ಬ್ಲಾಗ್ ಆರ್ಕೈವ್

ಶುಕ್ರವಾರ, ಏಪ್ರಿಲ್ 22, 2011

ಮಳೆಯೆಂದರೆ. . . ಮಳೆಯಾ? ಎಲ್ಲವೂ ಅಸ್ಪಷ್ಟ!


ಅಂದು ಸೆಂಪ್ಟಂಬರ್ 24, 2010 ಶುಕ್ರವಾರ. ನನ್ನ ಪಾಲಿಗದು ಶುಭ ಶುಕ್ರವಾರವೇ! ಏಕೆಂದರೆ, ಅಂದು aiಐದು ದಿನಗಳಿಂದ ಸೆಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ, ವೈದ್ಯರ ಗಮನದಲ್ಲಿದ್ದವನು, ಥೈರಾಯ್ಡ್ ಸಮಸ್ಯೆಯಿಂದ ಹೀಗಾಗಿದೆ ಅಷ್ಟೆ ಎಂದು ಸರ್ಟಿಫಿಕೇಟ್ ಪಡೆದುಕೊಂಡು ಡಿಸ್ಚಾರ್ಜ್ ಆಗಿದ್ದೆ.

ಸರಿಯಾಗಿ ಐದು ದಿನಗಳ ಹಿಂದೆ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದೆ. ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿದ ನನ್ನನ್ನು ಗೆಳೆಯರ ಸಲಹೆಯಂತೆ ನನ್ನಾಕೆಯು 108 ಆಂಬ್ಯುಲೆನ್ಸ್ ನಲ್ಲಿ ಬೆಂಗಳೂರಿನ ಸೆಂಟ್ ಜಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋದಳಂತೆ. ಅಲ್ಲಿ ನನ್ನ ಮೇಲುಸ್ತುವಾರಿ ನೋಡಿಕೊಳ್ಳುವ "ಏಂಜೆಲ್" ಎಂದೇ ನಾವು ಕರೆಯುವ ಲೇಡಿ ಡಾಕ್ಟರ್‍ಗೆ ಇವಳು ಫೋನಿನಲ್ಲಿ ವಿಷಯ ತಿಳಿಸಿ, ಅವರನ್ನು ಬರಮಾಡಿಕೊಂಡಳಂತೆ. ಅವರು ಬಂದವರೇ ಎಮರ್ಜೆನ್ಸಿ ವಾರ್ಡಿನಲ್ಲಿ ಚಿಕಿತ್ಸೆ ಕೊಡಿಸಿ, ನನ್ನನ್ನು ತುರ್ತು ನಿಗಾದಲ್ಲಿ ಇಟ್ಟಿದ್ದರಂತೆ. ಮಂಗಳವಾರ ಬೆಳಿಗ್ಗೆ ಆ ಏಂಜೆಲ್ “‘ನಿಮಗೆ ಏನೂ ಆಗಿಲ್ಲ, ಆರಾಮವಾಗಿರಿ” ಎಂದು ನಗುಮೊಗದಿಂದ ಹೇಳಿ ಹೋದರು.

ಬಹಳ ಹೊತ್ತು ಮೌನದಲ್ಲಿದ್ದು, ನನ್ನವಳೆಡೆಗೆ ತಿರುಗಿ "ನನಗೆ ಏನಾಗಿದೆ?" ಎಂದು ಕೇಳಿದೆನು. ಅವಳು ಮುಗುಳ್ನಗುತ್ತಾ, "ಏನೂ ಇಲ್ಲಾ, ನಿಮಗೆ ಈ ಹಿಂದೆ ಕೊಟ್ಟಿದ್ದ ಮತ್ತು ಈಗ ಕೊಡುತ್ತಿದ್ದ ಮಾತ್ರೆಗಳಿಂದ, ಮೊದಲೇ ಸಮಸ್ಯೆಯಿದ್ದ ಥೈರಾಯ್ಡ್ ಮತ್ತೆ ತೊಂದರೆ ಮಾಡಿದೆ ಅಷ್ಟೆ. ನೀವು ಅವತ್ತು unconscious ಆಗಿದ್ದೀರಿ. ಮಾತ್ರೆಗಳ ಪ್ರಭಾವದಿಂದ ಹೀಗಾಗಿದೆ ಅಷ್ಟೆ. ಒಂದೇ ದಿನದಲ್ಲಿ ನಾರ್ಮಲ್ ಆಗಿದ್ದೀರಿ. ಏನೂ ತೊಂದರೆ ಇಲ್ಲ. ಇನ್ನೂ ಕೆಲವು ಟೆಸ್ಟ್ ಗಳನ್ನು ಮಾಡಾಬೇಕಾಗಿರುವುದರಿಂದ, ಆಸ್ಪತ್ರೆಯಲ್ಲೇ ಐದಾರು ದಿನ ಇರಬೇಕಾಗುತ್ತದೆ ಎಂದು ಹೇಳಿದ್ದಾರೆ. ಏನೂ ಆಗಿಲ್ಲ, ಆರಾಮಾಗಿ ಮಲಗಿ, ಹೆಚ್ಚು ಮತನಾಡಬೇಡಿ” ಎಂದು ಸಮಾಧಾನದಿಂದ ನುಡಿದಳು. ನನಗೆ ಸಮಾಧಾನವಾಗಲಿಲ್ಲವಾದರೂ, ಏನು ಮಾಡುವುದೆಂದು ತೋಚದೆ ಸುಮ್ಮನೆ ಮಲಗಿದೆ.

ಎಲ್ಲಾ ಟೆಸ್ಟ್‍ಗಳು ಮುಗಿದ ನಂತರ ಶುಕ್ರವಾರ ಸಂಜೆ ಏಳರ ಸುಮಾರಿಗೆ ಡಿಸ್ಚಾರ್ಜ್ ಮಾಡಿಸಿಕೊಂಡು ಆಸ್ಪತ್ರೆಯಿಂದ ಹೊರಬಿದ್ದೆವು. ಹೊಟ್ಟೆ ಹಸಿಯುತ್ತಿದ್ದರೂ, ಮಳೆ ಬರುವಂತ ವಾತಾವರಣವಿದ್ದುದರಿಂದ ಬಸ್ಟಾಂಡಿನಲ್ಲಿಯೇ ಊಟ ಮಾಡಿದರಾಯಿತು ಎಂದುಕೊಂಡು ಆಟೋದವರೊಬ್ಬರಿಗೆ ‘ಮೆಜಿಸ್ಟಿಕ್’ ಎಂದೆವು. ನಾವು ಆಟೋ ಹತ್ತುವ ಸಮಯಕ್ಕೆ ಸರಿಯಾಗಿ ತುಂತುರು ಮಳೆ ಹನಿಯಲಾರಂಭಿಸಿತು. ಮೋಡ ದಟ್ಟವಾಗಿ ಹರಡಿತ್ತು. ಜೋರಾಗಿ ಮಳೆ ಬರುವ ಮುನ್ಸೂಚನೆಯಿತ್ತು. ಆಟೋದವರು, ““ಸಾರ್, ಎಲ್ಲಾಕಡೆ ತುಂಬಾ ಮಳೆ ಆಗ್ತಿದೆಯಂತೆ, ಇಲ್ಲೂ ಶುರುವಾಯ್ತು, ಮೆಜಸ್ಟಿಕ್‍ವರೆಗೆ ಹೋಗೋಕೆ ಆಗುತ್ತೋ... ಇಲ್ವೋ... ನೋಡ್ಬೇಕು”” ಎಂದರು. “ಹಾಗೆಲ್ಲಾ ಹೇಳ್ಬೇಡಿ ಸಾರ್, ನಾವು ಇವತ್ತು ತುಮಕೂರಿಗೆ ಹೋಗ್ಲೇಬೇಕು. ಏನಾದ್ರು ಮಾಡಿ ಮೆಜಸ್ಟಿಕ್‍ಗೆ ಬಿಟ್ಟುಬಿಡಿ. ಇಷ್ಟು ಹೊತ್ನಲ್ಲಿ ಟ್ರೈನೂ ಸಿಗಲ್ಲ”” ಎಂದಳು ನನ್ನ ಮಡದಿ. “ಆಯ್ತು ಮೇಡಂ, ನೋಡ್ತಿನಿ” ಎಂದು ಡ್ರೈವರ್ ಹೇಳಿದರು. ಅಷ್ಟೊತ್ತಿಗೆ ತುಂತುರು ಹನಿಗಳ ರೂಪದಲ್ಲಿದ್ದ ಮಳೆಯು ಧೋ ಎಂದು ಸುರಿಯಲಾರಂಭಿಸಿತು. ನನಗಂತೂ ಏನೂ ತೋಚುತ್ತಿಲ್ಲ. ಏನಾದರೂ ಹೇಳುವ ಸ್ಥಿತಿಯಲ್ಲೂ ನಾನಿರಲಿಲ್ಲ. ಹೇಗಿದ್ದರೂ ಇವಳೇ ನಿಭಾಯಿಸುತ್ತಾಳೆಂದು ಸುಮ್ಮನೆ ನಿರ್ಲಿಪ್ತನಾಗಿ ಕುಳಿತುಬಿಟ್ಟೆ.

ಸಾಮಾನ್ಯವಾಗಿ ಆಸ್ಪತ್ರೆಯಿಂದ ಮಡಿವಾಳ ಚೆಕ್ ಪೋಸ್ಟ್‍ನತ್ತ ತಿರುಗಿ, ವಿಲ್ಸನ್ ಗಾರ್ಡನ್ ಮುಖಾಂತರ ಮೆಜಿಸ್ಟಿಕ್‍ನತ್ತ ಹೋಗುತ್ತಿದ್ದ ಆಟೋದವರು, ಅಂದು ಅಲ್ಲಿ ಮಳೆಯೆಂದು ಕೋರಮಂಗಲದ ವಾಟರ್ ಟ್ಯಾಂಕ್ ರಸ್ತೆಯಲ್ಲಿ ಸಾಗಿ ಆಡುಗೋಡಿ ಮುಖಾಂತರ ತೆರಳುತ್ತಿದ್ದರು. ಅಷ್ಟರಲ್ಲಾಗಲೇ ಭೀಕರವಾಗಿ ಸುರಿಯುತ್ತಿದ್ದ ಮಳೆಯು ಹೊಸಲೋಕವೊಂದನ್ನು ಸೃಷ್ಟಿಸಲು ತೊಡಗಿತ್ತು. ನಾವೆಂದೂ ಇಂತಹ ಮಳೆಯನ್ನು ನೋಡಿರಲಿಲ್ಲ. ನಾನಂತೂ ಇವತ್ತೇನೋ ಘಟಿಸಲಿದೆ ಎಂದು ಮನದಲ್ಲೇ ಅಂದುಕೊಂಡು, ಜಡ್ಡುಗಟ್ಟಿದ ಮನಸ್ಸನ್ನು ಜಾಗೃತಗೊಳಿಸಿ ಕುಳಿತೆ.

ಮಳೆಯಿಂದಾಗಿ ಟ್ರಾಫಿಕ್ ಅಸ್ತವ್ಯಸ್ತವಾಗಿತ್ತು. ಬೈಕ್ ಸವಾರರು ಎಲ್ಲೆಂದರಲ್ಲಿ ತಮ್ಮ ಗಾಡಿಗಳನ್ನು ನಿಲ್ಲಿಸಿ, ಸಿಕ್ಕ ಸಿಕ್ಕ ಜಾಗಗಳಲ್ಲಿ ಆಶ್ರಯ ಪಡೆಯುತ್ತಿದ್ದರು. ನಮ್ಮ ಆಟೊವು ಸುರಿಯುವ ಮಳೆಯಲ್ಲಿ ಆಮೆವೇಗದಲ್ಲಿ ಓಡುತ್ತಿತ್ತು. ನಮ್ಮ ಆಟೋ ಡ್ರೈವರ್ “ಏನಪ್ಪ ಮಾಡೋದು ದೇವ್ರೇ?” ಎಂದು ನಿಟ್ಟುಸಿರು ಬಿಡುತ್ತಾ ಮುಂದೆ ಸಾಗಲು ಯತ್ನಿಸುತ್ತಿದ್ದರು. ಎತ್ತ ನೋಡಿದರೂ, ಟೂ ವೀಲರ್‍ಗಳು, ಕಾರುಗಳು, ಆಟೋಗಳು ಮತ್ತು ಆನೆಯಂತೆ ದಾರಿಯನ್ನೆಲ್ಲಾ ಅಕ್ರಮಿಸಿಕೊಂಡು ನಿಂತ ಬಿ.ಎಂ.ಟಿ.ಸಿ. ಬಸ್ಸುಗಳು!

ತೆವಳಿಕೊಂಡೇ ನಮ್ಮ ಆಟೋವೂ ಮುಂದೆ ಹೋಗುತ್ತಿದ್ದರೆ, ರಸ್ತೆಬದಿಯ ಚಿತ್ರಗಳು ಚಿತ್ರವಿಚಿತ್ರವಾಗಿದ್ದವು. ಟ್ರಾಫಿಕ್ ಪೋಲಿಸರಂತೂ ಆ ಮಳೆಯಲ್ಲೇ ತಮ್ಮ ಸಾಹಸದ ಸೇವೆಯನ್ನು ನೀಡುತ್ತಿದ್ದರು. ಟ್ರಾಫಿಕ್ ಹೆಚ್ಚಾದಾಗ ಬೈಕ್ ಸವಾರರು, ರಸ್ತೆಯ ಬದಿಯಲ್ಲಿದ್ದ ಮೋರಿಗಳು ತುಂಬಿ ತುಳುಕಿ ಹರಿಯುತ್ತಿದ್ದರೂ ಲೆಕ್ಕಿಸದೆ ಪುಟ್ಪಾದತಿನ ಮೇಲೆ ಹೋಗುತ್ತಿದ್ದರು. ಅವರ ಧೈರ್ಯ, ಸಾಹಸಕ್ಕೆ ಒಲ್ಲದ ಮನಸ್ಸಿನಿಂದ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೂ, ಅವರಿಗೇನಾದರೂ ಹೆಚ್ಚು ಕಡಿಮೆ ಆದಿತೆಂಬ ಧಾವಂತ ಮನದಲ್ಲಿತ್ತು. ಅಷ್ಟರಲ್ಲಿ, ಇಬ್ಬರಿದ್ದ ಒಂದು ಬೈಕಿನ ಮುಂದಿನ ಚಕ್ರ ಕುಸಿದಿದ್ದ ಪುಟ್ಪಾ ತಿನೊಳಕ್ಕೆ ಸಿಕ್ಕಿಬಿಟ್ಟಿತು. ಅದನ್ನು ಕಂಡ ನಮಗೆಲ್ಲಾ ಅಯ್ಯೋ ಎಂದೆನಿಸಿದರೂ, ಅವರಿಬ್ಬರು ಯಾವ ನೋವನ್ನೂ ತೋರ್ಪಡಿಸದೆ ನಗುತ್ತಿದ್ದನ್ನು ಕಂಡು, ಸಂಕಷ್ಟದಲ್ಲಿದ್ದರೂ ನೋವನ್ನು ಮರೆತು ನಕ್ಕ ಅವರನ್ನು ನೋಡಿ ನಾವೂ ನಕ್ಕಿದೆವು. ಆ ನಗುವಿನಲ್ಲಿ ಇದ್ದದ್ದು ಅಸಾಯಕತೆಯಾ? ವ್ಯಂಗ್ಯವಾ? ಅಳು ಬರುವಂತಾ ಸಮಯದಲ್ಲೂ ಮಾನವ ನಕ್ಕು ಬಿಡುತ್ತಾನಲ್ಲ...! ಆ ನಿಲುವಿಗೆ ಧನ್ಯೋಸ್ಮಿ.

ಅಷ್ಟರಲ್ಲಿ ಬಹಳ ಹೊತ್ತಾದರೂ ಮುಂದೆ ಚಲಿಸಲಾಗದೆ ನಮ್ಮ ಆಟೋ ಡ್ರೈವರ್ ಎದುರಿಗೆ ಬರುತ್ತಿದ್ದವರ ಬಳಿ ಏನೋ ಕೇಳಿದವರು ನಮ್ಮ ಕಡೆ ತಿರುಗಿ, “ಸಾರ್, ಮುಂದೆ ಇರೋ ದೊಡ್ಡಮೋರಿ ಉಕ್ಕಿ ಹರಿಯುತ್ತಿದ್ಯಂತೆ, ಅದಕ್ಕೆ ಎಲ್ಲಾರು ಹಿಂದಕ್ಕೆ ತಿರುಗಿಸಿಕೊಂಡು ಹೋಗುತ್ತಿದ್ದಾರೆ. ನಾನೂ ಟ್ರೈ ಮಾಡ್ತೀನಿ ಸಾರ್. ಅಲ್ಲೊಂದು ದಾರಿಯಿದೆ. ಅಲ್ಲಿ ನೀರು ಕಡಿಮೆ ಇರ್ಬೋದು” ಎಂದವರೇ, ಹರಸಾಹಸದಿಂದ ಆಟೋ ತಿರುಗಿಸಿಕೊಂಡು ನಿಧಾನವಾಗಿ ಮುಂದೆ ಸಾಗಲಾರಂಭಿಸಿದರು. adAಅದಾಗ ನನಗೆ “Water, Water everywhere, / And all the boards did shrink; / Water, water everywhere, / Not a drop to drink” ಎಂಬ ಕವಿ ಎಸ್.ಟಿ.ಕಾಲ್ರಿಕಡ್ಜನ ಸಾಲುಗಳು ನೆನಪಾಗಿ ಒಂಥರಾ ಭಯವಾಗುತ್ತಿತ್ತು. ಬಹಳ ಹಿಂದೆ ನೋಡಿದ್ದ “Water World” ಸಿನಿಮಾ ನೆನಪಿಗೆ ಬರುತ್ತಿತ್ತು.

ನಮ್ಮ ಆಟೋ ಇದೀಗ ಹೋಗುತ್ತಿದ್ದ ದಾರಿ ನಮಗೆ ಹೊಸದಾಗಿತ್ತು. ಆ ಪರಿಸ್ಥಿತಿಯಲ್ಲೂ, ಅದಾಗಲೇ ಬಹಳಷ್ಟು ಆಟೋದವರಿಂದ ಮೋಸ ಹೋಗಿದ್ದ ನಮಗೆ, ಈ ಆಟೋದವರ ಮೇಲೆ ಅಪನಂಬಿಕೆ ಮೂಡಿ ಪರಸ್ಪರ ಮುಖ ನೋಡಿಕೊಂಡೆವು. ಮೋಸವನ್ನು ನಾವು ಸಹಿಸಿಕೊಳ್ಳದ್ದಿದ್ದರೂ, ನನ್ನಾಕೆಯು ಅದನ್ನು ವಿರೋಧಿಸದೆ ಬಿಡುವುದಿಲ್ಲ. ಇದನ್ನರಿತ ನಾನು ಕಣ್ಣುಗಳಲ್ಲೇ, ಬೇಡ...ಪ್ಲೀಸ್ ಸುಮ್ನೀರು... ಎಂದು ಕೋರಿದೆ. ಇನ್ನೇನು ಕೇಳಿಬಿಡಬೇಕು ಎಂದು ಕೊಂಡಿದ್ದವಳು, ನನ್ನ ಕೋರಿಕೆಯನ್ನು ಮನ್ನಿಸಿ ಸುಮ್ಮನಾದಳು.

ನಮ್ಮ ಮನಸ್ಥಿತಿಯನ್ನರಿತವರಂತೆ, ನಮ್ಮ ಆಟೋ ಡ್ರೈವರ್ “ಇಲ್ಲಿ ಸ್ವಲ್ಪ ಪರ್ವಾಗಿಲ್ಲ ಸಾರ್. ಶಾಂತಿನಗರದ ಬಸ್‍ಸ್ಟಾಂಡ್‍ನೊಳಗೆ ಹೋಗಿದ್ದರೆ ಚೆನ್ನಾಗಿತ್ತು. ಆದರೆ, ಅಲ್ಲಿ ಬಿಡ್ತಾ ಇರೋ ಹಾಗೆ ಕಾಣ್ತೀಲ್ಲ. ಈ ಕಡೆಯಿಂದ ಹೇಗೋ ಹೋಗ್ಬುಡ್ತೀನಿ” ಎಂದು ಎಡಕ್ಕೆ ತಿರುಗಿದರು. ರಸ್ತೆಯನ್ನು ಗಮನಿಸುತ್ತಿದ್ದವನು ಲಾಲ್‍ಬಾಗ್ ಕಂಡದ್ದನ್ನು ನೋಡಿ, “ಏ ಇವರು ಲಾಲ್‍ಬಾಗ್ ಕಡೆಯಿಂದ ಹೋಗ್ತಾ ಇದ್ದಾರೆ. ಸರಿಯಾಗೆ ಇದೆ ದಾರಿ” ಎಂದು ನನ್ನವಳಿಗೆ ಪಿಸುಗುಟ್ಟಿದೆ. ಸಮಾಧಾನಗೊಂಡಂತೆ ಕಂಡ ಅವಳ ಮುಖದಲ್ಲಿ ಹೌದೆಂಬ ಭಾವವಿತ್ತು.

ಹಾಗೆಯೇ ಮುಂದುವರೆಯುತ್ತಿದ್ದ ನಮಗೆ ಕಂಡದ್ದು, ಭೀಭತ್ಸ ದೃಶ್ಯಗಳು! ಸುರಿಯುವ ಆ ಮಳೆಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸಿದ್ದ ಬೈಕುಗಳು ಮಳೆಯ ರಭಸಕ್ಕೆ ಮಲಗಿಕೊಂಡಿದ್ದವು. ಅವುಗಳ ಮೇಲೆಲ್ಲಾ ತುಂಬಿ ಹರಿಯುತ್ತಿದ್ದ ಚರಂಡಿ ನೀರು ಪ್ರವಾಹ ಸ್ವರೂಪದ್ದಾಗಿತ್ತು. ಪಕ್ಕದಲ್ಲಿ ಆಟೋವೊಂದು ಮಗುಚಿ ಬಿದ್ದಿತ್ತು. ನಮ್ಮ ಆಟೋವು ಒಳಗೊಂಡಂತೆ, ಬಹಳ ಆಟೋಗಳ ಒಳಗೆಲ್ಲಾ ನೀರುನುಗ್ಗಿತ್ತು. ನೀರು ಹೆಚ್ಚೆಚ್ಚು ನುಗುತ್ತಿದ್ದ ಹಾಗೇ ನಮ್ಮ ಆಟೋದವರು ಸರಿಯಾಗಿ ಬ್ರೇಕ್ ಹಿಡಿಯಲು ಆಗುತ್ತಿಲ್ಲ ಸಾರ್. ಆದರೂ ಹೇಗೋ ಹೋಗುತ್ತಿದ್ದೇನೆ, ಎಂದೆನ್ನುತ್ತಿದ್ದರು. ಹೀಗೆ ಆಚೆ ಕಣ್ಣಾಡಿಸುತ್ತಿದ್ದವರಿಗೆ, ಪಕ್ಕದಲ್ಲಿದ್ದ ಮನೆ, ಅಂಗಡಿಗಳಿಗೆಲ್ಲಾ ನೀರು ನುಗ್ಗಿ, ಅವರೆಲ್ಲಾ ಅಲ್ಲಿಂದ ನೀರು ತೆಗೆಯುವುದನ್ನು ನೋಡುವುದೇ ಆಯಿತು. ಒಂದು ಮನೆಯಲ್ಲಂತೂ, ಮನೆಯ ಒಳಗೆ ಬರುತ್ತಿದ್ದ ನೀರನ್ನೇ ನೋಡಿ, ಬಾಗಿಲಲ್ಲೇ ಗಾಬರಿಯಿಂದ ಅಳುತ್ತಾ ನಿಂತಿದ್ದ ಮಗುವನ್ನು ನೋಡಿ ಕರುಳು ಚುರುಕ್ಕೆಂದಿತು. ನನ್ನವಳು ಅಯ್ಯೋ ಪಾಪವೆಂದಳು. ಇದಕ್ಕಿಂತ ಕ್ರೂರ ದೃಶ್ಯವೆಂದರೆ ಆ ಸುರಿವ ಮಳೆಯಲ್ಲಿ ಬೆತ್ತಲೆಯಾದ ವ್ಯಕ್ತಿಯೊಬ್ಬ ರಸ್ತೆಗೆ ಬೆನ್ನುಮಾಡಿ ಕುಳಿತಿದ್ದ. ಅವನು ಮಾನಸಿಕ ಅಸ್ವಸ್ಥನಿರಬೇಕು. ಆದರೆ ಅವನೂ ಮನುಷ್ಯನಲ್ಲವೇ? “ಛೇ” ಎಂಬ ನನ್ನ ಉದ್ಗಾರ ಕೇಳಿದ ನನ್ನವಳು “ಏನಾಯ್ತು?” ಎಂದಳು. ಅವಳ ದಿಗಿಲನ್ನು ನೋಡಿ “ನೋಡಮ್ಮ ಪಾಪ ಯಾರೋ ಹುಚ್ಚ; ಬರಿಮೈಯಲ್ಲಿ...” ಎಂದೆ. “ಅಯ್ಯೋ! ಆ ದೇವ್ರಿಗೆ ಸ್ವಲ್ಪನೂ ಕರುಣೆಯಿಲ್ವಾ?” ಎಂದು ಸೃಷ್ಠಿಕರ್ತನಿಗೆ ಬೈದಳು. ಅಷ್ಟರಲ್ಲಿ “ಅಲ್ನೋಡಿ ಮೇಡಂ, ದೇವಸ್ಥಾನ ಆಲ್ಮೋಸ್ಟ್ ಮುಳುಗೇ ಹೋಗಿದೆ” ಎಂದು ಆಟೋ ಡ್ರೈವರ್ ರಸ್ತೆ ಬದಿಯಲ್ಲಿದ್ದ ದೇವಸ್ಥಾನದತ್ತ ನಮ್ಮ ಗಮನ ಸೆಳೆದರು. ಅಲ್ಲಿ ನೋಡಿದರೆ ದೇವರೂ ಕೊಚ್ಚಿ ಹೋಗುವ ಭಯದಲ್ಲಿದ್ದ! ಅವನನ್ನು ರಕ್ಷಿಸಲು ಅಲ್ಲಿದ್ದ ಮನುಷ್ಯರೇ ಪ್ರಯತ್ನಿಸುತ್ತಿದ್ದರು!

ಆ ಭಗವಂತನೇ ತನ್ನನ್ನು ತಾನು ರಕ್ಷಿಸಿಕೊಳ್ಳಲು ಅಶಕ್ತನಾಗಿರುವಾಗ, ನಮ್ಮಂಥ ಹುಲುಮಾನವರನ್ನು ಹೇಗೆ ರಕ್ಷಿಸಿಯಾನು? ಎನ್ನುವ ಪ್ರಶ್ನೆ ನಮ್ಮ ಮನಗಳಲ್ಲಿ ಮೂಡುತ್ತಿತ್ತು. ಅಷ್ಟರಲ್ಲಿ ಹಾಗೂ-ಹೀಗೂ ಚಾಮರಾಜ ಪೇಟೆಯ ದಾರಿಯಿಂದ ಕಾಟನ್ ಪೇಟೆ ಕಡೆಗೆ ನಮ್ಮ ಆಟೋ ಚಲಿಸುತ್ತಿತ್ತು. ಇನ್ನೇನು ಬಸ್‍ಸ್ಟಾಂಡ್ ಹತ್ತಿರ ಬಂದೇ ಬಿಟ್ಟೆವು ಎಂದು ನಾ ಅಂದುಕೊಂಡ ಸಮಯಕ್ಕೆ, ಎದುರಿನಿಂದ ಬರುತ್ತಿದ್ದ ಆಟೋದವರೊಬ್ಬರು, ನಮ್ಮ ಆಟೋದವರಿಗೆ ಮೆಜಸ್ಟಿಕ್‍ಗೆ ಹೋಗಲು ಆಗುವುದಿಲ್ಲವೆಂದು ತಿಳಿಸಿದರು. ನಮ್ಮ ಆಟೋದವರು ರಸ್ತೆಯ ಪಕ್ಕಕ್ಕೆ ಆಟೋ ನಿಲ್ಲಿಸಿ, “ಏನ್ ಮಾಡ್ಲಿ ಸಾರ್? ಇನ್ನೊಂದು ಸ್ವಲ್ಪ ಮುಂದೆ ಬಿಡುತ್ತೇನೆ. ಅಲ್ಲಿಂದ ನಡೆದುಕೊಂಡು ಹೋಗ್ತೀರೋ?” ಎಂದು ಕೇಳಿದರು. ಈ ಮಳೆಯಲ್ಲಿ ಹೇಗಪ್ಪಾ ನಡೆಯೋದು ಎನ್ನುವ ದಿಗಿಲು ಶುರುವಾಯಿತು. ನನ್ನಾಕೆಯು, “ಹೇಗಾದರೂ ಮಾಡಿ, ಮೆಜಸ್ಟಿಕ್‍ಗೆ ಬಿಟ್ಟು ಬಿಡಿ” ಎಂದು ಕೇಳತೊಡಗಿದಳು. “ನಾ ಏನ್ ಮಾಡ್ಲಿ ಮೇಡಂ, ಮೆಜಸ್ಟಿಕ್ ತುಂಬಾ ಡೌನ್‍ನಲ್ಲಿದೆ. ಈಗಾಗಲೇ ಸಾಕಷ್ಟು ನೀರು ನುಗ್ಗಿರುತ್ತೆ. ಟ್ರಾಫಿಕ್ ಜಾಮ್ ಬೇರೆ ಆಗಿರುತ್ತೆ’ ಎಂದರು. ಅಷ್ಟರಲ್ಲಿ ಇವಳ ಮೊಬೈಲ್ ರಿಂಗಣಿಸತೊಡಗಿತು. ಬ್ಯಾಗಿನಿಂದ ಮೊಬೈಲ್ ತೆಗೆದು ನೋಡಿದವಳೆ “ಅಮ್ಮಾ” ಎಂದು ಮಾತನಾಡತೊಡಗಿದಳು. ಕೆಲವು ಕ್ಷಣಗಳ ನಂತರ ಮೊಬೈಲ್ ಕಟ್ ಮಾಡಿ “ಈ ಮಳೇಲಿ ಹೇಗೆ ಹೋಗ್ತಿರಾ? ಸುಮ್ನೆ ಮನೆಗೆ ಬನ್ನಿ” ಎಂದು ಬೈಯುತ್ತಿದ್ದಾರೆ ಎಂದಳು.

ಇದನ್ನು ಕೇಳಿಸಿಕೊಂಡ ನಮ್ಮ ಆಟೋದವರು “ಎಲ್ಲಿ ಮೇಡಂ ನಿಮ್ಮ ಮನೆ?” ಎಂದರು. “ಮಾಗಡಿ ರೋಡ್” ಇವಳೆಂದಳು. “ಹಾಗಾದ್ರೆ ನಂಗೂ ಹತ್ರ ಮೇಡಂ. ನಮ್ಮನೆ ಪೀಣ್ಯದಲ್ಲಿರೋದು. ನಿಮ್ಮನ್ನ ಬಿಟ್ಟು ನಾನೂ ಸೀದಾ ಮನೆಗೆ ಹೋಗ್ಬಿಡ್ತೀನಿ, ದಾರಿ ಹೇಳಿ” ಎಂದು ಮಾಗಡಿ ರೋಡಿನ ಕಡೆಗೆ ಆಟೋ ತಿರುಗಿಸಿದರು. ನಾನು ಮೌನದಿಂದ ಸಮ್ಮತಿಸಿದೆ. ಸ್ವಲ್ಪ ಹೊತ್ತಿಗೆಲ್ಲಾ ನನ್ನತ್ತೆಯ ಮನೆಗೆ ಬಂದೆವು. ಆಟೋ ಇಳಿದು, ಮಾನವತೆಯೇ ಮೈವೆತ್ತಂತ್ತಿದ್ದ ಆಟೋದವರಿಗೆ ಹಣ ನೀಡಿ, ಥ್ಯಾಂಕ್ಸ್ ಹೇಳಿದೆವು. ಅವರು ಪ್ರತ್ಯುತ್ತರವಾಗಿ, “ನೀವು ಆಸ್ಪತ್ರೆಯಿಂದ ಬಂದವರೆಂದು ತಿಳಿದು. ನನಗೂ ನಿಮ್ಮನ್ನು ದಾರಿ ಮಧ್ಯದಲ್ಲಿ ಇಳಿಸಲು ಮನಸ್ಸಾಗಲಿಲ್ಲ ಸಾರ್. ಒಳ್ಳೆಯದಾಗಲಿ ನಿಮಗೆ, ಬರ್ತೀನಿ” ಎಂದವರೇ ಮುಂದೆ ಚಲಿಸಿದರು.

ನಾವಿಬ್ಬರೂ ಮನೆಯೊಕ್ಕಿದ್ದೆ ತಡ, “ಅಪ್ಪಾ...” ಎಂದು ಸ್ವೆಟರ್ ಮತ್ತು ಟೋಪಿಯಲ್ಲಿ ಕವರಾಗಿದ್ದ ನಮ್ಮ ಗುಬ್ಬಚ್ಚಿ ಮರಿ ಗೋಮಿನಿಯು ಓಡೋಡಿ ಬಂದಳು. ಆ ಮಳೆಯಲ್ಲಿ ಊರಿಗೆ ಹೊರಟಿದ್ದ ನಮ್ಮನ್ನು ಮನೆಯಲ್ಲಿದ್ದವರೆಲ್ಲಾ ಚೆನ್ನಾಗಿಯೇ ತರಾಟೆ ತೆಗೆದುಕೊಂಡರು. ಊಟ ಮಾಡಿ ಮಲಗಿದ ನನಗೆ ನಿದ್ದೆಯಲ್ಲೂ ಮಳೆಯಿಂದ ಆದ ಅಸ್ತವ್ಯಸ್ತ ಜಗತ್ತಿನ ಅಸ್ಪಷ್ಟ ಚಿತ್ರಗಳು ಕಾಡುತ್ತಿದ್ದವು.

- ಗುಬ್ಬಚ್ಚಿ ಸತೀಶ್.

14 ಕಾಮೆಂಟ್‌ಗಳು:

 1. ಇದು ಬೆಂಗಳೂರಿನ ಮೊನ್ನೆ ಮಳೆಯ ಚಿತ್ರಣವೋ.....?

  ಓದ್ತಾ ಹೋದ್ರೆ ನಾವೇ ಮಳೆಗೆ ಸಿಕ್ಕಿದಂಗಿತ್ತು..

  ಪ್ರತ್ಯುತ್ತರಅಳಿಸಿ
 2. ಪ್ರೀತಿಯ ಗುಬ್ಬಚ್ಚಿ..

  ಎಷ್ಟು ಚಂದವಾಗಿ ಬರಿತೀರಿ ನೀವು... !
  ನಿಮ್ಮ ಬರಹಗಳು.. ನೋವುಂಡವರ ನಗುವಂತೆ ಇರುತ್ತವೆ..

  ಪ್ರತ್ಯುತ್ತರಅಳಿಸಿ
 3. ಸರ್ ಆ ಆಟೋದವನಿಗೆ ದೊಡ್ಡ ಥ್ಯಾಂಕ್ಸ್ ಹೇಳಬೇಕು.ಆ ಮಳೆಯಲ್ಲಿ ಅವನ ತಾಳ್ಮೆ ಮತ್ತು ಮಾನವೀಯತೆ ಮೆಚ್ಚಬೇಕಾದ ಸಂಗತಿ...

  ಪ್ರತ್ಯುತ್ತರಅಳಿಸಿ
 4. ನಿಮ್ಮ ಮಳೆಯ ಅನುಭವ ವಿಶೇಷವಾಗಿತ್ತು. ಈ ಭಯಾನಕ ಮಳೆ ಬಂದಾಗ ಹ್ಯಾಗಪ್ಪ ಮನೆ ಸೇರೋದು ಅಂತ ಎಲ್ಲರಿಗೂ ಚಿಂತೆಯಾಗಿರುತ್ತೆ. ಮಾರ್ಗ ಮಧ್ಯ ಸಿಕ್ಕಿಹಾಕಿಕೊಂಡರಂತೂ ಆ ದೇವರೇ ಕಾಪಾಡಬೇಕು...!!!

  ಆಟೋದವರು ಬಹಳ ಕೆಟ್ಟವರು ಎಂದು ಕೆಲವರು ಅಪಾದಿಸುತ್ತಲೇ ಇರುತ್ತಾರೆ. ಅವರು ಕೂಡ ನಮ್ಮಂತೆ ಮನುಷ್ಯರು. ಒಳ್ಳೆಯವರು ಇರುತ್ತಾರೆ. ಹಾಗೆ ಕೆಟ್ಟವರು ಕೂಡ.

  ಪ್ರತ್ಯುತ್ತರಅಳಿಸಿ
 5. ಸತೀಶ್ ಸರ್,

  ನಿಮ್ಮ ಮಳೆ ಅನುಭವ ತುಂಬಾ ಚೆನ್ನಾಗಿದೆ. ಕೆಟ್ಟವರ ಒಳ್ಳೆಯ ಆಟೋ ಚಾಲಕರು ಇರುತ್ತಾರೆ ಎನ್ನುವುದಕ್ಕೆ ನಿಮ್ಮ ಉದಾಹರಣೆಯೇ ಸಾಕ್ಷಿ. ಮನತಟ್ಟುವ ಬರಹಕ್ಕೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 6. ಮನಸ್ಸಿಂದ ಮೂಡಿದ ನಿಮ್ಮ ಭಾವನೆಗಳನ್ನು ಹಾಗು ಅನುಭವಗಳನ್ನು ನಮ್ಮೊಡನೆ ಹಂಚಿಕೊಂದದಕ್ಕೆ ಧನ್ಯವಾದಗಳು .ಆಟೋ ಚಾಲಕನ ಕಾರ್ಯ ನಿಷ್ಟೆ ಎಲ್ಲದರಾಗಿ ನಿಮ್ಮ ಅನುಭವಗಳು ನನ್ನದಾಗಿ ಭೂಮಿಗೆ ಮಳೆ ಭಾರವಾದ ಹೊತ್ತಿಗೆ ನೀವು ಮನೆ ಸೇರಿದ ಕ್ಷಣ ನಿಮ್ಮ ಮನೆಯವರ ಮುಖದಲ್ಲಿ ಮೂಡಿರುವ ಕುಶಿಯನ್ನು ಯಾರು ಬೇಕಾದರೂ ಊಹಿಸಬಲ್ಲರು . ಚೆನ್ನಾಗಿದೆ ತುಂಬಾ ಚೆನ್ನಾಗಿದೆ ಗೆಳೆಯ .

  ಪ್ರತ್ಯುತ್ತರಅಳಿಸಿ
 7. ಮಾನವಿಯು ಇನ್ನೂ ರಾರಜಿಸುತ್ತಿದೆ ಎನ್ನುದಕ್ಕೆ ನಿಮ್ಮ ಲೇಖನವೇ ಸಾಕ್ಷಿ. ಚೆನ್ನಾಗಿದೆ

  ಪ್ರತ್ಯುತ್ತರಅಳಿಸಿ
 8. ಸತೀಶ್ ಕಳೆದೆರಡು ವರ್ಷ ಮಳೆ ಅವಾಂತರಗಳು..ಬೆಂಗಳೂರಿನ ಮೋರಿ ನೀರಲ್ಲಿ ಬಾಲಕರ ಬಲಿ..ಎಲ್ಲಾ ನೆನಪಾಯ್ತು ನಿಮ್ಮ ಲೇಖನ ಓದಿ...ಹೌದು ಅಲ್ಲೊಂದು ಇಲ್ಲೊಂದು ಮಾನವೀಯತೆ ಸಾಕಾರ ಮೂರ್ತಿಗಳು ಇರುವುದರಿಂದಲೇ..ಆಶಾಭಾವ ಮೂಡುವುದು...ಚನಾಗಿದೆ ಲೇಖನ.

  ಪ್ರತ್ಯುತ್ತರಅಳಿಸಿ
 9. eshTu chennaagi baritiri sir....

  very nice...
  kaNNige kaTTuvante ide...

  wonderfull...

  ಪ್ರತ್ಯುತ್ತರಅಳಿಸಿ
 10. ಸರ್,
  ನಿಜವಾಗಲೂ ಅಂತ ಮಳೇಲೂ ನಿಮ್ಮನ್ನು ಅಷ್ಟು ದೂರ ಕರೆದುಕೊಂಡು ಹೋಗಿದ್ದಾನೆ ಅಂದರೆ ಅವನು ತಾಳ್ಮೆಯ ಮೂರ್ತಿನೇ ಸಾರ್.. ಅದ್ಬುತವಾಗಿದೆ...

  ಪ್ರತ್ಯುತ್ತರಅಳಿಸಿ