ಬ್ಲಾಗ್ ಆರ್ಕೈವ್

ಶುಕ್ರವಾರ, ಮಾರ್ಚ್ 18, 2011

ಗಡ್ಡ ಧಾರಿ ನಲ್ಲ

ಗಡ್ಡ ಧಾರಿ ನಲ್ಲ


ಪಿಯುಸಿಯಲ್ಲಿದ್ದಾಗ ಇರಬೇಕು ನನ್ನ ಗಡ್ಡ ಚಿಗುರತೊಡಗಿತ್ತು. ಹಾಲುಗೆನ್ನೆಯ ಮೇಲೆ ಅಲ್ಲೊಂದು ಇಲ್ಲೊಂದು ಕೂದಲು. ನುಣುಪಾದ ಕಲ್ಲಿನ ಮೇಲಿನ ಪಾಚಿಯಂತೆ. ಮೀಸೆ ಚಿಗುರಿದ ಸ್ವಲ್ಪ ದಿನಗಳಲ್ಲೇ ಗಡ್ಡವೂ ಚಿಗುರತೊಡಗಿತಲ್ಲ, ಶುರುವಾಯಿತು ಪೀಕಲಾಟ. ಒಂದು ಕಡೆ ನಾನು ಗಂಡಸಾಗುತ್ತಿದ್ದೀನಲ್ಲ ಎಂಬ ಹರ್ಷ. ಮತ್ತೊಂದೆಡೆ ನಯವಾದ ಕೆನ್ನೆಗಳು ಒರಟಾಗುತ್ತವಲ್ಲ ಎಂಬ ಯೋಚನೆ. ಯಾವುದೇ ಕಾರಣಕ್ಕೂ ಜೀವನದಲ್ಲಿ ಗಡ್ಡ ಬಿಡಬಾರದು, ಯಾವಾಗಲೂ ನೀಟಾಗಿ ಶೇವ್ಮಾಎಡಿಕೊಂಡು ಮೀಸೆ ಇರುವ ಅನಂತ್ನಾಕಗ್ನಂ್ತೆ ಕಾಣುವ ಆಸೆ ಮೊದಲಿನಿಂದಲೂ ಮನದಲ್ಲಿತ್ತು. ಬಯಲುದಾರಿಯ ಸುರಸುಂದರಾಂಗ ಅನಂತ್ ನೀಟಾಗಿ ಶೇವ್‍ ಮಾಡಿಕೊಂಡು ಅದೆಷ್ಟು ಸುಂದರವಾಗಿ ಕಾಣುತ್ತಿದ್ದ. ಆಗ ಆತನಿಗೆ ಮೀಸೆ ಇದ್ದರೆ ಇನ್ನೂ ಚೆನ್ನಾಗಿ ಕಾಣುತ್ತಿದ್ದನೆನೋ?

ಗಡ್ಡ ಚಿಗುರಿದ ಮೇಲೆ ಹೇರ್ ಕಟಿಂಗ್ ಮಾಡುವವರ (ನಾನು ಅವರನ್ನು ಹಜಾಮನೆನ್ನುವುದಿಲ್ಲ) ಬಳಿ ಹೋದಾಗ ಬಹಳ ಭಯ ಶುರುವಾಗಿತ್ತು. ಅವರೇನಾದರೂ ಹೊಚ್ಚ ಹೊಸ ಬ್ಲೇಡನ್ನು ತಮ್ಮ ಕತ್ತಿಗೆ ಸಿಲುಕಿಸಿಕೊಂಡು ಕೆನ್ನೆಗೆ ಬುರ ಬುರ ನೊರೆಹಚ್ಚಿ ಪರಪರ ಕೆರೆದರೆ ಎಂಬ ಭಯ. ಅಂದು ಹೇರ್ ಕಟಿಂಗ್ ಆದ ನಂತರ ಅವರೇ “ನಿನಗೆ ಈಗಲೇ ಶೇವ್ ಮಾಡುವುದಿಲ್ಲ. ಟ್ರಿಮ್ ಮೇಷಿನ್ನಿಂ ದ ಗಡ್ಡವನ್ನು ಟ್ರಿಮ್ ಮಾಡುತ್ತೇನೆ. ಚೆನ್ನಾಗಿ ಬೆಳೆಯುವವರೆಗೆ ಎಲ್ಲೂ ಶೇವ್ ಮಾಡಿಸಬೇಡಿ” ಎಂದರು. ನನ್ನ ಭಯಕ್ಕಿಂತ ಮುಖ್ಯವಾಗಿ ನಮ್ಮಂಥ ಯುವಕರ ಮುಖ ಬೇಗ ಹಾಳಾಗದಿರಲಿ ಎಂಬುದು ಅವರ ಅಭಿಲಾಷೆಯಾಗಿರಬೇಕು. ಸದ್ಯ! ದೇವರೇ ಕಾಪಾಡಿದ.

ಹೇಳಿ ಕೇಳಿ ಗಡ್ಡ! ನನ್ನ ಮಾತೆಲ್ಲಿ ಕೇಳಬೇಕು. ದಿನಗಳೆದಂತೆಲ್ಲಾ ಮತ್ತೆ ಬೆಳೆಯತೊಡಗಿತು. ಅಲ್ಲೊಂದು ಇಲ್ಲೊಂದು ಬೆಳೆಯುತಿದ್ದ ಕೂದಲುಗಳು ದಟ್ಟವಾಗತೊಡಗಿದವು. ನಾನೇನು ಅದಕ್ಕೆ ಪ್ರತ್ಯೇಕವಾಗಿ ನೀರು, ಗೊಬ್ಬರ ಹಾಕಿರಲಿಲ್ಲ. ಆದರೂ ಸೊಂಪಾಗಿ ಬೆಳೆಯತೊಡಗಿತು ನನ್ನ ಗಡ್ಡ. ಎಷ್ಟು ಸಲ ಟ್ರಿಮ್ ಮಾಡಿಸುವುದು? ಕಡೆಗೊಂದು ದಿನ ಹೇರ್ ಕಟಿಂಗ್ ಮಾಡುತ್ತಿದ್ದವರು ಹೇಳಿಯೇ ಬಿಟ್ಟರು: “ನೀವು ಇನ್ನು ಮುಂದೆ ಶೇವ್ ಮಾಡಿಸಿಕೊಂಡು ಬಿಡಿ. ಸಾಧ್ಯವಾದರೇ ಮನೆಯಲ್ಲೇ ಮಾಡಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಿ”. ಆತ ಹೇಳಿದ್ದು ನನಗೆ ವೇದವಾಕ್ಯದಂತಿತ್ತು.

ವೇದವಾಕ್ಯ ಯಾಕೆಂದರೆ ಅದಾಗಲೇ ಮಹಾಮಾರಿ ಏಡ್ಸ್ ಜಗತ್ತಿನಲ್ಲೆಲ್ಲಾ ಹರಡತೊಡಗಿತ್ತು. ಹರಡುವ ವಿಧಾನಗಳಲ್ಲಿ ಯಾರಾದರೂ ಏಡ್ಸ್ ರೋಗಿಯ ಗಡ್ಡವನ್ನು ತೆಗೆದ ಬ್ಲೇಡ್ನೆಲ್ಲಿ ರಕ್ತ ಅಂಟಿದ್ದರೆ, ಅದೇ ಬ್ಲೇಡ್ನಿಂಾದ ಶೇವ್ ಮಾಡಿಸಿಕೊಳ್ಳುವ ಆರೋಗ್ಯವಂತನಿಗೂ ಏಡ್ಸ್ ಬರುವ ಸಾಧ್ಯತೆ ಬಹಳವಿರುತ್ತದೆ ಎಂಬುದು. ಇದು ಮೊದಲೇ ತಿಳಿದುದರಿಂದ ನಾ ಅಂದು ಶೇವ್ ಮಾಡಿಸಿಕೊಳ್ಳಲಿಲ್ಲ. ಅದಾಗಲೇ ಸಲೂನ್ರದವರು ಎಲ್ಲರಿಗೂ ಪ್ರತ್ಯೇಕವಾದ ಬ್ಲೇಡ್ ಬಳಸುತ್ತಿದ್ದರೂ ನನಗೆ ಯಾಕೋ ಹಾಳು ಅನುಮಾನ ಮತ್ತು precaution is better than cure ಎಂಬ ನಿರ್ಧಾರ.

ಅಲ್ಲಿಗೆ ನಾನೇ ದಿನಾ ಶೇವ್ ಮಾಡಿಕೊಳ್ಳುವುದೆಂದು ನಿರ್ಧರಿಸಿಯಾಗಿತ್ತು. ಹೇಗಿದ್ದರೂ ಚಿಕ್ಕಂದಿನಲ್ಲಿ ತಾತ, ಅಪ್ಪ, ಚಿಕ್ಕಂಪ್ಪಂದಿರು ಶೇವ್ಮಾಂಡಿಕೊಳ್ಳುತ್ತಿದ್ದುದನ್ನು ತನ್ಮಯನಾಗಿ ನೋಡಿದ್ದೆ. ಅದಾಗಲೇ ಅಣ್ಣನೂ ಶೇವ್ ಮಾಡಿಕೊಳ್ಳಲು ಶುರುಮಾಡಿದ್ದ. ಹೊಚ್ಚಹೊಸ ಬ್ಲೇಡ್ ತೆಗೆದುಕೊಂಡು ಅಂತೂ ಇಂತೂ ಶೇವ್ ಮಾಡಿಕೊಂಡೆ, ಮೊದಲನೆಯ ಶೇವಿಂಗ್ ಎಕ್ಸ್‍ಪಿರಿಯನ್ಸ್ ಮೊದಲ ಗೆಳತಿಯಷ್ಟೆ ನಿಚ್ಚಳ! ಅಲ್ಲಲ್ಲಿ ಕೆಂಪಾದಂತೆ ಕಂಡರೂ, ಮುಖ ಕಪ್ಪಾಗುತ್ತೆಂಬ ಭೀತಿಯಲ್ಲಿ After Shave ಬಳಸಬಾರದೆಂದು ನಿರ್ಧರಿಸಿದ್ದೆ. ಎಲ್ಲದಕ್ಕೂ ಬಿಸಿ ನೀರು ಅಷ್ಟೆ.

ಕಾಲೇಜಿನ ದಿನಗಳಲ್ಲಿ ಪ್ರತಿ ಭಾನುವಾರದಂದು ಶೇವ್ ಮಾಡಿಕೊಳ್ಳುವುದು ಅಭ್ಯಾಸವಾಯಿತು. ಪದವಿ ಮುಗಿದು ಕೆಲಸಕ್ಕೆ ಸೇರಿದ ಮೇಲೆ ದಿನವೂ ಶೇವ್ ಮಾಡುವುದು ರೂಢಿಯಾಯಿತು. ದಿನಾಗಲೂ ಶೇವ್ ಮಾಡಿಕೊಂಡು ನೀಟಾಗಿ ಬರುವ ಬೆರಳೆಣಿಕೆಯಷ್ಟು ಸಿಬ್ಬಂದಿ ವರ್ಗದವರ ಲಿಸ್ಟಿಗೆ ಸೇರಿದ್ದೂ ಆಯಿತು. ಆಫೀಸಿನಲ್ಲಿ ಕೆಲವರಂತೂ ಮುಖವೇ ಕಾಣದ ಹಾಗೆ ಗಡ್ಡ ಬಿಟ್ಟಿದ್ದರು. ಕಾರಣ ಕೇಳಿದರೆ, “ಅಲರ್ಜಿ ಆಗುತ್ತದೆ. ಟೈಮಿಲ್ಲ. ಹೀಗೆ ಚೆನ್ನಾಗಿ ಕಾಣುತ್ತದೆ” ಎಂದುತ್ತರಿಸುತ್ತಿದ್ದರು. ಆದರೂ ನಾನು ಕೇಳುವುದನ್ನು ಬಿಡುತ್ತಿರಲಿಲ್ಲ. ಏನಾದರೂ ಮಾಡಿ ಇವರ ಗಡ್ಡ ತೆಗೆಸಿ ಸರಿಯಾಗಿ ಅವರ ಮುಖ ನೋಡಬೇಕೆನ್ನುವ ಹಠ. ನನ್ನ ಹಿಂಸೆಗೆ ಒಬ್ಬೊಬ್ಬರು ಗಡ್ಡ ಬೋಳಿಸಿಕೊಂಡು ಬಂದು ಎಲ್ಲರಿಗೂ ಹಿಂಸೆ ಕೊಡಲು ಶುರುಮಾಡಿದ್ದರು.

ಇವರೆಲ್ಲರನ್ನೂ ನೋಡಿ ನನಗೂ ಗಡ್ಡ ಬಿಡಬೇಕೆಂಬ ಆಲೋಚನೆ ಇಣುಕಹತ್ತಿತ್ತು. ಈ ಆಲೋಚನೆಗೆ ನನ್ನ ನೆಚ್ಚಿನ ಮತ್ತೊಬ್ಬ ನಟ ಶಂಕರನಾಗ್ ಗಡ್ಡದ inspiration ಬೇರೆ kuಕುಮ್ಮಕ್ಕು ನೀಡತೊಡಗಿತು. ಜಾರ್ಜ್ ಬರ್ನಾಡ್ ಶಾರಂತೂ ದಿನಕ್ಕೆ ನಾಲ್ಕು ನಿಮಿಷ ವೇಷ್ಟೆಂದು ಗಡ್ಡವನ್ನು ತೆಗೆಯುತ್ತಿರಲಿಲ್ಲ. ಗಡ್ಡವನ್ನು ಬಿಟ್ಟರೆ ಟೈಮೂ ಉಳಿಯುತ್ತಿದ್ದರಿಂದ ಇನ್ನಷ್ಟು ಹೆಚ್ಚು ಓದಬಹುದಲ್ಲ ಎಂಬ ಆಸೆ ಬೇರೆ ಜೊತೆಗೂಡಿತು. ಆದರೆ ಯಾಕೋ ಮನಸೇ ಬರಲಿಲ್ಲ. ಅಲ್ಲಿಗೆ ಗಡ್ಡ ಬಿಡುವ ವಿಚಾರ ಕೈ ಬಿಟ್ಟಂತಾಯಿತು. ಜೊತೆಗೆ ದಿನಾಗಲೂ ನೀಟಾಗಿ ಶೇವ್ ಮಾಡಿಕೊಂಡು ಆಫೀಸಿಗೆ ಹೋಗು ಎನ್ನುವ ಅಪ್ಪನ ಅಡ್ವೈಸಿತ್ತು.

ವರ್ಷಗಳು ಉರುಳಿದವು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಲಕ್ಷ್ಮಿಯನ್ನು ಕೈ ಹಿಡಿಯುವ ಮುಹೂರ್ತ ಬಂತು. ಸರಳ ಸುಂದರ ವಿವಾಹ. ಅಂದಂತೂ ಮೂರು ಬಾರಿ ಶೇವ್ ಮಾಡಿಕೊಂಡಿದ್ದಾಯಿತು. ಮನತುಂಬಿದ್ದವಳನ್ನು ಮದುವೆಯಾಗಿ ಮನೆ ತುಂಬಿಸಿಕೊಂಡದ್ದಾಯಿತು. ಮೊದಲ ರಾತ್ರಿಯೇ ನನ್ನ ನಯವಾದ ಕೆನ್ನೆಯನ್ನು ಮೆಚ್ಚಿ hಹೊಗಳಿದ್ದಳು ನನ್ನ ಮಡದಿ. ಅದಕ್ಕೆ ಬೋನಸ್ಸಾಗಿ ಎರಡು ಸಿಹಿಮುತ್ತುಗಳು ಹೆಚ್ಚಾಗಿವೇ ದೊರೆತವು. ಅಲ್ಲಿಗೆ ದಿನಾಗಲೂ ನಯವಾಗಿ ಶೇವ್ ಮಾಡಿಕೊಳ್ಳುವುದರ ಖುಷಿಯ ಜೊತೆಗೆ ಪ್ರಯೋಜನವಾಗತೊಡಗಿತ್ತು.

ಅದೇನಾಯಿತೋ ಏನೋ ಇದ್ದಕ್ಕಿದ್ದಂತೆ ನನ್ನ ಹೆಂಡತಿಗೆ ನನ್ನ ಗಡ್ಡವನ್ನು ನೋಡುವ ಬಯಕೆಯಾಯಿತು. ಒಂದು ದಿನ ಬಿಂಕದಿಂದ “ರೀ, ನೀವು ಒಂದು ತಿಂಗಳ ಕಾಲ ಗಡ್ಡ ಬಿಟ್ಟು ಬಿಡಿ. ನಿಮ್ಮನ್ನು ಗಡ್ಡದಲ್ಲಿ ನೋಡುವ ಆಸೆಯಾಗಿದೆ” ಎಂದು ಕೋರಿಕೆಯಿಟ್ಟಳು. ನಾ ಬೇಡವೆಂದೆ. ಅವಳು ಬಿಡಲಿಲ್ಲ. ಕಡೆಗೆ ಅವಳ ಹುಸಿಕೋಪಕ್ಕೆ ಭಯವಾಗಿ ನಾನೇ ಸೋತೆ. ಆದರೆ ನನ್ನದೊಂದು ಕಂಡಿಷನ್ ಮೇಲೆ. ಏನೆಂದರೆ ನಾನು ಗಡ್ಡ ಬಿಟ್ಟಾಗಲೂ ದಿನಾಲೂ ಕೊಡುವ ಬೋನಸ್ ಮುತ್ತುಗಳನ್ನು ತಪ್ಪಿಸಬಾರದೆಂದು. ಅದಕ್ಕವಳು ಒಪ್ಪಿ ಕೆನ್ನೆಯ ಮೇಲೆ ರುಜು ಹಾಕಿದಳು.

ಹೆಂಡತಿಗಾಗಿ ಯಾರ್ಯಾರೋ ಏನೇನನ್ನೋ ಮಾಡಿದ್ದಾರೆ. ಆರನೇ ಜಾರ್ಜ್, ಬ್ರಿಟಿಷ್ ಸಾಮ್ರಾಟ ಸಿಂಹಾಸನವನ್ನೇ ತ್ಯಜಿಸಲಿಲ್ಲವೇ? ಅಂದಿನಿಂದ ಗಡ್ಡ ಬಿಡುವುದು ಶುರುವಾಯಿತು. ಮೊದಲ ದಿನದ ಗಡ್ಡವನ್ನು ಕನ್ನಡಿಯಲ್ಲಿ ನೋಡಿಕೊಂಡರೆ ಎನೋ ಇರುಸುಮುರುಸು. ಕನ್ನಡಿಯೂ ಬೇಜಾರು ಮಾಡಿಕೊಂಡಂತಿತ್ತು. ಬದಲಾವಣೆ ಜಗದ ನಿಯಮವಾಗಿರುವಾಗ ನನ್ನದೇನು ಎಂದು ಕೊಂಡು ಆಫೀಸಿಗೆ ಹೋರಟ್ಟದಾಯಿತು. ಬಾಗಿಲ ಬಳಿ ನಿಂತು ಮಡದಿ ಮುಸಿಮುಸಿ ನಗುತ್ತಿದ್ದಳು. ಕಣ್ಣಲ್ಲೇ ಚೆನ್ನಾಗಿದೆ ಎಂದಳು.

For the first time in my life ಗಡ್ಡದ ಜೊತೆ ಆಫೀಸಿಗೆ ಹೊರಟ್ಟಿದ್ದೆ. ದಾರಿಯಲ್ಲೆಲ್ಲಾ ನನ್ನನ್ನೇ ನೋಡುತ್ತಿದ್ದಾರೇನೋ ಎಂದೆನಿಸುತ್ತಿತ್ತು. ಆಫೀಸಿನಲ್ಲಿ ಕಿಚಾಯಿಸುವವರನ್ನು ನೆನೆದು ಭಯವಾಗುತ್ತಿತ್ತು. ಹೆಂಡತಿ ಹೇಳಿದರೆ ಕೇಳಲೇಬೇಕು ಎಂಬ ಹಾಡನ್ನು ನೆನೆದು ಸಮಾಧಾನಮಾಡಿಕೊಂಡು, ಏನಾದರಾಗಲಿ ಯಾರಿಗೂ ಗಡ್ಡ ಬಿಟ್ಟ ಕಾರಣವನ್ನು ಹೇಳಬಾರದೆಂದು ಆಫೀಸಿಗೆ ಕಾಲಿಟ್ಟಿದ್ದಾಯಿತು.

ಮೊದಲ ದಿನವಾದ್ದರಿಂದ ಅಷ್ಟಾಗಿ ಯಾರೂ ಗಮನಿಸಲಿಲ್ಲ. ಎರಡು, ಮೂರು ದಿನ ಕಳೆದ ಮೇಲೆ ಎಲ್ಲರೂ ನನ್ನನ್ನೇ ದಿಟ್ಟಿಸತೊಡಗಿದರು. ಕಡೆಗೂ ರೆಗ್ಯೂಲರ್ರಾಗಿ ಗಡ್ಡ ಬಿಡುತ್ತಿದ್ದವರೊಬ್ಬರಿಂದ ನಿರೀಕ್ಷಿತ ಪ್ರಶ್ನೆ ಬಂತು. “ಏನ್ರೀ? ಗಡ್ಡ ಬಿಟ್ಬುಟಿದ್ದೀರಾ?” ವ್ಯಂಗ್ಯ ಬೆರೆತ ಧ್ವನಿ. “ಏನಿಲ್ಲಾ ಸಾರ್, ಫಾರ ಎ ಚೇಂಜ್ ಅಷ್ಟೆ” ಎಂದು ಅಂದು ಮಾತು ತೇಲಿಸಿದ್ದಾಯಿತು. ಆದರೆ ಕಿಚಾಯಿಸುವವರು ಅಷ್ಟಕ್ಕೇ ಸುಮ್ಮನಿರಬೇಕಲ್ಲಾ? ಮೊದಲೆಲ್ಲಾ ನಾನು ರೇಗಿಸುತ್ತಿದ್ದವರಿಗೆಲ್ಲಾ ನನ್ನನ್ನು ರೇಗಿಸಲು ನಾನಾಗಿಯೇ ಒಂದು ಟಾಪಿಕ್ ಕೊಟ್ಟಂತಾಗಿತ್ತು. ಮತ್ತೆ ದಿನಾಗಲೂ ನನ್ನ ಗಡ್ಡದ ಬಗ್ಗೆಯೇ ಪ್ರಶ್ನೆಗಳ ಮಳೆ ಶುರುವಾಯಿತು. ದಿನಾಲು ಏನಾದರೊಂದು ಹೇಳಿ, ನನ್ನ ನಲ್ಲೆಯನ್ನು ಮನದಲ್ಲೇ ನೆನೆಯುತ್ತಾ, ಒಳಗೊಳಗೇ ನಗುತ್ತಾ ಆಗುತ್ತಿದ್ದ ಮುಜುಗರದಿಂದ ತಪ್ಪಿಸಿಕೊಳ್ಳತೊಡಗಿದೆನು. ಎಲ್ಲಿಯವರೆಗೂ ತಪ್ಪಿಸಿಕೊಳ್ಳುವುದು? ಕಡೆಗೂ ಆಘಾತವಾಗುವಂತ ಒಂದು ಪ್ರಶ್ನೆ ಮೂಡಿಬಂತು. “ಏನಪ್ಪ ಮದುವೆಯಾಗಿ ಮೂರೇ ತಿಂಗಳಿಗೆ ಏನಾದ್ರೂ ಪ್ರಾಬ್ಲಮ್ಮ?” ಶಶಿ ಆತ್ಮೀಯತೆಯಿಂದ ಕೇಳಿದರೂ ಅವನ ಪ್ರಶ್ನೆ ನನ್ನನ್ನು ಕ್ಷಣಕಾಲ ವಿಚಲಿತನನ್ನಾಗಿಸಿತು. “ಏ ಏನಿಲಮ್ಮಾ?” ಎಂದು ನಕ್ಕಿದೆ. ಮುಂದುವರೆದ ಅವನು “ಎಲ್ಲಾರೂ ನಿನ್ನ ಹಿಂದೆ ನಿನ್ನ ಗಡ್ಡದ ಬಗ್ಗೆಯೇ ಮಾತಾಡುತ್ತಿದ್ದಾರೆ. ಏನೋ ಪ್ರಾಬ್ಲಂ ಇರ್ಬೇಕು ಅದಕ್ಕೆ ಗಡ್ಡ ಬಿಟ್ಟವ್ನೆ ಅಂತಾ. ಬೇಜಾರ್ ಮಾಡ್ಕೋಬೇಡಪ್ಪ” ಎಂಬ ಸಮಾಧಾನದ ಆದರೆ ಎಚ್ಚರಿಕೆಯ ಮಾತನಾಡಿದ್ದ.

ನನ್ನ ಕಷ್ಟ ಅವನಿಗೇನು ಗೊತ್ತು. ಹೇಳುವ ಹಾಗೂ ಇಲ್ಲಾ, ಬಿಡುವ ಹಾಗೂ ಇಲ್ಲ. ಬಾಯಲ್ಲಿ ಬಿಸಿ ತುಪ್ಪ, ಉಗುಳುವ ಹಾಗೂ ಇಲ್ಲ, ನುಂಗುವ ಹಾಗೂ ಇಲ್ಲ. ಏನಾದರಾಗಲಿ ಯಾರಿಗೂ ನಾನು ಗಡ್ಡ ಬಿಟ್ಟ ಕಾರಣವನ್ನು ಹೇಳುವ ಹಾಗಿರಲಿಲ್ಲ. ಹೇಳಲೇಬಾರದೆಂಬ ಮಡದಿಯ ಒತ್ತಾಸೆಯಿತ್ತಲ್ಲ! ಸರಿ, ಹಾಗೆಯೇ ದಿನ ಕಳೆಯುತ್ತಾ, ಕಳೆಯುತ್ತಾ ನನ್ನ ಗಡ್ಡ ಮತ್ತಷ್ಟು, ಮೊಗದಷ್ಟು ಸೊಂಪಾಗಿ ಬೆಳೆಯತೊಡಗಿತು. ಕೇಳುವವರು ಎಷ್ಟು ಅಂತಾ ಎದುರಿಗೆ ಕೇಳಿಯಾರು? ಆದರೆ ಹಿಂದೆ ಪಿಸುಪಿಸು ಗುಸುಗುಸು ತಪ್ಪಲಿಲ್ಲ. ಹೇಳಬೇಕೆಂದರೆ ಅದು ಇನ್ನೂ ಹೆಚ್ಚಾಯಿತು.

ಹೀಗೆ ಇಪ್ಪತ್ತು ದಿನಗಳು ಕಳೆದವು. ಗಡ್ಡದ ಬಗೆಗಿನ ಇತರರ ಕುತೂಹಲ ನನಗೆ ಸಹಿಸಲಾಗಲಿಲ್ಲ. ಅವರ ನೋಟಗಳಲ್ಲೇ ಏನಾದ್ರು ಪ್ರಾಬ್ಲಮ್ಮ? ಎಂಬ ಮೊನಚು ಪ್ರಶ್ನೆಗಳು ಕಾಡುತ್ತಿದ್ದವು. ನನಗೆ ಇನ್ನು ತಡೆಯಲಾಗಲಿಲ್ಲ. ಇಷ್ಟೂ ದಿನವೂ ನನ್ನ ಮಡದಿ ನಿಮ್ಮ ಗಡ್ಡದ ಬಗ್ಗೆ ಆಫೀಸಿನಲ್ಲಿ ಯಾರೂ ಏನೂ ಕೇಳಲಿಲ್ಲವಾ? ಎಂಬ ಪ್ರಶ್ನೆಗೆ ಇಲ್ಲಾ ಎಂದೇ ಉತ್ತರಿಸಿ ಸುಮ್ಮನಾಗುತ್ತಿದ್ದವನು, ಒಂದು ರಾತ್ರಿ ಮಲಗುವ ಮುನ್ನ ಅವಳ ಮುಖವನ್ನೇ ದಿಟ್ಟಿಸುತ್ತಾ ಆಫೀಸಿನಲ್ಲಿ ನನ್ನ ಗಡ್ಡದ ಬಗ್ಗೆ ಮೂಡಿರುವ ಸಂದೇಹಗಳು, ಸಹೋದ್ಯೋಗಿಗಳ ಕುಹಕ ಪ್ರಶ್ನೆಗಳ ಬಗ್ಗೆ ಹೇಳಿದೆ. “ಅವರಿಗೇನಂತೆ?” ಎಂದು ತಕ್ಷಣ ಕೇಳಿದವಳು, ಏನೋ ತಪ್ಪಿ ನುಡಿದವಳಂತೆ ಮತ್ತೆ “ಬೇಡ ಬಿಡಿ, ನಾಳೇನೇ ಗಡ್ಡ ತೆಗೆದುಬಿಡಿ” ಎಂದಳು. “ಏಯ್! ಇಲ್ಲಾ ಕಣೆ, ಯಾರ್ ಏನೇ ಹೇಳ್ಲಿ ನಾನು ಮಾತಿಗ್ ತಪ್ಪಲ್ಲ. ಅದೇನಾಗುತ್ತೋ ಆಗ್ಲಿ ಬಿಡು. ಕೆಲವರನ್ನ ಅರ್ಥಮಾಡ್ಕೋಳ್ಳೊಕ್ಕೂ ಇದು ಒಳ್ಳೆ ಟೈಮು ಅಂತ ಸುಮ್ನೆ ಇದ್ದುಬಿಡ್ತೀನಿ. ನೀ ಸುಮ್ನಿರು ಜಾಸ್ತಿ ತಲೆ ಕೆಡಿಸ್ಕೋಬೇಡ” ಅಂದೆ. ಅದಕ್ಕವಳು, “ಅದು ಹಾಗಲ್ಲಾರೀ... ಅವರೆಲ್ಲಾ ನಮ್ಮ ಸಂಬಂಧದಲ್ಲಿ ಏನೋ ಸಮಸ್ಯೆ ಆಗಿದೆ ಅಂತಾ ತಪ್ಪು ತಿಳ್ಕೋಂಡಿದಾರೆ... ಅದು ನನಗೆ ಅಷ್ಟು ಸರಿ ಕಾಣ್ತಾ ಇಲ್ಲಾ... ಪ್ಲೀಸ್... ನಾಳೇನೇ ಗಡ್ಡ ತೆಗೆಸಿಬಿಡಿ...” ಎಂದು ಗೋಗರೆದಳು. “ಇದೇನೇ ನೀನು, ಗಡ್ಡ ಬಿಡಿ ಅಂತ್ಯಾ, ತೆಗಿಸ್ರಿ ಅಂತ್ಯಾ, ನಾ ಮೊದ್ಲೆ ಬೇಡ ಅಂತಾ ಹೇಳುದ್ನೋ ಇಲ್ವೊ?” ಎಂದು ಸ್ವಲ್ಪ ಬೇಸರದಿಂದಲೇ ನುಡಿದೆ. ಅದಕ್ಕವಳು “ರೀ... ಸಾರಿ ರೀ... ಪ್ಲೀಸ್... ನಾಳೆ ತೆಗೆದ್ಬುಡಿ” ಎಂದು ಅಳುವಂತೆ ಆಡಿದಳು. ನನಗೂ ಗಡ್ಡದ ಕಿರಿಕಿರಿ ಸಾಕಾಗಿತ್ತು. ಇವಳು ಒಪ್ಪಿದ ಮೇಲೆ ಇನ್ನೇನು? ಸರಿ ಎಂದು ಮನದಲ್ಲೇ ಅಂದುಕೊಂಡು, ಇವಳೆಡೆಗೆ ಬಾಗಿ “ಪಾಪಿ ಗಡ್ಡಕ್ಕೆ ಇವತ್ತೇ ಲಾಸ್ಟ್ ಛಾನ್ಸ್” ಎಂದೆ. ಎಂದಿನಂತೆ ಅವಳು ನಗುಮೊಗದಿಂದ ಗಡ್ಡಕ್ಕೆ ಬಾಯ್ ಹೇಳಿದಳು.

---

2 ಕಾಮೆಂಟ್‌ಗಳು:

 1. ಹ್ಹ ಹ್ಹ ಹ್ಹಾ,,,,
  ತುಂಬಾ ಚನ್ನಾಗಿದೇರಿ ಬರಹ....
  ಅದಕ್ಕೆ ಆವಾಗಾವಾಗ ಗಡ್ಡ ಬಿಟ್ಟು ರೂಢಿ ಮಾಡ್ಕೋಬೇಕು ಅನ್ನೋದು...
  ಆವಾಗಾವಾಗ ಬಿಡ್ತಾ ಇದರೆ ಕೊನೆಗೆ ಬಿಡೋಕೆ easy ಆಗುತ್ತೆ..

  ಪ್ರತ್ಯುತ್ತರಅಳಿಸಿ
 2. ಸತೀಶ...

  ಬಲು ಚೆನ್ನಾಗಿದೆ ನಿಮ್ಮ ಗಡ್ಡದ ಪುರಾಣ....

  ನಾನು ಮದುವೆಯಾಗುವ ಮೊದಲು ಮೀಸೆ ಇಟ್ಟುಕೊಂಡಿಲ್ಲವಾಗಿತ್ತು..
  ಯಾಕೆಂದರೆ ನನ್ನದು ಕೆಂಚು ಮೀಸೆ..
  ಮೊನ್ನೆ ಮೊನ್ನೆ ನನ್ನ ಮಡದಿಯ ಮಾತಿಗೆ ಕಟ್ಟು ಬಿದ್ದು ಮೀಸೆ ತೆಗೆದಿದ್ದೆ ಮಾರಾಯರೆ... !

  ಎಲ್ಲರೂ ವಿಚಿತ್ರವಾಗಿ ನೋಡುವವರೇ... ! ಹ್ಹಾ ಹ್ಹಾ !

  ಹಳೆಯ ನೆನಪುಗಳನ್ನು ಮಾಡಿಸಿದ್ದಕ್ಕೆ ಧನ್ಯವಾದಗಳು...

  ಜೈ ಹೋ !

  ಪ್ರತ್ಯುತ್ತರಅಳಿಸಿ