ಶುಕ್ರವಾರ, ಜನವರಿ 21, 2011

ಅವಳ ಬೈಸಿಕಲ್ಲು



“ಬರುತ್ತೇನೆ” ಎಂದವಳಿಗೆ
ಹೋಗುವ ಮನಸ್ಸಿಲ್ಲ
ಆದರೂ ಹೋಗಲೇಬೇಕು
ಅಮ್ಮ ಬೇಗ ಬಾ ಎಂದಿದ್ದಾಳೆ
ಇಷ್ಟಕ್ಕೂ ಇವಳು ಹೇಳಿ
ಬಂದಿರುವುದು, ಗೆಳತಿಯ ಮನೆಗೆಂಬ
ಹಸಿಸುಳ್ಳು. ಆ ದಿನದ
“ದಿನಕ್ಕೊಂದು” ಹೊಸಸುಳ್ಳು!

ಸಿನಿಮಾ ಮುಗಿದರೂ
ಎಳಲೊಲ್ಲದ ಜನರಂತೆ
ಎದ್ದವಳು, ನಡಿಗೆಯಲ್ಲೇ ತೆವಳಿ
ಅವಳ ಬೈಸಿಕಲ್ಲಿನ ಬೀಗಕ್ಕೆ
ಕೀ ಹಚ್ಚಿ, ನನ್ನೆಡೆಗೆ ತಿರುಗಿ
ಕಣ್ಣಲೇ “ಮತ್ತೆ ಬರುತ್ತೇನೆ”
ಎಂದು ಸೈಕಲ್ ಹತ್ತಿದಳು.
ಮತ್ತೊಂದು ಷೋನ ಟಿಕೆಟಿಗಾಗಿ
ನಿಂತವನಂತೆ ನಾನು ನಿಂತೇ ಇದ್ದೆ!

ನನ್ನ ಕಣ್ಣಿಂದ ಬೇಗ
ಮರೆಯಾಗಲಿಚ್ಚಿಸದ
ಬೈಸಿಕಲ್ಲೂ-ಅವಳೂ
ನಿಧಾನವಾಗಿ ನನ್ನಿಂದ
ಸ್ವಲ್ಪ-ಸ್ವಲ್ಪ ದೂರವಾಗುತ್ತಿದ್ದಾರೆ
ಬೈಸಿಕಲ್ಲು ಅವಳದ್ದೆ, ಆದರದು
ನನ್ನ ಮನಸ್ಸು!

ಮತ್ತವಳು, ತನ್ನ
ಬೈಸಿಕಲ್ಲಿನ ಮೇಲೆ
ಹಿಂದಿರುಗಿ ಬರುವ ತನಕ
ನನ್ನ ಮನಸ್ಸು
ಅವಳ ಬೈಸಿಕಲ್ಲು!

- ಗುಬ್ಬಚ್ಚಿ ಸತೀಶ್.

ಶುಕ್ರವಾರ, ಜನವರಿ 14, 2011

ಚಳಿಗಾಲದ ಚುಟುಕುಗಳು


ಬೆಚ್ಚಗೆ
ಎಲ್ಲಾ ಕಾಲದಲ್ಲೂ
ಬೆಚ್ಚಗಿರಲು
ಹೆಂಗಸರಿಗೆ ನೈಟಿ!!
ಗಂಡಸರಿಗೆ ನೈಂಟಿ!

ಮುತ್ತಿನ ಅರ್ಥ
ನೀ ಕೊಟ್ಟ ಮುತ್ತು
ಹೇಳುತ್ತಿದೆ ಸಾವಿರಾರು ಅರ್ಥ
ಮೊದಲರ್ಥ ಮುತ್ತಿನ ಮತ್ತು!
ಉಳಿದೆಲ್ಲಾರ್ಥ ಮತ್ತಿನ ಗಮ್ಮತ್ತು!!

ತಬ್ಬಲಿ
ನಲ್ಲೆ,
ನೀ ನನ್ನ ಮೈ ತಡವಿದರೆ
ನಾ ಹೆಬ್ಬುಲಿ!
ನಲ್ಲೆ,
ನೀ ನನ್ನ ಮೈ ಕೊಡವಿದರೆ
ನಾ ಯಾರ ತಬ್ಬಲಿ!

ಮಿಲನ
ಆಗಸಕ್ಕೆ ತಿಳಿನೀಲಿ
ಕಾಮನಬಿಲ್ಲಿಗೆ ಚಿತ್ತಾರ
ಮಗುವಿಗೆ ನಗುವು
ಗುಲಾಬಿಗೆ ಕೆಂಬಣ್ಣ
ನದಿಗೆ ಹರಿವು
ಪ್ರಕೃತಿಗೆ ಹಸಿರು
ನಮ್ಮ ಮಿಲನ!

         - ಗುಬ್ಬಚ್ಚಿ ಸತೀಶ್.

ಶುಕ್ರವಾರ, ಜನವರಿ 7, 2011

ಸುಗ್ಗಿ ಪ್ರೀತಿ

ಹೊಸ ವರುಷದ ಸನಿಹದಲ್ಲಿ

ದಿವ್ಯ ಬೆಳಕಿನ ಸನ್ನಿಧಿಯಲ್ಲಿ

ಕಾದಿರುವೆ ನನ್ನ ಚೇತನವೆ

ನಿನಗಾಗಿ ನಿನಗಾಗಿ ನಿನಗಾಗಿ


ಹಳೇ ವರುಷದ ಚಿಗುರು

ಹೊಸ ವರುಷದಲಿ ಪೈರಾಗಿ

ತೆನೆ ತೆನೆಯಲೂ ಚಿಮ್ಮಲಿ

ಸಂಭ್ರಮ ಸುಗ್ಗಿಯ ಸಡಗರದಲ್ಲಿ


ಹೊಸ ವಸಂತ ಹೊಸ ದಿಗಂತ

ನನ್ನೆದೆಯ ನಿನ್ನೆದೆಯ ಕೋಗಿಲೆಗೆ

ಹೊಸ ದನಿಯಾಗಿ ಸೃಜಿಸಲಿ

ನಮ್ಮ ಪ್ರೀತಿಯು ಹಸಿರಾಗಲಿ.

                            - ಗುಬ್ಬಚ್ಚಿ ಸತೀಶ್
(ಈ ಕವನ ನಾನು ಸೇಂಟ್ಸ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನನ್ನ ನಲ್ಲೆಯ ಸೇವೆಯನ್ನು ನೋಡಿ ಬಿಲ್ ಹಿಂಭಾಗದಲ್ಲಿ ಬರೆದದ್ದು. ಪ್ರೇರಣೆ: ಜಿ.ಎಸ್.ಎಸ್ ರವರ "ಬೆಳಗು ಬಾ ಹಣತೆಯನು" ಕವನ. ಹೊಸವರ್ಷದ ಮತ್ತು ಸಂಕ್ರಾತಿಯ ಶುಭಾಷಯಗಳೊಂದಿಗೆ - ಗುಬ್ಬಚ್ಚಿ ಕುಟುಂಬ)

ಈ ಪ್ರತಿಷ್ಠಿತ ಕಥಾ ಮತ್ತು ಕಾದಂಬರಿ ಸ್ಪರ್ಧೆಗೆ ಇನ್ನೇರಡೇ ದಿನ ಬಾಕಿ…

  ಈ ಪ್ರತಿಷ್ಠಿತ ಕಥಾ ಮತ್ತು ಕಾದಂಬರಿ ಸ್ಪರ್ಧೆಗೆ ಇನ್ನೇರಡೇ ದಿನ ಬಾಕಿ… ನಾಡಿನ ಪ್ರತಿಷ್ಠಿತ ʻ ಬುಕ್ ‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು...