ಬುಧವಾರ, ಅಕ್ಟೋಬರ್ 30, 2013

ಮದುವೆಯೆಂಬುದು ಒಂದು ಖಾಸಗಿ ವಿಷಯ

Sneha Madabekinthavala

"Happy marriages begin when we marry the ones we love, 
and they blossom when we love the ones we marry."
ನಮ್ಮಿಬ್ಬರ ಭೇಟಿಗಳು ಕಥೆಗಳ ಸುತ್ತಾ ಸುತ್ತ ತೊಡಗಿದವು. ಈ ಬಾರಿಯ ಭೇಟಿಯಲ್ಲಿ ನಮ್ಮ ಮದುವೆಯ ಬಗ್ಗೆ ಮಾತನಾಡೋಣ ಎಂದುಕೊಂಡು, ಅರ್ಧಗಂಟೆಯಿಂದ ತನ್ಮಯಳಾಗಿ ನನ್ನನ್ನೇ ನೋಡುತ್ತಿದ್ದ ಲಕ್ಷ್ಮೀಗೆ, ನಮ್ಮ ಮದುವೆ ಯಾವಾಗ? ಎಂದು ಥಟ್ಟನೆ ಕೇಳಿದೆ.
ಮದುವೆ!? ಅವಳ ಒಂದೇ ಮಾತಿನ ಪದದಲ್ಲಿ ಬೆಚ್ಚಿದ ಭಾವವಿತ್ತು.
ಹೌದು. ಮದುವೆ! ತಣ್ಣಗೆ ನಾ ಮತ್ತೆ ನುಡಿದೆ.
ಪ್ರೀತಿಸಿದವರು ಮದುವೆಯಾಗಲೇಬೇಕಾ?
ಮತ್ತೆ, ಪ್ರೀತಿ ಸಾರ್ಥಕವಾಗುವುದು ಆವಾಗಲೇ ಅಲ್ಲವೇ? ನಿನಗೇನು ನನ್ನ ಮದುವೆಯಾಗಲು ಯಾವುದಾದರೂ ಅಡ್ಡಿ, ಆತಂಕ?
ಹಾಗೇನಿಲ್ಲ, ಹೇಗಿದ್ದರೂ ಮದುವೆಯೆಂಬುದು ಒಂದು ಖಾಸಗಿ ವಿಷಯವಲ್ಲವೇ?
ಖಾಸಗಿ ವಿಷಯವೇ? ಆಗಿದ್ದರೆ ನೀನು ಯಾರನ್ನೂ ಕೇಳುವುದಿಲ್ಲವಾ?
ಕೇಳಬೇಕೆಂದೆನೋ ಇದ್ದೇನೆ. ಆದರೆ, ಅವರು ಒಪ್ಪಲಿಲ್ಲವೆಂದರೆ, ನಿಮ್ಮನ್ನು ಮದುವೆಯಾಗದೇ ಉಳಿಯಲಾಗುತ್ತದೆಯೇ?
ಮತ್ತೆ?
ನಿಮ್ಮ ಸಹವಾಸ ದೋಷದಿಂದ ನಾನೂ ಇತ್ತೀಚೆಗೆ ಬಿಡುವುದಾಗಲೆಲ್ಲಾ ಓದುವುದನ್ನು ರೂಢಿಸಿಕೊಂಡಿದ್ದೇನೆ. ಅದಕ್ಕೆ ಇವತ್ತು ನಾ ಒಂದು ಕಥೆ ಹೇಳಿಬಿಡುತ್ತೇನೆ, ಕೇಳಿಬಿಡಿರಿ.
ಕಥೆಯಾ!? ಓ ಗ್ರೇಟ್. ಹೇಳು, ಹೇಳು ನನ್ನ ಜೀವನವೆಲ್ಲಾ ಬರಿ ಕಥೆ ಹೇಳಿದ್ದೇ ಆಯ್ತು. ಇಂದು ಒಂದಾದರೂ ಕಥೆ ಕೆಳೋಣ.
ಈ ಕಥೆಯನ್ನು ನೀವು ಹಿಂದೆ ಓದಿರಬಹುದು?
ಎಲ್ಲವನ್ನೂ ಓದಲಿಕ್ಕಾಗುತ್ತದೆಯೆ? ನೀನು ಹೇಳು ನಾ ಕೇಳುತ್ತಾನೆ.
ಇದು ಆಫ್ರಿಕಾದ ಪ್ರಖ್ಯಾತ ಲೇಖಕ ಚಿನುವಾ ಅಚೆಬೆಯ ಕಥೆ.
ಚಿನುವಾ ಅಚೆಬೆಯೆ!? ಅವನ ಥಿಂಗ್ಸ್ ಫಾಲ್ ಅಪಾರ್ಟ್ ಕಾದಂಬರಿ ನಮಗೆ ಪದವಿಯಲ್ಲಿತ್ತಲಾ? ತುಂಬಾ ಪ್ರಸಿದ್ಧ ಲೇಖಕ.
ಹೌದು, ಅವನ Marriage is a private affair ಎಂಬ ಕಥೆಯನ್ನು ನಿಮಗೆ ನನಗೆ ಬಂದಂತೆ ಹೇಳಿಬಿಡುತ್ತೇನೆ, ಕೇಳಿಬಿಡಿ.
ನಾನು ಅಚೆಬೆಯ ಇನ್ಯಾವುದೇ ಕಥೆಯನ್ನು ಓದಿಲ್ಲ. ಖಂಡಿತ ಕೇಳುತ್ತೇನೆ, ಹೇಳು. ಈ ಕಥೆಯು ಮದುವೆಯ ಬಗ್ಗೆ ನಿನ್ನ ನಿರ್ಧಾರದಂತೆಯೂ ನನಗೆ ಅನ್ನಿಸತೊಡಗಿದೆ. ಎಂದು ತನ್ಮಯನಾಗಿ ಕುಳಿತೆ.
...
ಈ ಕಥೆಯ ನಲ್ಲೆ ನೇನೆ ತನ್ನನ್ನು ಪ್ರೀತಿಸುತ್ತ್ತಿದ್ದ ನಲ್ಲ ಎಮೇಕಾನಿಗೆ, ತಮ್ಮ ಮದುವೆಯ ವಿಷಯ ನಿಮ್ಮ ತಂದೆಗೆ ತಿಳಿಸಿದ್ದೀರಾ? ಎಂದು ಕೇಳುತ್ತಾಳೆ. ಅದಕ್ಕವನು ರಜೆಗೆ ಹಳ್ಳಿಗೆ ಹೋದಾಗ ತಿಳಿಸುತ್ತೇನೆ ಎನ್ನುತ್ತಾನೆ. ಅದಕ್ಕವಳು ರಜೆ ಬರುವುದಕ್ಕೆ ಇನ್ನೂ ತುಂಬಾ ದಿನಗಳಿವೆ ಎನ್ನುತ್ತಾಳೆ. ಅದಾಗ ಯೋಚಿಸುತ್ತಾ ಕುಳಿತ ಎಮೇಕಾ, ನನಗನ್ನಿಸಿದೆ ಈ ವಿಷಯ ನಮ್ಮ ತಂದೆಗೆ ಸಂತಸವನ್ನುಂಟು ಮಾಡುತ್ತದೆಯೆಂದು ಹೇಳುತ್ತಾನೆ. ಅದಕ್ಕವಳು, ಹೌದು ಅವರಿಗೆ ಸಂತೋಷವಾಗಲೇಬೇಕು. ಯಾಕಾಗಬಾರದು? ಎಂಬ ಪ್ರಶ್ನೆಯೆತ್ತುತ್ತಾಳೆ. ಅದಕ್ಕವನು, ನೀನು ನಿನ್ನ ಜೀವನವನ್ನೆಲ್ಲಾ ಪಟ್ಟಣದಲ್ಲೇ ಬಾಳಿದ್ದೀಯಾ. ನಿನಗೆ ದೇಶದ ಹಳ್ಳಿಗಳಲ್ಲಿ ವಾಸಿಸುವ ಜನರ ಬಗ್ಗೆ ಅಷ್ಟಾಗಿ ತಿಳಿದಿಲ್ಲ.
ನೀವು ಅದನ್ನೇ ಯಾವಾಗಲೂ ಹೇಳುತ್ತೀರಾ. ಆದರೆ, ತಮ್ಮ ಮಗನ ಮದುವೆ ನಿಶ್ಚಿತವಾದರೆ ಯಾರೂ ದುಃಖಿಸುವುದಿಲ್ಲ...ಅಲ್ಲವೇ? ಎಂದು ಕೇಳುತ್ತಾಳೆ.
ಹೌದು. ಆದರೆ, ಮದುವೆ ಅವರಿಂದ ನಿಶ್ಚಿತವಾಗಿಲ್ಲದಿದ್ದರೆ ಖಂಡಿತ ದುಃಖಿಸುತ್ತಾರೆ. ನಮ್ಮ ವಿಷಯದಲ್ಲಿ ಅದು ವಿಪರೀತಕ್ಕೆ ಹೋಗುವ ಸಾಧ್ಯತೆಯಿದೆ. ಯಾಕೆಂದರೆ, ನೀನು ನಮ್ಮ ಇಬೋ (Ibo) ಜನಾಂಗಕ್ಕೆ ಸೇರಿದವಳಲ್ಲ
ಅವನು ಅದೆಷ್ಟು ಗಂಭೀರನಾಗಿ ಹೇಳಿದೆನೆಂದರೆ, ನಾಯಕಿಗೆ ಸ್ವಲ್ಪ ಹೊತ್ತು ಮಾತೇ ಹೊರಡಲಿಲ್ಲ. ನಗರದ ಕಾಸ್ಮಾಪಾಲಿಟನ ಪರಿಸರದಲ್ಲಿ ಅವಳಿಗೆಂದೂ ಜನಾಂಗವೊಂದು ಮದುವೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಅನ್ನಿಸಿರಲೇ ಇಲ್ಲ. ಅದನ್ನು ತಮಾಷೆಯೆಂದೇ ತಿಳಿದಿದ್ದಳು.
ಕಡೆಗೆ ಅವಳೇ ಸಮಾಧಾನದಿಂದ, ಅದೊಂದೇ ಕಾರಣದಿಂದ ಅವರು ನಮ್ಮ ಮದುವೆಯನ್ನು ತಿರಸ್ಕರಿಸುತ್ತಾರೆಂದು ನೀವು ಹೇಳುತ್ತಿಲ್ಲವಷ್ಟೇ? ನಿಮ್ಮ ಜನಾಂಗದವರು ಬಹಳ ಮೆದು ಮನಸ್ಸಿನವರು ಎಂದು ತಿಳಿದಿದ್ದೇನೆ ಎಂದಳು.
ಹೌದು, ನಮ್ಮ ಜನ ಮೆದು ಮನಸ್ಸಿನವರೆನೋ ನಿಜ. ಆದರೆ, ಮದುವೆಯ ವಿಷಯಕ್ಕೆ ಬಂದಾಗ, ಅದು ಅಷ್ಟೊಂದು ಸರಳವಲ್ಲ. ಇದು ಇಬೋಗಳಿಗೆ ಮಾತ್ರ ಸೀಮಿತವಲ್ಲ. ನಿಮ್ಮ ತಂದೆ ಜೀವಂತವಾಗಿದ್ದು, ನಮ್ಮ ಜನರ ನಡುವೆಯೇ ಬದುಕಿದ್ದರೆ, ಅವರೂ ನಮ್ಮ ತಂದೆಯಂತೆಯೇ ಇರುತ್ತಿದ್ದರು.
ನನಗೆ ಗೊತ್ತಿಲ್ಲ. ಏನಾದರಾಗಲೀ, ನಿಮ್ಮ ತಂದೆ ನಿನ್ನನ್ನು ತುಂಬಾ ಇಷ್ಟ ಪಡುತ್ತಾರೆ. ನಿನ್ನನವರು ಖಂಡಿತ ಕ್ಷಮಿಸುತ್ತಾರೆ. ಆದುದರಿಂದ ಒಳ್ಳೆಯ ಹುಡುಗನಾದ ನೀನು ಅವರಿಗೊಂದು ಸುಂದರ ಪತ್ರವನ್ನು ಈಗಲೇ ಬರೆದುಬಿಡು.
ಒಂದು ಪತ್ರದ ಮೂಲಕ ಅವರಿಗೆ ವಿಷಯವನ್ನು ತಿಳಿಸುವುದು ಅಷ್ಟು ಸಮಂಜಸವಲ್ಲ. ಅದು ಅವರಿಗೆ ಶಾಕ್ ಕೂಡ ನೀಡಬಹುದು.
ಆಗಲಿ ಬಿಡಿ. ನೀವು ಸರಿಯಾಗಿ ಸಿದ್ದರಾಗಿರಿ. ನಿಮ್ಮ ತಂದೆ ನಿಮಗೇ ಗೊತ್ತು.
ಆ ಸಂಜೆ ಮನೆಗೆ ನಡೆಯುತ್ತಾ ಬಂದ ಎಮೇಕಾ ತನ್ನ ತಂದೆಯನ್ನು ಒಪ್ಪಿಸುವ ಹಲವು ಸಾಧ್ಯತೆಗಳ ಬಗ್ಗೆ ಚಿಂತಿಸುತ್ತಾ ಇದ್ದ. ಅದರಲ್ಲೂ ಅವನ ತಂದೆ ಇವನಿಗಾಗಿ ಒಬ್ಬಳು ಹುಡುಗಿಯನ್ನು ನೋಡಿದ್ದಾನೆ. ಈ ವಿಷಯವನ್ನು ಹೊತ್ತು ಬಂದಿರುವ ಪತ್ರವನ್ನು ನೇನೆಗೆ ತೋರಿಸಿ ಬೇಕೆಂದುಕೊಂಡರೂ ಈಗ ಬೇಡ ಎಂದು ಸುಮ್ಮನಾಗಿದ್ದ. ಮನೆಗೆ ಬಂದ ನಂತರ ಮತ್ತೆ ಪತ್ರವನ್ನು ಓದಿದವನಿಗೆ ನಗು ತಡೆಯಲಾಗುತ್ತಿಲ್ಲ. ತಂದೆ ನೋಡಿರುವ ಹುಡುಗಿ ಇವನಿಗೆ ಚೆನ್ನಾಗಿ ನೆನಪಿದ್ದಾಳೆ. ಗಂಡುಬೀರಿಯಾದ ಅವಳು ಎಲ್ಲಾ ಹುಡುಗರನ್ನು, ಇವನನ್ನು ಹೊಳೆಗೆ ಹೋಗುವ ದಾರಿಯಲ್ಲಿ ಹೊಡೆಯುತ್ತಿದ್ದಳು. ಶಾಲೆಯಲ್ಲಿ ಮಹಾನ್ ದಡ್ಡಿಯಾಗಿದ್ದಳು.
ನಾನು ನಿನಗೊಬ್ಬಳು ಒಪ್ಪುವ ಹುಡುಗಿಯನ್ನು ನೋಡಿದ್ದೇನೆ. ನಮ್ಮ ನೆರೆಯವರ ಹಿರಿಯ ಮಗಳಾಕೆ. ಅವಳು ಸರಿಯಾದ ರೀತಿಯಲ್ಲಿ ಕ್ರಿಶ್ಚಿಯನ್ ಆಗಿ ಬೆಳೆದಿದ್ದಾಳೆ. ಕೆಲವು ವರ್ಷಗಳ ಹಿಂದೆ ಅವಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದಾಗ ಅವಳ ತಂದೆ (ಸರಿಯಾದ ನಿರ್ಧಾರವುಳ್ಳ ಮನುಷ್ಯ) ಅವಳನ್ನು ಪಾದ್ರಿಯೊಬ್ಬರ ಮನೆಯಲ್ಲಿರಿಸಿ ಗೃಹಿಣಿಯಾಗಬೇಕಾದ ಎಲ್ಲಾ ತರಬೇತಿಯನ್ನು ಕೊಡಿಸಿದ್ದಾರೆ. ಅವಳ ಭಾನುವಾರದ ಶಾಲೆಯ ಶಿಕ್ಷಕರು ಅವಳು ಬೈಬಲನ್ನು ನಿರರ್ಗಳವಾಗಿ ಓದುತ್ತಾಳೆ ಎಂದು ನನಗೆ ಹೇಳಿದ್ದಾರೆ. ನೀನು ಡಿಸೆಂಬರ್‌ಗೆ ಬಂದಾಗ ಮದುವೆಯ ಮಾತುಕತೆಯನ್ನು ಆಡಬಹುದೆಂದು ಭಾವಿಸುತ್ತೇನೆ.
ಲಾಗೋಸ್‌ನಿಂದ ಬಂದ ಎರಡನೇ ದಿನದ ಸಂಜೆ ಎಮೇಕಾ ತನ್ನ ತಂದೆಯೊಡನೆ ಒಂದು ಮರದ ಕೆಳಗೆ ಕುಳಿತ. ಅದು ಅವರ ತಂದೆ ವಿಶ್ರಮಿಸುವ ಸ್ಥಳ. ಚರುಗುಡುವ ಸೂರ‍್ಯ ಅಸ್ತಮಿಸಿ, ತಂಗಾಳಿ ಬೀಸುವ ಸಮಯಕ್ಕೆ ಅವರಲ್ಲಿ ಬೈಬಲ್ ಓದಲು ತೊಡಗುತ್ತಿದ್ದರು.
ಅಪ್ಪಾ, ನಾನು ನಿಮ್ಮಲ್ಲಿ ಕ್ಷಮೆಯಾಚಿಸಲು ಬಂದಿದ್ದೇನೆ ಎಂದು ಮೌನಮುರಿದ ಎಮೇಕಾ.
ಕ್ಷಮೆ!? ಯಾವುದಕ್ಕೆ ಮಗನೇ!? ಆಶ್ಚರ್ಯದಿಂದ ನುಡಿದ.
ಇದು ಈ ಮದುವೆಯ ಕುರಿತ ಪ್ರಶ್ನೆ
ಯಾವ ಮದುವೆಯ ಪ್ರಶ್ನೆ?
ನನಗಾಗೊಲ್ಲ...ನಾವು ಖಂಡಿತಾ...ನಾ ಹೇಳುವುದೆನೇಂದೆರೆ ನಮ್ಮ ನೆರೆಯವನ ಮಗಳನ್ನು ಮದುವೆಯಾಗಲು ಸಾಧ್ಯವಿಲ್ಲ.
ಸಾಧ್ಯವಿಲ್ಲ? ಯಾಕೆ? ತಂದೆ ಕೇಳಿದ.
ನನಗವಳಲ್ಲ ಮೇಲೆ ಪ್ರೀತಿ ಇಲ್ಲ.
ನೀ ಪ್ರೀತಿಸು ಎಂದು ಯಾರೂ ನಿನಗೆ ಹೇಳಿಲ್ಲವಲ್ಲ. ನಿನ್ಯಾಕೆ ಪ್ರೀತಿಸಬೇಕು?
ಮದುವೆ ಇಂದು ಬದಲಾಗಿದೆ
ನೋಡು ಮಗನೇ, ಯಾವುದೂ ಬದಲಾಗಿಲ್ಲ. ಒಬ್ಬಳು ಗೃಹಿಣಿಗೆ ಬೇಕಾದದ್ದು ಸನ್ನಡತೆ ಮತ್ತು ಕ್ರಿಶ್ಚಿಯನ್  ಸಂಸ್ಕಾರ, ಮಗನ ಮಾತನ್ನು ತಡೆದು ನುಡಿದ.
ಅದಾಗ ಎಮೇಕಾನಿಗೆ ತಂದೆಯೊಡನೆ ವಾದಿಸುವುದರಲ್ಲಿ ಯಾವುದೇ ಭರವಸೆ ಕಾಣಲಿಲ್ಲ.
ಅಷ್ಟಕ್ಕೂ, ನೀವು ನೋಡಿರುವ ಹುಡುಗಿಯ ಎಲ್ಲಾ ಗುಣಗಳನ್ನು ಹೊಂದಿರುವ ಒಂದು ಹುಡುಗಿಯನ್ನು ಇಷ್ಟಪಟ್ಟಿದ್ದೇನೆ ಮತ್ತು ಅವಳು...
ಅವನ ತಂದೆಗೆ ತನ್ನ ಕಿವಿಗಳನ್ನು ತಾನೇ ನಂಬಲಾಗಲಿಲ್ಲ. ನೀ ಏನು ಹೇಳ್ತಾ ಇದ್ದೀಯಾ? ಗಲಿಬಿಲಿಯಿಂದ ಕೇಳಿದ.
ಅವಳು ಒಳ್ಳೆಯ ಕ್ರಿಶ್ಚಿಯನ್ನು, ಮುಂದುವರೆಯುತ್ತಾ ಹೇಳಿದ, ಮತ್ತು ಲಾಗೋಸ್‌ನ ಬಾಲಕಿಯರ ಶಾಲೆಯಲ್ಲಿ ಶಿಕ್ಷಕಿಯಾಗಿದ್ದಾಳೆ.
ಶಿಕ್ಷಕಿ...!? ಅದು ಉತ್ತಮ ಗೃಹಿಣಿಯಾಗಲು ಅರ್ಹತೆಯಾದರೆ, ನಿನಗೊಂದು ವಿಷಯ ಹೇಳುತ್ತೇನೆ ಕೇಳು, ಕ್ರಿಶ್ಚಿಯನ್ ಮಹಿಳೆ ಪಾಠ ಮಾಡಬಾರದು. ಸಂತ ಪೌಲ್ ತನ್ನದೊಂದು ಪತ್ರದಲ್ಲಿ ಮಹಿಳೆಯರು ಮೌನವಾಗಿರಬೇಕು ಎಂದು ಹೇಳಿದ್ದಾರೆ, ಎಂದು ಹೇಳಿ ನಿಧಾನವಾಗಿ ಮೇಲೆದ್ದು ಹಿಂದಕ್ಕೆ ಮುಂದಕ್ಕೆ ಓಡಾಡತೊಡಗಿದ. ಇದು ಅವನಿಗೆ ಬಹಳ ಇಷ್ಟದ ವಿಚಾರ, ಚರ್ಚುಗಳಲ್ಲಿ ಮಹಿಳೆಯರು ಪಾಠ ಮಾಡುವುದನ್ನು ಪ್ರೋತ್ಸಾಹಿಸುವುದನ್ನು ಉಗ್ರವಾಗಿ ವಿರೋಧಿಸುತ್ತಿದ್ದ. ಸ್ವಲ್ಪ ಸಮಾಧಾನಗೊಂಡ ಬಳಿಕ ಮಗನ ನಿಶ್ಚಿತಾರ್ಥದ ವಿಷಯಕ್ಕೆ ಮರಳಿದ.
ಹೋಗಲಿ, ಅವಳು ಯಾರ ಮಗಳು?, ಮೆದುವಾಗಿ ಕೇಳಿದ.
ಅವಳು...ನೇನೆ ಅತಂಗ್.
ಏನು!?, ಮರಳಿದ್ದ ಮೆದುಭಾವ ಅಲ್ಲಿರಲಿಲ್ಲ. ನೀ ಹೇಳುವುದು ನೇನೆ ಅತಾಗ. ಅಂದರೆ ಏನು?
ಕ್ಯಾಲಬಾರ್‌ನ ನೇನೆ ಅತಂಗ. ನಾ ಮದುವೆಯಾಗುವುದಾದರೆ ಅವಳನ್ನು ಮಾತ್ರ.
ಈ ಕಡು ಉತ್ತರದಿಂದ ಎಮೇಕಾ ತನ್ನ ತಂದೆ ಸಿಡಿಯಲಿದ್ದಾರೆ ಎಂದು ಎಣಿಸಿದ್ದ. ಆದರೆ, ಅದಾಗಲಿಲ್ಲ. ಅವನ ತಂದೆ ಸುಮ್ಮನೆ ತನ್ನ ಕೊಠಡಿಗೆ ತೆರಳಿದ. ಇದು ಅನಿರೀಕ್ಷಿತವಾಗಿತ್ತು ಮತ್ತು ಎಮೇಕಾನನ್ನು ಗಾಬರಿಪಡಿಸಿತು. ಅವನ ತಂದೆಯ ಮೌನ ಮಾತಿಗಿಂತ ಹರಿತವಾಗಿ ಇರಿದಿತ್ತು. ಆ ರಾತ್ರಿ ಅವನ ತಂದೆ ಊಟವನ್ನು ಮಾಡಲಿಲ್ಲ.
ಮರುದಿನ ಎಮೇಕಾನನ್ನು ಕಳುಹಿಸುವ ಮುನ್ನ ಮಗನ ಮನವೊಲಿಸುವ ಎಲ್ಲಾ ಪ್ರಯತ್ನವನ್ನು ತಂದೆ ಮಾಡಿದ. ಮಗನ ನಿರ್ಧಾರ ಖಚಿತವಾದದ್ದು ಎಂದರಿತ ಮೇಲೆ ಸುಮ್ಮನಾಗಿಬಿಟ್ಟ.
ತಿಳಿದಿರು ಮಗನೇ, ನಿನಗೆ ಸರಿ ತಪ್ಪು ಯಾವುದೆಂದು ಹೇಳುವುದು ನನ್ನ ಕರ್ತವ್ಯವೆಂದು ಹೇಳಿದೆ. ನಿನ್ನ ತಲೆಗೆ ಈ ವಿಷಯವನ್ನು ಯಾರು ತುಂಬಿದರೋ ಅವರು ನಿನ್ನ ಕುತ್ತಿಗೆಯನ್ನು ಸೀಳಿದ್ದರೆ ಚೆನ್ನಾಗಿತ್ತು. ಇದು ಸೈತಾನನ ಕೆಲಸವೇ ಸರಿ ಎಂದು ಹೇಳುತ್ತಾ ಮಗನೆಡೆಗೆ ಕೈ ಬೀಸಿದ.
ನೀವು ನೇನೆಯ ಬಗ್ಗೆ ತಿಳಿದರೆ, ನಿಮ್ಮ ನಿರ್ಧಾರವನ್ನು ಬದಲಿಸುತ್ತೀರಾ ಅಪ್ಪ.
ನಾನವಳನ್ನು ಎಂದೂ ನೋಡುವುದಿಲ್ಲ ಎಂಬ ಉತ್ತರ ಬಂದಿತು.
ಆ ರಾತ್ರಿಯಿಂದ ಮಗನೊಡನೆ ಮಾತು ಅಪರೂಪವಾಯಿತು. ತನ್ನ ಮಗನು ತನ್ನ ನಿರ್ಧಾರದಿಂದ ಆಗಬಹುದಾದ ಅಪಾಯಗಳು ಅವನಿಗೆ ಅರ್ಥವಾಗಬಹುದೆಂಬ ಭರವಸೆಯಿತ್ತು. ಹಗಲು, ರಾತ್ರಿ ಮಗನ ಒಳಿತಿಗಾಗಿ ಪ್ರಾರ್ಥಿಸತೊಡಗಿದ.
ಎಮೇಕಾ ತನ್ನ ತಂದೆಯ ದುಃಖದಿಂದ ಬಹಳ ನೊಂದುಕೊಂಡ. ಈ ಕೆಟ್ಟ ಸಮಯ ಕಳೆದು ಹೋಗುತ್ತದೆಯೆಂಬ ಆಶಾಭಾವ ಹೊಂದಿದ್ದ. ಇತಿಹಾಸದಲ್ಲೇ ಯಾರೂ ಈ ರೀತಿ ಮದುವೆಯಾಗಿಲ್ಲವಾಗಿದ್ದರೆ ಅವನಿಗೆ ಇಷ್ಟು ಭರವಸೆ ಉಳಿಯುತ್ತಿರಲಿಲ್ಲ.
ಯಾವತ್ತೂ ಇದನ್ನು ಕೇಳಿರಲಿಲ್ಲ, ಎಂಬ ಒಂದೇ ಸಾಲಿನ ಪತ್ರ ಕೆಲವು ವಾರಗಳ ನಂತರ ಬಂದಿತು. ಅದರಲ್ಲಿ ತನ್ನೆಲ್ಲಾ ಜನರ ಪರವಾಗಿ ಆತ ಹೇಳಿದಂತಿತ್ತು.
ಒಕೋಕೆಯ ಪರವಾಗಿ ಅನುಕಂಪದಿಂದ ಮಾತನಾಡಲು ಈತನ ಮಗನ ವಿಷಯ ತಿಳಿದ ಹಲವರು ಬಂದರು. ಆ ಸಮಯದಲ್ಲಿ ಮಗನು ಲಾಗೋಸ್‌ಗೆ ಹಿಂತಿರುಗಿದ್ದ.
ಯಾವತ್ತೂ ಇದನ್ನು ಕೇಳಿರಲಿಲ್ಲ ದುಃಖದಿಂದ ತಲೆಯಾಡಿಸುತ್ತಾ ಮುದುಕ ನುಡಿದ.
ನಮ್ಮ ದೇವರು ಏನನ್ನು ಹೇಳುತ್ತಾರೆ? ಮತ್ತೊಬ್ಬ ಜಂಟಲ್‌ಮ್ಯಾನ್ ನುಡಿದ.
ಮಕ್ಕಳು ತಂದೆಯ ವಿರುದ್ಧ ನಿಲ್ಲುತ್ತಾರೆ; ಎಂದು ಹೋಲಿ ಪುಸ್ತಕದಲ್ಲಿದೆ.
ಇದು ಮುಕ್ತಾಯದ ಆರಂಭ! ಮತ್ತೊಬ್ಬ ನುಡಿದ.
ಈ ರೀತಿ ನಡೆಯುತ್ತಿದ್ದ ಚರ್ಚೆ ವೇಂದಾತದತ್ತ (ಥಿಯಾಲಜಿ) ಹೊರಳಿತು. ಒಬ್ಬ ಪಕ್ಕಾ ಪ್ರಾಕ್ಟಿಕಲ್ ಮನುಷ್ಯ, ಚರ್ಚೆಯನ್ನು ಸರಳೀಕರಣಗೊಳಿಸಲು ತೊಡಗಿದ.
ನೀನು ಯಾರಾದರೂ ಸ್ಥಳೀಯ ವೈದ್ಯರನ್ನು ಭೇಟಿಮಾಡಬೇಕಿತ್ತು ಎಂದು ಎಮೇಕಾನ ತಂದೆಗೆ ಸೂಚಿಸಿದ.
ಅವನೇನೂ ಅನಾರೋಗಿಯಲ್ಲ ಎಂಬ ಉತ್ತರ ಬಂತು.
ಮತ್ತಿನೇನು? ಅವನ ತಲೆ ಕೆಟ್ಟಿದೆಯಷ್ಟೆ. ಇದನ್ನು ಒಬ್ಬ ಒಳ್ಳೆಯ ಗಿಡಮೂಲಿಕೆಯ ತಜ್ಞನೊಬ್ಬ ಸರಿದಾರಿಗೆ ತರಬಹುದು. ಅವನಿಗೆ ಅಮಲೈನ್ ಎಂಬ ಔಷಧಿಯ ಅಗತ್ಯವಿದೆ. ಹಾದಿ ಬಿಡುವ ಗಂಡನನ್ನು ತನ್ನ ಹತೋಟಿಯಲ್ಲಿಟ್ಟು ಕೊಳ್ಳಲು ಹೆಣ್ಣು ಇದನ್ನು ಸರಿಯಾಗಿ ಬಳಸುತ್ತಾಳೆ.
ಅವನು ಹೇಳಿದ್ದು ಸರಿ, ಮತ್ತೊಬ್ಬ ನುಡಿದು, ಮುಂದುವರಿಯುತ್ತಾ ಇದಕ್ಕೆ ಖಂಡಿತಾ ಮದ್ದಿನ ಅಗತ್ಯವಿದೆ ಎಂದನು.
ನಾ ಯಾವುದೇ ಸ್ಥಳೀಯ ವೈದ್ಯರನ್ನು ಭೇಟಿಯಾಗುವುದಿಲ್ಲ, ಎಮೇಕಾನ ತಂದೆ ತನ್ನ ಮೌಢ್ಯ ನೆರೆಯಯವರಿಗಿಂತ ಮುಂದಿದ್ದು, ಇವರ ಮಾತಿಗೆಲ್ಲಾ ಜಗ್ಗದವನಾಗಿದ್ದ. ನಾನು ಮತ್ತೊಬ್ಬ ಶ್ರೀಮತಿ ಒಚುಬನಾಗಲಾರೆ. ನನ್ನ ಮಗ ತನ್ನಷ್ಟಕ್ಕೆ ತನ್ನನ್ನು ಕೊಂದುಕೊಳ್ಳುತ್ತಾನೆಂದರೆ, ಕೊಂದು ಕೊಳ್ಳಲಿ. ನಾ ಅವನಿಗೆ ಸಹಾಯ ಮಾಡುವುದಿಲ್ಲ.
ಇದು ಅವಳ ತಪ್ಪು, ಮದುಗ್ವು ನುಡಿದ. ಅವಳು ಯಾವನೋ ವೈದ್ಯನನ್ನು ಸಂರ್ಪಕಿಸಿದ್ದಾಳೆ. ಬಹುಷಃ ಮೋಸದ ಹೆಂಗಸಿರಬೇಕು.
