ಸೋಮವಾರ, ಜುಲೈ 4, 2011

ಗಾಳಿಪಟದ ಬಾಲ ಎನ್ನ ಮನ.

“ಚಿಕ್ಕವಸ್ತುಗಳನ್ನು ಕಡೆಗಣಿಸಬೇಡಿ, ಗಾಳಿಪಟ ಹಾರುವುದು ಅದರ ಬಾಲದಿಂದಲೇ”.
                                                                                    - ಹವೈನ್ ಗಾದೆ.

ಆಷಾಢವೆಂಬ ಗಾಳಿಮಾಸ ಶುರುವಾಗುತ್ತಿರುವ ಮುನ್ಸೂಚನೆ ನಮಗೆಲ್ಲಾ ಸ್ವಲ್ಪ ದಿನಗಳ ಮುಂಚೆಯೇ ಸಿಗುತ್ತಿತ್ತು. ಶಾಲೆಯಿಂದ ಹೊರಟಾಗಲೇ ಸುಯ್ ಎಂದು ಬೀಸುತ್ತಿದ್ದ ಗಾಳಿ ನಮ್ಮನ್ನೆಲ್ಲಾ ಒಂದೇ ಬಾರಿ ಮನೆಯ ಹತ್ತಿರಕ್ಕೆ ಹೊತ್ತಯ್ಯಬಾರದೇ ಎಂಬ ಆಸೆ ಇಣುಕುತ್ತಿತ್ತು. ಮೋಡ ಕವಿದ ವಾತಾವರಣ, ಇದ್ದಕ್ಕಿದ್ದಂತೆ ಯಾವ ಆರ್ಭಟವೂ ಇಲ್ಲದೆ ಸುರಿಯುತ್ತಿದ್ದ ಮಳೆ, ದೇಹ ಮತ್ತು ಮನಸ್ಸು ಎರಡನ್ನೂ ತಂಪಾಗಿಸುತ್ತಿದ್ದ ತಂಗಾಳಿ ಬೆಚ್ಚನೆಯ ಮುದ ಕೊಡುತ್ತಿತ್ತು.

ಆ ದಿನಗಳಲ್ಲಿ ಶನಿವಾರದ ಮಾರ್ನಿಂಗ್ ಸ್ಕೂಲ್ ಮುಗಿಸಿಕೊಂಡು ನಾವೊಂದಷ್ಟು ಹುಡುಗರು ಮನೆಯಲ್ಲಿ ಕೊಟ್ಟ ಎನನ್ನಾದರೂ ತಿಂಡಿಯನ್ನು ತಿಂದುಕೊಂಡು ಮಧ್ಯಾಹ್ನದ ಹೊತ್ತಿಗೆ ನನ್ನ ಗುಬ್ಬಿ ಮನೆಯ ಎದುರಿಗಿದ್ದ ಹಿಟ್ಟಿನ ಗಿರಣಿಯ ಮಾಲೀಕರಾದ ಆದಿರಾಜುರವರಿಗೆ “ಆದಣ್ಣ...ಆದಪ್ಪಜ್ಜಿ...ಗಾಳಿಪಟ ಮಾಡಿಕೊಡಿ” ಎಂದು ದಂಬಾಲು ಬೀಳುತ್ತಿದ್ದೆವು. ನಮ್ಮ ಗುಂಪಿನ ಹುಡುಗರು ಅಷ್ಟೇನು ಸ್ಥಿತಿವಂತರಲ್ಲದ ಕಾರಣ ಸೇಠು ಅಂಗಡಿಗಳಲ್ಲಿ ಸಿಗುತ್ತಿದ್ದ ರೆಡಿಮೇಡ್ ಗಾಳಿಪಟವನ್ನು ಕೊಂಡುಕೊಳ್ಳಲು ಹಣವಿರುತ್ತಿರಲಿಲ್ಲ, ನಾವೆಲ್ಲಾ ಪ್ರೀತಿಯಿಂದ ಆದಣ್ಣನ ಕೈಹಿಡಿದು ಜಗ್ಗತೊಡಗಿದರೆ ಅವರೆಂದೂ ಇಲ್ಲ ಎಂದದ್ದೇ ಇಲ್ಲ. “ಬರ್ತೀನಿ ಕೈ ಬಿಡಿ” ಎಂದು ಬೀದಿಯ ಯಾವುದಾದರೊಂದು ಮನೆಯ ವಿಶಾಲವಾದ ಜಗುಲಿಯಲ್ಲಿ ಆಸೀನರಾಗುತ್ತಿದ್ದರು. “ಏಯ್, ನೀನ್ ಹೋಗಿ ಮನೇಲಿ ಹೊಗೆಸೊಪ್ಪಿನ ಡಬ್ಬ ತೆಗೆದುಕೊಂಡು ಬಾ” ಅಂತಿದ್ರು. ಅವರು ಯಾರಿಗೆ ಹೇಳುವರೋ ಅವರು ಮೊದಲೇ ಇವರ ಆಣತಿಗೆ ಕಾಯ್ಯುತ್ತಿದ್ದವರಂತೆ ರೊಯ್ ಅಂತಾ ಹೋಗಿ ರೊಯ್ ಅಂತ ಬಂದು ಬುಸುಗುಡುತ್ತಾ ಹೊಗೆಸೊಪ್ಪಿನ ಡಬ್ಬವನ್ನು ಅವರ ಮುಂದೆ ಇಡುತ್ತಿದ್ದರು. ಡಬ್ಬದಿಂದ ಹೊಗೆಸೊಪ್ಪನ್ನು ಎಲೆ ಅಡಿಕೆಯ ಜೊತೆ ಬೆರೆಸಿ ಬಾಯಿಗಿಡುತ್ತಾ “ಯಾರ್ಯಾರಿಗೆ ಗಾಳಿಪಟ ಬೇಕೋ ಅವರು ನ್ಯೂಸ್ ಪೇಪರ್ರು, ಗರಿ ಕಡ್ಡಿ, ದಾರ ಮತ್ತು ಸ್ವಲ್ಪ ಗೊಂದು ತಗೊಂಡು ಬನ್ನಿ” ಎನ್ನುತ್ತಿದ್ದರು. ಕೆಲವರು ಮೊದಲೇ ಇವುಗಳನ್ನೆಲ್ಲಾ ತಂದಿರಿಸಿಕೊಂಡು “ನಂಗೆ ಮೊದ್ಲು ಮಾಡಿ ಕೊಡಿ” ಎಂದು ವಿನಂತಿಸುತ್ತಿದ್ದರು. ಬೇಕಾದ ವಸ್ತುಗಳನ್ನು ತರದವರು ಮತ್ತೆ ಮನೆಯಕಡೆ ಓಡುತ್ತಿದ್ದರು. “ಆದಣ್ಣ” ಅಂದರೂ ಆಯ್ತು ಅಥವಾ “ಆದಪ್ಪಜ್ಜಿ” ಎಂದರೂ ಸರಿಯೇ ನಗುನಗುತ್ತಲೇ ಗಾಳಿಪಟ ಮಾಡಲು ಶುರುಮಾಡುತ್ತಿದ್ದರು.

ತಮ್ಮ ಹೊಗೆಸೊಪ್ಪಿನ ಡಬ್ಬದಲ್ಲೇ ಇರುತ್ತಿದ್ದ ಕೆಲವು ಉಪಕರಣಗಳಲ್ಲಿ ಒಂದಾದ ಕತ್ತರಿಯನ್ನು ತೆಗೆದು ಚಕಚಕನೆ ಪೇಪರ್ ಕಟ್ ಮಾಡಿಕೊಂಡು, ಗರಿಕಡ್ಡಿಯನ್ನು ಅಳೆತೆಗೆ ತಕ್ಕಂತೆ ಮುರಿದುಕೊಂಡು, ಡೈಮಂಡ್ ವಿನ್ಯಾಸಕ್ಕೆ ಕಟ್ಟಿ ಅದನ್ನು ಪೇಪರಿಗೆ ಅಂಟಿಸಿ, ಒಣಗಿದ ಕೂಡಲೇ ಸ್ವಲ್ಪ ದಾರವನ್ನು ಕಟ್ಟಿ, ಬಾಲಂಗೋಚಿಯನ್ನು ಕಟ್ಟಿ, ಕೈಯಲ್ಲಿಡಿದು, ಮೇಲಕ್ಕೆತ್ತಿ ಸರಿಯಾಯಿತೇ ಎಂದು ಪರೀಕ್ಷಿಸಿ ನೋಡುತ್ತಿದ್ದರು. “ಸ್ವಲ್ಪ ವ್ಯತ್ಯಾಸವಾದರೂ ಲಾಗ ಹಾಕ್ಬುಡುತ್ತೆ” ಎಂದು ನಗುತ್ತಿದ್ದರು. ಅವರ ಈ ಮಾತುಗಳು ಜೀವನಕ್ಕೂ ಅನ್ವಯಿಸುತ್ತವೆ ಎಂಬುದು ನಮಗೆಲ್ಲಾ ದೊಡ್ಡವರಾದ ಮೇಲೆಯೇ ತಿಳಿದದ್ದು. “ಜೀವನವೇ ಗಾಳಿಪಟವೆಂದುಕೊಂಡರೇ, ಮನಸ್ಸು ಅದರ ಬಾಲವಲ್ಲದೇ ಮತ್ತೇನು? ಮನಸ್ಸೆಂಬ ಬಾಲವಿದ್ದರೆ ಜೀವನವೆಂಬ ಗಾಳಿಪಟವನ್ನು ಎತ್ತರೆತ್ತರಕ್ಕೆ ಕರೆದೊಯ್ಯಬಲ್ಲದು ಅಲ್ಲವೇ?”

ಸರಿ, ಸಿದ್ದವಾದ ಗಾಳಿಪಟವನ್ನು “ಎಲ್ಲಿ ಒಂದು ರೌಂಡ್ ಹೋಗ್ಬ” ಎಂದೊಡನೆ ಗಾಳಿಪಟ ಮಾಡಿಸಿಕೊಂಡವನು ಅದನ್ನು ತೆಗೆದುಕೊಂಡು ಅಲ್ಲೇ ಬೀದಿಯಲ್ಲೆ ಓಡುತ್ತಿದ್ದನು. ಮನೆಗಳ ಹತ್ತಿರ ಬೀಸುತ್ತಿದ್ದ ಗಾಳಿ ಗಾಳಿಪಟ ಹಾರಿಸಲು ಸೂಕ್ತವಲ್ಲದಿದ್ದರೂ ಅದನ್ನು ಪರಿಕ್ಷೀಸುವ ಸಲುವಾಗಿ ಹಿಂದಕ್ಕೆ ನೋಡಿಕೊಂಡೇ ಓಡುತ್ತಿದ್ದ ಹುಡುಗನ ವೇಗಕ್ಕೆ ತಕ್ಕಂತೆ ಹಾರುತ್ತಿತ್ತು. ಒಂದು ರೌಂಡ್ ಬಂದ ಮೇಲೆ ಕುಳಿತಲ್ಲಿಂದಲೇ ಗಮನಿಸುತ್ತಿದ್ದ ಆದಣ್ಣನವರು ಗಾಳಿಪಟ ಸರಿಯಿದಯೇ ಇಲ್ಲವೇ ಎಂದು ಹೇಳಿ ಆಕಸ್ಮಾತ್ತೆನಾದರೂ ತೊಂದರೆ ಕಂಡರೆ ಅದನ್ನು ಸರಿ ಮಾಡುತ್ತಿದ್ದರು.

ಹೀಗೆಯೇ ನಾಲ್ಕೈದು ಗಾಳಿಪಟವನ್ನು ನಮಗೆಲ್ಲರಿಗೂ ಮಾಡಿಕೊಟ್ಟು, “ಹೋಗಿ ಹೈಸ್ಕೂಲ್ ಫೀಲ್ಡಿನಲ್ಲಿ ಹಾರಿಸಿ. ಹುಷಾರು...ಲೈಟ್ ಕಂಬದ ಹತ್ತಿರ, ಮರದ ಹತ್ತಿರ ಹಾರಿಸಬೇಡಿ” ಎಂದು ಎಚ್ಚರಿಸುತ್ತಿದ್ದರು. ಅವರವರ ಶಕ್ತ್ಯಾನುಸಾರ ಉದ್ದವಿರುತ್ತಿದ್ದ ದಾರವನ್ನು ಬಿದಿರು ಕಡ್ಡಿಗೋ, ಸರ್ವೆಕಡ್ಡಿಗೋ ಸುತ್ತಿಕೊಂಡು ನಾವೆಲ್ಲರು ಫೀಲ್ಡಿಗೆ ಹೋಗುತ್ತಿದ್ದೆವು. ದಾರವಿಲ್ಲದವರಿಗೆ ವಾಪಸ್ಸು ಕೊಡಬೇಕೆಂದು ಹೇಳಿ ಅವರ ಬಳಿ ಇರುತ್ತಿದ್ದ ದಾರವನ್ನು ಕೊಡುತ್ತಿದ್ದರು ನಮ್ಮೆಲ್ಲರ ಪ್ರೀತಿಯ ಆದಪ್ಪಾಜಿ. ನಾವೆಲ್ಲರೂ ಹಳೆಯ ನ್ಯೂಸ್ ಪೇಪರ್ಗಳಲ್ಲೇ ಗಾಳಿಪಟವನ್ನು ಮಾಡಿಸಿಕೊಳ್ಳುತ್ತಿದ್ದರಿಂದ ಮತ್ತು ಗೊಂದೇನಾದರೂ ಬೇಕೆಂದರೆ ನಮ್ಮ ಮನೆಯಲ್ಲಿ ಪೇಪರ್ ಕವರ್‍ಗಳನ್ನು ಮಾಡಲು ಸದಾ ಸಿದ್ದವಿರುತ್ತಿದ್ದ ಮೈದಾ ಹಿಟ್ಟಿನ ಅಂಟನ್ನು ಕೊಡುತ್ತಿದ್ದರಿಂದ ಮತ್ತು ಮುಖ್ಯವಾಗಿ ಗಾಳಿಪಟವನ್ನು ತಯಾರು ಮಾಡಲು ಆದಣ್ಣನವರು ಹಣವನ್ನು ತೆಗೆದುಕೊಳ್ಳುತ್ತಿರಲಿಲ್ಲವಾದ್ದರಿಂದ ಖರ್ಚೇನು ಇರುತ್ತಿರಲ್ಲಿಲ್ಲ. ಆದರೆ, ಯಾರಿಗಾದರೂ ಬಣ್ಣದ ಗಾಳಿಪಟ ಬೇಕಿದ್ದರೆ ಅವರು ಬಣ್ಣದ ಪೇಪರ್ ತಂದುಕೊಡಬೇಕಿತ್ತು ಮತ್ತು ಆದಪ್ಪಾಜಿಗೆ ಎಲೆ ಅಡಿಕೆಯನ್ನೊ, ಹೊಗೆಸೊಪ್ಪನ್ನೊ ತಂದುಕೊಡಬೇಕಿತ್ತು. ಹಣವನ್ನು ಮಾತ್ರ ಯಾವುದೇ ಕಾರಣಕ್ಕೂ ತೆಗೆದುಕೊಳ್ಳುತ್ತಿರಲಿಲ್ಲ.

ಗಾಳಿಪಟವನ್ನು ಹಿಡಿದು ನಾವೆಲ್ಲರೂ ಹೈಸ್ಕೂಲ್ ಫೀಲ್ಡಿಗೆ ಲಗ್ಗೆ ಹಾಕುತ್ತಿದ್ದೆವು. ವಿಶಾಲವಾದ ಗುಬ್ಬಿ ಮೈದಾನದಲ್ಲಿ ಅದಾಗಲೇ ಕೆಲವು ಗಾಳಿಪಟ ಪ್ರೇಮಿಗಳು ಗಾಳಿಪಟ ಆರಿಸುವುದರಲ್ಲಿ ಮಗ್ನರಾಗಿರುತ್ತಿದ್ದರು. ನಾವೆಲ್ಲರು ನಮ್ಮ ನಮ್ಮ ಗಾಳಿಪಟವನ್ನು ಮೈದಾನಕ್ಕಿಂತ ವಿಶಾಲವಾದ ಆಕಾಶಕ್ಕೆ ಹಾರಿಬಿಡುತ್ತೆದ್ದೆವು. ಅವುಗಳು ಮೇಲೆ ಮೇಲೆ ಹೋಗುತ್ತಿದ್ದಂತೆ ನಮ್ಮ ಹರ್ಷವೂ ಮುಗಿಲು ಮುಟ್ಟುತ್ತಿತ್ತು. ಸಂಜೆಯಾಗುವಷ್ಟರಲ್ಲಿ ಮನಸಿಲ್ಲದಿದ್ದರೂ ಮುಷ್ಟಿಯಲ್ಲಿಡಿದ ಖುಷಿಯನ್ನು ಹೊತ್ತು ಮನೆಗೆ ತೆರಳುತ್ತಿದ್ದೆವು. ಹೇಗಿದ್ದರೂ ನಾಳೆ ಭಾನುವಾರ! ಎಂಬ ಸಮಾಧಾನ ಜೊತೆಗಿರುತ್ತಿತ್ತು.

ಆಷಾಢ ಮುಗಿಯುವವರೆಗೂ ಡಬ್ಬಗಳಲ್ಲೇ ದುಃಖಿಸುತ್ತಿದ್ದ ಗೋಲಿಗಳು, ಮಂಚದ ಕೆಳಗೆ ಯಾವುದೋ ಮೂಲೆಯಲ್ಲಿ ನರಳುತ್ತಿದ್ದ ಲಗೋರಿ ಬಾಲು, ಕ್ರಿಕೆಟ್ ಬ್ಯಾಟುಗಳು ಗಾಳಿಪಟವನ್ನು ನೋಡಿ ಹೊಟ್ಟೆ ಉರಿದುಕೊಂಡಿರಲು ಸಾಕು. ಅದೇಕೋ, ನಾವೆಲ್ಲ ಇನ್ನೇನು ಹೈಸ್ಕೂಲಿಗೆ ಕಾಲಿಟ್ಟಾಗ ಅದ್ಯಾವ ಗಾಳಿ ಬೀಸಿತೋ ಗಾಳಿಪಟಗಳೆಲ್ಲಾ ಅಟ್ಟ ಸೇರಿದವು. ನಮ್ಮ ಪ್ರೀತಿಯ ಆದಣ್ಣನವರ ಸುತ್ತ ಆಷಾಢಗಳಲ್ಲಿ ನಮಗಿಂತಲೂ ಕಿರಿಯ ಹುಡಗರು ಸೇರತೊಡಗಿದರು.

ನಾನೂ ಕೆಲವು ಕಿರಿಯರಿಗೆ ಗಾಳಿಪಟ ಮಾಡಿಕೊಡಲು ಪ್ರಯತ್ನಿಸಿದ್ದೆನಾದರೂ, ಆದಣ್ಣನವರಂತೆ ಯಶಸ್ವಿಯಾಗಿರಲಿಲ್ಲ. ಆದರೆ, ಆಷಾಢದ ಬಾಲ್ಯದ ದಿನಗಳಲ್ಲಿ ಗಾಳಿಪಟವೆಂಬ ಒಂದು ಆಕರ್ಷಣೆಗೆ ಬಾಲವಾಗಿದ್ದ ನನ್ನ ಮನ ಇದೀಗ ಗಾಳಿಪಟವೆಂದರೆ, “ಜೀವನವೇ ಒಂದು ಗಾಳಿಪಟ” ಎಂಬ ತತ್ತ್ವ ಹೇಳಲು ಶುರುಮಾಡುತ್ತದೆ.

ಹೀಗೆಲ್ಲಾ ಗಾಳಿಪಟದ ಬಗ್ಗೆ ಚಿಂತಿಸಿ ಅದರ ಬಗ್ಗೆ ತಿಳಿದುಕೊಳ್ಳಲು ಗೂಗಲಿಸಿದಾಗ ಒಂದು ಪುಸ್ತಕವೇ ಆಗಬಹುದಾದಷ್ಟು ಮಾಹಿತಿ ಅಂತರ್ಜಾಲದಲ್ಲಿ ಸಿಕ್ಕಿತ್ತಾದರೂ ಅದರಲ್ಲಿ ನನ್ನ ಭಾವನಗಳೇ ಇರಲಿಲ್ಲ. ಯಾವತ್ತಾದರೂ ಒಂದು ದಿನ ನನ್ನ ಮತ್ತು ಗಾಳಿಪಟದ ನಂಟು ವಿಕಿಪೀಡಿಯಾದಲ್ಲಿ ಸೇರುತ್ತದೇನೋ ಎಂಬ ನನ್ನನೆಂದೂ ಕೈಬಿಡದ ನನ್ನ ಆತ್ಮವಿಶ್ವಾಸ ಮನದಲ್ಲಿ ಕನಸೊಂದನ್ನು ಮೂಡಿಸುತ್ತಿದೆ. ಅದನ್ನು ನಿಮ್ಮಲ್ಲಿ ಹೇಳಿಯೇ ಬಿಡುತ್ತೇನೆ. ಅಷ್ಟಕ್ಕೂ ನಿಮ್ಮಲಲ್ಲದೆ ಇನ್ಯಾರಲ್ಲಿ ನನ್ನ ಕನಸನ್ನು ಹಂಚಿಕೊಳ್ಳಲಿ!

ಸಮುದ್ರ ತೀರ ಗಾಳಿಪಟ ಹಾರಿಸಲು ಸೂಕ್ತ ಸ್ಥಳವಂತೆ!, ಕೊರಿಯದಲ್ಲಿ ಗಂಡು ಮಕ್ಕಳ ಹೆಸರು ಮತ್ತು ಜನ್ಮ ದಿನಾಂಕವನ್ನು ಗಾಳಿಪಟದ ಮೇಲೆ ಬರೆದು, ಅದನ್ನು ಹಾರಿಸಿ, ನಂತರ ದಾರವನ್ನು ಕತ್ತರಿಸಿ ಗಾಳಿಪಟದೊಡನೆ ಎಲ್ಲ ದುಷ್ಟಶಕ್ತಿಗಳು ಹೊರಟುಹೋಗಲಿ, ಮಗುವಿಗೆ ಒಳ್ಳೆಯದಾಗಲಿ ಎಂಬ ಪದ್ದತಿಯಿದೆಯಂತೆ! ಮತ್ತು ವಿಯೆಟ್ನಾಂನಲ್ಲಿ ಬಾಲದ ಬದಲಿಗೆ ಸಣ್ಣ ಕೊಳಲನ್ನು ಕಟ್ಟಿ ಗಾಳಿಪಟವನ್ನು ಹಾರಿಸಿ ಕೊಳಲಿನ ನಾದವನ್ನು ಆಲಿಸುತ್ತಾರಂತೆ!

ನಂದೇನಪ್ಪಾ ಕನಸು ಅಂದರೆ : “ಕಲ್ಪನೆಯೇ ಅತಿ ಎತ್ತರಕ್ಕೆ ಹಾರಬಹುದಾದ ಗಾಳಿಪಟ” ಎಂದು ಅಮೆರಿಕದ ನಟಿ ಲೌರೆನ್ ಬಕಲ್ ಹೇಳಿದಂತೆ, ನಾನು ತುಂಬಾ ಇಷ್ಟಪಡುವ ಸ್ಥಳ ಕನ್ಯಾಕುಮಾರಿಯ ಸಮುದ್ರ ತೀರದಲ್ಲಿ, ನನ್ನ ನಲ್ಲೆಯೊಡನೆ, ನಮ್ಮ ಮುದ್ದಿನ ಮಗಳೊಂದಿಗೆ ಅವಳ ಹೆಸರು, ಜನ್ಮದಿನಾಂಕವನ್ನು ಬರೆದು, ಬಾಲದ ಬದಲು ನಮ್ಮ ಮಗಳಷ್ಟೇ ಪುಟ್ಟದಾದ ಕೊಳಲೊಂದನ್ನು ಕಟ್ಟಿ, ಮಕರ ಸಂಕ್ರಾಂತಿಯಂದು ಗಾಳಿಪಟವನ್ನು ಹಾರಿಬಿಡಬೇಕೆಂದು!

ಎಂದಿನಂತೆ ನಿಮ್ಮ ಪ್ರೀತಿಯ ಹಾರೈಕೆಯಿರಲಿ.

                                                                                                             - ಗುಬ್ಬಚ್ಚಿ ಸತೀಶ್.

ಸೋಮವಾರ, ಜೂನ್ 20, 2011

ಉತ್ತೇಜನ (Fueled)

ಉತ್ತೇಜನ

ಇಂಗ್ಲೀಷ್‍ ಮೂಲ : ಮಾರ್ಸಿ ಹ್ಯಾನ್ಸ್
ಕನ್ನಡಕ್ಕೆ : ಗುಬ್ಬಚ್ಚಿ ಸತೀಶ್

ಉತ್ತೇಜನ:
ಸಹಸ್ರಾರು
ಮಾನವ ಕೈಗಳು ನಿರ್ಮಿತ
ಅಗ್ನಿಯ ರೆಕ್ಕೆಗಳಿಂದ
ಆಗಸವ ಸೀಳಿದ ರಾಕೆಟ್ಟು
ಬಾನಿಗೊಂದು ಸುರಂಗ ತೋಡಿತು.
ಎಲ್ಲರೂ ಕೇಕೆಹಾಕಿದರು.

ಉತ್ತೇಜನ:
ಸೃಷ್ಟಿಕರ್ತನ ಆಲೋಚನೆಯೊಂದರಿಂದಲೇ
ಬೀಜಾಂಕುರವು
ಸ್ವಯಂ ಪ್ರೇರಿತವಾಗಿ
ಕತ್ತಲ ಗರ್ಭವನ್ನು ಭೇದಿಸಿ
ಕಠಿಣ ಒಳಮಾಳಿಗೆಯನ್ನು ಛೇದಿಸಿ
ತನ್ನಷ್ಟಕ್ಕೆ ತಾನು ಪಥಕ್ರಮಣ ಆರಂಭಿಸಿ
ಆಕಾಶದತ್ತ ಮುಖಮಾಡಿತು.
ಯಾರೊಬ್ಬರೂ
ಒಂದು
ಸಣ್ಣ ಚಪ್ಪಾಳೆಯನ್ನೂ
ತಟ್ಟಲಿಲ್ಲ.





ಶನಿವಾರ, ಜೂನ್ 11, 2011

ನಿದ್ರಿತ


ಜರ್ಮನ್ ಮೂಲ : ಅರ್ನ್ಸ್ಟ್ ಜಂಡಿ
ಇಂಗ್ಲೀಷ್‍ಗೆ : ಮೈಕೆಲ್ ಹಮ್‍ಬರ್ಗರ್
ಕನ್ನಡಕ್ಕೆ : ಗುಬ್ಬಚ್ಚಿ ಸತೀಶ್


ಅವನು ಮರವೊಂದರ ಬಳಿ ಬಂದ.
ಆ ಮರದಡಿಯಲ್ಲಿ ತನ್ನ ಮನೆ ಕಟ್ಟಿದ.
ಮರದಿಂದಲೇ ಕತ್ತರಿಸಿಕೊಂಡು
ಕೋಲು ಮಾಡಿಕೊಂಡ.
ಕೋಲು ಭರ್ಜಿಯಾಯಿತು.
ಭರ್ಜಿ ಬಂದೂಕಾಯಿತು.
ಬಂದೂಕು ಗನ್ನಾಯಿತು.
ಗನ್ನು ಸಿಡಿಗುಂಡಾಯಿತು.
ಸಿಡಿದ ಸಿಡಿಗುಂಡು ಅವನ ಮನೆಗೇ ಬಡಿಯಿತು
ಮತ್ತು ಮರವನ್ನು ಬೇರುಸಮೇತ ಸೀಳಿಹಾಕಿತು.
ಆಶ್ಚರ್ಯಗೊಂಡ ಅವನು ಅಲ್ಲಿಯೇ ನಿಂತಿದ್ದ.
ಆದರವನು, ಎಚ್ಚರಗೊಳ್ಳಲೇ ಇಲ್ಲ.


(ಈ ಕವನದಲ್ಲಿ, ಜರ್ಮನ್ ಕವಿ ಅರ್ನ್ಸ್ಟ್ ಜಂಡಿ (Ernst Jandi) ಮಾನವ ಸ್ವಾರ್ಥಿ ಎಂದು ಹೇಳುತ್ತಿದ್ದಾರೆ. ತಾನು ಪ್ರಕೃತಿಯನ್ನು ಉಪಯೋಗಿಸುಕೊಳ್ಳುವುದರ ಜೊತೆಗೆ ಹಾಳು ಮಾಡುವ ಮಾನವನ ಸ್ವಾರ್ಥ ಗುಣ ಇಲ್ಲಿ ಮೂಡಿಬಂದಿದೆ. ಕವಿ ಬೇಕೆಂತಲೇ “ನಿದ್ರಿತ” (Asleep) ಎಂಬ ಶೀರ್ಷಿಕೆಯನ್ನು ಕೊಟ್ಟಿರುತ್ತಾರೆ. ಮನುಷ್ಯ ಸದಾಕಾಲ ಕಣ್ಣು ತೆರೆದುಕೊಂಡೇ ನಿದ್ರಿತನಾಗಿರುತ್ತಾನೆ ಮತ್ತು ಕವನದ ಕೊನೆಯಲ್ಲಿ ಅವನು ಎಚ್ಚರಗೊಂಡು ಆಶ್ಚರ್ಯಪಟ್ಟರೂ ಅವನು ಮಾಡಿದ ಅವಾಂತರ ಅವನ ಅರಿವಿಗೆ ಬರುವುದಿಲ್ಲ ಎಂದು ಕವಿ ವಿಶಾದಿಸುತ್ತಾರೆ.)



ಶುಕ್ರವಾರ, ಜೂನ್ 3, 2011

ಬೇಕಾಗಿದ್ದಾರೆ.

ಅವಡುಗಚ್ಚಿ ಮೂಟೆಹೋರುವವರು
ಒಳಗೇನಿದೆ ಎಂದು ಕೇಳದವರು

ಅಂಟುಕೂತು ಕೀಬೋರ್ಡ್ ಕುಟ್ಟುವವರು
ದಣಿಯದ ಕಂಪ್ಯೂಟರ್‍ಗೆ ದಣಿಯದವರು

ಮಾತಿಗೆ ಮಾತು ಕೊಡದವರು
ಮಾತು ಬಂದರೂ ಮೂಕವಾದವರು

ಕಟ್ಟಿದ ಕೈ ಬಿಚ್ಚದವರು
ಆಗಾಗ ತಲೆ ಬಾಗುವವರು

ಕಿವಿಗಳಿಲ್ಲದೆ ಕವಿಗಳಾದವರು
ಮಾತಿನಲ್ಲೇ ಕಥೆ ಕಟ್ಟುವವರು

ಬಾಡಿಗೆಗೆ ಮಗುವ ಹೆರುವವರು
ಸಂಬಂಧಗಳ ಹಂಗಿಲ್ಲದೆ ಬದುಕುವವರು

ಸ್ವಾಭಿಮಾನದ ಹೆಸರು ಕೇಳದವರು
ಪ್ರಜಾಪ್ರಭುತ್ವ ಮರೆತಂತೆ ನಟಿಸುವವರು

ಅಘೋಷಿತ ದೊರೆಗಳಿಗೆ ಜೈ ಜೈ ಎನ್ನುವವರು
ಸಾಧಕರಲ್ಲದಿದ್ದರೂ ಥೈ ಥೈ ಕುಣಿಯುವವರು

ಮೇಲಿನ ಒಂದು ಅರ್ಹತೆ ನಿಮ್ಮದಾಗಿದ್ದರೆ
ಕ್ಷಮಿಸಿ, ಅರ್ಜಿ ಹಾಕುವ ಅವಶ್ಯಕತೆಯಿಲ್ಲ.

                                  - ಗುಬ್ಬಚ್ಚಿ ಸತೀಶ್.

ಸೋಮವಾರ, ಮೇ 23, 2011

ನಾವಿಬ್ಬರೂ ರೈಟ್ ಸೆಲೆಕ್ಷನ್ನೇ...


(ಪ್ರೀತಿಯ ಬ್ಲಾಗ್ ಮಿತ್ರರೆ, ಸಮಯದ ಅಭಾವದಿಂದ ಈ ಲೇಖನವನ್ನು ಸ್ಕ್ಯಾನ್ ಮಾಡಿ ಹಾಕಿದ್ದೇನೆ. ಓದಿ ಮರೆಯದೆ ಕಾಮೆಂಟಿಸಿ. ಈ ಲೇಖನವು ಏಪ್ರಿಲ್ ತಿಂಗಳ "ನಿಮ್ಮೆಲ್ಲರ ಮಾನಸ" ಮಾಸಪತ್ರಿಕೆಯಲ್ಲಿ ಪ್ರಕಟವಾಗಿದೆ. ನನ್ನನ್ನು ಮತ್ತಷ್ಟು ಬರೆಯಲು ಪ್ರೋತ್ಸಾಹಿಸುತ್ತಿರುವ "ಆವಿ ಪುಸ್ತಕ ಮನೆ" ಬಳಗಕ್ಕೆ ಮತ್ತು ನಿಮಗೆ ನನ್ನ ವಂದನೆಗಳು.) 

ಭಾನುವಾರ, ಮೇ 8, 2011

ತುಂಟ ಮಗು



ಅಮ್ಮಾ ಅಮ್ಮಾ

ಪೆನ್ಸಿಲ್ ಕೊಡು

ಜೊತೆಗೆ ಒಂದು

ಹಾಳೆ ಕೊಡು


ಮಗುವೆ ಮಗುವೆ

ಚಂದದ ನಗುವೆ

ಪೆನ್ಸಿಲ್, ಹಾಳೆ

ಏಕೆ ಬೇಕು?


ನಿನ್ನಯ ಚಿತ್ರ

ನಾ ಬಿಡಿಸುವೆ

ಅಪ್ಪಗೆ ತೋರಿಸಿ

ಪಪ್ಪಿ ಕೊಡಿಸುವೆ!

      - ಗುಬ್ಬಚ್ಚಿ ಸತೀಶ್.

ಶುಕ್ರವಾರ, ಏಪ್ರಿಲ್ 22, 2011

ಮಳೆಯೆಂದರೆ. . . ಮಳೆಯಾ? ಎಲ್ಲವೂ ಅಸ್ಪಷ್ಟ!


ಅಂದು ಸೆಂಪ್ಟಂಬರ್ 24, 2010 ಶುಕ್ರವಾರ. ನನ್ನ ಪಾಲಿಗದು ಶುಭ ಶುಕ್ರವಾರವೇ! ಏಕೆಂದರೆ, ಅಂದು aiಐದು ದಿನಗಳಿಂದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ವೈದ್ಯರ ಗಮನದಲ್ಲಿದ್ದವನು, ಥೈರಾಯ್ಡ್ ಸಮಸ್ಯೆಯಿಂದ ಹೀಗಾಗಿದೆ ಅಷ್ಟೆ ಎಂದು ಸರ್ಟಿಫಿಕೇಟ್ ಪಡೆದುಕೊಂಡು ಡಿಸ್ಚಾರ್ಜ್ ಆಗಿದ್ದೆ.

ಸರಿಯಾಗಿ ಐದು ದಿನಗಳ ಹಿಂದೆ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದೆ. ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ ನನ್ನನ್ನು ಗೆಳೆಯರ ಸಲಹೆಯಂತೆ ನನ್ನಾಕೆಯು 108 ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಳಂತೆ. ಅಲ್ಲಿ ನನ್ನ ಮೇಲುಸ್ತುವಾರಿ ನೋಡಿಕೊಳ್ಳುವ "ಏಂಜೆಲ್" ಎಂದೇ ನಾವು ಕರೆಯುವ ಲೇಡಿ ಡಾಕ್ಟರ್‍ಗೆ ಇವಳು ಫೋನಿನಲ್ಲಿ ವಿಷಯ ತಿಳಿಸಿ, ಅವರನ್ನು ಬರಮಾಡಿಕೊಂಡಳಂತೆ. ಅವರು ಬಂದವರೇ ಎಮರ್ಜೆನ್ಸಿ ವಾರ್ಡಿನಲ್ಲಿ ಚಿಕಿತ್ಸೆ ಕೊಡಿಸಿ, ನನ್ನನ್ನು ತುರ್ತು ನಿಗಾದಲ್ಲಿ ಇಟ್ಟಿದ್ದರಂತೆ. ಮಂಗಳವಾರ ಬೆಳಿಗ್ಗೆ ಆ ಏಂಜೆಲ್ “‘ನಿಮಗೆ ಏನೂ ಆಗಿಲ್ಲ, ಆರಾಮವಾಗಿರಿ” ಎಂದು ನಗುಮೊಗದಿಂದ ಹೇಳಿ ಹೋದರು.

ಬಹಳ ಹೊತ್ತು ಮೌನದಲ್ಲಿದ್ದು, ನನ್ನವಳೆಡೆಗೆ ತಿರುಗಿ "ನನಗೆ ಏನಾಗಿದೆ?" ಎಂದು ಕೇಳಿದೆನು. ಅವಳು ಮುಗುಳ್ನಗುತ್ತಾ, "ಏನೂ ಇಲ್ಲಾ, ನಿಮಗೆ ಈ ಹಿಂದೆ ಕೊಟ್ಟಿದ್ದ ಮತ್ತು ಈಗ ಕೊಡುತ್ತಿದ್ದ ಮಾತ್ರೆಗಳಿಂದ, ಮೊದಲೇ ಸಮಸ್ಯೆಯಿದ್ದ ಥೈರಾಯ್ಡ್ ಮತ್ತೆ ತೊಂದರೆ ಮಾಡಿದೆ ಅಷ್ಟೆ. ನೀವು ಅವತ್ತು unconscious ಆಗಿದ್ದೀರಿ. ಮಾತ್ರೆಗಳ ಪ್ರಭಾವದಿಂದ ಹೀಗಾಗಿದೆ ಅಷ್ಟೆ. ಒಂದೇ ದಿನದಲ್ಲಿ ನಾರ್ಮಲ್ ಆಗಿದ್ದೀರಿ. ಏನೂ ತೊಂದರೆ ಇಲ್ಲ. ಇನ್ನೂ ಕೆಲವು ಟೆಸ್ಟ್ ಗಳನ್ನು ಮಾಡಾಬೇಕಾಗಿರುವುದರಿಂದ, ಆಸ್ಪತ್ರೆಯಲ್ಲೇ ಐದಾರು ದಿನ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ. ಏನೂ ಆಗಿಲ್ಲ, ಆರಾಮಾಗಿ ಮಲಗಿ, ಹೆಚ್ಚು ಮತನಾಡಬೇಡಿ” ಎಂದು ಸಮಾಧಾನದಿಂದ ನುಡಿದಳು. ನನಗೆ ಸಮಾಧಾನವಾಗಲಿಲ್ಲವಾದರೂ, ಏನು ಮಾಡುವುದೆಂದು ತೋಚದೆ ಸುಮ್ಮನೆ ಮಲಗಿದೆ.

ಎಲ್ಲಾ ಟೆಸ್ಟ್‍ಗಳು ಮುಗಿದ ನಂತರ ಶುಕ್ರವಾರ ಸಂಜೆ ಏಳರ ಸುಮಾರಿಗೆ ಡಿಸ್ಚಾರ್ಜ್ ಮಾಡಿಸಿಕೊಂಡು ಆಸ್ಪತ್ರೆಯಿಂದ ಹೊರಬಿದ್ದೆವು. ಹೊಟ್ಟೆ ಹಸಿಯುತ್ತಿದ್ದರೂ, ಮಳೆ ಬರುವಂತ ವಾತಾವರಣವಿದ್ದುದರಿಂದ ಬಸ್ಟಾಂಡಿನಲ್ಲಿಯೇ ಊಟ ಮಾಡಿದರಾಯಿತು ಎಂದುಕೊಂಡು ಆಟೋದವರೊಬ್ಬರಿಗೆ ‘ಮೆಜಿಸ್ಟಿಕ್’ ಎಂದೆವು. ನಾವು ಆಟೋ ಹತ್ತುವ ಸಮಯಕ್ಕೆ ಸರಿಯಾಗಿ ತುಂತುರು ಮಳೆ ಹನಿಯಲಾರಂಭಿಸಿತು. ಮೋಡ ದಟ್ಟವಾಗಿ ಹರಡಿತ್ತು. ಜೋರಾಗಿ ಮಳೆ ಬರುವ ಮುನ್ಸೂಚನೆಯಿತ್ತು. ಆಟೋದವರು, ““ಸಾರ್, ಎಲ್ಲಾಕಡೆ ತುಂಬಾ ಮಳೆ ಆಗ್ತಿದೆಯಂತೆ, ಇಲ್ಲೂ ಶುರುವಾಯ್ತು, ಮೆಜಸ್ಟಿಕ್‍ವರೆಗೆ ಹೋಗೋಕೆ ಆಗುತ್ತೋ... ಇಲ್ವೋ... ನೋಡ್ಬೇಕು”” ಎಂದರು. “ಹಾಗೆಲ್ಲಾ ಹೇಳ್ಬೇಡಿ ಸಾರ್, ನಾವು ಇವತ್ತು ತುಮಕೂರಿಗೆ ಹೋಗ್ಲೇಬೇಕು. ಏನಾದ್ರು ಮಾಡಿ ಮೆಜಸ್ಟಿಕ್‍ಗೆ ಬಿಟ್ಟುಬಿಡಿ. ಇಷ್ಟು ಹೊತ್ನಲ್ಲಿ ಟ್ರೈನೂ ಸಿಗಲ್ಲ”” ಎಂದಳು ನನ್ನ ಮಡದಿ. “ಆಯ್ತು ಮೇಡಂ, ನೋಡ್ತಿನಿ” ಎಂದು ಡ್ರೈವರ್ ಹೇಳಿದರು. ಅಷ್ಟೊತ್ತಿಗೆ ತುಂತುರು ಹನಿಗಳ ರೂಪದಲ್ಲಿದ್ದ ಮಳೆಯು ಧೋ ಎಂದು ಸುರಿಯಲಾರಂಭಿಸಿತು. ನನಗಂತೂ ಏನೂ ತೋಚುತ್ತಿಲ್ಲ. ಏನಾದರೂ ಹೇಳುವ ಸ್ಥಿತಿಯಲ್ಲೂ ನಾನಿರಲಿಲ್ಲ. ಹೇಗಿದ್ದರೂ ಇವಳೇ ನಿಭಾಯಿಸುತ್ತಾಳೆಂದು ಸುಮ್ಮನೆ ನಿರ್ಲಿಪ್ತನಾಗಿ ಕುಳಿತುಬಿಟ್ಟೆ.

ಸಾಮಾನ್ಯವಾಗಿ ಆಸ್ಪತ್ರೆಯಿಂದ ಮಡಿವಾಳ ಚೆಕ್ ಪೋಸ್ಟ್‍ನತ್ತ ತಿರುಗಿ, ವಿಲ್ಸನ್ ಗಾರ್ಡನ್ ಮುಖಾಂತರ ಮೆಜಿಸ್ಟಿಕ್‍ನತ್ತ ಹೋಗುತ್ತಿದ್ದ ಆಟೋದವರು, ಅಂದು ಅಲ್ಲಿ ಮಳೆಯೆಂದು ಕೋರಮಂಗಲದ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಸಾಗಿ ಆಡುಗೋಡಿ ಮುಖಾಂತರ ತೆರಳುತ್ತಿದ್ದರು. ಅಷ್ಟರಲ್ಲಾಗಲೇ ಭೀಕರವಾಗಿ ಸುರಿಯುತ್ತಿದ್ದ ಮಳೆಯು ಹೊಸಲೋಕವೊಂದನ್ನು ಸೃಷ್ಟಿಸಲು ತೊಡಗಿತ್ತು. ನಾವೆಂದೂ ಇಂತಹ ಮಳೆಯನ್ನು ನೋಡಿರಲಿಲ್ಲ. ನಾನಂತೂ ಇವತ್ತೇನೋ ಘಟಿಸಲಿದೆ ಎಂದು ಮನದಲ್ಲೇ ಅಂದುಕೊಂಡು, ಜಡ್ಡುಗಟ್ಟಿದ ಮನಸ್ಸನ್ನು ಜಾಗೃತಗೊಳಿಸಿ ಕುಳಿತೆ.

ಮಳೆಯಿಂದಾಗಿ ಟ್ರಾಫಿಕ್ ಅಸ್ತವ್ಯಸ್ತವಾಗಿತ್ತು. ಬೈಕ್ ಸವಾರರು ಎಲ್ಲೆಂದರಲ್ಲಿ ತಮ್ಮ ಗಾಡಿಗಳನ್ನು ನಿಲ್ಲಿಸಿ, ಸಿಕ್ಕ ಸಿಕ್ಕ ಜಾಗಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ನಮ್ಮ ಆಟೊವು ಸುರಿಯುವ ಮಳೆಯಲ್ಲಿ ಆಮೆವೇಗದಲ್ಲಿ ಓಡುತ್ತಿತ್ತು. ನಮ್ಮ ಆಟೋ ಡ್ರೈವರ್ “ಏನಪ್ಪ ಮಾಡೋದು ದೇವ್ರೇ?” ಎಂದು ನಿಟ್ಟುಸಿರು ಬಿಡುತ್ತಾ ಮುಂದೆ ಸಾಗಲು ಯತ್ನಿಸುತ್ತಿದ್ದರು. ಎತ್ತ ನೋಡಿದರೂ, ಟೂ ವೀಲರ್‍ಗಳು, ಕಾರುಗಳು, ಆಟೋಗಳು ಮತ್ತು ಆನೆಯಂತೆ ದಾರಿಯನ್ನೆಲ್ಲಾ ಅಕ್ರಮಿಸಿಕೊಂಡು ನಿಂತ ಬಿ.ಎಂ.ಟಿ.ಸಿ. ಬಸ್ಸುಗಳು!

ತೆವಳಿಕೊಂಡೇ ನಮ್ಮ ಆಟೋವೂ ಮುಂದೆ ಹೋಗುತ್ತಿದ್ದರೆ, ರಸ್ತೆಬದಿಯ ಚಿತ್ರಗಳು ಚಿತ್ರವಿಚಿತ್ರವಾಗಿದ್ದವು. ಟ್ರಾಫಿಕ್ ಪೋಲಿಸರಂತೂ ಆ ಮಳೆಯಲ್ಲೇ ತಮ್ಮ ಸಾಹಸದ ಸೇವೆಯನ್ನು ನೀಡುತ್ತಿದ್ದರು. ಟ್ರಾಫಿಕ್ ಹೆಚ್ಚಾದಾಗ ಬೈಕ್ ಸವಾರರು, ರಸ್ತೆಯ ಬದಿಯಲ್ಲಿದ್ದ ಮೋರಿಗಳು ತುಂಬಿ ತುಳುಕಿ ಹರಿಯುತ್ತಿದ್ದರೂ ಲೆಕ್ಕಿಸದೆ ಪುಟ್ಪಾದತಿನ ಮೇಲೆ ಹೋಗುತ್ತಿದ್ದರು. ಅವರ ಧೈರ್ಯ, ಸಾಹಸಕ್ಕೆ ಒಲ್ಲದ ಮನಸ್ಸಿನಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ, ಅವರಿಗೇನಾದರೂ ಹೆಚ್ಚು ಕಡಿಮೆ ಆದಿತೆಂಬ ಧಾವಂತ ಮನದಲ್ಲಿತ್ತು. ಅಷ್ಟರಲ್ಲಿ, ಇಬ್ಬರಿದ್ದ ಒಂದು ಬೈಕಿನ ಮುಂದಿನ ಚಕ್ರ ಕುಸಿದಿದ್ದ ಪುಟ್ಪಾ ತಿನೊಳಕ್ಕೆ ಸಿಕ್ಕಿಬಿಟ್ಟಿತು. ಅದನ್ನು ಕಂಡ ನಮಗೆಲ್ಲಾ ಅಯ್ಯೋ ಎಂದೆನಿಸಿದರೂ, ಅವರಿಬ್ಬರು ಯಾವ ನೋವನ್ನೂ ತೋರ್ಪಡಿಸದೆ ನಗುತ್ತಿದ್ದನ್ನು ಕಂಡು, ಸಂಕಷ್ಟದಲ್ಲಿದ್ದರೂ ನೋವನ್ನು ಮರೆತು ನಕ್ಕ ಅವರನ್ನು ನೋಡಿ ನಾವೂ ನಕ್ಕಿದೆವು. ಆ ನಗುವಿನಲ್ಲಿ ಇದ್ದದ್ದು ಅಸಾಯಕತೆಯಾ? ವ್ಯಂಗ್ಯವಾ? ಅಳು ಬರುವಂತಾ ಸಮಯದಲ್ಲೂ ಮಾನವ ನಕ್ಕು ಬಿಡುತ್ತಾನಲ್ಲ...! ಆ ನಿಲುವಿಗೆ ಧನ್ಯೋಸ್ಮಿ.

ಅಷ್ಟರಲ್ಲಿ ಬಹಳ ಹೊತ್ತಾದರೂ ಮುಂದೆ ಚಲಿಸಲಾಗದೆ ನಮ್ಮ ಆಟೋ ಡ್ರೈವರ್ ಎದುರಿಗೆ ಬರುತ್ತಿದ್ದವರ ಬಳಿ ಏನೋ ಕೇಳಿದವರು ನಮ್ಮ ಕಡೆ ತಿರುಗಿ, “ಸಾರ್, ಮುಂದೆ ಇರೋ ದೊಡ್ಡಮೋರಿ ಉಕ್ಕಿ ಹರಿಯುತ್ತಿದ್ಯಂತೆ, ಅದಕ್ಕೆ ಎಲ್ಲಾರು ಹಿಂದಕ್ಕೆ ತಿರುಗಿಸಿಕೊಂಡು ಹೋಗುತ್ತಿದ್ದಾರೆ. ನಾನೂ ಟ್ರೈ ಮಾಡ್ತೀನಿ ಸಾರ್. ಅಲ್ಲೊಂದು ದಾರಿಯಿದೆ. ಅಲ್ಲಿ ನೀರು ಕಡಿಮೆ ಇರ್ಬೋದು” ಎಂದವರೇ, ಹರಸಾಹಸದಿಂದ ಆಟೋ ತಿರುಗಿಸಿಕೊಂಡು ನಿಧಾನವಾಗಿ ಮುಂದೆ ಸಾಗಲಾರಂಭಿಸಿದರು. adAಅದಾಗ ನನಗೆ “Water, Water everywhere, / And all the boards did shrink; / Water, water everywhere, / Not a drop to drink” ಎಂಬ ಕವಿ ಎಸ್.ಟಿ.ಕಾಲ್ರಿಕಡ್ಜನ ಸಾಲುಗಳು ನೆನಪಾಗಿ ಒಂಥರಾ ಭಯವಾಗುತ್ತಿತ್ತು. ಬಹಳ ಹಿಂದೆ ನೋಡಿದ್ದ “Water World” ಸಿನಿಮಾ ನೆನಪಿಗೆ ಬರುತ್ತಿತ್ತು.

ನಮ್ಮ ಆಟೋ ಇದೀಗ ಹೋಗುತ್ತಿದ್ದ ದಾರಿ ನಮಗೆ ಹೊಸದಾಗಿತ್ತು. ಆ ಪರಿಸ್ಥಿತಿಯಲ್ಲೂ, ಅದಾಗಲೇ ಬಹಳಷ್ಟು ಆಟೋದವರಿಂದ ಮೋಸ ಹೋಗಿದ್ದ ನಮಗೆ, ಈ ಆಟೋದವರ ಮೇಲೆ ಅಪನಂಬಿಕೆ ಮೂಡಿ ಪರಸ್ಪರ ಮುಖ ನೋಡಿಕೊಂಡೆವು. ಮೋಸವನ್ನು ನಾವು ಸಹಿಸಿಕೊಳ್ಳದ್ದಿದ್ದರೂ, ನನ್ನಾಕೆಯು ಅದನ್ನು ವಿರೋಧಿಸದೆ ಬಿಡುವುದಿಲ್ಲ. ಇದನ್ನರಿತ ನಾನು ಕಣ್ಣುಗಳಲ್ಲೇ, ಬೇಡ...ಪ್ಲೀಸ್ ಸುಮ್ನೀರು... ಎಂದು ಕೋರಿದೆ. ಇನ್ನೇನು ಕೇಳಿಬಿಡಬೇಕು ಎಂದು ಕೊಂಡಿದ್ದವಳು, ನನ್ನ ಕೋರಿಕೆಯನ್ನು ಮನ್ನಿಸಿ ಸುಮ್ಮನಾದಳು.

ನಮ್ಮ ಮನಸ್ಥಿತಿಯನ್ನರಿತವರಂತೆ, ನಮ್ಮ ಆಟೋ ಡ್ರೈವರ್ “ಇಲ್ಲಿ ಸ್ವಲ್ಪ ಪರ್ವಾಗಿಲ್ಲ ಸಾರ್. ಶಾಂತಿನಗರದ ಬಸ್‍ಸ್ಟಾಂಡ್‍ನೊಳಗೆ ಹೋಗಿದ್ದರೆ ಚೆನ್ನಾಗಿತ್ತು. ಆದರೆ, ಅಲ್ಲಿ ಬಿಡ್ತಾ ಇರೋ ಹಾಗೆ ಕಾಣ್ತೀಲ್ಲ. ಈ ಕಡೆಯಿಂದ ಹೇಗೋ ಹೋಗ್ಬುಡ್ತೀನಿ” ಎಂದು ಎಡಕ್ಕೆ ತಿರುಗಿದರು. ರಸ್ತೆಯನ್ನು ಗಮನಿಸುತ್ತಿದ್ದವನು ಲಾಲ್‍ಬಾಗ್ ಕಂಡದ್ದನ್ನು ನೋಡಿ, “ಏ ಇವರು ಲಾಲ್‍ಬಾಗ್ ಕಡೆಯಿಂದ ಹೋಗ್ತಾ ಇದ್ದಾರೆ. ಸರಿಯಾಗೆ ಇದೆ ದಾರಿ” ಎಂದು ನನ್ನವಳಿಗೆ ಪಿಸುಗುಟ್ಟಿದೆ. ಸಮಾಧಾನಗೊಂಡಂತೆ ಕಂಡ ಅವಳ ಮುಖದಲ್ಲಿ ಹೌದೆಂಬ ಭಾವವಿತ್ತು.

ಹಾಗೆಯೇ ಮುಂದುವರೆಯುತ್ತಿದ್ದ ನಮಗೆ ಕಂಡದ್ದು, ಭೀಭತ್ಸ ದೃಶ್ಯಗಳು! ಸುರಿಯುವ ಆ ಮಳೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿದ್ದ ಬೈಕುಗಳು ಮಳೆಯ ರಭಸಕ್ಕೆ ಮಲಗಿಕೊಂಡಿದ್ದವು. ಅವುಗಳ ಮೇಲೆಲ್ಲಾ ತುಂಬಿ ಹರಿಯುತ್ತಿದ್ದ ಚರಂಡಿ ನೀರು ಪ್ರವಾಹ ಸ್ವರೂಪದ್ದಾಗಿತ್ತು. ಪಕ್ಕದಲ್ಲಿ ಆಟೋವೊಂದು ಮಗುಚಿ ಬಿದ್ದಿತ್ತು. ನಮ್ಮ ಆಟೋವು ಒಳಗೊಂಡಂತೆ, ಬಹಳ ಆಟೋಗಳ ಒಳಗೆಲ್ಲಾ ನೀರುನುಗ್ಗಿತ್ತು. ನೀರು ಹೆಚ್ಚೆಚ್ಚು ನುಗುತ್ತಿದ್ದ ಹಾಗೇ ನಮ್ಮ ಆಟೋದವರು ಸರಿಯಾಗಿ ಬ್ರೇಕ್ ಹಿಡಿಯಲು ಆಗುತ್ತಿಲ್ಲ ಸಾರ್. ಆದರೂ ಹೇಗೋ ಹೋಗುತ್ತಿದ್ದೇನೆ, ಎಂದೆನ್ನುತ್ತಿದ್ದರು. ಹೀಗೆ ಆಚೆ ಕಣ್ಣಾಡಿಸುತ್ತಿದ್ದವರಿಗೆ, ಪಕ್ಕದಲ್ಲಿದ್ದ ಮನೆ, ಅಂಗಡಿಗಳಿಗೆಲ್ಲಾ ನೀರು ನುಗ್ಗಿ, ಅವರೆಲ್ಲಾ ಅಲ್ಲಿಂದ ನೀರು ತೆಗೆಯುವುದನ್ನು ನೋಡುವುದೇ ಆಯಿತು. ಒಂದು ಮನೆಯಲ್ಲಂತೂ, ಮನೆಯ ಒಳಗೆ ಬರುತ್ತಿದ್ದ ನೀರನ್ನೇ ನೋಡಿ, ಬಾಗಿಲಲ್ಲೇ ಗಾಬರಿಯಿಂದ ಅಳುತ್ತಾ ನಿಂತಿದ್ದ ಮಗುವನ್ನು ನೋಡಿ ಕರುಳು ಚುರುಕ್ಕೆಂದಿತು. ನನ್ನವಳು ಅಯ್ಯೋ ಪಾಪವೆಂದಳು. ಇದಕ್ಕಿಂತ ಕ್ರೂರ ದೃಶ್ಯವೆಂದರೆ ಆ ಸುರಿವ ಮಳೆಯಲ್ಲಿ ಬೆತ್ತಲೆಯಾದ ವ್ಯಕ್ತಿಯೊಬ್ಬ ರಸ್ತೆಗೆ ಬೆನ್ನುಮಾಡಿ ಕುಳಿತಿದ್ದ. ಅವನು ಮಾನಸಿಕ ಅಸ್ವಸ್ಥನಿರಬೇಕು. ಆದರೆ ಅವನೂ ಮನುಷ್ಯನಲ್ಲವೇ? “ಛೇ” ಎಂಬ ನನ್ನ ಉದ್ಗಾರ ಕೇಳಿದ ನನ್ನವಳು “ಏನಾಯ್ತು?” ಎಂದಳು. ಅವಳ ದಿಗಿಲನ್ನು ನೋಡಿ “ನೋಡಮ್ಮ ಪಾಪ ಯಾರೋ ಹುಚ್ಚ; ಬರಿಮೈಯಲ್ಲಿ...” ಎಂದೆ. “ಅಯ್ಯೋ! ಆ ದೇವ್ರಿಗೆ ಸ್ವಲ್ಪನೂ ಕರುಣೆಯಿಲ್ವಾ?” ಎಂದು ಸೃಷ್ಠಿಕರ್ತನಿಗೆ ಬೈದಳು. ಅಷ್ಟರಲ್ಲಿ “ಅಲ್ನೋಡಿ ಮೇಡಂ, ದೇವಸ್ಥಾನ ಆಲ್ಮೋಸ್ಟ್ ಮುಳುಗೇ ಹೋಗಿದೆ” ಎಂದು ಆಟೋ ಡ್ರೈವರ್ ರಸ್ತೆ ಬದಿಯಲ್ಲಿದ್ದ ದೇವಸ್ಥಾನದತ್ತ ನಮ್ಮ ಗಮನ ಸೆಳೆದರು. ಅಲ್ಲಿ ನೋಡಿದರೆ ದೇವರೂ ಕೊಚ್ಚಿ ಹೋಗುವ ಭಯದಲ್ಲಿದ್ದ! ಅವನನ್ನು ರಕ್ಷಿಸಲು ಅಲ್ಲಿದ್ದ ಮನುಷ್ಯರೇ ಪ್ರಯತ್ನಿಸುತ್ತಿದ್ದರು!

ಆ ಭಗವಂತನೇ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಶಕ್ತನಾಗಿರುವಾಗ, ನಮ್ಮಂಥ ಹುಲುಮಾನವರನ್ನು ಹೇಗೆ ರಕ್ಷಿಸಿಯಾನು? ಎನ್ನುವ ಪ್ರಶ್ನೆ ನಮ್ಮ ಮನಗಳಲ್ಲಿ ಮೂಡುತ್ತಿತ್ತು. ಅಷ್ಟರಲ್ಲಿ ಹಾಗೂ-ಹೀಗೂ ಚಾಮರಾಜ ಪೇಟೆಯ ದಾರಿಯಿಂದ ಕಾಟನ್ ಪೇಟೆ ಕಡೆಗೆ ನಮ್ಮ ಆಟೋ ಚಲಿಸುತ್ತಿತ್ತು. ಇನ್ನೇನು ಬಸ್‍ಸ್ಟಾಂಡ್ ಹತ್ತಿರ ಬಂದೇ ಬಿಟ್ಟೆವು ಎಂದು ನಾ ಅಂದುಕೊಂಡ ಸಮಯಕ್ಕೆ, ಎದುರಿನಿಂದ ಬರುತ್ತಿದ್ದ ಆಟೋದವರೊಬ್ಬರು, ನಮ್ಮ ಆಟೋದವರಿಗೆ ಮೆಜಸ್ಟಿಕ್‍ಗೆ ಹೋಗಲು ಆಗುವುದಿಲ್ಲವೆಂದು ತಿಳಿಸಿದರು. ನಮ್ಮ ಆಟೋದವರು ರಸ್ತೆಯ ಪಕ್ಕಕ್ಕೆ ಆಟೋ ನಿಲ್ಲಿಸಿ, “ಏನ್ ಮಾಡ್ಲಿ ಸಾರ್? ಇನ್ನೊಂದು ಸ್ವಲ್ಪ ಮುಂದೆ ಬಿಡುತ್ತೇನೆ. ಅಲ್ಲಿಂದ ನಡೆದುಕೊಂಡು ಹೋಗ್ತೀರೋ?” ಎಂದು ಕೇಳಿದರು. ಈ ಮಳೆಯಲ್ಲಿ ಹೇಗಪ್ಪಾ ನಡೆಯೋದು ಎನ್ನುವ ದಿಗಿಲು ಶುರುವಾಯಿತು. ನನ್ನಾಕೆಯು, “ಹೇಗಾದರೂ ಮಾಡಿ, ಮೆಜಸ್ಟಿಕ್‍ಗೆ ಬಿಟ್ಟು ಬಿಡಿ” ಎಂದು ಕೇಳತೊಡಗಿದಳು. “ನಾ ಏನ್ ಮಾಡ್ಲಿ ಮೇಡಂ, ಮೆಜಸ್ಟಿಕ್ ತುಂಬಾ ಡೌನ್‍ನಲ್ಲಿದೆ. ಈಗಾಗಲೇ ಸಾಕಷ್ಟು ನೀರು ನುಗ್ಗಿರುತ್ತೆ. ಟ್ರಾಫಿಕ್ ಜಾಮ್ ಬೇರೆ ಆಗಿರುತ್ತೆ’ ಎಂದರು. ಅಷ್ಟರಲ್ಲಿ ಇವಳ ಮೊಬೈಲ್ ರಿಂಗಣಿಸತೊಡಗಿತು. ಬ್ಯಾಗಿನಿಂದ ಮೊಬೈಲ್ ತೆಗೆದು ನೋಡಿದವಳೆ “ಅಮ್ಮಾ” ಎಂದು ಮಾತನಾಡತೊಡಗಿದಳು. ಕೆಲವು ಕ್ಷಣಗಳ ನಂತರ ಮೊಬೈಲ್ ಕಟ್ ಮಾಡಿ “ಈ ಮಳೇಲಿ ಹೇಗೆ ಹೋಗ್ತಿರಾ? ಸುಮ್ನೆ ಮನೆಗೆ ಬನ್ನಿ” ಎಂದು ಬೈಯುತ್ತಿದ್ದಾರೆ ಎಂದಳು.

ಇದನ್ನು ಕೇಳಿಸಿಕೊಂಡ ನಮ್ಮ ಆಟೋದವರು “ಎಲ್ಲಿ ಮೇಡಂ ನಿಮ್ಮ ಮನೆ?” ಎಂದರು. “ಮಾಗಡಿ ರೋಡ್” ಇವಳೆಂದಳು. “ಹಾಗಾದ್ರೆ ನಂಗೂ ಹತ್ರ ಮೇಡಂ. ನಮ್ಮನೆ ಪೀಣ್ಯದಲ್ಲಿರೋದು. ನಿಮ್ಮನ್ನ ಬಿಟ್ಟು ನಾನೂ ಸೀದಾ ಮನೆಗೆ ಹೋಗ್ಬಿಡ್ತೀನಿ, ದಾರಿ ಹೇಳಿ” ಎಂದು ಮಾಗಡಿ ರೋಡಿನ ಕಡೆಗೆ ಆಟೋ ತಿರುಗಿಸಿದರು. ನಾನು ಮೌನದಿಂದ ಸಮ್ಮತಿಸಿದೆ. ಸ್ವಲ್ಪ ಹೊತ್ತಿಗೆಲ್ಲಾ ನನ್ನತ್ತೆಯ ಮನೆಗೆ ಬಂದೆವು. ಆಟೋ ಇಳಿದು, ಮಾನವತೆಯೇ ಮೈವೆತ್ತಂತ್ತಿದ್ದ ಆಟೋದವರಿಗೆ ಹಣ ನೀಡಿ, ಥ್ಯಾಂಕ್ಸ್ ಹೇಳಿದೆವು. ಅವರು ಪ್ರತ್ಯುತ್ತರವಾಗಿ, “ನೀವು ಆಸ್ಪತ್ರೆಯಿಂದ ಬಂದವರೆಂದು ತಿಳಿದು. ನನಗೂ ನಿಮ್ಮನ್ನು ದಾರಿ ಮಧ್ಯದಲ್ಲಿ ಇಳಿಸಲು ಮನಸ್ಸಾಗಲಿಲ್ಲ ಸಾರ್. ಒಳ್ಳೆಯದಾಗಲಿ ನಿಮಗೆ, ಬರ್ತೀನಿ” ಎಂದವರೇ ಮುಂದೆ ಚಲಿಸಿದರು.

ನಾವಿಬ್ಬರೂ ಮನೆಯೊಕ್ಕಿದ್ದೆ ತಡ, “ಅಪ್ಪಾ...” ಎಂದು ಸ್ವೆಟರ್ ಮತ್ತು ಟೋಪಿಯಲ್ಲಿ ಕವರಾಗಿದ್ದ ನಮ್ಮ ಗುಬ್ಬಚ್ಚಿ ಮರಿ ಗೋಮಿನಿಯು ಓಡೋಡಿ ಬಂದಳು. ಆ ಮಳೆಯಲ್ಲಿ ಊರಿಗೆ ಹೊರಟಿದ್ದ ನಮ್ಮನ್ನು ಮನೆಯಲ್ಲಿದ್ದವರೆಲ್ಲಾ ಚೆನ್ನಾಗಿಯೇ ತರಾಟೆ ತೆಗೆದುಕೊಂಡರು. ಊಟ ಮಾಡಿ ಮಲಗಿದ ನನಗೆ ನಿದ್ದೆಯಲ್ಲೂ ಮಳೆಯಿಂದ ಆದ ಅಸ್ತವ್ಯಸ್ತ ಜಗತ್ತಿನ ಅಸ್ಪಷ್ಟ ಚಿತ್ರಗಳು ಕಾಡುತ್ತಿದ್ದವು.

- ಗುಬ್ಬಚ್ಚಿ ಸತೀಶ್.

ನೀರು (ಪುಟ್ಟ ಕತೆ)

  ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹ...