ಶುಕ್ರವಾರ, ಏಪ್ರಿಲ್ 26, 2024

ದುಡ್ಡು ಬಿತ್ತಿ, ದುಡ್ಡು ಬೆಳೆಯಬಹುದೇ…!?



ಕನ್ನಡದಲ್ಲಿ ಪ್ರಕಟವಾಗಿ ಅತ್ಯಂತ ಹೆಚ್ಚು ಮಾರಾಟವಾದ “ಮನಿ ಸೀಕ್ರೆಟ್ಸ್‌ ಹಾಗೂ ಸ್ಟಾಕ್‌ ಮಾರ್ಕೆಟ್‌ ಸೀಕ್ರೆಟ್ಸ್”‌ (ಅಮೇಜಾನಿನಲ್ಲಿ ಕೊಳ್ಳಲು ಲಿಂಕ್:‌ https://amzn.to/3We2miw) ಕೃತಿಯ ಶರತ್‌ ಎಂ.ಎಸ್.‌ ಅವರು ತಮ್ಮ ಹೊಸ ಪುಸ್ತಕದಲ್ಲಿ ಹೌದು, ನೀವು ʼದುಡ್ಡು ಬಿತ್ತಿ, ದುಡ್ಡು ಬೆಳೆಯಬಹುದುʼ ಎಂದೇ ಹೇಳುತ್ತಿದ್ದಾರೆ.

Beginners Guide to Mutual Funds “ದುಡ್ಡು ಬಿತ್ತಿ, ದುಡ್ಡು ಬೆಳೆಯಿರಿ… ಮ್ಯೂಚುಯಲ್‌ ಫಂಡ್‌ ಮ್ಯಾಜಿಕ್”‌ ಎನ್ನುವ ಹೊಸ ಪುಸ್ತಕವನ್ನು ಬರೆದಿರುವ ಶರತ್‌ ಎಂ.ಎಸ್.‌ ಅವರು  ಈ ಪುಸ್ತಕದ ತಮ್ಮ ಕಿವಿಮಾತುಗಳಲ್ಲಿ ʼಮ್ಯೂಚುಯಲ್‌ ಫಂಡ್‌ ಹೂಡಿಕೆ ಬಗ್ಗೆ ಪ್ರತಿಯೊಬ್ಬರೂ  ಕಲಿಯುವುದು ಈಗಿನ ಕಾಲಮಾನದಲ್ಲಿ ಅನಿವಾರ್ಯ. ಸಾಂಪ್ರದಾಯಿಕ ಹೂಡಿಕೆಗಳಲ್ಲಿ ಬಡ್ಡಿ ದರ ತೀರಾ ಕಡಿಮೆ ಇರುತ್ತದೆ. ಈ ದರ ಸಾಮಾನ್ಯವಾಗಿ ಹಣದುಬ್ಬರಷ್ಟೇ ಇರುತ್ತದೆ. ಆದ ಕಾರಣ ಹೆಚ್ಚಿನ ಲಾಭಾಂಶ ಇರುವುದಿಲ್ಲ. ನಿಮ್ಮ ಹೂಡಿಕೆ ಹಣದುಬ್ಬರಕ್ಕಿಂತ ಮೀರಿ ಲಾಭಾಂಶ ತಂದುಕೊಡುವ ಹೂಡಿಕೆಗಳಲ್ಲಿ ಇರಬೇಕು. ಈ ಲೆಕ್ಕಾಚಾರದಲ್ಲಿ ನೋಡಿದಾಗ ಪ್ರತಿಯೊಬ್ಬರು ಷೇರು ಮಾರುಕಟ್ಟೆ ಮತ್ತು ಮ್ಯೂಚುಯಲ್‌ ಫಂಡ್ಗಳ ಬಗ್ಗೆ ಕಲಿತು, ಅರಿತು ಹೂಡುವ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಮ್ಯೂಚುಯಲ್‌ ಫಂಡ್‌ಗಳು ಉತ್ತಮ ಲಾಭಾಂಶ ನೀಡುತ್ತವೆ. ನಿಮ್ಮ ದುಡ್ಡನ್ನು ಬಿತ್ತಿ ಬೆಳೆಸಲು ಇದು ಉತ್ತಮ ಮಾರ್ಗವಾಗಿದ್ದು ಸರಳ ರೀತಿಯಲ್ಲಿ ಉದಾಹರಣೆ ಸಮೇತ ಈ ಪುಸ್ತಕದಲ್ಲಿ ಸವಿವರವಾಗಿ ವಿವರಿಸಿದ್ದೇನೆʼ ಎಂದಿದ್ದಾರೆ. ಇದು ಅಕ್ಷರಶಃ ಸತ್ಯ. ನಿಮ್ಮ ಮ್ಯೂಚುಯಲ್‌ ಫಂಡ್‌ ಹೂಡಿಕೆಯ ಪಯಣಕ್ಕೆ ಈ ಪುಸ್ತಕ ನಿಮ್ಮ ಆಪ್ತಮಿತ್ರನಾಗುವ ನಂಬಿಕೆ ಶರತ್‌ ಅವರದ್ದು ಮತ್ತು ನನ್ನದೂ ಕೂಡ.