ಅವಳು ಕೊಲೆಪಾತಕಿಯೇ ಸರಿ, ಅಪರೂಪಕ್ಕೊಮ್ಮೆ ಕಾರಣವಿಲ್ಲದೆ ವಾದಿಸುತ್ತಾರೆ ಎಂದು ತನ್ನ ನೆರೆಯವರಿಗೆ ಹಂಗಿಸುತ್ತಿದ್ದ ಜೋನಾಥಾನ್ ಎಂಬುವವನು ನುಡಿದ, ಅವಳ ಗಂಡನಿಗಾಗಿಯೇ ಔಷಧಿಯನ್ನು ತಯಾರಿಸುತ್ತಾರೆ. ಅದನ್ನು ತಯಾರು ಮಾಡುವಾಗ ಆತನ ಹೆಸರನ್ನು ಹೇಳುವುದರಿಂದ ಅದು ಫಲಕಾರಿಯಾಗಿರುತ್ತದೆ. ಅದನ್ನು ಆಹಾರದಲ್ಲಿ ಸೇರಿಸಿ ನೀಡಲಾಗಿರುತ್ತದೆ.
ಆರು ತಿಂಗಳ ನಂತರ, ಎಮೇಕಾ ತನ್ನ ಹೆಂಡತಿಗೆ ತಂದೆಯಿಂದ ಬಂದ ಒಂದು ಸಣ್ಣ ಪತ್ರವನ್ನು ತೋರಿಸುತ್ತಿದ್ದ:
ನಿನ್ನ ಮದುವೆಯ ಪೋಟೋವನ್ನು ಕಳುಹಿಸಲು ನಿನಗೆ ಮನಸ್ಸು ಬಂದದ್ದು ನನ್ನನ್ನು ಆಶ್ಚರ್ಯಚಕಿತನನ್ನಾಗಿಸಿದೆ. ನಾ ಅದನ್ನು ವಾಪಸ್ಸು ಕಳುಹಿಸಬಹುದಿತ್ತು. ಆದರೆ, ಮತ್ತೊಮ್ಮೆ ಯೋಚಿಸಿ ನಿನ್ನ ಹೆಂಡತಿಯನ್ನು ಕತ್ತರಿಸಿ ನಿನಗೇ ವಾಪಸ್ಸು ಕಳುಹಿಸುತ್ತಿದ್ದೇನೆ. ಏಕೆಂದರೆ, ಅವಳಿಗೂ ನನಗೂ ಯಾವುದೇ ಸಂಬಂಧವಿಲ್ಲ. ನಿನ್ನೊಂದಿಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಲು ನನಗೆ ಮನಸ್ಸಾದರೂ ಹೇಗೆ ಬಂದೀತು.
ಪತ್ರವನ್ನೊದಿದ ನೇನೆ ಕತ್ತರಿಸದ್ದ ತನ್ನ ಪೋಟೋವನ್ನು ನೋಡಿ ಕಣ್ಣಲ್ಲಿ ನೀರು ತುಂಬಿಕೊಂಡಳು. ಮತ್ತು ಅಳುವುದಕ್ಕೆ ಶುರುಮಾಡಿದಳು.
ಅಳಬೇಡ ಪ್ರಿಯತಮೆ, ಎಂದು ಗಂಡ ಸಮಾಧಾನ ಮಾಡಲು ಯತ್ನಿಸಿದ, ಅವನು ಸ್ವಭಾವತಃ ಒಳ್ಳೆಯ ಮನುಷ್ಯ. ಒಂದಲ್ಲ ಒಂದು ದಿನ ನಮ್ಮ ಮದುವೆಯನ್ನು ಒಪ್ಪಿಯೇ ಒಪ್ಪುತ್ತಾನೆ.
ಹಲವು ವರ್ಷಗಳು ಕಳೆದರೂ ಆ ದಿನ ಬರಲೇ ಇಲ್ಲ.
ಎಂಟು ವರ್ಷಗಳು, ಒಕೋಕೆ ಮತ್ತು ಎಮೇಕಾನ ನಡುವೆ ಯಾವ ಚರ್ಚೆಯೂ ನಡೆಯಲಿಲ್ಲ. ಮೂರು ಬಾರಿ ಮಾತ್ರ, ಅದೂ ಎಮೇಕಾ ತನ್ನ ರಜೆಯನ್ನು ಕಳೆಯಲು ಊರಿಗೆ ಬರಲು ಕೇಳಲು ಬರೆದಿದ್ದನು.
ನಿನ್ನನ್ನು ನನ್ನ ಮನೆಯಲ್ಲಿ ಸೇರಿಸುವುದಿಲ್ಲ, ಒಮ್ಮೆ ತಂದೆ ಪ್ರತಿಕ್ರಿಯಿಸಿ ಬರೆದಿದ್ದ, ನೀನು ನಿನ್ನ ರಜೆಯನ್ನು ಅಥವಾ ಜೀವನವನ್ನು ಎಲ್ಲಿ ಮತ್ತು ಹೇಗೆ ಕಳೆಯುತ್ತೀಯಾ ಎಂಬುದರ ಬಗ್ಗೆ ನನಗೆ ಯಾವ ಆಸಕ್ತಿಯೂ ಇಲ್ಲ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದ್ದ.
ಎಮೇಕಾನ ಮದುವೆಯ ಬಗ್ಗೆ ಆತನ ಹಳ್ಳಿಯಲ್ಲಷ್ಟೇ ಪೂರ್ವಾಗ್ರಹಪೀಡಿತರಿರಲಿಲ್ಲ. ಲಾಗೋಸ್‌ನಲ್ಲೂ ಕೆಲಸಮಾಡುತ್ತಿದ್ದ ಎಮೇಕಾನ ಕುಲದವರು ತಾರತಮ್ಯ ತೋರುತ್ತಿದ್ದರು. ಎಮೇಕಾನ ಕುಲದ ಹೆಂಗಸರು ತಮ್ಮ ಹಳ್ಳಿ ಜನರ ಸಭೆ ಸೇರಿದಾಗ ನೇನೆಯನ್ನು ದ್ವೇಷಿಸದಿದ್ದರೂ, ಅವಳನ್ನು ಬಹಳ ಗೌರವ ಮನೋಭಾವದಿಂದ ನೋಡುವ ಮೂಲಕ ಅವಳು ತಮ್ಮವಳಲ್ಲ ಎಂಬುದನ್ನು ವ್ಯಕ್ತಪಡಿಸುತ್ತಿದ್ದರು. ಆದರೆ, ಸಮಯ ಕಳೆದಂತೆ ನೇನೆ ಅವರಲ್ಲೂ ಗೆಳತಿಯರನ್ನು ಸಂಪಾದಿಸುವ ಮೂಲಕ ಅವರೊಳಗೊಬ್ಬಳಾಗಿ ಅವರ ಮನಗೆದ್ದಳು. ಸ್ವಲ್ಪ ತಡವಾಗಿಯಾದರೂ ಅವರು ನೇನೆ ತಮಗಿಂತಲೂ ತನ್ನ ಮನೆಯನ್ನು ಅಚ್ಚ್ಚುಕಟ್ಟಾಗಿಯೇ ಇಟ್ಟುಕೊಳ್ಳುತ್ತಾಳೆ ಎಂದು ಹೊಟ್ಟೆಕಿಚ್ಚಿನಿಂದಲೇ ಒಪ್ಪಿಕೊಳ್ಳತೊಡಗಿದರು.
ನಿಧಾನವಾಗಿ ಇಬೋ ಪ್ರದೇಶದ ಹೃದಯ ಭಾಗದಲ್ಲಿದ್ದ ಎಮೇಕಾನ ಹಳ್ಳಿಗೆ ಇವರಿಬ್ಬರೂ ಸಂತೋಷದಿಂದ ವಾಸಿಸುತ್ತಿರುವ ವಿಷಯ ತಿಳಿಯಿತು. ವಿಷಯ ತಿಳಿಯದಿದ್ದ ಕೆಲವೇ ಜನರಲ್ಲಿ ಎಮೇಕಾನ ತಂದೆಯೂ ಸೇರಿದ್ದ. ತನ್ನ ಮಗನ ಹೆಸರನ್ನು ಹೇಳಿದರೆ ಉರಿದುಬೀಳುತ್ತಿದ್ದದನ್ನು ಕಂಡು, ಯಾರೂ ಎಮೇಕಾನ ಹೆಸರನ್ನು ಅವನ ಬಳಿ ಎತ್ತುತ್ತಿರಲಿಲ್ಲ. ತನ್ನ ಮನಃಶಕ್ತಿಯಿಂದ ಮಗನನ್ನು ಮನದ ಮೂಲೆಗೆ ಸೇರಿಸಲು ಸಫಲನಾಗಿದ್ದ. ಆ ನೋವು ಆತನಿಗೆ ಮಾರಣಾಂತಿಕವಾಗಿತ್ತು. ಆದರೂ ಅವನು ಗೆದ್ದಿದ್ದ.
ಒಂದು ದಿನ ನೇನೆಯಿಂದ ಬಂದ ಪತ್ರವನ್ನು ಕಾಟಾಚಾರಕ್ಕೆ ಓದಲು ಶುರುಮಾಡಿದವನ ಮುಖದ ಭಾವನೆಗಳು ಬದಲಾಗತೊಡಗಿದವು ಮತ್ತು ಇದೀಗ ಗಮನವಿಟ್ಟು ಓದತೊಡಗಿದ,
...ನಮ್ಮಿಬ್ಬರು ಮಕ್ಕಳು ತಮಗೆ ತಾತ ಇದ್ದಾರೆ ಎಂದು ತಿಳಿದ ದಿನದಿಂದ ನಿಮ್ಮಲಿಗೆ ಕರೆದುಕೊಂಡು ಹೋಗಬೇಕೆಂದು ಪೀಡಿಸುತ್ತಿದ್ದಾರೆ. ನೀವು ಅವರನ್ನು ನೋಡಲು ಇಷ್ಟಪಡುವುದಿಲ್ಲವೆಂದು ಹೇಳಲು ನನಗೆ ಮನಸ್ಸಾಗುತ್ತಿಲ್ಲ. ಮುಂದಿನ ತಿಂಗಳ ರಜೆಯಲ್ಲಿ ಅವರನ್ನು ನಿಮ್ಮಲಿಗೆ ಕರೆದುಕೊಂಡು ಬರಲು ಎಮೇಕಾಗೆ ಅವಕಾಶ ನೀಡಿ ಎಂದು ತಮ್ಮಲ್ಲಿ ವಿನಂತಿಸುತ್ತೇನೆ. ನಾನು ಲಾಗೋಸ್‌ನಲ್ಲೇ ಉಳಿಯುತ್ತೇನೆ...
ಆತನಿಗೆ ಒಂದು ಕ್ಷಣ ಇಷ್ಟು ವರ್ಷಗಳ ತನ್ನ ನಿರ್ಧಾರ ಸಡಿಲವಾದಂತೆ ತೋರಿತು. ತನ್ನಷ್ಟಕ್ಕೆ ತಾನು ಸೋಲಬಾರದು ಎಂದು ಕೊಂಡ. ಎಲ್ಲಾ ಭಾವನೆಗಳನ್ನು ತಡೆಯಲು ಯತ್ನಿಸಿದ. ಮತ್ತೊಂದು ಸಂಘರ್ಷ ಅವನಿಗೆದುರಾಯಿತು. ಕಿಟಕಿಗೆ ಆತುಕೊಂಡು ಹೊರಗೆ ನೋಡತೊಡಗಿದ. ಆಕಾಶದಲ್ಲಿ ಕಾರ್ಮೋಡ ಕವಿದು, ಜೋರಾದ ಗಾಳಿ ಒಣಗಿದ ಎಲೆಗಳು ಮತ್ತು ಧೂಳಿಂದ ಕೂಡಿತು. ಮಾನವನ ಸಂಘರ್ಷದಲ್ಲಿ ಪ್ರಕೃತಿಯೂ ಕೈ ಜೋಡಿಸಿದ ಒಂದು ಅಪೂರ್ವ ಕ್ಷಣವದು. ಕ್ಷಣಕಾಲದಲ್ಲಿ ಶುರುವಾದ ಮಳೆ, ವರ್ಷದ ಮೊದಲ ಮಳೆಯಾಗಿತ್ತು. ದಪ್ಪ ದಪ್ಪ ಮೊನಚಾದ ಹನಿಗಳು ಮಿಂಚು, ಗುಡುಗಿನೊಂದಿಗೆ ಮಳೆಗಾಲ ಆರಂಭವಾದದ್ದನ್ನು ತಿಳಿಯಲೆತ್ನಿಸುತ್ತಿದ್ದವು. ತನ್ನಿಬ್ಬರು ಮೊಮ್ಮಕ್ಕಳನ್ನು ನೆನೆಯದಿರಲು ಒಕೋಕೆ ಪ್ರಯತ್ನಿಸುತ್ತಿದ್ದ. ಆದರೆ, ಈ ಬಾರಿಯ ಸಂಘರ್ಷದಲ್ಲಿ ತನಗೆ ಸೋಲು ಎಂಬುದು ಅವನಿಗೆ ಅರಿವಾಗತೊಡಗಿತ್ತು. ತನಗಿಷ್ಟವಾದ ದೇವರ ಸ್ತ್ರೋತ್ರವನ್ನು ಗುನುಗಲು ಆರಂಭಿಸಿದ. ಆದರದು ಮಳೆಯ ಚಟಪಟ ಸದ್ದಿನಲ್ಲಿ ಲೀನವಾಯಿತು. ತತ್‌ಕ್ಷಣ ಆತನ ಮನಸ್ಸು ಮೊಮ್ಮಕ್ಕಳೆಡೆಗೆ ಹರಿಯಿತು. ಅವರಿಗೆ ತನ್ನ ಮನೆಯ ಬಾಗಿಲನ್ನು ಹೇಗೆ ತಾನೇ ಮುಚ್ಚಾನು? ಕುತೂಹಲಭರಿತ ಅವನ ಮನಸ್ಸ್ಸಿನಲ್ಲಿ ಆ ಮಕ್ಕಳು ದುಃಖಭರಿತರಾಗಿ ಭೀಕರ ಮಳೆಯಲ್ಲಿ ತನ್ನ ಮನೆಯ ಹೊರಗೆ ಅನಾಥವಾಗಿ ನಿಂತಿರುವುದನ್ನು ಕಲ್ಪಿಸಿಕೊಂಡ.
ಪಶ್ಚಾತ್ತಾಪದಿಂದ ಮತ್ತು ಅವರನ್ನು ಸೇರದೆ ಸಾಯುತ್ತೇನೆಂಬ ಅನಿಶ್ಚಿತ ಭಯದಿಂದ, ಅವನಿಗೆ ಆ ರಾತ್ರಿ ನಿದ್ದೆ ಬರಲಿಲ್ಲ.
...
ಅಬ್ಬಾ ಮುಗೀತು... ಎಂದು ನಿಟ್ಟುಸಿರುಬಿಟ್ಟವಳೇ, ಅಲ್ಲಿದ್ದ ನೀರಿನ ಬಾಟಲಿಯನ್ನು ಎತ್ತಿಕೊಂಡು ಗಟಗಟ ಕುಡಿಯತೊಡಗಿದಳು.
ಅವಳು ಮುಗಿಸುವ ಕ್ಷಣಕ್ಕಾಗಿ ಕಾದಿದ್ದ ನಾನು ಅದನ್ನು ಕಿತ್ತುಕೊಂಡು ಉಳಿದ ನೀರನ್ನು ಒಂದೇ ಸಲಕ್ಕೆ ಕುಡಿದು, ಏನು ನೀನು ಕತೆ ಹೇಳ್ತೀನಿ ಅಂತಾ ಪುರಾಣ ಹೇಳ್ದಲ್ಲ ಎಂದೆ.
ಇದು ಪುರಾಣನ? ನಮ್ದೂ ಇದೇ ಕತೆ ಆಗುತ್ತೇನೋ...?
ಇದು ಮುಕ್ತಾಯದ ಆರಂಭ!
ಬಹುಷಃ...ಹೌದು. ಅದಕ್ಕೆ ನಾ ತಾಳ್ಮೆಯಿಂದ ಕತೆ ಕೇಳ್ತಾ ಕೂತಿದ್ದೆ. ಈಗಲಿಂದಲೇ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದಲ್ಲವೇ?
ನೋಡೋಣ...ಕಾಲಾಯ ತಸ್ಮೈ ನಮಃ ಎಂದು ಒಲ್ಲದ ಮನಸ್ಸಿನಿಂದಲೇ ನಾವಿಬ್ಬರೂ ನಿರ್ಗಮಿಸಿದೆವು.

(ಸ್ನೇಹ ಮಾಡಬೇಕಿಂಥವಳ... ಸಂಕಲದಿಂದ. ಅನುವಾದಿತ ಕತೆ ಈ ಹಿಂದೆ ಉದಯವಾಣಿಯಲ್ಲಿ ಪ್ರಕಟವಾಗಿತ್ತು.)




ಬುಧವಾರ, ಮೇ 1, 2013

ನಲ್ಲನಲ್ಲೆಯರ ಮೊದಲ ಅಕ್ಷರ ಜಾತ್ರೆ


        ಮೊದಲಿಗೆ ನಾನು ಹತ್ತಿರದಿಂದ ನೋಡಿದ ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ತುಮಕೂರಿನಲ್ಲಿ ಜರುಗಿದ್ದು. ಆಗ ನಾನು ಗೆಳೆಯ ವಿಶುವಿನ ಜೊತೆ ತುಮಕೂರಿಗೆ ಬಂದಿದ್ದೆ. ಅಂದು ಚುಟುಕು ಕವಿಗೋಷ್ಠಿಯಿತ್ತು. ನಾವು ಬರುವ ಹೊತ್ತಿಗೆ ಸರಿಯಾಗಿ ಡುಂಢಿರಾಜರು ರಾವಣನ ಹೆಂಡತಿ ಮಂಡೋದರಿ, ಕನ್ನಡ ಪುಸ್ತಕಗಳನ್ನು ಕೊಂಡೋದಿರಿ ಎಂದು ತಮ್ಮ ಚುಟುಕವನ್ನು ವಾಚಿಸಿದ ಕೂಡಲೇ ಕಿವಿಗಡಚಿಕ್ಕುವಂತೆ ಚಪ್ಪಾಳೆಯ ಸುರಿಮಳೆಯಾಯಿತು. ನಂತರ ಬಹಳ ಜನವಿದ್ದುದರಿಂದಲೋ ಏನೋ ನಮಗಲ್ಲಿ ಬಹಳ ಹೊತ್ತು ನಿಲ್ಲಲಾಗದೆ ನಾವು ಬೇಗ ಹೊರಬಂದೆವು ಎಂಬುದು ನೆನಪು. ಊಟಕ್ಕೆ ತುಂಬಾ ಗಜಿಬಿಜಿಯಿತ್ತು ಮತ್ತು ಪುಸ್ತಕ ಮಾರಾಟ ಮಳಿಗೆಗಳ ಬಳಿ ಬಹಳ ಧೂಳಿತ್ತು ಎಂಬ ಅಸ್ಪಷ್ಟ ನೆನಪು. ಆ ಸಮಯದಲ್ಲಿ ಗುಬ್ಬಿಯ ನಮ್ಮ ರಾಮನ್ ಇನ್‌ಫೋಟೆಕ್ ಕಂಪ್ಯೂಟರ್ ತರಬೇತಿ ಸಂಸ್ಥೆಯಿಂದ ಜ್ಞಾನಪೀಠ ಪ್ರಶಸ್ತಿ ವೀಜೆತ ಕನ್ನಡ ಸಾಹಿತಿಗಳ ಬದುಕು ಬರಹದ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಏರ್ಪಡಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಶೋ ನೀಡಿದ್ದೆವು. ಅದೆಲ್ಲವನ್ನು ವಿದ್ಯಾರ್ಥಿಯಾಗಿದ್ದ ಕೇಶವಮೂರ್ತಿ ಎಂಬುವವರು   ಅಚ್ಚುಕಟ್ಟಾಗಿ ನಿಭಾಯಿಸಿದ್ದರು.   ಅವರೀಗ ಶಿಕ್ಷಕರಾಗಿದ್ದಾರೆ.
          ಸುಮಾರು ದಶಕದ ನಂತರ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಮಯಕ್ಕೆ ನನ್ನ ಮೊದಲ ಪುಸ್ತಕ ಮಳೆಯಾಗು ನೀ... ಪ್ರಕಟವಾಗಿತ್ತು. ಒಂದೇ ಪುಸ್ತಕ ವಿದ್ದದರಿಂದ ಪುಸ್ತಕ ಮಾರಾಟ ಮಳಿಗೆ ಹಾಕುವ ಗೋಜಿಗೆ ಹೋಗಿರಲಿಲ್ಲ. ಮೊದಲ ದಿನವೇ ನಾನು ಬೆಂಗಳೂರಿಗೆ ತೆರಳಿ ನನ್ನ ಕೆಲವು ಕೆಲಸಗಳನ್ನು ಮುಗಿಸಿಕೊಂಡು ಮಧ್ಯಾಹ್ನದ ಸಮಯಕ್ಕೆ ಸಮ್ಮೇಳನದ ಜಾಗಕ್ಕೆ ಭೇಟಿನೀಡಿದ್ದೆ. ಅಲ್ಲೆಲ್ಲಾ ಕೆಲಹೊತ್ತು ಸುತ್ತಾಡಿ ಹುಬ್ಬಳ್ಳಿಯ ಗೆಳೆಯ ರಾಜುಗಡ್ಡಿಯ ಪುಸ್ತಕ ಮಳಿಗೆಗೆ ಬಂದೆ. ಅಲ್ಲಿ ನನ್ನ ಕೆಲವು ಮಳೆಯಾಗು ನೀ... ಕವನ ಸಂಕಲವನ್ನು ಮಾರಾಟಕ್ಕೆ ಇಟ್ಟೆ. ರಾಜುಗಡ್ಡಿಯ ಜೊತೆ ಉಭಯಕುಶಲೋಪರಿ ನಡೆಯಿತು. ಪುಸ್ತಕ ಮಳಿಗೆಗಳ ಬಳಿ ಜನ ಚೆನ್ನಾಗಿಯೇ ಸುಳಿದಾಡುತ್ತಿದ್ದರು.  ರಾಜುಗಡ್ಡಿಯ ಮಳಿಗೆಗೂ ಬಹಳ ಜನ ಬಂದು ಪುಸ್ತಕಗಳನ್ನು ಪ್ರೀತಿಯಿಂದ ಮುಟ್ಟಿ, ಬೆಲೆ ವಿಚಾರಿಸಿ ಸಾಧ್ಯವಿದ್ದರೆ ಕೊಳ್ಳುತ್ತಿದ್ದರು. ರಾಜುವಂತೂ ಆತನ ಪುಸ್ತಕಗಳನ್ನು ಅರ್ಧಬೆಲೆಗೇ ಮಾರುತ್ತಿದ್ದ. ಅಷ್ಟರಲ್ಲಿ ನನ್ನ ಪುಸ್ತಕದ ಮೊದಲ ಪ್ರತಿ ಮಾರಾಟವಾಯಿತು. ಅದನ್ನು ಕೊಂಡವರು ಒಬ್ಬರು ಮಹಿಳೆ. ನಾವೂ ಕವನ ಬರಿತೀವ್ರಿ ಎಂದು ಹೇಳಿ ನನ್ನ ಕವನ ಸಂಕಲನವನ್ನು ಕೊಂಡುಕೊಂಡರು. ಆ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಆ ನಂತರ ಗೆಳೆಯ ಅಜಿತ್ ಕೌಂಡಿನ್ಯ ನಮ್ಮನ್ನು ಸೇರಿಕೊಂಡರು. ಬಹಳ ದಿನಗಳ ನಂತರ ಭೇಟಿಯಾಗಿದ್ದ ರಾಜು ಮತ್ತು ಅಜಿತ್ ಸ್ವಲ್ಪ ಮಾತಾಡಿಕೊಂಡ ನಂತರ ನಾನು ಮತ್ತು ಅಜಿತ್ ಪ್ರಕಾಶ್ ಹೆಗಡೆಯವರನ್ನು ಹುಡುಕುತ್ತಾ ಹೊರಟೆವು. ಅವರು ಎ.ಆರ್. ಮಣಿಕಾಂತ್ ರವರ ನೀಲಿಮಾ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ತಮ್ಮ ಹೆಸರೇ ಬೇಡ ಪುಸ್ತಕ ಮಾರಾಟ ಮಾಡುವುದರಲ್ಲಿ ಬ್ಯುಸಿಯಿದ್ದರು. ನಮ್ಮನ್ನು ಕಂಡವರೇ ಮಳಿಗೆಯ ಒಳಗೆ ಬರಮಾಡಿಕೊಂಡು ಮಣಿಕಾಂತ್ ಸರ್ ರವರನ್ನು ನನಗೆ ಪರಿಚಯಿಸಿದರು. ರೀ... ಗುಬ್ಬಚ್ಚಿ ಸತೀಶ್. ನಿಮ್ಮನ್ನು ಹುಡುಕಿಕೊಂಡು ಯಾರೋ ಹುಡುಗಿಯೊಬ್ಬರು ಬಂದಿದ್ದರು. ಅವರು ನಿಮ್ಮ ಫ್ಯಾನ್ ಅಂತೆ. ನಾನವರಿಗೆ ಇನ್ನೇನು ಅವರು ಬರಬಹುದು ಇರಿ ಎಂದೆ. ಅವರು ಇಲ್ಲಾ ಸರ್, ಹೋಗ್ಬೇಕು. ನಾ ಕೇಳಿದೆ ಎಂದು ಹೇಳಿ ಹೊರಟು ಹೋದರು ಎಂದು ಹೇಳಿದರು. ನಾ ಯಾವ ಹುಡುಗಿ? ಎಂದು ಯೋಚಿಸುತ್ತಲೇ ಅವರಿಗೆ ವಿದಾಯ ಹೇಳಿದೆ. ನಾವು ಅವರ ಮಳಿಗೆಯಿಂದ ಹೊರಬಂದರೂ ಆ ಹುಡುಗಿ ಯಾರಿರಬಹುದೆಂದು ಚಿಂತಿಸುತ್ತಲೇ ನಾನು ಇರುವುದನ್ನು ಕಂಡ ಅಜಿತ್ ಸರ್, ತಲೆಕೆಡಿಸ್ಕೊಬೇಡಿ, ಸುಮ್ನಿರಿ. ಪ್ರಕಾಶ್ ಹೆಗಡೆಯವರು ಎಲ್ಲೋ ಕಾಗೆ ಹಾರಿಸಿದ್ದಾರೆ. ಅವರು ಕಾಗೆ ಹಾರಿಸೋದ್ರಲ್ಲಿ ಎಕ್ಸ್ಪರ್ಟ್ ಎಂದು ನಗುತ್ತಾ ಹೇಳಿ, ನನ್ನ ಚಿಂತೆಯನ್ನು ದೂರಮಾಡಿದರು. ನಂತರ ನಾವಿಬ್ಬರೂ ಸಮ್ಮೇಳನದ ಜಾಗದಿಂದ ಹೊರಬಂದು ಒಟ್ಟಿಗೆ ಊಟ ಮಾಡಿ ನಮ್ಮ ನಮ್ಮ ದಾರಿ ಹಿಡಿದೆವು. ಬಹಳ ಕಾಲದ ನಂತರವಷ್ಟೇ ಅಂದು ಪ್ರಕಾಶ್ ಹೆಗಡೆಯವರು ಹೇಳಿದ್ದು ನಿಜ, ನನ್ನನ್ನು ಹುಡುಕಿ ಬಂದ ಹುಡುಗಿ ಮಂಗಳೂರು ಮೂಲದ, ಕುಣಿಗಲ್ ನಿವಾಸಿ ಶುಭರೇಖಾ ಎಂದು ತಿಳಿಯಿತು.
          ಆ ದಿನ ಬೆಂಗಳೂರಿನಲ್ಲೆ ಉಳಿದುಕೊಂಡ ನಾನು ಮರುದಿನ ನನ್ನ ಶ್ರೀಮತಿಯನ್ನು  ಕರೆದುಕೊಂಡು ಸಮ್ಮೇಳನಕ್ಕೆ ಹೋದೆ. ಅಲ್ಲಿ ರಾಜುವಿನ ಮಳಿಗೆಯಲ್ಲಿ ನಾವಿಬ್ಬರು ಸ್ವಲ್ಪ ಹೊತ್ತು ಪುಸ್ತಕಗಳ ಮಾರಾಟವನ್ನು ಗಮನಿಸುತ್ತಾ ರಾಜುವಿನೊಡನೆ   ಹರಟಿ ಹಿಂದಿರುಗಿದೆವು. ಅದು ನಮ್ಮಿಬ್ಬರ ಮೊದಲ ಸಾಹಿತ್ಯ ಸಮ್ಮೇಳನವಾದರೂ ನಾವೇನೂ   ಸಕ್ರಿಯವಾಗಿ ಭಾಗಿಯಾಗಿರಲಿಲ್ಲ.
          ೭೯ನೇ ಅಖಿಲ ಭಾರತ ಕನ್ನಡ ಸಮ್ಮೇಳನ ವಿಜಾಪುರದಲ್ಲಿ ಫೆಬ್ರವರಿ ೮, ೯ ಮತ್ತು ೧೦ ಎಂದು ಪತ್ರಿಕೆಗಳಲ್ಲಿ ಪ್ರಕಟವಾದದ್ದೇ ತಡ, ನಮ್ಮ ಪ್ರಕಾಶನದಿಂದ ಪುಸ್ತಕ ಮಳಿಗೆ ಅರ್ಜಿ ಹಾಕಿದೆವು. ಹುಬ್ಬಳಿಯ ಗೆಳೆಯ ರಾಜುವಿಗೂ ಒಂದು ಮಳಿಗೆ ಎಂದು ಒಟ್ಟಿಗೆ ಎರಡು ಮಳಿಗೆಗೆ ಡಿ.ಡಿ. ಕಳುಹಿಸಿದೆವು. ನಂತರ ಸಮ್ಮೇಳನ ಒಂದು ದಿನ ಮುಂದಕ್ಕೆ ಹೋಯಿತು. ಅಂದರೆ, ೯, ೧೦ ಮತ್ತು ೧೧ ರಂದು ಎಂದು ಪ್ರಕಟವಾಯಿತು. ಸರಿ, ನಮ್ಮ ಪ್ರಕಾಶನದ ಮೊದಲ ಸಮ್ಮೇಳನಕ್ಕೆ ತಯಾರಿ ನಡೆಸಿದೆವು. ಮೊದಲಿಗೆ ನಾನು ಒಬ್ಬ ಹುಡುಗನನ್ನು ಕರೆದುಕೊಂಡು ಹೋಗುವುದೆಂದು ತೀಮಾರ್ನಿಸಿ ಬಸ್ಸೇ ಸರಿ ಎಂದು ಫೆಬ್ರವರಿ ರಾತ್ರಿ ೮.೩೦ಕ್ಕೆ ಹೊರಡುವ ವಿ.ಆರ್.ಎಲ್ ಬಸ್ಸಿಗೆ ಎರಡು ಟಿಕೆಟ್ ಬುಕ್ ಆಯಿತು. ನಂತರ ನನ್ನೊಬ್ಬನನ್ನೇ ಕಳುಹಿಸಲು ಇಚ್ಚಿಸದ ನನ್ನ ಮಡದಿ ಮತ್ತೊಂದು ಟಿಕೆಟ್ ಬುಕ್ ಮಾಡಿದಳು. ನಮ್ಮೊಡನೆ ಬರಲು ಒಪ್ಪಿದ ಹುಡುಗ ಗೆಳೆಯ ಚಿದು (ಸಹೋದ್ಯೋಗಿ ಗೆಳೆಯ ಮತ್ತು ನಮ್ಮ ಮಾಸಪತ್ರಿಕೆಯ ಉಪಸಂಪಾದಕರಾದ ಟಿ.ಜೆ.ಚಿದಾನಂದಮೂರ್ತಿ)ವಿನ ಅಣ್ಣನ ಮಗ ದರ್ಶನ್.
          ನಮ್ಮ ಪ್ರಕಾಶನದ ಏಳು ಪುಸ್ತಕಗಳ ಜೊತೆ, ನಮ್ಮ ಕಾಲೇಜ್ ಡೈರಿ ಮಾಸಪತ್ರಿಕೆ ಮತ್ತು ತುಮಕೂರಿನ ಕೆಲವು ಸಾಹಿತಿಗಳ ಪುಸ್ತಕಗಳನ್ನು ತೆಗೆದುಕೊಂಡು ೮ರ ರಾತ್ರಿ ೮ಕ್ಕೆ ಮನೆಯಿಂದ ಹೊರಟೆವು. ನಮಗೆ ಮನೆಯಿಂದ ಆಟೋ ಸಿಗುವುದು ತುಸು ಗಡಿಬಿಡಿಯಾಯಿತು. ಜೊತೆಗೆ ಸಮಯಕ್ಕೆ ಸರಿಯಾಗಿ ಬಸ್ಸು ಬರಲಿಲ್ಲ. ೯.೩೦ರ ಸುಮಾರಿಗೆ ಬಂದ ಬಸ್ ಅರ್ಧಗಂಟೆ ಪ್ರಯಾಣ ಬೆಳೆಸಿ ಊಟಕ್ಕೆ ತುಮಕೂರಿನ ಹೊರವಲಯದಲ್ಲಿ ನಿಂತಿತು. ಅಲ್ಲಿ ಊಟ ಮಾಡಿ ಬರುವಷ್ಟರಲ್ಲಿ ಬೆಂಗಳೂರಿನಿಂದ ಬಂದಿದ್ದ ಸಹಪ್ರಯಾಣಿಕರೊಬ್ಬರ ಬ್ಯಾಗ್ ಸಮೇತ ಲ್ಯಾಪ್‌ಟಾಪ್ ಕಳೆದುಹೋಗಿತ್ತು. ಪೋಲಿಸರು ಬಂದು ಕೇಸ್ ತೆಗೆದುಕೊಳ್ಳುವವರೆಗೂ ಆ ಪ್ರಕರಣ ಮುಗಿಯಲಿಲ್ಲ. ಸುಮಾರು ಒಂದುವರೆ ಘಂಟೆಯ ನಂತರ ಹೋಟೆಲ್ ಬಿಟ್ಟು ಬಸ್ ಹೊರಟಿತು. ಮಧ್ಯ ಒಂದೆರಡು ಸ್ಟಾಪ್ ಬಿಟ್ಟರೆ ಎಲ್ಲೂ ನಿಲ್ಲದ ಬಸ್ ೯ರ ಬೆಳಿಗ್ಗೆ ಸುಮಾರು ೭.೩೦ಕ್ಕೆ ವಿಜಾಪುರ ತಲುಪಿತು. ನಾನು ರಾತ್ರಿಯೆಲ್ಲಾ ಎಚ್ಚರದಿಂದಲೇ ಇದ್ದೆ. ಕಾರಣ!? ಹೀಗಾಗಬಹುದು ಎಂದು ನನ್ನ ಸಹೋದ್ಯೋಗಿ ಗೆಳೆಯರೊಬ್ಬರು ಮೊದಲೇ ಹೇಳಿದ್ದರು : ವಿ.ಆರ್.ಎಲ್. ಬಸ್ ಚೆನ್ನಾಗಿಯೇ ಇರುತ್ತೆ. ಆದರೆ, ಯಾರಾದರೂ ಕಿಟಕಿ ತೆಗೆದುಕೊಂಡು ಕುಳಿತರೆ ಅದರಲ್ಲೂ ಮಹಿಳೆಯರಾದರೆ ಕಿಟಕಿಯಿಂದ ಒಳನುಗ್ಗುವ ಗಾಳಿಗೆ ಮಲಗಿದ ಹಾಗೆಯೇ ಎಂದು. ಅದು ನಿಜವಾಯಿತು. ನನ್ನ ದುರಾದೃಷ್ಟಕ್ಕೆ ಮುಂದೆ ಕುಳಿತಿದ್ದ ಮಹಾತಾಯಿಯೊಬ್ಬಳು ರಾತ್ರಿಯೆಲ್ಲಾ ಮತ್ತು ಮುಂಜಾವಿನಲ್ಲೂ ತನ್ನ ಕೂದಲುಗಳನ್ನು ಕೆದರಿಕೊಂಡು ಕಿಟಕಿಗೆ ತಲೆ ಇಟ್ಟೇ ಕೂತಿದ್ದಳು. ಎರಡು ಬಾರಿ ನಾನೇ ಎದ್ದು ಹೋಗಿ ಕಿಟಕಿ ಮುಚ್ಚಿ ಮಲಗಲು ಯತ್ನಿಸಿದರೂ ಆ ಮಹಾತಾಯಿ ಅದ್ಯಾವ ಮಾಯದಲ್ಲೋ ಕಿಟಕಿ ತೆರೆದು ಬಿಡುತ್ತಿದ್ದಳು. ಇದ್ದುದರಲ್ಲಿ ನನ್ನ ಶ್ರೀಮತಿ ಮತ್ತು ದರ್ಶನ್ ಚೆನ್ನಾಗಿಯೇ ನಿದ್ರಿಸಿದ್ದರು.
          ಸರಿಯಾದ ಸಮಯಕ್ಕೆ ನಾವು ವಿಜಾಪುರ ತಲುಪಿದ್ದೆವು. ರಾಜು ಹೇಳಿಟ್ಟಿದ್ದ ಲಾಡ್ಜ್ ಬಳಿಗೆ ಹೋದೆವು. ಅಲ್ಲಿ ರಾಜು ಬರುವವರೆಗೂ ಲಾಡ್ಜ್ ನವರು ಕಿರಿಕಿರಿ ಮಾಡಿದರು. ಎಲ್ಲವನ್ನೂ ನಿಭಾಯಿಸಿ ನಾವು ಸಮ್ಮೇಳನ ನಡೆಯುತ್ತಿದ್ದ ಸೈನಿಕ್ ಸ್ಕೂಲ್ ಬಳಿ ತೆರಳಿದೆವು. ಅಲ್ಲಿ ಅಂದುಕೊಂಡಂತೆ ಪುಸ್ತಕದ ಬ್ಯಾಗ್‌ಗಳನ್ನು ಮತ್ತು ಬಂಡಲ್‌ಗಳನ್ನು ತಲೆ ಮೇಲೆ ಹೊತ್ತು ಹೋಗಬೇಕಾಯಿತು. ಹೀರೋ ದರ್ಶನನಂತ ದರ್ಶನ್ ನಮ್ಮ ಜೊತೆ ಇದ್ದುದರಿಂದ ಈ ಕೆಲಸ ಸಲೀಸಾಯಿತು. ನಮಗೆ ಕಾದಿರಿಸಿದ್ದ ಮಳಿಗೆ (ನಂ.೮೪) ಯ ಬಳಿ ಹೋದರೆ ಅಲ್ಲಿ ಕೆಲವು ಚೇರ್‌ಗಳನ್ನು ಮತ್ತು ಟೇಬಲ್‌ಗಳನ್ನು ಯಾರೋ ಅದಾಗಲೇ ಅಪಹರಿಸಿಯಾಗಿತ್ತು. ಇದು ಎಲ್ಲಾ ಕಡೆ ಮಾಮೂಲು ಎಂಬ ವಿಷಯ ನಮಗಾಗಲೇ ತಿಳಿದಿತ್ತು. ಮತ್ತೆ ನಾವು ಒಂದಷ್ಟು ಟೇಬಲ್ ಮತ್ತು ಚೇರ್‌ಗಳನ್ನ ಹೊಂಚಿಕೊಂಡು ಬಂದು ನಮ್ಮ ಮಳಿಗೆಯನ್ನು ವ್ಯಾಪಾರಕ್ಕೆ ಸಜ್ಜು ಗೊಳಿಸಿದೆವು. ಅಷ್ಟರಲ್ಲಿ ಮೊದಲೇ ಹೇಳಿ ತರಿಸಿದ್ದ ಗೆಳೆಯರಾದ ಕೆ. ಗಣೇಶ್ ಕೋಡೊರ್‌ರವರ ಬೆನಕ ಬುಕ್ಸ್ ಬ್ಯಾಂಕಿನ ಕೆಲವು ಪುಸ್ತಕಗಳು ನಮ್ಮ ಕೆಲವೇ ಕೆಲವು ಪುಸ್ತಕಗಳನ್ನು ಸೇರಿಕೊಂಡವು. ನಮ್ಮ ಪ್ರಕಾಶನದ ಮೊಟ್ಟ ಮೊದಲ ಕನ್ನಡ ಸಮ್ಮೇಳನದ ಪುಸ್ತಕ ವ್ಯಾಪಾರ ಶುರುವಾಯಿತು. ಆ ಸಮಯಕ್ಕೆ ಸರಿಯಾಗಿ ರಾಜು ಗಡ್ಡಿ ಬಂದು ಅವರಿಗೆ ನಿಗದಿಯಾಗಿದ್ದ ನಮ್ಮ ಪಕ್ಕದ ಮಳಿಗೆಯನ್ನು ವ್ಯಾಪಾರಕ್ಕೆ ಸಜ್ಜುಗೊಳಿಸಿಕೊಂಡರು. ನಮ್ಮ ಅಕ್ಕಪಕ್ಕದ ಮಳಿಗೆಗಳಲ್ಲಿ ಗದಗದ ಕಡೆಯ ಕೆಲವು ಮಳಿಗೆಗಳಿದ್ದವು. ಕೊಂಚ ದೂರದಲ್ಲೇ ವಸುಧೇಂದ್ರ್ರರ ಛಂದ ಪುಸ್ತಕದ ಮಳಿಗೆಯಿತ್ತು. ಮತ್ತೂ ಸ್ವಲ್ಪ ದೂರಕ್ಕೆ ಲಡಾಯಿ ಪ್ರಕಾಶನದ ಮಳಿಗೆಯಿತ್ತು. ಇನ್ನೂ ಜನರು ಅಷ್ಟಿರಲಿಲ್ಲವಾದ್ದರಿಂದ ನಾನು ವಸುಧೇಂದ್ರರ ಬಳಿ ಹೋಗಿ ಮಾತನಾಡಿಕೊಂಡು ಬಂದೆ.
          

       ರಾಜು ಮೊದಲೇ ಹೇಳಿದಂತೆ ಮೊದಲ ದಿನ ಜನ ಬಂದು ಪುಸ್ತಕ ನೋಡಿಕೊಂಡು ಹೋಗುತ್ತಾರೆ ಎಂಬ ಮಾತು ನಿಜವಾಯಿತು. ಜನ ಬಂದು ಬಂದು ಪುಸ್ತಕಗಳನ್ನು ನೋಡಿ, ಮುಟ್ಟಿ, ಬೆಲೆ ಕೇಳಿ ಹೋಗಿದ್ದೆ ಹೆಚ್ಚಾಯಿತು. ವ್ಯಾಪಾರ ಅಷ್ಟಕಷ್ಟೆ ಎಂಬಂತಾಯಿತು. ಊಟದ ವೇಳೆಗೆ ನಾನು ಅಲ್ಲಿ ಊಟ ನೀಡುವ ಜಾಗಕ್ಕೇ ಹೋಗಿ ಸಾಹಸ ಮಾಡಿ ಊಟ ಮಾಡಿ ಬಂದೆ. ಆದರೆ, ಇವರಿಬ್ಬರೂ ಆ ಜನಸಂದಣಿಯಲ್ಲಿ ಊಟಕ್ಕೆ ಹೋಗಲಾಗಲಿಲ್ಲ. ಅವರಿಬ್ಬರಿಗೂ ಬಾಳೆಹಣ್ಣು, ಜ್ಯೂಸ್ ಅಷ್ಟೇ ಸಿಕ್ಕಿದ್ದು. ಅದು ಕಷ್ಟಬಿದ್ದು ಹೊರಗಡೆ ಬಂದು ಕೊಂಡುಕೊಂಡದ್ದು. ರಾತ್ರಿ ನಿದ್ದೆಯಿಲ್ಲದ ಕಾರಣ, ಜೊತೆಗೆ ಬಿಸಿಲು ಮತ್ತು ಧೂಳಿನ ಮಹಿಮೆಗೆ ನಿದ್ರೆ ವತ್ತರಿಸಿ ಬರುತ್ತಿತ್ತು. ಮಳಿಗೆಯ ಒಳಗೆ ಸ್ವಲ್ಪ ಜಾಗ ಮಾಡಿಕೊಂಡು ನಾನು ಮಲಗಿದೆ. ನಿದ್ದೆಯೋ ನಿದ್ದೆ. ಆ ನಂತರ ಸರದಿಯ ಮೇಲೆ ಇವರಿಬ್ಬರೂ ಮಲಗಿದರು. ಅಷ್ಟರಲ್ಲಿ ನನ್ನನ್ನು ಹುಡುಕಿಕೊಂಡು ಹಲವರು ಬಂದು, ಮಲಗಲಿ ಬಿಡಿ ನಂತರ ಬರುತ್ತೇವೆ ಎಂದು ಹೋರಟು ಹೋಗಿದ್ದರು. ಅದರಲ್ಲಿ ಬಹುಮುಖ್ಯವಾದವರು ನಾರಾಯಣ ಬಾಬಾನಗರ. ನಾನೂ ಅವರನ್ನು ಭೇಟಿಯಾಗಲು ಕಾತರಿಸುತ್ತಿದ್ದೆ. ಸಂಜೆಯ ಹೊತ್ತಿಗೆ ವ್ಯಾಪಾರ ಸ್ವಲ್ಪ ಕುದುರಿತ್ತು. ಹಾಗೂ ಹೀಗೂ ರಾತ್ರಿಯಾಯಿತು. ವ್ಯಾಪಾರ ಅಷ್ಟಕಷ್ಟೆ ಇದ್ದುದರಿಂದ ನಾನು ದರ್ಶನ್ ಹೋಗಿ ಅಲ್ಲೇ ಊಟ ಮಾಡಿ ಬಂದೆವು. ನನ್ನ ಶ್ರೀಮತಿಗೂ ಅಲ್ಲಿಂದಲೇ ಊಟ ತಂದೆವು. ಸುಮಾರು ೧೦ ಗಂಟೆಯವರೆಗೂ ಮಳಿಗೆಯಲ್ಲೇ ಇದ್ದು ದರ್ಶನನನ್ನು ರಾಜುವಿನ ಜೊತೆ ಮಳಿಗೆಯಲ್ಲೇ ಮಲಗಲು ಬಿಟ್ಟು ನಾವು ಲಾಡ್ಜಿನ ಹಾದಿ ಹಿಡಿದೆವು.
          ಪುಸ್ತಕ ಮಳಿಗೆಗಳಿಂದ ಮುಖ್ಯರಸ್ತೆಗೆ ಬರುವ ದಾರಿಯಲ್ಲೇ  ರಾತ್ರಿ ಹತ್ತಾದರೂ ಜನ ಕಿಕ್ಕಿರಿದು ತುಂಬಿದ್ದರು. ಕಾರಣ ಬೀದಿ ಬದಿಯ ವ್ಯಾಪರಿಗಳ ಭರಾಟೆ. ಅಲ್ಲಿ ಅಕ್ಷರಶಃ ಜಾತ್ರೆ ನೆರೆದಿತ್ತು. ನಾವು ಜಾಗ ಮಾಡಿಕೊಂಡು ಮುಖ್ಯ ರಸ್ತೆಯ ಬಳಿ ನಡೆಯುತ್ತಿದ್ದಾಗ ಒಂದು ಸೋಜಿಗ ನಡೆಯಿತು. ಅಲ್ಲಿ ತುಂಬಾ ಕತ್ತಲಿತ್ತು. ಆ ಜಾಗದಲ್ಲಿ ಎರಡು ಸೀಮೆ‌ಎಣ್ಣೆ ಬುಟ್ಟಿಗಳನ್ನು ತನ್ನೆರಡು ಬದಿಗಳಲ್ಲಿ ಇರಿಸಿಕೊಂಡು ಒಬ್ಬ ವ್ಯಕ್ತಿ ಕುಳಿತ್ತಿದ್ದ. ಆ ಎರಡು ಬದಿಗೆ ಅತ್ತಿಂದತ್ತ್ತ ಹುಳವೊಂದು ಸರಸರನೆ ಓಡಾಡುತ್ತಿತ್ತು. ಮೊದಲಿಗೆ ನಾವದನ್ನು ಸರಿಯಾಗಿ ಗಮನಿಸಲಿಲ್ಲ. ಯಾವುದೋ ಹುಳವಿರಬೇಕೆಂದು ನಮ್ಮ ನಮ್ಮಲ್ಲಿಯೇ ಅದರ ಬಗ್ಗೆ ಮಾತಾಡಿಕೊಂಡು ಮುಂದೆ ಮುಂದೆ ಹೋಗಿಬಿಟ್ಟೆವು. ನಮಗೆ ಕುತೂಹಲ ಇಮ್ಮಡಿಯಾಯಿತು. ತಡೆಯಲಾಗಲಿಲ್ಲ. ಮತ್ತೆ ಹಿಂದಿರುಗಿ ಬಂದು ಸ್ವಲ್ಪ ಗಮನಿಸಿ ನೋಡಿದೆವು. ಆತ ತನ್ನೆರಡು ಕೈಗಳನ್ನು ಮೇಲೆ ಎತ್ತಿಡಿದಿದ್ದನ್ನು ಗಮನಿಸಿದಾಗ ಗೊತ್ತಾಯಿತು ಆತನ ಕೈ ಬೆರಳುಗಳು ಆ ಹುಳವನ್ನು ನಿಯಂತ್ರಿಸುತ್ತಿವೆ. ಮತ್ತೂ ಗಮನಿಸಿದಾಗ ತಿಳಿಯಿತು ಆ ಹುಳು ಪ್ಲಾಸ್ಟಿಕ್ಕಿನದು. ಆತನ ಬಳಿ ಇನ್ನೂ ಆ ರೀತಿಯ ಹಲವು ಹುಳುಗಳಿವೆ ಎಂದು. ಆತ ಜನರಿಗೆ ತನ್ನ ಕಣ್ಕಟ್ಟೋ ಆಟದಿಂದ ಮರಳು ಮಾಡುತ್ತಿದ್ದಾನೆ. ಅಯ್ಯೋ ಇಷ್ಟೇ ಎಂದು ನಾವು ಅಲ್ಲಿಂದ ತೆರಳಿದೆವು. ಜನಮರುಳೋ ಜಾತ್ರೆ ಮರುಳೋ ಅನ್ನುವ ಮಾತು ಅಲ್ಲಿ ಸಾಬೀತಾಗಿತ್ತು.
          ಬೆಳಿಗ್ಗೆಯಿಂದ ಕಾಫಿ ಕುಡಿಯದೇ ಇದ್ದ ನಾನು ಸುಮಾರು ೧೦.೩೦ರ ಸುಮಾರಿಗೆ ಅಲ್ಲೊಂದು ಹೋಟೆಲ್ಲಿಗೆ ಹೋಗಿ ಕಾಫಿ ಸಿಗುವುದನ್ನು ಖಚಿತಪಡಿಸಿಕೊಂಡು ಆರ್ಡರ್ ನೀಡಿದೆ. ವಿಜಾಪುರದಲ್ಲಿ ಜಾಸ್ತಿ ಟೀ ಮಾರುತ್ತಾರೆ. ಬಹಳ ಹೊತ್ತಿನ ನಂತರ ಹೋಟೋಲ್ ಮಾಲೀಕನೇ ಕಾಫಿ ತಗೆದು ಕೊಂಡು ಬಂದರು. ನೋಡಿದರೆ ಬಿಳಿ ಬಿಳಿ ಕಾಫೀ. ನಗುತ್ತಾ ಅದನ್ನೇ ಕುಡಿದೆವು. ನಂತರ ಲಾಡ್ಜಿಗೆ ಮರಳಿ ದಿಂಬಿಗೆ ತಲೆಕೊಟ್ಟರೆ ಆ ಕಣ್ಕಟ್ಟ ಹುಳು ಕಣ್ಣ ಮುಂದೆ ಸುಳಿಯುತ್ತಿತ್ತು. ನಿದ್ದೆ ಹತ್ತುತ್ತಿಲ್ಲ. ಕಾರಣ ಸೊಳ್ಳೆ ಮತ್ತು ಅವುಗಳಿಗಿಂತ ನಮ್ಮನ್ನು ತಮ್ಮ ಸೈನ್ಯದ ಸಮೇತ ಮುತ್ತಿಕ್ಕುತ್ತಿದ್ದ ರಕ್ತಬಿಜಾಸುರ ತಿಗಣೆಗಳ ಸೈನ್ಯ!
 (Continues...)


ಶುಕ್ರವಾರ, ಮಾರ್ಚ್ 15, 2013

ಕಲರ್‌ಫುಲ್ “ಮೈನಾ”


   
       ಉಸೇನ್ ಬೋಲ್ಟ್ ನಂತೆ ನಾಯಕ ಓಡುತ್ತಾನೆ. ಇವನ ಓಟ ಓಲಂಪಿಕ್ಸ್ ನಲ್ಲಿ ಗೆಲ್ಲಲ್ಲಿಕ್ಕೆ ಅಲ್ಲ. ಅವನ ಪ್ರೇಯಸಿಯನ್ನು ಸೇರಲಿಕ್ಕೆ. ಆದರೂ ಅವನನ್ನು ಹಿಡಿಯಲು ಸಾಧ್ಯವೇ ಇಲ್ಲದಂತೆ ಓಡುವ ಪೋಲೀಸ್ ಇನ್ಸ್‍ಪೆಕ್ಟರ್ ಅವನನ್ನು ಬೆಂಬಿಡದೆ ಹಿಂಬಾಲಿಸುತ್ತಾನೆ. ಸಮುದ್ರದ ದಂಡೆಯಲ್ಲಿನ ಚೇಸಿಂಗ್ ಸಮುದ್ರದೊಳಕ್ಕೆ ಶಿಫ್ಟ್ ಆಗುತ್ತದೆ. ನಾಯಕ ಬೋಟ್‌ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲನಾಗಿ ಸಮುದ್ರದೊಳಕ್ಕೆ ಬೀಳುತ್ತಾನೆ. ಅವನ ಹಿಂದೆಯೇ ಬೋಟ್‌ನಿಂದ ಸಮುದ್ರಕ್ಕೆ ಚಿಮ್ಮುವ ಇನ್ಸ್‍ಪೆಕ್ಟರ್ ನ ಪ್ರಯತ್ನ ಗ್ಯಾರಂಟಿ ವಿಫಲವಾಗುತ್ತದೆ ಎನ್ನುವಷ್ಟರಲ್ಲಿ ಒಬ್ಬನೇ ಎದ್ದ ಇನ್ಸ್‍ಪೆಕ್ಟರ್ ಕೈಯಲ್ಲಿ ಬೇಡಿಯಿಂದ ಬಂಧಿತನಾದ ಸೋತ ನಾಯಕನಿರುತ್ತಾನೆ. ಕಾಣದ ಕಡಲಿಗೆ... ಹಂಬಲಿಸಿದೇ ಮನ... ಕಾಣದ ಕಡಲಿಗೆ... ಹಂಬಲಿಸಿದೇ ಮನ... ಮನ... ಕಾಣಬಲ್ಲನೇ ಒಂದು ದಿನ, ಕಡಲನ್ನು ಕೂಡಬಲ್ಲನೇ ಒಂದು ದಿನ, ಕಾಣಬಲ್ಲನೇ ಒಂದು ದಿನ, ಕಡಲನ್ನು ಕೂಡಬಲ್ಲನೇ ಒಂದು ದಿನ ರಾಷ್ರಕವಿ ಜಿ.ಎಸ್. ಶಿವರುದ್ರಪ್ಪನವರ ಗೀತೆಯ ಮೊದಲ ಸಾಲುಗಳು ಸಿರಿಕಂಠದ ಸಿ.ಅಶ್ವಥ್ ಧ್ವನಿಯಲ್ಲಿ ನಿಮ್ಮ ಮನೆಯಲ್ಲಿಯೇ ಮೊಳಗಿದಂತೆ ಮೊಳಗತೊಡಗುತ್ತವೆ. ಪ್ರೇಕ್ಷಕರೆಲ್ಲಾ beginning ಚೆನ್ನಾಗಿದೆ ಎಂದು ಚಿತ್ರದಲ್ಲಿ ತನ್ಮಯರಾಗುತ್ತಾರೆ.
...
          ನಾಯಕಿ ಕಲರ್‌ಫುಲ್... ಎಂದು ಕೂಗುತ್ತಾಳೆ. ಲವ್ ಯು... ಎನ್ನುತ್ತಾಳೆ. ಅವಳು ಈ ಮಾತನ್ನು ಹೇಳುವುದು ಅವಳಷ್ಟೇ ಸುಂದರವಾದ ದೂದ್‌ಸಾಗರ್ ಜಲಪಾತಕ್ಕೆ. ನಾಯಕ ಬೆರಗಿನಿಂದ ಅವಳನ್ನೇ ನೋಡಿದಾಗ ಕಲರ್ ಫುಲ್ ಮತ್ತು ಲವ್ ಯು ಎರಡಕ್ಕೂ ಒಂದೇ ಉಚ್ಚಾರ ಎನ್ನುತ್ತಾಳೆ. ಅವಳ ತುಟಿಗಳನ್ನು ಚಲಿಸಿ ತೋರಿಸುತ್ತಾಳೆ. ನಾಯಕನೂ ಅವಳಂತೆಯೇ ಕಲರ್ ಫುಲ್, ಲವ್ ಯು ಎಂದು ರೋಮಾಂಚನಗೊಳ್ಳುತ್ತಾನೆ. ರೈಲಿನ ದಿನನಿತ್ಯದ ಪ್ರಯಾಣದಲ್ಲಿ ಹೀಗೆ ಸಾಗುವ ಅವರ ಮಾತುಕತೆ ಮುಂದುವರೆದು ನಾಯಕಿ ಅವನನ್ನು ಪ್ರೀತಿಸಲು ತೊಡಗುತ್ತಾಳೆ. ಒಮ್ಮೆ ಅವಳ ಬ್ಯಾಗನ್ನು ಕಳ್ಳನೊಬ್ಬ ಅಪಹರಿಸಿದಾಗ ಅಲ್ಲಿಯವೆರಗೂ ಕಾಲಿಲ್ಲದ ಭಿಕ್ಷುಕನಂತೆ ನಟಿಸುವ ನಾಯಕ ಚಂಗನೆ ರೈಲಿನಿಂದ ಜಿಗಿದು ಓಡಿ ಕಳ್ಳನಿಗೆ ಡಿಶುಂ ಡಿಶುಂ ಮಾಡಿ ಅವಳ ಬ್ಯಾಗನ್ನು ಮರಳಿ ತರುತ್ತಾನೆ. ಅವನು ರೈಲಿನಿಂದ ಚಂಗನೆ ಜಿಗಿಯುವವರೆಗೂ ಅವನಿಗೆ ನಿಜವಾಗಲೂ ಕಾಲಿಲ್ಲ ಎಂದು ನಂಬಿದ್ದ ನಾಯಕಿಗೆ ಬರಸಿಡಿಲು ಎರಗಿದಂತಾಗುತ್ತದೆ. ...   ಏಕೆಂದರೆ ಅವಳಿಗೂ ಕಾಲಿರುವುದಿಲ್ಲ! ತೆವಳಿಕೊಂಡೆ ರೈಲಿನಿಂದ ಇಳಿಯುವ ಆಕೆ ಫ್ಲಾಟ್‌ಫಾರ್ಮಿನ ಮೇಲೆ ಕುಸಿದು ಕೂಡುತ್ತಾಳೆ. ... ನೀನು ಸುಳ್ಳುಗಾರ ಅನ್ನುತ್ತಾಳೆ ಅವಳು. ಅವನು ಮೌನದಿಂದ ಅವಳನ್ನೇ ನೋಡುತ್ತಾನೆ. II Hate Youe U ಅನ್ನುತ್ತಾಳೆ. ನೀನು ಈಗಲೂ ನನ್ನನ್ನು ಪ್ರೀತಿಸುತ್ತೀಯಾ? ಎನ್ನುತ್ತಾಳೆ. ಅವನು ಮೌನ ಮುರಿದು, ನಾನು ನಿನ್ನ ಬಗ್ಗೆ ಎಲ್ಲಾ ತಿಳಿದೇ ನಿನ್ನನ್ನು ಪ್ರೀತಿಸುತ್ತೇನೆ ಎನ್ನುತ್ತಾನೆ ಅವನು. ... ಅವರಿಬ್ಬರೂ ಮಂಡಿಯೂರಿಯೇ ಆಲಂಗಿಸುತ್ತಾರೆ. ಅವಳನ್ನು ಅವನು ಅನಾಮತ್ತು ಎತ್ತಿಕೊಂಡು ತಿರುಗಿಸುತ್ತಾನೆ. ಅವರ ಆನಂದಕ್ಕೆ, ಪ್ರೀತಿಯ ಪರಮೋತ್ಕರ್ಷಕ್ಕೆ ಸಾಟಿಯೇ ಇಲ್ಲ. ಇವರ ಆನಂದಕ್ಕೆ ಬಾನು ಭೂಮಿ ಒಂದಾದಂತೆ ನೋಡುಗರ ಎದೆಯಲ್ಲಿ ಮಿಂಚಿನ ಸಂಚಾರವಾಗುತ್ತದೆ. ಮೈಮರೆತ ಮನಸ್ಸುಗಳು ವಾವ್!, ಪ್ರೀತಿ ಎಂದರೆ ಹೀಗಿರಬೇಕು ಎಂದು ಮನದಲ್ಲಿ ಅಂದುಕೊಂಡು ಆನಂದದಲ್ಲಿ ಮುಳುಗುತ್ತಾರೆ. ಕಡೆಗೂ ಒಂದು ಉತ್ತಮ ಕಥೆಯುಳ್ಳ ಕನ್ನಡ ಸಿನಿಮಾಗೆ ಬಂದೆವು ಅಂದುಕೊಳ್ಳತೊಡಗುತ್ತೇವೆ. ಅದು ಸಿನಿಮಾದ Middle. I mean Interval.
...
          ನಾಯಕನು ನಿರಪರಾಧಿ ಎಂಬುದು ಇನ್ಸ್‍ಪೆಕ್ಟರ್ ಗೆ ಗೊತ್ತಾಗಿದೆ. ಅವನು ಮಾಡಿರುವ ಅಪರಾಧವೂ ಪೂರ್ವ ನಿರ್ಧರಿತವಲ್ಲ ಎಂದು ಅರಿವಾಗಿದೆ. ಆದ್ದರಿಂದ ಬೇರೆಯಾದ ನಾಯಕ ನಾಯಕಿಯನ್ನು ಏನಾದರೂ ಮಾಡಿ ಸೇರಿಸಬೇಕೆಂಬ ಹಠ. ಆದರೆ ಅವನು ಅಸಹಾಯಕ. ಅಷ್ಟರಲ್ಲಿ ನಾಯಕಿಯನ್ನು  ಅನಾಥಶ್ರಮಕ್ಕೆ ಸೇರಿಸುವ ವಿಚಾರ ನಾಯಕನಿಗೆ ತಿಳಿಯುತ್ತದೆ. ಅವನು ತಪ್ಪಿಸಿಕೊಂಡು ಬಿಡುತ್ತಾನೆ. ಮತ್ತು ಇನ್ಸ್‍ಪೆಕ್ಟರ್ ಗೆ ಇದು ತಲೆನೋವಾಗುತ್ತದೆ. ನಾನು ಏನಾದರೂ ಮಾಡುತ್ತಿದ್ದೆ, ಇವನು ಯಡವಟ್ಟು ಮಾಡಿಕೊಂಡ ಎಂದು ಪರಿತಪ್ಪಿಸುತ್ತಾನೆ. ಅದು Climax.

           ನಾಯಕ ತನ್ನ ಗೆಳೆಯನ ಸಹಾಯದಿಂದ ನಾಯಕಿಯನ್ನು ತನ್ನ ಊರಿಗೆ ಕರೆದುಕೊಂಡು ಹೋಗುವ ಹುನ್ನಾರದಲ್ಲಿದ್ದಾಗ ರೈಲ್ವೇಸ್ಟೇಷನ್‌ನಲ್ಲಿ ಬಿಗಿ ಫೊಲೀಸ್ ಕಾವಲಿನಲ್ಲಿ ನಾಯಕನ ಬರುವಿಕೆಗೆ ನಾಯಕಿ ಚಡಪಡಿಸುತ್ತಿರುತ್ತಾಳೆ. ಜೊತೆಗೆ ಫೋಲಿಸರ ಕಣ್ತಪ್ಪಿಸಿ ನಾಯಕನನ್ನು ಕೊಲ್ಲುವ ಸಂಚಿನ ಹೋಮ್ ಮಿನಿಸ್ಟರ್ ಕಡೆಯ ವಿಲನ್‌ಗಳು. ಈ ವಿಲನ್‌ಗಳನ್ನು ಹಿಂಬಾಲಿಸುವ ಮತ್ತಷ್ಟು ಫೋಲಿಸರು. ಇವರೆಲ್ಲರ  ನಡುವೆ ನಾಯಕಿ ಹುಲಿಯನ್ನು ಸೆರೆಯಿಡಿಯಲು ಬೇಟೆಗಾರರು ಕಟ್ಟಿ ಹಾಕಿದ ಕುರಿಯಂತೆ ತೋರುತ್ತಾಳೆ. ಆಗ ಮತ್ತೊಮ್ಮೆ ಕಾಣದ ಕಡಲಿಗೆ.. ಹಂಬಲಿಸಿದೇ ಮನ.. ಗೀತೆ ಮುಂದುವರೆಯುತ್ತದೆ ... ಜಟಿಲ ಕಾನನದ ಕುಟಿಲ ಪಥಗಳಲ್ಲಿ ಹರಿವ ತೊರೆಯು ನಾನು, ಎಂದಿಗಾದರೂ ಎಂದಿಗಾದರೂ ಎಂದಿಗಾದರೂ ಕಾಣದ ಕಡಲನ್ನು ಸೇರಬಲ್ಲೆಯೇನು? ಸೇರಬಹುದೆ ನಾನು? ಕಡಲ ನೀಲಿಯೊಳು ಕರಗಬಹುದೇ ನಾನು?
ಅಯ್ಯೋ! ಒಂದೊಳ್ಳೆ ಹಾಡು ಮುಗಿಯಿತು ಅನ್ನವಷ್ಟರಲ್ಲಿ ಸಿನಿಮಾವು ಮುಗಿಯುವ ಹಂತಕ್ಕೆ ಬಂದಿರುತ್ತದೆ. ನಾಯಕ ಬರುತ್ತಾನೆ. ನಾಯಕಿಯ ಖುಷಿಗೆ ಎಲ್ಲೆಯಿಲ್ಲ. ನಾಯಕನದು ಸಂತೃಪ್ತಿಯ ಭಾವ. ಅವಳನ್ನು ತನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುವ ನಾಯಕನ ಎದೆಯ ಕಡೆ ಗುರಿಯಾಗಿಸಿದ್ದ ವಿಲನ್‌ನ ಬಂದೂಕನ್ನು ಫೋಲಿಸರು ಚಾಕಚಕ್ಯೆತೆಯಿಂದ ಮೊದಲೇ ಕಸಿದುಕೊಳ್ಳುತ್ತಾರೆ. ಸದ್ಯ ಸುಖಾಂತ್ಯವಾಯಿತಲ್ಲ ಎಂದು ಅರೆಂಜ್ ಮ್ಯಾರೇಜ್ ಆಗಿದ್ದವರು ಅಂದುಕೊಂಡು, ಲವ್ ಮ್ಯಾರೇಜ್ ಆಗಬೇಕೆಂದು ಕೊಂಡವರು ನಿಜವಾದ ಪ್ರೀತಿಗೆ ಎಂದೆಂದಿಗೂ ಜಯ ಕಟ್ಟಿಟ್ಟ ಟಿಫಿನ್ ಬಾಕ್ಸ್ ಎಂದು ಕೊಳ್ಳುವಷ್ಟರಲ್ಲಿ ಇನ್ಸ್‍ಪೆಕ್ಟರ್ ತನ್ನ ಫೋಲಿಸ್ ಸಿಬ್ಬಂದಿ ನಾಯಕನ ಎದೆಗೆ ಬಂದೂಕನ್ನು ಗುರಿಯಾಗಿಸಿರುವುದನ್ನು ನೋಡಿ, ಡೊಂಟ್ ಫೈರ್... ಎಂದು ಅರಚಿದರೂ, ಫೋಲಿಸರ ಬಂದೂಕುಗಳಿಗೆ ಡೊಂಟ್ ಕೇಳಿಸುವುದಿಲ್ಲ. ಫೈರ್ ಆಗಿಯೇ ಬಿಡುತ್ತದೆ. ಅಶ್ವತ್ಥಾಮೋ ಹತಾ ಗತಃ ಎಂಬ ಮಹಾಭಾರತದ ಸಾಲು ನಿಮ್ಮ ಕಿವಿಯಲ್ಲಿ ರಿಂಗಣಿಸುತ್ತದೆ. ಅಲ್ಲಿಗೆ ಸಿನಿಮಾ The End.
          ...
          ಕನ್ನಡದ ಸಹೃದಯ ಪ್ರೇಕ್ಷಕರಿಗೆ ಅಂತ್ಯದಲ್ಲಿ ಫೈರ್ ಆಗುವ ಮುನ್ನವೇ ಸಿನಿಮಾ ಮುಗಿದಿರುತ್ತದೆ. ಫೈರ್ ಆದ ನಂತರ ಅಲ್ಲಿಯವರೆಗೂ ನಿಜವಾದ ನಾಯಕನಾಗಿದ್ದ ನಿರ್ದೇಶಕ ಒಂದೇ ಒಂದು ಕ್ಷಣದಲ್ಲಿ ವಿಲನ್ ಆಗಿ ಗೋಚರಿಸತೊಡಗುತ್ತಾನೆ. ಇಬ್ಬರನ್ನು ಕಡೆಗೆ ಅನವಶ್ಯಕವಾಗಿ ಸಾಯಿಸಬಾರದಿತ್ತು ಎಂದು ಗೊಣಗುತ್ತಾ ಪ್ರೇಕ್ಷಕ ಮಹಾಪ್ರಭು ನಿರ್ದೇಶಕನಿಗೆ ತಲೆಕೆಟ್ಟಿದೆ ಎಂದುಕೊಳ್ಳುತ್ತಾ ಥಿಯೇಟರ್‌ನಿಂದ ಹೊರಬೀಳುತ್ತಾನೆ. ಮನೆಗೆ ಬಂದು ಟಿವಿಯಲ್ಲಿ ನಿರ್ದೇಶಕ ಅದೇಕೆ ಹೀಗೆ ಮಾಡಿದ ಎಂದು ಹುಡುಕುತ್ತಾನೆ. ಯಾವುದೋ ಒಂದು ಛಾನೆಲ್ಲಿನಲ್ಲಿ ನಿರ್ದೇಶಕರು ನಗುತ್ತಾ ಮೈನಾ ಸೆಂಕೆಂಡ್ ಪಾರ್ಟ್ ಮಾಡ್ತೀವಿ ಎಂದು ಹಲ್ಲುಕಿರಿಯುತ್ತಾರೆ.

          ಇದು ಇತ್ತೀಚೆಗೆ ಬಿಡುಗಡೆಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮೈನಾ ಚಿತ್ರ ಕುರಿತು ನನ್ನ ಅನಿಸಿಕೆ. ಚಿತ್ರಕ್ಕೆ ಕರ್ನಾಟಕ ಫೋಲಿಸ್‌ನಲ್ಲಿ ಟೈಗರ್ ಎಂದೇ ಖ್ಯಾತರಾದ ಎಸಿಪಿ ಅಶೋಕ್ ಕುಮಾರ್‌ರವರು ನಿರ್ದೇಶಕ ನಾಗಶೇಖರ್‌ರವರಲ್ಲಿ ಹಂಚಿಕೊಂಡ ನೈಜ ಕಥೆಯ ಬೆಂಬಲವಿದೆ. ಅದನ್ನು ಸಿನಿಮಾಕ್ಕೆ ಅಳವಡಿಸುವಲ್ಲಿ ನಿರ್ದೇಶಕರು ೯೯% ರಷ್ಟು ಯಶಸ್ವಿಯಾಗಿದ್ದಾರೆ (ಅನಗತ್ಯವಾಗಿ ದುರಂತ ಅಂತ್ಯ ಮಾಡಿ ಫುಲ್ ಮಾರ್ಕ್ಸ್ ಕಳೆದುಕೊಂಡಿದ್ದಾರೆ). ಚಿತ್ರಕಥೆ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಲು ಸಫಲವಾಗಿದೆ. ರೋಮ್ಯಾಂಟಿಕ್ ಚಿತ್ರಕ್ಕೆ ಸಸ್ಪೆನ್ಸ್ ಥ್ರಿಲರ್‌ನ ಟಚ್ಚಿದೆ. ಅತಿಯೆನಿಸದ ಸಂಭಾಷಣೆಯಿದೆ. ಆ ದಿನಗಳು ನಂತರ ಚೇತನ್ ಮತ್ತೊಮ್ಮೆ ತಮ್ಮ ಪ್ರತಿಭೆ tOತೋರಿದ್ದಾರೆ. ಯುವ ಮನಸ್ಸುಗಳಿಗೆ ಕಚಗುಳಿಯಿಡುವ ಧೂದ್ ಸಾಗರ್ ಜಲಪಾತಕ್ಕೆ ಸರಿಸಮನಾದ ನಾಯಕಿ ನಿತ್ಯಾ ಮೆನನ್ ಇದ್ದಾಳೆ. ಹಸಿರು ಬಿಳುಪಿನ ಹಿನ್ನೆಲೆಯಲ್ಲಿ ಚಿತ್ರವನ್ನು ಸೆರೆಹಿಡಿದು ನಿಮ್ಮ ಮನ-ಮನೆಯ ಚಿತ್ರಪಟಗಳನ್ನಾಗಿಸುವ ಸತ್ಯಹೆಗಡೆ ಕ್ಯಾಮೆರವಿದೆ. ಹಿತವಾದ ಸಾಧುಕೋಕಿಲರವರ ಹಿನ್ನಲೆ ಸಂಗೀತವಿದೆ. ಜೆಸ್ಸಿಗಿಫ್ಟ್ ಸಂಗೀತದಲ್ಲಿ ಗುನುಗುವ ಹಾಡುಗಳಿವೆ. ತಮ್ಮ ನಿಲುವಲ್ಲೇ ನಗಿಸುವ ಸಾಧುಕೋಕಿಲ, ತಬಲಾ ನಾಣಿ, ಬುಲೆಟ್ ಪ್ರಕಾಶ್ ಇದ್ದಾರೆ. ಎಸಿಪಿಯಾಗಿ ತಮಿಳಿನ ಶರತ್ ಕುಮಾರ್ ಗಮನ ಸೆಳೆದರೆ, ವಿಲನ್‌ಗಳು ಚಿತ್ರಕ್ಕೆ ಅಗತ್ಯವಿದ್ದ ಕಡೆ ಮಾತ್ರ ಬಂದು ಹೋಗುವುದು ಸಹ್ಯವಾಗಿದೆ. ಪೋಷಕ ಪಾತ್ರವರ್ಗದಲ್ಲಿ ಬಂದುಹೋಗುವ ಹೆಸರಾಂತರ ಪಡೆಯೇ ಇದೆ. ಇವೆಲ್ಲದರ ಜೊತೆಗೆ ಕಡೆಗೆ ಅನಗತ್ಯವಾದರೂ ಸುಮನ್ ರಂಗನಾಥಳ ಬಳುಕುವ ಸೊಂಟವಿದೆ. ಆ ಐಟಂ ಹಾಡಿನವರೆಗೂ ಫೋಲಿಸ್ ಅಧಿಕಾರಿಯಾಗಿ ಗಮನ ಸೆಳೆಯುವ ಸುಮನ್ ಈ ಹಾಡಿನಲ್ಲಿ ತಮ್ಮ ಸೊಂಟ ಬಳುಕಿಸುತ್ತಾರೆ. ಪ್ರೇಮದ ಪೂಜಾರಿ ಎನ್ನುವ ರಿಮಿಕ್ಸ್ ಹಾಡಿಗೆ ಆನಂದಿಸುವ ಅನೇಕ ಹಿರಿಯ ನಟರ ಪಡೆಯಿದೆ.

          ಅರಮನೆ, ಸಂಜು ವೆಡ್ಸ್ ಗೀತಾ ಎಂಬ ದುರಂತ ಅಂತ್ಯವಾಗುವ ಸಿನಿಮಾಗಳ ಗುಂಗಿನಿಂದ ಇನ್ನೂ ಹೊರಬಂದಿರದಂತೆ ಕಾಣುವ ನಿರ್ದೇಶಕರು ಈ ಸಿನಿಮಾದಲ್ಲೂ ಅನಗತ್ಯವಾಗಿ ನಾಯಕ ನಾಯಕಿಯರಿಗೆ ಶೂಟ್ ಮಾಡಿಸುವುದರ ಮೂಲಕ ತಮ್ಮ ದುರಂತ ಸರಣಿಯನ್ನು ಮುಂದುವರೆಸಿದ್ದಾರೆ. ಆ ಶೂಟ್ ಔಟಿನ ಕಡೆಯ ಸೀನಿಗೂ ಮುಂಚೆ ನೀವು ಸಿನಿಮಾ ಮಂದಿರದಿಂದ ಹೊರಬಿದ್ದರೆ ನಿಮ್ಮ ಮನದಲ್ಲಿ ಈ ವರ್ಷದ ಒಂದು ಉತ್ತಮ ಚಿತ್ರ ದಾಖಲಾಗುತ್ತದೆ. ಕನ್ನಡ ಚಿತ್ರಪ್ರೇಮಿಗಳೇ, ಒಂದು ಅಪರೂಪದ ಪ್ರೀತಿಯ ನೈಜಕಥೆ ಸಿನಿಮಾವಾಗಿ ಮೂಡಿದೆ. ಮರೆಯದಿರಿ, ಮರೆತು ನಿರಾಶರಾಗದಿರಿ.

***





ಈ ಪ್ರತಿಷ್ಠಿತ ಕಥಾ ಮತ್ತು ಕಾದಂಬರಿ ಸ್ಪರ್ಧೆಗೆ ಇನ್ನೇರಡೇ ದಿನ ಬಾಕಿ…

  ಈ ಪ್ರತಿಷ್ಠಿತ ಕಥಾ ಮತ್ತು ಕಾದಂಬರಿ ಸ್ಪರ್ಧೆಗೆ ಇನ್ನೇರಡೇ ದಿನ ಬಾಕಿ… ನಾಡಿನ ಪ್ರತಿಷ್ಠಿತ ʻ ಬುಕ್ ‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ 2024 ಮತ್ತು...