ಶುಕ್ರವಾರ, ನವೆಂಬರ್ 2, 2012

“ಬಾಲ್ ಪೆನ್” ಸಿನಿಮಾದ ಗುಂಗಿನಲ್ಲಿ ಗುಬ್ಬಚ್ಚಿ ಕನ್ನಡಿಗ


ಶನಿವಾರವೇ ಗೆಳೆಯ ವಿಶುವಿನ ಮದುವೆಗೆ ಹೋಗಲಾಗುತ್ತಿಲ್ಲವಲ್ಲ ಎಂದು ಮನಸು ಬೇಸರದಿಂದ ಕೂಡಿತ್ತು. ಮದುವೆ ಎಂಬುದು ಬಹುತೇಕ ಜನರ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಘಟನೆ. ಎರಡು ಹೃದಯಗಳು ಕಾಯಾ ವಾಚಾ ಮನಸ ಹಿರಿಯರ, ಗೆಳೆಯರ ಸಮ್ಮುಖದಲ್ಲಿ ಸೇರುವ ಅಮೂಲ್ಯ ಕ್ಷಣ. ಅದರಲ್ಲೂ ಬಾಲ್ಯದ ಜೀವದ ಗೆಳೆಯರು ಸೇರಿದರೆಂದರೆ ಆ ಮದುವೆಯ ಖದರ್ರೇ ಬೇರೆ. ಅದೊಂದು ಮರೆಯಲಾರದ “ಆಟೋಗ್ರಾಫ್” ಆಗಿಬಿಡುತ್ತದೆ. ಇಷ್ಟೆಲ್ಲಾ ಕಾರಣಗಳಿದ್ದರೂ ಮದುವೆ ಉಡುಪಿಯಲ್ಲಿ ಎಂಬ ಒಂದೇ ಕಾರಣ ನಾನು ಮದುವೆಗೆ ಹೋಗಲಾಗುವುದಿಲ್ಲ ಎಂದು ಕಡೇ ಘಳಿಗೆಯಲ್ಲಿ ನಿರ್ಧಾರ ತಳೆಯಲು ಸಾಕಿತ್ತು. ಅಲ್ಲಿಗೆ ಮನಸ್ಸು ಮುದುಡಿತ್ತು ಮತ್ತು ಭಾನುವಾರವೆಲ್ಲಾ ಮದುವೆಯ ಗುಂಗಿನಲ್ಲೇ ಬೇಸರದಿಂದ ಕಳೆಯುವುದೆಂದು ಮನಸ್ಸು ತೆಪ್ಪಗಿತ್ತು.

ಯಾರಾದರೂ ಗೆಳೆಯರ ಫೋನ್ ಬಂದರೆ ಮನಸ್ಸಿಗೆ ಸ್ವಲ್ಪ ಹಿತವಾಗಬಹುದೆಂದು ಅಂದುಕೊಳ್ಳುತ್ತಿದ್ದ ಸಮಯಕ್ಕೆ ಸರಿಯಾಗಿ ಆತ್ಮೀಯರಾದ ಶಿವು ಕೆ. “ವೆಂಡರ್ ಕಣ್ಣು” ಅವರ ಫೋನ್ ಬಂತು. ಹಾಯ್ ಸರ್, ಹಲೋ ಸರ್ ಮುಗಿದ ಮೇಲೆ, ನೀವು ನಾಳೆ ಬೆಂಗಳೂರಿಗೆ ಬಂದರೆ ಒಂದು ಒಳ್ಳೆಯ ಸಿನಿಮಾ ನೋಡಬಹುದು ನೋಡಿ. ಸ್ವಲ್ಪ ಟೈಮ್ ಮಾಡಿಕೊಳ್ಳಿ. ನೀವು ಬಂದರೆ ಇಲ್ಲಿ ಹಲವರಿಗೆ ಸರ್‌ಪ್ರೈಸ್ ಕೊಡೋಣ ಎಂದು ಹೇಳಿದರು. ನನಗೆ ಇಲ್ಲವೆನ್ನಲಾಗಲಿಲ್ಲ. ಆಗಲೇ ಅವರು ಹೇಳಿದ್ದು ಕನ್ನಡದಲ್ಲಿ ಅಪರೂಪವೆನ್ನಿಸಬಹುದಾದ ಒಂದು ಸಿನಿಮಾ ಮಾಡಿದ್ದಾರೆ “ಬಾಲ್ ಪೆನ್” ಅಂತಾ. ಸಿನಿಮಾದಲ್ಲಿ ಆಸಕ್ತಿಯಿರುವವರು ಖಂಡಿತಾ ನೋಡಲೇ ಬೇಕಾದ ಸಿನಿಮಾ ಎಂದು ಹೇಳಿದರು. ನಾನು ಅವರ ಬಳಿ ಮಾತನಾಡುತ್ತಲೇ ಒಂದಷ್ಟು ತಿಂಗಳುಗಳ ಕಾಲ ಹಿಂದಕ್ಕೆ ಜಾರಿದ್ದೆ.

ತುಮಕೂರಿನಲ್ಲಿ ನನ್ನ ಮಾರ್ಗದರ್ಶಿಗಳಲ್ಲೊಬ್ಬರಾದ ಪ್ರಕಾಶ್ ಸರ್ (ಸಿದ್ಧಾರ್ಥ ಮೀಡಿಯಾ ಕಾಲೇಜಿನಲ್ಲಿ ಪ್ರೊಫೆಸರ್) ಹಿಂದೊಮ್ಮೆ “ಬಾಲ್ ಪೆನ್” ಎಂಬ ಮಕ್ಕಳ ಸಿನಿಮಾ ಬರುತ್ತಿದ್ದು, ಸಿನಿಮಾದ ಬಗ್ಗೆ ಕುತೂಹಲವಿದೆ ಎಂದಿದ್ದರು. ಆ ಸಿನಿಮಾ ಮೊನ್ನೆ ತೆರೆಕಂಡಾಗ ಎಂದಿನಂತೆ ನ್ಯೂಸ್ ಪೇಪರಿನ ಜಾಹೀರಾತಿನಲ್ಲಿ ಈ ಸಿನಿಮಾ ತುಮಕೂರಿನಲ್ಲಿ ಇಲ್ಲವಲ್ಲ ಎಂದು ನೊಂದು ಕೊಂಡಿದ್ದೆ. ನನ್ನದೊಂದು ಅಭ್ಯಾಸವಿದೆ. ಯಾರಾದರೂ ಸಿನಿಮಾದ ಬಗ್ಗೆ ಒಂದು ಒಳ್ಳೆಯ ಅಭಿಪ್ರಾಯ ಹೇಳಿದರೆಂದರೆ ಮುಗಿಯಿತು. ಏನಾದರು ಮಾಡಿ ಆ ಸಿನಿಮಾ ನೋಡಿಬಿಡಬೇಕು. ಒಂದಷ್ಟು ಪ್ರೇರಣೆ ಪಡೆದು ಬಿಡಬೇಕು.

ಅಲ್ಲಿಗೆ ಭಾನುವಾರ ಮಾರ್ನಿಂಗ್ ಷೋ “ಬಾಲ್ ಪೆನ್” ಗೆ ಹೋಗುವುದೆಂದು ತೀರ್ಮಾನವಾಯಿತು. ಸ್ವಲ್ಪ ಹೊತ್ತಿನ ನಂತರ ಮತ್ತೆ ಬಂದ ಶಿವುರವರ ಫೋನ್ ನನ್ನ ಬರುವಿಕೆಯನ್ನು ಖಚಿತಪಡಿಸಿಕೊಂಡಿತು.

ರಜಾದಿನಗಳಲ್ಲಿ ಓದುವುದೊಂದನ್ನು ಬಿಟ್ಟು, ಉಳಿದಕ್ಕೆಲ್ಲಾ ಸೋಂಬೇರಿಯಾಗುವ ನಾನು ೪ ಘಂಟೆಗೆ ಅಲಾರಂ ಹೊಡೆದರೂ, ಅದನ್ನು ಆಫ್ ಮಾಡಿ ೬ಕ್ಕೆ ಗಡಿಬಿಡಿಯಲ್ಲೇ ಎದ್ದೆ. ೭.೨೦ಕ್ಕೆ ರೈಲು. ಒಂದೇ ಉಸಿರಿಗೆ ಸ್ನಾನ ಮುಗಿಸಿ ಸ್ಟೇಷನ್ನಿಗೆ ದೌಡಾಯಿಸಿದೆ. ಸರಿಯಾದ ಸಮಯಕ್ಕೆ ರೈಲು ಬಂತು. ಹತ್ತಿ ಕೂತವನು ಉದಯವಾಣಿಯ “ಸಾಪ್ತಾಹಿಕ ಸಂಪದ” ದಲ್ಲಿ ಮೊದಲಿಗೆ ಪುರುಷೋತ್ತಮ ಬಿಳಿಮಲೆಯವರ “ಹಲವು ಮಹಾಭಾರತಗಳ ಕತೆ” ಲೇಖನವನ್ನು ಓದಿದೆ. (ಪ್ರತಿಯೊಬ್ಬರು ಓದಲೇಬೇಕಾದ ಲೇಖನವಿದು. ಅದಕ್ಕೆ ಇಲ್ಲಿ ಪ್ರಸ್ತಾಪಿಸಿದ್ದೇನೆ) ನಂತರ, ನೆಚ್ಚಿನ “ಬದುಕ ಬದಲಿಸಬಹುದು”, ವಾರದ ಕಥೆ, ಜೋಗಿಯವರ ಮಾಯಾಕನ್ನಡಿ ಓದುವ ಹೊತ್ತಿಗೆ ಯಶವಂತಪುರ ಬಂದಿತ್ತು. ನಂತರ ಶಿವುರವರು ಹೇಳಿದಂತೆ ಮಲ್ಲೇಶ್ವರಂನಲ್ಲಿ ಇಳಿದು ಅವರನ್ನು ಭೇಟಿ ಮಾಡಿ, ಇಬ್ಬರು ಒಟ್ಟಿಗೆ ತಿಂಡಿ ಮುಗಿಸಿ ಕೈಲಾಷ್ ಚಿತ್ರಮಂದಿರದ ಬಳಿಗೆ ಅವರ ಸ್ಕೂಟಿಯಲ್ಲಿ ಹೊರಟೆವು.

ಅದಾಗಲೇ ನಮ್ಮ ಪ್ರಕಾಶನದ ಪುಸ್ತಕಗಳ ಬಿಡುಗಡೆಯ ಸಮಯದಲ್ಲಿ ಪರಿಚಯವಾಗಿದ್ದ ಶ್ರೀಮತಿ ಜ್ಯೋತಿ ಬಸುರವರು ಮತ್ತವರ ಗುಂಪು ನಮ್ಮ ಆಗಮನವನ್ನು ನಿರೀಕ್ಷಿಸಿತ್ತು. ನಮಗಾಗಿ ಟಿಕೇಟನ್ನೂ ಕಾದಿರಿಸಲಾಗಿತ್ತು. ನಾನು ತುಮಕೂರಿನಿಂದ ಹೋದದ್ದು ಶಿವುರವರು ಹೇಳಿದಂತೆ ಅವರನ್ನು ಆಶ್ಚರ್ಯವಚಕಿತರನ್ನಾಗಿಸಿತ್ತು. ಎಲ್ಲಾ ಗೆಳೆಯರನ್ನೂ ಮಾತನಾಡಿಸುವ ಸಮಯಕ್ಕೆ ಸಿನಿಮಾದ ಸಮಯವೂ ಆಯಿತು.

***

ತದೇಕಚಿತ್ತದಿಂದ ಸಿನಿಮಾ ನೋಡಿದೆ. “ಬಾಲ್ ಪೆನ್” ಸಿನಮಾದಲ್ಲಿ ಮೊದಲು ಮನಸೆಳೆದದ್ದು ಬಾಲಕರ ಮುಗ್ಧ ಅಭಿನಯ. ಕೇಶವ, ಕೆಂಪ, ಬಾಲ... ರೀಟಾ, ಕಡೆಗೆ ಶಿವಯ್ಯ.

“ಬಾಲ್ ಪೆನ್” ಸಿನಿಮಾದ ಕಥೆಯನ್ನು ನಟ ಶ್ರೀನಗರಕಿಟ್ಟಿಯವರ ಗೆಳೆಯರಾದ ಮಂಜುನಾಥರವರು ಬರೆದಿರುತ್ತಾರೆ. ಕಥೆಯಾಗಿಯೂ ಇದೊಂದು ಉತ್ತಮ ಕಥೆಯಾಗಿದೆ. ಹೇಳಬೇಕೆಂದರೆ ಈ ಸಿನಿಮಾದ ನಿಜವಾದ ಹೀರೊ ಕಥೆಯೇ! ಕಥೆಗೆ ತಕ್ಕಂತೆ ಚಿತ್ರಕಥೆ, ಸಂಭಾಷಣೆ ಬರೆದು ಶಶಿಕಾಂತ್ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸಿರುತ್ತಾರೆ. ಪ್ರತಿಯೊಂದು ದೃಶ್ಯದಲ್ಲೂ ನಿರ್ದೇಶಕರ ಜಾಣ್ಮೆ ಎದ್ದು ತೋರುತ್ತದೆ. ಇದಕ್ಕೆ ಪೂರಕವಾಗಿ ರಾಜ್‌ಕುಮಾರ್‌ರವರ ಛಾಯಾಗ್ರಹಣ. ಇವರೆಲ್ಲರ ಕೆಲಸ ನಮ್ಮ ಕಣ್ಮುಂದೆ ಮೂಡುತ್ತಿದ್ದರೆ ಅದಕ್ಕೆ ಸರಿಸಾಟಿಯಾಗಿ ನಮ್ಮ ಕಿವಿಗಳಿಗೆ ಮಣಿಕಾಂತ್ ಕದ್ರಿಯವರ ಇಂಪಾದ ಸಂಗೀತವಿದೆ. ನಾನಂತೂ ಈ ಹಿನ್ನೆಲೆ ಸಂಗೀತವನ್ನು ಒಂದು ಉತ್ತಮ ಸಂಗೀತ ಕಛೇರಿಯೆಂದೇ ಕರೆಯಲು ಇಚ್ಚಿಸುತ್ತೇನೆ. ಆಗಾಗ ಸಿನಿಮಾಗೆ ಹೊಂದಿಕೊಂಡಂತೆ ಒಳ್ಳೆಯ ಸಾಹಿತ್ಯವಿರುವ ಹಾಡುಗಳಿವೆ. ಸರಳವಾಗಿ, ಸುಂದರವಾಗಿ ಒಂದು ಸಿನಿಮಾಗೆ ಉತ್ತಮ ಉದಾಹರಣೆ “ಬಾಲ್ ಪೆನ್”. ಒಟ್ಟಿನಲ್ಲಿ ಸಿನಿಮಾದ ಟೀಂ ವರ್ಕ್ ಗೆದ್ದಿದೆ.

ಸಿನಿಮಾದ ಕಥೆ ಹೇಳುವ ಉದ್ದೇಶ ನನಗಿಲ್ಲ. ಸಿನಿಮಾ ಅನಾಥ ಆಶ್ರಮದಲ್ಲಿ ಶುರುವಾಗಿ ಹಲವು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಕ್ತಾಯವಾಗುತ್ತದೆ. ಬಹುಮುಖ್ಯವಾಗಿ ಸಮಾಜದ ಕೆಲವು ಮೌಢ್ಯಗಳ ಮೇಲೂ ಬೆಳಕು ಚೆಲ್ಲಿದೆ. ಇದೆಲ್ಲಾ ಮಕ್ಕಳ ಮೂಲಕ ಹೇಳಲ್ಪಟ್ಟರೂ ಇದು ಸಂಪೂರ್ಣ ಮಕ್ಕಳ ಸಿನಿಮಾವಲ್ಲ. ಸಿನಿಮಾದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುವ ಹಿರಿಯರೂ ಇದ್ದಾರೆ. ಮತ್ತು ಇದೂ ಹಿರಿಯರೂ ತಪ್ಪದೆ ನೋಡಲೇ ಬೇಕಾದ ಸಿನಿಮಾ. ಇಲ್ಲಿ “ಬಾಲ್ ಪೆನ್” ಒಂದು ರೂಪಕವಾಗಿ “pen is mightier than sword” ಎಂಬುದನ್ನು ನಿರೂಪಿಸಿದೆ.

ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಈ ಸಿನಿಮಾ ಕುರಿತು ನನ್ನ ಗಮನ ಸೆಳೆಯುವುದಕ್ಕೆ ಮೊದಲ ಕಾರಣ ಆಧುನಿಕತೆಗೆ ತಕ್ಕಂತೆ ಸಿನಿಮಾಗೆ “ಬಾಲ್ ಪೆನ್” ಎಂದು ಹೆಸರಿಟ್ಟಿರುವುದು. ನನ್ನ ಕುತೂಹಲವನ್ನು ಸಿನಿಮಾ ಎಳ್ಳಷ್ಟೂ ಹುಸಿಯಾಗಿಸಿಲ್ಲ. ಸಿನಿಮಾ ಕುರಿತು ಆಸಕ್ತಿ (ಸಿನಿಮಾ ವಿದ್ಯಾರ್ಥಿಗಳು) ಇರುವವರೆಲ್ಲ ಮರೆಯದೆ ಈ ಸಿನಿಮಾ ನೋಡಿ. ನಿಮಗೆ ಕಲಿಯುವುದಕ್ಕೆ ಹಲವು ಸಾಧ್ಯತೆಗಳಿವೆ. ಮರೆಯಬೇಡಿ, ಮರೆತು ನಿರಾಶರಾಗದಿರಿ.

***

ಇದೇನಿದು ಇಷ್ಟೇನಾ ಎಂದು ರಾಗ ಎಳೆಯಬೇಡಿ. “ಬಾಲ್ ಪೆನ್” ಸಿನಿಮಾ ಕುರಿತು ಬರೆಯುವುದಕ್ಕಿಂತ ಸಿನಿಮಾ ನೋಡಿದ ಸಾಧ್ಯೆತೆಯ ಬಗ್ಗೆಯೇ ಹೆಚ್ಚು ಬರೆಯಲು ಕಾರಣಗಳಿವೆ. ಮೊದಲನೇ ಕಾರಣವೆಂದರೆ, ಕಥೆಯನ್ನು ನಾನೇ ಹೇಳಿಬಿಟ್ಟರೆ, ನೀವು ಇನ್ನೇನು ಸಿನಿಮಾ ನೋಡೋದು ಬಿಡು ಎಂಬ ಭಾವನೆ ತಾಳದಿರಲೆಂದು. ಜೊತೆಗೆ ಸಿನಿಮಾದ ಬಗ್ಗೆ ನಿಮ್ಮ ಕುತೂಹಲವಿರಲಿ ಎಂದು. ಮತ್ತೊಂದು ಕಾರಣ, ಒಂದು ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಅದನ್ನು ತಮ್ಮ ಗೆಳೆಯರಿಗೂ ತೋರಿಸಿ ಒಂದು ಕನ್ನಡ ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಯತ್ನಿಸಿದ ಗೆಳೆಯರ ಕುರಿತು ಹೇಳಲೆಂದು. ಈ ಸಿನಿಮಾ ಬಿಡುಗಡೆಯಾದ ದಿನ (ನನಗೆ ದೊರೆತ ಮಾಹಿತಿಯಂತೆ ಎಲ್ಲಾ ಉತ್ತಮ ಸಿನಿಮಾಗಳಂತೆ ಈ ಸಿನಿಮಾವೂ ಬೆಂಗಳೂರಿನಲ್ಲಿ ಬಿಡುಗಡೆಯಾಗಲು ಬಹಳ ಕಷ್ಟಪಟ್ಟಿದೆ) ನನ್ನ ಸ್ನೇಹಿತರಾದ ಶ್ರೀಮತಿ ಜ್ಯೋತಿ ಬಸು, ಸತೀಶ್ ಕನ್ನಡಿಗ, ಶಿವು ಕೆ. ಇವರನ್ನೊಳಗೊಂಡ ಸುಮಾರು ೬೦ ಜನರ ತಂಡವೊಂದು ಒಟ್ಟಾಗಿ ಸಿನಿಮಾ ನೋಡಿದೆ. ನಂತರ ಭಾನುವಾರ ಮತ್ತೊಮ್ಮೆ ನನ್ನನ್ನೂ ಒಳಗೊಡಂತೆ ಹಲವು ಗೆಳೆಯರಿಗೆ ಸಿನಿಮಾ ಕುರಿತು ಮಾಹಿತಿಯನ್ನು ನೀಡಿ, ಸಿನಿಮಾವನ್ನು ನೋಡಲು ಸಹಕರಿಸಿದೆ. ಇದೊಂತರ, ನಮ್ಮ ಹುಟ್ಟಿದ ಹಬ್ಬವನ್ನು ನಮ್ಮ ಗೆಳೆಯರೊಂದಿಗೆ ಸಿಹಿಹಂಚಿ ಸಂಭ್ರಮಿಸುವುದೇ ಆಗಿದೆ. ನಾನಿಲ್ಲಿ ಹುಟ್ಟುಹಬ್ಬವನ್ನು ಏತಕ್ಕೆ ಉದಾಹರಣೆಯಾಗಿ ಕೊಟ್ಟೆನೆಂದರೆ, ಸಿನಿಮಾದಲ್ಲಿ ‘ತಿಂಡಿಪೋತ’ ಬಾಲ, ತನ್ನ ಗೆಳೆಯ ‘ಮಾಹಿತಿ ಕಣಜ’ ಕೇಶವನಿಗೆ, ‘ನಿನಗೆ ಎಲ್ಲರ ಜನ್ಮದಿನ ಗೊತ್ತು, ಅನಾಥರ ಹುಟ್ಟುಹಬ್ಬ ಯಾವತ್ತು ಅಂಥಾ ಗೊತ್ತೆನೋ” ಎಂಬರ್ಥದ ಮಾತುಗಳನ್ನಾಡುತ್ತಾನೆ. ಅದಕ್ಕೆ ಕೇಶವ, ‘ಅದು ಆಗಸ್ಟ್ ೨೬. ನಮ್ಮಮ್ಮ ಮದರ್ ಥೆರೆಸಾ ಜನ್ಮದಿನ’ ಎಂದೇಳುತ್ತಾ ಸಮಾಧಾನ ಮಾಡುತ್ತಾನೆ. ಅಲ್ಲಿಗೆ ನೀವೂ ನಿಮ್ಮ ಗೆಳೆಯರೊಂದಿಗೆ ಸಿನಿಮಾವನ್ನು ನೋಡುತ್ತೀರಾ ಎಂದಾಯಿತು. ಸಿಹಿಯನ್ನು ಗೆಳೆಯರೊಂದಿಗೆ ಹಂಚಿ ತಿಂದರೆ ಆ ಮಜಾನೆ ಬೇರೆ. ಅಲ್ಲವೇ?

***

ಸಿನಿಮಾ ಮುಗಿಯುವ ಹೊತ್ತಿಗೆ ಸರಿಯಾಗಿ ನಿರ್ದೇಶಕರಾದ ಶಶಿಕಾಂತ್ ಬಂದಿದ್ದರು. ಅವರ ಜೊತೆ ನಮ್ಮೆಲ್ಲರ ಫೋಟೋಶೂಟ್ ನಡೆಯಿತು. ಒಂದಷ್ಟು ಮಾತು, ಜೊತೆಗೆ ನಿರ್ದೇಶಕರೇ ಪ್ರೀತಿಯಿಂದ ಕುಡಿಸಿದ ಕಾಫೀ (ಉಳಿದವರೆಲ್ಲ ಜ್ಯೂಸ್) ಮತ್ತು ಒಂದಷ್ಟು ಸಿನಿಮಾ ನಿರ್ಮಾಣದ ಬಗ್ಗೆ ಮಾಹಿತಿ. ನನ್ನ “ಮುಗುಳ್ನಗೆ” ಪುಸ್ತಕವನ್ನು ಪ್ರೀತಿಯಿಂದ ನಿರ್ದೇಶಕರಿಗೆ ಕೊಟ್ಟು ನನ್ನ ಆಸಕ್ತಿಯನ್ನು ಅವರಿಗೆ ಹೇಳಿದೆ. ನಂತರ ಎಲ್ಲಾ ಗೆಳೆಯರಿಗೆ ಪ್ರೀತಿಯ ವಿದಾಯ.

ಸಿನಿಮಾ ನೋಡುವ ನೆಪದಲ್ಲಿ ನನ್ನ ಇನ್ನೊಂದು ಬಹುಕಾಲದ ಬಯಕೆ ನೆರವೇರಿತು. (ನೀವು ಬಸುರಿಯ ಬಯಕೆಯೇ ಎಂದು ಕೇಳಿದರೂ ತಪ್ಪಿಲ್ಲ. ನನ್ನ ಹೊಟ್ಟೆಯೂ ತುಂಬಾ ತುಂಬಾ ದಪ್ಪವಾಗಿದೆ) ಅದು ಬೆಂಗಳೂರಿನ “ಮಾದಪ್ಪನ ಮೆಸ್” ಮುದ್ದೆ ಊಟ. ಶಿವು ಸರ್ ನನ್ನ ಬಹುಕಾಲದ ಬಯಕೆ ಈಡೇರಲು ಕಾರಣವಾದರು. ಊಟವಾದ ನಂತರ ನಾವಿಬ್ಬರು ಪರಸ್ಪರ ವಿದಾಯ ಹೇಳಿದೆವು. ಗೆಳೆಯರೆಲ್ಲರ ಪ್ರೀತಿಯನ್ನು ಕೃತಜ್ಞತೆಯಿಂದ ನೆನೆಯುತ್ತಾ ನಾನು ಸಂಜೆಗೆ ತುಮಕೂರಿಗೆ ವಾಪಸ್ಸಾದರೂ, ನನ್ನ ಮನಸ್ಸು “ಬಾಲ್ ಪೆನ್” ಗುಂಗಿನಲ್ಲಿಯೇ ಇದೆ.

ಅಂದ ಹಾಗೆ, ದಿನಾ ದಿನಾ ಆಚರಿಸಬೇಕಾದ ಕನ್ನಡಮ್ಮನ ಹಬ್ಬವನ್ನು ನವೆಂಬರ್ ತಿಂಗಳು ಪೂರ್ತಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ನೀವು ಒಂದರ್ಧ ದಿನ “ಬಾಲ್ ಪೆನ್” ಸಿನಿಮಾ ನೋಡುವುದರ ಮೂಲಕ ಅರ್ಥಪೂರ್ಣಗಾಗಿ ಆಚರಿಸಿಬಿಡಿ.

ಪ್ರೀತಿಯಿಂದ,
ಗುಬ್ಬಚ್ಚಿ ಕನ್ನಡಿಗ.





ಭಾನುವಾರ, ಅಕ್ಟೋಬರ್ 21, 2012

ಹಲವು ಕನಸುಗಳು ನನಸಾದ ಬಗೆ

ಅದು ೧೯೯೯ರ ವರ್ಷ. ಆಗಷ್ಟೆ ನನ್ನ ಪದವಿ ಫಲಿತಾಂಶ ಬಂದಿತ್ತು. ಮುಂದೆ ಓದುವ ಇಚ್ಛೆಯಿದ್ದರೂ ಹಣಕಾಸಿನ ತೊಂದರೆಯಿಂದ ಕೆಲಸ ಹುಡುಕುವುದೆಂದು ನಿರ್ಧಾರವಾಗಿತ್ತು. ಅದಾಗಲೇ ನನಗೆ ನನ್ನ ವಾರಿಗೆಗಿಂತಲೂ ಹಿರಿಯರಾದ ಕೆಲವು ಗೆಳೆಯರಿದ್ದರು. ಅದರಲ್ಲಿ ಗುಬ್ಬಿಯ ಮಂಜುನಾಥ ಹೋಟೆಲ್ಲಿನ ವಿಶು ಕೂಡ ಒಬ್ಬರು. ಅವರು ಶೈಕ್ಷಣಿಕವಾಗಿ ಹೆಚ್ಚೇನು ಓದಿಲ್ಲದಿದ್ದರೂ ಅವರಿಗೆ ಇದ್ದ ಸಾಹಿತ್ಯದ ಬಗೆಗಿನ ಆಸಕ್ತಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಇದ್ದ ಮಾಹಿತಿಗಳಿಂದ ನನ್ನಲ್ಲಿ ವಿಶೇಷ ಆಸಕ್ತಿ ಬೆಳೆಸಿದ್ದರು. ಅವರ ಹೋಟೇಲಿನಲ್ಲಿ ಗುಬ್ಬಿಗೆ ಬರುತ್ತಿದ್ದ ಎಲ್ಲಾ ನ್ಯೂಸ್‌ಪೇಪರ್‌ಗಳು ಸಿಗುತ್ತಿದ್ದವು. ನಾನಂತೂ ಭಾನುವಾರದ ಬೆಳಗಿನ ಲೈಬ್ರರಿ ವಿಸಿಟ್ ಮುಗಿದ ಮೇಲೆ ಅಲ್ಲೇ ಹತ್ತಿರದಲ್ಲೇ ಇದ್ದ ಇವರ ಹೋಟೆಲ್ಲಿಗೆ ಸುಮಾರು ೧೧ ಗಂಟೆಯ ಹೊತ್ತಿಗೆ ಹೋಗಿಬಿಡುತ್ತಿದೆ. ಆ ಸಮಯಕ್ಕೆ ಸರಿಯಾಗಿ ವಿಶುವಿನ ಕೆಲವು ಗೆಳೆಯರು, ಜೊತೆಗೆ ಬಹುಮುಖ್ಯವಾಗಿ ಗುರು-ಗೆಳೆಯ ಮೃತ್ಯುಂಜಯ ಬರುತ್ತಿದ್ದರು. ಭಾನುವಾರವಾದ್ದರಿಂದ ಅಷ್ಟೇನೂ ಜನರಿರುತ್ತಿರಲಿಲ್ಲ. ನಮ್ಮ ಮಾತುಗಳಿಗೆ, ಓದಿಗೆ, ಕಾಫೀ, ಟೀ ಕುಡಿಯಲಿಕ್ಕೆ ಹೋಟೇಲ್ ಸಾಕ್ಷಿಯಾಗುತ್ತಿತ್ತು. ಲೈಬ್ರರಿಯಲ್ಲಿ ಓದಲಾಗದ ಭಾನುವಾರದ ಪುರವಣಿಗಳನ್ನು ತೆಗೆದುಕೊಂಡು ನಾನೊಂದು ಮೂಲೆಯಲ್ಲಿ ಕುಳಿತು ಏನನ್ನಾದರೂ ಓದುವುದಕ್ಕೆ ಹಚ್ಚುತ್ತಿದ್ದೆ. ಕಾಫೀ ಕುಡಿದ ಮೇಲೆ ಎಲ್ಲಾ ಗೆಳೆಯರೂ ಒಂದಷ್ಟು ಹೊತ್ತು ಹರಟಿ ಹೊರಟುಬಿಡುತ್ತಿದ್ದರು. ಕಡೆಗೆ ನಾನು ವಿಶು ಊಟದ ಸಮಯದವರೆಗೂ ಕುಳಿತು ಒಂದಷ್ಟು ಹರಟುತ್ತಿದ್ದೆವು. ನಮ್ಮಿಬ್ಬರ ಮಾತುಗಳಲ್ಲಿ ಯಾವಾಗಲೂ ಬರುತ್ತಿದ್ದದ್ದು ಸಾಹಿತ್ಯ ಮತ್ತು ಸಾಹಿತಿಗಳ ಬದುಕು ಮಾತ್ರ. ಅದಾಗಲೇ ನನಗೆ ವೈಯೆನ್ಕೆ ಪರಿಚಯವಾದದ್ದು. ಅವರ ಅಂಕಣ “ವೆಂಡರ್ ಕಣ್ಣು”ವನ್ನು ತಪ್ಪದೆ ಓದಿರುತ್ತಿದ್ದ ವಿಶು ಅವರ ಪ್ರಖರ ಪನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇವರ ಜೊತೆಗೆ ಲಂಕೇಶ್, ಕುವೆಂಪು, ತೇಜಸ್ವಿ, ವಿಶೇಷವಾಗಿ ಶಿವರಾಮ ಕಾರಂತರ ಪುಸ್ತಕಗಳ ಬಗ್ಗೆ ಹೇಳುತ್ತಿದ್ದರು. ನನಗೆ ಮೊದಲು ವೈಚಾರಿಕತೆಯಿದ್ದ ಗೆಳೆಯರು ಸಿಕ್ಕಿದ್ದರೆ ಅದು ವಿಶುವೇ! ಅವರಿಂದ ನನಗೆ ಎ.ಎನ್. ಮೂರ್ತಿರಾಯರ, ಡಾ.ಅಬ್ರಾಹಂ ಕೋವೂರರ ಪರಿಚಯವಾಗಿತ್ತು. ಮೂರ್ತಿರಾಯರು ಬರೆದ ದೇವರು, ದೆವ್ವ ಕುರಿತ ಹಲವು ಲೇಖನಗಳನ್ನು ಓದಿದ್ದೆ. ಕೋವೂರರ “ದೇವರು, ದೆವ್ವ, ವಿಜ್ಞಾನ” ಪುಸ್ತಕವನ್ನು ಇಡೀಯಾಗಿ ಓದಿ ಮುಗಿಸಿದ್ದೆ.

ವಿಶುವಿಗೆ ಟ್ಯಾಬ್ಲಯ್ಡಗಳ ಬಗೆಗೂ ಪರಿಚಯವಿತ್ತು. ಆ ಕಾಲದಲ್ಲಿ ಉತ್ತುಂಗದಲ್ಲಿದ್ದ “ಹಾಯ ಬೆಂಗಳೂರ್” ಪತ್ರಿಕೆಯ ರವಿಬೆಳಗೆರೆಯ ಬಗ್ಗೆ ದಂತಕಥೆಗಳೆ ಹುಟ್ಟಿಕೊಂಡಿದ್ದವು. ವಿಶು ತಪ್ಪದೇ ಓದುತ್ತಿದ್ದ ಪತ್ರಿಕೆಗಳ ಪೈಕಿ ಅದು ಬಹು ಮುಖ್ಯವಾಗಿತ್ತು. ಆ ಪತ್ರಿಕೆಯನ್ನು ಮೊದಲು ತಂದವರೇ ವಿಶು ಅದರಲ್ಲಿರುತ್ತಿದ್ದ ಜಾನಕಿ ಕಾಲಂ ಓದಿಬಿಡುತ್ತಿದ್ದರು. ಕಾರಣ ಕೇಳಿದರೆ, ಇವರ್ಯಾಿರೋ ಬೆಂಗಳೂರಿನ ಕಾಲೇಜಿನಲ್ಲಿ ಕನ್ನಡ ಪ್ರೊಫೇಸರ್ (ಲೇಡಿ) ಇರಬೇಕು, ಚೆನ್ನಾಗಿ ಬರೀತಾರೆ ಎಂದು ಹೇಳುತ್ತಿದ್ದರು. ಆಗೊಮ್ಮೆ ಈಗೊಮ್ಮೆ ನಾನೂ ಕಣ್ಣಾಡಿಸುತ್ತಿದ್ದರೂ ಮೊದಲು ಕೆಲಸ ಹುಡುಕುವ ಧಾವಂತದಲ್ಲಿದ್ದದರಿಂದ ಹೆಚ್ಚೇನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆ ಜಾನಕಿ ಜೋಗಿಯವರು ಎಂದು ನನಗೆ ಗೊತ್ತಾಗಿದ್ದು ಸುಮಾರು ೨೦೦೬-೦೭ರಲ್ಲಿ ಇರಬೇಕು. ಅದೂ ಈಟಿವಿಯವರು ಇವರ ಬಗ್ಗೆ ಪರಿಚಯಮಾಡಿಕೊಟ್ಟಮೇಲೆ!

ಇದೆಲ್ಲಾ ಇರಲಿ, ಅಲ್ಲಿಯವರೆಗೂ ಏನಾನ್ನಾದರೂ ಬರೆಯಬೇಕೆಂದು ಚಿಂತಿಸುತ್ತಿದ್ದ ನನಗೆ ಏನನ್ನು ಬರೆಯಬೇಕು? ಹೇಗೆ ಬರೆಯಬೇಕು? ಎಂದು ಸರಿಯಾಗಿ ತೋಚುತ್ತಿರಲಿಲ್ಲ. ಎಂಟನೇ ತರಗತಿಯಲ್ಲಿ ಒಂದು ಕಥೆ ಬರೆದು ಯಾರಾದರೂ ನೋಡಿಬಿಟ್ಟರೆ ಗತಿಯೇನು ಎಂಬ ಭಯದಿಂದಲೇ ಅದನ್ನು ಹರಿದುಹಾಕಿದ್ದೆ (ಭಯವೇಕಿತ್ತು ಎಂದು ನನಗೆ ಈಗಲೂ ಸರಿಯಾಗಿ ತಿಳಿದಿಲ್ಲ). ಆ ಸಂದರ್ಭದಲ್ಲಿ (೧೯೯೯) ಅರುಧಂತಿ ರಾಯ್‌ಳ “ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಪುಸ್ತಕಕ್ಕೆ ಪ್ರತಿಷ್ಟಿತ ಬೂಕರ್ ಪ್ರಶಸ್ತಿ ಬಂದಿತ್ತು. ನಾನು ಸುಮ್ಮನೆ ಅವಳಿಗೆ ಬಂದಿದ್ದ ಪ್ರಶಸ್ತಿಯ ಮೊತ್ತವನ್ನು ಲೆಕ್ಕ ಹಾಕಿದ್ದೆ. ಹತ್ತಿರತ್ತಿರ ಐವತ್ತು ಲಕ್ಷಗಳು. ಆಗಲೇ ನನ್ನಲ್ಲಿದ್ದ ನಿರುದ್ಯೋಗಿ ನಿನ್ಯಾಕೆ ಒಂದು ಪುಸ್ತಕವನ್ನು ಬರೆದು ಇಷ್ಟು ಮೊತ್ತವನ್ನು ಗಳಿಸಬಾರದೆಂದು ಲೆಕ್ಕಹಾಕಿದ್ದ. ಎಂಥಾ ಹುಚ್ಚು ಭ್ರಮೆ!

ಅದು ಇಷ್ಟಕ್ಕೆ ಮುಗಿಯಲಿಲ್ಲ. ಒಂದು ರಾತ್ರಿ ಊಟವಾದ ಬಳಿಕ ವಿಶುವಿನ ಜೊತೆ ಸಣ್ಣ ತಿರುಗಾಟದಲ್ಲಿ ವಿಶುವನ್ನು ಕೇಳಿಯೆಬಿಟ್ಟೆ. ವಿಶು ನಾನೊಂದು ಪುಸ್ತಕ ಬರೆಯಬೇಕೆಂದಿರುವೆ? ವಿಶುವಿಗೆ ಗೊತ್ತಿತ್ತು ನಾನು ಕನ್ನಡದಲ್ಲಷ್ಟೆ ಬರೆಯಬಲ್ಲೆನೆಂದು. ಅವರು ಸಣ್ಣ ಆಶ್ಚರ್ಯಬವನ್ನಷ್ಟೆ ವ್ಯಕ್ತ ಪಡಿಸಿ ಬರೆಯುವುದೆನೋ ಸರಿ, ಆದರೆ, ಕನ್ನಡದಲ್ಲಿ ಪುಸ್ತಕ ಮಾಡುವುದು ಅದನ್ನು ಮಾರಾಟ ಮಾಡುವುದು ತುಂಬ ಕಷ್ಟದ ಕೆಲಸ. ಅದಕ್ಕೆಲ್ಲಾ ತುಂಬಾ ಹಣ ಖರ್ಚಾಗುತ್ತದೆ, ಜೊತೆಗೆ ಹೊಸಬರ ಪುಸ್ತಕಗಳನ್ನು ಯಾರೂ ಪ್ರಕಾಶಿಸಲು ಇಷ್ಟಪಡುವುದಿಲ್ಲ ಮತ್ತು ಯಾರೂ ಕೊಂಡು ಓದುವುದಿಲ್ಲ ಎಂದು ವಾಸ್ತವವನ್ನು ಹೇಳಿದ್ದರು. ಎಸ್.ಎಲ್.ಭೈರಪ್ಪ ಮತ್ತು ರವಿಬೆಳಗೆರೆಯವರ ಪುಸ್ತಕಗಳು ಮಾತ್ರ ಚೆನ್ನಾಗಿ ಮಾರಾಟವಾಗುತ್ತವೆ, ಇನ್ನೂ ಉತ್ತಮ ಲೇಖಕರಿದ್ದರೂ ಅವರ ಪುಸ್ತಕಗಳು ಅಷ್ಟೇನೂ ಖರ್ಚಾಗುವುದಿಲ್ಲ ಎಂದು ವಿವರಿಸಿದ್ದರು. ಜೊತೆಗೆ ಬಹಳ ಹಿಂದೆ ಅವರದೊಂದು ಕವನವನ್ನು ಸೇರಿಸಿ ಹೊರತಂದಿದ್ದ “ಕತ್ತಲೆಗೆ ಮೂರು ಬಣ್ಣ” ಎಂಬ ಕವನ ಸಂಕಲನದ ಬಗೆಗೂ ಹೇಳಿದರು. ಅವರ ಹಿರಿಯ ಸಾಹಿತಿ ಮಿತ್ರರಾದ ಹಂಪಣ್ಣ ಸರ್, ಎಂ.ಹೆಚ್.ಎನ್. ಸರ್ ಮತ್ತಿತ್ತರರು ಸೇರಿ ಈ ಪುಸ್ತಕವನ್ನು ಹೊರತಂದಿದ್ದರು. ಅದಕ್ಕೆ ಪಟ್ಟ ವ್ಯಥೆಯನ್ನು ಹಂಚಿಕೊಂಡಿದ್ದರು. ಜೊತೆಗೆ ಇದೆಲ್ಲಾ ಬೆಂಗಳೂರಿನಲ್ಲಿರುವವರಿಗೆ ಸುಲಭ ಎಂದು ಹೇಳಿದರು. ಕನ್ನಡ ಮತ್ತು ಇಂಗ್ಲೀಷ್ ಪುಸ್ತಕ ಮಾರುಕಟ್ಟೆಯತ್ತಲೂ ನಮ್ಮ ಚರ್ಚೆ ಮುಂದುವರಿದು ಸಾಕಷ್ಟು ಮಾಹಿತಿ ನನಗೆ ದೊರೆತ್ತಿತ್ತು.

ಅಲ್ಲಿಗೆ ಸದ್ಯಕ್ಕೆ ಪುಸ್ತಕವೊಂದನ್ನು ಬರೆದು ಪ್ರಕಟಿಸಿ, ಮಾರುವ ಬದಲು ಒಂದು ಕೆಲಸ ಹುಡುಕಿಕೊಂಡು ನಂತರ ಇದರ ಬಗ್ಗೆ ಚಿಂತಿಸಬೇಕೆಂದು ನನಗೆ ನಾನೇ ತಿಳಿ ಹೇಳಿಕೊಂಡದ್ದಾಯಿತು.

ತದನಂತರ ನನ್ನ ಜೀವನದಲ್ಲಿ ನಾನೆಂದೂ ಉಹಿಸಲಾರದ ರೀತಿಯಲ್ಲಿ ಹಲವು ಬದಲಾವಣೆಗಳಾಗಿ ನಾನೇನಾಗುವೇನೋ ನನಗೆ ಸರಿಯಾಗಿ ತಿಳಿಯದಾಯಿತು. ಆಗ ನನ್ನ ಕೈ ಹಿಡಿದಿದ್ದು ಸಾಹಿತ್ಯ. ಆಗ ಮತ್ತೆ ಹೆಚ್ಚು ಹೆಚ್ಚು ಓದಲು ಶುರುಮಾಡಿದೆ. ಆ ಓದೇ ಏನೋ ನನ್ನಿಂದ ಕೆಲವು ಕವನಗಳನ್ನು ಬರೆಯಲಾರಂಭಿಸಿತು. ಅದಕ್ಕೆ ಪ್ರೀತಿಯ ಪ್ರೇರಣೆಯೂ ದೊರೆಯಿತು. ಆ ಹಲವು ಕವನಗಳಿಗೆ ವಿಶುವೇ ಮೊದಲ ಸಾಕ್ಷಿಯಾದರು. ಹಲವರು ಓದಿ ಪ್ರೋತ್ಸಾಹಿಸಿದರು. ಇದರಲ್ಲಿ ಬಹುಮುಖ್ಯವಾಗಿ ದೇವರು ಕೊಟ್ಟ ತಂಗಿ ಸುಷ್ಮಾ ಮತ್ತು ಜೀವದ ಗೆಳೆಯ ಮೃತ್ಯುಂಜಯರು. ನನ್ನವಳಿಗೆ (ಆಗಿನ್ನೂ ಮದುವೆಯಾಗಿರಲಿಲ್ಲ) ನನ್ನೆಲ್ಲಾ ಕವನಗಳು ಮೆಚ್ಚುಗೆಯಾಗುತ್ತಿದ್ದವು.

ಹೀಗೆ ಕಾಲ ಕಳೆಯುತ್ತಿರಲು ಕೆಲಸದ ನಿಮಿತ್ತ ತುಮಕೂರಿನಲ್ಲಿ ಮನೆ ಮಾಡಿಕೊಂಡೆ. ಆಗ ಸ್ವಲ್ಪ ಗದ್ಯದ ಕಡೆಗೂ ಗಮನ ಹರಿಸತೊಡಗಿದೆ. ಕಾಲ್ಪನಿಕವಾಗಿ ಕೆಲವು ಲೇಖನಗಳನ್ನು ಬರೆದು ನನ್ನಲ್ಲೇ ಇಟ್ಟುಕೊಳ್ಳತೊಡಗಿದೆ. ಜೊತೆಗೆ ನನ್ನ ಬಳಿ ಕುತೂಹಲಭರಿತ ಒಳ್ಳೊಳ್ಳೆ ಲೇಖನಗಳ ಸಂಗ್ರಹವಿತ್ತು. ನನ್ನ ಲೇಖನಗಳನ್ನು ಯಾವ ಪತ್ರಿಕೆಗೂ ಕಳುಹಿಸುತ್ತಿರಲ್ಲಿಲ್ಲ. ನಾನೇ ಆಗಾಗ ತೆರೆದು ಓದುವುದು, ಮತ್ತೆ ತಿದ್ದುವುದು. ಹೀಗೇ ಸಾಗಿತ್ತು...

ಮದುವೆಯಾದ ನಂತರ, ಶ್ರೀಮತಿಯ ಪ್ರೋತ್ಸಾಹದಿಂದ ಮತ್ತಷ್ಟು ಬರೆಯತೊಡಗಿದೆ. ಆಗಷ್ಟೇ ಎಸ್.ಎಸ್.ಪುರಂನ ಶೆಟ್ಟರ ಪುಸ್ತಕದಂಗಡಿಯಲ್ಲಿ “ನಿಮ್ಮೆಲ್ಲರ ಮಾನಸ” ಎಂಬ ಮಾಸ ಪತ್ರಿಕೆಯೂ ಪರಿಚಯವಾಗಿತ್ತು. ಶ್ರೀಮತಿಯ ಪ್ರೋತ್ಸಾಹದಿಂದ ಒಂದು ಸಂಗ್ರಹ ಲೇಖನವನ್ನು ಮಾನಸಕ್ಕೆ ಕಳುಹಿಸಿ ಆತಂಕದಲ್ಲಿದ್ದೆ. ಅದಕ್ಕೂ ಮುಂಚೆ ಕೆಲವು ನಗೆಹನಿಗಳು ವಿಜಯಕರ್ನಾಟಕದ “ನಗೆವಿಜಯ” ಅಂಕಣದಲ್ಲಿ ಪ್ರಕಟವಾಗಿ ಮಿಂಚಿ ಮರೆಯಾಗಿದ್ದವು. ಒಂದು ದಿನ ಬೆಳಗ್ಗೆ ನಾನು ಸ್ನಾನ ಮಾಡುತ್ತಿದ್ದ ಸಮಯದಲ್ಲಿ ನನ್ನ ಫೋನು ರಿಂಗಣಿಸತೊಡಗಿತು. ನೋಡಿದ ಇವಳು “ರೀ... ಗಣೇಶ್ ಕೋಡೂರ್” ಎಂದು ಒಂದೇ ಉಸಿರಿಗೆ ಬಚ್ಚಲಿಗೆ ಹಾರಿದ್ದಳು. ಫೋನ್ ರಿಸೀವ್ ಮಾಡಿ ವಿಶ್ ಮಾಡಿ ಮಾತನಾಡಿದೆ. ನನ್ನ ಸಂಗ್ರಹ ಚೆನ್ನಾಗಿರುವುದೆಂದು ಅದನ್ನು ಪ್ರಕಟಿಸುವುದಾಗಿಯೂ ಗಣೇಶ್ ಹೇಳಿದರು. ನನ್ನಲ್ಲಿ ವಿದ್ಯುತ್ ಸಂಚಾರವಾಯಿತು. ಅವರೆಷ್ಟು ಸರಳವಾಗಿ ನನ್ನನ್ನು ಗಣೇಶ್ ಎಂದಷ್ಟೇ ಕರಿಯಿರಿ ಎಂದು ಆತ್ಮೀಯತೆ ತೋರಿದರು. ನನಗೆ ಆ ಆತ್ಮೀಯತೆ ಆಪ್ತವಾಯಿತು. ಹೀಗೆ ಹಲವು ವರ್ಷಗಳು ಕಳೆದವು. ಒಮ್ಮೆ ಗೆಳೆಯ ವಿಶುವಿನ ಜೊತೆ ಬೆಂಗಳೂರಿಗೆ ಹೋಗಿ ಗಣೇಶ್ ರವರನ್ನು ಭೇಟಿಮಾಡಿ ಬಂದೆ. ಆಗಾಗ ಏನಾದರು ಕೇಳುವುದಿದ್ದರೆ ಫೋನ್ ಮಾಡಿ ತೊಂದರೆ ಕೊಡುವುದು ಮುಂದುವರಿದೇ ಇತ್ತು.

ಮತ್ತೆ ಅನಿರೀಕ್ಷಿತ ಘಟನೆಗಳು ನನ್ನ ಆರೋಗ್ಯದ ವಿಚಾರವಾಗಿ ನಡೆದು ತತ್ತರಿಸಿದ್ದೆ. ಆಗೆಲ್ಲಾ ಗಣೇಶರನ್ನು ಮೀಟ್ ಮಾಡಬೇಕೆಂದುಕೊಂಡರೂ ಸುಮ್ಮನೆ ಅವರ ಕ್ರಿಯೇಟಿವ್ ಟೈಮನ್ನು ಹಾಳುಮಾಡುವುದೇಕೆ ಎಂದು ಸುಮ್ಮನಿದ್ದೆ.

ಒಂದಷ್ಟು ಸಮಯದ ನಂತರ ಒಂದೆರಡು ಸಂಗ್ರಹ ಲೇಖನಗಳು ಪ್ರಕಟವಾದ ಮೇಲೆ, ನನ್ನದೇ ಸ್ವಂತ ಲೇಖನಗಳನ್ನು ಮಾನಸಕ್ಕೆ ಕಳುಹಿಸುವುದೆಂದು ನಿರ್ಧರಿಸಿ ಅದನ್ನೂ ಮಾಡಿದೆ. ಸುಂದರವಾದ ಚಿತ್ರಗಳೊಂದಿಗೆ “ನಿನ್ನ ಮನೆಯ, ನನ್ನ ಮನದ ಲಕ್ಷ್ಮೀಯು ನೀನು...” ಎಂಬ ಲೇಖನ ಪ್ರಕಟವಾಗಿ ನನ್ನಲ್ಲಿ ಮತ್ತಷ್ಟು ಹುರುಪು ತುಂಬಿತು. ಆ ಸಮಯಕ್ಕೆ ಸರಿಯಾಗಿ ನನ್ನ ಬ್ಲಾಗ್ ರೂಪುಗೊಂಡಿತ್ತು. ಅದರ ಮುಖಾಂತರವೂ ಒಂದಷ್ಟು ಗೆಳೆಯರು ಸಿಕ್ಕಿದ್ದರು.

ಮತ್ತೊಂದೆರೆಡು ಲೇಖನಗಳು ಮಾನಸದಲ್ಲಿ ಪ್ರಕಟವಾದ ಮೇಲೆ, ಒಂದಷ್ಟು ಹಣವನ್ನು ಹೊಂದಿಸಿಕೊಂಡು ನನ್ನ ಮೊದಲ ಪುಸ್ತಕವಾಗಿ “ಮಳೆಯಾಗು ನೀ...” ಕವನಸಂಕಲನವನ್ನು ನಮ್ಮದೇ ಪ್ರಕಾಶನದಲ್ಲಿ ಪ್ರಕಟಿಸುವುದಾಗಿ ತೀರ್ಮಾನಿಸಿದ್ದೆ.

ಆಗೆಲ್ಲಾ ಸಾಕಷ್ಟು ವಿವರ ನೀಡಿದವರು ಗಣೇಶ್. ಜೊತೆಗೆ ಖ್ಯಾತ ಲೇಖಕಿ ಶ್ರೀಮತಿ ಬಿ.ಸಿ.ಶೈಲಾ ನಾಗರಾಜ್ ರವರ ಮುನ್ನುಡಿಯೊಂದಿಗೆ ಪುಸ್ತಕ ಬಿಡುಗಡೆ ಸಮಾರಂಭ ಚೆನ್ನಾಗಿ ನಡೆಯಿತು. “ಮಳೆಯಾಗು ನೀ...” ನನಗೊಂದಿಷ್ಟು ಹೆಸರನ್ನೂ ತಂದುಕೊಟ್ಟಿತ್ತು. ಈ ಸಂಕಲನದ “ಬೆಚ್ಚಗೆ” ಎಂಬ ಹನಿಗವನ ‘ಎಲ್ಲಾ ಕಾಲದಲ್ಲೂ ಬೆಚ್ಚಗಿರಲು/ಹೆಂಗಸರಿಗೆ ನೈಟಿ/ಗಂಡಸರಿಗೆ ನೈಂಟಿ’ ಟಿವಿಯ ಕಾರ್ಯನಕ್ರಮವೊಂದರಲ್ಲಿ ಉದ್ಗರಿಸಿದ್ದನ್ನ ನಮ್ಮ ಬ್ಯಾಂಕಿನ ಆಗಿನ ನಿರ್ದೇಶಕರಾಗಿದ್ದ ಶ್ರೀ ಟಿ.ವಿ.ಮಂಜುನಾಥರವರಿಂದ (ಇವರೀಗ ಅಧ್ಯಕ್ಷರು) ಮತ್ತು ನನ್ನ ಹಿರಿಯ ಸಹೋದ್ಯೋಗಿ ಶ್ರೀಮತಿ ಆಶಾರವರಿಂದ ತಿಳಿದು ಖುಷಿಗೊಂಡಿದ್ದೆ. ಶ್ರೀಯುತ ಮಂಜುನಾಥರವರು ನನಗೊಂದು ಪೆನ್ನನ್ನು ಉಡುಗೊರೆಯಾಗಿ ಕೂಡ ನೀಡಿದ್ದರು.

ಆನಂತರ ಅದಾಗಲೇ ಮಾನಸದಲ್ಲಿ ಪ್ರಕಟವಾಗಿದ್ದ ಮೊದಲ ಲೇಖನಕ್ಕೆ ಪೂರಕವಾಗಿ ಹಲವು ಲೇಖನಗಳನ್ನು ಬರೆದು ಬ್ಲಾಗಿನಲ್ಲಿ ಪ್ರಕಟಿಸಿ, ಹಲವು ಗೆಳೆಯರನ್ನು ಗಳಿಸಿಕೊಂಡಿದ್ದೆ. ನಂತರ ಮಾನಸದಲ್ಲಿ ಮತ್ತೂ ಎರಡೂ ಲೇಖನಗಳು ಪ್ರಕಟವಾದವು. ಆ ಸಮಯದಲ್ಲಿ “ಗಾಳಿಪಟದ ಬಾಲ ಎನ್ನ ಮನ” ಎಂಬ ಲೇಖನಕ್ಕೆ ತುಮಕೂರಿನ ಶ್ರೀ ಸಿದ್ದರಾಜ ಐವಾರರು ನಡೆಸಿದ್ದ ಗಾಳಿಪಟ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವೂ ಬಂತು. ಈ ಲೇಖನ ಅಂತಾರ್ಜಾಲ ಪತ್ರಿಕೆ “ಅವಧಿ”ಯಲ್ಲಿ ಪ್ರಕಟವಾದ ನನ್ನ ಮೊದಲ ಲೇಖನ. ಆಗ ಈ ಎಲ್ಲಾ ಲೇಖನಗಳನ್ನೂ ಸೇರಿಸಿ “ಸ್ನೇಹ ಮಾಡಬೇಕಿಂಥವಳ...” ಎಂಬ ಸಂಗ್ರಹವನ್ನು ಹೊರತರುವುದೆಂದು ನಿರ್ಧರಿಸಿದ್ದೆ. ಅದಕ್ಕೆ ಶ್ರೀ ಎ.ಆರ್. ಮಣಿಕಾಂತ್ ರವರ ಕೈಯಲ್ಲಿ ಮುನ್ನುಡಿಬರೆಸಬೇಕೆಂದು ತೀರ್ಮಾನಮಾಡಿಕೊಂಡಿದ್ದೆ. ಅವರಿಗೆ ಹೇಳಿ ಮುನ್ನುಡಿ ಬರೆಸಿಕೊಡುವ ಜವಾಬ್ದಾರಿಯನ್ನು ಪ್ರೀತಿಯ ಪ್ರಕಾಶಣ್ಣ ತೆಗೆದು ಕೊಂಡಿದ್ದರು. ಆದರೆ, ಮಣಿಕಾಂತ್ ಸರ್ ಪತ್ರಕರ್ತರಾದ್ದರಿಂದಲೋ ಏನೋ ಮುನ್ನುಡಿ ಬೇಗ ಸಿಗಲಿಲ್ಲ. ಅದಾಗ ನಾಗತಿಹಳ್ಳಿಯ ಮೊದಲನೇ ಚಿತ್ರಕಥಾ ಶಿಬಿರದ ನಂತರ ಬರೆದಿದ್ದ “ಮುಗುಳ್ನಗೆ”ಯನ್ನು ಪ್ರಕಟಿಸುವುದೆಂದು ತೀರ್ಮಾನಿಸಿ, ಆ ಪುಸ್ತಕ ತುಮಕೂರಿನಲ್ಲಿ ಬಿಡುಗಡೆಯೂ ಆಯಿತು. ಈಗ ಮತ್ತೆ ಸಹಾಯಕ್ಕೆ ಬಂದವರು ಮತ್ತೆ ಗಣೇಶ್. ಅವರು ಪುಸ್ತಕದ ವಿನ್ಯಾಸ, ಮುದ್ರಣ ಮತ್ತು ವಿತರಣೆಯ ಜವಾಬ್ದಾರಿಯನ್ನು ತೆಗೆದುಕೊಂಡರು. ಎಂದಿನಂತೆ ಗೆಳೆಯ ಅಜಿತನ ಮುಖಪುಟ ವಿನ್ಯಾಸವಿತ್ತು. ಮೊದಲ ಬಾರಿಗೆ ನನ್ನ ಪುಸ್ತಕ ರಾಜ್ಯದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಅದರಲ್ಲೂ ಸಪ್ನದಲ್ಲಿ ಸಿಗುವಂತಾಯಿತು. ಈ ಒಂದೊಂದು ಸಂತೋಷವೂ ಮರೆಯಲಾಗದ ಘಟನೆಗಳೆ. ಹ್ಞಾಂ.. ಈ ಪುಸ್ತಕದ ಬಗ್ಗೆ ಹಲವು ಮೆಚ್ಚುಗೆಗಳು ಬಂದವು. ಇದರಲ್ಲಿ ಬಹುಪ್ರಮುಖವಾದದು ವಿಶುವಿನದ್ದು. ಅವರು ನನ್ನ ಶೈಲಿಯನ್ನು ಮೆಚ್ಚಿದ್ದರು. ಅವರ ಯಾವಾಗಲೂ ನಿಮ್ಮದೇ ಶೈಲಿಯನ್ನು ಕಂಡುಕೊಳ್ಳಬೇಕೆಂದು ಹೇಳುತ್ತಿದ್ದರಿಂದ ನನಗೆ ಸಂತಸ ಇಮ್ಮಡಿಯಾಗಿತ್ತು.

ಕೆಲವು ತಿಂಗಳುಗಳು ಕಳೆದ ಮೇಲೆ, ನಮ್ಮ ಪ್ರಕಾಶನದಿಂದ ಇತರರ ಪುಸ್ತಕಗಳನ್ನು ಪ್ರಕಟಿಸಿ, ನಮ್ಮ ಪ್ರಕಾಶನವನ್ನು ಬೆಳೆಸಬೇಕೆಂದಿದ್ದ ನಮಗೆ ಪ್ರಕಾಶ್ ಹೆಗಡೆಯವರ “ಇದರ ಹೆಸರು ಇದಲ್ಲ”, ಡಾ.ಅಜಾದ್‌ರವರ “ಬಟಾಣಿ ಚಿಕ್ಕಿ” ಮತ್ತು ಉಮೇಶ್ ದೇಸಾಯಿಯವರ “ಕನವರಿಕೆಗಳು” ಪುಸ್ತಕಗಳನ್ನು ಪ್ರಕಟಿಸುವ ಸೌಭಾಗ್ಯ ಒದಗಿಬಂತು. ಈ ಸಂದರ್ಭದಲ್ಲೆ ನನ್ನ ಸ್ನೇಹ ಮಾಡಬೇಕಿಂಥವಳ ಪುಸ್ತಕವನ್ನು ಪ್ರಕಟಿಸುವುದೆಂದು ತೀರ್ಮಾನಿಸಿ ಮಣಿಕಾಂತ್ ಸರ್ ಅವರನ್ನು ಸಂಪರ್ಕಿಸಲಾಗಿ ಅವರು ಮುನ್ನುಡಿಯನ್ನೂ ಕೊಟ್ಟರು. ಅಲ್ಲಿಗೆ ಎಂದಿನಂತೆ ಗಣೇಶರ ಸಹಕಾರದಿಂದ ಪುಸ್ತಕಗಳನ್ನು ಪ್ರಕಟಿಸಿ, ಆಗಸ್ಟ್ ೨೫ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡುವುದೆಂದಾಯಿತು.

ಬೆಂಗಳೂರಿನ ಈ ಕಾರ್ಯಕ್ರಮಕ್ಕೆ ನನ್ನ ಪುಸ್ತಕ ಕುರಿತು ಯಾರು ಮಾತನಾಡುತ್ತಾರೆ ಎಂಬ ಗೆಳೆಯರ ಪ್ರಶ್ನೆಗೆ ಗಣೇಶ್ ಎಂದು ಹೇಳಿ ಗಣೇಶ್ ರವರಿಗೆ ಫೋನ್ ಮಾಡಿ ಪ್ರೀತಿಯಿಂದ ಅವರನ್ನು ಒಪ್ಪಿಸಿಯೇ ಬಿಟ್ಟೆ. ಮೊದಲು ನಾನು ಜೊತೆಗಿರುತ್ತೇನೆ ಎಂದ ಗಣೇಶ್, ನಂತರ ನನ್ನ ಪ್ರೀತಿಗೆ ಮಣಿದು ವೇದಿಕೆಗೆ ಬರಲು ಒಪ್ಪಿಕೊಂಡರು.

ಆಗಸ್ಟ್ ೨೫ರಂದು ಶ್ರೀ ಬಿ.ಆರ್. ಲಕ್ಷ್ಮಣರಾವ್, ಶ್ರೀ ಈರಣ್ಣ ಇಟಗಿ, ಶ್ರೀ ದಿವಾಕರ ಹೆಗಡೆ ಮುಂತಾದ ಘಟಾನುಘಟಿಗಳ ಸಮ್ಮುಖದಲ್ಲಿ ನನ್ನನ್ನು ಮೊದಲಬಾರಿಗೆ ಪ್ರೋತ್ಸಾಹಿಸಿದ ಗಣೇಶ್ ಕೋಡೋರುರ ಉಪಸ್ಥಿತಿಯಲ್ಲಿ ನಮ್ಮ ೪ ಪುಸ್ತಕಗಳು, ಜೊತೆಗೆ ಶ್ರೀ ಸೃಷ್ಟಿ ನಾಗೇಶರವರ ಪ್ರಕಾಶನದ “ಬ್ಲಾಗಿಸು ಕನ್ನಡ ಡಿಂಡಿಮ” ಎಂಬ ಪುಸ್ತಕ, ಒಟ್ಟು ೫ ಪುಸ್ತಕಗಳು ಲೋಕಾರ್ಪಣೆಗೊಂಡವು. ಗಣೇಶ್, ನನ್ನ ಪುಸ್ತಕದ ಜೊತಗೆ ನಮ್ಮ ಸ್ನೇಹ ಬೆಳೆದ ರೀತಿಯನ್ನು ನೆನೆಸಿಕೊಂಡರು. ಇದೆಲ್ಲಾ ನನ್ನನ್ನು ಮತ್ತಷ್ಟು ಭಾವುಕನನ್ನಾಗಿಸಿತು. ಜೊತೆಗೆ ಅಂದಿನ ನೋವಿನ ವಿಷಯವೇಂದರೆ ಇದನ್ನೆಲ್ಲಾ ನೋಡಲು ಗೆಳೆಯ ವಿಶು ಯಾವುದೋ ಕಾರ್ಯ ಕ್ರಮದ ಒತ್ತಡದಿಂದ ಬಂದಿರಲಿಲ್ಲ. ಬೆಂಗಳೂರಿನಲ್ಲಿ ನಿಮ್ಮ ಪುಸ್ತಕ ಬಿಡುಗಡೆಯಾಗುವ ಮಟ್ಟಕ್ಕೆ ನೀವು ಬೆಳೆಯಬೇಕು ಎಂದು ಹರಸಿದ್ದ ಗೆಳೆಯನ ಅನುಪಸ್ಥಿತಿ ಅಂದು ಕಾಡಿದರೂ, ನೆರೆದ ಗೆಳೆಯರ ಪ್ರೀತಿಗೆ ನಾನು ಮೂಕನಾಗಿದ್ದೆ.

(ಅಂದಹಾಗೆ ಅಕ್ಟೋಬರ್ ತಿಂಗಳ “ನಿಮ್ಮೆಲ್ಲರ ಮಾನಸ” ಮಾಸಪತ್ರಿಕೆಯ ನನ್ನ ನೆಚ್ಚಿನ ಅಂಕಣ “ಕಾಗದದ ದೋಣಿ”ಯಲ್ಲಿ ಗಣೇಶ್ ನಮ್ಮ ಪುಸ್ತಕ ಬಿಡುಗಡೆ ಸಮಾರಂಭದ ಬಗ್ಗೆ ಮತ್ತು ನಮ್ಮ ಸ್ನೇಹ ಕುರಿತು ಬರೆದಿದ್ದಾರೆ. ಅವರಿಗೆ, ಅವರ ಸ್ನೇಹಕ್ಕೆ ನಾನು ಆಭಾರಿ)

(ಮತ್ತೊಂದು ಖುಷಿಯ ಸಂಗತಿಯೆಂದರೆ, ಈ ಲೇಖನ ನಮ್ಮ “ಕಾಲೇಜ್ ಡೈರಿ” ಮಾಸಪತ್ರಿಕೆಯಲ್ಲಿ ಪ್ರಕಟವಾಗಿ ಇನ್ನೇನು ವಿಶುವಿಗೆ ತಲುಪಬೇಕು ಅನ್ನುವಷ್ಟರಲ್ಲಿ ವಿಶು, ಅವರ ಮದುವೆಯ ಲಗ್ನಪತ್ರಿಕೆ ಹಿಡಿದು ನಮ್ಮ ಮನೆಯಲ್ಲಿದ್ದರು)







ಮಂಗಳವಾರ, ಆಗಸ್ಟ್ 14, 2012

೨೦೦೮ರ ಆಗಸ್ಟ್ ೧೫, ೧೬ ಮತ್ತು ೧೭ರಲ್ಲಿ ನಾಗತಿಹಳ್ಳಿಯಲ್ಲಿ ನಡೆದ ಚಿತ್ರಕಥಾ ಶಿಬಿರದ ಅನುಭವಗಳು.



‘ಸಾಕ್ಷಾತ್ಕಾರ’ ನನ್ನ ಗಮನವನ್ನು ಸೆಳೆದ ಮೊದಲ ಚಲನಚಿತ್ರ. ಆ ಚಿತ್ರದ ’ಒಲವೇ ಜೀವನ ಸಾಕ್ಷಾತ್ಕಾರ’ ಎಂಬ ಹಾಡಂತೂ ನನ್ನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅದಾದ ಮೇಲೆ ಸಾಕಷ್ಟು ಕನ್ನಡ ಚಿತ್ರಗಳನ್ನು ನೋಡಿದ್ದರೂ ಇಷ್ಟವಾಗುತಿದ್ದದು ಡಾ//ರಾಜ್ ಅಭಿನಯದ ಚಿತ್ರಗಳು, ಪುಟ್ಟಣ್ಣ ಕಣಗಾಲರ ಚಿತ್ರಗಳು, ಶಂಕರ್‌ನಾಗ್ ಚಿತ್ರಗಳು ಮತ್ತು ಆಗೊಮ್ಮೆ ಈಗೊಮ್ಮೆ ವಿಷ್ಣುವರ್ಧನ್, ರವಿಚಂದ್ರನ್, ಜಗ್ಗೇಶ್, ಶಿವರಾಜ್‌ಕುಮಾರ್ ಚಿತ್ರಗಳು ಮತ್ತು ಮಕ್ಕಳ ಚಿತ್ರಗಳು. ಅಪರೂಪಕೊಮ್ಮೆ, ಕನ್ನಡದಲ್ಲಿ ಉತ್ತಮ ಚಿತ್ರಗಳು ಬರುತ್ತಿದ್ದರೂ ಅವುಗಳನ್ನು ನೋಡುವುದು ಸ್ವಲ್ಪ ಕಷ್ಟವಾಗುತ್ತಿತ್ತು, ಸಿನಿಮಾಗಿಂತ ಓದುವುದೇ ಮೇಲು ಎಂದು ಪುಸ್ತಕ ಪ್ರಪಂಚದಲ್ಲೇ ಮುಳುಗಿಬಿಟ್ಟಿದ್ದೆ.

‘ಅಮೆರಿಕಾ ಅಮೆರಿಕಾ’ ಚಿತ್ರ ಬಿಡುಗಡೆಯಾದಾಗ ಬಹಳ ಇಷ್ಟ ಪಟ್ಟು ನೋಡಿ, ‘ನೂರು ಜನ್ಮಕೂ, ನೂರಾರು ಜನ್ಮಕೂ’ ಎಂದೂ ಹಾಡಿದ್ದು ಬಿಟ್ಟರೆ ಸೀರಿಯಸ್ಸಾಗಿ ಚಿತ್ರಗಳನ್ನು ನೋಡಿದ್ದು ಕಮ್ಮಿ. ಆಗ ಬಂತು ನೋಡಿ ’ಮುಂಗಾರು ಮಳೆ’ ಯೆಂಬ ಕುಂಭದ್ರೋಣ ಮಳೆ. ಊರವರೆಲ್ಲಾ ಮುಂಗಾರುಮಳೆಯಲ್ಲಿ ತೋಯ್ದು ತೆಪ್ಪೆಯಾದರೂ ನನಗೇಕೋ ಮಳೆಯಲಿ ನೆನೆಯುವ ಮನಸ್ಸಾಗಿರಲಿಲ್ಲ. ‘ನಾ ನಾಲ್ಕುಸಲ ನೋಡಿದೆ. ಹತ್ತು ಸಲ ನೋಡಿದೆ ಎಂದು ಕೆಲವರು ಅಂದರೂ, ಕೆಲವರು ಅಂಕಣಗಳಲ್ಲಿ ಚಿತ್ರದ ಬಗ್ಗೆ ಬಂದರೂ ತಲೆಕೆಡಿಸಿಕೊಳ್ಳದ ನಾನು ಮುಂಗಾರುಮಳೆ ಐವತ್ತು ದಿನಗಳನ್ನು ಪೂರೈಸಿ ಶತದಿನೋತ್ಸವದತ್ತ ದಾಪುಗಾಲಿಟ್ಟಾಗ ಇದ್ದಕ್ಕಿದ್ದಂತೆ ಎಲ್ಲಾ ಪುಸ್ತಕಗಳನ್ನು ಎತ್ತಿಟ್ಟು ಯುಗಾದಿ ಹಬ್ಬದಂದು ಆ ಚಿತ್ರವನ್ನು ನೋಡಿದೆ. ಅಬ್ಬಾ ! ಎಂಥಾ ಚಿತ್ರ ! ಚಲನಚಿತ್ರವನ್ನು ಕನ್ನಡದಲ್ಲಿ ಹೀಗೂ ಮಾಡಬಹುದಾ ಅನ್ನಿಸಿತ್ತು.

ನಂತರ ನನ್ನಾಕೆಯ ಜೊತೆ ನೋಡಿದ ಮೊದಲ ಸಿನಿಮಾ ’ದುನಿಯಾ’ ಹೊಸ ರೀತಿಯಲ್ಲಿ ಕಾಣಿಸಿತು. ಅದಾಗಲೇ ನನ್ನ ತಲೆಯಲ್ಲಿ ಈಗ ಬರುತ್ತಿರುವ ಎಷ್ಟೋ ಕೆಟ್ಟ ಚಲನಚಿತ್ರಗಳಿಗಿಂತ ನನ್ನ ತಲೆಯಲ್ಲಿರುವ ಕಥೆಗಳು ಉತ್ತಮ ಚಲನಚಿತ್ರವಾಗಬಹುದಲ್ಲವೇ? ಎಂಬ ಪ್ರಶ್ನೆ ಮೂಡುತ್ತಿತ್ತು. ಆ ಪ್ರಶ್ನೆಯನ್ನು ಪರೀಕ್ಷೆಯ (ಎಂ.ಎ) ನೆಪವೂಡ್ಡಿ ತಡೆದಿದ್ದೆ.
ಪರೀಕ್ಷೆ ಮುಗಿಯಿತು ನೋಡಿ, ನನ್ನಲ್ಲಿದ್ದ ಕಥೆಗಾರ ಅವಾಗವಾಗ ಜಾಡಿಸಿ ಒದೆಯಲು ಶುರುಮಾಡಿದ. ಈ ಮಧ್ಯೆ ಒಂದು ಸಿನಿಮಾ ಆಗಬಹುದೇನೋ ಎಂದು ನಾನಂದು ಕೊಂಡಿರುವ ಕಥೆಯನ್ನು ’ಪೆನ್ ಎತ್ ಬರಿ, ಸ್ಯಾಂಡಲ್‌ವುಡ್‌ನಲ್ಲಿ ಮೆರಿ’ ಎಂಬ ಮಿರ್ಚಿಮೂವೀಸ್‌ರವರ ಸಿನಿಮಾ ಕಥಾ ಸ್ಪರ್ಧೆಗೆ ಕಳಿಸಿದ್ದೆ. ಅದಿನ್ನೂ ರಿಸಲ್ಟ್ ಬರುವುದರಲ್ಲಿದೆ(ಬರುವುದಿಲ್ಲವೆಂದು ಖಚಿತವಾಗಿದೆ).


ಅಷ್ಟೊತ್ತಿಗಾಗಲೇ ಸಿನಿಮಾಗೆ ಕಥೆ ಬರೆದರೆ ಅಷ್ಟೇ ಸಾಲದು, ಸಿನಿಮಾಗೆ ಚಿತ್ರಕಥೆಯನ್ನು ಬರೆಯಬೇಕು. ಅದು ಚಲನಚಿತ್ರದ ಪ್ರಮುಖ ಅಂಗ ಎಂಬುದು ಮನದಟ್ಟಾಗಿತ್ತು. ಇಂಟರ್‌ನೆಟ್‌ನಲ್ಲಿ ಸಾಕಷ್ಟು ಹುಡುಕಿ ತಿಳಿದುಕ್ಕೊಳಲು ಯತ್ನಿಸಿದ್ದರೂ ಸರಿಯಾದ ಮಾರ್ಗ ತಿಳಿದಿರಲಿಲ್ಲ. ಆಗ ಇದ್ದಕ್ಕಿದ್ದಂತೆ ಚಿತ್ರಲೋಕ.ಕಾಮ್‌ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ರವರ ನೇತೃತ್ವದಲ್ಲಿ ‘ರಾಜ್ಯಮಟ್ಟದ ಚಿತ್ರಕಥಾ ತರಬೇತಿ ಶಿಬರ’ ದ ಬಗ್ಗೆ ಮಾಹಿತಿಯಿತ್ತು. ತಕ್ಷಣ ಅರ್ಜಿ ಲಗಾಯಿಸಿ, ಬಂದಿದ್ದ ಸಾವಿರಾರು ಅರ್ಜಿಗಳ ಪೈಕಿ ಆಯ್ಕೆಯಾದ ನೂರಕ್ಕಿಂತ ಸ್ವಲ್ಪ ಹೆಚ್ಚು ಜನರಲ್ಲಿ ನಾನು ಒಬ್ಬನಾದಾಗ ನನ್ನ ಆನಂದಕ್ಕೆ ಮಿತಿಯಿರಲಿಲ್ಲ.

ಅಂತೂ ಇಂತೂ ಆಗಸ್ಟ್ ೨೦೦೮, ೧೫ ರ ಬೆಳಗ್ಗೆ ನಾ ನಾಗತಿಹಳ್ಳಿಯಲ್ಲಿದ್ದೆ. ಬೆಳಿಗ್ಗೆ ಒಂಬತ್ತರ ಹೊತ್ತಿಗೆ ಅ. ನಾಗತಿಹಳ್ಳಿಯ ಶಾಲೆ (ನಾಗ್ತಿ ಸಾರ್ ಅಲ್ಲೇ ಓದಿದ್ದು) ಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ನೇರವೇರಿತು. ನಂತರ ನಾಗ್ತಿಸರ್‌ರವರ ಮನೆಯ ದರ್ಶನವಾಯಿತು. ಮನೆಯ ಬದಿಯಲ್ಲೇ ಊಟತಿಂಡಿಗೆ ವ್ಯವಸ್ಥೆಯಾಗಿದ್ದರಿಂದ ಬೆಳಗಿನ ತಿಂಡಿಯಾಯಿತು. ಅಲ್ಲಿಂದ ಮತ್ತೆ ಶಾಲೆಯ ಬಳಿ ಬಂದೆ ಆ ಶಾಲೆಯ ಹಿಂಭಾಗದಲ್ಲಿ ನಾಗ್ತಿಸರ್‌ರವರು ಕಟ್ಟಿಸಿರುವ ‘ಸಿಹಿಕನಸು’ ಬಯಲು ರಂಗಮಂದಿರವಿದೆ. ಅದು ಅದಾಗಲೇ ಶಿಬಿರಕ್ಕೆ ಸಜ್ಜಾಗಿತ್ತು. ಆ ರಂಗಮಂದಿರದ ಲಂಬಕ್ಕೆ ನಾಗ್ತಿಸರ್ ತಮ್ಮ ತಂದೆ-ತಾಯಿಯ ಹೆಸರಿನಲ್ಲಿ ಗ್ರಂಥಾಲಯ ಕಟ್ಟಿಸಿದ್ದಾರೆ. ಪಕ್ಕಕ್ಕೆ ಶ್ರೀಮತಿ ನಾಗ್ತಿಸಾರ್‌ರವರ ಹೆಸರಿನಲ್ಲಿ ಕಂಪ್ಯೂಟರ್ ಸೆಂಟರಿದೆ. ಇದನ್ನೆಲ್ಲಾ ಗಮನಿಸುತ್ತಿದ್ದ ಸ್ವಲ್ಪ ಹೊತ್ತಿಗೆ ನಾಗ್ತಿಸರ್‌ರವರ ದರ್ಶನವಾಯಿತು. ಸೀದಾ ಹೋದವನೇ ಕೈ ಮುಗಿದು ‘ಹ್ಯಾಪಿ ಬರ್ತಡೇ ಸಾರ್’ ಎಂದೆ. ಅವರ ಗಮನವೆಲ್ಲಾ ಶಿಬಿರದ ಆರಂಭದ ತಯಾರಿಕಡೆಗಿತ್ತು. ‘ಕುಳಿತುಕ್ಕೊಳ್ಳಿ, ಸ್ವಲ್ಪ ಹೊತ್ತಿನಲ್ಲಿ ರಿಜಿಸ್ಟ್ರೇಷನ್ ಶುರು ಮಾಡುತ್ತೇವೆ, ತಿಂಡಿಯಾಗಿಲ್ಲದಿದ್ದರೆ ಮಾಡಿಕೊಂಡು ಬನ್ನಿ’ ಎಂದು ಹೇಳಿದರು. ತಿಂಡಿಯಾಗಿದ್ದರಿಂದ ನಾ ಬಂದು ಅವರನ್ನೇ ಗಮನಿಸುತ್ತಾ ಕುಳಿತೆ.

ಎಲ್ಲರ ರಿಜಿಸ್ಟ್ರೇಷನ್ ಆದ ಬಳಿಕ ಅಷ್ಟೊತ್ತಿಗಾಗಲೇ ಬಂದಿದ್ದ ಬಿ.ಸುರೇಶ್ (ಉದಯ ಟೀವಿಯ ’ನಾಕುತಂತಿ’ ಖ್ಯಾತಿ)ರವರು ತಮ್ಮ ಉಪನ್ಯಾಸವನ್ನು ನಡೆಸಿಕೊಟ್ಟರು. ಶಿಬಿರದ ಎಲ್ಲಾ ಅಭ್ಯರ್ಥಿಗಳು ಉತ್ಸುಕತೆಯಿಂದ ಪ್ರಶ್ನೋತ್ತರದಲ್ಲಿ ಭಾಗಿಯಾದರು. ನಮಗೆಲ್ಲಾ ಹೊಸ ಪ್ರಪಂಚದ ರೂಪುರೇಶೆಗಳು ಅರ್ಥವಾಗುತ್ತಾ ಹೋದವು. ಬಿ.ಸುರೇಶ್‌ರವರು ಬಹಳ ತಾಳ್ಮೆಯಿಂದ ಸಿನಿಮಾ ಮತ್ತು ಟಿವಿಯ ಎಬಿಸಿಡಿಯ ಬಗ್ಗೆ ಮತ್ತದರ ಹಲವಾರು ಮಜಲುಗಳ ಬಗ್ಗೆ ಮನದಟ್ಟು ಮಾಡಿದರು.

ಅವರಿಗೆ ವಿದಾಯ ಹೇಳಿದ ನಂತರ ಊಟ ಮಾಡಿ ಬಂದವರಿಗೆ ಯುವ ನಿರ್ದೇಶಕ, ಯುವಕ. ಯುವತಿಯರಿಗೋಸ್ಕರವೇ ಚಿತ್ರಮಾಡುತ್ತೇನೆ ಎಂದು ಹೇಳುವ, ಆದರೆ ತಮಗೆ ಗೊತ್ತಿದ್ದೋ-ಗೊತ್ತಿಲ್ಲದೆಯೋ ಕಿರಿಯರಿಂದ-ಹಿರಿಯರ ತನಕ ಎಲ್ಲರನ್ನೂ ಸೆಳೆದಿಡಬಲ್ಲ ಚಿತ್ರಗಳನ್ನು ಕೊಟ್ಟಿರುವ, ಮುಂಗಾರು ಮಳೆ ಖ್ಯಾತಿ ಯೋಗರಾಜ್‌ಭಟ್ಟರು ನಮಗಾಗಿ ಕಾಯುತ್ತಿದ್ದರು. ಅವರೊಡನೆ ಮೊದಲಿಗೆ ಸಂವಾದ ಶುರುವಾಯಿತು. ಏನಾದರು ಪ್ರಶ್ನೆಗಳಿದ್ದರೆ ಕೇಳಿ ಎಂದು ಅವರು ಮೊದಲೇ ಹೇಳಿದ್ದರಿಂದ ಪ್ರಶ್ನೆಗಳ ಸುರಿಮಳೆಯಾಯಿತು. ಎಲ್ಲಾ ಉದ್ದುದ್ದದ ಪ್ರಶ್ನೆಗಳಿಗೂ ಚೋಟುದ್ದದ ಉತ್ತರ ಕೊಡುತ್ತಿದ್ದ ಭಟ್ಟರು ಸಿನಿಮಾದ ಕಷ್ಟಸಾಧ್ಯತೆಗಳ ಬಗ್ಗೆ ಪರೋಕ್ಷವಾಗಿ ಹೇಳಿದರು. ಅವರಿಗೆ ಪಾತ್ರಗಳೇ ಕಥೆ. ಇದು ಒಂದು ತರಹದ ವಿರೋಧಾಭಾಸವಾಗಿ ಕಂಡರೂ ಅದು ಅವರ ಶೈಲಿ. ಮೇಕಿಂಗ್ ಆಫ್ ಮುಂಗಾರುಮಳೆಯ ಬಗ್ಗೆ ಸಾಕಷ್ಟು ಹೇಳಿದರು. ಅವರನ್ನೆಕೋ ಕಳುಹಿಸಿಕೊಡಲು ನಮಗೆ ಮನಸೇ ಬರಲಿಲ್ಲ

ಅದಾಗಲೇಸಂಜೆಯಾಗಿತ್ತು. ಇವೆಲ್ಲದರ ಮಧ್ಯೆ ಮತ್ತು ಸಂಜೆಯಲ್ಲಿ ನಮ್ಮೆಲ್ಲರ ನಾಗ್ತಿಸಾರ್ ಅಥವಾ ನಾಗತಿಹಳ್ಳಿಯ ಚಂದ್ರಣ್ಣ ಮೇಷ್ಟ್ರರ ಸಂದೋರ್ಭಚಿತ ಮಾತುಗಳು, ಸಲಹೆಗಳು ಚಿತ್ರಕಥೆಯ ಶಕ್ತಿ, ಮುಂತಾದ ವಿಷಯಗಳ ಬಹಳ ಧೀರ್ಘವಾದ ಉಪನ್ಯಾಸ ಮತ್ತು ಚರ್ಚೆ ನಡೆಯಿತು. ನಂತರ ಸಾಕ್ಷಾತ್ ವರಮಹಾಲಕ್ಷ್ಮೀಯಂತೆ ಬಂದ ಡಾ// ಜಯಮಾಲರೊಂದಿಗೆ ಮಾತುಕತೆ ನಡೆಯಿತು. ಶಾಲೆಯ ಸಹಾಯಕಿ ಮಣಕಮ್ಮ ನಾಗ್ತಿಸಾರ್‌ರವರ ’ಹೊಳೆದಂಡೆ’ ಕೃತಿಯನ್ನು ಅನಾವರಣ ಗೋಳಿಸಿದ್ದು ಸಂಜೆಯ ವಿಶೇಷವಾಗಿತ್ತು. ರಾತ್ರಿಯ ಊಟಮುಗಿಸಿದವರು ನಿದ್ದೇಗಣ್ಣಿನಲ್ಲೇ ಊರಿನ ಅರೆಶಿಕ್ಷಿತ ಮಹಿಳೆಯರು ಅಭಿನಯಿಸಿದ ’ಕರಿಭಂಟ’ ಎಂಬ ಅಮೋಘ ನಾಟಕವನ್ನು ನೋಡಿದೆವ. ನಮಗೆಲ್ಲಾ ತಂಗಲು ಸಮೀಪದ ಹಾಸ್ಟೆಲ್‌ವೊಂದರಲ್ಲಿ ವ್ಯವಸ್ಥೆಯಾಗಿತ್ತು. ಮಲಗಿದಾಗ ರಾತ್ರಿ ಹನ್ನೇರಡಾಗಿತ್ತು. ನಿದ್ದೆಯು ಬರಲೊಲ್ಲದು. ಕಣ್ಮುಚ್ಚಿದ್ದರೂ ಸಿನಿಮಾದ ಚಿಂತೆ. ಹಾಗೂ ಹೀಗೂ ಬೆಳಕಾಯಿತು.


ಆಗಸ್ಟ್ ೧೬ರಂದು ಬೆಳಗ್ಗೆಯೇ ನಾಗ್ತಿ ಸಾರ್‌ರವರು ಕಥೆಯ ಆಯ್ಕೆ ಮತ್ತು ಚಿತ್ರಕಥೆಯ ಬೇಸಿಕ್ಸ್‌ಗಳನ್ನು ಹೇಳಿಕೊಟ್ಟರು. ನಮಗೆಲ್ಲಾ ಅಂದು ಹಬ್ಬದ ದಿನವಾಗಿತ್ತು. ಏಕೆಂದರೆ ಅಂದು ‘ಆದಿನಗಳು’ ನಿರ್ದೇಶಕ ಚೈತನ್ಯ, ‘ಕಾಡಬೆಳದಿಂಗಳು’ ಚಿತ್ರದ ಚಿತ್ರಕಥೆಗಾರ ಮತ್ತು ನಮ್ಮೆಲ್ಲರ ಆರಾಧ್ಯದೈವ ಬರಹಗಾರ ಜೋಗಿ ಉರ್ಫ್ ಜಾನಕಿ ‘ಈ ಟಿವಿ’ ಯ ಸೂರಿ, ‘ಹೂಮಳೆ’, ಇತ್ತೀಚೀನ ‘ಆಕ್ಸಿಡೆಂಟ್’ ಚಿತ್ರಗಳ ಸಿನಿಮಾಟೋಗ್ರಾಫ್‌ರ್ ಜಿ.ಎಸ್. ಭಾಸ್ಕರ್ ಮತ್ತು ‘ಪ್ರೇಮಲೋಕ’ದ ಮಾಂತ್ರಿಕ ಹಂಸಲೇಖಾ ಮತ್ತು ಲತಾಹಂಸಲೇಖ ಬಂದಿದ್ದರು. ಚೈತನ್ಯ "ರೋಡ್ ಟು ಪರ್ಡಿಶನ್" ಎಂಬ ಚಿತ್ರದ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ನಂತರ ‘ನಾಯಿನೆರಳು’ ಮತ್ತು ದೂರದರ್ಶನದಲ್ಲಿ ಹಲವು ವರ್ಷಗಳ ಹಿಂದೆ ಪ್ರದರ್ಶನಗೊಂಡಿದ್ದ ‘ಅತೀತ’ (ಈ ಟೀವಿಯ ಸುರೇಂದ್ರನಾಥ್) ಎಂಬ ಕಿರುಚಿತ್ರವನ್ನು ವೀಕ್ಷಿಸಿದೆವು. ಇದರ ಕುರಿತು ಜೋಗಿ ಮತ್ತು ಸೂರಿಯವರ ಜೊತೆ ಚರ್ಚೆಯಾಯಿತು. ‘ಮೊಫಲ್-ಇ-ಆಜಮ್’ ಮತ್ತು ‘೮ ೧/೨’ ಎಂಬ ಚಿತ್ರಗಳ ಮೂಲಕ ಜಿ.ಎಸ್. ಭಾಸ್ಕರ್‌ರವರು ಚಿತ್ರದಲ್ಲಿ ಕ್ಯಾಮರದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

ತದನಂತರ ಸಿನಿಮಾದಲ್ಲಿ ಸಂಗೀತದ ಮಹತ್ವ ಕುರಿತು ‘ನಾದಬ್ರಹ್ಮ’ ಹಂಸಲೇಖರಿಂದ ಸಾಕಷ್ಟು ತಿಳಿದು ಕೊಂಡೆವು. ಇವರೆಲ್ಲರೂ ತಮ್ಮತಮ್ಮ ಕ್ಷೇತ್ರದ ಹಲವು ಮಜಲುಗಳನ್ನು ತಿಳಿಸಿಕೊಟ್ಟು ನಮ್ಮನ್ನೆಲ್ಲಾ ಪ್ರೋತ್ಸಾಹಿಸಿದರು. ಸ್ವಲ್ಪ ಬಿಡುವಿನ ಸಮಯ ಸಿಕ್ಕರೂ ಸಾಕು ನಮ್ಮೂಂದಿಗೆ ಶಿಬಿರದ ಅಭ್ಯರ್ಥಿಯಂತೆಯೇ ಕುಳಿತು ನೋಟ್ಸ್ ಮಾಡಿಕೊಳ್ಳುತ್ತಿದ್ದ ನಾಗ್ತಿಸಾರ್‌ರವರು ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದರು.

ಹದಿನೇಳರಂದು, ಮೊದಲ ದಿನವೇ ನಾಗ್ತಿ ಸಾರ್‌ರವರು ನಮಗೆಲ್ಲಾ ತಿಳಿಸಿದಂತೆ ‘ಪದ್ಮಪ್ರಿಯ ಪ್ರಕರಣ’, ‘ಆರುಷಿ ಪ್ರಕರಣ’, ‘ತೇಜಸ್ವಿಯವರ ಮಾಯಾಮೃಗ’ ಅಥವಾ ನಮ್ಮದೇ ಯಾವುದಾದರೊಂದು ಆಯ್ಕೆಯ ಕಥೆ (ಪ್ರಕರಣ) ಕುರಿತು ಹತ್ತು ನಿಮಿಷಗಳ ಕಿರುಚಿತ್ರವಾಗುವಷ್ಟು ಹತ್ತು ಪುಟಗಳ ಚಿತ್ರಕಥೆ ಬರೆಯಬೇಕಿತ್ತು. ಅದು ಶಿಬಿರದ ಅಸೈನ್‌ಮೆಂಟ್. ಎಲ್ಲರೂ ಬಹಳ ಉತ್ಸುಕತೆಯಿಂದ ಯೂನಿವರ್ಸಿಟಿಯ ಪರೀಕ್ಷೆ ಬರೆದಂತೆ ಬೆಳಗಿನಿಂದ ಸಂಜೆಯವರೆಗೂ ಅವರವರ ಆಯ್ಕೆಯ ಚಿತ್ರಕಥೆಗಳನ್ನು ಬರೆದರು. ನಾಗ್ತಿ ಸಾರ್‌ರವರೇ ಆದಷ್ಟು ಅಭ್ಯರ್ಥಿಗಳ ಚಿತ್ರಕಥೆಗಳನ್ನು ನೋಡಿ ತಮ್ಮ ಸಲಹೆ-ಮಾರ್ಗದರ್ಶನ ನೀಡಿದರು. ನಾವದನ್ನು ತಿದ್ದಿ-ತೀಡಿ, ಒಪ್ಪ-ಒರಣ ಮಾಡಿ ಅವರ ಆಫೀಸಿಗೆ ಕಳುಹಿಸಿ ಮಾರ್ಗದರ್ಶನ ಪಡೆಯಬಹುದೆಂದು ಹೇಳಿದರು.

ಕೆಲವರು ಇನ್ನು ಬರೆಯುತ್ತಿದ್ದಾಗಲೇ ಮೂರೂ ದಿನಗಳಿಂದ ತಡೆದಿತ್ತೇನೋ ಎಂಬಂತೆ ಧಾರಾಕಾರವಾಗಿ ಮಳೆಯಾಯಿತು. ನಮ್ಮಗಳ ಚಿತ್ರಕಥೆಗಳನ್ನು ನೋಡಿ ಮೇಘರಾಜನು ಆನಂದಬಾಷ್ಪ ಸುರಿಸಿದನೆಂದು ಮೇಷ್ಟ್ರು ನಗೆ ಚಟಾಕಿ ಹಾರಿಸಿದರು. ಇನ್ನೇನು ಮಳೆ ನಿಂತಿತು ಅನ್ನುವಾಗಲೇ ಆ ಶಿಬಿರಕ್ಕೆ ಕಳಸವಿಟ್ಟಂತೆ ಗಿರೀಶ್‌ಕಾಸರವಳ್ಳಿಯವರ ಆಗಮನವಾಯಿತು. ಅವರೊಡನೆ ಸುದೀರ್ಘ ಚರ್ಚೆಯಾಯಿತು. ಮನರಂಜನೆ, ಸಿನಿಮಾ ಮತ್ತು ಸಾಹಿತ್ಯಗಳ ಭಿನ್ನತೆ, ಸಾಹಿತ್ಯವನ್ನು ಸಿನಿಮಾಕ್ಕೆ ಬಳಸುವ ಬಗ್ಗೆ ಸಿನಿಮಾದ ತಂತ್ರಗಳು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪೂರಕ ಮಾಹಿತಿ ನೀಡಿದರು. ನಮಗೆಲ್ಲಾ ಅವರು ಶಿಬಿರದ ‘ಪ್ರಮಾಣಪತ್ರ’ ವನ್ನು ನೀಡಿದರು. ಅವರ ಹಸನ್ಮುಖ ನನ್ನನು ಕಾಡಿದ್ದಂತೂ ನಿಜ.

ರಾತ್ರಿಯೇ ನಾವೆಲ್ಲಾ ಊಟಮುಗಿಸಿ ಒಲ್ಲದ ಮನಸ್ಸಿನಿಂದ ನಾಗ್ತಿ ಸಾರ್‌ರವರಿಗೆ, ಮೂರೂದಿನಗಳು ಹೊಸ ಪ್ರಪಂಚವನ್ನೇ ತೋರಿಸಿದ ಸುಂದರ ಹಳ್ಳಿ ಅ.ನಾಗತಿಹಳ್ಳಿಗೆ ಮತ್ತು ಅಲ್ಲಿನ ಸುಸಂಸ್ಕೃತ ಜನರಿಗೆ ಮತ್ತು ಶಿಬಿರದ ಎಲ್ಲಾ ಗೆಳೆಯ-ಗೆಳತಿಯರಿಗೆ ವಿದಾಯ ಹೇಳಬೇಕಾಯಿತು. ಕೆಲ ಅತಿಥಿಗಳು ಬರಲಿಲ್ಲವಾದರೂ ಅದು ಒಳ್ಳೆಯದೇ ಆಯಿತು. ಬಂದವರೊಡನೆ ಹೆಚ್ಚು ಹೊತ್ತು ಸಂವಾದ ನಡೆಸಲು ದಾರಿ ಮಾಡಿ ಕೊಟ್ಟಿತು. ಕಿರುತೆರೆಯ ಧಾರವಾಹಿಗಳ ಪಿತಾಮಹ ಟಿ.ಎನ್.ಸೀತಾರಾಂರವರು ಬಂದಿದ್ದರೆ ಚೆನ್ನಾಗಿತ್ತು ಎಂದು ಎಲ್ಲೋ ಒಂದು ಕಡೆ ಅನ್ನಿಸಿದ್ದು ನಿಜವಾದರೂ, ಕಾರ್ಯಾಗಾರದ ಅತಿಥಿಗಳ ಲಿಸ್ಟಲ್ಲಿ ಅವರಿರಲಿಲ್ಲ. ಶಿಬಿರದಲ್ಲಿ ಪ್ರಮುಖವಾಗಿ ಎದ್ದು ಕಂಡದ್ದು ನೂರಕ್ಕಿಂತ ಹೆಚ್ಚು ಶಿಬಿರಾರ್ಥಿಗಳಿದ್ದರೂ ಕಾಪಾಡಿದ ತರಗತಿಯ ಘನತೆ-ಗಾಂಭೀರ್ಯ. ನಾಗ್ತಿ ಸರ್‌ರವರ ಒಲವು ಅದೇ ಆಗಿತ್ತು. ಐವತ್ತು ವರ್ಷಪೂರೈಸಿದ ನಾಗ್ತಿ ಸರ್‌ರವರು ನಮ್ಮಗಳ ಜೊತೆ ಲವಲವಿಕೆಯಿಂದ ಓಡಾಡಿ ಕಾರ್ಯಾಗಾರವನ್ನು ಬಹಳ ಯಶಸ್ವಿಯಾಗಿ ನಡೆಸಿಕೊಟ್ಟರು.

ಮೂರು ದಿನಗಳಲ್ಲೂ ಅವರ ಸ್ನೇಹಿತರು, ಸಹಾಯಕರು, ಊರಿನ ವ್ಯಕ್ತಿಗಳು, ನಾಗ್ತಿ ಸಾರ್‌ರವರ ಶ್ರೀಮತಿ ಮತ್ತು ಮಕ್ಕಳು, ಅಡುಗೆ ಮಾಡಿ ಬಡಿಸಿದವರು, ಸೈಲೆಂಟಾಗಿ ನಮ್ಮೊಡನೆಯೇ ಕುಳಿತಿದ್ದ ‘ಬಯಲು ಸೀಮೆಯ ಕಟ್ಟೆ ಪುರಾಣ (ಲಂಕೇಶ್ ಪತ್ರಿಕೆ) ಖ್ಯಾತಿಯ ಡಾ||ಡಿ.ಬಿ.ಚಂದ್ರೇಗೌಡರು, ಮಲಗಲು ಜಾಗಕೊಟ್ಟ ಹಿರಿಯರೊಬ್ಬರು. ಬಸ್ಸಿನ ಡ್ರೈವರ್‌ಗಳು ಎಲ್ಲರೂ ತಮ್ಮ ಮನೆಯ ಮಕ್ಕಳಂತೆಯೇ ನಮ್ಮನ್ನು ನೋಡಿಕೊಂಡರು.

ಇದೆಲ್ಲಾ ಮೊದಲ ಚಿತ್ರಕಥಾ ಶಿಬಿರದ ಅನುಭವಗಳಾದರೆ, ೨೦೦೯ರ ಯುಗಾದಿಯ ಸಂದರ್ಭದಲ್ಲಿ ನಡೆದ ಶಿಬಿರದ್ದು ಮತ್ತೊಂದು ಕಥೆ. ಅದನ್ನು ಮತ್ತೊಮ್ಮೆ ಹಂಚಿಕೊಳ್ಳುತ್ತೇನೆ.

ನಾಲ್ಕು ವರ್ಷಗಳ ನಂತರ ಈ ಶಿಬಿರದ ಪ್ರಯೋಜನಗಳೇನು ಎಂದು ಕೇಳಿಕೊಂಡರೆ, ಉತ್ತರ ನಿಚ್ಚಳವಾಗಿದೆ. ನನ್ನ ‘ಮಳೆಯಾಗು ನೀ...’ ಕವನ ಸಂಕಲನ ಮೊದಲಿಗೆ ಪ್ರಕಟವಾಯಿತು. ನಂತರ, ‘ಮುಗುಳ್ನಗೆ’ ಎಂದು ಸಿನಿಮಾಗಾಗಿ ಬರೆದ ಕಥೆಯನ್ನು ಕಾದಂಬರಿಯ ರೂಪದಲ್ಲಿ ಪ್ರಕಟಿಸಿದೆ. ‘ಸ್ನೇಹ ಮಾಡಬೇಕಿಂಥವಳ’ ಎಂಬ ಪುಸ್ತಕ ಇದೇ ತಿಂಗಳಲ್ಲಿ ಪ್ರಕಟವಾಗಲಿದೆ. ಜೊತೆಗೆ ಅಲ್ಲೊಂದು ಇಲ್ಲೊಂದು ಸಿನಿಮಾ ಕಥೆಗಾಗಿ ಕರೆಗಳು ಬರುತ್ತಿವೆ.

ಎಲ್ಲದ್ದಕ್ಕಿಂತ ಬಹುಮುಖ್ಯವಾಗಿ, ಶಿಬಿರದಲ್ಲಿ ಸಿಕ್ಕ ಗೆಳೆಯರು, ಜೀವದ ಗೆಳೆಯರಾಗಿದ್ದಾರೆ. ಕಾದಂಬರಿಕಾರ ರಾಜು ಗಡ್ಡಿ, ಸಹೃದಯಿ ಅಜಿತ್ ಕೌಂಡಿನ್ಯ, ಇದಾಗಲೇ ಅಸೋಸಿಯೇಟ್ ಡೈರೆಕ್ಟರ್ ಆಗಿರುವ ಆಕಾಶ ಆರಾಧ್ಯ ಮತ್ತು ಅನೇಕ ಗೆಳೆಯರು ‘ಜೀವನದಲ್ಲಿ ಸ್ನೇಹಿತರಲ್ಲ, ಸ್ನೇಹಿತರಿಂದಲೇ ಜೀವನ’ ಎಂದುಕೊಂಡಿರುವ ನನ್ನ ಜೀವನದಲ್ಲಿ ಶಾಶ್ವತವಾಗಿ ನೆಲೆಯಾಗಿದ್ದಾರೆ.

ದುಡ್ಡು ಬಿತ್ತಿ, ದುಡ್ಡು ಬೆಳೆಯಬಹುದೇ…!?

ಕನ್ನಡದಲ್ಲಿ ಪ್ರಕಟವಾಗಿ ಅತ್ಯಂತ ಹೆಚ್ಚು ಮಾರಾಟವಾದ “ಮನಿ ಸೀಕ್ರೆಟ್ಸ್‌ ಹಾಗೂ ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್”‌ (ಅಮೇಜಾನಿನಲ್ಲಿ ಕೊಳ್ಳಲು ಲಿಂಕ್:‌ https://amzn....