ಇತ್ತೀಚಿಗೆ ನನ್ನ ಸ್ನೇಹಿತರೊಬ್ಬರು SIP (Systematic Investment Plan) ಮೂಲಕ ಮ್ಯೂಚುಯಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿ ಅಪಾರ್ಟ್‌ಮೆಂಟ್‌ ಖರೀದಿಸಿದಾಗಿ ಹೇಳಿದರು. ಈ ರೀತಿಯ ಹೂಡಿಕೆ ಬಗ್ಗೆ ಬಹಳ ವರುಷಗಳ ಹಿಂದೆ ಅವರು ಹೇಳಿದಾಗ ನನಗೆ ಇದು ಅರ್ಥವೇ ಆಗಿರಲಿಲ್ಲ. ಈಗ ಈ ಹೂಡಿಕೆಯ ಪರಿಣಾಮ ಅವರೊಂದು ಅಪಾರ್ಟ್‌ಮೆಂಟಿನ ಮಾಲೀಕರು!‌ ಈ ವಿಷಯ ತಿಳಿದ ನಂತರ ನಾನು ಕೂಡ ಮ್ಯೂಚುಯಲ್‌ ಫಂಡ್‌ ಬಗ್ಗೆ ತಿಳಿದುಕೊಳ್ಳಲು ಶರತ್‌ ಎಂ.ಎಸ್.‌ ಅವರ “ದುಡ್ಡು ಬಿತ್ತಿ, ದುಡ್ಡು ಬೆಳೆಯರಿ..” ಪುಸ್ತಕದ ಮೊರೆ ಹೋಗಿದ್ದೇನೆ.

ಏನಿದು ಮ್ಯೂಚುಯಲ್ ಫಂಡ್-‌ ಈ ಹೂಡಿಕೆ ಸುರಕ್ಷಿತವೇ? ಎಂಬ ಮೊದಲ ಅಧ್ಯಾಯದಿಂದ ಒಟ್ಟು 38 ಅಧ್ಯಾಯಗಳಲ್ಲಿ ಶರತ್‌ ಅವರು ಮ್ಯೂಚುಯಲ್‌ ಫಂಡ್‌ ಕುರಿತು ಸಮಗ್ರವಾಗಿ ವಿವರಿಸಿದ್ದಾರೆ. ಮ್ಯೂಚುಯಲ್‌ ಫಂಡ್‌ನಲ್ಲಿ ಆಸಕ್ತಿ ಇರುವವರಿಗೆ ಹೇಳಿ ಬರೆಸಿದ ಪುಸ್ತಕವಿದು.

