ಸಂಜೆಯಾಯಿತೆಂದರೆ ತುಮಕೂರಿನ ಎಂ.ಜಿ. ರೋಡಿನಲ್ಲಿ ವಾಹನಗಳಿಂದವಿರಲಿ, ಜನಗಳಿಂದಲೇ ಆಗುವ ತಿಕ್ಕಾಟವನ್ನು ತಪ್ಪಿಸಿಕೊಂಡು ನಡೆಯುವುದು ಕಷ್ಟ. ನನಗೆ ಡ್ರಾಯಿಂಗ್ ಶೀಟ್ಸ್‍ಗಳನ್ನು ತೆಗೆದುಕೊಳ್ಳಬೇಕು. ಅಷ್ಟಕ್ಕೂ ಅದು ನನಗಲ್ಲ. ನನ್ನ ಏಕೈಕ ಹೆಂಡತಿಗೆ. ನೆನ್ನೆ ರಾತ್ರಿಯೇ ಇದರ ಬಗ್ಗೆ ಅವಳು ಹೇಳಿದ್ದಳು. ಸಂಜೆ ಫೋನ್ ಮೂಲಕ ಮತ್ತೊಮ್ಮೆ ಜ್ಞಾಪಿಸಿದ್ದಾಳೆ ಎಂದ ಮೇಲೆ ತೆಗೆದುಕೊಂಡು ಹೋಗಲೇಬೇಕು.
ಗಾಡಿ ಪಾರ್ಕ್ ಮಾಡಿ, ಯಾರಿಗೂ ತಿಕ್ಕದೆ, ತಿಕ್ಕಿಸಿಕೊಳ್ಳದೆ ಪುಸ್ತಕದಂಗಡಿಯ ಬಾಗಿಲ ಬಳಿಗೆ ಬಂದೆ. ಅಂಗಡಿಯ ಮುಂದೆ ಹಲವಾರು ಜನ ವ್ಯಾಪಾರ ಮಾಡುತ್ತಿದ್ದರು. ನಾ ಮೊದಲು ಎಡಗಡೆಗೆ ನಿಂತೆ. ಕಾರಣ, ಬಲಗಡೆ ಹುಡುಗಿಯರು ಹೆಚ್ಚಿದ್ದರು. ಎಡಗಡೆ ಇಬ್ಬರು ಹುಡುಗರಿದ್ದರು. ನಾ ತುಂಬಾ ಹೊತ್ತು ಅಲ್ಲಿನ ಚಲನವಲನಗಳನ್ನು ಗಮನಿಸುತ್ತಾ ನಿಂತೇ ಇದ್ದೆ. ನನ್ನ ಕಡೆಯಿದ್ದ ಆ ಹುಡುಗರು ಬೇಗ ವ್ಯಾಪಾರ ಮುಗಿಸಲೇ ಇಲ್ಲ. ಅಷ್ಟರಲ್ಲಿ ಬಲಗಡೆಯಿದ್ದ ಹುಡುಗಿಯೊಬ್ಬಳು ವ್ಯಾಪಾರ ಮುಗಿಸಿ ಅಲ್ಲಿಂದ ತೆರಳಿದಳು. ನಾನು ಆ ಜಾಗಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಮಧ್ಯವಯಸ್ಕ ಗಂಡಸರೊಬ್ಬರು ಪುಸಕ್ಕನೆ ಬಂದು ನಿಂತರು. ನಿರಾಸೆಯಾಯಿತು.
ಅಂಗಡಿಯಲ್ಲಿ ಇಬ್ಬರು ಕೆಲಸದ ಹುಡುಗರೊಂದಿಗೆ ಅಂಗಡಿಯ ಯಜಮಾನರಿದ್ದರೂ ಗಿರಾಕಿಗಳನ್ನು ಸಂಭಾಳಿಸಲಾಗುತ್ತಿರಲಿಲ್ಲ. ಅಷ್ಟರಲ್ಲಿ ಎಡಗಡೆಯಿದ್ದ ಆ ಇಬ್ಬರು ಹುಡುಗರೂ, ಮತ್ತೊಬ್ಬಳು ಹುಡುಗಿ ನಿರ್ಗಮಿಸಿದರು. ಖಾಲಿಯಾದ ಜಾಗಕ್ಕೆ ಎತ್ತರದಿಂದ ಕೆಳಕ್ಕೆ ಜಿಗಿಯುವ ನೀರಿನಂತೆ ಜಿಗಿದು ನಾನು ಆ ಜಾಗವನ್ನು ಆಕ್ರಮಿಸಿದೆ. ಅದೇ ಸಮಯಕ್ಕೆ ನನ್ನ ಪಕ್ಕಕ್ಕೆ ಒಬ್ಬಳು ಚಿಕ್ಕ ಹುಡುಗಿ, ಮತ್ತೊಬ್ಬಳು ದೊಡ್ಡ ಹುಡುಗಿ ಬಂದರು. ಆ ಚಿಕ್ಕ ಹುಡುಗಿ ತುಸು ಜೋರಾಗಿಯೇ, ‘ಮಮ್ಮಿ, ನಂಗೆ ಅನಿಮಲ್ಸ್ ಚಾರ್ಟ್ ಬೇಕು’, ಎಂದದನ್ನು ಕೇಳಿಸಿಕೊಂಡು ಆ ದೊಡ್ಡ ಹುಡುಗಿಯ ಕಡೆ ನೋಡಿದೆ. ಆ ಹುಡುಗಿ ಚಿಕ್ಕ ಹುಡುಗಿಯ ಅಮ್ಮ!? ಎಂದು ಅರ್ಥಮಾಡಿಕೊಂಡಾಗ, ಸಂತೂರ್ ಸಾಬೂನಿನ ಜಾಹೀರಾತು ನೆನಪಾಗಿ ಮನಸ್ಸಲ್ಲೇ ಮುಗುಮ್ಮಾಗಿ ನಕ್ಕೆ.
‘ಏನ್ಬೇಕು ಸಾರ್’, ಅಂಗಡಿಯ ಹುಡುಗನೊಬ್ಬ ಕೇಳಿದ. ಸಂತೂರ್ ಜಾಹಿರಾತಿನಿಂದ ಹೊರಬಂದವನು ‘ಎಲ್ಲಾ ಕಲರ್‍ದೂ ಒಂದೊಂದು ಡ್ರಾಯಿಂಗ್ ಶೀಟ್ ಕೊಡಪ್ಪ’ ಅಂದೆ. ‘ಎಲ್ಲೊನ ಸಾರ್’ ಎಂದು ಹುಡುಗ ನನ್ನ ಮುಖವನ್ನೊಮ್ಮೆ ನೋಡಿದ. ‘ಅಲ್ಲಪ್ಪಾ, ಎಲ್ಲಾ ಕಲರ್‍ದೂ, means, all colours’ ಎಂದೆ. ‘ಸರಿ ಸಾರ್’, ಎಂದು ಡ್ರಾಯಿಂಗ್ ಶೀಟ್ಸ್ ತರಲು ಅಂಗಡಿಯ ಒಳಕ್ಕೆ ಹೋದ. ಇಂಗ್ಲೀಷ್ ಪೀಡಿತ, ಕನ್ನಡ ಬರ ನಾಡಲ್ಲಿ ‘ಎಲ್ಲಾ’ ಎಂದದ್ದು ಅವನಿಗೆ ‘ಎಲ್ಲೊ’ ಎಂದು ಕೇಳಿಸಿರಬೇಕು.
ಒಳಕ್ಕೆ ಹೋದ ಹುಡುಗನನ್ನು ಕಾಯುತ್ತಾ ನಿಂತ ನನ್ನ ಚಂಚಲ ಕಣ್ಣುಗಳು ಬಲಗಡೆ ನಿಂತಿದ್ದ ಮಧ್ಯವಯಸ್ಕನೆಡೆಗೆ ತಿರುಗಿದವು. ಅರೇ! ಈತ ಇನ್ನೂ ಇಲ್ಲಿಯೇ ನಿಂತಿದ್ದಾರೆ. ಆತ ಅದೇಕೋ ಬೆವರಿದಂತೆ ಕಾಣುತ್ತಿದ್ದರು. ಕರ್ಚೀಪಿನಿಂದ ಮುಖ ಒರೆಸಿಕೊಳ್ಳುತ್ತಾ, ಏನನ್ನೋ ಕೇಳುವುದೋ ಬೇಡವೋ ಎನ್ನುವಂತೆ ನಿಂತಿದ್ದವರು ಇದ್ದಕ್ಕಿದ್ದಂತೆ, ‘ಒಂದನೇ ಕ್ಲಾಸಿನ ಇಂಗ್ಲೀಷ್ ಡೈಜೆಸ್ಟ್ ಕೊಡಿ’, ಎಂದು ಅಂಗಡಿಯ ಯಜಮಾನನನ್ನು ಯಾವುದೋ ತಪ್ಪು ಮಾಡಿದವನು ದಯಮಾಡಿ ಬಿಟ್ಟು ಬಿಡಿ ಎಂದು ಕೇಳುವವನಂತೆ ಕೇಳಿದ. ಇದನ್ನು ಕೇಳಿದ ಯಜಮಾನನು ಈತನೆಡೆಗೆ ತಿರುಗಿಯೂ ನೋಡದೆ, ಒಳಗೊಳಗೇ ನಗುತ್ತಾ, ‘ಒಂದನೇ ಕ್ಲಾಸಿಗೆ ಇಂಗ್ಲೀಷ್ ಡೈಜೆಸ್ಟೇನ್ರಿ? ಅದೇ ಬರಿ ಎ, ಬಿ, ಸಿ, ಡಿ ಇರಬೇಕು ಅಷ್ಟೆ’, ಎಂದು ತಲೆಯೆತ್ತಿ ಆ ಮಧ್ಯವಯಸ್ಕರ ಕಡೆಗೆ ನೋಡಿ ‘ಹ್ಹ ಹ್ಹ ಹ್ಹಾ. . .! ಇಲ್ಲಾರಿ’’ ಎಂದು ಸ್ವಲ್ಪ ಜೋರಾಗಿಯೇ ನಕ್ಕ. ಪಾಪ, ಅವಮಾನವಾದಂತಾಗಿ ತಲೆತಗ್ಗಿಸಿ ಆ ಮಧ್ಯವಯಸ್ಕರು ಅಲ್ಲಿಂದ ತೆರಳಿದರು.
‘ತಗೊಳ್ಳಿ ಸಾರ್ ಡ್ರಾಯಿಂಗ್ ಶೀಟ್ಸ್, ಇಪ್ಪತ್ತು ರೂಪಾಯಿ ಕೊಡಿ’, ಎಂದು ಅಂಗಡಿಯ ಹುಡುಗನು ಅಂದಾಗ, ಇಪ್ಪತ್ತು ರೂಪಾಯಿಗಳನ್ನು ಕೊಟ್ಟು, ಅವನು ಸುತ್ತಿಕೊಟ್ಟ ಶೀಟ್ಸ್ ಗಳನ್ನು ಪಡೆದು, ಯಜಮಾನನೊಮ್ಮೆ ನೋಡಿ ಅಲ್ಲಿಂದ ತೆರಳಿದೆನು.
ಪಾರ್ಕ್ ಮಾಡಿದ್ದ ಜಾಗದಿಂದ ಗಾಡಿಯನ್ನು ತೆಗೆಯಲು ಹೋದವನು, ಅಲ್ಲೇ ಎದುರುಗಡೆಯಿದ್ದ ಜಿಲೇಬಿಯಂಗಡಿಯ ಹತ್ತಿರ ಜಿಲೇಬಿ ತಿನ್ನುತ್ತಿದ್ದ ಪುಸ್ತಕದಂಗಡಿಯಲ್ಲಿದ್ದ ಆ ಮಧ್ಯವಯಸ್ಕರನ್ನು ನೋಡಿದ ಕೂಡಲೇ ಯಾಕೋ ಅಲ್ಲೇ ನಿಂತೆನು. ಜಿಲೇಬಿ ತಿನ್ನುತ್ತಿದ್ದರೂ ಆತ ಬೇಸರದಲ್ಲಿದ್ದನು. ಆತ ಜಿಲೇಬಿ ತಿಂದದ್ದು ಮುಗಿದ ಕೂಡಲೇ ಆತನ ಬಳಿ ಅವಸರವಾಗಿ ನಡೆದು, ‘ಸಾರ್, ನಮಸ್ಕಾರ’ ಎಂದೆ. ಜಿಲೇಬಿಯ ಕಡೆಯ ಚೂರನ್ನು ಬಾಯಲಿಟ್ಟುಕೊಂಡದ್ದರಿಂದಲೋ ಅಥವಾ ಬೇಸರದಿಂದಲೋ ಏನೋ ಆತ ನಮಸ್ಕಾರವೆಂದು ಕೈಯಲ್ಲೇ ಸಂಜ್ಞೆ ಮಾಡಿದರು. ಪರವಾಗಿಲ್ಲ ಇರಲಿ ಎಂದುಕೊಂಡ ನಾನು ಮುಂದುವರಿದು, ‘ಸಾರ್, ಆ ಅಂಗಡಿಯಲ್ಲಿ ತಾವು ಒಂದನೇ ಕ್ಲಾಸ್ ಇಂಗ್ಲೀಷ್ ಡೈಜೆಸ್ಟ್ ಕೇಳುದ್ರಲ್ಲಾ. . . , ಒಂದನೇ ಕ್ಲಾಸ್ ಇಂಗ್ಲೀಷ್ ನಿಮ್ಮ ಮಗುಗೆ ಅಷ್ಟು ಕಷ್ಟ ಆಗ್ತಿದ್ಯಾ ಸಾರ್?’ ಎಂದೆ. ಅದಕ್ಕೆ ಆತ, ಹಿಂದೆ-ಮುಂದೆ, ಮೇಲೆ-ಕೆಳಗೆ ನೋಡುತ್ತಾ, ‘ಅದೇನೋ ಗೊತ್ತಿಲ್ಲ ಸಾರ್. ನಾನು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡದ ಗೌರವ ಉಪನ್ಯಾಸಕನಾಗಿ ಕೆಲಸ ಮಾಡ್ತಿದೀನಿ. ನನಗೆ ಇನ್ನೂ ಮಕ್ಕಳಿಲ್ಲ. ನನ್ನ ಹೆಂಡತಿ ಬಿ.ಎ ಮಾಡಿದ್ದಾಳೆ. ಇತ್ತೀಚೆಗೆ ಅವಳಿಗೆ ಪ್ರೈವೇಟ್ ಸ್ಕೂಲಲ್ಲಿ ಕೆಲಸ ಸಿಕ್ಕಿದೆ. ಅದು ಸಿ.ಬಿ.ಎಸ್.ಸಿ ಸಿಲಬಸ್ ಇರೋ ಸ್ಕೂಲಂತೆ! ಅವಳೋದಿದ್ದು ಕನ್ನಡ ಮೀಡಿಯಮ್ಮಿನಲ್ಲಿ. ಕೆಲಸಕ್ಕೆ ಹೋದ ಮೊದಲನೇ ದಿನಾನೇ ಫಸ್ಟ್ ಸ್ಟಾಂಡರ್ಡ್ ಇಂಗ್ಲೀಷು ತುಂಬಾ ಕಷ್ಟ ಕಣ್ರೀ. ನಂಗೊಂದು ಡೈಜೆಸ್ಟ್ ತಂದು ಕೊಡಿ ಅಂದಳು. ಅದಕ್ಕೆ ಅಂತಾ ಬಂದರೆ... ಆ ಅಂಗಡಿಯವನು ಹಂಗಾ ಸಾರ್ ಅನ್ನೋದು’, ಎಂದು ಅಲ್ಲಿಂದ ಸರಸರನೆ ಹೊರಟು ಹೋದರು.
ಅವಕ್ಕಾದ ನಾನು, ‘ಯಾರು ಸರಿ ಅನ್ನೋದು!?’ ಎಂದು ಯೋಚಿಸುತ್ತಾ, ತಲೆಕೆರೆದುಕೊಂಡು ಕ್ಷಣಕಾಲ ನಿಂತಲ್ಲೇ ನಿಂತಿದ್ದೆ.
- ಗುಬ್ಬಚ್ಚಿ ಸತೀಶ್