ಹಲವು ಕನಸುಗಳು ನನಸಾದ ಬಗೆ
ಅದು ೧೯೯೯ರ ವರ್ಷ. ಆಗಷ್ಟೆ ನನ್ನ ಪದವಿ ಫಲಿತಾಂಶ ಬಂದಿತ್ತು. ಮುಂದೆ ಓದುವ ಇಚ್ಛೆಯಿದ್ದರೂ ಹಣಕಾಸಿನ ತೊಂದರೆಯಿಂದ ಕೆಲಸ ಹುಡುಕುವುದೆಂದು ನಿರ್ಧಾರವಾಗಿತ್ತು. ಅದಾಗಲೇ ನನಗೆ ನನ್ನ ವಾರಿಗೆಗಿಂತಲೂ ಹಿರಿಯರಾದ ಕೆಲವು ಗೆಳೆಯರಿದ್ದರು. ಅದರಲ್ಲಿ ಗುಬ್ಬಿಯ ಮಂಜುನಾಥ ಹೋಟೆಲ್ಲಿನ ವಿಶು ಕೂಡ ಒಬ್ಬರು. ಅವರು ಶೈಕ್ಷಣಿಕವಾಗಿ ಹೆಚ್ಚೇನು ಓದಿಲ್ಲದಿದ್ದರೂ ಅವರಿಗೆ ಇದ್ದ ಸಾಹಿತ್ಯದ ಬಗೆಗಿನ ಆಸಕ್ತಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಇದ್ದ ಮಾಹಿತಿಗಳಿಂದ ನನ್ನಲ್ಲಿ ವಿಶೇಷ ಆಸಕ್ತಿ ಬೆಳೆಸಿದ್ದರು. ಅವರ ಹೋಟೇಲಿನಲ್ಲಿ ಗುಬ್ಬಿಗೆ ಬರುತ್ತಿದ್ದ ಎಲ್ಲಾ ನ್ಯೂಸ್‌ಪೇಪರ್‌ಗಳು ಸಿಗುತ್ತಿದ್ದವು. ನಾನಂತೂ ಭಾನುವಾರದ ಬೆಳಗಿನ ಲೈಬ್ರರಿ ವಿಸಿಟ್ ಮುಗಿದ ಮೇಲೆ ಅಲ್ಲೇ ಹತ್ತಿರದಲ್ಲೇ ಇದ್ದ ಇವರ ಹೋಟೆಲ್ಲಿಗೆ ಸುಮಾರು ೧೧ ಗಂಟೆಯ ಹೊತ್ತಿಗೆ ಹೋಗಿಬಿಡುತ್ತಿದೆ. ಆ ಸಮಯಕ್ಕೆ ಸರಿಯಾಗಿ ವಿಶುವಿನ ಕೆಲವು ಗೆಳೆಯರು, ಜೊತೆಗೆ ಬಹುಮುಖ್ಯವಾಗಿ ಗುರು-ಗೆಳೆಯ ಮೃತ್ಯುಂಜಯ ಬರುತ್ತಿದ್ದರು. ಭಾನುವಾರವಾದ್ದರಿಂದ ಅಷ್ಟೇನೂ ಜನರಿರುತ್ತಿರಲಿಲ್ಲ. ನಮ್ಮ ಮಾತುಗಳಿಗೆ, ಓದಿಗೆ, ಕಾಫೀ, ಟೀ ಕುಡಿಯಲಿಕ್ಕೆ ಹೋಟೇಲ್ ಸಾಕ್ಷಿಯಾಗುತ್ತಿತ್ತು. ಲೈಬ್ರರಿಯಲ್ಲಿ ಓದಲಾಗದ ಭಾನುವಾರದ ಪುರವಣಿಗಳನ್ನು ತೆಗೆದುಕೊಂಡು ನಾನೊಂದು ಮೂಲೆಯಲ್ಲಿ ಕುಳಿತು ಏನನ್ನಾದರೂ ಓದುವುದಕ್ಕೆ ಹಚ್ಚುತ್ತಿದ್ದೆ. ಕಾಫೀ ಕುಡಿದ ಮೇಲೆ ಎಲ್ಲಾ ಗೆಳೆಯರೂ ಒಂದಷ್ಟು ಹೊತ್ತು ಹರಟಿ ಹೊರಟುಬಿಡುತ್ತಿದ್ದರು. ಕಡೆಗೆ ನಾ