ಶನಿವಾರ, ಅಕ್ಟೋಬರ್ 30, 2010

ನಾನು “ಕಾಲ”

ಇದೀಗ ತಾನೆ

ಎಲ್ಲಾ ತಂಪಿತ್ತು

ಬಿಸಿ ವಕ್ಕರಿಸಿದಾದರೂ

ಯಾವಾಗ?


ಮೃಷ್ಟಾನ ಭೋಜನ

ಎಂಥಾ ರುಚಿಯಿತ್ತು

ಊಟ ಮುಗಿದಿದ್ದಾದರು

ಯಾವಾಗ?


ನಮಗೆಲ್ಲಾ ವಯಸ್ಸಾಯ್ತು

ಅದು ನಿಮಗಿದೆ

ವಯಸ್ಸಿಗೇ ವಯಸ್ಸಾದದ್ದು

ಯಾವಾಗ?


ಏ! ಯಾರೋ ನೀನು?

ಅಯ್ಯೋ! ನೀ ಸತ್ತೆಯಾ!!

ನೀ ನನ್ನ ಬದುಕಿಸಿದ್ದಾದರೂ

ಯಾವಾಗ?


ನಾನು, ನಾನು

ನಾನು, ನಾನು

ನಾನು ನೀ ಆಗಿದ್ದಾದರು

ಯಾವಾಗ?


ನಾನು “ಕಾಲ!”

ಬಳಿಯಿದ್ದಾಗ ಮರೆತು

ಕಾಲ ಬಳಿ ಬಿಟ್ಟಿರಿ

ನಿಮ್ಮನಗಲಿದಾಗ!


ಆವಾಗ?

ಒಂದಾನೊಂದು ಕಾಲದಲ್ಲಿ...

ಸೋಮವಾರ, ಅಕ್ಟೋಬರ್ 18, 2010

ಅಕ್ಟೋಬರ್ 15 : “ವೈಟ್ ಕೇನ್ ಸೇಫ್ಟಿ ಡೇ”

“ಬಿಳಿ ಬಿದಿರು ಕೋಲು”


ಬೆಂಗಳೂರಿನ ಮಾಗಡಿರಸ್ತೆಯ ಹತ್ತನೇ ಕ್ರಾಸಿನಲ್ಲಿ ಸಿಟಿ ಬಸ್ ಇಳಿದವನು, ಮೆಟ್ರೊ ಕಾಮಗಾರಿಯಿಂದ ಇಕ್ಕಟ್ಟಾದ ರಸ್ತೆಯಲ್ಲಿ ನಡೆಯುತ್ತಿರುವಾಗ ಅಂಧರೊಬ್ಬರ ಕೋಲಿಗೆ ನನ್ನ ಕಾಲು ತಡೆಯಾಯಿತು. “ಛೇ...” ಎಂಬ ಬೇಸರದ ಉದ್ಗಾರ ಅವರ ಬಾಯಿಂದ ಬಂತು. ಆ ಉದ್ಗಾರಕ್ಕೆ ಕಾರಣನಾದ ನನಗೆ ಬಹಳ ಬೇಸರವಾಯಿತು. ಜೊತೆಗೆ, ಅವರ ಕೈಯಲ್ಲಿದ್ದ ಬಿಳಿಕೋಲಿನ ಬಗ್ಗೆ ಆಶ್ಚರ್ಯವಾಯಿತು!

ಇಂಗ್ಲೆಂಡಿನ ಬ್ರಿಸ್ಟಾಲ್ನಗಲ್ಲಿನ ಕಲಾವಿದ ಜೇಮ್ಸ್ ಬಿಗ್ಸ್ 1921 ರಲ್ಲಿ ಬಿಳಿ ಬಿದಿರು ಕಡ್ಡಿಯನ್ನು ಉಪಯೋಗಕ್ಕೆ ತಂದುದಾಗಿ ಹೇಳಿಕೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಜೇಮ್ಸ್ ಬಿಗ್ ದೃಷ್ಟಿ ಹೋಯಿತು. ರಸ್ತೆ ದಾಟಲು ಅವರು ತುಂಬಾ ಕಷ್ಟಪಡಬೇಕಾಯಿತು. ಕೈಯಲ್ಲಿ ಕೋಲು ಹಿಡಿದರಾದರೂ ವಾಹನ ಚಾಲಕರ ಗಮನ ಅತ್ತ ಹರಿದೀತು ಎಂಬ ನಂಬಿಕೆಯೂ ಫಲ ಕೊಡಲಿಲ್ಲ. ಯಾಕೆಂದರೆ ಎಂತೆಂಥದೋ ಬಣ್ಣದ ಕಡ್ಡಿ ಚಾಲಕರ ಕಣ್ಣಿಗೆ ಬೀಳುತ್ತಿರಲಿಲ್ಲ. ಅವರಿಗೊಂದು ಉಪಾಯ ಹೊಳೆಯಿತು. ಬಿದಿರು ಕಡ್ಡಿಗೆ ಬಿಳಿ ಬಣ್ಣ ಬಳಿದರು. ಅದನ್ನು ಹಿಡಿದು ನಡೆದರು. ರಸ್ತೆಗಳಲ್ಲಿ ವಾಹನ ಚಾಲಕರ ಕಣ್ಣಿಗೆ ಅದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಜನ ಬಿಳಿ ಬಿದಿರುಕಡ್ಡಿಯನ್ನು ಹಿಡಿದ ಜೇಮ್ಸ್ ಅನ್ನು ಸುಲಭವಾಗಿ ಗುರುತಿಸಿ, ರಸ್ತೆಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತಿದ್ದರು. ಕೆಲವರು ಕೈ ಹಿಡಿದು ರಸ್ತೆ ದಾಟಿಸಿದ್ದೂ ಉಂಟು.

ಹತ್ತು ವರ್ಷಗಳ ನಂತರ ಗಿಲ್ಲಿ ಡಿ ಹರ್ಬೆಮಾಂಟ್ ಎಂಬ ಫ್ರ್ಂಚ್ ನಾಗರೀಕ ಬಿಳಿಬಿದಿರು ಕೋಲನ್ನು ಇನ್ನಷ್ಟು ಜನಪ್ರಿಯಗೊಳಿಸಲು ಯತ್ನಿಸಿದರು. ದೃಷ್ಟಿಹೀನರಿಗೆ ಬಿಳಿ ಕಡ್ಡಿ ಬಳಸುವ ಸಲಹೆ ನೀಡಿದರು. ಅದು ಬರಬರುತ್ತಾ ಜನಪ್ರಿಯವೂ ಆಯಿತು. ಅಲ್ಲಿಂದ ಬಿಳಿ ಬಿದಿರು ಕಡ್ಡಿ ಯುರೋಪ್ ರಾಷ್ಟ್ರಗಳನ್ನು ಪ್ರವೇಶಿಸಿತು.

1945ರಲ್ಲಿ ಡಾ. ವಿಲಿಯಂ ರಿಚರ್ಡ್ ಹೂವರ್ (ಬಾಲ್ಟಿಮೋರ್ ನ ಹೆಸರಾಂತ ಕಣ್ಣಿನ ವೈದ್ಯ) ಉದ್ದದ ಅಲ್ಯುಮಿನಿಯಂ ಕಡ್ಡಿಯನ್ನು ದೃಷ್ಟಿಹೀನರ ಬಳಕೆಗೆಂದು ಅಭಿವೃದ್ಧಿಪಡಿಸಿದರು. ಇದನ್ನು ಸಣ್ಣಗೆ ಮಡಿಸಿ ಚೀಲದಲ್ಲಿ ಇಟ್ಟುಕೊಳ್ಳುವಂತೆ ಅವರು ವಿನ್ಯಾಸಗೊಳಿಸಿದರು. ಕ್ರಮೇಣ ಇದೇ ಸ್ವರೂಪದ ಬಿದಿರು ನಡೆಗೋಲು ಬಿಳಿ ಬಣ್ಣವನ್ನು ಪಡೆದುಕೊಂಡಿತು. ಈಗ ಬಿಳಿ ಬಣ್ಣದ ನಡೆಗೋಲೇ ಹೆಚ್ಚು ಬಳಕೆಯಲ್ಲಿರುವುದು.

ಹಾದಿಯಲ್ಲಿ ಇರುವ ವಸ್ತುಗಳನ್ನು ಸ್ಪರ್ಶಿಸಿದಾಗ ಏನಿದೆ ಎಂಬುದನ್ನು ಸ್ಪಷ್ಟವಾಗಿ ಅಂಧರಿಗೆ ತಿಳಿಸುವಂಥ ಗುಣ ಬಿದಿರಿಗೆ ಇದೆ. ಅದಕ್ಕೇ ದೃಷ್ಟಿಹೀನರು ಅದನ್ನು ವ್ಯಾಪಕವಾಗಿ ಬಳಸುವುದು. ಬಿಳಿ ಬಿದಿರುಗೋಲಿನ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ ೧೫ ರಂದು ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಆ ದಿನವನ್ನು “ವೈಟ್ ಕೇನ್ ಸೇಫ್ಟಿ ಡೇ” ಎಂದೇ ಆಚರಿಸುತ್ತಾರೆ.

(ಮಾಹಿತಿ – ಸಂಗ್ರಹ)

ಶುಕ್ರವಾರ, ಅಕ್ಟೋಬರ್ 8, 2010

ಸಿಡಿಲಿನ ಹಂಗು

ಅರ್ಧರಾತ್ರಿಯಲ್ಲಿ ಸಿಡಿಲಂತೆ?

ಹೆಂಡತಿ ಬೆಚ್ಚಿ ಬೆದರಿ

ಅವನ ತೆಕ್ಕೆಗೆ ಬಿದ್ದು

ಅರ್ಧಗಂಟೆ ಬಿಡಲಿಲ್ಲವಂತೆ!



ಗೆಳೆಯನೊಬ್ಬ ಹೇಳಿದಾಗ

ಹೊಟ್ಟೆ ಉರಿಯಿತು.

ಅಯ್ಯೋ...! ನನಗೂ ನನ್ನ

ನಲ್ಲೆಗೂ ಎಚ್ಚರವೇ ಆಗಲಿಲ್ಲ!



ಬಂದವನೇ ನನ್ನವಳಿಗೆ ಹೇಳಿದೆ

ಬಿದ್ದು ಬಿದ್ದು ನಕ್ಕಳು.

ಏನು ದೊಡ್ಡ ರೋಮಾನ್ಸ...?

ನಮಗೆ ಎಚ್ಚರವೇ ಆಗಲಿಲ್ಲವೆಂದಳು!



ತುಸು ಯೋಚಿಸಿ ನಸುನಕ್ಕಿ ನಾನಂದೆ

ಆಗಷ್ಟೆ ರಮಿಸಿ, ಪರಸ್ಪರ

ತೆಕ್ಕೆಯಲ್ಲಿ ವಿರಮಿಸುತ್ತಿದ್ದ

ನಮಗೇಕೆ ಸಿಡಿಲಿನ ಹಂಗು?

- ಗುಬ್ಬಚ್ಚಿ ಸತೀಶ್.

ಅಮೇಜಾನ್‌ "ಗ್ರೇಟ್‌ ಸಮ್ಮರ್‌ ಸೇಲ್"‌

ಸ್ನೇಹಿತರೇ, ಇಂದಿನಿಂದ ಅಮೇಜಾನ್‌ "ಗ್ರೇಟ್‌ ಸಮ್ಮರ್‌ ಸೇಲ್"‌ ಶುರುವಾಗಿದ್ದು, ನಿಮಗೆ ಅಗತ್ಯವಿರುವ ವಸ್ತುಗಳನ್ನು ಹೆಚ್ಚಿನ ರಿಯಾಯಿತಿಯಲ್ಲಿ ಕೊಳ್ಳಲು ಸದಾವ...