ಶುಕ್ರವಾರ, ಡಿಸೆಂಬರ್ 24, 2010

ಜೀವ ಚೇತನ

ಜೀವ ಚೇತನದ ಆದ್ಯಂತ ಪಯಣಕೆ

ಹೆಜ್ಜೆಗೊಂದು ಸಡ್ಡು ಹೊಡೆದ ಸವಾಲು

ಬಿರುಗಾಳಿಗೆ ಸಿಲುಕಿದ ಗಾಳಿಪಟ ಮನ

ಯಾವ ಹಾದಿ, ಪರಿಹಾರಗಳೇ ವಿರಳ


ನಿರ್ಭಯತೆಯಿಂದ ಮುನ್ನುಗುತ್ತಿರು

ಹೊಸ ಅರುಣೋದಯವು ಗೋಚರಿಸಲಿ

ಕಟ್ಟು ಕಷ್ಟಗಳ ಮೂಟೆ, ಹೆಜ್ಜೆ ಮುಂದಿಡು

ಬದಲಾವಣೆ ಬಲುಕಷ್ಟ, ಅಚ್ಚರಿಯು ಕಾದಿದೆ


ನಿನೆಂದೂ ಗ್ರಹಿಸದ ತಿರುವಿದೆ ಮುಂದೆ

ಕಲ್ಪನೆಗೂ ನಿಲುಕದ ಕನಸು ನನಸಾಗಲಿದೆ

ಬಹುಶಃ ನಿನ್ನದೇ ಹೊಸಲೋಕ, ಅದ್ಬುತ!

ಬಹುದೂರವಾದರು ರಮಣೀಯ ದೃಶ್ಯಗಳು


ಒಲುಮೆಯ ಜನ, ಹಾರ್ದಿಕ ಶುಭಾಷಯಗಳು

ನಿನ್ನ ಕಥೆಗೆ, ಭಾವನೆಗಳಿಗೆ ಕಿವಿಗೊಡುವವರು

ನೀನಿಟ್ಟ ಹೆಜ್ಜೆಯ ಹಾದಿಗೆ ಹೂವಾದವರು

ಅಶ್ವಿನಿ ದೇವಂತೆಗಳಾದ ಜೀವದ ಗೆಳೆಯರು


ಇನ್ನೇಕೆ ಭಯ? ಒಂದೆಜ್ಜೆ ಮುಂದಿರಲಿ ಎಲ್ಲರಿಗಿಂತ

ಜೀವನದ ಅನುಕ್ಷಣವನ್ನು ಪ್ರೀತಿಸು

ಮುಂದಿನ ಹಾದಿಯಲ್ಲಿ ಎಲ್ಲ ಮರೆಸುವ ಮುಂಬೆಳಕಿದೆ

ಹಿಂತಿರುಗಿ ನೋಡದಿರು ನಿನ್ನ ದಾರಿ ಅದಲ್ಲ

ಮಂಗಳವಾರ, ಡಿಸೆಂಬರ್ 7, 2010

ಮಳೆಯಾಗು ನೀ... (ನಮ್ಮ ಮಗುವೆ)

ಮಿಂಚದಿರು ನೀನು

ಮಿಂಚಿದರೆ ಚೆಂದ

ಮಳೆಗೆ ಮುನ್ಸೂಚನೆ!

ಆದರೆ, ಆ ಬೆಳಕು

ಕ್ಷಣಿಕ ಸುಖ

ಮಿಂಚದಿರು ನೀನು



ಎಂದಿಗೂ ಗುಡುಗದಿರು

ಗುಡುಗೆಂದರೆ ಭಯ

ಮಳೆ ಶುರುವಾಗಬಹುದ?

ಆದರೆ, ಆ ಶಬ್ಧ

ಕ್ಷಣಿಕ ದುಃಖ

ಎಂದಿಗೂ ಗುಡುಗದಿರು



ಮಳೆ, ಮಳೆಯಾಗು ನೀ

ಮಳೆಯೆಂದರೆ ಬೆಳೆ

ಬದುಕು ಚಿಗುರುತ್ತದೆ!

ಆದರೆ, ಆ ಹಸಿರು

ಸುಃಖ ದುಃಖಗಳ ಬಸಿದು

ಹೆತ್ತವರ ಮನಕೆ ತಂಪೆರೆಯಲಿ

ಅತಿವೃಷ್ಠಿ-ಅನಾವೃಷ್ಠಿಯಾಗದ

ಮಳೆ, ಮಳೆಯಾಗು ನೀ...

---

ಗುರುವಾರ, ನವೆಂಬರ್ 18, 2010

ಮೊದಲ ಪ್ರೇಮ ಪತ್ರ...


ಲಕ್ಷ್ಮಿ...

ನಾ ನಿನ್ನನ್ನು ಡಿಯರ್ ಲಕ್ಷ್ಮಿ... ಎಂದೇ ಸಂಬೋಧಿಸಬಹುದಿತ್ತು. ನನ್ನ ಪ್ರಕಾರ ನೀನು ನನಗೆ ಡಿಯರ್ ಆಗಿದ್ದೀಯಾ ಮತ್ತು ನಾ ನಿನ್ನನ್ನು ಡಿಯರ್ ಎಂದುಕೊಂಡು ಮನದಲ್ಲೇ ಸಂಬೋಧಿಸಿಕೊಂಡದ್ದಾಗಿದೆ. ಆದರೆ, ನಿನಗೆ ನಾ ಇನ್ನೂ ಡಿಯರ್ ಆಗಿಲ್ಲ ಮತ್ತು ನನ್ನ ಪ್ರೀತಿಯ ಬಗ್ಗೆ ನಿನಗಿನ್ನೂ ಅರಿವಿಲ್ಲ ಎಂದುಕೊಂಡಿದ್ದೇನೆ. ಅದಕ್ಕೋಸ್ಕರ ಡಿಯರ್ ಎಂದು ಸಂಬೋದಿಸಿಲ್ಲ. ತಪ್ಪಾಗಿದ್ದರೆ ಕ್ಷಮಿಸು. ನೀ ನನ್ನ ಒಪ್ಪುತ್ತೀಯಾ ಮತ್ತು ಪ್ರೀತಿಸುತ್ತೀಯಾ ಎನ್ನುವ ಭರವಸೆಯಲ್ಲೇ, ನನ್ನ ಪ್ರೀತಿಯನ್ನು ಈ ಪತ್ರದಲ್ಲಿ ನಿವೇದಿಸಿಕೊಂಡಿದ್ದೇನೆ. ದಯಮಾಡಿ ಕೋಪಗೊಳ್ಳದೆ ಪೂರ್ತಿ ಪತ್ರವನ್ನು ಓದಿ, ನಿನ್ನ ನಿರ್ಧಾರವನ್ನು ಆದಷ್ಟು ಬೇಗ ತಿಳಿಸು. ಆ ನಿನ್ನ ನಿರ್ಧಾರವು ನನ್ನ ಪ್ರೀತಿಯನ್ನು ಹುಸಿಗೊಳಿಸುವುದಿಲ್ಲವೆಂದುಕೊಂಡಿದ್ದೇನೆ. ಯಾವುದೇ ಕಾರಣಕ್ಕೂ ನನ್ನ ಒಲವಿನ ಓಲೆಯನ್ನು ಹರಿಯದಿರು ಅಥವಾ ಸುಡದಿರು.

