ಗುರುವಾರ, ಅಕ್ಟೋಬರ್ 27, 2011

ಟ್ಯೂಷನ್ ಫೀಸು (ಒಂದು ಕಥೆ)

ಅಂದು ಅಮರಗೊಂಡದ ಮಧ್ಯದಲ್ಲಿದ್ದ ದೇಶಾವರಪೇಟೆಯ ದೀಪು ಮನೆಯಲ್ಲಿ ಸಂಭ್ರಮವೋ ಸಂಭ್ರಮ! ಮಗ ಏಳನೇ ತರಗತಿಯಲ್ಲಿ ಶಾಲೆಗೇ ಎರಡನೆಯವನಾಗಿ ಪಾಸಾಗಿದ್ದಾನೆ ಎಂದು ಜಯಣ್ಣ ಬೀಗುತ್ತಿದ್ದರೆ, ಅಮ್ಮ ಮಂಜುಳಳಿಗೆ ಕೂತ ಕಡೆ ಕೂಡಲಾಗುತ್ತಿಲ್ಲ. “ನಮ್ಮನೇಲಿ ಯಾರೂ ಇಷ್ಟೊಂದು ಚೆನ್ನಾಗಿ ಓದಿರಲಿಲ್ಲ” ಎಂದು ಒಬ್ಬರಿಗೊಬ್ಬರು ಹೇಳಿಕೊಂಡು ಇಬ್ಬರೂ ಮಹದಾನಂದದಲ್ಲಿ ತೇಲುತ್ತಿದ್ದರು. ಅವರಿಬ್ಬರೂ ಅದಾಗಲೇ ಬೀದಿಯಲ್ಲೆಲ್ಲಾ ಮಗನ ಗುಣಗಾನ ಮಾಡಿ ಮನೆಗೆ ಬಂದು ವರಾಂಡದಲ್ಲಿ ಕುಳಿತು ಒಬ್ಬರನೊಬ್ಬರ ಮುಖ ನೋಡಿ ಸುಮ್ಮಸುಮ್ಮನೆ ನಗುತ್ತಿದ್ದಾರೆ. ಮಧ್ಯದಲ್ಲಿ “ಅವನು ನನ್ನ ಮಗ, ನನ್ನ ಮಗ” ಎಂದು ಹುಸಿ ಜಗಳವಾಡುತ್ತಿದ್ದಾರೆ.

ಆಗ ಇದ್ದಕ್ಕಿದ್ದಂತೆ ಏನೋ ಕಳೆದು ಕೊಂಡುವಳಂತೆ ವರಾಂಡದಲ್ಲೆಲ್ಲಾ ಕಣ್ಣಾಡಿಸಿದ ಮಂಜುಳ, “ದೀಪು ಎಲ್ರಿ ಕಾಣ್ತಿಲ್ಲಾ?” ಎಂದಳು. “ಯಾರೋ ಸ್ನೇಹಿತನ ಮನೆಗೆ ಹೋಗಿರ್ಬೇಕು, ಬರ್ತಾನೆ ಬಿಡೇ” ಎಂದ ಜಯಣ್ಣ ಮುಂದುವರಿಯುತ್ತಾ “ನಾವು ಆಚೆ ಹೋದಾಗ ಅವನು ಮನೆಯಲ್ಲೇ ಇದ್ದ, ಅಲ್ವಾ!?” ಎಂದು ಆಶ್ಚರ್ಯಭರಿತನಾಗಿ ಹೇಳುತ್ತಾ “ದೀಪು, ದೀಪು” ಎನ್ನುತ್ತಾ ಮನೆ ಒಳಗಡೆ ಹುಡುಕಲಾರಂಭಿಸಿದ. ಅಡುಗೆಮನೆ, ಮಲಗುವ ಕೋಣೆ, ಬಚ್ಚಲು ಮನೆಯಲ್ಲೆಲ್ಲಾ ಹುಡುಕಿದ ಮೇಲೆ ಗಾಬರಿಯಿಂದ ಹಿತ್ತಲಿನ ಕಡೆ ನೋಡಲು, ಹಿಂದಿನ ಕದ ತೆಗೆದಿರುವುದನ್ನು ಗಮನಿಸಿ, ಹಿತ್ತಿಲನ ಕಡೆ ನಡೆದ. ಆ ಸಣ್ಣ ಹಿತ್ತಲಿನಲ್ಲಿ ದೀಪು ದಾಳಿಂಬೆ ಗಿಡದ ಬಳಿ ನಿಂತು ಅಳುತ್ತಿದ್ದಾನೆ. ಬಳಿಗೆ ಬಂದ ಜಯಣ್ಣ ಮಗನನ್ನು ಸಂತೈಸುತ್ತಾ, “ಯಾಕೋ ಮಗಾ ಅಳ್ತಾ ಇದ್ಯಾ?” ಎಂದು ಕೇಳಲು, “ಅಪ್ಪಾ..., ಅಪ್ಪಾ...” ಎಂದು ದೀಪು ತೊದಲಿದನು. “ಯಾಕೋ ಮಗಾ ಏನಾಯ್ತು ಹೇಳಪ್ಪ, ಶಾಲೆಗೆ ಮೊದಲನೆಯವನ್ನಾಗಲಿಲ್ಲ ಅಂತಾ ಬೇಜಾರ? ಇಲ್ಲಾ...ನಾನಿನ್ನೂ ಸ್ವೀಟ್ಸ್ ತಂದು ಕೊಟ್ಟಿಲ್ಲಾ ಅಂತಾ ಸಿಟ್ಟಾ? ಹೇಳು ಕಂದಾ” ಎಂದನು. ಮಾತಾಡಲು ತಡವರಿಸುತ್ತಾ ದೀಪು “ಅಪ್ಪಾ, ನಾನು...ನಾನು...ಹೈಸ್ಕೂಲಿಗೆ ಹೊಗ್ಬೇಕು, ಚೆನ್ನಾಗಿ ಓದ್ಬೇಕು. ಆದರೆ, ನಮ್ಮನೆಲೀ ತುಂಬಾ ಬಡತನ ಇದೆ. ಅದಕ್ಕೆ ಓದೋಕೆ ಆಗುತ್ತೋ ಇಲ್ವಾ ಅಂತ...” ಬಿಕ್ಕಳಿಸುತ್ತಿದ್ದ ಮಗನನ್ನು ತಡೆದ ಜಯಣ್ಣ, “ಅಯ್ಯೋ ಅದಕ್ಯಾಕೆ ಅಷ್ಟೊಂದು ಯೋಚನೆ ಮಾಡ್ತಾ ಅಳ್ತೀದ್ದೀ. ಅದೆನಾದ್ರು ಆಗ್ಲಿ ನಾನು ನಿನ್ನ ಕಷ್ಟ ಪಟ್ಟು ಓದಿಸ್ತೀನಿ. ನೀ ಚೆನ್ನಾಗ್ ಓದು ಮಗಾ” ಎಂದು ಸಂತೈಸಲು ಖುಷಿಗೊಂಡ ದೀಪು ಕಣ್ಣೀರು ಒರೆಸಿಕೊಳ್ಳುತ್ತಾ ಅಪ್ಪನನ್ನು ಅಪ್ಪಿಕೊಂಡನು.

ಅಮರಗೊಂಡದ ಬಸ್ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನವನ್ನು ಕಷ್ಟದಿಂದ ನಿಭಾಯಿಸುತ್ತಿದ್ದ ಜಯಣ್ಣನಿಗೆ ಅಪ್ಪ ಬಿಟ್ಟುಹೋದ ಮನೆಯೊಂದನ್ನು ಬಿಟ್ಟು ಬೇರೆಯೇನೂ ಇರಲಿಲ್ಲ. ಒಂದು ಒಳ್ಳೆಯ ದಿನ ನೋಡಿ ಹೇಗೋ ಹಣ ಹೊಂದಿಸಿಕೊಂಡು ಮಗನನ್ನು ಹೈಸ್ಕೂಲಿಗೆ ಸೇರಿಸಲು ದೀಪುವನ್ನು ಕರೆದುಕೊಂಡು ಹೈಸ್ಕೂಲಿಗೆ ಬಂದನು. ಜಯಣ್ಣನಿಗೆ ಆ ಶಾಲೆಯ ವಿಜ್ಜಾನದ ಶಿಕ್ಷಕರಾದ ನಾರಾಯಣಪ್ಪನವರು ಪರಿಚಯವಿದ್ದದರಿಂದ ಸೀದಾ ಅವರಿದ್ದ ಕೋಣೆಯನ್ನು ಕೇಳಿಕೊಂಡು ಅವರ ಬಳಿ ಹೋಗಿ ತನ್ನ ಪರಿಚಯವನ್ನು ಹೇಳಿಕೊಂಡು ತಾನು ಬಂದ ಕಾರಣವನ್ನು ನೀವೆದಿಸಿಕೊಂಡನು. ಶಿಸ್ತಿನ ಸಿಪಾಯಿಯಂತೆ ಕಾಣುತ್ತಿದ್ದ ಮಾಸ್ತರರನ್ನು ನೋಡಿ ದೀಪುವಿಗೆ ಸಣ್ಣ ನಡುಕವುಂಟಾದರೂ, ಧೈರ್ಯ ತಂದುಕೊಂಡು, “ನಮಸ್ಕಾರ ಸಾರ್” ಎಂದ. “ನಮಸ್ಕಾರ ಕಣಪ್ಪ, ಏನ್ ನಿನ್ನ ಹೆಸರು”? ಗಂಭೀರದಿಂದ ಮೇಷ್ಟರು ಕೇಳಿದರು. ಮೇಷ್ಟ್ರೇ ನಮಸ್ಕಾರ ಅಂತಾ ಇದ್ದಾರಲ್ಲ....? ಒಳ್ಳೆ ಮೇಷ್ಟ್ರಿರಬೇಕು ಎಂದು ಕೊಳ್ಳುತ್ತಾ, “ದೀಪಕ್ ಜೆ. ಸಾರ್” ಎಂದು ವಿನಯದಿಂದ ನುಡಿದ.

ಹೀಗೇ ವಿಚಾರಿಸುತ್ತಾ ಎಲ್ಲಾ ಕಾಲಂಗಳನು ಭರ್ತಿಮಾಡಿಕೊಂಡ ಮಾಸ್ತರರು, “ನೀ ಕನ್ನಡ ಮೀಡಿಯಂನಲ್ಲೇ ಓದಿರೋದ್ರಿಂದ ಎಂಟನೇ ತರಗತಿಗೂ ಕನ್ನಡ ಮೀಡಿಯಂ ಇರ್ಲಿ ಅಂತಾ ಅದನ್ನೇ ಟಿಕ್ ಮಾಡ್ತೀನಿ” ಅಂದ್ರು. ತಕ್ಷಣವೇ ದೀಪು “ಬೇಡ ಸರ್. ನನ್ನ ಫ್ರೇಂಡ್ಸೆಲ್ಲಾ ಇಂಗ್ಲೀಷ್ ಮೀಡಿಯಂ ಸೇರ್ತಿವಿ ಅಂತಾ ಹೇಳಿದ್ದಾರೆ. ನಂಗೂ ಇಂಗ್ಲೀಷ್ ಮೀಡಿಯಂ ಕೊಡಿ” ಎಂದು ವಿನಂತಿಸಿದ. ದೀಪುವನ್ನು ನೋಡಿದ ಮಾಸ್ತರರು ಮೀಸೆ ಮರೆಯಲ್ಲೇ ನಕ್ಕು, “ಆಯ್ತಪ್ಪಾ, ಆದರೆ ತುಂಬಾ ಕಷ್ಟ ಆಗುತ್ತೆ. ಚೆನ್ನಾಗಿ ಓದ್ಬೇಕು ಅಷ್ಟೆ” ಎಂದು ತುಸು ಜೋರಾಗಿಯೇ ಹೇಳಿದರು. “ಆಯ್ತು ಸರ್. ತುಂಬಾ ಥ್ಯಾಂಕ್ಸ್” ಎಂದು ಅವರ ಕಾಲಿಗೆ ನಮಸ್ಕರಿಸಿದ. ನಯವಾಗಿಯೇ ಬೇಡವೆಂದ ಮಾಸ್ತರರು ಹುಡುಗನ ವೇಗಕ್ಕೆ ತಕ್ಷಣ ಪ್ರತಿಕ್ರಿಯಿಸಿ ಅವನ ಕ್ರಿಯೆಯನ್ನು ತಡೆಯಲಾಗಲಿಲ್ಲ. ತನ್ನ ಮಗನ ಧೈರ್ಯವನ್ನು ಮೌನವಾಗಿ ಗಮನಿಸುತ್ತಿದ್ದ ಜಯಣ್ಣ, ಮೇಷ್ಟರಿಗೆ ವಂದಿಸಿ ಅಲ್ಲಿಂದ ಮಗನೊಡನೆ ಹೊರಟ.

ಶಾಲೆ ಆರಂಭವಾಯಿತು. ಮೊದಲ ವಾರದಲ್ಲೇ ದೀಪುವಿಗೆ ಇಂಗ್ಲೀಷ್ ಮೀಡಿಯಂ ಕಭ್ಭಿಣದ ಕಡಲೆಯಾಗತೊಡಗಿತು. ಎಲ್ಲಾ ವಿಷಯಗಳನ್ನು ಇಂಗ್ಲೀಷಲ್ಲಿ ಪಾಠ ಮಾಡಿ ನಂತರ ಕನ್ನಡದಲ್ಲೂ ಅರ್ಥೈಸುತ್ತಿದುದ್ದರಿಂದ ಸ್ವಲ್ಪ ಸ್ವಲ್ಪ ಅರ್ಥವಾದರೂ ಇಂಗ್ಲೀಷು ಏನೇನೂ ಅರ್ಥವಾಗದಂತಾಯಿತು. ಇದಕ್ಕೆ ಕಾರಣ ಇಂಗ್ಲೀಷ್ ಮೇಷ್ಟ್ರಿಗೆ ಕನ್ನಡ ಸರಿಯಾಗಿ ಬರುತ್ತಿರಲಿಲ್ಲ. ಜೊತೆಗೆ ದೀಪು ಕನ್ನಡ ಮೀಡಿಯಂನಲ್ಲಿ ಓದಿದ್ದು. ಗಾಯದ ಮೇಲೆ ಬರೆ ಎಳೆದಂತಾಗಿತ್ತು.

ಇದ್ದುದರಲ್ಲೇ ವಿಜ್ಞಾನ ಬೋಧಿಸುತ್ತಿದ್ದ ನಾರಾಯಣಪ್ಪ ಮಾಸ್ತರರ ಪಾಠ ಅರ್ಥವಾಗುತಿತ್ತು ಎಂಬುದನ್ನು ಬಿಟ್ಟರೆ ಕನ್ನಡ ಮೀಡಿಯಂನಿಂದ ಬಂದ ವಿದ್ಯಾರ್ಥಿಗಳ ಗೋಳಿನ ಕಥೆ ಕೇಳುವವರು ಯಾರು ಎಂಬ ಪರಿಸ್ಥಿತಿ ನಿರ್ಮಾಣವಾಯಿತು. ಕನ್ನಡ ಮೀಡಿಯಂನಿಂದ ಬಂದ ಕೆಲವರು ಅವರವರಲ್ಲೇ ಮಾತಾಡಿಕೊಳ್ಳುತ್ತಿದ್ದಾಗ, ದೀಪುವಿನ ಗೆಳೆಯನೊಬ್ಬ “ನಾವೆಲ್ಲಾ ನಾರಾಯಣಪ್ಪ ಮಾಸ್ತರ ಮನೆಗೆ ಟ್ಯೂಷನ್‍ಗೆ ಹೋಗೋಣ. ಅವ್ರು ತುಂಬಾ ಚೆನ್ನಾಗಿ ಮನೆ ಪಾಠ ಮಾಡ್ತಾರಂತೆ. ವಿಜ್ಜಾನ, ಗಣಿತದ ಜೊತೆಗೆ, ಇಂಗ್ಲೀಷು ಮತ್ತು ಸಮಾಜವನ್ನು ಹೇಳಿ ಕೊಡ್ತಾರಂತೆ. ಇಂಗ್ಲೀಷಂತೂ ಎಂತವರಿಗೂ ಕಲಿಸ್ತಾರಂತೆ. ನಮ್ಮಕ್ಕ ಹೇಳ್ತಿದ್ರು” ಎಂದನು. ಕೇಳಿದ ಎಲ್ಲರಿಗೂ ಕಠಿಣವಾದ ಲೆಕ್ಕವೊಂದಕ್ಕೆ ಉತ್ತರ ದೊರೆತಂತಾಯಿತು. ಎಲ್ಲರೂ ಬಹಳ ಸಂತೋಷದಿಂದ ನಾಳೆಯಿಂದಲೇ ಟ್ಯೂಷನ್‍ಗೆ ಹೋಗೋಣ ಎಂದಾಗ ಇದಾಗಲೇ ಅಪ್ಪ ಹೈಸ್ಕೂಲಿಗೆ ಸೇರಿಸಿರುವುದೇ ತನ್ನ ಪುಣ್ಯ ಎಂದುಕೊಂಡಿದ್ದ ದೀಪುವಿಗೆ ಇದರ ಬಗ್ಗೆ ಅಪ್ಪನನ್ನು ಹೇಗೆ ಕೇಳುವುದು ಎಂದು ಯೋಚನೆಗೆ ಹತ್ತಿಕೊಂಡಿತು. “ಫೀಸ್ ಎಷ್ಟು ಕೊಡಬೇಕು” ತಡೆಯಲಾಗದೇ ಕೇಳಿಯೇಬಿಟ್ಟ. “ತಿಂಗಳಿಗೆ ನೂರು ರೂಪಾಯಿಗಳು” ಪ್ರಶ್ನೆಗೆ ಕಾಯುತ್ತಿದ್ದವನಂತೆ ಟ್ಯೂಷನ್ ಐಡಿಯಾ ಕೊಟ್ಟ ಗೆಳೆಯ ಹೇಳಿಯೇಬಿಟ್ಟ.

“ನೂರು ರೂಪಾಯಿಗಳು”! ದೀಪುವಿಗೆ ಮತ್ತೆ ಯೋಚನೆ ಕಾಡತೊಡಗಿತು. ಇದಾಗಲೇ ಅಪ್ಪ ಸಾಲ ಮಾಡಿ ಶಾಲೆಗೆ ಸೇರಿಸಿದ್ದಾಗಿದೆ. ಮತ್ತೆ ಹೇಗೆ ಕೇಳುವುದು. ತಿಂಗಳಿಗೆ ನೂರು ರೂಪಾಯಿಗಳು. ಏನು ಮಾಡುವುದು. ಟ್ಯೂಷನ್ನಿಗೆ ಹೋಗದಿದ್ದರೆ ಪಾಠ ಅರ್ಥವಾಗುವುದಿಲ್ಲ. ಅರ್ಥವಾಗದಿದ್ದರೆ ಫೇಲ್ ಆಗುತ್ತೇನೆ. ಬೇರೆ ದಾರಿಕಾಣದೆ ಅಪ್ಪನನ್ನೇ ಕೇಳೋಣವೆಂದು ಮನೆಯ ದಾರಿ ಹಿಡಿದನು.

ಮನೆಗೆ ಬಂದವನೇ, “ಅಪ್ಪಾ, ಶಾಲೆಯಲ್ಲಿ ಎಲ್ಲಾ ಶಿಕ್ಷಕರು ಪಾಠ ಮಾಡುವುದು ಹೆಚ್ಚಾಗಿ ಇಂಗ್ಲೀಷ್ನಲ್ಲೆ. ಅಷ್ಟಾಗಿ ಅರ್ಥವಾಗುವುದಿಲ್ಲ. ಅದಕ್ಕೆ ಎಲ್ಲಾ ಹುಡುಗರು ನಾರಾಯಣಪ್ಪ ಸರ್ ಹತ್ತಿರ ಟ್ಯೂಷನ್ಗೆ ಸೇರಿಕೊಳ್ಳುತ್ತಿದ್ದಾರೆ. ನನ್ನನ್ನೂ ಸೇರಿಸಪ್ಪ. ಇಲ್ಲವಾದರೆ ತುಂಬಾ ಕಷ್ಟವಾಗುತ್ತದೆ” ಎಂದು ಪ್ರೀತಿಯಿಂದ ವಿನಂತಿಸಿದ. ಮುದ್ದಿನ ಮಗನ ವಿನಂತಿಯನ್ನು ಪ್ರೀತಿಯಿಂದ ಸಮ್ಮತಿಸಿದ ಜಯಣ್ಣ “ಆಯ್ತು ಮಗಾ, ಹೆಂಗೋ ನೀ ಚೆನ್ನಾಗಿ ಓದಿದರೆ ಅಷ್ಟೆ ಸಾಕು” ಎಂದವನ ಕಣ್ಣಲ್ಲಿ ನನ್ನ ಮಗ ಬಟ್ಟೆ ಬರೆ ಕೇಳದೆ ಓದಿಗೆ ಎಷ್ಟೆಲ್ಲಾ ಅಕ್ಕರೆ ತೋರಿಸುತ್ತಾನೆ ಎಂಬ ಭಾವ ಮಿಂಚಿ ಮಾಯವಾಯಿತು. ಕೂಲಿ ಕೆಲಸದಿಂದ ಆಗುತ್ತಿದ್ದ ಕಷ್ಟ, ಅವಮಾನಗಳು ಅವನಿಗೆ ಚೆನ್ನಾಗಿ ಗೊತ್ತಿತ್ತು. ಹಗಲು ರಾತ್ರಿ ದುಡಿದಾದರು ಸರಿ, ಮಗನನ್ನು ಚೆನ್ನಾಗಿ ಓದಿಸಬೇಕೆಂದು ಮನದಲ್ಲೇ ಪಣತೊಟ್ಟಿದ್ದ.

ಬೆಳಿಗ್ಗೆ ಆರರಿಂದ ಎಂಟರವರೆಗೆ ನಾರಾಯಣಪ್ಪರ ಟ್ಯೂಷನ್ ಶುರುವಾಯಿತು. ಒಂದು ದಿನವೂ ತಪ್ಪಿಸದೆ ಐದಕ್ಕೆಲ್ಲ ಎದ್ದು ಸರಿಯಾಗಿ ಆರಕ್ಕೆ ದೀಪು ಟ್ಯೂಷನ್ಗೆ ಹೋಗುತ್ತಿದ್ದ. ಅವನ ಶಿಸ್ತನ್ನು ಕಂಡು ಜಯಣ್ಣ, ಮಂಜಮ್ಮನಿಗೆ ಬಹಳ ಹೆಮ್ಮೆಯಾಗುತ್ತಿತ್ತು. ಇತ್ತ ದೀಪು ತನ್ನ ಬುದ್ದಿವಂತಿಕೆಯಿಂದ ನಾರಾಯಣಪ್ಪ ಮಾಸ್ತರರ ಗಮನ ಸೆಳೆದಿದ್ದ. ನಾರಾಯಣಪ್ಪ ಮಾಸ್ತರರು ತಿಂಗಳಿಗೊಂದು ಪರೀಕ್ಷೆ ಮಾಡುತ್ತಿದ್ದರು. ಕಡಿಮೆ ಅಂಕಗಳನ್ನು ತೆಗೆದವರನ್ನು ಮುಲಾಜಿಲ್ಲದೆ ಶಿಕ್ಷಿಸುತ್ತಿದ್ದರು. ಅದರಲ್ಲೂ ಪಾಠ ಮಾಡುವಾಗ ಯಾರಾದರೂ ಆಕಳಿಸಿದರೆ, ತೂಕಡಿಸಿದರೆ ಮತ್ತೆ ಯಾವ ಜನ್ಮದಲ್ಲೂ ನಿದ್ರಿಸದಂತೆ ಒಳಶುಂಠಿ ನೀಡುತ್ತಿದ್ದರು. ತರಲೆ ಮಾಡಿದರಂತೂ ಮುಗಿದೇ ಹೋಯಿತು. ತಾವು ಕಟ್ಟಿದ್ದ ವಾಚನ್ನು ಬಿಚ್ಚಿಟ್ಟು, ಮುಂದೇ ಕುಳಿತ್ತಿದ್ದ ಹುಡುಗರನ್ನು ಹಿಂದೆ ಸರಿಸಿ, ತರಲೆ ಮಾಡಿದವನನ್ನು ತಮ್ಮ ಮುಂದೆ ಕೂರಿಸಿಕೊಂಡು ದನಕ್ಕೆ ಚಚ್ಚುವಂತೆ ಅವನ ಬೆನ್ನಿಗೆ ಹೊಡೆಯುತ್ತಿದ್ದರು. ಅದಕ್ಕೆ ಹೆದರಿಯೇ ಸೋಂಬೇರಿ, ತರಲೆ ಹುಡುಗರಾರು ಮುಂದೆ ಕೂಡಲು ಇಷ್ಟ ಪಡುತ್ತಿರಲಿಲ್ಲ. ಆದರೆ, ಮಾಸ್ತರರು ಇವತ್ತು ಶಿಕ್ಷೆಗೆ ಯಾರು ಗುರಿಯಾಗಬೇಕೆಂದು ಮೊದಲೇ ನಿರ್ಧರಿಸಿದಂತೆ ಅವರನ್ನು ಕರೆದು ಮುಂದೆ ಕೂಡಿಸಿಕೊಳ್ಳುತ್ತಿದರು. ಅದಕ್ಕೆಲ್ಲಾ ವಿದ್ಯಾರ್ಥಿಗಳ ಪೋಷಕರು ಕೊಟ್ಟ ಕಂಪ್ಲೇಟೂ ಕಾರಣವಾಗುತ್ತಿತ್ತು. ಯಾರನ್ನು ಕರೆದೂ ಕರೆದೂ ಮುಂದೆ ಕೂಡಿಸಿಕೊಂಡಿರುತ್ತಾರೋ ಅವರಿಗೆ ಏಟು ಬೀಳುವ ಘಳಿಗೆ ಕಲ್ಪಿಸಿಕೊಂಡು ಹಲವರು ಬೆವೆತಿರುತ್ತಿದ್ದರು ಅಂದಮೇಲೆ ಮುಂದೆ ಕೂತವರನ್ನು ದೇವರೂ ಕಾಪಾಡುವಂತಿರಲಿಲ್ಲ. ಅವರಿಗೆ, ಇವತ್ತು ಟ್ಯೂಷನ್ ಬೇಗ ಬಿಡಲಿ ಅಥವಾ ಮಾಸ್ತರರಿಗೆ ಯಾರಾದರು ಬೇರೆ ಕಡೆ ಗಮನಹರಿಸಲಿ ಎಂದು ಜಪಿಸುತ್ತಾ ಮಾಸ್ತರರನ್ನೇ ದಿಟ್ಟಿಸುತ್ತಾ ಗಾರೆ ಕಿತ್ತುಹೋದ ಜಾರಬಂಡಿಯ ಮೇಲೆ ಕೂತ ಅನುಭವವಾಗುತ್ತಿತ್ತು. ಜೊತೆಗೆ ಮಾಸ್ತರು ಬೈಯುವಾಗ, ಹೊಡೆಯುವಾಗ ಹುಡುಗಿಯರು ಯಾರದರೂ ಕಿಸಕ್ಕನ್ನೆ ನಕ್ಕರೆ ಆಗುವ ಅವಮಾನ ನೆನೆದು ಈ ಓದೋದು ಬೇಡ, ಟ್ಯೂಷನ್ ಬೇಡ ಎಂಬ ಭಾವನೆ ಇಣುಕುತ್ತಿತ್ತು. ಅಂದಮಾತ್ರಕ್ಕೆ ಮಾಸ್ತರರು ಹುಡುಗರನ್ನು ಮಾತ್ರ ಶಿಕ್ಷಿಸುತ್ತಿದ್ದರೆಂದು ಭಾವಿಸಬೇಕಿರಲಿಲ್ಲ. ಹುಡುಗಿಯರಿಗೆ ಬೈಯುವ, ಕೆಲವೊಮ್ಮೆ ಕೋಲಿನಿಂದ ಹೋಡೆಯುವ ಪ್ರಕ್ರಿಯೆಯೂ ಇರುತ್ತಿತ್ತು. ಆದರೆ, ಇದನ್ನು ನೋಡುವ ಭಾಗ್ಯ ಮಾತ್ರ ಹುಡುಗರಿಗಿರಲಿಲ್ಲ. ಏಕೆಂದರೆ, ಹುಡುಗರನೆಲ್ಲಾ ಐದು ನಿಮಿಷ ಮೊದಲೇ ಇವತ್ತಿಗೆ ಇಷ್ಟು ಸಾಕು ಎಂದು ಮನೆಗೆ ಕಳುಹಿಸದರೆಂದರೆ ಅವತ್ತು ಯಾವುದೋ ಹುಡುಗಿಗೋ ಇಲ್ಲಾ ಹುಡುಗಿಯರಿಗೋ ಲಾತ ಗ್ಯಾರಂಟಿ. ಪಾಪ, ಹುಡುಗಿಯರು ಒದೆ ತಿನ್ನುವದನ್ನು ಕಲ್ಪಿಸಿಕೊಂಡೇ ಹುಡುಗರು ಮನೆಕಡೆಗೆ ಅಲ್ಪತೃಪ್ತಿಯಿಂದ ತೆರುಳುತ್ತಿದ್ದರು. ಈ ವಿಷಯದಲ್ಲೂ ಅವರಿಗೆ ಅವಮಾನವಾಗುತ್ತಿತ್ತು.

ಪಾಠದಲ್ಲಿ ಮತ್ತು ಶಿಕ್ಷಿಸುವುದರಲ್ಲಿ ಎತ್ತಿದ ಕೈ ಆಗಿದ್ದ ಮಾಸ್ತರರು ಟ್ಯೂಷನ್ ಫೀ ವಸೂಲು ಮಾಡುವುದರಲ್ಲೂ ಮುಲಾಜು ನೋಡುತ್ತಿರಲಿಲ್ಲ. ಎಲ್ಲರ ಫೀಯನ್ನು ಪ್ರತಿ ತಿಂಗಳು ಐದನೇ ತಾರೀಖಿಗೆ ಕೇಳಿ ಪಡೆಯುತ್ತಿದ್ದರು. ಕೆಲವರಂತೂ ಮುಂಚೆಯೇ ನೀಡುತ್ತಿದ್ದರೆ ಮತ್ತೆ ಕೆಲವರಿಗೆ ಅನಿವಾರ್ಯ ಕಾರಣಗಳಿಂದ ಕೊಡಲಾಗುತ್ತಿರಲಿಲ್ಲ. ಅಂತವರಿಗೆಲ್ಲಾ ಹತ್ತನೇ ತಾರೀಖಿನ ಒಳಗೆ ತಂದು ಕೊಡುವಂತೆ ಮಾಸ್ತರರು ಹೇಳುತ್ತಿದ್ದರು. ಯಾವುದೇ ಕಾರಣಕ್ಕೂ ಹತ್ತನೇ ತಾರೀಖಿನವರೆಗೂ ಮತ್ತೆ ಕೇಳುತ್ತಿರಲಿಲ್ಲ. ಅವಾಗಲೂ ಕೊಡಲಿಲ್ಲವೆಂದರೆ ಫೀ ಕೊಡದವರನ್ನು ಕೂಡಿಸಿಕೊಂಡು, ಉಳಿದವರನ್ನು ಕಳುಹಿಸಿ, ಕಾರಣ ಕೇಳಿ ಅವರ ತಂದೆಯನ್ನೊ, ತಾಯಿಯನ್ನೊ ಕರೆದುಕೊಂಡು ಬರುವಂತೆ ಹೇಳುತ್ತಿದ್ದರು. ಕೆಲವು ಮಕ್ಕಳ ಪೋಷಕರೇ ಬಂದು ಫೀ ಕೊಟ್ಟು ತಮ್ಮ ಮಕ್ಕಳ ಓದಿನ ಬಗ್ಗೆ ಕೇಳುತ್ತಿದ್ದರು ಮತ್ತು ಸಾಧ್ಯವಾದರೇ ಚಾಡಿ ಹೇಳುತ್ತಿದ್ದರು. ನಾನು ನೋಡಿಕೊಳ್ಳುತ್ತೇನೆ ಬಿಡಿ ಎಂಬ ಭರವಸೆಯೊಂದಿಗೆ ಮಾಸ್ತರರು ಅವರನ್ನು ಸಾಗಹಾಕುತ್ತಿದ್ದರು. ಜಯಣ್ಣ ಸಾಧ್ಯವಾದಷ್ಟು ಬೇಗ ಫೀಯನ್ನು ದೀಪು ಕೈಯಲ್ಲೇ ಕೊಟ್ಟು ಕಳುಹಿಸುತ್ತಿದ್ದ. ಆದುದರಿಂದ ಯಾವುದೇ ಯೋಚನೆಯಿಲ್ಲದೆ ದೀಪುವಿಗೆ ಚೆನ್ನಾಗಿ ಓದುವುದಷ್ಟೇ ಕೆಲಸವಾಯಿತು.

ಹೀಗೆ ಆರು ತಿಂಗಳು ಕಳೆಯಿತು. ದೀಪು ಚೆನ್ನಾಗಿಯೇ ಓದುತ್ತಿದ್ದ ವಿಷಯ, ಶಾಲೆಯ ತಿಂಗಳ ಪರೀಕ್ಷೆಗಳಲ್ಲಿ ಮತ್ತು ಟ್ಯೂಷನ್ ಪರೀಕ್ಷೆಗಳಲ್ಲಿ ಅವನು ತೆಗೆಯುತ್ತಿದ್ದ ಮಾರ್ಕ್ಸ್ ಗಳಿಂದಲೇ ತಿಳಿಯುತ್ತಿತ್ತು. ಎಲ್ಲಾ ಸುಸೂತ್ರವಾಗಿ ನಡೆಯುತ್ತಿದೆ ಎಂದುಕೊಳ್ಳುವಾಗಲೇ ಜಯಣ್ಣನಿಗೆ ಸಣ್ಣಗೆ ಕಾಣಿಸಿಕೊಂಡ ಜ್ವರ ದಿನಕಳೆದಂತೆಲ್ಲಾ ಏರಿ ಅವನನ್ನು ದಿನಗಟ್ಟಲೆ ಮನೆಯಲ್ಲೇ ಮಲಗುವಂತೆ ಮಾಡಿತು. ಸರಿಯಾಗಿ ಔಷಧಿ ತೆಗೆದು ಕೊಳ್ಳಲೂ ಆಗದಂತಹ ಬಡತನ ಹಗಲು ರಾತ್ರಿ ಮೂಟೆ ಹೋರುತ್ತಿದ್ದವನನ್ನು ತನ್ನ ಬೆಡ್ ಶೀಟ್ ತಾನೆ ಹೊದಿಯಲಾಗದಂತೆ ನಿತ್ರಾಣನನ್ನಾಗಿಸಿತು. ಸರ್ಕಾರಿ ಆಸ್ಪತ್ರೆಯ ವೈದ್ಯರು ಒಂದೆರಡು ತಿಂಗಳ ವಿಶ್ರಾಂತಿ ಒಳ್ಳೆಯದೆಂದು ಹೇಳಿ ಒಂದಷ್ಟು ಮಾತ್ರೆ ಕೊಟ್ಟು ಕಳುಹಿಸಿದ್ದರು. ಕೂಲಿಯವನಾದರು ನೆರೆಹೊರೆಯಲ್ಲಿ ಒಳ್ಳೆಯ ಹೆಸರು ಪಡೆದಿದ್ದ ಜಯಣ್ಣ ಮತ್ತು ಆತನಿಗೆ ಹೇಳಿ ಮಾಡಿಸಿದ ಜೋಡಿಯಂತಿದ್ದ ಮಂಜಮ್ಮನಿಗೆ, ಕೆಲವು ದಿನ ನೆರೆಹೊರೆಯವರ ನೆರವಿನಿಂದ ಊಟಕ್ಕೆ ಅಗತ್ಯ ನೆರವು ಒದಗಿಬಂತು. ಆದರೆ, ಆ ತಿಂಗಳು ಐದಾದರೂ ಟ್ಯೂಷನ್ ಫೀಗೆ ಕೊಡಲು ಜಯಣ್ಣನ ಬಳಿ ಹಣವಿರಲಿಲ್ಲ. ಗಂಡನ ಅನಾರೋಗ್ಯದಿಂದ ತತ್ತರಿಸಿದ್ದ ಮಂಜಮ್ಮಳಿಗೆ ಸಾಧ್ಯವೇ ಇರಲಿಲ್ಲ. ದೀಪುವಿಗೂ ಪರಿಸ್ಥಿತಿ ಅರ್ಥವಾಗಿತ್ತು. ಆರೋಗ್ಯವಿಲ್ಲದ ತಂದೆಯನ್ನು ಹೇಗೆ ಕೇಳುವುದು? ಮಾಸ್ತರರಿಗೆ ಏನು ಹೇಳುವುದು? ಅಮ್ಮ ತಾನೆ ಏನು ಮಾಡಿಯಾಳು? ಪುಟ್ಟ ತಲೆಯಲ್ಲಿ ದೊಡ್ಡ ದೊಡ್ಡ ಯೋಚನೆಗಳು ಮೂಡತೊಡಗಿದವು. ಬೇರೆ ದಾರಿಕಾಣದೆ ಮನಸ್ಸಿಲ್ಲದ ಮನಸ್ಸಿನಲ್ಲಿ ಅಂದು ಟ್ಯೂಷನ್ ಗೆ ಹೊರಡುವ ಮುನ್ನ ತಂದೆಯ ಮುಖವನ್ನೊಮ್ಮೆ ನೋಡಿದ. ಮಗನನ್ನು ನೋಡಿದ ಜಯಣ್ಣ, “ಇಂದು ಹೋಗಿಬಾರಪ್ಪ, ಮಾಸ್ತರರಿಗೆ ಮುಂದಿನ ತಿಂಗಳು ಕೊಡುತ್ತೇನೆಂದು ಹೇಳು” ಎಂದು ಅಸಾಯಕತೆಯಿಂದ ನುಡಿದರು. ದೀಪು ಏನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಅವನಿಗೆ ಟ್ಯೂಷನ್ ಬಿಡಬೇಕಾಗುವುದೇನೋ ಎಂಬ ಚಿಂತೆ ತಲೆಗೆ ಹತ್ತಿ ಹಗಲು ರಾತ್ರಿ ಕಾಡತೊಡಗಿತು.

ಅಂದು ಟ್ಯೂಷನ್ ಬಿಟ್ಟ ನಂತರ, ಮಾಸ್ತರರ ಬಳಿ ಬಂದ ದೀಪು “ಸಾರ್, ನಮ್ಮ ತಂದೆಗೆ ಆರೋಗ್ಯ ಸರಿಯಿಲ್ಲ. ಈ ತಿಂಗಳ ಟ್ಯೂಷನ್ ಫೀಯನ್ನು ಮುಂದಿನ ತಿಂಗಳು ಕೊಡುತ್ತಾರಂತೆ” ಎಂದು ನಡುಗುವ ದನಿಯಲ್ಲೇ ಹೇಳಿದ. “ಆಗ್ಲಪ್ಪಾ, ನಿಮ್ಮ ತಂದೆ ನನಗೆ ಚೆನ್ನಾಗಿ ಗೊತ್ತು. ಪರವಾಗಿಲ್ಲಾ. ಮುಂದಿನ ತಿಂಗಳೇ ಕೊಡು. ಆದರೆ ಟ್ಯೂಷನ್ನಿಗೆ ಬರೋದು ಬಿಡಬೇಡ ಅಷ್ಟೆ” ಎಂದು ನಗುಮೊಗದಿಂದಲೇ ಉತ್ತರಿಸಿದರು. “ಥ್ಯಾಂಕ್ಯು ಸರ್” ಎಂದ ದೀಪು ನಿಶ್ಚಿಂತನಾಗಿ ಮನೆಯ ದಾರಿ ಇಡಿದ.

ತಿಂಗಳು ಕಳೆದರೂ ಜಯಣ್ಣನ ಆರೋಗ್ಯ ಸುಧಾರಿಸಲಿಲ್ಲ. ಮನೆಯಲ್ಲಿ ಕಷ್ಟಗಳ ಸುರಿಮಳೆಯಾಗುತ್ತಿದೆ ಎಂದರಿತ ದೀಪು ಅಪ್ಪನನ್ನು ಟ್ಯೂಷನ್ ಫೀ ಕೇಳುವ ಗೊಡವೆಗೆ ಹೋಗಲಿಲ್ಲ. ಅವನಿಗೆ ಅಪ್ಪ ಬೇಗ ಹುಷಾರಾದರೆ ಹೇಗಾದರೂ ಹಣ ಹೊಂದಿಸುತ್ತಾರೆಂಬ ಭರವಸೆಯಿತ್ತು. ಆದರಿಂದ ಅಮ್ಮ ಕೊಟ್ಟದ್ದನ್ನೇ ತಿಂದುಕೊಂಡು ಚೆನ್ನಾಗಿ ಓದಬೇಕೆಂಬ ಛಲವನ್ನು ಬಿಡದೆ ಟ್ಯೂಷನ್ನಿಗೆ, ಶಾಲೆಗೆ ಹೋಗುತ್ತಿದ್ದ. ಪ್ರತಿ ತಿಂಗಳ ಐದನೇ ತಾರೀಖು ಮೇಷ್ಟರ ಮುಖವನೊಮ್ಮೆ ದಿಟ್ಟಿಸಿ ಭಯದಿಂದ ನೋಡುತ್ತಿದ್ದ. ಮೇಷ್ಟರು ಎಲ್ಲಾ ಅರಿತವರಂತೆ ನಗುತ್ತಾ ತಲೆಯಾಡಿಸುತ್ತಿದ್ದರು. “ಕೊಡುವಿಯಂತೆ ಹೋಗು” ಎಂಬ ಮಾತು ಅವರ ಭಾವನೆಯಲ್ಲಿ ವ್ಯಕ್ತವಾಗುತ್ತಿತ್ತು. ದೀಪು ಸಮಾಧಾನದಿಂದ ಹೋಗುತ್ತಿದ್ದ.

ಎಂಟನೇ ತರಗತಿಯ ವಾರ್ಷಿಕ ಪರೀಕ್ಷೆ ಮುಗಿಯುವ ಹೊತ್ತಿಗೆ ಜಯಣ್ಣ ಸ್ವಲ್ಪ ಸುಧಾರಿಸಿಕೊಂಡು ಮತ್ತೆ ಕೆಲಸಕ್ಕೆ ಹೋಗಲು ಶುರುಮಾಡಿದ್ದ. ಚೆನ್ನಾಗಿಯೆ ಪರೀಕ್ಷೆ ಬರೆದಿದ್ದ ದೀಪು ಅದಕ್ಕೆಲ್ಲಾ ಕಾರಣರಾದ ನಾರಾಯಣಪ್ಪ ಮಾಸ್ತರರನ್ನು ಮನದಲ್ಲೇ ಅಭಿನಂದಿಸಿದರೂ ಅವರಿಗೆ ಟ್ಯೂಷನ್ ಫೀಯನ್ನು ಕೊಡಲಾಗದಿದ್ದಕ್ಕೆ ನೊಂದುಕೊಳುತ್ತಿದ್ದ. ಪರೀಕ್ಷೆ ಮುಗಿದ ಮೇಲೆ ಮಾಸ್ತರರನ್ನು ಕಂಡು ಧನ್ಯವಾದ ಹೇಳಿಬರಬೇಕು ಎಂದುಕೊಂಡವನಿಗೆ ಫೀಸ್ ಇಲ್ಲದೆ ಅವರನ್ನು ನೋಡಲು ಧೈರ್ಯಬರಲಿಲ್ಲ. ಹೇಗಿದ್ದರೂ ಅಪ್ಪ ಹುಷಾರಾಗಿದ್ದರೆ, ಇನ್ನು ಸ್ವಲ್ಪ ದಿನದಲ್ಲಿ ಫೀಸು ಕೊಡುತ್ತಾರೆ. ಆವಾಗ ಮೇಷ್ಟರ ಬಳಿ ಹೋಗುವುದು ಎಂದುಕೊಂಡು ದೀಪು ಸ್ವಲ್ಪ ಧೈರ್ಯತಂದುಕೊಂಡು ಸುಮ್ಮನಾದ.

ಅಪ್ಪ ಮತ್ತೆ ಕೆಲಸಕ್ಕೆ ಹೋಗುತ್ತಿದ್ದರಿಂದ ಬಂದ ಹಣ ಅವರ ಅನಾರೋಗ್ಯದ ದಿನಗಳಲ್ಲಿ ಆದ ಸಾಲಕ್ಕೆ ಹೋಗುತ್ತಿದ್ದುದರಿಂದ ಟ್ಯೂಷನ್ ಫೀಗೆ ಸದ್ಯಕ್ಕೆ ಹಣ ಒದಗಿಬರುವುದಿಲ್ಲವೆಂಬುದು ದೀಪುವಿಗೂ ಮನದಟ್ಟಾಗಿತ್ತು. ಆದರೂ ಅಳುಕು ಅವನನ್ನು ಕಾಡುತ್ತಿತ್ತು. ಇವನು ಕುಳಿತಲ್ಲಿ, ನಿಂತಲ್ಲಿ ಮೇಷ್ಟರು ಬಂದು ಇವನಿಗೆ “ಟ್ಯೂಷನ್ ಫೀ” ಎಲ್ಲಿ ಎಂದು ಕೇಳಿದಂತೆ ಭಾಸವಾಗುತ್ತಿತ್ತು. ದೀಪುವಿಗೆ ಎಲ್ಲಾದರೂ ನಡೆದು ಹೋಗುವಾಗಲು ಮೇಷ್ಟರು ಎದುರುಗಡೆಯಿಂದಲೋ, ಹಿಂದಿನಿಂದಲೋ ಬಂದು ಹಿಡಿದುಕೊಂಡು ಕೇಳಿದರೆ ಏನು ಮಾಡುವುದು ಎಂಬ ದಿಗಿಲು ಅವನನ್ನು ನಿಶ್ಚಿಂತನಾಗಿ ಬೇಸಿಗೆಯ ರಜಾದಿನಗಳನ್ನು ಕಳೆಯಲು ಬಿಡಲಿಲ್ಲ. ರಜೆಯೆಲ್ಲಾ ಮುಗಿದು ಶಾಲೆ ಶುರುವಾಗಲು ಇನ್ನೊಂದು ವಾರ ಬಾಕಿ ಇದೆ ಎನ್ನುವಾಗ ಒಬ್ಬಂಟಿಯಾಗಿ ದೀಪು ಅಮರಗೊಂಡದ ಮುಖ್ಯರಸ್ತೆಯ ಬದಿಯಲ್ಲಿ ನಡೆಯುತ್ತಾ ಗೆಳೆಯನ ಮನೆಗೆ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬಲಿಷ್ಟ ಕೈ ಅವನ ಹೆಗಲನ್ನು ಬಳಸಿ ಹಿಡಿಯಿತು. ಮೊದಲೇ ದಿಗಿಲಿಂದ ಓಡಾಡುತ್ತಿದ್ದ ದೀಪು ಆದ ಶಾಕಿನಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಅದು ಮೇಷ್ಟರೇ ಎಂಬುದು ನಿಚ್ಚಳವಾಗಿತ್ತು. ಮೇಷ್ಟರು ಅದೇ ನಗುಮೊಗದಿಂದ ಅವನ ಭುಜವನ್ನು ಬಿಗಿಯಾಗಿ ಅಮುಕುತ್ತಾ “ಎಕ್ಸಾಮ್ ಎಲ್ಲಾ ಚೆನ್ನಾಗಿ ಬರೆದ? ನನಗೆ ಹೇಳೋಕೆ ಬರ್ಲಿಲ್ಲ ನೀನು” ಎಂದರು. “ಸರ್, ಅದು...ಅದು..” ಎಂದು ದೀಪು ತಡವರೆಸುತ್ತಿದ್ದಾಗಲೆ, “ನಂಗೆಲ್ಲಾ ಗೊತ್ತು. ನಿಮ್ಮಪ್ಪ ಫೀಸು ಕೊಟ್ಟರೆ ಅದರಲ್ಲಿ ಚೆನ್ನಾಗಿರೋ ಎರಡು ಅಂಗಿ ತಗೋ. ಒಂಭತ್ತನ್ನೇ ಕ್ಲಾಸಿಗೆ ಟ್ಯೂಷನ್ಗೆ ಬರೋದು ಮರಿಬೇಡ. ಆಯ್ತಾ?” ಎಂದು ಅವನ ಮುಖವನ್ನೊಮ್ಮೆ ದಿಟ್ಟಿಸುತ್ತಾ ಭುಜದ ಮೇಲಿನ ಕೈತೆಗೆದು ಮೃದುವಾಗಿ ದೀಪುವಿನ ಬೆನ್ನಿಗೊಂದು ತಟ್ಟಿ ಮುಂದೆ ನಡೆದರು. ಮೇಷ್ಟರ ಈ ಮಾತು, ನಡೆವಳಿಕೆಯನ್ನು ಅರ್ಥೈಸಿಕೊಂಡ ದೀಪು ತನ್ನ ಬಲ ಹೆಗಲೊನ್ನಮ್ಮೆ ನೋಡಿಕೊಂಡ. ತೊಟ್ಟಿದ್ದ ಅಂಗಿ ಹರಿದದ್ದು ಸ್ಪಷ್ಟವಾಗಿತ್ತು. ಅದರ ಮೇಲೆ ಕೈಯಿಟ್ಟಿದ್ದ ಮೇಷ್ಟರ ಬಲಿಷ್ಟಕೈ ಇನ್ನೂ ಅಲ್ಲೇ ಇದೆ ಎನ್ನುವಂತೆ ದೀಪುವಿಗೆ ಭಾಸವಾಗುತ್ತಿತ್ತು. ತನ್ನ ಎಡಗೈಯಿಂದ ಬಲಭುಜವನ್ನು ಮುಟ್ಟಿಕೊಂಡ ದೀಪುವಿಗೆ ಮೇಷ್ಟರ ಬಲಗೈ ಮುಟ್ಟಿದಂತಾಯಿತು. “ಅಬ್ಬಾ ಮೇಷ್ಟರು ಎಷ್ಟು ಒಳ್ಳೆಯವರು” ಎಂದು ಅವನ ಮನ ಹಿಗ್ಗಿತು. ಅದೇ ಖುಷಿಯಲ್ಲಿ ಮೇಷ್ಟರು ಹೋದ ದಾರಿಯತ್ತಲ್ಲೇ ನೋಡಿದ. ನಾರಾಯಣಪ್ಪ ಮೇಷ್ಟರು ಬಹಳ ವೇಗವಾಗಿ ಮುಂದೆ ಹೋಗುತ್ತಿದ್ದರು. ಅವರನ್ನು ಧನ್ಯತಾಭಾವದಿಂದ ನೋಡುತ್ತಿದ್ದ ದೀಪುವಿಗೆ ಅವನ ಬೆನ್ನನ್ನು ಮೇಷ್ಟರು ಇನ್ನೂ ತಟ್ಟುತ್ತಿದ್ದಾರೆ ಎಂದೆನಿಸುತ್ತಿತ್ತು.

                                                                                     - ಗುಬ್ಬಚ್ಚಿ ಸತೀಶ್.





ಶುಕ್ರವಾರ, ಅಕ್ಟೋಬರ್ 7, 2011

ಕಳ್ಳನ ಮೆಟ್ಟು

ಕಳ್ಳನ ಮೆಟ್ಟು


ಅದೊಂದು ಮೋಡ ಮುಸುಕಿದ ಮುಂಜಾವು. ಪೂರ್ವದತ್ತ ಬೀಸುತ್ತಿದ್ದ ತಂಗಾಳಿ ತುಸು ಜೋರಾಗಿಯೇ ಇತ್ತು. ಎಂತಹವರನ್ನು ಬೇಕಾದರೂ ಹೆದರಿಸುತ್ತೇನೆ ಎಂದು ಕೊರೆಯುತ್ತಿತ್ತು. ಸುಮಾರು ಒಂದು ಕ್ವಿಂಟಾಲಿಗಿಂತ ಸ್ವಲ್ಪ ಕಡಿಮೆಯಿದ್ದ ನನ್ನ ಧಡೂತಿ ದೇಹವು ನಾನು ಏನನ್ನೂ ಲೆಕ್ಕಿಸುವುದಿಲ್ಲ ಎಂದು ಯೋಗ ಮಂದಿರದತ್ತ ಬಿರುಸಾಗಿಯೇ ಹೆಜ್ಜೆ ಹಾಕಿತು. ಸಮಯ ಅದಾಗಲೇ ಆರಾದರೂ ಅರೆಬರೆ ಎದ್ದಿದ ಅಮರಗೊಂಡದ ಬೀದಿಗಳಲ್ಲಿ ಚಳಿಗೆ ಕಾಪಿಯನ್ನೋ, ಟೀಯನ್ನೋ ಕುಡಿಯುವ ಮನಸ್ಸುಳವರು ನಿದ್ದೆ ಬಿಟ್ಟ ಕಣ್ಣುಗಳನ್ನು ಅಗಲಿಸಿಕೊಂಡು ಹಾಲಿನ ಪ್ಯಾಕೆಟ್ಟನ್ನೋ, ಪಾತ್ರೆಯನ್ನೋ ಹಿಡಿದು ಮನೆಗಳತ್ತ ತೆರಳುತ್ತಿದ್ದರು. ಇನ್ನೂ ಹಾಲನ್ನು ತರಬೇಕಿದ್ದವರು ಕಣ್ಣುಜ್ಜುತ್ತಾ ಲಗುಬಗೆಯಲ್ಲಿ ಅಂಗಡಿಗಳೆಡೆಗೆ ಧಾವಿಸುತ್ತಿದ್ದರು. ಹಾಲನ್ನು ಮನೆಮನೆಗೆ ಹಾಕುವವರು ಎಲ್ಲರಿಗಿಂತ ತುರ್ತಾಗಿ ಸಂಚರಿಸುತ್ತಿದ್ದರು. ಪತ್ರಿಕೆ ಹಂಚುವ ಹುಡುಗರಂತೂ ತುರಾತುರಿಯಲ್ಲಿ ಪತ್ರಿಕೆಗಳನ್ನು ತರಿಸುವವರ ಮನೆಗಳೆಡೆಗೆ ಎಸೆದು, ಎದ್ದೆವೋ ಬಿದ್ದೆವೋ ಅಂತಲೂ ನೋಡದೆ ಸೈಕಲ್ ಹತ್ತಿ ಯಾವುದೋ ತಿರುವಿನಲ್ಲಿ ಮರೆಯಾಗುತ್ತಿದ್ದರು. ಅರೆಕ್ಷಣದಲ್ಲಿ ಮತ್ತೊಂದು ತಿರುವಿನಲ್ಲಿ ಪ್ರತ್ಯಕ್ಷರಾಗಿರುತ್ತಿದ್ದರು. ರಾತ್ರಿಯೆಲ್ಲಾ ನಿದ್ದೆ ಮಾಡದವರೆಂತೆ ಕಾಣುತ್ತಿದ್ದ ಭಿಕ್ಷುಕರು ತಾವು ನಿಂತ ಮನೆಗಳೆದೆರು ಮನೆಯವರು ಎದ್ದಿರುವರೋ ಇಲ್ಲವೋ ಎಂಬ ಭಾವದಲ್ಲಿ, ಇನ್ನೆಲ್ಲಿ ಮುಂದೆ ಹೋಗು ಅನ್ನುತ್ತಾರೋ ಎನ್ನುವ ಆತಂಕದಲ್ಲಿ “ಅಮ್ಮಾ...ತಾಯಿ...ಏನಾದರು ಭಿಕ್ಷೆ ಹಾಕ್ರಮ್ಮ” ಎಂದು ಕೇಳುತ್ತಿದ್ದರು. ತರಕಾರಿ, ಹಣ್ಣು, ಹೂ ಮಾರುವವರು ತುಸು ಸಂಭ್ರಮದಲ್ಲೇ ವ್ಯಾಪಾರಕ್ಕೆ ಇಳಿದಿದ್ದರು. ತನಗಿಂತ ಮುಂಚೆಯೇ ಎಚ್ಚರವಾದ ಈ ಜಗತ್ತಿನ ಬಗ್ಗೆ ಸೂರ್ಯನಿಗೆ ನಾಚಿಕೆಯಾಗಿ ತನ್ನನ್ನೇ ನೆಚ್ಚಿರುವ ಜಗತ್ತಿಗೆ ಮತ್ತಷ್ಟು ಲವಲವಿಕೆ ತುಂಬುವ ಸಲುವಾಗಿ ನಿಧಾನವಾಗಿ ಬಾನಂಚಿನಲ್ಲಿ ತನ್ನ ಕಣ್ಣುಗಳನ್ನು ಮೋಡಗಳ ಮರೆಯಲ್ಲೇ ತೆರೆಯಲಾರಂಭಿಸಿದನು. ಎಲ್ಲವನ್ನೂ ಗಮನಿಸುತ್ತ, ಕಣ್ತುಂಬಿಕೊಳ್ಳುತ್ತಾ ಸುಮಾರು ಅರ್ಧ ಮೈಲಿಯಷ್ಟಿದ್ದ ಯೋಗ ಮಂದಿರವನ್ನು ನಾನು ತಲುಪವಷ್ಟರಾಗಲೇ ಅದು ಕೂಡ ಲವಲವಿಕೆಯಿಂದ ತುಂಬಿತ್ತು.

ನಾನು ನಾಲ್ಕನೇ ತರಗತಿಯ ವಿದ್ಯಾರ್ಥಿಯಾಗಿದ್ದಾಗ ನಮ್ಮ ಶಾಲೆಗೆ ಹೊಂದಿಕೊಂಡಿದ್ದ ಈ ಯೋಗಮಂದಿರ ವಾಚನಾಲಯವಾಗಿತ್ತು. ಅದಕ್ಕೂ ಮುಂಚೆ ಶಾಲೆಗೇ ಸೇರಿದ್ದ ಆ ಕೊಠಡಿಯಲ್ಲಿ ತರಗತಿಗಳು ನಡೆಯುತ್ತಿದ್ದವಂತೆ. ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳುಹಿಸುವ ಸಂಸ್ಕೃತಿ ನಶಿಸುವ ಕಾಲ ಉದಯವಾಗುತ್ತಿದ್ದ ಆ ಸಮಯದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿ ಎರೆಡೆರಡು ಸೆಕ್ಷನ್ ಗಳು ಒಂದಾಗಿ ಅನಾಥವಾದ ಹಲವು ಕೊಠಡಿಗಳಲ್ಲಿ ಆ ಕೊಠಡಿಯೇ ಮೊದಲಾಯಿತು. ಹಾಳಾಗುವ ಮೊದಲೇ ಹಲವಾರು ವರ್ಷಗಳ ಕಾಲ ನಮ್ಮೂರಿನ ಕೆಲ ಯುವಕರು ಸ್ವಯಂ ಸೇವಕರಾಗಿ ಆ ಕೊಠಡಿಯಲ್ಲಿ ಉತ್ಸಾಹದಿಂದಲೇ ವಾಚನಲಯವನ್ನು ನಡೆಸಿದಾದರೂ, ಕಾಲ ಕಳೆದಂತೆ ತಮ್ಮ ಜೀವನದ ನಿರ್ವಹಣೆಗಾಗಿ ಹಲವು ಕಡೆ ಹರಿದು ಹೋದುದರಿಂದ, ಹೊಸಬರಾರು ಅದರ ಮೇಲ್ವಿಚಾರಣೆಗಾಗಿ ಬರದೆ ಹೋದುದರಿಂದ ವಾಚನಲಾಯಕ್ಕೆ ಬೀಗ ಬಿತ್ತು. ಸಮಯ ಕಳೆದಂತೆ ಮತ್ತಷ್ಟು ಶಿಥಿಲಾವಸ್ಥೆ ತಲುಪುವ ಮೊದಲೇ ಎಲ್ಲಿಂದಲ್ಲೋ ಬಂದ ನಮ್ಮ ಯೋಗ ಗುರುಗಳ ಕಣ್ಣಿಗೆ ಬಿದ್ದು, ಯೋಗಾಭ್ಯಾಸಕ್ಕೆ ಸರಿಯಾದ ಜಾಗವೆಂದು ಊರಿನ ಮುಖಂಡರ ಮತ್ತು ಮುಖ್ಯ ಶಿಕ್ಷಕರ ಸಹಕಾರದಿಂದ ಅಲ್ಲಿ ಮಾರುತಿ ಯೋಗಮಂದಿರವೆಂಬ ಹೆಸರಿನಲ್ಲಿ ಯೋಗಮಂದಿರವೊಂದು ತಲೆಯೆತ್ತಿತು.

ವಿದ್ಯಾರ್ಥಿಯಾಗಿ ಆ ಕೊಠಡಿಯಲ್ಲಿ ಕಲಿಯದಿದ್ದರೂ, ಅಲ್ಲಿ ಮೊದಲಿದ್ದ ವಾಚನಾಲಯ ಎಷ್ಟೋಬಾರಿ ನನ್ನ ಓದಿನ ಹಸಿವನ್ನು ತೀರಿಸುವುದರ ಮೂಲಕ ನನ್ನ ತಿಳುವಳಿಕೆಯನ್ನು ಹೆಚ್ಚಿಸಿತ್ತು. ಇದೀಗ ದಿನಾ ದಿನ ನನಗರಿವಿಲ್ಲದಯೇ ದೊಡ್ಡದಾದ ಹೊಟ್ಟೆಯನ್ನು ಸಣ್ಣದಾಗಿಸಲು ಯೋಗ ಮಾಡಲು ತೊಡಗಿಸಿಕೊಂಡಾಗ ಆ ಕೊಠಡಿಯೇ ನನ್ನ ದೇಹವನ್ನು ದಂಡಿಸುವ ಸ್ಥಳವಾದುದು ನನಗೆ ಬಹಳ ಪ್ರಿಯವಾಗಿತ್ತು.

ಸುತ್ತಲು ತಂತಿಬೇಲಿಯನ್ನು ಹೊಂದಿದ್ದ ಯೋಗ ಮಂದಿರದ ಒಳ ಹೋಗಬೇಕೆಂದರೆ ಚಪ್ಪಲಿಗಳನ್ನು ಹೊರಗೆ ಬಿಟ್ಟು ಮೂರು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಿತ್ತು. ಒಳಗೆ ಹೋದವನೇ ಅದಾಗಲೇ ತುಂಬಿದ್ದ ಅಲ್ಲಿ, ನಗುತ್ತಾ ಸ್ವಲ್ಪ ಜಾಗ ಬಿಟ್ಟ ಶಾಂತಪ್ಪ ಮಾಸ್ತರರ ಪಕ್ಕದಲ್ಲೇ ಯೋಗಾಭ್ಯಾಸವನ್ನು ಶುರುಮಾಡಿದೆ. ಬರಬೇಕಾದವರೆಲ್ಲ ಬಂದಾಗಿತ್ತು. ಶಾಂತಪ್ಪ ಮಾಸ್ತರರು ನನಗೇನೂ ಗುರುಗಳಾಗಿರದಿದ್ದರೂ, ವೃತ್ತಿಯಲ್ಲಿ ಅಧ್ಯಾಪಕರಾಗಿದುದರಿಂದ ನಾವೆಲ್ಲರೂ “ಸರ್” ಎಂದೇ ಸಂಬೋಧಿಸುತ್ತಿದ್ದೆವು. “ಸ್ವಲ್ಪ ನಿಧಾನವಾಗಿ...ಇನ್ನೂ ಸ್ವಲ್ಪ ಬೆಂಡ್ ಮಾಡಿ... ಜೋರಾಗಿ ಉಸಿರು ತೆಗೆದುಕೊಳ್ಳಿ... ಈಗ ನಿಧಾನವಾಗಿ ಉಸಿರು ಬಿಡಿ...” ಎಂಬಂತಹ ಅತ್ತಿಂದಿತ್ತ ಓಡಾಡುತ್ತಿದ್ದ ಯೋಗ ಗುರುಗಳ ಮಾತುಗಳು ಮಂತ್ರದಂತೆ ಕೇಳಿಸುತ್ತಿತ್ತು. ನನಗೆ ಬಾಗಿಲ ಬಳಿಯೇ ಜಾಗ ಸಿಕ್ಕಿದುದರಿಂದ ಯೋಗ ಮಂದಿರದ ಮುಂದೆಯಿದ್ದ ರಸ್ತೆಯ ಕಡೆ ಆಗಾಗ ನೋಟ ಹರಿಸುವಂತೆ, ಅಲ್ಲಿನ ಚಟುವಟಿಕೆಗಳು ಪ್ರೇರೆಪಿಸುತ್ತಿದ್ದವು. ಈ ಸಮಯದಲ್ಲಿ ಯೋಗಮಂದಿರದ ಮೆಟ್ಟಿಲ ಬಳಿ ಒಬ್ಬ ಹುಡುಗ ಬಂದು ಮೊದಲನೇ ಮೆಟ್ಟಿಲಿನ ಮೇಲೆ ಕೂಳಿತುಕೊಂಡು ಒಳಗೆ ಇಣುಕತೊಡಗಿದ. ಆ ಹುಡುಗನನ್ನು ಹಿಂದೊಮ್ಮೆ ಅಲ್ಲಿಯೇ ನೋಡಿದ ನೆನಪಿದ್ದರೂ ಅವನ್ಯಾರೆಂದು ನನಗೆ ಗೊತ್ತಿರಲಿಲ್ಲ. ಬಹುಷಃ ಅವನಿಗೆ ಯೋಗದಲ್ಲಿ ಆಸಕ್ತಿಯಿತ್ತೆಂದು ಕಾಣುತ್ತದೆ, ಕತ್ತೆತ್ತಿ ಕತ್ತೆತ್ತಿ ಒಳಗೇ ಇಣುಕತೊಡಗಿದ. ಒಳಗೆ ಬರುವ ಧೈರ್ಯ ಮಾತ್ರ ಮಾಡಲಿಲ್ಲ.

“ಸಾರ್, ಗಮನವಿಟ್ಟು ಅಭ್ಯಾಸ ಮಾಡಿ” ಎಂಬ ಯೋಗ ಗುರುಗಳ ಮಾತು ನನಗೇ ಎಂದರಿತ ನಾನು ನನ್ನ ಗಮನವನ್ನು ಯೋಗದೆಡೆಗೆ ಹರಿಸಿದೆ. ಹೀಗೆಯೇ ಸ್ವಲ್ಪ ಹೊತ್ತು ಕಳೆದ ಮೇಲೆ, ಬಾಗಿಲ ಬಳಿ ಏನೋ ಚಲಿಸಿದಂತಾಗಿ ನನ್ನ ನೋಟ ಆ ಕಡೆ ಹರಿಯುವ ಸಮಯಕ್ಕೆ ಅಲ್ಲಿ ಅಷ್ಟೊತ್ತು ಕುಳಿತ್ತಿದ್ದ ಆ ಹುಡುಗ ಸರ್ರನ್ನೆ ಎದ್ದು ರಸ್ತೆಯ ಕಡೆ ಓಡಲು ಶುರುಮಾಡಿದ್ದ. ಇದ್ದೆಲ್ಲವನ್ನು ನನಗೆ ಪರಿವೆ ಇಲ್ಲದಂತೆ ಗಮನಿಸುತ್ತಿದ್ದ ಶಾಂತಪ್ಪ ಸರ್ ಭರ್ರನೆ ಎದ್ದು “ರೀ ಅವನು ಚಪ್ಪಲಿ ಹಾಕ್ಕೊಂಡು ಹೋಗ್ತಾ ಇದ್ದಾನೆ ಕಣ್ರೀ” ಅಂದವರೇ, ಯಾರ ಉತ್ತರಕ್ಕೂ ಕಾಯದೇ ನನ್ನ ಮೇಲಿಂದ ಹಾರಿ ಆ ಹುಡುಗನ ಹಿಂದೆ ಓಡ ತೊಡಗಿದರು. ಇವರ ಮಾತನ್ನು ಕೇಳಿದ ನಾವೆಲ್ಲಾ ಯೋಗಭ್ಯಾಸ ಬಿಟ್ಟು ಆಚೆ ಬರುವಷ್ಟರಲ್ಲಿ, ಶಾಂತಪ್ಪ ಸರ್ ಹಿಂದೆಯೇ ಮತ್ತಿಬ್ಬರು ಅಭ್ಯಾಸ ಮಾಡುತ್ತಿದ್ದ ಹುಡುಗರು ಓಡಲು ಶುರುಮಾಡಿದರು. ಹಿಂದೆ ಯಾರೋ ಮೂರು ಜನ ಓಡಿ ಬರುತ್ತಿದ್ದಾರೆ ಎಂದೋ ಅಥವಾ ಸಹಜ ವೇಗದಲ್ಲಿಯೋ ಆ ಹುಡುಗ ಮಿಂಚಿನಂತೆ ರಸ್ತೆಯ ತಿರುವಿನಲ್ಲಿ ಮರೆಯಾದ. ಅವನನ್ನು ಹಿಮ್ಮೆಟ್ಟಿದ್ದ ಮೂವರೂ ಆ ತಿರುವಿನಲ್ಲಿ ಮರೆಯಾದರು.

ಆಚೆ ಬಂದ ನಾವೆಲ್ಲರೂ ನಮ್ಮ ನಮ್ಮ ಚಪ್ಪಲಿಗಳನ್ನು ನೋಡಿಕೊಂಡು ಸಮಾಧಾನ ಪಟ್ಟುಕೊಂಡೆವು. ನಮ್ಮವೆಲ್ಲ ಮಿಕ್ಕಿ ಮತ್ತೂ ಮೂರು ಜತೆ ಚಪ್ಪಲಿ ಅಲ್ಲಿ ಉಳಿದವು. ಅದಾಗ ನಮ್ಮ ಯೋಗ ಗುರುಗಳು “ಇನ್ನೂ ಮೂರು ಜತೆ ಇವರದೇ ಇರಬೇಕು. ಹಿಂದೆ ಮುಂದೆ ನೋಡದೆ, ಇವರ್ಯಾಕೆ ಓಡಿದರೋ...!?” ಎಂದು ಹೇಳುತ್ತಾ “ಬನ್ನಿ ಬನ್ನಿ ನಾವೆಲ್ಲಾ ಅಭ್ಯಾಸ ಮುಂದುವರೆಸೋಣ” ಎಂದು ನಮ್ಮನ್ನೆಲ್ಲಾ ಒಳಗೆ ಕರೆದುಕೊಂಡು ಹೋದರು.

“ಎಲ್ಲರ ಚಪ್ಪಲಿಗಳು ಇಲ್ಲೇ ಇರುವಾಗ ಆ ಹುಡುಗನು ಹಾಕಿಕೊಂಡು ಹೋದ ಚಪ್ಪಲಿಗಳು ಯಾರವು?” ಎಂದು ನಮ್ಮನಮ್ಮಲೇ ಮಾತಾಡಿಕೊಳ್ಳುತ್ತಾ ಯೋಗಾಭ್ಯಾಸ ಮುಂದುವರೆಸಿದವು. ಸುಮಾರು ಅರ್ಧಗಂಟೆ ಕಳೆದಿರಬೇಕು, ನಾವೆಲ್ಲಾ ಶವಾಸನ ಹಾಕುವ ಹೊತ್ತಿಗೆ ಪೆಚ್ಚುಮೋರೆಯಿಂದ ಶಾಂತಪ್ಪ ಮಾಸ್ತರರು, ಅವರ ಜೊತೆ ಓಡಿ ಬಂದಿದ್ದ ಹುಡುಗರ ಜೊತೆ ಹಿಂತಿರುಗಿದರು. ಬಂದವರೇ ಬಾಗಿಲ ಬಳಿ ಇದ್ದ ಚಪ್ಪಲಿಗಳಲ್ಲಿ ಅವರದೂ ಇರುವುದನ್ನು ಖಾತ್ರಿಪಡಿಸಿಕೊಂಡು ಒಳಗೆ ಬಂದರು. ಅವರಲ್ಲಿ ಒಬ್ಬ ಹುಡುಗ ಮುಸುಮುಸು ನಗುತ್ತಿದ್ದ.

ನಾವೆಲ್ಲ ಕೇಳುವ ಮೊದಲೇ ನಿಟ್ಟುಸಿರು ಬಿಡುತ್ತಾ “ಆ ಹುಡುಗನ್ನ ಅವರ ಮನೆಯತ್ತಿರ ಹೋಗಿ ಹಿಡುದ್ವು. “ಅವನನ್ನು ಹಿಡಿದು ಯಾಕೋ ಓಡಿಬಂದೆ? ಯಾರ ಚಪ್ಪಲಿ ಕದ್ದುಕೊಂಡು ಬಂದೆ?” ಎಂದು ದಬಾಯಿಸಿದೆವು. ಅದಕ್ಕವನು, “ಸರ್, ನನ್ನ ಚಪ್ಪಲಿ ಹಾಕ್ಕೊಂಡು ನಾ ಬಂದೆ ಅಷ್ಟೆ. ಹಾಲಾಕಕೆ ಟೈಮಾಯ್ತು, ನಮ್ಮಮ್ಮ ಬೈಯ್ತಾಳೆ ಅಂತ ಓಡಿ ಬಂದೆ. ಬಿಡಿ ಸರ್” ಎಂದು ಜೋರು ಮಾಡಿದ. ಅಷ್ಟರಲ್ಲಿ ತಗಳಪ್ಪಾ ಮನೆಯೊಳಗಿದ್ದ ಅವರಮ್ಮ ಹೊರಗೆ ಬಂದು ಸ್ವಲ್ಪ ದೂರದಲ್ಲಿದ್ದ ನಮ್ಮನ್ನೆಲ್ಲಾ ನೋಡಿ “ಯಾರೋ ಇವರೆಲ್ಲಾ?” ಎಂದು ಆ ಹುಡುಗನೆಡೆಗೆ ಅರಚುತ್ತಾ ಬರತೊಡಗಿದಳು. ಆಕೆ ನಮ್ಮೆಡೆಗೆ ಬರುತ್ತಿದ್ದ ವೇಗವನ್ನು ನೋಡಿಯೇ ನಾವೆಲ್ಲ ಆ ಹುಡುಗನನ್ನು ಬಿಟ್ಟು ಅಲ್ಲಿಂದ ಕಾಲ್ಕಿತ್ತೆವು. ಸದ್ಯ! ಆಯಮ್ಮ ನಮ್ಮನ್ನು ಅಟ್ಟಿಸಿಕೊಂಡು ಬಂದು ಏನನ್ನೂ ಕೇಳಲಿಲ್ಲ.” ಎಂದು ಒಂದೇ ಸಮನೆ ಹೇಳುತ್ತಲೇ ಕುಳಿತರು. ಮುಂದುವರೆಯುತ್ತಾ “ಅಷ್ಟಕ್ಕೂ ಅವನು ಅವನ ಚಪ್ಪಲಿಯನ್ನ ಮೆಟ್ಟಿಕೊಂಡು ಹೋದದ್ದಕ್ಕೆ ನಾವೆಲ್ಲಾ ಯಾಕೆ ದೆವ್ವ ಮೆಟ್ಟಿದಂಗೆ ಅವನ ಹಿಂದೆ ಓಡಿದೆವು?” ಎಂದು ಪರಿತಪಿಸತೊಡಗಿದರು.

“ಹೋಗ್ಲಿ ಬಿಡಿ ಸರ್, ಅದು ಅವನ ಚಪ್ಪಲಿ ಅಂತ ಮುಂಚೆಯೇ ನಿಮಗೇನು ಗೊತ್ತಿತ್ತೇ? ಸಮಾಧಾನ ಮಾಡ್ಕೋಳಿ” ಎಂದು ಯೋಗಗುರುಗಳು ಹೇಳಿದರೂ ಶಾಂತಪ್ಪ ಮಾಸ್ತರರಿಗೆ ಸಮಾಧಾನವಾದಂತೆ ಕಾಣಲಿಲ್ಲ. ಅಲ್ಲಿದ್ದವರೆಲ್ಲಾ ತಲೆಗೊಂದೊಂದು ಮಾತನ್ನು ಆಡುತ್ತಾ, ಪ್ರಶ್ನೆಗಳನ್ನು ಕೇಳುತ್ತಿದ್ದರೆ, ಶಾಂತಪ್ಪ ಮಾಸ್ತರರು ಅದ್ಯಾಕೋ ಗರಬಡಿದವರಂತೆ ಕೂತುಬಿಟ್ಟರು. ಪಾಪ ಅವರಿಗೆ ಈ ಘಟನೆಯಿಂದ ಅದೆಷ್ಟು ಬೇಜಾರಾಗಿತ್ತೋ? ಅವರನ್ನು ಅವರ ಪಾಡಿಗೆ ಬಿಟ್ಟು ನಾನು ಶವಾಸನ ಹಾಕಿದೆ. ನನ್ನ ಮನದಲ್ಲಿ “ಈ ಜಗತ್ತಿನಲ್ಲಿ ನಮ್ಮ ಚಪ್ಪಲಿಗಳನ್ನು ನಾವು ಹಾಕಿಕೊಳ್ಳುವುದೂ ಕೂಡಾ ಎಷ್ಟು ಕಷ್ಟ” ಎಂಬ ಮಾತು ಅದೇಕೋ ನನ್ನ ಉಸಿರಿನೊಂದಿಗೆ ಪಯಣಿಸತೊಡಗಿತು.

                                                                                                 - ಗುಬ್ಬಚ್ಚಿ ಸತೀಶ್.

ನೀರು (ಪುಟ್ಟ ಕತೆ)

  ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹ...