ಶುಕ್ರವಾರ, ಮಾರ್ಚ್ 29, 2024

ಹೇಗಿದೆ “ಯುವ?” ಸಖತ್‌ “ಪವರ್‌”ಪುಲ್‌ ಶಿವ!


ಪ್ರಿಯ ಸ್ನೇಹಿತರೇ,

ಬೆಳಿಗ್ಗೆ ಐದಕ್ಕೇ ಅಲಾರಂ ಇಟ್ಟುಕೊಂಡು, ನೆನ್ನೆಯೇ ಇಂದಿನ ಬೆಳಗಿನ 9.30ರ ಶೋಗೆ ಬುಕ್‌ ಮಾಡಿದ್ದ “ಯುವ” ಸಿನಿಮಾಗೆ ಹೋಗಿ ಬಂದೆ. ತುಮಕೂರಿನ ಐನೋಕ್ಸ್‌ನಲ್ಲಿಸಿನಿಮಾ ನೋಡುವುದೇ ಒಂದು ಹಬ್ಬ!

ಯುವ ರಾಜ್‌ಕುಮಾರ್‌ ಅವರ ಮೊದಲ ಚಿತ್ರ “ಯುವ” ಇಂದು ಬಿಡುಗಡೆಯಾಗಿದ್ದು, ಯಾರಾದರೂ ನನ್ನನ್ನು ಹೇಗಿದೆ “ಯುವ?” ಎಂದು ಕೇಳಿದರೆ, ನಾನು ಒಂದೇ ಸಾಲಿನಲ್ಲಿ ಸಖತ್‌ “ಪವರ್”‌ವುಲ್‌ ಶಿವ! ಎಂದು ಹೇಳಲು ಇಚ್ಛಿಸುತ್ತೇನೆ.

ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ “ಯುವ” ಚಿತ್ರದ ಮೊದಲಾರ್ಧದಲ್ಲಿ ಯುವ ರಾಜ್‌ಕುಮಾರ್‌ ಅವರನ್ನು ಕಾಲೇಜಿನ ಆಂಗ್ರಿ ಯಂಗ್‌ ಮ್ಯಾನ್‌ ಆಗಿ ಪರಿಚಯಿಸಿ ಕನ್ನಡ ಚಲನಚಿತ್ರರಂಗಕ್ಕೆ ಮತ್ತೊಬ್ಬ ಸ್ಟಾರ್‌ ನಟನನ್ನು ನೀಡಿದ್ದಾರೆ. ಚಿತ್ರದ ವಿರಾಮದ ನಂತರ ಬರುವ ಕುಟುಂಬದ ಜವಾಬ್ದಾರಿಯ “ಯುವ”ನ ಮೂಲಕ ನಮ್ಮ ಚಲನಚಿತ್ರರಂಗಕ್ಕೆ ಮತ್ತೊಬ್ಬ ಸೂಪರ್‌ ಸ್ಟಾರ್‌ ನಟ ಸಿಕ್ಕಂತಾಗಿದೆ. ತಮ್ಮ ಎಂದಿನ ಶೈಲಿಯಲ್ಲಿಯೇ ನಿರ್ದೇಶಕರು ʼಯುವʼ ಸಿನಿಮಾ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್‌ನ ಅದ್ಧೂರಿ ನಿರ್ಮಾಣವಿದೆ.



ನಟನೆ, ಡ್ಯಾನ್ಸ್‌ ಮತ್ತು ಆಕ್ಷನ್‌ಗಳಲ್ಲಿ ಮಿಂಚುವ ಯುವ ರಾಜ್‌ಕುಮಾರ್‌ ನೋಡುಗನ ಮನಗೆಲ್ಲುತ್ತಾರೆ. ದೊಡ್ಡಪ್ಪ ಮತ್ತು ಚಿಕ್ಕಪ್ಪನಷ್ಟು ಡ್ಯಾನ್ಸ್‌ ಇನ್ನೂ ಮಾಡಿಲ್ಲವಾದರೂ, ಇರುವ ಒಂದೇ ಡ್ಯಾನ್ಸ್‌ನಲ್ಲಿ ಭರವಸೆ ಮೂಡಿಸುತ್ತಾರೆ. ಆಕ್ಷನ್‌ ದೃಶ್ಯಗಳಲ್ಲಿ ಚಿಕ್ಕಪ್ಪನ ʼಪವರ್‌ʼ, ದೊಡ್ಡಪ್ಪನ ʼಖದರ್‌ʼ ಇದೆ. ನಟನೆಯಲ್ಲೂ ಕೂಡ ಗಮನ ಸೆಳೆಯುವ ಯುವ ರಾಜ್‌ಕುಮಾರ್‌ ಈಗಾಗಲೇ ತಮಗೆ ನೀಡಲಾಗಿರುವ ಜೂನಿಯರ್‌ ʼಪವರ್‌ ಸ್ಟಾರ್‌ʼ ಬಿರುದನ್ನು ಉಳಿಸಿಕೊಳ್ಳುವುದರಲ್ಲಿ ಎರಡು ಮಾತಿಲ್ಲ.

ನಾಯಕಿಯಾಗಿ ಸಪ್ತಮಿ ಗೌಡ, ತಂದೆಯಾಗಿ ಅಚ್ಯುತ ಕುಮಾರ್‌, ತಾಯಿಯಾಗಿ ಸುಧಾರಾಣಿ, ಟ್ರೈನರ್‌ ಆಗಿ ಕಿಶೋರ್‌, ಪ್ರಿನ್ಸಿಪಾಲ್‌ ಆಗಿ ಗೋಪಾಲಕೃಷ್ಣ ದೇಶಪಾಂಡೆ ಮತ್ತು ಇನ್ನು ಮುಂತಾದ ಪಾತ್ರಗಳ ಅತ್ಯುತ್ತಮ ಕಲಾವಿದರ ತಂಡವೇ ಇಲ್ಲಿರುವುದು ಚಿತ್ರದ ಪ್ಲಸ್‌ ಪಾಯಿಂಟ್.‌ ಪ್ರಿನ್ಸಿಪಾಲ್‌ ಪಾತ್ರವಂತೂ ಕಣ್ಣಿಗೆ ಹಬ್ಬ!

ಕಾಲೇಜಿನ ಜೀವನದ ಜೊತೆಯೇ, ಕಾಲೇಜಿನ ನಂತರದ ಜೀವನದ ಕತೆಯನ್ನು ನಿರ್ದೇಶಕರು ಚಿತ್ರದಲ್ಲಿ ಹೇಳಿದ್ದು ಪುಡ್‌ ಡೆಲಿವರಿ ಹುಡುಗ-ಹುಡುಗಿಯರ ಬದುಕಿನ ಚಿತ್ರಣವನ್ನು ಕೂಡ ನೀಡಿದ್ದಾರೆ. ಬಸವಣ್ಣನವರ ʼಕಳಬೇಡ ಕೊಲಬೇಡʼ ವಚನ ಚಿತ್ರದಲ್ಲಿ ಇದ್ದು ಈ ಚಿತ್ರದ ಆಶಯವನ್ನೇ ಬಿಂಬಿಸಿದಂತಿದೆ. ಸೋತವನು ಸಾಯಬಾರದು, ಗೆಲುವಿನ ದಿನಕ್ಕೆ ಹಂಬಲಿಸಬೇಕು ಎನ್ನುವ ಒಂದು ಮೆಸೇಜನ್ನು ಕೂಡ ನಿರ್ದೇಶಕರು ನೀಡಿದ್ದಾರೆ.

ಅಜನೀಶ್‌ ಲೋಕನಾಥ್‌ ಅವರ ಸಂಗೀತದ ಜೊತೆಗೆ ಇತರ ತಂತ್ರಜ್ಞರ ಕೆಲಸಗಳು ಅಚ್ಚುಕಟ್ಟಾಗಿವೆ. ಇಡೀ ಚಿತ್ರವನ್ನು ಡಾ. ರಾಜ್‌ ಮತ್ತು ಅಪ್ಪು ಅವರ ತಂದೆ ಮಗನ ಸಂಬಂಧಕ್ಕೆ ಅರ್ಪಿಸಲಾಗಿದೆ.