ನನ್ನ ಓಲೆ ಓಲೆಯಲ್ಲ

ಮಿಡಿವ ಒಂದು ಹೃದಯ

ಒಡೆಯಬೇಡ ಒಲವಿಲ್ಲದೇ

ನೋಯುತ್ತಿರುವ ಎದೆಯ



ಲಕ್ಷ್ಮಿ, ನಾ ಹುಟ್ಟಿದಾಗ ಬಹುಶಃ ನೀ ಇನ್ನೂ ಜನ್ಮವೆತ್ತಿರಲಿಲ್ಲವೇನೋ? ಅದ್ಯಾಕೋ ನೀ ನನಗಿನ್ನು ಸ್ವಲ್ಪ ಚಿಕ್ಕವಳಿರಬೇಕು ಎಂದೆನಿಸುತ್ತದೆ. ಈಗ ಆ ವಿಷಯವೇಕೆಂದರೇ ನಮ್ಮಿಬ್ಬರ ಹುಟ್ಟಿಗೂ ಮುನ್ನ ಪ್ರೀತಿಯಿತ್ತು! ಹುಟ್ಟಿನಿಂದಲೇ ನಾವು ಪ್ರೀತಿಸಲು ತೊಡಗುತ್ತೇವೆ. ನಮ್ಮನ್ನೂ ಕೆಲವರು ಪ್ರೀತಿಸತೊಡಗುತ್ತಾರೆ. ಹೆತ್ತ ಅಮ್ಮನನ್ನು, ಬೆಳೆಸುವ ಅಪ್ಪನನ್ನು, ಒಡಹುಟ್ಟಿದವರಿದ್ದರೆ ಅವರನ್ನು, ಅಜ್ಜ-ಅಜ್ಜಿಯರನ್ನು, ಸಂಬಂಧಿಗಳನ್ನು, ಗೆಳೆಯ ಗೆಳತಿಯರನ್ನು, ನೆರೆ-ಹೊರೆಯವರನ್ನು ಪ್ರೀತಿಸತೊಡಗುತ್ತೇವೆ. ನಮ್ಮ ಸೃಷ್ಟಿಯು ಪ್ರೀತಿಯ ಹುಡುಕಾಟದಲ್ಲೇ ಇರುತ್ತದೆ. ಈ ರೀತಿ ಹಲವರನ್ನು ಪ್ರಿತಿಸುತ್ತಾ ಬೆಳೆಯತೊಡಗಿದ ನಾವು ತಾರುಣ್ಯಕ್ಕೆ ಕಾಲಿಟ್ಟಾಗ ಪ್ರಕೃತಿ ಸಹಜವಾಗಿ ಅನ್ಯಲಿಂಗದೆಡೆಗೆ ಆಕರ್ಷಿತರಾಗುತ್ತೇವೆ. ಆ ಪ್ರಕ್ರಿಯೆಯಲ್ಲಿ ನಾನು ಮೊದಲು ಆಕರ್ಷಿತನಾಗಿದ್ದು ನಿನ್ನಯ ಕಡೆಗೆ ಕಣೇ ಹುಡುಗಿ. ಇದು ನನ್ನ ಗಾಡ್ ಗಣಪತಿಯ ಮೇಲಾಣೆ. ಅಂದು ಕಾಲೇಜಿನ ಮೊದಲ ದಿನ ನಿನ್ನನ್ನು ನೋಡಿದ ನನ್ನ ಕಣ್ಣುಗಳು, ನಿನ್ನ ನಕ್ಷತ್ರದಂಥಾ ಕಣ್ಣುಗಳಲ್ಲಿ ನನ್ನನ್ನೇ ಹುಡುಕಿಕೊಳ್ಳಲು ಆರಂಭಿಸಿದವು. ಅದಲ್ಲವೇ ಮನಸ್ಸಿನ ತುಡಿತ! ನೀ ಏನಾದರು ನನ್ನನ್ನು ಸೆಳೆಯಲು ಗಾಳ ಹಾಕಿದ್ದೆಯಾ...?

ಕಣ್ಣಿನಾಟ ಕಣ್ಣಿಗುಂಟು

ಗಾಳದಾಟ ಗಾಳಕೆ

ಎಲ್ಲವನ್ನು ಸೋಲಬಹುದು

ನೀನು ಎಸೆದ ಗಾಳಕೆ



ಲಕ್ಷ್ಮಿ, ಆ ಮಧುರ ಕ್ಷಣದಲ್ಲಿ ನನ್ನ ಕಣ್ಣುಗಳಿಂದ ನೇರವಾಗಿ ನನ್ನ ಹೃದಯಕ್ಕೆ ಮೇಸೆಂಜೊಂದು ಪಾಸಾಯಿತು. “love her” ಎಂದು. ಅಬ್ಬಾ! ಅದೆಂಥಾ ಅದ್ಬುತ ಮೇಸೆಜದು! ಅದುವರೆವಿಗೂ “ಲಬ್ ಡಬ್, ಲಬ್ ಡಬ್” ಎನ್ನುತ್ತಿದ್ದ ನನ್ನ ಹೃದಯವು “love her, love her” ಎನ್ನಲು ಶುರುಮಾಡಿತಲ್ಲ! ಹೃದಯವೇ ಅಪ್ಪಣೆ ಕೊಟ್ಟಮೇಲೆ ಯಾವ ದೊರೆಯನ್ನು ಕೇಳಬೇಕು ಹೇಳು? ಅಂದು ನಿನ್ನಲ್ಲಿ, ಆ ಕ್ಷಣದಲ್ಲಿ ಶುರುವಾದ ಪ್ರೀತಿ ಇಂದು, ಈ ಕ್ಷಣದವರೆಗೂ ನಿರಂತರವಾಗಿ ಮುಂದುವರಿಯುತ್ತಿದೆ ಎಂದಮೇಲೆ, ಅದು ನಿನ್ನ ಮೇಲೆ ನನ್ನ ನಿಷ್ಠೆಯನ್ನು ತೋರಿಸುತ್ತದೆ ಅಲ್ಲವಾ?

ಆ ಮಧುರ ಕ್ಷಣಗಳಿಂದ ಇಡಿದು ಇದುವರೆವಿಗೂ ಬರೆಯುತ್ತಾ ಹೋದರೆ ಅದೇ ಒಂದು “ಡಿಯರ್ ಲಕ್ಷ್ಮಿ...” ಎನ್ನುವ ಕಾದಂಬರಿಯಾಗುತ್ತದೆ ಕಣೇ ಲಕ್ಷ್ಮಿ. ಅದೆಲ್ಲಾ ಈಗ ಬೇಡ ಬಿಡು. ಹೇಗಿದ್ದರೂ ನಮ್ಮ ಪ್ರೀತಿ ಶುರುವಾದ ಮೇಲೆ ಅದನ್ನೆಲ್ಲಾ ಹಂಚಿಕೊಳ್ಳಲು ಸಾಕಷ್ಟು ಸಮಯವಿದೆ. ನೋಡು, ಆ ಸಮಯವನ್ನು ಕಲ್ಪಿಸಿಕೊಂಡರೆ ರೋಮಾಂಚನವಾಗುತ್ತಿದೆ, ಮೈ ನವಿರೇಳುತ್ತಿದೆ. ನೋಡಿದ್ಯಾ ನಿನ್ನ ಪ್ರೀತಿಯಲ್ಲಿ ನನ್ನ ಕನವರಿಕೆಯಾ!

