ಪೋಸ್ಟ್‌ಗಳು

ಜೂನ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಉತ್ತೇಜನ (Fueled)

ಉತ್ತೇಜನ ಇಂಗ್ಲೀಷ್‍ ಮೂಲ : ಮಾರ್ಸಿ ಹ್ಯಾನ್ಸ್ ಕನ್ನಡಕ್ಕೆ : ಗುಬ್ಬಚ್ಚಿ ಸತೀಶ್ ಉತ್ತೇಜನ: ಸಹಸ್ರಾರು ಮಾನವ ಕೈಗಳು ನಿರ್ಮಿತ ಅಗ್ನಿಯ ರೆಕ್ಕೆಗಳಿಂದ ಆಗಸವ ಸೀಳಿದ ರಾಕೆಟ್ಟು ಬಾನಿಗೊಂದು ಸುರಂಗ ತೋಡಿತು. ಎಲ್ಲರೂ ಕೇಕೆಹಾಕಿದರು. ಉತ್ತೇಜನ: ಸೃಷ್ಟಿಕರ್ತನ ಆಲೋಚನೆಯೊಂದರಿಂದಲೇ ಬೀಜಾಂಕುರವು ಸ್ವಯಂ ಪ್ರೇರಿತವಾಗಿ ಕತ್ತಲ ಗರ್ಭವನ್ನು ಭೇದಿಸಿ ಕಠಿಣ ಒಳಮಾಳಿಗೆಯನ್ನು ಛೇದಿಸಿ ತನ್ನಷ್ಟಕ್ಕೆ ತಾನು ಪಥಕ್ರಮಣ ಆರಂಭಿಸಿ ಆಕಾಶದತ್ತ ಮುಖಮಾಡಿತು. ಯಾರೊಬ್ಬರೂ ಒಂದು ಸಣ್ಣ ಚಪ್ಪಾಳೆಯನ್ನೂ ತಟ್ಟಲಿಲ್ಲ.

ನಿದ್ರಿತ

ಜರ್ಮನ್ ಮೂಲ : ಅರ್ನ್ಸ್ಟ್ ಜಂಡಿ ಇಂಗ್ಲೀಷ್‍ಗೆ : ಮೈಕೆಲ್ ಹಮ್‍ಬರ್ಗರ್ ಕನ್ನಡಕ್ಕೆ : ಗುಬ್ಬಚ್ಚಿ ಸತೀಶ್ ಅವನು ಮರವೊಂದರ ಬಳಿ ಬಂದ. ಆ ಮರದಡಿಯಲ್ಲಿ ತನ್ನ ಮನೆ ಕಟ್ಟಿದ. ಮರದಿಂದಲೇ ಕತ್ತರಿಸಿಕೊಂಡು ಕೋಲು ಮಾಡಿಕೊಂಡ. ಕೋಲು ಭರ್ಜಿಯಾಯಿತು. ಭರ್ಜಿ ಬಂದೂಕಾಯಿತು. ಬಂದೂಕು ಗನ್ನಾಯಿತು. ಗನ್ನು ಸಿಡಿಗುಂಡಾಯಿತು. ಸಿಡಿದ ಸಿಡಿಗುಂಡು ಅವನ ಮನೆಗೇ ಬಡಿಯಿತು ಮತ್ತು ಮರವನ್ನು ಬೇರುಸಮೇತ ಸೀಳಿಹಾಕಿತು. ಆಶ್ಚರ್ಯಗೊಂಡ ಅವನು ಅಲ್ಲಿಯೇ ನಿಂತಿದ್ದ. ಆದರವನು, ಎಚ್ಚರಗೊಳ್ಳಲೇ ಇಲ್ಲ. (ಈ ಕವನದಲ್ಲಿ, ಜರ್ಮನ್ ಕವಿ ಅರ್ನ್ಸ್ಟ್ ಜಂಡಿ (Ernst Jandi) ಮಾನವ ಸ್ವಾರ್ಥಿ ಎಂದು ಹೇಳುತ್ತಿದ್ದಾರೆ. ತಾನು ಪ್ರಕೃತಿಯನ್ನು ಉಪಯೋಗಿಸುಕೊಳ್ಳುವುದರ ಜೊತೆಗೆ ಹಾಳು ಮಾಡುವ ಮಾನವನ ಸ್ವಾರ್ಥ ಗುಣ ಇಲ್ಲಿ ಮೂಡಿಬಂದಿದೆ. ಕವಿ ಬೇಕೆಂತಲೇ “ನಿದ್ರಿತ” (Asleep) ಎಂಬ ಶೀರ್ಷಿಕೆಯನ್ನು ಕೊಟ್ಟಿರುತ್ತಾರೆ. ಮನುಷ್ಯ ಸದಾಕಾಲ ಕಣ್ಣು ತೆರೆದುಕೊಂಡೇ ನಿದ್ರಿತನಾಗಿರುತ್ತಾನೆ ಮತ್ತು ಕವನದ ಕೊನೆಯಲ್ಲಿ ಅವನು ಎಚ್ಚರಗೊಂಡು ಆಶ್ಚರ್ಯಪಟ್ಟರೂ ಅವನು ಮಾಡಿದ ಅವಾಂತರ ಅವನ ಅರಿವಿಗೆ ಬರುವುದಿಲ್ಲ ಎಂದು ಕವಿ ವಿಶಾದಿಸುತ್ತಾರೆ.)

ಬೇಕಾಗಿದ್ದಾರೆ.

ಅವಡುಗಚ್ಚಿ ಮೂಟೆಹೋರುವವರು ಒಳಗೇನಿದೆ ಎಂದು ಕೇಳದವರು ಅಂಟುಕೂತು ಕೀಬೋರ್ಡ್ ಕುಟ್ಟುವವರು ದಣಿಯದ ಕಂಪ್ಯೂಟರ್‍ಗೆ ದಣಿಯದವರು ಮಾತಿಗೆ ಮಾತು ಕೊಡದವರು ಮಾತು ಬಂದರೂ ಮೂಕವಾದವರು ಕಟ್ಟಿದ ಕೈ ಬಿಚ್ಚದವರು ಆಗಾಗ ತಲೆ ಬಾಗುವವರು ಕಿವಿಗಳಿಲ್ಲದೆ ಕವಿಗಳಾದವರು ಮಾತಿನಲ್ಲೇ ಕಥೆ ಕಟ್ಟುವವರು ಬಾಡಿಗೆಗೆ ಮಗುವ ಹೆರುವವರು ಸಂಬಂಧಗಳ ಹಂಗಿಲ್ಲದೆ ಬದುಕುವವರು ಸ್ವಾಭಿಮಾನದ ಹೆಸರು ಕೇಳದವರು ಪ್ರಜಾಪ್ರಭುತ್ವ ಮರೆತಂತೆ ನಟಿಸುವವರು ಅಘೋಷಿತ ದೊರೆಗಳಿಗೆ ಜೈ ಜೈ ಎನ್ನುವವರು ಸಾಧಕರಲ್ಲದಿದ್ದರೂ ಥೈ ಥೈ ಕುಣಿಯುವವರು ಮೇಲಿನ ಒಂದು ಅರ್ಹತೆ ನಿಮ್ಮದಾಗಿದ್ದರೆ ಕ್ಷಮಿಸಿ, ಅರ್ಜಿ ಹಾಕುವ ಅವಶ್ಯಕತೆಯಿಲ್ಲ.                                   - ಗುಬ್ಬಚ್ಚಿ ಸತೀಶ್.