ಬ್ಲಾಗ್ ಆರ್ಕೈವ್

ಬುಧವಾರ, ಸೆಪ್ಟೆಂಬರ್ 1, 2010

ನಿನ್ನ ಮನೆಯ, ನನ್ನ ಮನದ ಲಕ್ಷ್ಮಿಯು ನೀನು...

ಡಿಯರ್ ಲಕ್ಷ್ಮೀ !,

ಇಂದು ವರಮಹಾಲಕ್ಷ್ಮಿ ವ್ರತ. ಇಂದಾದರೂ ದೇವಿಯ ದರ್ಶನವಾಗಬಹುದೆಂದು ಬೆಳಿಗ್ಗೆ ನಾಲ್ಕಕ್ಕೇ ಎದ್ದೆ. ಆಚೆ ಬಂದು ನೋಡಿದರೆ ರಾತ್ರಿ ಕವಿದ ಮೋDaDDaಡ ಇನ್ನೂ ಕರಗಿಲ್ಲ. ತುಂತುರು ಹನಿಯುತ್ತಿತ್ತು. ನಿನ್ನ ನೆನಪಲ್ಲೇ ಮುಖವೊಡ್ಡಿ ನಿಲ್ಲುವ ಆಸೆ. ಜೊತೆಗೆ ಸರಸರನೆ ರೆಡಿಯಾಗಿ, ಯೋಗ, ಧ್ಯಾನ ಮುಗಿಸಿ, ನ್ಯೂಸ್ ಪೇಪರ್ ಓದಿ, ಸರಿಯಾಗಿ ಏಳು ಕಾಲಿಗೆ ರೈಲ್ವೇಸ್ಟೇಶನ್ನಿನ ಎರಡನೇ ಗೇಟಿಗೆ ಬಂದು ನಿಲ್ಲಬೇಕು.

ಒಳಗೆ ಬಂದವನೇ ಬೆಳಗಿನ ಎಲ್ಲಾ ಕೆಲಸಗಳನ್ನು ಮುಗಿಸಿ, ಯೋಗ ಮಾಡಿ, ನಿನ್ನ ಧ್ಯಾನದಲ್ಲೇ ಧ್ಯಾನಕ್ಕೆ ಕುಳಿತೆ. ಕಣ್ಣುಗಳ ಒಳಗೆ ಪ್ರತಿಫಲಿಸುತ್ತಿದ್ದ ನಿನ್ನ ಚಿತ್ರವನ್ನು ಕಣ್ತುಂಬಿಕೊಂಡು ಲಕ್ಷ್ಮೀ ದೇವರಿಗೆ ಎರೆಡೆರಡು ಸಲ ಕೈ ಮುಗಿದೆ. ಆ ದೇವರ ಭಾವಚಿತ್ರವೂ ನಕ್ಕಂತಾಯಿತು. ಅಲ್ಲಿಗೆ ಖಂಡಿತಾ ನಿನ್ನನ್ನು ನೋಡಿಯೇ ತೀರುತ್ತೇನೆಂಬ ಆಸೆಯ ಮೊಗ್ಗು ಬಿರಿದು ಹೂವಾಯಿತು.

ಅಮ್ಮ ಕೊಟ್ಟ ಕಾಫಿ ಕುಡಿದು, ಚಳಿಯಿದ್ದುದರಿಂದ ಜರ್ಕಿನ್ ತೊಟ್ಟು ಹೊರಗೆ ಬಂದರೆ ಕವಳ ಸುರಿಯುತ್ತಿದೆ. ದಾರಿಯೂ ಸರಿಯಾಗಿ ಕಾಣುತ್ತಿಲ್ಲ. ಎಲ್ಲಾ ಮಬ್ಬು; ನನ್ನ ಜೀವನದ ಗುರಿಯಂತೆ. ಪ್ರೀತಿಯ ವಿಷಯದಲ್ಲಿ ನೀನೇ ನನ್ನ ultimate. ಆದರೆ ಜೀವನಕ್ಕೆ ಎಂದು ಒಂದು ಕೆಲಸ ಬೇಕಲ್ಲ? ಅದು ಅಸ್ಪಷ್ಟ. ಅದಾಗಲೇ ಪಕ್ಕದ್ಮನೆ ರತಿ ನೈಟಿಯಲ್ಲೇ ರಂಗೋಲಿ ಹಾಕುತ್ತಿದ್ದವಳು, ನನ್ನನ್ನೇ ನೋಡಲು ಶುರು ಮಾಡಿದಳು. ಅವಳು ಏನು ಮಾಡಿದರೇನು, ನನ್ನ ಕಣ್ಣಲ್ಲೆಲ್ಲಾ ನೀನೇ...

ಇಂದು ವರಮಹಾಲಕ್ಷ್ಮೀ ವ್ರತ. ನಿನ್ನ ಮನೆಯ, ನನ್ನ ಮನದ ಲಕ್ಷ್ಮೀಯು ನೀನು. ನಿಮ್ಮಪ್ಪಾಮ್ಮ ಇವತ್ತು ರಜೆ ಹಾಕಿ ಮನೆಯಲ್ಲಿರು ಎಂದಿರುತ್ತಾರೆ. ಆದರೆ ದೇವರಿಗೆ ದಿಂಡರಿಗೆ ರಜೆ ಹಾಕಿ ಮನೆಯಲ್ಲೇ ಕುಳಿತವಳಲ್ಲ ನೀನು. ಬಿ.ಕಾಂ., ಓದುವಾಗಲೂ ಕಾಲೇಜಿಗೆ ರಜೆ ಕೊಡದ ಹೊರತು ನೀ ಎಂದೂ ಕಾಲೇಜು ತಪ್ಪಿಸಿದವಳಲ್ಲ. ರಜೆ ಸಿಕ್ಕಾಗಲೂ ರಜೆಯನ್ನು ಓದಿಗೆ ಉಪಯೋಗಿಸುತ್ತಿದ್ದ ಶಾರದೆಯು ನೀನು. ಸಾಕ್ಷಾತ್ ಸರಸ್ವತಿ! ಇದೀಗ ತಾನೇ ಬೆಂಗಳೂರಿನ ಆಡಿಟರ್ ಆಫೀಸಿನಲ್ಲಿ ಕೆಲಸಕ್ಕೆ ಸೇರಿ ಸಿ.ಎ., ಮಾಡಬೇಕೆಂದಿರುವ ನೀನು ಖಂಡಿತ ರಜೆ ಹಾಕಿರುವುದಿಲ್ಲ ಎನ್ನುವುದು ನನಗೆ ಗೊತ್ತು. ಆದರೂ ಮನದ ಮೂಲೆಯಲ್ಲೆಲ್ಲೋ ಒಂದು ಪುಟ್ಟ ಭಯ ಇಣುಕುತ್ತಿದೆ.

ಸಮಯ ಏಳು ಗಂಟೆ ಐದು ನಿಮಿಷವಾಗಿದೆ. ಸರಸರನೆ ನಡೆದು ಏಳು ಹತ್ತಾಗುವಷ್ಟರಲ್ಲಿ ಸ್ಟೇಶನ್ನಿನ ಎರಡನೇ ಗೇಟ್ ಬಳಿ ಬಂದು ಪ್ಲಾಟ್ ಫಾರಂ ಕಡೆ ನೋಡಿದರೆ ಜನವೋ ಜನ. ಅಲ್ಲಿಗೆ ಇನ್ನೂ ಅರಸೀಕೆರೆಯಿಂದ ಬರುವ ಪುಶ್-ಪುಲ್ ರೈಲು ಗುಬ್ಬಿಯಲ್ಲಿ ನಿನ್ನನ್ನು ಹತ್ತಿಸಿಕೊಂಡು ತುಮಕೂರಿಗೆ ಬಂದಿಲ್ಲ ಎಂದು ಸಮಾಧಾನವಾಯಿತು. ಯಾರೋ ಹತ್ತು ನಿಮಿಷ ಲೇಟು ಅಂದರು. ಅಲ್ಲಿಗೆ ಹದಿನೈದು ನಿಮಿಷಗಳು ಕಾಯಬೇಕು. ಕ್ಷಣಕ್ಷಣವನ್ನೂ ನಿನಗಾಗಿ ಕಾಯುತ್ತಿರುವವನಿಗೆ ಅದೇನು ದೊಡ್ಡದಲ್ಲ. ಆದರೆ,

ಕಾದೆ ಕಾದೆ ಕಾದೆ
ನೀನು ಮಾತ್ರ ಬರದೆ ಹೋದೆ
ಓ ನನ್ನ ರಾಧೆ...

ಎಂದಾಗಬಾರದೆಂದು ಮತ್ತೊಮ್ಮೆ ಲಕ್ಷ್ಮೀ ದೇವರಿಗೆ ಮನದಲ್ಲೇ ಕೈ ಮುಗಿದೆ.

ರೈಲಿನ ಮೊದಲ ಬೋಗಿ ಸರಿಯಾಗಿ ಎರಡನೇ ಗೇಟಿನ ಬಳಿ ಬಂದು ನಿಲ್ಲಬೇಕು. ನೀ ಯಾವಾಗಲೂ ಮೊದಲ ಬೋಗಿಯಲ್ಲೇ ಇರುತ್ತೀಯೆಂದು ಗೊತ್ತು. ಕ್ಲಾಸಿನಲ್ಲೂ ಮೊದಲ ಬೆಂಚಿನಲ್ಲೇ ಕುಳಿತಿರುತ್ತಿದ್ದೆ. ನಾನು ಹಿಂದಿನ ಬೆಂಚಿನಿಂದ ಪಾಠ ಕೇಳುತ್ತಾ ಕೇಳುತ್ತಾ ನಿನ್ನ ಕಡೆಗೇ ದೃಷ್ಟಿ ನೆಟ್ಟು ಬಿಡುತ್ತಿದ್ದೆ. ಈಗಲೂ ಅದೇ ಜಾಯಮಾನದವಳು ನೀನು. ಮುಂದೆ ಬನ್ನಿ ಎಂದು ಯಾರೂ ಹೇಳುವುದೇ ಬೇಡ ನಿನಗೆ. ರೈಲು ಬರುವುದಕ್ಕೆ ಇನ್ನೂ ಸಮಯವಿದೆ. ಅಷ್ಟರಲ್ಲಿ ರೈಲಿನ ಕೊನೆಯ ಬೋಗಿ ನಿಲ್ಲುವ ಬಳಿ ಇರುವ ಪುಸ್ತಕದಂಗಡಿಯಲ್ಲಿ ಹೊಸ Competition success review ತಗೋಬೇಕು. ಅದೆಷ್ಟು ವರ್ಷಗಳಿಂದ ನೀನು ಈ ಮ್ಯಾಗಜಿನ್ ಓದುತ್ತಿದ್ದೀಯೋ? ನನಗಂತೂ ನಿನ್ನಲ್ಲಿ ಮೋಹ ಹುಟ್ಟಿದ ಮರುಗಳಿಗೆಯಿಂದಲೇ ನೀ ಯಾವಾಗಲೂ ನಿನ್ನೆದೆಗೆ ಅವುಚಿಕೊಂಡಿರುತ್ತಿದ್ದ ಕಾಲೇಜಿನ ಪುಸ್ತಕಗಳ ಜೊತೆಗಿರುತ್ತಿದ್ದ ಈ ಮ್ಯಾಗಜಿನ್ ಬಗೆಗೂ ವ್ಯಾಮೋಹ ಹುಟ್ಟಿ ಬಿಟ್ಟಿತು. ಸರಿಯಾಗಿ ಓದುವುದು ಬೇರೆ ಮಾತು, ಆದರೂ ಇನ್ನಾದರೂ ಚೆನ್ನಾಗಿ ಓದಿ ಯಾವುದಾದರೂ ಬ್ಯಾಂಕ್‍ನಲ್ಲಿ ಕೆಲಸ ಗಿಟ್ಟಿಸಬೇಕು ಅನ್ನಿಸುತ್ತಿದೆ. ಆವಾಗಲಾದರೂ ನೀನು ನನ್ನನ್ನು ಒಪ್ಪಬಹುದು ಎನ್ನುವ ಆಸೆ!

ಪ್ಲಾಟ್ ಫಾರಂ ತುಂಬಾ ಜನ. ಈ ತುದಿಯಿಂದ ಆ ತುದಿಗೆ ಹೋಗಿ ಬರುವುದು ಹರಸಾಹಸವೇ ಸರಿ. ಆದರೂ ಹೊರಟೆ. ಅಲ್ಲೊಬ್ಬಳು ಪಕಪಕನೆ ನಗುತ್ತಿದ್ದಳು. ಅಲ್ಲಿದ್ದ ಹುಡುಗರೆಲ್ಲರೂ ಅವಳನ್ನು ತಿನ್ನುವಂತೆ ನೋಡುತ್ತಿದ್ದರು. ಯಾವ ಹುಡುಗಿ ನಕ್ಕರೆ ನನಗೇನು? ನಿನ್ನ ಮಂದಸ್ಮಿತ ಮುಖದ ಹೊರತು ನನಗಿನ್ಯಾವ ನಗುವೂ ಬೇಕಿಲ್ಲ. ಜನಸಂದಣಿ ಬಹಳವಿದ್ದುದರಿಂದ ಪುಸ್ತಕದಂಗಡಿ ತಲುಪುವಷ್ಟರಲ್ಲಿ ಹನ್ನೆರಡು ನಿಮಿಷ ಮುಗಿದು ಹೋಗಿತ್ತು. ಐವತ್ತರ ನೋಟೊಂದನ್ನು ತೆಗೆದು ಅಂಗಡಿಯವನ ಕೈಗಿತ್ತು, Competition success review ಎಂದೆ. ಅವನ ಕೈಯಿಂದ ನನ್ನ ಕೈಗೆ ಮ್ಯಾಗಜಿನ್ ಬಂದ ತಕ್ಷಣ, ಅಲ್ಲಿದ್ದವರಲ್ಲಿ ಯಾರೋ ‘ಟ್ರೈನು ಬಂತು...’ ಎಂದರು. ಗುಬ್ಬಿಯ ದಾರಿಯ ಕಡೆ ನೋಡಿದರೆ ಅದಾಗಲೇ ನೀ ಬರುತ್ತಿದ್ದ ರಥ ಬರುತ್ತಿತ್ತು. ಈ ಜನಸಂದಣಿಯಲ್ಲಿ ಮತ್ತೆ ಹಿಂದಕ್ಕೆ ಹೋಗುವುದು ಬೇಡ ಎಂದು ಅಲ್ಲೇ ಸ್ಥಬ್ತನಾದೆ. ರೈಲಿನ ಇಂಜಿನ್ನು ನನ್ನನ್ನು ದಾಟಿ ಮುಂದಕ್ಕೆ ಹೋಯಿತು. ಅದರ ಹಿಂದೆಯೇ ಇದ್ದ ಬೋಗಿಯ ಮೊದಲ ಕಿಟಕಿಗೆ ಆತು, ಕೈಯನ್ನು ಗಲ್ಲಕ್ಕೆ ಕೊಟ್ಟು ಕೂತಿದ್ದವಳು ನೀನೇನಾ?

ಸರಿಯಾಗಿ ನೋಡುವಷ್ಟರಲ್ಲಿ ರೈಲು ಮುಂದೆ ಮುಂದೆ, ನಾನು ಹಿಂದೆ ಹಿಂದೆ... ಆ ಜನಗಳ ಸುಳಿಯಲ್ಲಿ ಸುಳಿದು ಎರಡನೇ ಗೇಟಿನ ಬಳಿ ಬರುವುದು ಸಾಧ್ಯವಿಲ್ಲವೆನ್ನಿಸಿತು. ಮಾಡುವುದೇನು? ನಿನ್ನ ಪ್ರೀತಿಯ ವಿಚಾರದಲ್ಲಿ ಮಾತ್ರ ಸೂಪರ್ ಟ್ರೈನಿಗಿಂತ ವೇಗವಾಗಿ ಓಡುತ್ತದೆ ನನ್ನ ತಲೆ. ರೈಲು ನಿಂತ ತಕ್ಷಣ ಅದರ ಹಿಂಬದಿಗೆ ಹೋಗಿ ಪ್ಲಾಟ್ ಫಾರ್ಂನ ಇನ್ನೊಂದು ಮಗ್ಗುಲಿಗೆ ಜಿಗಿದು ಮೊದಲ ಬೋಗಿಯ ಕಡೆ ಓಡಲು ಶುರು ಮಾಡಿದೆ. ಚಿರತೆಯ ಓಟ. ಒಂದೇ ನಿಮಿಷದಲ್ಲಿ ಮೊದಲ ಬೋಗಿಯ ಬಳಿ ಬಂದು ನೋಡಿದರೆ ಅಲ್ಲಿ ನೀನಿಲ್ಲ! ಬೋಗಿಯ ಒಳಗೆಲ್ಲಾ ಕಣ್ಣಾಡಿಸಿದರೂ ನೀನು ಕಾಣುತ್ತಿಲ್ಲ. ಹೇಗಾಗಬೇಕು ನನ್ನ ಜೀವಕ್ಕೆ? ಇನ್ನು ನಾಲ್ಕೇ ನಿಮಿಷದಲ್ಲಿ ರೈಲು ಹೊರಡುತ್ತದೆ. ಹುಡುಕುವುದೆಲ್ಲಿ? ಸುಮ್ಮನೆ ನಿಂತು ಬಿಟ್ಟೆ. ಲಕ್ಷ್ಮೀ ದೇವರ ಕೃಪೆಯಿದ್ದರೆ ಖಂಡಿತಾ ಇಂದು ನಿನ್ನನ್ನು ನೋಡಿಯೇ ತೀರುತ್ತೇನೆ. ನಿನಗೇ ಗೊತ್ತಲ್ಲ ಚಿನ್ನು, ನಾನೊಬ್ಬ stubborn optimist...

ರೈಲು ಹೊರಟೇ ಬಿಟ್ಟಿತು. ನಾ ನಿಂತಲ್ಲೇ ಅದು ಮುಂದೆ ಮುಂದೆ... ಎಲ್ಲಾ ಬೋಗಿಗಳ ಕಿಟಕಿಗಳು, ಬಾಗಿಲುಗಳು ಮೆಲ್ಲಮೆಲ್ಲನೆ ಮುಂದೆ ಸಾಗುತ್ತಿವೆ. ರೈಲಿನ ವೇಗವೂ ಹೆಚ್ಚುತ್ತಿದೆ. ನನ್ನ ಹೃದಯದ ಬಡಿತದಂತೆ. ಅಯ್ಯೋ! ಕಡೆ ಬೋಗಿಯೂ ಬಂತಲ್ಲಪ್ಪಾ ದೇವ್ರೇ!! ಎಂದುಕೊಳ್ಳುವಷ್ಟರಲ್ಲಿ ತಿಳಿ ಹಳದಿ ಚೂಡೀದಾರ್‍ನಲ್ಲಿ ಎಂದೂ ಮಾಸದ ಮಂದಸ್ಮಿತವನ್ನು ಸೂಸುತ್ತಾ, ಕೈಯಲ್ಲಿ ಹೊಚ್ಚಹೊಸ com Competition success review ಹಿಡಿದು ನಿಂತಿದ್ದೆಯಲ್ಲೇ ನನ್ನ ಲಕ್ಷ್ಮೀ...! ಆ ಲಕ್ಷ್ಮೀಯೇ, ಸಾಕ್ಷಾತ್ ವರಮಹಾಲಕ್ಷ್ಮಿಯೇ ಧರೆಗಿಳಿದಂತಾಯಿತು ಕಣೇ ಹುಡುಗಿ. ನನ್ನ ಬದುಕು ಹಬ್ಬದ ದಿನವೇ ಪಾವನವಾಯಿತು. ವ್ರತ ಫಲಿಸಿತು... ಬದುಕು ಅರಳಲು ಇನ್ನೆಷ್ಟು ಹೊತ್ತು ಹೇಳು?


ಎಂದೆಂದೂ ನಿನ್ನ ಆರಾಧಕ,

- ಗುಬ್ಬಚ್ಚಿ ಹುಡುಗ

19 ಕಾಮೆಂಟ್‌ಗಳು:

 1. ಲಕ್ಷ್ಮಿಯಾ ಕೃಪೆ ನಿಮ್ಮ ಮೇಲೆ ಇದೇ ಬಿಡಿ ಅದಕ್ಕೆ ಆ ಲಕ್ಷ್ಮಿನ ನೋಡು ಭಾಗ್ಯ ಮಿಸ್ ಆಗ್ಲಿಲ್ಲ ಚನ್ನಾಗಿ ಬರ್ದಿದಿರಾ ಅಂದಹಾಗೆ ಇದು ಕಲ್ಪನೆನೆ ಅಥವಾ ವಸ್ತವಾನೋ ಗೊತ್ತಾಗ್ಲಿಲ್ಲ :)

  ಪ್ರತ್ಯುತ್ತರಅಳಿಸಿ
 2. ಮಂಜುರವರಿಗೆ ಸ್ವಾಗತ.

  ಇದು ನನ್ನ ಕಲ್ಪನೆ. ವಾಸ್ತವ ಬೇಕಿದ್ದರೆ, ನನ್ನ ಆಗಸ್ಟ್ ತಿಂಗಳ "ಸ್ನೇಹ ಮಾಡಬೇಕಿಂಥವಳ..." ಓದಿ.

  ನಿಮ್ಮ ಬ್ಲಾಗಿಂದ ಹೊರಗೆ ಬರಲು ಮನಸೇ ಆಗಲಿಲ್ಲ. ಅಷ್ಟು ಚೆನ್ನಾಗಿದೆ. ಉಳಿದ ಕವನಗಳನ್ನು ಬಿಡುವಾದಾಗ ಓದುತ್ತೇನೆ.
  ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 3. "ತಿಳಿ ಹಳದಿ ಚೂಡೀದಾರ್‍ನಲ್ಲಿ ಎಂದೂ ಮಾಸದ ಮಂದಸ್ಮಿತವನ್ನು ಸೂಸುತ್ತಾ, ಕೈಯಲ್ಲಿ ಹೊಚ್ಚಹೊಸ com Competition success review.."
  ವಾವ್...ಇದರ ನಡುವೆ competition success ಕೂಡ ಕಾಣಿಸಿತೆ?
  ಹಹ...ಚೆನ್ನಾಗಿದೆ ನಿರೂಪಣೆ..ಹಾಸ್ಯ ಮಾಡಿದೆ.. ಅನ್ಯಥಾ ಭಾವಿಸಬೇಡಿ.

  ಶುಭಾಶಯಗಳು

  ಅನ೦ತ್

  ಪ್ರತ್ಯುತ್ತರಅಳಿಸಿ
 4. ಮೊದಲ ಬಾರಿಗೆ ನಿಮ್ಮ ಬ್ಲಾಗಿಗೆ ಬಂದೆ, ಚೆನ್ನಾಗಿದೆ, ಇನ್ನಷ್ಟು ಬರೀರಿ

  ಪ್ರತ್ಯುತ್ತರಅಳಿಸಿ
 5. ಮೊದಲ ಭಾರಿಗೆ ನಿಮ್ಮ ಬ್ಲಾಗಿಗೆ ಬರುತ್ತಿದ್ದೇನೆ. ಒಳ್ಳೆಯ ಬರಹ ಓದಿದ ಅನುಭವ..ಥ್ಯಾಂಕ್ಸ್..

  ಪ್ರತ್ಯುತ್ತರಅಳಿಸಿ
 6. Lakshmi sadaa jotegirali...ella laskhmiyaroo............sogasaada baraha...khushiyaaytri...gubbaacchi goodinalli adamy bhaava..shubavaagali.....

  ಪ್ರತ್ಯುತ್ತರಅಳಿಸಿ
 7. ಅನಂತರಾಜ್ ಸರ್ competion success review ಅವನಿಗೆ ದಾರಿದೀಪದಂತೆ ಗೋಚರಿಸಿದೆ.

  ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 8. ಪರಾಂಜಪೆ ಸರ್, ನನ್ನ ಬ್ಲಾಗಿಗೆ ಬಂದದಕ್ಕೆ ಮತ್ತು ಹಾರೈಕೆಗಳಿಗೆ ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 9. ತರುಣ್ ಜೀ ನೀವು ಬ್ಲಾಗಿಗೆ ಬಂದದ್ದು ತುಂಬಾ ಸಂತೋಷ.
  ತಮಗೆ ಮತ್ತಷ್ಟು ಓದುವ ಆನಂದದ ಭಾಗ್ಯ ತರಲು ಪ್ರಯತ್ನಿಸುತ್ತೇನೆ.

  ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 10. ಶಿವು ಸರ್ ಬ್ಲಾಗಿಗೆ ಬಂದದಕ್ಕೆ ಧನ್ಯವಾದಗಳು.

  ಯೂ ಆರ್ ಮೊಸ್ಟ್ ವೆಲ್‍ಕಮ್.

  ಪ್ರತ್ಯುತ್ತರಅಳಿಸಿ
 11. ಚುಕ್ಕಿ ಸಾರ್, ನಿಮ್ಮ ಹಾರೈಕೆ,
  ಪ್ರತಿಕ್ರಿಯೆ ನನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

  ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 12. ಸತೀಶ್ ನಿಮ್ಮ ಬ್ಲಾಗಿಗೆ ಮೊದಲೊಮ್ಮೆ ಬಂದ ನೆನಪು, ಇರಲಿ, ಚೆನ್ನಾಗಿ ಬರೆದಿದ್ದೀರಿ, ಮುಂದುವರಿಯಲಿ, ಶುಭಾಶಯಗಳು.

  ಪ್ರತ್ಯುತ್ತರಅಳಿಸಿ
 13. ಹೌದು ಭಟ್ ಸರ್ ಬಂದಿದ್ರಿ. ತುಂಬಾ ಸಂತೋಷ ತಮ್ಮ ಹಾರೈಕೆಗಳಿಗೆ.

  ನೀವು ಚೆನ್ನಾಗಿಯೇ ಬರಿತಿದೀರಾ ಸರ್, ಧನ್ಯವಾದಗಳು.

  ಪ್ರತ್ಯುತ್ತರಅಳಿಸಿ
 14. ಚೆನ್ನಾಗಿ ಬರೆದಿದ್ದೀರಿ. ಕಥೆ ಓಟ ಚೆನ್ನಾಗಿದೆ. ಸರಾಗವಾಗಿ ಓಡಿಸಿತು.

  ಪ್ರತ್ಯುತ್ತರಅಳಿಸಿ