ಶುಕ್ರವಾರ, ಮಾರ್ಚ್ 15, 2013

ಕಲರ್‌ಫುಲ್ “ಮೈನಾ”


   
       ಉಸೇನ್ ಬೋಲ್ಟ್ ನಂತೆ ನಾಯಕ ಓಡುತ್ತಾನೆ. ಇವನ ಓಟ ಓಲಂಪಿಕ್ಸ್ ನಲ್ಲಿ ಗೆಲ್ಲಲ್ಲಿಕ್ಕೆ ಅಲ್ಲ. ಅವನ ಪ್ರೇಯಸಿಯನ್ನು ಸೇರಲಿಕ್ಕೆ. ಆದರೂ ಅವನನ್ನು ಹಿಡಿಯಲು ಸಾಧ್ಯವೇ ಇಲ್ಲದಂತೆ ಓಡುವ ಪೋಲೀಸ್ ಇನ್ಸ್‍ಪೆಕ್ಟರ್ ಅವನನ್ನು ಬೆಂಬಿಡದೆ ಹಿಂಬಾಲಿಸುತ್ತಾನೆ. ಸಮುದ್ರದ ದಂಡೆಯಲ್ಲಿನ ಚೇಸಿಂಗ್ ಸಮುದ್ರದೊಳಕ್ಕೆ ಶಿಫ್ಟ್ ಆಗುತ್ತದೆ. ನಾಯಕ ಬೋಟ್‌ನಲ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿ ವಿಫಲನಾಗಿ ಸಮುದ್ರದೊಳಕ್ಕೆ ಬೀಳುತ್ತಾನೆ. ಅವನ ಹಿಂದೆಯೇ ಬೋಟ್‌ನಿಂದ ಸಮುದ್ರಕ್ಕೆ ಚಿಮ್ಮುವ ಇನ್ಸ್‍ಪೆಕ್ಟರ್ ನ ಪ್ರಯತ್ನ ಗ್ಯಾರಂಟಿ ವಿಫಲವಾಗುತ್ತದೆ ಎನ್ನುವಷ್ಟರಲ್ಲಿ ಒಬ್ಬನೇ ಎದ್ದ ಇನ್ಸ್‍ಪೆಕ್ಟರ್ ಕೈಯಲ್ಲಿ ಬೇಡಿಯಿಂದ ಬಂಧಿತನಾದ ಸೋತ ನಾಯಕನಿರುತ್ತಾನೆ. ಕಾಣದ ಕಡಲಿಗೆ... ಹಂಬಲಿಸಿದೇ ಮನ... ಕಾಣದ ಕಡಲಿಗೆ... ಹಂಬಲಿಸಿದೇ ಮನ... ಮನ... ಕಾಣಬಲ್ಲನೇ ಒಂದು ದಿನ, ಕಡಲನ್ನು ಕೂಡಬಲ್ಲನೇ ಒಂದು ದಿನ, ಕಾಣಬಲ್ಲನೇ ಒಂದು ದಿನ, ಕಡಲನ್ನು ಕೂಡಬಲ್ಲನೇ ಒಂದು ದಿನ ರಾಷ್ರಕವಿ ಜಿ.ಎಸ್. ಶಿವರುದ್ರಪ್ಪನವರ ಗೀತೆಯ ಮೊದಲ ಸಾಲುಗಳು ಸಿರಿಕಂಠದ ಸಿ.ಅಶ್ವಥ್ ಧ್ವನಿಯಲ್ಲಿ ನಿಮ್ಮ ಮನೆಯಲ್ಲಿಯೇ ಮೊಳಗಿದಂತೆ ಮೊಳಗತೊಡಗುತ್ತವೆ. ಪ್ರೇಕ್ಷಕರೆಲ್ಲಾ beginning ಚೆನ್ನಾಗಿದೆ ಎಂದು ಚಿತ್ರದಲ್ಲಿ ತನ್ಮಯರಾಗುತ್ತಾರೆ.
...
          ನಾಯಕಿ ಕಲರ್‌ಫುಲ್... ಎಂದು ಕೂಗುತ್ತಾಳೆ. ಲವ್ ಯು... ಎನ್ನುತ್ತಾಳೆ. ಅವಳು ಈ ಮಾತನ್ನು ಹೇಳುವುದು ಅವಳಷ್ಟೇ ಸುಂದರವಾದ ದೂದ್‌ಸಾಗರ್ ಜಲಪಾತಕ್ಕೆ. ನಾಯಕ ಬೆರಗಿನಿಂದ ಅವಳನ್ನೇ ನೋಡಿದಾಗ ಕಲರ್ ಫುಲ್ ಮತ್ತು ಲವ್ ಯು ಎರಡಕ್ಕೂ ಒಂದೇ ಉಚ್ಚಾರ ಎನ್ನುತ್ತಾಳೆ. ಅವಳ ತುಟಿಗಳನ್ನು ಚಲಿಸಿ ತೋರಿಸುತ್ತಾಳೆ. ನಾಯಕನೂ ಅವಳಂತೆಯೇ ಕಲರ್ ಫುಲ್, ಲವ್ ಯು ಎಂದು ರೋಮಾಂಚನಗೊಳ್ಳುತ್ತಾನೆ. ರೈಲಿನ ದಿನನಿತ್ಯದ ಪ್ರಯಾಣದಲ್ಲಿ ಹೀಗೆ ಸಾಗುವ ಅವರ ಮಾತುಕತೆ ಮುಂದುವರೆದು ನಾಯಕಿ ಅವನನ್ನು ಪ್ರೀತಿಸಲು ತೊಡಗುತ್ತಾಳೆ. ಒಮ್ಮೆ ಅವಳ ಬ್ಯಾಗನ್ನು ಕಳ್ಳನೊಬ್ಬ ಅಪಹರಿಸಿದಾಗ ಅಲ್ಲಿಯವೆರಗೂ ಕಾಲಿಲ್ಲದ ಭಿಕ್ಷುಕನಂತೆ ನಟಿಸುವ ನಾಯಕ ಚಂಗನೆ ರೈಲಿನಿಂದ ಜಿಗಿದು ಓಡಿ ಕಳ್ಳನಿಗೆ ಡಿಶುಂ ಡಿಶುಂ ಮಾಡಿ ಅವಳ ಬ್ಯಾಗನ್ನು ಮರಳಿ ತರುತ್ತಾನೆ. ಅವನು ರೈಲಿನಿಂದ ಚಂಗನೆ ಜಿಗಿಯುವವರೆಗೂ ಅವನಿಗೆ ನಿಜವಾಗಲೂ ಕಾಲಿಲ್ಲ ಎಂದು ನಂಬಿದ್ದ ನಾಯಕಿಗೆ ಬರಸಿಡಿಲು ಎರಗಿದಂತಾಗುತ್ತದೆ. ...   ಏಕೆಂದರೆ ಅವಳಿಗೂ ಕಾಲಿರುವುದಿಲ್ಲ! ತೆವಳಿಕೊಂಡೆ ರೈಲಿನಿಂದ ಇಳಿಯುವ ಆಕೆ ಫ್ಲಾಟ್‌ಫಾರ್ಮಿನ ಮೇಲೆ ಕುಸಿದು ಕೂಡುತ್ತಾಳೆ. ... ನೀನು ಸುಳ್ಳುಗಾರ ಅನ್ನುತ್ತಾಳೆ ಅವಳು. ಅವನು ಮೌನದಿಂದ ಅವಳನ್ನೇ ನೋಡುತ್ತಾನೆ. II Hate Youe U ಅನ್ನುತ್ತಾಳೆ. ನೀನು ಈಗಲೂ ನನ್ನನ್ನು ಪ್ರೀತಿಸುತ್ತೀಯಾ? ಎನ್ನುತ್ತಾಳೆ. ಅವನು ಮೌನ ಮುರಿದು, ನಾನು ನಿನ್ನ ಬಗ್ಗೆ ಎಲ್ಲಾ ತಿಳಿದೇ ನಿನ್ನನ್ನು ಪ್ರೀತಿಸುತ್ತೇನೆ ಎನ್ನುತ್ತಾನೆ ಅವನು. ... ಅವರಿಬ್ಬರೂ ಮಂಡಿಯೂರಿಯೇ ಆಲಂಗಿಸುತ್ತಾರೆ. ಅವಳನ್ನು ಅವನು ಅನಾಮತ್ತು ಎತ್ತಿಕೊಂಡು ತಿರುಗಿಸುತ್ತಾನೆ. ಅವರ ಆನಂದಕ್ಕೆ, ಪ್ರೀತಿಯ ಪರಮೋತ್ಕರ್ಷಕ್ಕೆ ಸಾಟಿಯೇ ಇಲ್ಲ. ಇವರ ಆನಂದಕ್ಕೆ ಬಾನು ಭೂಮಿ ಒಂದಾದಂತೆ ನೋಡುಗರ ಎದೆಯಲ್ಲಿ ಮಿಂಚಿನ ಸಂಚಾರವಾಗುತ್ತದೆ. ಮೈಮರೆತ ಮನಸ್ಸುಗಳು ವಾವ್!, ಪ್ರೀತಿ ಎಂದರೆ ಹೀಗಿರಬೇಕು ಎಂದು ಮನದಲ್ಲಿ ಅಂದುಕೊಂಡು ಆನಂದದಲ್ಲಿ ಮುಳುಗುತ್ತಾರೆ. ಕಡೆಗೂ ಒಂದು ಉತ್ತಮ ಕಥೆಯುಳ್ಳ ಕನ್ನಡ ಸಿನಿಮಾಗೆ ಬಂದೆವು ಅಂದುಕೊಳ್ಳತೊಡಗುತ್ತೇವೆ. ಅದು ಸಿನಿಮಾದ Middle. I mean Interval.
...
          ನಾಯಕನು ನಿರಪರಾಧಿ ಎಂಬುದು ಇನ್ಸ್‍ಪೆಕ್ಟರ್ ಗೆ ಗೊತ್ತಾಗಿದೆ. ಅವನು ಮಾಡಿರುವ ಅಪರಾಧವೂ ಪೂರ್ವ ನಿರ್ಧರಿತವಲ್ಲ ಎಂದು ಅರಿವಾಗಿದೆ. ಆದ್ದರಿಂದ ಬೇರೆಯಾದ ನಾಯಕ ನಾಯಕಿಯನ್ನು ಏನಾದರೂ ಮಾಡಿ ಸೇರಿಸಬೇಕೆಂಬ ಹಠ. ಆದರೆ ಅವನು ಅಸಹಾಯಕ. ಅಷ್ಟರಲ್ಲಿ ನಾಯಕಿಯನ್ನು  ಅನಾಥಶ್ರಮಕ್ಕೆ ಸೇರಿಸುವ ವಿಚಾರ ನಾಯಕನಿಗೆ ತಿಳಿಯುತ್ತದೆ. ಅವನು ತಪ್ಪಿಸಿಕೊಂಡು ಬಿಡುತ್ತಾನೆ. ಮತ್ತು ಇನ್ಸ್‍ಪೆಕ್ಟರ್ ಗೆ ಇದು ತಲೆನೋವಾಗುತ್ತದೆ. ನಾನು ಏನಾದರೂ ಮಾಡುತ್ತಿದ್ದೆ, ಇವನು ಯಡವಟ್ಟು ಮಾಡಿಕೊಂಡ ಎಂದು ಪರಿತಪ್ಪಿಸುತ್ತಾನೆ. ಅದು Climax.

           ನಾಯಕ ತನ್ನ ಗೆಳೆಯನ ಸಹಾಯದಿಂದ ನಾಯಕಿಯನ್ನು ತನ್ನ ಊರಿಗೆ ಕರೆದುಕೊಂಡು ಹೋಗುವ ಹುನ್ನಾರದಲ್ಲಿದ್ದಾಗ ರೈಲ್ವೇಸ್ಟೇಷನ್‌ನಲ್ಲಿ ಬಿಗಿ ಫೊಲೀಸ್ ಕಾವಲಿನಲ್ಲಿ ನಾಯಕನ ಬರುವಿಕೆಗೆ ನಾಯಕಿ ಚಡಪಡಿಸುತ್ತಿರುತ್ತಾಳೆ. ಜೊತೆಗೆ ಫೋಲಿಸರ ಕಣ್ತಪ್ಪಿಸಿ ನಾಯಕನನ್ನು ಕೊಲ್ಲುವ ಸಂಚಿನ ಹೋಮ್ ಮಿನಿಸ್ಟರ್ ಕಡೆಯ ವಿಲನ್‌ಗಳು. ಈ ವಿಲನ್‌ಗಳನ್ನು ಹಿಂಬಾಲಿಸುವ ಮತ್ತಷ್ಟು ಫೋಲಿಸರು. ಇವರೆಲ್ಲರ  ನಡುವೆ ನಾಯಕಿ ಹುಲಿಯನ್ನು ಸೆರೆಯಿಡಿಯಲು ಬೇಟೆಗಾರರು ಕಟ್ಟಿ ಹಾಕಿದ ಕುರಿಯಂತೆ ತೋರುತ್ತಾಳೆ. ಆಗ ಮತ್ತೊಮ್ಮೆ ಕಾಣದ ಕಡಲಿಗೆ.. ಹಂಬಲಿಸಿದೇ ಮನ.. ಗೀತೆ ಮುಂದುವರೆಯುತ್ತದೆ ... ಜಟಿಲ ಕಾನನದ ಕುಟಿಲ ಪಥಗಳಲ್ಲಿ ಹರಿವ ತೊರೆಯು ನಾನು, ಎಂದಿಗಾದರೂ ಎಂದಿಗಾದರೂ ಎಂದಿಗಾದರೂ ಕಾಣದ ಕಡಲನ್ನು ಸೇರಬಲ್ಲೆಯೇನು? ಸೇರಬಹುದೆ ನಾನು? ಕಡಲ ನೀಲಿಯೊಳು ಕರಗಬಹುದೇ ನಾನು?
ಅಯ್ಯೋ! ಒಂದೊಳ್ಳೆ ಹಾಡು ಮುಗಿಯಿತು ಅನ್ನವಷ್ಟರಲ್ಲಿ ಸಿನಿಮಾವು ಮುಗಿಯುವ ಹಂತಕ್ಕೆ ಬಂದಿರುತ್ತದೆ. ನಾಯಕ ಬರುತ್ತಾನೆ. ನಾಯಕಿಯ ಖುಷಿಗೆ ಎಲ್ಲೆಯಿಲ್ಲ. ನಾಯಕನದು ಸಂತೃಪ್ತಿಯ ಭಾವ. ಅವಳನ್ನು ತನ್ನ ಕಣ್ಣುಗಳಲ್ಲಿ ತುಂಬಿಸಿಕೊಳ್ಳುವ ನಾಯಕನ ಎದೆಯ ಕಡೆ ಗುರಿಯಾಗಿಸಿದ್ದ ವಿಲನ್‌ನ ಬಂದೂಕನ್ನು ಫೋಲಿಸರು ಚಾಕಚಕ್ಯೆತೆಯಿಂದ ಮೊದಲೇ ಕಸಿದುಕೊಳ್ಳುತ್ತಾರೆ. ಸದ್ಯ ಸುಖಾಂತ್ಯವಾಯಿತಲ್ಲ ಎಂದು ಅರೆಂಜ್ ಮ್ಯಾರೇಜ್ ಆಗಿದ್ದವರು ಅಂದುಕೊಂಡು, ಲವ್ ಮ್ಯಾರೇಜ್ ಆಗಬೇಕೆಂದು ಕೊಂಡವರು ನಿಜವಾದ ಪ್ರೀತಿಗೆ ಎಂದೆಂದಿಗೂ ಜಯ ಕಟ್ಟಿಟ್ಟ ಟಿಫಿನ್ ಬಾಕ್ಸ್ ಎಂದು ಕೊಳ್ಳುವಷ್ಟರಲ್ಲಿ ಇನ್ಸ್‍ಪೆಕ್ಟರ್ ತನ್ನ ಫೋಲಿಸ್ ಸಿಬ್ಬಂದಿ ನಾಯಕನ ಎದೆಗೆ ಬಂದೂಕನ್ನು ಗುರಿಯಾಗಿಸಿರುವುದನ್ನು ನೋಡಿ, ಡೊಂಟ್ ಫೈರ್... ಎಂದು ಅರಚಿದರೂ, ಫೋಲಿಸರ ಬಂದೂಕುಗಳಿಗೆ ಡೊಂಟ್ ಕೇಳಿಸುವುದಿಲ್ಲ. ಫೈರ್ ಆಗಿಯೇ ಬಿಡುತ್ತದೆ. ಅಶ್ವತ್ಥಾಮೋ ಹತಾ ಗತಃ ಎಂಬ ಮಹಾಭಾರತದ ಸಾಲು ನಿಮ್ಮ ಕಿವಿಯಲ್ಲಿ ರಿಂಗಣಿಸುತ್ತದೆ. ಅಲ್ಲಿಗೆ ಸಿನಿಮಾ The End.
          ...
          ಕನ್ನಡದ ಸಹೃದಯ ಪ್ರೇಕ್ಷಕರಿಗೆ ಅಂತ್ಯದಲ್ಲಿ ಫೈರ್ ಆಗುವ ಮುನ್ನವೇ ಸಿನಿಮಾ ಮುಗಿದಿರುತ್ತದೆ. ಫೈರ್ ಆದ ನಂತರ ಅಲ್ಲಿಯವರೆಗೂ ನಿಜವಾದ ನಾಯಕನಾಗಿದ್ದ ನಿರ್ದೇಶಕ ಒಂದೇ ಒಂದು ಕ್ಷಣದಲ್ಲಿ ವಿಲನ್ ಆಗಿ ಗೋಚರಿಸತೊಡಗುತ್ತಾನೆ. ಇಬ್ಬರನ್ನು ಕಡೆಗೆ ಅನವಶ್ಯಕವಾಗಿ ಸಾಯಿಸಬಾರದಿತ್ತು ಎಂದು ಗೊಣಗುತ್ತಾ ಪ್ರೇಕ್ಷಕ ಮಹಾಪ್ರಭು ನಿರ್ದೇಶಕನಿಗೆ ತಲೆಕೆಟ್ಟಿದೆ ಎಂದುಕೊಳ್ಳುತ್ತಾ ಥಿಯೇಟರ್‌ನಿಂದ ಹೊರಬೀಳುತ್ತಾನೆ. ಮನೆಗೆ ಬಂದು ಟಿವಿಯಲ್ಲಿ ನಿರ್ದೇಶಕ ಅದೇಕೆ ಹೀಗೆ ಮಾಡಿದ ಎಂದು ಹುಡುಕುತ್ತಾನೆ. ಯಾವುದೋ ಒಂದು ಛಾನೆಲ್ಲಿನಲ್ಲಿ ನಿರ್ದೇಶಕರು ನಗುತ್ತಾ ಮೈನಾ ಸೆಂಕೆಂಡ್ ಪಾರ್ಟ್ ಮಾಡ್ತೀವಿ ಎಂದು ಹಲ್ಲುಕಿರಿಯುತ್ತಾರೆ.

          ಇದು ಇತ್ತೀಚೆಗೆ ಬಿಡುಗಡೆಕೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ ಮೈನಾ ಚಿತ್ರ ಕುರಿತು ನನ್ನ ಅನಿಸಿಕೆ. ಚಿತ್ರಕ್ಕೆ ಕರ್ನಾಟಕ ಫೋಲಿಸ್‌ನಲ್ಲಿ ಟೈಗರ್ ಎಂದೇ ಖ್ಯಾತರಾದ ಎಸಿಪಿ ಅಶೋಕ್ ಕುಮಾರ್‌ರವರು ನಿರ್ದೇಶಕ ನಾಗಶೇಖರ್‌ರವರಲ್ಲಿ ಹಂಚಿಕೊಂಡ ನೈಜ ಕಥೆಯ ಬೆಂಬಲವಿದೆ. ಅದನ್ನು ಸಿನಿಮಾಕ್ಕೆ ಅಳವಡಿಸುವಲ್ಲಿ ನಿರ್ದೇಶಕರು ೯೯% ರಷ್ಟು ಯಶಸ್ವಿಯಾಗಿದ್ದಾರೆ (ಅನಗತ್ಯವಾಗಿ ದುರಂತ ಅಂತ್ಯ ಮಾಡಿ ಫುಲ್ ಮಾರ್ಕ್ಸ್ ಕಳೆದುಕೊಂಡಿದ್ದಾರೆ). ಚಿತ್ರಕಥೆ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳಲು ಸಫಲವಾಗಿದೆ. ರೋಮ್ಯಾಂಟಿಕ್ ಚಿತ್ರಕ್ಕೆ ಸಸ್ಪೆನ್ಸ್ ಥ್ರಿಲರ್‌ನ ಟಚ್ಚಿದೆ. ಅತಿಯೆನಿಸದ ಸಂಭಾಷಣೆಯಿದೆ. ಆ ದಿನಗಳು ನಂತರ ಚೇತನ್ ಮತ್ತೊಮ್ಮೆ ತಮ್ಮ ಪ್ರತಿಭೆ tOತೋರಿದ್ದಾರೆ. ಯುವ ಮನಸ್ಸುಗಳಿಗೆ ಕಚಗುಳಿಯಿಡುವ ಧೂದ್ ಸಾಗರ್ ಜಲಪಾತಕ್ಕೆ ಸರಿಸಮನಾದ ನಾಯಕಿ ನಿತ್ಯಾ ಮೆನನ್ ಇದ್ದಾಳೆ. ಹಸಿರು ಬಿಳುಪಿನ ಹಿನ್ನೆಲೆಯಲ್ಲಿ ಚಿತ್ರವನ್ನು ಸೆರೆಹಿಡಿದು ನಿಮ್ಮ ಮನ-ಮನೆಯ ಚಿತ್ರಪಟಗಳನ್ನಾಗಿಸುವ ಸತ್ಯಹೆಗಡೆ ಕ್ಯಾಮೆರವಿದೆ. ಹಿತವಾದ ಸಾಧುಕೋಕಿಲರವರ ಹಿನ್ನಲೆ ಸಂಗೀತವಿದೆ. ಜೆಸ್ಸಿಗಿಫ್ಟ್ ಸಂಗೀತದಲ್ಲಿ ಗುನುಗುವ ಹಾಡುಗಳಿವೆ. ತಮ್ಮ ನಿಲುವಲ್ಲೇ ನಗಿಸುವ ಸಾಧುಕೋಕಿಲ, ತಬಲಾ ನಾಣಿ, ಬುಲೆಟ್ ಪ್ರಕಾಶ್ ಇದ್ದಾರೆ. ಎಸಿಪಿಯಾಗಿ ತಮಿಳಿನ ಶರತ್ ಕುಮಾರ್ ಗಮನ ಸೆಳೆದರೆ, ವಿಲನ್‌ಗಳು ಚಿತ್ರಕ್ಕೆ ಅಗತ್ಯವಿದ್ದ ಕಡೆ ಮಾತ್ರ ಬಂದು ಹೋಗುವುದು ಸಹ್ಯವಾಗಿದೆ. ಪೋಷಕ ಪಾತ್ರವರ್ಗದಲ್ಲಿ ಬಂದುಹೋಗುವ ಹೆಸರಾಂತರ ಪಡೆಯೇ ಇದೆ. ಇವೆಲ್ಲದರ ಜೊತೆಗೆ ಕಡೆಗೆ ಅನಗತ್ಯವಾದರೂ ಸುಮನ್ ರಂಗನಾಥಳ ಬಳುಕುವ ಸೊಂಟವಿದೆ. ಆ ಐಟಂ ಹಾಡಿನವರೆಗೂ ಫೋಲಿಸ್ ಅಧಿಕಾರಿಯಾಗಿ ಗಮನ ಸೆಳೆಯುವ ಸುಮನ್ ಈ ಹಾಡಿನಲ್ಲಿ ತಮ್ಮ ಸೊಂಟ ಬಳುಕಿಸುತ್ತಾರೆ. ಪ್ರೇಮದ ಪೂಜಾರಿ ಎನ್ನುವ ರಿಮಿಕ್ಸ್ ಹಾಡಿಗೆ ಆನಂದಿಸುವ ಅನೇಕ ಹಿರಿಯ ನಟರ ಪಡೆಯಿದೆ.

          ಅರಮನೆ, ಸಂಜು ವೆಡ್ಸ್ ಗೀತಾ ಎಂಬ ದುರಂತ ಅಂತ್ಯವಾಗುವ ಸಿನಿಮಾಗಳ ಗುಂಗಿನಿಂದ ಇನ್ನೂ ಹೊರಬಂದಿರದಂತೆ ಕಾಣುವ ನಿರ್ದೇಶಕರು ಈ ಸಿನಿಮಾದಲ್ಲೂ ಅನಗತ್ಯವಾಗಿ ನಾಯಕ ನಾಯಕಿಯರಿಗೆ ಶೂಟ್ ಮಾಡಿಸುವುದರ ಮೂಲಕ ತಮ್ಮ ದುರಂತ ಸರಣಿಯನ್ನು ಮುಂದುವರೆಸಿದ್ದಾರೆ. ಆ ಶೂಟ್ ಔಟಿನ ಕಡೆಯ ಸೀನಿಗೂ ಮುಂಚೆ ನೀವು ಸಿನಿಮಾ ಮಂದಿರದಿಂದ ಹೊರಬಿದ್ದರೆ ನಿಮ್ಮ ಮನದಲ್ಲಿ ಈ ವರ್ಷದ ಒಂದು ಉತ್ತಮ ಚಿತ್ರ ದಾಖಲಾಗುತ್ತದೆ. ಕನ್ನಡ ಚಿತ್ರಪ್ರೇಮಿಗಳೇ, ಒಂದು ಅಪರೂಪದ ಪ್ರೀತಿಯ ನೈಜಕಥೆ ಸಿನಿಮಾವಾಗಿ ಮೂಡಿದೆ. ಮರೆಯದಿರಿ, ಮರೆತು ನಿರಾಶರಾಗದಿರಿ.

***





ಗುರುವಾರ, ಫೆಬ್ರವರಿ 14, 2013

ಅರೆಂಜ್ಡ್ ಲವ್

ಅರೆಂಜ್ಡ್ ಲವ್


ಪ್ರೀತಿಯೆಂಬ ಎರಡಕ್ಷರದಲ್ಲಿ.......

- ಚಂಪರಾಣಿ ಜಿ.ಸಿ



ಪ್ರೀತಿ ಎಂದಾಕ್ಷಣ ಎಲ್ಲರೂ ಯೋಚಿಸುವುದು ಹೆಣ್ಣು ಮತ್ತು ಗಂಡಿನ ನಡುವೆ ಹದಿ ಹರಯದಲ್ಲಿ ಉಂಟಾಗುವ ಪ್ರೀತಿಯನ್ನೇ. ಆದರೆ ಅದರಾಚೆಗೂ ಪ್ರೀತಿ ಎಲ್ಲೆಲ್ಲೂ ಇರುತ್ತದೆ. ನನ್ನ ಮಗಳು ತನ್ನ ಪುಟ್ಟ ಕೈಗಳಿಂದ ನನ್ನ ಕೆನ್ನೆ ಸವರಿ, ‘ನನ್ನ ಪ್ರೀತಿ ಅಮ್ಮ’ ಅಂದಾಗ, ಒಬ್ಬ ತಂದೆ ‘ನನ್ನ ಪ್ರೀತಿ ಪಾಪು’ ಎಂದಾಗ, ಒಬ್ಬ ಗೆಳತಿ ತನ್ನ ಆತ್ಮೀಯ ಗೆಳತಿಗೆ ‘ಪ್ರೀತಿಯ ಗೆಳತಿ’ ಅಂದಾಗ, ಒಬ್ಬ ಅಕ್ಕ ತನ್ನ ತಮ್ಮನಿಗೆ ‘ನನ್ನ ಪ್ರೀತಿ ತಮ್ಮ’ ಎಂದಾಗ, ಒಬ್ಬ ತಂಗಿ ತನ್ನ ಅಣ್ಣನಿಗೆ ‘ನನ್ನ ಪ್ರೀತಿ ಅಣ್ಣ’ ಎಂದಾಗ, ಅಲ್ಲೆಲ್ಲಾ ಪ್ರೀತಿ ಇದ್ದೇ ಇರುತ್ತದೆ.

ಆದರೆ ಜನ ಈ ಎಲ್ಲಾ ಪ್ರೀತಿಯನ್ನು ಮಮತೆ, ಮಮಕಾರ, ಸ್ನೇಹ ಎಂದು ಬೇರೆ ಬೇರೆ ಹೆಸರಿನಲ್ಲಿ ಕರೆದು ಅವು ಪ್ರೀತಿಯೇ ಅಲ್ಲವೆನ್ನುವಂತೆ ಪ್ರತಿಬಿಂಬಿಸುತ್ತಾರೆ. ಈ ಎಲ್ಲಾ ಸಂಬಂಧಗಳಲ್ಲೂ ಇರುವುದು ಅಪರಿಮಿತವಾದ ಪ್ರೀತಿಯಷ್ಟೇ. ಪ್ರೀತಿಯ ಹೆಸರು ಏನೇ ಇದ್ದರೂ ಅದು ಹೊರಹೊಮ್ಮುವ ಮತ್ತು ಒಂದು ಹೃದಯದಿಂದ ಮತ್ತೊಂದು ಹೃದಯಕ್ಕೆ ನೀಡುವ ನೆಮ್ಮದಿ, ಸಂತೋಷ ಇವುಗಳೆಲ್ಲಾ ಬಣ್ಣಿಸಲಸದಳ.

ಪ್ರೀತಿ ಬಯಸುವ ಪ್ರತಿಯೊಂದು ಹೃದಯಕ್ಕೂ ಪ್ರೀತಿ ದೊರೆತರೆ ಜಗತ್ತಿನಲ್ಲಿ ಯಾವುದೇ ರೀತಿಯ ಸಮಸ್ಯೆಗಳಿರುವುದಿಲ್ಲ. ಪ್ರೀತಿ ತುಂಬಿರುವ ಯಾವುದೇ ಹೃದಯವೂ ಕೆಟ್ಟದನ್ನು ಯೋಚಿಸುವುದಿಲ್ಲ. ಹೃದಯದ ತುಂಬ ಪ್ರೀತಿಯೇ ಇರುವಾಗ ಬೇರೆ ಯೋಚನೆಗಳಿಗೆ ಸ್ಥಳವೆಲ್ಲಿ? ಮನುಜಕುಲಕ್ಕೆ ಪ್ರೀತಿ ಯಾವಾಗಲೂ ಬೇಕು. ಎಲ್ಲರಲ್ಲೂ ಪ್ರೀತಿಯೊಂದಿದ್ದರೆ ಭೂಮಿ ಪ್ರಶಾಂತವಾಗಿರುತ್ತದೆ. ಪ್ರಭು ಏಸುಕ್ರಿಸ್ತರು ‘ನಿನ್ನ ನೆರೆಯವರನ್ನು ನಿನ್ನಂತೆಯೇ ಪ್ರೀತಿಸು’ ಎಂದು ಹೇಳುತ್ತಾರೆ. ಮನುಷ್ಯ ತನ್ನನ್ನು ತಾನು ಪ್ರೀತಿಸಿದಷ್ಟು ಬೇರೆ ಯಾರನ್ನೂ ಪ್ರೀತಿಸುವುದಿಲ್ಲವೆಂಬುದು ಜಗಜ್ಜಾಹೀರು. ಆದ್ದರಿಂದಲೇ ಅವರು ನಿನ್ನಂತೆಯೇ ಪರರನ್ನು ಪ್ರೀತಿಸು ಎಂದು ಹೇಳಿರುವುದು.

ಜಗತ್ತಿನಲ್ಲಿ ತಾಯಿ-ಮಗು ಪ್ರೀತಿ, ಸೋದರ ಪ್ರೀತಿ, ಗೆಳೆಯರ ಪ್ರೀತಿ, ಸಂಬಂಧಿಕರ ಪ್ರೀತಿ, ಎಂಥೆಂಥಾ ಪ್ರೀತಿ ಇದ್ದರೂ ಅವು ಹೆಚ್ಚು ಮಹತ್ವ ಹೊಂದುವುದಿಲ್ಲ. ಮಹತ್ವ ಪಡೆಯುವುದು, ಹೆಚ್ಚು ಚರ್ಚೆಗೊಳಗಾಗುವುದು ಯುವಜನರ ಪ್ರಣಯ, ಪ್ರೇಮ, ಪ್ರೀತಿ. ಆದರೆ ಈಗಿನ ಯುವ ಪೀಳಿಗೆಯ ಓಟವನ್ನು ನೋಡಿದರೆ ಪ್ರೀತಿ ತನ್ನ ಎಲ್ಲಾ ಮೌಲ್ಯಗಳನ್ನು ಕಳೆದುಕೊಂಡಿದೆ ಎಂದೆನಿಸುತ್ತದೆ. ಇವರೆಲ್ಲರಿಗೆ ಪ್ರೀತಿಯ ಮಹತ್ವ, ಅದರ ಅಗತ್ಯತೆ, ಅದರಿಂದ ಮನಸ್ಸಿಗೆ ಸಿಗುವ ನೆಮ್ಮದಿ, ಬಾಳಿಗೆ ಸಿಗುವ ಒಂದು ಗುರಿ ಮತ್ತು ಸರಿ ದಾರಿ ಯಾವುದೂ ಗೊತ್ತಿರುವುದಿಲ್ಲ. ದಿನ್ನಕ್ಕೊಂದು ಪ್ರೇಮ ಪ್ರಕರಣ. ವರ್ಷದಲ್ಲಿ ಏನಿಲ್ಲವೆಂದರೂ ಇಬ್ಬರು-ಮೂವರನ್ನು ಪ್ರೀತಿಸುವುದು ಅವರಿಂದ ಬೇರಾಗುವುದು. ಮತ್ತೆ ಅದೇ ಪುನರಾವರ್ತನೆ. ಈ ರೀತಿಯ ಸಂಬಂಧಗಳಲ್ಲಿ ಪ್ರೀತಿ ಇದೆ ಎಂದು ನಂಬುವುದಾದರೂ ಹೇಗೆ?

ಹಾಗಾದರೆ ಪ್ರೀತಿ ಈಗ ಜಗತ್ತಿನಲ್ಲಿ ಇಲ್ಲವೇ? ಇದೆ ಖಂಡಿತ ಇದೆ. ಆದರೆ ಮನುಷ್ಯ ಮನುಷ್ಯನನ್ನು ಪ್ರೀತಿಸುವ ಬದಲು ವಸ್ತುಗಳನ್ನು ಪ್ರೀತಿಸುತ್ತಾನೆ. ಮನಸ್ಸನ್ನು ಪ್ರೀತಿಸುವ ಬದಲು ‘ಮನಿ’ಯನ್ನು ಪ್ರೀತಿಸುತ್ತಾನೆ. ಹಾಗಾಗಿ ಎಲ್ಲೂ ನಿರ್ಮಲ ಪ್ರೀತಿ-ಪ್ರೇಮ ನಮಗೆ ಸಿಗುವುದಿಲ್ಲ. ಎಲ್ಲರೂ ಒಂದು ರೀತಿಯ ಕಂಫರ್ಟ್‌ಗಾಗಿ ಹಾತೊರೆಯುತ್ತಾರೆ. ನಿಜ ಪ್ರೀತಿ ಯಾರಿಗೂ ಬೇಡವಾಗಿದೆ. ಜೊತೆಗೆ ಪ್ರೀತಿಯು ಒಂದು ರೀತಿಯ ಅನುಕೂಲಕ್ಕೆ ತಕ್ಕಂತ ಅಂಶವಾಗಿದೆ. ಅದನ್ನೇ ನಾನು ಅರೇಂಜ್ಡ್ ಲವ್ ಎಂದು ಕರೆಯುತ್ತೇನೆ.

ಕಾಲೇಜಿನಲ್ಲಿ ಹುಡುಗ ಹುಡುಗಿ ಒಬ್ಬರನ್ನೊಬ್ಬರು ನೋಡುತ್ತಾರೆ. ಅವರಲ್ಲಿ ಪರಿಚಯ ಸಹ ಬೆಳೆಯುತ್ತದೆ. ಅವರಲ್ಲಿ ಸೆಳೆತವಿದ್ದರೂ ಇಬ್ಬರೂ ಕೆಲವು ದಿನಗಳು ಸುಮ್ಮನಿರುತ್ತಾರೆ. ಒಂದು ಸುಂದರವಾದ ಸುಸಂದರ್ಭದಲ್ಲಿ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಮತ್ತು ಅವರ ಮನೆಗಳಲ್ಲಿ ಒಪ್ಪಿಸಿ ಮದುವೆಯಾಗುತ್ತಾರೆ. ಈ ವಿಚಾರ ಸಾದಾ ಸೀದಾ ಎನಿಸಿದರೂ ಅದರ ಹಿಂದಿನ ಒಂದು ಮರ್ಮವನ್ನು ಹೇಳುತ್ತೇನೆ ಕೇಳಿ. ಪರಿಚಯವಾದ ಹುಡುಗ ಹುಡುಗಿ ಒಬ್ಬರಿಗೊಬ್ಬರು ತಿಳಿಯದಂತೆ ಅವರ ಹಿಂದಿನ ಇತಿಹಾಸವನ್ನು ಹುಡುಕುತ್ತಾರೆ. ಅವರು ಎಷ್ಟು ಜಾಣ್ಮೆಯಿಂದ ಈ ಕೆಲಸ ಮಾಡುತ್ತಾರೆಂದರೆ ಯಾರಿಗೂ ಅವರ ಬಗ್ಗೆ ಅನುಮಾನ ಬರುವುದಿಲ್ಲ. ಹುಡುಗ ಎಂಥ ಜಾತಿಯವನು ಎಂಬುದರಿಂದ ಹಿಡಿದು ಹುಡುಗಿಯ ಮನೆತನದವರು ಎಷ್ಟು ಶ್ರೀಮಂತರು ಎಂಬುವವರೆಗೂ ಎಲ್ಲವನ್ನೂ ಕೂಲಂಕುಶವಾಗಿ ತಿಳಿದುಕೊಂಡು ಎಲ್ಲಾ ಲೆಕ್ಕಾಚಾರಗಳನ್ನು ಕೂಡಿ, ಕಳೆದು, ಭಾಗಿಸಿ, ಗುಣಾಕಾರ ಹಾಕಿ ತಮಗೆ ಸರಿಹೊಂದುತ್ತದೆಯೇ? ಇಲ್ಲವೇ? ಎಂದೆಲ್ಲಾ ಯೋಚಿಸುತ್ತಾರೆ. ಸರಿಹೊಂದುವುದಿಲ್ಲವೆಂದಾದಲ್ಲಿ ಅವರ ಪರಿಚಯ ಕೇವಲ ಪರಿಚಯಕ್ಕೆ ನಿಂತು ಹೋಗುತ್ತದೆ. ಸರಿಹೊಂದುತ್ತದೆ ಎಂದು ತಿಳಿದ ನಂತರ ತಮ್ಮ ಪ್ರೇಮನಿವೇದನೆ ಮಾಡಿಕೊಳ್ಳುತ್ತಾರೆ.

ಹುಡುಗ ಒಳ್ಳೆಯ ಮನೆತನದವ, ಜೊತೆಗೆ ಒಂದೇ ಜಾತಿ, ಹುಡುಗಿಯ ಮನೆಯವರು ಇವರಿಗೆ ಸರಿಸಮಾನರು, ಮನೆಗಳಲ್ಲಿ ಹೇಳಿದರೂ ಅಡ್ಡಿ ಆತಂಕಗಳು ಬರುವುದಿಲ್ಲ. ಕಥೆ ಶುಭಂ ಆಗುತ್ತದೆ. ಆದರೆ ಇಂಥಹ ಪ್ರೀತಿಯನ್ನು ನಿಜವಾದ ಪ್ರೀತಿ ಎಂದು ಹೇಗೆ ಒಪ್ಪಿಕೊಳ್ಳುವುದು. ಇದನ್ನು ಅರೆಂಜ್ಡ್ ಲವ್ ಅನ್ನದೇ ಮತ್ತೇನು ಹೇಳಲು ಸಾಧ್ಯ?

ಹುಡುಗ ಹುಡುಗಿ ಒಂದೇ ಕಡೆ ಕೆಲಸ ಮಾಡುತ್ತಿರುತ್ತಾರೆ. ಇಬ್ಬರಿಗೂ ಉತ್ತಮ ಸಂಬಳ. ಹುಡುಗನಿಗೆ ಅಥವಾ ಹುಡುಗಿಗೆ ತನ್ನ ಸಹೋದ್ಯೋಗಿಯ ವೈಯಕ್ತಿಕ ವಿಚಾರಗಳು ತಿಳಿದ ನಂತರ ಕ್ರಮೇಣ ಒಬ್ಬರನ್ನೊಬ್ಬರು ಆಕರ್ಷಿಸಲು ಪ್ರಾರಂಭಿಸುತ್ತಾರೆ. ಆಕರ್ಷಣೆ ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಬದಲಾಗುತ್ತದೆ. ಪ್ರೀತಿಯಾದಮೇಲೆ ಇನ್ನೇನು ಮುಂದಿನ ಭವಿಷ್ಯದ ಪ್ಲಾನ್ ನಡೆಯುತ್ತದೆ. ಒಬ್ಬರಿಗೊಬ್ಬರು ನೇರವಾಗಿಯೇ ಎಲ್ಲಾ ವಿಚಾರಗಳನ್ನು ಮಾತನಾಡಿಕೊಳ್ಳುತ್ತಾರೆ. ನಾವಿಬ್ಬರೂ ಮದುವೆಯಾದರೆ ಉತ್ತಮವಾದ ಜೀವನ ನಡೆಸಬಹುದು ಎಂದು ಪ್ಲಾನ್ ಮಾಡಿಕೊಳ್ಳುತ್ತಾರೆ. ಇಬ್ಬರ ಮನೆಯಲ್ಲಿ ವಿಷಯ ತಿಳಿಸುತ್ತಾರೆ. ಅವರ ತಂದೆ-ತಾಯಿಯರು ಹುಡುಗ ಅಥವಾ ಹುಡುಗಿಯ ಜಾತಿ, ಕುಲ, ಗೋತ್ರ ಎಂದೆಲ್ಲಾ ಜಾಲಾಡಿ ಸರಿ ಹೊಂದಿದರೆ ಒಪ್ಪುತ್ತಾ ಇಲ್ಲವೇ ಒಪ್ಪುವುದಿಲ್ಲ. ಅವರೆಲ್ಲರೂ ಒಪ್ಪಲಿ ಬಿಡಲಿ ಹುಡುಗ ಹುಡುಗಿ ಮದುವೆಯಾಗುತ್ತಾರೆ. ಇದೂ ಕೂಡ ಅರೆಂಜ್ಡ್ ಲವ್ ತಾನೆ. ಇಲ್ಲಿ ಇಬ್ಬರಿಗೂ ಬೇಕಿರುವುದು ಅನುಕೂಲ, ಒಂದು ಕಂಫರ್ಟ್. ಅದು ಅವರಿಗೆ ದೊರಕುತ್ತದೆ. ಆದರೆ ಇಬ್ಬರಿಗೂ ಪ್ರೀತಿ ಬೇಕೆನಿಸಲಿಲ್ವೇ? ಅನಿಸುತ್ತದೆ. ಅನಿಸಿದಾಗ ವಿವಾಹ ವಿಚ್ಛೇದನ ಮರು ಮದುವೆ ನಡೆಯುತ್ತದೆ. ದೋಷ ಯಾರದ್ದು? ಎಲ್ಲಿ ತಪ್ಪಾಯ್ತು? ಎಲ್ಲಿ ಎಡೆವಿದೆವು? ಎಂದು ಇಬ್ಬರೂ ಯೋಚಿಸುವುದಿಲ್ಲ.

ಹುಡುಗ ಹುಡುಗಿ ಒಬ್ಬರನ್ನೊಬ್ಬರು ಪಂಚಪ್ರಾಣದಂತೆ ಪ್ರೀತಿಸಿಕೊಂಡಿದ್ದರು. ಅವರ ವಿಷಯ ಮನೆಯಲ್ಲಿ ಗೊತ್ತಾಗುವ ಮೊದಲೇ ಅವರಿಬ್ಬರಿಗೂ ಒಳ್ಳೆಯ ಸಂಬಂಧಗಳು ಬಂದವು. ಇಬ್ಬರೂ ತುಂಬಾ ಯೋಚಿಸಿದರು. ತುಂಬಾ ದಿನಗಳವರೆಗೆ ಅವರಲ್ಲಿ ಒಂದು ಸಂಘರ್ಷ ನಡೆಯುತ್ತದೆ. ಕೊನೆಗೆ ಒಂದು ದಿನ ಇಬ್ಬರೂ ಮದುವೆಯಾದರು! ಪ್ರೀತಿಸಿದವರನ್ನಲ್ಲ!! ಅವರಿಗೆ ಬಂದಿದ್ದ ಒಳ್ಳೆಯ ಸಂಬಂಧದ ಹುಡುಗ ಹುಡುಗಿಯೊಡನೆ ಅವರ ಮದುವೆಯಾಯಿತು. ಅವನು ಇವಳ ಮದುವೆಗೆ ಇವನು ಅವಳ ಮದುವೆ ಹೋಗಿ ಶುಭಕೋರಿ ಬರುತ್ತಾರೆ. ಇದೂ ಅರೆಂಜ್ಡ್ ಲವ್ ಅಲ್ಲವೇ? ಇದ್ದಷ್ಟು ದಿನ ಪ್ರೀತಿಸು ಮುಂದೆ ಗಾಳಿ ಬಂದಾಗ ತೂರಿಕೋ ಎಂಬಂಥ ಭಾವ ನಮ್ಮ ಕೆಲವು ಯುವಜನತೆಯಲ್ಲಿದೆ.

ಹುಡುಗ ತಮ್ಮ ಜಾತಿಯ ಸಮಾರಂಭದಲ್ಲಿ ಹುಡುಗಿಯನ್ನು ನೋಡುತ್ತಾನೆ. ಅವಳ ಪೂರ್ವಾಪರ ತಿಳಿದುಕೊಂಡು ಅವಳ ಹಿಂದೆ ಬಿದ್ದು. ತನ್ನ ಪ್ರೀತಿ ನಿವೇದಿಸಿ. ಅವಳನ್ನು ಒಪ್ಪಿಸುತ್ತಾನೆ. ಅವಳು ಸಹ ಹುಡುಗನ ಶ್ರೀಮಂತಿಕೆ, ಯೌವನ, ಅವನು ನೀಡುವ ಕಂಫರ್ಟ್ ಎಲ್ಲವನ್ನೂ ನೋಡಿ; ಸರಿ ಎಂದು ಒಪ್ಪುತ್ತಾಳೆ. ಹುಡುಗ ಹುಡುಗಿ ಒಪ್ಪಿದಮೇಲೆ ತಾನೇ ಬಂದು ಹುಡುಗಿಯ ಮನೆಯಲ್ಲಿ ಮದುವೆ ಪ್ರಸ್ತಾಪ ಮಾಡುತ್ತಾನೆ. ತನ್ನ ಎಲ್ಲಾ ವಿಷಯಗಳನ್ನು ತಿಳಿಸುತ್ತಾನೆ. ಹುಡುಗಿಯ ತಂದೆ ತಾಯಿ ಎಲ್ಲವನ್ನೂ ಮನನಮಾಡಿ ಒಪ್ಪಿಗೆ ಸೂಚಿಸುತ್ತಾರೆ. ಇವನು ಮನೆಯವರನ್ನೆಲ್ಲಾ ಒಪ್ಪಿಸಿ ಮದುವೆ ಮಾಡಿಕೊಳ್ಳುತ್ತಾನೆ. ಮನೆಯವರು ಎಲ್ಲಾ ಸರಿಹೊಂದುತ್ತದೆಂದು ಮದುವೆ ಮಾಡಿಕೊಡುತ್ತಾರೆ. ಇದು ಅರೆಂಜ್ಡ್ ಲವ್ ಅಲ್ಲವೇ?

ಇನ್ನೂ ಕೆಲವು ಸಂದರ್ಭಗಳಲ್ಲಿ ಹುಡುಗ ಹುಡುಗಿಯರು ಸಮ ಅಂತಸ್ತಿನವರಾಗಿದ್ದಾಗ. ಕೆಲವು ಪೋಷಕರು ಜಾತಿಯ ಗೋಜಿಗೆ ಹೋಗದೆ ಮಕ್ಕಳ ಪ್ರೀತಿಗೆ ಸಮ್ಮತಿ ಸೂಚಿಸಿ ಮದುವೆಯನ್ನು ಮಾಡುತ್ತಾರೆ. ಎಲ್ಲರೂ ಅವರ ದೊಡ್ಡಗುಣವನ್ನು ಹೊಗಳುವವರೇ ಆಗಿರುತ್ತಾರೆ. ಆದರೆ ಒಣ ಹೂರಣ ಯಾರಿಗೂ ತಿಳಿದಿರುವುದಿಲ್ಲ. ಇಂತಹ ಮದುವೆಗಳಲ್ಲಿ ನಡೆಯುವ ಲೇವಾ ದೇವಿ, ಬೇರೆ ಯಾವ ಮದುವೆಗಳಲ್ಲೂ ನಡೆಯುವುದಿಲ್ಲ. ವರದಕ್ಷಿಣೆ, ವರೋಪಚಾರ ಜೋರಾಗಿಯೇ ಸಿಕ್ಕಿರುತ್ತದೆ. ಕೆಲವೊಮ್ಮೆ ವಧುದಕ್ಷಿಣೆ ಕೊಡುವುದೂ ಉಂಟು: ಅದು ಅಸಹಾಯಕ ಸ್ಥಿತಿಗಳಲ್ಲಿ ಮಾತ್ರ. ಹುಡುಗಿ ಕೆಲಸಕ್ಕೆ ಹೋಗುತ್ತಿದ್ದಾಳೆ, ದೊಡ್ಡ ಸಂಬಳದಾರಳು, ಅವಳನ್ನು ಜಿಗಣೆಯಂತೆ ಹೀರಿಕೊಳ್ಳಬಹುದು ಎಂಬೆಲ್ಲಾ ಲೆಕ್ಕಾಚಾರದಿಂದಲೇ ಎಲ್ಲರೂ ಇಂತಹ ಪ್ರೇಮ ವಿವಾಹಕ್ಕೆ ಸಮ್ಮತಿ ನೀಡುವುದು. ಇಲ್ಲಿ ಹುಡುಗ ಹುಡುಗಿಯ ಆಲೋಚನೆಗಳೂ ಬೇರೆಯಾಗಿರುವುದಿಲ್ಲ. ಅವರಿಬ್ಬರೂ ಮೊದಲು ಪ್ರೀತಿಸುವುದು ಅಂತಸ್ತನ್ನು, ನಂತರ ವ್ಯಕ್ತಿಯನ್ನು.

ಒಂದೇ ಜಾತಿ, ಒಂದೇ ಅಂತಸ್ತು, ಒಳ್ಳೆಯ ಕೆಲಸ, ಆಸ್ತಿ-ಪಾಸ್ತಿ, ಅನುಕೂಲಗಳನ್ನು ನೋಡಿ ಹುಟ್ಟುವುದು ಪ್ರೀತಿಯಲ್ಲ. ಅಂತಹ ಪ್ರೀತಿ ಕೇವಲ ಅರೆಂಜ್ಡ್ ಲವ್ ಆಗಿರುತ್ತದೆ. ನಿನ್ನಿಂದ ನನಗೆ ಅನುಕೂಲ, ನಮ್ಮ ಜಾತಿ ಒಂದೇ, ನಮ್ಮ ಅಂತಸ್ತು ಒಂದೇ, ನಾವು ಮದುವೆಯಾದರೆ ಸುಖವಾಗಿರಬಹುದು, ಈ ರೀತಿಯ ಲೆಕ್ಕಾಚಾರದ ಪ್ರೀತಿ ಪ್ರೀತಿಯಾಗಿರದೆ ಒಂದು ಭ್ರಮೆಯಾಗಿರುತ್ತದೆ. ಭ್ರಮೆ ಒಡೆದು ಹೋದರೆ ಭ್ರಮನಿರಸನವಾಗುವುದು ಖಚಿತ. ಅರೆಂಜ್ಡ್ ಲವ್ ಯಾವತ್ತಿದ್ದರೂ ಡೇಂಜರಸ್. ಅದು ಅಪಾಯವನ್ನು ನಾವೇ ಕರೆದು ಪಕ್ಕದಲ್ಲಿ ಕೂರಿಸಿಕೊಂಡಂತೆ. ಇಂತಹ ಎಷ್ಟೋ ಅರೆಂಜ್ಡ್ ಲವ್ ಕೊನೆಗೊಳ್ಳುವುದು ವಿಚ್ಛೇದನ ಅಥವಾ ಅಪರಾಧದಲ್ಲಿ. ಹೀಗೆ ಉದಾಹರಣೆಗಳು ಕೊಡುತ್ತಾ ಹೋದರೆ ಪುಟಗಟ್ಟಲೆ, ದಿನಗಟ್ಟಲೆ, ವರ್ಷಗಟ್ಟಲೆ ಕೊಡುತ್ತಿರಬಹುದು. ಇಂತಹುದೇ ಪ್ರೀತಿಯನ್ನು ನಮ್ಮ ಸುತ್ತಮುತ್ತ ನೋಡುತ್ತಿದ್ದೇವೆ, ನೋಡುತ್ತಲೇ ಇರುತ್ತೇವೆ.

ಯಾರಾದರೂ ಅಂತಹ ಅರೆಂಜ್ಡ್ ಲವ್‌ಗೆ ಪ್ಲಾನ್ ಮಾಡುತ್ತಿದ್ದರೆ ಅದನ್ನು ಕೈಬಿಡಿ. ಸ್ನೇಹಿತರು ಈ ಹಾದಿ ತುಳಿಯುತ್ತಿದ್ದಾರೆ ಎಂದು ನಿಮಗನ್ನಿಸಿದರೆ ಅವರಿಗೆ ಬುದ್ಧಿ ಹೇಳಿ ಅವರಿಗೆ ಮುಂದಿನ ಪರಿಣಾಮವನ್ನು ವಿವರಿಸಿ ಆ ಹಾದಿ ತುಳಿಯದಂತೆ ನೋಡಿಕೊಳ್ಳಿ. ಏಕೆಂದರೆ ಆ ಹಾದಿಯ ಅಂತ್ಯ ಅವರನ್ನು ಪ್ರಪಾತಕ್ಕೆ ತಳ್ಳುತ್ತದೆ. ಮತ್ತೆಂದೂ ಅವರು ಆ ಪ್ರಪಾತದಿಂದ ಮೇಲೇಳಲು ಸಾಧ್ಯವಿಲ್ಲ.

ಕೇವಲ ಯುವಕ ಯುವತಿಯರಲ್ಲಿ ಈ ಅರೆಂಜ್ಡ್ ಲವ್ ಇರುತ್ತದೆ ಎಂದು ಭಾವಿಸಬೇಡಿ.

ಇದು ಸಂಬಂಧಿಕರಲ್ಲಿ ಇರಬಹುದು, ಶ್ರೀಮಂತಿಕೆ ಇದ್ದಾಗ ಎಲ್ಲಾ ನೆಂಟರು ಇಷ್ಟರು ಹತ್ತಿರ ಇರುತ್ತಾರೆ, ‘ಬರಿಗೈ ನಾಯಿಗೂ ದೂರ’ ಎಂಬಂತೆ, ಬಡತನದಲ್ಲಿ ಎಲ್ಲರೂ ನಿಮ್ಮನ್ನು ತೊರೆದು ಹೋಗುತ್ತಾರೆ. ಅಥವಾ ಅಲ್ಲಿಯವರೆಗೆ ನೀವು ಯಾರು ಎಲ್ಲಿದ್ದೀರಿ ಹೇಗಿದ್ದೀರಿ ಎಂದೂ ಸಹ ತಿಳಿಯಲು ಇಚ್ಛಿಸದ ಸಂಬಂಧಿಕರು ನಿಮಗೆ ಒಳ್ಳೆಯ ಹೆಸರು, ಹಣ ಬಂದಾಗ ನಿಮ್ಮನ್ನು ಹುಡುಕಿಕೊಂಡು, ಬಾದರಾಯನ ಸಂಬಂಧ ಹೇಳಿಕೊಂಡು ನಿಮ್ಮ ಮನಸ್ಸಿನಲ್ಲಿ ಜಾಗ ಪಡೆಯಲು ಸರ್ಕಸ್ ಮಾಡುತ್ತಾರೆ. ಇದು ಅರೆಂಜ್ಡ್ ಲವ್ ಅಲ್ಲವೇ?

ಸ್ನೇಹಿತರಲ್ಲಿ ಇಂತಹ ಅರೆಂಜ್ಡ್ ಲವ್ ಕೇವಲ ೧% ಇರಬಹುದು. ಆದರೆ ಅದೂ ಇಲ್ಲದಿರುವುದೇ ನಿಜವಾದ ಸ್ನೇಹ. ಕೆಲವು ಹುಡುಗ ಹುಡುಗಿಯರನ್ನು ನಾನು ನೋಡಿದ್ದೇನೆ ಗಮನಿಸಿದ್ದೇನೆ. ಅವರು ತಮ್ಮ ಅಂತಸ್ತಿಗೆ ಸರಿಹೊಂದುವ ವ್ಯಕ್ತಿಗಳೊಡನೆ ಮಾತ್ರ ಸ್ನೇಹ ಮಾಡುತ್ತಾರೆ. ಅದೂ ತುಂಬಾ ಯೋಚಿಸಿ. ಯಾವುದೇ ಕಾರಣಕ್ಕೂ ತಮಗಿಂತ ಕಡಿಮೆಯವರಲ್ಲಿ ಅವರು ಪರಿಚಯವನ್ನೂ ಸಹ ಬೆಳೆಸಿಕೊಳ್ಳುವುದಿಲ್ಲ. ಹಾಗೆ ಕೆಲವು ಜಾತಿ ಸ್ನೇಹ, ಅನುಕೂಲ ಸ್ನೇಹ, ನಿಮಗೆ ಆಶ್ಚರ್ಯವಾಗಬಹುದು ಬಣ್ಣ ಸ್ನೇಹ ಕೂಡ ಇದೆ. ರೂಪಕ್ಕೆ ಕೊಟ್ಟಷ್ಟು ಬೆಲೆ ಜನ ಗುಣಕ್ಕೆ ನೀಡುವುದಿಲ್ಲ.

ಕೆಲವು ಸಂದರ್ಭಗಳಲ್ಲಿ ತಂದೆ-ತಾಯಿ ಮತ್ತು ಮಕ್ಕಳಲ್ಲೂ ಇರಬಹುದು. ಉದಾಹರಣೆಗೆ ಹುಟ್ಟಿದಾರಾಭ್ಯ ಒಂದು ಮಗುವನ್ನು ಕಡೆಗಣಿಸಿ ಆ ಮಗ/ಮಗಳು ದೊಡ್ಡ ಸಾಧನೆ ಮಾಡಿದಾಗ, ಅವರಿಗೆ ಶ್ರೀಮಂತಿಕೆ ಬಂದಾಗ ಅವರನ್ನು ಓಲೈಸುವುದು. ನನಗೆ ಮೊದಲಿಂದಲೂ ನೀನಂದ್ರೆ ಎಷ್ಟು ಪ್ರಾಣ. ನನಗೆ ಎಲ್ಲಾ ಮಕ್ಕಳಿಗಿಂತ ನೀನೇ ಮುಖ್ಯ. ನಿನ್ನನ್ನು ನಾನು ಹಾಗೆ ಸಾಕಿದೆ, ಹೀಗೆ ಬೆಳೆಸಿದೆ. ನನ್ನ ಜೀವ ನೀನೇ ಎಂದು ಪೋಷಕರು ಹೇಳಿರುವ ಎಷ್ಟೋ ಸಂದರ್ಭಗಳನ್ನು ನಾವು ನೋಡಿರುತ್ತೇವೆ. ಹಾಗೆಂದು ನಾನು ಎಲ್ಲರನ್ನೂ ದೂಷಿಸುತ್ತಿದ್ದೇನೆ ಎಂದಲ್ಲ. ಕ್ಷಮೆಯಿರಲಿ. ಸಂದರ್ಭಗಳು ಕೆಲವೊಮ್ಮೆ ಮನುಷ್ಯನ ಮನಸ್ಸಿನಲ್ಲಿ ಈ ಅರೆಂಜ್ಡ್ ಲವ್‌ಗೆ ಜಾಗ ಮಾಡಿಕೊಡುತ್ತವೆ.

ನಾವು ವಿವೇಕದಿಂದ ವರ್ತಿಸಿ ಅದು ನಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳಬೇಕು. ಯಾರನ್ನಾದರೂ ಇಷ್ಟಪಟ್ಟರೆ ಅವರು ಹೇಗಿರುವರೋ ಹಾಗೆಯೇ ಇಷ್ಟಪಡಬೇಕು. ಇಷ್ಟವಾಗಲಿಲ್ಲವೆ ಬಿಟ್ಟುಬಿಡಿ ಅಷ್ಟೆ. ಆದರೆ ಯಾವುದೇ ಕಾರಣಕ್ಕೂ ಅರೆಂಜ್ಡ್ ಲವ್ ಎಂಬ ಸುಳಿಯಲ್ಲಿ ಮಾತ್ರ ಬೀಳಬಾರದು. ಒಮ್ಮೆ ಬಿದ್ದೆವೆಂದರೆ ಅಲ್ಲಿಂದ ಬಿಡಿಸಿಕೊಳ್ಳಲು ಸಾಧ್ಯವೇ ಇಲ್ಲ. ಪಾರಾಗುವ ದಾರಿಯಿಲ್ಲದ ಈ ಸುಳಿ ಬಿದ್ದವರನ್ನು ನುಂಗಿಹಾಕುತ್ತದೆ. ಮತ್ತೆ ನಾವು ಮನುಷ್ಯರೆಂದು ಕರೆಸಿಕೊಳ್ಳುವುದಕ್ಕೆ ಸಾಧ್ಯವಾಗದಂತೆ ನಮ್ಮನ್ನು ಬದಲಾಯಿಸಿಬಿಡುತ್ತದೆ.

ಪ್ರೀತಿಯಲ್ಲಿ ಭಾವನೆಗಳು ಬೆರೆಯಬೇಕು. ಮನಸ್ಸು ಮನಸ್ಸುಗಳ ಮಂಥನವಾಗಬೇಕು. ಹೃದಯ ಹೃದಯಗಳ ಮಿಲನವಾಗಬೇಕು. ಅದುವೇ ಪವಿತ್ರ ಪ್ರೇಮ. ನಿಜವಾದ ಪ್ರೀತಿ. ಹಾಗಲ್ಲದೆ ಅನುಕೂಲಗಳು ಸೇರಿದರೆ ಅದು ಅರೆಂಜ್ಡ್ ಲವ್.

ಫೆಬ್ರವರಿ ೧೪ ಪ್ರೇಮಿಗಳ ದಿನ. ನಿಮ್ಮೆಲ್ಲರಿಗೂ ನಮ್ಮ ಕಿವಿಮಾತು, ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಗಾಗಿ ಹಂಚಿಕೊಳ್ಳಿ. ನಿಮ್ಮೆಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು.

********







ಗುರುವಾರ, ಜನವರಿ 10, 2013

ಅವಳೊಂದು ಹೂ... ಹೊಸಕದಿರಿ

‘ಭಾರತದಲ್ಲಿ ಪ್ರತಿ ೨೦ ನಿಮಿಷಕ್ಕೆ ಒಂದು ಅತ್ಯಾಚಾರವಾಗುತ್ತಿದೆ.
 ಆದರೂ ಅತ್ಯಾಚಾರದ ವಿರುದ್ಧ ಪ್ರತಿಭಟಿಸಲು ೨೦ ನಿಮಿಷಗಳನ್ನೂ
 ಸರ್ಕಾರ ಮಹಿಳೆಗೆ ಕೊಡುತ್ತಿಲ್ಲ’.
                                              - ತಸ್ಲೀಮಾ ನಸ್ರೀನ್ (ಲೇಖಕಿ).


ಹೆಣ್ಣು ಪ್ರೀತಿಯ ಪ್ರತೀಕ. ಅವಳು ನಮ್ಮ ಸಂಸ್ಕೃತಿ. ಅವಳೊಂದು ಹೂ. ಸಂಸ್ಕೃತಿಯ ತವರೂರಾದ ನಮ್ಮ ಭಾರತ ದೇಶ ಅವಳನ್ನು ಇನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲವೇನೋ ಎಂದೆನಿಸುತ್ತಿದೆ. ಅಂಕಿ-ಅಂಶಗಳನ್ನು ನೋಡಿದರೆ ದಿನವೊಂದರಲ್ಲಿ ಸುಮಾರು ಅರವತ್ತು ಅತ್ಯಾಚಾರಗಳಾಗುತ್ತಿವೆ. ನಾವೆಲ್ಲರೂ ಹೆಮ್ಮೆಯಿಂದ ಭಾರತೀಯರು ಎಂದು ಹೇಳಿಕೊಂಡು ತಲೆಯೆತ್ತಿ ಮೆರೆಯುವುದು ಬರೀ ನಾಟಕವೆಂದೆನಿಸುತ್ತಿದೆ. ಹೆಚ್ಚಾಗಿ ಭಾಷಣಗಳಲ್ಲಿ ನಮ್ಮ ಆಚಾರ, ವಿಚಾರ ಎಂದು ಹೇಳುವುದರ ಜೊತೆಗೆ ಈಗ ಅತ್ಯಾಚಾರ, ಅನಾಚಾರ ಎಂಬ ಪದಗಳನ್ನು ಸೇರಿಸಬೇಕಿದೆ.

೨೩ ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕವಾಗಿ ನಡೆದ ಅತ್ಯಾಚಾರ ಮತ್ತು ಹಲ್ಲೆಯ ದೆಹಲಿ ಪ್ರಕರಣ ಎಂಥವರನ್ನೂ ತಲೆತಗ್ಗಿಸುವಂತೆ ಮಾಡಿದೆ. ಪ್ರತಿಯೊಬ್ಬ ಭಾರತೀಯನೂ ಚಿಂತಿಸುವಂತಾಗಿದೆ. ಓಡುತ್ತಿದ್ದ ಬಸ್ಸಿನಲ್ಲಿ ಅವಳಿಗಾದ ಹಿಂಸೆ, ನೋವು, ಅವಮಾನ ಊಹಿಸಲೂ ಅಸಾಧ್ಯವಾದುದಾಗಿದೆ. ಅತ್ಯಾಚಾರದ ನಂತರ ಸುಮಾರು ಎರಡು ಗಂಟೆಗಳ ಕಾಲ ಅವಳು ರಸ್ತೆಯಲ್ಲೇ ಇದ್ದ ವಿಷಯ ಇವತ್ತಿನ ನಾಚಿಕೆಗೇಡಿನ ಸಂಗತಿಯಾಗಿದೆ. ವಿದ್ಯಾವಂತರಿಂದಲೇ ತುಂಬಿ ತುಳುಕುತ್ತಿವೆ ಎನ್ನುವ ನಗರಗಳಲ್ಲಿ ಹೆಣ್ಣಿಗೆ ರಕ್ಷಣೆಯಿಲ್ಲವೇ? ಅವಳು ನಗರಗಳಲ್ಲಿ ಬದುಕುವುದು ಹೇಗೆ ಎಂದು ಹೊಸದಾಗಿ ಕಲಿಯಬೇಕಾಗಿದೆಯೇ? ಎಂಬ ಪ್ರಶ್ನೆಗಳು ಮೂಡುತ್ತಿವೆ.

ನಡೆದದ್ದು ಭಾನುವಾರದ ರಜಾ-ಮಜಾ

ದೆಹಲಿಯಲ್ಲಿ ಮೊದಲಿನಂತೆಯೇ ಬಿಗಿ ಬಂದೋಬಸ್ತು ಇರುತ್ತಿದ್ದರೆ ಬಹುಷಃ ಈ ಘಟನೆ ನಡೆಯುತ್ತಿರಲಿಲ್ಲವೇನೋ? ಸರಿಯಾದ ಸಮಯಕ್ಕೆ ದೆಹಲಿ ಸರ್ಕಾರದ ಸಾರಿಗೆ ವ್ಯವಸ್ಥೆ ಸರಿಯಿದ್ದರೆ ಅವಳು ಈ ಮೊದಲೇ ತೋಡಿಸಿದ್ದ ಹಳ್ಳಕ್ಕೆ ಬೀಳುತ್ತಿರಲಿಲ್ಲವೇನೋ? ಹೌದು ಇದೊಂದು ಪೂರ್ವ ನಿಯೋಜಿತ ಖೆಡ್ಡಾ!

ಒಂದು ಮೋಜಿನ ಆಟ!

ಡಿಸೆಂಬರ್ ೧೬, ಭಾನುವಾರದ ರಾತ್ರಿ ಆಕೆ ತನ್ನ ಗೆಳೆಯನ ಜೊತೆ ಬಸ್ಸಿಗಾಗಿ ಕಾಯುತ್ತಿದ್ದಳು. ತಣ್ಣನೆಯ ರಾತ್ರಿ ಜನರು, ವಾಹನಗಳು ಅಷ್ಟಕ್ಕಷ್ಟೆ. ಶಾಲೆಯ ಮಕ್ಕಳನ್ನು ಕರೆದೊಯ್ಯುವ ಲೈಸೆನ್ಸ್ ಮಾತ್ರವಿದ್ದ ಬಸ್ಸೊಂದು ತನ್ನೆಲ್ಲಾ ಕಿಟಕಿಗಳಿಗೆ ಪರದೆಗಳನ್ನು ಹಾಕಿಕೊಂಡು ಇವರ ಬಳಿ ಬಂದು ನಿಂತಿತು. ಸದ್ಯ ಬಸ್ ಬಂದಿತಲ್ಲ ಎಂದು ಇವರೂ ಹತ್ತಿದ್ದಾರೆ. ಸ್ವಲ್ಪ ಹೊತ್ತಿಗೆ ಡ್ರೈವರ್ ಸೇರಿ ಆರು ಜನರಿದ್ದ ಆ ಬಸ್ಸಿನ ವ್ಯಕ್ತಿಗಳು ಆಕೆಯ ಸ್ನೇಹಿತನೊಂದಿಗೆ ಜಗಳ ತೆಗೆದರು. ಇದ್ದಕ್ಕಿದ್ದಂತೆ ಆತನ ಮೇಲೆ ಹಲ್ಲೆ ಮಾಡಿದರು. ನಂತರ, ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿ, ಹಲ್ಲೆಗೈದರು. ಆ ಕಾಮಾಂಧರ ಪೂರ್ವನಿರ್ಧಾರಿತ ಭಾನುವಾರದ ರಜೆಯ ಮಜದ ಆಟ ನೆರವೇರಿತ್ತು. ಅವರ ಗುರಿ ಆಕೆಯ ಮೇಲೆ ಎರಗುವುದಷ್ಟೇ ಆಗಿತ್ತು. ಅದನ್ನವರು ಈಡೇರಿಸಿಕೊಂಡರು. ತಮ್ಮಷ್ಟಕ್ಕೆ ತಾವು ತಮ್ಮ ಜೊಲ್ಲಿನ ಬಾಯಿಯನ್ನು ಒರೆಸಿಕೊಂಡು ಅವರಿಬ್ಬರನ್ನು ರಸ್ತೆಯಲ್ಲೇ ಬಿಟ್ಟು ಹೊರಟು ಹೋದರು. ಪಾಪ, ಸುಮಾರು ಎರಡು ತಾಸು ಆಕೆ ಅದೇ ಸ್ಥಿತಿಯಲ್ಲಿದ್ದಳಂತೆ. ನಾಚಿಕೆಗೇಡು. ಕಾಮಾಂಧರ ರಜೆಯ ಆಟಕ್ಕೆ ಯಾವ ಹುಡುಗಿಯಾದರೂ ಬೇಕಿತ್ತು. ಅದು ಈಕೆಯಾಗಿದ್ದಳು. ಅವಳ ತಂದೆ-ತಾಯಿಯರ ಪ್ರೀತಿಯ ಅಂಗಳದಲ್ಲಿ ಬೆಳೆದ ಹೂ. ತನ್ನ ತಪ್ಪೇನೂ ಇರದಿದ್ದರೂ ಹೊಸಗಿ ಹೋಗಿತ್ತು.

ಇಂದಿನ ಸುದ್ದಿ

ಆ ಕತ್ತಲ ಕ್ಷಣದಿಂದ ಶುರುವಾದ ಅವಳ ಹೊರಟ ಕೆಲವೇ ದಿನಗಳಲ್ಲಿ ನಂದಿತು. ಡಿಸೆಂಬರ್ ೨೯ರ ಮುಂಜಾನೆ ಜೀವನ್ಮರಣದ ಜೊತೆ ಹೋರಾಡುತ್ತಿದ್ದ ಅವಳ ಚೇತನ ನಿಶಬ್ಧವಾಗಿದೆ. ಅವಳ ಅದಮ್ಯ ಜೀವನ ಪ್ರೀತಿಯಿಂದ ಹೋರಾಡುತ್ತಿದ್ದ ಅವಳು ಕಡೆಗೂ ಉಸಿರು ನಿಲ್ಲಿಸಿದ್ದಾಳೆ. ದಿಲ್ಲಿಯ ಸಫ್ದರ್‌ಜಂಗ್ ಆಸ್ಪತ್ರೆಯಿಂದ ಸಿಂಗಪೂರಿನ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ಅಂಗಾಂಗ ಕಸಿಗೆ ಸಾಗಿಸಲಾಗಿದ್ದರೂ ಆಕೆ ಉಳಿದಿಲ್ಲ. ಕಾರಣ, ಅವಳ ಗಂಭೀರ ಸ್ಥಿತಿ. ಕಾಮಾಂಧರು ಅವಳನ್ನು ಅಂತಹ ಸ್ಥಿತಿಗೆ ತಂದಿದ್ದರು. ಅಲ್ಲಿಗೆ ಹೂವೊಂದು ತನ್ನ ಜೀವನಯಾತ್ರೆಯನ್ನು ನೋವಿನಿಂದ ಮುಗಿಸಿದಂತಾಗಿದೆ.

***

ನಮ್ಮದು ಸಿದ್ಧಗಂಗಾ ಕಾಲೇಜು. ತುಮಕೂರಿನ ಸಿದ್ಧಗಂಗಾ ಬಾಲಕರ ಕಾಲೇಜು, ಮಹಿಳಾ ಕಾಲೇಜು ಪಕ್ಕಪಕ್ಕದಲ್ಲೇ ಇದೆ. ನಮ್ಮ ತರಗತಿಯ ಕಿಟಕಿಗಳಿಂದ ಪಕ್ಕದ ಮಹಿಳಾ ಕಾಲೇಜಿನ ಲ್ಯಾಬೊರೇಟರಿಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ನಾನು ಎರಡನೇ ಬಿ.ಎಸ್ಸಿ.ಯಲ್ಲಿ ಓದುತ್ತಿದ್ದಾಗ ನಮ್ಮ ಪ್ರೀತಿಯ ಗಣಿತ ಉಪನ್ಯಾಸಕರು ಪಾಠಮಾಡುತ್ತಿದ್ದರು.

ಆ ಸಮಯದಲ್ಲಿ ಕಿಟಕಿಯ ಬಳಿಯೇ ಕುಳಿತಿದ್ದ ಸಹಪಾಠಿಯೊಬ್ಬ ಪಾಠದ ಕಡೆಗೆ ಗಮನ ಕೊಡದೆ ಮಹಿಳಾ ಕಾಲೇಜಿನ ಲ್ಯಾಬೊರೇಟರಿಯ ಕಡೆಗೆ ನೋಡುತ್ತಿದ್ದ. ಇದನ್ನು ಗಮನಿಸಿದ ಸರ್, ‘ಲೋ..... ಲೋ..... ಇಲ್ನೋಡೋ. ಪಾಪ ನಿನೇನ್ ಮಾಡ್ತ್ಯಾ... ವಯಸ್ಸು ಅಂತದ್ದು, ನಿಮಗೆಲ್ಲಾ ಒಂದು ಮಾತು ಹೇಳ್ತೀನಿ ಕೇಳಿ’ ಎಂದು ಪಾಠವನ್ನು ನಿಲ್ಲಿಸಿದರು. ಹೆಣ್ಣು ಒಂದು ಹೂ ಇದ್ದಂಗೆ. ಹೂವನ್ನು ನೋಡಿ ಸಂತೋಷ ಪಡ್ಬೇಕೇ ಹೊರತು, ಅದನ್ನು ಹೊಸಕಿ ಹಾಕಬರದಲ್ಲವಾ? ಅಷ್ಟಕ್ಕೂ ನಿನ್ನ ಹೂ ನಿನಗೆ ಸಿಗೋಕ್ಕೆ ಇನ್ನೂ ಸಮಯವಿದೆ. ಮೊದಲು ಚೆನ್ನಾಗಿ ಓದು, ಆಮೇಲೆ ಎಂದು ಬುದ್ಧಿ ಹೇಳಿದರು. ಅದು ಅವನನ್ನೂ ಒಳಗೊಂಡಂತೆ ನಮಗೆಲ್ಲರಿಗೂ ಒಂದು ಒಳ್ಳೆಯ ಪಾಠವಾಯಿತು.

*

ಇನ್ನೊಂದು ಘಟನೆಯೆಂದರೆ, ಅದೂ ನನ್ನ ಕಾಲೇಜಿನ ದಿನಗಳದ್ದೆ. ನನ್ನ ಮೇಲೆ ಅಂದಿಗೂ ಇಂದಿಗೂ ಡಾ. ರಾಜ್‌ಕುಮಾರ್‌ರವರ ಸಿನಿಮಾಗಳ ಪ್ರಭಾವವಿದೆ. ಅವರು ನನಗೆ ಒಂಥರಾ ತೆರೆಯ ಮೇಲಿನ ಮೇಷ್ಟ್ರು. ಬಹುಷಃ ಅದು ಎರಡು ಕನಸು ಚಿತ್ರವಿರಬೇಕು. ಹುಡುಗರ ಗುಂಪೊಂದು ಹುಡುಗಿಯೊಬ್ಬಳನ್ನು ರೇಗಿಸಿ, ಬಲತ್ಕಾರಿಸಲು ಹೋಗಿ ಆ ಚಿತ್ರದಲ್ಲಿ ಉಪನ್ಯಾಸಕರಾಗಿ ಅಭಿನಯಿಸಿರುವ ಡಾ.ರಾಜ್ ಕೈಯಲ್ಲಿ ಒದೆ ತಿಂದಿರುತ್ತಾರೆ. ನಂತರ ಡಾ.ರಾಜ್ ಎದುರಿಗೆ ಆ ಹುಡುಗರು ತಲೆ ತಗ್ಗಿಸಿ ನಡೆಯುತ್ತಾರೆ. ಆಗ, ಡಾ. ರಾಜ್ ನೋಡಿ ಗಂಡಸಾದವನು ತಲೆಯೆತ್ತಿ ನಡಿಬೇಕೇ ಹೊರತು ತಲೆತಗ್ಗಿಸಿಯಲ್ಲ. ತಲೆ ತಗ್ಗಿಸಿ ನಡೆಯೋ ಅಂತಾ ಕೆಲಸ ಮಾಡಬಾರದು ಎಂಬರ್ಥದ ಮಾತುಗಳನ್ನು ಹೇಳುತ್ತಾರೆ.

ನಾನೊಮ್ಮೆ ನನ್ನ ಗೆಳೆಯರಿಬ್ಬರೂ ಯಾವಾಗಲೂ ತಲೆತಗ್ಗಿಸಿ ನಡೆಯೋರು (ಅವರೇನೂ ತಪ್ಪು ಮಾಡಿರಲಿಲ್ಲ). ಆದರೂ, ನಾನು ಅದೇಕೋ ಅವರಿಗೆ ಮೇಲಿನ ಸಿನಿಮಾ ಘಟನೆಯನ್ನು ಹೇಳಿದೆ. ಅಂದಿನಿಂದ ಅವರು ತಲೆಯೆತ್ತಿ ನಡೆಯುತ್ತಾರೆ.

ಅಷ್ಟಕ್ಕೂ ನಾವು ಗಂಡಸರಾದವರು ತಲೆಯೆತ್ತಿ ನಡೆಯುವಂತ ಕೆಲಸ ಮಾಡಬೇಕಲ್ಲವೆ? ಹೂವನ್ನು ಹೊಸಕುವಂತಾ ಹೀನ ಕೃತ್ಯಕ್ಕೆ ಇಳಿಯಬಾರದಲ್ಲವೇ?

                                                                                                    - ಗುಬ್ಬಚ್ಚಿ ಸತೀಶ್.

















ಶುಕ್ರವಾರ, ನವೆಂಬರ್ 2, 2012

“ಬಾಲ್ ಪೆನ್” ಸಿನಿಮಾದ ಗುಂಗಿನಲ್ಲಿ ಗುಬ್ಬಚ್ಚಿ ಕನ್ನಡಿಗ


ಶನಿವಾರವೇ ಗೆಳೆಯ ವಿಶುವಿನ ಮದುವೆಗೆ ಹೋಗಲಾಗುತ್ತಿಲ್ಲವಲ್ಲ ಎಂದು ಮನಸು ಬೇಸರದಿಂದ ಕೂಡಿತ್ತು. ಮದುವೆ ಎಂಬುದು ಬಹುತೇಕ ಜನರ ಜೀವನದಲ್ಲಿ ಒಮ್ಮೆ ಮಾತ್ರ ನಡೆಯುವ ಘಟನೆ. ಎರಡು ಹೃದಯಗಳು ಕಾಯಾ ವಾಚಾ ಮನಸ ಹಿರಿಯರ, ಗೆಳೆಯರ ಸಮ್ಮುಖದಲ್ಲಿ ಸೇರುವ ಅಮೂಲ್ಯ ಕ್ಷಣ. ಅದರಲ್ಲೂ ಬಾಲ್ಯದ ಜೀವದ ಗೆಳೆಯರು ಸೇರಿದರೆಂದರೆ ಆ ಮದುವೆಯ ಖದರ್ರೇ ಬೇರೆ. ಅದೊಂದು ಮರೆಯಲಾರದ “ಆಟೋಗ್ರಾಫ್” ಆಗಿಬಿಡುತ್ತದೆ. ಇಷ್ಟೆಲ್ಲಾ ಕಾರಣಗಳಿದ್ದರೂ ಮದುವೆ ಉಡುಪಿಯಲ್ಲಿ ಎಂಬ ಒಂದೇ ಕಾರಣ ನಾನು ಮದುವೆಗೆ ಹೋಗಲಾಗುವುದಿಲ್ಲ ಎಂದು ಕಡೇ ಘಳಿಗೆಯಲ್ಲಿ ನಿರ್ಧಾರ ತಳೆಯಲು ಸಾಕಿತ್ತು. ಅಲ್ಲಿಗೆ ಮನಸ್ಸು ಮುದುಡಿತ್ತು ಮತ್ತು ಭಾನುವಾರವೆಲ್ಲಾ ಮದುವೆಯ ಗುಂಗಿನಲ್ಲೇ ಬೇಸರದಿಂದ ಕಳೆಯುವುದೆಂದು ಮನಸ್ಸು ತೆಪ್ಪಗಿತ್ತು.

ಯಾರಾದರೂ ಗೆಳೆಯರ ಫೋನ್ ಬಂದರೆ ಮನಸ್ಸಿಗೆ ಸ್ವಲ್ಪ ಹಿತವಾಗಬಹುದೆಂದು ಅಂದುಕೊಳ್ಳುತ್ತಿದ್ದ ಸಮಯಕ್ಕೆ ಸರಿಯಾಗಿ ಆತ್ಮೀಯರಾದ ಶಿವು ಕೆ. “ವೆಂಡರ್ ಕಣ್ಣು” ಅವರ ಫೋನ್ ಬಂತು. ಹಾಯ್ ಸರ್, ಹಲೋ ಸರ್ ಮುಗಿದ ಮೇಲೆ, ನೀವು ನಾಳೆ ಬೆಂಗಳೂರಿಗೆ ಬಂದರೆ ಒಂದು ಒಳ್ಳೆಯ ಸಿನಿಮಾ ನೋಡಬಹುದು ನೋಡಿ. ಸ್ವಲ್ಪ ಟೈಮ್ ಮಾಡಿಕೊಳ್ಳಿ. ನೀವು ಬಂದರೆ ಇಲ್ಲಿ ಹಲವರಿಗೆ ಸರ್‌ಪ್ರೈಸ್ ಕೊಡೋಣ ಎಂದು ಹೇಳಿದರು. ನನಗೆ ಇಲ್ಲವೆನ್ನಲಾಗಲಿಲ್ಲ. ಆಗಲೇ ಅವರು ಹೇಳಿದ್ದು ಕನ್ನಡದಲ್ಲಿ ಅಪರೂಪವೆನ್ನಿಸಬಹುದಾದ ಒಂದು ಸಿನಿಮಾ ಮಾಡಿದ್ದಾರೆ “ಬಾಲ್ ಪೆನ್” ಅಂತಾ. ಸಿನಿಮಾದಲ್ಲಿ ಆಸಕ್ತಿಯಿರುವವರು ಖಂಡಿತಾ ನೋಡಲೇ ಬೇಕಾದ ಸಿನಿಮಾ ಎಂದು ಹೇಳಿದರು. ನಾನು ಅವರ ಬಳಿ ಮಾತನಾಡುತ್ತಲೇ ಒಂದಷ್ಟು ತಿಂಗಳುಗಳ ಕಾಲ ಹಿಂದಕ್ಕೆ ಜಾರಿದ್ದೆ.

ತುಮಕೂರಿನಲ್ಲಿ ನನ್ನ ಮಾರ್ಗದರ್ಶಿಗಳಲ್ಲೊಬ್ಬರಾದ ಪ್ರಕಾಶ್ ಸರ್ (ಸಿದ್ಧಾರ್ಥ ಮೀಡಿಯಾ ಕಾಲೇಜಿನಲ್ಲಿ ಪ್ರೊಫೆಸರ್) ಹಿಂದೊಮ್ಮೆ “ಬಾಲ್ ಪೆನ್” ಎಂಬ ಮಕ್ಕಳ ಸಿನಿಮಾ ಬರುತ್ತಿದ್ದು, ಸಿನಿಮಾದ ಬಗ್ಗೆ ಕುತೂಹಲವಿದೆ ಎಂದಿದ್ದರು. ಆ ಸಿನಿಮಾ ಮೊನ್ನೆ ತೆರೆಕಂಡಾಗ ಎಂದಿನಂತೆ ನ್ಯೂಸ್ ಪೇಪರಿನ ಜಾಹೀರಾತಿನಲ್ಲಿ ಈ ಸಿನಿಮಾ ತುಮಕೂರಿನಲ್ಲಿ ಇಲ್ಲವಲ್ಲ ಎಂದು ನೊಂದು ಕೊಂಡಿದ್ದೆ. ನನ್ನದೊಂದು ಅಭ್ಯಾಸವಿದೆ. ಯಾರಾದರೂ ಸಿನಿಮಾದ ಬಗ್ಗೆ ಒಂದು ಒಳ್ಳೆಯ ಅಭಿಪ್ರಾಯ ಹೇಳಿದರೆಂದರೆ ಮುಗಿಯಿತು. ಏನಾದರು ಮಾಡಿ ಆ ಸಿನಿಮಾ ನೋಡಿಬಿಡಬೇಕು. ಒಂದಷ್ಟು ಪ್ರೇರಣೆ ಪಡೆದು ಬಿಡಬೇಕು.

ಅಲ್ಲಿಗೆ ಭಾನುವಾರ ಮಾರ್ನಿಂಗ್ ಷೋ “ಬಾಲ್ ಪೆನ್” ಗೆ ಹೋಗುವುದೆಂದು ತೀರ್ಮಾನವಾಯಿತು. ಸ್ವಲ್ಪ ಹೊತ್ತಿನ ನಂತರ ಮತ್ತೆ ಬಂದ ಶಿವುರವರ ಫೋನ್ ನನ್ನ ಬರುವಿಕೆಯನ್ನು ಖಚಿತಪಡಿಸಿಕೊಂಡಿತು.

ರಜಾದಿನಗಳಲ್ಲಿ ಓದುವುದೊಂದನ್ನು ಬಿಟ್ಟು, ಉಳಿದಕ್ಕೆಲ್ಲಾ ಸೋಂಬೇರಿಯಾಗುವ ನಾನು ೪ ಘಂಟೆಗೆ ಅಲಾರಂ ಹೊಡೆದರೂ, ಅದನ್ನು ಆಫ್ ಮಾಡಿ ೬ಕ್ಕೆ ಗಡಿಬಿಡಿಯಲ್ಲೇ ಎದ್ದೆ. ೭.೨೦ಕ್ಕೆ ರೈಲು. ಒಂದೇ ಉಸಿರಿಗೆ ಸ್ನಾನ ಮುಗಿಸಿ ಸ್ಟೇಷನ್ನಿಗೆ ದೌಡಾಯಿಸಿದೆ. ಸರಿಯಾದ ಸಮಯಕ್ಕೆ ರೈಲು ಬಂತು. ಹತ್ತಿ ಕೂತವನು ಉದಯವಾಣಿಯ “ಸಾಪ್ತಾಹಿಕ ಸಂಪದ” ದಲ್ಲಿ ಮೊದಲಿಗೆ ಪುರುಷೋತ್ತಮ ಬಿಳಿಮಲೆಯವರ “ಹಲವು ಮಹಾಭಾರತಗಳ ಕತೆ” ಲೇಖನವನ್ನು ಓದಿದೆ. (ಪ್ರತಿಯೊಬ್ಬರು ಓದಲೇಬೇಕಾದ ಲೇಖನವಿದು. ಅದಕ್ಕೆ ಇಲ್ಲಿ ಪ್ರಸ್ತಾಪಿಸಿದ್ದೇನೆ) ನಂತರ, ನೆಚ್ಚಿನ “ಬದುಕ ಬದಲಿಸಬಹುದು”, ವಾರದ ಕಥೆ, ಜೋಗಿಯವರ ಮಾಯಾಕನ್ನಡಿ ಓದುವ ಹೊತ್ತಿಗೆ ಯಶವಂತಪುರ ಬಂದಿತ್ತು. ನಂತರ ಶಿವುರವರು ಹೇಳಿದಂತೆ ಮಲ್ಲೇಶ್ವರಂನಲ್ಲಿ ಇಳಿದು ಅವರನ್ನು ಭೇಟಿ ಮಾಡಿ, ಇಬ್ಬರು ಒಟ್ಟಿಗೆ ತಿಂಡಿ ಮುಗಿಸಿ ಕೈಲಾಷ್ ಚಿತ್ರಮಂದಿರದ ಬಳಿಗೆ ಅವರ ಸ್ಕೂಟಿಯಲ್ಲಿ ಹೊರಟೆವು.

ಅದಾಗಲೇ ನಮ್ಮ ಪ್ರಕಾಶನದ ಪುಸ್ತಕಗಳ ಬಿಡುಗಡೆಯ ಸಮಯದಲ್ಲಿ ಪರಿಚಯವಾಗಿದ್ದ ಶ್ರೀಮತಿ ಜ್ಯೋತಿ ಬಸುರವರು ಮತ್ತವರ ಗುಂಪು ನಮ್ಮ ಆಗಮನವನ್ನು ನಿರೀಕ್ಷಿಸಿತ್ತು. ನಮಗಾಗಿ ಟಿಕೇಟನ್ನೂ ಕಾದಿರಿಸಲಾಗಿತ್ತು. ನಾನು ತುಮಕೂರಿನಿಂದ ಹೋದದ್ದು ಶಿವುರವರು ಹೇಳಿದಂತೆ ಅವರನ್ನು ಆಶ್ಚರ್ಯವಚಕಿತರನ್ನಾಗಿಸಿತ್ತು. ಎಲ್ಲಾ ಗೆಳೆಯರನ್ನೂ ಮಾತನಾಡಿಸುವ ಸಮಯಕ್ಕೆ ಸಿನಿಮಾದ ಸಮಯವೂ ಆಯಿತು.

***

ತದೇಕಚಿತ್ತದಿಂದ ಸಿನಿಮಾ ನೋಡಿದೆ. “ಬಾಲ್ ಪೆನ್” ಸಿನಮಾದಲ್ಲಿ ಮೊದಲು ಮನಸೆಳೆದದ್ದು ಬಾಲಕರ ಮುಗ್ಧ ಅಭಿನಯ. ಕೇಶವ, ಕೆಂಪ, ಬಾಲ... ರೀಟಾ, ಕಡೆಗೆ ಶಿವಯ್ಯ.

“ಬಾಲ್ ಪೆನ್” ಸಿನಿಮಾದ ಕಥೆಯನ್ನು ನಟ ಶ್ರೀನಗರಕಿಟ್ಟಿಯವರ ಗೆಳೆಯರಾದ ಮಂಜುನಾಥರವರು ಬರೆದಿರುತ್ತಾರೆ. ಕಥೆಯಾಗಿಯೂ ಇದೊಂದು ಉತ್ತಮ ಕಥೆಯಾಗಿದೆ. ಹೇಳಬೇಕೆಂದರೆ ಈ ಸಿನಿಮಾದ ನಿಜವಾದ ಹೀರೊ ಕಥೆಯೇ! ಕಥೆಗೆ ತಕ್ಕಂತೆ ಚಿತ್ರಕಥೆ, ಸಂಭಾಷಣೆ ಬರೆದು ಶಶಿಕಾಂತ್ ಸಿನಿಮಾವನ್ನು ಅದ್ಭುತವಾಗಿ ನಿರ್ದೇಶಿಸಿರುತ್ತಾರೆ. ಪ್ರತಿಯೊಂದು ದೃಶ್ಯದಲ್ಲೂ ನಿರ್ದೇಶಕರ ಜಾಣ್ಮೆ ಎದ್ದು ತೋರುತ್ತದೆ. ಇದಕ್ಕೆ ಪೂರಕವಾಗಿ ರಾಜ್‌ಕುಮಾರ್‌ರವರ ಛಾಯಾಗ್ರಹಣ. ಇವರೆಲ್ಲರ ಕೆಲಸ ನಮ್ಮ ಕಣ್ಮುಂದೆ ಮೂಡುತ್ತಿದ್ದರೆ ಅದಕ್ಕೆ ಸರಿಸಾಟಿಯಾಗಿ ನಮ್ಮ ಕಿವಿಗಳಿಗೆ ಮಣಿಕಾಂತ್ ಕದ್ರಿಯವರ ಇಂಪಾದ ಸಂಗೀತವಿದೆ. ನಾನಂತೂ ಈ ಹಿನ್ನೆಲೆ ಸಂಗೀತವನ್ನು ಒಂದು ಉತ್ತಮ ಸಂಗೀತ ಕಛೇರಿಯೆಂದೇ ಕರೆಯಲು ಇಚ್ಚಿಸುತ್ತೇನೆ. ಆಗಾಗ ಸಿನಿಮಾಗೆ ಹೊಂದಿಕೊಂಡಂತೆ ಒಳ್ಳೆಯ ಸಾಹಿತ್ಯವಿರುವ ಹಾಡುಗಳಿವೆ. ಸರಳವಾಗಿ, ಸುಂದರವಾಗಿ ಒಂದು ಸಿನಿಮಾಗೆ ಉತ್ತಮ ಉದಾಹರಣೆ “ಬಾಲ್ ಪೆನ್”. ಒಟ್ಟಿನಲ್ಲಿ ಸಿನಿಮಾದ ಟೀಂ ವರ್ಕ್ ಗೆದ್ದಿದೆ.

ಸಿನಿಮಾದ ಕಥೆ ಹೇಳುವ ಉದ್ದೇಶ ನನಗಿಲ್ಲ. ಸಿನಿಮಾ ಅನಾಥ ಆಶ್ರಮದಲ್ಲಿ ಶುರುವಾಗಿ ಹಲವು ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುಕ್ತಾಯವಾಗುತ್ತದೆ. ಬಹುಮುಖ್ಯವಾಗಿ ಸಮಾಜದ ಕೆಲವು ಮೌಢ್ಯಗಳ ಮೇಲೂ ಬೆಳಕು ಚೆಲ್ಲಿದೆ. ಇದೆಲ್ಲಾ ಮಕ್ಕಳ ಮೂಲಕ ಹೇಳಲ್ಪಟ್ಟರೂ ಇದು ಸಂಪೂರ್ಣ ಮಕ್ಕಳ ಸಿನಿಮಾವಲ್ಲ. ಸಿನಿಮಾದಲ್ಲಿ ಹಲವು ಸಮಸ್ಯೆಗಳಿಗೆ ಕಾರಣವಾಗುವ ಹಿರಿಯರೂ ಇದ್ದಾರೆ. ಮತ್ತು ಇದೂ ಹಿರಿಯರೂ ತಪ್ಪದೆ ನೋಡಲೇ ಬೇಕಾದ ಸಿನಿಮಾ. ಇಲ್ಲಿ “ಬಾಲ್ ಪೆನ್” ಒಂದು ರೂಪಕವಾಗಿ “pen is mightier than sword” ಎಂಬುದನ್ನು ನಿರೂಪಿಸಿದೆ.

ಒಬ್ಬ ಸಿನಿಮಾ ವಿದ್ಯಾರ್ಥಿಯಾಗಿ ಈ ಸಿನಿಮಾ ಕುರಿತು ನನ್ನ ಗಮನ ಸೆಳೆಯುವುದಕ್ಕೆ ಮೊದಲ ಕಾರಣ ಆಧುನಿಕತೆಗೆ ತಕ್ಕಂತೆ ಸಿನಿಮಾಗೆ “ಬಾಲ್ ಪೆನ್” ಎಂದು ಹೆಸರಿಟ್ಟಿರುವುದು. ನನ್ನ ಕುತೂಹಲವನ್ನು ಸಿನಿಮಾ ಎಳ್ಳಷ್ಟೂ ಹುಸಿಯಾಗಿಸಿಲ್ಲ. ಸಿನಿಮಾ ಕುರಿತು ಆಸಕ್ತಿ (ಸಿನಿಮಾ ವಿದ್ಯಾರ್ಥಿಗಳು) ಇರುವವರೆಲ್ಲ ಮರೆಯದೆ ಈ ಸಿನಿಮಾ ನೋಡಿ. ನಿಮಗೆ ಕಲಿಯುವುದಕ್ಕೆ ಹಲವು ಸಾಧ್ಯತೆಗಳಿವೆ. ಮರೆಯಬೇಡಿ, ಮರೆತು ನಿರಾಶರಾಗದಿರಿ.

***

ಇದೇನಿದು ಇಷ್ಟೇನಾ ಎಂದು ರಾಗ ಎಳೆಯಬೇಡಿ. “ಬಾಲ್ ಪೆನ್” ಸಿನಿಮಾ ಕುರಿತು ಬರೆಯುವುದಕ್ಕಿಂತ ಸಿನಿಮಾ ನೋಡಿದ ಸಾಧ್ಯೆತೆಯ ಬಗ್ಗೆಯೇ ಹೆಚ್ಚು ಬರೆಯಲು ಕಾರಣಗಳಿವೆ. ಮೊದಲನೇ ಕಾರಣವೆಂದರೆ, ಕಥೆಯನ್ನು ನಾನೇ ಹೇಳಿಬಿಟ್ಟರೆ, ನೀವು ಇನ್ನೇನು ಸಿನಿಮಾ ನೋಡೋದು ಬಿಡು ಎಂಬ ಭಾವನೆ ತಾಳದಿರಲೆಂದು. ಜೊತೆಗೆ ಸಿನಿಮಾದ ಬಗ್ಗೆ ನಿಮ್ಮ ಕುತೂಹಲವಿರಲಿ ಎಂದು. ಮತ್ತೊಂದು ಕಾರಣ, ಒಂದು ಕನ್ನಡ ಸಿನಿಮಾ ಚೆನ್ನಾಗಿದ್ದಾಗ ಅದನ್ನು ತಮ್ಮ ಗೆಳೆಯರಿಗೂ ತೋರಿಸಿ ಒಂದು ಕನ್ನಡ ಸಿನಿಮಾ ಯಶಸ್ವಿಯಾಗಲಿ ಎಂದು ಪ್ರಯತ್ನಿಸಿದ ಗೆಳೆಯರ ಕುರಿತು ಹೇಳಲೆಂದು. ಈ ಸಿನಿಮಾ ಬಿಡುಗಡೆಯಾದ ದಿನ (ನನಗೆ ದೊರೆತ ಮಾಹಿತಿಯಂತೆ ಎಲ್ಲಾ ಉತ್ತಮ ಸಿನಿಮಾಗಳಂತೆ ಈ ಸಿನಿಮಾವೂ ಬೆಂಗಳೂರಿನಲ್ಲಿ ಬಿಡುಗಡೆಯಾಗಲು ಬಹಳ ಕಷ್ಟಪಟ್ಟಿದೆ) ನನ್ನ ಸ್ನೇಹಿತರಾದ ಶ್ರೀಮತಿ ಜ್ಯೋತಿ ಬಸು, ಸತೀಶ್ ಕನ್ನಡಿಗ, ಶಿವು ಕೆ. ಇವರನ್ನೊಳಗೊಂಡ ಸುಮಾರು ೬೦ ಜನರ ತಂಡವೊಂದು ಒಟ್ಟಾಗಿ ಸಿನಿಮಾ ನೋಡಿದೆ. ನಂತರ ಭಾನುವಾರ ಮತ್ತೊಮ್ಮೆ ನನ್ನನ್ನೂ ಒಳಗೊಡಂತೆ ಹಲವು ಗೆಳೆಯರಿಗೆ ಸಿನಿಮಾ ಕುರಿತು ಮಾಹಿತಿಯನ್ನು ನೀಡಿ, ಸಿನಿಮಾವನ್ನು ನೋಡಲು ಸಹಕರಿಸಿದೆ. ಇದೊಂತರ, ನಮ್ಮ ಹುಟ್ಟಿದ ಹಬ್ಬವನ್ನು ನಮ್ಮ ಗೆಳೆಯರೊಂದಿಗೆ ಸಿಹಿಹಂಚಿ ಸಂಭ್ರಮಿಸುವುದೇ ಆಗಿದೆ. ನಾನಿಲ್ಲಿ ಹುಟ್ಟುಹಬ್ಬವನ್ನು ಏತಕ್ಕೆ ಉದಾಹರಣೆಯಾಗಿ ಕೊಟ್ಟೆನೆಂದರೆ, ಸಿನಿಮಾದಲ್ಲಿ ‘ತಿಂಡಿಪೋತ’ ಬಾಲ, ತನ್ನ ಗೆಳೆಯ ‘ಮಾಹಿತಿ ಕಣಜ’ ಕೇಶವನಿಗೆ, ‘ನಿನಗೆ ಎಲ್ಲರ ಜನ್ಮದಿನ ಗೊತ್ತು, ಅನಾಥರ ಹುಟ್ಟುಹಬ್ಬ ಯಾವತ್ತು ಅಂಥಾ ಗೊತ್ತೆನೋ” ಎಂಬರ್ಥದ ಮಾತುಗಳನ್ನಾಡುತ್ತಾನೆ. ಅದಕ್ಕೆ ಕೇಶವ, ‘ಅದು ಆಗಸ್ಟ್ ೨೬. ನಮ್ಮಮ್ಮ ಮದರ್ ಥೆರೆಸಾ ಜನ್ಮದಿನ’ ಎಂದೇಳುತ್ತಾ ಸಮಾಧಾನ ಮಾಡುತ್ತಾನೆ. ಅಲ್ಲಿಗೆ ನೀವೂ ನಿಮ್ಮ ಗೆಳೆಯರೊಂದಿಗೆ ಸಿನಿಮಾವನ್ನು ನೋಡುತ್ತೀರಾ ಎಂದಾಯಿತು. ಸಿಹಿಯನ್ನು ಗೆಳೆಯರೊಂದಿಗೆ ಹಂಚಿ ತಿಂದರೆ ಆ ಮಜಾನೆ ಬೇರೆ. ಅಲ್ಲವೇ?

***

ಸಿನಿಮಾ ಮುಗಿಯುವ ಹೊತ್ತಿಗೆ ಸರಿಯಾಗಿ ನಿರ್ದೇಶಕರಾದ ಶಶಿಕಾಂತ್ ಬಂದಿದ್ದರು. ಅವರ ಜೊತೆ ನಮ್ಮೆಲ್ಲರ ಫೋಟೋಶೂಟ್ ನಡೆಯಿತು. ಒಂದಷ್ಟು ಮಾತು, ಜೊತೆಗೆ ನಿರ್ದೇಶಕರೇ ಪ್ರೀತಿಯಿಂದ ಕುಡಿಸಿದ ಕಾಫೀ (ಉಳಿದವರೆಲ್ಲ ಜ್ಯೂಸ್) ಮತ್ತು ಒಂದಷ್ಟು ಸಿನಿಮಾ ನಿರ್ಮಾಣದ ಬಗ್ಗೆ ಮಾಹಿತಿ. ನನ್ನ “ಮುಗುಳ್ನಗೆ” ಪುಸ್ತಕವನ್ನು ಪ್ರೀತಿಯಿಂದ ನಿರ್ದೇಶಕರಿಗೆ ಕೊಟ್ಟು ನನ್ನ ಆಸಕ್ತಿಯನ್ನು ಅವರಿಗೆ ಹೇಳಿದೆ. ನಂತರ ಎಲ್ಲಾ ಗೆಳೆಯರಿಗೆ ಪ್ರೀತಿಯ ವಿದಾಯ.

ಸಿನಿಮಾ ನೋಡುವ ನೆಪದಲ್ಲಿ ನನ್ನ ಇನ್ನೊಂದು ಬಹುಕಾಲದ ಬಯಕೆ ನೆರವೇರಿತು. (ನೀವು ಬಸುರಿಯ ಬಯಕೆಯೇ ಎಂದು ಕೇಳಿದರೂ ತಪ್ಪಿಲ್ಲ. ನನ್ನ ಹೊಟ್ಟೆಯೂ ತುಂಬಾ ತುಂಬಾ ದಪ್ಪವಾಗಿದೆ) ಅದು ಬೆಂಗಳೂರಿನ “ಮಾದಪ್ಪನ ಮೆಸ್” ಮುದ್ದೆ ಊಟ. ಶಿವು ಸರ್ ನನ್ನ ಬಹುಕಾಲದ ಬಯಕೆ ಈಡೇರಲು ಕಾರಣವಾದರು. ಊಟವಾದ ನಂತರ ನಾವಿಬ್ಬರು ಪರಸ್ಪರ ವಿದಾಯ ಹೇಳಿದೆವು. ಗೆಳೆಯರೆಲ್ಲರ ಪ್ರೀತಿಯನ್ನು ಕೃತಜ್ಞತೆಯಿಂದ ನೆನೆಯುತ್ತಾ ನಾನು ಸಂಜೆಗೆ ತುಮಕೂರಿಗೆ ವಾಪಸ್ಸಾದರೂ, ನನ್ನ ಮನಸ್ಸು “ಬಾಲ್ ಪೆನ್” ಗುಂಗಿನಲ್ಲಿಯೇ ಇದೆ.

ಅಂದ ಹಾಗೆ, ದಿನಾ ದಿನಾ ಆಚರಿಸಬೇಕಾದ ಕನ್ನಡಮ್ಮನ ಹಬ್ಬವನ್ನು ನವೆಂಬರ್ ತಿಂಗಳು ಪೂರ್ತಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಆಚರಿಸುತ್ತಾರೆ. ನೀವು ಒಂದರ್ಧ ದಿನ “ಬಾಲ್ ಪೆನ್” ಸಿನಿಮಾ ನೋಡುವುದರ ಮೂಲಕ ಅರ್ಥಪೂರ್ಣಗಾಗಿ ಆಚರಿಸಿಬಿಡಿ.

ಪ್ರೀತಿಯಿಂದ,
ಗುಬ್ಬಚ್ಚಿ ಕನ್ನಡಿಗ.





ಭಾನುವಾರ, ಅಕ್ಟೋಬರ್ 21, 2012

ಹಲವು ಕನಸುಗಳು ನನಸಾದ ಬಗೆ

ಅದು ೧೯೯೯ರ ವರ್ಷ. ಆಗಷ್ಟೆ ನನ್ನ ಪದವಿ ಫಲಿತಾಂಶ ಬಂದಿತ್ತು. ಮುಂದೆ ಓದುವ ಇಚ್ಛೆಯಿದ್ದರೂ ಹಣಕಾಸಿನ ತೊಂದರೆಯಿಂದ ಕೆಲಸ ಹುಡುಕುವುದೆಂದು ನಿರ್ಧಾರವಾಗಿತ್ತು. ಅದಾಗಲೇ ನನಗೆ ನನ್ನ ವಾರಿಗೆಗಿಂತಲೂ ಹಿರಿಯರಾದ ಕೆಲವು ಗೆಳೆಯರಿದ್ದರು. ಅದರಲ್ಲಿ ಗುಬ್ಬಿಯ ಮಂಜುನಾಥ ಹೋಟೆಲ್ಲಿನ ವಿಶು ಕೂಡ ಒಬ್ಬರು. ಅವರು ಶೈಕ್ಷಣಿಕವಾಗಿ ಹೆಚ್ಚೇನು ಓದಿಲ್ಲದಿದ್ದರೂ ಅವರಿಗೆ ಇದ್ದ ಸಾಹಿತ್ಯದ ಬಗೆಗಿನ ಆಸಕ್ತಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಇದ್ದ ಮಾಹಿತಿಗಳಿಂದ ನನ್ನಲ್ಲಿ ವಿಶೇಷ ಆಸಕ್ತಿ ಬೆಳೆಸಿದ್ದರು. ಅವರ ಹೋಟೇಲಿನಲ್ಲಿ ಗುಬ್ಬಿಗೆ ಬರುತ್ತಿದ್ದ ಎಲ್ಲಾ ನ್ಯೂಸ್‌ಪೇಪರ್‌ಗಳು ಸಿಗುತ್ತಿದ್ದವು. ನಾನಂತೂ ಭಾನುವಾರದ ಬೆಳಗಿನ ಲೈಬ್ರರಿ ವಿಸಿಟ್ ಮುಗಿದ ಮೇಲೆ ಅಲ್ಲೇ ಹತ್ತಿರದಲ್ಲೇ ಇದ್ದ ಇವರ ಹೋಟೆಲ್ಲಿಗೆ ಸುಮಾರು ೧೧ ಗಂಟೆಯ ಹೊತ್ತಿಗೆ ಹೋಗಿಬಿಡುತ್ತಿದೆ. ಆ ಸಮಯಕ್ಕೆ ಸರಿಯಾಗಿ ವಿಶುವಿನ ಕೆಲವು ಗೆಳೆಯರು, ಜೊತೆಗೆ ಬಹುಮುಖ್ಯವಾಗಿ ಗುರು-ಗೆಳೆಯ ಮೃತ್ಯುಂಜಯ ಬರುತ್ತಿದ್ದರು. ಭಾನುವಾರವಾದ್ದರಿಂದ ಅಷ್ಟೇನೂ ಜನರಿರುತ್ತಿರಲಿಲ್ಲ. ನಮ್ಮ ಮಾತುಗಳಿಗೆ, ಓದಿಗೆ, ಕಾಫೀ, ಟೀ ಕುಡಿಯಲಿಕ್ಕೆ ಹೋಟೇಲ್ ಸಾಕ್ಷಿಯಾಗುತ್ತಿತ್ತು. ಲೈಬ್ರರಿಯಲ್ಲಿ ಓದಲಾಗದ ಭಾನುವಾರದ ಪುರವಣಿಗಳನ್ನು ತೆಗೆದುಕೊಂಡು ನಾನೊಂದು ಮೂಲೆಯಲ್ಲಿ ಕುಳಿತು ಏನನ್ನಾದರೂ ಓದುವುದಕ್ಕೆ ಹಚ್ಚುತ್ತಿದ್ದೆ. ಕಾಫೀ ಕುಡಿದ ಮೇಲೆ ಎಲ್ಲಾ ಗೆಳೆಯರೂ ಒಂದಷ್ಟು ಹೊತ್ತು ಹರಟಿ ಹೊರಟುಬಿಡುತ್ತಿದ್ದರು. ಕಡೆಗೆ ನಾನು ವಿಶು ಊಟದ ಸಮಯದವರೆಗೂ ಕುಳಿತು ಒಂದಷ್ಟು ಹರಟುತ್ತಿದ್ದೆವು. ನಮ್ಮಿಬ್ಬರ ಮಾತುಗಳಲ್ಲಿ ಯಾವಾಗಲೂ ಬರುತ್ತಿದ್ದದ್ದು ಸಾಹಿತ್ಯ ಮತ್ತು ಸಾಹಿತಿಗಳ ಬದುಕು ಮಾತ್ರ. ಅದಾಗಲೇ ನನಗೆ ವೈಯೆನ್ಕೆ ಪರಿಚಯವಾದದ್ದು. ಅವರ ಅಂಕಣ “ವೆಂಡರ್ ಕಣ್ಣು”ವನ್ನು ತಪ್ಪದೆ ಓದಿರುತ್ತಿದ್ದ ವಿಶು ಅವರ ಪ್ರಖರ ಪನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು. ಇವರ ಜೊತೆಗೆ ಲಂಕೇಶ್, ಕುವೆಂಪು, ತೇಜಸ್ವಿ, ವಿಶೇಷವಾಗಿ ಶಿವರಾಮ ಕಾರಂತರ ಪುಸ್ತಕಗಳ ಬಗ್ಗೆ ಹೇಳುತ್ತಿದ್ದರು. ನನಗೆ ಮೊದಲು ವೈಚಾರಿಕತೆಯಿದ್ದ ಗೆಳೆಯರು ಸಿಕ್ಕಿದ್ದರೆ ಅದು ವಿಶುವೇ! ಅವರಿಂದ ನನಗೆ ಎ.ಎನ್. ಮೂರ್ತಿರಾಯರ, ಡಾ.ಅಬ್ರಾಹಂ ಕೋವೂರರ ಪರಿಚಯವಾಗಿತ್ತು. ಮೂರ್ತಿರಾಯರು ಬರೆದ ದೇವರು, ದೆವ್ವ ಕುರಿತ ಹಲವು ಲೇಖನಗಳನ್ನು ಓದಿದ್ದೆ. ಕೋವೂರರ “ದೇವರು, ದೆವ್ವ, ವಿಜ್ಞಾನ” ಪುಸ್ತಕವನ್ನು ಇಡೀಯಾಗಿ ಓದಿ ಮುಗಿಸಿದ್ದೆ.

ವಿಶುವಿಗೆ ಟ್ಯಾಬ್ಲಯ್ಡಗಳ ಬಗೆಗೂ ಪರಿಚಯವಿತ್ತು. ಆ ಕಾಲದಲ್ಲಿ ಉತ್ತುಂಗದಲ್ಲಿದ್ದ “ಹಾಯ ಬೆಂಗಳೂರ್” ಪತ್ರಿಕೆಯ ರವಿಬೆಳಗೆರೆಯ ಬಗ್ಗೆ ದಂತಕಥೆಗಳೆ ಹುಟ್ಟಿಕೊಂಡಿದ್ದವು. ವಿಶು ತಪ್ಪದೇ ಓದುತ್ತಿದ್ದ ಪತ್ರಿಕೆಗಳ ಪೈಕಿ ಅದು ಬಹು ಮುಖ್ಯವಾಗಿತ್ತು. ಆ ಪತ್ರಿಕೆಯನ್ನು ಮೊದಲು ತಂದವರೇ ವಿಶು ಅದರಲ್ಲಿರುತ್ತಿದ್ದ ಜಾನಕಿ ಕಾಲಂ ಓದಿಬಿಡುತ್ತಿದ್ದರು. ಕಾರಣ ಕೇಳಿದರೆ, ಇವರ್ಯಾಿರೋ ಬೆಂಗಳೂರಿನ ಕಾಲೇಜಿನಲ್ಲಿ ಕನ್ನಡ ಪ್ರೊಫೇಸರ್ (ಲೇಡಿ) ಇರಬೇಕು, ಚೆನ್ನಾಗಿ ಬರೀತಾರೆ ಎಂದು ಹೇಳುತ್ತಿದ್ದರು. ಆಗೊಮ್ಮೆ ಈಗೊಮ್ಮೆ ನಾನೂ ಕಣ್ಣಾಡಿಸುತ್ತಿದ್ದರೂ ಮೊದಲು ಕೆಲಸ ಹುಡುಕುವ ಧಾವಂತದಲ್ಲಿದ್ದದರಿಂದ ಹೆಚ್ಚೇನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆ ಜಾನಕಿ ಜೋಗಿಯವರು ಎಂದು ನನಗೆ ಗೊತ್ತಾಗಿದ್ದು ಸುಮಾರು ೨೦೦೬-೦೭ರಲ್ಲಿ ಇರಬೇಕು. ಅದೂ ಈಟಿವಿಯವರು ಇವರ ಬಗ್ಗೆ ಪರಿಚಯಮಾಡಿಕೊಟ್ಟಮೇಲೆ!

ಇದೆಲ್ಲಾ ಇರಲಿ, ಅಲ್ಲಿಯವರೆಗೂ ಏನಾನ್ನಾದರೂ ಬರೆಯಬೇಕೆಂದು ಚಿಂತಿಸುತ್ತಿದ್ದ ನನಗೆ ಏನನ್ನು ಬರೆಯಬೇಕು? ಹೇಗೆ ಬರೆಯಬೇಕು? ಎಂದು ಸರಿಯಾಗಿ ತೋಚುತ್ತಿರಲಿಲ್ಲ. ಎಂಟನೇ ತರಗತಿಯಲ್ಲಿ ಒಂದು ಕಥೆ ಬರೆದು ಯಾರಾದರೂ ನೋಡಿಬಿಟ್ಟರೆ ಗತಿಯೇನು ಎಂಬ ಭಯದಿಂದಲೇ ಅದನ್ನು ಹರಿದುಹಾಕಿದ್ದೆ (ಭಯವೇಕಿತ್ತು ಎಂದು ನನಗೆ ಈಗಲೂ ಸರಿಯಾಗಿ ತಿಳಿದಿಲ್ಲ). ಆ ಸಂದರ್ಭದಲ್ಲಿ (೧೯೯೯) ಅರುಧಂತಿ ರಾಯ್‌ಳ “ಗಾಡ್ ಆಫ್ ಸ್ಮಾಲ್ ಥಿಂಗ್ಸ್” ಪುಸ್ತಕಕ್ಕೆ ಪ್ರತಿಷ್ಟಿತ ಬೂಕರ್ ಪ್ರಶಸ್ತಿ ಬಂದಿತ್ತು. ನಾನು ಸುಮ್ಮನೆ ಅವಳಿಗೆ ಬಂದಿದ್ದ ಪ್ರಶಸ್ತಿಯ ಮೊತ್ತವನ್ನು ಲೆಕ್ಕ ಹಾಕಿದ್ದೆ. ಹತ್ತಿರತ್ತಿರ ಐವತ್ತು ಲಕ್ಷಗಳು. ಆಗಲೇ ನನ್ನಲ್ಲಿದ್ದ ನಿರುದ್ಯೋಗಿ ನಿನ್ಯಾಕೆ ಒಂದು ಪುಸ್ತಕವನ್ನು ಬರೆದು ಇಷ್ಟು ಮೊತ್ತವನ್ನು ಗಳಿಸಬಾರದೆಂದು ಲೆಕ್ಕಹಾಕಿದ್ದ. ಎಂಥಾ ಹುಚ್ಚು ಭ್ರಮೆ!

ಅದು ಇಷ್ಟಕ್ಕೆ ಮುಗಿಯಲಿಲ್ಲ. ಒಂದು ರಾತ್ರಿ ಊಟವಾದ ಬಳಿಕ ವಿಶುವಿನ ಜೊತೆ ಸಣ್ಣ ತಿರುಗಾಟದಲ್ಲಿ ವಿಶುವನ್ನು ಕೇಳಿಯೆಬಿಟ್ಟೆ. ವಿಶು ನಾನೊಂದು ಪುಸ್ತಕ ಬರೆಯಬೇಕೆಂದಿರುವೆ? ವಿಶುವಿಗೆ ಗೊತ್ತಿತ್ತು ನಾನು ಕನ್ನಡದಲ್ಲಷ್ಟೆ ಬರೆಯಬಲ್ಲೆನೆಂದು. ಅವರು ಸಣ್ಣ ಆಶ್ಚರ್ಯಬವನ್ನಷ್ಟೆ ವ್ಯಕ್ತ ಪಡಿಸಿ ಬರೆಯುವುದೆನೋ ಸರಿ, ಆದರೆ, ಕನ್ನಡದಲ್ಲಿ ಪುಸ್ತಕ ಮಾಡುವುದು ಅದನ್ನು ಮಾರಾಟ ಮಾಡುವುದು ತುಂಬ ಕಷ್ಟದ ಕೆಲಸ. ಅದಕ್ಕೆಲ್ಲಾ ತುಂಬಾ ಹಣ ಖರ್ಚಾಗುತ್ತದೆ, ಜೊತೆಗೆ ಹೊಸಬರ ಪುಸ್ತಕಗಳನ್ನು ಯಾರೂ ಪ್ರಕಾಶಿಸಲು ಇಷ್ಟಪಡುವುದಿಲ್ಲ ಮತ್ತು ಯಾರೂ ಕೊಂಡು ಓದುವುದಿಲ್ಲ ಎಂದು ವಾಸ್ತವವನ್ನು ಹೇಳಿದ್ದರು. ಎಸ್.ಎಲ್.ಭೈರಪ್ಪ ಮತ್ತು ರವಿಬೆಳಗೆರೆಯವರ ಪುಸ್ತಕಗಳು ಮಾತ್ರ ಚೆನ್ನಾಗಿ ಮಾರಾಟವಾಗುತ್ತವೆ, ಇನ್ನೂ ಉತ್ತಮ ಲೇಖಕರಿದ್ದರೂ ಅವರ ಪುಸ್ತಕಗಳು ಅಷ್ಟೇನೂ ಖರ್ಚಾಗುವುದಿಲ್ಲ ಎಂದು ವಿವರಿಸಿದ್ದರು. ಜೊತೆಗೆ ಬಹಳ ಹಿಂದೆ ಅವರದೊಂದು ಕವನವನ್ನು ಸೇರಿಸಿ ಹೊರತಂದಿದ್ದ “ಕತ್ತಲೆಗೆ ಮೂರು ಬಣ್ಣ” ಎಂಬ ಕವನ ಸಂಕಲನದ ಬಗೆಗೂ ಹೇಳಿದರು. ಅವರ ಹಿರಿಯ ಸಾಹಿತಿ ಮಿತ್ರರಾದ ಹಂಪಣ್ಣ ಸರ್, ಎಂ.ಹೆಚ್.ಎನ್. ಸರ್ ಮತ್ತಿತ್ತರರು ಸೇರಿ ಈ ಪುಸ್ತಕವನ್ನು ಹೊರತಂದಿದ್ದರು. ಅದಕ್ಕೆ ಪಟ್ಟ ವ್ಯಥೆಯನ್ನು ಹಂಚಿಕೊಂಡಿದ್ದರು. ಜೊತೆಗೆ ಇದೆಲ್ಲಾ ಬೆಂಗಳೂರಿನಲ್ಲಿರುವವರಿಗೆ ಸುಲಭ ಎಂದು ಹೇಳಿದರು. ಕನ್ನಡ ಮತ್ತು ಇಂಗ್ಲೀಷ್ ಪುಸ್ತಕ ಮಾರುಕಟ್ಟೆಯತ್ತಲೂ ನಮ್ಮ ಚರ್ಚೆ ಮುಂದುವರಿದು ಸಾಕಷ್ಟು ಮಾಹಿತಿ ನನಗೆ ದೊರೆತ್ತಿತ್ತು.

ಅಲ್ಲಿಗೆ ಸದ್ಯಕ್ಕೆ ಪುಸ್ತಕವೊಂದನ್ನು ಬರೆದು ಪ್ರಕಟಿಸಿ, ಮಾರುವ ಬದಲು ಒಂದು ಕೆಲಸ ಹುಡುಕಿಕೊಂಡು ನಂತರ ಇದರ ಬಗ್ಗೆ ಚಿಂತಿಸಬೇಕೆಂದು ನನಗೆ ನಾನೇ ತಿಳಿ ಹೇಳಿಕೊಂಡದ್ದಾಯಿತು.

ತದನಂತರ ನನ್ನ ಜೀವನದಲ್ಲಿ ನಾನೆಂದೂ ಉಹಿಸಲಾರದ ರೀತಿಯಲ್ಲಿ ಹಲವು ಬದಲಾವಣೆಗಳಾಗಿ ನಾನೇನಾಗುವೇನೋ ನನಗೆ ಸರಿಯಾಗಿ ತಿಳಿಯದಾಯಿತು. ಆಗ ನನ್ನ ಕೈ ಹಿಡಿದಿದ್ದು ಸಾಹಿತ್ಯ. ಆಗ ಮತ್ತೆ ಹೆಚ್ಚು ಹೆಚ್ಚು ಓದಲು ಶುರುಮಾಡಿದೆ. ಆ ಓದೇ ಏನೋ ನನ್ನಿಂದ ಕೆಲವು ಕವನಗಳನ್ನು ಬರೆಯಲಾರಂಭಿಸಿತು. ಅದಕ್ಕೆ ಪ್ರೀತಿಯ ಪ್ರೇರಣೆಯೂ ದೊರೆಯಿತು. ಆ ಹಲವು ಕವನಗಳಿಗೆ ವಿಶುವೇ ಮೊದಲ ಸಾಕ್ಷಿಯಾದರು. ಹಲವರು ಓದಿ ಪ್ರೋತ್ಸಾಹಿಸಿದರು. ಇದರಲ್ಲಿ ಬಹುಮುಖ್ಯವಾಗಿ ದೇವರು ಕೊಟ್ಟ ತಂಗಿ ಸುಷ್ಮಾ ಮತ್ತು ಜೀವದ ಗೆಳೆಯ ಮೃತ್ಯುಂಜಯರು. ನನ್ನವಳಿಗೆ (ಆಗಿನ್ನೂ ಮದುವೆಯಾಗಿರಲಿಲ್ಲ) ನನ್ನೆಲ್ಲಾ ಕವನಗಳು ಮೆಚ್ಚುಗೆಯಾಗುತ್ತಿದ್ದವು.

ಹೀಗೆ ಕಾಲ ಕಳೆಯುತ್ತಿರಲು ಕೆಲಸದ ನಿಮಿತ್ತ ತುಮಕೂರಿನಲ್ಲಿ ಮನೆ ಮಾಡಿಕೊಂಡೆ. ಆಗ ಸ್ವಲ್ಪ ಗದ್ಯದ ಕಡೆಗೂ ಗಮನ ಹರಿಸತೊಡಗಿದೆ. ಕಾಲ್ಪನಿಕವಾಗಿ ಕೆಲವು ಲೇಖನಗಳನ್ನು ಬರೆದು ನನ್ನಲ್ಲೇ ಇಟ್ಟುಕೊಳ್ಳತೊಡಗಿದೆ. ಜೊತೆಗೆ ನನ್ನ ಬಳಿ ಕುತೂಹಲಭರಿತ ಒಳ್ಳೊಳ್ಳೆ ಲೇಖನಗಳ ಸಂಗ್ರಹವಿತ್ತು. ನನ್ನ ಲೇಖನಗಳನ್ನು ಯಾವ ಪತ್ರಿಕೆಗೂ ಕಳುಹಿಸುತ್ತಿರಲ್ಲಿಲ್ಲ. ನಾನೇ ಆಗಾಗ ತೆರೆದು ಓದುವುದು, ಮತ್ತೆ ತಿದ್ದುವುದು. ಹೀಗೇ ಸಾಗಿತ್ತು...

ಮದುವೆಯಾದ ನಂತರ, ಶ್ರೀಮತಿಯ ಪ್ರೋತ್ಸಾಹದಿಂದ ಮತ್ತಷ್ಟು ಬರೆಯತೊಡಗಿದೆ. ಆಗಷ್ಟೇ ಎಸ್.ಎಸ್.ಪುರಂನ ಶೆಟ್ಟರ ಪುಸ್ತಕದಂಗಡಿಯಲ್ಲಿ “ನಿಮ್ಮೆಲ್ಲರ ಮಾನಸ” ಎಂಬ ಮಾಸ ಪತ್ರಿಕೆಯೂ ಪರಿಚಯವಾಗಿತ್ತು. ಶ್ರೀಮತಿಯ ಪ್ರೋತ್ಸಾಹದಿಂದ ಒಂದು ಸಂಗ್ರಹ ಲೇಖನವನ್ನು ಮಾನಸಕ್ಕೆ ಕಳುಹಿಸಿ ಆತಂಕದಲ್ಲಿದ್ದೆ. ಅದಕ್ಕೂ ಮುಂಚೆ ಕೆಲವು ನಗೆಹನಿಗಳು ವಿಜಯಕರ್ನಾಟಕದ “ನಗೆವಿಜಯ” ಅಂಕಣದಲ್ಲಿ ಪ್ರಕಟವಾಗಿ ಮಿಂಚಿ ಮರೆಯಾಗಿದ್ದವು. ಒಂದು ದಿನ ಬೆಳಗ್ಗೆ ನಾನು ಸ್ನಾನ ಮಾಡುತ್ತಿದ್ದ ಸಮಯದಲ್ಲಿ ನನ್ನ ಫೋನು ರಿಂಗಣಿಸತೊಡಗಿತು. ನೋಡಿದ ಇವಳು “ರೀ... ಗಣೇಶ್ ಕೋಡೂರ್” ಎಂದು ಒಂದೇ ಉಸಿರಿಗೆ ಬಚ್ಚಲಿಗೆ ಹಾರಿದ್ದಳು. ಫೋನ್ ರಿಸೀವ್ ಮಾಡಿ ವಿಶ್ ಮಾಡಿ ಮಾತನಾಡಿದೆ. ನನ್ನ ಸಂಗ್ರಹ ಚೆನ್ನಾಗಿರುವುದೆಂದು ಅದನ್ನು ಪ್ರಕಟಿಸುವುದಾಗಿಯೂ ಗಣೇಶ್ ಹೇಳಿದರು. ನನ್ನಲ್ಲಿ ವಿದ್ಯುತ್ ಸಂಚಾರವಾಯಿತು. ಅವರೆಷ್ಟು ಸರಳವಾಗಿ ನನ್ನನ್ನು ಗಣೇಶ್ ಎಂದಷ್ಟೇ ಕರಿಯಿರಿ ಎಂದು ಆತ್ಮೀಯತೆ ತೋರಿದರು. ನನಗೆ ಆ ಆತ್ಮೀಯತೆ ಆಪ್ತವಾಯಿತು. ಹೀಗೆ ಹಲವು ವರ್ಷಗಳು ಕಳೆದವು. ಒಮ್ಮೆ ಗೆಳೆಯ ವಿಶುವಿನ ಜೊತೆ ಬೆಂಗಳೂರಿಗೆ ಹೋಗಿ ಗಣೇಶ್ ರವರನ್ನು ಭೇಟಿಮಾಡಿ ಬಂದೆ. ಆಗಾಗ ಏನಾದರು ಕೇಳುವುದಿದ್ದರೆ ಫೋನ್ ಮಾಡಿ ತೊಂದರೆ ಕೊಡುವುದು ಮುಂದುವರಿದೇ ಇತ್ತು.

ಮತ್ತೆ ಅನಿರೀಕ್ಷಿತ ಘಟನೆಗಳು ನನ್ನ ಆರೋಗ್ಯದ ವಿಚಾರವಾಗಿ ನಡೆದು ತತ್ತರಿಸಿದ್ದೆ. ಆಗೆಲ್ಲಾ ಗಣೇಶರನ್ನು ಮೀಟ್ ಮಾಡಬೇಕೆಂದುಕೊಂಡರೂ ಸುಮ್ಮನೆ ಅವರ ಕ್ರಿಯೇಟಿವ್ ಟೈಮನ್ನು ಹಾಳುಮಾಡುವುದೇಕೆ ಎಂದು ಸುಮ್ಮನಿದ್ದೆ.

ಒಂದಷ್ಟು ಸಮಯದ ನಂತರ ಒಂದೆರಡು ಸಂಗ್ರಹ ಲೇಖನಗಳು ಪ್ರಕಟವಾದ ಮೇಲೆ, ನನ್ನದೇ ಸ್ವಂತ ಲೇಖನಗಳನ್ನು ಮಾನಸಕ್ಕೆ ಕಳುಹಿಸುವುದೆಂದು ನಿರ್ಧರಿಸಿ ಅದನ್ನೂ ಮಾಡಿದೆ. ಸುಂದರವಾದ ಚಿತ್ರಗಳೊಂದಿಗೆ “ನಿನ್ನ ಮನೆಯ, ನನ್ನ ಮನದ ಲಕ್ಷ್ಮೀಯು ನೀನು...” ಎಂಬ ಲೇಖನ ಪ್ರಕಟವಾಗಿ ನನ್ನಲ್ಲಿ ಮತ್ತಷ್ಟು ಹುರುಪು ತುಂಬಿತು. ಆ ಸಮಯಕ್ಕೆ ಸರಿಯಾಗಿ ನನ್ನ ಬ್ಲಾಗ್ ರೂಪುಗೊಂಡಿತ್ತು. ಅದರ ಮುಖಾಂತರವೂ ಒಂದಷ್ಟು ಗೆಳೆಯರು ಸಿಕ್ಕಿದ್ದರು.

ಮತ್ತೊಂದೆರೆಡು ಲೇಖನಗಳು ಮಾನಸದಲ್ಲಿ ಪ್ರಕಟವಾದ ಮೇಲೆ, ಒಂದಷ್ಟು ಹಣವನ್ನು ಹೊಂದಿಸಿಕೊಂಡು ನನ್ನ ಮೊದಲ ಪುಸ್ತಕವಾಗಿ “ಮಳೆಯಾಗು ನೀ...” ಕವನಸಂಕಲನವನ್ನು ನಮ್ಮದೇ ಪ್ರಕಾಶನದಲ್ಲಿ ಪ್ರಕಟಿಸುವುದಾಗಿ ತೀರ್ಮಾನಿಸಿದ್ದೆ.

ಆಗೆಲ್ಲಾ ಸಾಕಷ್ಟು ವಿವರ ನೀಡಿದವರು ಗಣೇಶ್. ಜೊತೆಗೆ ಖ್ಯಾತ ಲೇಖಕಿ ಶ್ರೀಮತಿ ಬಿ.ಸಿ.ಶೈಲಾ ನಾಗರಾಜ್ ರವರ ಮುನ್ನುಡಿಯೊಂದಿಗೆ ಪುಸ್ತಕ ಬಿಡುಗಡೆ ಸಮಾರಂಭ ಚೆನ್ನಾಗಿ ನಡೆಯಿತು. “ಮಳೆಯಾಗು ನೀ...” ನನಗೊಂದಿಷ್ಟು ಹೆಸರನ್ನೂ ತಂದುಕೊಟ್ಟಿತ್ತು. ಈ ಸಂಕಲನದ “ಬೆಚ್ಚಗೆ” ಎಂಬ ಹನಿಗವನ ‘ಎಲ್ಲಾ ಕಾಲದಲ್ಲೂ ಬೆಚ್ಚಗಿರಲು/ಹೆಂಗಸರಿಗೆ ನೈಟಿ/ಗಂಡಸರಿಗೆ ನೈಂಟಿ’ ಟಿವಿಯ ಕಾರ್ಯನಕ್ರಮವೊಂದರಲ್ಲಿ ಉದ್ಗರಿಸಿದ್ದನ್ನ ನಮ್ಮ ಬ್ಯಾಂಕಿನ ಆಗಿನ ನಿರ್ದೇಶಕರಾಗಿದ್ದ ಶ್ರೀ ಟಿ.ವಿ.ಮಂಜುನಾಥರವರಿಂದ (ಇವರೀಗ ಅಧ್ಯಕ್ಷರು) ಮತ್ತು ನನ್ನ ಹಿರಿಯ ಸಹೋದ್ಯೋಗಿ ಶ್ರೀಮತಿ ಆಶಾರವರಿಂದ ತಿಳಿದು ಖುಷಿಗೊಂಡಿದ್ದೆ. ಶ್ರೀಯುತ ಮಂಜುನಾಥರವರು ನನಗೊಂದು ಪೆನ್ನನ್ನು ಉಡುಗೊರೆಯಾಗಿ ಕೂಡ ನೀಡಿದ್ದರು.

ಆನಂತರ ಅದಾಗಲೇ ಮಾನಸದಲ್ಲಿ ಪ್ರಕಟವಾಗಿದ್ದ ಮೊದಲ ಲೇಖನಕ್ಕೆ ಪೂರಕವಾಗಿ ಹಲವು ಲೇಖನಗಳನ್ನು ಬರೆದು ಬ್ಲಾಗಿನಲ್ಲಿ ಪ್ರಕಟಿಸಿ, ಹಲವು ಗೆಳೆಯರನ್ನು ಗಳಿಸಿಕೊಂಡಿದ್ದೆ. ನಂತರ ಮಾನಸದಲ್ಲಿ ಮತ್ತೂ ಎರಡೂ ಲೇಖನಗಳು ಪ್ರಕಟವಾದವು. ಆ ಸಮಯದಲ್ಲಿ “ಗಾಳಿಪಟದ ಬಾಲ ಎನ್ನ ಮನ” ಎಂಬ ಲೇಖನಕ್ಕೆ ತುಮಕೂರಿನ ಶ್ರೀ ಸಿದ್ದರಾಜ ಐವಾರರು ನಡೆಸಿದ್ದ ಗಾಳಿಪಟ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವೂ ಬಂತು. ಈ ಲೇಖನ ಅಂತಾರ್ಜಾಲ ಪತ್ರಿಕೆ “ಅವಧಿ”ಯಲ್ಲಿ ಪ್ರಕಟವಾದ ನನ್ನ ಮೊದಲ ಲೇಖನ. ಆಗ ಈ ಎಲ್ಲಾ ಲೇಖನಗಳನ್ನೂ ಸೇರಿಸಿ “ಸ್ನೇಹ ಮಾಡಬೇಕಿಂಥವಳ...” ಎಂಬ ಸಂಗ್ರಹವನ್ನು ಹೊರತರುವುದೆಂದು ನಿರ್ಧರಿಸಿದ್ದೆ. ಅದಕ್ಕೆ ಶ್ರೀ ಎ.ಆರ್. ಮಣಿಕಾಂತ್ ರವರ ಕೈಯಲ್ಲಿ ಮುನ್ನುಡಿಬರೆಸಬೇಕೆಂದು ತೀರ್ಮಾನಮಾಡಿಕೊಂಡಿದ್ದೆ. ಅವರಿಗೆ ಹೇಳಿ ಮುನ್ನುಡಿ ಬರೆಸಿಕೊಡುವ ಜವಾಬ್ದಾರಿಯನ್ನು ಪ್ರೀತಿಯ ಪ್ರಕಾಶಣ್ಣ ತೆಗೆದು ಕೊಂಡಿದ್ದರು. ಆದರೆ, ಮಣಿಕಾಂತ್ ಸರ್ ಪತ್ರಕರ್ತರಾದ್ದರಿಂದಲೋ ಏನೋ ಮುನ್ನುಡಿ ಬೇಗ ಸಿಗಲಿಲ್ಲ. ಅದಾಗ ನಾಗತಿಹಳ್ಳಿಯ ಮೊದಲನೇ ಚಿತ್ರಕಥಾ ಶಿಬಿರದ ನಂತರ ಬರೆದಿದ್ದ “ಮುಗುಳ್ನಗೆ”ಯನ್ನು ಪ್ರಕಟಿಸುವುದೆಂದು ತೀರ್ಮಾನಿಸಿ, ಆ ಪುಸ್ತಕ ತುಮಕೂರಿನಲ್ಲಿ ಬಿಡುಗಡೆಯೂ ಆಯಿತು. ಈಗ ಮತ್ತೆ ಸಹಾಯಕ್ಕೆ ಬಂದವರು ಮತ್ತೆ ಗಣೇಶ್. ಅವರು ಪುಸ್ತಕದ ವಿನ್ಯಾಸ, ಮುದ್ರಣ ಮತ್ತು ವಿತರಣೆಯ ಜವಾಬ್ದಾರಿಯನ್ನು ತೆಗೆದುಕೊಂಡರು. ಎಂದಿನಂತೆ ಗೆಳೆಯ ಅಜಿತನ ಮುಖಪುಟ ವಿನ್ಯಾಸವಿತ್ತು. ಮೊದಲ ಬಾರಿಗೆ ನನ್ನ ಪುಸ್ತಕ ರಾಜ್ಯದ ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಅದರಲ್ಲೂ ಸಪ್ನದಲ್ಲಿ ಸಿಗುವಂತಾಯಿತು. ಈ ಒಂದೊಂದು ಸಂತೋಷವೂ ಮರೆಯಲಾಗದ ಘಟನೆಗಳೆ. ಹ್ಞಾಂ.. ಈ ಪುಸ್ತಕದ ಬಗ್ಗೆ ಹಲವು ಮೆಚ್ಚುಗೆಗಳು ಬಂದವು. ಇದರಲ್ಲಿ ಬಹುಪ್ರಮುಖವಾದದು ವಿಶುವಿನದ್ದು. ಅವರು ನನ್ನ ಶೈಲಿಯನ್ನು ಮೆಚ್ಚಿದ್ದರು. ಅವರ ಯಾವಾಗಲೂ ನಿಮ್ಮದೇ ಶೈಲಿಯನ್ನು ಕಂಡುಕೊಳ್ಳಬೇಕೆಂದು ಹೇಳುತ್ತಿದ್ದರಿಂದ ನನಗೆ ಸಂತಸ ಇಮ್ಮಡಿಯಾಗಿತ್ತು.

ಕೆಲವು ತಿಂಗಳುಗಳು ಕಳೆದ ಮೇಲೆ, ನಮ್ಮ ಪ್ರಕಾಶನದಿಂದ ಇತರರ ಪುಸ್ತಕಗಳನ್ನು ಪ್ರಕಟಿಸಿ, ನಮ್ಮ ಪ್ರಕಾಶನವನ್ನು ಬೆಳೆಸಬೇಕೆಂದಿದ್ದ ನಮಗೆ ಪ್ರಕಾಶ್ ಹೆಗಡೆಯವರ “ಇದರ ಹೆಸರು ಇದಲ್ಲ”, ಡಾ.ಅಜಾದ್‌ರವರ “ಬಟಾಣಿ ಚಿಕ್ಕಿ” ಮತ್ತು ಉಮೇಶ್ ದೇಸಾಯಿಯವರ “ಕನವರಿಕೆಗಳು” ಪುಸ್ತಕಗಳನ್ನು ಪ್ರಕಟಿಸುವ ಸೌಭಾಗ್ಯ ಒದಗಿಬಂತು. ಈ ಸಂದರ್ಭದಲ್ಲೆ ನನ್ನ ಸ್ನೇಹ ಮಾಡಬೇಕಿಂಥವಳ ಪುಸ್ತಕವನ್ನು ಪ್ರಕಟಿಸುವುದೆಂದು ತೀರ್ಮಾನಿಸಿ ಮಣಿಕಾಂತ್ ಸರ್ ಅವರನ್ನು ಸಂಪರ್ಕಿಸಲಾಗಿ ಅವರು ಮುನ್ನುಡಿಯನ್ನೂ ಕೊಟ್ಟರು. ಅಲ್ಲಿಗೆ ಎಂದಿನಂತೆ ಗಣೇಶರ ಸಹಕಾರದಿಂದ ಪುಸ್ತಕಗಳನ್ನು ಪ್ರಕಟಿಸಿ, ಆಗಸ್ಟ್ ೨೫ರಂದು ಬೆಂಗಳೂರಿನಲ್ಲಿ ಬಿಡುಗಡೆ ಮಾಡುವುದೆಂದಾಯಿತು.

ಬೆಂಗಳೂರಿನ ಈ ಕಾರ್ಯಕ್ರಮಕ್ಕೆ ನನ್ನ ಪುಸ್ತಕ ಕುರಿತು ಯಾರು ಮಾತನಾಡುತ್ತಾರೆ ಎಂಬ ಗೆಳೆಯರ ಪ್ರಶ್ನೆಗೆ ಗಣೇಶ್ ಎಂದು ಹೇಳಿ ಗಣೇಶ್ ರವರಿಗೆ ಫೋನ್ ಮಾಡಿ ಪ್ರೀತಿಯಿಂದ ಅವರನ್ನು ಒಪ್ಪಿಸಿಯೇ ಬಿಟ್ಟೆ. ಮೊದಲು ನಾನು ಜೊತೆಗಿರುತ್ತೇನೆ ಎಂದ ಗಣೇಶ್, ನಂತರ ನನ್ನ ಪ್ರೀತಿಗೆ ಮಣಿದು ವೇದಿಕೆಗೆ ಬರಲು ಒಪ್ಪಿಕೊಂಡರು.

ಆಗಸ್ಟ್ ೨೫ರಂದು ಶ್ರೀ ಬಿ.ಆರ್. ಲಕ್ಷ್ಮಣರಾವ್, ಶ್ರೀ ಈರಣ್ಣ ಇಟಗಿ, ಶ್ರೀ ದಿವಾಕರ ಹೆಗಡೆ ಮುಂತಾದ ಘಟಾನುಘಟಿಗಳ ಸಮ್ಮುಖದಲ್ಲಿ ನನ್ನನ್ನು ಮೊದಲಬಾರಿಗೆ ಪ್ರೋತ್ಸಾಹಿಸಿದ ಗಣೇಶ್ ಕೋಡೋರುರ ಉಪಸ್ಥಿತಿಯಲ್ಲಿ ನಮ್ಮ ೪ ಪುಸ್ತಕಗಳು, ಜೊತೆಗೆ ಶ್ರೀ ಸೃಷ್ಟಿ ನಾಗೇಶರವರ ಪ್ರಕಾಶನದ “ಬ್ಲಾಗಿಸು ಕನ್ನಡ ಡಿಂಡಿಮ” ಎಂಬ ಪುಸ್ತಕ, ಒಟ್ಟು ೫ ಪುಸ್ತಕಗಳು ಲೋಕಾರ್ಪಣೆಗೊಂಡವು. ಗಣೇಶ್, ನನ್ನ ಪುಸ್ತಕದ ಜೊತಗೆ ನಮ್ಮ ಸ್ನೇಹ ಬೆಳೆದ ರೀತಿಯನ್ನು ನೆನೆಸಿಕೊಂಡರು. ಇದೆಲ್ಲಾ ನನ್ನನ್ನು ಮತ್ತಷ್ಟು ಭಾವುಕನನ್ನಾಗಿಸಿತು. ಜೊತೆಗೆ ಅಂದಿನ ನೋವಿನ ವಿಷಯವೇಂದರೆ ಇದನ್ನೆಲ್ಲಾ ನೋಡಲು ಗೆಳೆಯ ವಿಶು ಯಾವುದೋ ಕಾರ್ಯ ಕ್ರಮದ ಒತ್ತಡದಿಂದ ಬಂದಿರಲಿಲ್ಲ. ಬೆಂಗಳೂರಿನಲ್ಲಿ ನಿಮ್ಮ ಪುಸ್ತಕ ಬಿಡುಗಡೆಯಾಗುವ ಮಟ್ಟಕ್ಕೆ ನೀವು ಬೆಳೆಯಬೇಕು ಎಂದು ಹರಸಿದ್ದ ಗೆಳೆಯನ ಅನುಪಸ್ಥಿತಿ ಅಂದು ಕಾಡಿದರೂ, ನೆರೆದ ಗೆಳೆಯರ ಪ್ರೀತಿಗೆ ನಾನು ಮೂಕನಾಗಿದ್ದೆ.

(ಅಂದಹಾಗೆ ಅಕ್ಟೋಬರ್ ತಿಂಗಳ “ನಿಮ್ಮೆಲ್ಲರ ಮಾನಸ” ಮಾಸಪತ್ರಿಕೆಯ ನನ್ನ ನೆಚ್ಚಿನ ಅಂಕಣ “ಕಾಗದದ ದೋಣಿ”ಯಲ್ಲಿ ಗಣೇಶ್ ನಮ್ಮ ಪುಸ್ತಕ ಬಿಡುಗಡೆ ಸಮಾರಂಭದ ಬಗ್ಗೆ ಮತ್ತು ನಮ್ಮ ಸ್ನೇಹ ಕುರಿತು ಬರೆದಿದ್ದಾರೆ. ಅವರಿಗೆ, ಅವರ ಸ್ನೇಹಕ್ಕೆ ನಾನು ಆಭಾರಿ)

(ಮತ್ತೊಂದು ಖುಷಿಯ ಸಂಗತಿಯೆಂದರೆ, ಈ ಲೇಖನ ನಮ್ಮ “ಕಾಲೇಜ್ ಡೈರಿ” ಮಾಸಪತ್ರಿಕೆಯಲ್ಲಿ ಪ್ರಕಟವಾಗಿ ಇನ್ನೇನು ವಿಶುವಿಗೆ ತಲುಪಬೇಕು ಅನ್ನುವಷ್ಟರಲ್ಲಿ ವಿಶು, ಅವರ ಮದುವೆಯ ಲಗ್ನಪತ್ರಿಕೆ ಹಿಡಿದು ನಮ್ಮ ಮನೆಯಲ್ಲಿದ್ದರು)







ಮಂಗಳವಾರ, ಆಗಸ್ಟ್ 14, 2012

೨೦೦೮ರ ಆಗಸ್ಟ್ ೧೫, ೧೬ ಮತ್ತು ೧೭ರಲ್ಲಿ ನಾಗತಿಹಳ್ಳಿಯಲ್ಲಿ ನಡೆದ ಚಿತ್ರಕಥಾ ಶಿಬಿರದ ಅನುಭವಗಳು.



‘ಸಾಕ್ಷಾತ್ಕಾರ’ ನನ್ನ ಗಮನವನ್ನು ಸೆಳೆದ ಮೊದಲ ಚಲನಚಿತ್ರ. ಆ ಚಿತ್ರದ ’ಒಲವೇ ಜೀವನ ಸಾಕ್ಷಾತ್ಕಾರ’ ಎಂಬ ಹಾಡಂತೂ ನನ್ನ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಅದಾದ ಮೇಲೆ ಸಾಕಷ್ಟು ಕನ್ನಡ ಚಿತ್ರಗಳನ್ನು ನೋಡಿದ್ದರೂ ಇಷ್ಟವಾಗುತಿದ್ದದು ಡಾ//ರಾಜ್ ಅಭಿನಯದ ಚಿತ್ರಗಳು, ಪುಟ್ಟಣ್ಣ ಕಣಗಾಲರ ಚಿತ್ರಗಳು, ಶಂಕರ್‌ನಾಗ್ ಚಿತ್ರಗಳು ಮತ್ತು ಆಗೊಮ್ಮೆ ಈಗೊಮ್ಮೆ ವಿಷ್ಣುವರ್ಧನ್, ರವಿಚಂದ್ರನ್, ಜಗ್ಗೇಶ್, ಶಿವರಾಜ್‌ಕುಮಾರ್ ಚಿತ್ರಗಳು ಮತ್ತು ಮಕ್ಕಳ ಚಿತ್ರಗಳು. ಅಪರೂಪಕೊಮ್ಮೆ, ಕನ್ನಡದಲ್ಲಿ ಉತ್ತಮ ಚಿತ್ರಗಳು ಬರುತ್ತಿದ್ದರೂ ಅವುಗಳನ್ನು ನೋಡುವುದು ಸ್ವಲ್ಪ ಕಷ್ಟವಾಗುತ್ತಿತ್ತು, ಸಿನಿಮಾಗಿಂತ ಓದುವುದೇ ಮೇಲು ಎಂದು ಪುಸ್ತಕ ಪ್ರಪಂಚದಲ್ಲೇ ಮುಳುಗಿಬಿಟ್ಟಿದ್ದೆ.

‘ಅಮೆರಿಕಾ ಅಮೆರಿಕಾ’ ಚಿತ್ರ ಬಿಡುಗಡೆಯಾದಾಗ ಬಹಳ ಇಷ್ಟ ಪಟ್ಟು ನೋಡಿ, ‘ನೂರು ಜನ್ಮಕೂ, ನೂರಾರು ಜನ್ಮಕೂ’ ಎಂದೂ ಹಾಡಿದ್ದು ಬಿಟ್ಟರೆ ಸೀರಿಯಸ್ಸಾಗಿ ಚಿತ್ರಗಳನ್ನು ನೋಡಿದ್ದು ಕಮ್ಮಿ. ಆಗ ಬಂತು ನೋಡಿ ’ಮುಂಗಾರು ಮಳೆ’ ಯೆಂಬ ಕುಂಭದ್ರೋಣ ಮಳೆ. ಊರವರೆಲ್ಲಾ ಮುಂಗಾರುಮಳೆಯಲ್ಲಿ ತೋಯ್ದು ತೆಪ್ಪೆಯಾದರೂ ನನಗೇಕೋ ಮಳೆಯಲಿ ನೆನೆಯುವ ಮನಸ್ಸಾಗಿರಲಿಲ್ಲ. ‘ನಾ ನಾಲ್ಕುಸಲ ನೋಡಿದೆ. ಹತ್ತು ಸಲ ನೋಡಿದೆ ಎಂದು ಕೆಲವರು ಅಂದರೂ, ಕೆಲವರು ಅಂಕಣಗಳಲ್ಲಿ ಚಿತ್ರದ ಬಗ್ಗೆ ಬಂದರೂ ತಲೆಕೆಡಿಸಿಕೊಳ್ಳದ ನಾನು ಮುಂಗಾರುಮಳೆ ಐವತ್ತು ದಿನಗಳನ್ನು ಪೂರೈಸಿ ಶತದಿನೋತ್ಸವದತ್ತ ದಾಪುಗಾಲಿಟ್ಟಾಗ ಇದ್ದಕ್ಕಿದ್ದಂತೆ ಎಲ್ಲಾ ಪುಸ್ತಕಗಳನ್ನು ಎತ್ತಿಟ್ಟು ಯುಗಾದಿ ಹಬ್ಬದಂದು ಆ ಚಿತ್ರವನ್ನು ನೋಡಿದೆ. ಅಬ್ಬಾ ! ಎಂಥಾ ಚಿತ್ರ ! ಚಲನಚಿತ್ರವನ್ನು ಕನ್ನಡದಲ್ಲಿ ಹೀಗೂ ಮಾಡಬಹುದಾ ಅನ್ನಿಸಿತ್ತು.

ನಂತರ ನನ್ನಾಕೆಯ ಜೊತೆ ನೋಡಿದ ಮೊದಲ ಸಿನಿಮಾ ’ದುನಿಯಾ’ ಹೊಸ ರೀತಿಯಲ್ಲಿ ಕಾಣಿಸಿತು. ಅದಾಗಲೇ ನನ್ನ ತಲೆಯಲ್ಲಿ ಈಗ ಬರುತ್ತಿರುವ ಎಷ್ಟೋ ಕೆಟ್ಟ ಚಲನಚಿತ್ರಗಳಿಗಿಂತ ನನ್ನ ತಲೆಯಲ್ಲಿರುವ ಕಥೆಗಳು ಉತ್ತಮ ಚಲನಚಿತ್ರವಾಗಬಹುದಲ್ಲವೇ? ಎಂಬ ಪ್ರಶ್ನೆ ಮೂಡುತ್ತಿತ್ತು. ಆ ಪ್ರಶ್ನೆಯನ್ನು ಪರೀಕ್ಷೆಯ (ಎಂ.ಎ) ನೆಪವೂಡ್ಡಿ ತಡೆದಿದ್ದೆ.
ಪರೀಕ್ಷೆ ಮುಗಿಯಿತು ನೋಡಿ, ನನ್ನಲ್ಲಿದ್ದ ಕಥೆಗಾರ ಅವಾಗವಾಗ ಜಾಡಿಸಿ ಒದೆಯಲು ಶುರುಮಾಡಿದ. ಈ ಮಧ್ಯೆ ಒಂದು ಸಿನಿಮಾ ಆಗಬಹುದೇನೋ ಎಂದು ನಾನಂದು ಕೊಂಡಿರುವ ಕಥೆಯನ್ನು ’ಪೆನ್ ಎತ್ ಬರಿ, ಸ್ಯಾಂಡಲ್‌ವುಡ್‌ನಲ್ಲಿ ಮೆರಿ’ ಎಂಬ ಮಿರ್ಚಿಮೂವೀಸ್‌ರವರ ಸಿನಿಮಾ ಕಥಾ ಸ್ಪರ್ಧೆಗೆ ಕಳಿಸಿದ್ದೆ. ಅದಿನ್ನೂ ರಿಸಲ್ಟ್ ಬರುವುದರಲ್ಲಿದೆ(ಬರುವುದಿಲ್ಲವೆಂದು ಖಚಿತವಾಗಿದೆ).


ಅಷ್ಟೊತ್ತಿಗಾಗಲೇ ಸಿನಿಮಾಗೆ ಕಥೆ ಬರೆದರೆ ಅಷ್ಟೇ ಸಾಲದು, ಸಿನಿಮಾಗೆ ಚಿತ್ರಕಥೆಯನ್ನು ಬರೆಯಬೇಕು. ಅದು ಚಲನಚಿತ್ರದ ಪ್ರಮುಖ ಅಂಗ ಎಂಬುದು ಮನದಟ್ಟಾಗಿತ್ತು. ಇಂಟರ್‌ನೆಟ್‌ನಲ್ಲಿ ಸಾಕಷ್ಟು ಹುಡುಕಿ ತಿಳಿದುಕ್ಕೊಳಲು ಯತ್ನಿಸಿದ್ದರೂ ಸರಿಯಾದ ಮಾರ್ಗ ತಿಳಿದಿರಲಿಲ್ಲ. ಆಗ ಇದ್ದಕ್ಕಿದ್ದಂತೆ ಚಿತ್ರಲೋಕ.ಕಾಮ್‌ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್‌ರವರ ನೇತೃತ್ವದಲ್ಲಿ ‘ರಾಜ್ಯಮಟ್ಟದ ಚಿತ್ರಕಥಾ ತರಬೇತಿ ಶಿಬರ’ ದ ಬಗ್ಗೆ ಮಾಹಿತಿಯಿತ್ತು. ತಕ್ಷಣ ಅರ್ಜಿ ಲಗಾಯಿಸಿ, ಬಂದಿದ್ದ ಸಾವಿರಾರು ಅರ್ಜಿಗಳ ಪೈಕಿ ಆಯ್ಕೆಯಾದ ನೂರಕ್ಕಿಂತ ಸ್ವಲ್ಪ ಹೆಚ್ಚು ಜನರಲ್ಲಿ ನಾನು ಒಬ್ಬನಾದಾಗ ನನ್ನ ಆನಂದಕ್ಕೆ ಮಿತಿಯಿರಲಿಲ್ಲ.

ಅಂತೂ ಇಂತೂ ಆಗಸ್ಟ್ ೨೦೦೮, ೧೫ ರ ಬೆಳಗ್ಗೆ ನಾ ನಾಗತಿಹಳ್ಳಿಯಲ್ಲಿದ್ದೆ. ಬೆಳಿಗ್ಗೆ ಒಂಬತ್ತರ ಹೊತ್ತಿಗೆ ಅ. ನಾಗತಿಹಳ್ಳಿಯ ಶಾಲೆ (ನಾಗ್ತಿ ಸಾರ್ ಅಲ್ಲೇ ಓದಿದ್ದು) ಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅದ್ದೂರಿಯಾಗಿ ನೇರವೇರಿತು. ನಂತರ ನಾಗ್ತಿಸರ್‌ರವರ ಮನೆಯ ದರ್ಶನವಾಯಿತು. ಮನೆಯ ಬದಿಯಲ್ಲೇ ಊಟತಿಂಡಿಗೆ ವ್ಯವಸ್ಥೆಯಾಗಿದ್ದರಿಂದ ಬೆಳಗಿನ ತಿಂಡಿಯಾಯಿತು. ಅಲ್ಲಿಂದ ಮತ್ತೆ ಶಾಲೆಯ ಬಳಿ ಬಂದೆ ಆ ಶಾಲೆಯ ಹಿಂಭಾಗದಲ್ಲಿ ನಾಗ್ತಿಸರ್‌ರವರು ಕಟ್ಟಿಸಿರುವ ‘ಸಿಹಿಕನಸು’ ಬಯಲು ರಂಗಮಂದಿರವಿದೆ. ಅದು ಅದಾಗಲೇ ಶಿಬಿರಕ್ಕೆ ಸಜ್ಜಾಗಿತ್ತು. ಆ ರಂಗಮಂದಿರದ ಲಂಬಕ್ಕೆ ನಾಗ್ತಿಸರ್ ತಮ್ಮ ತಂದೆ-ತಾಯಿಯ ಹೆಸರಿನಲ್ಲಿ ಗ್ರಂಥಾಲಯ ಕಟ್ಟಿಸಿದ್ದಾರೆ. ಪಕ್ಕಕ್ಕೆ ಶ್ರೀಮತಿ ನಾಗ್ತಿಸಾರ್‌ರವರ ಹೆಸರಿನಲ್ಲಿ ಕಂಪ್ಯೂಟರ್ ಸೆಂಟರಿದೆ. ಇದನ್ನೆಲ್ಲಾ ಗಮನಿಸುತ್ತಿದ್ದ ಸ್ವಲ್ಪ ಹೊತ್ತಿಗೆ ನಾಗ್ತಿಸರ್‌ರವರ ದರ್ಶನವಾಯಿತು. ಸೀದಾ ಹೋದವನೇ ಕೈ ಮುಗಿದು ‘ಹ್ಯಾಪಿ ಬರ್ತಡೇ ಸಾರ್’ ಎಂದೆ. ಅವರ ಗಮನವೆಲ್ಲಾ ಶಿಬಿರದ ಆರಂಭದ ತಯಾರಿಕಡೆಗಿತ್ತು. ‘ಕುಳಿತುಕ್ಕೊಳ್ಳಿ, ಸ್ವಲ್ಪ ಹೊತ್ತಿನಲ್ಲಿ ರಿಜಿಸ್ಟ್ರೇಷನ್ ಶುರು ಮಾಡುತ್ತೇವೆ, ತಿಂಡಿಯಾಗಿಲ್ಲದಿದ್ದರೆ ಮಾಡಿಕೊಂಡು ಬನ್ನಿ’ ಎಂದು ಹೇಳಿದರು. ತಿಂಡಿಯಾಗಿದ್ದರಿಂದ ನಾ ಬಂದು ಅವರನ್ನೇ ಗಮನಿಸುತ್ತಾ ಕುಳಿತೆ.

ಎಲ್ಲರ ರಿಜಿಸ್ಟ್ರೇಷನ್ ಆದ ಬಳಿಕ ಅಷ್ಟೊತ್ತಿಗಾಗಲೇ ಬಂದಿದ್ದ ಬಿ.ಸುರೇಶ್ (ಉದಯ ಟೀವಿಯ ’ನಾಕುತಂತಿ’ ಖ್ಯಾತಿ)ರವರು ತಮ್ಮ ಉಪನ್ಯಾಸವನ್ನು ನಡೆಸಿಕೊಟ್ಟರು. ಶಿಬಿರದ ಎಲ್ಲಾ ಅಭ್ಯರ್ಥಿಗಳು ಉತ್ಸುಕತೆಯಿಂದ ಪ್ರಶ್ನೋತ್ತರದಲ್ಲಿ ಭಾಗಿಯಾದರು. ನಮಗೆಲ್ಲಾ ಹೊಸ ಪ್ರಪಂಚದ ರೂಪುರೇಶೆಗಳು ಅರ್ಥವಾಗುತ್ತಾ ಹೋದವು. ಬಿ.ಸುರೇಶ್‌ರವರು ಬಹಳ ತಾಳ್ಮೆಯಿಂದ ಸಿನಿಮಾ ಮತ್ತು ಟಿವಿಯ ಎಬಿಸಿಡಿಯ ಬಗ್ಗೆ ಮತ್ತದರ ಹಲವಾರು ಮಜಲುಗಳ ಬಗ್ಗೆ ಮನದಟ್ಟು ಮಾಡಿದರು.

ಅವರಿಗೆ ವಿದಾಯ ಹೇಳಿದ ನಂತರ ಊಟ ಮಾಡಿ ಬಂದವರಿಗೆ ಯುವ ನಿರ್ದೇಶಕ, ಯುವಕ. ಯುವತಿಯರಿಗೋಸ್ಕರವೇ ಚಿತ್ರಮಾಡುತ್ತೇನೆ ಎಂದು ಹೇಳುವ, ಆದರೆ ತಮಗೆ ಗೊತ್ತಿದ್ದೋ-ಗೊತ್ತಿಲ್ಲದೆಯೋ ಕಿರಿಯರಿಂದ-ಹಿರಿಯರ ತನಕ ಎಲ್ಲರನ್ನೂ ಸೆಳೆದಿಡಬಲ್ಲ ಚಿತ್ರಗಳನ್ನು ಕೊಟ್ಟಿರುವ, ಮುಂಗಾರು ಮಳೆ ಖ್ಯಾತಿ ಯೋಗರಾಜ್‌ಭಟ್ಟರು ನಮಗಾಗಿ ಕಾಯುತ್ತಿದ್ದರು. ಅವರೊಡನೆ ಮೊದಲಿಗೆ ಸಂವಾದ ಶುರುವಾಯಿತು. ಏನಾದರು ಪ್ರಶ್ನೆಗಳಿದ್ದರೆ ಕೇಳಿ ಎಂದು ಅವರು ಮೊದಲೇ ಹೇಳಿದ್ದರಿಂದ ಪ್ರಶ್ನೆಗಳ ಸುರಿಮಳೆಯಾಯಿತು. ಎಲ್ಲಾ ಉದ್ದುದ್ದದ ಪ್ರಶ್ನೆಗಳಿಗೂ ಚೋಟುದ್ದದ ಉತ್ತರ ಕೊಡುತ್ತಿದ್ದ ಭಟ್ಟರು ಸಿನಿಮಾದ ಕಷ್ಟಸಾಧ್ಯತೆಗಳ ಬಗ್ಗೆ ಪರೋಕ್ಷವಾಗಿ ಹೇಳಿದರು. ಅವರಿಗೆ ಪಾತ್ರಗಳೇ ಕಥೆ. ಇದು ಒಂದು ತರಹದ ವಿರೋಧಾಭಾಸವಾಗಿ ಕಂಡರೂ ಅದು ಅವರ ಶೈಲಿ. ಮೇಕಿಂಗ್ ಆಫ್ ಮುಂಗಾರುಮಳೆಯ ಬಗ್ಗೆ ಸಾಕಷ್ಟು ಹೇಳಿದರು. ಅವರನ್ನೆಕೋ ಕಳುಹಿಸಿಕೊಡಲು ನಮಗೆ ಮನಸೇ ಬರಲಿಲ್ಲ

ಅದಾಗಲೇಸಂಜೆಯಾಗಿತ್ತು. ಇವೆಲ್ಲದರ ಮಧ್ಯೆ ಮತ್ತು ಸಂಜೆಯಲ್ಲಿ ನಮ್ಮೆಲ್ಲರ ನಾಗ್ತಿಸಾರ್ ಅಥವಾ ನಾಗತಿಹಳ್ಳಿಯ ಚಂದ್ರಣ್ಣ ಮೇಷ್ಟ್ರರ ಸಂದೋರ್ಭಚಿತ ಮಾತುಗಳು, ಸಲಹೆಗಳು ಚಿತ್ರಕಥೆಯ ಶಕ್ತಿ, ಮುಂತಾದ ವಿಷಯಗಳ ಬಹಳ ಧೀರ್ಘವಾದ ಉಪನ್ಯಾಸ ಮತ್ತು ಚರ್ಚೆ ನಡೆಯಿತು. ನಂತರ ಸಾಕ್ಷಾತ್ ವರಮಹಾಲಕ್ಷ್ಮೀಯಂತೆ ಬಂದ ಡಾ// ಜಯಮಾಲರೊಂದಿಗೆ ಮಾತುಕತೆ ನಡೆಯಿತು. ಶಾಲೆಯ ಸಹಾಯಕಿ ಮಣಕಮ್ಮ ನಾಗ್ತಿಸಾರ್‌ರವರ ’ಹೊಳೆದಂಡೆ’ ಕೃತಿಯನ್ನು ಅನಾವರಣ ಗೋಳಿಸಿದ್ದು ಸಂಜೆಯ ವಿಶೇಷವಾಗಿತ್ತು. ರಾತ್ರಿಯ ಊಟಮುಗಿಸಿದವರು ನಿದ್ದೇಗಣ್ಣಿನಲ್ಲೇ ಊರಿನ ಅರೆಶಿಕ್ಷಿತ ಮಹಿಳೆಯರು ಅಭಿನಯಿಸಿದ ’ಕರಿಭಂಟ’ ಎಂಬ ಅಮೋಘ ನಾಟಕವನ್ನು ನೋಡಿದೆವ. ನಮಗೆಲ್ಲಾ ತಂಗಲು ಸಮೀಪದ ಹಾಸ್ಟೆಲ್‌ವೊಂದರಲ್ಲಿ ವ್ಯವಸ್ಥೆಯಾಗಿತ್ತು. ಮಲಗಿದಾಗ ರಾತ್ರಿ ಹನ್ನೇರಡಾಗಿತ್ತು. ನಿದ್ದೆಯು ಬರಲೊಲ್ಲದು. ಕಣ್ಮುಚ್ಚಿದ್ದರೂ ಸಿನಿಮಾದ ಚಿಂತೆ. ಹಾಗೂ ಹೀಗೂ ಬೆಳಕಾಯಿತು.


ಆಗಸ್ಟ್ ೧೬ರಂದು ಬೆಳಗ್ಗೆಯೇ ನಾಗ್ತಿ ಸಾರ್‌ರವರು ಕಥೆಯ ಆಯ್ಕೆ ಮತ್ತು ಚಿತ್ರಕಥೆಯ ಬೇಸಿಕ್ಸ್‌ಗಳನ್ನು ಹೇಳಿಕೊಟ್ಟರು. ನಮಗೆಲ್ಲಾ ಅಂದು ಹಬ್ಬದ ದಿನವಾಗಿತ್ತು. ಏಕೆಂದರೆ ಅಂದು ‘ಆದಿನಗಳು’ ನಿರ್ದೇಶಕ ಚೈತನ್ಯ, ‘ಕಾಡಬೆಳದಿಂಗಳು’ ಚಿತ್ರದ ಚಿತ್ರಕಥೆಗಾರ ಮತ್ತು ನಮ್ಮೆಲ್ಲರ ಆರಾಧ್ಯದೈವ ಬರಹಗಾರ ಜೋಗಿ ಉರ್ಫ್ ಜಾನಕಿ ‘ಈ ಟಿವಿ’ ಯ ಸೂರಿ, ‘ಹೂಮಳೆ’, ಇತ್ತೀಚೀನ ‘ಆಕ್ಸಿಡೆಂಟ್’ ಚಿತ್ರಗಳ ಸಿನಿಮಾಟೋಗ್ರಾಫ್‌ರ್ ಜಿ.ಎಸ್. ಭಾಸ್ಕರ್ ಮತ್ತು ‘ಪ್ರೇಮಲೋಕ’ದ ಮಾಂತ್ರಿಕ ಹಂಸಲೇಖಾ ಮತ್ತು ಲತಾಹಂಸಲೇಖ ಬಂದಿದ್ದರು. ಚೈತನ್ಯ "ರೋಡ್ ಟು ಪರ್ಡಿಶನ್" ಎಂಬ ಚಿತ್ರದ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ನಂತರ ‘ನಾಯಿನೆರಳು’ ಮತ್ತು ದೂರದರ್ಶನದಲ್ಲಿ ಹಲವು ವರ್ಷಗಳ ಹಿಂದೆ ಪ್ರದರ್ಶನಗೊಂಡಿದ್ದ ‘ಅತೀತ’ (ಈ ಟೀವಿಯ ಸುರೇಂದ್ರನಾಥ್) ಎಂಬ ಕಿರುಚಿತ್ರವನ್ನು ವೀಕ್ಷಿಸಿದೆವು. ಇದರ ಕುರಿತು ಜೋಗಿ ಮತ್ತು ಸೂರಿಯವರ ಜೊತೆ ಚರ್ಚೆಯಾಯಿತು. ‘ಮೊಫಲ್-ಇ-ಆಜಮ್’ ಮತ್ತು ‘೮ ೧/೨’ ಎಂಬ ಚಿತ್ರಗಳ ಮೂಲಕ ಜಿ.ಎಸ್. ಭಾಸ್ಕರ್‌ರವರು ಚಿತ್ರದಲ್ಲಿ ಕ್ಯಾಮರದ ಮಹತ್ವದ ಬಗ್ಗೆ ತಿಳಿಸಿಕೊಟ್ಟರು.

ತದನಂತರ ಸಿನಿಮಾದಲ್ಲಿ ಸಂಗೀತದ ಮಹತ್ವ ಕುರಿತು ‘ನಾದಬ್ರಹ್ಮ’ ಹಂಸಲೇಖರಿಂದ ಸಾಕಷ್ಟು ತಿಳಿದು ಕೊಂಡೆವು. ಇವರೆಲ್ಲರೂ ತಮ್ಮತಮ್ಮ ಕ್ಷೇತ್ರದ ಹಲವು ಮಜಲುಗಳನ್ನು ತಿಳಿಸಿಕೊಟ್ಟು ನಮ್ಮನ್ನೆಲ್ಲಾ ಪ್ರೋತ್ಸಾಹಿಸಿದರು. ಸ್ವಲ್ಪ ಬಿಡುವಿನ ಸಮಯ ಸಿಕ್ಕರೂ ಸಾಕು ನಮ್ಮೂಂದಿಗೆ ಶಿಬಿರದ ಅಭ್ಯರ್ಥಿಯಂತೆಯೇ ಕುಳಿತು ನೋಟ್ಸ್ ಮಾಡಿಕೊಳ್ಳುತ್ತಿದ್ದ ನಾಗ್ತಿಸಾರ್‌ರವರು ಉಪಯುಕ್ತ ಮಾಹಿತಿಯನ್ನು ನೀಡುತ್ತಿದ್ದರು.

ಹದಿನೇಳರಂದು, ಮೊದಲ ದಿನವೇ ನಾಗ್ತಿ ಸಾರ್‌ರವರು ನಮಗೆಲ್ಲಾ ತಿಳಿಸಿದಂತೆ ‘ಪದ್ಮಪ್ರಿಯ ಪ್ರಕರಣ’, ‘ಆರುಷಿ ಪ್ರಕರಣ’, ‘ತೇಜಸ್ವಿಯವರ ಮಾಯಾಮೃಗ’ ಅಥವಾ ನಮ್ಮದೇ ಯಾವುದಾದರೊಂದು ಆಯ್ಕೆಯ ಕಥೆ (ಪ್ರಕರಣ) ಕುರಿತು ಹತ್ತು ನಿಮಿಷಗಳ ಕಿರುಚಿತ್ರವಾಗುವಷ್ಟು ಹತ್ತು ಪುಟಗಳ ಚಿತ್ರಕಥೆ ಬರೆಯಬೇಕಿತ್ತು. ಅದು ಶಿಬಿರದ ಅಸೈನ್‌ಮೆಂಟ್. ಎಲ್ಲರೂ ಬಹಳ ಉತ್ಸುಕತೆಯಿಂದ ಯೂನಿವರ್ಸಿಟಿಯ ಪರೀಕ್ಷೆ ಬರೆದಂತೆ ಬೆಳಗಿನಿಂದ ಸಂಜೆಯವರೆಗೂ ಅವರವರ ಆಯ್ಕೆಯ ಚಿತ್ರಕಥೆಗಳನ್ನು ಬರೆದರು. ನಾಗ್ತಿ ಸಾರ್‌ರವರೇ ಆದಷ್ಟು ಅಭ್ಯರ್ಥಿಗಳ ಚಿತ್ರಕಥೆಗಳನ್ನು ನೋಡಿ ತಮ್ಮ ಸಲಹೆ-ಮಾರ್ಗದರ್ಶನ ನೀಡಿದರು. ನಾವದನ್ನು ತಿದ್ದಿ-ತೀಡಿ, ಒಪ್ಪ-ಒರಣ ಮಾಡಿ ಅವರ ಆಫೀಸಿಗೆ ಕಳುಹಿಸಿ ಮಾರ್ಗದರ್ಶನ ಪಡೆಯಬಹುದೆಂದು ಹೇಳಿದರು.

ಕೆಲವರು ಇನ್ನು ಬರೆಯುತ್ತಿದ್ದಾಗಲೇ ಮೂರೂ ದಿನಗಳಿಂದ ತಡೆದಿತ್ತೇನೋ ಎಂಬಂತೆ ಧಾರಾಕಾರವಾಗಿ ಮಳೆಯಾಯಿತು. ನಮ್ಮಗಳ ಚಿತ್ರಕಥೆಗಳನ್ನು ನೋಡಿ ಮೇಘರಾಜನು ಆನಂದಬಾಷ್ಪ ಸುರಿಸಿದನೆಂದು ಮೇಷ್ಟ್ರು ನಗೆ ಚಟಾಕಿ ಹಾರಿಸಿದರು. ಇನ್ನೇನು ಮಳೆ ನಿಂತಿತು ಅನ್ನುವಾಗಲೇ ಆ ಶಿಬಿರಕ್ಕೆ ಕಳಸವಿಟ್ಟಂತೆ ಗಿರೀಶ್‌ಕಾಸರವಳ್ಳಿಯವರ ಆಗಮನವಾಯಿತು. ಅವರೊಡನೆ ಸುದೀರ್ಘ ಚರ್ಚೆಯಾಯಿತು. ಮನರಂಜನೆ, ಸಿನಿಮಾ ಮತ್ತು ಸಾಹಿತ್ಯಗಳ ಭಿನ್ನತೆ, ಸಾಹಿತ್ಯವನ್ನು ಸಿನಿಮಾಕ್ಕೆ ಬಳಸುವ ಬಗ್ಗೆ ಸಿನಿಮಾದ ತಂತ್ರಗಳು ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಪೂರಕ ಮಾಹಿತಿ ನೀಡಿದರು. ನಮಗೆಲ್ಲಾ ಅವರು ಶಿಬಿರದ ‘ಪ್ರಮಾಣಪತ್ರ’ ವನ್ನು ನೀಡಿದರು. ಅವರ ಹಸನ್ಮುಖ ನನ್ನನು ಕಾಡಿದ್ದಂತೂ ನಿಜ.

ರಾತ್ರಿಯೇ ನಾವೆಲ್ಲಾ ಊಟಮುಗಿಸಿ ಒಲ್ಲದ ಮನಸ್ಸಿನಿಂದ ನಾಗ್ತಿ ಸಾರ್‌ರವರಿಗೆ, ಮೂರೂದಿನಗಳು ಹೊಸ ಪ್ರಪಂಚವನ್ನೇ ತೋರಿಸಿದ ಸುಂದರ ಹಳ್ಳಿ ಅ.ನಾಗತಿಹಳ್ಳಿಗೆ ಮತ್ತು ಅಲ್ಲಿನ ಸುಸಂಸ್ಕೃತ ಜನರಿಗೆ ಮತ್ತು ಶಿಬಿರದ ಎಲ್ಲಾ ಗೆಳೆಯ-ಗೆಳತಿಯರಿಗೆ ವಿದಾಯ ಹೇಳಬೇಕಾಯಿತು. ಕೆಲ ಅತಿಥಿಗಳು ಬರಲಿಲ್ಲವಾದರೂ ಅದು ಒಳ್ಳೆಯದೇ ಆಯಿತು. ಬಂದವರೊಡನೆ ಹೆಚ್ಚು ಹೊತ್ತು ಸಂವಾದ ನಡೆಸಲು ದಾರಿ ಮಾಡಿ ಕೊಟ್ಟಿತು. ಕಿರುತೆರೆಯ ಧಾರವಾಹಿಗಳ ಪಿತಾಮಹ ಟಿ.ಎನ್.ಸೀತಾರಾಂರವರು ಬಂದಿದ್ದರೆ ಚೆನ್ನಾಗಿತ್ತು ಎಂದು ಎಲ್ಲೋ ಒಂದು ಕಡೆ ಅನ್ನಿಸಿದ್ದು ನಿಜವಾದರೂ, ಕಾರ್ಯಾಗಾರದ ಅತಿಥಿಗಳ ಲಿಸ್ಟಲ್ಲಿ ಅವರಿರಲಿಲ್ಲ. ಶಿಬಿರದಲ್ಲಿ ಪ್ರಮುಖವಾಗಿ ಎದ್ದು ಕಂಡದ್ದು ನೂರಕ್ಕಿಂತ ಹೆಚ್ಚು ಶಿಬಿರಾರ್ಥಿಗಳಿದ್ದರೂ ಕಾಪಾಡಿದ ತರಗತಿಯ ಘನತೆ-ಗಾಂಭೀರ್ಯ. ನಾಗ್ತಿ ಸರ್‌ರವರ ಒಲವು ಅದೇ ಆಗಿತ್ತು. ಐವತ್ತು ವರ್ಷಪೂರೈಸಿದ ನಾಗ್ತಿ ಸರ್‌ರವರು ನಮ್ಮಗಳ ಜೊತೆ ಲವಲವಿಕೆಯಿಂದ ಓಡಾಡಿ ಕಾರ್ಯಾಗಾರವನ್ನು ಬಹಳ ಯಶಸ್ವಿಯಾಗಿ ನಡೆಸಿಕೊಟ್ಟರು.

ಮೂರು ದಿನಗಳಲ್ಲೂ ಅವರ ಸ್ನೇಹಿತರು, ಸಹಾಯಕರು, ಊರಿನ ವ್ಯಕ್ತಿಗಳು, ನಾಗ್ತಿ ಸಾರ್‌ರವರ ಶ್ರೀಮತಿ ಮತ್ತು ಮಕ್ಕಳು, ಅಡುಗೆ ಮಾಡಿ ಬಡಿಸಿದವರು, ಸೈಲೆಂಟಾಗಿ ನಮ್ಮೊಡನೆಯೇ ಕುಳಿತಿದ್ದ ‘ಬಯಲು ಸೀಮೆಯ ಕಟ್ಟೆ ಪುರಾಣ (ಲಂಕೇಶ್ ಪತ್ರಿಕೆ) ಖ್ಯಾತಿಯ ಡಾ||ಡಿ.ಬಿ.ಚಂದ್ರೇಗೌಡರು, ಮಲಗಲು ಜಾಗಕೊಟ್ಟ ಹಿರಿಯರೊಬ್ಬರು. ಬಸ್ಸಿನ ಡ್ರೈವರ್‌ಗಳು ಎಲ್ಲರೂ ತಮ್ಮ ಮನೆಯ ಮಕ್ಕಳಂತೆಯೇ ನಮ್ಮನ್ನು ನೋಡಿಕೊಂಡರು.

ಇದೆಲ್ಲಾ ಮೊದಲ ಚಿತ್ರಕಥಾ ಶಿಬಿರದ ಅನುಭವಗಳಾದರೆ, ೨೦೦೯ರ ಯುಗಾದಿಯ ಸಂದರ್ಭದಲ್ಲಿ ನಡೆದ ಶಿಬಿರದ್ದು ಮತ್ತೊಂದು ಕಥೆ. ಅದನ್ನು ಮತ್ತೊಮ್ಮೆ ಹಂಚಿಕೊಳ್ಳುತ್ತೇನೆ.

ನಾಲ್ಕು ವರ್ಷಗಳ ನಂತರ ಈ ಶಿಬಿರದ ಪ್ರಯೋಜನಗಳೇನು ಎಂದು ಕೇಳಿಕೊಂಡರೆ, ಉತ್ತರ ನಿಚ್ಚಳವಾಗಿದೆ. ನನ್ನ ‘ಮಳೆಯಾಗು ನೀ...’ ಕವನ ಸಂಕಲನ ಮೊದಲಿಗೆ ಪ್ರಕಟವಾಯಿತು. ನಂತರ, ‘ಮುಗುಳ್ನಗೆ’ ಎಂದು ಸಿನಿಮಾಗಾಗಿ ಬರೆದ ಕಥೆಯನ್ನು ಕಾದಂಬರಿಯ ರೂಪದಲ್ಲಿ ಪ್ರಕಟಿಸಿದೆ. ‘ಸ್ನೇಹ ಮಾಡಬೇಕಿಂಥವಳ’ ಎಂಬ ಪುಸ್ತಕ ಇದೇ ತಿಂಗಳಲ್ಲಿ ಪ್ರಕಟವಾಗಲಿದೆ. ಜೊತೆಗೆ ಅಲ್ಲೊಂದು ಇಲ್ಲೊಂದು ಸಿನಿಮಾ ಕಥೆಗಾಗಿ ಕರೆಗಳು ಬರುತ್ತಿವೆ.

ಎಲ್ಲದ್ದಕ್ಕಿಂತ ಬಹುಮುಖ್ಯವಾಗಿ, ಶಿಬಿರದಲ್ಲಿ ಸಿಕ್ಕ ಗೆಳೆಯರು, ಜೀವದ ಗೆಳೆಯರಾಗಿದ್ದಾರೆ. ಕಾದಂಬರಿಕಾರ ರಾಜು ಗಡ್ಡಿ, ಸಹೃದಯಿ ಅಜಿತ್ ಕೌಂಡಿನ್ಯ, ಇದಾಗಲೇ ಅಸೋಸಿಯೇಟ್ ಡೈರೆಕ್ಟರ್ ಆಗಿರುವ ಆಕಾಶ ಆರಾಧ್ಯ ಮತ್ತು ಅನೇಕ ಗೆಳೆಯರು ‘ಜೀವನದಲ್ಲಿ ಸ್ನೇಹಿತರಲ್ಲ, ಸ್ನೇಹಿತರಿಂದಲೇ ಜೀವನ’ ಎಂದುಕೊಂಡಿರುವ ನನ್ನ ಜೀವನದಲ್ಲಿ ಶಾಶ್ವತವಾಗಿ ನೆಲೆಯಾಗಿದ್ದಾರೆ.

ಗುರುವಾರ, ಜುಲೈ 5, 2012

ಉಪ್ಪಾರಹಳ್ಳಿಯ ರೈಲ್ವೆಗೇಟ್‍ನಲ್ಲೊಂದು ಕುಹೂ ಕುಹೂ

ಮಗ್ಗಿ ಪುಸ್ತಕದಲ್ಲಿರುತ್ತಿದ್ದ ಉಗಿಬಂಡಿಯಂತಹ ರೈಲಿನಲ್ಲೇ ಚಿಕ್ಕಂದಿನಿಂದ ಓಡಾಡುತ್ತಿದ್ದರೂ ನನಗೆ ಮೊದಲು ಅನುಭವಕ್ಕೆ ಬಂದ ರೈಲ್ವೇ ಗೇಟಿನ ನೆನಪೆಂದರೇ, ನಾಲ್ಕನೇ ತರಗತಿಯಲ್ಲಿದ್ದಾಗ ನನ್ನ ಸೋದರತ್ತೆ ಮನೆಯಿಂದ ಖುಷಿಯಿಂದಲೇ ರಜೆಯನ್ನು ಮುಗಿಸಿಕೊಂಡು ಹೊರಟವನು ತಲೆಯೆತ್ತಿಯೂ ನೋಡದೆ ನನ್ನದೇ ಲೋಕದಲ್ಲಿ ಆಡಿಕೊಳ್ಳುತ್ತಾ ಭೀಮಸಂದ್ರದ ರೈಲ್ವೇ ಗೇಟನ್ನು ದಾಟುವ ಸಮಯಕ್ಕೆ ಸರಿಯಾಗಿ ತುಮಕೂರಿನ ಕಡೆಯಿಂದ ಬರುವ ರೈಲನ್ನು ಗಮನಿಸಿದ ನನ್ನ ಸೋದರತ್ತೆ, “ಏ ಸತೀಶ...” ಎಂದು ಕೂಗಿ ಕೈಹಿಡಿದು ಎಳೆದದ್ದು. ಅಂದು ಅತ್ತೆ ಕೈಹಿಡಿದು ಎಳೆಯದಿದ್ದರೆ ಇಂದು ನಾನು ನಾನಾಗಿರುತ್ತಿರಲಿಲ್ಲ. ಈ ರೀತಿಯಾಗಿ ಅಂದಿನ ಭಯಾನಕ ಅನುಭವದೊಂದಿಗೆ ಶುರುವಾದ ರೈಲ್ವೇ ಗೇಟಿನ ಸಂಬಂಧ ಇಂದಿನ ನನ್ನ ದೈನಂದಿನ ಚಟುವಟಿಕೆಯ ಒಂದು ಅವಿಭಾಜ್ಯ ಅಂಗವಾಗಿರುವ ತುಮಕೂರಿನ ಉಪ್ಪಾರಹಳ್ಳಿಯ ರೈಲ್ವೇ ಗೇಟ್ ನಿಂದ ಒಂದು ನಂಟಂತೆ ಬೆಸೆದುಕೊಂಡಿದೆ.

ಉಪ್ಪಾರಹಳ್ಳಿಯ ರೈಲ್ವೆಗೇಟನ್ನು ನಾನು ಮೊದಲು ನೋಡಿದ್ದು ಬಿ.ಎಸ್ಸಿ., ಓದುತ್ತಿದ್ದಾಗ. ಒಂದು ಸಂಜೆ ಕಂಪ್ಯೂಟರ್ ಲ್ಯಾಬನ್ನು ಮುಗಿಸಿಕೊಂಡು ನಾನು ಮತ್ತು ನನ್ನ ಕೆಲವು ಕಂಪ್ಯೂಟರ್ ಸೈನ್ಸ್‍ನ ಗೆಳೆಯರು “ಟ್ರೂ ಲೈಸ್” ಎಂಬ ಇಂಗ್ಲೀಷ್ ಸಿನಿಮಾವನ್ನು ನೋಡಲು ಆಗಿದ್ದ “ರೇಣುಕಾ” ಥೀಯೆಟರ್‍ಗೆ ನಡೆದುಕೊಂಡೇ ಹೋಗಿದ್ದೆವು. ಟೌನ್ ಹಾಲ್ ನಿಂದ ನಡೆದು ರೈಲ್ವೇ ಸ್ಟೇಷನ್ ಮಾರ್ಗವಾಗಿ ಉಪ್ಪಾರಹಳ್ಳಿ ರೈಲ್ವೇ ಗೇಟನ್ನು ದಾಟಿ ಶೆಟ್ಟಿಹಳ್ಳಿಯ ರೇಣುಕಾ ಥೀಯೆಟರ್‍ಗೆ ಹೋಗುವುದೆಂದೂ, ಮೂರು ರೂಪಾಯಿ ಆಟೋ ಛಾರ್ಜನ್ನು ಉಳಿಸುವುದೆಂದೂ ನಾವೆಲ್ಲ ನಿರ್ಧರಿಸಿದ್ದೆವು. ಏಕೆಂದರೆ ಮತ್ತೇಳು ರೂಪಾಯಿಗೆ ಸಿನಿಮಾ ಟಿಕಿಟೇ ಬಂದು ಬಿಡುತ್ತಿತ್ತು! ಪದವಿಯಲ್ಲಿದ್ದಾಗಲು ಬಹಳ ಸಂಕೋಚದಿಂದಲೇ ನಗರದ ಗೆಳೆಯರೊಂದಿಗೆ ಬೆರೆಯುತ್ತಿದ್ದ ನಾವೊಂದಿಷ್ಟು ಹಳ್ಳಿಯ ಕಡೆಯ ಹುಡುಗರಿಗೆ ಮೂರು ರೂಪಾಯಿಯೂ ಬಹಳ ದೊಡ್ಡ ಮೊತ್ತವಾಗಿತ್ತು. ಅಂದು ನಮ್ಮ ತುಮಕೂರಿನ ಗೆಳೆಯರಲೊಬ್ಬ ನಾವಿನ್ನೇನು ಉಪ್ಪಾರಹಳ್ಳಿ ರೈಲ್ವೇ ಗೇಟನ್ನು ದಾಟಿ, ಎಡಕ್ಕೆ ಚಲಿಸಿ ಶೆಟ್ಟಿಹಳ್ಳಿಯ ಕಡೆಗೆ ಹೋಗುವಾಗ ಅಲ್ಲಿದ್ದ ಒಂದು ದೊಡ್ಡ ಹಳೆಯ ಕಟ್ಟಡವನ್ನು ತೋರಿಸಿ ಇದು ಕುಮಾರ ಇರೋ ಚನ್ನಂಜಪ್ಪ ಹಾಸ್ಟೆಲ್ ಎಂದು ಹೇಳಿದ್ದ. ಅದು ಗುಬ್ಬಿಯ ಬಳಿಯ ಸುಗ್ಗನಪಾಳ್ಯ ಎಂಬ ಹಳ್ಳಿಯಿಂದ ಬಂದರೂ ಶ್ರಮದಿಂದ ಓದಿ ಗುಬ್ಬಿಯ ಪಿ.ಯು.ಕಾಲೇಜಿನಲ್ಲಿ ಸೈನ್ಸ್ ನಲ್ಲಿ ಪಾಸಗಿ ನಮ್ಮ ಕಾಲೇಜಿನಲ್ಲೇ ರಸಾಯನ ಶಾಸ್ತ್ರವನ್ನು ಐಚ್ಚಿಕವಾಗಿ ಪದವಿಯಲ್ಲಿ ಓದುತ್ತಿದ್ದ ಪ್ರತಿಭಾವಂತ ಗೆಳೆಯ ಕುಮಾರನದಾಗಿತ್ತು. ಗಣಿತ ಮತ್ತು ಭೌತಶಾಸ್ತ್ರದ ತರಗತಿಗಳಲ್ಲಿ ನಮ್ಮ ಜೊತೆಯೇ ಇರುತ್ತಿದ್ದ ಅವನು ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ರಸಾಯನ ಶಾಸ್ತ್ರದ ತರಗತಿಗಳಿಗೆ ಮಾತ್ರ ನಮ್ಮಿಂದ ದೂರವಾಗುತ್ತಿದ್ದ. ರಸಾಯನವನ್ನು ಮಾತ್ರ ಇಷ್ಟಪಡುವ ನಮಗೆ ಇವನು ಅದರ ಶಾಸ್ತ್ರವನ್ನೂ ಇಷ್ಟಪಡುತ್ತಿದುದು ಅಚ್ಚರಿಯ ಸಂಗತಿಯಾಗಿತ್ತು. ಅವನು ಬಿಡುವಾದ ವೇಳೆಯಲ್ಲಿ ಸಿಕ್ಕಾಗ, ಹೇಗಿದೆಯಮ್ಮ ನಿಮ್ಮ ಹಾಸ್ಟೆಲ್ ಎಂದು ಕೇಳಿದರೆ, ಪರವಾಗಿಲ್ಲ ಕಣಮ್ಮಾ, ಆಗಾಗ ಅನ್ನದಲ್ಲಿ ಕಲ್ಲು, ಸಾರಿನಲ್ಲಿ ಹುಳ ಸಿಗುತ್ತಿರುತ್ತೆ. ಏನ್ಮಾಡದಪ್ಪ ನಂಗೆ ಹಳ್ಳಿಯಿಂದ ಓಡಾಡಿಕೊಂಡು ಓದೋಕೆ ಆಗಲ್ಲ ಅಂತಾ ತನ್ನ ಬೇಸರವನ್ನು ಹೇಳಿಕೊಳ್ಳುತ್ತಿದ್ದ.

ನಂತರ ಅಷ್ಟಾಗಿ ಉಪ್ಪಾರಹಳ್ಳಿಯ ರೈಲ್ವೆ ಗೇಟಿನ ಕಡೆ ಬರದ ನಾನು ಕಳೆದ ಐದು ವರ್ಷಗಳ ಹಿಂದೆ, ಕೆಲಸದ ಸಲುವಾಗಿ ತುಮಕೂರಿನ ಶಾಂತಿನಗರದಲ್ಲಿ ಮನೆ ಮಾಡಿಕೊಂಡಾಗ, ಉಪ್ಪಾರಹಳ್ಳಿಯ ಪಕ್ಕದಲ್ಲೇ ಇದ್ದ ಶಾಂತಿನಗರಕ್ಕೂ ಮತ್ತು ಎಸ್.ಎಸ್.ಪುರಂನಲ್ಲಿದ್ದ ನಮ್ಮ ಬ್ಯಾಂಕಿಗೂ ಮಧ್ಯೆ ಒಂದು ಸೇತುವೆಯಂತೆ ಈ ರೈಲ್ವೇ ಗೇಟ್ ಕಾರ್ಯನಿರ್ವಹಿಸತೊಡಗಿತು. ಆಗಿನ್ನೂ ನನ್ನ ಬಳಿ ಟೂ ವೀಲರ್ ಇರಲಿಲ್ಲವಾದ್ದರಿಂದ ಹಲವು ಬಾರಿ ರೈಲ್ವೇ ಸ್ಟೇಷನ್ ಪಕ್ಕಕ್ಕೇ ಇದ್ದ ಗೂಡ್ ಶೇಡ್ ಕಾಲೋನಿಯ ಸಂದಿಯ ಮೂಲಕ ರೈಲ್ವೇ ಹಳಿಗಳನ್ನು ದಾಟಿ ಬ್ಯಾಂಕಿಗೂ ಮನೆಗೂ ಓಡಾಡುತ್ತಿದ್ದರಿಂದ ಅಷ್ಟಾಗಿ ಉಪ್ಪಾರಹಳ್ಳಿಯ ರೈಲ್ವೇಗೇಟಿನ ಮುಖಾಂತರ ಓಡಾಡುವ ಪ್ರಸಂಗವೂ ಬರುತ್ತಿರಲಿಲ್ಲ. ತಿಂಗಳಿಗೊಮ್ಮೆ ಆಟೋದಲ್ಲಿ ರೇಷನ್ ತೆಗೆದುಕೊಂಡು ಮನೆಗೆ ಹೋಗುವಾಗಲೋ, ಅಥವಾ ಯಾರಾದರೂ ನಮ್ಮ ಏರಿಯಾದಲ್ಲಿದ್ದ ಸಹೋದ್ಯೋಗಿ ಮಿತ್ರರು ಡ್ರಾಪ್ ನೀಡುತ್ತೇನೆಂದು ಹೇಳಿದಾಗ ಮಾತ್ರ ಉಪ್ಪಾರಹಳ್ಳಿಯ ರೈಲ್ವೇಗೇಟನ್ನು ದಾಟಿ ಹೋಗುವ ಪ್ರಸಂಗ ಬರುತ್ತಿತ್ತು. ಆಗೆಲ್ಲಾ ಒಂದೇ ಟ್ರಾಕ್ ಇದ್ದುದರಿಂದ ಮತ್ತು ಅಪರೂಪಕ್ಕೊಮ್ಮೆ ಆ ದಾರಿಯಲ್ಲಿ ಓಡಾಡುತ್ತಿದ್ದುದರಿಂದಲೋ ಏನೋ ರೈಲ್ವೇಗೇಟಿನ ನಿಜ ಸ್ವರೂಪ ಅಷ್ಟಾಗಿ ನನ್ನ ಗಮನಕ್ಕೆ ಬಂದಿರಲಿಲ್ಲ. ಆಗಿನ್ನೂ ಡಬ್ಬಲ್ ಟ್ರ್ಯಾಕ್ ಹಾಕುವ ಕಾರ್ಯ ಪ್ರಗತಿಯಲ್ಲಿತ್ತು. ಮತ್ತು ಶೀಘ್ರದಲ್ಲೇ ಮೇಲ್ಸೆತುವೆ ಕಾರ್ಯ ಶುರುವಾಗುವುದೆಂದು ಸುದ್ದಿಯಾಗುತ್ತಿತ್ತು.

ಒಮ್ಮೊಮ್ಮೆ ಬ್ಯಾಂಕಿನಲ್ಲಿ ತಡವಾಗಿ ತುಂಬಾ ಕತ್ತಲಾದಾಗ ನಮ್ಮ ಮನೆಯ ಹತ್ತಿರವೇ ಇದ್ದ ಸಹೋದ್ಯೋಗಿ ಮಿತ್ರ ಚಿದುವಿನ ಜೊತೆ ರಾತ್ರಿಯಲ್ಲಿ ಅಷ್ಟು ಸುರಕ್ಷಿತವಲ್ಲದ ಹತ್ತಿರದ ಕಾಲುದಾರಿಯನ್ನು ಬಿಟ್ಟು ಉಪ್ಪಾರಹಳ್ಳಿಯ ರೈಲ್ವೇಗೇಟಿನ ಮುಖಾಂತರ ನಡೆದುಕೊಂಡೇ ಮನೆ ಸೇರುತ್ತಿದ್ದೆ. ಆಗ ಗೇಟ್ ಹಾಕಿದ್ದರೂ ನಮಗೇನು ತೊಂದರೆ ಇರುತ್ತಿರಲಿಲ್ಲ. ಗೇಟಿನ ಪಕ್ಕದಲ್ಲೇ ಇರುತ್ತಿದ್ದ ಜಾಗದಲ್ಲಿ ಹಳಿಗಳನ್ನು ದಾಟಿ ಮನೆ ಸೇರಿಕೊಂಡು ಬಿಡುತ್ತಿದ್ದವು. ಆಗೆಲ್ಲಾ ರೈಲ್ವೇಗೇಟಿನ ಮುಖಾಂತರ ಹಾದು ಹೋಗಲು ಕಾಯುತ್ತಿದ್ದ ವಾಹನಗಳ ಆತುರತೆ ನಮ್ಮ ನೋಟಕ್ಕಷ್ಟೇ ಸೀಮಿತವಾಗಿತ್ತು. ಮಾತಾಡಿಕೊಂಡೇ ಮನೆ ಸೇರುತ್ತಿದ್ದ ನಮ್ಮ ಮಾತುಗಳಲ್ಲಿ ಆ ಗೇಟಿನ ಆಸುಪಾಸಿನಲ್ಲಿ ನಡೆದ ಘಟನೆಗಳ ಬಗ್ಗೆಯೂ ನಮ್ಮ ಮಾತು ವಿಸ್ತರಿಸುತ್ತಿತ್ತು.

ಹಿಂದೊಮ್ಮೆ ಗೇಟಿನ ಬಳಿಯೇ ಇರುವ ಬಾರಿನಲ್ಲಿ ಕುಡಿದುಕೊಂಡು ಹೋಗುತ್ತಿದ್ದವನೊಬ್ಬ, ಜೊತೆಯಲ್ಲಿ ಹೋಗುತ್ತಿದ್ದ ದಂಪತಿಗಳನ್ನು ಚುಡಾಯಿಸಿ ಒದೆ ತಿಂದಿದ್ದ ಪ್ರಸಂಗ ಕೋರ್ಟ್ ಮೆಟ್ಟಿಲ್ಲನೇರಿ ಅದಕ್ಕೆ ನನ್ನ ಗೆಳೆಯರೂ ಸಾಕ್ಷಿಯಾದ ಘಟನೆ, ಮತ್ತು ಎತ್ತಿನ ಕೈಯಲ್ಲಿ ತಿವಿಸಿಕೊಂಡ ಉಪ್ಪರಾಹಳ್ಳಿಯವನೊಬ್ಬನನ್ನು ಆಟೋದಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ಗೇಟ್ ಹಾಕಿದ್ದರಿಂದ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದು ರೈಲ್ವೇಗೇಟಿನ ಬಳಿ ನಡೆದ ಪ್ರಮುಖ ಆವಾಂತರಗಳಾಗಿದ್ದವು. ಈ ಘಟನೆಗಳನ್ನು ಅವರು ಹೇಳುತ್ತಿದ್ದರೆ ಯಾರದರೂ ಗರ್ಭಿಣಿಯನ್ನು ಹೆರಿಗೆಗಾಗಿ ಕರೆದುಕೊಂಡು ಹೋಗುವ ಸಮಯಕ್ಕೆ ಸರಿಯಾಗಿ ಏನಾದರೂ ಗೇಟ್ ಹಾಕಿಬಿಟ್ಟಿದ್ದರೆ ಏನ್ಮಡ್ತಾರಪ್ಪ ಎಂದು ನಾನು ಚಿಂತಿಸುತ್ತಿದ್ದೆ.

ಮೂರುವರ್ಷಗಳ ಹಿಂದೆ ನಾನು ಹೊಂಡ ಆಕ್ಟೀವಾವನ್ನು ತೆಗೆದುಕೊಂಡ ದಿನದಿಂದ ಉಪಾರಹಳ್ಳಿಯ ರೈಲ್ವೇಗೇಟಿನ ನಿಜ ಮುಖದ ಪರಿಚಯವಾಗತೊಡಗಿತು. ಆ ಸಮಯಕ್ಕೆ ಅದಾಗಲೇ ತುಮಕೂರು ಬೆಂಗಳೂರಿನ ನಡುವೆ ಡಬ್ಬಲ್ ಟ್ರ್ಯಾಕಿನ ಕಾರ್ಯ ಮುಗಿದು, ಎರಡೂ ಟ್ರ್ಯಾಕ್ ಗಳಲ್ಲಿ ರೈಲುಗಳು ಓಡಾಡಲು ಶುರುವಾಗಿದ್ದವು. ಮೇಲ್ಸೆತುವೆ ಕಾಮಗಾರಿಯೂ ಶುರುವಾಗಿತ್ತು. ಅಂದಿನಿಂದ ಉಪ್ಪಾರಹಳ್ಳಿಯ ರೈಲ್ವೇ ಗೇಟನ್ನು ದಾಟುವ ಆತುರ ನನ್ನದಾಯಿತು.

ಬೆಳಿಗ್ಗೆ ಹತ್ತೂ ಕಾಲಿಗೆ ಬ್ಯಾಂಕಿಗೆ ಹೋಗಬೇಕು. ತರಾತುರಿಯಲ್ಲಿ ಸಿದ್ದವಾಗಿ ಇನ್ನೇನು ಮನೆಯಿಂದ ಹೊರಟೆ ಎನ್ನುವಷ್ಟರಲ್ಲಿ “ಢಣ್ ಢಣ್” ಎಂದು ಗಂಟೆಯ ಶಬ್ಢ ಕೇಳಿಸಿತೆಂದರೆ ಅದು ಮುಲಾಜಿಲ್ಲದೆ ಉಪ್ಪಾರಹಳ್ಳಿಯ ರೈಲ್ವೇ ಗೇಟ್‍ನದ್ದೆ! ಅಲ್ಲಿಗೆ ಸರಿಯಾದ ಟೈಮಿಗೆ ಬ್ಯಾಂಕಿಗೆ ಇವತ್ತಾದರೂ ಹೋಗುತ್ತೇನೆಂಬುದು ಕನಸಾಗಿಬಿಟ್ಟಿರುತ್ತದೆ. ರೈಲ್ವೇ ಗೇಟ್ ತಲುಪುವಷ್ಟರಲ್ಲಿ ಸ್ಕೂಲಿಗೆ, ಆಫೀಸಿಗೆ, ಮತ್ತ್ಯಾವುದೋ ಕೆಲಸಕ್ಕೆ ಹೊರಟವರ ವಾಹನಗಳ ಸಂತೆಯೇ ರೈಲ್ವೇ ಗೇಟಿನ ಬಳಿ ಸೇರಿರುತ್ತದೆ. ನಮ್ಮ ಪುಣ್ಯಕ್ಕೆ ಒಂದೇ ರೈಲು ಬಂದಿತೆಂದರೆ ಓಕೆ. ಬಚಾವ್! ಇಲ್ಲಾ, ಆ ಕಡೆಯಿಂದ ಒಂದು, ಈ ಕಡೆಯಿಂದ ಒಂದು, ಅದೂ ಇಲ್ಲ ಒಂದು ಉದ್ದನೆಯ ಗೂಡ್ಸ್ ಬಂತೆಂದರೆ ಮುಗಿಯಿತು. ಇನ್ನು ಮೇಲೆ ಏನಾದರೂ ಮಾಡಿ ಒಂದೈದು ನಿಮಿಷ ಬೇಗ ಮನೆ ಬಿಡಬೇಕು ಎಂಬ ದಿನನಿತ್ಯದ ರೆಸಲ್ಯೂಷನ್ ನವೀಕರಣಗೊಂಡಿರುತ್ತದೆ.

ಅಂತೂ ಇಂತೂ ರೈಲು ಬಂತು ಎಂಬಂತಾಗಿ ಗೇಟ್ ತೆಗೆದರೆಂದರೆ, ನಾಮುಂದು ತಾಮುಂದು ಎಂದು ತಮ್ಮ ತಮ್ಮ ವಾಹನಗಳನ್ನು ನುಗ್ಗಿಸಿಕೊಂಡು ಎಲ್ಲರಿಗಿಂತ ಮುಂದಾಗಿ ರೈಲ್ವೇ ಗೇಟನ್ನು ದಾಟಿಬಿಡುವ ಪ್ರಯತ್ನದಲ್ಲಿ ಎಲ್ಲರೂ ಮುಳುಗಿಬಿಡುತ್ತಾರೆ. ಈ ಪ್ರಕ್ರಿಯೆ ಗೇಟಿನ ಎರಡೂ ತುದಿಗಳಿಂದ ನಡೆಯುವುದರಿಂದ ಎರಡೂ ಕಡೆಯವರಿಗೂ ಘನಘೋರ ಯುದ್ಧ ಶುರುವಾಗುವಂತೆ ತೋರುತ್ತಿರುತ್ತದೆ. ಯಾರು ದಾಟಿದರೆಷ್ಟು, ಬಿಟ್ಟರೆಷ್ಟು ನಾನಂತೂ ದಾಟಿಬಿಡಬೇಕೆನ್ನುವ ಎಲ್ಲರ ಮನೋಭಾವ ನಾನೊಬ್ಬ ಬದುಕಿದರೆ ಸಾಕೆಂಬಂತಿರುತ್ತದೆ. ಇವೆಲ್ಲದಕ್ಕೂ ಹಿಮ್ಮೆಳವೆಂಬಂತೆ ಕಿವಿಗಡಚಿಕ್ಕುವ ಹಾರನ್‍ಗಳು ಮೊಳಗಿರುತ್ತವೆ.

ಬೆಳಿಗ್ಗೆ ಬ್ಯಾಂಕಿಗೆ ಹೋಗುವಾಗ ಒಂದು ಕಥೆಯಾದರೆ, ಮಧ್ಯಾಹ್ನ ಊಟಕ್ಕೇನಾದರೂ ಮನೆಗೆ ಹೋಗೋಣವೆಂದುಕೊಂಡು ಬಂದರೆ ಆವಾಗ ರೈಲ್ವೇಗೇಟ್ ಹಾಕಿದ್ದರೆ ಹೊಟ್ಟೆಹಸಿವಿನ ಕಥೆ ಶುರುವಾಗುವುದು ಮತ್ತೊಂದು ಕಥೆ. ಮತ್ತೆ ಊಟ ಮುಗಿಸಿ ಹೋಗುವಾಗ ಸರಿಯಾದ ಸಮಯಕ್ಕೆ ಬೆಂಗಳೂರಿನಿಂದ ತುಮಕೂರಿಗೆ ಬರುವ ಪುಶ್ ಪುಲ್ ತಪ್ಪದೆ ಬರುತ್ತದೆ. ಅದು ದಿನನಿತ್ಯದ ಕಥೆ.

ಇತ್ತ ಸಂಜೆ ಏನಾದರೂ ಹೆಂಡತಿ “ರೀ ಬೇಗ ಮನೇಗ್ ಬನ್ನಿ” ಎಂದು ಹೇಳಿದ್ದರೆ, ನನಗೇ ಹೇಳಿದ್ದೇನೋ ಎಂಬಂತೆ ಯಾವುದಾದರೂ ರೈಲು ಬಂದೇ ಬರುತ್ತದೆ. ತಡವಾಗಿ ಮನೆಗೆ ಹೋದಾಗ ಹೆಂಡತಿಯ ರುದ್ರ ದರ್ಶನವೂ ಆಗುತ್ತದೆ. ಮತ್ತಿನ್ಯಾವಾಗಲಾದರೂ ಎಲ್ಲಾದರೂ ಹೊರಗಡೆ ಹೋಗಬೇಕೆಂದು ಕೊಂಡು ಸಿಟಿಗೆ ಹೊರಟ್ಟಿದ್ದರೆ ಯಾವುದಾದರೂ ರೈಲಿನ ದರ್ಶನ ಪಡೆದೇ ಹೋಗಬೇಕು.

ಅಲ್ಲಿಗೆ ಈ ದಿನಚರಿ ದಿನದ ಇಪ್ಪತ್ತನಾಲ್ಕು ಘಂಟೆ, ವಾರದ ಏಳೂ ದಿನ, ತಿಂಗಳ ನಾಲ್ಕೂ ವಾರಗಳು, ವರ್ಷದ ಮುನ್ನೂರ ಅರವತ್ತೈದು ದಿನಗಳು ಚಾಚೂ ತಪ್ಪದೆ ನಡೆಯುತ್ತದೆ. ಬೇಕೆಂದರೆ 24 x 7 ಎಂದುಕೊಳ್ಳಿ. ಆದುದರಿಂದ ಇದುವರೆವಿಗೂ ಇಲ್ಲಿ ನನಗಾದ ವಿಶೇಷ ಅನುಭವಗಳನ್ನು ಮಾತ್ರ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಒಮ್ಮೊಮ್ಮೆ ರೈಲ್ವೇಗೇಟ್ ಹಾಕಿದ ಸಮಯಕ್ಕೆ ಸರಿಯಾಗಿ ನಾನೂ ಹೋಗಿ ಗೇಟಿನ ಮುಂಭಾಗದಲ್ಲಿ ಮೊದಲನೆಯವನಾಗಿ ಸಿಕ್ಕಿಕೊಂಡು ನಿಂತ ಅನುಭವಗಳು ಹಲವಾರಿವೆ. ಒಂದು ದಿನ ಇದೇ ರೀತಿ ನಿಂತು ಕೊಂಡಿದ್ದಾಗ ನನ್ನಂತೆಯೇ ಎದುರಿನಿಂದ ಬಂದ ಆನೆಯಾಕಾರದ ಸೀಮೆ ಹಸುವೊಂದು ತನ್ನ ದಾರಿಗೆ ಅಡ್ಡಾಲಾಗಿ ಬಂದ ಗೇಟನ್ನು ಗುದ್ದಿ ತನಗೇನೋ ಅರಿವಾದಂತೆ ಮುಗ್ಧವಾಗಿ ನಿಂತುಬಿಟ್ಟಿತ್ತು. ಅಯ್ಯೋ ನನ್ನ ಕ್ಯಾಮರವನ್ನು ತಂದಿದ್ದರೆ ಒಂದು ಅತ್ಯುತ್ತಮ ಚಿತ್ರ ದಾಖಲಾಗುತ್ತಿತ್ತಲ್ಲ ಎಂದು ಮರುಗಿಕೊಂಡೆ. ಆದರೂ ಅದು ನನ್ನ ಸ್ಪೃತಿಪಟಲದಲ್ಲಿ ಶಾಶ್ವತವಾಗಿ ಅಚ್ಚಾಗಿದೆ. ಮತ್ತೊಂದು ಮರೆಯಲಾಗದ ಅನುಭವವೆಂದರೆ ಹೀಗೆಯೇ ಮತ್ತೊಮ್ಮೆ ಆದಾಗ ನನ್ನ ಜೇಬಿನಲ್ಲಿದ್ದ ಕೆ. ಗಣೇಶ್ ಕೋಡೂರ್ ರವರ “ಒನ್ ಮಿನಿಟ್ ಸಕ್ಸಸ್” ಎಂಬ ಪುಟ್ಟ ಪುಸ್ತಕವನ್ನು ತೆಗೆದುಕೊಂಡು ಬಹಳಷ್ಟು ಭಾಗವನ್ನು ಅಲ್ಲಿಯೇ ಓದಿಬಿಟ್ಟಿದ್ದೆ. ನಂತರ ರೈಲು ಬಂದಾಗ ತಲೆಯೆತ್ತಿ ನೋಡಿದರೆ ನನ್ನ ಪಕ್ಕದಲ್ಲಿದ್ದವನು ನನ್ನ ಕಡೆಗೆ ನೋಡಿ ನಗುತ್ತಿದ್ದ!

ಇತ್ತೀಚಿಗಷ್ಟೇ ನಡೆದ ಘಟನೆಯೆಂದರೆ, ನಾನು ಮತ್ತು ನನ್ನ ಗೆಳಯರೊಬ್ಬರು ಮಧ್ಯಾಹ್ನದ ಊಟ ಮುಗಿಸಿ ಬ್ಯಾಂಕಿಗೆ ಹಿಂತಿರುಗುವ ಸಮಯಕ್ಕೆ ಸರಿಯಾಗಿ ಪುಶ್-ಪುಲ್ ರೈಲು ಬರುವ ಸಮಯವಾದ್ದರಿಂದ ಗೇಟ್ ಹಾಕಿಬಿಟ್ಟಿತ್ತು. ಆಗ ಅಲ್ಲಿ ಎಲ್ಲರಿಗಿಂತಲೂ ಮೊದಲು ನಿಂತದ್ದು ಒಂದು ದೊಡ್ಡ ಬುಲ್ಡೋಜಾರ್! ಅದರ ಹಿಂಭಾಗದ ಚಕ್ರಗಳು ಟೈರಿನದಾಗಿದ್ದು ಇವುಗಳು ಪಂಕ್ಚರಾದರೆ ಏನುಮಾಡುತ್ತಾರೆ ಎಂಬ ಪ್ರಶ್ನೆ ನನ್ನ ತಲೆಯಲ್ಲಿ ಕೊರೆಯಲಾರಂಭಿಸಿತು. ಇದೇ ಪ್ರಶ್ನೆಯನ್ನು ನಂತರ ನನ್ನ ಗೆಳೆಯರಿಗೆ ಕೇಳಲಾಗಿ, ಅವರು ಅದೇ ಪ್ರಶ್ನೆ ತಮಗೂ ಕಾಡುತ್ತಿತ್ತು ಎಂಬಂದು ತಮಾಷೆಯಾಗಿ, ನಂತರ ಗೆಳಯರೊಬ್ಬರಲ್ಲಿ ವಿಚಾರಿಸಿ ಆ ಟೈರುಗಳಿಗೆ ಪಂಕ್ಚರ್ ಹಾಕುವ ಪ್ರಮಯವೇ ಬರುವುದಿಲ್ಲವೆಂಬ ವಿಷಯ ತಿಳಿದು ನಮ್ಮ ಸಾಮಾನ್ಯ ಜ್ಞಾನವೂ ಹೆಚ್ಚಿತು.

ಈ ರೀತಿಯ ಹಲವು ಪ್ರಸಂಗಗಳಿಗೆ ಕಳಶವಿಟ್ಟಂತೆ ನಡೆದ ಘಟನೆಯೆಂದರೆ: ಒಂದು ಸುಂದರ ಸಂಜೆ ನಾನು ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ ರೈಲ್ವೇಗೇಟ್ ಹಾಕಲಾಗಿ ಅದಾಗಲೇ ಹಲವಾರು ವಾಹನಗಳು ಜಮಾಯಿಸಿ ಬಹಳ ಹೊತ್ತಾಗಿತ್ತು. ನಾನು ಸ್ವಲ್ಪ ದೂರದಲ್ಲೇ ನನ್ನ ಆಕ್ಟಿವಾವನ್ನು ನಿಲ್ಲಿಸಿ ಅದರ ಮೇಲಿಂದಲೇ ಸುತ್ತಮುತ್ತಲಿನ ಚಟುವಟಿಕೆಗಳನ್ನು ತನ್ಮಯನಾಗಿ ನೋಡುತ್ತಾ ಕುಳಿತಿದ್ದೆ. ಅಲ್ಲಿ ವಾಹನಗಳ ಜಾತ್ರೆಯೇ ಸೇರಿದ್ದರೂ, ಎಲ್ಲಾ ಸಮಯಕ್ಕಿಂತಲೂ ಸಂಜೆ ಹೊತ್ತಿನಲ್ಲಿ ಸ್ವಲ್ಪ ಸಮಾಧಾನದಿಂದ ಇರುವಂತೆ ಜನ ಕಾಣುತ್ತಿದ್ದರು. ಒಂದು ರೈಲು ಬಂತು, ಹೋಯ್ತು. ಇನ್ನೇನು ಗೇಟ್ ತೆಗೆಯುತ್ತಾರೆ ಎಂದು ಎಲ್ಲಾ ವಾಹನಗಳು ಸ್ಟಾರ್ಟ್ ಆದವು. ಹಾರನ್ ಮಾಡ ತೊಡಗಿದವು. ಆದರೆ, ಬಹಳ ಹೊತ್ತಾದರೂ ಗೇಟ್ ತೆಗೆಯಲೇ ಇಲ್ಲ. ಅಲ್ಲಿಗೆ ಇನ್ನೊಂದು ರೈಲು ಬರುವುದು ಖಚಿತವಾಯಿತು. ಆದುದರಿಂದ ಎಲ್ಲಾ ವಾಹನಗಳು ಆಫ್ ಆದವು. ಕ್ಷಣದಲ್ಲೇ ಅಲ್ಲೆಲ್ಲಾ ಸ್ಮಶಾನ ಮೌನ ಆವರಿಸಿತು. ನನ್ನ ಗಮನ ಅಲ್ಲಿದ್ದ ಬಿಳಿ ಅಂಬಾಸಿಡರ್ ಕಾರಿನ ಕಡೆ ಹರಿಯಿತು. ಮೈ ತೊಳೆದ ಎತ್ತಿನಂತೆ ಆ ಕಾರು ನಿಂತಿತ್ತು. ಅದರ ಹಿಂಭಾಗದಲ್ಲಿ “ಅಲ್ಲಮ” ಎಂದು ಬರೆದಿತ್ತು. ಯಾರೋ ಕವಿಮಹಾಶಯನೇ ಇರಬೇಕು ಎಂದು ಕೊಂಡೆ. ನಂತರ ನನ್ನ ಗಮನ ಸ್ಕೂಟಿ ಮೇಲಿದ್ದ ಒಬ್ಬಳು ಹುಡುಗಿಯ ಕಡೆಗೆ ಹರಿಯಿತು. ಬರಬೇಕಾಗಿದ್ದ ಬಾಯ್ ಫ್ರೆಂಡ್ ಎಷ್ಟು ಹೊತ್ತಾದರೂ ಬರಲಿಲ್ಲವೆನೋ ಎಂದು ಆಕೆ ಚಡಪಡಿಸಿದಂತೆ ಕಾಣುತ್ತಿತ್ತು. ಗೇಟ್ ತೆಗೆಯದಿದ್ದರೆ ಹಾರಿಸಿಕೊಂಡು ಹೋಗುವಂತೆ ಆ ಕಡೆ, ಈ ಕಡೆ, ಯಾವ ಕಡೆ ರೈಲು ಬರ್ತಿದೆ ಎಂದು ನೋಡುತ್ತಾ ತವಕಿಸುತ್ತಿದ್ದಳು. ಒಂದೇ ರೈಲಿಗೆ ಸುಸ್ತಾಗಿದ್ದ ಜನ ಮತ್ತೊಂದು ರೈಲು ಬರುವುದು ಖಚಿತವಾದಂತೆ ತಮ್ಮ ತಮ್ಮ ಗಾಡಿಗಳ ಮೇಲೆ ಧ್ಯಾನಸ್ಥರಾದರು. ಕೆಲವರು ತೂಕಡಿಸಲಿರಲಿಕ್ಕೂ ಸಾಕು! ಅದಾಗ ಉಂಟಾದ ಮೌನದ ವಾತಾವರಣ ನನಗೆಕೋ ಹೆಚ್ಚು ಆಪ್ತವಾಯಿತು. ಆ ಜಾಗದಲ್ಲೇ ಹಲವು ವರುಷಗಳಿಂದ ಜೀವಿಸುತ್ತಿದ್ದಿವೇನೋ ಎಂಬ ಭಾವ ಮನದಲ್ಲಿ ಇಣುಕಿತು. ಆಗ “ಕುಹೂ... ಕುಹೂ...” ಎಂಬ ಕೋಗಿಲೆಯೆ ಹಾಡು ಉಪ್ಪಾರಹಳ್ಳಿಯ ಕಡೆಯಿಂದ ತೇಲಿಬಂದು ನನ್ನನ್ನು ಮೂಕವಿಸ್ಮಿತನಾಗಿಸಿತು. ಅದನ್ನು ಉಪ್ಪಾರಹಳ್ಳಿಗೆ ಹೊಂದಿಕೊಂಡಂತೆಯೇ ಇದ್ದ ಶಾಂತಿನಗರದ ನಮ್ಮ ಮನೆಯಿಂದಲೇ ಬಂದ ನನ್ನ ಹೆಂಡತಿಯ ಕರೆ ಎಂದು ನಾನು ಭಾವಿಸಿದೆ ಮತ್ತು ಮುಗುಮ್ಮಾಗಿ ನಕ್ಕೆ.

ಆ ಕ್ಷಣ ಮೈಮರೆತಿದ್ದವನಿಗೆ ರೈಲು ಬರುವ ಎಲ್ಲಾ ಸೂಚನೆಗೆಳು ಸಿಕ್ಕಿ ರೈಲು ಬಂದೇ ಬಿಟ್ಟಿತು. ಅಲ್ಲಿಯವರೆವಿಗೂ ತಪೋನಿರತರಾಗಿದ್ದ, ತೂಕಡಿಸುತ್ತಿದ್ದ ಎಲ್ಲಾ ವಾಹನ ಸವಾರರುಗಳು ತಮ್ಮ ತಮ್ಮ ವಾಹನವನ್ನು ಸ್ಟಾರ್ಟ್ ಮಾಡಿಕೊಂಡು ದಿನನಿತ್ಯದ ಯುದ್ಧಕ್ಕೆ ಸಜ್ಜಾದರು. ಗೇಟ್ ತೆಗೆಯುತ್ತಿದ್ದಂತೆ ಮಿಂಚಿನಂತೆ ಸ್ಕೂಟಿ ಮೇಲಿದ್ದ ಹುಡುಗಿ ಮಾಯವಾದಳು. “ಅಲ್ಲಮ” ಅಂಬಾಸಿಡರ್ ಕಾರ್ ಮುಂದೆ ಹೋಗಿ ಯಾಕೋ ಹಿಮ್ಮುಖವಾಗಿ ನಿಧಾನವಾಗಿ ಚಲಿಸತೊಡಗಿತು. ಅದಕ್ಕೆ ಗೇಟಿನ ಬಳಿ ಇದ್ದ ಏರನ್ನು ಏರಲಾಗಿರಲಿಲ್ಲ. ಚಕ್ಕನೆ ಬ್ರೇಕ್ ಹಾಕಿ ನಿಂತ ಕಾರಿನಿಂದ ಇಳಿದವರನ್ನು ನೋಡಿದೆ. ಹೌದು. ಅವರು ನಾನು ಭಾವಿಸಿದಂತೆ ಕವಿಯೇ ಆಗಿದ್ದರು. ಅವರು ಕಾರನ್ನು ಮುಂದೆ ಚಲಿಸಲು ಅನುವಾಗುವಂತೆ ಡ್ರೈವರನಿಗೆ ಕೆಲವು ಸೂಚನೆಗಳನ್ನು ಕೊಟ್ಟರು. ಕಾರು ಸ್ವಲ್ಪ ಮುಂದೆ ಹೋದ ಮೇಲೆ ಮತ್ತೆ ಹತ್ತಿ ಕುಳಿತರು. “ಅಲ್ಲಮ” ಮುಂದೆ ಚಲಿಸಿತು. ಆವಾಗ ಹಿಂದೊಮ್ಮೆ ಬಸ್ಸೊಂದು ಹಿಮ್ಮುಖವಾಗಿ ಚಲಿಸಿ ಅದರ ಹಿಂಭಾಗದಲ್ಲಿ ಆಟೋವೊಂದು ಸಿಲುಕಿ ನುಜ್ಜುಗುಜ್ಜಾಗಿದ್ದು ನೆನಪಿಗೆ ಬಂದಿತು. ಸದ್ಯ ಅಂತದ್ದೇನೂ ಸಂಭವಿಸಲಿಲ್ಲ. ನಂತರ ಎಲ್ಲಾ ವಾಹನಗಳು ಹೋಗಿಬಿಡಲಿ ಎಂದು ಕ್ಷಣಕಾಲ ಕಾದು ನಿಂತ ನಾನು ಗೇಟ್ ದಾಟಿ ಮನೆಗೆ ಹೋದೆ. ಅಂದಿನಿಂದ ಇಂದಿನವರೆವಿಗೂ ಉಪ್ಪಾರಹಳ್ಳಿಯ ರೈಲ್ವೇ ಗೇಟಿನ ಕುಹೂ ಕುಹೂ ನನ್ನೆದೆಯಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ.

ಇತ್ತೀಚಿನ ದಿನಗಳಲ್ಲಿ ನನ್ನ ಮಗಳನ್ನು ಎಸ್.ಎಸ್.ಪುರಂನಲ್ಲಿರುವ ಪ್ಲೇಹೋಮಿಗೆ ಬಿಡಲು ಹೋಗುವಾಗ, ಸಂಜೆ ವಾಪಸ್ಸು ಕರೆತರುವಾಗ ರೈಲ್ವೇ ಗೇಟ್ ಹಾಕಿಬಿಟ್ಟರೆ ನನ್ನ ಮಗಳಿಗೆ ರೈಲು ತೋರಿಸುವಾಗ ಅವಳು ಮೊದಲೆಲ್ಲಾ ಅದಕ್ಕೆ ಹೆದರಿಕೊಳ್ಳುತ್ತಿದ್ದುದು, ಇದೀಗ “ಅಪ್ಪಾ ರೈಲು...ರೈಲು...” ಎಂದು ಒಂದೇ ಸಮನೆ ಕೂಗುವುದು ನನ್ನ ಜೀವನದ ಮಧುರ ಅನುಭವಗಳಲ್ಲೊಂದಾಗಿದೆ.

ರೈಲ್ವೇಗೇಟ್‍ನಲ್ಲಿ ಅಪರೂಪಕ್ಕೊಮ್ಮೆ ಸಿಗುವ ಗೆಳೆಯರು, ಅಚಾನಕ್ಕಾಗಿ ಸಿಕ್ಕ ನಮ್ಮ ಏಳನೇ ಕ್ಲಾಸಿನ ಇಂಗ್ಲೀಷ್ ಮೇಡಮ್ಮು. ಅಲ್ಲಿ ನಡೆಯುವ ಘಟನೆಗಳು, ಬಡವರ ಬಂಧುವಂತಿದ್ದ ಚನ್ನಂಜಪ್ಪ ಹಾಸ್ಟೆಲ್ ಮೇಲ್ಸೆತುವೆಯ ಕೃಪಾಕಟಾಕ್ಷದಿಂದ ಅವಸಾನದ ಅಂಚಿನಲ್ಲಿ ಅನೈತಿಕ ಚಟುವಟಿಕೆಗಳ ತಾಣವಾದದ್ದು, ಅಲ್ಲಿನ ಮತ್ತೆ ಮತ್ತೆ ನೆನಪಾಗುವ ಕುಮಾರ ಹೇಳಿದ್ದ ಕಲ್ಲಿನ ಅನ್ನ, ಹುಳದ ಸಾರು, ಎಂದೆಂದೂ ಮರೆಯಲಾಗದ ಸಂಜೆಯ ಕುಹೂ... ಕುಹೂ... ಮತ್ತಷ್ಟು ಮೊಗದಷ್ಟು ಉಪ್ಪಾರಹಳ್ಳಿಯ ರೈಲ್ವೇಗೇಟ್ ನೆನಪುಗಳು ನುಗ್ಗಿ ನುಗ್ಗಿ ಬಂದು ಮನಸ್ಸಿನಲ್ಲಿ ಸುಗ್ಗಿಯಾಗುತ್ತಿದ್ದರೂ, ಐದು ವರುಷಗಳಾದರೂ ಮುಗಿಯದ ಮೇಲ್ಸೆತುವೆ ಯಾವುದೋ ಯುದ್ಧಕ್ಕೆ ನಲುಗಿದಂತೆ ಕಂಡು ಮನಸ್ಸು ಬೇಸರದಿಂದ ಕೂಡುತ್ತದೆ. ನಮ್ಮ ಪ್ರೀತಿಯ ರಾಷ್ಟ್ರಪತಿಯಾಗಿದ್ದ ಡಾ ಎ.ಪಿ.ಜೆ. ಅಬ್ದುಲ್ ಕಲಾಂರವರ ಕನಸು “ವಿಶನ್ 2020” ನನಸಾಗುವ ಹೊತ್ತಿಗಾದರೂ ಮೇಲ್ಸೆತುವೆ ಕಾರ್ಯ ಮುಗಿದು ಓಡಾಟಕ್ಕೆ ತೆರವಾದರೆ, ಸೇತುವೆ ಮೇಲಿನಿಂದ ಒಂದು ರೈಲಿನ ಚಿತ್ರವನ್ನು ತೆಗೆಯಬೇಕೆಂಬ ನನ್ನ ಕನಸೂ ಸಫಲವಾದೀತು.

                                                                                                                         - ಗುಬ್ಬಚ್ಚಿ ಸತೀಶ್.





ನೀರು (ಪುಟ್ಟ ಕತೆ)

  ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹ...