ಬ್ಲಾಗ್ ಆರ್ಕೈವ್

ಭಾನುವಾರ, ಡಿಸೆಂಬರ್ 20, 2015

ನವೀನ್ ಮಧುಗಿರಿಯವರ ‘ನವಿಗವನ’ : ಆಯುವ ಕವಿ ನವೀನ್.


ರಸ್ತೆ ಬದಿಯಲ್ಲಿ ಹಾಡಿ
ಅನ್ನ ಉಣ್ಣುವ
ಟೋನಿ
ಪ್ರತೀದಿನ ತನ್ನ ಕರುಳು
ಹಿಂಡುವಷ್ಟು ಬಾರಿ
ಗಿಟಾರಿನ
ತಂತಿ ಮೀಟುವನು
        *
ರಸ್ತೆ ಬದಿಯಲ್ಲಿ
ತರಕಾರಿ ಮಾರಲು
ಬಂದವನು
ತನ್ನಸಿವ
ತಕ್ಕಡಿಯಲ್ಲಿ ತೂಗಿದ
        *
ತುಂಬಾ ಹೊತ್ತಿದ್ದರೆ
ವಾಸನೆ ಬರುವುದೆಂದು
ಅತ್ತರನ್ನ ಬಳಿದರು
ಬದುಕಿಡೀ
ಮೋರಿ ಬಳಿದೆ ಬದುಕಿದವನು
ಶವವಾಗಿ ಮಲಗಿದ್ದ
        *
ಬಣ್ಣ ಮಾಸಿದ
ಗೋಡೆಯ ತುಂಬಾ
ಬಡತನದ ಚಿತ್ರ
        *
ಅಕ್ಷರದಿಂದ ದೇಶವನ್ನು
ಬದಲಿಸಬಹುದು!
ನಿಜಾ,
ಆದರೆ ಹಸಿವಿಗೆ
ಅನ್ನವೇ ಬೇಕು.
        *
ರೈತ
ದೇಶದ ಬೆನ್ನೆಲುಬು
ಬಡತನ
ರೈತನ ನೆರಳು
        *
ನಮ್ಮ ಮನೆಗೆ
ಬಾಗಿಲಿಡುತ್ತೇವೆ
ಹಕ್ಕಿಗಳ ಮನೆ ಕಿತ್ತು
        *
ಊರ ತುಂಬಾ
ಬೆದೆಗೆ ಬಂದ ನಾಯಿಗಳೆ,
ಉಚ್ಚೋ... ಎಂದೋಡಿಸಲು
ಎಳೆಯ ಹೆಣ್ಣು ಕೂಸಿನ್ನು
ಮಾತು ಕಲಿತಿಲ್ಲ
        *
ಬಳೆಗಳ ಸದಿಲ್ಲದೇ
ಇಲ್ಲಿ
ಏನೂ ಆಗುವುದಿಲ್ಲ
ಎರಡು ರೀತಿಯ ಹಸಿವಿನಲ್ಲೂ,
ಅವುಗಳ ಮಹತ್ವ ದೊಡ್ಡದು.
        *
        ಈ ಮೇಲಿನ ಹನಿಗವಿತೆಗಳನ್ನು ಹತ್ತನೇ ತರಗತಿಗೆ ವಿದ್ಯಾಭ್ಯಾಸವನ್ನು ಬಿಟ್ಟ ಯುವಕನೊಬ್ಬ ಬರೆದಿದ್ದಾನೆಂದರೆ ನಂಬಲೇಬೇಕು. ತುಮಕೂರು ಜಿಲ್ಲೆ, ಮಧುಗಿರಿ ತಾಲ್ಲೂಕಿನ ವೀರಾಪುರ ಗ್ರಾಮದ ರಘುನಂದನ್ ವಿ.ಆರ್. ಎಂಬ ಯುವಕ ನವೀನ್ ಮಧುಗಿರಿ ಎಂಬ ಕಾವ್ಯನಾಮದಲ್ಲಿ ತಮ್ಮ ಮೊದಲ ಕೃತಿ ನವಿಗವನ ಎಂಬ ಹನಿ - ಹನಿಗವನಸಂಕಲನದಲ್ಲಿ ಈ ಮೇಲಿನ ಹನಿಗವಿತೆಗಳ ಜೊತೆಗೆ ಮತ್ತಷ್ಟು ಪ್ರಬುದ್ಧ ಹನಿಗವಿತೆಗಳನ್ನು ಪ್ರಕಟಿಸಿರುವುದನ್ನು ಓದಿದರೆ ಈ ಯುವ ಕವಿಯ ಬಗ್ಗೆ ಅತೀವ ಹೆಮ್ಮೆಯಾಗುತ್ತದೆ. ಈಗಾಗಲೇ ತಮ್ಮ ಕಥೆ, ಕವಿತೆ, ಕಿರುಕಥೆ (ನ್ಯಾನೋ ಕಥೆ), ಶಿಶುಗೀತೆ ಮತ್ತು ಹಲವು ಲೇಖನಗಳನ್ನು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಿಸುವುದರ ಮೂಲಕ ಭರವಸೆ ಮೂಡಿಸಿದ್ದಾರೆ ಯುವ ಸಾಹಿತಿ ನವೀನ್ ಮಧುಗಿರಿ. ಇವರ ಈ ಮೊದಲ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರದ ೨೦೧೩ನೇ ಸಾಲಿನ ಯುವ ಬರಹಗಾರರ ಚೊಚ್ಚಲ ಕೃತಿ ಪ್ರಕಟಣೆಯ ಪ್ರೋತ್ಸಾಹಧನದಿಂದ ಪ್ರಕಟನೆಗೊಂಡಿದೆ. ಈ ಪುಸ್ತಕವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹಧನದಿಂದ ಪ್ರಕಟಿಸಲು ತಮ್ಮದೇ ನವಿ ಪುಸ್ತಕ ಎಂಬ ಪ್ರಕಾಶನವನ್ನೂ ನವೀನ್ ಆರಂಭಿಸಿದ್ದರೆ. ಈ ಸಂಕಲನಕ್ಕೆ ಕವಿಯೂ, ಚಿತ್ರಸಾಹಿತಿಯೂ ಆಗಿರುವ ಗುರುನಾಥ್ ಬೋರಗಿಯವರ ಸುಂದರ ಮುಖಪುಟವೂ ಇದ್ದು, ಜೊತೆಗೆ ಅಲ್ಲಲ್ಲಿ ಕವಿತೆಗಳಿಗೆ ಪೂರಕವಾಗಿರುವ ರೇಖಾಚಿತ್ರಗಳಿವೆ. ಮಧುಗಿರಿ ತಾಲ್ಲೂಕಿನವರೇ ಆದ ಹಿರಿಯ ಸಾಹಿತಿ ಮ.ಲ.ನ. ಮೂರ್ತಿಯವರ ಮುನ್ನುಡಿ ಈ ಸಂಕಲನಕ್ಕಿದೆ. ಸಗಣಿ, ಗಂಜಳ, ಗೊಬ್ಬರದ ನಡುವೆ ಬದುಕನ್ನು ಕಟ್ಟಿಕೊಳ್ಳುತ್ತಿರುವ ಅಪ್ಪಟ ಗ್ರಾಮೀಣ ಪ್ರತಿಭೆಯಾದ ಯುವ ಕವಿಯ ಸಂವೇದನೆ, ಕಾವ್ಯದ ತುಣುಕುಗಳಲ್ಲಿ ವ್ಯಕ್ತವಾಗಿದೆ ಎಂದು ಮ.ಲ.ನ. ಮೂರ್ತಿಯವರು ಗುರುತಿಸಿದ್ದಾರೆ. ತಮ್ಮನಿಗೇ ಪ್ರೀತಿಯಿಂದ ಸಂಕಲನದ ಅರ್ಪಣೆಯಾಗಿದೆ.

        ನೀವು ಹನಿಗವನವೆನ್ನಿ, ಹನಿಗವಿತೆಯನ್ನಿ, ಕಿರುಗವಿತೆಯನ್ನಿ, ಚುಟುಕವೆನ್ನಿ ಅಥವಾ ಮತ್ತಿನೇನೋ ಅನ್ನಿ ಅದನ್ನು ಕೆಲವರು ಪ್ರಾಸಕ್ಕಷ್ಟೇ ಬರೆದರೆ, ಕೆಲವರು ಗಂಭೀರವಾಗಿ ಸಾಮಾಜಿಕ ಕಳಕಳಿಯಿಂದ ಬರೆಯುತ್ತಾರೆ. ಪ್ರಾಸಕ್ಕಾಗಿ ಬರೆದದ್ದೂ ಆ ಕ್ಷಣಕ್ಕಷ್ಟೇ ಖುಷಿ ನೀಡಿದರೆ, ಗಂಭೀರವಾಗಿ ಬರೆದದ್ದು ಓದುಗನನ್ನು ಕಾಡುವ ಗುಣ ಹೊಂದಿರುತ್ತದೆ. ಸಾಮಾಜಿಕ ಕಳಕಳಿಯಿಂದ ಬರೆಯುವಲ್ಲಿ ನನಗೆ ದಿನಕರ ದೇಸಾಯಿ, ಜರಗನಹಳ್ಳಿ ಶಿವಶಂಕರ್, ವೈ‌ಎನ್ಕೆ, ಸಿ.ಪಿ.ಕೆ, ಡುಂಡಿರಾಜ್, ಡಾ|| ಕೆ.ಬಿ.ರಂಗಸ್ವಾಮಿ, ಇನ್ನೂ ಮುಂತಾದವರೂ ಬಹಳ ಪ್ರಮುಖವಾಗಿ ಕಾಣುತ್ತಾರೆ. ಇವರ ಸಾಲಿಗೆ ನವೀನ್ ಮಧುಗಿರಿಯೂ ಸೇರಬಲ್ಲರು ಎಂಬ ಭರವಸೆ ಮೂಡಿಸುವ ಅನೇಕ ಹನಿಗವಿತೆಗಳು ಸಂಕಲನದಲ್ಲಿವೆ. ಈತ ತನ್ನ ಮೊದಲ ಸಂಕಲನದಲ್ಲಿಯೇ ಪ್ರೌಢಿಮೆ ಮೆರೆದಿದ್ದಾನೆ. ಈ ಕಾರಣಕ್ಕಾಗಿಯೇ ಇತ್ತೀಚಿಗೆ ಪ್ರಕಟವಾಗಿರುವ ಹಲವು ಹನಿಗವಿತೆ ಸಂಕಲನಗಳಲ್ಲಿ ಈ ಕೃತಿ ಬಹಳ ಪ್ರಮುಖ ಸ್ಥಾನವನ್ನು ಪಡೆಯುತ್ತದೆ.

        ವಯೋಸಹಜ ಪ್ರೀತಿ, ಪ್ರೇಮ, ಕಾಮ ವಸ್ತುಗಳಾಗಿರುವ ಹನಿಗವಿತೆಗಳೂ ಇಲ್ಲಿವೆ. ಆದರೆ, ಅವು ಬೆರಳೆಣಿಕೆಯಷ್ಟೇ ಎನ್ನಬಹುದು. ಉದಾಹರಣೆಗೆ :

ಹುಡುಗಿಯರು ಒಮ್ಮೆ
ಹೆಜ್ಜೆಯಿರಿಸಿದರೆ
ಜನುಮ ಪೂರ್ತಿ ಅಳಿಸುವುದಿಲ್ಲ!
ಅದರಲ್ಲೂ,
ಹೃದಯದ ಮೇಲೆ!
        *
ಬೇಲಿಯಿರದ
ಬದುಕ ಬಯಸಿ
ಹೊರಟವನನ್ನು
ಪ್ರೇಯಸಿಯ ಬಾಹುಗಳು
ಬಂಧಿಸಿದವು!
        *
ಎಲ್ಲಕ್ಕಿಂತಲೂ
ಮೊದಲು
ಹುಟ್ಟಿದ್ದು ಕಾಮ
ಆನಂತರ ನಾವೆಲ್ಲರೂ
ಹುಟ್ಟಿದ್ದು
        *
ಇಬ್ಬರೂ ಕೂಡಿದಾಗ
ಕಳೆದದ್ದು
ದೇಹದ ಹಸಿವು
        *

        ಸಂಕಲನದ ಅಲ್ಲಲ್ಲಿ ಕರುಳ ಸಂಬಂಧಗಳನ್ನು ನೆನೆಯುವ ಹನಿಗವತೆಗಳಿವೆ.

ಅಪ್ಪನ ಕೈಗಳನ್ನೇ
ಗಮನಿಸಿದ ನಮಗೆ
ಅವನ
ಹಗುರಾದ ಜೇಬು
ಅರ್ಥವಾಗಲಿಲ್ಲ
        *
ಅವ್ವ
ತನ್ನ ಕಷ್ಟ, ಕಣ್ಣೀರುಗಳನ್ನೆಲ್ಲ
ಬಚ್ಚಿಟ್ಟು
ಬರಿ ನಗುವನ್ನಷ್ಟೇ
ನಮಗೆ ಉಣ ಬಡಿಸಿದಳು
        *
ಅಟ್ಟ ಸೇರಿದ
ಒನಕೆಯ ಮೇಲೆ
ಮಾಸದ
ಅಜ್ಜಿಯ ಕೈಬೆರಳ
ಗುರುತು
        *      

        ಸಂಕಲನದ ಕೆಲವು ಹನಿಗವಿತೆಗಳು ಇತಿಹಾಸ, ಬ್ರೇಕಿಂಗ್ ನ್ಯೂಸ್‌ಗಳ ಮೇಲೂ ಬೆಳಕು ಚೆಲ್ಲಿವೆ:

ಇತಿಹಾಸದ ತುಂಬಾ
ಸಾವಿನ ಶವಗಳ
ವಾಸನೆ
        *
ಚುಟುಕು ಸುದ್ದಿ
ಆಕ್ರಮಿಸಿದೇ
ಎಷ್ಟೊಂದು ಕಿವಿ!?
        *

        ನವೀನ್ ತಮ್ಮ ಸಂಕಲನವನ್ನು ಸ್ನೇಹ ಹಾಗೂ ಗೌರವದೊಂದಿಗೆ ನನಗೆ ಕಳುಹಿಸಿದ ಸಮಯದಲ್ಲಿಯೇ ಒಂದು ಶನಿವಾರದ ಸಂಜೆ ಓದಿದಾಗಲೇ, ಈ ಸಂಕಲನವನ್ನು ಸಹೃದಯ ಓದುಗರಿಗೆ ಪರಿಚಯಿಸಬೇಕೆಂದು ಮನದಲ್ಲಿ ಆಸೆ ಮೂಡಿತಾದರೂ ಕಾಲ ಕೂಡಿಬಂದಿರಲಿಲ್ಲ. ಕಾಲ ಕೂಡಿ ಬರುವ ಸಮಯಕ್ಕೆ ನವೀನ್ ಅದಾಗಲೇ ತಮ್ಮ ಆಸೆಯಂತೆ ಹೆಣ್ಣು ಮಗುವಿಗೆ ತಂದೆಯಾಗಿದ್ದರು. ಅವರದೇ ಒಂದು ಹನಿಗವನದ ಆಶಯದಂತೆ ಅವರೂ ಮತ್ತೆ ಅಪ್ಪನಾಗಿ ಜನಿಸಿದ್ದಾರೆ.

ಪುಟ್ಟ ಮಗುವಿನ
ಮೊದಲ ಅಳುವಿನ
ಜೊತೆಗೆ
ಕಾರಿಡಾರಿನಲ್ಲೊಬ್ಬ
ಅಪ್ಪನ ಜನನ

        ಈ ಸಂದರ್ಭದಲ್ಲಿ ನವೀನ್‌ರವರಿಗೆ ಶುಭಕೋರುತ್ತಾ, ಖ್ಯಾತ ಹನಿಗವಿ, ಹನಿಗವಿತೆಗಳ ಖಜಾನೆಯ ಒಡೆಯ ಡುಂಡಿರಾಜ್ ರೇ ಹಿಂದಿನ ಮತ್ತು ಇಂದಿನ ಕವಿಗಳನ್ನು ಕುರಿತು ಬರೆದಿರುವ

ಅವರು ಆಯುವ ಕವಿ
ಇವರು ಈಯುವ ಕವಿ

ಎಂಬ ಹನಿಗವಿತೆಯನ್ನು ನೆನೆಯುತ್ತಾ, ನವೀನ್ ಮಧುಗಿರಿ ಆಯುವ ಕವಿ ಎಂದು ಶ್ಲಾಘಿಸಬಹುದಾಗಿದೆ.

                                                                           -       ಗುಬ್ಬಚ್ಚಿ ಸತೀಶ್.
ಬುಧವಾರ, ಜುಲೈ 22, 2015

’ಮುಗುಳ್ನಗೆ’ ಯ ಎರಡನೇ ಮುದ್ರಣ

ಆತ್ಮೀಯರೇ, ’ನಿಮ್ಮೆಲ್ಲರ ಮಾನಸ’ ಕನ್ನಡ ಮಾಸಪತ್ರಿಕೆಯ ೧೦೦ ಸಂಚಿಕೆಗಳ ಸಂಭ್ರಮಕ್ಕೆ ಮತ್ತು 
ಪುಸ್ತಕಗಳ ಬಿಡುಗಡೆಗೆ ತಪ್ಪದೆ ಪ್ರೀತಿಯಿಂದ ಬನ್ನಿ... 
ಅಂದು ನನ್ನ ಕಾದಂಬರಿ ’ಮುಗುಳ್ನಗೆ’ ಯ ಎರಡನೇ ಮುದ್ರಣ ಕೂಡ ಬಿಡುಗಡೆಯಾಗುತ್ತಿದೆ... 
ನಿಮಗಿದೋ ಪ್ರೀತಿಯ ಆಹ್ವಾನ...

ತಪ್ಪದೆ ಬನ್ನಿ...
ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.

ಸೋಮವಾರ, ಜೂನ್ 22, 2015

ಪುಸ್ತಕ ಪ್ರಾಧಿಕಾರದಲ್ಲಿ ಪಾರದರ್ಶಕತೆಯಿಲ್ಲ

        ಕನ್ನಡ ಪುಸ್ತಕ ಪ್ರಾಧಿಕಾರವು ಇತ್ತೀಚೆಗೆ ತಾನೇ ೨೦೧೦ರ ಸಗಟು ಖರೀದಿ ಪ್ರಕ್ರಿಯೆಯನ್ನು ಮುಗಿಸಿದೆ. ಆದರೆ, ಆಯ್ಕೆಯಾದ ಮತ್ತು ತಿರಸ್ಕೃತಗೊಂಡ ಪುಸ್ತಕಗಳ ಪಟ್ಟಿಯನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿಲ್ಲ. ಬಹುತೇಕ ಎಲ್ಲಾ ವಿಷಯಗಳನ್ನು ತನ್ನ ಅಂತರ್ಜಾಲ ತಾಣದಲ್ಲಿ ಪ್ರಕಟಿಸುವ ಪ್ರಾಧಿಕಾರವು ಈ ವಿಷಯದಲ್ಲಿ ಮೌನವಾಗಿರುವುದು ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ೨೦೧೦ರಲ್ಲಿ ಮೊದಲ ಮುದ್ರಣವಾಗಿ ನನ್ನ ಮಳೆಯಾಗು ನೀ... ಎಂಬ ಕವನವನ್ನು ಪ್ರಕಟಿಸುವುದರ ಮೂಲಕ ನಮ್ಮ ಗೋಮಿನಿ ಪ್ರಕಾಶನವನ್ನು ಪ್ರಾರಂಭಿಸಿ ಇದುವರೆವಿಗೂ ಹನ್ನೆರಡು ಪುಸ್ತಕಗಳನ್ನು ಪ್ರಕಟಿಸಿದ್ದೇವೆ. 

ನಮ್ಮ ಪ್ರಕಾಶನದ ಮೊದಲ ಪುಸ್ತಕವು ತಿರಸ್ಕೃತಗೊಂಡಿದೆ ಎಂಬ ವಿಚಾರ ಪ್ರಾಧಿಕಾರವನ್ನು ಸಂಪರ್ಕಿಸಿದಾಗ ತಿಳಿದುಬಂತು. ಆದರೆ, ಪುಸ್ತಕ ತಿರಸ್ಕೃತಗೊಂಡದಕ್ಕೆ ಸೂಕ್ತ ಕಾರಣ ಅಧ್ಯಕ್ಷರಾದ ಡಾ|| ಬಂಜಗೆರೆ ಜಯಪ್ರಕಾಶ್‌ರವರನ್ನು ಮತ್ತು ಕಛೇರಿಯನ್ನು ಫೋನಿನ ಮೂಲಕ ಸಂಪರ್ಕಿಸಿ ಎರಡು ವಾರಗಳ ಮೇಲಾದರೂ ತಿಳಿದು ಬರುತ್ತಿಲ್ಲ. ಪ್ರಾಧಿಕಾರದ ಈ ಹಿಂದಿನ ಬೆಂಗಳೂರಿನ ಪುಸ್ತಕ ಮೇಳದ ಮಳಿಗೆಯ ವಿಚಾರದಲ್ಲೂ ಈಗಾಗಲೇ ನಮ್ಮ ಪ್ರಕಾಶನಕ್ಕೆ ಅನ್ಯಾಯವಾಗಿದ್ದು ಪುಸ್ತಕ ಪ್ರಕಾಶನ ಕುರಿತು ಜಿಗುಪ್ಸೆ ತಳೆಯುವಂತಾಗಿದೆ.

                                                        -       ಗುಬ್ಬಚ್ಚಿ ಸತೀಶ್,

                                                                ಗೋಮಿನಿ ಪ್ರಕಾಶನ, ತುಮಕೂರು.

ಭಾನುವಾರ, ಮೇ 10, 2015

ರಜನಿ ನರಹಳ್ಳಿಯವರ ‘ಆತ್ಮವೃತ್ತಾಂತ’ : ಆತ್ಮಸಂಗಾತಿಗೆ ಅಕ್ಷರಗಳ ಶ್ರದ್ಧಾಂಜಲಿ

       

        ನಾನು ಮತ್ತು ನನ್ನ ಶ್ರೀಮತಿ ತುಮಕೂರಿನ ಶ್ರೀಮತಿ ಎಂ.ಸಿ. ಲಲಿತಾರವರ ಮನೆಗೆ ನನ್ನ ನಾಲ್ಕನೇ ಪುಸ್ತಕ, ಮೊದಲ ಕಥಾಸಂಕಲನ  ಉಘೇ ಉಘೇ ಪುಸ್ತಕ ಬಿಡುಗಡೆ ಕಾಯಕ್ರಮಕ್ಕೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಬೇಕೆಂದು ಕೋರಲು ಹೋಗಿದ್ದೆವು. ಅವರು ಅದಾಗಲೇ ನನ್ನ ಮುಗುಳ್ನಗೆ ಕಾದಂಬರಿ ಬಿಡುಗಡೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಂದು ನನಗೆ ಶುಭ ಹಾರೈಸಿದ್ದರು. ಆದರೂ, ಮತ್ತೆ ಅವರನ್ನೇ ಕರೆಯಲು ಬಲವಾದ ಒಂದು ಕಾರಣವಿತ್ತು. ಅದೇನೆಂದರೆ, ಅವರು ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷರಾಗಿದ್ದಾಗ ಏರ್ಪಡಿಸಿದ್ದ ಕಥಾಸ್ಪರ್ಧೆಯಲ್ಲಿ ನನ್ನ ಟ್ಯೂಷನ್ ಫೀಸು ಕಥೆಗೆ ಎರಡನೇ ಬಹುಮಾನ ಬಂದಿತ್ತು. ಮತ್ತು ಆ ನಂತರವೂ ಅವರ ಅನನ್ಯ ಸಾಂಸ್ಕೃತಿಕ ವೇದಿಕೆಯ ಕಥಾಸ್ಪರ್ಧೆಯಲ್ಲಿ ಅಂಕುರ ಕಥೆಗೆ ಸಮಾಧಾನಕರ ಬಹುಮಾನವೂ ಬಂದಿತ್ತು. ಅವರು ನನ್ನೊಳಗಿದ್ದ ಕಥೆಗಾರನಿಗೆ ವೇದಿಕೆ ಕಲ್ಪಿಸಿಕೊಟ್ಟರೆಂಬ ಅಭಿಮಾನದ ಮೇರೆಗೆ ಅವರೇ ಮುಖ್ಯ ಅತಿಥಿಗಳಾಗಿ ಬರಲಿ ಎಂದು ಆಶಿಸಿದ್ದೆ. ಸಾಮಾನ್ಯವಾಗಿ ನಮ್ಮ ಗೋಮಿನಿ ಪ್ರಕಾಶನದ ಯಾವುದೇ ಕಾರ್ಯಕ್ರಮಕ್ಕೂ ಒಮ್ಮೆ ಅತಿಥಿಗಳಾಗಿ ಬಂದವರನ್ನು ಅತಿಥಿಗಳಾಗೇ ಮತ್ತೆ ಕರೆಯಬಾರದೆಂಬ ಅಲಿಖಿತ ನಿಯಮವಿದ್ದರೂ ಅವರ ಮೇಲಿನ ಅಭಿಮಾನದಿಂದ ನಾವು ಅಂದು ಅವರ ಮನೆಯಲ್ಲಿದ್ದವು.

        ಅಂದು ಅವರ ಮನೆಯಲ್ಲಿ ನನ್ನ ಶ್ರೀಮತಿಯ ಕಣ್ಣಿಗೆ ರಜನಿ ನರಹಳ್ಳಿಯವರ ಆತ್ಮವೃತ್ತಾಂತ (ಕಾದಂಬರಿ) ಪುಸ್ತಕವು ಕಂಡಿತು. ಅವಳು ಆ ಪುಸ್ತಕವನ್ನು ಕೈಗೆತ್ತಿಕೊಂಡು ಮುಖಪುಟದ ಮೇಲೊಮ್ಮೆ ಅತೀವ ಕಕ್ಕುಲತೆಯಿಂದ ಕಣ್ಣಾಡಿಸಿ, ಮೇಡಮ್, ಈ ಪುಸ್ತಕವನ್ನು ಓದಿ ಕೊಡುತ್ತೇನೆ ಎಂದು ತೆಗೆದುಕೊಂಡಳು. ಮೇಡಮ್ ಮನೆಯಲ್ಲಿ ಹಲವು ಪುಸ್ತಕಗಳಿದ್ದರೂ, ನನ್ನ ಬಳಿಯಿದ್ದ ಹಲವು ಪುಸ್ತಕಗಳನ್ನು ಮೊದಲು ಓದೋಣವೆಂದು ನಾನೆಂದೂ ಅವರನ್ನು ಪುಸ್ತಕ ಕೇಳಿರಲಿಲ್ಲ. ಮೇಡಮ್ಮು ಸಹ ಆ ಪುಸ್ತಕವನ್ನು ಹೊಗಳಿ ಒಂದೆರೆಡು ನಿಮಿಷ ಮಾತನಾಡಿ, ಮನೆಯಲ್ಲಿ ಸಾಕಿದ ನಾಯಿಯ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದಾರೆ,  ಓದಿ ಎಂದರು.

        ನಮ್ಮ ಮನೆಗೆ ಸಾಮಾನ್ಯವಾಗಿ ಯಾವುದೇ ಪುಸ್ತಕ ಬಂದರೂ ಮೊದಲು ಓದುವುದು ನಾನೇ ಆದ್ದರಿಂದ ರಘು ಅಪಾರರವರ ಮುಖಪುಟವೇ ಪುಸ್ತಕವನ್ನು ಕೈಗೆತ್ತಿಕೊಳ್ಳುವಂತೆ ಮಾಡಿಬಿಟ್ಟಿತು. ಧಾರವಾಡದ ಮನೋಹರ ಗ್ರಂಥಮಾಲೆಯ ಪ್ರಕಟಣೆಯೆಂದರೆ (ಶ್ರೀಮತಿ ಎಂ.ಸಿ. ಲಲಿತಾರವರು ಮನೋಹರ ಗ್ರಂಥಮಾಲೆಯ ಚಂದಾದಾರರು. ಆ ಕಾರಣ ಈ ಪುಸ್ತಕ ಅವರ ಮನೆಯಲ್ಲಿತ್ತು) ಪುಸ್ತಕದ ಅಚ್ಚುಕಟ್ಟುತನ ಪುಟಪುಟದಲ್ಲೂ ಅಚ್ಚಾಗಿರುತ್ತದೆ. ಮತ್ತು ಪುಸ್ತಕದ ಬಗ್ಗೆ ಮೊದಲೇ ನನಗೆ ಗೊತ್ತಿದ್ದರಿಂದ ಓದಲು ಶುರು ಮಾಡಿದೆ.

        ಪುಸ್ತಕದ ಪ್ರಕಾಶಕರೇ ಇದು ವಿನೂತನ ಪ್ರಯೋಗ, ಲೇಖಕರು ಪರಕಾಯ ಪ್ರವೇಶ ಮಾಡಿ ಅತ್ಯಂತ ನಿಕಟ ಆತ್ಮಸಂಗಾತಿ (ನಾಯಿ) ಯ ಮೂಲಕ ಕತೆ ಹೇಳಲು ತೊಡಗುತ್ತಾರೆ ಎಂದು ಹೇಳುತ್ತಾ ಪುಸ್ತಕದ ವಿವಿಧ ಮಜಲುಗಳ ಬಗ್ಗೆ ಸಂಕ್ಷಿಪ್ತವಾಗಿ ಬರೆದಿದ್ದಾರೆ. ಇನ್ನು ಲೇಖಕಿ ರಜನಿ ನರಹಳ್ಳಿಯವರು (ಕನ್ನಡದ ಖ್ಯಾತ ವಿಮರ್ಶಕರಲ್ಲೊಬ್ಬರಾದ ಡಾ|| ನರಹಳ್ಳಿ ಬಾಲಸುಬ್ರಮಣ್ಯರ ಶ್ರೀಮತಿ) ಆತ್ಮವೃತ್ತಾಂತ ದ ವೃತ್ತಾಂತವೆಂದು ತಮ್ಮ ಅನಿಸಿಕೆಯನ್ನು ತಾಜ್ ಮಹಲ್ ಆಥವಾ ಸಮಾಧಿ ಕಟ್ಟದೆ, ಬಿಳಿಯ ಕಾಗದದ ಮೇಲೆ ಕಪ್ಪು ಅಕ್ಷರಗಳ ಮೂಲಕ ಶ್ರದ್ಧಾಂಜಲಿ ಯಾಗಿ ತಮ್ಮ ಮತ್ತು ಕುಟಂಬದ ಪ್ರೀತಿ ಪಾತ್ರವಾಗಿ ಎರಡು ತಿಂಗಳ ಮರಿಯಿಂದ ಹದಿನಾಲ್ಕುವರೆ ವರ್ಷದ ವೃದ್ಧಾಪ್ಯದವರೆಗೂ ಬದುಕಿ ಬಾಳಿದ ಮುದ್ದು ಲಿಯೋ ಸವಿನೆನಪನ್ನು ದಾಖಲಿಸಿದ್ದೇನೆ ಎಂದಿದ್ದಾರೆ.

        ಈ ಕಾದಂಬರಿಯ ವಸ್ತು ನಾಯಿ ಮತ್ತದರ ಬಾಳು. ಜೊತೆಗೆ ಅದರ ಹಿಂದಿನ ತಲೆಮಾರಿನ ನಾಯಿಗಳ ಆತ್ಮಕತೆಗಳು ಸೇರಿಕೊಂಡಿವೆ. ಇದೆಲ್ಲವನ್ನು ನಾಯಿಯನ್ನು ಸಾಕಿ ಸಲಹುವ ಅಮ್ಮ (ಲೇಖಕಿ) ನಾಯಿಯ ಪರಕಾಯ ಪ್ರವೇಶ ಮಾಡಿ ನಿರೂಪಿಸುತ್ತಾ ಹೋಗುತ್ತಾರೆ. ಅದಮ್ಯ ಜೀವನ ಪ್ರೀತಿಯಿಂದ, ಅತೀವ ಸೂಕ್ಷ್ಮ ಸಂಗತಿಗಳಿಂದ, ವೈಚಾರಿಕತೆಯ ದೃಷ್ಟಿಕೋನದಿಂದ ಈ ಪುಸ್ತಕ ಸುಲಭವಾಗಿ ಓದಿಸಿಕೊಳ್ಳುತ್ತದೆ. ಬರೀ ಓದುವ ಹವ್ಯಾಸವುಳ್ಳವರಿಗೆ ಈ ಪುಸ್ತಕ ರಸದೌತಣ ಬಡಿಸಿದರೆ, ಬರೆಯುವವರಿಗೆ ಬರವಣಿಗೆಯ ಶ್ರದ್ದೆಯ ಪ್ರತೀಕದಂತೆ ತೋರಲೂಬಹುದು. ಇನ್ನೂ ಪ್ರಾಣಿಪ್ರಿಯರಿಗೆ (ಅದರಲ್ಲೂ ನಾಯಿ ಸಾಕಿದ್ದವರಿಗೆ, ಸಾಕುತ್ತಿರುವವರಿಗೆ) ಕಣ್ಣಂಚಿನಲ್ಲಿ ನೀರು ತರಬಹುದು. ಓದಿದ ಮೇಲು ಕಾಡುವ ಹಲವು ಪುಸ್ತಕಗಳಲ್ಲಿ ಈ ಪುಸ್ತಕವು ನಿಮ್ಮ ಮನಸ್ಸಿನಲ್ಲಿ ದಾಖಲಾಗುವುದರಲ್ಲಿ ಸಂಶಯವಿಲ್ಲ.

        ಇನ್ನು ಮುನ್ನುಡಿ ಬರೆದಿರುವ ಖ್ಯಾತ ವಿಮರ್ಶಕರಾದ ರಹಮತ್ ತರೀಕೆರೆಯವರ ಮಾತುಗಳು ತುಂಬಾ ಮೌಲಿಕವಾಗಿವೆ. ಬೆನ್ನುಡಿ ಬರೆದಿರುವ ಖ್ಯಾತ ಲೇಖಕಿ ವೈದೇಹಿಯವರೂ ಕೂಡ ಯಾರೂ ಮುಖ್ಯರಲ್ಲ, ಯಃಕಶ್ಚಿತ್ ಹುಳುವೂ ಅಮುಖ್ಯವಲ್ಲ ಎಂಬ ಮಾತುಗಳನ್ನು ಎತ್ತಿ ಹಿಡಿದು ಇದೊಂದು ಕನ್ನಡ ಕಂಡ ಅಪರೂಪದ ಕೃತಿಯೇ ಸರಿ ಎಂದಿದ್ದಾರೆ. ಇಲ್ಲಿ ಯಾರ ಮಾತಲ್ಲೂ ಅತಿಶಯೋಕ್ತಿಯಿಲ್ಲ ಎಂಬುದನ್ನು ಗಮನಿಸಬೇಕಿದೆ. ಯಾಕೆಂದರೆ ಪುಸ್ತಕ ಅಷ್ಟು ಚೆನ್ನಾಗಿದೆ.

        ಈ ಪುಸ್ತಕವನ್ನು ಒಂದೇ ಉಸಿರಿಗೆ ಅರ್ಧಭಾಗ ಓದಿದೆನಾದರೂ, ಉಳಿದ ಭಾಗವನ್ನು ಬೇಗ ಓದಿ ಮುಗಿಸಲಾಗಲಿಲ್ಲ. ಒಂದು ಬೆಳಿಗ್ಗೆ ಹಾಲು ತರಲು ಹೋದಾಗ ಸಿಕ್ಕಿದ ಶ್ರೀಮತಿ ಎಂ.ಸಿ.ಲಲಿತಾರವರು ಪುಸ್ತಕವನ್ನು ಅವರ ಸ್ನೇಹಿತೆಯೊರಬ್ಬರು ಓದುಲು ಕೇಳುತ್ತಿದ್ದಾರೆಂದು ಹೇಳಿದಾಗ, ಎಚ್ಚೆತ್ತಕೊಂಡ ನಾನು ಮತ್ತೆ ಮೂರು ದಿನದ ಅವಧಿ ಕೇಳಿ ಅಷ್ಟರಲ್ಲಿ ಓದಿ ಮುಗಿಸಿದೆ. ಇಷ್ಟು ದಿನ ಒಂದು ಒಳ್ಳೆಯ ಪುಸ್ತಕವನ್ನು ಓದದೇ ಇದ್ದದ್ದಕೆ ಪಶ್ಚತ್ತಾಪವನ್ನೂ ಪಟ್ಟೆ. ಇನ್ನೂ ಓದುತ್ತೇನೆ ಎಂದು ಪುಸ್ತಕ ಕೇಳಿ ತಂದಿದ್ದ ನನ್ನ ಶ್ರೀಮತಿ ಪುಸ್ತಕದ ಆದಿ-ಅಂತ್ಯವನ್ನು ಯಾವಗಲೋ ಓದಿದ್ದರಿಂದ ಆಗಾಗ ನಮ್ಮ ಮನೆಯಲ್ಲಿ-ಮನಸ್ಸಲ್ಲಿ ಈ ಪುಸ್ತಕದ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ.

        ಮುನ್ನುಡಿಯಲ್ಲಿ ರಹಮತ್ ತರೀಕೆರೆ ಸರ್,  ನಾನು ನಾಯಿಯನ್ನು ಭೈರವನ ವಾಹನವೆಂದು ಆರಾಧಿಸುವ ನಾಥಪಂಥದ ಅಧ್ಯಯನ ಮಾಡಿದವನು. ಸ್ವತಃ ನಾಯಿ ಸಾಕಿ ಅದರ ಪಾಡನ್ನು ಪಟ್ಟವನು ಮತ್ತು ಅದರ ಬಗ್ಗೆ ಬರೆದವನು. ಸ್ವಾರಸ್ಯಕರವಾದ ಈ ಕಾದಂಬರಿ ಓದು ನನಗೆ ಖುಶಿ ಕೊಟ್ಟಿದೆ. ಈ ಖುಶಿಯು ಎಲ್ಲ ಓದುಗರಿಗೂ ಸಿಗುತ್ತದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ. ನನಗೂ ಅಷ್ಟೇ. ನಾಯಿ ಸಾಕಿದ ಅನುಭವವಿದೆ. ನಾಯಿಯನ್ನೇ ಕೇಂದ್ರವಾಗಿರಿಸಿಕೊಂಡು ಬರೆದ ದೋಬಿಘಾಟಿನ ಗೆಳೆಯರು ಎಂಬ ಲಲಿತ ಪ್ರಬಂಧಕ್ಕೆ ಸುಧಾ ಯುಗಾದಿ ವಿಶೇಷಾಂಕ -೨೦೧೫ ರ ಲಲಿತ ಪ್ರಬಂಧ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಬಂದಿದೆ. ನಾನೂ ಹೇಳುತ್ತಿದ್ದೇನೆ ಈ ಪುಸ್ತಕವನ್ನು ನೀವೂ ಓದಿ, ನಿಮ್ಮ ಓದಿನ ಖುಶಿಯನ್ನು ಹೆಚ್ಚಿಸಿಕೊಳ್ಳಿ, ಮತ್ತಷ್ಟು ವಿಸ್ತರಿಸಿಕೊಳ್ಳಿ.

        ಅಂದಹಾಗೆ, ಈ ಪುಸ್ತಕಕ್ಕೆ ೨೦೧೩ನೇ ಸಾಲಿನ ತುಮಕೂರಿನ ವೀಚಿ ಸಾಹಿತ್ಯ ಪ್ರಶಸ್ತಿ ದೊರೆತಿದೆ.  ಧಾರವಾಡ ಶ್ರೀಮತಿ ರತ್ನಮ ಹೆಗ್ಗಡೆ ಪ್ರಶಸ್ತಿಗೆ ಆಯ್ಕೆಯಾದ ಮೂರು ಪುಸ್ತಕಗಳಲ್ಲಿ ಇದೂ ಒಂದು. ಮತ್ತೊಂದು ಪುಸ್ತಕ ನಮ್ಮ ಗೋಮಿನಿ ಪ್ರಕಾಶನದಿಂದ ಪ್ರಕಟವಾದ ಶ್ರುತಿ ಬಿ.ಎಸ್.ರವರ ಬದುಕ ದಿಕ್ಕು ಬದಲಿಸಿದ ಆಸ್ಟೀಯೋ ಸರ್ಕೋಮ ಎಂಬುದು ನಮ್ಮ ಬೋನಸ್ ಖುಶಿ.

        ಲೇಖಕಿ ಶ್ರೀಮತಿ ರಜನಿ ನರಹಳ್ಳಿಯವರಿಗೆ ಈ ಮೂಲಕ ಅಭಿನಂದನೆಗಳು. ಪುಸ್ತಕ ಕೊಟ್ಟ ಶ್ರೀಮತಿ ಎಂ.ಸಿ. ಲಲಿತಾರವರಿಗೆ ನಮ್ಮ ಧನ್ಯವಾದಗಳು. ಪುಸ್ತಕ ಹಿಂದಿರುಗಿಸಲು ಹೋದಾಗ ಅವರು ಸಾಕಿದ್ದ ನಾಯಿಯ ನೆನೆದು ಅವರ ಕಣ್ಣುಗಳು ಒದ್ದೆ ಒದ್ದೆ.

                                                        -       ಪ್ರೀತಿಯಿಂದ,
                                                               ಗುಬ್ಬಚ್ಚಿ ಸತೀಶ್.ಶನಿವಾರ, ನವೆಂಬರ್ 22, 2014

ಹೈಕುಗಳು ಮತ್ತು ಮನೋಜ


        ನನಗೆ ಮೊದಲಿಗೆ ಹೈಕುಗಳು ಪರಿಚಯವಾಗಿದ್ದು ತುಮಕೂರಿನ ಗ್ರಂಥಾಲಯದಲ್ಲಿ ದೊರೆತ ಅಂಕುರ್ ಬೆಟಗೆರಿಯವರ ಹಳದಿ ಪುಸ್ತಕ ದ ಮೂಲಕ. ಆ ಪುಸ್ತಕದ ಮೂಲಕ ನನಗೆ ಹೈಕುಗಳ ಪ್ರಾಥಮಿಕ ಮಾಹಿತಿ ದೊರೆಯಿತಾದರೂ ನನಗೆ ಹೈಕುಗಳನ್ನು ಬರೆಯಬೇಕು ಎಂದೆನಿಸಲಿಲ್ಲ. ಆದರೆ, ಸುಮಾರು ಅದೇ ಸಮಯದಲ್ಲಿ ಒಂದು ದಿನ ನಾನು ವೃತ್ತಿಯಲ್ಲಿ ವೈದ್ಯರಾದ ನನ್ನ ಹಿರಿಯ ಮಿತ್ರರಾದ ಡಾ|| ಕೆ.ಬಿ. ರಂಗಸ್ವಾಮಿಯವರ ಕ್ಲಿನಿಕ್ಕಿಗೆ ಹೋಗಿದ್ದೆ. ಅವರ ಗರಿಕೆ ಪುಸ್ತಕದ ಹನಿಗವಿತೆಗಳನ್ನು ಬಹಳವಾಗಿ ಮೆಚ್ಚಿದ್ದ ನಾನು ಅವರ ಪುಸ್ತಕವೊಂದನ್ನು ಪ್ರಕಟಿಸುವ ಆಸೆ ವ್ಯಕ್ತಪಡಸಿದೆ. ಆಗ ಅವರು ಬೆಳದಿಂಗಳ ಹೈಕುಗಳನ್ನು ಕುರಿತು ಹೇಳಿದರು. ಅಲ್ಲಿಯೇ ಕೆಲವನ್ನು ಓದಿದ ನಾನು ಮತ್ತು ನನ್ನ ಶ್ರೀಮತಿ ಆಶ್ಚರ್ಯಚಕಿತರಾದೆವು. ನಾನು ಅದೇ ಪುಸ್ತಕವನ್ನು ಪ್ರಕಟಿಸುವುದಾಗಿ ಅವರಿಂದ ಅನುಮತಿ ಪಡೆದೆ. ಅವರು ಅದರ ಜೊತೆಜೊತೆಯೇ ಅವರದೇ ಸಮೃದ್ಧ ಪ್ರಕಾಶನದ ಮೂಲಕ ಗರಿಕೆಯ ಮುಂದುವರೆದ ಭಾಗದಂತಿರುವ ಕವಿತೆಗಷ್ಟೇ ಸಾಧ್ಯ ಪುಸ್ತಕವನ್ನು ಪ್ರಕಟಿಸುವುದಾಗಿ ಹೇಳಿದರು. ಈ ಬೆಳದಿಂಗಳ ಹೈಕುಗಳನ್ನು ನಾನು ನನ್ನ ಸಹೋದ್ಯೋಗಿ ಕವಿಮಿತ್ರ ಮನೋಜನಲ್ಲಿ ಹಂಚಿಕೊಂಡಾಗ ಅಂದೇ ಅವನ ಕಣ್ಣುಗಳಲ್ಲಿ ಕುತೂಹಲಭರಿತ ಮಿಂಚೊಂದು ಹರಿದಿತ್ತು.

        ಅಂದಿನಿಂದ ಆತ ನಮ್ಮ ಗೋಮಿನಿ ಪ್ರಕಾಶನದಲ್ಲಿ ಬೆಳದಿಂಗಳ ಹೈಕುಗಳು ಪುಸ್ತಕ ಪ್ರಕಟವಾಗಿ ಬಿಡುಗಡೆಯಾಗುವ ಕ್ಷಣವನ್ನು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಕಾದಿರಬಹುದು ಎಂದರೆ ತಪ್ಪಾಗಲಾರದೇನೋ!? ಯಾಕೆಂದರೆ ಈತ ಆಗಾಗ ಪುಸ್ತಕ ಬಿಡುಗಡೆ ಯಾವಾಗ? ಯಾವಾಗ? ಎಂದು ಕೇಳುತ್ತಲೇ ಇದ್ದ. ಆ ಪುಸ್ತಕ ಬಿಡುಗಡೆಯ ದಿನ ಇವನು ಪುಸ್ತಕ ಬಿಡುಗಡೆಯಾದ ಕ್ಷಣವೇ ಬೆಳದಿಂಗಳು ಹೈಕುಗಳು ಪುಸ್ತಕವನ್ನು ಕೊಂಡುಕೊಂಡು ಅಲ್ಲಿಯೇ ಸ್ವಲ್ಪ ಹೊತ್ತು ಓದಿ ಹೈಕುಗಳನ್ನು ರಚಿಸಿದ ಎಂಬ ಮಾಹಿತಿ ನನಗಿದೆ. (ಗಮನಿಸಿ : ಆತ ಅಂದು ಬಿಡುಗಡೆಯಾದ ಐದು ಪುಸ್ತಕಗಳ ಪೈಕಿ ಕೊಂಡದ್ದು ಇದೊಂದೇ ಪುಸ್ತಕ ಮತ್ತು ಕಾರ್ಯಕ್ರಮ ನಡೆಯುವ ಜಾಗದಲ್ಲಿ ಒಳಗಡೆ ಬಂದು ಕುಳಿತಿರಲೇ ಇಲ್ಲ)

        ಅಂದಿನಿಂದ ಶುರುವಾದ ಈತನ ಹೈಕು ಪ್ರೀತಿ ಇದೀಗ ಆತನ ಮನೋಜ್ಞ ಹೈಕುಗಳು ಪುಸ್ತಕ ಬಿಡುಗಡೆಯ ಈ ಕ್ಷಣದವರಿಗೂ ಬಂದು ಮುಂದುವರಿಯುತ್ತಿದೆ. ಈತನ ಮೂಲ ಹೆಸರು ಮನೋಜ್ ಎಂ. ಎಂದಾದರೂ ಕಾವ್ಯನಾಮವಾಗಿ ಹೆಸರಿಗೆ ಮೊದಲು ಮಕರಂದ ಎಂದು ಸೇರಿಸಿಕೊಂಡಿದ್ದಾನೆ. ಮಕರಂದವೆಂದರೆ ಹೂವಿನ ರಸ, ಮನೋಜನೆಂದರೆ ನಿಮಗೆ ಗೊತ್ತೇ? ಗೊತ್ತಿಲ್ಲವಾದರೆ ತಿಳಿದುಕೊಳ್ಳಿ ಮನೋಜನೆಂದರೆ ಮನ್ಮಥ! ಇನ್ನೂ ಈತನ ಈ ಸಂಕಲನದ ಹೆಸರಿನಲ್ಲಿ ಮನೋಜ್ಞ ಇದೆ. ಮನೋಜ್ಞ ಎಂದರೆ, ಸುಂದರವಾದ ಹೃದಯಂಗಮವಾದ ಎಂಬ ಅರ್ಥವಿದೆ. ನಾನಿಲ್ಲಿ ಇದನ್ನೇಲ್ಲಾ ಏಕೆ ಪ್ರಸ್ತಾಪಿಸುತ್ತಿದ್ದೇನೆಂದರೆ, ಈತನ ಹೆಸರಿನಲ್ಲೂ, ಪುಸ್ತಕದ ಹೆಸರಿನಲ್ಲೂ ಸೌಂದರ‍್ಯವಿದೆ!

        ಜೀವನದಲ್ಲಿ ಏನನ್ನಾದರೂ ಮಾಡಬೇಕೆಂದರೆ ಒಂದು ಯೋಗ್ಯತೆ ಇರಬೇಕು, ಇಲ್ಲಾಂದ್ರೆ  ಯೋಗ ಇರಬೇಕಂತೆ. ಯೋಗ್ಯತೆ ನನಗೆ ಇಲ್ಲಾ ಎಂದರೆ, ನನ್ನ ಪ್ರೀತಿಯ ಎಂ.ಎಚ್.ಎನ್ ಸರ್ ಇದೆ ಎಂದದ್ದರಿಂದ ಮತ್ತು ಇದೊಂದು ಒಳ್ಳೆ ಯೋಗವೆಂದೇ ನಾನು ಭಾವಿಸುತ್ತಾ ಈ ಪುಸ್ತಕವನ್ನು ನಿಮಗೆ ಪರಿಚಯಿಸುವ ಒಂದು ಗುಬ್ಬಿ ಪ್ರಯತ್ನವನ್ನು ಮಾಡುತ್ತಿದ್ದೇನೆ.

        ಮೊದಲಿಗೆ, ಹೈಕುಗಳ ಬಗ್ಗೆ ಸಂಕ್ಷೀಪ್ತವಾಗಿ ಹೇಳಿಬಿಡುತ್ತೇನೆ. ಹೈಕುಗಳ ಮೂಲ ಜಪಾನ್. ಹೈಕುಗಳ ರಚನಾ ವಿನ್ಯಾಸವೇನೆಂದರೆ ೫-೭-೫ ಸಿಲೆಬಲ್‌ಗಳಲ್ಲಿ ಪದಗಳಿರಬೇಕು. ಪ್ರಕೃತಿ ಅಥವಾ ಕಾಲವನ್ನು ಪ್ರತಿನಿಧಿಸಬೇಕು ಎಂದಿದೆ. ಮತ್ತು ಎರಡು ವಿರುದ್ಧ ಆಲೋಚನೆಗಳನ್ನು ಹೊಂದಿರಬೇಕು. ಮತ್ತು ಬರೆಯಲು ಸಾಮರ್ಥ್ಯ ಹಾಗೂ ನೈಪುಣ್ಯತೆ ಇರಬೇಕು. ಇದೆಲ್ಲಾ ಮಾಹಿತಿ ನನಗೆ ದೊರೆತದ್ದು ಅಂಕುರ್ ಬೆಟಗೇರಿಯವರ ಹಳದಿ ಪುಸ್ತಕ ದಿಂದ, ಡಾ|| ಕೆ.ಬಿ.ರಂಗಸ್ವಾಮಿಯವರ ಒಡನಾಟದಿಂದ, ಡಾ|| ರಘುರಾಂ ಸರ್‌ರವರು ಬೆಳದಿಂಗಳ ಹೈಕುಗಳು ಪುಸ್ತಕಕ್ಕೆ ಬರೆದ ಸವಿಸ್ತಾರವಾದ ಮುನ್ನುಡಿಯಿಂದ ಮತ್ತು ಡಾ|| ನವೀನ್ ಹಳೇಮನೆಯವರಿಂದ. ಈ ಹೈಕುಗಳ ಬಗ್ಗೆ ನಿಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕೆಂದರೆ ಬಿಡುವಾದ ಸಮಯದಲ್ಲಿ ಇವರನ್ನು ಭೇಟಿ ಮಾಡಿಯೋ ಇಲ್ಲಾ ಇವರ ಪುಸ್ತಕಗಳನ್ನು ಓದಿಯೋ ತಿಳಿಯಬಹುದು. ಈ ನಿಟ್ಟಿನಲ್ಲಿ ಮತ್ತೊಂದು ಮುಖ್ಯ ಪುಸ್ತಕವೆಂದರೆ ಡಾ|| ಕೆ.ಬಿ. ಬ್ಯಾಳಿಯವರು ಬರೆದಿರುವುದು.

        ಮನೋಜನ ಬಹುತೇಕ ಹೈಕುಗಳು ಈ ನಿಯಮಗಳನ್ನು ಪಾಲಿಸಿವೆ. ಮತ್ತು ಉಪಗ್ರಹವನ್ನು ಒಳಗೊಂಡೊಂತೆ ಸೂರ‍್ಯನ ಕಿರಣ ತಾಕುವ ಎಲ್ಲ ಜೀವಿಗಳ, ವಸ್ತುಗಳ ಮೇಲೂ ಮತ್ತು ಅದರಾಚೆಗೂ ವಿಸ್ತರಿಸಿವೆ. ಅವುಗಳಲ್ಲಿ ನನ್ನನ್ನು ಸೆಳೆದ ಕೆಲವು ಹೈಕುಗಳು ಹೀಗಿವೆ:

ಪಟ್ಟಂತ ಹಾರಿ
ಹೋಗುವ ಪ್ರಾಣಪಕ್ಷಿ
ಬಾಳು ಕ್ಷಣಿಕ

ಹಸಿದ ಹೊಟ್ಟೆ
ಪೂಜಾರಿ ಕೈಯಲ್ಲಿದೆ
ನೈವೇದ್ಯ ತಟ್ಟೆ

ಸ್ವಾರ್ಥದ ಹಗೆ
ಸಕಲವೂ ನಿರ್ನಾಮ
ಯುದ್ಧವೇ ಹಾಗೆ

ಮನದ ಶಾಂತಿ
ಟಿ ವಿ. ಸ್ವಾಮೀಜಿಗಳ
ಭವಿಷ್ಯದಲ್ಲಿ

ಜನ ಸಾಗರ
ಸಾಹಿತ್ಯ ಸಮ್ಮೇಳನ
ಊಟಕ್ಕಾಗಿ ಕ್ಯೂ

ವಿಜ್ಞಾನ ಖಡ್ಗ
ಝಳಪಿಸೆ; ತತ್ತರ
ಮೂಢನಂಬಿಕೆ

ಅನ್ನ ಹಸಿವ
ನೀಗಿಸಿತೇ ಹೊರೆತು
ಪ್ರತಿಷ್ಠೆಯಲ್ಲ

ಮುಂಜಾನೆ ಸೂರ್ಯ
ಆಕಾಶ ಹಣೆಗಿಟ್ಟ
ತುಂಬು ಕುಂಕುಮ

ಜೀವ ತೆಗೆವ
ರೇಷ್ಮೆಗೂಡ ಗೋಡೆಗೂ
ಚಿನ್ನ ಲೇಪನ

ಒಗೆದ ಕಲ್ಲು
ಅಲೆಯ ಮೂಡಿಸಿಯೂ
ಕೊಳ ನಿಶ್ಯಬ್ಧ (ಪ್ರೇರಣೆ: ಜಪಾನಿ ಬಾಶೋನ ದಿ ಪಾಂಡ್)

ಮಾರ್ಜಾಲ ಮೀಸೆ
ಬಿಸಿಹಾಲನ್ನು ಮುಕ್ಕಿ
ಕರಕಲಾಯ್ತು

೩*೬ ಜಾಗ
ಕೊನೆಗೂ ಉಳಿಯೋದು
ಚಿರ ನಿದ್ರೆಗೆ

ಈ ಹೈಕುಗಳು ನನ್ನನ್ನು ಏಕೆ ಸೆಳೆದವೆಂದರೆ ಅವುಗಳಲ್ಲಿನ ಸಮಾಜಮುಖಿ ಧೋರಣೆ, ವರ್ತಮಾನಕ್ಕೆ ಸ್ಪಂದನೆ, ವೈಚಾರಿಕತೆ, ಆಧ್ಯಾತ್ಮ, ಮತ್ತು ನಾನು ಒಂದು ಉತ್ತಮ ಕೃತಿಯೆಂದರೆ ಇರಲೇ ಬೇಕೆಂದುಕೊಂಡಿರುವ ಯೂನಿವರ್ಸಲ್ ಅಪ್ರೋಚ್ ಅಂದರೆ ತನ್ನ ವಿಶ್ವಾತ್ಮಕ ಅನುಸಂಧಾನದ ಗುಣಗಳಿಂದಾಗಿ. ಇನ್ನೂ ಕೆಲವು ಹೈಕುಗಳನ್ನು ನೀವು ಈ ನಿಟ್ಟಿನಲ್ಲಿ ಓದಿಕೊಳ್ಳಬಹುದು.

ಇದೇ ಮನೋಜ್

ಆಕಾಶ ಭೂಮಿ
ಶುಭವಿವಾಹ; ಮಳೆ
ಮಂಗಳವಾದ್ಯ

ಗೆಜ್ಜೆಯ ಕಟ್ಟಿ
ಮಳೆ ಕುಣಿದ ವೇಗ
ಭೂಮಿ ತತ್ತರ
ಎಂದು ಮಳೆಯ ಸೊಬಗು ಮತ್ತದರ ರುದ್ರನರ್ತನವನ್ನು ತನ್ನ ಹೈಕುಗಳಲ್ಲಿ ಹಿಡಿದಿದ್ದಾನೆ.

ಈತ ತನ್ನ ಗುರುವೆಂದೇ ಭಾವಸಿರುವ ಕೃಷ್ಣನಿಗೇ ಮೀಸಲಾದ ಹೈಕುಗಳಿವೆ

ಕೊಳಲ ನಾದ
ಗುರುವಿನ ಸೂಚನೆ
ಕಾವ್ಯ ಅರ್ಚನೆ

ತಾನೂ ಯುವಕನಾಗಿ ಯುವಕರಿಗೆ ಬುದ್ದಿ ಮಾತು ಹೇಳಿದ್ದಾನೆ.

ಹದಿಹರೆಯ
ಚಟಗಳ ಒಡೆಯ
ಹುಷಾರಾಗಿರು

ಯುವಜನತೆ
ದೇಶದ ನಿಜಶಕ್ತಿ
ಅರಿವಿದ್ದರೆ

ನಾಲ್ಕು ಗೋಡೆಯ
ಬಿಟ್ಟು ಬನ್ನಿ, ದಕ್ಕಿತೂ
ನಿಜ ಶಿಕ್ಷಣ

ಆದರೆ,

ಪುಸ್ತಕ ಸ್ನೇಹ
ಹಚ್ಚಿಕೊಂಡೆ ಈಗಿಲ್ಲ
ಅನಾಥಪ್ರಜ್ಞೆ

ಹೆಜ್ಜೆ ಹೆಜ್ಜೆಗೂ
ವ್ಯಾಮೋಹ ಕಲ್ಲುಗಳು
ಎಡವಿ ಬಿದ್ದೆ

ಎಂಬ ಹೈಕುಗಳನ್ನು ಗಮನಿಸಿದಾಗ ಈತ ನನಗೆ ಗೊತ್ತಿರುವ ಹಾಗೆ ಓದುವುದು, ಅಂದರೇ ಬೇರೆ ಪುಸ್ತಕಗಳನ್ನು ಓದುವುದು ಬಲು ಅಪರೂಪ ಅಥವಾ ಇಲ್ಲವೆಂದೇ ಹೇಳಬಹುದು. ಈ ಸಂಕಲನದಲ್ಲಿ ಆತ ಹೈಕು ಎಂಬ ವ್ಯಾಮೋಹಕ್ಕೂ ಒಳಗಾಗಿ ಅಲ್ಲಲ್ಲಿ ಬಿದ್ದಿಯೂ ಇದ್ದಾನೆ ಮತ್ತೆ ತಡವರಿಸಿಕೊಂಡು ಎದ್ದೂ ಇದ್ದಾನೆ.

ಈತನ ಒಂದು ಹೈಕು ನನಗೆ ಬಹಳ ಮೆಚ್ಚುಗೆಯಾಯಿತು.

ಹರಿವ ನದಿ
ಹಂಚಿದ ಜ್ಞಾನ; ಸದಾ
ಪವಿತ್ರಮಯ

ಆದರೆ ಈ ಹೈಕು ಬರೆದ ಮನೋಜ ಈ ಸಂಕಲನವನ್ನು ಕ್ರೂಢೀಕರಿಸುವಾಗ ತಾನು ಬರೆದಂತೆ ನಡೆಯದೆ ಎಚ್ಚರತಪ್ಪಿ ಸಂಕಲನದ ಒಟ್ಟು ಅಂದವನ್ನು ಹಾಳುಗೆಡವಿದ್ದಾನೆ. ಈ ಸಂಕಲನಕ್ಕೆ ನನಗೆ ಗೊತ್ತಿರುವಂತೆ ಈತ ಯಾರಿಗೂ ಮುನ್ನುಡಿ, ಬೆನ್ನುಡಿ ಬರೆದುಕೊಡಿ ಎಂದು ಕೇಳಿಲ್ಲ. ನಿಮ್ಮ ಅನಿಸಿಕೆ ಬರೆದು ಕೊಡಿ ಎಂದಷ್ಟೇ ಕೇಳಿದ್ದಾನೆ. ಅವರೂ ಬರೆದು ಕೊಟ್ಟಿದ್ದಾರೆ. ಅವರೆಲ್ಲಾ ಯಾರಂತಿರೀ? ನಮ್ಮ ನಾಡಿನ ಹೆಮ್ಮೆಯ ಕವಿ ವಿಮರ್ಶಕರಾದ ಕೆ.ಪಿ.ನಟರಾಜ್ ಸರ್, ಗೆಳೆಯರಾದ ಡಾ|| ನವೀನ್ ಹಳೇಮನೆ ಸರ್, ಹಿರಿಯರಾದ ಎನ್. ನಾಗಪ್ಪ ಸರ್, ರವೀಂದ್ರನಾಥ ಠಾಗೂರ್ ಸರ್, ಕವಯತ್ರಿ ಸುಶೀಲಾ ಸದಾಶಿವಯ್ಯ ಮೇಡಂ, ಉಗಮ ಶ್ರೀನಿವಾಸ್ ಸರ್, ಆತ್ಮೀಯ ಗೆಳೆಯರಾದ ಡಾ|| ರವಿಕುಮಾರ್ ನೀಹ, ಮತ್ತೊಬ್ಬ ಹಿರಿಯರಾದ ಪ್ರೊ.ಕೆ.ಚಂದ್ರಣ್ಣನವರು, ಮತ್ತು ಕವಯತ್ರಿ ಬಿ.ಸಿ. ಶೈಲಾನಾಗರಾಜ್. ಬರೋಬ್ಬರಿ ಒಂಭತ್ತು ಮಂದಿ. ಅವರ ಅನಿಸಿಕೆಗಳನ್ನೆಲ್ಲಾ ಪ್ರಕಟಿಸಿರುವ ಮನೋಜ್ ತನ್ನ ಎರೆಡೆ ಎರೆಡು ಮಾತುಗಳಲ್ಲಿ ಪ್ರತ್ಯಕ್ಷವಾಗಿ ಎಂತಲೂ ಮತ್ತು ಯಾವ ಮುಲಾಜಿಲ್ಲದೆ ಹೇಳಬೇಕೆಂದರೆ ಆತನಿಗೆ ಹೈಕುಗಳನ್ನು ಪರಿಚಯಿಸಿದ ನನಗಾಗಲಿ, ನನ್ನ ಹೆಸರು ಪರವಾಗಿಲ್ಲವೆಂದರೆ, ಡಾ|| ಕೆ.ಬಿ.ರಂಗಸ್ವಾಮಿಯವರನ್ನಾಗಲಿ ಅಥವಾ ಪುಸ್ತಕ ಮುದ್ರಣಕ್ಕೆ ಮಾಹಿತಿ ನೀಡಿದ ಎಂ.ಎಚ್.ಎನ್.ಸರ್ ರವರನ್ನಾಗಲಿ ನೆನೆಯದೆ ಪರೋಕ್ಷವಾಗಿ ನೆರವಾಗಿದ್ದಾರೆ ಎಂದಷ್ಟೇ ಸರಕಾರಿ ಕಡತದ ಷರಾ ಬರೆದುಬಿಟ್ಟಿದ್ದಾನೆ. ಈತನ ಬರೆಯುವಾಗಿನ, ಪ್ರಕಟವಾಗಿಸುವಿನ ಧಾವಂತ ಇಲ್ಲಿ ಎದ್ದು ಕಾಣುತ್ತದೆ.

ಹರಿವ ನದಿ
ಹಂಚಿದ ಜ್ಞಾನ; ಸದಾ
ಪವಿತ್ರಮಯ

ಮರೆಯಬಾರದು ಮನೋಜ್...

        ಕೆ.ಪಿ.ನಟರಾಜ್ ಸರ್ ರವರು ತಮ್ಮ ಅನಿಸಿಕೆಯಲ್ಲಿ ಕವಿ ಮನೋಜನನ್ನು ಆತನ ಮುಗ್ಧ, ಆಲೋಚನಶೀಲಾ ಜಗತ್ತಿನಿಂದ ನೇರವಾಗಿ ತುಮಕೂರಿನ ಕಾವ್ಯ ಸಂವೇದನೆಯ ನಿಡುಗಾಲದ ಚರಿತ್ರೆಯ ಸಂಪುಟದ ಹೊಸಪುಟಗಳಲ್ಲಿ ಸೇರಿಸುವುದರ ಮೂಲಕ ಆತನ ದೈವಿಕ ಚೈತನ್ಯಕ್ಕೆ ಮಾರುಹೋಗಿದ್ದಾರೆ. ಈ ನಿಟ್ಟಿನಲ್ಲಿ ಮನೋಜನ ಮೇಲೆ ಹೆಮ್ಮೆ ಮೂಡುತ್ತದೆ. ಇವರು ಮುನ್ನುಡಿಯೆಂದು ಭಾವಿಸಿಕೊಂಡು ಬರೆದಿರುವುದರಿಂದ ವಿವರವಾಗಿಯೇ ಪ್ರಸ್ತಾಪಗಳಿವೆ. ಚಂದ್ರ, ಸೂರ‍್ಯ, ಭೂಮಿಧ್ಯಾನ, ಮತ್ತು ಆಲೋಚನಾ ಬಿಂದುಗಳು ಎಂದು ವಿಭಾಗಗಳನ್ನಾಗಿ ಇಲ್ಲಿನ ಹೈಕುಗಳನ್ನು ವಿಂಗಡಿಸಿಕೊಂಡು ತಮ್ಮ ವಿಶಿಷ್ಟ ಶೈಲಿಯಲ್ಲಿ ವಿಮರ್ಶಿಸಿದ್ದಾರೆ. ಜೊತೆಗೆ ಮನೋಜನಿಗೆ ಓದುವಂತೆ ತಾಕೀತು ಮಾಡಿದ್ದಾರೆ.

ರಾತ್ರಿಯ ಮಳೆ
ಗೊಂದಲದ ಪಯಣ-
ಓ ಹೈಕು ಮಿಂಚು!
        ಎಂದು ತಮ್ಮದೇ ಹೈಕೊಂದನ್ನು ಉದ್ಗರಿಸಿರುವ ನವೀನ್ ಸರ್ ಹೈಕುಗಳ ಕಟ್ಟುಪಾಡುಗಳನ್ನು ವಿವರಿಸುತ್ತಾ ಓದುಗನನ್ನೂ ಹೈಕು ಕಟ್ಟೆಂದು ಆಮಂತ್ರಿಸಿರುತ್ತಾರೆ. ಅವರ ಮಾತುಗಳಲ್ಲಿ ಮನೋಜನ ಇತಿಮಿತಿಗಳೂ ವ್ಯಕ್ತವಾಗಿವೆ. ಈ ದೃಷ್ಟಿಯಿಂದ ಈ ಪುಸ್ತಕವೂ ಹೈಕು ಅಭ್ಯಾಸ ಮಾಡುವವರಿಗೆ ಒಂದು ಪಠ್ಯವಾಗಬಲ್ಲದು.
        ಮನೋಜ್ಞ ಹೈಕುಗಳಿಗೆ ಮಮತೆಯ ಮುನ್ನುಡಿಯೆಂದೇ ನಾಗಪ್ಪ ಸರ್ ಸವಿಸ್ತಾರವಾಗಿ ಬರೆಯುತ್ತಾ ಮೊದಲ ಕವನಸಂಕಲನ ದರ್ಪಣ ಸುಂದರಿ ಯಲ್ಲಿ ಪ್ರೀತಿ-ಪ್ರೇಮ ಎನ್ನುತ್ತಿದ್ದ ಕವಿ ಇಲ್ಲಿ ಅಗಾಧವಾದ ಅನುಭವದ ಮಾತುಗಳನ್ನಾಡಿರುವುದನ್ನು ಅಚ್ಚರಿಯಿಂದ ನೋಡಿದ್ದಾರೆ. ಈತನ ಪ್ರಗತಿಪರ ನಿಲುವನ್ನು, ಬುದ್ಧನ ಸೂಕ್ಷ್ಮತೆಯನ್ನು ಹೈಕುಗಳಾಗಿಸಿರುವುದಕ್ಕೆ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದಾರೆ.
        ಹಾರೈಸಿರುವ ರವೀಂದ್ರನಾಥ ಠಾಗೂರ್ ರವರು “Unless I develop self-respect, I will remain under someone else’s foot”  ಎಂದ ದಾರ್ಶನಿಕನ ಹೆಸರನ್ನು ಉಲ್ಲೇಖಿಸದೆ ಮನೋಜನನ್ನು ದಾರ್ಶನಿಕರ ಸಾಲಿಗೆ ಪ್ರೀತಿಯಿಂದ ನಿಲ್ಲಿಸಿಬಿಟ್ಟಿದ್ದಾರೆ.
        ಹೈಕುಗಳ ಮನೋಜ್ಞ ಎಂದು ಶುಭಹಾರೈಸಿರುವ ಕವಯತ್ರಿ ಸುಶೀಲಾ ಸದಾಶಿವಯ್ಯ ಈತನ ಪ್ರತಿಭೆ, ಇನ್ವಾಲ್ವ್‌ಮೆಂಟ್ ಗಳನ್ನು ಮೆಚ್ಚಿ ಮುಂದೆ ಸಂಕಲನ ಸಾಹಿತ್ಯ ಸಿದ್ಧಿಯ ಮೆಟ್ಟಿಲುಗಳನ್ನೇರಲಿ ಎಂದಿದ್ದಾರೆ.

        ಆಶ್ಚರ್ಯದ ಸಂಗತಿಯೆಂದರೆ, ತಮ್ಮ ಪತ್ರಕರ್ತನ ಕೆಲಸದಲ್ಲಿ ಸದಾ ಬ್ಯುಸಿಯಾಗಿರುವ, ಝೆನ್ ಗುರುವಿನಂತೆ ಆಗಾಗ ಭಾಸವಾಗುವ, ಹೆಮ್ಮೆಯ ಹಿರಿಯ ಕವಿಮಿತ್ರರಾದ ಉಗಮ ಶ್ರೀನಿವಾಸ್ ರವರು ಒಂದು ಪುಟ್ಟ ಆಶಯದ ಪ್ಯಾರಾವನ್ನು ಈತನಿಗೆ ಬರೆದುಕೊಟ್ಟಿರುವುದು. ನೋಡಿ ಬರೆಯುವುದು ಕಲೆಯಲ್ಲ ಎಂದು ಆಗಾಗ ನಮ್ಮೆಲ್ಲರಿಗೂ ಕಿವಿಮಾತು ಮತ್ತು ಕವನವಾಗಿಸುವ ಒಳಗುಟ್ಟನ್ನು ಹೇಳುವ ಇವರು ಈತನ ನೋಡಿದ್ದನ್ನೇ ಕಲಾತ್ಮಕವಾಗಿ ಕಟ್ಟಿಕೊಡುವ ಕಲೆಯನ್ನು ಮೆಚ್ಚಿ ಶುಭಹಾರೈಸಿದ್ದಾರೆ.
        ಮನೋಜನ ಹಾಯಿಕುಗಳ ಹಾಯಿ ದೋಣಿಯೊಳಗೆ ನಮ್ಮನ್ನು ಒಂದು ಸುತ್ತು ಹಾಕಿಸುವ ಆತ್ಮೀಯ ಮಿತ್ರರಾದ ರವಿ ಸರ್ ತಾವು ಕವಿಗೋಷ್ಠಿಯೊಂದರಲ್ಲಿ ಈತನ ಹೈಕುಗಳನ್ನು ಮೆಚ್ಚಿದ್ದು, ಆತ ಕಡಿಮೆ ಅವಧಿಯಲ್ಲಿ ನೂರಾರೂ ಹೈಕುಗಳನ್ನು ಬರೆದು ಅಭಿಪ್ರಾಯ ಬರೆದು ಕೊಡಿ ಎಂದು ಕೇಳಿದ್ದನ್ನು ಆಶ್ಚರ್ಯವ್ಯಕ್ತಪಡಿಸುತ್ತಲೇ ಆತನ ಸರಳತೆಯನ್ನು ಎತ್ತಿ ಹಿಡಿದಿದ್ದಾರೆ. ಬದುಕಿನ ಅನಂತತೆ ಮನೋಜನ ಹೈಕುಗಳ ವಸ್ತುವಾಗಿರುವುದನ್ನು ಶ್ಲಾಘಿಸಿದ್ದಾರೆ. ಬದುಕನ್ನು ತುಂತುಂಬಿ ಕುಡಿಯಬೇಕು ಎಂಬ ಬೇಂದ್ರೆಯವರ ಸಾಲೊಂದನ್ನು ಉಲ್ಲೇಖಿಸುತ್ತಾ

ಪ್ರೀತಿ ಅರಸಿ
ಊರೆಲ್ಲಾ ತಿರುಗಿದೆ
ಬಾಳ ಮೂಸದೆ

ಎಂಬ ಹೈಕಿನ ಅದ್ಭುತ ಜೀವನ ದರ್ಶನವನ್ನು ಮೆಚ್ಚುತ್ತಾರೆ. ಇವರು ಮೆಚ್ಚಿರುವ ಕೆಲವು ಹೈಕುಗಳನ್ನು ಓದಿದಾದ ನನಗೆ ಪ್ರಾಮಾಣಿಕವಾಗಿ ಅರಿವಿಗೆ ಬಂದದ್ದು ಇವರ ಅಭಿಪ್ರಾಯವೂ ಒಂದು ಉತ್ತಮ ವಿಮರ್ಶೆಯಾಗಿದೆ.

        ಪ್ರೊ.ಕೆ. ಚಂದ್ರಣ್ಣನವರು ಹೈಕುಗಳಿಗೆ ಮುನ್ನುಡಿಯೆಂದೇ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ. ಮನೋಜನನ್ನು ಹತ್ತಿರದಿಂದ ಬಲ್ಲ ಇವರು ಈತನ ಹೈಕುಗಳು ಏರೋಪ್ಲೇನುಗಳು ಎಂದಿದ್ದಾರೆ. ಅದರಲ್ಲಿ ಅತಿಶಯೋಕ್ತಿಯೇನಿಲ್ಲ. ಮನೋಜನ ಹೈಕುಗಳು ಏರೋಪ್ಲೇನುಗಳೇ ಸರಿ. ಆದರೆ, ಬರೆಯುವಾಗ ಆತ ಆಗಾಗ ಲ್ಯಾಂಡ್ ಆಗುವುದನ್ನು ಕಲಿಯಬೇಕು.

        ಇನ್ನು ಹಿರಿಯ ಕವಯತ್ರಿ ಶೈಲಾ ನಾಗರಾಜ ರವರ ಅಭಿಪ್ರಾಯವನ್ನು ಈತ ಬೆನ್ನುಡಿಯಂತೆ ಮುದ್ರಿಸಿದ್ದು ಅವರು ಈತನ ಜನಮುಖಿ ಸತ್ವವನ್ನು ಹಿಡಿದಿಟ್ಟಿದ್ದಾರೆ. ಬ್ಯಾಂಕಿನ ಕೆಲಸದ ನಡುವೆಯೂ ಹೊಸದೊಂದಕ್ಕೆ ತುಡಿಯುವ ಮನೋಜನ ಹೈಕುಗಳಲ್ಲಿರುವ ಬೆಳಕಿಗೆ ಕನ್ನಡಿ ಹಿಡಿದು ಆ ಬೆಳಕು ಮತ್ತಷ್ಟು ಪ್ರತಿಫಲಿಸುವಂತೆ ಮಾಡಿದ್ದಾರೆ. ಆ ಬೆಳಕಲ್ಲಿ ಮನೋಜ್ ತನ್ನನ್ನು ತಾನು ಮುಂದಿನ ದಿನಗಳಲ್ಲಿಯೂ ಕಾಣಿಸಿಕೊಳ್ಳಬೇಕಿದೆ.

ಇನ್ನು ತನ್ನ ಹೈಕುಗಳ ಅಂತ್ಯಕ್ಕೆ ಮನೋಜ್

ಇದು ಆರಂಭ
ಮುಗಿಯದ ಶೋಧನೆ
ಮುಂದುವರಿಕೆ

ಎಂಬ ಹೈಕನ್ನು ಬರೆಯುತ್ತಾ ಆಶ್ಚರ್ಯ ಮೂಡಿಸುತ್ತಾನೆ. ಜೊತೆಜೊತೆಗೆಯೇ ಕುತೂಹಲ ಮತ್ತು ಗಾಬರಿಯನ್ನು ಹುಟ್ಟುಹಾಕಿದ್ದಾನೆ. ಈತ ಇನ್ನೂ ಯಾವ್ಯಾವ ಹೈಕುಗಳನ್ನು ಬರೆಯಬಹುದೆಂಬ ಕುತೂಹಲ ಒಂದು ಕಡೆಯಾದರೇ, ಬರೆದು ಏನು ಮಾಡುತ್ತಾನೋ ಎಂಬ ಗಾಬರಿ. ಗಾಬರಿ ಯಾಕೆಂದರೆ ಈ ಪುಸ್ತಕದಲ್ಲಿ ಸರಿಪಡಿಸಿಕೊಳ್ಳಬಹುದಾಗಿದ್ದ ಹಲವು ದೋಷಗಳಿವೆ. ಅದು ಪುಸ್ತಕದ ವಿನ್ಯಾಸವಿರಬಹುದು, ಮುಖಪುಟವಿರಬಹುದು, ಇಂಪ್ರೀಂಟ್ ಇರಬಹುದು, ಕಾಗುಣಿತ ದೋಷಗಳಿರಬಹುದು, ನಾನು ಆಗಲೇ ಹೇಳಿದಂತೆ ಪುಸ್ತಕದ ಒಟ್ಟು ಕ್ರೂಢೀಕರಣ. ಅಷ್ಟಕ್ಕೂ ಇಂದಿಂನ ಸಂಭ್ರಮ ಮುಗಿದ ಮೇಲೆ ನಾಳೆಯಿಂದ ಪುಸ್ತಕಗಳನ್ನು ಏನು ಮಾಡಬಹುದು ಎಂದು. ಇದಕ್ಕೆಲ್ಲಾ ಮುಂದಿನ ಪುಸ್ತಕ ಪ್ರಕಟಿಸುವ ಹೊತ್ತಿಗೆ ಯಾವ ವಿಷಯದ ಮೇಲೆ, ಯಾವ ಸಮಯದಲ್ಲಾದರೂ ಹೈಕು ಬರೆಯುವ ಪ್ರತಿಭೆಯಿರುವ ಮನೋಜ್ ಯೋಚಿಸಿ ತನ್ನ ಧಾವಂತದ ಓಟಕ್ಕೆ ಒಂದು ಬಿಗ್ ಬ್ರೇಕ ಹಾಕಲಿ ಎಂದು ಹಾರೈಸುತ್ತಾ, ತನ್ನ ಹವ್ಯಾಸಿ ಪ್ರಕಾಶನ ಉತ್ಸಾಹಿ ಬರಹಗಾರರ ವೇದಿಕೆ ಎಂದಿರುವಾಗ ಈತನದ್ದೇ ಪುಸ್ತಕಗಳನ್ನು ಪ್ರಕಟಿಸುವ ಜೊತಗೆ ಇನ್ನೊಬ್ಬ ಉತ್ಸಾಹಿಗಳ ಪುಸ್ತಕ ಪ್ರಕಟಿಸಿ ತನ್ನ ಪ್ರಕಾಶನವನ್ನು ವಿಸ್ತರಿಸುವಂತೆ ಕಿವಿಮಾತು ಹೇಳುತ್ತೇನೆ.

ಕೊನೆಗೆ, ನನ್ನ ಮೆಚ್ಚಿನ ಡಾ|| ಕೆ.ಬಿ.ರಂಗಸ್ವಾಮಿಯವರ ಹನಿಗವಿತೆ

ಮಿತಿ :
ಕ್ಷಿತಿಜಕ್ಕೆ
ತಾನೇ ಒಡೆಯನೆಂದು
ಭ್ರಮಿಸಿದ
ಗಾಳಿಪಟ
ಸೂತ್ರ ಹರಿದೊಡನೆ
ಮೆಲ್ಲಗೆ
ಇಳಿಯಿತು
ಭುವಿಗೆ!

ವಾಚಿಸುತ್ತಾ ಆನೆ ನಡೆದದ್ದೇ ದಾರಿ ಎಂಬ ಮಾತು ನಿಜ. ಆದರೆ ಅದು ಆನೆಗೆ ಮಾತ್ರ ಅನ್ವಯವಾಗುವ ಮಾತು, ಮನುಷ್ಯರಿಗಲ್ಲ ಎಂದು ಹೇಳುತ್ತಾ, ಒಂದು ಪುಸ್ತಕವನ್ನು ಕುರಿತು ಮಾತನಾಡಲು ನಾನು ತುಮಕೂರಿನಲ್ಲಿ ಕಲಿತದ್ದು ಬಾ.ಹ. ರಮಾಕುಮಾರಿ ಮೇಡಂ, ರವಿ ಸರ್, ಕೆ.ಪಿ.ಎನ್. ಸರ್ ಮತ್ತು ಫೋನಿನಲ್ಲಿ ಧೈರ್ಯ ತುಂಬಿದ ಎಂ.ಎಚ್.ಎನ್. ಸರ್ ರವರಿಂದ. ಅವರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತೇನೆ.

ಹತ್ತಿರದಿಂದ ನನ್ನನ್ನು ಬಲ್ಲವರು ಖಂಡಿತವಾದಿ ಲೋಕವಿರೋಧಿ ಎನ್ನುತ್ತಾರೆ. ಮನೋಜ್ ಅವಕಾಶಕೊಟ್ಟದ್ದಕ್ಕೆ ಮನೋಜ್ ನನ್ನನ್ನು ಹೀಗೆ ಅರ್ಥೈಸಿಕೊಂಡರೂ ಪರವಾಗಿಲ್ಲ, ನಮ್ಮ ಒಳಗಣ್ಣು ತೆರೆಯದೆ, ನಮ್ಮ ಸುತ್ತಾ ಎಷ್ಟೇ ಬೆಳಕಿದ್ದರೂ ಕತ್ತಲೆಯೇ ಆವರಿಸುತ್ತದೆ ಎಂಬ ನನ್ನದೇ ಮಾತುಗಳು ನಿನಗೂ ಅನ್ವಯವಾಗುತ್ತವೆ ಎಂದು ಹೇಳಿ ವಿರಮಿಸುತ್ತೇನೆ.


ಧನ್ಯವಾದಗಳು.

ಮಂಗಳವಾರ, ನವೆಂಬರ್ 4, 2014

“ಬೆಳದಿಂಗಳು ಮತ್ತು ಮಳೆ” ಮತ್ತು ಒಂದು ಕಿವಿಮಾತು

ಪ್ರೀತಿಯ ಗೆಳೆಯರೇ,
         ಇಂದು ಸಂಜೆ ಪ್ರೀತಿಯ ಗೆಳೆಯರೊಬ್ಬರು, ಸರ್ ನೀವು ಬನ್ನಿ ನಮ್ಮ ಅತಿ ಸಣ್ಣಕತೆಗಳ ಫೇಸ್ ಬುಕ್ ಗುಂಪಿಗೆ ಎಂದು ಆಹ್ವಾನಿಸಿದರು. ಪರಸ್ಪರ ಅಭಿಪ್ರಾಯಗಳನ್ನು ಗೇಮ್ ಮಾಡುವ ಆಲೋಚನೆ ಅವರಿಗಿತ್ತು. ನಾನು ಬೆಳದಿಂಗಳು ಮತ್ತು ಮಳೆ ಪುಸ್ತಕವನ್ನು ಓದಿರುವಿರಾ ಎಂದು ಕೇಳಿ, ಆ ಪುಸ್ತಕ ಕುರಿತು ಹೇಳಿದೆ. ಅವರು ಇಲ್ಲವೆಂದರು. ಆಗಿದ್ದರೆ ಮೊದಲು ಆ ಪುಸ್ತಕವನ್ನು ಓದಿ, ಆ ರೀತಿಯಾಗಿ ನಿಮ್ಮದೇ ಒಂದಷ್ಟು ಕತೆಗಳನ್ನು ಬರೆದುಕೊಡಿ ನಾನೇ ಪ್ರಕಟಿಸುತ್ತೇನೆ ಎಂದೆ. ಅವರು ಸದ್ಯಕ್ಕೆ ಆಯ್ತು ಎಂದರು. ಅವರ ಆಹ್ವಾನವನ್ನು ನಾನು ತಿರಸ್ಕರಿಸುವುದಕ್ಕೆ ನನ್ನ ಮೇಲೆ ಸಿಟ್ಟು ಅಥವಾ ಬೇಜಾರು ಮಾಡಿಕೊಂಡಿರಬಹುದು. ನಾನು ಓದುವುದು ಮತ್ತು ಬರೆಯುವದನ್ನು ಬಿಟ್ಟು ಉಳಿದಿದ್ದೇಲ್ಲಾ ಟೈಮ್ ವೇಸ್ಟ್ ಎಂದು ಭಾವಿಸಿರುವವನು. ಅವರ ಒಳ್ಳೆಯದಕ್ಕೇ ಹೇಳಿದ್ದೇನೆ ಎಂದೂ ಹೇಳಿದ್ದೇನೆ. ಮಿಕ್ಕಿದ್ದು ಅವರಿಗೆ ಬಿಟ್ಟದ್ದು.

         ನಿಮಗೆ ನಮ್ಮ ಪ್ರಕಾಶನದಿಂದ ಪ್ರಕಟಗೊಂಡಿರುವ ವಿ.ಗೋಪಕುಮಾರ್ ರವರ ಬೆಳದಿಂಗಳು ಮತ್ತು ಮಳೆ ನ್ಯಾನೋಕತೆಗಳ ಸಂಕಲನ ಗೊತ್ತಿರಬಹುದು. ಈ ಪುಸ್ತಕವನ್ನು ಓದಿ, ತಮ್ಮ ಅನಿಸಿಕೆಯನ್ನು ಕನ್ನಡ ಸಿನಿಮಾರಂಗದಲ್ಲಿ ಸಹ ನಿರ್ದೇಶಕನಾಗಿರುವ ಪ್ರವೀಣ್ ಕುಮಾರ್ ಜಿ. ಯವರು ಪ್ರೀತಿಯಿಂದ ಹಂಚಿಕೊಂಡಿದ್ದಾರೆ. 
         ನೀವು ಈ ಪುಸ್ತಕವನ್ನು ಇನ್ನೂ ಓದಿಲ್ಲವಾದರೆ ಮರೆಯದೆ ಓದಿ ನಿಮ್ಮ ಅಭಿಪ್ರಾಯವನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

ಮರೆಯದೆ ಪುಸ್ತಕದ ಬಗ್ಗೆ ಬರೆಯಿರಿ...
ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.ಬುಧವಾರ, ಅಕ್ಟೋಬರ್ 22, 2014

“ಇಂದಿನ ಎಲ್ಲಾ ಸಮಸ್ಯೆಗಳಿಗೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯವು ಪರಿಹಾರ ಮಾರ್ಗವಾದೀತೆ?”

ಇಂದಿನ ಎಲ್ಲಾ ಸಮಸ್ಯೆಗಳಿಗೆ ಗಾಂಧೀಜಿಯವರ ಗ್ರಾಮ ಸ್ವರಾಜ್ಯವು ಪರಿಹಾರ ಮಾರ್ಗವಾದೀತೆ?


        ಈ ಸಮಯದಲ್ಲಿ ವಿಶ್ವಕ್ಕೆ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಪರಿಕಲ್ಪನೆ ಸೂಕ್ತವಾದುದು
                     - ಅಹಗಮಗೆ ಟೂಡೋರ್ ಅರಿಯರತ್ನೆ, ಶ್ರೀಲಂಕಾದ ಸರ್ವೋದಯ ನಾಯಕ.

        ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯವೆಂದರೆ ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಸ್ವಾವಲಂಬಿಗಳಾಗುವುದು. ಪ್ರತಿಯೊಂದಕ್ಕೂ ವಿದೇಶಗಳನ್ನೇ ಅವಲಂಬಿಸುವ ಕೆಟ್ಟ ಸಂಸ್ಕ್ರತಿಯನ್ನು ಗಾಂಧೀಜಿ ಅಂದಿನ ದಿನಗಳಲ್ಲೇ ತಮ್ಮ ಗ್ರಾಮ ಸ್ವರಾಜ್ಯ ಪರಿಕಲ್ಪನೆಯ ಮೂಲಕ ವಿರೋಧಿಸಿದ್ದರು. ದೇಶಿಯ ಉತ್ಪನ್ನಗಳನ್ನು ಬಳಸಿ, ವಿದೇಶಿ ಉತ್ಪನ್ನಗಳನ್ನು ತ್ಯಜಿಸಿ ಎಂದು ಕರೆ ನೀಡಿದ್ದರು. ದೇಶಿಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವುದರ ಮೂಲಕ ಮತ್ತು ಗುಡಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಮೂಲಕ ಗ್ರಾಮೀಣ ಜನರ ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವುದು ಅವರ ಉದ್ದೇಶವಾಗಿತ್ತು. ಅದಕ್ಕೆ ತಮ್ಮ ಗ್ರಾಮ ಸ್ವರಾಜ್ಯದ ಪರಿಕಲ್ಪನೆಯ ಮೂಲಕ ನಾಂದಿ ಆಡಿದ್ದರು. ಅದು ಅವರ ಮಹತ್ವಾಕಾಂಕ್ಷೆಯೂ ಆಗಿತ್ತು.

        ಇನ್ನೂ ವಿಸ್ತಾರವಾಗಿ ಮೈಸೂರು ವಿಶ್ವವಿದ್ಯಾನಿಲಯದ ವಿಶ್ವಕೋಶದಲ್ಲಿ ದಾಖಲಾಗಿರುವಂತೆ ಹೇಳುವುದಾದರೇ, ಭಾರತದ ಸ್ವಾತಂತ್ರ್ಯಕ್ಕಾಗಿ ಅಪ್ರತಿಮವಾಗಿ ಹೋರಾಟ ನಡೆಸಿದ ಗಾಂಧೀಜಿಯವರು ಕೇವಲ ರಾಜಕೀಯ ಸ್ವಾತಂತ್ರ್ಯದ ಗುರಿ ಇಟ್ಟುಕೊಂಡಿರಲಿಲ್ಲ. ಪೂರ್ಣ ಸ್ವರಾಜ್ಯದ ಸ್ಥಾಪನೆಗೆ ರಾಜಕೀಯ ಸ್ವಾತಂತ್ರ್ಯ ಮೊದಲ ಮೆಟ್ಟಲೆಂದು ಮಾತ್ರ ಭಾವಿಸಿದ್ದರು. ಅವರ ದೃಷ್ಟಿಯಲ್ಲಿ ಸ್ವರಾಜ್ಯವೆಂದರೆ ಪರಿಪೂರ್ಣವಾದ ಪ್ರಜಾರಾಜ್ಯ. ಈ ವ್ಯವಸ್ಥೆಯಲ್ಲಿ ಸಾರ್ವಭೌಮಾಧಿಕಾರವಿರುವುದು ಪ್ರಜೆಗಳಲ್ಲೇ ಹೊರತು ಪ್ರಭುತ್ವದಲ್ಲಿ ಅಲ್ಲ. ಪ್ರಜೆಗಳ ಸಾರ್ವಭೌಮತ್ವಕ್ಕೆ ಬುನಾದಿ ನೈತಿಕ ಅಧಿಕಾರ, ದಂಡಿನ ಬಲವಲ್ಲ. ಸತ್ಯ, ಅಹಿಂಸೆ, ಸ್ವಾತಂತ್ರ್ಯ, ಸಮಾನತೆ - ಈ ಮೌಲ್ಯಗಳ ಸಾಕ್ಷತ್ಕಾರವೇ ಪ್ರಜೆಗಳ ಗುರಿ. ಈ ಮೌಲ್ಯಗಳು ಹೆಚ್ಚುಹೆಚ್ಚಾಗಿ ಅನುಷ್ಠಾನಕ್ಕೆ ಬಂದಂತೆ ವ್ಯಕ್ತಿಗಳ ವಿಕಾಸದ ಹಾಗೂ ಸಮಾಜದ ಮೇಲ್ಮೆಯ ಸಾಧನೆಯಾಗುತ್ತ ಹೋಗುತ್ತದೆ. ಅಂಥ ಪ್ರಜಾರಾಜ್ಯ ಶೋಷಣರಹಿತ ವರ್ಗರಹಿತ ರಾಜ್ಯವಾಗಿರುತ್ತದೆ. ಪೂರ್ಣ ಸ್ವರಾಜ್ಯ ಏರ್ಪಟ್ಟಾಗ ಯಾವುದೇ ರೀತಿಯ ಸರ್ಕಾರಿ ಅಂಕುಶವಿರುವುದಿಲ್ಲ. ಈ ವ್ಯವಸ್ಥೆಯಲ್ಲಿ ಜನತೆಗೆ ಪೂರ್ಣವಾಗಿ ಸಾಮಾಜಿಕ ನ್ಯಾಯ, ಆರ್ಥಿಕ ನೆಮ್ಮದಿ ಹಾಗೂ ವ್ಯಕ್ತಿಸ್ವಾತಂತ್ರ್ಯ ಇರುತ್ತವೆ. ಇಂಥ ಪ್ರಜಾರಾಜ್ಯವನ್ನು ಗಾಂಧಿಯವರು ರಾಮರಾಜ್ಯವೆಂದು ಕರೆದರು; ಪ್ರಬುದ್ಧ ಅರಾಜಕತೆ (ಎನ್ಲೈಟನ್ಡ್ ಆನಾರ್ಕಿ) ಎಂದರು. ಸರ್ಕಾರವೇ ಇಲ್ಲದ ರಾಜ್ಯ ಆದರ್ಶವಾದರೂ ಸದ್ಯಕ್ಕೆ ಅದು ಎಟುಕದ ಆದರ್ಶ. ಆದ್ದರಿಂದ ಯಾವುದು ಅತ್ಯಂತ ಮಿತವಾದ ಪ್ರಭುತ್ವವೋ ಅದೇ ಉತ್ಕೃಷ್ಟ ಪ್ರಭುತ್ವ ಎಂಬ ಥಾರೋವಿನ ವಿಚಾರವನ್ನು ಗಾಂಧಿಯವರು ಒಪ್ಪಿಕೊಂಡರು. ಸ್ವತಂತ್ರ್ಯ ಭಾರತ ಬ್ರಿಟನ್ನಿನ ಸಂಸದೀಯ ಪ್ರಭುತ್ವ ಪದ್ಧತಿಯನ್ನಾಗಲಿ, ಸೋವಿಯೆತ್ ಪದ್ಧತಿಯನ್ನಾಗಲಿ, ಫ್ಯಾಸಿಸ್ಟ್ ಪದ್ಧತಿಯನ್ನಾಗಲಿ ಅನುಕರಿಸಬಾರದು. ಅವುಗಳಲ್ಲಿ ಯಾವುದೂ ಭಾರತೀಯ ಜನಜೀವನ ಅಥವಾ ಸಂಸ್ಕೃತಿಗೆ ಹೊಂದಿಕೊಳ್ಳುವಂಥದಲ್ಲ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ರೂಢವಾಗಿರುವ ಪ್ರಭುತ್ವಗಳೆಲ್ಲವೂ ಸಾಮ್ರಾಜ್ಯವಾದ, ಹಿಂಸೆ, ಶೋಷಣೆ ಇವುಗಳ ಮೇಲೆ ನಿಂತಿರುವಂಥವು. ಆದ್ದರಿಂದ ಅವು ಭಾರತಕ್ಕೆ ವಜ್ಯವೆಂಬುದು ಗಾಂಧಿಯವರ ಮತ. ಭಾರತದಲ್ಲಿ ಕೇವಲ ಕೆಲವು ಜನತಾ ಪ್ರತಿನಿಧಿಗಳು ಅಧಿಕಾರ ಸೂತ್ರ ವಹಿಸಿಕೊಂಡರೆ ನಿಜವಾದ ಸ್ವರಾಜ್ಯವಾಗಲಾರದು. ಸರ್ಕಾರ ತಪ್ಪು ಮಾಡಿದಾಗ ಅದನ್ನು ತಡೆಗಟ್ಟುವ ಸಾಮರ್ಥ್ಯ ಪ್ರತಿಯೊಬ್ಬ ಪ್ರಜೆಗೂ ಬಂದಾಗಲೇ ನಿಜವಾದ ಸ್ವರಾಜ್ಯಪ್ರಾಪ್ತಿ ಎಂಬುದು ಗಾಂಧಿಯವರ ಅಭಿಪ್ರಾಯವಾಗಿತ್ತು. ರಾಜಕೀಯ ಅಧಿಕಾರದ ಕೇಂದ್ರೀಕರಣವಾದಷ್ಟೂ ಪ್ರಭುತ್ವ ಜನಸಾಮಾನ್ಯರ ಹಿಡಿತದಿಂದ ದೂರ ಸರಿಯುತ್ತದೆ. ಹಿಂಸೆಯನ್ನು ಆಧರಿಸಿದ ಸರ್ಕಾರ ದೊಡ್ಡ ಶೋಷಕಶಕ್ತಿಯಾಗುವುದಲ್ಲದೆ ವ್ಯಕ್ತಿಸ್ವಾತಂತ್ರ್ಯಕ್ಕೆ ಕಂಟಕವಾಗುತ್ತದೆ. ಅಂಥ ಕೇಂದ್ರೀಕೃತ ರಾಜಕೀಯ ವ್ಯವಸ್ಥೆ ಜನರ ಹೆಸರಿನಲ್ಲಿ ನಡೆದರೂ ಅದು ಹೆಸರಿಗೆ ಮಾತ್ರ ಪ್ರಜಾಪ್ರಭುತ್ವವಾಗಿರುತ್ತದೆ. ಪ್ರಜೆಗಳು ತಮ್ಮ ಆಗುಹೋಗುಗಳನ್ನು ನಿರ್ಧರಿಸುವುದರಲ್ಲಿ ಸಕ್ರಿಯಾಪಾತ್ರವಹಿಸಲಾಗುವುದಿಲ್ಲ. ಬದಲಾಗಿ ಪ್ರತಿಯೊಂದು ಕೆಲಸಕ್ಕೂ ಸರ್ಕಾರವನ್ನೇ ಎದುರು ನೋಡುವ ಅಸಹಾಯಕ ಪರಿಸ್ಥಿತಿಯಲ್ಲಿರುತ್ತಾರೆ. ಇದು ತಪ್ಪಬೇಕಾದರೆ ರಾಜಕೀಯ ಅಧಿಕಾರದ ವಿಕೇಂದ್ರೀಕರಣವಾಗಬೇಕು. ಭಾರತದಲ್ಲಿ ರಾಜ್ಯಶಕ್ತಿಯ ವಿಕೇಂದ್ರೀಕರಣಕ್ಕೆ ಸಹಾಯಕವಾಗುವ ಗ್ರಾಮ ಘಟಕಗಳಿವೆ. ಗಾಂಧಿಯವರ ದೃಷ್ಟಿಯಲ್ಲಿ ಪ್ರತಿ ಗ್ರಾಮವೂ ಸ್ವಾಯತ್ತತೆಯ ಘಟಕವಾಗಬೇಕು. ಅವರು ದೇಶದ ಮುಂದಿಟ್ಟ ಗ್ರಾಮಸ್ವರಾಜ್ಯದ ಚಿತ್ರವಿದು. ನನ್ನ ಕಲ್ಪನೆಯ ಗ್ರಾಮಸ್ವರಾಜ್ಯವೆಂದರೆ ಅದೊಂದು ಪರಿಪೂರ್ಣ ಗಣರಾಜ್ಯ. ತನ್ನ ಪ್ರಧಾನ ಅಗತ್ಯಗಳಲ್ಲಿ ಅದು ನೆರೆಹೊರೆಯವರಿಂದ ಸ್ವತಂತ್ರ್ಯ. ಆದರೂ ಅಗತ್ಯವಾದಲ್ಲಿ, ಎಷ್ಟೋ ವಿಷಯಗಳಲ್ಲಿ ಗ್ರಾಮಗಳು ಪರಸ್ಪರಾವಲಂಬಿಯಾಗಿರುತ್ತವೆ. ಹೀಗೆ ತನ್ನ ಆಹಾರ ಬೆಳೆಯುವುದು, ಬಟ್ಟೆಗಾಗಿ ಹತ್ತಿ ಬೆಳೆಯುವುದು, ಪ್ರತಿ ಹಳ್ಳಿಯ ಮೊದಲ ಗಮನ. ದನಕರುಗಳಿಗಾಗಿ ಕಾವಲು, ಮಕ್ಕಳಿಗಾಗಿಯೂ ಪ್ರೌಢರಿಗಾಗಿಯೂ ಆಟಕ್ಕೂ ಮನೋರಂಜನೆಗೂ ಸ್ಥಳ ಇರಬೇಕು. ಇದಕ್ಕೆಲ್ಲ ಆಗಿ ಭೂಮಿ ಮಿಕ್ಕರೆ ಅದರಲ್ಲಿ ಗಾಂಜಾ, ತಂಬಾಕು, ಅಫೀಮುಗಳ ಹೊರತಾಗಿ ಉಪಯೋಗಕರ ಹಣದ ಬೆಳೆಗಳನ್ನು ಬೆಳೆಯಬಹುದು. ಹಳ್ಳಿಹಳ್ಳಿಯಲ್ಲೂ ನಾಟಕಮಂದಿರ, ಶಾಲೆ, ಸಭಾಭವನ ಇದ್ದಾವು; ಶುದ್ಧವಾದ ನೀರಿನ ಪೂರೈಕೆಯ ಕೇಂದ್ರ ಇದ್ದೀತು. ಮೂಲಶಿಕ್ಷಣದ ಅವಧಿಯ ಪೂರ್ಣ ಶಿಕ್ಷಣ ಕಡ್ಡಾಯವಿದ್ದೀತು. ಸಾಧ್ಯವಿದ್ದಷ್ಟು ಮಟ್ಟಿಗೂ ಪ್ರತಿಯೊಂದು ಕೆಲಸವನ್ನು ಸಹಕಾರತತ್ತ್ವದ ಆಧಾರದ ಮೇಲೆ ಕೈಗೊಳ್ಳಲಾದೀತು. ಘಟ್ಟಘಟ್ಟಗಳ ಅಸ್ಪೃಶ್ಯತೆಯುಳ್ಳ ಇಂದಿನಂಥ ಜಾತಿಗಳಿರುವುದಿಲ್ಲ. ಸತ್ಯಾಗ್ರಹ ಹಾಗೂ ಅಸಹಕಾರ ತಂತ್ರವುಳ್ಳ ಅಹಿಂಸೆಯೇ ಗ್ರಾಮಸಮಾಜದ ಆಧಾರಶಕ್ತಿ. ಹಳ್ಳಿಯಲ್ಲಿ ಇಡಲಾದ ಒಂದು ಖಾತೆಯಿಂದ ಸರದಿ ಪ್ರಕಾರ ಆರಿಸಲಾಗುವ, ಎಲ್ಲರಿಗೂ ಅನಿವಾರ್ಯವಾದ, ಗ್ರಾಮರಕ್ಷಕ ಪಡೆ ಇದ್ದೀತು. ಹಳ್ಳಿಯಲ್ಲಿ ಯೋಗ್ಯಕನಿಷ್ಠ ಅರ್ಹತೆಗಳುಳ್ಳ ಎಲ್ಲ ಪ್ರೌಢ ಸ್ತ್ರೀಪುರುಷರೂ ವರ್ಷಕ್ಕೊಮ್ಮೆ ಚುನಾಯಿಸುವ ಐವರ ಪಂಚಾಯಿತಿ ಹಳ್ಳಿಯ ಆಡಳಿತವನ್ನು ನಡೆಸಿಕೊಂಡು ಹೋಗುವುದು. ಆಡಳಿತಕ್ಕೆ ಬೇಕಾದ ಅಧಿಕಾರ, ವ್ಯಾಪ್ತಿ ಎರಡೂ ಈ ಮಂಡಳಿಗೆ ಇರುವುವು. ಪ್ರಚಲಿತ ಅರ್ಥದ ಶಿಕ್ಷೆಯ ಪದ್ಧತಿ ಇರುವುದಿಲ್ಲವಾದ್ದರಿಂದ ಪಂಚಾಯಿತಿಯೇ ಶಾಸಕಾಂಗ ನ್ಯಾಯಾಂಗ ಕಾರ್ಯಾಂಗಗಳಾಗಿ ತನ್ನ ಒಂದು ವರ್ಷದ ಅಧಿಕಾರಾವಧಿಯಲ್ಲಿ ಕೆಲಸ ಮಾಡೀತು. ಇಲ್ಲಿ ವ್ಯಕ್ತಿಸ್ವಾತಂತ್ರ್ಯದ ಆಧಾರದ ಮೇಲೆ ಪರಿಪೂರ್ಣ ಜನತಂತ್ರವಿದೆ. (ಆಧಾರ : ಹರಿಜನ, ಜುಲೈ ೨೬, ೧೯೪೨) ಮತ್ತು, ಗ್ರಾಮ ಗಣರಾಜ್ಯಗಳ ಮಹಾ ಒಕ್ಕೂಟವೇ ಭಾರತರಾಷ್ಟ್ರ. ಅಸಂಖ್ಯ ಹಳ್ಳಿಗಳುಳ್ಳ ಈ ರಚನೆಯಲ್ಲಿ ಸದಾ ವ್ಯಾಪಕವೃತ್ತಗಳಿರುತ್ತವೆ; ಆರೋಹಣ ವೃತ್ತಗಳಿರುವುದಿಲ್ಲ. ಬದುಕು ಪಿರಮಿಡ್ಡಿನಂತಿರುವುದಿಲ್ಲ. ಅದು ಸಾಗರ ಸಮವೃತ್ತದಂತೆ. ಅದರ ಕೇಂದ್ರಬಿಂದು ವ್ಯಕ್ತಿ. ಆತ ತನ್ನ ಹಳ್ಳಿಗಾಗಿ ಅಳಿಯಲೂ ಸಿದ್ಧ. ಗ್ರಾಮಗಳ ಸಮೂಹಕ್ಕಾಗಿ ನಾಶವಾಗಲು ಹಳ್ಳಿ ಸಿದ್ಧ. ಕೊನೆಗೆ ಇಡೀ ಜೀವನ ಒಂದು ಪೂರ್ಣತೆಯಾಗುತ್ತದೆ. ಅದರಲ್ಲಿರುವ ವ್ಯಕ್ತಿಗಳು ಎಂದೂ ಅಹಂಕಾರದಿಂದ ಆಕ್ರಮಣಕಾರಿಗಳಾಗುವುದಿಲ್ಲ. ಅವರು ಸದಾ ವಿನಮ್ರರು. ಸಾಗರ ಸಮವೃತ್ತದ ಗಾಂಭೀರ್ಯದಲ್ಲಿ ಪಾಲುಗೊಂಡವರು. ಆದ್ದರಿಂದ ಹೊರಗಿನ ವೃತ್ತ ಒಳಗಿನ ವೃತ್ತವನ್ನು ತುಳಿಯಲು ತನ್ನ ಅಧಿಕಾರವನ್ನು ಉಪಯೋಗಿಸುವುದಿಲ್ಲ. ಅದರ ಬದಲಾಗಿ ತಾನೂ ಅದಕ್ಕೆ ಶಕ್ತಿ ನೀಡುತ್ತದೆ. ಅದರಿಂದ ತಾನೂ ಶಕ್ತಿ ಪಡೆಯುತ್ತದೆ. ಇದೆಲ್ಲ ಅಸಾಧ್ಯವಾದ ಆದರ್ಶ ಎಂದು ನೀವು ನನ್ನನ್ನು ಮೂದಲಿಸಬಹುದು. ಮನುಷ್ಯಮಾತ್ರರು ಗುರುತಿಸಲಾದ ಯೂಕ್ಲಿಡನ ಬಿಂದುವಿಗೇ ಅಳಿಯದ ಬೆಲೆ ಇರುವುದಾದರೆ ಮಾನವಕುಲ ಉಳಿಯುವಂಥ ನನ್ನ ಚಿತ್ರಕ್ಕೂ ತನ್ನದೇ ಆದ ಮೌಲ್ಯವುಂಟು. ಚಿತ್ರವನ್ನು ಪರಿಪೂರ್ಣವಾಗಿ ಎಂದೂ ಸಾಧಿಸಲಾಗದಿದ್ದರೂ ಭಾರತ ಈ ನೈಜ ಚಿತ್ರಕ್ಕಾಗಿ ಬದುಕಲಿ, ನಮಗೆ ಬೇಕಾದುದರ ಯೋಗ್ಯ ಚಿತ್ರವಿಲ್ಲದೆ ನಾವು ಅದರತ್ತ ಧಾವಿಸುವುದು ಸಾಧ್ಯವಿಲ್ಲ. ಭಾರತದ ಪ್ರತಿಯೊಂದು ಹಳ್ಳಿಯಲ್ಲೂ ಎಂದಾದರೊಂದು ದಿನ ಪ್ರಜಾರಾಜ್ಯವಾಗಬೇಕಾಗಿದ್ದರೆ ನನ್ನ ಈ ಚಿತ್ರವೇ ಸರಿ ಎನ್ನುತ್ತೇನೆ. ಇದರಲ್ಲಿ ಕೊನೆಯದೂ ಮೊದಲಿನದೂ ಪರಸ್ಪರ ಸಮಾನ; ಅರ್ಥಾತ್ ಪ್ರಥಮ ಅಂತಿಮ ಯಾವುದೂ ಇದರಲ್ಲಿಲ್ಲ. (ಆಧಾರ: ಹರಿಜನ ಜುಲೈ ೨೨,೧೯೪೬). ಹಾಗೂ, ಪ್ರಜಾಪ್ರಭುತ್ವದ ಯಶಸ್ಸು ವಿಕೇಂದ್ರೀಕರಣವನ್ನು ಅವಲಂಬಿಸಿದೆ ಎಂಬುದು ಗಾಂಧಿಯವರ ಸ್ಪಷ್ಟ ಅಭಿಮತ. ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಮಾತ್ರ ಅಹಿಂಸೆಯ ಆಚರಣೆ ಸಾಧ್ಯ. ಅಹಿಂಸೆ ಆಧಾರವಾಗಿರದ ಪ್ರಜಾತಂತ್ರ ನಿಜವಾದ ಪ್ರಜಾಪ್ರಭುತ್ವವಾಗುವುದೇ ಇಲ್ಲ. ರಾಜಕೀಯ ಅಧಿಕಾರದ ಜೊತೆಯಲ್ಲಿ ಆರ್ಥಿಕಶಕ್ತಿಯ ವಿಕೇಂದ್ರೀಕರಣವೂ ಆಗಬೇಕು. ವಿಕೇಂದ್ರೀಕೃತ ಅರ್ಥವ್ಯವಸ್ಥೆ ಎಂದರೆ ಮನುಷ್ಯನ ಶ್ರಮಶಕ್ತಿ ಆಧಾರವಾಗಿರುವ ಸಣ್ಣ ಉದ್ಯಮಗಳ ವ್ಯವಸ್ಥೆ. ಜನತೆಗೆ ಉಪಯುಕ್ತವಾದ ಎಲ್ಲ ಅಗತ್ಯ ಬಳಕೆಯ ವಸ್ತುಗಳ ಉತ್ಪಾದನೆ ಕುಟೀರಗಳಲ್ಲಿ ಅಥವಾ ಸಣ್ಣ ಸಣ್ಣ ಘಟಕಗಳಲ್ಲಿ ಆಗುತ್ತದೆ. ಭಾರತದಂಥ ಜನಬಾಹುಳ್ಯವಿರುವ ದೇಶದಲ್ಲಿ ಕೋಟಿ ಕೋಟಿ ಕೈಗಳೂ ಲಕ್ಷೋಪಲಕ್ಷ ಕುಟೀರಗಳಲ್ಲಿ ಉತ್ಪಾದಿಸಿದ ವಸ್ತುಗಳ ಒಟ್ಟು ಗಾತ್ರ ಅಗಾಧವಾದ ಜನರ ಆವಶ್ಯಕತೆಗಳನ್ನು ಪೊರೈಸುತ್ತದೆ. ಶ್ರಮಶಕ್ತಿಗೆ ಪೂರಕವಾಗಿ ಸಣ್ಣ ಯಂತ್ರಗಳಿಗೆ ಅವಕಾಶವಿರುತ್ತದೆ. ಇಂಥ ವ್ಯವಸ್ಥೆಯಲ್ಲಿ ಮಧ್ಯವರ್ತಿಗಳಿಂದ ಶೋಷಣೆ ಅಥವಾ ಲಾಭಬಡುಕತನ ಇರುವುದಿಲ್ಲ. ಉತ್ಪಾದನೆ ವಿತರಣೆಗಳು ಒಟ್ಟಿಗೆ ಆಗಿ ಪರಮಾವಧಿ ಉದ್ಯೋಗ ಪ್ರಾಪ್ತಿ ಹಾಗೂ ನ್ಯಾಯೋಚಿತ ವಿತರಣೆ ಆಗುತ್ತದೆ. ಅನಿವಾರ್ಯವಾಗಿ ಹಲವು ಬೃಹತ್ ಕೈಗಾರಿಕೆಗಳು ಇರಬೇಕಾದ ಸಂದರ್ಭದಲ್ಲಿ ಅದರ ಮಾಲೀಕತ್ವದಲ್ಲಿ ಕಾರ್ಮಿಕರ ಸಹಭಾಗಿತ್ವ ಇರಬೇಕು. ಮಾಲೀಕರು ಉದ್ಯಮದ ಧರ್ಮದರ್ಶಿಗಳಾಗಿ ವರ್ತಿಸಿ ಕಾರ್ಮಿಕವರ್ಗಕ್ಕೆ ಸಮಪಾಲು ನೀಡಬೇಕು. ಮಾಲೀಕ ವರ್ಗ ಹಾಗೇ ನಡೆದುಕೊಳ್ಳದಿದ್ದ ಪಕ್ಷದಲ್ಲಿ ಅಂಥ ಭಾರೀ ಉದ್ಯಮಗಳು ಸರ್ಕಾರದ ಒಡೆತನಕ್ಕೆ ಒಳಪಡುತ್ತವೆ. ಸರ್ಕಾರದ ಅಧೀನದಲ್ಲಿದ್ದರೂ ಅದರ ಆಡಳಿತ ನೌಕರಶಾಹಿಯ ಮುಷ್ಟಿಯಲ್ಲಿರದೆ ಕಾರ್ಮಿಕರ ಪ್ರಾತಿನಿಧ್ಯವುಳ್ಳ ದಕ್ಷ ಆಡಳಿತ ಮಂಡಲಿಯಲ್ಲಿರತಕ್ಕದ್ದು. ಗಾಂಧಿಯವರ ಕಲ್ಪನೆಯ ಸಮಾಜ ಜಾತಿರಹಿತ ಹಗೂ ವರ್ಗರಹಿತ ಸಮಾಜ. ಎಲ್ಲ ಜನರ ಸರ್ವಾಂಗೀಣ ವಿಕಾಸಕ್ಕೆ ಇದರಲ್ಲಿ ಆದ್ಯ ಗಮನ. ಸ್ತ್ರೀಪುರುಷರು ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಸಹಭಾಗಿಗಳು. ಸ್ವರಾಜ್ಯದ ರಾಜಕಾರಣ ಸೇವಾಪರವಾದ ರಾಜಕಾರಣ. ನೀತಿಬಾಹಿರವಾದ ರಾಜಕಾರಣ ಪಾಶವೀ ರಾಜಕೀಯವಾದ್ದರಿಂದ ಅದು ಸಮಾಜಘಾತಕ. ಸಾಧನ, ಗುರಿ ಇವೆರಡೂ ಪವಿತ್ರವಾಗಿದ್ದಲ್ಲಿ ರಾಜಕಾರಣ ಪರಿಶುದ್ಧವಾಗಿರುತ್ತದೆ. ಜನತೆಯಿಂದ ಚುನಾಯಿತರಾದ ಪ್ರತಿನಿಧಿಗಳು ಪ್ರಾಮಾಣಿಕವಾಗಿ ಸೇವಾತತ್ಪರರಾಗಿದ್ದರೆ ಅವರು ನಡೆಸುವ ಸರ್ಕಾರ ಸೇವಾಸಾಧನವಾಗುತ್ತದೆ. ವಿವಿಧ ಘಟ್ಟಗಳಲ್ಲಿ ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವ್ಯಷ್ಟಿ ಹಾಗೂ ಸಮಷ್ಟಿ ಹಿತಕ್ಕಾಗಿ ಸಕ್ರಿಯವಾಗಿ ಕೆಲಸ ಮಾಡುವುದರಿಂದ ಸಮಾಜದ ಅಭ್ಯುದಯ ಉಂಟಾಗುತ್ತದೆ. ಅಂಥ ಸಮಾಜ ಸರ್ವರ ಯೋಗಕ್ಷೇಮ ಸಾಧಿಸುವ ಸರ್ವೋದಯ ಸಮಾಜವಾಗುತ್ತದೆ. ಅದು ಸ್ವರಾಜ್ಯವು ಸುರಾಜ್ಯವೂ ಆಗಿರುತ್ತದೆ. ಗಾಂಧಿಯವರ ಸ್ವರಾಜ್ಯದ ಕಲ್ಪನೆ ಕೇವಲ ಭಾರತಕ್ಕೆ ಸೀಮಿತವಾಗಿರದೆ ಇಡೀ ಮಾನವಜನಾಂಗಕ್ಕೆ ಅನ್ವಯಿಸುತ್ತದೆ. ದೊಡ್ಡವು, ಚಿಕ್ಕವು ಎಂಬ ಭೇದವಿಲ್ಲದೆ ಎಲ್ಲ ರಾಜ್ಯಗಳೂ ಸರಿಸಮಾನವಾದವು. ಎಲ್ಲ ದೇಶಗಳಲ್ಲೂ ರಾಜ್ಯವ್ಯವಸ್ಥೆ ಸತ್ಯ, ಅಹಿಂಸೆ, ವಿಕೇಂದ್ರೀಕರಣ ಇವುಗಳ ಆಧಾರದ ಮೇಲೆ ರಚಿತವಾದರೆ ವಿಶ್ವಶಾಂತಿ ಶಾಶ್ವತ ವಾಗಿರುತ್ತದೆ. ಮಾನವ ಸ್ವಾತಂತ್ರ್ಯದ ದಿಗಂತ ವಿಸ್ತಾರವಾಗುತ್ತದೆ.

        ಆದರೆ, ಗಾಂಧೀಜಿಯವರ ಈ ಕನಸು ಸ್ವತಂತ್ರ ಬಂದು ಹಲವು ದಶಕಗಳ ಬಳಿಕವೂ, ಅವರನ್ನು ದೇಶದ ಪಿತಾಮಹನೆಂದು ನಾವು ಕೊಂಡಾಡುತ್ತಿದ್ದರೂ ಕನಸಾಗಿಯೇ ಉಳಿದಿದೆ. ಕಾರಣಗಳೂ ಸ್ಪಷ್ಟವಾಗಿವೆ. ಜಾಗತೀಕರಣ ಬಹುಮುಖ್ಯ ಕಾರಣವಾದರೆ, ಭ್ರಷ್ಟ ರಾಜಕಾರಣಿಗಳು, ಅವರಿಗೆ ಬೆಂಗಾವಲಾಗಿರುವ ಉದ್ಯಮಿಗಳು. ಮತ್ತೊಂದೆಡೆ ಅಪ್ರಮಾಣೀಕರು, ಭ್ರಷ್ಟರು, ಲೂಟಿಕೋರರು, ಅಭಿವೃದ್ದಿ ವಿರೋಧಿಗಳ ಗುಂಪಿನಲ್ಲಿ ನಲುಗುವ ಯೋಜನೆಗಳು. ಈ ನಲುಗಿರುವ ಯೋಜನೆಗಳಲ್ಲಿ ಇಂದು ಬಹುಪಾಲು ದೇಶದ ಸಮಸ್ಯೆಗಳಿಗೆ ಪರಿಹಾರವಾಗಬಹುದಾದ ಗ್ರಾಮ ಸ್ವರಾಜ್ಯ ಯೋಜನೆಯೂ ಸೇರಿರುವುದು ದುರದೃಷ್ಟಕರ. ಸರಿಯಾದ ಮುನ್ನೋಟವಿಲ್ಲದೆ, ಅನುಷ್ಠಾನಾಧಿಕಾರಿಗಳ ಅಪ್ರಮಾಣಿಕತೆ ಮತ್ತು ಭ್ರಷ್ಟಾಚಾರದ ಕುಣಿಕೆಗೆ ಯೋಜನೆ ತನ್ನ ಕೊರಳನ್ನು ಒಡ್ಡಿರುವುದು ದೊಡ್ಡ ದುರಂತವೇ ಸರಿ. ಈಗಾಗಲೇ ನಮ್ಮ ಆತ್ಮಾಭಿಮಾನವನ್ನು ಕಳೆದುಕೊಂಡಿರುವ ನಾವು ಇಂತಹ ದುರಂತಗಳಿಂದ ಪಾಠ ಕಲಿಯದೇ ಇರುವುದು ದೊಡ್ಡ ವಿಪರ‍್ಯಾಸ. ಆದಕಾರಣ, ಗಾಂಧೀಜಿಯವರ ಗ್ರಾಮ ಸ್ವರಾಜ್ಯ ವೆಂಬ ಹಕ್ಕಿಯ ರೆಕ್ಕೆಗಳನ್ನೇ ಕತ್ತರಿಸಿಹಾಕಿದ್ದಾರೆನೋ ಎಂದೆನಿಸಿಬಿಡುತ್ತದೆ.

        ಆದರೂ, ಮೂಲತಃ ಆಶಾವಾದಿಯಾದ ಮನುಷ್ಯ ತನ್ನ ಇಚ್ಛಾಶಕ್ತಿಯನ್ನು ಕಳೆದುಕೊಳ್ಳಬಾರದು. ಅಷ್ಟಕ್ಕೂ ಗಾಂಧೀತಾತನ ಇಚ್ಛಾಶಕ್ತಿಯೇ ನಮಗೆ ಸ್ವತಂತ್ರ ತಂದು ಕೊಟ್ಟದೆಂದು ನಾವು ಮರೆಯಬಾರದು. ಈ ಇಚ್ಛಾಶಕ್ತಿಯ ಕಾರಣದಿಂದಲೇ ಎಂಬಂತೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲ್ಲೂಕಿನ ಯಡವಳ್ಳಿ ಇದೀಗ ಗಾಂಧೀಜಿಯವರ ಕನಸಿನ ಗ್ರಾಮ ಸ್ವರಾಜ್ಯ ದಂತೆಯೇ ರೂಪುಗೊಂಡು ದೇಶದ ಗಮನ ಸೆಳೆದಿದೆ. ಇದೇ ರೀತಿ ಹಲವು ಹಳ್ಳಿಗಳಿರಬಹುದು. ನಾನಿಲ್ಲಿ ಇತ್ತಿಚಿಗಷ್ಟೇ ಉದಯವಾಣಿ ಪತ್ರಿಕೆಯಲ್ಲಿ ಗಾಂಧಿ ಕಲ್ಪನೆ ಸಾಕಾರಗೊಂಡ ಹಳ್ಳಿಗೆ ಒಮ್ಮೆ ಬನ್ನಿ ಎಂಬ ಶಿರ್ಷೀಕೆಯಲ್ಲಿ ಪ್ರಕಟಗೊಂಡ ಯಡವಳ್ಳಿಯನ್ನು ಉದಾಹರಿಸುತ್ತಿದ್ದೇನೆ ಅಷ್ಟೆ. ಈ ಹಳ್ಳಿಯಲ್ಲಿ ಶುದ್ಧ ನೀರಿನ ಘಟಕಗಳಿವೆ, ಬಯಲೇ ಶೌಚಾಲಯವಾಗಿರುವ ಉತ್ತರ ಕರ್ನಾಟಕದ ಹಳ್ಳಿಗಳಿಗೆ ಅಪವಾದವೆಂಬಂತೆ ಮನೆಮನೆಗೂ ಶೌಚಾಲಯಗಳಿವೆ, ಗ್ರಾಮ ಪಂಚಾಯಿತಿ ಹುಟ್ಟಿಕೊಂಡಾಗಿನಿಂದ ಇಲ್ಲಿ ಚುನಾವಣೆಗಳೇ ನಡೆದಿಲ್ಲವಂತೆ! ವಿಶೇಷವೆಂದರೆ, ಇಲ್ಲಿ ಮದ್ಯ, ಗುಟ್ಕಾ ಮಾರಾಟಕ್ಕೆ ಅವಕಾಶವಿಲ್ಲವಂತೆ. ಮಹಿಳೆಯರಿಗೆ ಪ್ರಾಧಾನ್ಯವಿರುವುದರ ಜೊತೆಜೊತೆಗೆಯೇ ಹೆಣ್ಣು ಮಕ್ಕಳು ಹೆಚ್ಚಿಗೆ ಇರುವ ಹಳ್ಳಿ ಇದಂತೆ. ಇಲ್ಲಿನ ಜನರು, ರಾಜಕಾರಣಿಗಳು, ಅಧಿಕಾರಿಗಳ ಸಮನ್ವಯತೆಯಿಂದಲೇ ಇದೆಲ್ಲಾ ಸಾಕಾರಗೊಂಡಿದೆ. ಯಡವಳ್ಳಿಯ  ರೀತಿಯಲ್ಲಿಯೇ ಎಲ್ಲಾ ಹಳ್ಳಿಗಳಲ್ಲಿಯೂ ಸಮನ್ವಯತೆಯಿಂದ ಕೆಲಸವಾದರೆ ಇಡೀ ದೇಶದಲ್ಲೇ ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ಕನಸು ನನಸಾಗುವುದರಲ್ಲಿ ಎರಡು ಮಾತಿಲ್ಲ.

        ಆದಕಾರಣ, ಇಂದಿನ ಎಲ್ಲಾ ಯುವಕ ಯುವತಿಯರಿಗೂ ಕಾಲೇಜುಗಳಲ್ಲಿ, ಎನ್.ಎಸ್.ಎಸ್. ಶಿಬಿರಗಳಲ್ಲಿ ಗ್ರಾಮ ಸ್ವರಾಜ್ಯದ ಕನಸಿನ ಬೀಜವನ್ನು ಬಿತ್ತಬೇಕು. ಅಕ್ಷರಸ್ಥರನ್ನೂ ಅನಕ್ಷಸ್ಥರನ್ನೂ ಏಕಕಾಲಕ್ಕೆ ತಲುಪುವ ದೃಶ್ಯ ಮಾಧ್ಯಮದ ಮೂಲಕ ಜಾಗೃತಿ ಮೂಡಿಸಬೇಕು. ತುಂಬಾ ಶಕ್ತಯುತವಾದ ಸಿನಿಮಾ ಮಾಧ್ಯಮ ಮಾಡುವ ತಾಜಾ ತಲಹರಟೆಯನ್ನು ಉದಾಹರಿಸುತ್ತೇನೆ ನೋಡಿ. ಇತ್ತೀಚೆಗೆ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಅಧ್ಯಕ್ಷ ಸಿನಿಮಾದಲ್ಲಿ ಹನ್ನೊಂದನೆ ಕ್ಲಾಸಿನಲ್ಲಿ ಓದುವ ನಾಯಕಿ ಅಷ್ಟೇನೂ ಓದದ ನಾಯಕನಿಗೆ ಶಾಲೆಯ ಬಳಿ ನಾಳೆ ಬೆಳಿಗ್ಗೆ ಒಂಭತ್ತುವರೆಗೆ ಬನ್ನಿ ಎಂದು ಹೇಳುತ್ತಾಳೆ. ಅವಳಿಗೆ ನಾಯಕನಿಗೆ ಚಳ್ಳೆಹಣ್ಣು ತಿನ್ನಿಸುವ ಆಸೆ. ನಾಯಕ ಬೆಳಗ್ಗೆ ಒಂಭತ್ತುವರೆಗೆ ಹೊಸಬಟ್ಟೆಯಲ್ಲಿ ಬಂದು ನೋಡಿದರೆ ಶಾಲೆಯ ಬಾಗಿಲೇ ತೆರೆದಿರುವುದಿಲ್ಲ! ಪಕ್ಕದಲ್ಲಿದ್ದವರನ್ನು ಅವನು ಕೇಳಿದಾಗ ಹತ್ತೂವರೆಯಾದರೂ ಶಾಲೆ ತೆಗೆಯುವುದಿಲ್ಲವೆಂತಲೂ, ಕಾರಣ ಅಕ್ಟೋಬರ್ ೨ ಗಾಂಧಿ ಜಯಂತಿ ಇರುವುದರಿಂದ ಶಾಲೆಗೆ ರಜೆಯೆಂದು ಹೇಳಿ ಗಹಗಹಿಸುತ್ತಾನೆ. ನಾಯಕ ಮತ್ತು ಅವನ ಗೆಳೆಯ ಪೆಚ್ಚಾದರೆ, ಪ್ರೇಕ್ಷಕ ಮಹಾಪ್ರಭು ಗೊಳ್ಳೆಂದು ನಗುತ್ತಾನೆ. ಅಲ್ಲಿಗೆ ಗಾಂಧಿ ಜಯಂತಿಯ ಮಹತ್ವ ನಗೆಪಾಟಲಿಗೀಡಾಗುತ್ತದೆ. ಈ ದೃಶ್ಯವನ್ನು ಸೆನ್ಸಾರ್ ಮಂಡಳಿಯವರು ತೂಕಡಿಸಿಕೊಂಡಿಯೋ ಇಲ್ಲಾ ಹಣವನ್ನು ಪಡೆದೊ ನೋಡಿ ಪಾಸ್ ಮಾಡಿರಬೇಕು. ಏನಾದ್ರೂ ಹಾಳು ಬಿದ್ದೋಗಲಿ ಎಂದರೆ, ಜೊತೆಯಲ್ಲಿ ಕರೆದುಕೊಂಡು ಹೋದ ಮಕ್ಕಳಿಗೆ ನಾವು ಗಾಂಧಿ ಜಯಂತಿಯೆಂದರೆ ಕೇವಲ ರಜೆಯೆಂದು ಮನದಟ್ಟು ಮಾಡಿದಂತಾಗುವುದಿಲ್ಲವೇ? ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಗಾಂಧಿ ಜಯಂತಿಯ ಮಹತ್ವ, ಗ್ರಾಮ ಸ್ವರಾಜ್ಯದ ಅವಶ್ಯಕತೆ ಪ್ರತಿ ಶಾಲೆಗಳಲ್ಲೂ, ಮನೆ-ಮನಗಳಲ್ಲಿಯೂ, ಹಳ್ಳಿ-ನಗರಗಳಲ್ಲಿಯೂ ಪ್ರಸರಿಸಬೇಕು.

        ಯಾವುದೇ ಆಚರಣೆಯನ್ನು ಅನುಷ್ಠಾನಕ್ಕೆ ತಂದರೆ ಮಾತ್ರ ಅದು ನೂರ್ಕಾಲ ಬಾಳುವುದು. ಆದುದರಿಂದ, ನಾನು ಮೇಲೆ ಉದ್ಗರಿಸಿದ ಶ್ರೀಲಂಕಾದ ಸರ್ವೋದಯ ನಾಯಕ ಶ್ರೀ ಅಹಗಮಗೆ ಟೂಡೋರ್ ಅರಿಯರತ್ನೆ, ಸ್ವಾತಂತ್ರ ಹೋರಾಟಗಾರ ಕೊಪ್ಪಳದ ಶ್ರೀ ಶರಣಬಸವರಾಜ ಬಿಸರಳ್ಳಿ, ಮತ್ತು ನಮ್ಮ ತುಮಕೂರಿನವರೇ ಆದ ಗಾಂಧಿ ಅನುನಾಯಿಗಳಾದ ಶ್ರೀ ಬಸವಯ್ಯನವರು ಹಾಗೂ ಶ್ರೀ ನರಸಿಂಹಯ್ಯ ತುಂಡೋಟಿಯವರಂತಹವರು ಕನವರಿಸುತ್ತಾ, ನನಸಾಗಲಿ ಎಂದು ಭರವಸೆಯಿಟ್ಟಿರುವ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯ ವೆಂಬ ಹಕ್ಕಿಗೆ ರೆಕ್ಕೆಗಳಾಗುವುದರ ಮೂಲಕ ವಿಶ್ವದ ದಿಗಂತದಲ್ಲಿ ಸ್ವತಂತ್ರವಾಗಿ ವಿಹರಿಸಬಹುದು. ಬನ್ನಿ, ಹಿರಿಯರ ಕನಸನ್ನು ಸಾಕಾರಗೊಳಿಸೋಣ. ಆಗ ಮಾತ್ರವೇ ಗಾಂಧಿಯವರ ಗ್ರಾಮ ಸ್ವರಾಜ್ಯ ನಮ್ಮೆಲ್ಲಾ ಸಮಸ್ಯೆಗಳಿಗೂ ಪರಿಹಾರ ಮಾರ್ಗವೂ ಆಗಬಲ್ಲದು.

                                        - ಗುಬ್ಬಚ್ಚಿ ಸತೀಶ್.

        (ತುಮಕೂರಿನ ಅನನ್ಯ ಪ್ರಕಾಶನ ಗಾಂಧಿಜಯಂತಿ ಪ್ರಯುಕ್ತ ಏರ್ಪಡಿಸಿದ್ದ
                ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಲೇಖನ)