ಶುಕ್ರವಾರ, ಅಕ್ಟೋಬರ್ 20, 2023

ಲೈಬ್ರರಿಲಿ ಇಲಿ ಇದೆ, ಜೊತೆಗೆ ಪುಸ್ತಕಗಳೂ ಇವೆ

ಈಗ್ಗೆ ಬಹಳ ವರ್ಷಗಳ ಹಿಂದೆ ನಮ್ಮ ಮನೆಗೊಬ್ಬ ಹುಡುಗ ಬಂದ. ಆತ ನನ್ನ ಶ್ರೀಮತಿಯ ಗೆಳತಿಯ ತಮ್ಮ. ಯಾವುದೋ ಕೆಲಸದ ಮೇಲೆ ನಮ್ಮ ಮನೆಗೆ ಬಂದವನು ನನ್ನಾಕೆ ಅಡುಗೆಮನೆಯಲ್ಲಿ ಇದ್ದುದರಿಂದ ಸ್ವಲ್ಪ ಹೊತ್ತು ಸುಮ್ಮನೆ ಕುಳಿತಿದ್ದ. ಅವನನ್ನು ಮಾತಿಗೆ ಎಳೆದ ನಾನು, ಹೆಸರು, ಊರು, ಓದು ಎಂದು ಔಪಚಾರಿಕವಾಗಿ ವಿಚಾರಿಸಿಕೊಂಡು ಆತನ ಹವ್ಯಾಸಗಳ ಬಗ್ಗೆ ವಿಚಾರಿಸಿದೆ. ಟಿವಿ ನೋಡ್ತೇನೆ ಎಂದೆ. ಅಷ್ಟೇನಾ ಎಂದೆ. ಅವನ ಬಳಿ ಇನ್ನೊಂದು ಮಾತಿರಲಿಲ್ಲ. ಟಿವಿಯಲ್ಲಿ ಏನ್ ನೋಡ್ತೀಯ ಎಂದೆ? ಅದಕ್ಕೂ ಆತನ ಬಳಿ ಉತ್ತರವಿರಲಿಲ್ಲ. ಸುಮ್ಮನೆ ಕುಳಿತುಬಿಟ್ಟ. ನಾನೂ ಸುಮ್ಮನಾದೆ.



ಈ ಹವ್ಯಾಸಗಳೆ ಹಾಗೆ. ನಾವು ಯಾವ ಹವ್ಯಾಸ ರೂಢಿಸಿಕೊಳ್ಳುತ್ತೇವೆಯೋ ಅದರ ಮೇಲೆ ನಮ್ಮ ನಮ್ಮ ವ್ಯಕ್ತಿತ್ವವೂ ರೂಪುಗೊಳ್ಳುತ್ತಾ ಹೋಗುತ್ತದೆ. ಹವ್ಯಾಸಗಳು ಹಲವಾರಿವೆ. ಒಳ್ಳೆಯ ಮತ್ತು ಕೆಟ್ಟ ಹವ್ಯಾಸಗಳೂ ಇವೆ. ಅದರಲ್ಲೂ ಕೆಲವರು ಟಿವಿ ನೋಡುವುದನ್ನೇ ಹವ್ಯಾಸವೆಂದುಕೊಂಡಿರುತ್ತಾರೆ. ಅದು ಹವ್ಯಾಸವಲ್ಲ, ಚಟ. ಹವ್ಯಾಸಕ್ಕೂ, ಚಟಕ್ಕೂ ಬಹಳ ವ್ಯತ್ಯಾಸವಿದೆ. ಹವ್ಯಾಸ ಅಭ್ಯಾಸದ ಮೂಲಕ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುವುದರ ಜೊತೆಗೆ ನಮ್ಮ ಬೌದ್ಧಿಕ ಬೆಳವಣಿಗೆಗೂ ಸಹಕಾರಿಯಾಗಿರುತ್ತದೆ. ಚಟ ಸುಮ್ಮನೆ ಕಾಲಹರಣ ಮಾಡಿಸುವುದರ ಮೂಲಕ ನಮ್ಮನ್ನು ನಿರುಪಯೋಗಿಯನ್ನಾಗಿ ಮಾಡುತ್ತದೆ. ಆದರೆ, ಹವ್ಯಾಸ ಹಾಗಲ್ಲ ಅದು ನಿಮಗೊಂದು ಭೂಷಣಪ್ರಾಯವೂ ಆಗಿಬಿಡಬಹುದು. ನೀವು ಯಾವುದೇ ಹವ್ಯಾಸಗಳನ್ನು ರೂಢಿಸಿಕೊಂಡರೂ ಅದು ಬಾಲ್ಯದಿಂದಲೇ ಆರಂಭವಾದರೆ ಅದರ ಉಪಯೋಗಗಳು ಹೆಚ್ಚು. ಮನುಷ್ಯನಾದವನಿಗೆ ಒಂದು ಒಳ್ಳೆಯ ಹವ್ಯಾಸವಿದ್ದರೆ ಅದು ಆತನಿಗೆ ಕಳಶವಿಟ್ಟಂತೆ.

ಅಂದಿಗೂ ಇಂದಿಗೂ ಎಂದೆಂದಿಗೂ ನನ್ನ ನೆಚ್ಚಿನ ಹವ್ಯಾಸ ಓದು. ಓದು ಎಂದರೆ ವಿದ್ಯಾರ್ಜನೆಗಷ್ಟೇ ಓದುವುದಲ್ಲ, ಅದು ಪುಸ್ತಕಗಳ ಓದು. ಜ್ಞಾನಾರ್ಜನೆಯ ಓದು. ಮನಸ್ಸಿಗೆ ಮುದ ಕೊಡುವ ಓದು. ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಮನೆಯಲ್ಲಿ ಜೀವನ ನಿರ್ವಹಣೆಗಾಗಿ ಪೇಪರ್ ಕವರ್‌ಗಳನ್ನು ಮಾಡುತ್ತಿದ್ದರು. ಅವುಗಳನ್ನು ಮಾಡುವುದಕ್ಕೆಂದೇ ಹಳೆಯ ನ್ಯೂಸ್ ಪೇಪರ್‌ಗಳನ್ನು, ಮ್ಯಾಗಜೀನ್‌ಗಳನ್ನು ಕೆಜಿಗಟ್ಟಲೆ ತರುತ್ತಿದ್ದರು. ಅವುಗಳಲ್ಲಿ ಮಕ್ಕಳ ಕತೆಗಳಿರುತ್ತಿದ್ದ ಪುಟಗಳನ್ನು ತೆಗೆದುಕೊಂಡು ಬಿಡುವಿನ ವೇಳೆಯಲ್ಲಿ ನಾಲ್ಕನೇ ತರಗತಿಯನ್ನಷ್ಟೇ ಓದಿದ್ದ ನಮ್ಮಮ್ಮ ಜೋರಾಗಿ ಓದುತ್ತಿದ್ದರು. ಅವರು ಜೋರಾಗಿ ಓದಲು ಇದ್ದ ಬಲವಾದ ಕಾರಣವೇನೆಂದರೆ ಅವರಿಗೆ ಸರಿಯಾಗಿ ಓದಲು ಬರುತ್ತಿರಲಿಲ್ಲ. ಆಗ ನಾನು ಅವರ ಓದನ್ನು ಸರಿಪಡಿಸುವ ನೆಪದಲ್ಲಿ ಕತೆಗಳ ಓದಿನೆಡೆಗೆ ಆಕರ್ಷಿತನಾದೆ. ಆ ಆಕರ್ಷಣೆಯಲ್ಲಿ ಯಾವುದೋ ಸಾರ್ಥಕತೆಯೂ ಮೂಡುತ್ತಿತ್ತು. ಇನ್ನು ಅಪ್ಪ ಸಮಯ ಸಿಕ್ಕಾಗಲೆಲ್ಲಾ ದಿನಪತ್ರಿಕೆಗಳನ್ನು ತಿರುವಿ ಹಾಕುತ್ತಿದ್ದರು. ಅವರೂ ಓದಿದ್ದು ಏಳನೇ ತರಗತಿಯಷ್ಟೆ. ನಮ್ಮ ಮನೆಯಲ್ಲಿ ಸುದ್ಧಿಪತ್ರಿಕೆಗಳನ್ನೇನು ತರಿಸುತ್ತಿರಲಿಲ್ಲ. ಹತ್ತಿರದ ಯಾವುದಾದರೂ ಮನೆಯಲ್ಲಿ ಅಥವಾ ಅಂಗಡಿಗಳಿಗೆ ಬರುತ್ತಿದ್ದ ಪತ್ರಿಕೆಗಳನ್ನು ಕೇಳಿ ಪಡೆದುಕೊಂಡು ಓದುತ್ತಿದ್ದರು. ಈ ಕಾರಣಗಳಿಂದಾಗಿ ನನಗೆ ಅರಿವಿಲ್ಲದೆ ನಾನು ಓದಿನೆಡೆಗೆ ಆಕರ್ಷಿತನಾದೆ. ಓದಿನಲ್ಲಿ ಯಾವುದೋ ಒಂದು ಹೊಸ ಪ್ರಪಂಚವನ್ನು ಕಂಡುಕೊಂಡೆ.

