ಖ್ಯಾತ ಚಲನಚಿತ್ರ ಸಾಹಿತಿ, ಕವಿರಾಜರ ಮುನ್ನುಡಿಯೊಂದಿಗೆ ಪ್ರಕಟವಾಗಿರುವ “ಭಾವಸಿಂಚನ” orkut ಕವಿತೆಗಳ ಸಂಕಲನ ಒಂದು ನವೀನ ಭಾವದ ಸಿಂಚನವಾಗಿದೆ. ಗೂಗಲ್ ನ ಆಕುರ್ಟ್ ಮೂಲಕ ಗೆಳೆಯರಾದ ಅನೇಕರ ಆಯ್ದ ಕವನಗಳ ಸಂಕಲನ ಇದಾಗಿದೆ. ಸಂಕಲನದ ಮೊದಲ ಕವಿತೆಯಾದ “ವಿನಿಮಯ...” ಕವನವು ನಾನಿರುವೆ ನಮ್ಮೂರಲ್ಲಿ / ನೀನೆಲ್ಲೋ ಪರದೇಶದಲ್ಲಿ / ಸುಡುವ ಬೆಳದಿಂಗಳ ಇರುಳು / ಬಿಗಿದು ಬಂದಿದೆ ಕೊರಳು / ಚಂದಿರನ ನೋಡೋಣವೇ / ಒಂದೇ ಸಮಯದಲ್ಲಿ ಇನಿಯ / ನಡೆಯಲಿ ಮುಗುಳುನಗೆಯ ವಿನಿಮಯ...” ಎಂದು ಆರಂಭಗೊಂಡು ನಂತರ ಮತ್ತಿಬ್ಬರು ಕವಿಗಳು ಅದನ್ನು ಚೆಂದವಾಗಿ ಮುಂದುವರಿಸಿದ್ದಾರೆ. ಕವನದ ಈ ಮೊದಲ ಸಾಲುಗಳೇ ಈ ಆಕುರ್ಟ್ ಸಮುದಾಯವನ್ನು ಪ್ರತಿಬಿಂಬಿಸುತ್ತಿವೆ. ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಅಂತರ್ಜಾಲದ ಮೂಲಕ ಗೆಳೆಯರಾಗಿರುವ ಇವರ ನೋವನ್ನು ಮತ್ತು ನಲಿವನ್ನು ಹೇಳುತ್ತಿವೆ.
ಪ್ರೀತಿಪ್ರೇಮದ ಕವನಗಳೇ ಹೆಚ್ಚಾಗಿರುವ ಸಂಕಲನದಲ್ಲಿ ಅಮ್ಮನ ಬಗ್ಗೆಯೂ ಕವನವಿದೆ. ಕನ್ನಡಮ್ಮನ ಕುರಿತೂ ಕವನಗಳಿವೆ. ಅರುಣ್ ಕುಮಾರ್ ರವರ ಚಂದ್ರಸಾಕ್ಷಿ ಕವನವು ಪ್ರೇಮಿಗಳ ನೋವಿಗೆ, ಸಾಂತ್ವನಕ್ಕೆ ಚಂದ್ರನನ್ನು ಸಾಕ್ಷಿಯಾಗಿಸಿದ್ದರೆ, ಅರುಣ್ ಕುಮಾರ್ ಕೆ.