ಹಿರಿಯ ಪತ್ರಕರ್ತರಾದ ಜಿ.ಎನ್.‌ ಮೋಹನ್‌ ಅವರು ಈ ಪುಸ್ತಕ ಕುರಿತು ʼಆರ್ಥಿಕ ವಿಷಯದಲ್ಲಿ ಜನರಿಗೆ ಆಸೆಬುರುಕತನ ಹೆಚ್ಚಿಸುವ ಕೃತಿಗಳೇ ಮಾರುಕಟ್ಟೆಯಲ್ಲಿ ಮುತ್ತಿಕೊಂಡಿರುವಾಗ ಜನರಲ್ಲಿ ಆರ್ಥಿಕ ತಿಳುವಳಿಕೆ ತರುವ, ಆರ್ಥಿಕ ಶಿಸ್ತು ಮೂಡಿಸುವ ಆ ಮೂಲಕ ಮನೆ-ಮನ ಬೆಳಗುವ ಕೆಲಸಕ್ಕೆ ಶರತ್‌ ಮುಂದಾಗಿದ್ದಾರೆ ಎನ್ನುವುದು ಸಂತಸದ ಸಂಗತಿ. ದುಡ್ಡು ಬೆಳೆಯುವುದು ಹೇಗೆ? ಎಂದು ಹೇಳಿಕೊಡುವವರು ಇಲ್ಲದ ಸಮಯದಲ್ಲಿ ಇದು ನಿಮ್ಮ ಕೈನಲ್ಲಿ ಇರಲೇಬೇಕಾದ ಕೃತಿʼ ಎಂದಿದ್ದಾರೆ.



ದುಡ್ಡು ಮರದಲ್ಲಿ ಬೆಳೆಯುತ್ತಾ ಅನ್ನುವವರ ನಡುವೆ, ದುಡ್ಡು ಮರದಲ್ಲಿ ಬೆಳೆಯಲ್ಲ, ಮ್ಯೂಚುಯಲ್‌ ಫಂಡ್‌ನಲ್ಲಿ ಬೆಳೆಯುತ್ತೆ ಎನ್ನುವ ಶರತ್‌ ಎಂ.ಎಸ್.‌ ಅವರ “ದುಡ್ಡು ಬಿತ್ತಿ, ದುಡ್ಡು ಬೆಳೆಯಿರಿ..” ಪುಸ್ತಕ ನೀವು ದುಡ್ಡನ್ನು ಬೆಳೆಯಲು ನೆರವಾಗಬಲ್ಲದು. ದುಡ್ಡನ್ನು ಬೆಳೆಯಲು ನಿಮಗೆ ಆಸಕ್ತಿಯಿದ್ದರೆ ʼಬಹುರೂಪಿʼ ಪ್ರಕಟಿಸಿರುವ ಈ ಕೃತಿಯನ್ನು ರೂ. 175/- ನೀಡಿ ಕೊಂಡು ಓದಬಹುದು. ಅಮೇಜಾನಿನಲ್ಲಿ ಈ ಪುಸ್ತಕ ಲಭ್ಯವಿದೆ…

ಕೊಳ್ಳಲು ಈ ಲಿಂಕ್‌ ಉಪಯೋಗಿಸಿ…https://amzn.to/3UC91C5

ಇದು ಅಪ್ಪಟ ಕನ್ನಡದ "ಪಂಚತಂತ್ರ"



'ಪಂಚತಂತ್ರʼ ಅಂದರೆ ನಮ್ಮ ನೆನಪಿಗೆ ಬರುವುದು ಬಾಲ್ಯ ಕಾಲದಲ್ಲಿ ಓದಿದ್ದ ಅಥವಾ ಕೇಳಿದ್ದ ಯಾವುದೋ ಒಂದು ಅಥವಾ ಹಲವು ಕತೆಗಳು. ಎಷ್ಟೊಂದು ಖುಷಿ ಮತ್ತು ಜ್ಞಾನವನ್ನೂ ಈ ಕತೆಗಳು ನೀಡಿದ್ದವಲ್ಲ ಎಂಬ ಭಾವನೆಯೂ ಬಂದು ಹೋಗುತ್ತದೆ. ಈ ಕತೆಗಳನ್ನು ಬರೆದವರು ವಿಷ್ಣುಶರ್ಮ ಎಂಬ ಪಂಡಿತರು ಎಂಬುದು ಕೂಡ ನೆನಪಿಗೆ ಬರುತ್ತದೆ. ಇವು ಸಂಸ್ಕೃತದ ಕತೆಗಳು ಎಂಬುದು ಕೂಡ ಮನಸ್ಸಿನ ಮೂಲೆಯಲ್ಲಿ ಮೂಡಿ ಮರೆಯಾಗುತ್ತದೆ. ಆದರೆ, ಇವೆಲ್ಲಾ ಯಾರೋ ಓದಿ, ಕೇಳಿ ಸರಳೀಕರಿಸಿ ನಮಗೆ ನೀಡಿದ್ದ ಕತೆಗಳು ಎಂದು ಗೊತ್ತಿರಲಿಲ್ಲ. ಯಾಕೆಂದರೆ, ಪಂಡಿತ ವಿಷ್ಣುಶರ್ಮ ವಿರಚಿತ “ಪಂಚತಂತ್ರ” ಮೂಲ ಸಂಸ್ಕೃತದಿಂದ ಕನ್ನಡಕ್ಕೆ ಸಂಪೂರ್ಣವಾಗಿ ಅನುವಾದಗೊಂಡಿದೆಯೋ ಇಲ್ಲವೋ ಎಂಬ ವಿಷಯವನ್ನು ನಾವೇನು ತಿಳಿದುಕೊಳ್ಳಲು ಹೋಗಿರಲಿಲ್ಲ. ಕತೆ ಓದಿ ಅಥವಾ ಕೇಳಿ ಖುಷಿಪಟ್ಟು ಸುಮ್ಮನಾಗಿದ್ವಿ ಅಷ್ಟೆ.

ಆದರೆ, ಈಗ ಈ ಮೂಲ ಸಂಸ್ಕೃತದ ಪಂಡಿತ ವಿಷ್ಣುಶರ್ಮ ವಿರಚಿತ ಪಂಚತಂತ್ರದ ಕತೆಗಳನ್ನು ಸಂಪೂರ್ಣವಾಗಿ ಕನ್ನಡಕ್ಕೆ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್‌ ಭರತ ಬಿ ರಾವ್‌ ಅವರು ಅನುವಾದಿಸಿ ಕನ್ನಡಿಗರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದು ಶ್ಲಾಘನೀಯ ಕೆಲಸವಾಗಿದೆ. ಇದಕ್ಕೆ ಮೊದಲು ನಾವೆಲ್ಲರೂ ಭರತ ಬಿ ರಾವ್‌ ಅವರನ್ನು ಅಭಿನಂದಿಸಿ ಧನ್ಯವಾದಗಳನ್ನು ತಿಳಿಸಬೇಕಿದೆ. 2018ರಲ್ಲಿ ಮೊದಲ ಮುದ್ರಣವನ್ನು ಕಂಡ ಈ ಪುಸ್ತಕವು ಇದೀಗ 3ನೇಯ ಆವೃತ್ತಿಯನ್ನು ಕಂಡಿದೆ.



ʼಪಂಚತಂತ್ರವು ಸಾವಿರಾರು ವರ್ಷಗಳ ಹಳೆಯ ರಚನೆಯಾದರೂ, ನಮ್ಮ ಈಗಿನ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿ ನಿಲ್ಲಬಲ್ಲ ಕೃತಿ. ಸಮಾಜವು ಯಾವಾಗಲೂ ಧರ್ಮದ ಆದರ್ಶದಂತೆ ನಡೆಯುವುದಿಲ್ಲವೆಂಬ ವಾಸ್ತವಿಕತೆಯ ಅರಿವಿದ್ದಾಗ, ಧರ್ಮದ ದಾರಿಯಲ್ಲಿ ನಡೆಯಲು ಏನೇನು ತಂತ್ರವನ್ನು ಮಾಡಬೇಕೋ ಅವೆಲ್ಲವನ್ನೂ ಸಮಯ ಸಂದರ್ಭಕ್ಕನುಗುಣವಾಗಿ ಬಳಸಲು ಸಿದ್ಧವಿರಬೇಕೆಂಬದು ಪಂಚತಂತ್ರದಿಂದ ಕಲಿಯಬಹುದಾದ ಮುಖ್ಯವಾದ ಪಾಠ. ರಾಜಧರ್ಮ, ಮೈತ್ರಿಧರ್ಮ, ಶತ್ರುನಿಗ್ರಹ, ಸೇವಾವೃತ್ತಿ, ಬುದ್ಧಿಯ ಬಳಕೆ, ಮೂರ್ಖರೊಂದಿಗಿನ ವ್ಯವಹಾರ, ಸ್ವಾರ್ಥ ಸಾಧನೆ, ತಂತ್ರಗಳ ಬಳಕೆ ಮುಂತಾದ ಹಲವು ವಿಚಾರಗಳನ್ನು ಕುತೂಹಲಕಾರಿಯಾದ ಕಥೆಗಳ ಮೂಲಕ ವಿವರಿಸುವ ಪಂಚತಂತ್ರದ ನಿಜವಾದ ಪ್ರಯೋಜನವನ್ನು ಪಡೆಯಲು ಸರಳೀಕರಿಸಿದ ಮಕ್ಕಳ ಪುಸ್ತಕಗಳಿಗೆ ಮೊರೆಹೋಗದೆ, ಮೂಲವನ್ನು ಓದುವುದು ಅವಶ್ಯಕ. ಮೂಲ ಪಂಚತಂತ್ರವನ್ನು ಕನ್ನಡ ಓದುಗರಿಗೆ ಪರಿಚಯಿಸುವ ಪ್ರಯತ್ನವಿದುʼ ಎಂದು ಬೆನ್ನುಡಿಯಲ್ಲಿ ಈ ಪುಸ್ತಕದ ಬಗ್ಗೆ ಹೇಳಲಾಗಿದೆ.

ಅಮರಶಕ್ತಿಯೆಂಬ ರಾಜ ತನ್ನ ಮೂವರು ಮೂರ್ಖ ಮಕ್ಕಳನ್ನು ಹೇಗೆ ವಿದ್ಯಾವಂತರನ್ನಾಗಿ ಮಾಡುವುದೆಂದು ಮಂತ್ರಿಗಳೊಡನೆ ಸಮಾಲೋಚಿಸಿ ಹಲವು ಶಾಸ್ತ್ರಗಳನ್ನು ಸಾಂಪ್ರದಾಯಿಕವಾಗಿ ಕಲಿಯಲು ಹತ್ತಾರು ವರ್ಷಗಳೇ ಬೇಕಿರುವಾಗ, ಶೀಘ್ರವಾಗಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಸಕಲಶಾಸ್ತ್ರಕೋವಿದನಾದ 80 ವರ್ಷದ ವಿಷ್ಣುಶರ್ಮನೆಂಬ ಬ್ರಾಹ್ಮಣನಲ್ಲಿ ಬಿಡಬೇಕೆಂದು ನಿರ್ಧಾರವಾಗಿ, ವಿಷ್ಣುಶರ್ಮರು ಶಾಸ್ತ್ರಗಳಲ್ಲಿ ಸತ್ವವಿಲ್ಲದ್ದನ್ನು ಬಿಟ್ಟು ಸಾರವನ್ನು ಮಾತ್ರ ಪಂಚತಂತ್ರದ ಕತೆಗಳ ಮೂಲಕ ಭೋಧಿಸಿ ಯಶಸ್ವಿಯಾಗುತ್ತಾರೆ.

ʼಮಿತ್ರಭೇದ, ಮಿತ್ರಸಂಪ್ರಾಪ್ತಿ, ಕಾಕೋಲೂಕೀಯ, ಲಬ್ಧಪ್ರಣಾಶ ಮತ್ತು ಅಪರೀಕ್ಷಿತಕಾರಕ ಎಂಬ 5 ತಂತ್ರಗಳ 5 ಸೂತ್ರ ಕಥೆಗಳು ಹಾಗೂ ಅವುಗಳಲ್ಲಿ ಬರುವ 70 ಉಪಕಥೆಗಳನ್ನುʼ ಈ ಸಂಕಲನ ಒಳಗೊಂಡಿದ್ದು ಬಾಲಕರಿಗಾಗಿಯೇ ಈ ಕೃತಿ ರಚಿಸಲ್ಪಟ್ಟಿದ್ದರೂ ಸಂಪೂರ್ಣ ಅಧ್ಯಯನದಿಂದ ಹಲವಾರು ವಿಷಯಗಳನ್ನು ಗ್ರಹಿಸಿ ನಾವು ಕೂಡ ನಮ್ಮ ಬೌದ್ಧಿಕ ಮಟ್ಟವನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

ಬಹುಮುಖ್ಯವಾಗಿ ಮಕ್ಕಳಿಗೆ ಪ್ರೀತಿಯಿಂದ ಉಡುಗೊರೆಯಾಗಿ ನೀಡಬಹುದಾಗಿದೆ.

ಭರತ ಬಿ ರಾವ್‌ ಅವರೇ ಈ ಪುಸ್ತಕವನ್ನು ಪ್ರಕಟಿಸಿದ್ದು ರೂ. 350/- ರ ಮೌಲ್ಯದ ಈ ಕೃತಿಯು ಆಸಕ್ತರಿಗೆ ಅಮೇಜಾನಿನಲ್ಲಿ ಲಭ್ಯವಿದೆ… https://amzn.to/3w6pOnl

 


ಭಾನುವಾರ, ಏಪ್ರಿಲ್ 14, 2024

ಇದು ಭಾರತದ “ಅಮೃತ ಕಾಲ”ವೇ!?

 ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ.

ʼಭಾರತ ಬದಲಾಗಿದೆ! ಯಾರದ್ದೋ ಇಶಾರೆಯ ಮೇಲೆ ಹೆಜ್ಜೆಯಿಡುವ ದೇಶವಾಗಿ ಉಳಿದಿಲ್ಲ. ಭಾರತ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿಗಳೆರಡನ್ನೂ ಮಾಡಿಕೊಂಡು ವೈಶ್ಚಿಕ ಮಟ್ಟದಲ್ಲಿ ಪ್ರತಿ ಹಂತದಲ್ಲೂ ಛಾಪು ಮೂಡಿಸುತ್ತಿರುವ ಸುವರ್ಣಯುಗವಿದುʼ ಎನ್ನುವ ರಾಹುಲ್‌ ಅವರು ಭಾರತ ಪ್ರಗತಿಯೆಡೆಗೆ ಸಾಗುತ್ತಿರುವ ಚೈತ್ರಯಾತ್ರೆಯ ಅಕ್ಷರ ರೂಪವೇ ಈ “ಅಮೃತ ಕಾಲ” ಎಂದಿದ್ದಾರೆ.



ರಾಹುಲ್‌ ಅವರು ಈ ಪುಸ್ತಕವನ್ನು ಅಮೃತ ಗುಟುಕುಗಳು ಎಂಬ  ಪರಿವಿಡಿಯಲ್ಲಿ ʼವಿಕಾಸʼ, ʼವನವಾಸಿʼ, ʼವಿಶ್ವಗುರುʼ, ʼವಿಶ್ವಾಸʼ, ʼವಿರೋಧʼ ಮತ್ತು ʼವೈರಾಣುʼ ಎಂಬ ಆರು ಭಾಗಗಳನ್ನಾಗಿ ವಿಂಗಡಿಸಿದ್ದಾರೆ. ಒಟ್ಟು 21 ಅಧ್ಯಾಯಗಳ ಈ ಪುಸ್ತಕದಲ್ಲಿ ರಾಹುಲ್‌ ಅವರ ಅಕ್ಷರಗಳು ಶ್ರೀ ನರೇಂದ್ರ ಮೋದಿಯವರು ಭಾರತದ ಪ್ರಧಾನ ಮಂತ್ರಿಗಳಾದ ನಂತರ ಆದ ಹತ್ತು ವರುಷಗಳ ಬೆಳವಣಿಗೆಗಳನ್ನು ದಾಖಲಿಸಿವೆ.

ಉದಾಹರಣೆಗೆ ʼನೂರ ಏಳರ ತಾಕತ್ತು ಈ ಮೊದಲೂ ಇತ್ತು; ಆದರೆ…ʼ ಎಂಬ ಅಧ್ಯಾಯದಲ್ಲಿ ಅಂಕಿಅಂಶಗಳ ಸಮೇತ ರಾಹುಲ್‌ ಅವರು ನಮ್ಮ ದೇಶದಲ್ಲಾದ ಕ್ರೀಡಾ ಜಗತ್ತಿನ ಬೆಳವಣಿಗೆಗಳನ್ನು ದಾಖಲಿಸಿರುವುದು ಇವರ ಶ್ರಮಕ್ಕೆ ಕನ್ನಡಿಯಂತಿದೆ. ಪ್ರತಿಯೊಂದು ಅಧ್ಯಾಯವೂ ಹೀಗೆ ವಸ್ತುನಿಷ್ಠವಾಗಿದೆ. ಪೂರಕ ಅಂಕಿ-ಅಂಶಗಳ ಜೊತೆಗೆ ಅಲ್ಲಲ್ಲಿ ಪೂರಕ ಚಿತ್ರಗಳನ್ನೂ ನೀಡಲಾಗಿದೆ. ಈ ಎಲ್ಲಾ ಅಂಶಗಳನ್ನು ದಾಖಲಿಸುವಲ್ಲಿ ರಾಹುಲ್‌ ಅವರಿಗಿರುವ ಶ್ರದ್ಧೆ ಪ್ರಶಂಸಾರ್ಹ. ಪುಸ್ತಕದ ಅಂತ್ಯದಲ್ಲಿ ಗ್ರಂಥಋಣವೂ ಇದೆ.



ಪ್ರವಾಸೋದ್ಯಮ, ಕಾಶ್ಮೀರ, ಭದ್ರತೆ, ವೈರಾಣು ಹೀಗೆ 21 ಪ್ರಮುಖ ಬೆಳವಣಿಗೆಗಳ ಮೇಲೆ ಈ ಪುಸ್ತಕ ರಾಹುಲ್‌ ಅವರ ಶೈಲಿಯಲ್ಲಿ ನಿರೂಪಿತವಾಗಿದೆ. ನೀವು ಓದುವಲ್ಲದೆ, ನಿಮ್ಮ ಮಕ್ಕಳಿಗೂ ಈ ಪುಸ್ತಕ ಓದಿಸಿ ಎನ್ನುತ್ತಾರೆ ರಾಹುಲ್.‌ ಪುಸ್ತಕವನ್ನು ಓದುತ್ತಾ ಮೋದಿ ಅವರ ಅಭಿಮಾನಿಗಳು ಅಹುದುಅಹುದು ಎಂದರೆ ವಿರೋಧಿಗಳು ಹೀಗೂ ಉಂಟೆ ಎನ್ನಬಹುದು.

ಚಕ್ರವರ್ತಿ ಸೂಲಿಬೆಲೆಯವರಿಗೆ ರಾಹುಲ್‌ ಅವರು ಈ ಪುಸ್ತಕವನ್ನು ಅರ್ಪಿಸಿದ್ದು, ತಮ್ಮ ಜಯಲಕ್ಷ್ಮೀ ಪ್ರಕಾಶನದ ಮೂಲಕ ಪ್ರಕಟಿಸಿದಾರೆ. ಈ ಪುಸ್ತಕದ ಮೌಲ್ಯ ರೂ. 180/- ಆಗಿದ್ದು ಪ್ರತಿಗಳಿಗೆ ರಾಹುಲ್‌ ಅವರ ವಾಟ್ಸಪ್‌ 9108594204 ಅಥವಾ ಗುಬ್ಬಚ್ಚಿ ಪುಸ್ತಕದ ವಾಟ್ಸಪ್‌ 9986692342 ಸಂಪರ್ಕಿಸಬಹುದು.

 




"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...