ಗುರುವಾರ, ಫೆಬ್ರವರಿ 24, 2011

ದಶರಥ್ ಮಂಜಿ ಎಂಬ ಮೌಂಟೆನ್ ಮ್ಯಾನ್ ನ ಕಥೆ...


ಇವಳಿಗೆ ಲೆಫ್ಟಿನೆಂಟ್ ಬ್ಲಾಂಡ್ ಪೋರ್ಡ್‍ನ ಕಥೆಯನ್ನು ಹೇಳಿದ್ದೆ ತಪ್ಪಾಯಿತು ಎಂದೆನಿಸುತ್ತದೆ. ಮತ್ತೆ ಮತ್ತೆ ಸಿಕ್ಕಿದಾಗಲೆಲ್ಲಾ ಕಥೆ ಹೇಳಿ ಎಂದು ಕಾಡ ತೊಡಗಿದಳು. ಕಥೆ ಹೇಳಿದರೆ ಬೋನಸ್ ಹೂ ಮುತ್ತುಗಳು ಸಿಗುವುದು ಗ್ಯಾರಂಟಿಯಾದರೂ... ಇಂದಿನ ದಿನಗಳಲ್ಲಿ ಯಾವ ಕಥೆಯನ್ನು ಹೇಳುವುದು? ಅದೂ ಇವಳಿಗೆ ಎಂದ ಮೇಲೆ ಅದು ಪ್ರೀತಿಯ ಕಥೆಯೇ ಆಗಿರಬೇಕು. ಈ ಹುಡುಗಿ ಬೇರೆ ತಾನು ಹೇಳಿದ ಮೇಲೆ ಮುಗಿಯಿತು. ಅದು ಆಗಲೇ ಬೇಕು ಎಂಬ ಮನಸ್ಥಿತಿಯಲ್ಲಿದ್ದಾಳೆ. ಯಾವ ಕಥೆ ಹೇಳುವುದು ಎಂದು ಚಿಂತಿಸುತ್ತಲೇ, “ಮತ್ತೆ ಸಿಕ್ಕಾಗ ಹೇಳುತ್ತೇನೆ” ಎಂದು ಕಥೆ ಹೇಳುವ ಕ್ರಿಯೆಯಿಂದ ತಪ್ಪಿಸಿಕೊಳ್ಳತೊಡಗಿದೆ. ಆದರೂ ಹೂಮುತ್ತುಗಳು ಸಿಗುತ್ತಿದ್ದವು. ಆದರೆ ಮುನಿಸಿನಿಂದ ಮತ್ತು ಬೋನಸ್ ಇರುತ್ತಿರಲಿಲ್ಲ.

ಎಷ್ಟು ದಿನ ಹೀಗೆ ತಪ್ಪಿಸಿಕೊಳ್ಳಲು ಸಾಧ್ಯ? ಅಂತೂ ಇಂತೂ ವ್ಯಾಲೆಂಟೈನ್ಸ್ ಡೇ ಬಂದೇ ಬಿಟ್ಟಿತು. ಅಂದು ನಮಗೆ ಅಂತಹ ವಿಶೇಷವೇನಿಲ್ಲದಿದ್ದರೂ, ಬದಲಾದ ಕಾಲಕ್ಕೆ ತಕ್ಕಂತೆ ನಡೆಯಬೇಕು ಮತ್ತು ಸಮಕಾಲೀನತೆಯ ಟಚ್ ಮಿಸ್ ಮಾಡಿಕೊಳ್ಳುತ್ತಿವೇನೋ ಎಂಬ ಆತಂಕದಲ್ಲೇ ಮೀಟ್ ಆದೆವು.

