ಗುರುವಾರ, ಜುಲೈ 5, 2012

ಉಪ್ಪಾರಹಳ್ಳಿಯ ರೈಲ್ವೆಗೇಟ್‍ನಲ್ಲೊಂದು ಕುಹೂ ಕುಹೂ

ಮಗ್ಗಿ ಪುಸ್ತಕದಲ್ಲಿರುತ್ತಿದ್ದ ಉಗಿಬಂಡಿಯಂತಹ ರೈಲಿನಲ್ಲೇ ಚಿಕ್ಕಂದಿನಿಂದ ಓಡಾಡುತ್ತಿದ್ದರೂ ನನಗೆ ಮೊದಲು ಅನುಭವಕ್ಕೆ ಬಂದ ರೈಲ್ವೇ ಗೇಟಿನ ನೆನಪೆಂದರೇ, ನಾಲ್ಕನೇ ತರಗತಿಯಲ್ಲಿದ್ದಾಗ ನನ್ನ ಸೋದರತ್ತೆ ಮನೆಯಿಂದ ಖುಷಿಯಿಂದಲೇ ರಜೆಯನ್ನು ಮುಗಿಸಿಕೊಂಡು ಹೊರಟವನು ತಲೆಯೆತ್ತಿಯೂ ನೋಡದೆ ನನ್ನದೇ ಲೋಕದಲ್ಲಿ ಆಡಿಕೊಳ್ಳುತ್ತಾ ಭೀಮಸಂದ್ರದ ರೈಲ್ವೇ ಗೇಟನ್ನು ದಾಟುವ ಸಮಯಕ್ಕೆ ಸರಿಯಾಗಿ ತುಮಕೂರಿನ ಕಡೆಯಿಂದ ಬರುವ ರೈಲನ್ನು ಗಮನಿಸಿದ ನನ್ನ ಸೋದರತ್ತೆ, “ಏ ಸತೀಶ...” ಎಂದು ಕೂಗಿ ಕೈಹಿಡಿದು ಎಳೆದದ್ದು. ಅಂದು ಅತ್ತೆ ಕೈಹಿಡಿದು ಎಳೆಯದಿದ್ದರೆ ಇಂದು ನಾನು ನಾನಾಗಿರುತ್ತಿರಲಿಲ್ಲ. ಈ ರೀತಿಯಾಗಿ ಅಂದಿನ ಭಯಾನಕ ಅನುಭವದೊಂದಿಗೆ ಶುರುವಾದ ರೈಲ್ವೇ ಗೇಟಿನ ಸಂಬಂಧ ಇಂದಿನ ನನ್ನ ದೈನಂದಿನ ಚಟುವಟಿಕೆಯ ಒಂದು ಅವಿಭಾಜ್ಯ ಅಂಗವಾಗಿರುವ ತುಮಕೂರಿನ ಉಪ್ಪಾರಹಳ್ಳಿಯ ರೈಲ್ವೇ ಗೇಟ್ ನಿಂದ ಒಂದು ನಂಟಂತೆ ಬೆಸೆದುಕೊಂಡಿದೆ.

ಉಪ್ಪಾರಹಳ್ಳಿಯ ರೈಲ್ವೆಗೇಟನ್ನು ನಾನು ಮೊದಲು ನೋಡಿದ್ದು ಬಿ.ಎಸ್ಸಿ., ಓದುತ್ತಿದ್ದಾಗ. ಒಂದು ಸಂಜೆ ಕಂಪ್ಯೂಟರ್ ಲ್ಯಾಬನ್ನು ಮುಗಿಸಿಕೊಂಡು ನಾನು ಮತ್ತು ನನ್ನ ಕೆಲವು ಕಂಪ್ಯೂಟರ್ ಸೈನ್ಸ್‍ನ ಗೆಳೆಯರು “ಟ್ರೂ ಲೈಸ್” ಎಂಬ ಇಂಗ್ಲೀಷ್ ಸಿನಿಮಾವನ್ನು ನೋಡಲು ಆಗಿದ್ದ “ರೇಣುಕಾ” ಥೀಯೆಟರ್‍ಗೆ ನಡೆದುಕೊಂಡೇ ಹೋಗಿದ್ದೆವು. ಟೌನ್ ಹಾಲ್ ನಿಂದ ನಡೆದು ರೈಲ್ವೇ ಸ್ಟೇಷನ್ ಮಾರ್ಗವಾಗಿ ಉಪ್ಪಾರಹಳ್ಳಿ ರೈಲ್ವೇ ಗೇಟನ್ನು ದಾಟಿ ಶೆಟ್ಟಿಹಳ್ಳಿಯ ರೇಣುಕಾ ಥೀಯೆಟರ್‍ಗೆ ಹೋಗುವುದೆಂದೂ, ಮೂರು ರೂಪಾಯಿ ಆಟೋ ಛಾರ್ಜನ್ನು ಉಳಿಸುವುದೆಂದೂ ನಾವೆಲ್ಲ ನಿರ್ಧರಿಸಿದ್ದೆವು. ಏಕೆಂದರೆ ಮತ್ತೇಳು ರೂಪಾಯಿಗೆ ಸಿನಿಮಾ ಟಿಕಿಟೇ ಬಂದು ಬಿಡುತ್ತಿತ್ತು! ಪದವಿಯಲ್ಲಿದ್ದಾಗಲು ಬಹಳ ಸಂಕೋಚದಿಂದಲೇ ನಗರದ ಗೆಳೆಯರೊಂದಿಗೆ ಬೆರೆಯುತ್ತಿದ್ದ ನಾವೊಂದಿಷ್ಟು ಹಳ್ಳಿಯ ಕಡೆಯ ಹುಡುಗರಿಗೆ ಮೂರು ರೂಪಾಯಿಯೂ ಬಹಳ ದೊಡ್ಡ ಮೊತ್ತವಾಗಿತ್ತು. ಅಂದು ನಮ್ಮ ತುಮಕೂರಿನ ಗೆಳೆಯರಲೊಬ್ಬ ನಾವಿನ್ನೇನು ಉಪ್ಪಾರಹಳ್ಳಿ ರೈಲ್ವೇ ಗೇಟನ್ನು ದಾಟಿ, ಎಡಕ್ಕೆ ಚಲಿಸಿ ಶೆಟ್ಟಿಹಳ್ಳಿಯ ಕಡೆಗೆ ಹೋಗುವಾಗ ಅಲ್ಲಿದ್ದ ಒಂದು ದೊಡ್ಡ ಹಳೆಯ ಕಟ್ಟಡವನ್ನು ತೋರಿಸಿ ಇದು ಕುಮಾರ ಇರೋ ಚನ್ನಂಜಪ್ಪ ಹಾಸ್ಟೆಲ್ ಎಂದು ಹೇಳಿದ್ದ. ಅದು ಗುಬ್ಬಿಯ ಬಳಿಯ ಸುಗ್ಗನಪಾಳ್ಯ ಎಂಬ ಹಳ್ಳಿಯಿಂದ ಬಂದರೂ ಶ್ರಮದಿಂದ ಓದಿ ಗುಬ್ಬಿಯ ಪಿ.ಯು.ಕಾಲೇಜಿನಲ್ಲಿ ಸೈನ್ಸ್ ನಲ್ಲಿ ಪಾಸಗಿ ನಮ್ಮ ಕಾಲೇಜಿನಲ್ಲೇ ರಸಾಯನ ಶಾಸ್ತ್ರವನ್ನು ಐಚ್ಚಿಕವಾಗಿ ಪದವಿಯಲ್ಲಿ ಓದುತ್ತಿದ್ದ ಪ್ರತಿಭಾವಂತ ಗೆಳೆಯ ಕುಮಾರನದಾಗಿತ್ತು. ಗಣಿತ ಮತ್ತು ಭೌತಶಾಸ್ತ್ರದ ತರಗತಿಗಳಲ್ಲಿ ನಮ್ಮ ಜೊತೆಯೇ ಇರುತ್ತಿದ್ದ ಅವನು ತನ್ನ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ರಸಾಯನ ಶಾಸ್ತ್ರದ ತರಗತಿಗಳಿಗೆ ಮಾತ್ರ ನಮ್ಮಿಂದ ದೂರವಾಗುತ್ತಿದ್ದ. ರಸಾಯನವನ್ನು ಮಾತ್ರ ಇಷ್ಟಪಡುವ ನಮಗೆ ಇವನು ಅದರ ಶಾಸ್ತ್ರವನ್ನೂ ಇಷ್ಟಪಡುತ್ತಿದುದು ಅಚ್ಚರಿಯ ಸಂಗತಿಯಾಗಿತ್ತು. ಅವನು ಬಿಡುವಾದ ವೇಳೆಯಲ್ಲಿ ಸಿಕ್ಕಾಗ, ಹೇಗಿದೆಯಮ್ಮ ನಿಮ್ಮ ಹಾಸ್ಟೆಲ್ ಎಂದು ಕೇಳಿದರೆ, ಪರವಾಗಿಲ್ಲ ಕಣಮ್ಮಾ, ಆಗಾಗ ಅನ್ನದಲ್ಲಿ ಕಲ್ಲು, ಸಾರಿನಲ್ಲಿ ಹುಳ ಸಿಗುತ್ತಿರುತ್ತೆ. ಏನ್ಮಾಡದಪ್ಪ ನಂಗೆ ಹಳ್ಳಿಯಿಂದ ಓಡಾಡಿಕೊಂಡು ಓದೋಕೆ ಆಗಲ್ಲ ಅಂತಾ ತನ್ನ ಬೇಸರವನ್ನು ಹೇಳಿಕೊಳ್ಳುತ್ತಿದ್ದ.

ನಂತರ ಅಷ್ಟಾಗಿ ಉಪ್ಪಾರಹಳ್ಳಿಯ ರೈಲ್ವೆ ಗೇಟಿನ ಕಡೆ ಬರದ ನಾನು ಕಳೆದ ಐದು ವರ್ಷಗಳ ಹಿಂದೆ, ಕೆಲಸದ ಸಲುವಾಗಿ ತುಮಕೂರಿನ ಶಾಂತಿನಗರದಲ್ಲಿ ಮನೆ ಮಾಡಿಕೊಂಡಾಗ, ಉಪ್ಪಾರಹಳ್ಳಿಯ ಪಕ್ಕದಲ್ಲೇ ಇದ್ದ ಶಾಂತಿನಗರಕ್ಕೂ ಮತ್ತು ಎಸ್.ಎಸ್.ಪುರಂನಲ್ಲಿದ್ದ ನಮ್ಮ ಬ್ಯಾಂಕಿಗೂ ಮಧ್ಯೆ ಒಂದು ಸೇತುವೆಯಂತೆ ಈ ರೈಲ್ವೇ ಗೇಟ್ ಕಾರ್ಯನಿರ್ವಹಿಸತೊಡಗಿತು. ಆಗಿನ್ನೂ ನನ್ನ ಬಳಿ ಟೂ ವೀಲರ್ ಇರಲಿಲ್ಲವಾದ್ದರಿಂದ ಹಲವು ಬಾರಿ ರೈಲ್ವೇ ಸ್ಟೇಷನ್ ಪಕ್ಕಕ್ಕೇ ಇದ್ದ ಗೂಡ್ ಶೇಡ್ ಕಾಲೋನಿಯ ಸಂದಿಯ ಮೂಲಕ ರೈಲ್ವೇ ಹಳಿಗಳನ್ನು ದಾಟಿ ಬ್ಯಾಂಕಿಗೂ ಮನೆಗೂ ಓಡಾಡುತ್ತಿದ್ದರಿಂದ ಅಷ್ಟಾಗಿ ಉಪ್ಪಾರಹಳ್ಳಿಯ ರೈಲ್ವೇಗೇಟಿನ ಮುಖಾಂತರ ಓಡಾಡುವ ಪ್ರಸಂಗವೂ ಬರುತ್ತಿರಲಿಲ್ಲ. ತಿಂಗಳಿಗೊಮ್ಮೆ ಆಟೋದಲ್ಲಿ ರೇಷನ್ ತೆಗೆದುಕೊಂಡು ಮನೆಗೆ ಹೋಗುವಾಗಲೋ, ಅಥವಾ ಯಾರಾದರೂ ನಮ್ಮ ಏರಿಯಾದಲ್ಲಿದ್ದ ಸಹೋದ್ಯೋಗಿ ಮಿತ್ರರು ಡ್ರಾಪ್ ನೀಡುತ್ತೇನೆಂದು ಹೇಳಿದಾಗ ಮಾತ್ರ ಉಪ್ಪಾರಹಳ್ಳಿಯ ರೈಲ್ವೇಗೇಟನ್ನು ದಾಟಿ ಹೋಗುವ ಪ್ರಸಂಗ ಬರುತ್ತಿತ್ತು. ಆಗೆಲ್ಲಾ ಒಂದೇ ಟ್ರಾಕ್ ಇದ್ದುದರಿಂದ ಮತ್ತು ಅಪರೂಪಕ್ಕೊಮ್ಮೆ ಆ ದಾರಿಯಲ್ಲಿ ಓಡಾಡುತ್ತಿದ್ದುದರಿಂದಲೋ ಏನೋ ರೈಲ್ವೇಗೇಟಿನ ನಿಜ ಸ್ವರೂಪ ಅಷ್ಟಾಗಿ ನನ್ನ ಗಮನಕ್ಕೆ ಬಂದಿರಲಿಲ್ಲ. ಆಗಿನ್ನೂ ಡಬ್ಬಲ್ ಟ್ರ್ಯಾಕ್ ಹಾಕುವ ಕಾರ್ಯ ಪ್ರಗತಿಯಲ್ಲಿತ್ತು. ಮತ್ತು ಶೀಘ್ರದಲ್ಲೇ ಮೇಲ್ಸೆತುವೆ ಕಾರ್ಯ ಶುರುವಾಗುವುದೆಂದು ಸುದ್ದಿಯಾಗುತ್ತಿತ್ತು.

ಒಮ್ಮೊಮ್ಮೆ ಬ್ಯಾಂಕಿನಲ್ಲಿ ತಡವಾಗಿ ತುಂಬಾ ಕತ್ತಲಾದಾಗ ನಮ್ಮ ಮನೆಯ ಹತ್ತಿರವೇ ಇದ್ದ ಸಹೋದ್ಯೋಗಿ ಮಿತ್ರ ಚಿದುವಿನ ಜೊತೆ ರಾತ್ರಿಯಲ್ಲಿ ಅಷ್ಟು ಸುರಕ್ಷಿತವಲ್ಲದ ಹತ್ತಿರದ ಕಾಲುದಾರಿಯನ್ನು ಬಿಟ್ಟು ಉಪ್ಪಾರಹಳ್ಳಿಯ ರೈಲ್ವೇಗೇಟಿನ ಮುಖಾಂತರ ನಡೆದುಕೊಂಡೇ ಮನೆ ಸೇರುತ್ತಿದ್ದೆ. ಆಗ ಗೇಟ್ ಹಾಕಿದ್ದರೂ ನಮಗೇನು ತೊಂದರೆ ಇರುತ್ತಿರಲಿಲ್ಲ. ಗೇಟಿನ ಪಕ್ಕದಲ್ಲೇ ಇರುತ್ತಿದ್ದ ಜಾಗದಲ್ಲಿ ಹಳಿಗಳನ್ನು ದಾಟಿ ಮನೆ ಸೇರಿಕೊಂಡು ಬಿಡುತ್ತಿದ್ದವು. ಆಗೆಲ್ಲಾ ರೈಲ್ವೇಗೇಟಿನ ಮುಖಾಂತರ ಹಾದು ಹೋಗಲು ಕಾಯುತ್ತಿದ್ದ ವಾಹನಗಳ ಆತುರತೆ ನಮ್ಮ ನೋಟಕ್ಕಷ್ಟೇ ಸೀಮಿತವಾಗಿತ್ತು. ಮಾತಾಡಿಕೊಂಡೇ ಮನೆ ಸೇರುತ್ತಿದ್ದ ನಮ್ಮ ಮಾತುಗಳಲ್ಲಿ ಆ ಗೇಟಿನ ಆಸುಪಾಸಿನಲ್ಲಿ ನಡೆದ ಘಟನೆಗಳ ಬಗ್ಗೆಯೂ ನಮ್ಮ ಮಾತು ವಿಸ್ತರಿಸುತ್ತಿತ್ತು.

ಹಿಂದೊಮ್ಮೆ ಗೇಟಿನ ಬಳಿಯೇ ಇರುವ ಬಾರಿನಲ್ಲಿ ಕುಡಿದುಕೊಂಡು ಹೋಗುತ್ತಿದ್ದವನೊಬ್ಬ, ಜೊತೆಯಲ್ಲಿ ಹೋಗುತ್ತಿದ್ದ ದಂಪತಿಗಳನ್ನು ಚುಡಾಯಿಸಿ ಒದೆ ತಿಂದಿದ್ದ ಪ್ರಸಂಗ ಕೋರ್ಟ್ ಮೆಟ್ಟಿಲ್ಲನೇರಿ ಅದಕ್ಕೆ ನನ್ನ ಗೆಳೆಯರೂ ಸಾಕ್ಷಿಯಾದ ಘಟನೆ, ಮತ್ತು ಎತ್ತಿನ ಕೈಯಲ್ಲಿ ತಿವಿಸಿಕೊಂಡ ಉಪ್ಪರಾಹಳ್ಳಿಯವನೊಬ್ಬನನ್ನು ಆಟೋದಲ್ಲಿ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ಗೇಟ್ ಹಾಕಿದ್ದರಿಂದ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದು ರೈಲ್ವೇಗೇಟಿನ ಬಳಿ ನಡೆದ ಪ್ರಮುಖ ಆವಾಂತರಗಳಾಗಿದ್ದವು. ಈ ಘಟನೆಗಳನ್ನು ಅವರು ಹೇಳುತ್ತಿದ್ದರೆ ಯಾರದರೂ ಗರ್ಭಿಣಿಯನ್ನು ಹೆರಿಗೆಗಾಗಿ ಕರೆದುಕೊಂಡು ಹೋಗುವ ಸಮಯಕ್ಕೆ ಸರಿಯಾಗಿ ಏನಾದರೂ ಗೇಟ್ ಹಾಕಿಬಿಟ್ಟಿದ್ದರೆ ಏನ್ಮಡ್ತಾರಪ್ಪ ಎಂದು ನಾನು ಚಿಂತಿಸುತ್ತಿದ್ದೆ.

ಮೂರುವರ್ಷಗಳ ಹಿಂದೆ ನಾನು ಹೊಂಡ ಆಕ್ಟೀವಾವನ್ನು ತೆಗೆದುಕೊಂಡ ದಿನದಿಂದ ಉಪಾರಹಳ್ಳಿಯ ರೈಲ್ವೇಗೇಟಿನ ನಿಜ ಮುಖದ ಪರಿಚಯವಾಗತೊಡಗಿತು. ಆ ಸಮಯಕ್ಕೆ ಅದಾಗಲೇ ತುಮಕೂರು ಬೆಂಗಳೂರಿನ ನಡುವೆ ಡಬ್ಬಲ್ ಟ್ರ್ಯಾಕಿನ ಕಾರ್ಯ ಮುಗಿದು, ಎರಡೂ ಟ್ರ್ಯಾಕ್ ಗಳಲ್ಲಿ ರೈಲುಗಳು ಓಡಾಡಲು ಶುರುವಾಗಿದ್ದವು. ಮೇಲ್ಸೆತುವೆ ಕಾಮಗಾರಿಯೂ ಶುರುವಾಗಿತ್ತು. ಅಂದಿನಿಂದ ಉಪ್ಪಾರಹಳ್ಳಿಯ ರೈಲ್ವೇ ಗೇಟನ್ನು ದಾಟುವ ಆತುರ ನನ್ನದಾಯಿತು.

ಬೆಳಿಗ್ಗೆ ಹತ್ತೂ ಕಾಲಿಗೆ ಬ್ಯಾಂಕಿಗೆ ಹೋಗಬೇಕು. ತರಾತುರಿಯಲ್ಲಿ ಸಿದ್ದವಾಗಿ ಇನ್ನೇನು ಮನೆಯಿಂದ ಹೊರಟೆ ಎನ್ನುವಷ್ಟರಲ್ಲಿ “ಢಣ್ ಢಣ್” ಎಂದು ಗಂಟೆಯ ಶಬ್ಢ ಕೇಳಿಸಿತೆಂದರೆ ಅದು ಮುಲಾಜಿಲ್ಲದೆ ಉಪ್ಪಾರಹಳ್ಳಿಯ ರೈಲ್ವೇ ಗೇಟ್‍ನದ್ದೆ! ಅಲ್ಲಿಗೆ ಸರಿಯಾದ ಟೈಮಿಗೆ ಬ್ಯಾಂಕಿಗೆ ಇವತ್ತಾದರೂ ಹೋಗುತ್ತೇನೆಂಬುದು ಕನಸಾಗಿಬಿಟ್ಟಿರುತ್ತದೆ. ರೈಲ್ವೇ ಗೇಟ್ ತಲುಪುವಷ್ಟರಲ್ಲಿ ಸ್ಕೂಲಿಗೆ, ಆಫೀಸಿಗೆ, ಮತ್ತ್ಯಾವುದೋ ಕೆಲಸಕ್ಕೆ ಹೊರಟವರ ವಾಹನಗಳ ಸಂತೆಯೇ ರೈಲ್ವೇ ಗೇಟಿನ ಬಳಿ ಸೇರಿರುತ್ತದೆ. ನಮ್ಮ ಪುಣ್ಯಕ್ಕೆ ಒಂದೇ ರೈಲು ಬಂದಿತೆಂದರೆ ಓಕೆ. ಬಚಾವ್! ಇಲ್ಲಾ, ಆ ಕಡೆಯಿಂದ ಒಂದು, ಈ ಕಡೆಯಿಂದ ಒಂದು, ಅದೂ ಇಲ್ಲ ಒಂದು ಉದ್ದನೆಯ ಗೂಡ್ಸ್ ಬಂತೆಂದರೆ ಮುಗಿಯಿತು. ಇನ್ನು ಮೇಲೆ ಏನಾದರೂ ಮಾಡಿ ಒಂದೈದು ನಿಮಿಷ ಬೇಗ ಮನೆ ಬಿಡಬೇಕು ಎಂಬ ದಿನನಿತ್ಯದ ರೆಸಲ್ಯೂಷನ್ ನವೀಕರಣಗೊಂಡಿರುತ್ತದೆ.

ಅಂತೂ ಇಂತೂ ರೈಲು ಬಂತು ಎಂಬಂತಾಗಿ ಗೇಟ್ ತೆಗೆದರೆಂದರೆ, ನಾಮುಂದು ತಾಮುಂದು ಎಂದು ತಮ್ಮ ತಮ್ಮ ವಾಹನಗಳನ್ನು ನುಗ್ಗಿಸಿಕೊಂಡು ಎಲ್ಲರಿಗಿಂತ ಮುಂದಾಗಿ ರೈಲ್ವೇ ಗೇಟನ್ನು ದಾಟಿಬಿಡುವ ಪ್ರಯತ್ನದಲ್ಲಿ ಎಲ್ಲರೂ ಮುಳುಗಿಬಿಡುತ್ತಾರೆ. ಈ ಪ್ರಕ್ರಿಯೆ ಗೇಟಿನ ಎರಡೂ ತುದಿಗಳಿಂದ ನಡೆಯುವುದರಿಂದ ಎರಡೂ ಕಡೆಯವರಿಗೂ ಘನಘೋರ ಯುದ್ಧ ಶುರುವಾಗುವಂತೆ ತೋರುತ್ತಿರುತ್ತದೆ. ಯಾರು ದಾಟಿದರೆಷ್ಟು, ಬಿಟ್ಟರೆಷ್ಟು ನಾನಂತೂ ದಾಟಿಬಿಡಬೇಕೆನ್ನುವ ಎಲ್ಲರ ಮನೋಭಾವ ನಾನೊಬ್ಬ ಬದುಕಿದರೆ ಸಾಕೆಂಬಂತಿರುತ್ತದೆ. ಇವೆಲ್ಲದಕ್ಕೂ ಹಿಮ್ಮೆಳವೆಂಬಂತೆ ಕಿವಿಗಡಚಿಕ್ಕುವ ಹಾರನ್‍ಗಳು ಮೊಳಗಿರುತ್ತವೆ.

ಬೆಳಿಗ್ಗೆ ಬ್ಯಾಂಕಿಗೆ ಹೋಗುವಾಗ ಒಂದು ಕಥೆಯಾದರೆ, ಮಧ್ಯಾಹ್ನ ಊಟಕ್ಕೇನಾದರೂ ಮನೆಗೆ ಹೋಗೋಣವೆಂದುಕೊಂಡು ಬಂದರೆ ಆವಾಗ ರೈಲ್ವೇಗೇಟ್ ಹಾಕಿದ್ದರೆ ಹೊಟ್ಟೆಹಸಿವಿನ ಕಥೆ ಶುರುವಾಗುವುದು ಮತ್ತೊಂದು ಕಥೆ. ಮತ್ತೆ ಊಟ ಮುಗಿಸಿ ಹೋಗುವಾಗ ಸರಿಯಾದ ಸಮಯಕ್ಕೆ ಬೆಂಗಳೂರಿನಿಂದ ತುಮಕೂರಿಗೆ ಬರುವ ಪುಶ್ ಪುಲ್ ತಪ್ಪದೆ ಬರುತ್ತದೆ. ಅದು ದಿನನಿತ್ಯದ ಕಥೆ.

ಇತ್ತ ಸಂಜೆ ಏನಾದರೂ ಹೆಂಡತಿ “ರೀ ಬೇಗ ಮನೇಗ್ ಬನ್ನಿ” ಎಂದು ಹೇಳಿದ್ದರೆ, ನನಗೇ ಹೇಳಿದ್ದೇನೋ ಎಂಬಂತೆ ಯಾವುದಾದರೂ ರೈಲು ಬಂದೇ ಬರುತ್ತದೆ. ತಡವಾಗಿ ಮನೆಗೆ ಹೋದಾಗ ಹೆಂಡತಿಯ ರುದ್ರ ದರ್ಶನವೂ ಆಗುತ್ತದೆ. ಮತ್ತಿನ್ಯಾವಾಗಲಾದರೂ ಎಲ್ಲಾದರೂ ಹೊರಗಡೆ ಹೋಗಬೇಕೆಂದು ಕೊಂಡು ಸಿಟಿಗೆ ಹೊರಟ್ಟಿದ್ದರೆ ಯಾವುದಾದರೂ ರೈಲಿನ ದರ್ಶನ ಪಡೆದೇ ಹೋಗಬೇಕು.

ಅಲ್ಲಿಗೆ ಈ ದಿನಚರಿ ದಿನದ ಇಪ್ಪತ್ತನಾಲ್ಕು ಘಂಟೆ, ವಾರದ ಏಳೂ ದಿನ, ತಿಂಗಳ ನಾಲ್ಕೂ ವಾರಗಳು, ವರ್ಷದ ಮುನ್ನೂರ ಅರವತ್ತೈದು ದಿನಗಳು ಚಾಚೂ ತಪ್ಪದೆ ನಡೆಯುತ್ತದೆ. ಬೇಕೆಂದರೆ 24 x 7 ಎಂದುಕೊಳ್ಳಿ. ಆದುದರಿಂದ ಇದುವರೆವಿಗೂ ಇಲ್ಲಿ ನನಗಾದ ವಿಶೇಷ ಅನುಭವಗಳನ್ನು ಮಾತ್ರ ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.

ಒಮ್ಮೊಮ್ಮೆ ರೈಲ್ವೇಗೇಟ್ ಹಾಕಿದ ಸಮಯಕ್ಕೆ ಸರಿಯಾಗಿ ನಾನೂ ಹೋಗಿ ಗೇಟಿನ ಮುಂಭಾಗದಲ್ಲಿ ಮೊದಲನೆಯವನಾಗಿ ಸಿಕ್ಕಿಕೊಂಡು ನಿಂತ ಅನುಭವಗಳು ಹಲವಾರಿವೆ. ಒಂದು ದಿನ ಇದೇ ರೀತಿ ನಿಂತು ಕೊಂಡಿದ್ದಾಗ ನನ್ನಂತೆಯೇ ಎದುರಿನಿಂದ ಬಂದ ಆನೆಯಾಕಾರದ ಸೀಮೆ ಹಸುವೊಂದು ತನ್ನ ದಾರಿಗೆ ಅಡ್ಡಾಲಾಗಿ ಬಂದ ಗೇಟನ್ನು ಗುದ್ದಿ ತನಗೇನೋ ಅರಿವಾದಂತೆ ಮುಗ್ಧವಾಗಿ ನಿಂತುಬಿಟ್ಟಿತ್ತು. ಅಯ್ಯೋ ನನ್ನ ಕ್ಯಾಮರವನ್ನು ತಂದಿದ್ದರೆ ಒಂದು ಅತ್ಯುತ್ತಮ ಚಿತ್ರ ದಾಖಲಾಗುತ್ತಿತ್ತಲ್ಲ ಎಂದು ಮರುಗಿಕೊಂಡೆ. ಆದರೂ ಅದು ನನ್ನ ಸ್ಪೃತಿಪಟಲದಲ್ಲಿ ಶಾಶ್ವತವಾಗಿ ಅಚ್ಚಾಗಿದೆ. ಮತ್ತೊಂದು ಮರೆಯಲಾಗದ ಅನುಭವವೆಂದರೆ ಹೀಗೆಯೇ ಮತ್ತೊಮ್ಮೆ ಆದಾಗ ನನ್ನ ಜೇಬಿನಲ್ಲಿದ್ದ ಕೆ. ಗಣೇಶ್ ಕೋಡೂರ್ ರವರ “ಒನ್ ಮಿನಿಟ್ ಸಕ್ಸಸ್” ಎಂಬ ಪುಟ್ಟ ಪುಸ್ತಕವನ್ನು ತೆಗೆದುಕೊಂಡು ಬಹಳಷ್ಟು ಭಾಗವನ್ನು ಅಲ್ಲಿಯೇ ಓದಿಬಿಟ್ಟಿದ್ದೆ. ನಂತರ ರೈಲು ಬಂದಾಗ ತಲೆಯೆತ್ತಿ ನೋಡಿದರೆ ನನ್ನ ಪಕ್ಕದಲ್ಲಿದ್ದವನು ನನ್ನ ಕಡೆಗೆ ನೋಡಿ ನಗುತ್ತಿದ್ದ!

ಇತ್ತೀಚಿಗಷ್ಟೇ ನಡೆದ ಘಟನೆಯೆಂದರೆ, ನಾನು ಮತ್ತು ನನ್ನ ಗೆಳಯರೊಬ್ಬರು ಮಧ್ಯಾಹ್ನದ ಊಟ ಮುಗಿಸಿ ಬ್ಯಾಂಕಿಗೆ ಹಿಂತಿರುಗುವ ಸಮಯಕ್ಕೆ ಸರಿಯಾಗಿ ಪುಶ್-ಪುಲ್ ರೈಲು ಬರುವ ಸಮಯವಾದ್ದರಿಂದ ಗೇಟ್ ಹಾಕಿಬಿಟ್ಟಿತ್ತು. ಆಗ ಅಲ್ಲಿ ಎಲ್ಲರಿಗಿಂತಲೂ ಮೊದಲು ನಿಂತದ್ದು ಒಂದು ದೊಡ್ಡ ಬುಲ್ಡೋಜಾರ್! ಅದರ ಹಿಂಭಾಗದ ಚಕ್ರಗಳು ಟೈರಿನದಾಗಿದ್ದು ಇವುಗಳು ಪಂಕ್ಚರಾದರೆ ಏನುಮಾಡುತ್ತಾರೆ ಎಂಬ ಪ್ರಶ್ನೆ ನನ್ನ ತಲೆಯಲ್ಲಿ ಕೊರೆಯಲಾರಂಭಿಸಿತು. ಇದೇ ಪ್ರಶ್ನೆಯನ್ನು ನಂತರ ನನ್ನ ಗೆಳೆಯರಿಗೆ ಕೇಳಲಾಗಿ, ಅವರು ಅದೇ ಪ್ರಶ್ನೆ ತಮಗೂ ಕಾಡುತ್ತಿತ್ತು ಎಂಬಂದು ತಮಾಷೆಯಾಗಿ, ನಂತರ ಗೆಳಯರೊಬ್ಬರಲ್ಲಿ ವಿಚಾರಿಸಿ ಆ ಟೈರುಗಳಿಗೆ ಪಂಕ್ಚರ್ ಹಾಕುವ ಪ್ರಮಯವೇ ಬರುವುದಿಲ್ಲವೆಂಬ ವಿಷಯ ತಿಳಿದು ನಮ್ಮ ಸಾಮಾನ್ಯ ಜ್ಞಾನವೂ ಹೆಚ್ಚಿತು.

ಈ ರೀತಿಯ ಹಲವು ಪ್ರಸಂಗಗಳಿಗೆ ಕಳಶವಿಟ್ಟಂತೆ ನಡೆದ ಘಟನೆಯೆಂದರೆ: ಒಂದು ಸುಂದರ ಸಂಜೆ ನಾನು ಮನೆಗೆ ಹೋಗುವ ಸಮಯಕ್ಕೆ ಸರಿಯಾಗಿ ರೈಲ್ವೇಗೇಟ್ ಹಾಕಲಾಗಿ ಅದಾಗಲೇ ಹಲವಾರು ವಾಹನಗಳು ಜಮಾಯಿಸಿ ಬಹಳ ಹೊತ್ತಾಗಿತ್ತು. ನಾನು ಸ್ವಲ್ಪ ದೂರದಲ್ಲೇ ನನ್ನ ಆಕ್ಟಿವಾವನ್ನು ನಿಲ್ಲಿಸಿ ಅದರ ಮೇಲಿಂದಲೇ ಸುತ್ತಮುತ್ತಲಿನ ಚಟುವಟಿಕೆಗಳನ್ನು ತನ್ಮಯನಾಗಿ ನೋಡುತ್ತಾ ಕುಳಿತಿದ್ದೆ. ಅಲ್ಲಿ ವಾಹನಗಳ ಜಾತ್ರೆಯೇ ಸೇರಿದ್ದರೂ, ಎಲ್ಲಾ ಸಮಯಕ್ಕಿಂತಲೂ ಸಂಜೆ ಹೊತ್ತಿನಲ್ಲಿ ಸ್ವಲ್ಪ ಸಮಾಧಾನದಿಂದ ಇರುವಂತೆ ಜನ ಕಾಣುತ್ತಿದ್ದರು. ಒಂದು ರೈಲು ಬಂತು, ಹೋಯ್ತು. ಇನ್ನೇನು ಗೇಟ್ ತೆಗೆಯುತ್ತಾರೆ ಎಂದು ಎಲ್ಲಾ ವಾಹನಗಳು ಸ್ಟಾರ್ಟ್ ಆದವು. ಹಾರನ್ ಮಾಡ ತೊಡಗಿದವು. ಆದರೆ, ಬಹಳ ಹೊತ್ತಾದರೂ ಗೇಟ್ ತೆಗೆಯಲೇ ಇಲ್ಲ. ಅಲ್ಲಿಗೆ ಇನ್ನೊಂದು ರೈಲು ಬರುವುದು ಖಚಿತವಾಯಿತು. ಆದುದರಿಂದ ಎಲ್ಲಾ ವಾಹನಗಳು ಆಫ್ ಆದವು. ಕ್ಷಣದಲ್ಲೇ ಅಲ್ಲೆಲ್ಲಾ ಸ್ಮಶಾನ ಮೌನ ಆವರಿಸಿತು. ನನ್ನ ಗಮನ ಅಲ್ಲಿದ್ದ ಬಿಳಿ ಅಂಬಾಸಿಡರ್ ಕಾರಿನ ಕಡೆ ಹರಿಯಿತು. ಮೈ ತೊಳೆದ ಎತ್ತಿನಂತೆ ಆ ಕಾರು ನಿಂತಿತ್ತು. ಅದರ ಹಿಂಭಾಗದಲ್ಲಿ “ಅಲ್ಲಮ” ಎಂದು ಬರೆದಿತ್ತು. ಯಾರೋ ಕವಿಮಹಾಶಯನೇ ಇರಬೇಕು ಎಂದು ಕೊಂಡೆ. ನಂತರ ನನ್ನ ಗಮನ ಸ್ಕೂಟಿ ಮೇಲಿದ್ದ ಒಬ್ಬಳು ಹುಡುಗಿಯ ಕಡೆಗೆ ಹರಿಯಿತು. ಬರಬೇಕಾಗಿದ್ದ ಬಾಯ್ ಫ್ರೆಂಡ್ ಎಷ್ಟು ಹೊತ್ತಾದರೂ ಬರಲಿಲ್ಲವೆನೋ ಎಂದು ಆಕೆ ಚಡಪಡಿಸಿದಂತೆ ಕಾಣುತ್ತಿತ್ತು. ಗೇಟ್ ತೆಗೆಯದಿದ್ದರೆ ಹಾರಿಸಿಕೊಂಡು ಹೋಗುವಂತೆ ಆ ಕಡೆ, ಈ ಕಡೆ, ಯಾವ ಕಡೆ ರೈಲು ಬರ್ತಿದೆ ಎಂದು ನೋಡುತ್ತಾ ತವಕಿಸುತ್ತಿದ್ದಳು. ಒಂದೇ ರೈಲಿಗೆ ಸುಸ್ತಾಗಿದ್ದ ಜನ ಮತ್ತೊಂದು ರೈಲು ಬರುವುದು ಖಚಿತವಾದಂತೆ ತಮ್ಮ ತಮ್ಮ ಗಾಡಿಗಳ ಮೇಲೆ ಧ್ಯಾನಸ್ಥರಾದರು. ಕೆಲವರು ತೂಕಡಿಸಲಿರಲಿಕ್ಕೂ ಸಾಕು! ಅದಾಗ ಉಂಟಾದ ಮೌನದ ವಾತಾವರಣ ನನಗೆಕೋ ಹೆಚ್ಚು ಆಪ್ತವಾಯಿತು. ಆ ಜಾಗದಲ್ಲೇ ಹಲವು ವರುಷಗಳಿಂದ ಜೀವಿಸುತ್ತಿದ್ದಿವೇನೋ ಎಂಬ ಭಾವ ಮನದಲ್ಲಿ ಇಣುಕಿತು. ಆಗ “ಕುಹೂ... ಕುಹೂ...” ಎಂಬ ಕೋಗಿಲೆಯೆ ಹಾಡು ಉಪ್ಪಾರಹಳ್ಳಿಯ ಕಡೆಯಿಂದ ತೇಲಿಬಂದು ನನ್ನನ್ನು ಮೂಕವಿಸ್ಮಿತನಾಗಿಸಿತು. ಅದನ್ನು ಉಪ್ಪಾರಹಳ್ಳಿಗೆ ಹೊಂದಿಕೊಂಡಂತೆಯೇ ಇದ್ದ ಶಾಂತಿನಗರದ ನಮ್ಮ ಮನೆಯಿಂದಲೇ ಬಂದ ನನ್ನ ಹೆಂಡತಿಯ ಕರೆ ಎಂದು ನಾನು ಭಾವಿಸಿದೆ ಮತ್ತು ಮುಗುಮ್ಮಾಗಿ ನಕ್ಕೆ.

ಆ ಕ್ಷಣ ಮೈಮರೆತಿದ್ದವನಿಗೆ ರೈಲು ಬರುವ ಎಲ್ಲಾ ಸೂಚನೆಗೆಳು ಸಿಕ್ಕಿ ರೈಲು ಬಂದೇ ಬಿಟ್ಟಿತು. ಅಲ್ಲಿಯವರೆವಿಗೂ ತಪೋನಿರತರಾಗಿದ್ದ, ತೂಕಡಿಸುತ್ತಿದ್ದ ಎಲ್ಲಾ ವಾಹನ ಸವಾರರುಗಳು ತಮ್ಮ ತಮ್ಮ ವಾಹನವನ್ನು ಸ್ಟಾರ್ಟ್ ಮಾಡಿಕೊಂಡು ದಿನನಿತ್ಯದ ಯುದ್ಧಕ್ಕೆ ಸಜ್ಜಾದರು. ಗೇಟ್ ತೆಗೆಯುತ್ತಿದ್ದಂತೆ ಮಿಂಚಿನಂತೆ ಸ್ಕೂಟಿ ಮೇಲಿದ್ದ ಹುಡುಗಿ ಮಾಯವಾದಳು. “ಅಲ್ಲಮ” ಅಂಬಾಸಿಡರ್ ಕಾರ್ ಮುಂದೆ ಹೋಗಿ ಯಾಕೋ ಹಿಮ್ಮುಖವಾಗಿ ನಿಧಾನವಾಗಿ ಚಲಿಸತೊಡಗಿತು. ಅದಕ್ಕೆ ಗೇಟಿನ ಬಳಿ ಇದ್ದ ಏರನ್ನು ಏರಲಾಗಿರಲಿಲ್ಲ. ಚಕ್ಕನೆ ಬ್ರೇಕ್ ಹಾಕಿ ನಿಂತ ಕಾರಿನಿಂದ ಇಳಿದವರನ್ನು ನೋಡಿದೆ. ಹೌದು. ಅವರು ನಾನು ಭಾವಿಸಿದಂತೆ ಕವಿಯೇ ಆಗಿದ್ದರು. ಅವರು ಕಾರನ್ನು ಮುಂದೆ ಚಲಿಸಲು ಅನುವಾಗುವಂತೆ ಡ್ರೈವರನಿಗೆ ಕೆಲವು ಸೂಚನೆಗಳನ್ನು ಕೊಟ್ಟರು. ಕಾರು ಸ್ವಲ್ಪ ಮುಂದೆ ಹೋದ ಮೇಲೆ ಮತ್ತೆ ಹತ್ತಿ ಕುಳಿತರು. “ಅಲ್ಲಮ” ಮುಂದೆ ಚಲಿಸಿತು. ಆವಾಗ ಹಿಂದೊಮ್ಮೆ ಬಸ್ಸೊಂದು ಹಿಮ್ಮುಖವಾಗಿ ಚಲಿಸಿ ಅದರ ಹಿಂಭಾಗದಲ್ಲಿ ಆಟೋವೊಂದು ಸಿಲುಕಿ ನುಜ್ಜುಗುಜ್ಜಾಗಿದ್ದು ನೆನಪಿಗೆ ಬಂದಿತು. ಸದ್ಯ ಅಂತದ್ದೇನೂ ಸಂಭವಿಸಲಿಲ್ಲ. ನಂತರ ಎಲ್ಲಾ ವಾಹನಗಳು ಹೋಗಿಬಿಡಲಿ ಎಂದು ಕ್ಷಣಕಾಲ ಕಾದು ನಿಂತ ನಾನು ಗೇಟ್ ದಾಟಿ ಮನೆಗೆ ಹೋದೆ. ಅಂದಿನಿಂದ ಇಂದಿನವರೆವಿಗೂ ಉಪ್ಪಾರಹಳ್ಳಿಯ ರೈಲ್ವೇ ಗೇಟಿನ ಕುಹೂ ಕುಹೂ ನನ್ನೆದೆಯಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ.

ಇತ್ತೀಚಿನ ದಿನಗಳಲ್ಲಿ ನನ್ನ ಮಗಳನ್ನು ಎಸ್.ಎಸ್.ಪುರಂನಲ್ಲಿರುವ ಪ್ಲೇಹೋಮಿಗೆ ಬಿಡಲು ಹೋಗುವಾಗ, ಸಂಜೆ ವಾಪಸ್ಸು ಕರೆತರುವಾಗ ರೈಲ್ವೇ ಗೇಟ್ ಹಾಕಿಬಿಟ್ಟರೆ ನನ್ನ ಮಗಳಿಗೆ ರೈಲು ತೋರಿಸುವಾಗ ಅವಳು ಮೊದಲೆಲ್ಲಾ ಅದಕ್ಕೆ ಹೆದರಿಕೊಳ್ಳುತ್ತಿದ್ದುದು, ಇದೀಗ “ಅಪ್ಪಾ ರೈಲು...ರೈಲು...” ಎಂದು ಒಂದೇ ಸಮನೆ ಕೂಗುವುದು ನನ್ನ ಜೀವನದ ಮಧುರ ಅನುಭವಗಳಲ್ಲೊಂದಾಗಿದೆ.

ರೈಲ್ವೇಗೇಟ್‍ನಲ್ಲಿ ಅಪರೂಪಕ್ಕೊಮ್ಮೆ ಸಿಗುವ ಗೆಳೆಯರು, ಅಚಾನಕ್ಕಾಗಿ ಸಿಕ್ಕ ನಮ್ಮ ಏಳನೇ ಕ್ಲಾಸಿನ ಇಂಗ್ಲೀಷ್ ಮೇಡಮ್ಮು. ಅಲ್ಲಿ ನಡೆಯುವ ಘಟನೆಗಳು, ಬಡವರ ಬಂಧುವಂತಿದ್ದ ಚನ್ನಂಜಪ್ಪ ಹಾಸ್ಟೆಲ್ ಮೇಲ್ಸೆತುವೆಯ ಕೃಪಾಕಟಾಕ್ಷದಿಂದ ಅವಸಾನದ ಅಂಚಿನಲ್ಲಿ ಅನೈತಿಕ ಚಟುವಟಿಕೆಗಳ ತಾಣವಾದದ್ದು, ಅಲ್ಲಿನ ಮತ್ತೆ ಮತ್ತೆ ನೆನಪಾಗುವ ಕುಮಾರ ಹೇಳಿದ್ದ ಕಲ್ಲಿನ ಅನ್ನ, ಹುಳದ ಸಾರು, ಎಂದೆಂದೂ ಮರೆಯಲಾಗದ ಸಂಜೆಯ ಕುಹೂ... ಕುಹೂ... ಮತ್ತಷ್ಟು ಮೊಗದಷ್ಟು ಉಪ್ಪಾರಹಳ್ಳಿಯ ರೈಲ್ವೇಗೇಟ್ ನೆನಪುಗಳು ನುಗ್ಗಿ ನುಗ್ಗಿ ಬಂದು ಮನಸ್ಸಿನಲ್ಲಿ ಸುಗ್ಗಿಯಾಗುತ್ತಿದ್ದರೂ, ಐದು ವರುಷಗಳಾದರೂ ಮುಗಿಯದ ಮೇಲ್ಸೆತುವೆ ಯಾವುದೋ ಯುದ್ಧಕ್ಕೆ ನಲುಗಿದಂತೆ ಕಂಡು ಮನಸ್ಸು ಬೇಸರದಿಂದ ಕೂಡುತ್ತದೆ. ನಮ್ಮ ಪ್ರೀತಿಯ ರಾಷ್ಟ್ರಪತಿಯಾಗಿದ್ದ ಡಾ ಎ.ಪಿ.ಜೆ. ಅಬ್ದುಲ್ ಕಲಾಂರವರ ಕನಸು “ವಿಶನ್ 2020” ನನಸಾಗುವ ಹೊತ್ತಿಗಾದರೂ ಮೇಲ್ಸೆತುವೆ ಕಾರ್ಯ ಮುಗಿದು ಓಡಾಟಕ್ಕೆ ತೆರವಾದರೆ, ಸೇತುವೆ ಮೇಲಿನಿಂದ ಒಂದು ರೈಲಿನ ಚಿತ್ರವನ್ನು ತೆಗೆಯಬೇಕೆಂಬ ನನ್ನ ಕನಸೂ ಸಫಲವಾದೀತು.

                                                                                                                         - ಗುಬ್ಬಚ್ಚಿ ಸತೀಶ್.





ಇದು ಭಾರತದ “ಅಮೃತ ಕಾಲ”ವೇ!?

  ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ. ʼಭಾರತ ಬದಲಾಗಿದೆ! ಯಾರದ್ದ...