ಗುರುವಾರ, ಫೆಬ್ರವರಿ 10, 2011

ಲ್ಯಾಪ್ ಟಾಪ್ ಭಂಗಿಯಲ್ಲಿ... ಪ್ರೀತಿಯೊಡನೆ ಒಂದು ಸಂಜೆ...

ಲ್ಯಾಪ್ ಟಾಪ್ ಭಂಗಿಯಲ್ಲಿ... ಪ್ರೀತಿಯೊಡನೆ ಒಂದು ಸಂಜೆ...




ಹೊಸ ವರ್ಷ, ಹೊಸ ಉಲ್ಲಾಸದೊಂದಿಗೆ ನಾವಿಬ್ಬರೂ ಭೇಟಿಯಾದೆವು. ಪರಸ್ಪರ ಚಾಕಲೇಟ್, ಶುಭಾಷಯಗಳ ವಿನಿಮಯವಾಯಿತು. ಅವಳು ನನ್ನ ಕಣ್ಣಲ್ಲಿ ದೃಷ್ಠಿಯಿಟ್ಟು ನೋಡುತ್ತಿದ್ದರೆ, ನಮ್ಮಿಬ್ಬರ ಪ್ರೀತಿ ಅದೆಷ್ಟು ಅಗಾಧಾವಾದುದು ಎಂದೆನಿಸುತ್ತಿತ್ತು. ನಾನೇ ಮಾತಿಗಿಳಿದು “ಹೊಸವರ್ಷದ ಮೊದಲ ದಿನ ಒಂದು ಒಳ್ಳೆಯ ಕೆಲಸ ಮಾಡಬೇಕೆಂದಿರುವೆ” ಎಂದೆ. ನಾನು ಅಪರೂಪಕೊಮ್ಮೆ ಮಾಡುವ ಒಳ್ಳೆಯ ಕೆಲಸವೆನೆಂದು ಅವಳಿಗೆ ಗೊತ್ತು. ನನ್ನ ಪಕ್ಕದಲ್ಲಿ ಬಂದು ಕುಳಿತಳು. ಅವಳ ಲ್ಯಾಪ್ (ತೊಡೆ) ಮೇಲೆ ನನ್ನ ಟಾಪ್ (ತಲೆ) ಇಟ್ಟು ಮಲಗಿದೆ. “ಇದೇ ತಾನೇ, ನಿಮ್ಮ ಒಳ್ಳೆಯ ಕೆಲಸ” ಎಂದಳು. “ಇಲ್ಲಾ, ಇವತ್ತು ಇನ್ನೂ ಸ್ವಲ್ಪ ಇದೆ” ಎಂದೆ. “ಆಸೆ, ದೋಸೆ, ಹಪ್ಪಳ, ಅವೆಲ್ಲಾ ಎನೂ ಇಲ್ಲ, ಸುಮ್ಮನೆ ಮಲಗಬೇಕು ಅಷ್ಟೆ” ಎಂದು ನನ್ನ ತಲೆಯಲ್ಲಿ ನವಿರಾಗಿ ಕೈಯಾಡಿಸುತ್ತಿದ್ದಳು. ಅವಳ ಪುಟ್ಟ ಬೆರಳುಗಳು ನನ್ನ ಕೂದಲಿನ ಜೊತೆ ಆಟವಾಡುತ್ತಿದ್ದರೆ ಮಧುರಾನುಭವ. “ಛೇ! ಅದಲ್ಲಾ... ಒಂದು ಕಥೆ ಹೇಳಬೇಕೆಂದಿರುವೆ” ನಾನಂದೆ. “ಹೇಳಿ” ಎಂದಳು. “ಇದೊಂದು ಇಂಗ್ಲೀಷ್ ನಲ್ಲಿ ನಾ ಓದಿದ ಒಂದು ಅಪೂರ್ವ ಪ್ರೇಮ ಕಥನ” ಎಂದು ಶುರುವಿಟ್ಟುಕೊಂಡೆ.

ಸಂಜೆಯ ಆರಕ್ಕೆ ಆರು ನಿಮಿಷ ಮಾತ್ರ ಬಾಕಿಯಿದೆ ಎಂದು ನಗರದ ರೈಲ್ವೇಸ್ಟೇಷನ್ ಮಾಹಿತಿ ಕೇಂದ್ರದ ಮೇಲಿದ್ದ ಬೃಹತ್ ಗಡಿಯಾರ ತೋರಿಸುತ್ತಿತ್ತು. ಉದ್ದವಾಗಿದ್ದ ತರುಣ ಸೇನಾಧಿಕಾರಿ ರೈಲ್ವೇಸ್ಟೇಷನ್ನಿಂದ ಆಗಷ್ಟೆ ಹೊರಗೆ ಬಂದು ಸೂರ್ಯನ ಕಿರಣಗಳಿಂದ ಕಂದಾಗಿದ್ದ ಮುಖವೆತ್ತಿ ತನ್ನ ಕೈ ಗಡಿಯಾರದಲ್ಲಿ ದೃಷ್ಠಿನೆಟ್ಟು ಸಮಯವನ್ನು ಧೃಡಪಡಿಸಿಕೊಂಡ. ಅವನ ಎದೆಯ ಸದ್ದು ಕೇಳಿ ಭಯಗೊಂಡಿದ್ದರೂ ತಹಬದಿಗೆ ತರಲಾಗುತ್ತಿರಲಿಲ್ಲ. ಇನ್ನಾರು ನಿಮಿಷಕ್ಕೆ ಆತ ತನ್ನ ಜೀವನದಲ್ಲಿ ಹದಿಮೂರು ತಿಂಗಳುಗಳಿಂದ ವಿಶೇಷ ಸ್ಥಾನ ಪಡೆದಿದ್ದ ಆಕೆಯನ್ನು ಭೇಟಿಯಾಗಲಿದ್ದಾನೆ. ಅವಳನ್ನೆಂದೂ ನೋಡಿಲ್ಲ. ಆದರೆ ಆಕೆಯ ಪತ್ರಗಳು ಮಾತ್ರ ಅವನ ಜೊತೆಯಲ್ಲಿ ಇವೆ ಮತ್ತು ಅವನಿಗೆ ಬೆಂಬಲವಾಗಿವೆ.

