ಶುಕ್ರವಾರ, ಏಪ್ರಿಲ್ 3, 2026

ದಾವಣಗೆರೆಯಲ್ಲಿ ಸಿಟಿ ಬಸ್‌ ಹಿಡಿದು...

 ಸ್ನೇಹಿತರೇ, ನಮಸ್ಕಾರ.



ನಾನು 2025ರ ಆಗಸ್ಟ್‌ ತಿಂಗಳಿನಿಂದ ದಾವಣಗೆರೆ ನಿವಾಸಿಯಾಗಿರುವುದು ನಿಮಗೆಲ್ಲಾ ಗೊತ್ತೇ ಇದು. 2020ರ ಆಗಸ್ಟ್‌ ತಿಂಗಳಿನಿಂದ ನಾನು ನನ್ನ ಪ್ರೀತಿಯ ಬರವಣಿಗೆ, ಓದು, ಸುತ್ತಾಟ, ಪುಸ್ತಕಗಳ ಮಾರಾಟ, ಪ್ರಕಾಶನದಲ್ಲಿಯೇ ತೊಡಗಿಕೊಂಡಿದ್ದೇನೆ. ಕರೋನ ಲಾಕ್‌ ಡೌನ್‌ ಸಂದರ್ಭದಲ್ಲಿ ನನ್ನ ಜೀವನದ ಹಲವು ಕನಸುಗಳನ್ನು ನನಸಾಗಿಸಿಕೊಳ್ಳಬೇಕು, ಸ್ವತಂತ್ರವಾಗಿ ಜೀವಿಸಿಬೇಕು ಎಂಬೆಲ್ಲಾ ಕನಸುಗಳನ್ನು ಕಂಡು ನನ್ನ ಬ್ಯಾಂಕ್‌ ವೃತ್ತಿಗೆ ವಿದಾಯ ಹೇಳಿದೆ. ಆದರೆ, ತಿಂಗಳ ಸಂಬಳ ಬರುವ ಕೆಲಸವಿಲ್ಲದೆ ಆರ್ಥಿಕವಾಗಿ ಸಬಲರಾಗುವುದು ಬಹಳ ಕಷ್ಟವಿದೆ. ಆದರೂ, ನಮ್ಮ ಪ್ರಯತ್ನಗಳನ್ನು ಮುಂದುವರಿಸಲೇ ಬೇಕು.

ಈ ನಿಟ್ಟಿನಲ್ಲಿ ತುಮಕೂರಿನ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ನನ್ನ ಮಡದಿ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಪ್ರಯತ್ನ ಮುಂದುವರೆಸಿದ್ದರು. ಬೆಂಗಳೂರಿನ ಯಾವುದಾದರೂ ಖಾಸಗಿ ಶಾಲೆಯಲ್ಲಿ ಪ್ರಿನ್ಸಿಪಾಲ್‌ ಆಗಬೇಕಿದ್ದ ಅವರ ಕನಸಿಗೆ ಅಡ್ಡಿಯಾಗಿದ್ದು ಅಲ್ಲಿನ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಕನ್ನಡಿಗರ ವಿರೋಧಿ ಮನಸ್ಥಿತಿ. ನಾನೇ ಕಂಡಂತೆ ಅವರಿಗೆ ಅವರ ಶಾಲೆಗಳಲ್ಲಿ ಉನ್ನತ ಮಟ್ಟದ ಸಿಬ್ಬಂದಿಗಳಾಗಲು ಕನ್ನಡಿಗರು ಬೇಕಿಲ್ಲ. ಆದಕಾರಣ, ಪ್ರಯತ್ನದ ಮುಂದುವರಿದ ಬಾಗವಾಗಿ ದಾವಣಗೆರೆಯ ಕೊಂಡಜ್ಜಿಯಲ್ಲಿರುವ ಪೋಲೀಸ್‌ ಪಬ್ಲಿಕ್‌ ಶಾಲೆಗೆ ಪ್ರಿನ್ಸಿಪಾಲ್‌ ಆಗಿ ಆಕೆ ಬರಬೇಕಾಯಿತು. 

ಮಧ್ಯ ಕರ್ನಾಟಕ ದಾವಣಗೆರೆ ನಾನು ಎಂದೂ ನೋಡಿರದ ಊರು. ಒಮ್ಮೆ ರೈಲಿನಲ್ಲಿ ಹರಿಹರಕ್ಕೆ ಹೋಗುವಾಗ ನೋಡಿದ್ದು ಬಿಟ್ಟರೆ ಬೇರೆ ಮಾತೇ ಇಲ್ಲ. ಆದರೂ ಜೀವನದ ಮುಂದುವರಿದ ಭಾಗವಾಗಿ ಇಲ್ಲಿಗೆ ಬಂದೆವು. ದಾವಣಗೆರೆಯಲ್ಲಿಯೇ ವಾಸ ಜೀವನ ಶುರುವಾಯಿತು. ಈ ಮಧ್ಯೆ ಓದಿನ ಸಲುವಾಗಿ ಮಗಳು ಹಾಸ್ಟೆಲ್‌ ಸೇರಿಸಿದ್ದರಿಂದ ಆಗಾಗ ತುಮಕೂರಿಗೆ ಓಡಾಡುವುದು ಅನಿವಾರ್ಯವಾಯಿತು.

ನಾನು ತುಮಕೂರಿಗೆ ಹೋಗುವಾಗ ದಾವಣಗೆರೆ ಬಸ್ಟಾಂಡಿನಲ್ಲಿ ನನ್ನ ಸ್ಕೂಟರ್‌ ನಿಲ್ಲಿಸಿ ತುಮಕೂರಿಗೆ ಹೋಗಿ ಬರುವುದು ಅಭ್ಯಾಸವಾಯಿತು. ರಾತ್ರಿ ಎಷ್ಟು ಹೊತ್ತಿಗೆ ಬಂದರೂ ಮನೆಗೆ ಆರಾಮವಾಗಿ ತಲುಪಬಹುದಿತ್ತು. ಆದರೆ, ಒಮ್ಮೆ ಬಂದು ಇಲ್ಲಿ ಇಳಿದಾಗ ಮಳೆ ತುಂಬಾ ಜಾಸ್ತಿ ಬರುತ್ತಿದ್ದರಿಂದ ಆ ರಾತ್ರಿ ಆಟೋಗೆ ಬಂದೆ. ಗಾಡಿ ಅಲ್ಲಿಯೇ ಉಳಿಯಿತು.

ಬೆಳಿಗ್ಗೆ ಎದ್ದವನೇ ಬಸ್ಟಾಂಡಿಗೆ ಹೋಗಿ ಗಾಡಿ ತರೋಣವೆಂದುಕೊಂಡೆ. ಇಲ್ಲಿಂದ (ಅರುಣ ಸರ್ಕಲ್)‌ ಬಸ್ಟಾಂಡಿಗೆ ಆಟೋದವರು ಐವತ್ತು ರೂ ಕೇಳ್ತಾರೆ. ಸೀಟ್‌ ಆಟೋದವರು ಇಪ್ಪತ್ತು ರೂ ಕೇಳ್ತಾರೆ ಎಂದು ಗೊತ್ತಿದ್ದರಿಂದ, ಸಿಟಿ ಬಸ್ಸಿಗೆ ವೈಟ್‌ ಮಾಡಿದ ಮೇಲೆ ಗೊತ್ತಾಯ್ತು ಸೀದಾ ಬಸ್ಸ್ಟಾಂಡಿಗೆ ಹೋಗುವ ಸಿಟಿ ಬಸ್‌ ಇಲ್ಲಿಂದ ಸಿಗುವುದಿಲ್ಲ ಎಂದು. ಸಿಕ್ಕಿದ ಒಂದು ಸಿಟಿ ಬಸ್‌ ಹತ್ತಿದಾಗ ಈ ಮಾಹಿತಿ ಗೊತ್ತಾಯಿತು. ಅವರು ಹೇಳಿದ್ದರಿಂದ ರೈಲ್ವೇ ಸ್ಟೇಷನ್‌ ಮುಂಭಾಗ ಇಳಿದೆ. ‌ಅವರೇನು ಚಾರ್ಜ್‌ ತೆಗೆದುಕೊಳ್ಳಲಿಲ್ಲ! ಅಲ್ಲಿಂದ ಹರಿಹರದಿಂದ ಬಂದ ಶೆಟಲ್‌ ಬಸ್ಸಿಗೆ ಹತ್ತಿ ಬಸ್ಟಾಂಡಿಗೆ ಹೋದೆ. ಅದರಲ್ಲಿ ಒಂಭತ್ತು ರೂಪಾಯಿ ಚಾರ್ಜು. ಹತ್ತು ರೂ ಕೊಟ್ಟಿದ್ದೆ. ಕಂಡಕ್ಟರ್‌ ಒಂದು ರೂ ಚಿಲ್ಲರೆ ಬರೆದು ಕೊಟ್ಟಿದ್ದರು. ಆದರೆ, ಸುಮಾರು ಅರ್ಧಗಂಟೆಯಲ್ಲಿ ಎರಡು ಕಿಮೀ ಬಸ್ಟಾಂಡ್‌ ತಲುಪಿದ ಖುಷಿಗೆ ಚಿಲ್ಲರೆ ಪಡೆಯುವುದು ಮರೆತೇ ಹೋದೆ.

ಬೆಂಗಳೂರಿನಲ್ಲಿ ಹಲವು ಬಾರಿ ಸಿಟಿ ಬಸ್ಸಿನಲ್ಲಿ ಓಡಾಡಿದ್ದೇನೆ. ತುಮಕೂರಿನಲ್ಲಿ ಓಡಾಡಿದ್ದು ಬಹಳ ಕಡಿಮೆ. ದಾವಣಗೆರೆಯಲ್ಲಿ ಮೊದಲ ಬಾರಿಗೆ ಸಿಟಿ ಬಸ್ಸಿನಲ್ಲಿ ಪ್ರಯಾಣಿಸಿದ್ದು ಖುಷಿ ಆಯಿತು. ಪುಟ್ಟ ಪುಟ್ಟ ಸಿಟಿ ಬಸ್ಸುಗಳು ಮಂಗಳೂರಿನಂತೆ ಇಲ್ಲೂ ಕೂಡ ಕಂಡು ಬರುತ್ತವೆ. 

- ಗುಬ್ಬಚ್ಚಿ ಸತೀಶ್.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ದಾವಣಗೆರೆಯಲ್ಲಿ ಸಿಟಿ ಬಸ್‌ ಹಿಡಿದು...

 ಸ್ನೇಹಿತರೇ, ನಮಸ್ಕಾರ. ನಾನು 2025ರ ಆಗಸ್ಟ್‌ ತಿಂಗಳಿನಿಂದ ದಾವಣಗೆರೆ ನಿವಾಸಿಯಾಗಿರುವುದು ನಿಮಗೆಲ್ಲಾ ಗೊತ್ತೇ ಇದು. 2020ರ ಆಗಸ್ಟ್‌ ತಿಂಗಳಿನಿಂದ ನಾನು ನನ್ನ ಪ್ರೀತಿ...