ಲಕ್ಷ್ಮಿ...ಅಷ್ಟಕ್ಕೂ ನಾ ನಿನ್ನನ್ನು ಎಷ್ಟು ಪ್ರೀತಿಸುತ್ತೇನೆ ಮತ್ತು ನೀ ನನ್ನನ್ನು ಏಕೆ ಪ್ರೀತಿಸಬೇಕು ಎಂದರೆ ಇತ್ತೀಚಿನ ಓಂದು ಘಟನೆಯನ್ನು ಬರೆದಿದ್ದೇನೆ ಓದಿ ಬಿಡು: ನನ್ನ ಮನಸ್ಸಿನಲ್ಲಿ ಈ ದೀಪಾವಳಿಯ ರಜಾ ದಿನಗಳಲ್ಲಿ ನಿನಗೊಂದು ಪ್ರೇಮ ಪತ್ರವನ್ನು ಬರೆದು ಬಿಡಬೇಕೆಂದು ನಿರ್ಧರಿಸಿದ್ದೆ. ನಿನ್ನ ನೋಡಿದ ಮೇಲೆ ಎಂಥಾ ಅದೃಷ್ಟ ನೋಡು. ಈ ಬಾರಿ ದೀಪಾವಳಿಗೆ ಮೂರು ದಿನಗಳ ರಜೆ! ಸಾಮಾನ್ಯವಾಗಿ ಬ್ಯಾಂಕುಗಳಿಗೆ ಸತತವಾಗಿ ಮೂರು ದಿನಗಳ ರಜೆ ಇರುವುದಿಲ್ಲವಂತೆ. ನಿನ್ನ ಅದೃಷ್ಟದಿಂದ ಬ್ಯಾಂಕಿನವರೆಲ್ಲರಿಗೂ ಅದ್ದೂರಿಯ ದೀಪಾವಳಿ! ನನಗಂತೂ ಅದೃಷ್ಟವೋ ಅದೃಷ್ಟ. ನಿನಗೆ ಪತ್ರ ಬರೆಯಲು ಮೂರು ದಿನಗಳು ಸಿಕ್ಕವಲ್ಲ ಎಂದು. ಶುಕ್ರವಾರದ ಬೆಳಿಗ್ಗೆಯೇ ಬೇಗ ರೆಡಿಯಾಗಿ ರೂಮಿನ ಕದವಿಕ್ಕಿ ಕುಳಿತೆ. ಸಾಮಾನ್ಯವಾಗಿ ಹಬ್ಬಗಳಲ್ಲಿ ಕವನಗಳನ್ನು ಬರೆಯಲು ತೊಡಗುವ ಮನಸ್ಸು ಮೊದಲಬಾರಿಗೆ ಪ್ರೇಮ ಪತ್ರವನ್ನು ಬರೆಯಲು ಹಾತೊರೆಯುತ್ತಿತ್ತು. ಆದರೆ, ಕೈ ನಡುಗುತ್ತಿತ್ತು. ಹೇಗೆ ಆರಂಭಿಸುವುದು...? ಏನು ಬರೆಯುವುದು...? ಹೇಗೆ ಒಪ್ಪಿಸಿಕೊಳ್ಳಲಿ ನನ್ನ ಹೃದಯವನ್ನು...? ಏನಂಥಾ ನಿವೇದಿಸಿಕೊಳ್ಳಲಿ ನನ್ನ ಪ್ರೀತಿಯನ್ನು...? ಬರೀ ಪ್ರಶ್ನೆಗಳು... ಪಿಂಕ್ ಬಣ್ಣದ ಹಾಳೆಯ ಮೇಲೆ ಪೆನ್ನು ಮುತ್ತಿಕ್ಕುತಾನೆ ಇಲ್ಲ! ಕ್ಷಣಗಳು ಗಂಟೆಗಳಾಗಿ, ಗಂಟೆಗಳು ಯುಗಗಳಾಗಿ, ಅವಧಿ ಮೀರಿತೇನೋ ಎನ್ನುವಂತೆ ಸೆಖೆಯಾಗತೊಡಗಿತು. ಇನ್ನು ಹೆಚ್ಚು ಹೊತ್ತು ಕೂಡುವುದಾಗುವುದಿಲ್ಲ ಎಂದು ಕೊಳ್ಳುವಾಗಲೇ, ಯಾರೋ ನನ್ನನ್ನು ಕೇಳಿಕೊಂಡು ಬಂದಂತಾಯಿತು. ಅಬ್ಬಾ ಬದುಕಿದೇ ಬಡ ಜೀವವೇ!

ಸಾಕಪ್ಪ ಸಾಕು ಎಂದು ಕೊಂಡು ಎದ್ದು ಆಚೆ ಬಂದು ನೋಡಿದರೆ ಶಶಿ. ಶಶಿಕುಮಾರ್! “ಇದೇನಪ್ಪಾ ಆಶ್ಚರ್ಯ?” ಎಂದೆ. “ಏನಪ್ಪಾ ಆಯ್ತ ಹಬ್ಬ?” ಎಂದವನೇ ನನ್ನ ಉತ್ತರಕ್ಕೂ ಕಾಯದೆ “ಸಿದ್ದಗಂಗೆಗೆ ಬರ್ತೀಯಾ?” ಅಂದ. “ಸರಿ ಬರ್ತೀನಿ” ಅಂದವನೇ ಸ್ವಲ್ಪ ರಿಲ್ಯಾಕ್ಸ್ ಆದರೆ ಏನಾದರೂ ಐಡಿಯಾ ಬರಬಹುದೆಂದು ಅವನ ಜೊತೆ ಹೊರಟೆ.

ಬೈಕು ಸಿದ್ದಗಂಗೆಯ ಕಡೆ ಹೋಗುತ್ತಿದ್ದರೆ, ಹಿಂದೆ ಆರಾಮಾವಾಗಿ ನಿನ್ನ ಧ್ಯಾನದಲ್ಲಿ ಕುಳಿತಿದ್ದವನ ಮನಸ್ಸಿನಲ್ಲಿ ಭಯಮಿಶ್ರಿತ ಯೋಚನೆಗಳು. ದಾರಿಯಲ್ಲಿ ಎತ್ತ ನೋಡಿದರೂ ನೀನೇ ಕಾಣಿಸುತ್ತಿದೆ. ಕಣ್ಮುಚ್ಚಿದರೆ ಕಣ್ಣುಗಳೊಳಗೂ ನೀನೆ! ಸಿದ್ದಗಂಗೆಯಲ್ಲಿ ಶಶಿಗೆ ಈ ವಿಷಯವಾಗಿ ಹೇಳಿಬಿಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುವಾಗಲೇ, ಬೇಡ ನಿನ್ನ ಪ್ರೀತಿಯನ್ನು ನಿನ್ನ ಪ್ರೀತಿಯ ಲಕ್ಷ್ಮಿಗೇ ಮೊದಲು ತಿಳಿಸು ಎಂದು ನನ್ನ ಮನಸ್ಸು ಪಿಸುಗುಟ್ಟಿತು. ಅದೇ ಸರಿ ಎಂದುಕೊಂಡು ಪ್ರೇಮಪತ್ರದಲ್ಲಿ ಏನು ಬರೆಯುವುದೆಂದು ಚಿಂತಿಸುತ್ತಿರುವಾಗಲೇ ಸಿದ್ದಗಂಗೆ ಬಂದಿತು.

ಬಹಳ ಉತ್ಸಾಹದಲ್ಲಿ ಬೆಟ್ಟವನ್ನು ಹತ್ತಿ ಸಿದ್ದಗಂಗೆಯ ಶ್ರೀ ಸಿದ್ದಲಿಂಗೇಶ್ವರನ ದರ್ಶನ ಪಡೆದು, ಆಶೀರ್ವಾದ ಕೋರಿ, ಪವಿತ್ರ ಗಂಗಾಜಲವನ್ನು ಪ್ರೋಕ್ಷಿಸಿಕೊಂಡು ನಂತರ ಸಿದ್ದಗಂಗೆ ಶ್ರೀಗಳಿಗೆ ವಂದಿಸಿ, ಅಲ್ಲಿನ ಪ್ರಸಾದ ತೆಗೆದುಕೊಂಡು ಬರುವಷ್ಟರಲ್ಲಿ ಸಂಜೆಯಾಗತೊಡಗಿತ್ತು. ಹಾಗೇ ವಿವಹರಿಸುತ್ತಾ ಅಲ್ಲಿದ್ದ ಪಾರ್ಕಿನ ಬಳಿ ಬಂದೆವು. ಅಲ್ಲಿದ್ದ ಕೊಳದಲ್ಲಿ ಬಾತುಕೋಳಿಗಳು ಸ್ವಚ್ಚಂದವಾಗಿ ಈಜುತ್ತಿದ್ದವು.

ನನ್ನವಳು ಈ ನನ್ನಾಕೆ

ಹರಿಯುವ ನದಿಯಲ್ಲ

ಸರಿವ ಸರಿತೆಯಲ್ಲ

ಈವಳೊಂದು ಪುಟ್ಟಕೋಳ

ನನ್ನ ಬಾಳಿನ ಜೀವಜಲ

(ಬಿ.ಆರ್.ಲಕ್ಷಣರಾವ್)

ಅದೇ ಲಹರಿಯಲ್ಲಿ ಮನಸ್ಸಿಲ್ಲದ ಮನಸ್ಸಿನಲ್ಲಿ ಮುಂದುವರೆದಾಗ ದೂರದಲ್ಲಿ ಬಂಗಾರದಂಥಾ ಜಿಂಕೆಗಳು ಹುಲ್ಲು ಮೇಯುತ್ತಾ ವಿವಹರಿಸುತ್ತಿದ್ದವು. ಜೊತೆಗಿದ್ದ ಶಶಿಯನ್ನು ಹಿಂದೆ ಬಿಟ್ಟು ನಿಧಾನವಾಗಿ ಒಂದು ಜಿಂಕೆಯ ಬಳಿ ಹೋದೆ. ನಿಶ್ಯಬ್ಧವಾಗಿ ನಿಂತುಕೊಂಡು ಅದನ್ನೇ ನೋಡುತ್ತಾ ನಿಂತೆ. ಆಹಾ! ಜಿಂಕೆ ಅದೆಷ್ಟು ಸುಂದರವಾಗಿದೆ ಎಂದುಕೊಳ್ಳುವಾಗಲೇ mAಮಾನವನ ಆಗಮನವನ್ನು ಅರಿತ ಆ ಜಿಂಕೆಯು ಗಾಬರಿಯಾಗಿ ತಲೆಯೆತ್ತಿ ನನ್ನನ್ನು ನೋಡಲು ತೊಡಗಿತು. ಮಿಂಚಿನಂಥಾ ಕಣ್ಣುಗಳು! ಆ ಕ್ಷಣಗಳಲ್ಲಿ ತಕ್ಷಣ ಮಿಂಚಿದ್ದು ನೀನೇ ಕಣೇ ಹುಡುಗಿ. ಆ ಜಿಂಕೆಯ ಕಣ್ಣುಗಳಲ್ಲೂ ನಿನ್ನ ಪ್ರತಿಫಲನ! ಆ ಪ್ರತಿಫಲನದಲ್ಲಿ ನೀನೇ ನನ್ನನ್ನು ನೋಡಿದಂತಾಯಿತು! ಇದನ್ನು ಪ್ರೀತಿಯೆನ್ನದೆ ಇನ್ನೇನು ಎನ್ನಲಿ ಹೇಳು?”

ಈ ಸಂದರ್ಭವೊಂದೆ ಸಾಕಲ್ಲವೆನೇ ಲಕ್ಷ್ಮಿ ನಿನ್ನನ್ನು ನಾನು ಎಷ್ಟೊಂದು ಪ್ರೀತಿಸುತ್ತೇನೆ ಎಂದು ಹೇಳಲು? ಅಗುಳೊಂದೇ ಸಾಕಲ್ಲವೇ ಅನ್ನ ಬೆಂದಿರುವುದನ್ನು ಅರಿಯಲು!

ಮರಳಿ ಮನೆಗೆ ಬಂದು ಶಶಿಯನ್ನು ಬೀಳ್ಕೊಡುವ ಹೊತ್ತಿಗೆ ರಾತ್ರಿಯಾಗಿತ್ತು. ಎಲ್ಲೆಲ್ಲೂ ಪ್ರಣತಿಗಳು ಬೆಳಗುತ್ತಿದ್ದವು. ನಿನ್ನ ನೋಡಿದ ಮಧುರಕ್ಷಣವೇ ನನ್ನ ಎದೆಯ ಪ್ರಣತಿ ಬೆಳಗತೊಡಗಿತು ಎಂದೆನಿಸುತ್ತದೆ. ಸೋಂಬೇರಿಯಾಗಿದ್ದವನು ಅದೆಷ್ಟು ಚುರುಕಾಗಿದ್ದೇನೆ ನೋಡು.

ಇನಿತು ದಿನ ಜಡ ನಾನು

ಬಂದೆ ಚೇತನ ನೀನು

ನಿನ್ನ ಶಕ್ತಿಯ ಬಲದಿ

ವ್ಯಕ್ತಿಯಾದೆನು ನಾನು

ಈ ಲೋಕದಲ್ಲಿ

(ಜಿಎಸ್ಎೆಸ್)

