ಸೋಮವಾರ, ಆಗಸ್ಟ್ 23, 2010

ಅಣ್ಣನ ಜನುಮದಿನ

ಅಣ್ಣಾ, ಇಂದು ನಿಮ್ಮ ಜನುಮದಿನ

ಈ ಪುಟ್ಟ ತಂಗಿಯ ಸಂಭ್ರಮದ ದಿನ

ಅಪ್ಪ ಅಮ್ಮನ ಪ್ರೀತಿಗೆ ಗರಿಯಿಟ್ಟ ದಿನ

ನಮ್ಮೆಲ್ಲರಿಗೂ ಇದುವೇ ಶುಭದಿನ !


ಕಣ್ಣ ಮುಂದೆಯೇ ಇದೇ

ಮೈಸೂರು ಕಾಣದ ದಸರಾ

ನಿಮ್ಮ ಬೆನ್ನ ಮೇಲೆ ನನ್ನ ಅಂಬಾರಿ


ಇಂದೂ ಕೂಡ ಹೊಳೆಯುತ್ತಿದೆ !

ಅಪ್ಪ ಬೈದಾಗ, ಅಮ್ಮ ಹೊಡೆದಾಗ

ನೀವು ಸಂತೈಸಿ ಹಣೆಗಿಟ್ಟ ಮುತ್ತು !


ಇವತ್ತಿಗೂ ಹಸಿಯಾಗಿಯೇ ಇದೇ

ನಾ ಜಾರಿಬಿದ್ದಾಗ, ಕಾಲೆಡವಿದಾಗ

ಕಣ್ಣೀರ ಸುರಿಸುತ್ತಾ, ನೀವು ಹಚ್ಚಿದ ಎಂಜಲು !


ದಿನದಿನವೂ ಸಿಹಿ ಹೆಚ್ಚುತ್ತಲೇ ಇದೇ

ಕದ್ದು ನಾವಿಬ್ಬರೇ ಮೇಯ್ದ ಕೊಬ್ಬರಿ ಬೆಲ್ಲ

ನೀವು ಗೋಳಾಡಿಸಿ ಕೊಟ್ಟ ಚಾಕ್ ಲೇಟ್!


ಪ್ರತಿ ಹೆಜ್ಜೆಯಲ್ಲೂ ಬೆಳಕಾಗಿಯೇ ಇದೆ

ಕತ್ತಲಲ್ಲಿ ನಾ ತಪ್ಪೆಜ್ಜೆಯಿಟ್ಟಾಗ

ನೀವು ಹಚ್ಚಿಟ್ಟ ದೀಪ!


ಅಣ್ಣಾ, ಇಂದು ನಿಮ್ಮ ಜನುಮದಿನ

ಅದೇಕೋ ಕಾಣೇ ಆನಂದ ಬಾಷ್ಪ

ನೀವು ಪ್ರೀತಿಯಿಂದ ಒರೆಸಲೆಂದಿರಬೇಕು!

ಆರೋಗ್ಯ, ಐಶ್ವರ್ಯದಿಂದ ನೀವು

ನೂರಾರು ವರುಷ ಹರುಷದಿಂದ ಬಾಳಬೇಕು.

                             ನಿಮ್ಮ ಮುದ್ದಿನ

                             ಪೆದ್ದು ಪೆದ್ದಾದ

                                  ತಂಗಿ
                                         

ಬುಧವಾರ, ಆಗಸ್ಟ್ 18, 2010

ಸ್ನೇಹ ಮಾಡಬೇಕಿಂಥವಳಾ...



ಅಂದು ಭಾನುವಾರ. ಸಂಜೆ ಗೆಳೆಯನೊಬ್ಬನ ನಿರೀಕ್ಷೆಯಲ್ಲಿದ್ದೆ. ಆತ ಹತ್ತಿರದ ನರ್ಸಿಂಗ್ ಹೋಂನಲ್ಲಿ ಸಿಗುತ್ತೇನೆ ಎಂದಿದ್ದ. ಆತನು ಅಲ್ಲಿಗೆ ಬರುವ ಮುಂಚೆಯೇ ನಾನಲ್ಲಿದ್ದೆ. ಎಷ್ಟು ಹೊತ್ತಾದರು ಆತ ಅಲ್ಲಿಗೆ ಬರಲೇ ಇಲ್ಲ. ಬರತ್ತೇನೆ ಎಂದ ಮೇಲೆ ಬಂದೇ ಬರುತ್ತಾನೆ ಎಂದು ನಾನು ಅಲ್ಲಿಯೇ ಕಾಯುತ್ತಾ ಕುಳಿತೆ.


ಆತನ ನಿರೀಕ್ಷೆಯಲ್ಲಿ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಅದಾಗಲೇ ರಾತ್ರಿ ಒಂಭತ್ತಾಗಿತ್ತು. ನಮ್ಮ ಏರಿಯಾಗೆ ಹೋಗುವ ಕಡೆಯ ಸಿಟಿಬಸ್ ನರ್ಸಿಂಗ್ ಹೋಂನ ಸ್ಟಾಪ್‍ನಿಂದ ಹೋಗಿ ಅರ್ಧಗಂಟೆಯಾಗಿತ್ತು. ನನಗೆ ಊಟ ಮಾಡುವುದಕ್ಕೂ ಮನಸ್ಸಿರಲಿಲ್ಲ. ಅಷ್ಟಕ್ಕೂ ಬರುತ್ತೇನೆಂದ ಗೆಳೆಯ ಬರಬೇಕು ಅಷ್ಟೆ. ನನ್ನ ಭಾಷೆಯಲ್ಲಿ ಗೆಳೆತನವೆಂದರೆ ನಂಬಿಕೆಯಷ್ಟೆ. ಅವನು ಬರುವವರೆಗೂ ಕಾಯಬೇಕೆಂದು ಅದೇ ನರ್ಸಿಂಗ್ ಹೋಂನಲ್ಲಿ ಕೆಲಸ ಮಾಡುತಿದ್ದ ಪರಿಚಯದವರನ್ನು ಮಲಗಲು ಸ್ವಲ್ಪ ಜಾಗ ಸಿಗುತ್ತದಾ ಎಂದು ಕೇಳಿದೆ. ಅವರು ಆಗಲಿ ಎಂದರು. ಸ್ವಲ್ಪ ಸಮಾಧಾನವಾಯಿತು. ನರ್ಸಿಂಗ್ ಹೋಮಿನ ವರಾಂಡದಲ್ಲಿ ಅಡ್ಡಾಡತೊಡಗಿದೆ.


ಅದು ಚಿಕ್ಕದಾದ, ಚೊಕ್ಕವಾದ ನರ್ಸಿಂಗ್ ಹೋಂ. ಎಲ್ಲಾ ರೂಂಗಳೂ ಭರ್ತಿಯಾದಂತೆ ಕಾಣುತ್ತಿತ್ತು. ಒಂದು ರೂಮಿನಲ್ಲಿ ಯಾರೂ ಇರಲಿಲ್ಲದ್ದು ತೆರೆದ ಬಾಗಿಲಿನಿಂದ ಸ್ಪಷ್ಟವಾಗಿತ್ತು. ಆ ರೂಮಿನಲ್ಲಿ ಎರಡು ಮಂಚಗಳಿದ್ದವು. ಭಾಗಶಃ ಒಂದು ರೂಮಿಗೆ ಇಬ್ಬರು ಪೇಶಂಟ್ ಗಳು ಇರಬೇಕು. ಗೆಳೆಯ ಬಂದಂತೆ ಕಾಣಲಿಲ್ಲ. ಅಲ್ಲಿದ್ದ ಖಾಲಿ ರೂಂ ಅದೊಂದೇ ಎಂದೆನಿಸಿದ್ದರಿಂದ, ನನಗೆ ಅಲ್ಲಿಯೇ ಮಲಗಲು ಅವಕಾಶ ಸಿಗಬಹುದೆಂದು ಪರಿಚಿತರು ಆ ಕಡೆ ಬರುವ ತನಕ ಅಲ್ಲಿಯೇ ಬಾಗಿಲ ಬಳಿ ಕುಳಿತೆ.


ಕುಳಿತ ಸ್ವಲ್ಪ ಹೊತ್ತಿಗೆ, ಆ ರೂಮಿಗೆ ಸುಂದರವಾದ ದೇವತೆಯಂಥವಳಬ್ಬೊಳನ್ನು ಕರೆತಂದರು. ಆಕೆಯ ಕಣ್ಣು ತೆರೆದಿರಲಿಲ್ಲ. ತೆರೆದ ನನ್ನ ಕಣ್ಣುಗಳು ಅವಳನ್ನೇ ನೋಡುತ್ತಿದ್ದವು. ಅವಳ ಜೊತೆ ಹಿರಿಯ ಹೆಂಗಸಬ್ಬೊರಿದ್ದರು. ಖಾಲಿಯಿದ್ದ ರೂಮಿಗೆ ಒಬ್ಬರು ಬಂದಂತಾಯಿತು. ಕಣ್ಣು ಮುಚ್ಚಿದ್ದರೂ ದೇವತೆಯಂತೆ ಕಾಣುತ್ತಿದ್ದ ಅವಳನ್ನು ಪೇಶಂಟ್ ಎಂದು ಮನಸ್ಸು ಒಪ್ಪಲಿಲ್ಲ. ಅವಳನ್ನು ನೋಡಿದ ಮೇಲೆ ಮನಸ್ಸೇಕೋ ನಿರೀಕ್ಷೆಯಲ್ಲಿದ್ದ ಗೆಳೆಯನನ್ನೇ ಮರೆಯಿತು.


ಇದೇ ಲಹರಿಯಲ್ಲಿದ್ದವನನ್ನು ನರ್ಸಿಂಗ್ ಹೋಮಿನ ಪರಿಚಯದವರು ಬಂದು ನೀವು ಇದೇ ರೂಮಿನ ಆ ಕಡೆಯ ಬೆಡ್ ಮೇಲೆ ಮಲಗಿ ಎಂದರು. ರೋಗಿ ಬಯಸಿದ್ದೂ ಹಾಲು ಅನ್ನ, ವ್ಯೆದ್ಯರು ಹೇಳಿದ್ದು ಹಾಲು ಅನ್ನವೆಂಬಂತೆ ಥ್ಯಾಂಕ್ಸ್ ಹೇಳಿ ಖಾಲಿ ಹಾಸಿಗೆ ಮೇಲೆ ಮೈಚಾಚಿದೆ. ಪಕ್ಕದ ಹಾಸಿಗೆಯಲ್ಲಿ ಆ ದೇವತೆಯಂಥಾ ಸುಂದರಿ ಕಣ್ಮುಚ್ಚಿಕೊಂಡು ನಗುತ್ತಿರುವಂತೆ ಕಾಣುತ್ತಿತ್ತು. ಆಕೆಯನ್ನು ನೋಡುತ್ತಾ ರಾತ್ರಿಯೆಲ್ಲಾ ನಿದ್ದೆಯೇ ಬರಲಿಲ್ಲ. ಆಗೊಮ್ಮೆ ಈಗೊಮ್ಮೆ ಆ ದೇವತೆಯನ್ನು ಆಕೆಯ ಜೊತೆಗಿದ್ದ ದೊಡ್ಡ ಹೆಂಗಸು ಹೊರಗೆ ಕರೆದುಕೊಂಡು ಹೋಗಿ ಬರುತ್ತಿದ್ದರು.


ಬೆಳಿಗ್ಗೆ ಬೇಗ ಎದ್ದು ನಾನು ಅಲ್ಲಿಂದ ಜಾಗ ಖಾಲಿ ಮಾಡಿದೆ. ಮನೆಗೆ ಬಂದರೂ ಅವಳ ನೆನಪೇ ಕಾಡುತಿದೆ. ಬೇಗ ಬೇಗ ರೆಡಿಯಾಗಿ ಮತ್ತೆ ನರ್ಸಿಂಗ್ ಹೋಂಗೆ ಹೋದೆ. ಅವಳು ಇನ್ನೂ ಕಣ್ಣು ಬಿಟ್ಟಿರಲಿಲ್ಲ. ದೇವರೆ, ಬೇಗ ಅವಳು ಕಣ್ಣು ಬಿತ್ತು ನೋಡಲೆಂದು ಪ್ರಾರ್ಥಿಸಿ ಅಲ್ಲಿಂದ ತೆರಳಿದೆ. ಮತ್ತೆ ಮನೆಗೆ ಹೋಗಲು ಮನಸ್ಸಾಗಲಿಲ್ಲ. ಅಲ್ಲೇ ಹತ್ತಿರದ ಹೋಟೆಲಿನಲ್ಲಿ ತಿಂಡಿ ತಿಂದು ಮತ್ತೆ ನರ್ಸಿಂಗ್ ಹೋಮಿನ ಆ ರೂಮಿನ ಬಳಿ ಹೋಗಿ ನೋಡಿದೆ. ಅವಳ ನಯನಗಳು ಅರಳಿದ್ದವು! ನನ್ನ ಕಡೆಗೆ ನೋಡಿದಳು. ನನ್ನ ಮನಸ್ಸು ಧನ್ಯತಾಭಾವದಲ್ಲಿ ತೇಲಿತು. ಇವಳೇ ನನ್ನ ಜನ್ಮದ ಗೆಳತಿಯೆಂದು ಅನ್ನಿಸತೊಡಗಿತು.


ದಿನಾಲೂ ಬೆಳಿಗ್ಗೆ, ಮಧ್ಯಾಹ್ನ, ಸಂಜೆಯೆನ್ನದೆ ಅವಳನ್ನು ಹೋಗಿ ನೋಡುವುದೇ ನನ್ನ ಕೆಲಸವಾಯಿತು. ಅವಳೂ ನನ್ನನ್ನು ನೋಡಲಿ ಎಂದು ಹಪಹಪಿಸುವುದೇ ಆಯಿತು. ಅವಳು ನನ್ನೆಡೆಗೆ ನೋಡುತ್ತಿದ್ದ ಹಾಗೇ ಆ ಕ್ಷಣಗಳಲ್ಲಿ ನನಗೆ ರೋಮಾಂಚನವಾಗುತ್ತಿತ್ತು. ಅವಳ ಗುಲಾಬಿ ತುಟಿಗಳಿಂದ ಒಂದು ಮಾತೂ ಬರುತ್ತಿರಲಿಲ್ಲ. ನನಗೆ ಅವಳ ಮೌನವೇ ಹೆಚ್ಚು ಆಪ್ತವಾಗಿತ್ತು.


ಇದೇ ರೀತಿ ಐದು ದಿನಗಳು ಕಳೆದ ಮೇಲೆ ಆಕೆಯನ್ನು ನರ್ಸಿಂಗ್ ಹೋಂನಿಂದ ಅವಳ ಮನೆಗೆ ಕಳುಹಿಸಿದರು. ನನಗೆ ಅವಳನ್ನು ಬಿಟ್ಟು ಹೋಗಲು ಸಾಧ್ಯವೇ ಇರಲಿಲ್ಲ. ನಾನೂ ಒಂದು ರೀತಿಯಲ್ಲಿ ಅವಳೊಂದಿಗೆ ಹೊರಟು ಹೋದೆ.


ಯಾಕೋ, ಏನೋ ಇದ್ದಕ್ಕಿಂದಂತೆ ನನ್ನ ಆರೋಗ್ಯ ಕೆಡಲಾರಂಭಿಸಿತು. ಜೀವನದಲ್ಲೇ ಜಿಗುಪ್ಸೆಯಾಗಿತ್ತು. ಅಂದು ಬೆಳಿಗ್ಗೆಯೇ ಬೆಂಗಳೂರಿನ ಆಸ್ಪತ್ರೆಗೆ ಹೋಗಬೇಕು. ಬೆಳಗ್ಗೆ ನಾಲ್ಕಕ್ಕೇ ಎದ್ದೆ. ಎದ್ದವನಿಗೆ ಜೀವನವೇಕೆ ಅನ್ನಿಸತೊಡಗಿತು. ನನ್ನ ಈ ಕಷ್ಟದಲ್ಲಿ ಯಾರೂ ಜೊತೆಗಿಲ್ಲವಲ್ಲವೆನ್ನಿಸತೊಡಗಿತು. ಯಾರಿಗಾಗಿ ಈ ಬದುಕು ಎಂದೆನ್ನಿಸತೊಡಗಿತು. ಅದಾಗ, ಅದ್ಯಾವ ಮಾಯೆಯೋ ಎನೋ ಯಾರೋ ಪಕ್ಕದಲ್ಲಿ ನನ್ನ ನೋವಿಗೆ ಕನಲಿದಂತಾಯಿತು. ಅರೆ... ಅವಳೇ ನರ್ಸಿಂಗ್ ಹೋಂನಲ್ಲಿ ಸಿಕ್ಕಿದ್ದ ಕಿನ್ನರಿ. ನನ್ನ ನೋಡಿ ನಕ್ಕಳು. ನಾನಿದ್ದೇನೆ ನಿನ್ನೊಂದಿಗೆ ಎಂಬ ಭರವಸೆ ಅವಳ ಕಣ್ಣುಗಳಿಂದ ಸೂಸುತ್ತಿತ್ತು. ಮುದಗೊಂಡ ಮನಸ್ಸು ಹಾಸಿಗೆಯಿಂದ ಎದ್ದಿತ್ತು.


ಇದಾದ ಕೆಲವು ತಿಂಗಳುಗಳ ನಂತರ ಆರೋಗ್ಯ ಸ್ವಲ್ಪ ಸುಧಾರಿಸಿತ್ತು. ಒಂದು ದಿನ ಬೆಳಿಗ್ಗಿನ ತಿಂಡಿ ಇಡ್ಲಿ ತಿನ್ನುತ್ತಾ ಕೂತಿದ್ದೆ. ಆ ಕಿನ್ನರಿ ಇದ್ದಕ್ಕಿದ್ದಂತೆ ಬಂದು ನನ್ನ ಪಕ್ಕ ಕೂತಳು. ನನಗೆ ಆಫೀಸಿಗೆ ಲೇಟಾಗಿತ್ತು. ಆದ್ದರಿಂದ ಅವಳ ಕಡೆ ಹೆಚ್ಚು ಗಮನ ಕೊಡಲಾಗಲಿಲ್ಲ. ನನ್ನನ್ನೇ ತಿನ್ನುವಂತೆ ನೋಡುತ್ತಿದ್ದಳು. ನಾನು ಅವಳನ್ನೇ ನೋಡುತ್ತಾ, ಮಾತನಾಡದೆ ಗಬಗಬನೆ ಇಡ್ಲಿ ತಿನ್ನುತ್ತಿದ್ದೆ. ಇದ್ದಕ್ಕಿದ್ದಂತೆ ಅ ಕಿನ್ನರಿ “ಯೇ...” ಎಂದಳು. ನನಗೆ ಶಾಕ್ ಆಯಿತು. ಪಾಪ! ಅವಳಿಗೂ ಹೊಟ್ಟೆ ಹಸಿದಿತ್ತೋ, ಏನೋ? ನಾನು ತಿನ್ನುವುದನು ಬಿಟ್ಟು ಎದ್ದು ಹೋಗಿ ಅವಳಿಗೆ ಅಡುಗೆಮನೆಯಿಂದ ಇಡ್ಲಿ ತಂದು ಕೊಟ್ಟೆ.


ಆ ಕಿನ್ನರಿ ಮಾತನಾಡುತ್ತಿರಲಿಲ್ಲ. ಅವಳಿಗೆ ಮಾತು ಬರುವುದಿಲ್ಲವೆಂದು ನನ್ನ ಮನಸ್ಸು ಒಪ್ಪಿರಲಿಲ್ಲ. ಅವಳು ತನ್ನ ಹಾವಭಾವಗಳಿಂದಲೇ ನನಗೆಲ್ಲವನ್ನು ಅರ್ಥಮಾಡಿಸಲು ಪ್ರಯತ್ನಿಸುತ್ತಿದ್ದಳು. ಆಗೊಮ್ಮೆ ಈಗೊಮ್ಮೆ ಏನಾದರೂ ಮಾತನಾಡಿದಂತೆ ಕೇಳಿಸಿದರೂ, ನನಗೆ ಸರಿಯಾಗಿ ಅರ್ಥವಾಗುತ್ತಿರಲಿಲ್ಲ. ಗೆಳೆತನದಲ್ಲಿ ಮಾತೇಕೆ? ಎಲ್ಲವೂ ಮೌನದಲ್ಲೇ ಮಾತನಾಡಬೇಕು, ಅರ್ಥವಾಗಬೇಕು. ನನ್ನ ಬಿಡುವಿನ ಸಮಯವೆಲ್ಲಾ ಅವಳೊಂದಿಗೆ ಕಳೆಯುವುದೇ ಹವ್ಯಾಸವಾಯಿತು. ಆ ಕ್ಷಣಗಳೆಲ್ಲಾ ಬದುಕಿನ ರಸನಿಮಿಷಗಳು!


ಎಷ್ಟೋ ಬಾರಿ ಅವಳೊಂದಿಗೆ ಹೊರಗಡೆ ಹೋಗುವ ಅವಕಾಶಗಳು ಲಬ್ಧವಾದವು. ಅವಳೊಟ್ಟಿಗೆ ಹೆಜ್ಜೆ ಹಾಕುವುದೇ ಹೆಮ್ಮೆಯ ವಿಷಯವಾಯಿತು. ಎದೆಯುಬ್ಬಿಸಿ ನಡೆಯತೊಡಗಿದೆ. ಹಲವು ತಿಂಗಳುಗಳ ನಂತರ ಅವಳಿಗೆ ಪ್ರಪಂಚವನ್ನು ನೋಡುವ ಅವಕಾಶ ಲಭಿಸಿತ್ತು. ನಾನಂತೂ, ಅಮ್ಮ ತನ್ನ ಮಗುವನ್ನು ಮೊದಲಬಾರಿಗೆ ಕೈ ಹಿಡಿದು ನಡೆಸುವಂತೆ ಅವಳನ್ನು ಸಾಕಷ್ಟು ಕಡೆ ಸುತ್ತಿಸಿದೆ. ಊರಿನ ಪಾರ್ಕು, ದೇವಸ್ಥಾನಗಳೆಲ್ಲಾ ಬೇಜಾರಾದವು. ಒಂದು ದಿನ ಅವಳ ಜೊತೆ ಲಾಲ್‍ಬಾಗಿಗೆ ಹೋಗುವ ಯೋಗವೂ ಬಂತು. ಅಲ್ಲಿ ಅವಳ ಜೊತೆಗೊಂದು ಫೋಟೋವನ್ನು ತೆಗಿಸಿಕೊಂಡೆ. ಅಲ್ಲಿದ್ದ ಕೆರೆಯ ದಂಡೆಯ ಮೇಲೆ ನಾವಿಬ್ಬರೂ ಕೈ ಹಿಡಿದು ನಡೆದಾಡುತ್ತಿದ್ದಾಗ, ಇದ್ದಕ್ಕಿದ್ದಂತೆ ನನ್ನ ಕೈ ಕೊಡವಿ ನೀರಿನ ಬಳಿ ಹೋಗಿ ನೀರನ್ನು ಹತ್ತಿರದಿಂದ ನೋಡಿ ಆಶ್ಚರ್ಯ ಚಕಿತಳಾದಳು. ಮೊದಲೇ ನೀರಿಗೆ ಹೆದರುವ ನನಗೆ, ಅವಳೆಲ್ಲಿ ನಿನ್ನ ಜೊತೆ ಈಜಾಡಬೇಕೆಂದರೆ ಏನು ಮಾಡಬೇಕೆಂದು ತೋಚದೆ ಬೆದರಿ ನೀರಾದೆ.


ನಾವಿಬ್ಬರೂ ತುಂಬಾ ಕ್ಲೋಸ್ ಫ್ರೆಂಡ್ಸ್ ಆಗಿದ್ದನ್ನು ಕಂಡು ಕೆಲವರು ಸಹಿಸಲಿಲ್ಲ. ಸುತ್ತಿದ್ದು ಸಾಕೆನ್ನ ತೊಡಗಿದರು. ಈ ವಿಷಯದಲ್ಲಿ ಇಬ್ಬರಿಗೂ ಸಿಟ್ಟು ಬಂದಿತು. ನಮ್ಮ ಗೆಳತನವನ್ನು ಇವರಾರೂ ಸಹಿಸುತ್ತಿಲ್ಲ ಎನ್ನಿಸತೊಡಗಿತ್ತು. ಆದದ್ದಾಗಲ್ಲಿ ಎನ್ನುವ ಮನೋಭಾವ ಇಬ್ಬರಲ್ಲೂ ಮನೆಮಾಡಿತ್ತು. ಅದಕ್ಕೆ ಯಾರಿಗೂ ಹೆದರದೆ ಒಬ್ಬರನೊಬ್ಬರು ಬಿಡದೆ ಇರುತ್ತಿದ್ದೆವು. ನಾನೆಲ್ಲೋ... ಅವಳಲ್ಲಿ. ಅವಳೆಲ್ಲೋ... ನಾನಲ್ಲಿ. ಅಂದು ಬೆಳಗ್ಗೆ ನಾನು ಬಚ್ಚಲಲ್ಲಿ ಹಲ್ಲುಜ್ಜಿಕೊಳ್ಳುತ್ತಿದ್ದೆ. ಅವಳು ಸೀದಾ ಅಲ್ಲಿಗೇ ಬಂದಳು, ನಾನಿನ್ನೂ ಪೂರ್ತೀ ಬಟ್ಟೆ ಬಿಚ್ಚಿರಲಿಲ್ಲವಾದರೂ ಷೇಮ್ ಷೇಮ್ ಎಂದು ಸನ್ನೆ ಮಾಡುತ್ತಾ ನಕ್ಕಳು. ನನಗೆ ಬಂದ ಸಿಟ್ಟನ್ನು ತಡೆಯುತ್ತಾ, ಹುಸಿಕೋಪದಲ್ಲಿ “ಹೇ! ನಡಿ ಆ ಕಡೆ” ಎಂದೆ ಅಷ್ಟೆ. ಅವಳು ಆ ಕಡೆ ಹೋದಳು. ಮರುಕ್ಷಣವೇ “ಹೋ...” ಎಂದು ಅಳತೊಡಗಿದಳು. ನಾನು ಕೈ ಬಾಯಿ ತೊಳೆದುಕೊಂಡು ಆಚೆ ಬಂದು “ಸಾರಿ ಪುಟ್ಟು, ಚಿನ್ನು” ಎಂದು ಅವಳ ಮನವೊಲಿಸಲು ಯತ್ನಿಸಿದೆ. ಅವಳು ಸ್ವಲ್ಪ ಹೊತ್ತು ಅಳುತ್ತಲೇ ಇದ್ದಳು, ನಾನು ಅವಳನ್ನು ಸುಮ್ಮನಾಗಿಸಲು ಇನ್ನಿಲ್ಲದ ಸರ್ಕಸ್ ಮಾಡಿದೆ. “ಇಲ್ಲಮ್ಮ ನಂದು ತಪ್ಪಾಯ್ತು ನಂಗೆ ಅತ್ತ, ಅತ್ತ ಮಾಡು” ಎಂದೆ. ಮರುಕ್ಷಣವೇ ನಕ್ಕ ಆ ಪುಟ್ಟ ಕಿನ್ನರಿಯು “ಅಪ್ಪ... ಅತ್ತ... ಅತ್ತ...” ಎನ್ನುತ್ತಾ ತನ್ನ ಪುಟ್ಟ ಬೆರಳಿನಿಂದ ಹೊಡೆಯುವಂತೆ ಮಾಡಿದಳು. ಬಾಚಿ ತಬ್ಬಿಕೊಂಡು ಅವಳ ಕೆನ್ನೆಗೊಂದು ಮುತ್ತಿಟ್ಟೆ. ಅವಳೂ ಗೆಳೆಯನ ಸಿಟ್ಟನ್ನು ಮನ್ನಿಸಿ, “ಅಪ್ಪ... ಮೂ...” ಎಂದು ನನಗೊಂದು ಮುತ್ತಿಟ್ಟಳು.


“I love you ಗುಬ್ಬಚ್ಚಿ ಮರಿ! Happy friendship day ಮಗಳೇ!!”


– ಗುಬ್ಬಚ್ಚಿ ಸತೀಶ್.






ನೀರು (ಪುಟ್ಟ ಕತೆ)

  ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹ...