ಬುಧವಾರ, ನವೆಂಬರ್ 3, 2010

ನಿನ್ನದೇ ಧ್ಯಾನದಲ್ಲಿ... ಪರೀಕ್ಷೆ ಕನವರಿಸುತ್ತಾ...

(ನಿನ್ನ ಮನೆಯ, ನನ್ನ ಮನದ ಲಕ್ಷ್ಮಿಯು ನೀನು... (ಮುಂದುವರಿದದ್ದು)

ಅಂದು ರೈಲು ಮುಂದೆ ಮುಂದೆ ಹೋಗಿ ಬಹಳ ಹೊತ್ತಾದರೂ, ನಾನು ನಿಂತಲ್ಲೇ ನಿಂತಿದ್ದೇ ಕಣೇ ಹುಡುಗಿ. ನಿನ್ನ ದರ್ಶನವಾದ ಕ್ಷಣಗಳು ಮತ್ತೆ ಮರುಕಳಿಸಲಿ ಎನ್ನುವ ಹಾರೈಕೆ ಮನದಲ್ಲಿ. ನಿನ್ನನ್ನು ನೋಡಿದಕ್ಕೆ ಒಳಗೊಳಗೇ ತುಂಬಾ ಖುಷಿ. ಯಾರಾದರೂ ನೋಡಿದರೂ ಪರವಾಗಿಲ್ಲ, ತಿಕ್ಕಲ ಎಂದುಕೊಂಡರೂ ಸರಿಯೇ ಎಂದು, ಒಮ್ಮೆ ನನ್ನ ಬಲಗೈಯ ಮುಷ್ಟಿಯನ್ನಿಡಿದು ಮೇಲಕ್ಕೆತ್ತಿ, ಹಿಂದಕ್ಕೆ ಎಳೆಯುತ್ತಾ “yeh! yeh! I got it” ಎಂದು ಉದ್ಗರಿಸಿದೆ.

ಒಲಿವೆನೇಕೆ? ನಲಿವೆನೇಕೆ?

ನಿನ್ನನಂದು ಕಂಡೆನೇಕೆ?

ನನ್ನ ಕೈಯ ಹಿಡಿವೆಯೇಕೆ?

ಇಚ್ಚೆಲಭಿಸಿತೆಂದೆನೇಕೆ?

ಹುಚ್ಚನಂತೆ ಕುಣಿವೆನೇಕೆ?

(ತೀನಂಶ್ರೀ)

ನನ್ನ ಖುಷಿಯನ್ನು ನೋಡಿ ನನಗೇ ನಾಚಿಕೆಯಾಯಿತು. ಮತ್ತೊಮ್ಮೆ ರೈಲು ಹೋದ ಕಡೆ ನೋಡಿ, ನಿನ್ನನ್ನು ಹೇಗಾದರೂ ಮಾಡಿ ಒಲೈಸಬೇಕೆಂಬ ಧೃಡವಾದ ನಿಶ್ಚಯದೊಂದಿಗೆ ಮನೆಯ ಕಡೆಗೆ ಹೆಜ್ಜೆ ಹಾಕಿದೆ.

ಮನೆ ಹೊಕ್ಕವನೇ ಜರ್ಕಿನ್ ಕಿತ್ತೊಗೆದು, ಸೀದಾ ಬಚ್ಚಲು ಮನೆಗೆ ಹೋದೆ. ಹಂಡೆಯಲ್ಲಿ ನೀರು ಹಬೆಯಾಡುತಿತ್ತು. ದಿನಾಲು ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡುತಿದ್ದವನು, ಅವತ್ತು ಅದ್ಯಾವ ದೆವ್ವ ನನ್ನಲ್ಲಿ ಹೊಕ್ಕಿತ್ತೋ ಕಾಣೆ, ಬಟ್ಟೆ ಬಿಚ್ಚಿದವನೇ ಸುಡುವ ನೀರನ್ನೇ ಭರಭರನೆ ಸುರಿದುಕೊಂಡೆ. ಜನ್ಮಕ್ಕಂಟಿದ ಸೋಂಬೇರಿಯೆಂಬ ಶಾಪ ವಿಮುಕ್ತಿಯಾಗಲಿ ಎಂದಿರಬೇಕು. ತುಂಬಿದ್ದ ಹಂಡೆ ಖಾಲಿಯಾಯಿತು. ಮೈ ಒರೆಸಿಕೊಂಡು, ಟವೆಲ್ ಸುತ್ತಿಕೊಂಡು ದೇವರ ಮನೆಗೆ ಹೋದೆ. ಅದಾಗಲೇ ಮನೆಯಲ್ಲಿ ವರಮಹಾಲಕ್ಷ್ಮೀಯ ಪೂಜೆ ಸರಳವಾಗಿ ಮುಗಿದಿತ್ತು. ಕ್ಷಣಕಾಲ, ಕೊಟ್ಟ ವರಕ್ಕೆ ವರಮಹಾಲಕ್ಷ್ಮೀಗೆ ವಂದಿಸಿ, ನನ್ನ ಫೇವರೇಟ್ ಗಾಡ್ ಗಣಪತಿಯ ಆಶೀರ್ವಾದ ಪಡೆದು, ಆಚೆ ಬಂದು, ಅಮ್ಮ ಕೊಟ್ಟ ಶಾವಿಗೆ ಪಾಯಸ ಕುಡಿದು, ತಿಂಡಿ ತಿಂದು, ಹೆಚ್ಚು ಮಾತನಾಡದೇ ನನ್ನ ರೂಂ ಹೊಕ್ಕೆ.

ಅಂದಿನ ನ್ಯೂಸ್ ಪೇಪರ್ ರೂಮಿನಲ್ಲೇ ಇತ್ತು. ಮತ್ತೆ ಬಿಡಿಸಿ ಹುಡುಕಲು ಶುರುಮಾಡಿದೆ. ಈ ಬಾರಿ ನ್ಯೂಸ್‍ಗಾಗಿ ಅಲ್ಲ, ಕೆಲಸಕ್ಕಾಗಿ. ಕೆಲಸದ ಜಾಹೀರಾತಿಗಾಗಿ. ಮನಸ್ಸು ತುಂಬಾ ಒತ್ತಡದಲ್ಲಿತ್ತು. ಅಂತೂ ಇಂತೂ ಒಂದು ಜಾಹೀರಾತು ಕಣ್ಣಿಗೆ ಬಿತ್ತು. ತುಮಕೂರಿನ “ಬುದ್ದ ಕೋ ಆಪರೇಟಿವ್ ಬ್ಯಾಂಕ್‍” ನಲ್ಲಿ ಗುಮಾಸ್ತರ ಐದು ಹುದ್ದೆಗಳಿಗೆ ಅರ್ಜಿ ಕರೆದಿದ್ದರು. ವಿದ್ಯಾಭ್ಯಾಸ ಬಿ.ಕಾಂ. ಎಂದಿತ್ತು. ಅರ್ಜಿ ಸಲ್ಲಿಸಲು ಒಂದು ವಾರ ಸಮಯವಿತ್ತು. ಲಿಖಿತ ಪರೀಕ್ಷೆ ಅಕ್ಟೋಬರ್ 31 ರಂದು ನಡೆಯಲಿದೆ ಎಂಬ ಮಾಹಿತಿಯೂ ಇತ್ತು. ಇಷ್ಟು ಸಾಕಿತ್ತಲ್ಲವೇ ಒಂದು ಕೆಲಸಕ್ಕಾಗಿ ತುಡಿಯುತ್ತಿದ್ದ ನನ್ನ ಜೀವಕ್ಕೆ. ಎದ್ದವನೇ ನನ್ನ ಮಾರ್ಕ್ಸ ಕಾರ್ಡ್ ಗಳನ್ನೆಲ್ಲಾ ತೆಗೆದುಕೊಂಡು, ಬಯೋಡೇಟಾ ಮತ್ತು ಅರ್ಜಿಯನ್ನು ಟೈಪ್ ಮಾಡಿಸಲು ಡಿ.ಟಿ.ಪಿ. ಸೆಂಟರ್ ಹುಡುಕುತ್ತಾ ಹೊರಟೆ. ನೋಡು, ಅಂದಿನವರೆಗೂ ನನ್ನದೊಂದು ಬಯೋಡೇಟಾವು ಇರಲಿಲ್ಲ!

ಅಂದು ಹಬ್ಬವಾದರೂ ಬ್ಯಾಂಕುಗಳಿಗೆ ರಜವಿರಲಿಲ್ಲ. ಅರ್ಜಿಯನ್ನು ಕೊಡಲು ಹೋದರೆ, ಅಲ್ಲಿದ್ದವರಿಗೆಲ್ಲಾ ಆಶ್ಚರ್ಯ? ಅಂದಿನ ಜಾಹೀರಾತಿಗೆ, ಅಂದೇ ಅರ್ಜಿ ಕೊಟ್ಟವನು ನಾನು ಮತ್ತು ನನ್ನದೇ ಮೊದಲ ಅರ್ಜಿ. ಅವರಿಗೆ ಆಶ್ಚರ್ಯವಿರಬಹುದು? ಅವರಿಗೇನು ಗೊತ್ತು ನನ್ನಯ ತುಡಿತ. ಅರ್ಜಿ ಕೊಟ್ಟವನೇ, ಅಲ್ಲೇ ಹತ್ತಿರದಲ್ಲಿದ್ದ ಪುಸ್ತಕದ ಅಂಗಡಿಗೆ ಹೋಗಿ ಬ್ಯಾಂಕ್ ಕ್ಲರಿಕಲ್ ಎಕ್ಸಾಮುಗಳಿಗೆ ಸಂಬಂಧಪಟ್ಟ ಪುಸ್ತಕಗಳ ಬಗ್ಗೆ ವಿಚಾರಿಸಿ, ಎರಡು ಪುಸ್ತಕಗಳನ್ನು ಕೊಂಡು, ಮನೆಗೆ ಹಿಂದಿರುಗಿ ರೂಂ ಸೇರಿಕೊಂಡವನು ಪುಃಖಾನುಪುಃಖವಾಗಿ ಓದಲು ಶುರುಮಾಡಿದೆ. ಹಗಲು-ರಾತ್ರಿಗಳ ಪರಿವೆಯೇ ಇರಲಿಲ್ಲ!

ಈ ನಡುವೆ ಬ್ಯಾಂಕಿನ ಎಕ್ಸಾಮಿಗೆ ಕರೆಯೂ ಬಂತು. ಪ್ರಕಟಣೆಯಂತೆ ಅಕ್ಟೋಬರ್ 31ರಂದೇ ಎಕ್ಸಾಮ್. ಯಾವುದೇ ಕಾರಣಕ್ಕೂ ಸೋಲುವ ಭಯ ಈ ಬಾರಿ ಇರಲಿಲ್ಲ. ನಿನ್ನ ಮೇಲಿನ ಪ್ರೀತಿ ಆ ಆತ್ಮಸ್ಥೇರ್ಯವನ್ನು ನನಗೊದಗಿಸಿತ್ತು. ಇಷ್ಟು ಕಾನ್ಫಿಡೆನ್ಸಿಂದ ನಾನ್ಯಾವ ಪರೀಕ್ಷೆಯನ್ನೂ ಎದುರಿಸಿರಲಿಲ್ಲ. ಸುಮಾರು ನೂರೈವತ್ತಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದಿದ್ದರು. ಕೇವಲ ಐವರಿಗೆ ಮಾತ್ರ ಕೆಲಸ! ಆದರೇನಂತೆ? ಖಂಡಿತಾ ನನಗೆ ಕೆಲಸ ಸಿಗುವುದೆಂಬ ಭರವಸೆಯಿತ್ತು. ಪರೀಕ್ಷೆ ಮುಗಿಯುವ ವೇಳೆಗೆ ನವೆಂಬರ್ ಎರಡನೇ ತಾರೀಖಿನಂದೇ ರಿಸಲ್ಟ್ ನೀಡಲಾಗುವುದು, ಹೆಚ್ಚು ಮಾರ್ಕ್ಸ್ ಪಡೆಯುವ ಇಪ್ಪತ್ತು ಅಭ್ಯರ್ಥಿಗಳಿಗೆ ಇಂಟರ್ವ್ಯೂ ಗೆ ಕರೆ ನೀಡಲಾಗುವುದು ಎಂದು ಹೇಳಿದರು. ನಾನಂತೂ ಉತ್ತರಪತ್ರಿಕೆಯನ್ನು ಕೊಟ್ಟವನೇ ಮನೆಗೆ ಹಿಂದಿರುಗಿ ಇಂಟರ್ವ್ಯೂಗೆ ಸಿದ್ದನಾಗಲಾರಂಭಿಸಿದೆ.

ನವೆಂಬರ್ 1 ಬಂತು. ಕನ್ನಡಮ್ಮನ ಹಬ್ಬ. ಪರೀಕ್ಷೆಗೆ ಓದುವ ಬಿಸಿಯಲ್ಲಿ ಈ ಬಾರಿಯ ಗಣಪತಿಯ ಹಬ್ಬವನ್ನು ಸರಿಯಾಗಿ ಮಾಡಿರಲಿಲ್ಲ. ನನಗಾಗಿ ನೀನು ಬಾಗಿನ ಕೊಡಲು ನನ್ನ ಮನೆಗೆ ಬರುವವರೆಗೆ ಗೌರಿಗಣಪನ ಹಬ್ಬಕ್ಕೆ ಕಳೆಯಿರುವುದಿಲ್ಲ ಬಿಡು! ಆದರೆ, ಕನ್ನಡಮ್ಮನ ಹಬ್ಬವನ್ನು ಮರೆಯಲಾದಿತೇ? ಕನ್ನಡ ಭಾಷೆ ಹಸಿರು ವರ್ಣದ ಹಕ್ಕಿ, ಅದಕ್ಯಾಕೆ ಬೇರೆ ಬಣ್ಣದ ಚಿಂತೆ ಎಂಬ ನಿಲುವು ನನ್ನದು. ಪರೀಕ್ಷೆಯನ್ನು ಚೆನ್ನಾಗಿ ಬರೆದಿದುದರಿಂದ ಧಾವಂತವಿರಲಿಲ್ಲ. ಮನಸ್ಸು ನಿರುಮ್ಮಳವಾಗಿತ್ತು. ನೀನು ಕನ್ನಡಮ್ಮನ ಅಪರಾವತಾರವೆಂದು ನನಗೆ ಗೊತ್ತು. ನಿನ್ನನ್ನೇ ಕನವರಿಸುತ್ತಾ,

“ಕನ್ನಡದ ಹುಡುಗಿಯನ್ನೇ ಪ್ರೀತಿಸಿ,

ನಿಮ್ಮ ಪ್ರೀತಿ ನಿಜವೇ ಆಗಿದ್ದರೇ?

ಅವಳನ್ನೇ ಮದುವೆಯಾಗಿ”

ಎಂಬ ಚುಟುಕ ಬರೆದೆ. ನಾನೇನೋ ನಿನ್ನನ್ನ ಮದುವೆಯಾಗಲು ರೆಡಿ. ನೀನು...? ಎಂಬ ಪ್ರಶ್ನೆ ಅದೇಕೋ ಆ ಕ್ಷಣ ಕಾಡಿತು. ನನ್ನ ಕನಸು ನನಸಾಗದೇ...? ಎಂದು ಚಿಂತಿಸುತ್ತಾ ನಿದ್ರೆಗೆ ಜಾರಿದೆ.

“ಕಳೆ ಎಷ್ಟೆ ಇದ್ದರೇನು? ಕನಸಿರದ ಬಾಳು, ಬಾಳೆ?

ಮಳೆಬಿಲ್ಲು ಸಿಂಗರಿಸದ ಕರಿ ಮುಗಿಲಿನೊಂದು ಮಾಲೆ!”

(ನಾದವಿರದ ಬದುಕು, ನಿತ್ಯೋತ್ಸವ, ನಿಸಾರ್ ಅಹಮದ್)

ನಿದ್ರೆಯಲ್ಲಿ ಅಂದು ಮತ್ತೆ ಓದಿದ “ನಿತ್ಯೋತ್ಸವ” ಕವನ ಸಂಕಲನದ ಕನವರಿಕೆ.

ಬೆಳಿಗ್ಗೆ 10.30 ಕ್ಕೆ ರಿಸಲ್ಟ್^ಗಾಗಿ ಬ್ಯಾಂಕಿನ ಕರೆಯ ನೀರಿಕ್ಷೆಯಲ್ಲಿ ಚಡಪಡಿಸುತ್ತಿದ್ದೆ. ಸುಮಾರು 11ರ ಹೊತ್ತಿಗೆ ನನ್ನ ಮೊಬೈಲ್ ರಿಂಗಣಿಸತೊಡಗಿತು. ರಿಸೀವ್ ಮಾಡಿದಾಗ, “ಹಲೋ ಸಾರ್! ನಾನು ಶಾಂತಲ ಅಂತ, ಬುದ್ದ ಕೋ ಆಪರೇಟಿವ್ ಬ್ಯಾಂಕಿನಿಂದ ಮಾತಾಡ್ತ ಇದೀನಿ” ಎಂಬ ಧ್ವನಿಯೊಂದು ನನ್ನಷ್ಟೇ ಅವಸರದಲ್ಲಿತ್ತು. “ಹಲೋ ನಮಸ್ಕಾರ ಹೇಳಿ ಮೇಡಂ” ಎಂದೆ. ’ಸಾರ್, ಇಂದು ಮಧ್ಯಾಹ್ನ 3 ಗಂಟೆಗೆ ಇಂಟರ್‍ವ್ಯೂ ಇದೆ. ನೀವು ನಿಮ್ಮ ಒರಿಜಿನಲ್ಸ್ ತಗೋಂಡು ಬರ್ಬೇಕು ಸಾರ್” ಎಂದರು. “ಓಕೆ ಮೇಡಂ. ಥ್ಯಾಂಕ್ಯೂ” ಎಂದೆ. “ಓಕೆ ಸಾರ್. ಯೂ ಆರ್ ಮೋಸ್ಟ್ ವೆಲ್ಕಮ್” ಎಂದು ಪೋನಿಟ್ಟರು. ಆ ಕ್ಷಣ ಆಗಸ ಕೈಗೆಟುಕಿದಂತಾಯಿತು.

“ಅಬ್ಬಾ!” ಅದೆಂಥಾ ಕಾನ್ಫೀಡೆನ್ಸೇ ಹುಡುಗಿ ನಿನ್ನ ಪ್ರೀತಿಯಲ್ಲಿ. ನಾ ನಿನ್ನ ಪ್ರೀತಿಸುತ್ತೇನೆಂಬ ವಿಷಯ ಇಷ್ಟೊಂದು ಕಾನ್ಫೀಡೆನ್ಸ್ ಕೊಟ್ಟಿರುವಾಗ, ನೀ ನನ್ನ ಪ್ರೀತಿಸಿದರೆ ಅದು ನೂರ್ಮಡಿಯಾಗಲಿದೆ ಕಣೇ ಹುಡುಗಿ. ನನ್ನ ಉತ್ತರಗಳಿಗೆ ಬ್ಯಾಂಕಿನ ಬೋಡಿನವರು ಅದೆಷ್ಟು ಇಂಪ್ರೆಸ್ ಆದರೇಂದರೆ, ಎಲ್ಲರ ಮುಖದಲ್ಲೂ, ಇಂಥಾ ಹುಡುಗರಿರುತ್ತಾರಾ? ಎಂಬ ಪ್ರಶ್ನೆಯ ಜೊತೆಗೆ ಆಶ್ಚರ್ಯ ಸೂಚಕ! “ನಾಳೆಯಿಂದಲೇ ಕೆಲಸಕ್ಕೆ ಬನ್ನಿ. ಸ್ವಲ್ಪ ಹೊತ್ತು ಹೊರಗೆ ಕಾದಿದ್ದರೆ, ಅಪಾಯಿಂಟ್‍ಮೆಂಟ್ ಲೆಟರ್ ಕೊಡುತ್ತಾರೆ” ಎಂದು ಬೀಳ್ಕೋಟ್ಟರು. ಎಲ್ಲರಿಗೂ ವಂದಿಸಿ ಹೊರಗೆ ಬಂದು ಕುಳಿತೆ.

ಸ್ವಲ್ಪ ಹೊತ್ತಿಗೆ ಇಂಟರ್ವ್ಯೂ ಮುಗಿದು, ಕಡೆಗೆ ಅಲ್ಲಿ ಇಬ್ಬರು ಹುಡುಗಿಯರು ಮತ್ತು ಮೂವರು ಹುಡುಗರು ಮಾತ್ರ ಉಳಿದೆವು. ಪರಸ್ಪರ ಪರಿಚಯಮಾಡಿಕೊಳ್ಳುತ್ತಾ, ನಾವೆಲ್ಲರೂ ನಾಳೆಯಿಂದ ಬ್ಯಾಂಕಿನಲ್ಲಿ ಸಹೋದ್ಯೋಗಿಗಳಾಗುವುದನ್ನು ಕಲ್ಪಿಸಿಕೊಂಡು ಸಂಭ್ರಮಿಸುತ್ತಿದ್ದೇವು. ಅವರಲ್ಲಿ ಒಬ್ಬಳ ಕಣ್ಣುಗಳು ಯಾರನ್ನೋ ಹುಡುಕುತ್ತಿದ್ದವು. ಅವಳ ಬಗ್ಗೆ ಹೇಳುವುದೇ ಬೇಡ ಬಿಡು. ಆದರೆ, ಅವರಲ್ಲಿ ಶಶಿಕುಮಾರ್ ಎಂಬುವವನು ನನ್ನನ್ನು ಇಂಪ್ರೆಸ್ ಮಾಡಿದ. ಅಷ್ಟರಲ್ಲಿ ಬ್ಯಾಂಕಿನ ಹಿರಿಯ ಅಟೆಂಡರ್ ನಗುಮೊಗದೊಂದಿಗೆ ನಮಗೆಲ್ಲಾ ಕಾಫಿ ತಂದು ಕೊಟ್ಟರು. ನಾವೆಲ್ಲಾ ಕಾಫಿ ತೆಗೆದುಕೊಂಡರೂ, ಶಶಿಕುಮಾರ್ ಮಾತ್ರ ಸಂಕೋಚದಿಂದ ಬೇಡವೆನ್ನುತ್ತಿದ್ದ. “ಇನ್ಮೇಲೆ ಇದೇಲ್ಲಾ ಇದ್ದದ್ದೆ, ತಗೋಳಮ್ಮ ಶಶಿ” ಎಂದೆ. ನನಗಾಗಲೇ ಅವನಲ್ಲಿ ಅಷ್ಟೊಂದು ಆತ್ಮೀಯತೆ. ನನ್ನ ಮಾತಿಗೆ ಮರುಳಾಗಿ ಅವನೂ ಕಾಫಿಯನ್ನು ತೆಗೆದುಕೊಂಡ. ಎಲ್ಲರೂ ಸಂತೋಷದಿಂದ ಕಾಫಿ ಹೀರಿದೆವು. ತದನಂತರ, ಆ ಅಟೆಂಡರ್ ಎಲ್ಲರು ಸಿ.ಇ.ಓ. ರವರ ಛೇಂಬರಿಗೆ ಹೋಗಬೇಕೆಂದು ತಿಳಿಸಿದರು. ಅಲ್ಲಿ ಆಸೀನರಾಗಿದ್ದ ಸಿ.ಇ.ಓ. ರವರು ಸೈನ್ ಮಾಡಿಸಿಕೊಂಡು, ಆಲ್ ದಿ ಬೆಸ್ಟ್ ಹೇಳಿ, ನಮಗೆಲ್ಲಾ ಅಪಾಯಿಂಟ್‍ಮೆಂಟ್ ಲೆಟರ್ ಕೊಟ್ಟರು. ನಮಗೆಲ್ಲಾ ಸ್ವರ್ಗಕ್ಕೆ ಮೂರೇ ಗೇಣು. ನಾನಂತೂ, ನಿಂತಲ್ಲೇ ಕುಪ್ಪಳಿಸಿದ್ದೆ. ಸಿ.ಇ.ಓ.ರವರಿಗೆ ಅಭಿನಂದಿಸಿ ಅಲ್ಲಿಂದ ತೆರಳಿದೆವು.

ಇನ್ನೇನೇ ಹುಡುಗಿ? ನಾಳೆಯಿಂದಲೇ ಕೆಲಸಕ್ಕೆ ಹೋಗಬೇಕು. ಕೆಲಸ ಸಿಕ್ಕಿತ್ತಲ್ಲ? ಇನ್ನೇನು ಬೇಕು? ನಾಳೆ ಬೆಳಿಗ್ಗೆಯೇ ಪುಶ್‍ಪುಲ್ ಸಮಯಕ್ಕೆ ಬಂದು ಬಿಡಲೇ...? ಪ್ರಪೋಸ್...? ನಿನಗೆ ಪ್ರಪೋಸ್ ಮಾಡಿ ಬಿಡಲೇ...? ಅಬ್ಬಾ! ಎಂಥಾ ಅರ್ಜೆಂಟು ನನ್ನ ಹುಚ್ಚುಖೋಡಿ ಮನಸ್ಸಿಗೆ. ಇಲ್ಲಾ ಕಣೇ ಹುಡುಗಿ. ಈ ಭರದಲ್ಲಿ ನಾ ನಿನ್ನ ಪ್ರಪೋಸ್ ಮಾಡಿದ್ರೆ, ನೀ ಸತ್ತೇ ಹೋಗ್ತೀಯಾ ಅಷ್ಟೇ! ಹೇಗಿದ್ರೂ ಸ್ವಲ್ಪ ದಿನಗಳಲ್ಲಿ ದೀಪಾವಳಿ ಹಬ್ಬ ಬರ್ತಿದೆ. ಆ ರಜಾದಿನಗಳಲ್ಲಿ, ಎಲ್ಲರೂ ಪಟಾಕಿ ಹಚ್ತಿರಲಿ. ನಾನು ಮಾತ್ರ ನನ್ನ ಎದೆಯಲ್ಲಿನ ಬಾಂಬ್ ಸಿಡಿಯುವ ಮೊದಲೇ ಅದರಲ್ಲಿನ ಮದ್ದನ್ನೇಲ್ಲಾ ತೆಗೆದು ಸುರುಸುರು ಬತ್ತಿ, ಹೂಕುಂಡ ಮಾಡಿಕೊಂಡು, ಆ ಬೆಳಕಿನಲ್ಲಿ ನಿನಗೊಂದು ಪ್ರೇಮ ಪತ್ರ ಬರೀತೀನಿ. ಅದರಲ್ಲೇ ಪ್ರಪೋಸ್ ಮಾಡ್ತೀನಿ. ಕಾಯ್ತಾ ಇರೇ ಲಕ್ಷ್ಮೀ, ದೀಪಾವಳಿಯ ನಂತರ ನಿನಗೊಂದು, ನನ್ನ ಚೊಚ್ಚಲ ಪ್ರೇಮ ಪತ್ರ!

ಬೆಳಗು ಬಾ ಹಣತೆಯನು

ನನ್ನೆದೆಯ ಗುಡಿಯಲ್ಲಿ

ದಿವ್ಯ ದೀಪಾವಳಿಯ ಶುಭಗಳಿಗೆಯಲ್ಲಿ

... (ಜಿಎಸ್‍‍ಸ್)

ಶನಿವಾರ, ಅಕ್ಟೋಬರ್ 30, 2010

ನಾನು “ಕಾಲ”

ಇದೀಗ ತಾನೆ

ಎಲ್ಲಾ ತಂಪಿತ್ತು

ಬಿಸಿ ವಕ್ಕರಿಸಿದಾದರೂ

ಯಾವಾಗ?


ಮೃಷ್ಟಾನ ಭೋಜನ

ಎಂಥಾ ರುಚಿಯಿತ್ತು

ಊಟ ಮುಗಿದಿದ್ದಾದರು

ಯಾವಾಗ?


ನಮಗೆಲ್ಲಾ ವಯಸ್ಸಾಯ್ತು

ಅದು ನಿಮಗಿದೆ

ವಯಸ್ಸಿಗೇ ವಯಸ್ಸಾದದ್ದು

ಯಾವಾಗ?


ಏ! ಯಾರೋ ನೀನು?

ಅಯ್ಯೋ! ನೀ ಸತ್ತೆಯಾ!!

ನೀ ನನ್ನ ಬದುಕಿಸಿದ್ದಾದರೂ

ಯಾವಾಗ?


ನಾನು, ನಾನು

ನಾನು, ನಾನು

ನಾನು ನೀ ಆಗಿದ್ದಾದರು

ಯಾವಾಗ?


ನಾನು “ಕಾಲ!”

ಬಳಿಯಿದ್ದಾಗ ಮರೆತು

ಕಾಲ ಬಳಿ ಬಿಟ್ಟಿರಿ

ನಿಮ್ಮನಗಲಿದಾಗ!


ಆವಾಗ?

ಒಂದಾನೊಂದು ಕಾಲದಲ್ಲಿ...

ಸೋಮವಾರ, ಅಕ್ಟೋಬರ್ 18, 2010

ಅಕ್ಟೋಬರ್ 15 : “ವೈಟ್ ಕೇನ್ ಸೇಫ್ಟಿ ಡೇ”

“ಬಿಳಿ ಬಿದಿರು ಕೋಲು”


ಬೆಂಗಳೂರಿನ ಮಾಗಡಿರಸ್ತೆಯ ಹತ್ತನೇ ಕ್ರಾಸಿನಲ್ಲಿ ಸಿಟಿ ಬಸ್ ಇಳಿದವನು, ಮೆಟ್ರೊ ಕಾಮಗಾರಿಯಿಂದ ಇಕ್ಕಟ್ಟಾದ ರಸ್ತೆಯಲ್ಲಿ ನಡೆಯುತ್ತಿರುವಾಗ ಅಂಧರೊಬ್ಬರ ಕೋಲಿಗೆ ನನ್ನ ಕಾಲು ತಡೆಯಾಯಿತು. “ಛೇ...” ಎಂಬ ಬೇಸರದ ಉದ್ಗಾರ ಅವರ ಬಾಯಿಂದ ಬಂತು. ಆ ಉದ್ಗಾರಕ್ಕೆ ಕಾರಣನಾದ ನನಗೆ ಬಹಳ ಬೇಸರವಾಯಿತು. ಜೊತೆಗೆ, ಅವರ ಕೈಯಲ್ಲಿದ್ದ ಬಿಳಿಕೋಲಿನ ಬಗ್ಗೆ ಆಶ್ಚರ್ಯವಾಯಿತು!

ಇಂಗ್ಲೆಂಡಿನ ಬ್ರಿಸ್ಟಾಲ್ನಗಲ್ಲಿನ ಕಲಾವಿದ ಜೇಮ್ಸ್ ಬಿಗ್ಸ್ 1921 ರಲ್ಲಿ ಬಿಳಿ ಬಿದಿರು ಕಡ್ಡಿಯನ್ನು ಉಪಯೋಗಕ್ಕೆ ತಂದುದಾಗಿ ಹೇಳಿಕೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಜೇಮ್ಸ್ ಬಿಗ್ ದೃಷ್ಟಿ ಹೋಯಿತು. ರಸ್ತೆ ದಾಟಲು ಅವರು ತುಂಬಾ ಕಷ್ಟಪಡಬೇಕಾಯಿತು. ಕೈಯಲ್ಲಿ ಕೋಲು ಹಿಡಿದರಾದರೂ ವಾಹನ ಚಾಲಕರ ಗಮನ ಅತ್ತ ಹರಿದೀತು ಎಂಬ ನಂಬಿಕೆಯೂ ಫಲ ಕೊಡಲಿಲ್ಲ. ಯಾಕೆಂದರೆ ಎಂತೆಂಥದೋ ಬಣ್ಣದ ಕಡ್ಡಿ ಚಾಲಕರ ಕಣ್ಣಿಗೆ ಬೀಳುತ್ತಿರಲಿಲ್ಲ. ಅವರಿಗೊಂದು ಉಪಾಯ ಹೊಳೆಯಿತು. ಬಿದಿರು ಕಡ್ಡಿಗೆ ಬಿಳಿ ಬಣ್ಣ ಬಳಿದರು. ಅದನ್ನು ಹಿಡಿದು ನಡೆದರು. ರಸ್ತೆಗಳಲ್ಲಿ ವಾಹನ ಚಾಲಕರ ಕಣ್ಣಿಗೆ ಅದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಜನ ಬಿಳಿ ಬಿದಿರುಕಡ್ಡಿಯನ್ನು ಹಿಡಿದ ಜೇಮ್ಸ್ ಅನ್ನು ಸುಲಭವಾಗಿ ಗುರುತಿಸಿ, ರಸ್ತೆಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತಿದ್ದರು. ಕೆಲವರು ಕೈ ಹಿಡಿದು ರಸ್ತೆ ದಾಟಿಸಿದ್ದೂ ಉಂಟು.

ಹತ್ತು ವರ್ಷಗಳ ನಂತರ ಗಿಲ್ಲಿ ಡಿ ಹರ್ಬೆಮಾಂಟ್ ಎಂಬ ಫ್ರ್ಂಚ್ ನಾಗರೀಕ ಬಿಳಿಬಿದಿರು ಕೋಲನ್ನು ಇನ್ನಷ್ಟು ಜನಪ್ರಿಯಗೊಳಿಸಲು ಯತ್ನಿಸಿದರು. ದೃಷ್ಟಿಹೀನರಿಗೆ ಬಿಳಿ ಕಡ್ಡಿ ಬಳಸುವ ಸಲಹೆ ನೀಡಿದರು. ಅದು ಬರಬರುತ್ತಾ ಜನಪ್ರಿಯವೂ ಆಯಿತು. ಅಲ್ಲಿಂದ ಬಿಳಿ ಬಿದಿರು ಕಡ್ಡಿ ಯುರೋಪ್ ರಾಷ್ಟ್ರಗಳನ್ನು ಪ್ರವೇಶಿಸಿತು.

1945ರಲ್ಲಿ ಡಾ. ವಿಲಿಯಂ ರಿಚರ್ಡ್ ಹೂವರ್ (ಬಾಲ್ಟಿಮೋರ್ ನ ಹೆಸರಾಂತ ಕಣ್ಣಿನ ವೈದ್ಯ) ಉದ್ದದ ಅಲ್ಯುಮಿನಿಯಂ ಕಡ್ಡಿಯನ್ನು ದೃಷ್ಟಿಹೀನರ ಬಳಕೆಗೆಂದು ಅಭಿವೃದ್ಧಿಪಡಿಸಿದರು. ಇದನ್ನು ಸಣ್ಣಗೆ ಮಡಿಸಿ ಚೀಲದಲ್ಲಿ ಇಟ್ಟುಕೊಳ್ಳುವಂತೆ ಅವರು ವಿನ್ಯಾಸಗೊಳಿಸಿದರು. ಕ್ರಮೇಣ ಇದೇ ಸ್ವರೂಪದ ಬಿದಿರು ನಡೆಗೋಲು ಬಿಳಿ ಬಣ್ಣವನ್ನು ಪಡೆದುಕೊಂಡಿತು. ಈಗ ಬಿಳಿ ಬಣ್ಣದ ನಡೆಗೋಲೇ ಹೆಚ್ಚು ಬಳಕೆಯಲ್ಲಿರುವುದು.

ಹಾದಿಯಲ್ಲಿ ಇರುವ ವಸ್ತುಗಳನ್ನು ಸ್ಪರ್ಶಿಸಿದಾಗ ಏನಿದೆ ಎಂಬುದನ್ನು ಸ್ಪಷ್ಟವಾಗಿ ಅಂಧರಿಗೆ ತಿಳಿಸುವಂಥ ಗುಣ ಬಿದಿರಿಗೆ ಇದೆ. ಅದಕ್ಕೇ ದೃಷ್ಟಿಹೀನರು ಅದನ್ನು ವ್ಯಾಪಕವಾಗಿ ಬಳಸುವುದು. ಬಿಳಿ ಬಿದಿರುಗೋಲಿನ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ ೧೫ ರಂದು ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಆ ದಿನವನ್ನು “ವೈಟ್ ಕೇನ್ ಸೇಫ್ಟಿ ಡೇ” ಎಂದೇ ಆಚರಿಸುತ್ತಾರೆ.

(ಮಾಹಿತಿ – ಸಂಗ್ರಹ)

ನಿಮ್ಮ ಗುರಿ ಏನು?

ಸ್ನೇಹಿತರೇ, ಜೀವನದಲ್ಲಿ ಒಂದು ಗುರಿ ಇರಬೇಕಾಗುತ್ತದೆ. ನೀವು ಇರುವುದರಲ್ಲೇ ಸಂತುಷ್ಟರಾಗಿ ಇರುತ್ತೇನೆ ಎಂದರೆ ನಿಮಗೆ ಯಾವುದೇ ಗುರಿಯ ಅವಶ್ಯಕತೆ ಇರುವುದಿಲ್ಲ. ಆದರೆ, ಏನನ...