ಭೇಟಿಯಾಗುತ್ತಿದ್ದಂತೆ “ಇಂದು ಕಥೆ ಹೇಳಲೇಬೇಕು” ಎಂದು ವರಾತ ತೆಗೆದಳು. Most expected Question ಎಂದುಕೊಂಡು “ಸರಿ” ಎಂದೆ. “ಯಾವ ಕಥೆ?” ಎಂದಳು. ಅವಳ ಕುತೂಹಲ ಕಂಡು, ಸ್ವಲ್ಪ ಆಟ ಆಡಿಸೋಣ ಎಂದುಕೊಳ್ಳುತ್ತಾ, “ವ್ಯಾಲೆಂಟೈನ್ ಸಂತನ ಕಥೆ ಬೇಡ” ಎಂದೆನು. “ನನಗೂ ಆ ಕಥೆ ಬೇಡ” ಎಂದಳು. ತಗಳಪ್ಪ... ಎಂದು ಕೊಂಡು “ತಾಜ್ ಮಹಲ್ ಕಥೆ ಹೇಳ್ಲ?” ಎಂದೆ. “ಅದೂ ನಂಗೊತ್ತು. ಕೇಳೋದಕ್ಕೆನೋ ಚೆನ್ನಾಗಿರುತ್ತೆ. ಆದರೆ, ಈ ನಡುವೆ ಆ ಕಥೆಯ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿಲ್ಲ” ವೆಂದಳು. “ಸರಿ ಮತ್ತೆ, ಯಾವ ಕಥೆ ಹೇಳೋದು? ಏನೂ ಬೇಡ ಬಿಡು” ಎಂದೆ. “ಅದೆಲ್ಲಾ ಇಲ್ಲಾ, ಇವತ್ತು ಯಾವುದಾದರೂ ಹೊಸ ಕಥೆ ಹೇಳ್ಲೇಬೇಕು” ಎಂದು ಮತ್ತೆ ರಚ್ಚೆ ಹಿಡಿದ ಮಗುವಿನಂತೆ ಆಡತೊಡಗಿದಳು. ಕ್ಷಣಕಾಲ ಯೋಚಿಸಿ, “ಹೂಂ... ಸರಿ. ಹಾಗಾದ್ರೆ ಇವತ್ತು ದಶರಥ್ ಮಂಜಿಯ ಕಥೆ ಹೇಳ್ತೇನೆ?” ಎಂದು ಉತ್ಸಾಹದಲ್ಲೇ ನುಡಿದೆ. “ದಶರಥ್ ಮಂಜಿ?” ಅವಳ ಮುಖವೆಲ್ಲಾ ಆಶ್ಚರ್ಯ ಸೂಚಕದ ಜೊತೆಗೆ ಪ್ರಶ್ನಾರ್ಥಕ!?. “ಹೌದು. ದಶರಥ್ ಮಂಜಿಯ ಕಥೆ!. ಇವತ್ತಿನ ಕಾಲದಲ್ಲಿ ಅವನು ನಿಜಕ್ಕೂ ಗ್ರೇಟ್” ಎಂದೆ. “ಹಾಗಾದರೆ ಬೇಗ ಹೇಳಿ” ಎಂದು ಪುಟ್ಟ ಮಗುವಿನಂತೆ ನನ್ನ ಮುಂದೆ ಕೈ ಕಟ್ಟಿ ಕುಳಿತಳು.

“ದಶರಥ್ ಮಂಜಿ 1934 ರಲ್ಲಿ ಬಡತನದ ಕುಟುಂಬವೊಂದರಲ್ಲಿ, ಬಿಹಾರದ ಗಯಾದ ಸಮೀಪವಿರುವ ಗೆಹ್ಲಾರ್ (Gahlour) ಎಂಬ ಹಳ್ಳಿಯಲ್ಲಿ ಹುಟ್ಟಿದ. ಅವನು ಮುಸಾಹರ್ (Musahars) ಎಂಬ ವಂಶಕ್ಕೆ ಸೇರಿದವನಾಗಿದ್ದ. ಅವನ ಜಾತಿಯನ್ನು ಸಮಾಜದಲ್ಲಿ ದಲಿತರೆಂದು ಪರಿಗಣಿಸಲಾಗಿತ್ತು. ಮುಸಾಹರ್^ಗಳನ್ನು ಇಲಿ ತಿನ್ನುವವರು ಮತ್ತು ಸ್ವಚ್ಚಂದವಾಗಿ ಕುಡಿಯುವವರೆಂದು ಪಾರಂಪರಿಕವಾಗಿ ಘೋಷಿಸಲಾಗಿತ್ತು. ಮತ್ತು ಅವರೆಲ್ಲಾ ಇಲಿ ಹೆಗ್ಗNaNಣಗಳು ಸಂಗ್ರಹಿಸುವ ಆಹಾರ ಧಾನ್ಯಗಳನ್ನು ಅವುಗಳ ಬಿಲಗಳಿಂದ ಕೆದಕಿ ತಿಂದು ಜೀವಿಸುವವರು ಎಂದು ಗುರುತಿಸುತ್ತಿದ್ದರು. ಅವರೆಲ್ಲಾ ಸಮಾಜದ ಬಡವರಲ್ಲಿ ಬಡವರಾಗಿದ್ದರು.”

