ಶನಿವಾರ, ಸೆಪ್ಟೆಂಬರ್ 10, 2011

“ನಲ್ಲನಲ್ಲೆ” ಗೆ ಒಂದು ವರ್ಷ.

“ಅವುಗಳು ಎಷ್ಟಾದರೂ ಉಸಿರಾಡುವ ಶಬ್ಧಗಳು
ನನ್ನ ಅಣತಿಯಂತೆ
ಆದರೂ ಅವು ಶಾಶ್ವತ”
         - ಶ್ರೀಮತಿ ವಿಜಯಲಕ್ಷ್ಮೀ (ದಿ.ಕಿ.ರಂ.ನಾಗರಾಜರ ಪತ್ನಿ)

ಪ್ರೀತಿ ನಮ್ಮ ಹೃದಯದಲ್ಲಿರುತ್ತದೆ. ಆದರೆ, ಅದು ಗೊತ್ತಾಗುವುದು ನಮ್ಮ ಪ್ರೀತಿಯನ್ನು ಹಂಚಿಕೊಳ್ಳಲು ಮತ್ತೊಂದು ಪ್ರೀತಿಯ ಹೃದಯ ಸಿಕ್ಕಾಗ ಮಾತ್ರ. ಪ್ರೀತಿ ಸಾರ್ಥಕವಾಗುವುದೂ ಆವಾಗಲೇ. ಇಲ್ಲವಾದರೆ ಪ್ರೀತಿ ವ್ಯರ್ಥವಾಗುತ್ತದೆ ಮತ್ತು ತನ್ನಲ್ಲೆ ಸೊರಗುತ್ತದೆ. ಅದೃಷ್ಟಕ್ಕೆ, ನನ್ನ ಪ್ರೀತಿಯನ್ನು ಹೇಳಿಕೊಳ್ಳಲು ನಾನು ಕಾದಂತೆ, ತಾನೂ ಕಾಯುತ್ತಿದ್ದ, ನನ್ನ ನಲ್ಲೆಯ ಪ್ರೀತಿಯ ಹೃದಯ ಪ್ರೀತಿಯನ್ನು ನಿವೇದಿಸಿಕೊಂಡಾಗ, ಪ್ರೀತಿಗಾಗಿ ಪರಿತಪಿಸುತ್ತಿದ್ದ ನನ್ನ ಹೃದಯ ಹಾಲೆರೆಯಿತು. ಮರೆಯಲಾಗದ ಅಮೃತಘಳಿಗೆಯಲ್ಲಿ ಟಿಸಿಲೊಡೆದ ನಲ್ಲೆನಲ್ಲೆಯರ ಪ್ರೀತಿ ಮೊಗ್ಗಾಗಿ, ಹೂವಾಗಿ, ಬೀಜವಾಗಿ ಮತ್ತೊಂದು ಪುಟ್ಟ ಹೃದಯವನ್ನು ಕಾಣಿಕೆಯಾಗಿ ಪಡೆಯಿತು.

ಈ ಮೇಲಿನ ಸಾಲುಗಳು ನನ್ನ ಅಕ್ಷರ ಪ್ರೀತಿಗೂ ಒಪ್ಪುತ್ತವೆ. ಚಿಕ್ಕಂದಿನಲ್ಲೆಯೇ ಓದುವುದನ್ನು ರೂಢಿಸಿಕೊಂಡ ನನಗೆ, ಎಂಟನೇ ತರಗತಿಯಲ್ಲೇ ಬರೆಯುವ ಗೀಳು ಹತ್ತಿತು. ಆದರೆ, ಭಯ! ಮತ್ತು ಬರೆಯುವವರು ಸಾಮಾನ್ಯರಲ್ಲ, ದೇವಲೋಕ ಅಥವಾ ಇನ್ಯಾವುದೋ ಲೋಕದಿಂದ ಬಂದವರೆಂಬ ನನ್ನದೇ ಆದ ಭಾವನೆ! ಅದಕ್ಕೋ, ಏನೋ ಎಂಟನೇ ತರಗತಿಯಲ್ಲಿ ಎಲ್ಲಾ ಭಯವನ್ನು ಕಿತ್ತೊಗೆದು ಬರೆದ “ತ್ಯಾಗ” ವೆಂಬ ಕಥೆಯ ಅರ್ಧ ಪುಟ ಚೂರು ಚೂರಾಗಿ ನೀರಿನ ಒಲೆ ಸೇರಿ ಅಮರವಾಯಿತು! ನೀವು ನಂಬಲೇಬೇಕು ಈ “ತ್ಯಾಗ” ಕಥೆಯ ವಸ್ತು ಹಲವು ವರ್ಷಗಳ ನಂತರ ಬಂದು, ಭರ್ಜರಿ ಯಶಸ್ಸುಗಳಿಸಿದ “ಮುಂಗಾರು ಮಳೆ” ಸಿನಿಮಾ ಕಥೆಗೆ ಬಹಳ ಹತ್ತಿರವಾಗಿತ್ತು. “ಮುಂಗಾರು ಮಳೆ”ಯ “ಪ್ರೀತಿ ಮಧುರ, ತ್ಯಾಗ ಅಮರ” ಸಂದೇಶಕ್ಕೆ ನನ್ನ ಕಥೆ ಬಹಳ ಹೋಲುತ್ತಿತ್ತು. ಇರಲಿಬಿಡಿ. ಅದೇ ಕಥೆಯನ್ನು ಹೊಸ ರೀತಿಯ ನಿರೂಪಣೆಯಲ್ಲಿ ಸದ್ಯದಲ್ಲೆ ಬರೆದು ನಿಮ್ಮ ಕೈಗೆ ಇಡುತ್ತೇನೆ, ಆಗಲಾದರೂ ನಂಬುವಿರಂತೆ. ನನ್ನ ಬರವಣಿಗೆಗೆ ಮತ್ತೊಂದು ಮುಖ್ಯ ತೊಡರುಗಾಲು ಎದುರಾದದ್ದು ಬಡತನ. ಇದಕ್ಕೆ ಪೂರಕವಂತೆ, ಹಿರಿಯರೊಬ್ಬರು ನನಗೆ ಚಿಕ್ಕಂದಿನಲ್ಲೇ, ಇದಾಗಲೇ ನನ್ನ ಕವನ ಸಂಕಲನ “ಮಳೆಯಾಗು ನೀ...” ಯ “ನನ್ನ ನುಡಿ” ಯಲ್ಲಿ ನಾನು ಬರೆದು ಕೊಡಿರುವಂತೆ “ಕವಿಯಾದರೆ ಚಿತ್ರಾನ್ನಕೆ ಕಾಸಿರುವುದಿಲ್ಲ” ಎಂಬ ಹೆದರಿದವನ ಮೇಲೆ ಹಗ್ಗವೆಸೆದು, ಹಾವು ಎನ್ನುವ ಮಾತುಗಳು.

ಆದರೆ, ನನ್ನ ಅನಾರೋಗ್ಯದ ದಿನಗಳು ಮತ್ತೊಮ್ಮೆ ನನ್ನನ್ನು ಹೆಚ್ಚು ಓದುವ ಹವ್ಯಾಸಕ್ಕೆ ಮುನ್ನುಡಿಯಾದವು. ಓದುತ್ತಾ ಓದುತ್ತಾ ಬರೆಯುವಂತೆ ನನ್ನ ಮನ ಮತ್ತೆ ಮತ್ತೆ ಪ್ರೇರೆಪಿಸ ತೊಡಗಿತು. ಅದಾಗಲೇ ನಾನು ಕೆಲವು ಕವನಗಳನ್ನು ಬರೆದು ಗೆಳೆಯರ ಮಧ್ಯೆ ಒಬ್ಬ ಕವಿಯೂ ಆಗಿ ಗುರ್ತಿಸಿಕೊಳ್ಳತೊಡಗಿದ್ದು.

ನಾನು ಕೆಲಸ ಮಾಡುತ್ತಿದ್ದ ಶಾಲೆಯ ವಾರ್ಷಿಕ ಸಂಚಿಕೆಗೆ ಹಲವು ಲೇಖನಗಳನ್ನು ಬರೆದಾದ ಮೇಲೆ, ಮತ್ತೆನಾದರೂ ಹೊಸದಾಗಿ ಬರೆಯಬೇಕೆಂದು ಕೊಂಡವನು, ಬಿಡುವು ಸಿಕ್ಕಾಗಲೆಲ್ಲಾ ಅನಿಸಿದ್ದನ್ನು ಬರೆದು ಸುಮ್ಮನಾಗಿಬಿಡುತ್ತಿದ್ದೆ. ಅವುಗಳಿಗೆಲ್ಲಾ ಸೂಕ್ತವಾದ ವೇದಿಕೆ ಸಿಗದೆ, ಕೂತಲ್ಲೇ ತೂಕಡಿಸುತ್ತಿದ್ದವು. ಮತ್ತಷ್ಟು ಹೊಸದನ್ನು ಬರೆಯಲು ಮನಸ್ಸಿದ್ದರೂ, ಬರೆದು ಏನು ಮಾಡಬೇಕೆಂದು ಉಡಾಫೆ ಮಾಡುತ್ತಾ ಸುಮ್ಮನಿರುತ್ತಿದೆ.

ಆಗ ನೋಡಿ ಪರಿಚಿತವಾಯಿತು “ಬ್ಲಾಗ್ ಲೋಕ.” ಈ ಲೋಕವನ್ನು ಮೊದಲು ಪರಿಚಯಿಸಿದ್ದು ನನ್ನ ಗೆಳೆಯ-ಗುರು ಬಿ.ಮೃತ್ಯುಂಜಯ. ಅವರನ್ನು ನಾ ಪ್ರೀತಿಯಿಂದ “ಅರ್ಧರಾತ್ರಿಯಲ್ಲಿ ಕಂಪ್ಯೂಟರ್ ಕಲಿಸಿದ ಗುರುವು” ಎಂದೇ ಮನದಲ್ಲೇ ನೆನೆಯುತ್ತೇನೆ. ಸುಮಾರು ಐದು ವರ್ಷದ ಹಿಂದೆ ನಾ ಬರೆದ ಒಂದು ಸಣ್ಣ ಇಂಗ್ಲೀಷ್ ಕಥೆಯನ್ನು ಓದಿ, ಒಂದು ಬ್ಲಾಗ್ ಮಾಡಿ ಹಾಕು ಎಂದಿದ್ದರು. ನಾನು ನಿಧಾನವಾಗಿ ಹಾಕೋಣವೆಂದು ಕೊಂಡು ಉದಾಸೀನ ಮಾಡಿದ್ದೆ. ನಂತರ ಮೂರ್ನಾಲ್ಕು ವರ್ಷದ ಕೆಳಗೆ ಇಂಗ್ಲೀಷ್ನುಲ್ಲಿ ಒಂದು ಬ್ಲಾಗ್ ತೆರೆದು ನನ್ನ ವಿವರಗಳು ಮತ್ತು ಅನಾರೋಗ್ಯದ ಬಗ್ಗೆ ಬರೆದು ಪೋಸ್ಟ್ ಮಾಡಿದೆನಾದರೂ, ಆರು ತಿಂಗಳುಗಳ ಕಾಲ ಅದನ್ಯಾರು ನೋಡಿರುವ ಸಾಧ್ಯತೆಯೇ ಇಲ್ಲ ಎಂಬುದು ಮನದಟ್ಟಾಯಿತು. ಅದಾಗ ಕೆಲವು ಕನ್ನಡದ ಬ್ಲಾಗುಗಳು ಪರಿಚಿತವಾದವು. ಅವುಗಳಲ್ಲಿ ಮುಖ್ಯವಾದವು ಮತ್ತು ನಾನು ಪದೇ ಪದೇ ತೆರೆದು ನೋಡುತ್ತಿದ್ದವು: ಪ್ರಕಾಶ್ ಹೆಗಡೆಯವರ “ಇಟ್ಟಿಗೆ ಸಿಮೆಂಟು”, ಕೆ.ಶಿವುರವರ “ಛಾಯಾ ಕನ್ನಡಿ” ಮತ್ತು ಡಿ.ಜಿ ಮಲ್ಲಿಕಾರ್ಜುನ್ರ್ವರ “ಡಿ.ಜಿ ಮಲ್ಲಿಕಾರ್ಜುನ್‍” ಬ್ಲಾಗುಗಳು.

ಈ ಬ್ಲಾಗುಗಳನ್ನು ಅದೆಷ್ಟು ಬಾರಿ ನೋಡಿಕೊಂಡೆನೋ!? ಓದಿಕೊಂಡೇನೋ!?

ಆ ಸಮಯದಲ್ಲಿ ದುರಾದೃಷ್ಟವಶಾತ್ ಮತ್ತೆ ಹಾಸಿಗೆ ಹಿಡಿದಾಗ, ನಾಗತಿಹಳ್ಳಿಯ ಚಿತ್ರಕಥಾ ಶಿಬಿರದಲ್ಲಿ ಪರಿಚಿತವಾದ ಕೆಲವು ಅಮೂಲ್ಯ ಗೆಳೆಯರಲ್ಲಿ ಒಬ್ಬರಾದ ಅಜಿತ್ ಕೌಂಡಿನ್ಯ ಕೊರಿಯರ್ ಮುಖಾಂತರ ಪ್ರೀತಿಯಿಂದ, ಪ್ರಕಾಶ್ ಹೆಗಡೆಯವರ “ಇಟ್ಟಿಗೆ ಸಿಮೆಂಟು” ಮತ್ತು ಕೆ. ಶಿವುರವರ “ವೆಂಡರ್ ಕಣ್ಣು” ಪುಸ್ತಕಗಳನ್ನು ಕಳುಹಿಸಿದ್ದರು. ಆ ಪುಸ್ತಕಗಳನ್ನು ಓದಿ ಆನಂದಿಸಿದೆ. ಈ ಸಮಯದಲ್ಲಿ ನಾಗತಿಹಳ್ಳಿಯ ಶಿಬಿರದ ಮೊದಲ ಗೆಳೆಯ ಹುಬ್ಬಳ್ಳಿಯ ಕಾದಂಬರಿಕಾರ ರಾಜುಗಡ್ಡಿ ತನ್ನ ಎರಡನೇ ಕಾದಂಬರಿ “ಒಂದು ನೂರು ರೂಪಾಯಿಗಳು” ವನ್ನು ಕಳುಹಿಸಿದ್ದರು. ಇವುಗಳ ಜೊತೆಗೆ ಹಲವು ಪುಸ್ತಕಗಳು ನನ್ನ ಸಂಗಾತಿಯಾಗಿ ಮತ್ತೆ ಮತ್ತೆ ನನ್ನನ್ನು ಬರೆಯಲು ಪ್ರೇರೆಪಿಸತೊಡಗಿದವು. (ಗಮನಿಸಿ: ಶಿಶುವಿನಹಳ್ಳಿಯ ಮನೆಯಲ್ಲಿ ಕುಳಿತು ಬರೆಯುವ, ವೃತ್ತಿಯಲ್ಲಿ ಕೆಪಿಟಿಸಿಲ್ ಮೀಟರ್ ರೀಡರ್ ಆಗಿರುವ ರಾಜುಗಡ್ಡಿಯ ಈ ಪುಸ್ತಕದ ಎಲ್ಲಾ ಪ್ರತಿಗಳು ಬಿಡುಗಡೆಯಾದ ಒಂದೇ ವರ್ಷದಲ್ಲಿ ಮಾರಾಟವಾಗಿವೆ. ಇವರು ಇದುವರೆವಿಗೂ ಮೂರು ಕಾದಂಬರಿಗಳನ್ನು ಬರೆದಿದ್ದಾರೆ)

ಆಗ ನೋಡಿ ಬ್ಲಾಗ್ ಶುರುಮಾಡಬೇಕೆಂಬ ಹಂಬಲ ಮತ್ತೆ ಶುರುವಾಯಿತು. ಕಂಪ್ಯೂಟರ್ ಶಿಕ್ಷಕನಾದರೂ ಬ್ಲಾಗ್ ರೂಪಿಸಲು ತುಸು ಕಷ್ಟವೇ ಆಯಿತು. ಆ ಸಮಯದಲ್ಲಿ ಅಜಿತ್ ಕೌಂಡಿನ್ಯ ನನ್ನ “nallanalle.blogspot.com” ರೂಪಿಸಲು ದೂರದ ಶಿಡ್ಲಘಟ್ಟದಲ್ಲಿಯೇ ಕುಳಿತು ಸಹಕರಿಸಿದರು. ಅಲ್ಲಿಗೆ ೨೦೧೦ ರ ಆಗಸ್ಟ್ ನಲ್ಲಿ ನನ್ನ ಬ್ಲಾಗ್ ಶುರುವಾಯಿತು. ಮೊದಲ ಪೋಸ್ಟ್ ಆಗಿ “ಸ್ನೇಹ ಮಾಡಬೇಕಿಂಥವಳಾ...” ಲೇಖನ ಪ್ರಕಟವಾಯಿತು. ಈ ಸಂತೋಷವನ್ನು ನನ್ನ ಈಮೈಲಿನ ಎಲ್ಲಾ ಗೆಳೆಯರಿಗೆ ಮೈಲ್ ಮಾಡಿದೆ. ಜೊತೆಗೆ ಬ್ಲಾಗ್ ಲೋಕದ ಸಚಿನ್ ತೆಂಡಲ್ಕೂರ್ ಪ್ರಕಾಶಣ್ಣನ ಮೊಬೈಲ್ ಗೆ ಪೋನ್ ಮಾಡಿ ಹೇಳಿದೆ. ಅವರು ಪ್ರೀತಿಯಿಂದ ನನ್ನ ಬ್ಲಾಗ್ ನ ಬಗ್ಗೆ ತಮ್ಮ ಗೆಳೆಯರಿಗೆಲ್ಲಾ ಪರಿಚಯಿತ್ತೇನೆ ಎಂದು ಹೇಳಿ ನನ್ನ ಬ್ಲಾಗಿಗೆ ತಮ್ಮ ಹಲವು ಗೆಳೆಯರನ್ನು ಪರಿಚಯಿಸಿದರು. ಮತ್ತೆ ನನ್ನ ಗುರುಗಳೇ ಮೊದಲ ಕಾಮೆಂಟ್ ಹಾಕುವ ಮೂಲಕ ಶುಭ ಹಾರೈಸಿದರು. ಹೀಗೆಯೇ ಮುಂದುವರೆದು ಬ್ಲಾಗ್ ಲೋಕದ ಮೂಲಕ ಹಲವು ಬ್ಲಾಗಿಗರು ಗೆಳೆಯರಾದರು.

ಈ ಮಧ್ಯೆ ನನ್ನ ಮೊದಲ ಪುಸ್ತಕ “ಮಳೆಯಾಗು ನೀ...” ಕವನ ಸಂಕಲನ ಪ್ರಕಟವಾಯಿತು.

ನಾ ಬ್ಲಾಗ್ ಶುರುಮಾಡುವ ಸಮಯದಲ್ಲಿ ಅಜಿತ್ ಹೇಳಿದ್ದರು, “ಸರ್, “ಅವಧಿ” ಯಲ್ಲಿ ನಿಮ್ಮ ಲೇಖನ ಬಂದರೆ ಚೆನ್ನಾಗಿರುತ್ತೆ. ಅವರು ಗಮನಿಸುತ್ತಾ ಇರ್ತಾರೆ.” ಎಂದು. ಇತ್ತೀಚಿಗೆ “ಗಾಳಿಪಟದ ಬಾಲ ಎನ್ನ ಮನ” ಎಂಬ ಲೇಖನ “ಅವಧಿ”ಯಲ್ಲಿ ಪ್ರಕಟವಾಯಿತು. ಈ ಲೇಖನಕ್ಕೆ ಒಂದು ಪ್ರಶಸ್ತಿಯೂ ಬಂತು (ಸಾಹಿತ್ಯದಲ್ಲಿ ನನಗೆ ಮೊದಲ ಬಹುಮಾನ). ತುಂಬಾ ಖುಷಿಯಾಯಿತು.

ಆದರೆ, ತದನಂತರ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿ ಬ್ಲಾಗ್ ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಾಗುತ್ತಿಲ್ಲ. ಹಲವು ಗೆಳೆಯರ ಬ್ಲಾಗ್ ಗಳನ್ನೂ ಓದಲಾಗುತ್ತಿಲ್ಲ. ಈ ಸಮಯದಲ್ಲಿ ಸದ್ದಿಲ್ಲದೆ ನನ್ನ ಬ್ಲಾಗಿಗೆ ಒಂದು ವರ್ಷವಾಯಿತು. ಈ ಸಂತೋಷವನ್ನು ನಿಮ್ಮಲ್ಲಿ ಹೇಳಿಕೊಳ್ಳದೆ ಇರಲಾಗುತ್ತಿಲ್ಲ. ನಿಮಗೆಲ್ಲರಿಗೂ ನನ್ನ ವಂದನೆಗಳು.

ಮತ್ತೆ ಈ ಲೋಕದಲ್ಲಿ ಸಕ್ರಿಯವಾಗಿರುತ್ತೇನೆ ಎಂಬ ಭರವಸೆಯೊಂದಿಗೆ,

ಪ್ರೀತಿಯಿಂದ,
ಗುಬ್ಬಚ್ಚಿ ಸತೀಶ್.

14 ಕಾಮೆಂಟ್‌ಗಳು:

  1. ಗುಬ್ಬಚ್ಚಿಯವರೆ..
    ವರುಶದ ಸ೦ಬ್ರಮಕ್ಕೆ ನನ್ನದೊ೦ದು ಶುಭಾಶಯ..:)

    ಪ್ರತ್ಯುತ್ತರಅಳಿಸಿ
  2. ಸತೀಶು...

    ಎಲ್ಲದಕ್ಕಿಂತಲೂ ನಿಮ್ಮ ಜೀವನ ಉತ್ಸಾಹ ಇದಕ್ಕೆಲ್ಲ ಕಾರಣ..

    ನಿಮ್ಮ ಬ್ಲಾಗು ಬೆಳೆದು ಹೆಮ್ಮಾರವಾಗಲಿ..

    ನಮ್ಮೆಲ್ಲ ಆಶಯ.. ಶುಭಾಶಯಗಳು..

    ನಿಮ್ಮ ಉತ್ಸಾಹ ನಮಗೆಲ್ಲ ಸ್ಪೂರ್ತಿ.. ಇನ್ನಷ್ಟು ಬರೆಯಿರಿ...

    ಪ್ರತ್ಯುತ್ತರಅಳಿಸಿ
  3. ಶುಭಾಶಯಗಳು....ಹೀಗೇ ಏರುತ್ತಿರಲಿ ನಿಮ್ಮ ಸಾಹಿತ್ಯಯಾತ್ರೆ

    ಪ್ರತ್ಯುತ್ತರಅಳಿಸಿ
  4. ಬ್ಲಾಗಿಗೆ ವರ್ಷ ತುಂಬಿದ ಖುಷಿಯಲ್ಲಿ ಒಳ್ಳೆ ಲೇಖನ ನೀಡಿದ್ದೀರಿ ಸರ್.

    ಮುಖ್ಯವಾಗಿ ನಿಮ್ಮ ಜೀವನೋತ್ಸಾಹ ನಿಮ್ಮ ಮನಸ್ಸನ್ನು ಯಾವಾಗಲೂ ನೆಮ್ಮದಿಯಾಗಿಟ್ಟಿರಲಿ.

    ಇನ್ನಷ್ಟು ಮತ್ತಷ್ಟು ಬರೆದು ಕೊಡಿ, ಓದಿ ಪಾವನರಾಗುತ್ತೇವೆ.

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    Face book Profile : Badarinath Palavalli

    ನಿಮ್ಮ ಓದಿಗೆ ನನ್ನ ಕವನಗಳು ಕಾದಿವೆ ಮತ್ತು ನಿಮ್ಮ ಅಭಿಪ್ರಾಯದ ಕಾಮೆಂಟುಗಳು ನನಗೆ ದಾರಿ ದೀಪ.

    ಪ್ರತ್ಯುತ್ತರಅಳಿಸಿ
  5. nimma blog ondu varsha pooraisiddakke abhinanadengalu....:) saahitya annodu yaavaglu namma manassannu mudagolisutta, namage prabuddhateyannu needuttiruttade. namma jeevanada anubhavagalondige odi tilidukolluvantaddu bahala ide. jotege namma anubhava haagu bhaavanegalanuu hanchikollabeku. adannu saahityada moolaka vyakatapadisabahudu. so keep writing...........:)
    nimma collegue shruthi....:)

    ಪ್ರತ್ಯುತ್ತರಅಳಿಸಿ
  6. ಸತೀಶ್ ನಿಮ್ಮ ಬ್ಲಾಗ್ ಪಯಣದ ಒಂದು ಮೈಲಿ ದಾಟಿರುವುದು ಸಂತಸದ ವಿಚಾರ. ನೀವು ಇದೆ ರೀತಿ ನೂರು ಮೈಲಿಗಲ್ಲುಗಳನ್ನು ದಾಟುವ ಭರವಸೆ ನಮ್ಮೆಲ್ಲರಿಗೆ ಇದೆ. ನಿಮ್ಮ ಪಯಣದಲ್ಲಿ ನಿಮ್ಮ ಜೊತೆ ನಾವೆಲ್ಲಾ ಸಂತಸಪಡುವ ಸಹ ಪಯಣಿಗರು. ನಿಮ್ಮ ಆತ್ಮ ವಿಶ್ವಾಸಕ್ಕೆ ಜೈ ಹೋ. ಶುಭಾಶಯಗಳು
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ಪ್ರತ್ಯುತ್ತರಅಳಿಸಿ
  7. ಸತೀಶ್,
    ಹೃತ್ಪೂರ್ವಕ ಶುಭಾಶಯಗಳು. ಪ್ರಾರ೦ಬಿಸಿದ ಕೆಲಸಗಳಲ್ಲೆಲ್ಲ ಯಶಸ್ಸು ಸಿಗಲಿ..

    ಪ್ರತ್ಯುತ್ತರಅಳಿಸಿ
  8. ಸತೀಶ್ ರವರೆ,
    ವರುಷ ತು೦ಬಿದ `ನಲ್ಲ-ನಲ್ಲೆಗೆ ಹರುಷದ ಹೃತ್ಪೂರ್ವಕ ಶುಭಾಶಯಗಳು. ನಿಮ್ಮ ಬ್ಲಾಗ್ ಹೀಗೇ ಸ೦ತಸದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಲೇ ಇರಲಿ. ನಿಮ್ಮ ಈ ಉತ್ಸಾಹ ಸದಾ ಹಸಿರಾಗಿರಲೆ೦ದು ನನ್ನ ಹಾರೈಕೆಗಳು.

    ಪ್ರತ್ಯುತ್ತರಅಳಿಸಿ

ನೀರು (ಪುಟ್ಟ ಕತೆ)

  ಜನನಿಬಿಡ ರಸ್ತೆಯಲ್ಲಿ ಬೆಳಗಿನ ದಿನಚರಿ ಆರಂಭವಾಗಿತ್ತು. ನಡಿಗೆ, ವ್ಯಾಯಾಮ ಮುಗಿಸಿ ವಯೋವೃದ್ದರು ಆರಾಮವಾಗಿ ಹರಟುತ್ತಾ ಮನೆಯಕಡೆ ಹೆಜ್ಜೆ ಹಾಕುತ್ತಿದ್ದರು. ತಡವಾಗಿ ಹ...