ಮನೆಗೆ ಬರುತ್ತಿದ್ದ ಹಳೆಪೇಪರ್, ಮ್ಯಾಗಜೀನ್‌ಗಳಿಂದಲೇ ಮಕ್ಕಳ ಪುಟಗಳನ್ನು, ಬಾಲಮಂಗಳ, ಚಂದಮಾಮ, ಬಾಲಮಿತ್ರಗಳನ್ನು ಎತ್ತಿಟ್ಟುಕೊಂಡು ನಾನು ಓದುವುದನ್ನು ಗಮನಿಸಿದ್ದ ಅಪ್ಪ ಒಂದು ದಿನ ನನ್ನನ್ನು ನಮ್ಮ ಊರಿನ ಸರ್ಕಲ್ ಬಳಿ ಇರುವ ಲೈಬ್ರರಿಯ ಬಳಿ ಕರೆದುಕೊಂಡು ಹೋಗಿ ಇದು ನಮ್ಮೂರಿನ ಟೌನ್ ಹಾಲ್. ಒಳಗೆ ಹೋಗಿ ಓದು ಎಂದರು. ಇದೇನಿದು ಟೌನ್ ಹಾಲ್ ಎನ್ನುತ್ತಿದ್ದಾರೆ ಎಂದುಕೊಂಡೆ. ಆ ನಂತರ ಗೊತ್ತಾಯಿತು ಅದು ಟೌನ್ ಹಾಲಿನ ಲೈಬ್ರರಿಯೆಂದು. ಹಿಂದಿನ ದಿನಗಳಲ್ಲಿ ಲೈಬ್ರರಿಗಳಿಗೆ ಟೌನ್ ಹಾಲ್ ಎಂದು ಕರೆಯುತ್ತಿದ್ದದ್ದೂ ಉಂಟು.



