“ಸಾರ್ ಈ ೩೦ನೇ ತಾರೀಖು ಫ್ರೀ ಇರ್ತೀರಾ” ನಾನು ವಿನಯದಿಂದ ಕೇಳಿದೆ. “ಈ ಮೂವತ್ತಾ...? ಇರ್ತೀನಿ” ಎಂದು ಯೋಚಿಸಿ ನುಡಿದ ನಮ್ಮೂರ ಇಂಗ್ಲಿಷ್ ಮೇಷ್ಟ್ರು, ಮುಂದುವರೆಯುತ್ತಾ, “ಆದರೆ ಫೆಬ್ರವರಿ ೪, ೫, ೬ ಇರಲ್ಲ” ಎಂದರು. “ಹೌದಾ ಸಾರ್. ಯಾಕ್ ಸಾರ್” ಎಂದೆ. “ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗ್ತಾ ಇದ್ದೇನೆ” ಎಂದು ಬಹಳ ಖುಷಿಯಿಂದ ಹೇಳಿದರು. ಅವರ ಕನ್ನಡ ಪ್ರೀತಿಯನ್ನು ಮನಸಾರೆ ಒಪ್ಪಿದ ನಾನು, “ನಾನು ಬರ್ತೀದೀನಿ ಸಾರ್. ಈ ವಾರ ನನ್ನ ಕವನ ಸಂಕಲನ ಬಿಡುಗಡೆಯಾಗುತ್ತೆ. ತಗೊಂಡು ನಾನೂ ಹೋಗ್ತೀನಿ. ನಿಮ್ಮನ್ನ ನನ್ನ ಕಾರ್ಯಕ್ರಮಕ್ಕೆ ಕರೆಯೋಣ ಅಂತಾನೆ ಬಂದೆ ಸಾರ್” ಎಂದೆ. “ಹೌದಾ...!? ಆದರೆ ಬರ್ತೀನಿ... ನಾನು ನನ್ನ ಪುಸ್ತಕ “ಕನ್ನಡದ ಮೂಲಕ ಇಂಗ್ಲೀಷ್ ಕಲಿಯಿರಿ. ೧೩ನೇ ಪ್ರಿಂಟ್ ತಗೊಂಡು ಹೋಗ್ತಿದೀನಿ” ಎಂದು ಮತ್ತಷ್ಟು ಖುಷಿಯಿಂದ ನುಡಿದರು. ಅಷ್ಟರಲ್ಲಿ ಇಂಟರ್ ಸಿಟಿ ರೈಲು ಕೂಗಿತು. ಜೈ ಹೋ ಕನ್ನಡ! - ಗುಬ್ಬಚ್ಚಿ ಸತೀಶ್, ಗುಬ್ಬಿ. (ಬ್ರೇಕಿಂಗ್ ನ್ಯೂಸ್: ಆತ್ಮೀಯರೇ ನನ್ನ ಮೊದಲ ಪುಸ್ತಕ “ಮಳೆಯಾಗು ನೀ...” ಕವನ ಸಂಕಲನ ಇದೇ ಭಾನುವಾರ ತುಮಕೂರಿನಲ್ಲಿ. ಹೆಚ್ಚಿನ ವಿವರಗಳನ್ನು ಹಲವು ಕಾರಣಗಳಿಂದ ಇದೀಗ ನೀಡಲಾಗುತ್ತಿಲ್ಲ ಅದಕ್ಕಾಗಿ ವಿಷಾದಿಸುತ್ತೇನೆ. ಹೆಚ್ಚಿನ ಮಾಹಿತಿಗೆ ನಿಮ್ಮ ಈ ಮೈಲ್, ನನ್ನ ಬ್ಲಾಗ್ ನೋಡುತ್ತಿರಿ)