ಶನಿವಾರ, ಅಕ್ಟೋಬರ್ 30, 2010

ನಾನು “ಕಾಲ”

ಇದೀಗ ತಾನೆ

ಎಲ್ಲಾ ತಂಪಿತ್ತು

ಬಿಸಿ ವಕ್ಕರಿಸಿದಾದರೂ

ಯಾವಾಗ?


ಮೃಷ್ಟಾನ ಭೋಜನ

ಎಂಥಾ ರುಚಿಯಿತ್ತು

ಊಟ ಮುಗಿದಿದ್ದಾದರು

ಯಾವಾಗ?


ನಮಗೆಲ್ಲಾ ವಯಸ್ಸಾಯ್ತು

ಅದು ನಿಮಗಿದೆ

ವಯಸ್ಸಿಗೇ ವಯಸ್ಸಾದದ್ದು

ಯಾವಾಗ?


ಏ! ಯಾರೋ ನೀನು?

ಅಯ್ಯೋ! ನೀ ಸತ್ತೆಯಾ!!

ನೀ ನನ್ನ ಬದುಕಿಸಿದ್ದಾದರೂ

ಯಾವಾಗ?


ನಾನು, ನಾನು

ನಾನು, ನಾನು

ನಾನು ನೀ ಆಗಿದ್ದಾದರು

ಯಾವಾಗ?


ನಾನು “ಕಾಲ!”

ಬಳಿಯಿದ್ದಾಗ ಮರೆತು

ಕಾಲ ಬಳಿ ಬಿಟ್ಟಿರಿ

ನಿಮ್ಮನಗಲಿದಾಗ!


ಆವಾಗ?

ಒಂದಾನೊಂದು ಕಾಲದಲ್ಲಿ...

ಸೋಮವಾರ, ಅಕ್ಟೋಬರ್ 18, 2010

ಅಕ್ಟೋಬರ್ 15 : “ವೈಟ್ ಕೇನ್ ಸೇಫ್ಟಿ ಡೇ”

“ಬಿಳಿ ಬಿದಿರು ಕೋಲು”


ಬೆಂಗಳೂರಿನ ಮಾಗಡಿರಸ್ತೆಯ ಹತ್ತನೇ ಕ್ರಾಸಿನಲ್ಲಿ ಸಿಟಿ ಬಸ್ ಇಳಿದವನು, ಮೆಟ್ರೊ ಕಾಮಗಾರಿಯಿಂದ ಇಕ್ಕಟ್ಟಾದ ರಸ್ತೆಯಲ್ಲಿ ನಡೆಯುತ್ತಿರುವಾಗ ಅಂಧರೊಬ್ಬರ ಕೋಲಿಗೆ ನನ್ನ ಕಾಲು ತಡೆಯಾಯಿತು. “ಛೇ...” ಎಂಬ ಬೇಸರದ ಉದ್ಗಾರ ಅವರ ಬಾಯಿಂದ ಬಂತು. ಆ ಉದ್ಗಾರಕ್ಕೆ ಕಾರಣನಾದ ನನಗೆ ಬಹಳ ಬೇಸರವಾಯಿತು. ಜೊತೆಗೆ, ಅವರ ಕೈಯಲ್ಲಿದ್ದ ಬಿಳಿಕೋಲಿನ ಬಗ್ಗೆ ಆಶ್ಚರ್ಯವಾಯಿತು!

ಇಂಗ್ಲೆಂಡಿನ ಬ್ರಿಸ್ಟಾಲ್ನಗಲ್ಲಿನ ಕಲಾವಿದ ಜೇಮ್ಸ್ ಬಿಗ್ಸ್ 1921 ರಲ್ಲಿ ಬಿಳಿ ಬಿದಿರು ಕಡ್ಡಿಯನ್ನು ಉಪಯೋಗಕ್ಕೆ ತಂದುದಾಗಿ ಹೇಳಿಕೊಂಡಿದ್ದಾರೆ.

ರಸ್ತೆ ಅಪಘಾತದಲ್ಲಿ ಜೇಮ್ಸ್ ಬಿಗ್ ದೃಷ್ಟಿ ಹೋಯಿತು. ರಸ್ತೆ ದಾಟಲು ಅವರು ತುಂಬಾ ಕಷ್ಟಪಡಬೇಕಾಯಿತು. ಕೈಯಲ್ಲಿ ಕೋಲು ಹಿಡಿದರಾದರೂ ವಾಹನ ಚಾಲಕರ ಗಮನ ಅತ್ತ ಹರಿದೀತು ಎಂಬ ನಂಬಿಕೆಯೂ ಫಲ ಕೊಡಲಿಲ್ಲ. ಯಾಕೆಂದರೆ ಎಂತೆಂಥದೋ ಬಣ್ಣದ ಕಡ್ಡಿ ಚಾಲಕರ ಕಣ್ಣಿಗೆ ಬೀಳುತ್ತಿರಲಿಲ್ಲ. ಅವರಿಗೊಂದು ಉಪಾಯ ಹೊಳೆಯಿತು. ಬಿದಿರು ಕಡ್ಡಿಗೆ ಬಿಳಿ ಬಣ್ಣ ಬಳಿದರು. ಅದನ್ನು ಹಿಡಿದು ನಡೆದರು. ರಸ್ತೆಗಳಲ್ಲಿ ವಾಹನ ಚಾಲಕರ ಕಣ್ಣಿಗೆ ಅದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಜನ ಬಿಳಿ ಬಿದಿರುಕಡ್ಡಿಯನ್ನು ಹಿಡಿದ ಜೇಮ್ಸ್ ಅನ್ನು ಸುಲಭವಾಗಿ ಗುರುತಿಸಿ, ರಸ್ತೆಯಲ್ಲಿನ ಅಡೆತಡೆಗಳನ್ನು ನಿವಾರಿಸುತ್ತಿದ್ದರು. ಕೆಲವರು ಕೈ ಹಿಡಿದು ರಸ್ತೆ ದಾಟಿಸಿದ್ದೂ ಉಂಟು.

ಹತ್ತು ವರ್ಷಗಳ ನಂತರ ಗಿಲ್ಲಿ ಡಿ ಹರ್ಬೆಮಾಂಟ್ ಎಂಬ ಫ್ರ್ಂಚ್ ನಾಗರೀಕ ಬಿಳಿಬಿದಿರು ಕೋಲನ್ನು ಇನ್ನಷ್ಟು ಜನಪ್ರಿಯಗೊಳಿಸಲು ಯತ್ನಿಸಿದರು. ದೃಷ್ಟಿಹೀನರಿಗೆ ಬಿಳಿ ಕಡ್ಡಿ ಬಳಸುವ ಸಲಹೆ ನೀಡಿದರು. ಅದು ಬರಬರುತ್ತಾ ಜನಪ್ರಿಯವೂ ಆಯಿತು. ಅಲ್ಲಿಂದ ಬಿಳಿ ಬಿದಿರು ಕಡ್ಡಿ ಯುರೋಪ್ ರಾಷ್ಟ್ರಗಳನ್ನು ಪ್ರವೇಶಿಸಿತು.

1945ರಲ್ಲಿ ಡಾ. ವಿಲಿಯಂ ರಿಚರ್ಡ್ ಹೂವರ್ (ಬಾಲ್ಟಿಮೋರ್ ನ ಹೆಸರಾಂತ ಕಣ್ಣಿನ ವೈದ್ಯ) ಉದ್ದದ ಅಲ್ಯುಮಿನಿಯಂ ಕಡ್ಡಿಯನ್ನು ದೃಷ್ಟಿಹೀನರ ಬಳಕೆಗೆಂದು ಅಭಿವೃದ್ಧಿಪಡಿಸಿದರು. ಇದನ್ನು ಸಣ್ಣಗೆ ಮಡಿಸಿ ಚೀಲದಲ್ಲಿ ಇಟ್ಟುಕೊಳ್ಳುವಂತೆ ಅವರು ವಿನ್ಯಾಸಗೊಳಿಸಿದರು. ಕ್ರಮೇಣ ಇದೇ ಸ್ವರೂಪದ ಬಿದಿರು ನಡೆಗೋಲು ಬಿಳಿ ಬಣ್ಣವನ್ನು ಪಡೆದುಕೊಂಡಿತು. ಈಗ ಬಿಳಿ ಬಣ್ಣದ ನಡೆಗೋಲೇ ಹೆಚ್ಚು ಬಳಕೆಯಲ್ಲಿರುವುದು.

ಹಾದಿಯಲ್ಲಿ ಇರುವ ವಸ್ತುಗಳನ್ನು ಸ್ಪರ್ಶಿಸಿದಾಗ ಏನಿದೆ ಎಂಬುದನ್ನು ಸ್ಪಷ್ಟವಾಗಿ ಅಂಧರಿಗೆ ತಿಳಿಸುವಂಥ ಗುಣ ಬಿದಿರಿಗೆ ಇದೆ. ಅದಕ್ಕೇ ದೃಷ್ಟಿಹೀನರು ಅದನ್ನು ವ್ಯಾಪಕವಾಗಿ ಬಳಸುವುದು. ಬಿಳಿ ಬಿದಿರುಗೋಲಿನ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಅಕ್ಟೋಬರ್ ೧೫ ರಂದು ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಆ ದಿನವನ್ನು “ವೈಟ್ ಕೇನ್ ಸೇಫ್ಟಿ ಡೇ” ಎಂದೇ ಆಚರಿಸುತ್ತಾರೆ.

(ಮಾಹಿತಿ – ಸಂಗ್ರಹ)

ಶುಕ್ರವಾರ, ಅಕ್ಟೋಬರ್ 8, 2010

ಸಿಡಿಲಿನ ಹಂಗು

ಅರ್ಧರಾತ್ರಿಯಲ್ಲಿ ಸಿಡಿಲಂತೆ?

ಹೆಂಡತಿ ಬೆಚ್ಚಿ ಬೆದರಿ

ಅವನ ತೆಕ್ಕೆಗೆ ಬಿದ್ದು

ಅರ್ಧಗಂಟೆ ಬಿಡಲಿಲ್ಲವಂತೆ!



ಗೆಳೆಯನೊಬ್ಬ ಹೇಳಿದಾಗ

ಹೊಟ್ಟೆ ಉರಿಯಿತು.

ಅಯ್ಯೋ...! ನನಗೂ ನನ್ನ

ನಲ್ಲೆಗೂ ಎಚ್ಚರವೇ ಆಗಲಿಲ್ಲ!



ಬಂದವನೇ ನನ್ನವಳಿಗೆ ಹೇಳಿದೆ

ಬಿದ್ದು ಬಿದ್ದು ನಕ್ಕಳು.

ಏನು ದೊಡ್ಡ ರೋಮಾನ್ಸ...?

ನಮಗೆ ಎಚ್ಚರವೇ ಆಗಲಿಲ್ಲವೆಂದಳು!



ತುಸು ಯೋಚಿಸಿ ನಸುನಕ್ಕಿ ನಾನಂದೆ

ಆಗಷ್ಟೆ ರಮಿಸಿ, ಪರಸ್ಪರ

ತೆಕ್ಕೆಯಲ್ಲಿ ವಿರಮಿಸುತ್ತಿದ್ದ

ನಮಗೇಕೆ ಸಿಡಿಲಿನ ಹಂಗು?

- ಗುಬ್ಬಚ್ಚಿ ಸತೀಶ್.

ಶುಕ್ರವಾರ, ಅಕ್ಟೋಬರ್ 1, 2010

ಕನ್ನಡ ಪುಸ್ತಕಗಳನ್ನು ಓದುವ ಮೊದಲು ಶ್ರೀಮಂತನಾಗೋಣ!

ರಾವಣನ ಹೆಂಡತಿ ಮಂಡೋದರಿ!

ಕನ್ನಡ ಪುಸ್ತಕಗಳನ್ನು ಕೊಂಡೋದಿರಿ!!

-ಎಚ್. ಡುಂಡೀರಾಜ್.

ಪುಸ್ತಕಗಳನ್ನು ಓದುವ ಹವ್ಯಾಸವುಳ್ಳ ನಾನು, ಆದಷ್ಟು ಕನ್ನಡ ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸವಿರಿಸಿಕೊಂಡಿದ್ದೇನೆ. ಸಿಗರೇಟು, ಟೀ ಕೇಳಿದರೆ ಕೊಡಿಸುವ ಗೆಳೆಯರು ಸಾಮಾನ್ಯವಾಗಿ ಎಲ್ಲರಿಗೂ ಇರುತ್ತಾರೆ. ಆದರೆ, ಓದುವ ಹವ್ಯಾಸವಿರುವ ಗೆಳೆಯರು ಸಿಗುವುದು ಅದೃಷ್ಟದ ವಿಷಯ. ಲೈಬ್ರರಿಯಲ್ಲಿ ಓದಲಾಗದ ಪುಸ್ತಕಗಳೇ ಹೆಚ್ಚು ಸಿಗುತ್ತವೆ. ಅಂದಮೇಲೆ ನಮಗೆ ಬೇಕಾದ ಪುಸ್ತಕಗಳನ್ನು ಕೊಂಡೇ ಓದಬೇಕು.

ಒಂದು ಪುಸ್ತಕದ ಬಿಡುಗಡೆಯ ವಿಷಯ ಇದೀಗ ಮುಂಚೆಯೇ ದಿನಪತ್ರಿಕೆಗಳಿಂದಲೋ, ಇಂಟರ್ನೆಟ್ಟಿನಿಂದಲೋ ತಿಳಿದಿರುತ್ತದೆ. ಖ್ಯಾತನಾಮರ ಪುಸ್ತಕಗಳಾದರೋ ಬಿಡುಗಡೆಗೂ ಮುನ್ನ ಒಂದು ಸುತ್ತು ವಿಮರ್ಶೆಯಾಗಿರುತ್ತದೆ. ಪುಸ್ತಕ ಬಿಡುಗಡೆಯ ಸ್ಥಳದಲ್ಲಿ ಹಾಜರಿದ್ದರೆ ತಿಂಡಿಯ ಜೊತೆ ಪುಸ್ತಕಕ್ಕೆ ರಿಯಾಯಿತಿಯೂ ಸಿಗುತ್ತದೆ. ಒಟ್ಟಿನಲ್ಲಿ ಪುಸ್ತಕ ಬಿಡುಗಡೆಗೂ ಮುನ್ನ ಸ್ವಲ್ಪ ಶಬ್ಧ ಮತ್ತು ನಂತರವೂ ಸ್ವಲ್ಪ ಶಬ್ಧ ಮಾಡುತ್ತದೆ.

ಇದೆಲ್ಲಾ ಸರಿಯಷ್ಟೆ. ಆದರೆ, ಪುಸ್ತಕ ಕೊಂಡು ಕೊಳ್ಳಲು ಹಣ ಬೇಕು. ಹಣವೆಲ್ಲಿಂದ ತರುವುದು? ಓದುವುದು ನಮ್ಮ ವೈಯಕ್ತಿಕ ಹವ್ಯಾಸವಾದ್ದರಿಂದ ಅದಕ್ಕೆ ನಮ್ಮ ಬಜೆಟ್ ನಲ್ಲಿ ಹಣ ಎತ್ತಿಡಬೇಕು. ಸರಿ ಎತ್ತಿಟ್ಟಿದಾಯಿತು. ಈಗ ಹೇಳಿ ಯಾವ ಕನ್ನಡ ಪುಸ್ತಕಗಳನ್ನು ಕೊಳ್ಳೋಣ?

ಒಂದು ರೂಪಾಯಿಗೆ ವಿಮಾನದ ಟಿಕೆಟ್ ಕೊಟ್ಟ ಕ್ಯಾಪ್ಟನ್ ಗೋಪಿನಾಥ್ ರವರ ಆತ್ಮಕಥನ “ಬಾನಯಾನ” ದ ಬೆಲೆ ರೂ ೪೨೫. ಕುಂ.ವೀ.ಯವರ ಗಾಂಧಿಕ್ಲಾಸು ರೂ ೨೨೫. ಅತ್ಯಧಿಕ ಮಾರಾಟ ಕಂಡ ಎಸ್.ಎಲ್.ಭೈರಪ್ಪನವರ ಹಾರ್ಡ್ ಬೈಂಡ್ ಕೃತಿ “ಕವಲು” ರೂ ೨೫೦. ಪೇಪರ್ ಬ್ಯಾಕ್ ನಲ್ಲಿ ಕೊಟ್ಟಿದ್ದರೆ ನನಗೆ ಓದಲಿಕ್ಕಾಗುತ್ತಿರಲಿಲ್ಲವೇನೋ? ಪ್ರೋ. ಬಾಲು ಎಂದೇ ಪರಿಚಿತರಾದ ಎಸ್.ಎಲ್.ಬಾಲಗಂಗಾಧರರವರ ಸ್ಮೃತಿ-ವಿಸ್ಮೃತಿ : ಭಾರತೀಯ ಸಂಸ್ಕೃತಿ ರೂ ೪೧೫. ತೇಜಸ್ವಿಯವರ ಮಾಯಾಲೋಕ ರೂ ೧೯೮...ಇತ್ಯಾದಿ.

ಪುಸ್ತಕಗಳ ಬೆಲೆಗಳನ್ನು ನೋಡುತ್ತಿದ್ದರೆ ಏದುಸಿರು ಬರುತ್ತಿರುವಾಗ ಯಾವ ಪುಸ್ತಕವನ್ನು ಕೊಂಡು ಓದುವುದು ಎಂದು ಯೋಚಿಸುತ್ತಿರುವಾಗ ನನಗೆ ಹೊಳೆದದ್ದು ಒಂದೇ ಐಡಿಯಾ! ಮೊದಲು ಶ್ರೀಮಂತನಾಗೋಣ, ನಂತರ ಓದುವ ಹವ್ಯಾಸ ಮುಂದುವರೆಸೋಣ. ನಿವೇನಂತಿರೋ...!?

- ಗುಬ್ಬಚ್ಚಿ ಸತೀಶ್.

ಇದು ಭಾರತದ “ಅಮೃತ ಕಾಲ”ವೇ!?

  ʼಅವನಿʼ ಪುಸ್ತಕದ ಮೂಲಕ ಓದುಗರಿಗೆ ಪರಿಚಿತರಾಗಿದ್ದ ರಾಹುಲ್‌ ಹಜಾರೆ ಅವರು ಇದೀಗ “ಅಮೃತ ಕಾಲ” ಎಂಬ ಹೊಸ ಪುಸ್ತಕವನ್ನು ಪ್ರಕಟಿಸಿದ್ದಾರೆ. ʼಭಾರತ ಬದಲಾಗಿದೆ! ಯಾರದ್ದ...