನ್ನು ನಾನು ಹಾಗೆ ಸಾಕಿದೆ, ಹೀಗೆ ಬೆಳೆಸಿದೆ. ನನ್ನ ಜೀವ ನೀನೇ ಎಂದು ಪೋಷಕರು ಹೇಳಿರುವ ಎಷ್ಟೋ ಸಂದರ್ಭಗಳನ್ನು ನಾವು ನೋಡಿರುತ್ತೇವೆ. ಹಾಗೆಂದು ನಾನು ಎಲ್ಲರನ್ನೂ ದೂಷಿಸುತ್ತಿದ್ದೇನೆ ಎಂದಲ್ಲ. ಕ್ಷಮೆಯಿರಲಿ. ಸಂದರ್ಭಗಳು ಕೆಲವೊಮ್ಮೆ ಮನುಷ್ಯನ ಮನಸ್ಸಿನಲ್ಲಿ ಈ ಅರೆಂಜ್ಡ್ ಲವ್‌ಗೆ ಜಾಗ ಮಾಡಿಕೊಡುತ್ತವೆ.

ನಾವು ವಿವೇಕದಿಂದ ವರ್ತಿಸಿ ಅದು ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು. ಯಾರನ್ನಾದರೂ ಇಷ್ಟಪಟ್ಟರೆ ಅವರು ಹೇಗಿರುವರೋ ಹಾಗೆಯೇ ಇಷ್ಟಪಡಬೇಕು. ಇಷ್ಟವಾಗಲಿಲ್ಲವೆ ಬಿಟ್ಟುಬಿಡಿ ಅಷ್ಟೆ. ಆದರೆ ಯಾವುದೇ ಕಾರಣಕ್ಕೂ ಅರೆಂಜ್ಡ್ ಲವ್ ಎಂಬ ಸುಳಿಯಲ್ಲಿ ಮಾತ್ರ ಬೀಳಬಾರದು. ಒಮ್ಮೆ ಬಿದ್ದೆವೆಂದರೆ ಅಲ್ಲಿಂದ ಬಿಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಪಾರಾಗುವ ದಾರಿಯಿಲ್ಲದ ಈ ಸುಳಿ ಬಿದ್ದವರನ್ನು ನುಂಗಿಹಾಕುತ್ತದೆ. ಮತ್ತೆ ನಾವು ಮನುಷ್ಯರೆಂದು ಕರೆಸಿಕೊಳ್ಳುವುದಕ್ಕೆ ಸಾಧ್ಯವಾಗದಂತೆ ನಮ್ಮನ್ನು ಬದಲಾಯಿಸಿಬಿಡುತ್ತದೆ.

ಪ್ರೀತಿಯಲ್ಲಿ ಭಾವನೆಗಳು ಬೆರೆಯಬೇಕು. ಮನಸ್ಸು ಮನಸ್ಸುಗಳ ಮಂಥನವಾಗಬೇಕು. ಹೃದಯ ಹೃದಯಗಳ ಮಿಲನವಾಗಬೇಕು. ಅದುವೇ ಪವಿತ್ರ ಪ್ರೇಮ. ನಿಜವಾದ ಪ್ರೀತಿ. ಹಾಗಲ್ಲದೆ ಅನುಕೂಲಗಳು ಸೇರಿದರೆ ಅದು ಅರೆಂಜ್ಡ್ ಲವ್.

ಫೆಬ್ರವರಿ ೧೪ ಪ್ರೇಮಿಗಳ ದಿನ. ನಿಮ್ಮೆಲ್ಲರಿಗೂ ನಮ್ಮ ಕಿವಿಮಾತು, ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಗಾಗಿ ಹಂಚಿಕೊಳ್ಳಿ. ನಿಮ್ಮೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು.

********







ಗುರುವಾರ, ಜನವರಿ 10, 2013

ಅವಳೊಂದು ಹೂ... ಹೊಸಕದಿರಿ

‘ಭಾರತದಲ್ಲಿ ಪ್ರತಿ ೨೦ ನಿಮಿಷಕ್ಕೆ ಒಂದು ಅತ್ಯಾಚಾರವಾಗುತ್ತಿದೆ.
 ಆದರೂ ಅತ್ಯಾಚಾರದ ವಿರುದ್ಧ ಪ್ರತಿಭಟಿಸಲು ೨೦ ನಿಮಿಷಗಳನ್ನೂ
 ಸರ್ಕಾರ ಮಹಿಳೆಗೆ ಕೊಡುತ್ತಿಲ್ಲ’.
                                              - ತಸ್ಲೀಮಾ ನಸ್ರೀನ್ (ಲೇಖಕಿ).


ಹೆಣ್ಣು ಪ್ರೀತಿಯ ಪ್ರತೀಕ. ಅವಳು ನಮ್ಮ ಸಂಸ್ಕೃತಿ. ಅವಳೊಂದು ಹೂ. ಸಂಸ್ಕೃತಿಯ ತವರೂರಾದ ನಮ್ಮ ಭಾರತ ದೇಶ ಅವಳನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲವೇನೋ ಎಂದೆನಿಸುತ್ತಿದೆ. ಅಂಕಿ-ಅಂಶಗಳನ್ನು ನೋಡಿದರೆ ದಿನವೊಂದರಲ್ಲಿ ಸುಮಾರು ಅರವತ್ತು ಅತ್ಯಾಚಾರಗಳಾಗುತ್ತಿವೆ. ನಾವೆಲ್ಲರೂ ಹೆಮ್ಮೆಯಿಂದ ಭಾರತೀಯರು ಎಂದು ಹೇಳಿಕೊಂಡು ತಲೆಯೆತ್ತಿ ಮೆರೆಯುವುದು ಬರೀ ನಾಟಕವೆಂದೆನಿಸುತ್ತಿದೆ. ಹೆಚ್ಚಾಗಿ ಭಾಷಣಗಳಲ್ಲಿ ನಮ್ಮ ಆಚಾರ, ವಿಚಾರ ಎಂದು ಹೇಳುವುದರ ಜೊತೆಗೆ ಈಗ ಅತ್ಯಾಚಾರ, ಅನಾಚಾರ ಎಂಬ ಪದಗಳನ್ನು ಸೇರಿಸಬೇಕಿದೆ.

೨೩ ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕವಾಗಿ ನಡೆದ ಅತ್ಯಾಚಾರ ಮತ್ತು ಹಲ್ಲೆಯ ದೆಹಲಿ ಪ್ರಕರಣ ಎಂಥವರನ್ನೂ ತಲೆತಗ್ಗಿಸುವಂತೆ ಮಾಡಿದೆ. ಪ್ರತಿಯೊಬ್ಬ ಭಾರತೀಯನೂ ಚಿಂತಿಸುವಂತಾಗಿದೆ. ಓಡುತ್ತಿದ್ದ ಬಸ್ಸಿನಲ್ಲಿ ಅವಳಿಗಾದ ಹಿಂಸೆ, ನೋವು, ಅವಮಾನ ಊಹಿಸಲೂ ಅಸಾಧ್ಯವಾದುದಾಗಿದೆ. ಅತ್ಯಾಚಾರದ ನಂತರ ಸುಮಾರು ಎರಡು ಗಂಟೆಗಳ ಕಾಲ ಅವಳು ರಸ್ತೆಯಲ್ಲೇ ಇದ್ದ ವಿಷಯ ಇವತ್ತಿನ ನಾಚಿಕೆಗೇಡಿನ ಸಂಗತಿಯಾಗಿದೆ. ವಿದ್ಯಾವಂತರಿಂದಲೇ ತುಂಬಿ ತುಳುಕುತ್ತಿವೆ ಎನ್ನುವ ನಗರಗಳಲ್ಲಿ ಹೆಣ್ಣಿಗೆ ರಕ್ಷಣೆಯಿಲ್ಲವೇ? ಅವಳು ನಗರಗಳಲ್ಲಿ ಬದುಕುವುದು ಹೇಗೆ ಎಂದು ಹೊಸದಾಗಿ ಕಲಿಯಬೇಕಾಗಿದೆಯೇ? ಎಂಬ ಪ್ರಶ್ನೆಗಳು ಮೂಡುತ್ತಿವೆ.

ನಡೆದದ್ದು ಭಾನುವಾರದ ರಜಾ-ಮಜಾ

ದೆಹಲಿಯಲ್ಲಿ ಮೊದಲಿನಂತೆಯೇ ಬಿಗಿ ಬಂದೋಬಸ್ತು ಇರುತ್ತಿದ್ದರೆ ಬಹುಷಃ ಈ ಘಟನೆ ನಡೆಯುತ್ತಿರಲಿಲ್ಲವೇನೋ? ಸರಿಯಾದ ಸಮಯಕ್ಕೆ ದೆಹಲಿ ಸರ್ಕಾರದ ಸಾರಿಗೆ ವ್ಯವಸ್ಥೆ ಸರಿಯಿದ್ದರೆ ಅವಳು ಈ ಮೊದಲೇ ತೋಡಿಸಿದ್ದ ಹಳ್ಳಕ್ಕೆ ಬೀಳುತ್ತಿರಲಿಲ್ಲವೇನೋ? ಹೌದು ಇದೊಂದು ಪೂರ್ವ ನಿಯೋಜಿತ ಖೆಡ್ಡಾ!

ಒಂದು ಮೋಜಿನ ಆಟ!

ಡಿಸೆಂಬರ್ ೧೬, ಭಾನುವಾರದ ರಾತ್ರಿ ಆಕೆ ತನ್ನ ಗೆಳೆಯನ ಜೊತೆ ಬಸ್ಸಿಗಾಗಿ ಕಾಯುತ್ತಿದ್ದಳು. ತಣ್ಣನೆಯ ರಾತ್ರಿ ಜನರು, ವಾಹನಗಳು ಅಷ್ಟಕ್ಕಷ್ಟೆ. ಶಾಲೆಯ ಮಕ್ಕಳನ್ನು ಕರೆದೊಯ್ಯುವ ಲೈಸೆನ್ಸ್ ಮಾತ್ರವಿದ್ದ ಬಸ್ಸೊಂದು ತನ್ನೆಲ್ಲಾ ಕಿಟಕಿಗಳಿಗೆ ಪರದೆಗಳನ್ನು ಹಾಕಿಕೊಂಡು ಇವರ ಬಳಿ ಬಂದು ನಿಂತಿತು. ಸದ್ಯ ಬಸ್ ಬಂದಿತಲ್ಲ ಎಂದು ಇವರೂ ಹತ್ತಿದ್ದಾರೆ. ಸ್ವಲ್ಪ ಹೊತ್ತಿಗೆ ಡ್ರೈವರ್ ಸೇರಿ ಆರು ಜನರಿದ್ದ ಆ ಬಸ್ಸಿನ ವ್ಯಕ್ತಿಗಳು ಆಕೆಯ ಸ್ನೇಹಿತನೊಂದಿಗೆ ಜಗಳ ತೆಗೆದರು. ಇದ್ದಕ್ಕಿದ್ದಂತೆ ಆತನ ಮೇಲೆ ಹಲ್ಲೆ ಮಾಡಿದರು. ನಂತರ, ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಹಲ್ಲೆಗೈದರು. ಆ ಕಾಮಾಂಧರ ಪೂರ್ವನಿರ್ಧಾರಿತ ಭಾನುವಾರದ ರಜೆಯ ಮಜದ ಆಟ ನೆರವೇರಿತ್ತು. ಅವರ ಗುರಿ ಆಕೆಯ ಮೇಲೆ ಎರಗುವುದಷ್ಟೇ ಆಗಿತ್ತು. ಅದನ್ನವರು ಈಡೇರಿಸಿಕೊಂಡರು. ತಮ್ಮಷ್ಟಕ್ಕೆ ತಾವು ತಮ್ಮ ಜೊಲ್ಲಿನ ಬಾಯಿಯನ್ನು ಒರೆಸಿಕೊಂಡು ಅವರಿಬ್ಬರನ್ನು ರಸ್ತೆಯಲ್ಲೇ ಬಿಟ್ಟು ಹೊರಟು ಹೋದರು. ಪಾಪ, ಸುಮಾರು ಎರಡು ತಾಸು ಆಕೆ ಅದೇ ಸ್ಥಿತಿಯಲ್ಲಿದ್ದಳಂತೆ. ನಾಚಿಕೆಗೇಡು. ಕಾಮಾಂಧರ ರಜೆಯ ಆಟಕ್ಕೆ ಯಾವ ಹುಡುಗಿಯಾದರೂ ಬೇಕಿತ್ತು. ಅದು ಈಕೆಯಾಗಿದ್ದಳು. ಅವಳ ತಂದೆ-ತಾಯಿಯರ ಪ್ರೀತಿಯ ಅಂಗಳದಲ್ಲಿ ಬೆಳೆದ ಹೂ. ತನ್ನ ತಪ್ಪೇನೂ ಇರದಿದ್ದರೂ ಹೊಸಗಿ ಹೋಗಿತ್ತು.

ಇಂದಿನ ಸುದ್ದಿ

ಆ ಕತ್ತಲ ಕ್ಷಣದಿಂದ ಶುರುವಾದ ಅವಳ ಹೊರಟ ಕೆಲವೇ ದಿನಗಳಲ್ಲಿ ನಂದಿತು. ಡಿಸೆಂಬರ್ ೨೯ರ ಮುಂಜಾನೆ ಜೀವನ್ಮರಣದ ಜೊತೆ ಹೋರಾಡುತ್ತಿದ್ದ ಅವಳ ಚೇತನ ನಿಶಬ್ಧವಾಗಿದೆ. ಅವಳ ಅದಮ್ಯ ಜೀವನ ಪ್ರೀತಿಯಿಂದ ಹೋರಾಡುತ್ತಿದ್ದ ಅವಳು ಕಡೆಗೂ ಉಸಿರು ನಿಲ್ಲಿಸಿದ್ದಾಳೆ. ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯಿಂದ ಸಿಂಗಪೂರಿನ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಅಂಗಾಂಗ ಕಸಿಗೆ ಸಾಗಿಸಲಾಗಿದ್ದರೂ ಆಕೆ ಉಳಿದಿಲ್ಲ. ಕಾರಣ, ಅವಳ ಗಂಭೀರ ಸ್ಥಿತಿ. ಕಾಮಾಂಧರು ಅವಳನ್ನು ಅಂತಹ ಸ್ಥಿತಿಗೆ ತಂದಿದ್ದರು. ಅಲ್ಲಿಗೆ ಹೂವೊಂದು ತನ್ನ ಜೀವನಯಾತ್ರೆಯನ್ನು ನೋವಿನಿಂದ ಮುಗಿಸಿದಂತಾಗಿದೆ.

***

ನಮ್ಮದು ಸಿದ್ಧಗಂಗಾ ಕಾಲೇಜು. ತುಮಕೂರಿನ ಸಿದ್ಧಗಂಗಾ ಬಾಲಕರ ಕಾಲೇಜು, ಮಹಿಳಾ ಕಾಲೇಜು ಪಕ್ಕಪಕ್ಕದಲ್ಲೇ ಇದೆ. ನಮ್ಮ ತರಗತಿಯ ಕಿಟಕಿಗಳಿಂದ ಪಕ್ಕದ ಮಹಿಳಾ ಕಾಲೇಜಿನ ಲ್ಯಾಬೊರೇಟರಿಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ನಾನು ಎರಡನೇ ಬಿ.ಎಸ್ಸಿ.ಯಲ್ಲಿ ಓದುತ್ತಿದ್ದಾಗ ನಮ್ಮ ಪ್ರೀತಿಯ ಗಣಿತ ಉಪನ್ಯಾಸಕರು ಪಾಠಮಾಡುತ್ತಿದ್ದರು.

ಆ ಸಮಯದಲ್ಲಿ ಕಿಟಕಿಯ ಬಳಿಯೇ ಕುಳಿತಿದ್ದ ಸಹಪಾಠಿಯೊಬ್ಬ ಪಾಠದ ಕಡೆಗೆ ಗಮನ ಕೊಡದೆ ಮಹಿಳಾ ಕಾಲೇಜಿನ ಲ್ಯಾಬೊರೇಟರಿಯ ಕಡೆಗೆ ನೋಡುತ್ತಿದ್ದ. ಇದನ್ನು ಗಮನಿಸಿದ ಸರ್, ‘ಲೋ..... ಲೋ..... ಇಲ್ನೋಡೋ. ಪಾಪ ನಿನೇನ್ ಮಾಡ್ತ್ಯಾ... ವಯಸ್ಸು ಅಂತದ್ದು, ನಿಮಗೆಲ್ಲಾ ಒಂದು ಮಾತು ಹೇಳ್ತೀನಿ ಕೇಳಿ’ ಎಂದು ಪಾಠವನ್ನು ನಿಲ್ಲಿಸಿದರು. ಹೆಣ್ಣು ಒಂದು ಹೂ ಇದ್ದಂಗೆ. ಹೂವನ್ನು ನೋಡಿ ಸಂತೋಷ ಪಡ್ಬೇಕೇ ಹೊರತು, ಅದನ್ನು ಹೊಸಕಿ ಹಾಕಬರದಲ್ಲವಾ? ಅಷ್ಟಕ್ಕೂ ನಿನ್ನ ಹೂ ನಿನಗೆ ಸಿಗೋಕ್ಕೆ ಇನ್ನೂ ಸಮಯವಿದೆ. ಮೊದಲು ಚೆನ್ನಾಗಿ ಓದು, ಆಮೇಲೆ ಎಂದು ಬುದ್ಧಿ ಹೇಳಿದರು. ಅದು ಅವನನ್ನೂ ಒಳಗೊಂಡಂತೆ ನಮಗೆಲ್ಲರಿಗೂ ಒಂದು ಒಳ್ಳೆಯ ಪಾಠವಾಯಿತು.

*

ಇನ್ನೊಂದು ಘಟನೆಯೆಂದರೆ, ಅದೂ ನನ್ನ ಕಾಲೇಜಿನ ದಿನಗಳದ್ದೆ. ನನ್ನ ಮೇಲೆ ಅಂದಿಗೂ ಇಂದಿಗೂ ಡಾ. ರಾಜ್‌ಕುಮಾರ್‌ರವರ ಸಿನಿಮಾಗಳ ಪ್ರಭಾವವಿದೆ. ಅವರು ನನಗೆ ಒಂಥರಾ ತೆರೆಯ ಮೇಲಿನ ಮೇಷ್ಟ್ರು. ಬಹುಷಃ ಅದು ಎರಡು ಕನಸು ಚಿತ್ರವಿರಬೇಕು. ಹುಡುಗರ ಗುಂಪೊಂದು ಹುಡುಗಿಯೊಬ್ಬಳನ್ನು ರೇಗಿಸಿ, ಬಲತ್ಕಾರಿಸಲು ಹೋಗಿ ಆ ಚಿತ್ರದಲ್ಲಿ ಉಪನ್ಯಾಸಕರಾಗಿ ಅಭಿನಯಿಸಿರುವ ಡಾ.ರಾಜ್ ಕೈಯಲ್ಲಿ ಒದೆ ತಿಂದಿರುತ್ತಾರೆ. ನಂತರ ಡಾ.ರಾಜ್ ಎದುರಿಗೆ ಆ ಹುಡುಗರು ತಲೆ ತಗ್ಗಿಸಿ ನಡೆಯುತ್ತಾರೆ. ಆಗ, ಡಾ. ರಾಜ್ ನೋಡಿ ಗಂಡಸಾದವನು ತಲೆಯೆತ್ತಿ ನಡಿಬೇಕೇ ಹೊರತು ತಲೆತಗ್ಗಿಸಿಯಲ್ಲ. ತಲೆ ತಗ್ಗಿಸಿ ನಡೆಯೋ ಅಂತಾ ಕೆಲಸ ಮಾಡಬಾರದು ಎಂಬರ್ಥದ ಮಾತುಗಳನ್ನು ಹೇಳುತ್ತಾರೆ.

ನಾನೊಮ್ಮೆ ನನ್ನ ಗೆಳೆಯರಿಬ್ಬರೂ ಯಾವಾಗಲೂ ತಲೆತಗ್ಗಿಸಿ ನಡೆಯೋರು (ಅವರೇನೂ ತಪ್ಪು ಮಾಡಿರಲಿಲ್ಲ). ಆದರೂ, ನಾನು ಅದೇಕೋ ಅವರಿಗೆ ಮೇಲಿನ ಸಿನಿಮಾ ಘಟನೆಯನ್ನು ಹೇಳಿದೆ. ಅಂದಿನಿಂದ ಅವರು ತಲೆಯೆತ್ತಿ ನಡೆಯುತ್ತಾರೆ.

ಅಷ್ಟಕ್ಕೂ ನಾವು ಗಂಡಸರಾದವರು ತಲೆಯೆತ್ತಿ ನಡೆಯುವಂತ ಕೆಲಸ ಮಾಡಬೇಕಲ್ಲವೆ? ಹೂವನ್ನು ಹೊಸಕುವಂತಾ ಹೀನ ಕೃತ್ಯಕ್ಕೆ ಇಳಿಯಬಾರದಲ್ಲವೇ?

                                                                                                    - ಗುಬ್ಬಚ್ಚಿ ಸತೀಶ್.

















ಶುಕ್ರವಾರ, ನವೆಂಬರ್ 2, 2012

“ಬಾಲ್ ಪೆನ್” ಸಿನಿಮಾದ ಗುಂಗಿನಲ್ಲಿ ಗುಬ್ಬಚ್ಚಿ ಕನ್ನಡಿಗ


ಶನಿವಾರವೇ ಗೆಳೆಯ ವಿಶುವಿನ ಮದುವೆಗೆ ಹೋಗಲಾಗುತ್ತಿಲ್ಲವಲ್ಲ ಎಂದು ಮನಸು ಬೇಸರದಿಂದ ಕೂಡಿತ್ತು. ಮದುವೆ ಎಂಬುದು ಬಹುತೇಕ ಜನರ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಘಟನೆ. ಎರಡು ಹೃದಯಗಳು ಕಾಯಾ ವಾಚಾ ಮನಸ ಹಿರಿಯರ, ಗೆಳೆಯರ ಸಮ್ಮುಖದಲ್ಲಿ ಸೇರುವ ಅಮೂಲ್ಯ ಕ್ಷಣ. ಅದರಲ್ಲೂ ಬಾಲ್ಯದ ಜೀವದ ಗೆಳೆಯರು ಸೇರಿದರೆಂದರೆ ಆ ಮದುವೆಯ ಖದರ್ರೇ ಬೇರೆ. ಅದೊಂದು ಮರೆಯಲಾರದ “ಆಟೋಗ್ರಾಫ್” ಆಗಿಬಿಡುತ್ತದೆ. ಇಷ್ಟೆಲ್ಲಾ ಕಾರಣಗಳಿದ್ದರೂ ಮದುವೆ ಉಡುಪಿಯಲ್ಲಿ ಎಂಬ ಒಂದೇ ಕಾರಣ ನಾನು ಮದುವೆಗೆ ಹೋಗಲಾಗುವುದಿಲ್ಲ ಎಂದು ಕಡೇ ಘಳಿಗೆಯಲ್ಲಿ ನಿರ್ಧಾರ ತಳೆಯಲು ಸಾಕಿತ್ತು. ಅಲ್ಲಿಗೆ ಮನಸ್ಸು ಮುದುಡಿತ್ತು ಮತ್ತು ಭಾನುವಾರವೆಲ್ಲಾ ಮದುವೆಯ ಗುಂಗಿನಲ್ಲೇ ಬೇಸರದಿಂದ ಕಳೆಯುವುದೆಂದು ಮನಸ್ಸು ತೆಪ್ಪಗಿತ್ತು.

ಯಾರಾದರೂ ಗೆಳೆಯರ ಫೋನ್ ಬಂದರೆ ಮನಸ್ಸಿಗೆ ಸ್ವಲ್ಪ ಹಿತವಾಗಬಹುದೆಂದು ಅಂದುಕೊಳ್ಳುತ್ತಿದ್ದ ಸಮಯಕ್ಕೆ ಸರಿಯಾಗಿ ಆತ್ಮೀಯರಾದ ಶಿವು ಕೆ. “ವೆಂಡರ್ ಕಣ್ಣು” ಅವರ ಫೋನ್ ಬಂತು. ಹಾಯ್ ಸರ್, ಹಲೋ ಸರ್ ಮುಗಿದ ಮೇಲೆ, ನೀವು ನಾಳೆ ಬೆಂಗಳೂರಿಗೆ ಬಂದರೆ ಒಂದು ಒಳ್ಳೆಯ ಸಿನಿಮಾ ನೋಡಬಹುದು ನೋಡಿ. ಸ್ವಲ್ಪ ಟೈಮ್ ಮಾಡಿಕೊಳ್ಳಿ. ನೀವು ಬಂದರೆ ಇಲ್ಲಿ ಹಲವರಿಗೆ ಸರ್‌ಪ್ರೈಸ್ ಕೊಡೋಣ ಎಂದು ಹೇಳಿದರು. ನನಗೆ ಇಲ್ಲವೆನ್ನಲಾಗಲಿಲ್ಲ. ಆಗಲೇ ಅವರು ಹೇಳಿದ್ದು ಕನ್ನಡದಲ್ಲಿ ಅಪರೂಪವೆನ್ನಿಸಬಹುದಾದ ಒಂದು ಸಿನಿಮಾ ಮಾಡಿದ್ದಾರೆ “ಬಾಲ್ ಪೆನ್” ಅಂತಾ. ಸಿನಿಮಾದಲ್ಲಿ ಆಸಕ್ತಿಯಿರುವವರು ಖಂಡಿತಾ ನೋಡಲೇ ಬೇಕಾದ ಸಿನಿಮಾ ಎಂದು ಹೇಳಿದರು. ನಾನು ಅವರ ಬಳಿ ಮಾತನಾಡುತ್ತಲೇ ಒಂದಷ್ಟು ತಿಂಗಳುಗಳ ಕಾಲ ಹಿಂದಕ್ಕೆ ಜಾರಿದ್ದೆ.

ತುಮಕೂರಿನಲ್ಲಿ ನನ್ನ ಮಾರ್ಗದರ್ಶಿಗಳಲ್ಲೊಬ್ಬರಾದ ಪ್ರಕಾಶ್ ಸರ್ (ಸಿದ್ಧಾರ್ಥ ಮೀಡಿಯಾ ಕಾಲೇಜಿನಲ್ಲಿ ಪ್ರೊಫೆಸರ್) ಹಿಂದೊಮ್ಮೆ “ಬಾಲ್ ಪೆನ್” ಎಂಬ ಮಕ್ಕಳ ಸಿನಿಮಾ ಬರುತ್ತಿದ್ದು, ಸಿನಿಮಾದ ಬಗ್ಗೆ ಕುತೂಹಲವಿದೆ ಎಂದಿದ್ದರು. ಆ ಸಿನಿಮಾ ಮೊನ್ನೆ ತೆರೆಕಂಡಾಗ ಎಂದಿನಂತೆ ನ್ಯೂಸ್ ಪೇಪರಿನ ಜಾಹೀರಾತಿನಲ್ಲಿ ಈ ಸಿನಿಮಾ ತುಮಕೂರಿನಲ್ಲಿ ಇಲ್ಲವಲ್ಲ ಎಂದು ನೊಂದು ಕೊಂಡಿದ್ದೆ. ನನ್ನದೊಂದು ಅಭ್ಯಾಸವಿದೆ. ಯಾರಾದರೂ ಸಿನಿಮಾದ ಬಗ್ಗೆ ಒಂದು ಒಳ್ಳೆಯ ಅಭಿಪ್ರಾಯ ಹೇಳಿದರೆಂದರೆ ಮುಗಿಯಿತು. ಏನಾದರು ಮಾಡಿ ಆ ಸಿನಿಮಾ ನೋಡಿಬಿಡಬೇಕು. ಒಂದಷ್ಟು ಪ್ರೇರಣೆ ಪಡೆದು ಬಿಡಬೇಕು.

ಅಲ್ಲಿಗೆ ಭಾನುವಾರ ಮಾರ್ನಿಂಗ್ ಷೋ “ಬಾಲ್ ಪೆನ್” ಗೆ ಹೋಗುವುದೆಂದು ತೀರ್ಮಾನವಾಯಿತು. ಸ್ವಲ್ಪ ಹೊತ್ತಿನ ನಂತರ ಮತ್ತೆ ಬಂದ ಶಿವುರವರ ಫೋನ್ ನನ್ನ ಬರುವಿಕೆಯನ್ನು ಖಚಿತಪಡಿಸಿಕೊಂಡಿತು.

ರಜಾದಿನಗಳಲ್ಲಿ ಓದುವುದೊಂದನ್ನು ಬಿಟ್ಟು, ಉಳಿದಕ್ಕೆಲ್ಲಾ ಸೋಂಬೇರಿಯಾಗುವ ನಾನು ೪ ಘಂಟೆಗೆ ಅಲಾರಂ ಹೊಡೆದರೂ, ಅದನ್ನು ಆಫ್ ಮಾಡಿ ೬ಕ್ಕೆ ಗಡಿಬಿಡಿಯಲ್ಲೇ ಎದ್ದೆ. ೭.೨೦ಕ್ಕೆ ರೈಲು. ಒಂದೇ ಉಸಿರಿಗೆ ಸ್ನಾನ ಮುಗಿಸಿ ಸ್ಟೇಷನ್ನಿಗೆ ದೌಡಾಯಿಸಿದೆ. ಸರಿಯಾದ ಸಮಯಕ್ಕೆ ರೈಲು ಬಂತು. ಹತ್ತಿ ಕೂತವನು ಉದಯವಾಣಿಯ “ಸಾಪ್ತಾಹಿಕ ಸಂಪದ” ದಲ್ಲಿ ಮೊದಲಿಗೆ ಪುರುಷೋತ್ತಮ ಬಿಳಿಮಲೆಯವರ “ಹಲವು ಮಹಾಭಾರತಗಳ ಕತೆ” ಲೇಖನವನ್ನು ಓದಿದೆ. (ಪ್ರತಿಯೊಬ್ಬರು ಓದಲೇಬೇಕಾದ ಲೇಖನವಿದು. ಅದಕ್ಕೆ ಇಲ್ಲಿ ಪ್ರಸ್ತಾಪಿಸಿದ್ದೇನೆ) ನಂತರ, ನೆಚ್ಚಿನ “ಬದುಕ ಬದಲಿಸಬಹುದು”, ವಾರದ ಕಥೆ, ಜೋಗಿಯವರ ಮಾಯಾಕನ್ನಡಿ ಓದುವ ಹೊತ್ತಿಗೆ ಯಶವಂತಪುರ ಬಂದಿತ್ತು. ನಂತರ ಶಿವುರವರು ಹೇಳಿದಂತೆ ಮಲ್ಲೇಶ್ವರಂನಲ್ಲಿ ಇಳಿದು ಅವರನ್ನು ಭೇಟಿ ಮಾಡಿ, ಇಬ್ಬರು ಒಟ್ಟಿಗೆ ತಿಂಡಿ ಮುಗಿಸಿ ಕೈಲಾಷ್ ಚಿತ್ರಮಂದಿರದ ಬಳಿಗೆ ಅವರ ಸ್ಕೂಟಿಯಲ್ಲಿ ಹೊರಟೆವು.

ಅದಾಗಲೇ ನಮ್ಮ ಪ್ರಕಾಶನದ ಪುಸ್ತಕಗಳ ಬಿಡುಗಡೆಯ ಸಮಯದಲ್ಲಿ ಪರಿಚಯವಾಗಿದ್ದ ಶ್ರೀಮತಿ ಜ್ಯೋತಿ ಬಸುರವರು ಮತ್ತವರ ಗುಂಪು ನಮ್ಮ ಆಗಮನವನ್ನು ನಿರೀಕ್ಷಿಸಿತ್ತು. ನಮಗಾಗಿ ಟಿಕೇಟನ್ನೂ ಕಾದಿರಿಸಲಾಗಿತ್ತು. ನಾನು ತುಮಕೂರಿನಿಂದ ಹೋದದ್ದು ಶಿವುರವರು ಹೇಳಿದಂತೆ ಅವರನ್ನು ಆಶ್ಚರ್ಯವಚಕಿತರನ್ನಾಗಿಸಿತ್ತು. ಎಲ್ಲಾ ಗೆಳೆಯರನ್ನೂ ಮಾತನಾಡಿಸುವ ಸಮಯಕ್ಕೆ ಸಿನಿಮಾದ ಸಮಯವೂ ಆಯಿತು.

***

ತದೇಕಚಿತ್ತದಿಂದ ಸಿನಿಮಾ ನೋಡಿದೆ. “ಬಾಲ್ ಪೆನ್” ಸಿನಮಾದಲ್ಲಿ ಮೊದಲು ಮನಸೆಳೆದದ್ದು ಬಾಲಕರ ಮುಗ್ಧ ಅಭಿನಯ. ಕೇಶವ, ಕೆಂಪ, ಬಾಲ... ರೀಟಾ, ಕಡೆಗೆ ಶಿವಯ್ಯ.

“ಬಾಲ್ ಪೆನ್” ಸಿನಿಮಾದ ಕಥೆಯನ್ನು ನಟ ಶ್ರೀನಗರಕಿಟ್ಟಿಯವರ ಗೆಳೆಯರಾದ ಮಂಜುನಾಥರವರು ಬರೆದಿರುತ್ತಾರೆ. ಕಥೆಯಾಗಿಯೂ ಇದೊಂದು ಉತ್ತಮ ಕಥೆಯಾಗಿದೆ. ಹೇಳಬೇಕೆಂದರೆ ಈ ಸಿನಿಮಾದ ನಿಜವಾದ ಹೀರೊ ಕಥೆಯೇ! ಕಥೆಗೆ ತಕ್ಕಂತೆ ಚಿತ್ರಕಥೆ, ಸಂಭಾಷಣೆ ಬರೆದು ಶಶಿಕಾಂತ್ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸಿರುತ್ತಾರೆ. ಪ್ರತಿಯೊಂದು ದೃಶ್ಯದಲ್ಲೂ ನಿರ್ದೇಶಕರ ಜಾಣ್ಮೆ ಎದ್ದು ತೋರುತ್ತದೆ. ಇದಕ್ಕೆ ಪೂರಕವಾಗಿ ರಾಜ್‌ಕುಮಾರ್‌ರವರ ಛಾಯಾಗ್ರಹಣ. ಇವರೆಲ್ಲರ ಕೆಲಸ ನಮ್ಮ ಕಣ್ಮುಂದೆ ಮೂಡುತ್ತಿದ್ದರೆ ಅದಕ್ಕೆ ಸರಿಸಾಟಿಯಾಗಿ ನಮ್ಮ ಕಿವಿಗಳಿಗೆ ಮಣಿಕಾಂತ್ ಕದ್ರಿಯವರ ಇಂಪಾದ ಸಂಗೀತವಿದೆ. ನಾನಂತೂ ಈ ಹಿನ್ನೆಲೆ ಸಂಗೀತವನ್ನು ಒಂದು ಉತ್ತಮ ಸಂಗೀತ ಕಛೇರಿಯೆಂದೇ ಕರೆಯಲು ಇಚ್ಚಿಸುತ್ತೇನೆ. ಆಗಾಗ ಸಿನಿಮಾಗೆ ಹೊಂದಿಕೊಂಡಂತೆ ಒಳ್ಳೆಯ ಸಾಹಿತ್ಯವಿರುವ ಹಾಡುಗಳಿವೆ. ಸರಳವಾಗಿ, ಸುಂದರವಾಗಿ ಒಂದು ಸಿನಿಮಾಗೆ ಉತ್ತಮ ಉದಾಹರಣೆ “ಬಾಲ್ ಪೆನ್”. ಒಟ್ಟಿನಲ್ಲಿ ಸಿನಿಮಾದ ಟೀಂ ವರ್ಕ್ ಗೆದ್ದಿದೆ.

ಸಿನಿಮಾದ ಕಥೆ ಹೇಳುವ ಉದ್ದೇಶ ನನಗಿಲ್ಲ. ಸಿನಿಮಾ ಅನಾಥ ಆಶ್ರಮದಲ್ಲಿ ಶುರುವಾಗಿ ಹಲವು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಕ್ತಾಯವಾಗುತ್ತದೆ. ಬಹುಮುಖ್ಯವಾಗಿ ಸಮಾಜದ ಕೆಲವು ಮೌಢ್ಯಗಳ ಮೇಲೂ ಬೆಳಕು ಚೆಲ್ಲಿದೆ. ಇದೆಲ್ಲಾ ಮಕ್ಕಳ ಮೂಲಕ ಹೇಳಲ್ಪಟ್ಟರೂ ಇದು ಸಂಪೂರ್ಣ ಮಕ್ಕಳ ಸಿನಿಮಾವಲ್ಲ. ಸಿನಿಮಾದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುವ ಹಿರಿಯರೂ ಇದ್ದಾರೆ. ಮತ್ತು ಇದೂ ಹಿರಿಯರೂ ತಪ್ಪದೆ ನೋಡಲೇ ಬೇಕಾದ ಸಿನಿಮಾ. ಇಲ್ಲಿ “ಬಾಲ್ ಪೆನ್” ಒಂದು ರೂಪಕವಾಗಿ “pen is mightier than sword” ಎಂಬುದನ್ನು ನಿರೂಪಿಸಿದೆ.

ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಈ ಸಿನಿಮಾ ಕುರಿತು ನನ್ನ ಗಮನ ಸೆಳೆಯುವುದಕ್ಕೆ ಮೊದಲ ಕಾರಣ ಆಧುನಿಕತೆಗೆ ತಕ್ಕಂತೆ ಸಿನಿಮಾಗೆ “ಬಾಲ್ ಪೆನ್” ಎಂದು ಹೆಸರಿಟ್ಟಿರುವುದು. ನನ್ನ ಕುತೂಹಲವನ್ನು ಸಿನಿಮಾ ಎಳ್ಳಷ್ಟೂ ಹುಸಿಯಾಗಿಸಿಲ್ಲ. ಸಿನಿಮಾ ಕುರಿತು ಆಸಕ್ತಿ (ಸಿನಿಮಾ ವಿದ್ಯಾರ್ಥಿಗಳು) ಇರುವವರೆಲ್ಲ ಮರೆಯದೆ ಈ ಸಿನಿಮಾ ನೋಡಿ. ನಿಮಗೆ ಕಲಿಯುವುದಕ್ಕೆ ಹಲವು ಸಾಧ್ಯತೆಗಳಿವೆ. ಮರೆಯಬೇಡಿ, ಮರೆತು ನಿರಾಶರಾಗದಿರಿ.

***

ಇದೇನಿದು ಇಷ್ಟೇನಾ ಎಂದು ರಾಗ ಎಳೆಯಬೇಡಿ. “ಬಾಲ್ ಪೆನ್” ಸಿನಿಮಾ ಕುರಿತು ಬರೆಯುವುದಕ್ಕಿಂತ ಸಿನಿಮಾ ನೋಡಿದ ಸಾಧ್ಯೆತೆಯ ಬಗ್ಗೆಯೇ ಹೆಚ್ಚು ಬರೆಯಲು ಕಾರಣಗಳಿವೆ. ಮೊದಲನೇ ಕಾರಣವೆಂದರೆ, ಕಥೆಯನ್ನು ನಾನೇ ಹೇಳಿಬಿಟ್ಟರೆ, ನೀವು ಇನ್ನೇನು ಸಿನಿಮಾ ನೋಡೋದು ಬಿಡು ಎಂಬ ಭಾವನೆ ತಾಳದಿರಲೆಂದು. ಜೊತೆಗೆ ಸಿನಿಮಾದ ಬಗ್ಗೆ ನಿಮ್ಮ ಕುತೂಹಲವಿರಲಿ ಎಂದು. ಮತ್ತೊಂದು ಕಾರಣ, ಒಂದು ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಅದನ್ನು ತಮ್ಮ ಗೆಳೆಯರಿಗೂ ತೋರಿಸಿ ಒಂದು ಕನ್ನಡ ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಯತ್ನಿಸಿದ ಗೆಳೆಯರ ಕುರಿತು ಹೇಳಲೆಂದು. ಈ ಸಿನಿಮಾ ಬಿಡುಗಡೆಯಾದ ದಿನ (ನನಗೆ ದೊರೆತ ಮಾಹಿತಿಯಂತೆ ಎಲ್ಲಾ ಉತ್ತಮ ಸಿನಿಮಾಗಳಂತೆ ಈ ಸಿನಿಮಾವೂ ಬೆಂಗಳೂರಿನಲ್ಲಿ ಬಿಡುಗಡೆಯಾಗಲು ಬಹಳ ಕಷ್ಟಪಟ್ಟಿದೆ) ನನ್ನ ಸ್ನೇಹಿತರಾದ ಶ್ರೀಮತಿ ಜ್ಯೋತಿ ಬಸು, ಸತೀಶ್ ಕನ್ನಡಿಗ, ಶಿವು ಕೆ. ಇವರನ್ನೊಳಗೊಂಡ ಸುಮಾರು ೬೦ ಜನರ ತಂಡವೊಂದು ಒಟ್ಟಾಗಿ ಸಿನಿಮಾ ನೋಡಿದೆ. ನಂತರ ಭಾನುವಾರ ಮತ್ತೊಮ್ಮೆ ನನ್ನನ್ನೂ ಒಳಗೊಡಂತೆ ಹಲವು ಗೆಳೆಯರಿಗೆ ಸಿನಿಮಾ ಕುರಿತು ಮಾಹಿತಿಯನ್ನು ನೀಡಿ, ಸಿನಿಮಾವನ್ನು ನೋಡಲು ಸಹಕರಿಸಿದೆ. ಇದೊಂತರ, ನಮ್ಮ ಹುಟ್ಟಿದ ಹಬ್ಬವನ್ನು ನಮ್ಮ ಗೆಳೆಯರೊಂದಿಗೆ ಸಿಹಿಹಂಚಿ ಸಂಭ್ರಮಿಸುವುದೇ ಆಗಿದೆ. ನಾನಿಲ್ಲಿ ಹುಟ್ಟುಹಬ್ಬವನ್ನು ಏತಕ್ಕೆ ಉದಾಹರಣೆಯಾಗಿ ಕೊಟ್ಟೆನೆಂದರೆ, ಸಿನಿಮಾದಲ್ಲಿ ‘ತಿಂಡಿಪೋತ’ ಬಾಲ, ತನ್ನ ಗೆಳೆಯ ‘ಮಾಹಿತಿ ಕಣಜ’ ಕೇಶವನಿಗೆ, ‘ನಿನಗೆ ಎಲ್ಲರ ಜನ್ಮದಿನ ಗೊತ್ತು, ಅನಾಥರ ಹುಟ್ಟುಹಬ್ಬ ಯಾವತ್ತು ಅಂಥಾ ಗೊತ್ತೆನೋ” ಎಂಬರ್ಥದ ಮಾತುಗಳನ್ನಾಡುತ್ತಾನೆ. ಅದಕ್ಕೆ ಕೇಶವ, ‘ಅದು ಆಗಸ್ಟ್ ೨೬. ನಮ್ಮಮ್ಮ ಮದರ್ ಥೆರೆಸಾ ಜನ್ಮದಿನ’ ಎಂದೇಳುತ್ತಾ ಸಮಾಧಾನ ಮಾಡುತ್ತಾನೆ. ಅಲ್ಲಿಗೆ ನೀವೂ ನಿಮ್ಮ ಗೆಳೆಯರೊಂದಿಗೆ ಸಿನಿಮಾವನ್ನು ನೋಡುತ್ತೀರಾ ಎಂದಾಯಿತು. ಸಿಹಿಯನ್ನು ಗೆಳೆಯರೊಂದಿಗೆ ಹಂಚಿ ತಿಂದರೆ ಆ ಮಜಾನೆ ಬೇರೆ. ಅಲ್ಲವೇ?

***

ಸಿನಿಮಾ ಮುಗಿಯುವ ಹೊತ್ತಿಗೆ ಸರಿಯಾಗಿ ನಿರ್ದೇಶಕರಾದ ಶಶಿಕಾಂತ್ ಬಂದಿದ್ದರು. ಅವರ ಜೊತೆ ನಮ್ಮೆಲ್ಲರ ಫೋಟೋಶೂಟ್ ನಡೆಯಿತು. ಒಂದಷ್ಟು ಮಾತು, ಜೊತೆಗೆ ನಿರ್ದೇಶಕರೇ ಪ್ರೀತಿಯಿಂದ ಕುಡಿಸಿದ ಕಾಫೀ (ಉಳಿದವರೆಲ್ಲ ಜ್ಯೂಸ್) ಮತ್ತು ಒಂದಷ್ಟು ಸಿನಿಮಾ ನಿರ್ಮಾಣದ ಬಗ್ಗೆ ಮಾಹಿತಿ. ನನ್ನ “ಮುಗುಳ್ನಗೆ” ಪುಸ್ತಕವನ್ನು ಪ್ರೀತಿಯಿಂದ ನಿರ್ದೇಶಕರಿಗೆ ಕೊಟ್ಟು ನನ್ನ ಆಸಕ್ತಿಯನ್ನು ಅವರಿಗೆ ಹೇಳಿದೆ. ನಂತರ ಎಲ್ಲಾ ಗೆಳೆಯರಿಗೆ ಪ್ರೀತಿಯ ವಿದಾಯ.

ಸಿನಿಮಾ ನೋಡುವ ನೆಪದಲ್ಲಿ ನನ್ನ ಇನ್ನೊಂದು ಬಹುಕಾಲದ ಬಯಕೆ ನೆರವೇರಿತು. (ನೀವು ಬಸುರಿಯ ಬಯಕೆಯೇ ಎಂದು ಕೇಳಿದರೂ ತಪ್ಪಿಲ್ಲ. ನನ್ನ ಹೊಟ್ಟೆಯೂ ತುಂಬಾ ತುಂಬಾ ದಪ್ಪವಾಗಿದೆ) ಅದು ಬೆಂಗಳೂರಿನ “ಮಾದಪ್ಪನ ಮೆಸ್” ಮುದ್ದೆ ಊಟ. ಶಿವು ಸರ್ ನನ್ನ ಬಹುಕಾಲದ ಬಯಕೆ ಈಡೇರಲು ಕಾರಣವಾದರು. ಊಟವಾದ ನಂತರ ನಾವಿಬ್ಬರು ಪರಸ್ಪರ ವಿದಾಯ ಹೇಳಿದೆವು. ಗೆಳೆಯರೆಲ್ಲರ ಪ್ರೀತಿಯನ್ನು ಕೃತಜ್ಞತೆಯಿಂದ ನೆನೆಯುತ್ತಾ ನಾನು ಸಂಜೆಗೆ ತುಮಕೂರಿಗೆ ವಾಪಸ್ಸಾದರೂ, ನನ್ನ ಮನಸ್ಸು “ಬಾಲ್ ಪೆನ್” ಗುಂಗಿನಲ್ಲಿಯೇ ಇದೆ.

ಅಂದ ಹಾಗೆ, ದಿನಾ ದಿನಾ ಆಚರಿಸಬೇಕಾದ ಕನ್ನಡಮ್ಮನ ಹಬ್ಬವನ್ನು ನವೆಂಬರ್ ತಿಂಗಳು ಪೂರ್ತಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ನೀವು ಒಂದರ್ಧ ದಿನ “ಬಾಲ್ ಪೆನ್” ಸಿನಿಮಾ ನೋಡುವುದರ ಮೂಲಕ ಅರ್ಥಪೂರ್ಣಗಾಗಿ ಆಚರಿಸಿಬಿಡಿ.

ಪ್ರೀತಿಯಿಂದ,
ಗುಬ್ಬಚ್ಚಿ ಕನ್ನಡಿಗ.





ಅಮೇಜಾನ್‌ "ಗ್ರೇಟ್‌ ಸಮ್ಮರ್‌ ಸೇಲ್"‌

ಸ್ನೇಹಿತರೇ, ಇಂದಿನಿಂದ ಅಮೇಜಾನ್‌ "ಗ್ರೇಟ್‌ ಸಮ್ಮರ್‌ ಸೇಲ್"‌ ಶುರುವಾಗಿದ್ದು, ನಿಮಗೆ ಅಗತ್ಯವಿರುವ ವಸ್ತುಗಳನ್ನು ಹೆಚ್ಚಿನ ರಿಯಾಯಿತಿಯಲ್ಲಿ ಕೊಳ್ಳಲು ಸದಾವ...