ಮುಂದಿನ ದಿನಗಳಲ್ಲಿ ʼಯುವ ರಾಜ್‌ಕುಮಾರ್‌ʼ ಅವರ ನಟನೆಯಲ್ಲಿ ಮತ್ತಷ್ಟು ಪವರ್‌ಪುಲ್‌ ಸಿನಿಮಾಗಳು ಬರಲಿ ಮತ್ತು ನಿರ್ದೇಶಕ ಸಂತೋಷ್‌ ಆನಂದ್‌ರಾಮ್‌ ತಮಗೆ ತಾವೇ ಹಾಕಿಕೊಂಡಿರುವ ಇತಿ-ಮಿತಿಗಳ ಹೊರಗೆ ಬಂದು ಮತ್ತಷ್ಟು ಸಿನಿಮಾಗಳನ್ನು ನೀಡಲಿ ಎಂದು ಆಶಿಸುತ್ತೇನೆ.

ಪ್ರೀತಿಯಿಂದ,

-        ಗುಬ್ಬಚ್ಚಿ ಸತೀಶ್.

ಭಾನುವಾರ, ಮಾರ್ಚ್ 24, 2024

ನೀರು (ಪುಟ್ಟ ಕತೆ)


 

ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹಾಲು, ತರಕಾರಿ ತರಲು ಹೋಗುವವರು ಹೋಗುತ್ತಿದ್ದರು. ಶಾಲೆ, ಕಾಲೇಜಿಗೆ ಮತ್ತು ಆಫೀಸಿಗೆ ಹೋಗುವವರು ಕೂಡ ಅದಾಗಲೇ ಮನೆಯನ್ನು ಬಿಟ್ಟಿದ್ದರು.

ರಾತ್ರಿ ಕುಡಿದು ಅಲ್ಲಿಯೇ ರಸ್ತೆ ಪಕ್ಕ ಮಲಗಿದ್ದವನೊಬ್ಬನಿಗೆ ಬೆಳಗ್ಗೆ ಎಚ್ಚರವಾಗಿ ತಾನು ಎಲ್ಲಿಗೆ ಬಂದಿದ್ದೇನೆ ಎಂದುಕೊಳ್ಳುತ್ತಲೇ ನಿಧಾನವಾಗಿ ಎದ್ದು ರಸ್ತೆಗೆ ಇಳಿದ. ತಟ್ಟಾಡುತ್ತಲೇ ಎರಡೆಜ್ಜೆ ಇಟ್ಟವನು ಮೂರನೆಯ ಹೆಜ್ಜೆಯನ್ನು ಅಲ್ಲೇ ಮಲಗಿದ್ದ ನಾಯಿಯ ಬಾಲದ ಮೇಲಿಟ್ಟ. ನೋವಿನಿಂದ ದಿಕ್ಕೆಟ್ಟ ನಾಯಿ ಇದ್ದಕ್ಕಿದ್ದಂತೆ ಎದ್ದು ರಸ್ತೆಯಲ್ಲಿ ಬರುತ್ತಿದ್ದ ಬೈಕಿಗೆ ಅಡ್ಡವಾಯಿತು. ಬೈಕಿನ ಮೇಲಿದ್ದವ ಎಷ್ಟೇ ಪ್ರಯತ್ನಿಸಿದರೂ ತನ್ನ ಹಣೆಬರಹವನ್ನು ತಪ್ಪಿಸಿಕೊಳ್ಳಲಾಗಲಿಲ್ಲ. ಹಾಕಿದ್ದ ಬ್ರೇಕ್‌ ಆತನನ್ನು ರಸ್ತೆಗೆ ಕೆಡವಿತ್ತು. ಕ್ಷಣಾರ್ಧದಲ್ಲಿ ಆತ ರಸ್ತೆಯ ಮೇಲಿದ್ದ. ಹೆಲ್ಮೆಟ್‌ ಹಾಕಿದ್ದರಿಂದ ತಲೆಗೇನೂ ಪೆಟ್ಟಾಗಿರಲಿಲ್ಲ. ಆದರೆ, ಕೈ ಸ್ವಲ್ಪ ತರಚಿತ್ತು. ಆದ ಆಘಾತದಿಂದ ಆತನಿಗೆ ವಿಪರೀತ ಭಯವಾಗಿತ್ತು. ಆ ಕೂಡಲೇ ನೆರೆದ ಜನ ಆತನನ್ನು ಎತ್ತಿ ಪಕ್ಕಕ್ಕೆ ಕೂರಿಸಿ ಸಮಾಧಾನ ಹೇಳುತ್ತಿದ್ದರು. ಮತ್ತ್ಯಾರೋ ಆತನ ಬೈಕನ್ನು ಎತ್ತಿ ರಸ್ತೆಯ ಮಗ್ಗುಲಿಗೆ ನಿಲ್ಲಿಸಿ ಅದಕ್ಕೇ ಹೆಚ್ಚೇನು ತೊಂದರೆಯಾಗಿಲ್ಲ ಎಂದು ಖಚಿತ ಪಡಿಸಿದರು.



ಆದರೆ, ಬಿದ್ದವನಿಗೆ ಯಾರೂ ನೀರು ಕೊಟ್ಟು ಸಂತೈಸುತ್ತಿಲ್ಲ. ವಾಕಿಂಗ್‌ ಮುಗಿಸಿ ಬರುತ್ತಿದ್ದವರ ಕೈಯಲ್ಲಿ ಅರ್ಧರ್ಧ ನೀರಿದ್ದ ಬಾಟಲ್‌ಗಳಿವೆ! ಶಾಲಾ-ಕಾಲೇಜ್-ಆಫೀಸಿಗೆ ಹೋಗುತ್ತಿರುವವರ ಬಳಿ ಪೂರ್ತಿ ತುಂಬಿದ ನೀರಿನ ಬಾಟಲ್ಗಳಿವೆ!! ಮನೆಗೆ ಕುಡಿಯುವ ನೀರನ್ನು ದೊಡ್ಡ ಕ್ಯಾನ್‌ಗಳಲ್ಲಿ ತೆಗೆದುಕೊಂಡು ಹೋಗುವವರು ನೋಡುತ್ತಲೇ ಇದ್ದಾರೆ ಹೊರತು ಬಿದ್ದ ಬೈಕ್‌ ಸವಾರನಿಗೆ ನೀರು ಕೊಡಲು ಮನಸ್ಸು ಮಾಡುತ್ತಿಲ್ಲ!!! ಎಲ್ಲರೂ ನಾಯಿಯನ್ನು ಶಪಿಸುತ್ತಾ, ಬಿದ್ದವನ ಹಣೆಬರಹ-ಗ್ರಹಚಾರ ಸರಿಯಿಲ್ಲ ಎಂದು ಗೊಣಗುತ್ತಿರುವವರೇ. ಸದ್ಯ ಹೆಚ್ಚೇನೂ ಆಗಿಲ್ಲ ಎಂದುಕೊಳ್ಳುತ್ತಾ ಕೆಲವರು ಅಲ್ಲಿಂದ ತೆರಳುತ್ತಿದ್ದರೆ, ಕೆಲವರಂತೂ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ನಿರ್ಗಮಿಸುವವರೇ ಸರಿ. ಯಾರಾದರೂ ಒಂದು ಗುಟುಕು ನೀರು ಕೊಡುವರೇ ಎಂದು ಆತ ಕಾದದ್ದೇ ಬಂತು.

ಎಷ್ಟು ಹೊತ್ತಾದರೂ ಬಿದ್ದವನಿಗೆ ಯಾರೂ ನೀರು ಕೊಡಲಿಲ್ಲ. ಆತ ತನಗಾದ ಆಘಾತದಿಂದ ಹೊರಬರಲಾಗುತ್ತಿಲ್ಲ. ಇದನ್ನೆಲ್ಲಾ ಆಗ ತಾನೇ ಜ್ಞಾನ ಬಂದಂತೆ ಗಮನಿಸುತ್ತಿದ್ದ ಕುಡುಕನಿಗೆ ಈ ಅಪಘಾತಕ್ಕೆ ಪರೋಕ್ಷವಾಗಿ ತಾನೇ ಕಾರಣ ಎಂಬುದು ನಿಧಾನವಾಗಿ ಮನದಟ್ಟಾಯಿತು. ಅವನ ಕಣ್ಣುಗಳಿಗೆ ತನ್ನ ಸುತ್ತಲೂ ಅಷ್ಟೇಲ್ಲಾ ನೀರಿನ ಮೂಲಗಳು ಕಂಡರೂ ಯಾರೂ ಕೂಡ ಬಿದ್ದವನಿಗೆ ನೀರು ಕೊಡದಿದ್ದದ್ದು ಗಮನಕ್ಕೆ ಬಂತು. ತಾನು ರಾತ್ರಿ ಕುಡಿದಾಗಲು ನೀರು ಕಡಿಮೆ ಬೆರೆಸಿಯೇ ಕುಡಿದದ್ದು ನೆನೆದು ನಗು ಬಂತು. ಕೂಡಲೇ ತನ್ನ ಜೇಬಿನಿಂದ ಇಪ್ಪತ್ತು ರೂಪಾಯಿ ನೋಟೊಂದನ್ನು ತೆಗೆದು ʼಯಾರಾದರೂ ಬೇಗ ಒಂದು ಲೀಟರ್‌ ಬಿಸ್ಲೆರಿ ತಂದು, ಈತನಿಗೆ ಕೊಡಿʼ ಎಂದು ಅಂಗಲಾಚಿದ.



ಬಿದ್ದವನಿಗೆ ಕಡೆಗೂ ಸದ್ಯದಲ್ಲಿಯೇ ನೀರು ಸಿಗುತ್ತದೆ ಎಂದು ತುಸು ನಿರಾಳವಾಯಿತು. ಅವನ ಬೈಕಿಗೆ ಅಡ್ಡ ಬಂದಿದ್ದ ನಾಯಿ ಅದೆಲ್ಲಿತ್ತೋ ಏನೋ ರಸ್ತೆಯಲ್ಲಿ ಜೋರಾಗಿ ಹೋಗುತ್ತಿದ್ದ ಮತ್ತೊಂದು ಬೈಕನ್ನು ಅಟ್ಟಿಸಿಕೊಂಡು ಹೋಯಿತು.

- ಗುಬ್ಬಚ್ಚಿ ಸತೀಶ್.

ಭಾನುವಾರ, ಮಾರ್ಚ್ 17, 2024

ಹಿರಿತನ (ನ್ಯಾನೋ ಕತೆ)


ಯತೀಶ, ಆನಂದ, ಲಿಂಗಪ್ಪ, ರಾಜ ಎಲ್ಲಾ ಹೇಗಿದ್ದೀರ? ಏನು ಓದುದ್ರಿ? ಏನು ಬರೆದ್ರಿ? ಎನ್ನುತ್ತಲೇ ಕಾಫಿ ಬಾರಿಗೆ ಬರುತ್ತಿದ್ದ ಹಿರಿಯ ಸಾಹಿತಿಗಳನ್ನು ಕಂಡ ಕೂಡಲೇ ಅಲ್ಲಿದ್ದ ಯುವ ಸಾಹಿತಿಗಳು, ಸಾಹಿತ್ಯ ಸಂಚಾಲಕರೆಲ್ಲ ಎದ್ದು ನಿಂತು ಗೌರವಿಸುತ್ತಿದ್ದರು. ಅದು ಆಗ. ಇತ್ತೀಚೆಗೆ ಈ ಹಿರಿಯ ಸಾಹಿತಿಗಳಿಗೆ ಯಾರೂ ಸಿಗಲಿಲ್ಲವೆಂದು ಗೌರವವೊಂದು ಸಮರ್ಪಣೆಯಾಗಿದೆ. ಈಗ ಅವರು ಠೀವಿಯಿಂದ ಏನನ್ನೂ ಮಾತನಾಡದೆ, ಯಾರನ್ನೂ ಮಾತನಾಡಿಸದೆ ಕಾಫಿ ಬಾರಿಗೆ ಗಜಗಾಂಭೀರ್ಯದಲ್ಲಿ ಬರುತ್ತಾರೆ. ಆ ಸಮಯಕ್ಕೆ ಸರಿಯಾಗಿ ಅಲ್ಲಿಂದ ಯುವ ಸಾಹಿತಿಗಳು, ಸಾಹಿತ್ಯ ಸಂಚಾಲಕರೆಲ್ಲ ಏನೋ ಕೆಲಸವಿರುವವರಂತೆ ಗೊಣಗಾಡುತ್ತಾ ಮೆಲ್ಲನೆ ಜಾಗ ಖಾಲಿ ಮಾಡುತ್ತಾರೆ.

- ಗುಬ್ಬಚ್ಚಿ ಸತೀಶ್.

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...