ಲಕ್ಷ್ಮಿ, ದೀಪಾವಳಿಯ ಸಂಜೆಯ ಪೂಜೆ ಮುಗಿಸಿ ಮತ್ತೆ ಕದವಿಕ್ಕಿ ಇಷ್ಟೆಲ್ಲಾ ಬರೆದೆ ನೋಡು. ನನಗನ್ನಿಸಿದೆಲ್ಲವನ್ನೂ ಈ ಪುಟ್ಟ ಪತ್ರದಲ್ಲಿ ಬರೆಯಲು ಆಗುತ್ತಿಲ್ಲದ್ದಕ್ಕೆ ವಿಷಾದಿಸುತ್ತೇನೆ. ಈ ಪತ್ರವನ್ನು ಓದಿ ಮುಗಿಸಿದ ಕ್ಷಣದಲ್ಲೇ ನನ್ನಲ್ಲಿ ನಿನಗೆ ಪ್ರೀತಿ ಮೂಡುವುದೆಂಬ ಹಿಮಾಲಯದಷ್ಟು ಭರವಸೆಯೊಂದಿಗೆ ಮುಗಿಸುತ್ತಿದ್ದೇನೆ. ಆದಷ್ಟು ಬೇಗ ನಿನ್ನ ಉತ್ತರವನ್ನು ಸಕಾರಾತ್ಮಕವಾಗಿ ತಿಳಿಸು. ನಿರಾಶೆಮಾಡಬೇಡ. ಮುಂದಿನ ದೀಪಾವಳಿಯಲ್ಲಿ ನಿನ್ನ ಜೊತೆ ಜೊತೆಯಲ್ಲಿ ಸುರುಸುರು ಬತ್ತಿ ಹಚ್ಚುವಂತಾಗಲಿ. ನೀ ಬೆಳಗುವ ಪ್ರಣತಿಗಳು ಜಗಜಗಿಸಲಿ. ಹೂ ಕುಂಡ ಅರಳಲಿ. ಭೂಚಕ್ರ ನೀನಿಡುವ ರಂಗವಲ್ಲಿಯ ಮೇಲೆ ತಿರುಗಲಿ. ಪಟಾಕಿ...? ಹೆದರಬೇಡ ಪಟಾಕಿ ಹೊಡೆಯಲ್ಲ. ಪಟಾಕಿ ಬಗ್ಗೆ ನಿನಗಿಂತ ನನಗೇ ಭಯ ಜಾಸ್ತಿ ಇದೆ. So, ನಮ್ಮ ಮುಂದಿನ ದೀಪಾವಳಿ ರಂಗೇರಲಿ.

ಪುಟದ ತುಂಬ ನಿನ್ನ ಹೆಸರು

ಮತ್ತೆ ಮತ್ತೆ ಬರೆಯುತ

ಒಪ್ಪಿಸಿರುವೆ ನನ್ನ ಮನವ

ಅಶ್ರುಧಾರೆ ಎರೆಯುತಾ

...

ಒಪ್ಪಿಸಿಕೋ ಬೊಗಸೆಯೊಡ್ಡಿ

ಮಿಡಿವ ಹೃದಯ ನಿನ್ನದೇ

ಕದವ ಮುಚ್ಚಿ ಹಿಂದೆ ನಿಂತು

ಮುಂದೆ ಹೋಗು ಎನ್ನದೆ.

ನನ್ನ ಓಲೆ ಓಲೆಯಲ್ಲ...

ದೀಪಾವಳಿಯ ಶುಭಾಷಯಗಳೊಂದಿಗೆ...

ಗುಬ್ಬಚ್ಚಿ ಹುಡುಗ.

ಈ ಪ್ರತಿಷ್ಠಿತ ಕಥಾ ಮತ್ತು ಕಾದಂಬರಿ ಸ್ಪರ್ಧೆಗೆ ಇನ್ನೇರಡೇ ದಿನ ಬಾಕಿ…

  ಈ ಪ್ರತಿಷ್ಠಿತ ಕಥಾ ಮತ್ತು ಕಾದಂಬರಿ ಸ್ಪರ್ಧೆಗೆ ಇನ್ನೇರಡೇ ದಿನ ಬಾಕಿ… ನಾಡಿನ ಪ್ರತಿಷ್ಠಿತ ʻ ಬುಕ್ ‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು...