ಬುಧವಾರ, ಮೇ 1, 2013

ನಲ್ಲನಲ್ಲೆಯರ ಮೊದಲ ಅಕ್ಷರ ಜಾತ್ರೆ


        ಮೊದಲಿಗೆ ನಾನು ಹತ್ತಿರದಿಂದ ನೋಡಿದ ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ತುಮಕೂರಿನಲ್ಲಿ ಜರುಗಿದ್ದು. ಆಗ ನಾನು ಗೆಳೆಯ ವಿಶುವಿನ ಜೊತೆ ತುಮಕೂರಿಗೆ ಬಂದಿದ್ದೆ. ಅಂದು ಚುಟುಕು ಕವಿಗೋಷ್ಠಿಯಿತ್ತು. ನಾವು ಬರುವ ಹೊತ್ತಿಗೆ ಸರಿಯಾಗಿ ಡುಂಢಿರಾಜರು ರಾವಣನ ಹೆಂಡತಿ ಮಂಡೋದರಿ, ಕನ್ನಡ ಪುಸ್ತಕಗಳನ್ನು ಕೊಂಡೋದಿರಿ ಎಂದು ತಮ್ಮ ಚುಟುಕವನ್ನು ವಾಚಿಸಿದ ಕೂಡಲೇ ಕಿವಿಗಡಚಿಕ್ಕುವಂತೆ ಚಪ್ಪಾಳೆಯ ಸುರಿಮಳೆಯಾಯಿತು. ನಂತರ ಬಹಳ ಜನವಿದ್ದುದರಿಂದಲೋ ಏನೋ ನಮಗಲ್ಲಿ ಬಹಳ ಹೊತ್ತು ನಿಲ್ಲಲಾಗದೆ ನಾವು ಬೇಗ ಹೊರಬಂದೆವು ಎಂಬುದು ನೆನಪು. ಊಟಕ್ಕೆ ತುಂಬಾ ಗಜಿಬಿಜಿಯಿತ್ತು ಮತ್ತು ಪುಸ್ತಕ ಮಾರಾಟ ಮಳಿಗೆಗಳ ಬಳಿ ಬಹಳ ಧೂಳಿತ್ತು ಎಂಬ ಅಸ್ಪಷ್ಟ ನೆನಪು. ಆ ಸಮಯದಲ್ಲಿ ಗುಬ್ಬಿಯ ನಮ್ಮ ರಾಮನ್ ಇನ್‌ಫೋಟೆಕ್ ಕಂಪ್ಯೂಟರ್ ತರಬೇತಿ ಸಂಸ್ಥೆಯಿಂದ ಜ್ಞಾನಪೀಠ ಪ್ರಶಸ್ತಿ ವೀಜೆತ ಕನ್ನಡ ಸಾಹಿತಿಗಳ ಬದುಕು ಬರಹದ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಏರ್ಪಡಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಶೋ ನೀಡಿದ್ದೆವು. ಅದೆಲ್ಲವನ್ನು ವಿದ್ಯಾರ್ಥಿಯಾಗಿದ್ದ ಕೇಶವಮೂರ್ತಿ ಎಂಬುವವರು   ಅಚ್ಚುಕಟ್ಟಾಗಿ ನಿಭಾಯಿಸಿದ್ದರು.   ಅವರೀಗ ಶಿಕ್ಷಕರಾಗಿದ್ದಾರೆ.
          ಸುಮಾರು ದಶಕದ ನಂತರ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಮಯಕ್ಕೆ ನನ್ನ ಮೊದಲ ಪುಸ್ತಕ ಮಳೆಯಾಗು ನೀ... ಪ್ರಕಟವಾಗಿತ್ತು. ಒಂದೇ ಪುಸ್ತಕ ವಿದ್ದದರಿಂದ ಪುಸ್ತಕ ಮಾರಾಟ ಮಳಿಗೆ ಹಾಕುವ ಗೋಜಿಗೆ ಹೋಗಿರಲಿಲ್ಲ. ಮೊದಲ ದಿನವೇ ನಾನು ಬೆಂಗಳೂರಿಗೆ ತೆರಳಿ ನನ್ನ ಕೆಲವು ಕೆಲಸಗಳನ್ನು ಮುಗಿಸಿಕೊಂಡು ಮಧ್ಯಾಹ್ನದ ಸಮಯಕ್ಕೆ ಸಮ್ಮೇಳನದ ಜಾಗಕ್ಕೆ ಭೇಟಿನೀಡಿದ್ದೆ. ಅಲ್ಲೆಲ್ಲಾ ಕೆಲಹೊತ್ತು ಸುತ್ತಾಡಿ ಹುಬ್ಬಳ್ಳಿಯ ಗೆಳೆಯ ರಾಜುಗಡ್ಡಿಯ ಪುಸ್ತಕ ಮಳಿಗೆಗೆ ಬಂದೆ. ಅಲ್ಲಿ ನನ್ನ ಕೆಲವು ಮಳೆಯಾಗು ನೀ... ಕವನ ಸಂಕಲವನ್ನು ಮಾರಾಟಕ್ಕೆ ಇಟ್ಟೆ. ರಾಜುಗಡ್ಡಿಯ ಜೊತೆ ಉಭಯಕುಶಲೋಪರಿ ನಡೆಯಿತು. ಪುಸ್ತಕ ಮಳಿಗೆಗಳ ಬಳಿ ಜನ ಚೆನ್ನಾಗಿಯೇ ಸುಳಿದಾಡುತ್ತಿದ್ದರು.  ರಾಜುಗಡ್ಡಿಯ ಮಳಿಗೆಗೂ ಬಹಳ ಜನ ಬಂದು ಪುಸ್ತಕಗಳನ್ನು ಪ್ರೀತಿಯಿಂದ ಮುಟ್ಟಿ, ಬೆಲೆ ವಿಚಾರಿಸಿ ಸಾಧ್ಯವಿದ್ದರೆ ಕೊಳ್ಳುತ್ತಿದ್ದರು. ರಾಜುವಂತೂ ಆತನ ಪುಸ್ತಕಗಳನ್ನು ಅರ್ಧಬೆಲೆಗೇ ಮಾರುತ್ತಿದ್ದ. ಅಷ್ಟರಲ್ಲಿ ನನ್ನ ಪುಸ್ತಕದ ಮೊದಲ ಪ್ರತಿ ಮಾರಾಟವಾಯಿತು. ಅದನ್ನು ಕೊಂಡವರು ಒಬ್ಬರು ಮಹಿಳೆ. ನಾವೂ ಕವನ ಬರಿತೀವ್ರಿ ಎಂದು ಹೇಳಿ ನನ್ನ ಕವನ ಸಂಕಲನವನ್ನು ಕೊಂಡುಕೊಂಡರು. ಆ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಆ ನಂತರ ಗೆಳೆಯ ಅಜಿತ್ ಕೌಂಡಿನ್ಯ ನಮ್ಮನ್ನು ಸೇರಿಕೊಂಡರು. ಬಹಳ ದಿನಗಳ ನಂತರ ಭೇಟಿಯಾಗಿದ್ದ ರಾಜು ಮತ್ತು ಅಜಿತ್ ಸ್ವಲ್ಪ ಮಾತಾಡಿಕೊಂಡ ನಂತರ ನಾನು ಮತ್ತು ಅಜಿತ್ ಪ್ರಕಾಶ್ ಹೆಗಡೆಯವರನ್ನು ಹುಡುಕುತ್ತಾ ಹೊರಟೆವು. ಅವರು ಎ.ಆರ್. ಮಣಿಕಾಂತ್ ರವರ ನೀಲಿಮಾ ಪ್ರಕಾಶನದ ಪುಸ್ತಕ ಮಳಿಗೆಯಲ್ಲಿ ತಮ್ಮ ಹೆಸರೇ ಬೇಡ ಪುಸ್ತಕ ಮಾರಾಟ ಮಾಡುವುದರಲ್ಲಿ ಬ್ಯುಸಿಯಿದ್ದರು. ನಮ್ಮನ್ನು ಕಂಡವರೇ ಮಳಿಗೆಯ ಒಳಗೆ ಬರಮಾಡಿಕೊಂಡು ಮಣಿಕಾಂತ್ ಸರ್ ರವರನ್ನು ನನಗೆ ಪರಿಚಯಿಸಿದರು. ರೀ... ಗುಬ್ಬಚ್ಚಿ ಸತೀಶ್. ನಿಮ್ಮನ್ನು ಹುಡುಕಿಕೊಂಡು ಯಾರೋ ಹುಡುಗಿಯೊಬ್ಬರು ಬಂದಿದ್ದರು. ಅವರು ನಿಮ್ಮ ಫ್ಯಾನ್ ಅಂತೆ. ನಾನವರಿಗೆ ಇನ್ನೇನು ಅವರು ಬರಬಹುದು ಇರಿ ಎಂದೆ. ಅವರು ಇಲ್ಲಾ ಸರ್, ಹೋಗ್ಬೇಕು. ನಾ ಕೇಳಿದೆ ಎಂದು ಹೇಳಿ ಹೊರಟು ಹೋದರು ಎಂದು ಹೇಳಿದರು. ನಾ ಯಾವ ಹುಡುಗಿ? ಎಂದು ಯೋಚಿಸುತ್ತಲೇ ಅವರಿಗೆ ವಿದಾಯ ಹೇಳಿದೆ. ನಾವು ಅವರ ಮಳಿಗೆಯಿಂದ ಹೊರಬಂದರೂ ಆ ಹುಡುಗಿ ಯಾರಿರಬಹುದೆಂದು ಚಿಂತಿಸುತ್ತಲೇ ನಾನು ಇರುವುದನ್ನು ಕಂಡ ಅಜಿತ್ ಸರ್, ತಲೆಕೆಡಿಸ್ಕೊಬೇಡಿ, ಸುಮ್ನಿರಿ. ಪ್ರಕಾಶ್ ಹೆಗಡೆಯವರು ಎಲ್ಲೋ ಕಾಗೆ ಹಾರಿಸಿದ್ದಾರೆ. ಅವರು ಕಾಗೆ ಹಾರಿಸೋದ್ರಲ್ಲಿ ಎಕ್ಸ್ಪರ್ಟ್ ಎಂದು ನಗುತ್ತಾ ಹೇಳಿ, ನನ್ನ ಚಿಂತೆಯನ್ನು ದೂರಮಾಡಿದರು. ನಂತರ ನಾವಿಬ್ಬರೂ ಸಮ್ಮೇಳನದ ಜಾಗದಿಂದ ಹೊರಬಂದು ಒಟ್ಟಿಗೆ ಊಟ ಮಾಡಿ ನಮ್ಮ ನಮ್ಮ ದಾರಿ ಹಿಡಿದೆವು. ಬಹಳ ಕಾಲದ ನಂತರವಷ್ಟೇ ಅಂದು ಪ್ರಕಾಶ್ ಹೆಗಡೆಯವರು ಹೇಳಿದ್ದು ನಿಜ, ನನ್ನನ್ನು ಹುಡುಕಿ ಬಂದ ಹುಡುಗಿ ಮಂಗಳೂರು ಮೂಲದ, ಕುಣಿಗಲ್ ನಿವಾಸಿ ಶುಭರೇಖಾ ಎಂದು ತಿಳಿಯಿತು.
          ಆ ದಿನ ಬೆಂಗಳೂರಿನಲ್ಲೆ ಉಳಿದುಕೊಂಡ ನಾನು ಮರುದಿನ ನನ್ನ ಶ್ರೀಮತಿಯನ್ನು  ಕರೆದುಕೊಂಡು ಸಮ್ಮೇಳನಕ್ಕೆ ಹೋದೆ. ಅಲ್ಲಿ ರಾಜುವಿನ ಮಳಿಗೆಯಲ್ಲಿ ನಾವಿಬ್ಬರು ಸ್ವಲ್ಪ ಹೊತ್ತು ಪುಸ್ತಕಗಳ ಮಾರಾಟವನ್ನು ಗಮನಿಸುತ್ತಾ ರಾಜುವಿನೊಡನೆ   ಹರಟಿ ಹಿಂದಿರುಗಿದೆವು. ಅದು ನಮ್ಮಿಬ್ಬರ ಮೊದಲ ಸಾಹಿತ್ಯ ಸಮ್ಮೇಳನವಾದರೂ ನಾವೇನೂ   ಸಕ್ರಿಯವಾಗಿ ಭಾಗಿಯಾಗಿರಲಿಲ್ಲ.
          ೭೯ನೇ ಅಖಿಲ ಭಾರತ ಕನ್ನಡ ಸಮ್ಮೇಳನ ವಿಜಾಪುರದಲ್ಲಿ ಫೆಬ್ರವರಿ ೮, ೯ ಮತ್ತು ೧೦ ಎಂದು ಪತ್ರಿಕೆಗಳಲ್ಲಿ ಪ್ರಕಟವಾದದ್ದೇ ತಡ, ನಮ್ಮ ಪ್ರಕಾಶನದಿಂದ ಪುಸ್ತಕ ಮಳಿಗೆ ಅರ್ಜಿ ಹಾಕಿದೆವು. ಹುಬ್ಬಳಿಯ ಗೆಳೆಯ ರಾಜುವಿಗೂ ಒಂದು ಮಳಿಗೆ ಎಂದು ಒಟ್ಟಿಗೆ ಎರಡು ಮಳಿಗೆಗೆ ಡಿ.ಡಿ. ಕಳುಹಿಸಿದೆವು. ನಂತರ ಸಮ್ಮೇಳನ ಒಂದು ದಿನ ಮುಂದಕ್ಕೆ ಹೋಯಿತು. ಅಂದರೆ, ೯, ೧೦ ಮತ್ತು ೧೧ ರಂದು ಎಂದು ಪ್ರಕಟವಾಯಿತು. ಸರಿ, ನಮ್ಮ ಪ್ರಕಾಶನದ ಮೊದಲ ಸಮ್ಮೇಳನಕ್ಕೆ ತಯಾರಿ ನಡೆಸಿದೆವು. ಮೊದಲಿಗೆ ನಾನು ಒಬ್ಬ ಹುಡುಗನನ್ನು ಕರೆದುಕೊಂಡು ಹೋಗುವುದೆಂದು ತೀಮಾರ್ನಿಸಿ ಬಸ್ಸೇ ಸರಿ ಎಂದು ಫೆಬ್ರವರಿ ರಾತ್ರಿ ೮.೩೦ಕ್ಕೆ ಹೊರಡುವ ವಿ.ಆರ್.ಎಲ್ ಬಸ್ಸಿಗೆ ಎರಡು ಟಿಕೆಟ್ ಬುಕ್ ಆಯಿತು. ನಂತರ ನನ್ನೊಬ್ಬನನ್ನೇ ಕಳುಹಿಸಲು ಇಚ್ಚಿಸದ ನನ್ನ ಮಡದಿ ಮತ್ತೊಂದು ಟಿಕೆಟ್ ಬುಕ್ ಮಾಡಿದಳು. ನಮ್ಮೊಡನೆ ಬರಲು ಒಪ್ಪಿದ ಹುಡುಗ ಗೆಳೆಯ ಚಿದು (ಸಹೋದ್ಯೋಗಿ ಗೆಳೆಯ ಮತ್ತು ನಮ್ಮ ಮಾಸಪತ್ರಿಕೆಯ ಉಪಸಂಪಾದಕರಾದ ಟಿ.ಜೆ.ಚಿದಾನಂದಮೂರ್ತಿ)ವಿನ ಅಣ್ಣನ ಮಗ ದರ್ಶನ್.
          ನಮ್ಮ ಪ್ರಕಾಶನದ ಏಳು ಪುಸ್ತಕಗಳ ಜೊತೆ, ನಮ್ಮ ಕಾಲೇಜ್ ಡೈರಿ ಮಾಸಪತ್ರಿಕೆ ಮತ್ತು ತುಮಕೂರಿನ ಕೆಲವು ಸಾಹಿತಿಗಳ ಪುಸ್ತಕಗಳನ್ನು ತೆಗೆದುಕೊಂಡು ೮ರ ರಾತ್ರಿ ೮ಕ್ಕೆ ಮನೆಯಿಂದ ಹೊರಟೆವು. ನಮಗೆ ಮನೆಯಿಂದ ಆಟೋ ಸಿಗುವುದು ತುಸು ಗಡಿಬಿಡಿಯಾಯಿತು. ಜೊತೆಗೆ ಸಮಯಕ್ಕೆ ಸರಿಯಾಗಿ ಬಸ್ಸು ಬರಲಿಲ್ಲ. ೯.೩೦ರ ಸುಮಾರಿಗೆ ಬಂದ ಬಸ್ ಅರ್ಧಗಂಟೆ ಪ್ರಯಾಣ ಬೆಳೆಸಿ ಊಟಕ್ಕೆ ತುಮಕೂರಿನ ಹೊರವಲಯದಲ್ಲಿ ನಿಂತಿತು. ಅಲ್ಲಿ ಊಟ ಮಾಡಿ ಬರುವಷ್ಟರಲ್ಲಿ ಬೆಂಗಳೂರಿನಿಂದ ಬಂದಿದ್ದ ಸಹಪ್ರಯಾಣಿಕರೊಬ್ಬರ ಬ್ಯಾಗ್ ಸಮೇತ ಲ್ಯಾಪ್‌ಟಾಪ್ ಕಳೆದುಹೋಗಿತ್ತು. ಪೋಲಿಸರು ಬಂದು ಕೇಸ್ ತೆಗೆದುಕೊಳ್ಳುವವರೆಗೂ ಆ ಪ್ರಕರಣ ಮುಗಿಯಲಿಲ್ಲ. ಸುಮಾರು ಒಂದುವರೆ ಘಂಟೆಯ ನಂತರ ಹೋಟೆಲ್ ಬಿಟ್ಟು ಬಸ್ ಹೊರಟಿತು. ಮಧ್ಯ ಒಂದೆರಡು ಸ್ಟಾಪ್ ಬಿಟ್ಟರೆ ಎಲ್ಲೂ ನಿಲ್ಲದ ಬಸ್ ೯ರ ಬೆಳಿಗ್ಗೆ ಸುಮಾರು ೭.೩೦ಕ್ಕೆ ವಿಜಾಪುರ ತಲುಪಿತು. ನಾನು ರಾತ್ರಿಯೆಲ್ಲಾ ಎಚ್ಚರದಿಂದಲೇ ಇದ್ದೆ. ಕಾರಣ!? ಹೀಗಾಗಬಹುದು ಎಂದು ನನ್ನ ಸಹೋದ್ಯೋಗಿ ಗೆಳೆಯರೊಬ್ಬರು ಮೊದಲೇ ಹೇಳಿದ್ದರು : ವಿ.ಆರ್.ಎಲ್. ಬಸ್ ಚೆನ್ನಾಗಿಯೇ ಇರುತ್ತೆ. ಆದರೆ, ಯಾರಾದರೂ ಕಿಟಕಿ ತೆಗೆದುಕೊಂಡು ಕುಳಿತರೆ ಅದರಲ್ಲೂ ಮಹಿಳೆಯರಾದರೆ ಕಿಟಕಿಯಿಂದ ಒಳನುಗ್ಗುವ ಗಾಳಿಗೆ ಮಲಗಿದ ಹಾಗೆಯೇ ಎಂದು. ಅದು ನಿಜವಾಯಿತು. ನನ್ನ ದುರಾದೃಷ್ಟಕ್ಕೆ ಮುಂದೆ ಕುಳಿತಿದ್ದ ಮಹಾತಾಯಿಯೊಬ್ಬಳು ರಾತ್ರಿಯೆಲ್ಲಾ ಮತ್ತು ಮುಂಜಾವಿನಲ್ಲೂ ತನ್ನ ಕೂದಲುಗಳನ್ನು ಕೆದರಿಕೊಂಡು ಕಿಟಕಿಗೆ ತಲೆ ಇಟ್ಟೇ ಕೂತಿದ್ದಳು. ಎರಡು ಬಾರಿ ನಾನೇ ಎದ್ದು ಹೋಗಿ ಕಿಟಕಿ ಮುಚ್ಚಿ ಮಲಗಲು ಯತ್ನಿಸಿದರೂ ಆ ಮಹಾತಾಯಿ ಅದ್ಯಾವ ಮಾಯದಲ್ಲೋ ಕಿಟಕಿ ತೆರೆದು ಬಿಡುತ್ತಿದ್ದಳು. ಇದ್ದುದರಲ್ಲಿ ನನ್ನ ಶ್ರೀಮತಿ ಮತ್ತು ದರ್ಶನ್ ಚೆನ್ನಾಗಿಯೇ ನಿದ್ರಿಸಿದ್ದರು.
          ಸರಿಯಾದ ಸಮಯಕ್ಕೆ ನಾವು ವಿಜಾಪುರ ತಲುಪಿದ್ದೆವು. ರಾಜು ಹೇಳಿಟ್ಟಿದ್ದ ಲಾಡ್ಜ್ ಬಳಿಗೆ ಹೋದೆವು. ಅಲ್ಲಿ ರಾಜು ಬರುವವರೆಗೂ ಲಾಡ್ಜ್ ನವರು ಕಿರಿಕಿರಿ ಮಾಡಿದರು. ಎಲ್ಲವನ್ನೂ ನಿಭಾಯಿಸಿ ನಾವು ಸಮ್ಮೇಳನ ನಡೆಯುತ್ತಿದ್ದ ಸೈನಿಕ್ ಸ್ಕೂಲ್ ಬಳಿ ತೆರಳಿದೆವು. ಅಲ್ಲಿ ಅಂದುಕೊಂಡಂತೆ ಪುಸ್ತಕದ ಬ್ಯಾಗ್‌ಗಳನ್ನು ಮತ್ತು ಬಂಡಲ್‌ಗಳನ್ನು ತಲೆ ಮೇಲೆ ಹೊತ್ತು ಹೋಗಬೇಕಾಯಿತು. ಹೀರೋ ದರ್ಶನನಂತ ದರ್ಶನ್ ನಮ್ಮ ಜೊತೆ ಇದ್ದುದರಿಂದ ಈ ಕೆಲಸ ಸಲೀಸಾಯಿತು. ನಮಗೆ ಕಾದಿರಿಸಿದ್ದ ಮಳಿಗೆ (ನಂ.೮೪) ಯ ಬಳಿ ಹೋದರೆ ಅಲ್ಲಿ ಕೆಲವು ಚೇರ್‌ಗಳನ್ನು ಮತ್ತು ಟೇಬಲ್‌ಗಳನ್ನು ಯಾರೋ ಅದಾಗಲೇ ಅಪಹರಿಸಿಯಾಗಿತ್ತು. ಇದು ಎಲ್ಲಾ ಕಡೆ ಮಾಮೂಲು ಎಂಬ ವಿಷಯ ನಮಗಾಗಲೇ ತಿಳಿದಿತ್ತು. ಮತ್ತೆ ನಾವು ಒಂದಷ್ಟು ಟೇಬಲ್ ಮತ್ತು ಚೇರ್‌ಗಳನ್ನ ಹೊಂಚಿಕೊಂಡು ಬಂದು ನಮ್ಮ ಮಳಿಗೆಯನ್ನು ವ್ಯಾಪಾರಕ್ಕೆ ಸಜ್ಜು ಗೊಳಿಸಿದೆವು. ಅಷ್ಟರಲ್ಲಿ ಮೊದಲೇ ಹೇಳಿ ತರಿಸಿದ್ದ ಗೆಳೆಯರಾದ ಕೆ. ಗಣೇಶ್ ಕೋಡೊರ್‌ರವರ ಬೆನಕ ಬುಕ್ಸ್ ಬ್ಯಾಂಕಿನ ಕೆಲವು ಪುಸ್ತಕಗಳು ನಮ್ಮ ಕೆಲವೇ ಕೆಲವು ಪುಸ್ತಕಗಳನ್ನು ಸೇರಿಕೊಂಡವು. ನಮ್ಮ ಪ್ರಕಾಶನದ ಮೊಟ್ಟ ಮೊದಲ ಕನ್ನಡ ಸಮ್ಮೇಳನದ ಪುಸ್ತಕ ವ್ಯಾಪಾರ ಶುರುವಾಯಿತು. ಆ ಸಮಯಕ್ಕೆ ಸರಿಯಾಗಿ ರಾಜು ಗಡ್ಡಿ ಬಂದು ಅವರಿಗೆ ನಿಗದಿಯಾಗಿದ್ದ ನಮ್ಮ ಪಕ್ಕದ ಮಳಿಗೆಯನ್ನು ವ್ಯಾಪಾರಕ್ಕೆ ಸಜ್ಜುಗೊಳಿಸಿಕೊಂಡರು. ನಮ್ಮ ಅಕ್ಕಪಕ್ಕದ ಮಳಿಗೆಗಳಲ್ಲಿ ಗದಗದ ಕಡೆಯ ಕೆಲವು ಮಳಿಗೆಗಳಿದ್ದವು. ಕೊಂಚ ದೂರದಲ್ಲೇ ವಸುಧೇಂದ್ರ್ರರ ಛಂದ ಪುಸ್ತಕದ ಮಳಿಗೆಯಿತ್ತು. ಮತ್ತೂ ಸ್ವಲ್ಪ ದೂರಕ್ಕೆ ಲಡಾಯಿ ಪ್ರಕಾಶನದ ಮಳಿಗೆಯಿತ್ತು. ಇನ್ನೂ ಜನರು ಅಷ್ಟಿರಲಿಲ್ಲವಾದ್ದರಿಂದ ನಾನು ವಸುಧೇಂದ್ರರ ಬಳಿ ಹೋಗಿ ಮಾತನಾಡಿಕೊಂಡು ಬಂದೆ.
          

       ರಾಜು ಮೊದಲೇ ಹೇಳಿದಂತೆ ಮೊದಲ ದಿನ ಜನ ಬಂದು ಪುಸ್ತಕ ನೋಡಿಕೊಂಡು ಹೋಗುತ್ತಾರೆ ಎಂಬ ಮಾತು ನಿಜವಾಯಿತು. ಜನ ಬಂದು ಬಂದು ಪುಸ್ತಕಗಳನ್ನು ನೋಡಿ, ಮುಟ್ಟಿ, ಬೆಲೆ ಕೇಳಿ ಹೋಗಿದ್ದೆ ಹೆಚ್ಚಾಯಿತು. ವ್ಯಾಪಾರ ಅಷ್ಟಕಷ್ಟೆ ಎಂಬಂತಾಯಿತು. ಊಟದ ವೇಳೆಗೆ ನಾನು ಅಲ್ಲಿ ಊಟ ನೀಡುವ ಜಾಗಕ್ಕೇ ಹೋಗಿ ಸಾಹಸ ಮಾಡಿ ಊಟ ಮಾಡಿ ಬಂದೆ. ಆದರೆ, ಇವರಿಬ್ಬರೂ ಆ ಜನಸಂದಣಿಯಲ್ಲಿ ಊಟಕ್ಕೆ ಹೋಗಲಾಗಲಿಲ್ಲ. ಅವರಿಬ್ಬರಿಗೂ ಬಾಳೆಹಣ್ಣು, ಜ್ಯೂಸ್ ಅಷ್ಟೇ ಸಿಕ್ಕಿದ್ದು. ಅದು ಕಷ್ಟಬಿದ್ದು ಹೊರಗಡೆ ಬಂದು ಕೊಂಡುಕೊಂಡದ್ದು. ರಾತ್ರಿ ನಿದ್ದೆಯಿಲ್ಲದ ಕಾರಣ, ಜೊತೆಗೆ ಬಿಸಿಲು ಮತ್ತು ಧೂಳಿನ ಮಹಿಮೆಗೆ ನಿದ್ರೆ ವತ್ತರಿಸಿ ಬರುತ್ತಿತ್ತು. ಮಳಿಗೆಯ ಒಳಗೆ ಸ್ವಲ್ಪ ಜಾಗ ಮಾಡಿಕೊಂಡು ನಾನು ಮಲಗಿದೆ. ನಿದ್ದೆಯೋ ನಿದ್ದೆ. ಆ ನಂತರ ಸರದಿಯ ಮೇಲೆ ಇವರಿಬ್ಬರೂ ಮಲಗಿದರು. ಅಷ್ಟರಲ್ಲಿ ನನ್ನನ್ನು ಹುಡುಕಿಕೊಂಡು ಹಲವರು ಬಂದು, ಮಲಗಲಿ ಬಿಡಿ ನಂತರ ಬರುತ್ತೇವೆ ಎಂದು ಹೋರಟು ಹೋಗಿದ್ದರು. ಅದರಲ್ಲಿ ಬಹುಮುಖ್ಯವಾದವರು ನಾರಾಯಣ ಬಾಬಾನಗರ. ನಾನೂ ಅವರನ್ನು ಭೇಟಿಯಾಗಲು ಕಾತರಿಸುತ್ತಿದ್ದೆ. ಸಂಜೆಯ ಹೊತ್ತಿಗೆ ವ್ಯಾಪಾರ ಸ್ವಲ್ಪ ಕುದುರಿತ್ತು. ಹಾಗೂ ಹೀಗೂ ರಾತ್ರಿಯಾಯಿತು. ವ್ಯಾಪಾರ ಅಷ್ಟಕಷ್ಟೆ ಇದ್ದುದರಿಂದ ನಾನು ದರ್ಶನ್ ಹೋಗಿ ಅಲ್ಲೇ ಊಟ ಮಾಡಿ ಬಂದೆವು. ನನ್ನ ಶ್ರೀಮತಿಗೂ ಅಲ್ಲಿಂದಲೇ ಊಟ ತಂದೆವು. ಸುಮಾರು ೧೦ ಗಂಟೆಯವರೆಗೂ ಮಳಿಗೆಯಲ್ಲೇ ಇದ್ದು ದರ್ಶನನನ್ನು ರಾಜುವಿನ ಜೊತೆ ಮಳಿಗೆಯಲ್ಲೇ ಮಲಗಲು ಬಿಟ್ಟು ನಾವು ಲಾಡ್ಜಿನ ಹಾದಿ ಹಿಡಿದೆವು.
          ಪುಸ್ತಕ ಮಳಿಗೆಗಳಿಂದ ಮುಖ್ಯರಸ್ತೆಗೆ ಬರುವ ದಾರಿಯಲ್ಲೇ  ರಾತ್ರಿ ಹತ್ತಾದರೂ ಜನ ಕಿಕ್ಕಿರಿದು ತುಂಬಿದ್ದರು. ಕಾರಣ ಬೀದಿ ಬದಿಯ ವ್ಯಾಪರಿಗಳ ಭರಾಟೆ. ಅಲ್ಲಿ ಅಕ್ಷರಶಃ ಜಾತ್ರೆ ನೆರೆದಿತ್ತು. ನಾವು ಜಾಗ ಮಾಡಿಕೊಂಡು ಮುಖ್ಯ ರಸ್ತೆಯ ಬಳಿ ನಡೆಯುತ್ತಿದ್ದಾಗ ಒಂದು ಸೋಜಿಗ ನಡೆಯಿತು. ಅಲ್ಲಿ ತುಂಬಾ ಕತ್ತಲಿತ್ತು. ಆ ಜಾಗದಲ್ಲಿ ಎರಡು ಸೀಮೆ‌ಎಣ್ಣೆ ಬುಟ್ಟಿಗಳನ್ನು ತನ್ನೆರಡು ಬದಿಗಳಲ್ಲಿ ಇರಿಸಿಕೊಂಡು ಒಬ್ಬ ವ್ಯಕ್ತಿ ಕುಳಿತ್ತಿದ್ದ. ಆ ಎರಡು ಬದಿಗೆ ಅತ್ತಿಂದತ್ತ್ತ ಹುಳವೊಂದು ಸರಸರನೆ ಓಡಾಡುತ್ತಿತ್ತು. ಮೊದಲಿಗೆ ನಾವದನ್ನು ಸರಿಯಾಗಿ ಗಮನಿಸಲಿಲ್ಲ. ಯಾವುದೋ ಹುಳವಿರಬೇಕೆಂದು ನಮ್ಮ ನಮ್ಮಲ್ಲಿಯೇ ಅದರ ಬಗ್ಗೆ ಮಾತಾಡಿಕೊಂಡು ಮುಂದೆ ಮುಂದೆ ಹೋಗಿಬಿಟ್ಟೆವು. ನಮಗೆ ಕುತೂಹಲ ಇಮ್ಮಡಿಯಾಯಿತು. ತಡೆಯಲಾಗಲಿಲ್ಲ. ಮತ್ತೆ ಹಿಂದಿರುಗಿ ಬಂದು ಸ್ವಲ್ಪ ಗಮನಿಸಿ ನೋಡಿದೆವು. ಆತ ತನ್ನೆರಡು ಕೈಗಳನ್ನು ಮೇಲೆ ಎತ್ತಿಡಿದಿದ್ದನ್ನು ಗಮನಿಸಿದಾಗ ಗೊತ್ತಾಯಿತು ಆತನ ಕೈ ಬೆರಳುಗಳು ಆ ಹುಳವನ್ನು ನಿಯಂತ್ರಿಸುತ್ತಿವೆ. ಮತ್ತೂ ಗಮನಿಸಿದಾಗ ತಿಳಿಯಿತು ಆ ಹುಳು ಪ್ಲಾಸ್ಟಿಕ್ಕಿನದು. ಆತನ ಬಳಿ ಇನ್ನೂ ಆ ರೀತಿಯ ಹಲವು ಹುಳುಗಳಿವೆ ಎಂದು. ಆತ ಜನರಿಗೆ ತನ್ನ ಕಣ್ಕಟ್ಟೋ ಆಟದಿಂದ ಮರಳು ಮಾಡುತ್ತಿದ್ದಾನೆ. ಅಯ್ಯೋ ಇಷ್ಟೇ ಎಂದು ನಾವು ಅಲ್ಲಿಂದ ತೆರಳಿದೆವು. ಜನಮರುಳೋ ಜಾತ್ರೆ ಮರುಳೋ ಅನ್ನುವ ಮಾತು ಅಲ್ಲಿ ಸಾಬೀತಾಗಿತ್ತು.
          ಬೆಳಿಗ್ಗೆಯಿಂದ ಕಾಫಿ ಕುಡಿಯದೇ ಇದ್ದ ನಾನು ಸುಮಾರು ೧೦.೩೦ರ ಸುಮಾರಿಗೆ ಅಲ್ಲೊಂದು ಹೋಟೆಲ್ಲಿಗೆ ಹೋಗಿ ಕಾಫಿ ಸಿಗುವುದನ್ನು ಖಚಿತಪಡಿಸಿಕೊಂಡು ಆರ್ಡರ್ ನೀಡಿದೆ. ವಿಜಾಪುರದಲ್ಲಿ ಜಾಸ್ತಿ ಟೀ ಮಾರುತ್ತಾರೆ. ಬಹಳ ಹೊತ್ತಿನ ನಂತರ ಹೋಟೋಲ್ ಮಾಲೀಕನೇ ಕಾಫಿ ತಗೆದು ಕೊಂಡು ಬಂದರು. ನೋಡಿದರೆ ಬಿಳಿ ಬಿಳಿ ಕಾಫೀ. ನಗುತ್ತಾ ಅದನ್ನೇ ಕುಡಿದೆವು. ನಂತರ ಲಾಡ್ಜಿಗೆ ಮರಳಿ ದಿಂಬಿಗೆ ತಲೆಕೊಟ್ಟರೆ ಆ ಕಣ್ಕಟ್ಟ ಹುಳು ಕಣ್ಣ ಮುಂದೆ ಸುಳಿಯುತ್ತಿತ್ತು. ನಿದ್ದೆ ಹತ್ತುತ್ತಿಲ್ಲ. ಕಾರಣ ಸೊಳ್ಳೆ ಮತ್ತು ಅವುಗಳಿಗಿಂತ ನಮ್ಮನ್ನು ತಮ್ಮ ಸೈನ್ಯದ ಸಮೇತ ಮುತ್ತಿಕ್ಕುತ್ತಿದ್ದ ರಕ್ತಬಿಜಾಸುರ ತಿಗಣೆಗಳ ಸೈನ್ಯ!
 (Continues...)


5 ಕಾಮೆಂಟ್‌ಗಳು:

  1. ಸಾಹಿತ್ಯ ಸಮ್ಮೇಳನದ ನೆನಪುಗಳು ಆಪ್ತವಾಗಿ ಮೂಡಿಬಂದಿವೆ.

    ಪುಸ್ತಕ ಪ್ರೇಮಿಗಳಿಗೆ ಸಮ್ಮೇಳನಗಳು ಭರಪೂರ ದಾಹ ತೀರಿಸುವ ತಾಣ.

    ಪ್ರಯಾಣದಲ್ಲಿ ಕಳ್ಳತನವಾದರೆ ಕಳೆದುಕೊಂಡವರಿಗೂ ಮತ್ತು ಇರರರಿಗೂ ಆತಂಕ ಸಾರ್.

    ಪ್ಲಾಸ್ಟಿಕ್ ಹುಳುಗಳು ನನಗೆ ಹೊಸ ವಿಚಾರ.

    ಮುಂದುವರೆಯಲಿ ಯಾತ್ರೆ...

    ಪ್ರತ್ಯುತ್ತರಅಳಿಸಿ
  2. ಚೆನಾಗಿದೆ ಸರ್..
    ಧನ್ಯವಾದಗಳು ಸಮ್ಮೇಳನಗಳು,ಪುಸ್ತಕದ ಮಾರಾಟದ ಅನುಭವ ಹಂಚಿಕೊಂಡಿದ್ದಕ್ಕೆ :)...
    ಮುಂದಿನ ಸಂಚಿಕೆಗಾಗಿ ಕಾಯ್ತಿದೀನಿ..
    ನಮಸ್ತೆ :)

    ಪ್ರತ್ಯುತ್ತರಅಳಿಸಿ
  3. ಸಾಹಿತ್ಯ ಸಮ್ಮೇಳನ ಅಥವಾ ಯಾವುದೇ ಒಂದು ಮೈದಾನದಲ್ಲಿ ನಡೆಯುವ ಪುಸ್ತಕಗಳ ಸಮ್ಮೇಳನ ಕಣ್ಣ ಮುಂದೇ ಹಾಗೆ ಬಂದಿತು. ಬರಹದ ವೈಖರಿ ಇಷ್ಟವಾಯಿತು. ಮುಂದೆ ಏನು ಹೇಳಬಹುದು ಎನ್ನುವ ಕುತೂಹಲ ತುಂಬಿಕೊಂಡು ಬಂದ ಈ ಲೇಖನ ಇಷ್ಟವಾಯಿತು ಸರ್ಜಿ

    ಪ್ರತ್ಯುತ್ತರಅಳಿಸಿ
  4. ಸರ್,
    ಅಕ್ಷರ ಜಾತ್ರೆಯ ನಿಮ್ಮ ಅನುಭವದ ಲೇಖನ ಕುತೂಹಲಕಾರಿಯಾಗಿದ್ದು ಓದಿಸಿಕೊಂಡು ಹೋಗುತ್ತದೆ.

    ಪ್ರತ್ಯುತ್ತರಅಳಿಸಿ
  5. ನಿಮ್ಮ ಲೇಖನವನ್ನು ಓದುತ್ತಿದ್ದ೦ತೆಯೇ ಬೀದರ್ ನಲ್ಲಿ ನಡೆದ ಸಮ್ಮೇಳನದಲ್ಲಿ ಹನಿಗವನ ಓದಿದ್ದು, ಚಿತ್ರದುರ್ಗದಲ್ಲಿ ನಡೆದ ಸಮ್ಮೇಳನದಲ್ಲಿ ಸುಪ್ರಸಿದ್ದ ಲೇಖಕರಾದ ವಸುಧೇ೦ದ್ರ ಅವರನ್ನು ಭೇಟಿಮಾಡಿದ್ದು ......ಎಲ್ಲಾ ನೆನಪಾಯ್ತು. ಬರಹ ಇಷ್ಟವಾಯಿತು .ಸತೀಶ್ ರವರೆ.

    ಪ್ರತ್ಯುತ್ತರಅಳಿಸಿ

ನೀರು (ಪುಟ್ಟ ಕತೆ)

  ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹ...