ಪೋಸ್ಟ್‌ಗಳು

ಅಕ್ಟೋಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಟ್ಯೂಷನ್ ಫೀಸು (ಒಂದು ಕಥೆ)

ಅಂದು ಅಮರಗೊಂಡದ ಮಧ್ಯದಲ್ಲಿದ್ದ ದೇಶಾವರಪೇಟೆಯ ದೀಪು ಮನೆಯಲ್ಲಿ ಸಂಭ್ರಮವೋ ಸಂಭ್ರಮ! ಮಗ ಏಳನೇ ತರಗತಿಯಲ್ಲಿ ಶಾಲೆಗೇ ಎರಡನೆಯವನಾಗಿ ಪಾಸಾಗಿದ್ದಾನೆ ಎಂದು ಜಯಣ್ಣ ಬೀಗುತ್ತಿದ್ದರೆ, ಅಮ್ಮ ಮಂಜುಳಳಿಗೆ ಕೂತ ಕಡೆ ಕೂಡಲಾಗುತ್ತಿಲ್ಲ. “ನಮ್ಮನೇಲಿ ಯಾರೂ ಇಷ್ಟೊಂದು ಚೆನ್ನಾಗಿ ಓದಿರಲಿಲ್ಲ” ಎಂದು ಒಬ್ಬರಿಗೊಬ್ಬರು ಹೇಳಿಕೊಂಡು ಇಬ್ಬರೂ ಮಹದಾನಂದದಲ್ಲಿ ತೇಲುತ್ತಿದ್ದರು. ಅವರಿಬ್ಬರೂ ಅದಾಗಲೇ ಬೀದಿಯಲ್ಲೆಲ್ಲಾ ಮಗನ ಗುಣಗಾನ ಮಾಡಿ ಮನೆಗೆ ಬಂದು ವರಾಂಡದಲ್ಲಿ ಕುಳಿತು ಒಬ್ಬರನೊಬ್ಬರ ಮುಖ ನೋಡಿ ಸುಮ್ಮಸುಮ್ಮನೆ ನಗುತ್ತಿದ್ದಾರೆ. ಮಧ್ಯದಲ್ಲಿ “ಅವನು ನನ್ನ ಮಗ, ನನ್ನ ಮಗ” ಎಂದು ಹುಸಿ ಜಗಳವಾಡುತ್ತಿದ್ದಾರೆ. ಆಗ ಇದ್ದಕ್ಕಿದ್ದಂತೆ ಏನೋ ಕಳೆದು ಕೊಂಡುವಳಂತೆ ವರಾಂಡದಲ್ಲೆಲ್ಲಾ ಕಣ್ಣಾಡಿಸಿದ ಮಂಜುಳ, “ದೀಪು ಎಲ್ರಿ ಕಾಣ್ತಿಲ್ಲಾ?” ಎಂದಳು. “ಯಾರೋ ಸ್ನೇಹಿತನ ಮನೆಗೆ ಹೋಗಿರ್ಬೇಕು, ಬರ್ತಾನೆ ಬಿಡೇ” ಎಂದ ಜಯಣ್ಣ ಮುಂದುವರಿಯುತ್ತಾ “ನಾವು ಆಚೆ ಹೋದಾಗ ಅವನು ಮನೆಯಲ್ಲೇ ಇದ್ದ, ಅಲ್ವಾ!?” ಎಂದು ಆಶ್ಚರ್ಯಭರಿತನಾಗಿ ಹೇಳುತ್ತಾ “ದೀಪು, ದೀಪು” ಎನ್ನುತ್ತಾ ಮನೆ ಒಳಗಡೆ ಹುಡುಕಲಾರಂಭಿಸಿದ. ಅಡುಗೆಮನೆ, ಮಲಗುವ ಕೋಣೆ, ಬಚ್ಚಲು ಮನೆಯಲ್ಲೆಲ್ಲಾ ಹುಡುಕಿದ ಮೇಲೆ ಗಾಬರಿಯಿಂದ ಹಿತ್ತಲಿನ ಕಡೆ ನೋಡಲು, ಹಿಂದಿನ ಕದ ತೆಗೆದಿರುವುದನ್ನು ಗಮನಿಸಿ, ಹಿತ್ತಿಲನ ಕಡೆ ನಡೆದ. ಆ ಸಣ್ಣ ಹಿತ್ತಲಿನಲ್ಲಿ ದೀಪು ದಾಳಿಂಬೆ ಗಿಡದ ಬಳಿ ನಿಂತು ಅಳುತ್ತಿದ್ದಾನೆ. ಬಳಿಗೆ ಬಂದ ಜಯಣ್ಣ

ಕಳ್ಳನ ಮೆಟ್ಟು

ಕಳ್ಳನ ಮೆಟ್ಟು ಅದೊಂದು ಮೋಡ ಮುಸುಕಿದ ಮುಂಜಾವು. ಪೂರ್ವದತ್ತ ಬೀಸುತ್ತಿದ್ದ ತಂಗಾಳಿ ತುಸು ಜೋರಾಗಿಯೇ ಇತ್ತು. ಎಂತಹವರನ್ನು ಬೇಕಾದರೂ ಹೆದರಿಸುತ್ತೇನೆ ಎಂದು ಕೊರೆಯುತ್ತಿತ್ತು. ಸುಮಾರು ಒಂದು ಕ್ವಿಂಟಾಲಿಗಿಂತ ಸ್ವಲ್ಪ ಕಡಿಮೆಯಿದ್ದ ನನ್ನ ಧಡೂತಿ ದೇಹವು ನಾನು ಏನನ್ನೂ ಲೆಕ್ಕಿಸುವುದಿಲ್ಲ ಎಂದು ಯೋಗ ಮಂದಿರದತ್ತ ಬಿರುಸಾಗಿಯೇ ಹೆಜ್ಜೆ ಹಾಕಿತು. ಸಮಯ ಅದಾಗಲೇ ಆರಾದರೂ ಅರೆಬರೆ ಎದ್ದಿದ ಅಮರಗೊಂಡದ ಬೀದಿಗಳಲ್ಲಿ ಚಳಿಗೆ ಕಾಪಿಯನ್ನೋ, ಟೀಯನ್ನೋ ಕುಡಿಯುವ ಮನಸ್ಸುಳವರು ನಿದ್ದೆ ಬಿಟ್ಟ ಕಣ್ಣುಗಳನ್ನು ಅಗಲಿಸಿಕೊಂಡು ಹಾಲಿನ ಪ್ಯಾಕೆಟ್ಟನ್ನೋ, ಪಾತ್ರೆಯನ್ನೋ ಹಿಡಿದು ಮನೆಗಳತ್ತ ತೆರಳುತ್ತಿದ್ದರು. ಇನ್ನೂ ಹಾಲನ್ನು ತರಬೇಕಿದ್ದವರು ಕಣ್ಣುಜ್ಜುತ್ತಾ ಲಗುಬಗೆಯಲ್ಲಿ ಅಂಗಡಿಗಳೆಡೆಗೆ ಧಾವಿಸುತ್ತಿದ್ದರು. ಹಾಲನ್ನು ಮನೆಮನೆಗೆ ಹಾಕುವವರು ಎಲ್ಲರಿಗಿಂತ ತುರ್ತಾಗಿ ಸಂಚರಿಸುತ್ತಿದ್ದರು. ಪತ್ರಿಕೆ ಹಂಚುವ ಹುಡುಗರಂತೂ ತುರಾತುರಿಯಲ್ಲಿ ಪತ್ರಿಕೆಗಳನ್ನು ತರಿಸುವವರ ಮನೆಗಳೆಡೆಗೆ ಎಸೆದು, ಎದ್ದೆವೋ ಬಿದ್ದೆವೋ ಅಂತಲೂ ನೋಡದೆ ಸೈಕಲ್ ಹತ್ತಿ ಯಾವುದೋ ತಿರುವಿನಲ್ಲಿ ಮರೆಯಾಗುತ್ತಿದ್ದರು. ಅರೆಕ್ಷಣದಲ್ಲಿ ಮತ್ತೊಂದು ತಿರುವಿನಲ್ಲಿ ಪ್ರತ್ಯಕ್ಷರಾಗಿರುತ್ತಿದ್ದರು. ರಾತ್ರಿಯೆಲ್ಲಾ ನಿದ್ದೆ ಮಾಡದವರೆಂತೆ ಕಾಣುತ್ತಿದ್ದ ಭಿಕ್ಷುಕರು ತಾವು ನಿಂತ ಮನೆಗಳೆದೆರು ಮನೆಯವರು ಎದ್ದಿರುವರೋ ಇಲ್ಲವೋ ಎಂಬ ಭಾವದಲ್ಲಿ, ಇನ್ನೆಲ್ಲಿ ಮುಂದೆ ಹೋಗು ಅನ್ನುತ್ತಾರೋ ಎನ್ನುವ ಆತ