ಕೆ. ಯವರ ಕವನ “ನೀರಿನಲ್ಲಿ ಅಲೆಯ ಉಂಗುರ” ಇದೇ ಹೆಸರಿನ ಜನಪ್ರಿಯ ಚಿತ್ರಗೀತೆಯ ಪ್ರಭಾವದಿಂದ ಬರೆದಿದ್ದಾಗಿದೆ. “ನಾನಿನ್ನು ಕವನ ಬರೆಯೋಲ್ಲ...” ಎನ್ನುವ ಮಹೇಶ್ ಮೂರ್ತಿಯವರ ಕವನವು ಮುನ್ನುಡಿಯಲ್ಲಿ ಕವಿರಾಜರು ಹೇಳಿರುವಂತೆ ಬಹುತೇಕ ಕವಿತೆಗಳ ದ್ವಂದ್ವವನ್ನು ಪ್ರತಿನಿಧಿಸುತ್ತಾ ಲಘುಧಾಟಿಯಲ್ಲಿ ಭಗ್ನ ಪ್ರೇಮದ ಸಮಾಧಿ ಕೆದಕಿ ವಿಷಾದ ಉಕ್ಕಿಸುತ್ತದೆ. ಸ್ವಲ್ಪ ಗದ್ಯದಂತೆಯೇ ಭಾಸವಾಗುವ ವೆಂಕಟೇಶ್ ಹೆಗಡೆಯವರ “ನನ್ನ ಪ್ರೀತಿಯ ಹುಡುಗಿ” ಕವನದ ಕೊನೆಯ ಸಾಲುಗಳು “ಕವಿತೆ ಹುಟ್ಟುವುದು ಪ್ರೀತಿ ಮೊಳೆಯುವುದು / ಒಂದೇ ಜಾಗದಲ್ಲಿ ಎದೆಯ ಗೂಡಿನ ಮೌನದಲ್ಲಿ” ಎಂಬ ಅದ್ಬುತವಾದ ಸಾಲುಗಳಿಂದ ಇಷ್ಟವಾಗುತ್ತದೆ. ಪ್ರದೀಪ್ ರಾವ್ ರವರ ಅನೇಕ ಪ್ರೇಮ ಕವನಗಳಲ್ಲಿ “ನದಿ-ದಡ” ತನ್ನ ನವಿರುತನದಿಂದ ಗಮನ ಸೆಳೆಯುತ್ತದೆ. ದಡವನ್ನು ಬಿಟ್ಟು ಹರಿದು ಹೋದ ನದಿ, ಮೋಡವಾಗಿ, ಮಳೆಯಾಗಿ ಮತ್ತೆ ದಡಕ್ಕೆ ಬರುವ ಕವನದ ಆಶಯ, ತೊರೆದು ಹೋದ ಗೆಳತಿ ಮತ್ತೆ ಬರುತ್ತಾಳೆ ಎಂಬ ಆಶಾವಾದದಿಂದ ಆಪ್ತವಾಗುತ್ತದೆ. ಚೇತನ್ ಕುಮಾರ್ ರವರ “ಮಳೆಗೊಂದು ಕೊಡೆ ತೊಡಿಸಿ” ಪ್ರೀತಿಯ ತುಂಟಾಟವನ್ನು ಹೇಳಿದರೆ, ಕೊನೆಯಲ್ಲಿ ಬರುವ ಸಿಂಧುರವರ ಕವನಗಳು ಸ್ವಗತದ ಧಾಟಿಯಲ್ಲಿದ್ದು, ಪ್ರೀತಿಯ ಸಾರ್ಥಕತೆಯನ್ನು ಹೇಳಲು ಪ್ರಯತ್ನಿಸಿವೆ. ಪ್ರೀತಿ ಕೊಡುವ ಸಾಂತ್ವನವೂ ಇವುಗಳಲ್ಲಿವೆ, ಜೊತೆಗೆ ಸೋತಾಗ ಸ್ವಾನ್ವೇಷಣೆಗೂ ಹೊರಡುತ್ತಾರೆ.
ಸಂಕಲನದಲ್ಲಿ ಬರಿ ಪ್ರೀತಿಪ್ರೇಮಕ್ಕಷ್ಟೇ ಸೀಮಿತವಾಗದೆ ಸಮಕಾಲೀನ ಘಟನೆಗಳಿಗೆ ಸ್ಪಂದಿಸಿರುವ ಅನೇಕ ಕವಿತೆಗಳಿವೆ. ಮತ್ತು ಅವುಗಳಲ್ಲಿ ಕೆಲವು ಯುಗಪುರುಷನ ನೀರಿಕ್ಷೆಯಲ್ಲಿವೆ. ಭರತ್ ಆರ್ ಭಟ್ ರ ಕವನ “ಅವತಾರ!” ಕವನವಂತೂ ಎಲ್ಲಾ ಬಗೆಯ ಮಾನವರನ್ನೂ ತರಾಟೆಗೆ ತೆಗೆದುಕೊಂಡಿದೆ. ಸ್ವಾಮೀಜಿಗಳನ್ನೂ ಬಿಟ್ಟಿಲ್ಲವೆಂಬುದಕ್ಕೆ ಈ ಕವನದ “ಸ್ವಾಮಿಗಳ ಮನಸಿನಲ್ಲೂ / ಮಾಸಿದ ಮಾತುಗಳಿವೆ” ಎಂಬ ಸಾಲುಗಳು ಕವನದ ತೀವ್ರತೆಯನ್ನು ಹೆಚ್ಚಿಸಿವೆ. ಇದೇ ಕವನದ “ಇರುವವರೆಲ್ಲ ದುಷ್ಟರಾದರೂ / ಕಾಲವೇ ಕೆಟ್ಟದೆಂದು ದೂರಲಾಗಿದೆ” ಎಂಬ ಸಾಲುಗಳು ಇಂದಿನ ಮನುಷ್ಯನ ದುರ್ಬುದ್ಧಿಯನ್ನು ಎತ್ತಿ ಹಿಡಿದು, ದುಷ್ಟಸಂಹಾರಕ್ಕೆ ಯುಗಪುರುಷನು ಬರಲಿ ಎಂದು ಧೇನಿಸುತ್ತಿವೆ. ಪ್ರದೀಪ್ ರಾವ್ ರವರ “ಒಬಾಮಾಯಣ” ಪುರಾಣವನ್ನು ವರ್ತಮಾನಕ್ಕೆ ಸಮೀಕರಿಸುವ ಪ್ರಯತ್ನದಲ್ಲಿ ಸಫಲವಾಗಿದೆ. ಇಲ್ಲಿ ಒಸಮಾಸುರನ ಸಂಹಾರಕ್ಕೆ ಒಬಾಮ ರಾಮನಾಗಿದ್ದಾನೆ. “ತ್ರೇತಾಯುಗದಲ್ಲಿ ಸೀತಾಪಹರಣ / ಕಲಿಯುಗವಿನ್ನೂ ಕೀಳು / ವಿಮಾನದ್ದೇ ಅಪಹರಣ / ಸಂಭವಾಮಿ ಯುಗೇ ಯುಗೇ” ಎನ್ನುವ ಸಾಲುಗಳೊಂದಿಗೆ ಗಮನಸೆಳೆಯುವುದರ ಮೂಲಕ ಯುಗಪುರಷನ ಧ್ಯಾನದಲ್ಲಿದೆ. ಮಾನವನ ಜೀವನ ನಶ್ವರ ಎಂದು ಹೇಳುವ ವೆಂಕಟೇಶ್ ಹೆಗಡೆಯವರ “ಬುಗುರಿ” ಕವನವು ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದಲ್ಲಿರುವ “ತಿರು ತಿರುಗಿ ತಿರುಗುತ್ತೆ ಬುಗುರಿ ತಾನೇ ಸೋತು...” ಎನ್ನುವ ಸಾಲುಗಳನ್ನು ನೆನಪಿಸುವುದರ ಮೂಲಕ ಇಂದು ಮನುಷ್ಯ ಹಣ ಅಂತಸ್ತು ಎಂದು ಸಾಯುತ್ತಾನೆ ಎಂದು ಹೇಳುತ್ತವೆ. ಈ ಸಂತಾನವು ಮುಂದುವರೆಯುವುದನ್ನೂ ಅವರು ಕವನದಲ್ಲಿ ಸೂಚಿಸಿದ್ದಾರೆ.
ಇಲ್ಲಿನ ಕೆಲವು ಕವನಗಳು ಬಾಲ್ಯದ ನೆನಪುಗಳನ್ನು ಬಿಚ್ಚಿಡುವುದರ ಮೂಲಕ ಓದುಗರನ್ನು ಬೆಚ್ಚಗಾಗಿಸುತ್ತವೆ. “ಪುಟ್ಟ” ಎಂಬ ಅರುಣ್ ಕುಮಾರ್ ಕೆ.ಕೆ.ಯವರ ಕವನ ಜೆ.ಪಿ.ರಾಜರತ್ನಂರವರ ರತ್ನನ ಪದಗಳ ಧಾಟಿಯಲ್ಲಿ ಕಳೆದುಹೋದ ಬಾಲ್ಯದ ಹುಡುಕಾಟದಲ್ಲಿದ್ದರೆ, ಕವನದ ಹೊಸಸಾಧ್ಯತೆಗಳನ್ನು ತೆರೆದಿಟ್ಟಿರುವ ಅನುಪಮಾ ಹೆಗಡೆಯವರ “ಜಾಣ ಕುರುಡು” ಕವನವು ಬಾಲ್ಯವನ್ನು ಕನ್ನಡದಲ್ಲಿ ಹೇಳಿ, ನಂತರದ ಯೌವ್ವನದ ಉದ್ಯೋಗದ ದಿನಗಳನ್ನು ಇಂಗ್ಲೀಷ್ ಬೆರೆತ ಕನ್ನಡದಲ್ಲಿ ಹೇಳುವ ಮೂಲಕ ಇಂಗ್ಲೀಷ್ ನ ಅರಿವಿಲ್ಲದ ಬಾಲ್ಯ ಮತ್ತು ಇಂಗ್ಲೀಷ್ ಅನಿವಾರ್ಯವಾದ ದಿನಗಳನ್ನು ಸೊಗಸಾಗಿ ಬಿಚ್ಚಿಟ್ಟು ಓದುಗನನ್ನು ಬೆರಗಾಗಿಸುತ್ತಾರೆ. ಇಲ್ಲಿ ಎಸಿ ರೂಮಿನಲ್ಲಿ ಕಾಫೀ ಕುಡಿದರೂ ಆಯಿಯ “ಚಾ” ಕಾಡುತ್ತದೆ. ಜಾತಿಮತಗಳನ್ನು ಮರೆತು ಬೆರೆತ ಬಾಲ್ಯವನ್ನು ನೆನೆಯುವ ಅಶೋಕ್ ವಿ ಶೆಟ್ಟಿ” ಜಾತಿಮತ ಭೇದವಿಲ್ಲದ ಬಾಲ್ಯ ಚಂದವೆನ್ನುತ್ತಾರೆ.
ಈ ಕವನ ಸಂಕಲನಕ್ಕೆ ಗರಿಯಿಟ್ಟಂತೆ ಮಂಜುನಾಥ ಕೊಳ್ಳೆಗಾಲರವರ ಕವನಗಳಿವೆ. ಅಲ್ಲಲ್ಲಿ ರೂಪಾರವರ ಕವನಗಳು, ಅನುಪಮ ಹೆಗಡೆಯವರ ಕವನಗಳು ಮಿನುಗಿದ್ದು, ಈ ಮೂವರೇ ಸಂಕಲನದ ಆಯ್ಕೆಗಾರರಾಗಿರುವುದರಿಂದ (ನಾನಿನ್ನೂ ಕವನ ಕಟ್ಟುವಿಕೆಯ ವಿದ್ಯಾರ್ಥಿಯಾಗಿರುವುದರಿಂದ) ಇವರುಗಳ ಕವನಗಳ ಬಗ್ಗೆ ಏನನ್ನೂ ಹೇಳಲು ಹೋಗಿಲ್ಲ. ಅರ್ಥಪೂರ್ಣವಾದ ಮುನ್ನುಡಿಯೊಂದಿಗಿರುವ “ಭಾವಸಿಂಚನ”ವು ತಮ್ಮ ಮೊದಲ ಮಾತುಗಳಲ್ಲಿ ಅನುಪಮಾ ಹೆಗಡೆಯವರು ಹೇಳಿರುವಂತೆ ಶಾಲಾ ವಾರ್ಷಿಕೋತ್ಸವದಲ್ಲಿ ಎಲ್.ಕೆ.ಜಿ ಮಕ್ಕಳಿಂದ ಹಿಡಿದು ೧೦ನೇ ತರಗತಿಯ ಮಕ್ಕಳವರೆಗೆ ಎಲ್ಲರ ಕಾರ್ಯಕ್ರಮಗಳೂ ಇರುವಂತೆ ಇಲ್ಲಿನ ಕವನಗಳೂ ಇದ್ದು ಮನತಣಿಸುತ್ತವೆ. ದಯಮಾಡಿ ಮೂವರು ಆಯ್ಕೆಗಾರರೂ ಪಾಸಾದ ಹೈಸ್ಕೂಲ್ ವಿದ್ಯಾರ್ಥಿಗಳು ಮತ್ತೆ ಮರಳಿ ತಮ್ಮ ಶಾಲೆಯ ಹೊಸ ವಿದ್ಯಾರ್ಥಿಗಳೊಂದಿಗೆ ಬೆರೆತು ಮಾರ್ಗದರ್ಶಕರಾಗಿದ್ದಾರೆ ಎಂದು ಭಾವಿಸಲಿ!
ರೂಪರವರು ಬೆನ್ನುಡಿಯಲ್ಲಿ ಹೇಳಿರುವಂತೆ ಜಾತ್ಯಾತೀತವಾಗಿ ಬೆಳೆದ “3k” ಅಂತರ್ಜಾಲ ಸಮುದಾಯ ತನ್ಮೂಲಕ ಮತ್ತಷ್ಟು ಪ್ರತಿಭೆಗಳನ್ನು ಬೆಳಕಿಗೆ ತರಲಿ, ನಿಮ್ಮೆಲ್ಲರ ಆಶಯ: “ಈ ಸಮುದಾಯ ಕನ್ನಡ ಪ್ರಿಯರಿಗೆ ಒಂದು ವೇದಿಕೆಯಾಗಲಿ” ಎಂಬುದು ಮತ್ತು ನಿಮ್ಮೆಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸುವ ಮೂಲಕ, ಪುಸ್ತಕ ಕಳುಹಿಸಿದ ಗೆಳೆಯ ಪ್ರದೀಪ್ ಗೆ ಧನ್ಯವಾದಗಳನ್ನು ಹೇಳುತ್ತಾ ಮತ್ತು ಈ ಕವನ ಸಂಕಲನದಲ್ಲಿ ನನಗೆ ಮೆಚ್ಚುಗೆಯಾದ ಭರತ್ ಆರ್. ಭಟ್ ರ ಕವನದ ಸಾಲುಗಳಾದ, “ಗಂಧರ್ವರಾಗಬೇಕಿಲ್ಲ.../ ಬುದ್ಧರಾಗಬೇಕಿಲ್ಲ / ಗಾಂಚಾಲಿಯ ಬಿಟ್ಟು / ಜೀವನಕ್ಕೆ ಬದ್ಧರಾಗಿರೋಣ” ಉಲ್ಲೇಖಿಸುತ್ತಾ ನನ್ನ ಅಭಿಪ್ರಾಯ (ದಯಮಾಡಿ ವಿಮರ್ಶೆಯೆನ್ನಬೇಡಿ) ಕ್ಕೊಂದು ಚುಕ್ಕಿಯಿಡುತ್ತೇನೆ.
ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.
ಗುಬ್ಬಚ್ಚಿ ಸರ್,
ಪ್ರತ್ಯುತ್ತರಅಳಿಸಿಕ್ಷಮಿಸಿ, ನೀವು ವಿಮರ್ಶೆ ಎನ್ನಬೇಡಿ ಎಂದರೂ ನಾನು ಹೇಳುತಿದ್ದೇನೆ. ನಮ್ಮ 'ಭಾವ ಸಿಂಚನ' ವನ್ನು ಇಷ್ಟೊಂದು ಸುಂದರವಾಗಿ ಯಾರು ವಿಮರ್ಶಿಸಿಲ್ಲ ಎನ್ನುವುದು ನನ್ನ ಅಭಿಪ್ರಾಯ....ಭಾವ ಸಿಂಚನ ದ ಬಗ್ಗೆ ನಿಮ್ಮ ಅಭಿಪ್ರಾಯ ಕೇಳಿ ಮನಸ್ಸು ಮತ್ತಷ್ಟು ಮುದಗೊಂಡಿದೆ. ನಿಮ್ಮ ಪ್ರೀತಿ, ವಿಶ್ವಾಸ, ಬೆಂಬಲ ಇದೇ ರೀತಿ ಮುಂದುವರಿಯಲಿ. '3k' ಮೂಲಕ 'ಕವಿಗಳಲ್ಲದವರ ಕವನಗಳನ್ನು' ಪ್ರೋತ್ಸಾಹಿಸಿ ಅದಕ್ಕೆ ಒಂದು ರೂಪ ಕೊಡಲು ಬಯಸುತ್ತಿರುವ ನಮ್ಮೆಲ್ಲರ ಪ್ರಯತ್ನ ನಿಮ್ಮಂತವರ ಮಾರ್ಗ ದರ್ಶನದಲ್ಲಿ ಹೊಸ ರೂಪ ಪಡೆಯಲಿ ಎಂದು ಆಶಿಸುತ್ತೇನೆ. ಎಲ್ಲಾ ಕವನಗಳನ್ನು ಓದಿ ವಿಮರ್ಶಿಸಿದ ನಿಮಗೆ '3k' ಯ ಪರವಾಗಿ ಹಾರ್ದಿಕ ಧನ್ಯವಾದಗಳು....
ಸತೀಶ್ ಸರ್,
ಪ್ರತ್ಯುತ್ತರಅಳಿಸಿನಮಸ್ತೆ!
ನಿಮ್ಮ ಪ್ರೋತ್ಸಾಹ ಹಾಗು ಹಾರೈಕೆ ತುಂಬಿದ ಅಭಿಪ್ರಾಯ / ಅನಿಸಿಕೆ / ಪ್ರತಿಯೊಂದು ಮಾತು ನಮಗೆ ಆಶೀರ್ವಚನವೆ...ನಿಮ್ಮ ಪ್ರತಿಕ್ರಿಯೆ ನಮಗೆ ಇನ್ನಷ್ಟು ಹುರುಪು ತುಂಬಿದೆ... ನಿಮ್ಮ ಮಾತುಗಳು,- ನಮ್ಮ ಪಯಣ ಸರಿಯಾದ ದಿಟ್ಟಿನಲ್ಲಿ ನಡೆದಿದೆ ಅನ್ನುವ ಒಂದು ತೃಪ್ತಿ ಕೊಡುವಂತಿದೆ..
ನಿಮ್ಮ 3K ಮೇಲಿನ ಪ್ರೀತಿ ಹೀಗೆ ಇರಲಿ...
ಇನ್ನಷ್ಟು ರೀತಿಯಲ್ಲಿ ಕನ್ನಡ ಮನಗಳನ್ನು ತಲುಪುವ ಪ್ರಯತ್ನ ನಮ್ಮದು....
ತುಂಬು ಹೃದಯದ ಧನ್ಯವಾದಗಳು ಸರ್,
ರೂಪ ಸತೀಶ್
ಸತೀಶ್ ಸರ್,
ಪ್ರತ್ಯುತ್ತರಅಳಿಸಿನಮಸ್ತೆ!
ನಿಮ್ಮ ಪ್ರೋತ್ಸಾಹ ಹಾಗು ಹಾರೈಕೆ ತುಂಬಿದ ಅಭಿಪ್ರಾಯ / ಅನಿಸಿಕೆ / ಪ್ರತಿಯೊಂದು ಮಾತು ನಮಗೆ ಆಶೀರ್ವಚನವೆ...ನಿಮ್ಮ ಪ್ರತಿಕ್ರಿಯೆ ನಮಗೆ ಇನ್ನಷ್ಟು ಹುರುಪು ತುಂಬಿದೆ... ನಿಮ್ಮ ಮಾತುಗಳು,- ನಮ್ಮ ಪಯಣ ಸರಿಯಾದ ದಿಟ್ಟಿನಲ್ಲಿ ನಡೆದಿದೆ ಅನ್ನುವ ಒಂದು ತೃಪ್ತಿ ಕೊಡುವಂತಿದೆ..
ನಿಮ್ಮ 3K ಮೇಲಿನ ಪ್ರೀತಿ ಹೀಗೆ ಇರಲಿ...
ಇನ್ನಷ್ಟು ರೀತಿಯಲ್ಲಿ ಕನ್ನಡ ಮನಗಳನ್ನು ತಲುಪುವ ಪ್ರಯತ್ನ ನಮ್ಮದು....
ತುಂಬು ಹೃದಯದ ಧನ್ಯವಾದಗಳು ಸರ್,
ರೂಪ ಸತೀಶ್
ಗಿರೆಡ್ಡಿ ಗೋವಿಂದ ರಾಜು ನೆನಪಾದರು ಸತೀಶ್....
ಪ್ರತ್ಯುತ್ತರಅಳಿಸಿತುಂಬಾ ತುಲನಾತ್ಮಕ ವಿಮರ್ಶೆ...
ಇಷ್ಟವಾಯಿತು...
ಸರ್,
ಪ್ರತ್ಯುತ್ತರಅಳಿಸಿಪುಸ್ತಕವನ್ನು ನನಗೂ ಕೊಡಿ...ನಾನು ಓದುವ ಕುತೂಹಲದಲ್ಲಿದ್ದೇನೆ..