“ಇದರಲ್ಲಿ ಅಂತಾ ಕಥೆಯೇನಿದೆ?” ಎಂದು ಇವಳು ಕಟ್ಟಿದ್ದ ಕೈಯನ್ನು ತೆಗೆದಳು.

ಸಾಮಾನ್ಯವಾಗಿ ಮಧ್ಯದಲ್ಲಿ ಬಾಯಿ ಹಾಕದ ಇವಳ ಪ್ರಶ್ನೆ ಸಹಜವಾದುದೇ ಎಂದೆನಿಸಿತು. ಅಷ್ಟಕ್ಕೂ ಬಡವರ ಕಥೆ ಯಾರಿಗೆ ತಾನೆ ಸಹ್ಯವಾದೀತು?

“ಹಾಗಾದರೆ, ಕಥೆ ಬೇಡವಾ?” ನಾನಂದೆ.

“ಬೇಕು... ಆದರೆ?” ಎಂದಳು.

“ಆದ್ರೆ ಗಿದ್ರೆ ಬಿಟ್ಟು, ತಾಳ್ಮೆಯಿಂದ ಕೇಳುದ್ರೆ ಹೇಳ್ತೀನಿ” ಎಂದೆ.

“ಆಯ್ತು ಹೇಳಿ. ಮಧ್ಯ ಬಾಯಿ ಹಾಕಲ್ಲ” ಎನ್ನುತ್ತಾ ಮತ್ತೆ ಕೈ ಕಟ್ಟಿ ಕೂತೂಹಲದಿಂದ ನೋಡತೊಡಗಿದಳು.

“ಅವಿದ್ಯಾವಂತನಾದ ದಶರಥ್ ಮಂಜಿ ತನ್ನ ಹಳ್ಳಿಯ ಸುತ್ತಮುತ್ತಲೇ ಇದ್ದ ಹೊಲಗದ್ದೆಗಳಲ್ಲಿ ಕೂಲಿ ಕೆಲಸ ಮಾಡಬೇಕಾಗಿ ಬಂತು. ಅವನು ಕೆಲಸ ಮಾಡುತ್ತಿದ್ದ ಹೊಲದ ಪಕ್ಕದಲ್ಲೇ ಆ ಹಳ್ಳಿಯ ಒಂದು ತುದಿಗೆ ಬೆಟ್ಟವೊಂದಿತ್ತು. ಆ ಬೆಟ್ಟವನ್ನು ಬಳಸಿ ಪಕ್ಕದೂರಿಗೆ ಹೋಗುವ ದಾರಿ ತುಂಬಾ ದೂರ, ಜೊತೆಗೆ ಚಿಕ್ಕದು ಮತ್ತು ದುರ್ಗಮವಾಗಿತ್ತು. ಅತ್ರಿ (Atri) ಮತ್ತು ವಾಜಿರ್ ಗಂಜ್ (Vazirganz) ಎಂಬ ಗಯಾದ ಎರಡು ಉಪಭಾಗಗಳ ನಡುವೆ ಸುಮಾರು 50 ಕಿಲೋಮೀಟರ್ ದೂರವಿತ್ತು.

1967 ರಲ್ಲಿ ಒಂದು ದಿನ, ದಶರಥ್ ಮಂಜಿಯ ಹೆಂಡತಿ ಫಗುನಿ ದೇವಿ ಗಂಡನಿಗೆ ಊಟ ತೆಗೆದುಕೊಂಡು ಹೋಗುವಾಗ ಆ ದುರ್ಗಮ ಹಾದಿಯಲ್ಲಿ ಜಾರಿ ಬಿದ್ದಳು. ಅವಳಿಗೆ ತುಂಬಾ ಪೆಟ್ಟಾಗಿತ್ತು. ಆ ಬೆಟ್ಟವನ್ನು ಸುತ್ತಿ ಅವಳನ್ನು ಆಸ್ಪತ್ರೆಗೆ ಸಾಗಿಸಲು ಮಂಜಿ ಬಹಳ ಕಷ್ಟ ಪಡಬೇಕಾಯಿತು. ಈ ಘಟನೆ ದಶರಥ ಮಂಜಿಯನ್ನು ವಿಚಲಿತಗೊಳಿಸಿತು. ಅಂದು ರಾತ್ರಿಯೇ ದಶರಥ ಮಂಜಿಯು ಆ ಬೆಟ್ಟವನ್ನು ಸೀಳಿ ರಸ್ತೆ ಮಾಡಬೇಕೆಂದು ನಿರ್ಧರಿಸಿದನು. ಬೆಳಿಗ್ಗೆ ಎದ್ದವನೇ ಸುತ್ತಿಗೆ ಮತ್ತು ಉಳಿಯನ್ನು ತೆಗೆದುಕೊಂಡು ಬೆಟ್ಟದ ಬಳಿ ಹೋಗಿ ತನ್ನ ಕೆಲಸ ಶುರುಮಾಡಿಯೇ ಬಿಟ್ಟನು. ಅದು ಅಂದಿನಿಂದ ಅವನ ಕಾಯಕವೇ ಆಗಿಬಿಟ್ಟಿತು. ಜನ ಇವನ ಭ್ರಾಂತಿಯನ್ನು ನೋಡಿ ಹುಚ್ಚನೆನ್ನತೊಡಗಿದರು. ಮಂಜಿಗೆ ಅದರ ಪರಿವೆಯೇ ಇರಲಿಲ್ಲ.

ಏಕಾಂಗಿಯಾಗಿ ಕೇವಲ ಸುತ್ತಿಗೆ ಉಳಿಗಳಿಂದ ಆತ ಹಾಕಿದ ಸತತ ವರ್ಷಗಳ ಪರಿಶ್ರಮ ವ್ಯರ್ಥವಾಗಲಿಲ್ಲ. 1988 ರ ಸುಮಾರಿಗೆ, ಅಂದರೆ 22 ವರ್ಷಗಳ ನಂತರ ಆತನಿಗೆ ಪ್ರತಿಫಲಸಿಕ್ಕಿತ್ತು. 50 ಕಿಲೋಮೀಟರ್‍ಗಳ ದುರ್ಗಮ ಹಾದಿ ಬರೀ 8 ಕಿಲೋಮೀಟರ್‌ಗಳ, 360 ಅಡಿ ಉದ್ದದ, 30 ಅಡಿ ಎತ್ತರದ, 25 ಅಡಿ ಅಗಲದ ಸುಲಭದ ಮಾರ್ಗವಾಗಿತ್ತು.

“ವಾವ್ ಗ್ರೇಟ್!” ಎಂಬ ಉದ್ಗಾರ ಇವಳಿಂದ.

“ಆದರೆ, ದುರದೃಷ್ಟವಶಾತ್, ತನ್ನ ಗಂಡನ ಸಾಹಸವನ್ನು ನೋಡುವ ಮೊದಲೇ ಫಲ್ಗುಣಿ ದೇವಿ ತೀರಿಕೊಂಡಿದ್ದಳು” ಬೇಸರದಿಂದ ನಾನು ನುಡಿದೆ.

“ಅಯ್ಯೋ, ಪಾಪ” ವೆಂದಳು.

ಅತ್ತುಗಿತ್ತಳು ಎಂದು ಅವಳ ಕಣ್ಣನ್ನೇ ಗಮನಿಸುತ್ತಿದ್ದ ನನಗೆ ಏನು ಹೇಳಬೇಕೆಂದು ತೋಚಲಿಲ್ಲ.

“ಮುಂದೆ...ದಶರಥ್ ಮಂಜಿ ಏನಾದ?” ಎಂದು ಪ್ರಶ್ನಿಸಿದಳು.

ಅಳುತ್ತಾಳೆಂದು ಕೊಂಡವನಿಗೆ ಅವಳ ಪ್ರಶ್ನೆ ಕಾಡತೊಡಗಿತು.

ಒಲ್ಲದ ಮನಸ್ಸಿನಿಂದ, “ಇನ್ನೇನು, ಅವನು ದಂತಕಥೆಯೇ ಆಗಿಬಿಟ್ಟ! ಇಲ್ಲಿಗೆ ಕಥೆ ಮುಗಿಯಿತು” ಎಂದು ನಾನಂದೆ.

“ಇಲ್ಲ, ಇಲ್ಲ ಅವನ ಮುಂದಿನ ಕಥೆ ಏನಾಯಿತು? ಅವನಿಗೆ ಪ್ರಶಸ್ತಿ ಪುರಸ್ಕಾರಗಳು? ಅವನು ಈಗ ಇದ್ದಾನೆಯೆ? ಇದ್ದರೆ ಹೇಗಿದ್ದಾನೆ? ಎಲ್ಲಿದ್ದಾನೆ?” ಪ್ರಶ್ನೆಗಳ ಸುರಿಮಳೆಯಾಯಿತು.

“ಬೇಡ ಬಿಡು ಲಕ್ಷ್ಮಿ. ಅವನು ಹೇಗಿದ್ದರೆ ನಮಗೇನು? ಅವನ ತ್ಯಾಗ, ಹೆಂಡತಿಯ ಮೇಲಿನ ಪ್ರತೀಕವಾಗಿಯಷ್ಟೇ ಈ ಕಥೆಯನ್ನು ಹೇಳಿದೆ. ಸಾಕು ಬಿಡು ಬರುತ್ತೇನೆ” ಎಂದು ನಾ ಹೇಳಿದೆ.

“ಇಲ್ಲಾ ನೀವು ಇವತ್ತು ಹೇಳ್ಲೇಬೇಕು” ಎಂದು ಹಠ ಹಿಡಿದಳು.

ನನಗೂ ತಡೆಯಲಾಗಲಿಲ್ಲ. ಮುಂದುವರೆದು ಹೇಳಿದೆ:

“ದಶರಥ್ ದಾಸ್, ದಶರಥ್ ಮಂಜಿ, ದಶರಥ್ ಭುಯ್ಯಾ ಎಂದೆಲ್ಲಾ ಹಳ್ಳಿಗರಿಂದ ಕರೆಯಲ್ಪಡುತ್ತಿದ್ದವನು ಅವರ ಪಾಲಿಗೆ “ಸಾಧು ಬಾಬಾ”ನೇ ಆಗಿಬಿಟ್ಟ. ಅವನನ್ನು ಹರಸಿ ಸಾಕಷ್ಟು ಪ್ರಶಸ್ತಿ ಪುರಸ್ಕಾರಗಳು ಬಂದವು. ಆ ಹಾದಿಯಲ್ಲಿ ಬಿಗಿಯಾದ ರಸ್ತೆಯನ್ನು ಮಾಡಬೇಕೆಂದು ಸರ್ಕಾರಕ್ಕೆ ಆತ ಮೊರೆಯಿಟ್ಟ. ಬೆಟ್ಟವನ್ನು ತನ್ನ ಪರಿಶ್ರಮದಿಂದ ಸಿಗಿದದಲ್ಲದೇ ಅವನ ಹಳ್ಳಿಯಿಂದ ದಿಲ್ಲಿಯವರೆಗೆ ರೈಲ್ವೇ ಹಾದಿಯಲ್ಲಿ ಚಲಿಸಿ, ದಾಖಲೆಗೆ ತನ್ನ ಡೈರಿಯಲ್ಲಿ ಆ ಹಾದಿಯ ಎಲ್ಲಾ ಸ್ಟೇಷನ್ ಮಾಸ್ಟರ್ ಗಳ ಸಹಿ ಸಂಗ್ರಹಿಸಿದ.

ಆದರೆ, ಅವನ ಪರಿಶ್ರಮ ನಿರೀಕ್ಷಿತ ಫಲವನ್ನು ನೀಡಲಿಲ್ಲ. ರಾಜಕಾರಣಿಗಳು ದಶರಥ್ ಮಂಜಿಯನ್ನು ಕಾಟಾಚಾರಕ್ಕೆ ಭೇಟಿಯಾದರು. ಪಟ್ನಾ ದೂರದರ್ಶನದವರು ಅವನ ಕಥೆಗೆ ಐವತ್ತು ಸಾವಿರ ರೂಪಾಯಿ ನೀಡಿ ಟೆಲಿಚಿತ್ರ ಮಾಡುತ್ತೇವೆ ಎಂದರು. ಚಿತ್ರ ಮುಗಿದರೂ ಆ ದುಡ್ಡು ಅವನ ಕೈ ಸೇರಲಿಲ್ಲ. ಅಲ್ಲಿನ ಜಿಲ್ಲಾಧಿಕಾರಿ ದಶರಥ್ ಮಂಜಿಗೆ ರಾಷ್ಟ್ರಪತಿ ಪ್ರಶಸ್ತಿ ನೀಡಬೇಕೆಂದು ಶಿಫಾರಸ್ಸು ಮಾಡಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದರು. ಅದೂ ಪ್ರಯೋಜನವಾಗಲಿಲ್ಲ. ರಾಷ್ಟ್ರಪತಿಗಳನ್ನು ಭೇಟಿಯಾಗಲು ಮಂಜಿಯ ಹಲವು ಪ್ರಯತ್ನಗಳು ವಿಫಲವಾದವು. ಆ ಸಮಯದಲ್ಲಿ ದಿಲ್ಲಿಯಲ್ಲೇ ದೂರದ ಸಂಬಂಧಿಗಳ ಜೊತೆಯಿದ್ದ ಅವನ ಸಾಹಸಗಳನ್ನು ಸರಿಯಾಗಿ ಯಾರೂ ಗುರುತಿಸಲಿಲ್ಲ.

ಆದರೆ, ಅಂದಿನ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‍ರನ್ನು ಪಟ್ನಾದ ಜನಾತ ದರ್ಬಾರ್ ನಲ್ಲಿ ದಶರಥ್ ಮಂಜಿ ಭೇಟಿಯಾದಾಗ, ಮಂಜಿಯ ಸಾಹಸಗಳನ್ನು ಮೆಚ್ಚಿದ ಮುಖ್ಯಮಂತ್ರಿಗಳು ಆತನ ಗೌರವಾರ್ಥ ತಮ್ಮ ಸೀಟಿನಲ್ಲಿ ಆತನನ್ನು ಕೂಡಿಸಿ ಸನ್ಮಾನಿಸಿದ್ದರು. ಆತನಿಗೆ ನಾಲ್ಕು ಎಕರೆ ಜಮೀನನ್ನು ಆ ಹಳ್ಳಿಯಲ್ಲಿ ನೀಡಿದ್ದರು. ಆ ಜಮೀನನ್ನು ಮಂಜಿಯು ಆಸ್ಪತ್ರೆ ಕಟ್ಟಲು ನೀಡಿದನು.

ಇಷ್ಟೆಲ್ಲಾ ಮಾಡಿದ ಮಂಜಿ ಬಹಳ ದಿನ ಉಳಿಯಲಿಲ್ಲ. ಅಂದಿನ ನಿತೀಶ್ ಸರ್ಕಾರ ಆತನಿಗೆ ಪ್ರಖ್ಯಾತ ದಿಲ್ಲಿಯ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್‍ನಲ್ಲಿ ಚಿಕಿತ್ಸೆ ನೀಡಿದರೂ, ಅದು ಫಲಕಾರಿಯಾಗಲಿಲ್ಲ. ಆತನನ್ನು ಕಾಡುತ್ತಿದ್ದ ಪಿತ್ತಕೋಶದ ಕ್ಯಾನ್ಸರ್ ಅವನನ್ನು 2007 ರ ಆಗಷ್ಟ್^ನಲ್ಲಿ ಬಲಿತೆಗೆದುಕೊಂಡಿತು. ಆತನ ಅಂತಿನ ಸಂಸ್ಕಾರವನ್ನು ಸರ್ಕಾರದ ಸಕಲ ಮರ್ಯಾದೆಯೊಂದಿಗೆ ನೇರವೇರಿಸಲಾಯಿತು. ನಂತರ ಆ ಬೆಟ್ಟದ ರಸ್ತೆಗೆ ಆತನ ಹೆಸರನ್ನೇ ಇಡಲಾಯಿತು. ಮತ್ತು ಆತನಿಗೆ ನೀಡಿದ್ದ ಜಮೀನಿನಲ್ಲಿ ಆತನ ಕೋರಿಕೆಯಂತೆ ಆಸ್ಪತ್ರೆ ಕಟ್ಟಿಸಿ ಮಂಜಿ ಹೆಸರನ್ನೇ ಇಡಲಾಗಿದೆ.

ದಶರಥ್ ಮಂಜಿಯ ಪ್ರೀತಿಯ ಪ್ರತೀಕದಂತಿರುವ ಆ ರಸ್ತೆಯು ಷಹಜಹಾನನ ತಾಜ್‍ಮಹಲ್‍ನಷ್ಟು ಸುಂದರವಾಗಿರಲಿಲ್ಲದಿದ್ದರೂ, ಅದಕ್ಕಿಂತ ಗ್ರೇಟ್ ಅಲ್ಲವೇನೇ?” ಎಂದು ಒಂದೇ ಉಸುರಿಗೆ ಹೇಳಿ ಮಾತು ನಿಲ್ಲಿಸಿದವನು ಅವಳ ಪ್ರತಿಕ್ರಿಯೆಗೆ ಅವಳತ್ತ ದಿಟ್ಟಿಸಿ ನೋಡಿದೆನು.

ಅವಳ ಕಣ್ಣುಗಳಲ್ಲಿ ನನ್ನ ಪ್ರತಿಬಿಂಬವು ಮಂಜು ಮಂಜಾಗುತ್ತಾ ಹೋಯಿತು.

10 ಕಾಮೆಂಟ್‌ಗಳು:

  1. ಸತೀಶ್ ದಶರಥ್ ವಿಷಯ ಬಹಳ ಕುತೂಹಲಕಾರಿಯಾಗಿತ್ತು...ಆ ರಸ್ತೆಯ ಫೋಟೋಸ್ ಇದ್ರೆ ಹಾಕಿ..ನಿಜಕ್ಕೂ ಇಂತಹ ಸಾಧಕರು ಗುರುತಿಸಲ್ಪಡುವುದಿಲ್ಲ ಅನ್ಸುತ್ತೆ..ಅಲ್ವಾ,,?
    ಧನ್ಯವಾದ

    ಪ್ರತ್ಯುತ್ತರಅಳಿಸಿ
  2. ಸತೀಶ...

    ಬದುಕಿದರೆ ಬದುಕು ಇರಬೇಕು "ದಶರಥ" ನಂತಹ ಬದುಕು !!

    ಅವನ ಛಲ ಬಹಳ ಇಷ್ಟವಾಯಿತು...

    ಅವನ ಸಾಹಸ ನೋಡಲಿಕ್ಕೆ ಅವನ ಮಡದಿ ಇರಬೇಕಿತ್ತು ಅಲ್ವಾ?

    ನೀವು ಕಥೆ ಹೇಳಿದ ರೀತಿ ತುಂಬಾ ಚೆನ್ನಾಗಿದೆ..

    ಇದೇ ಮಾದರಿಯಲ್ಲಿ ಇನ್ನಷ್ಟು ಕಥೆ ಬರಲಿ... ಜೈ ಹೋ !

    ಪ್ರತ್ಯುತ್ತರಅಳಿಸಿ
  3. ಪ್ರಿಯ ಸತೀಶ್ ಗುಬ್ಬಿ. ಒಳ್ಳೆಯ ಸತ್ಯ ಘಟನೆಯ ದರ್ಶನ ಮಾಡಿಸಿದ್ದೀರಿ. ನಿರೂಪಣೆ ಚೆನ್ನಾಗಿದೆ. ಅಜಾದ್ ಹೇಳಿದ ಹಾಗೆ ಚಿತ್ರಗಳು ಇದ್ದಿದ್ದರೆ ಚೆನ್ನಾಗಿತ್ತು. ದಶರತ್ ಮುಂಜಿಗೆ ನನ್ನ ಹೃದಯಪೂರ್ವಕ ನಮನಗಳು. ಹಿಂದೆ ಇದನ್ನು ಸಿ.ಏನ್.ಏನ್.ಐ.ಬಿ.ಏನ್ ಚಾನಲ್ ನವರು ವಿಶೇಷ ಕಾರ್ಯಕ್ರಮ ಪ್ರಸಾರ ಮಾಡಿದ್ದರು. ಇತ್ತೀಚಿಗೆ ಒಂದು ಕನ್ನಡ ಚಿತ್ರವೂ ಸಹ ದಶರತ್ ಮುಂಜಿ ಹಾದಿಯಲ್ಲಿ ಚಿತ್ರೀಕರಣ ಗೊಂಡಿದೆ.ನಿಮ್ಮ ಅನುಮತಿ ನಿರೀಕ್ಷಣೆ ಯೊಂದಿಗೆ ಮತ್ತಷ್ಟು ವಿವರಗಳೊಂದಿಗೆ ಚಿತ್ರಗಳೊಂದಿಗೆ ಇದೆ ಲೇಖನ ನನ್ನ ಬ್ಲಾಗಿನಲ್ಲಿ ಹಾಕುತ್ತೇನೆ.[ಅನ್ಯತಾ ಭಾವಿಸಬೇಡಿ.ಈ ಕಥೆ ನನ್ನ ಮೇಲೆ ಪ್ರಭಾವ ಬೀರಿದೆ.] ನಿಮಗೆ ಧನ್ಯವಾದಗಳು.ಒಳ್ಳೆಯದನ್ನು ಹಂಚಿಕೊಳ್ಳಲು ಎಲ್ಲರೂ ಸಂತಸ ಪಡೋಣ ಅಲ್ವ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ಪ್ರತ್ಯುತ್ತರಅಳಿಸಿ
  4. ಸತೀಶ್ ಸರ್, ನಮಸ್ತೆ..
    ಒಂದು ಅದ್ಭುತ ಘಟನೆ ನಮ್ಮ ಜೊತೆ ಹಂಚಿಕೊಂಡಿದ್ದಕ್ಕೆ ಅನಂತ ಧನ್ಯವಾದಗಳು.
    ಆಜಾದ್ ಸರ್ ಹೇಳಿದ ಹಾಗೆ, ಆ ರಸ್ತೆಯ ಹಾಗು 'ದಶರಥ ಮುಂಜಿ' ಯ ಚಿತ್ರಗಳಿದ್ದರೆ ನಮ್ಮೊಡನೆ ಹಂಚಿ.

    ವಂದನೆಗಳು..
    -ಅನಿಲ್ ಬೇಡಗೆ
    www.pennupaper.blogspot.com

    ಪ್ರತ್ಯುತ್ತರಅಳಿಸಿ
  5. ಪ್ರೀತಿಯ ಅಜಾದ್ ಭಯ್ಯಾ, ಪ್ರಕಾಶಣ್ಣ, ಬಾಲು ಸರ್, ಗೆಳೆಯ ಅನಿಲ್ ನಿಮ್ಮ ಕೋರಿಕೆಯಂತೆ ಚಿಕ್ಕದೊಂದು ಚಿತ್ರನೋಟ ಹಾಕಿದ್ದೇನೆ. ನಿಮ್ಮ ಅಭಿಪ್ರಾಯಗಳಿಗೆ ಅಭಿನಂದನೆಗಳು. ದಶರಥ್ ಮಂಜಿಯ ಬಗ್ಗೆ ನನ್ನ ಗೆಳೆಯರೂ, ಗುರುವೂ ಆದ ಬಿ.ಮೃತ್ಯುಂಜಯರವರು ೨೦೦೭ ರಲ್ಲಿ ಮಾಹಿತಿ ಕೊಟ್ಟಿದ್ದರು. ಅದನ್ನು ಆಧಾರಿಸಿ ಈ ಲೇಖನವನ್ನು ಬರೆದದ್ದು. "ಒಲವೇ ಮಂದಾರ" ಚಿತ್ರದಲ್ಲಿ ಮಂಜಿಯ ಕಥೆಯಿದೆ ಎಂದು ಓದಿದ್ದೇನೆ. ಚಿತ್ರ ಅದೇಕೋ ತುಮಕೂರಿನಲ್ಲಿ ಜಾಸ್ತಿ ದಿನ ನಿಲ್ಲಲಿಲ್ಲ. ಚೆನ್ನಾಗಿದೆಯಂತೆ. ನೀವೂ ನೋಡಿ. ಇತ್ತೀಚೆಗೆ ಪ್ರಜಾವಾಣಿಯಲ್ಲಿ ಚಿತ್ರದ ನಿರ್ದೇಶಕರು ಬರೆದ ಲೇಖನವಿತ್ತು. "ಪ್ರೀತಿ ಅಮರವಾಗಲಿ" - ಗುಬ್ಬಚ್ಚಿ ಸತೀಶ್.

    ಪ್ರತ್ಯುತ್ತರಅಳಿಸಿ
  6. ಸತೀಶ್,
    ಒ೦ದು ಅಸಾಮಾನ್ಯ ವ್ಯಕ್ತಿಯ ಜೀವನದ ಘಟನೆಯನ್ನು ಸರಳವಾಗಿ ಮನಮುಟ್ಟುವ೦ತೆ ಬರೆದಿದ್ದೀರಿ.ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ
  7. ದಶರಥ್ ಮ೦ಜಿಯ ಕಥೆ,ನಿರೂಪಣೆ ಮತ್ತು ಬರಹದ ಶೈಲಿ ಚೆನ್ನಾಗಿದೆ

    ಪ್ರತ್ಯುತ್ತರಅಳಿಸಿ
  8. ಪರಾಂಜಪೆ ಸರ್, ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ಪ್ರತ್ಯುತ್ತರಅಳಿಸಿ

ಹೇಗಿದೆ “ಯುವ?” ಸಖತ್‌ “ಪವರ್‌”ಪುಲ್‌ ಶಿವ!

ಪ್ರಿಯ ಸ್ನೇಹಿತರೇ, ಬೆಳಿಗ್ಗೆ ಐದಕ್ಕೇ ಅಲಾರಂ ಇಟ್ಟುಕೊಂಡು, ನೆನ್ನೆಯೇ ಇಂದಿನ ಬೆಳಗಿನ 9.30ರ ಶೋಗೆ ಬುಕ್‌ ಮಾಡಿದ್ದ “ಯುವ” ಸಿನಿಮಾಗೆ ಹೋಗಿ ಬಂದೆ. ತುಮಕೂರಿನ ಐನೋಕ್...