ಮಾಹಿತಿ ಕೇಂದ್ರಕ್ಕೆ ಅಂಟಿ ಕುಳಿತಾತನ ಪಕ್ಕದಲ್ಲೇ ಜನರು ಅಲ್ಲಿನ ಅಧಿಕಾರಿಗಳಿಗೆ ಪ್ರಶ್ನೆಗಳ ಮಳೆ ಸುರಿಸುತ್ತಿದ್ದರು.

ಲೆಫ್ಟಿನೆಂಟ್ ಬ್ಲಾಂಡ್ಪೋಿರ್ಡ್ ತಾನು ಯುದ್ದ ಮಾಡಿದ್ದ ಒಂದು ಭಯಾನಕ ರಾತ್ರಿಯನ್ನು ನೆನಪಿಸಿಕೊಳ್ಳುತಿದ್ದ. ವೈರಿಗಳ ಪಾಳಯದಲ್ಲಿ ತನ್ನ ಯುದ್ದವಿಮಾನ ಸಿಕ್ಕಿತ್ತು. ವೈರಿ ಪೈಲಟ್ನತ ಕುಹಕ ನಗೆ ಕಂಡಿತ್ತು.

ತನ್ನದೊಂದು ಪತ್ರದಲ್ಲಿ ಅವನು ಪದೇಪದೇ ಭಯ ಬೀಳುತ್ತಿದ್ದುದ್ದನ್ನು ನಿವೇದಿಸಿಕೊಂಡಿದ್ದ. ಆ ಭಯಾನಕ ಯುದ್ದದ ಸ್ವಲ್ಪ ದಿನಗಳ ಮುಂಚೆ ಅವಳಿಂದ ಉತ್ತರವೂ ಬಂದಿತ್ತು. “ಹೌದು, ನೀನು ಭಯಗೊಂಡಿರುವೆ...ಎಲ್ಲ ಯೋಧರಂತೆ. ಕಿಂಗ್ ಡೇವಿಡ್ಗೂ ಭಯವಿರಲಿಲ್ಲವೇ? ಅದಕ್ಕೋಸ್ಕರವೇ ಆತ ಇಪ್ಪತ್ತಮೂರನೇ ಪವಿತ್ರಗೀತೆ (ಕ್ರಿಶ್ಚಿಯನ್ನರ) ಯನ್ನು ಬರೆದಿದ್ದು. ಮುಂದಿನ ಬಾರಿ ನೀ ಭಯಗೊಂಡಾಗ, ನನ್ನ ಧ್ವನಿಯು ನಿನ್ನಲ್ಲಿ ಕೇಳಿಸಲಿ: “ಸಾವಿನ ನೆರಳಿನ ಕಣಿವೆಯಲ್ಲಿ ನಾ ನಡೆಯುತ್ತಿದ್ದರೂ, ನನಗ್ಯಾವ ದುಷ್ಟಶಕ್ತಿಗಳ ಭಯವಿಲ್ಲ. ಏಕೆಂದರೆ ನೀ ನನ್ನ ಜೊತೆಗಿರುವೆ” ”. ಅವಳ ಕಲ್ಪಿತ ಧ್ವನಿಯಿಂದ ಉತ್ತೇಜಿತನಾಗಿ ಆ ಯುದ್ದದಲ್ಲಿ ಗೆದ್ದಿದ್ದ.

ಆರಕ್ಕೆ ನಾಲ್ಕು ನಿಮಿಷ ಬಾಕಿಯಿದೆ. ಇನ್ನೇನೂ ಅವಳ ನಿಜವಾದ ಮಧುರ ಧ್ವನಿಯನ್ನು ಕೇಳಲಿದ್ದಾನೆ. ಅವನ ಮುಖದಲ್ಲಿ ಕುತೂಹಲವಿದೆ.

ಅಗಣಿತ ತಾರಾಗಣಗಳ ಚಪ್ಪರದ ಕೆಳಗೆ ಲಗುಬಗೆಯಿಂದ ಜನಗಳು ಓಡಾಡುತ್ತಿದ್ದರು. ಒಬ್ಬಳು ಚೆಂದದ ಹುಡುಗಿ ಅವನ ಹತ್ತಿರದಲ್ಲೇ ನಡೆದು ಹೋದಳು. ಲೆಫ್ಟಿನೆಂಟ್ ಬ್ಲಾಂಡ್ಪೋಯರ್ಡ್ ಕುಳಿತಲ್ಲೇ ಚಲಿಸಿದ. ಅವಳ ಮೇಲುವಂಗಿಯ ಮೇಲೆ ಗುಲಾಬಿಯಿತ್ತು. ಆದರದು ಕಡು ಕೆಂಪು ಬಣ್ಣದ್ದು. ಇವರಿಬ್ಬರ ಒಪ್ಪಂದದಂತೆ ಕೆಂಪಾದ ಚಿಕ್ಕ ಗುಲಾಬಿಯಾಗಿರಲಿಲ್ಲ. ಮತ್ತು, ಆ ಹುಡುಗಿ ಹದಿನೆಂಟರ ತರುಣಿಯಂತಿದ್ದಳು. ಆದರೆ ಹೋಲಿಸ್ ಮೇನೆಲ್ ಮುಚ್ಚು ಮರೆಯಿಲ್ಲದೆಯೇ ತನಗೆ ಮೂವತ್ತು ಎಂದು ಬರೆದಿದ್ದಳು. “ಆದರೇನಂತೆ? ನನಗಾಗಲೇ ಮೂವತ್ತೆರಡು ಎಂದು ಸಮಾಧಾನಗೊಂಡಿದ್ದ.

ಅವನ ಮನಸ್ಸು ಆ ಪುಸ್ತಕಕ್ಕೆ ಮರಳಿತ್ತು. ಫ್ಲೋರಿಡಾದ ತರಬೇತಿ ಶಿಬಿರದಲ್ಲಿದ್ದವನಿಗೆ ಸೈನ್ಯದ ಗ್ರಂಥಾಲಯದಲ್ಲಿದ್ದ ಸಾವಿರಾರು ಪುಸ್ತಕಗಳಲ್ಲಿ ದೇವರೇ ಆ ಪುಸ್ತಕವನ್ನು ಇವನ ಕೈಗೆ ನೀಡಿದಂತಿತ್ತು. “Of Human Bondage” ಎಂಬ ಆ ಪುಸ್ತಕದ ತುಂಬಾ ಮಹಿಳೆಯೊಬ್ಬಳು ಬರೆದಿದ್ದ ನೋಟ್ಸಗಳಿದ್ದವು. ಈ ರೀತಿಯ ಬರವಣಿಗೆ ಆತನಿಗೆ ಇಷ್ಟವಾಗುತ್ತಿರಲಿಲ್ಲವಾದರೂ, ಅಭಿಪ್ರಾಯಗಳು ವಿಭಿನ್ನವಾಗಿದ್ದವು. ಒಬ್ಬಳು ಹೆಂಗಸು ಗಂಡಸಿನ ಎದೆಯಾಳವನ್ನು ಅರ್ಥಮಾಡಿ ಕೊಳ್ಳಬಹುದೆಂಬ ಉಹೆಯೂ ಆತನಿಗಿರಲಿಲ್ಲ. ಆಕೆಯ ಹೆಸರು ಪುಸ್ತಕದಲ್ಲಿತ್ತು: “ಹೋಲಿಸ್ ಮೇನೆಲ್”. ನ್ಯೂಯಾರ್ಕ್ ಟೆಲಿಪೋನ್ ಡೈರೆಕ್ಟರಿ ತೆಗೆದುಕೊಂಡು ಅವಳ ವಿಳಾಸವನ್ನು ಪತ್ತೆ ಹಚ್ಚಿದ್ದ. ಅವಳಿಗೆ ಪತ್ರ ಬರೆದ. ಅವಳೂ ಉತ್ತರಿಸಿದಳು. ಇವನೆಲ್ಲಿಗೋದರೂ ಪತ್ರವ್ಯವಹಾರ ಮುಂದುವರೆಯಿತು.

ಹದಿಮೂರು ತಿಂಗಳುಗಳು ಅವಳು ಚಾಚೂ ತಪ್ಪದೇ ಉತ್ತರ ಬರೆಯುತ್ತಿದ್ದಳು ಮತ್ತು ಅವನಿಂದ ಕಾಗದ ಬರದಿದ್ದರೆ ಅವಳೇ ಬರೆಯುತ್ತಿದ್ದಳು. ಮತ್ತಾಗ ಅವಳು ತನ್ನನ್ನು ಪ್ರೀತಿಸುತ್ತಿದ್ದಾಳೆ ಎಂದು ನಂಬಿದ್ದ. ಅವಳೂ ಪ್ರೀತಿಸುತ್ತಿದ್ದಳು.

ಆದರೆ, ಆತನ ಮನವಿಯನ್ನು ತಿರಸ್ಕರಿಸಿ ತನ್ನ ಪೋಟೋವನ್ನು ಕಳುಹಿಸಿರಲಿಲ್ಲ. ಸ್ವಲ್ಪ ಅತಿಶಯೋಕ್ತಿಯೆನಿಸಿದರೂ ನಿಜವಾಗಿತ್ತು. ಆದರವಳು ಕಾರಣವನ್ನು ವಿವರಿಸಿದ್ದಳು. “ನಿನ್ನ ಭಾವನೆಗಳು ನಿಜವೇ ಆಗಿದ್ದರೆ ನಿಷ್ಕಪಟವಾದ ತಳಹದಿಯಿದ್ದರೆ ನನ್ನ ರೂಪ ಮುಖ್ಯವಾಗುವುದಿಲ್ಲ. ನಾನೇನಾದರೂ ರೂಪವತಿಯಾಗಿದ್ದರೆ, ನೀ ನನ್ನ ರೂಪಕ್ಕೆ ಮರುಳಾಗಿ ಪ್ರೀತಿಸಿದೆ ಎಂಬ ಭಾವನೆ ನನ್ನನ್ನು ಕಾಡುತ್ತಿರುತ್ತದೆ. ಮತ್ತು ಆ ರೀತಿಯ ಪ್ರೀತಿ ನನಗೆ ಅಸಹ್ಯವಾಗುತ್ತದೆ. ನಾನೇನಾದರೂ ಸಾಧಾರಣವಾಗಿದ್ದರೆ (ಇರಬಹುದೆಂದು ನೀನು ಒಪ್ಪಿಕೊಳ್ಳಬೇಕು) ನೀನು ಒಂಟಿಯಾಗಿರುವೆ ಮತ್ತು ಅದೇ ಕಾರಣಕ್ಕೆ ನನಗೆ ಪತ್ರ ಬರೆಯುತ್ತಿದ್ದೀಯಾ ಎಂದು ಪರಿತಪಿಸಬೇಕಾಗುತ್ತದೆ. ಬೇಡ, ನನ್ನ ಪೋಟೋವನ್ನು ಕೇಳಬೇಡ. ನೀನೇ ನ್ಯೂಯಾರ್ಕಿಗೆ ಬಂದಾಗ ನನ್ನನ್ನು ನೋಡಿದ ಮೇಲೆ ನಿರ್ಧಾರಕ್ಕೆ ಬರುವಿಯಂತೆ. ಜ್ನಾಪಕವಿರಲಿ ನಾವಿಬ್ಬರೂ ಈ ಸಂಬಂಧವನ್ನು ನಿಲ್ಲಿಸುವುದೋ ಅಥವಾ ಮುಂದುವರೆಸುವುದೋ ನಮ್ಮದೇ ಸ್ವತಂತ್ರ ಆಯ್ಕೆ.

ಆರಕ್ಕೆ ಒಂದು ನಿಮಿಷ ಮಾತ್ರ. ಬಿಗಿಯಾಗಿ ಸಿಗರೇಟಿನ ಧಮ್ ಎಳೆದ (ನಾ ಸೇದುವುದಿಲ್ಲವಾದ್ದರಿಂದ ನಿಟ್ಟುಸಿರಿಟ್ಟೆ) ಲೆಫ್ಟಿನೆಂಟ್ ಬ್ಲಾಂಡ್ಪೋೇರ್ಡ್ನವ ಎದೆ ಆತನ ವಿಮಾನಕ್ಕಿಂತ ಎತ್ತರಕ್ಕೆ ಜಿಗಿದಿತ್ತು.

ಒಬ್ಬಳು ಹೆಂಗಸು ಅವನ ಬಳಿಗೆ ನಡೆದು ಬರುತ್ತಿದ್ದಳು. ಉದ್ದ ಮತ್ತು ತೆಳುವಾಗಿದ್ದಳು. ಚೆಲುವಾದ ಕೂದಲು ಸುರುಳಿಯಾಕಾರದಲ್ಲಿ ಕಿವಿಯ ಬದಿಯಲ್ಲಿದ್ದವು. ಕಣ್ಣುಗಳು ನೀಲಿ ಹೂಗಳಂತಿದ್ದವು. ಅವಳ ತುಟಿ ಮತ್ತು ಗಲ್ಲ ಮೃದು ನಿಲುವು ತಳೆದಿದ್ದವು. ಅವಳ ತಿಳಿ ಹಸುರಿನ ಉಡುಗೆಯಲ್ಲಿ ವಸಂತ ಋತುವೆ ಮೈವೆತ್ತಂತೆ ಬಂದಳು.

ಅವನು ಅವಳೆಡೆಗೆ ಚಲಿಸಿದ. ಅವಳು ಗುಲಾಬಿಯನ್ನು ತೊಟ್ಟಿಲ್ಲವೆಂಬುದನ್ನು ಸಂಪೂರ್ಣವಾಗಿ ಮರೆತಿದ್ದ. ಆತ ಅವಳನ್ನು ಸಮೀಪಿಸಿದಂತೆ ಅವಳ ತುಟಿಗಳಲ್ಲಿ ಸಣ್ಣದಾಗಿ ಕೆಣಕುವ ನಗೆ ಮೂಡಿತ್ತು.

“ನೀವು ನನ್ನ ಹಾದಿಯಲ್ಲಿದ್ದೀರಾ, ಲೆಫ್ಟಿನೆಂಟ್?” ಅವಳು ಗೊಣಗುಟ್ಟಿದ್ದಳು.

ತನಗರಿವಿಲ್ಲದೆಯೇ, ಆತ ಒಂದು ಹೆಜ್ಜೆ ಅವಳಿಗೆ ಹತ್ತಿರವಾದ. ಅದಾಗ ಹೋಲಿಸ್ ಮೇನೆಲಳನ್ನು ನೋಡಿದ.

ಹೋಲಿಸ್ ಮೆನೆಲ್ ಸರಿಯಾಗಿ ಆ ಹುಡುಗಿಯ ಹಿಂದೆಯೇ ನಿಂತಿದ್ದಳು. ನಲವತ್ತರ ವಯಸ್ಸನ್ನು ದಾಟಿರಬಹುದಾದ ಹೆಂಗಸು. ಅವಳ ಮಾಸುತ್ತಿದ್ದ ಕೂದಲುಗಳು ಧರಿಸಿದ್ದ ಟೋಪಿಯೊಳಗಿದ್ದವು. ಸ್ವಲ್ಪ ಧಡೂತಿಯಾಗಿದ್ದಳು. ದಪ್ಪನೆಯ ಕಾಲುಗಳು ಶೂನೊಳಗೆ ತುರುಕಿದಂತಿದ್ದವು. ಆದರೆ ಅವಳ ಸುಕ್ಕುಗಟ್ಟಿದ್ದ ಮೇಲಂಗಿಯಲ್ಲಿ ಕೆಂಪು ಗುಲಾಬಿ ಧರಿಸಿದ್ದಳು.

ತಿಳಿ ಹಸಿರು ಬಣ್ಣದ ಉಡುಗೆ ತೊಟ್ಟಿದ್ದ ಹುಡುಗಿ ಮೆಲ್ಲನೆ ಅಲ್ಲಿಂದಾ ಮಾಯವಾದಳು.

ಬ್ಲಾಂಡ್ಪೋುರ್ಡ್ನತ ಮನಸ್ಸು ಇಬ್ಬಂದಿಯಾಯಿತು. ಅಲ್ಲಿಂದ ಮಾಯವಾದ ಹುಡುಗಿಯನ್ನು ಹಿಂಬಾಲಿಸಲು ಯೋಚಿಸಿದನಾದರೂ ತನ್ನ ಜೊತೆಯಲ್ಲೇ ಇರುತ್ತಿದ್ದ ಹೋಲಿಸ್ ಮೇನೆಲ್ಳ ಚೈತನ್ಯಕ್ಕೆ ಅವನ ಮನಸ್ಸು ಸೋತಿತ್ತು. ಮುಖಾಮುಖಿ ಅವರಿಬ್ಬರು ನಿಂತಿದ್ದಾರೆ. ಅವಳ ಮಂದವಾದ ದುಂಡು ದಂಡಾದ ಮುಖದಲ್ಲಿ ಕೋಮಲತೆಯಿತ್ತು. ಕಂದು ಬಣ್ಣದ ಕಣ್ಣುಗಳಲ್ಲಿ ಬೆಚ್ಚನೆಯ ಪ್ರೀತಿ ಇಣುಕುತಿತ್ತು.

ಲೆಫ್ಟಿನೆಂಟ್ ಬ್ಲಾಂಡ್ಪೋ್ರ್ಡ್ ಹಿಂದೆ ಸರಿಯಲಿಲ್ಲ. ಆತನ ಕೈ ಬೆರಳುಗಳು ಸ್ವಲ್ಪ ಹರಿದಿದ್ದ “Of Human Bondage” ಪುಸ್ತಕವನ್ನು ಧೃಡವಾಗಿ ಹಿಡಿದಿವು. ಅದು ಆಕೆಗೆ ಈತನನ್ನು ಗುರುತುಹಿಡಿಯಲು ಸಹಕಾರಿ. ಪ್ರಯಶಃ ಇದು ಪ್ರೀತಿಯಲ್ಲ, ಅದಕ್ಕಿಂತಲೂ ಮಿಗಿಲಾದ, ಒಂದು ಅಮೂಲ್ಯವಾದ ಜೀವಮಾನವೀಡಿ ಋಣಿಯಾಗಿರಬೇಕಾದ ಸ್ನೇಹ ಸಂಬಂಧ.

ಆತ ಆಕೆಗೆ ಸೆಲ್ಯೂಟ್ ಮಾಡುತ್ತಾ, ತನ್ನ ಕೈಯಲ್ಲಿದ್ದ ಪುಸ್ತಕವನ್ನು ಅವಳೆಡೆಗೆ ಚಾಚುತ್ತಾ, ತನಗೆ ನಿರಾಶೆಯಾದರು ಹೇಳಿದ: “ನಾನು ಲೆಫ್ಟಿನೆಂಟ್ ಜಾನ್ ಬ್ಲಾಂಡ್ಪೋ್ರ್ಡ್. ಮತ್ತು ನೀವು... ನೀವು... ಮಿಸ್ ಮೇನೆಲ್? ನಿಮ್ಮನ್ನು ಭೇಟಿಯಾದದ್ದು ಬಹಳ ಸಂತೋಷವಾಯಿತು. ನನ್ನ ಜೊತೆ... ಊಟಕ್ಕೆ ಬರುವಿರೋ?”

ಅವಳ ಮುಖ ನಗುವಿನಿಂದ ಅರಳಿತು. “ಏನಾಗುತ್ತಿದೆಯೆಂದು ನನಗೆ ಗೊತ್ತಿಲ್ಲ ಮಗು” ಎಂದು ಆಶ್ಚರ್ಯಚಕಿತವಾಗಿ ಉತ್ತರಿಸಿದಳು. ಮುಂದುವರೆಯುತ್ತಾ, “ಇದೀಗ ತಾನೇ ಇಲ್ಲಿಂದ ಹೋದ ತಿಳಿ ಹಸಿರು ಬಟ್ಟೆ ತೊಟ್ಟಿದ್ದ ಆ ಯುವತಿ ಈ ಗುಲಾಬಿಯನ್ನು ತೋಡುವಂತೆ ವಿನಂತಿಸಿದಳು. ನೀವೇನಾದರೂ ಊಟಕ್ಕೆ ನನ್ನನ್ನು ಕರೆದರೆ ಅವಳು ನಿಮಗೆ ಮುಂದಿನ ರಸ್ತೆಯಲ್ಲಿರುವ ಹೋಟೆಲ್ನೆಲ್ಲಿ ಕಾಯುತ್ತಿರುತ್ತಾಳೆಂದು ಹೇಳಬೇಕೆಂದಳು. ಇದೊಂದು ರೀತಿಯ ಪ್ರೇಮಪರೀಕ್ಷೆ ಎಂದು ಹೇಳಿದಳು. ನನಗಿಗಾಗಲೇ ಅಂಕಲ್ ಸ್ಯಾಮ್ನೊಂನದಿಗೆ ಇಬ್ಬರು ಮಕ್ಕಳಿದ್ದಾರೆ. ಅದಕ್ಕೆ ನಾನೂ ಆ ಯುವತಿಯ ಮಾತಿಗೆ ಸಮ್ಮತಿಸಿದೆ.” ಎಂದು ನಗುತ್ತಾ ಅಲ್ಲಿಂದ ತೆರಳಿದಳು.

ಕಥೆ ಕೇಳಿದ ನನ್ನುಡಿಗೆ ಹಣೆಗೊಂದು ಹೂ ಮುತ್ತನಿಟ್ಟಳು.



(ಪ್ರೇರಣೆ: ಎರಡನೇ ಪಿ.ಯು.ಸಿ. ಪಠ್ಯವಾಗಿರುವ, ಚಿಕನ್ ಸೂಪ್ ಫಾರ್ ದಿ ಸೋಲ್ ಪುಸ್ತಕದ, ಸುಲಮಿತ್ ಈಶ್-ಕಿಶೋರ್ ರವರ “Appointment with Love” ಎಂಬ ಕಥೆ)

- ಗುಬ್ಬಚ್ಚಿ ಸತೀಶ್, ಗುಬ್ಬಿ.

ಮಂಗಳವಾರ, ಫೆಬ್ರವರಿ 1, 2011

"ಮಳೆಯಾಗು ನೀ..." ಗುಬ್ಬಚ್ಚಿಯ ಮೊದಲ ಸಂಭ್ರಮ.

 














(ಉಪಸ್ಥಿತಿ: ಗುಬ್ಬಚ್ಚಿ ಸತೀಶ್, ಶ್ರೀ ಬಿ.ಮೃತ್ಯುಂಜಯ, ಶ್ರೀ ಟಿ.ಎಸ್.ಶಿವಪ್ರಕಾಶ್, ಶ್ರೀಮತಿ ಬಿ.ಸಿ. ಶೈಲಾ ನಾಗರಾಜ್, ಶ್ರೀ ಸಿ.ನಟರಾಜ್, ಶ್ರೀ ಉಗಮ ಶ್ರೀನಿವಾಸ್ - ಪೋಟೋ: ಸತೀಶ್, ಮಹೇಶ್ವರಿ ಸ್ಟುಡಿಯೋ, ತುಮಕೂರು)

ಹೆಚ್ಚಿನ ಪೋಟೋಗಳನ್ನು ಮತ್ತೆ ಹಾಕುತ್ತೇನೆ.
- ಗುಬ್ಬಚ್ಚಿ ಸತೀಶ್.

ಬುಧವಾರ, ಜನವರಿ 26, 2011

ಕನ್ನಡಮ್ಮನ ಕಥೆ.

“ಸಾರ್ ಈ ೩೦ನೇ ತಾರೀಖು ಫ್ರೀ ಇರ್ತೀರಾ” ನಾನು ವಿನಯದಿಂದ ಕೇಳಿದೆ. “ಈ ಮೂವತ್ತಾ...? ಇರ್ತೀನಿ” ಎಂದು ಯೋಚಿಸಿ ನುಡಿದ ನಮ್ಮೂರ ಇಂಗ್ಲಿಷ್ ಮೇಷ್ಟ್ರು, ಮುಂದುವರೆಯುತ್ತಾ, “ಆದರೆ ಫೆಬ್ರವರಿ ೪, ೫, ೬ ಇರಲ್ಲ” ಎಂದರು. “ಹೌದಾ ಸಾರ್. ಯಾಕ್ ಸಾರ್” ಎಂದೆ. “ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗ್ತಾ ಇದ್ದೇನೆ” ಎಂದು ಬಹಳ ಖುಷಿಯಿಂದ ಹೇಳಿದರು. ಅವರ ಕನ್ನಡ ಪ್ರೀತಿಯನ್ನು ಮನಸಾರೆ ಒಪ್ಪಿದ ನಾನು, “ನಾನು ಬರ್ತೀದೀನಿ ಸಾರ್. ಈ ವಾರ ನನ್ನ ಕವನ ಸಂಕಲನ ಬಿಡುಗಡೆಯಾಗುತ್ತೆ. ತಗೊಂಡು ನಾನೂ ಹೋಗ್ತೀನಿ. ನಿಮ್ಮನ್ನ ನನ್ನ ಕಾರ್ಯಕ್ರಮಕ್ಕೆ ಕರೆಯೋಣ ಅಂತಾನೆ ಬಂದೆ ಸಾರ್” ಎಂದೆ. “ಹೌದಾ...!? ಆದರೆ ಬರ್ತೀನಿ... ನಾನು ನನ್ನ ಪುಸ್ತಕ “ಕನ್ನಡದ ಮೂಲಕ ಇಂಗ್ಲೀಷ್ ಕಲಿಯಿರಿ. ೧೩ನೇ ಪ್ರಿಂಟ್ ತಗೊಂಡು ಹೋಗ್ತಿದೀನಿ” ಎಂದು ಮತ್ತಷ್ಟು ಖುಷಿಯಿಂದ ನುಡಿದರು. ಅಷ್ಟರಲ್ಲಿ ಇಂಟರ್ ಸಿಟಿ ರೈಲು ಕೂಗಿತು. ಜೈ ಹೋ ಕನ್ನಡ!

- ಗುಬ್ಬಚ್ಚಿ ಸತೀಶ್, ಗುಬ್ಬಿ.

(ಬ್ರೇಕಿಂಗ್ ನ್ಯೂಸ್: ಆತ್ಮೀಯರೇ ನನ್ನ ಮೊದಲ ಪುಸ್ತಕ “ಮಳೆಯಾಗು ನೀ...” ಕವನ ಸಂಕಲನ ಇದೇ ಭಾನುವಾರ ತುಮಕೂರಿನಲ್ಲಿ. ಹೆಚ್ಚಿನ ವಿವರಗಳನ್ನು ಹಲವು ಕಾರಣಗಳಿಂದ ಇದೀಗ ನೀಡಲಾಗುತ್ತಿಲ್ಲ ಅದಕ್ಕಾಗಿ ವಿಷಾದಿಸುತ್ತೇನೆ. ಹೆಚ್ಚಿನ ಮಾಹಿತಿಗೆ ನಿಮ್ಮ ಈ ಮೈಲ್, ನನ್ನ ಬ್ಲಾಗ್ ನೋಡುತ್ತಿರಿ)



ಶುಕ್ರವಾರ, ಜನವರಿ 21, 2011

ಅವಳ ಬೈಸಿಕಲ್ಲು



“ಬರುತ್ತೇನೆ” ಎಂದವಳಿಗೆ
ಹೋಗುವ ಮನಸ್ಸಿಲ್ಲ
ಆದರೂ ಹೋಗಲೇಬೇಕು
ಅಮ್ಮ ಬೇಗ ಬಾ ಎಂದಿದ್ದಾಳೆ
ಇಷ್ಟಕ್ಕೂ ಇವಳು ಹೇಳಿ
ಬಂದಿರುವುದು, ಗೆಳತಿಯ ಮನೆಗೆಂಬ
ಹಸಿಸುಳ್ಳು. ಆ ದಿನದ
“ದಿನಕ್ಕೊಂದು” ಹೊಸಸುಳ್ಳು!

ಸಿನಿಮಾ ಮುಗಿದರೂ
ಎಳಲೊಲ್ಲದ ಜನರಂತೆ
ಎದ್ದವಳು, ನಡಿಗೆಯಲ್ಲೇ ತೆವಳಿ
ಅವಳ ಬೈಸಿಕಲ್ಲಿನ ಬೀಗಕ್ಕೆ
ಕೀ ಹಚ್ಚಿ, ನನ್ನೆಡೆಗೆ ತಿರುಗಿ
ಕಣ್ಣಲೇ “ಮತ್ತೆ ಬರುತ್ತೇನೆ”
ಎಂದು ಸೈಕಲ್ ಹತ್ತಿದಳು.
ಮತ್ತೊಂದು ಷೋನ ಟಿಕೆಟಿಗಾಗಿ
ನಿಂತವನಂತೆ ನಾನು ನಿಂತೇ ಇದ್ದೆ!

ನನ್ನ ಕಣ್ಣಿಂದ ಬೇಗ
ಮರೆಯಾಗಲಿಚ್ಚಿಸದ
ಬೈಸಿಕಲ್ಲೂ-ಅವಳೂ
ನಿಧಾನವಾಗಿ ನನ್ನಿಂದ
ಸ್ವಲ್ಪ-ಸ್ವಲ್ಪ ದೂರವಾಗುತ್ತಿದ್ದಾರೆ
ಬೈಸಿಕಲ್ಲು ಅವಳದ್ದೆ, ಆದರದು
ನನ್ನ ಮನಸ್ಸು!

ಮತ್ತವಳು, ತನ್ನ
ಬೈಸಿಕಲ್ಲಿನ ಮೇಲೆ
ಹಿಂದಿರುಗಿ ಬರುವ ತನಕ
ನನ್ನ ಮನಸ್ಸು
ಅವಳ ಬೈಸಿಕಲ್ಲು!

- ಗುಬ್ಬಚ್ಚಿ ಸತೀಶ್.

ಶುಕ್ರವಾರ, ಜನವರಿ 14, 2011

ಚಳಿಗಾಲದ ಚುಟುಕುಗಳು


ಬೆಚ್ಚಗೆ
ಎಲ್ಲಾ ಕಾಲದಲ್ಲೂ
ಬೆಚ್ಚಗಿರಲು
ಹೆಂಗಸರಿಗೆ ನೈಟಿ!!
ಗಂಡಸರಿಗೆ ನೈಂಟಿ!

ಮುತ್ತಿನ ಅರ್ಥ
ನೀ ಕೊಟ್ಟ ಮುತ್ತು
ಹೇಳುತ್ತಿದೆ ಸಾವಿರಾರು ಅರ್ಥ
ಮೊದಲರ್ಥ ಮುತ್ತಿನ ಮತ್ತು!
ಉಳಿದೆಲ್ಲಾರ್ಥ ಮತ್ತಿನ ಗಮ್ಮತ್ತು!!

ತಬ್ಬಲಿ
ನಲ್ಲೆ,
ನೀ ನನ್ನ ಮೈ ತಡವಿದರೆ
ನಾ ಹೆಬ್ಬುಲಿ!
ನಲ್ಲೆ,
ನೀ ನನ್ನ ಮೈ ಕೊಡವಿದರೆ
ನಾ ಯಾರ ತಬ್ಬಲಿ!

ಮಿಲನ
ಆಗಸಕ್ಕೆ ತಿಳಿನೀಲಿ
ಕಾಮನಬಿಲ್ಲಿಗೆ ಚಿತ್ತಾರ
ಮಗುವಿಗೆ ನಗುವು
ಗುಲಾಬಿಗೆ ಕೆಂಬಣ್ಣ
ನದಿಗೆ ಹರಿವು
ಪ್ರಕೃತಿಗೆ ಹಸಿರು
ನಮ್ಮ ಮಿಲನ!

         - ಗುಬ್ಬಚ್ಚಿ ಸತೀಶ್.

ಶುಕ್ರವಾರ, ಜನವರಿ 7, 2011

ಸುಗ್ಗಿ ಪ್ರೀತಿ

ಹೊಸ ವರುಷದ ಸನಿಹದಲ್ಲಿ

ದಿವ್ಯ ಬೆಳಕಿನ ಸನ್ನಿಧಿಯಲ್ಲಿ

ಕಾದಿರುವೆ ನನ್ನ ಚೇತನವೆ

ನಿನಗಾಗಿ ನಿನಗಾಗಿ ನಿನಗಾಗಿ


ಹಳೇ ವರುಷದ ಚಿಗುರು

ಹೊಸ ವರುಷದಲಿ ಪೈರಾಗಿ

ತೆನೆ ತೆನೆಯಲೂ ಚಿಮ್ಮಲಿ

ಸಂಭ್ರಮ ಸುಗ್ಗಿಯ ಸಡಗರದಲ್ಲಿ


ಹೊಸ ವಸಂತ ಹೊಸ ದಿಗಂತ

ನನ್ನೆದೆಯ ನಿನ್ನೆದೆಯ ಕೋಗಿಲೆಗೆ

ಹೊಸ ದನಿಯಾಗಿ ಸೃಜಿಸಲಿ

ನಮ್ಮ ಪ್ರೀತಿಯು ಹಸಿರಾಗಲಿ.

                            - ಗುಬ್ಬಚ್ಚಿ ಸತೀಶ್
(ಈ ಕವನ ನಾನು ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನ ನಲ್ಲೆಯ ಸೇವೆಯನ್ನು ನೋಡಿ ಬಿಲ್ ಹಿಂಭಾಗದಲ್ಲಿ ಬರೆದದ್ದು. ಪ್ರೇರಣೆ: ಜಿ.ಎಸ್.ಎಸ್ ರವರ "ಬೆಳಗು ಬಾ ಹಣತೆಯನು" ಕವನ. ಹೊಸವರ್ಷದ ಮತ್ತು ಸಂಕ್ರಾತಿಯ ಶುಭಾಷಯಗಳೊಂದಿಗೆ - ಗುಬ್ಬಚ್ಚಿ ಕುಟುಂಬ)

ಅಮೇಜಾನ್‌ "ಗ್ರೇಟ್‌ ಸಮ್ಮರ್‌ ಸೇಲ್"‌

ಸ್ನೇಹಿತರೇ, ಇಂದಿನಿಂದ ಅಮೇಜಾನ್‌ "ಗ್ರೇಟ್‌ ಸಮ್ಮರ್‌ ಸೇಲ್"‌ ಶುರುವಾಗಿದ್ದು, ನಿಮಗೆ ಅಗತ್ಯವಿರುವ ವಸ್ತುಗಳನ್ನು ಹೆಚ್ಚಿನ ರಿಯಾಯಿತಿಯಲ್ಲಿ ಕೊಳ್ಳಲು ಸದಾವ...