ಸರಿ, ಹಳೆಯ ಬ್ರಿಟಿಷರ ಕಾಲದ ಕಟ್ಟಡದಂತಿದ್ದ ಲೈಬ್ರರಿಗೆ ಕಾಲಿಟ್ಟ ಮೊದಲ ದಿನದಿಂದ ಇಂದಿನವರೆಗೂ ನನಗೆ ಲೈಬ್ರರಿಯೆಂದರೆ ನೆನಪಿಗೆ ಬರುವುದು ‘ತಬರನ ಕತೆ’ ಸಿನಿಮಾದ ‘ಲೈಬ್ರರಿಲಿ ಇಲಿ ಇದೆ’ ಎಂಬ ಡೈಲಾಗ್. ನಮ್ಮ ನೆಚ್ಚಿನ ಕತೆಗಾರರಾದ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರ ‘ತಬರನ ಕತೆ’ ಕತೆಯು ಅದೇ ಹೆಸರಿನ ಸಿನಿಮಾವಾಗಿ ನಮ್ಮ ಹೆಮ್ಮೆಯ ಸಿನಿಮಾ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ನಿರ್ದೇಶನದಲ್ಲಿ ಆ ದಿನಗಳಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿತ್ತು. ತನ್ನ ವೈಯಕ್ತಿಕ ನೋವುಗಳಿಂದ, ವ್ಯವಸ್ಥೆಯ ಭ್ರಷ್ಟಾಚಾರಗಳಿಂದ ತಬರಸೆಟ್ಟಿ ಬುದ್ಧಿಮಾಂದ್ಯನಾಗುವುದು ಕತೆಯ ಹಂದರ. ಈ ಸಿನಿಮಾದಲ್ಲಿ ‘ಲೈಬ್ರರಿಲಿ ಇಲಿ ಇದೆ’, ‘ಲೈಬ್ರರಿಲಿ ಇಲಿ ಇದೆ’ ಎಂದು ಆತ ಬರುವ ದೃಶ್ಯ ನನ್ನ ಮನಸ್ಸಲ್ಲಿ ಅಚ್ಚೊತ್ತಿ ಅಂದಿಗೂ ಇಂದಿಗೂ ಮನೆಮಾಡಿಕೊಂಡಿದೆ. ಅದಕ್ಕೆ ಏನೋ ಲೈಬ್ರರಿ ಎಂದರೆ ಇಲಿಯೂ ನೆನಪಿಗೆ ಬರುವುದು. ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಕಥಾಸಂಕಲನದಲ್ಲಿ ‘ತಬರನ ಕತೆ’ ಕತೆಯಿದೆ. ಒಮ್ಮೆ ಓದಿ. ಸಾಧ್ಯವಾದರೆ ಸಿನಿಮಾವನ್ನೂ ನೋಡಿ.



ಮೊದಲಿಗೆ ಲೈಬ್ರರಿಗೆ ಕಾಲಿಟ್ಟಾಗ ಹುಷಾರಾಗಿ ಇಲಿಯನ್ನು ಹುಡುಕಿದೆನಾದರೂ, ಅಲ್ಲಿ ಇಲಿಯ ಬದಲು ಪುಸ್ತಕಗಳು, ಪತ್ರಿಕೆಗಳನ್ನು ನೋಡಿ ಬೆರಗಾದೆ. ಅಂದಿನಿಂದ ಲೈಬ್ರರಿ ನನ್ನ ಎರಡನೆಯ ಮನೆಯಾಯಿತು. ಕಾಲೇಜಿಗೆ ತುಮಕೂರಿಗೆ ಬರುವ ಸಮಯದಲ್ಲೂ ತುಮಕೂರಿನ ಟೌನ್ ಹಾಲಿನಲ್ಲಿರುವ ಗ್ರಂಥಾಲಯದಲ್ಲಿ ಬಿಡುವಿನ ವೇಳೆಯಲ್ಲಿ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಂಡೆ. ಇನ್ನು ವೃತ್ತಿಯ ನೆಪದಲ್ಲಿ ತುಮಕೂರಿನಲ್ಲಿ ಮನೆಮಾಡಿಕೊಂಡ ಮೇಲೆ ಗ್ರಂಥಾಲಯಕ್ಕೆ ಸದಸ್ಯನೂ ಆದೆ. ನೀವು ಓದುತ್ತಿರೋ ಬಿಡುತ್ತಿರೋ ಒಮ್ಮೆ ನಿಮ್ಮೂರಿನ ಗ್ರಂಥಾಲಯಕ್ಕೆ ಕಾಲಿಟ್ಟು ಬನ್ನಿ. ಪುಸ್ತಕವೊಂದರ ಮುಖಪುಟವೊಂದನ್ನು ತನ್ಮಯರಾಗಿ ನೋಡಿ, ಪುಟಗಳ ಮೇಲೆ ಪ್ರೀತಿಯಿಂದ ಕಣ್ಣಾಡಿಸಿ, ನಿಮ್ಮಲ್ಲೂ ಓದುವ ಆಸೆ ಮೂಡಬಹುದು. ಇನ್ನು ಓದುವ ಹವ್ಯಾಸ ಇರುವವರಿಗೆ, ಗ್ರಂಥಾಲಯಗಳಿಗೆ ಆಗಾಗ ಭೇಟಿ ಕೊಡುವವರಿಗೆ ನಾ ಏನನ್ನೂ ಹೇಳುವ ಅಗತ್ಯವಿಲ್ಲ. ನಾನಂತೂ ಗ್ರಂಥಾಲಯಗಳೆಂದರೆ ದೇವಾಲಯಗಳು ಎಂದುಕೊಂಡಿದ್ದೇನೆ. ದೇವಾಲಯಗಳಿಗೆ ನೀಡುವ ಮಹತ್ವವನ್ನು ಗ್ರಂಥಾಲಯಗಳಿಗೂ ನೀಡಬೇಕಿದೆ.

ಮೊನ್ನೆ ತುಮಕೂರಿನ ಗ್ರಂಥಾಲಯದ ಬಳಿ ಇತ್ತೀಚಿಗಷ್ಟೇ ಪರಿಚಯವಾದ ಯುವಕವಿಯೊಬ್ಬ ಸುಳಿದಾಡುತ್ತಿದ್ದನ್ನು ನೋಡಿ ಮಾತನಾಡಿಸಿದೆ. ಕಾಲೇಜು ಓದುತ್ತಿರುವ ಆತ ತನ್ನ ಬಿಡುವಿನ ವೇಳೆಯಲ್ಲಿ ಗ್ರಂಥಾಲಯಕ್ಕೆ ಬರುತ್ತೇನೆಂದು ಹೇಳಿದ. ಬಹಳ ಖುಷಿಯಾಯಿತು. ನನ್ನ ಕಾಲೇಜಿನ ದಿನಗಳು ಕಾರಂಜಿಯಂತೆ ಚಿಮ್ಮುತ್ತಾ ನೆನಪಿಗೆ ಬಂದವು.



ಸಾಧ್ಯವಾದರೆ ಒಮ್ಮೆ ಬೆಂಗಳೂರಿಗೆ ಹೋದಾಗ ನೂರು ವರ್ಷ ಪೂರೈಸಿರುವ ಕಬ್ಬನ್ ಪಾರ್ಕಿನ ಗ್ರಂಥಾಲಯಕ್ಕೆ ಹೋಗಿಬನ್ನಿ.



ಈಗ ನಮ್ಮೂರಿನಲ್ಲೂ ಹೊಸ ಲೈಬ್ರರಿ ಆಗಿದೆ. ತುಮಕೂರಿನಲ್ಲಿ ಸ್ಮಾರ್ಟ್ ಸಿಟಿ ಲೈಬ್ರರಿ ಆಗಿದೆ. ಬಿಡುವು ಮಾಡಿಕೊಂಡು ಹೋಗಿಬನ್ನಿ...

***

ಭಾನುವಾರ, ಅಕ್ಟೋಬರ್ 8, 2023

"ಅಮೇಜಾನ್‌ ಗ್ರೇಟ್‌ ಇಂಡಿಯನ್‌ ಫೇಸ್ಟಿವಲ್‌ - 2023"

ಸ್ನೇಹಿತರೇ,



ಇಂದಿನಿಂದ ಅಕ್ಟೋಬರ್‌ 14ರವರೆಗೆ "ಅಮೇಜಾನ್‌ ಗ್ರೇಟ್‌ ಇಂಡಿಯನ್‌ ಫೇಸ್ಟಿವಲ್‌ - 2023" ಶುರುವಾಗಿದೆ. ಸ್ಮಾರ್ಟ್‌ ಪೋನ್‌ಗಳು, ಸ್ಮಾರ್ಟ್‌ ಟಿವಿಗಳು, ಲ್ಯಾಪ್‌ ಟಾಪ್‌ಗಳು, ಗೃಹಪಯೋಗಿ ವಸ್ತುಗಳು ಮತ್ತು ಇನ್ನಿತರ ವಸ್ತುಗಳನ್ನು ಕೊಳ್ಳಲು ಸಕಾಲ. ಪುಸ್ತಕಗಳನ್ನು ಕೊಳ್ಳುವವರಿಗೂ ಇದು ಸಕಾಲ...

ಆಸಕ್ತರಿಗೆ ಈ ಸೇಲಿನ ಲಿಂಕ್‌ https://amzn.to/3Q5Ktiy

ಹ್ಯಾಪಿ ಶಾಪಿಂಗ್...
ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್...


ಶುಕ್ರವಾರ, ಅಕ್ಟೋಬರ್ 6, 2023

ಕ್ರಿಕೆಟ್‌ ನೋಡಿ ಇಂಗ್ಲೀಷ್‌ ಕಲಿಯಬಹುದೇ!?

Learn English Through Cricket Commentary

ಸ್ನೇಹಿತರೇ,

ನೆನ್ನೆಯಿಂದ (ಅಕ್ಟೋಬರ್‌ 5ರಿಂದ ನವೆಂಬರ್‌ 19ರವರೆಗೆ) ಐಸಿಸಿ ಪುರುಷರ ವಿಶ್ವ ಕಪ್‌ ಕ್ರಿಕೆಟ್‌ ಶುರುವಾಗಿದೆ. ಭಾರತ ಸೇರಿದಂತೆ ಒಟ್ಟು ಹತ್ತು ರಾಷ್ಟ್ರಗಳು ಪ್ರಶಸ್ತಿಗೆ ಸೆಣಸಲಿವೆ. ಈ ಬಾರಿಯ ವಿಶ್ವ ಕಪ್‌ನಲ್ಲಿ ವೆಸ್ಟ್‌ ಇಂಡೀಸ್‌ ತಂಡ ಇಲ್ಲದಿರುವುದು ದುರಂತ. ಈ ಹಿಂದೆ ಇತರೆ ನೆರೆರಾಷ್ಟ್ರಗಳ ಜೊತೆ ಅಂದರೆ ಭಾರತ ಉಪಖಂಡದಲ್ಲಿ ನಮ್ಮ ದೇಶ ಆತಿಥ್ಯವನ್ನು ಹಂಚಿಕೊಂಡಿತ್ತು. ಈ ಬಾರಿ ನಮ್ಮ ದೇಶದ್ದೇ ಪೂರ್ಣ ಆತಿಥ್ಯ… ಇದು 13ನೇ ವಿಶ್ವಕಪ್‌…

ಈಗ ನಾನು ವಿಷಯಕ್ಕೆ ಬರುತ್ತೇನೆ. ಕ್ರಿಕೆಟ್‌ ನೋಡಿ ಇಂಗ್ಲೀಷ್‌ ಕಲಿಯಬಹುದೇ!? ಹೌದು, ಎನ್ನುವುದು ನನ್ನ ಉತ್ತರ. ಹೇಗೆಂದರೆ, ಕಾಮೆಂಟರಿ ಕೇಳುತ್ತಾ… ಹೌದಾ…!? ಕ್ರಿಕೆಟ್‌ ನೋಡುತ್ತಾ ಕಾಮೆಂಟರಿ ಕೇಳುತ್ತಾ ಇಂಗ್ಲೀಷ್‌ ಕಲಿಯಬಹುದಾ ಎಂದು ಹುಬ್ಬೇರಿಸಬೇಡಿ. ಖಂಡಿತಾ ಕಲಿಯಬಹುದು. ಅದೂ ಸ್ಪೋಕನ್‌ ಇಂಗ್ಲೀಷ್...‌ ಕ್ರಿಕೆಟ್‌ ನೋಡುವವರಿಗೆ ಗೊತ್ತಿರುತ್ತೆ, ಜೋರಾಗಿ ಸೌಂಡ್‌ ಕೊಟ್ಟಿಕೊಂಡು ಕ್ರಿಕೆಟ್‌ ನೋಡುವ ಮಜಾ! ಆ ಮಜಾದಲ್ಲಿಯೇ ಇಂಗ್ಲೀಷ್‌ ಕಲಿತುಬಿಡಬಹುದು.

ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಷ್ಟೇ ನಾವು ಕನ್ನಡದಲ್ಲಿ ಕಾಮೆಂಟರಿ ಕೇಳುತ್ತಿರುವುದು. ಮೊದಲೆಲ್ಲಾ ಕಾಮೆಂಟರಿ ಅಂದರೆ ಅದು ಇಂಗ್ಲೀಷ್‌ನಲ್ಲಿ ಮಾತ್ರ ಅಲ್ವಾ? ಟಿವಿ ಬರುವ ಮುಂಚೆ ರೇಡಿಯೋವೇ ಗತಿ! ಆಗ ಇಂಗ್ಲೀಷ್‌ ಕಾಮೆಂಟರಿ ಕೇಳುವುದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಆ ಕಾಲದವರು ಇನ್ನೂ ಚೆನ್ನಾಗಿ ಇಂಗ್ಲೀಷ್‌ ಕಲಿಯಬಹುದಾಗಿತ್ತು, ಕೆಲವರಂತೂ ಈ ಮೂಲಕವೇ ಇಂಗ್ಲೀಷ್‌ ಕಲಿತಿದ್ದಾರೆ.

ಸದ್ಯಕ್ಕೆ ನಾನು ಟಿವಿಯ ಕಾಮೆಂಟರಿ ಬಗ್ಗೆ ಹೇಳ್ತೇನೆ. ನಾನು ಟಿವಿಯಲ್ಲಿ ಕ್ರಿಕೆಟ್‌ ನೋಡುವ ಕಾಲಕ್ಕೆ ಕಾಮೆಂಟರಿಗಾರರಾಗಿ ಫೇಮಸ್‌ ಆಗಿದ್ದವರು ಟೋನಿ ಗ್ರೇಗ್, ಜೆಫ್ರಿ ಬಾಯ್ಕಾಟ್‌, ಸುನೀಲ್‌ ಗವಾಸ್ಕರ್...‌ ಬೆರಳೆಣಿಕೆಯಷ್ಟು ಮಾತ್ರ. ಇವರ ಕಾಮೆಂಟರಿ ಕೇಳುತ್ತಲೇ 80-90ರ ದಶಕದ ಕ್ರಿಕೆಟ್‌ ಪ್ರೇಮಿಗಳು ಬೆಳೆದದ್ದು. ಜೊತೆಗೆ ಇಂಗ್ಲೀಷ್‌ ಕಲಿತದ್ದು. ಅಷ್ಟು ಅಚ್ಚುಕಟ್ಟಾದ ಸೊಗಸಾದ ಭಾಷೆ ಇವರದಾಗಿರುತ್ತಿತ್ತು. ನಂತರ ರವಿ ಶಾಸ್ತ್ರಿ, ಕಪಿಲ್‌ ದೇವ್‌, ಸಿಕ್ಸರ್‌ ಸಿಧು, ಮೈಕೇಲ್‌ ಆರ್ಥಟನ್‌, ಇಯಾನ್‌ ಬಿಷಪ್, ನಾಸೀರ್‌ ಹುಸೇನ್‌, ಸಂಜಯ್‌ ಮಂಜ್ರೇಕರ್‌, ‌ ಹರ್ಷ ಬೋಗ್ಲೆ… ಇನ್ನು ಮುಂತಾದವರು ಫೇಮಸ್‌ ಆಗಿದ್ದಾರೆ. ಹರ್ಷ ಬೋಗ್ಲೆ ಕ್ರಿಕೆಟ್‌ ಕಾಮೆಂಟರಿಯ ದಂತಕಥೆಯೇ ಆಗಿದ್ದಾರೆ.



ಇನ್ನು ನಮ್ಮ ನೆಚ್ಚಿನ ಕೆಲವು ಕ್ರಿಕೆಟರ್‌ಗಳು ಕೂಡ ಕಾಮೆಂಟರಿ ಮಾಡುತ್ತಲೇ ಇರುತ್ತಾರೆ. ಇವರ ಇಂಗ್ಲೀಷ್‌ ಕೂಡ ಚೆನ್ನಾಗಿರುತ್ತದೆ. ಇವರ ಇಂಗ್ಲೀಷ್‌ ಕೇಳುತ್ತಲೇ ಸುಲಭವಾಗಿ ನಾವು ಕೂಡ ಇಂಗ್ಲೀಷ್‌ ಕಲಿಯಬಹುದು. ಅದೂ ನಾನು ಹೇಳಿದಂತೆ ಸ್ಪೋಕನ್‌ ಇಂಗ್ಲೀಷ್!‌ ಇದು ನನ್ನ ಮಟ್ಟಿಗೆ ನಿಜ ಮತ್ತು ನನ್ನಂತೆಯೇ ಕೋಟ್ಯಾನುಕೋಟಿ ಕನ್ನಡಿಗರಷ್ಟೆ ಅಲ್ಲದೆ ಇತರೆ ಭಾಷಿಕರೂ ಸಹ ಇಂಗ್ಲೀಷ್‌ ಕಲಿತಿದ್ದಾರೆ. ನೀವು ಕನ್ನಡದಲ್ಲೇ ಕಾಮೆಂಟರಿ ಕೇಳುವುದಾದರೆ ಅದು ನಿಮ್ಮಿಷ್ಟ. ಕನ್ನಡದ ಜೊತೆಗೆ ಇಂಗ್ಲೀಷ್‌ ಕೂಡ ಕ್ರಿಕೆಟ್‌ ನೋಡುವ ಸಮಯದಲ್ಲೇ ಕಲಿತಿನೀ ಅನ್ನುವುದಾದರೇ ಇನ್ಮುಂದೆ ಕ್ರಿಕೆಟ್‌ ನೋಡುವತ್ತಲೇ ಹರಿಸುವ ಗಮನವನ್ನು ಸ್ಪಲ್ಪ ಕಾಮೆಂಟರಿ ಕೇಳುವ ಕಡೆಗೂ ಹರಿಸಿ ಒಂದಷ್ಟು ಇಂಗ್ಲೀಷ್‌ ನಿಮ್ಮದಾಗಿಸಿಕೊಳ್ಳಿ.

ಈ ಬಾರಿ ಮತ್ತೊಮ್ಮೆ ನಮ್ಮ ಭಾರತ ದೇಶ ಕಪ್‌ ಗೆಲ್ಲಲಿ ಎಂದು ಆಶಿಸುತ್ತಾ…

ಪ್ರೀತಿಯಿಂದ, - ಗುಬ್ಬಚ್ಚಿ ಸತೀಶ್. 

"ಮಾದೇವ"ನ ಯಶಸ್ವಿ ಪ್ರದರ್ಶನ...

 ಸ್ನೇಹಿತರೇ, ನಟ ವಿನೋದ್‌ ಪ್ರಭಾಕರ್‌ ಅಭಿನಯದ "ಮಾದೇವ" ಸಿನಿಮಾ ಜೂನ್‌ 6ರಂದು ಬಿಡುಗಡೆಯಾಯಿತು. ನವೀನ್‌ ರೆಡ್ಡಿ ಬಿ. ಅವರ ನಿರ್ದೇಶನದ ಈ ಸಿನಿಮಾವನ್ನು ನಾ...